ಮಂಗಳೂರನ್ನು ಕೇಂದ್ರಸ್ಥಾನದಲ್ಲಿರಿಸಿ, ಕನ್ನಡ ನವೋದಯ ಕಾವ್ಯವನ್ನು ಕುರಿತಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿಯುತ್ತಿರುವ ಈ ವಿಚಾರ ಸತ್ರದಲ್ಲಿ ನಿನ್ನೆ ನೆನೆದ, ಈವೊತ್ತು ನೆನೆಯುತ್ತಿರುವ ಹೆಸರುಗಳಲ್ಲಿ ಕೊಳಂಬೆ ಪುಟ್ಟನಗೌಡರು ಎದ್ದು ಕಾಣುವ ಎತ್ತರದ್ದಲ್ಲ. ಹೆಸರು ದೊಡ್ಡದಲ್ಲ ಎಂದರೆ ಧ್ವನಿ ಸಣ್ಣದು ಎಂಬ ಅರ್ಥವೂ ಅಲ್ಲ. ಕೊಳಂಬೆಯವರ ವೃತ್ತಿ ಮತ್ತು ಅವರಿದ್ದ ಕ್ಷೇತ್ರ ಇತ್ಯಾದಿ ಕಾರಣಗಳಿಂದ ಅವರು ಬಹುಪಾಲು ಎಲೆಮರೆಯ ಕಾಯಿಯಾಗಿಯೇ ಉಳಿದವರು; ಹತ್ತಿರ ಹೋದವರ ತಿಳಿವಿಗೆ ಮಾತ್ರ ಬಂದವರು. ಇದು ಕೊಳಂಬೆಯವರ ವಿಚಾರ ಮಾತ್ರವಲ್ಲ. ದಕ್ಷಿಣ ಕನ್ನಡದ ಅನೇಕ ವಿದ್ವಾಂಸರ, ಸಾಹಿತಿಗಳ ರೀತಿಯೂ ಹೀಗೆಯೇ. ಹಳೆಗಾಲದ ಹಿರಿಯರಲ್ಲಿ ಪಂಜೆಯವರು, ಪೈಯವರು, ಕಾರಂತರು ಮತ್ತು ಕಂಡೆಗೋಡ್ಲು ಶಂಕರಭಟ್ಟರು ಇಂತಹ ಕೆಲವರನ್ನು ಬಿಟ್ಟರೆ ಮಿಕ್ಕವರ ಹೆಸರು ಅಖಿಲ ಕರ್ನಾಟಕ ಸ್ತರದಲ್ಲಿ ಹಬ್ಬಿದ್ದಾಗಲೀ, ಕೇಳಿ ಬಂದದ್ದಾಗಲೀ ಕಡಿಮೆ.[1] ೧೯೩೧ರಲ್ಲಿ ಕಾರವಾರದಲ್ಲಿ ಜರಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಪಂಡಿತ ಮುಳಿಯ ತಮ್ಮಪ್ಪಯ್ಯನವರು ಮಾಡಿದ ಗಂಭೀರ ವಿಚಾರಪ್ರದ ಉಪನ್ಯಾಸವನ್ನು ಕೇಳಿದ ಬಿ.ಎಂ.ಶ್ರೀಕಂಠಯ್ಯನವರು, “ನಿಮ್ಮಂತಹ ವಿದ್ವಾಂಸರ ಪರಿಚಯವನ್ನೇ ನನಗೆ ಯಾರೂ ಮಾಡಿರಲಿಲ್ಲವಲ್ಲ” ಎಂದಿದ್ದರಂತೆ! ಆದುದರಿಂದ ಕೊಳಂಬೆಯವರ ಜೀವನಕ್ಕೆ ಸಂಬಂಧಿಸಿದಂತೆ ನಾಲ್ಕು ಮಾತು ಸಂದಭೋಚಿತವಾಗುತ್ತವೆ.

ಹಿಂದಿನ ಪುತ್ತೂರು (ಈಗ ಸುಳ್ಯ) ತಾಲೂಕಿನ ಅಮರಪಡ್ನೂರು ಗ್ರಾಮದ ಚೊಕ್ಕೊಡಿಯಲ್ಲಿ ಸುಬ್ರಾಯಗೌಡ ಮತ್ತು ಸುಬ್ಬಮ್ಮ ದಂಪತಿಗಳ ನಾಲ್ವರು ಮಕ್ಕಳಲ್ಲಿ ಮೂರನೆಯವರಾಗಿ ಪುಟ್ಟಣ್ಣ ಗೌಡರು ೧೯೦೩ರ ಜುಲೈ ೧೫ ರಂದು ಜನಿಸಿದರು. ಅವರದು ಕಲಾಸಕ್ತ ಕುಟುಂಬವಾಗಿತ್ತು; ಕುಟುಂಬ ಸದಸ್ಯರಿಗೆ ಯಕ್ಷಗಾನದಲ್ಲಿ ವಿಶೇಷ ಪ್ರೀತಿ. ಸಹಜವಾಗಿಯೇ ಅವುಗಳಿಂದ ಬಾಲಕ ಪುಟ್ಟಣಗೌಡರೂ ಪ್ರಭಾವಿತರಾದರು. ಪುಟ್ಟಣ್ಣಗೌಡರ ಬಾಲ್ಯ ಬಡತನದಲ್ಲೇ ಕಳೆಯಿತು. ಅವರ ಓದುಗಾರಿಕೆ ಬಡತನದಲ್ಲೇ ನಡೆಯಿತು. ಬುದ್ಧಿವಂತ ವಿದ್ಯಾರ್ಥಿ ಪುಟ್ಟಣ್ಣ ಮೂರನೆಯ ತರಗತಿಯಲ್ಲಿದ್ದಾಗಲೇ ಲಕ್ಷ್ಮೀಶನ “ಜೈಮಿನಿ ಭಾರತ”, ಚಾಟು ವಿಠಲನಾಥನ “ಕನ್ನಡ ಭಾಗವತ”ಗಳನ್ನು ತಿಳಿಯಬಲ್ಲವನಾಗಿದ್ದನಂತೆ. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತನೂ ಆಗಿದ್ದನು. ಅಂತಹ ಬಹಮಾನಗಳಲ್ಲಿ ‘ದರ್ಬಾರ್’ ಎಂಬುದು ವಿಶೇಷವಾಗಿತ್ತು.

ಕಷ್ಟದಲ್ಲಿಯೇ ಎಂಟನೆಯ ತರಗತಿಯವರೆಗೆ ಓದಿದ ಪುಟ್ಟಣ್ಣಗೌಡರು ಶಿಕ್ಷಕ ತರಬೇತಿ ಪಡೆದು, ೧೯೨೬ರಲ್ಲಿ ಊರ ಶಾಲೆಯಲ್ಲೇ ಮಾಸ್ತರಿಕೆಯನ್ನು ತೊಡಗಿದರು. ಆಗ ತಿಂಗಳ ಸಂಬಳ ಬರಿಯ ಹದಿಮೂರು ರೂಪಾಯಿ. ಮಾಸ್ತರಿಕೆಯ ಮಧ್ಯದಲ್ಲೇ ಮದರಾಸು ಸರಕಾರ ನಡೆಸುತ್ತಿದ್ದ ಪಂಡಿತ ಪರೀಕ್ಷೆಯಲ್ಲಿ ಪಾರಂಗತರೂ ಆದರು. ಮುಂದೆ ಹತ್ತು ಹಲವು ಕಡೆ ಅಧ್ಯಾಪಕರಾಗಿದ್ದ ಪುಟ್ಟಣ್ಣಗೌಡರು ೧೯೪೯ರಲ್ಲಿ ಸುಳ್ಯ ಬೋರ್ಡ್ ಹೈಸ್ಕೂಲಿನಲ್ಲಿ ಪಂಡಿತರಾಗಿ ನಿಯುಕ್ತರಾದರು. ೧೯೫೮ರಲ್ಲಿ ನಿವೃತ್ತರಾಗುವವರೆಗೂ ಅಲ್ಲಿಯೇ ಅಧ್ಯಾಪನ ನಿರತರಾಗಿದ್ದರು.

ಪುಟ್ಟಣ್ಣಗೌಡರ ಪ್ರಥಮ ಪತ್ನಿಯ ನಿಧನಾನಂತರ ಪುನರ್ವಿವಾಹವಾದರು. ಪ್ರಥಮ ದಾಂಪತ್ಯದಲ್ಲಿ ಅವರಿಗೆ ಒಬ್ಬನೇ ಗಂಡು ಮಗ-ಡಾ. ಚಿದಾನಂದ ಕಂಪ್ಯೂಟರ್ ಇಂಜಿನಿಯರ್. ಮೈಸೂರು ಜಯಚಾಮರಾಜೇಂದ್ರ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಾಧ್ಯಾಪಕರಾಗಿರುವ ಅವರು ಸ್ವತಃ ಕವಿ, ಮಹಾಕವಿ ಕುವೆಂಪು ಅವರ ಅಳಿಯ.[2] ದ್ವಿತೀಯ ಪತ್ನಿಯಲ್ಲಿ ಪುಟ್ಟಣ್ಣಗೌಡರಿಗೆ ಒಬ್ಬಳೇ ಮಗಳು-ಶ್ರೀಮತಿ ಶೀಲಾವತಿ, ಎಂ.ಎ ಪದವೀಧರೆ, ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ಶಿಷ್ಯೆ. ಪ್ರಕೃತ ಅವರು ಪಂಜದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪುಟ್ಟಣ್ಣಗೌಡರು ಸ್ವಯಂ ನಿರ್ಮಿತ ವ್ಯಕ್ತಿತ್ವ. ಶಾಲೆಯಲ್ಲಿ ಓದಿದುದಕ್ಕಿಂತ ಬದುಕಿನಲ್ಲಿ ಕಲಿತದ್ದೇ ಹೆಚ್ಚು. ಸ್ವಪ್ರಯತ್ನದಿಂದ ಅವರು ಕನ್ನಡದಲ್ಲಿ ಪ್ರಭುತ್ವವನ್ನು ಸಂಪಾದಿಸಿದರು. ಸಂಸ್ಕೃತ, ಇಂಗ್ಲಿಷ್‌ಗಳನ್ನೂ ಕಲಿತರು. ಕೊಂಕಣಿಯೂ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳನ್ನು ಅವರು ತಿಳಿದಿದ್ದರು. ಅವರಿಗೆ ಬಾಲಸಾಹಿತ್ಯಪ್ರವರ್ತಕ ಪಂಜೆ ಮಂಗೇಶರಾಯರು, ಸಹಕಾರೀ ಆಂದೋಲನದ ನೇತಾರ ಮೊಳೆಹಳ್ಳಿ ಶಿವರಾಯರು, ಬಹುಮುಖ ಪ್ರತಿಭೆಯ ಎಂ.ಎನ್. ಕಾಮತರೇ ಮೊದಲಾದವರ ಸಾಹಚರ್ಯವಿತ್ತು. ಅವರೆಲ್ಲರೂ ಕೊಳಂಬೆಯವರ ಕಾವ್ಯಶಕ್ತಿಗೆ ದೋಹದ ಕ್ರಿಯೆ ನಡೆಯಿಸಿದರು, ಲೇಖನ ಕಾರ್ಯಕ್ಕೆ ಅವರನ್ನು ಪ್ರೇರಿಸಿದರು.

ಕೊಳಂಬೆಯವರದು ಮಿದುಮಾತು. ನಗುಮುಖ; ಸರಳ ನಿರಾಡಂಬರ, ವ್ಯಕ್ತಿತ್ವ. ಅವರು ಸ್ನೇಹಶೀಲರೂ ವಿದ್ಯಾಥಿ ವತ್ಸಲರೂ ಆಗಿದ್ದರು. ಸಾಃಇತ್ಯ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ನಿರಂಜನ, ಡಾ. ರಮಾನಂದ ಬನಾರಿ ಮೊದಲಾದವರು ಅವರ ಶಿಷ್ಯ ವೃಂದದಲ್ಲಿ ಸೇರಿದವರು. ಯಕ್ಷಗಾನ-ತಾಳ ಮದ್ದಳೆಯಲ್ಲೂ ಕೊಳಂಬೆಯವರು ಪರಿಣಿತರಾಗಿದ್ದುದರಿಂದ ಆ ಪ್ರಕಾರದ ಅನೇಕ ಪ್ರಕಾಂಡರೊಂದಿಗೆ ಅವರಿಗೆ ಸ್ನೇಹ ಸಂಪರ್ಕವಿತ್ತು.

ಪುಟ್ಟಣ್ಣ ಗೌಡರು ನಾಡು-ನುಡಿಗಳಿಗೆ ಸಲ್ಲಿಸಿದ ಸೇವೆಯನ್ನು ಮನಗಂಡ ಅವರ ಶಿಷ್ಯ ಮಿತ್ರ ಅಭಿಮಾನಿಗಳೆಲ್ಲ ಸೇರಿ, ೧೯೭೫ರಲ್ಲಿ, ಚೊಕ್ಕಾಡಿಯಲ್ಲಿ, ಪ್ರೊ. ಎಂ. ಮರಿಯಪ್ಪ ಭಟ್ಟರ ಅಧ್ಯಕ್ಷತೆಯಲ್ಲಿ ಒಂದು ಉತ್ಸವವನ್ನು ಮಾಡಿ, ‘ಅಭಿನವ ಅಂಡಯ್ಯ’ನೆಂಬ ಬಿರುದನ್ನು ನೀಡಿ ಅವರನ್ನು ಸಂಮಾನಿಸಿದರು.

ಕೊಳಂಬೆಯವರು ಶಿಶುಗೀತಗಳನ್ನೂ ಸಣ್ಣ ಕವಿತೆಗಳನ್ನೂ ಕಥನ ಕಾವ್ಯಗಳನ್ನೂ ಹೆಣೆದಿದ್ದಾರೆ, ಕಥೆಗಳನ್ನು ಬರೆದಿದ್ದಾರೆ, ನಾಟಕಗಳನ್ನು ರಚಿಸಿದ್ದಾರೆ, ಶಬ್ದಕೋಶವನ್ನು ಕಟ್ಟಿದ್ದಾರೆ. ಆವೆಲ್ಲವುಗಳಲ್ಲಿ ಅವರು ಮೊತ್ತ ಮೊದಲು ಪ್ರಕಟಿಸಿದ ಕೃತಿಯೆಂದರೆ “ಅಂಧಕಾಸುರ ಕಾಳಗ”ವೆಂಬ ಯಕ್ಷಗಾನ ಪ್ರಸಂಗ. ೧೯೨೬ರಷ್ಟು ಹಿಂದೆಯೇ ಅದು ಅಚ್ಚಾಯಿತು. ಮಿಕ್ಕ ಸಾಹಿತ್ಯ ಪ್ರಕಾರಗಳೆಲ್ಲ ಆ ಮೊದಲೇ ರಚಿತವಾಗಿದ್ದರೂ ೧೯೬೦ರಿಂದ ಈಚೆಯೇ ಪ್ರಕಟವಾದವು. ಕೊಳಂಬೆಯವರ ಸಮಸ್ತ ವಾಙ್ಮಯದಲ್ಲಿ ಹನ್ನೊಂದು ಪುಸ್ತಕಗಳು ಅಪ್ರಕಟಿತವಾಗಿವೆ. ಎರಡು ಕೃತಿಗಳು ನಷ್ಟವಾಗಿವೆ. ಅವನ್ನು ಬಿಟ್ಟರೆ ಎರಡು ಕಾವ್ಯ, ಎರಡು ಶಿಶುಗೀತಗುಚ್ಛ. ಒಂದು ಯಕ್ಷಗಾನ ಪ್ರಸಂಗ ಮತ್ತೊಂದು ನಿಘಂಟು ಹೀಗೆ ಆರು ಕೃತಿಗಳು ಲಭ್ಯವಿವೆ. ವಿವಿಧ ವಿಷಯಗಳನ್ನು ಕುರಿತ ಆರು ಲೇಖನಗಳೂ ಇವೆ.

ಯಕ್ಷಗಾನ

ಅಂಧಕಾಸುರ ಕಾಳಗ” : ಪ್ರಾಚೀನ ಭಾರತೀಯವಾಙ್ಮಯಗಳಲ್ಲಿ ಅನೇಕ ಅಂಧಕಾಸುರರಿದ್ದಾರೆ. ಅವರಲ್ಲಿ ಒಬ್ಬನನ್ನು ಹಿಡಿದು ಕೊಳಂಬೆಯವರು ಯಕ್ಷಗಾನ ಪ್ರಸಂಗವನ್ನು ರಚಿಸಿದ್ದಾರೆ. ಬಸವಣ್ಣನವರ ಸೋದರಳಿಯ ಚೆನ್ನಬಸವಣ್ಣ ಕರ್ಮಯೋಗಿ ಸಿದ್ಧರಾಮನಿಗೆ ಸಂದರ್ಭವಶಾತ್ ಹೇಳಿದ ಕಥೆಯೆಂಬಂತೆ ಈ ಪ್ರಸಂಗವು ನಿರೂಪಿತವಾಗಿದೆ. ಯಕ್ಷಗಾನ ಪ್ರಸಂಗಗಳಲ್ಲಿ ಎರಡು ರೀತಿ. ಒಂದು ಆಟಕ್ಕೆ (ಎಂದರೆ ಪ್ರದರ್ಶನಕ್ಕೆ) ಒಪ್ಪುವಂತಹದ್ದು, ಮತ್ತೊಂದು ಕೂಟಕ್ಕೆ (ಎಂದರೆ ತಾಳಮದ್ದಳೆಗೆ) ಸಲ್ಲುವಂತಹದ್ದು. ಆಟದ ಪ್ರಸಂಗದಲ್ಲಿ ವೀರರಸಕ್ಕೆ ಪ್ರಾಧಾನ್ಯ, ಹಾಸ್ಯ ಕರುಣಗಳಿಗೂ ಅವಕಾಶವಿದೆ. ಅದರಲ್ಲಿ ಮಾತು ಮಿತ, ಕುಣಿತ ಹೆಚ್ಚು. ಅಬ್ಬರ ಆರ್ಭಟಗಳೂ ಇರುತ್ತವೆ. ಕೂಟದ ಪ್ರಸಂಗದಲ್ಲಿ ಸಂವಾದ ಹೆಚ್ಚು, ವಾಕ್ಚಾತುರ್ಯ, ಪಾಂಡಿತ್ಯ ಪ್ರದರ್ಶನಕ್ಕೆ ಯಥೇಷ್ಟ ಅವಕಾಶವಿರುತ್ತದೆ. ಕೊಳಂಬೆಯವರದು ಆಟದ ಪ್ರಸಂಗವೆಂಬ ಅಭಿಪ್ರಾಯವಿದೆ.

“ಅಂಧಕಾಸುರ ಕಾಳಗ”ದ ಕಥಾನಕವು ವೀರರಸ ಪ್ರಧಾನವಾದ ಯಕ್ಷಗಾನ ಪ್ರಸಂಗ. ವೀರರಸ ಎಂದರೆ ದಂಡಯಾತ್ರೆ, ಸಮರ ವರ್ಣನೆ, ದಿಗ್ವಿಜಯ ಚಿತ್ರಣಗಳು ತಾನೇ? ಪದ್ಯಗಳೆಲ್ಲ ಆ ಗುಣಲಕ್ಷಣ ಸಮನ್ವಿತವಾಗಿ ವೀರರಸ ಪೋಷಕವಾಗಿ, ಪರಿಚಿತವಾದ ರಾಗಗಳಲ್ಲಿ, ತಾಳ ಮಟ್ಟಗಳಲ್ಲಿ ನಿಬದ್ಧವಾಗಿವೆ.

ಶಿಶು ಸಾಹಿತ್ಯ

ಶಿಶು ಸಾಹಿತ್ಯ ಸೃಷ್ಟಿಯಲ್ಲಿ ದಕ್ಷಿಣ ಕನ್ನಡಕ್ಕೆ ಅಖಿಲ ಕರ್ನಾಟಕದಲ್ಲೇ ಉನ್ನತ ಸ್ಥಾನವಿದೆ. ಆ ಕ್ಷೇತ್ರದಲ್ಲಿ ಪಂಜೆ ಮಂಗೇಶರಾಯರು ಆದ್ಯರೂ ಅದ್ವಿತೀಯರೂ ಸರ್ವಜನಮಾನ್ಯರೂ ಆಗಿದ್ದಾರೆ. ಅವರ ಪರಂಪರೆಯನ್ನು ಮುಂಬರಿಸಿದ ಹಲವರು ಈ ಜಿಲ್ಲೆಯಲ್ಲಿ ಆಗಿಹೋಗಿದ್ದಾರೆ. ಈಗಲೂ ಕೆಲವರಿದ್ದಾರೆ. ಕೊಳಂಬೆಯವರು ಅಂತಹವರಲ್ಲಿ ಒಬ್ಬರು. ಅವರು ತೀರ ಹಿಂದೆಯೇ ಶಿಶುಗೀತಗಳ್ನು ಬರೆದಿದ್ದರೂ ಆ ರಚನೆಗಳು “ಹೂವೀಡು” ಮತ್ತು “ಮಾತಿಲ್ಲಾ ಮಾತಿಲ್ಲಾ” ಎಂಬ ಸಂಕಲನಗಳಾಗಿ ಅವರ ಮರಣಾಂತರ, ೧೯೮೩ರಲ್ಲಿ ಪ್ರಕಟಗೊಂಡವು. “ಹೂವೀಡಿ”ನಲ್ಲಿ ನಲ್ವತ್ತೊಂದು ಪದ್ಯಗಳಿವೆ. ಎಳೆಮಕ್ಕಳ ಮುದ್ದು ಬಾಯನ್ನು ತುಂಬಿ ಅವರ ಮಿದುವೆದೆಯನ್ನು ಹದವಾಗಿ ತಟ್ಟಬಹುದಾದ ಪದ್ಯಗಳನ್ನು ಆ ಸಂಗ್ರಹದಲ್ಲಿ ಕಾಣುತ್ತೇವೆ. ಅಕ್ಲಿಷ್ಟ ಸರಳ ಪದಪುಂಜಗಳೂ ಪ್ರಾಸಾನುಪ್ರಾಸ ಪುನರುಕ್ತಿಗಳೂ ಆ ಪದ್ಯಗಳಲ್ಲಿ ಸಾಮಾನ್ಯವಾಗಿವೆ. ಅವುಗಳ ಒಳಗೆ, ಆಳದಲ್ಲಿ, ಬೆಳೆಯುವ ಮಕ್ಕಳು ಕೇಳಿ ತಿಳಿಯಬೇಕಾದ, ಅವರ ನಡತೆಯನ್ನು ತಿದ್ದಬೇಕಾದ ನೀತಿ ಧರ್ಮ ವಿಚಾರಗಳ ಹೂರಣವೂ ಇವೆ. “ಮಾತಿಲ್ಲ ಮಾತಿಲ್ಲಾ” ಎಂಬ ಸಂಕಲನದಲ್ಲಿ ಇಪ್ಪತ್ತನಾಲ್ಕು ಪದ್ಯಗಳಿವೆ. “ಹೂವೀಡಿ”ನಲ್ಲಿ ಕಾಣಬಹುದಾದಂತೆ ಇದರಲ್ಲೂ ಮಕ್ಕಳಿಗೆ ಒಗ್ಗಬಹುದಾದ, ಅವರು ಓದಬಹುದಾದ, ಓದಿ ನಲಿಯಬಹುದಾದ ಪದ್ಯಗಳಿವೆ.

ಕಥನಕಾವ್ಯ

ಕೊಳಂಬೆ ಪುಟ್ಟಣ್ಣಗೌಡರ ಕೃತಿಗಳನ್ನು ಓದಿದವರ ನೆನಪಿನಲ್ಲಿ ಅವರ ಹೆಸರನ್ನು ದೊಡ್ಡದಾಗಿ ಉಳಿಸಿರುವುದು ಒಂದು ಕಥನಕಾವ್ಯ, ಮತ್ತೊಂದು ಸೂಕ್ತಿ ಮಂಜರಿ, ಮಗದೊಂದು ನಿಘಂಟು. ಈ ಮೂರರಲ್ಲಿ ಮೊದಲಿನ ಎರಡು ಅಚ್ಚಗನ್ನಡದಲ್ಲೇ ರಚಿತವಾಗಿದ್ದರೆ ಮೂರನೆಯದು ಅಚ್ಚಗನ್ನಡ ಪದಗಳ ಕೋಶವೇ ಆಗಿರುವುದು ಒಂದು ವಿಶೇಷತೆಯಾಗಿದೆ.

ಭಾರತೀಯ ಭಾಷಾ ಸಂಕುಲದಲ್ಲಿ ಕನ್ನಡವು ತಮಿಳಿನಂತೆಯೇ ಪ್ರಾಚೀನತರ ಭಾಷೆಗಳಲ್ಲಿ ಒಂದಾಗಿದ್ದರೂ ಅದು ಪ್ರಾಚೀನತಮವಾಗಿ, ಭಾರತೀಯ ಭಾಷಾಸಂತತಿಗೆ ಮಾತೃಸ್ವರೂಪಿಣಿಯಾಗಿರುವ ಸಂಸ್ಕೃತದಿಂದ ಬಹುವಾಗಿ ಪ್ರಭಾವಿತವಾಗಿದೆ. ಭಾಷಾ ಸಾಹಿತ್ಯಗಳ ಮೂಲಧಾತುಗಳೆನ್ನಬಹುದಾದ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ ವಿಷಯಗಳಲ್ಲಿ ಕನ್ನಡವು ಸಂಸ್ಕೃತಕ್ಕೆ ಋಣಿಯಾಗಿದೆ. ಪ್ರಾಚೀನ ಕನ್ನಡ ಕವಿಗಳು ಕನ್ನಡದೊಂದಿಗೆ ಸಂಸ್ಕೃತವನ್ನೂ ಚೆನ್ನಾಗಿ ಬಲ್ಲವರಾಗಿದ್ದು ತಮ್ಮನ್ನು “ಉಭಯಕವಿ”ಗಳೆಂದೇ ಕರೆದುಕೊಳ್ಳುವುದು ಅವರ ಹೆಗ್ಗಳಿಕೆಯಾಗಿತ್ತು. ಅವರ ಗ್ರಂಥಗಳು ಸಂಸ್ಕೃತ ಪದಭೂಯಿಷ್ಠವಾಗಿ, ಸಾಮಾನ್ಯ ವಾಚಕನಿಗೆ ‘ನೀರಿಳಿಯದ ಗಂಟಲೋಳ್ ಕಡುಬಂ ತುರುಕಿದಂತೆ’ಯೇ ಆಗುತ್ತಿತ್ತು. ಅಂತಹ ಕಾವ್ಯಗಳು ಹೆಚ್ಚಾಗಿ ಚಂಪೂ ಬಂಧಗಳೇ ಆಗಿರುತ್ತಿದ್ದವು. ಹೀಗೆ ಅವಶ್ಯಕತೆಗಿಂತ ಹೆಚ್ಚಾಗಿ ಸಂಸ್ಕೃತವನ್ನು ಕನ್ನಡದಲ್ಲಿ ತುರುಕಿ ಅದರ ಗಂಟಲನ್ನು ಒತ್ತಿ ಹಿಡಿಯುವ ಕವಿಪ್ರವೃತ್ತಿಯನ್ನು ಮೊದಮೊದಲು ಪ್ರತಿಭಟಿಸಿದರೂ ಚಂಪೂ ಕವಿಗಳೇ ಎಂಬುದು ಒಂದು ವೈಚಿತ್ಯ್ರವೇ ಆಗಿದೆ. “ಧರ್ಮಾಮೃತ”ದ ನಯಸೇನ ಕನ್ನಡ ಸಂಸ್ಕೃತಗಳ ಬೆರಕೆ ಮುತ್ತನ್ನೂ ಮೆಣಸನ್ನೂ ಕೋದಂತೆ, ಎಣ್ಣೆಯನ್ನೂ ತುಪ್ಪವನ್ನೂ ಬೆರಸಿದಂತೆ ಎಂದು ಹೇಳಿದರೆ, “ಕಬ್ಬಿಗರ ಕಾವ್ಯ”ದ ಅಂಡಯ್ಯ ಶುದ್ಧ ಸಂಸ್ಕೃತ ಪದಗಳನ್ನು ಬಿಟ್ಟೇ ಕಾವ್ಯರಚನೆ ಮಾಡಿದವರಲ್ಲಿ ಮೊದಲಿಗನೆನಿಸಿದ. ಆ ಕವಿಮಾರ್ಗದಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ನಡೆದವರೆಂದರೆ ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಮತ್ತು ಕೊಳಂಬೆ ಪುಟ್ಟಣ್ಣಗೌಡರು. ಅವರಿಬ್ಬರೂ ಅಚ್ಚಗನ್ನಡದಲ್ಲೇ ಕೃತಿ ರಚನೆ ಮಾಡಿದರು. ಮುಳಿಯದವರು “ಸೊಬಗಿನಹಳ್ಳಿ” ಯೆಂಬ ಪದಕಾವ್ಯವನ್ನೂ “ನಡತೆಯ ನಾಡು” ಎಂಬ ಗದ್ಯ ಕೃತಿಯನ್ನೂ ರಚಿಸಿದರು. ಕೊಳಂಬೆಯವರ “ಕಾಲೂರ ಚೆಲುವೆ” (೧೯೬೩) ಮತ್ತು “ನುಡಿವಣಿಗಳೆ”(೧೯೭೬)ರಡೂ ಪದ್ಯಕಾವ್ಯಗಳು. ಮೂರನೆಯದು ಅಚ್ಚಗನ್ನಡದ್ದೇ ಆದರೂ ಅದು ಶಬ್ದಾರ್ಥಕೋಶವಾದುದರಿಂದ ಈ ಉಪನ್ಯಾಸದ ವ್ಯಾಪ್ತಿಗೆ ಹೊರಗಾಗಿದೆ.

ಕೊಳಂಬೆಯವರ “ಕಾಲೂರ ಚೆಲುವೆ”ಯಲ್ಲಿ ದೇಶೀಯ ವಸ್ತು, ದೇಶೀಯ ಭಾಷೆ ಮತ್ತು ದೇಶೀಯ ಛಂದಸ್ಸುಗಳ ತ್ರಿಪುಟಿಯನ್ನು ಕಾಣುತ್ತೇವೆ. ಕಾಲೂರು ಎಂದರೆ ಹಳ್ಳಿ. ಹಳ್ಳಿಯೂರಿನ ಎಳೆಹರೆಯದ ಗಂಡು-ಹೆಣ್ಣುಗಳಿಬ್ಬರ ಭಗ್ನಪ್ರೇಮದ ದುರಂತ ಕಥೆಯನ್ನು ಈ ಕಾವ್ಯದಲ್ಲಿ ಕೊಳಂಬೆಯವರು ಹೇಳಿದ್ದಾರೆ. ಈ ಕಥೆ ಕೊಳಂಬೆಯವರು ಕೇಳಿ ತಿಳಿದ ನೈಜ ಘಟನೆಯನ್ನೇ ಆಧರಿಸಿದೆ ಎಂದು ಹೇಳಲಾಗಿದೆ. ಗಂಡು ಹೆಣ್ಣಿನ ಪ್ರೇಮ ಕಥೆ ಎಂದರೆ ಎರಡು ಮನೆತನಗಳ ಕಥೆಯೂ ಆಗುತ್ತದೆ. ನೆಲ್ಲೂರಿನ ದೊಡ್ಡ ಮತ್ತು ಹೊಸವೂರಿನ ಬೆಳ್ಳಿಗಳೇ ಆ ಹರೆಯದ ಗಂಡು ಹೆಣ್ಣುಗಳು. ಅವರ ಎದೆಯಂಗುಳದಲ್ಲಿ ಮೂಡಿದ ಬಯಕೆಯ ಬಳ್ಳಿಯಲ್ಲಿ  ಹೂ ಹಣ್ಣುಗಳು ಕಾಣಿಸಿಕೊಳ್ಳುವ ಮೊದಲೇ ಮನುಷ್ಯನ ಕವಡು ಬಗೆ, ಕೊಂಕು ನುಡಿಗಳ ಬಿರಿಬಿಸಿಲಲ್ಲಿ ಅದು ಮುರುಟಿ ಹೋಗುತ್ತದೆ. ಈ ಕಾವ್ಯದಲ್ಲಿ ಕಥೆಯಿರುವುದು ಹಿಡಿಯಷ್ಟು. ಆದರೆ ಕೊಳಂಬೆಯವರು ತಮ್ಮ ನುಡಿಗಡಣ, ಬಣ್ಣಗಾರಿಕೆ, ಪಡೆಮಾತುಗಳಿಂದ ಅದನ್ನು ನಾನ್ನೂರ ನಲ್ವತ್ತು ಪದ್ಯಗಳಲ್ಲಿ ಹಿಗ್ಗಿಸಿ ಹೆಣೆದಿದ್ದಾರೆ.

ಈ ಕಥನ ಕವನದ ಸೊಗಸಿರುವುದು ಬೆಗೆಬಗೆಯ ಬಣ್ಣಗಳಲ್ಲಿ, ನುಡಿಗಟ್ಟು ಮತ್ತು ನಾಣ್ಣುಡಿಗಳಲ್ಲಿ. ಕೊಳಂಬೆಯವರು ಕಾಲೂರ ಚೆಲುವನ್ನು ಬಣ್ಣಿಸುವ ಪರಿ ಹೀಗಿದೆ:

ಮುಂಬಗಲ್ ಪಿಂಬಗಲ್
ಸುಳಿಸುಳಿವ ತಂಬೆಲರ್
ಚೆಂಬಾನ ಕುಂಬಿಡುವ
ಬೆಟ್ಟಗಳಸಾಲು

ಹಿಂಬಾಳಿನಿಂಬೊಗರ್
ಬೇಕೆಂದು ಪೊಸ ಬಗೆಗೆ
ತುಂಬಿ ಮುಚ್ಚದು ಬಯಕೆ
ನಗುವುದೇಂ ಬಿಸಿಲು

ವಸಂತಾಗಮನವನ್ನು ಅವರು ಹೀಗೆ ಚಿತ್ರಿಸಿದ್ದಾರೆ :

ಹೂವೆಲೆಯ ಚೆಲ್ಲಾಡಿ
ಪಣ್ಕಾಯ ಕಾಣ್ಕೆಯಿಂ
ದೋವಿ ನೇಸರ್ಪೆರೆಗ
ಳಿಂ ಸೊಡರ ಬೆಳಗಿ

ತೀವಿರಲ್ ನರುಗಂಪು
ತುಳಿಲ್ಗೆಯ್ಯುತೆದೆ ತುಂಬಿ
ಕಾವನಂ ಬಗೆದೆತ್ತು
ಬರೆಯುತಿದೆ ತುಂಬಿ

ಕಾಲಗತಿಯನ್ನೂ ಬದುಕಿನ ಏರಿಳಿತವನ್ನೂ ಕೊಳಂಬಿಯವರು ಹೀಗೆ ಬಣ್ಣಿಸುತ್ತಾರೆ:

ಮದುವೆಗಳೊ ಸಾವುಗಳೊ
ಮಿಂಚುತಿರೆ ಬದುಕಿನೊಳ್
ತುದಿ ಮೊದಲ್ಗಳ ಬೆಸೆದು
ತೆರೆಯೆಡೆಯೊಳಡಗಿ

ಬೇರ್ಪಡಿಸಿ ಬೆನ್ತಟ್ಟಿ
ಕಡೆಗೆ ಪೊಳ್ತಳಿದೇರ್ಗೆ
ಕುದುರೆಗಳ ಬಿಗಿಯುಗುಂ
ಬಾಳ್ವೆಗಳನುಡುಗಿ

ಕೊಳಂಬೆಯವರು ಅಚ್ಚಕನ್ನಡದಲ್ಲೇ ಕಥನಿಸುವ ತಮ್ಮ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ಆದ್ಯಂತವಾಗಿ ಮಾಡಿದ್ದಾರೆ. ಕಾವ್ಯಾರಂಭದ ಪ್ರಾರ್ಥನಾ ಪದ್ಯಗಳಲ್ಲೇ ಇದನ್ನು ಮನಗಾಣುತ್ತೇವೆ. ಕಡಲಳಿಯ (ನಾರಾಯಣ), ನುಡಿವೆಣ್ (ಸರಸ್ವತಿ), ಬಯಕೆದುರು (ಕಾಮಧೇನು), ಮೇಲ್ನೆಲ (ಸ್ವರ್ಗ) ಇವೇ ಮೊದಲಾದ ಪ್ರಯೋಗಗಳಲ್ಲಿ ಕೊಳಂಬೆಯವರ ಸಂಕಲ್ಪ ಸಾಕಾರಗೊಳ್ಳುತ್ತದೆ. ಉಳಿ, ಒಸಗೆ, ಒತ್ತರಿಸು, ದೂವೆ ಮೊದಲಾದ ಪದಪ್ರಯೋಗಗಳಲ್ಲಿ, ಬಾಳ್ಮರ, ಕಲ್ಲರಿವು, ದಾಂಟುಮರ, ಕೋಲ್ಕಾರ ಮುಂತಾದ ಸಮಾಸಪದಗಳಲ್ಲಿ, ಅಚ್ಚಗನ್ನಡತನ ಮೆಯ್ದಾಳುತ್ತದೆ. ಅಲ್ಲಲ್ಲಿ ಗಾದೆ ಮಾತುಗಳ ಮುತ್ತುಗಳೂ ಕಂಗೊಳಿಸುತ್ತವೆ. ‘ಕತ್ತಲೆಗೊಂದು ಸೊಡರಿತ್ತ ತೆರನಾಯ್ತು’, ‘ಸಿರಿಯಹುಡುಕಿದ ಮಚ್ಚು ಹೆಗಲಿನೊಳಗಿತ್ತೆಂಬ’, ‘ಮರುಳು ಕುದುರೆಯ ಬಾಯ ಕೀಳ್ಕಡಿದು ಬಿಟ್ಟಂತೆ’, ‘ಸಿಡಿಲಿಗಳ್ಕಿದ ಮಗುವಿನಂತೆ’ – ಈ ಬಗೆಯ ನುಡಿವಣಿಗಳು ಕಾವ್ಯದ ಹುರುಳು ತಿರುಳುಗಳನ್ನು ಇಮ್ಮಡಿಗೊಳಿಸುತ್ತವೆ.

ಕೊಳಂಬೆಯವರು “ಕಾಲೂರ ಚೆಲುವೆ”ಯಲ್ಲಿ ಸರಳ ರಗಳೆಯ ಒಂದು ಪ್ರಭೇದವನ್ನು ಪ್ರಯೋಗಿಸಿದ್ದಾರೆ. ಸರಳ ರಗಳೆಯ ಪ್ರತಿ ಪಾದದಲ್ಲಿ ಐದು ಮಾತ್ರೆಯ ನಾಲ್ಕು ಗಣಗಳಿದ್ದರೆ ಇಲ್ಲಿ ನಾಲ್ಕು ಪಂಕ್ತಿಗಳನ್ನೇ ಮುರಿದು ಎಂಟಾಗಿ ಮಾಡಿಕೊಂಡ ಪದ್ಯಗಳನ್ನು ಕಾಣುತ್ತೇವೆ. ಈ ಪದ್ಯಗಳ ನಾಲ್ಕು ಮತ್ತು ಎಂಟನೆಯ ಪಾದಗಳ ಅಂತ್ಯಗಣ ಸಾಮನ್ಯವಾಗಿ ಮೂರು ಮಾತ್ರೆಯವಾಗಿರುತ್ತವೆ. ಕೆಲವೊಮ್ಮೆ ನಾಲ್ಕು ಮಾತ್ರೆಯೂ ಇರುವುದುಂಟು. ಉದಾಹರಣೆಗೆ:

ಮಳೆ ಕೊಡುವ ಬೆಟ್ಟಗಳ
ಮೊಲೆಯುಂಡು ಹಸುರೆಲೆಯ
ತಳೆವಿಡಿದು ನೆಲದ ದಾ
ರಿಯ ನೋಳ್ಪ ಚೆಲುವೆ
ಹೊಳಲ ಹೂ ಕೆರೆಗಳಂ
ತೆರೆಯ ಬೆಳ್ಮನೆಗಳಂ
ಮಳಲ ಚೆಲ್ವಂ ಮಸೆಗೆ
ಕಾಲೂರ ಚೆಲುವೆ

ಮತ್ತೊಂದು ಉದಾಹರಣೆ :

ಎಳಗರವು! ಕರೆಕರೆದು
ಹಾಲುಂಬೆನೆನ್ನುವುದು
ತಿಳಿಯದೇಂ ಬಿಡಿಸುತಿದೆ
ಮಾರ್ಕರೆಗೆ ಕಿವಿಯ
ತೊಳೆದ ಪೊಂಗೊಡದ ಪಾಲ್
ಕೆನ್ನೆತ್ತರಾಯ್ತಲ್ತೆ
ಸೀಳುವೆಂ ಪುಲಿಯೊಡಲ
ತೋರ್ಚುವೆಂ ಪಗೆಯಂ

ಕೊಳಂಬೆ ಪುಟ್ಟಣ್ಣಗೌಡರ “ಕಾಲೂರ ಚೆಲುವೆ”ಯನ್ನು ಓದುತ್ತಿರುವಂತೆಯೇ ಕಡೆಂಗೋಡ್ಲು ಶಂಕರಭಟ್ಟರ “ಹೊನ್ನಿಯ ಮದುವೆ”ಯ ನೆನಪಾಗುವುದೂ ಸಾಧ್ಯ. ಅಲ್ಲೂ ಹೀಗೆಯೇ-ಹೊನ್ನಿ ಮತ್ತು ಚೆನ್ನರ ಪ್ರಣಯ ದುರಂತದಲ್ಲಿ ಪರಿಸಮಾಪ್ತವಾಗುತ್ತದೆ. ಮದುವೆಯ ಮಂಟಪವೇ ಮಸಣದ ಸೂಡಾಗುತ್ತದೆ. “ಕಾಲೂರ ಚೆಲುವೆ”ಯಲ್ಲಿ ಸರಳರಗಳೆಯ ನಡಿಗೆಯ ಚೆಲುವಾದರೆ “ಹೊನ್ನಿಯ ಮದುವೆ”ಯಲ್ಲಿ ಶರಷಟ್ಪದಿಯ ಓಟದ ಬೆಡಗು :

ಕಾಲೂರಿನಲ್ಲೊಡೆಯ
ಮೈವಿಟ್ಟು ಮಲಗಿಹಂ
ಚೆಲ್ಲಿರ್ಪ ಹಸುರ ಪಾಲ್
ಗಡಲೊಡಲಿನಲ್ಲಿ
ನಲ್ಲೆ, ಹೂಬಿಸಿಲಿಂದ
ಬೀಸುತಿರುವೆಲರಿಂದ
ಕಾಲ್ಪಿಡಿಯುತೋಲಯಿಸಿ
ಮೈವಡೆವಳಿಲ್ಲಿ

ನಡೆನುಡಿಯ ಬೆಡಗಿಲ್ಲ
ತೊದಲ ಕಾಣುವೆವಿಲ್ಲಿ
ಪಡೆನೆಳಲ ತಿದ್ದುವಡೆ
ಹೊಸ ನೇಸರಿಲ್ಲ
ಮಡಚಿರ್ಪ ಕೆಳವೆಯೆಳ
ವೆಗಳೆರಡ ಬೆಳಬೆಳಗಿ
ಪಿಡಿದೊಡಲ ತರುವಲಿಯ
ಕಯ್ಗೆ ತಿಳಿವಿಲ್ಲ
– ಕಾಲೂರ ಚೆಲುವೆ

ಪಡುವಣ ಕಡಲಿನ
ತೆಂಗಿನ ಮಡಲಿನ
ಮರೆಯಲಿ ಮೆರೆವುದು ನಾಡೊಂದು
ಸೃಷ್ಟಿಯ ಮಾತೆಯ
ಮಿಸಲು ಸೊಬಗಿನ
ಹೊದಿಕೆಯ ಹೊದ್ದಿಹ ಬೀಡೊಂದು

ಓದದ ಕಲಿಯದ
ಕಾದದ ಬಲಿಯದ
ಮಂದಿಗಳಾದರೆ ಮನೆಯಿರದೆ?
ಮುಗಿಲಿನ ಮುಂದಲೆ
ಯುಪ್ಪರಿಗೆಯ ನೆಲೆ
ಮೆಚ್ಚದೆ ಗುಡಿಸಲೊಳಿಹರೊಲಿದೆ
– ಹೊನ್ನಿಯ ಮದುವೆ

ಈ ಪದ್ಯಗಳ ಉದ್ಧರಣದ ಉದ್ದೇಶ ಮೊದಲಿನದು ಎರಡನೆಯದರಿಂದ ಪ್ರಭಾವಿತವಾಗಿದೆ, ಒಂದು ಮತ್ತೊಂದರ ಪಡಿನೆಳಲಾಗಿದೆ ಎಂದು ಸಾಧಿಸುವುದಲ್ಲ; ಕಥೆ, ಕಥನಗಳಲ್ಲಿ ಅಲ್ಲಿ-ಇಲ್ಲಿ ಸಾಮ್ಯವಿದೆಯೆಂದು ಹೇಳುವುದು ಅಷ್ಟೆ.

ನುಡಿವಣಿಗಳು

ಹೆಸರೇ ಹೇಳುವಂತೆ ಇದು ಒಂದು ಸಾವಿರ ಮುಡಿಮುತ್ತು ಒಂದು ಮಾಲೆ. ನೂರು-ನೂರು ಪದ್ಯಗಳ ಹತ್ತು ‘ಅಂತೆ’ಗಳು ಈ ಮಾಲೆಯಲ್ಲಿ ಪೋಣತೆಗೊಂಡಿವೆ. ಸಂಸ್ಕೃತದಲ್ಲಿ ಶತಕಗಳೆಂಬ ತತ್ವ, ನೀತಿನಿರೂಪಕ ಕಾವ್ಯಪ್ರಕಾರವಿದೆ; ಸುಭಾಷಿತವೆಂಬ ವಾಙ್ಮಯ ವಿಶೇಷವೂ ಇದೆ. ಮುಕ್ತಕವೆಂಬ ಮತ್ತೊಂದು ಪ್ರಕಾರವೂ ಹೆಚ್ಚುಕಮ್ಮಿ ಅದೇ ಬಗೆಯದಾಗಿದೆ ಭರ್ತೃಹರಿಯ ಶತಕತ್ರಯವು ಅತ್ಯಂತ ಸುಂದರವೂ ಮನನೀಯವೂ ಆದ ಸೂಕ್ತಿಸಂಪದವಾಗಿದೆ. ಆಮರುಕ ಶತಕವೂ ಅದೇ ರೀತಿ ಮನೋಜ್ಞವಾಗಿದೆ. ಕನ್ನಡದಲ್ಲಿ ಹರಿಹರ, ರತ್ನಾಕರ ವರ್ಣಿ, ಪಾಲ್ಕುರಿಕೆ ಸೋಮನಾಥ, ಹಾಗೆಯೇ ಕಳೆದ ಶತಮಾನದಲ್ಲಿ ದೇವಶಿಖಾಮಣಿ ಅಳಸಿಂಗರಾಚಾರ್ಯ ಅವರ ಶತಕಸಾಹಿತ್ಯ ಕನ್ನಡದಲ್ಲಿ ಪ್ರಸಿದ್ಧವಾಗಿವೆ. ಸರ್ವಜ್ಞನ ತ್ರಿಪದಿಗಳು ಜೀವನದ ರೀತಿ ನೀತಿಗಳನ್ನೆ ಚಿತ್ರಿಸುತ್ತವೆ, ವಿವಿಧ ತತ್ವಗಳನ್ನು ಬೋಧಿಸುತ್ತವೆ. ಡಿ.ವಿ.ಜಿಯವರ “ಮಂಕುತಿಮ್ಮ ಕಗ್ಗ” ಎಸ್.ವಿ. ಪರಮೇಶ್ವರ ಭಟ್ಟರ “ಇಂದ್ರಚಾಪ”, “ಚಂದ್ರವೀಧಿ” ಮೊದಲಾದವು ಸೂಕ್ತಿ ಸುಧಾರ್ಣವಗಳೇ ಆಗಿವೆ. ಕೊಳಂಬೆಯವರ “ನುಡಿವಣಿಗಳು” ಅಂತಹದೊಂದು ಶ್ಲಾಘ್ಯ ಪ್ರಯತ್ನ, ಧರ್ಮವಿಚಾರ, ತತ್ವಚಿಂತನೆ, ಲೋಕಾನುಭವ ಪ್ರತಿಪಾದನೆಗಳಿಂದ ಕೊಳಂಬೆಯವರ “ನುಡಿವಣಿಗಳು” ಡಿ.ವಿ.ಜಿಯವರ ‘ಮಂಕುತಿಮ್ಮ’ನಿಗೆ ಹತ್ತಿರವಾಗುತ್ತದೆ. ಡಿ.ವಿ,ಜಿಯವರಲ್ಲಿ ಪ್ರತಿಪದ್ಯವೂ “ಮಂಕುತಿಮ್ಮ” ಎಂಬ ಅಂಕಿತದಿಂದಲೇ ಕೊನೆಗೊಂಡರೆ ನುಡಿವಣಿಗಳೆಲ್ಲ ‘ಅಂತೆ’ಯಲ್ಲಿ ಮುಗಿಯುತ್ತವೆ. ಇಂಗ್ಲಿಷಿನಲ್ಲಿ So they say ಎಂಬ ಹಾಗೆ ಇಲ್ಲಿಯ ಅಂತೆಗಳಿರುತ್ತವೆ. ಆದರೆ ಈ ‘ಅಂತೆ’ ಅವಧಾರಣಾರ್ಥಕಲ್ಲ, ವಿನಯ ಸೂಚಕವಾಗಿದೆ.

ಸಾಮಾನ್ಯವಾಗಿ ಪ್ರಾಚೀನ ಕವಿಗಳು ಇಷ್ಟದೇವತೆ, ವಿದ್ಯಾದೇವತೆಗಳ ಸ್ತೋತ್ರಗಳೊಂದಿಗೆ ಕಾವ್ಯಾರಂಭ ಮಾಡುವುದು ಸಂಪ್ರದಾಯ. ಅರ್ವಾಚೀನರಲ್ಲಿ ಅಂತಹ ಪದ್ಧತಿ ಅಷ್ಟಾಗಿ ಇಲ್ಲ; ಇಲ್ಲವೆಂದಲ್ಲ, ಕಡಿಮೆ. ಕೊಳಂಬೆಯವರು ತಮ್ಮ “ನುಡಿವಣಿಗಳ” ಆರಂಭವನ್ನು ಪಾಲ್ಗಡಲ ಪರಕೆಯೊಂದಿಗೆ ಮಾಡಿರುವುದು ವಿನೂತವಾಗಿದೆ.

ಆವ ಪಾಲ್ಗಡಲ್ ಪಾಲ್ ಮೊಲೆಗಳೆಲ್ಲವ ತುಂಬಿ
ಹೂ ಜೇನು ಹಣ್ಗಳ ಸೀಯಾಗಿ ಮುಂತೆ
ಬಗೆಬಗೆ ಸವಿಯಾಗಿ ಹೊನಲಾಗಿ ಕಾವುದೊ
ಪಾಲ್ಗಡಲದಕೆ ಮಣಿವೆ ಮೊದಲಂತೆ.

ಆಮೇಲೆ ಕ್ಷೀರಸಾಗರಶಾಯಿ ಮಹಾವಿಷ್ಣು, ದೇವಗಂಗಾಧರನಾದ ಪರಮೇಶ್ವರ ಮೊದಲಾದ ದೈವಶಕ್ತಿಗಳನ್ನು ಸ್ಮರಿಸಿ ಮುಂಬರಿಯುತ್ತಾರೆ.

ಮನುಷ್ಯ ಸದಾ ಕ್ರಿಯಾಶೀಲನಾಗಿರಬೇಕೆಂಬುದನ್ನು ಕೊಳಂಬೆಯವರು ಹೀಗೆ ಹೇಳುತ್ತಾರೆ.

ಜಗಿಯದೆ ನುರಿಸಲು ಹದುಳ ಕೆಟ್ಟಿತು, ನನ್ನಿ
ಬಾಯಾಕಳಿಸೆ ಪುಸಿಯೊಳನುಗ್ಗಿತಂತೆ
ಬೆವರುವ ನೆಲದಲ್ಲಿ ಚಳಿಗಳ್ಕಿದರೆ ನಾಂಬ
ಬೋಳ ಬೆನ್ನಲ್ಲೆ ಬಡಿದು ಕೊಂದನಂತೆ

ಇಲ್ಲಿ ‘ನಾಂಬ’ ಎಂದರೆ ಸೋಮಾರಿ, ‘ಚೋಳ’ ಎಂದ ಮೃತ್ಯು ಎಂಬುದು ಅರ್ಥ.

ನಮ್ಮ ಹಿರಿಯರು ಗಳಿಸಿಟ್ಟ ಒಡವೆಗಳ ಎಂದರೆ ಸಂಸ್ಕೃತಿ, ಸಭ್ಯತೆ, ನೀತಿ ಧರ್ಮ ಇತ್ಯಾದಿಗಳ ಬೆಲೆಯರಿತು ಅವನ್ನು ಬಳಸಬೇಕು, ಬೆಳಸಬೇಕು. ಅವುಗಳನ್ನು ಹಾಳಾಗಲು ಬಿಡಬಾರದು ಎಂಬುದನ್ನು ಹೇಳುವ ರೀತಿ ಹೀಗಿದೆ :

ಹಿರಿಯರು ಕೆಲಬರು ಬೆಲೆಯೊಡವೆಯ ತಂದು
ಮಾರಲಾರದೆ ಸೋತು ಬಯ್ಲಾಗೆ ಮುಂತೆ
ಸಿಕ್ಕಿದ ಬೆಲೆಗೊಡವೆಯ ಮಾರಿ ಕೊಳೆಕುಕ್ಕೆ
ಪುಕ್ಕಟೆ ತೆತ್ತು ಕಿಚ್ಚಿಗೆ ಪೋದರಂತೆ.

“ಮಾತಿನಿಂ ನಗೆ ನುಡಿಯು, ಮಾತಿನಿಂ ಹಗೆ ಕೆಳೆಯು” ಎಂಬ ಸರ್ವಜ್ಞನಂತೆ ಕೊಳಂಬೆಯವರು ಮಾತಿನ ಮರ್ಮವನ್ನು ಹೀಗೆ ವಿವರಿಸುತ್ತಾರೆ :

ನಲ್ಮೆ ತಾಳ್ಮೆಗಳಿಂದ ಹೊರಹೊಮ್ಮುವಾ ಮಾತು
ಕಂಪು ಕೆಂಪಿನ ಬೀಸುವೆಳೆಗಾಳಿಯಂತೆ
ಕಿನಿಸು ಕೀಳ್ಮೆಗಳಿಂದ ತೂರಿ ಹಾರುವ ನುಡಿ
ಸುಳಿಗಾಳಿ ಕೊಳೆ ತಿಪ್ಪೆ ಕೆದರಿ ಬಪ್ಪಂತೆ

ಹೀಗೆ ಪುಟ ತಿರುಗಿಸಿದಂತೆ, ಕಣ್ಣು ಹಾಯಿಸಿದಂತೆ ಬದುಕಿನ ಬೆಲೆಯೇರಿಸುವ, ಬದುಕಿಗೆ ಬೆಳಕು ಕಾಣಿಸುವ ನುಡಿಮುತ್ತುಗಳು ಎದ್ದೆದ್ದು ಬರುತ್ತವೆ; ಕೈಚಾಚಿದರೆ ಬೊಗಸೆ ತುಂಬುತ್ತವೆ. ಅವುಗಳನ್ನು ಆರಿಸುವ ಶ್ರಮವೇ ಇಲ್ಲ.

ಈ ಅಂತೆಗಳ ತೋರದಂಡೆಯನ್ನು ತಾವು ಕಟ್ಟಿದ್ದೇಕೆ ಎಂಬುದನ್ನು ಕೊಳಂಬೆಯವರು ಒಂದು ಕಡೆ ಹೀಗೆ ಹೇಳಿದ್ದಾರೆ:

ಹನಿಯೊಂದು ನೋಟಕ್ಕೆ ನೂರು ಕಣ್ಣಿಗೆ ಕಡಲ್
ಮೈಗೊಟ್ಟ ಕನ್ನಡಂ ಪೆಂಪು ಸೊಂಪಂತೆ
ಕನ್ನಡಿಗರು ಹಾಡೆ ಸವಿ ಪುರುಳಂ ನೋಡೆ
ಕೈಗೀವೆನಂತೆಯೆ ತಲೆವಾಗಿ ನಿಂತೆ

“ಕಾಲೂರು ಚೆಲುವೆ”ಯಲ್ಲಿರುವಂತೆಯೇ ಇಲ್ಲಿಯೂ ಅಚ್ಚಗನ್ನಡದಲ್ಲೇ ‘ನುಡಿವಣಿ’ಗಳನ್ನು ಕೊಳಂಬೆಯವರು ಕೋದಿದ್ದಾರೆ; ಬಳಕೆ ತಪ್ಪಿದ ಎಷ್ಟೋ ನುಡಿಗಳ್ನು ಬೆಳಕಿಗೆ ತಂದಿದ್ದಾರೆ. ತಾವೇ ಕೆಲವಾರು ನುಡಿಗಳನ್ನು ಟಂಕಿಸಿಯೂ ಇದ್ದಾರೆ.

‘ನುಡಿವಣಿ’ಗಳನ್ನು ಜಾನಪದ ಗೀತಗಳದೇ ಧಾಟಿಯಲ್ಲಿ ಬರೆದಿರುವುದಾಗಿ ಕೊಳಂಬೆಯವರು ತಿಳಿಸಿದ್ದಾರೆ. ಯಕ್ಷಗಾನ ಪ್ರಸಂಗಗಳಲ್ಲಿರುವಂತೆ ಅಷ್ಟತಾಳದಲ್ಲಿ ಇಲ್ಲಿಯ ಪದ್ಯಗಳನ್ನು ಹಾಡುಬಹುದೆಂದೂ ಹೇಳಿದ್ದಾರೆ. ಪದ್ಯಗಳು ಕೆಲಮಟ್ಟಿಗೆ ಸಾಂಗತ್ಯವನ್ನು ಹೋಲುತ್ತವೆ.

೧                ೨            ೩                 ೪
ಆವ ಪಾಲ್ | ಗಡಲಪಾಲ್ | ಮೊಲೆಗಳೆ | ಲ್ಲವತುಂಬಿ

೫           ೬          ೭   ೮
ಹೂಜೇನು | ಹಣ್ಗಳ | ಸೀಯಾಗಿ | ಮುಂತೆ

೧           ೨                ೩           ೪
ಬಗೆಬಗೆ | ಸವಿಯಾಗಿ | ಬಾಳ್ಗಳಂ | ಕಾವುದೊ

೫         ೬                  ೭         ೮
ಪಾಲ್ಗಡ | ಲದಕೆ ಮ | ಣಿವೆ ಮೊದ | ಲಂತೆ
– “ನುಡಿವಣಿಗಳು” ಪ್ರಥಮ ಪದ್ಯ

೧            ೨ ೩              ೪
ಪರಮಪ | ರಂಜ್ಯೋತಿ | ಕೋಟಿಚಂ | ದ್ರಾದಿತ್ಯ

೫            ೬        ೭     ೮
ಕಿರಣಸು | ಜ್ಞಾನ ಪ್ರ | ಕಾಶ | —

೧              ೨            ೩          ೪
ಸುರರ ಮ | ಕುಟಮಣಿ | ರಂಜಿತ | ಚರಣಾಬ್ಜ

೫            ೬        ೭      ೮
ಶರಣಾಗು | ಪ್ರಥಮ | ಜಿನೇಶ | —
-ಭರತೇಶ ವೈಭವ-ಸಾಂಗತ್ಯ

ಹಿಂದೆ ಆಂಡಯ್ಯನು ಸಂಸ್ಕೃತ ಪದ ಭೂಯಿಷ್ಠ ಕಾವ್ಯ ಪ್ರವಾಹವು ಸಿರಿಗನ್ನಡದ ನುಡಿಹೊನಲನ್ನು ಕೊಚ್ಚಿಕೊಂಡೊಯ್ಯದಂತೆ ಅದಕ್ಕೊಂದು ಒಡ್ಡನ್ನು ಕಟ್ಟದನಾದರೆ ಈ ಕಾಲದಲ್ಲಿ ಅಂತಹ ಪ್ರಯತ್ನಕ್ಕೆ ಮುಂದಾದರು ಮುಳಿಯದವರು ಮತ್ತು ಕೊಳಂಬೆಯವರು ಎಂದು ಹೇಳಿದೆ. ಕಾವ್ಯಭಾಷೆಯೆಂದರೆ ‘ಹಾಗೆಯೇ ಅಲ್ಲ’, ‘ಹೀಗಿರಲೂ ಸಾಧ್ಯ’ ಎಂದು ಅವರಿಬ್ಬರೂ ತೋರದ್ದಾರೆ, ಸಾರಿದ್ದಾರೆ. ಬಾರತೀಯ ಭಾಷಾ ಸಮುದಾಯದಲ್ಲಿ ಸಂಸ್ಕೃತ ಅತಿ ಪ್ರಾಚೀನದ್ದು. ಬಹುಮಟ್ಟಿಗೆ ಮಾತೃಸ್ಥಾನದಲ್ಲಿ ಮಾನ್ಯವಾಗಿರತಕ್ಕದ್ದು ಎಂಬುದೇನೋ ನಿಜ. ಹಸುಳೇ ತಾಯ ಮಡಲಿಲ್ಲ ಮಲಗುತ್ತದೆ, ಅವಳ ಸೆರಗು ಹಿಡಿದು ಓಡಾಡುತ್ತದೆ ಎಂಬುದರಿಂದ ಹಸುಳೆತನ ಹೋಗಿ ಹರೆಯ ಮಾಗಿದಾಗಲೂ ಹಾಗೆಯೇ ಮಾಡುವುದಿಲ್ಲ, ಮಾಡಲೂ ಬಾರದು. ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷದ ಹಳಮೆಯಿದೆ, ಸ್ವತಂತ್ರ ಸುಂದರ ಲಿಪಿಯಿದೆ, ಸಮೃದ್ಧ ಭಾಷಾ ಸಂಪತ್ತು ಅದರಲ್ಲಿದೆ. ಅದು ಯಾವುದೇ ವಸ್ತು ವಿಷಯ ನಿರೂಪಣೆಗೂ ಸಮರ್ಥವಾಗಿದೆ. ಆದುದರಿಂದ, ಕನ್ನಡ ಕಾವ್ಯ ಗ್ರಂಥ ರಚನೆಗಳಲ್ಲಿ ಕನ್ನಡಕ್ಕೇ ಪ್ರಥಮ-ಪ್ರಶಸ್ತ ಸ್ಥಾನವಿರಬೇಕಲ್ಲದೆ ಸಂಸ್ಕೃತಕ್ಕಲ್ಲ. ಆದರೆ ಎಲ್ಲೆಲ್ಲೂ ಕನ್ನಡವೇ ಎಂಬ ಅತಿಯೂ ಬೇಡ. ಹಲವಾರು ಕಿವಿಗೆ ಬೀಳದಿರಲಿ ಎಂದು ಕಿವಿಗೆ ಘಂಟೆಯನ್ನು ಕಟ್ಟಿಕೊಂಡ ಹರಭಕ್ತ ಘಂಟಾಕರ್ಣನಂತೆ ನುಡಿಭಕ್ತರು ನಡೆದುಕೊಳ್ಳಲಾಗದು. ಅವಶ್ಯವಾದಲ್ಲಿ ಸಂಸ್ಕೃತವಿರಲಿ ಅನ್ಯ ದೇಶೀ ಪದಗಳೂ ಬರಲಿ ಎಂದರೆ ‘ಕರ್ಮಣಿ ಸರದೊಳ್ ಚೆಂಬವಳಮಂ ಕೋದಿ’ರುವ ನಮ್ಮ ಮುದ್ದಣನ ಮಧ್ಯಮಾರ್ಗವೇ ಎಲ್ಲರಿಗೂ ಅನುಸರಣೀಯವಾಗಿರಲಿ; ಅದು ಬಿಟ್ಟು ಹಟಮಾರಿತನಕ್ಕಿಳಿದರೆ ಅಚ್ಚಗನ್ನಡದ ಅತಿ ಮೆಚ್ಚು ಪರಿಚಿತ ಸಂಸ್ಕೃತ ಪದಗಳಿಗಿಂತಲೂ ಕ್ಲಿಷ್ಟವಾಗಿ, ಕಾವ್ಯ ರಸಾಸ್ವಾದನವೇ ಕಷ್ಟವಾದೀತು. ಆಂಡಯ್ಯ, ಮುಳಿಯ, ಕೊಳಂಬೆಯವರ ಪ್ರಯತ್ನಗಳನ್ನು ಮನಸಾರೆ ಮೆಚ್ಚಿ ಕೊಂಡಾಡುವಾಗಲೂ, ಈ ಮಾತನ್ನು ಮರೆಯದಿರುವುದು ಒಳ್ಳೆಯದು.

 


[1] ಇದು ತುಲನಾತ್ಮಕವಾದ ಅಭಿಪ್ರಾಯ. ಹೊಸಕಾಲದಲ್ಲಿ ವಿವಿಧ ಮಾಧ್ಯಮಗಳು ಮತ್ತು ಇತರ ಕಾರಣಗಳಿಂದಾಗಿ ಕವಿ-ಸಾಹಿತಿಗಳಿಗೆ ಪ್ರಚಾರವು ಸುಲಭವಾಗಿದೆ.

[2] ಕಾಲಾಂತರದಲ್ಲಿ ಅವರು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ನಿವೃತ್ತರಾದರು.