ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ[1] ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಆಗಿನ ವಯಸ್ಸಿಗೆ ತಕ್ಕಂತೆ, ಆ ಕಾಲದ ಹಲವರಂತೆ ಗಳಗನಾಥರು ನನ್ನ ಆರಾಧ್ಯ ಸಾಹಿತಿಯಾಗಿದ್ದರು. ಅವರ ಕಾದಂಬರಿಗಳನ್ನು ಒಂದೂ ಬಿಡದೆ ಓದಿದ ನನಗೆ ಆ ಹಿರಿಯರನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆಯಿತ್ತು. ಅಂತಹ ಹೊತ್ತಿನಲ್ಲಿ ಒಂದು ಕಿರುಪುಸ್ತಕ ಅಪ್ರಯತ್ನವಾಗಿ ನನ್ನ ಕೈಗೆ ಬಂತು. ಆ ಪುಸ್ತಕದ ಹೆಸರೂ ‘ಗಳಗನಾಥ’. ಕುತೂಹಲದಿಂದ ಪುಟಗಳನ್ನು ತಿರುವಿದೆ. ಹಾಗೆ ತಿರುವುತ್ತಿದ್ದಾಗ ಪರಿವಿಡಿಯಲ್ಲಿದ್ದ ಲೇಖನ-ಲೇಖಕ ಪರಿಚಯದಲ್ಲಿ ಎರಡು ಹೆಸರು ನನ್ನ ಮನಸ್ಸನ್ನು ಹೊಕ್ಕು ಅಲ್ಲೇ ಆ ಹೊತ್ತಿನಲ್ಲೇ, ನಿಂತುಬಿಟ್ಟವು. ಆ ಹೆಸರುಗಳೆಂದರೆ ಆರ್.ವ್ಹಿ. ಜಾಗಿರದಾರ ಮತ್ತು ವಿ.ಎಂ. ಇನಾಂದಾರ. ಸಂಕ್ಷಿಪ್ತನಾಮಗಳ ಪೂರ್ಣ ರೂಪವನ್ನು ಅಲ್ಲೇ ಕಾಣಿಸಲಾಗಿತ್ತು : ರಂಗಾಚಾರ್ಯ ವಾಸುದೇವಾಚಾರ್ಯ ಜಾಗಿರದಾರ; ವೆಂಕಟೇಶ ಮಧ್ವ ಇನಾಂದಾರ. ಅಬ್ಬಾ, ಎಷ್ಟೊಂದು ದೀರ್ಘವಾದ ಹೆಸರುಗಳು ಎಂದುಕೊಂಡೆ! ಅಂತಹ ಆ ಇಬ್ಬರು ಮಹನೀಯರಲ್ಲಿ ಒಬ್ಬರಾಗಿರುವ ಪ್ರೊ. ವಿ.ಎಂ. ಇನಾಂದಾರರ ಕಾದಂಬರಿಗಳಲ್ಲಿ ಅವರ ‘ಜೀವನದೃಷ್ಟಿ’ ಹೇಗೆ ಪ್ರಕಟವಾಗಿದೆ ಎಂಬುದನ್ನು ಕುರಿತು, ಅವರದೇ ಸಮಕ್ಷಮದಲ್ಲಿ, ಬೆಂಗಳೂರಿನ ವಿಮರ್ಶನ ವಿಚಕ್ಷಣರೂ ಸೇರಿದಂತೆ ಮಹಾಜನರ ಗೋಷ್ಟಿಯಲ್ಲಿ ಹ್ರಸ್ವಪ್ರಬಂಧವೊಂದನ್ನು ಮಂಡಿಸುವ ಅವಕಾಶ ಪ್ರಾಪ್ತವಾಗಿರುವುದು ಒಂದು ಯೋಗಾಯೋಗವೆಂದೇ ನನ್ನ ಭಾವನೆ.

ನನ್ನದು ‘ಹೃಸ್ವ ಪ್ರಬಂಧ’ ಎಂದೆ. ಇದು ಉಪಚಾರಕ್ಕಾಗಿ ಅಥವಾ ವಿನಯ ಪ್ರದರ್ಶನಕ್ಕಾಗಿ ಆಡಿದ ಮಾತಲ್ಲ. ಗಾತ್ರ-ಸತ್ವ ಎರಡರಲ್ಲೂ ನನ್ನದು ಹ್ರಸ್ವ ಪ್ರಬಂಧ. ಅದಕ್ಕೆ ಮುಖ್ಯ ಕಾರಣ ಪ್ರಕೃತ ಪ್ರಬಂಧ ರಚನೆಗಾಗಿ ನನಗೆ ಲಭ್ಯವಾದ ಅವಕಾಶದ ಪರಿಮಿತಿ. ಪ್ರೊ. ಇನಾಂದಾರ ಹದಿನಾರು ಸ್ವತಂತ್ರ ಕಾದಂಬರಿಗಳಲ್ಲಿ ತೀರ ಈಚೆಯ ‘ತ್ರಿಶಂಕು’ ಅದಕ್ಕಿಂತ ಹಿಂದಿನ ‘ಊರ್ವಶಿ’ಯೇ ಮುಂತಾದ ಒಂದೆರಡನ್ನು ಬಿಟ್ಟು, ಮಿಕ್ಕ ಎಲ್ಲವನ್ನೂ ಕಂಡಿದ್ದೆನಾದರೂ ಓದಿರಲಿಲ್ಲ. ಓದಿದ ನಾಲ್ಕರಲ್ಲಿ ನನ್ನ ಮನಸ್ಸನ್ನು ಹೆಚ್ಚಾಗಿ ಮುಟ್ಟಿ, ಭಾವನೆಗಳನ್ನು ಮಿಟಿದ ಕೃತಿ ‘ಸ್ವರ್ಗದ ಬಾಗಿಲು’. ಇಂದಿನ ಈ ಗೋಷ್ಠಿಯಲ್ಲಿ ನಾನು ಭಾಗವಹಿಸಲೇಬೇಕೆಂತಬ-ಅನುಲ್ಲಂಘ್ಯವಾದ-ಕರೆಬಂದಾಗ, “ಸ್ವರ್ಗಬಾಗಿಲನ್ನು ಕುರಿತು ಬರೆದೇ ಓದಲೇ” ಎಂದು ಕೇಳಿಯೂ ಬಿಟ್ಟಿದ್ದೆ! ಆದರೆ ಪ್ರೊ. ಇನಾಮದಾರರು ಹದಿನಾರು ಸ್ವತಂತ್ರ ಕಾದಂಬರಿಗಳಲ್ಲಿ ಸುಮಾರು ನಾಲ್ಕು ಸಾವಿರ ಪುಟಗಳಷ್ಟು ಕಥನ ವಾಙ್ಮಯವನ್ನು ರಚಿಸಿರುವಾಗ, ಕೇವಲ ಇನ್ನೂರು ಪುಟಗಳ ಒಂದೇ ಕಾಂಬರಿಯನ್ನು ಅದು ಎಷ್ಟೇ ಹೃದಯಂಗಮವಾಗಿದ್ದರೂ-ಕುರಿತು ಬರೆಯುವುದು ಅಷ್ಟಂದು ಸೂಕ್ತವಲ್ಲ ಎಂಬ ಸೂಚನೆಯನ್ನೂ, ಅವರ ಎಲ್ಲ ಕಾದಂಬರಿಗಳಲ್ಲಿ ವ್ಯಕ್ತವಾಗುವ ಒಟ್ಟು ಜೀವನ ದೃಷ್ಟಿಯನ್ನು ಕುರಿತು ಬರೆದುಬಿಡಿ ಎಂಬ ಆದೇಶವನ್ನೂ ಗೋಷ್ಠಿಯ ನಿರ್ವಾಹಕರು ನೀಡಿದರು. ಸಾಮಾನ್ಯ ಸಾಹಿತಿಯೊಬ್ಬನ ಜೀವನ ದೃಷ್ಟಿಯನ್ನು ಗುರುತಿಸಿ ಹೇಳುವುದೇನೋ ಪ್ರಿಯವಾದ ಕಾರ್ಯ ನಿಜ. ಆದರೆ ಅದಕ್ಕೆ ಅವಕಾಶ ಮಾತ್ರ ಧಾರಾಳವಾಗಿರಬೇಕು ಎಂಬುದು ಅಪೇಕ್ಷಣೀಯ. ಕೇವಲ ಎರಡು ವಾರಗಳ ಹದಿನಾಲ್ಕು ದಿನಗಳಲ್ಲಿ ಹದಿನಾರು ಕಾದಂಬರಿಗಳನ್ನು ಸಂಗ್ರಹಿಸಿ, ಅವುಗಳ ಪಂಕ್ತಿಪಂಕ್ತಿಗಳನ್ನು ಅಲ್ಲವಾದರೂ ಪುಟ ಪುಟಗಳನ್ನಾದರೂ ಓದಿ, ನನ್ನ ಕಣ್ಣಿಗೆ ಕಂಡಂತೆ, ಬುದ್ಧಿ ಗ್ರಹಿಸಿದಂತೆ, ಇನಾಂದಾರರ ‘ಜೀವನ ದೃಷ್ಟಿ’ ಏನು ಎಂಬುದನ್ನು ಗುರುತಿಸುವ ಪ್ರಯತ್ನವನ್ನು ಮುಂದಿನ ಸಾಲುಗಳಲ್ಲಿ ನಡೆಸಿದ್ದೇನೆ. ತಮ್ಮೆಲ್ಲರ ಸಹಾನುಭೂತಿಯನ್ನು – ಮಿಗಿಲಾಗಿ -ಸಹನೆಯನ್ನು ಯಾಚಿಸುತ್ತೇನೆ.

ಇನಾಂದಾರರ ‘ಜೀವನದೃಷ್ಟಿ’ ಏನೆಂಬುದನ್ನು ಅರಿಯುವ ಮೊದಲು, ಅವರು ರಚಿಸಿರುವ ಕಾದಂಬರೀ ಪ್ರಕಾರದ ಎತ್ತರ ಬಿತ್ತರಗಳನ್ನು ಕೊಂಚ ಮಟ್ಟಿಗಾದರೂ ತಿಳಿದುಕೊಳ್ಳುವುದು ಉಚಿತ : ಅವರ ಪ್ರಪ್ರಥಮ ಸ್ವತಂತ್ರ ಕಾದಂಬರಿ “ಮೂರಾಬಟ್ಟೆ“. ಅದು ಪ್ರಕಟವಾದ ಕಾಲ ೧೯೪೬. ಇತ್ತೀಚೆಯ ಕೃತಿತ್ರಿಶಂಕು“. ಪ್ರಕಟಿನ ವರ್ಷ ೧೯೮೦. ಈ ಮಧ್ಯೇ ಪ್ರಕಟವಾದ ಇತರ ಕಾದಂಬರಿಗಳು ಕನಸಿನ ಮನೆ(೧೯೪೭), ವಿಜಯ ಯಾತ್ರೆ(೧೯೪೮), ಶಾಪ (೧೯೪೯), ಸ್ವರ್ಗದ ಬಾಗಿಲು (೧೯೫೧), ಕಟ್ಟಿದ ಮನೆ(೧೯೫೩), ಮುಗಿಯದ ಕಥೆ (೧೯೫೩), ಪರಿಯಸೊಬಗು(೧೯೫೩), ಚಿತ್ರಲೇಖಾ(೧೯೬೧), ಮಂಜು ಮುಸುಕಿದ ದಾರಿ(೧೯೬೫), ಊರ್ವಶಿ(೧೯೬೮), ನವಿಲು ನೌಕೆ(೧೯೭೧), ‘ಬಾಡಿದ ಹೂವುಮತ್ತು ಕತ್ತಲೆಯ ಕಡಲು(೧೯೭೨), ಯಾತ್ರಿಕರು(೧೯೭೬), ಇವುಗಳಲ್ಲಿ ಕನಸಿನ ಮನೆ‘, ‘ಕಟ್ಟಿದ ಮನೆ‘, ‘ಬಾಡಿದ ಹೂವು‘, ‘ಕತ್ತಲೆಯ ಕಡಲು ಈ ನಾಲ್ಕು ಕಾದಂಬರಿಗಳು ಮೋಹಿನಿಎಂಬ ಸಮಾನ ಶೀರ್ಷಿಕೆಯಲ್ಲಿ ೧೯೭೨ರಲ್ಲಿ ಪುನರ್ಮುದ್ರಿತವಾದವು.

ಮೇಲೆ ಹೆಸರಿಸಿದ ಹದಿನಾರು ಕಾದಂಬರಿಗಳಲ್ಲಿ ‘ಮೂರಾಬಟ್ಟೆ’ ಮತ್ತು ‘ವಿಜಯೋತ್ಸವ’ ಗಳ ವಸ್ತು ನಮ್ಮ ದೇಶದ ಸ್ವಾತಂತ್ಯ್ರಾಂದೋಲನಕ್ಕೆ ಸಂಬಂಧಿಸಿದೆ. ‘ಶಾಪ’ ಮತ್ತು ‘ಮಂಜು ಮುಸುಕಿದ ದಾರಿ’ಯಲ್ಲಿ ಸಂದರ್ಭ ಪರಿಣಾಮಗಳು ಬೇರೆ ಬೇರೆಯಾಗಿದ್ದರೂ ಅನುವಂಶಿಕತೆಯ ವಿವರಣವನ್ನು ಕಾಣುತ್ತೇವೆ. ತಿಳಿದೋ ತಿಳಿಯದೆಯೋ ಹಿಂದಿನವರು ಮಾಡಿದ ಪಾಪ ಮುಂದಿನವರನ್ನು ಹೇಗೆ ತಟ್ಟಿ ಕಂಗೆಡಿಸುತ್ತದೆ ಎಂಬುದರ ನಿರೂಪಣ ಈ ಕಾದಂಬರಿಗಳಲ್ಲಿದೆ. ಸಂತಾನ ಹೀನತೆಯ ಕ್ರೂರ ಹಸ್ತ ಒಂದು ಮುಗ್ಧ ಜೀವನವನ್ನು ಹೇಗೆ ಒತ್ತಿ ಹಿಂಡಿತು ಎಂಬುದರ ಮನೋವೇಧಕ ಚಿತ್ರಣವೇ ‘ಸ್ವರ್ಗದ ಬಾಗಿಲು’, ‘ಮುಗಿಯದ ಕಥೆ’ ಸಾಹಿತ್ಯ ರಚನೆಯ ತುಮುಲ-ವಿಪ್ಲವಗಳದೇ ಕಥೆ. ಜೀವನ ಸೌಂದರ್ಯದ ಮೀಮಾಂಸೆ, ಬದುಕಿನಲ್ಲಿ ತರ್ಕಾತೀತ ಘಟನೆಗಳ ಸಂಭಾವ್ಯತೆ ಇವುಗಳ ಸಮ್ಮಿಶ್ರ ವರ್ಣನೆಯನ್ನು ‘ಈ ಪರಿಯ ಸೊಬಗಿ’ನಲ್ಲಿ ಕಾಣಬಹುದು. ಸ್ತ್ರೀ-ಪುರುಷರ ದೈಹಿಕ ಸಂಬಂಧವು ‘ಗಾಳಿ ಗೊಡ್ಡಿದ ದೀಪಾಂಕುರ’ದಂತೆ ವಿಚಲಿತವಾದರೂ ಕಾಮದ ಕಾಳಿಕೆಯನ್ನು ನೀಗಿದಾಗ ಅದುಹೇಗೆ ‘ನಿರ್ವಾತ ನಿಷ್ಕಂದ ಪ್ರದೀಪ’ವೂ ಆಗಿ ಬೆಳಗಬಲ್ಲುದು ಎಂಬುದನ್ನು ‘ಚಿತ್ರಲೇಖಾ’ ಸಾಧಿಸುತ್ತದೆ. ವ್ಯಕ್ತಿತ್ವ ರೂಪಣದಲ್ಲಿ ಜನನ ಮೂಲವು ಹೇಗೆ ಪ್ರವರ್ತಿಸುತ್ತದೆ ಎಂಬುದರ ವಿಶ್ಲೇಷಣವನ್ನು ‘ಊರ್ವಶಿ’ಯಲ್ಲಿ ಕಾಣಬಹುದು. (ಕಥಾನಾಯಿಕೆ ಊರ್ವಶಿಯ ಜನ್ಮ  ಜಿಜ್ಞಾಸೆ ಕೆಲಮಟ್ಟಿಗೆ ಎಸ್.ಎಲ್. ಭೈರಪ್ಪನವರ ‘ವಂಶವೃಕ್ಷ’ದ ಶ್ರೋತ್ರಿಯವರ ಜನ್ಮ ರಹಸ್ಯವನ್ನು ನೆನಪಿಗೆ ತರುತ್ತದೆ. ಇದರ ಅರ್ಥ ಹೋಲಿಕೆ ಇದೆ ಎಂದಲ್ಲ.) ಸ್ವಾತಿಯ ಮಳೆ ಹನಿಯಂತೆ ಎಂದೋ ಕಿವಿದೆರೆಗೆ ಬಿದ್ದ ಒಂದು ಮಾತೋ ಸುದ್ದಿಯೋ ಭಾವದ ಚಿಪ್ಪಿನಲ್ಲಿ ಹೇಗೆ ಕಥಾ ಮೌಕ್ತಿಕವಾಗಿ ಪರಿಣಮಿಸಬಹುದು ಎಂಬುದಕ್ಕೆ ‘ನವಿಲು ನೌಕೆ’ ಒಳ್ಳೆಯ ಉದಾಹರಣೆ. ‘ಯಾತ್ರಿಕರು’ ಎಂಬುದು ಅನ್ಯದೇಶ, ಕಾಲ, ಮತಗಳಿಗೆ ಸಂಬಂಧಿಸಿದ ಕಾದಂಬರಿ; ಒಂದು ಇಂಗ್ಲಿಷ್ ನೀಳ್ಗತೆಯ ವಿಸ್ತರಣ. ಅಂಕಿತನಾಮಗಳೇ ಇಲ್ಲದೆ ಸರ್ವನಾಮ ಮಾತ್ರದಿಂದ ಕತೆಯನ್ನು ಬಿತ್ತರಿಸಿರುವುದು ಇಲ್ಲಿಯ ಒಂದು ವಿಶೇಷತೆ. ಬದುಕಿನ ಕೊಡಲಿಪೆಟ್ಟು ಬಿದ್ದು-ಬಿದ್ದು, ಕಥಾನಾಯಿಕೆ ಮೋಹಿನಿಯ ಜೀವಲೋಹ ಹೇಗೆ ಹದಗೊಂಡಿತು, ಒಂದು ರೂಪವನ್ನು ಪಡೆಯಿತು ಎಂಬುದರ ಸವಿಸ್ತಾರ ಚಿತ್ರ ಅವಳದೇ ಹೆಸರಿನ ಕಾದಂಬರಿ ‘ಮೋಹಿನಿ’ಯ ನಾಲ್ಕು ಭಾಗಗಳಲ್ಲಿ ವಿವೃತವಾಗಿದೆ : ಕೊನೆಯದಾದ ‘ತ್ರಿಶಂಕು’ವಿನಲ್ಲಿ ಯಾವುಯಾವುದೋ ಆಶೆ-ಆಮಿಷಗಳಿಗೆ ಬಲಿಯಾಗಿ ಹುಟ್ಟುನಾಡನ್ನು ಬಿಟ್ಟು ಪರದೇಶಗಳಿಗೆ, ಅದರಲ್ಲೂ ಭೂಸ್ವರ್ಗವೆಂದು ಭಾಸವಾಗುವ ಅಮೇರಿಕಕ್ಕೆ, ತಂಡೋಪ ತಂಡವಾಗಿ ನುಗ್ಗುತ್ತಿರುವ ಭಾರತೀಯರ ಗತಿ-ಸ್ಥಿತಿಗಳ ಚಿತ್ರಣವಿದೆ.

ಕಾದಂಬರಿಗಳ ವಸ್ತುಪರಿಚಯವನ್ನಷ್ಟೇ ನಾನು ಮಾಡಿದೆನೇ ವಿನಾ ಅವುಗಳಲ್ಲಿ ಕಂಡುಬರುವ ಪಾತ್ರ ವೈವಿಧ್ಯ, ಭಾಷಾಶೈಲಿ, ತಂತ್ರಕೌಶಲ್ಯಗಳ ವರ್ಣನೆಯನ್ನಲ್ಲ. ಅದು ನನ್ನದಲ್ಲದ, ನನ್ನ ಸಹಯೋಗಿಗಳ ಕ್ಷೇತ್ರ. ಆದರೂ ಎರಡು ಮಾತನ್ನು ಹೇಳದೆ ಇರಲಾಗದು: ಒಂದು, ಇನಾಂದಾರರ ಕಾದಂಬರಿಗಳಲ್ಲಿ ಗಾಢವಾಗಿರುವ ರುರಂತ ವಸ್ತುವಿನ್ಯಾಸ. ಪಾಶ್ಚಾತ್ಯ, ಅದರಲ್ಲೂ ಗ್ರೀಕ್ ಮತ್ತು ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವೋ ಅಥವಾ ಆರಿಸಿಕೊಳ್ಳುವ ವಸ್ತುಸ್ವರೂಪವೋ ಕಾರಣವಾಗಿ ಅವರ ಕಾದಂಬರಿಗಳಲ್ಲಿ ಹೆಚ್ಚಿನವು ದುರಂತ. ಸುಖಾಂತ ಕೃತಿಗಳಲ್ಲೂ (ಅದಕ್ಕೆ ‘ನವಿಲು ನೌಕೆ’ಯೊಂದೇ ಪ್ರಬಲವಾದ ನಿದರ್ಶನ) ದುರಂತಚ್ಛಾಯೆ ಅಲ್ಲಲ್ಲಿ ದಟ್ಟಯಿಸಿಕೊಂಡಿರುವುದು ಕಣ್ಣಿಗೆ ಬಿದ್ದೇ ಬೀಳುತ್ತದೆ. ಇನ್ನೊಂದು, ಕಥಾ ಸಮಾಪ್ತಿ. ಇನಾಂದಾರರ ಹಲವು ಕಾದಂಬರಿಗಳಲ್ಲಿ ಅವುಗಳ ಅಂತ್ಯ ಅನಿರೀಕ್ಷಿತ. ಎಸಳುಎಸಳಾಗಿ ಅರಳುತ್ತ ಹೋಗುವ ಕಥೆ ಗಕ್ಕನೆ ನಿಂತು ಬಿಡುತ್ತದೆ. ಎಂದರೆ, ಕಥೆ ಅಪೂರ್ಣವೆಂದಲ್ಲ. ಆದರೂ ಓದು ಮುಗಿದಾಗ ‘ಮುಂದೇನು’ ಎಂಬ ಪ್ರಶ್ನೆ ಎದ್ದೇ ಏಳುತ್ತದೆ. ಅಂತಹ ಪ್ರಶ್ನೆಗೆ ಓದುಗನೇ ಉತ್ತರವನ್ನು ಕಂಡುಕೊಳ್ಳಲಿ ಎಂಬುದು ಲೇಖಕನ ಆಶಯವಿರಬಹುದೋ ಏನೊಃ ಪ್ರಾಯಃ ಸ್ವತಃ ಇನಾಂದಾರರೇ ಇಂತಹ ಪ್ರಶ್ನೆಗಳನ್ನು ಉತ್ತರಿಸಲು ಹೊರಟರೆ ಒಂದಾಗಿ ಹುಟ್ಟಿದ ‘ಕನಸಿನ ಮನೆ’ ನಾಲ್ಕಾಗಿ ಬೆಳೆದಂತೆ, ಕಾದಂಬರಿಗಳು ಬೆಳೆಯಲೂ ಬಹುದು! ಅಂತಹ ಬೆಳೆಯನ್ನು ವಾಚಕವರ್ಗ ನಿರಾಕರಿಸಲಾರದು. ಏಕೆಂದರೆ ಆರೆಂಟು ವರ್ಷಗಳ ಅಂತರದಲ್ಲಿ ರಚಿತವಾದ ‘ಮೋಹಿನಿ’ಯ ನಾಲ್ಕು ಭಾಗಗಳಲ್ಲೂ ಕಥೆಯ ಬಂಧ ಒಂದೇ ರೀತಿಯಾಗಿದೆ; ಮಾತ್ರವಲ್ಲ, ಅದು ಎಲ್ಲೂ ಹುರಿಬಿಟ್ಟದ್ದಿಲ್ಲ. ಇದು ವಿರಳವಾದ ಲೇಖನ ಕೌಶಲವೆಂದೇ ಹೇಳಬಹುದು.

ನನ್ನ ಪ್ರಬಂಧದ ಪೂರ್ವರಂಗ-ಕೊಂಚ ವಿಸ್ತಾರವಾದದರೂ-ಇಲ್ಲಿಗೆ ಮುಗಿಯಿತು. ಮುಂದಿನದು ರಂಗಪ್ರವೇಶ. ಇಂದಿನ ಗೋಷ್ಠಿಯಲ್ಲಿ ನನ್ನ ವಿಷಯ ಇನಾಂದಾರರ ‘ಜೀವನದೃಷ್ಟಿ’. ಒಬ್ಬ ವಿಶಿಷ್ಟ ಲೇಖನ ವಾಙ್ಮಯವನ್ನು ಓದಿ ವಾಚಕಸ್ತೋಮ ಸಹಜವಾಗಿಯೇ ಆ ವಾಙ್ಮಯದಲ್ಲಿ ಲೇಖಕನ ವ್ಯಕ್ತಿತ್ವ , ಮನೋಧರ್ಮ, ಜೀವನದೃಷ್ಟಿ ಮುಂತಾದುವು ಹೇಗೆ ವ್ಯಕ್ತವಾಗಿವೆ ಎಂಬುದನ್ನು ಅರಿಯಲು ಪ್ರಯತ್ನಿಸುತ್ತದೆ. ಸಾಹಿತ್ಯ ಸಾಹಿತಿಗಳಲ್ಲಿ ಒಂದು ಅವಿನಾಭಾವ ಇರುತ್ತವೆ. ಇರಬೇಕು ಎಂಬ ನಂಬಿಕೆಯಿಂದ ಇಂತಹ ವಿಶ್ಲೇಣಗಳು ಈಗ ನಡೆಯುವುದುಂಟು. “ಮುಖ್ಯವಾಗಿ ಕಾವ್ಯದಲ್ಲಿ ದೊರಕುವುದು ಕವಿಯ ಸಹವಾಸ. ಅದರ ಆಳದಲ್ಲಿರುವುದು ಆತನ ಜೀವ” ಎಂದು ಮಾನ್ಯ ವಿ.ಸೀ.ಯವರು ತಮ್ಮದೊಂದು ಉಪನ್ಯಾಸದಲ್ಲಿ ಹೇಳಿ ಇಂದಿಗೆ ಐವತ್ತು ವರ್ಷವೇ ಸಂದಿದೆ! ಇಲ್ಲಿ ‘ಕಾವ್ಯ’ ಎಂದರೆ ವ್ಯಾಪಕಾರ್ಥದಲ್ಲಿ ಸಾಹಿತ್ಯವೇ ಆಗಿದೆ. ಕಾವ್ಯ ಅಥವಾ ಸಾಹಿತ್ಯ ಎಂಬುದು ಲೋಕದ ಸುಖ ದುಃಖ, ವಿಲಾಸ ವಿಹಾರ, ಸರಸ ವಿರಸ, ದುಷ್ಟ ಶಿಷ್ಟ, ಉಚ್ಚನೀಚ ಇವೆಲ್ಲವುಗಳ ಕೂಗಿಗೆ ಕವಿಯ ಅಥವಾ ಸಾಹಿತಿಯ ಹೃದಯ ಕುಹರದಂತೆ ಹೊರಡುವ ಮರುಕೂಗು ಎಂಬುದು ಹಲವರ ನಂಬಿಕೆ. ಎಂದರೆ ಆ ಪ್ರತಿಧ್ವನಿಯಲ್ಲಿ ಕವಿ ಜೀವದ ಒಂದು ಅಂಶ, ಅವನ ರಕ್ತಮಾಂಸ-ರಾಗ ದ್ವೇಷಾದಿಗಳ ಒಂದು ಭಾಗ ಇದ್ದೇ ಇರಬೇಕು ಎಂಬುದು ಒಂದು ಗ್ರಹೀತ. ಹಾಗಾಗಿ ಒಬ್ಬಾತ ಬರೆದ ಯಾವುದೊ ಒಂದು ಕಾವ್ಯವಿರಲಿ ಅಥವಾ ಕಥೆಯಿರಲಿ, ಅದರ ವಸ್ತು, ಪಾತ್ರ, ಸಂಭಾಷಣ, ವಿವರಣಗಳಲ್ಲಿ ಆತ ಎಲ್ಲಾದರೂ ಅಡಗಿದ್ದಾನೆಯೇ ಎಂದು ವಾಚಕರು ಅಥವಾ ವಿಮರ್ಶಕರು ಶೋಧನ ಕುತೂಹಲಿಗಳಾಗುವುದುಂಟು. ವಸ್ತುವಿನ್ಯಾಸದಲ್ಲಿ, ಪಾತ್ರ ನಿರ್ವಹಣಗಳಲ್ಲಿ, ಸನ್ನಿವೇಶ ರಚನೆಯಲ್ಲಿ ಲೇಖಕನೇ ಪ್ರತ್ಯಕ್ಷ ಎಂದು ಅವರು ಸಾಧಿಸುತ್ತಾರೆ, ಅಥವಾ ಅವುಗಳೊಂದಿಗೆ ಲೇಖಕನನ್ನು ಸಮೀಕರಿಸುತ್ತಾರೆ; ಇದೇ ಲೇಖಕನ ಜೀವನದೃಷ್ಟಿ ಎಂದು ನಿರ್ಧರಿಸುತ್ತಾರೆ. ಇದು ನಮ್ಮ ನವವಿಮರ್ಶೆಯ ಒಂದು ವೈಖರಿ. ಹಾಗಿದ್ದರೆ ಇನಾಂದಾರರ ಕಾದಂಬರಿಗಳಲ್ಲಿ ಅವರ ಜೀವನದೃಷ್ಟಿ ಯಾವುದು?

ಈ ಪ್ರಶ್ನೆಗೆ ಯಥಾಶಕ್ತಿಯಾಗಿ ಉತ್ತರವನ್ನು ಹುಡುಕುವಾಗ ಒಂದು ಮಾತನ್ನು ಹೇಳಬೇಕೆನಿಸುತ್ತದೆ : ಸಾಹಿತ್ಯದಲ್ಲಿ, ಎಂದರೆ ಕಥೆ, ಪಾತ್ರ, ಸನ್ನಿವೇಶವೇ ಮುಂತಾದ ಅದರ ಪರಿಕರಗಳಲ್ಲಿ ಸಾಹಿತಿಯ ಸಾರೂಪ್ಯ-ಸಮೀಕರಣಗಳು ಅಧ್ಯಾಹಾರವೇ, ಅನಿವಾರ್ಯವೇ? ಶ್ರೀರಾಮನ ಶೀಲನಿರೂಪಣದಲ್ಲಿ ವಾಲ್ಮೀಕಿಯು ಸಮರಸನಾಗಿದ್ದಾನೆ ಎಂದರೆ ರಾವಣದರಲ್ಲೂ ಆಗಿರುವನು ಎಂಬುದು ಗ್ರಹೀತವೇ? ಸೀತೆಯ ಪಾತಿವ್ರತ್ಯವನ್ನು ಚಿತ್ರಿಸಿರುವ ಅದೇ ಆದಿಕವಿ, ಶೂರ್ಪನಖೆಯ  ಪರಪುರುಷ ಮ್ಯಾಮೋಹವನ್ನೂ ವರ್ಣಿಸಿರುವನಲ್ಲ!  ಇವುಗಳಲ್ಲಿ ವಾಲ್ಮೀಕಿಯ ನಿಲುಮೆ ಯಾವುದು? ಕವಿಗೆ ದ್ವಂದ್ವ ವ್ಯಕ್ತಿತ್ವವಿದೆಯೇ?- ಇಂತಹ ಸಂದೇಹ ಸಂದೋಹಗಳಲ್ಲಿ ನನಗೆ ತೋರುವುದು ಇದು! ಸಾಹಿತಿಯ ನಿಜಜೀವನಕ್ಕೂ-ಎಂದರೆ ಆತನ ವೈಯುಕ್ತಿಕ ಮತ, ತತ್ವ, ಶ್ರದ್ಧೆ, ನಿಷ್ಠೆ, ವಿಶ್ವಾಸ ಇತ್ಯಾದಿಗಳಿಗೂ ಅವನು ಸಾಹಿತ್ಯದಲ್ಲಿ ನಿರೂಪಿಸುವ ಕಥೆ, ಪಾತ್ರ, ಸನ್ನಿವೇಶಗಳಿಗೂ ಸಾರ್ವಕಾಲಿಕವಾದ ಅಭೇದ ಭಾವವನ್ನು ಕಲ್ಪಸಲಾಗದು. ಶಕ್ತನಾದ ಸಾಹಿತಿ ಲೋಕ ಜೀವನದ ವಿವಿಧ ಸ್ಪಂದನಗಳಿಗೆ ತೀವ್ರವಾದ ಪ್ರತಿಸ್ಪಂದಿಸುತ್ತಾನೆ; ಅಲ್ಲಿಯ ದರ್ಶನವನ್ನು ಯಥಾಶಕ್ತಿಯಾಗಿ, ತದ್ವತ್ತಾಗಿ ತನ್ನ ಕೃತಿಗಳಲ್ಲಿ ಪ್ರದರ್ಶಿಸಲು ಪ್ರಯತ್ನಿಸುತ್ತಾನೆ ವಿನಾ ಒಂದು ಕತೆಯಿಂದ ಹೊರಡುವ ನೀತಿಯಲ್ಲಿ, ಅಥವಾ ಒಂದು ಪಾತ್ರ ಆಡುವ ಮಾತಿನಲ್ಲಿ ಲೇಖಕನೇ ಸ್ವಯಂ ವ್ಯಕ್ತವಾಗುತ್ತದೆ ಎಂದು ಅನುಮೇಯಿಸಲಾಗದು. “ಸ್ತ್ರೀ ಬುದ್ಧಿಃ ಪ್ರಳಯಾಂತಕ” ಎಂಬ ಉದ್ಗಾರವನ್ನು ಕೇಳಿ ಇದು ಆ ಉದ್ಗಾತೃವಿನದೇ ಜೀವನ ಸಿದ್ಧಾಂತ ಎಂದು ನಿರ್ಣಯಿಸುವುದು ಅತಿರೇಕದ್ದೂ ಅನ್ಯಾಯದ್ದೂ ಆಗಬಲ್ಲುದು. ಹಿರಿಯರಾದ ಮಾಸ್ತಿಯವರು ಒಮ್ಮೆ ಹೇಳಿದಂತೆ, ‘ಚಿತ್ರದ ಹುಲಿಗೆ ತುಪಾಕಿಯನ್ನು ಎತ್ತು’ವಂತಹ ಕೆಲಸ ಅದು. ನನ್ನೀ ವಾದದ ಸಾರಾಂಶ ಇದು : ಸಾಹಿತ್ಯದಲ್ಲಿ ಏನೇನು ಇದೆಯೋ ಅದೆಲ್ಲ ಸಾಹಿತಿಯದೇ ಆಗಬೇಕಿಲ್ಲ. ಸಾಹಿತಿ ಎಂದರೆ ಒಂದು ವ್ಯಕ್ತಿ. ಆ ವ್ಯಕ್ತಿ ಎಲ್ಲ ಹೊತ್ತಿನಲ್ಲೂ ಸಾಹಿತಿಯೇ ಆಗಿರುವುದಿಲ್ಲ. ಹನುಮಂತಾರಾಯರು ಶ್ರೀರಾಮನ ಪಾತ್ರವನ್ನು ರಂಗಮಂಟಪದಲ್ಲಿ ತುಂಬ ಸೊಗಸಾಗಿ ನಿರ್ವಹಿಸಬಲ್ಲರು. ಆದರೆ ನಿಜ ಜೀವನದಲ್ಲೂ ರಾಯರೂ ಶ್ರೀರಾಮನಲ್ಲ ತಾನೇ? ಹಾಗೆಯೇ ಸಾಹಿತ್ಯ ಸಾಹಿತಿಗಳ ಸಂಬಂಧ. ಸಾಹಿತಿಯಲ್ಲಿ ದಿನದ ಇಪ್ಪತ್ತನಾಲ್ಕು ತಾಸೂ ರಸಾವೇಶ, ರಚನೋಲ್ಲಾಸ ಇರುತ್ತವೆ ಎನ್ನಲಾಗದು. ವಿಶಿಷ್ಟ ಸಂದರ್ಭದಲ್ಲಿ ಅವನಲ್ಲಿ ಲೇಖನ ಸ್ಫೂರ್ತಿ, ಕಾವ್ಯೋತ್ಸಾಹಗಳು ಚಿಮ್ಮುತ್ತವೆ, ಆಗ ಅವನು ಸುಂದರವಾಗಿ ಗ್ರಂಥವನ್ನು ನಿರ್ಮಿಸುತ್ತಾನೆ. ಕಡೆಂಗೋಡ್ಲು ಶಂಕರಭಟ್ಟರು ತಮ್ಮದೊಂದು ಕವಿತೆಯಲ್ಲಿ “ಒರೆ ಬೇರೆ, ಒಳಬಾಳು ಬೇರೆ” ಎಂದು ಹಾಡಿದಂತೆ ಸಾಹಿತಿ (ಅಥವಾ ಕವಿ) ತನ್ನ ಕೃತಿಯಲ್ಲಿ ವಿವೃತವಾದ ಪಾತ್ರ, ಪರಿಸರ ಮುಂತಾದವುಗಳಿಂದ ಭಿನ್ನನಾಗಿರುವುದು ಅಸಂಭ್ಯಾವ್ಯವಲ್ಲ. ಎಂದರೆ ಸಾಹಿತಿ ಆತ್ಮವಂಚಕನೇ? ತನ್ನದಲ್ಲದ್ದನ್ನು, ತಾನು ಕಂಡು ಕೇಳಿ ಅನುಭವಿಸದೆ ಇರುವುದನ್ನು ಆತ ವರ್ಣಿಸುತ್ತಾನೆಯೇ? ಅದು ಆತ್ಮವಂಚನೆ, ಪರವಂಚನೆ ಎರಡೂ ಆಗುವುದಿಲ್ಲವೇ? ಇಂತಹ ಪ್ರಶ್ನೆಗಳು ಎದ್ದರೆ ಅವಕ್ಕೆ ಉತ್ತರ :ಒಬ್ಬಾತ ವಾಙ್ಮಯರಂಗದಲ್ಲಿ ಸಾಹಿತಿ, ಲೋಕಜೀವನದಲ್ಲಿ ವ್ಯಕ್ತಿ ಎಂದಷ್ಟೇ ಹೇಳಿ ಈ ವಿವರಣವನ್ನು ಮುಗಿಸಬಹುದು.

ಇನಾಂದಾರರ ಕಾದಂಬರಿಗಳಲ್ಲಿ ಅವರ ಜೀವನದೃಷ್ಟಿ ಒಬ್ಬ ಸಾಹಿತಿಯಾಗಿ, ಒಬ್ಬ ಸಾಮಾಜಿಕವಾಗಿ ಸ್ಥೂಲಮಾನದಿಂದ ಹೇಗೆ ವ್ಯಕ್ತವಾಗಿದೆ ಎಂಬುದನ್ನು ಕಂಡುಕೊಳ್ಳುವುದು ಅಷ್ಟೇನೂ ಕಷ್ಟಕರವಲ್ಲ. ಒಂದು ರೀತಿಯಲ್ಲಿ ಸ್ವತಃ ಇನಾಂದಾರರೇ ಅದನ್ನು ಸೂಚಿಸುತ್ತಾರೆ. ಅದು ಹೀಗೆ : ಮೊದಲನೆಯದಾಗಿಅವರ ಹೆಚ್ಚಿನ ಕಾದಂಬರಿಗಳ ಶೀರ್ಷಕಪುಟ (Title page)ಗಳಲ್ಲಿ ಯಾವುದಾದರೊಂದು ಉದ್ಧರಣ (Quotation) ಇದ್ದೇ ಇರುತ್ತದೆ. ಉದಾಹರಣೆಗೆ ‘ಕನಸಿನ ಮನೆ’ಯಲ್ಲಿ “ತುಂಬಿದೀ ಊರಲ್ಲಿ ಮನೆ ಇವಳಿಗಿಲ್ಲ” ‘ಸ್ವರ್ಗದ ಬಾಗಿಲ’ಲ್ಲಿ, “Now she is but a story told beside the fire” ‘ಚಿತ್ರಲೇಖಾ’ದಲ್ಲಿ “….it is wisdom to belive the heart”. ‘ಊರ್ವಶಿ’ಯಲ್ಲಿ “ಸ್ನೇಹ ಮೂಲಾನಿ ದುಃಖಾನಿ” ಇತ್ಯಾದಿ ವಾಕ್ಯಗಳು ಎದ್ದು ಕಾಣುತ್ತವೆ. ಎರಡನೆಯದು ಕಾದಂಬರಿಗಳ ‘ಅರಿಕೆ’ ಅಥವಾ ‘ಮುನ್ನುಡಿ’ಗಳಲ್ಲಿ ಲೇಖನ ಸಂದರ್ಭ, ಉದ್ದೇಶಗಳನ್ನು ಸ್ವತಃ ಇನಾಂದಾರರೇ ಕೆಲಮಟ್ಟಿಗೆ ವಿಶ್ಲೇಷಣೆ ಮಾಡುತ್ತಾರೆ. ರಾಜಕೀಯಾತ್ಮಕವಾದ ‘ಮೂರಾಬಟ್ಟೆ’ಯ ‘ಅರಿಕೆ’ಯಲ್ಲಿ “…ಸ್ವಾತಂತ್ಯ್ರ ಬಂದ ಆರು ತಿಂಗಳೊಳಗಾಗಿಯೇ ಗತಿಸಿದ ಗಾಂಧೀಜಿಯವರು ದೇಶದ ಮುನ್ನಡೆಗೆ ಅನಿವಾರ್ಯವಾಗಿದ್ದ, ಅದುವರೆಗೆ ಒದಗಿಸಿದ್ದ ನಿಸ್ವಾರ್ಥ ಪ್ರೇರಣೆಯನ್ನೂ ತಮ್ಮೊಡನೆ ಕೊಂಡೊಯ್ದರು ಎನ್ನುವಂತಾಗಿದೆ….” ಎಂದು ‘ಸಿಕ್ಕವರಿಗೆ ಸೀರುಂಡೆ’ ಎಂಬಂತೆ ದೋಚುವ-ಬಾಚುವ ರಾಜಕೀಯಕ್ಕಾಗಿ ಪರಿತಪಿಸುತ್ತಾರೆ. ‘ಕನಸಿನ ಮನೆ’ಯ ಮುನ್ನುಡಿಯಲ್ಲಿ “…..ಗಂಡು ಹೆಣ್ಣಿನ ಸಂಬಂಧ ಅತಿ ಕಷ್ಟಕರವಾದದ್ದು. ಚೆಲುವಿನ ದೇಹದಲ್ಲೂ ಚೆಲುವನ್ನು ನೋಡುವ ಕಣ್ಣಿನಲ್ಲೂ ನೆತ್ತರು ಬಿಸಿಯಾಗಿದೆ. ಮಣ್ಣಿನಲ್ಲಿ ಬೆಳೆದ ಗಿಡಕ್ಕೆ ಮಣ್ಣಿನ ಅಂಶ ಅಂಟದೆ ಇರುವುದಿಲ್ಲ….” ಎಂಬ ಮಾತುಗಳೇ, ಅದರ ಮುಂದಿನ ಭಾಗಗಳಲ್ಲೂ ಅದೇ ಅರ್ಥದಲ್ಲಿ ಪುನರುಕ್ತವಾಗಿವೆ. ‘ಶಾಪ’ದ ಅರಿಕೆಯಲ್ಲಿ ಬದುಕು ಒಂದು ಸೋಜಿಗದ ಬಟ್ಟೆ. ಅದರ ಸೂಕ್ಷ್ಮವಾದ ಹೆಣಿಕೆಯ ಅನಂತಾನಂತ ಹಾಸುಹೊಕ್ಕುಗಳಲ್ಲಿ ಎಷ್ಟು ಎಳೆಗಳೋ, ಎಷ್ಟು ಬಣ್ಣಗಳೋ….” ಎಂದು ಬದುಕಿನ ಸಿಕ್ಕುಗಳಿಗಾಗಿ ಅಚ್ಚರಿಯಾದರೆ; ‘ಮಂಜುಮುಸುಕಿದ ದಾರಿ’ಯಲ್ಲಿ ಕಾದಂಬರಿ ಜೀವನಾನುಭವದ ಒಂದು ಬಗೆಯ ಸಂಶೋಧನೆ ಅಥವಾ ನಾನು ಹಾಗೆ ಬಗೆದಿದ್ದೇನೆ….” “….ಲೋಕದಲ್ಲಿ ಒಳ್ಳೆಯದೂ ಇದೆ, ಕೆಡಕೂ ಇದೆ. ಮಿತ್ರಭಾವದಿಂದಾಗಿ ಕೆಡುಕಿನ ತೀವ್ರತೆ ಕಡಿಮೆಯಾಗಬಹುದು….” ಎಂಬ ನಂಬಿಕೆಯಿಂದ. ‘ನವಿಲುನೌಕೆ’ಯಲ್ಲಿರುವ “…..ಒಂದು ಸಂದರ್ಭದಲ್ಲಿ ಕಣ್ಮರೆಯಾಗಿದ್ದರೂ ನಿರಂತರವಾಗಿ ಉಳಿಯಬಲ್ಲ ಒಲವು ಚೆಲುವುಗಳ ಸ್ವರೂಪ….” ಎಂಬ ವಾಕ್ಯವಿದೆ. ಹೀಗೆ ಇನಾಂದಾರರ ಮುನ್ನುಡಿಗಳು ಅವರ ಕಾದಂಬರಿಗಳ ಅಂತರಂಗಕ್ಕೆ ಕನ್ನಡಿಗಳೂ ಆಗುತ್ತವೆ.

ಇನಾಂದಾರರ ಕಾದಂಬರಿಗಳಿಂದಲೇ ನೇರವಾಗಿ ವಾಕ್ಯಗಳನ್ನೊ ವಾಕ್ಯಖಂಡಗಳನ್ನೋ ಧಾರಾಳವಾಗಿ ಉಲ್ಲೇಖಿಸಿ, ಅವರ ಜೀವನದೃಷ್ಟಿ ಏನೆಂಬುದನ್ನು ಸಾಧಿಸಬಹುದಾದರೂ ಅವಕಾಶ ಸಾಲದು. ಅಭಿಪ್ರಾಯ ಸಮರ್ಥನಿಗೆ ಹೆಚ್ಚು ಬೇಡ ಒಂದೆರಡು ಉದಾಹರಣೆಗಳೂ ಸಾಕು. ‘ಬಾಡಿದ ಹೂ’ವಿನಲ್ಲಿ (ಮೋಹಿನಿ-ಭಾಗ ೩) ಬರುವ ಈ ಕೆಲವು ಮಾತುಗಳನ್ನು ಕೇಳಿ.

“ಒಬ್ಬೊಬ್ಬರ ಬದುಕಿನಲ್ಲಿಯೂ ಒಂದು ಕಾಲ ಬಂದು ಹೋಗುತ್ತದೆ. ಪ್ರಪಂಚದ ಸಕಲ ಶಕ್ತಿಗಳೂ ಸಹಕರಿಸಿ ಬಯಕೆಗಳನ್ನು ಈಡೇರಿಸುತ್ತವೆ. ರಂಗು ರಂಗಾಗಿ ಬದುಕು ಮೆರೆಯುತ್ತದೆ…. ಜೀವನದ ಚೈತ್ರ ಅದು… ಆದರೆ ಬಂದ ವಸಂತದ ಹಿಂದೆಯೇ ಬಿಸಿಲ ಬೇಗೆ, ಮಳೆಯ ಹೊಡೆತ, ಚಳಿಗಾಳಿಯ ಕೊರೆತ ಹೊಂಚು ಹಾಕಿಕೊಂಡು ಕಾಯುತ್ತಿರುತ್ತವೆ… ಚಳಿಗಾಲಕ್ಕೆ ಸೋತು ಹೋದ ಗಿಡಮರಗಳು ಮುಂಬರುವ ಮತ್ತೊಂದು ವಸಂತಕ್ಕಾಗಿ ಕಾಯಬಹುದು…”

“ಆದರೆ ಮನುಷ್ಯನ ಬದುಕಿನಲ್ಲಿಯ ವಸಂತ ಬೆಳಗುವುದು ಒಮ್ಮೆಯೆ. ಬಾಡಿದ ಬದುಕು ಮತ್ತೆ ಚಿಗುರುವುದಿಲ್ಲ… ಅರಳಿದ ಹೂವು ಬಾಡಲೇಬೇಕು. ಬಿದ್ದು ಹೋಗಲೇಬೇಕು… ಅದಕ್ಕೆ ಬೇರೆ ಗತಿ ಇಲ್ಲ. ಅರಳಿ ನಿಂತುದೇ ಅದರ ಸಫಲತೆ, ಅದೇ ಅದರ ಸೊಗಸು, ಅರಳಿ ನಿಂತಾಗ ಅದು ಮೈಮರೆಯಿಸುತ್ತದೆ. ತಾನೂ ಮೈಮರೆತಿರುತ್ತದೆ…”

ಇದು ಕಾದಂಬರಿಯ ಮೂವತ್ತೆಂಟನೆಯ ಪರಿಚ್ಚೇದ. ಕಥಾ ನಾಯಿಕೆ ಮೋಹಿನಿಯ ಪ್ರಸ್ತಾವ ಇರುವುದು ಅಧ್ಯಾಯದ ಕೊನೆಯಲ್ಲಾದರೂ, ಇಡಿಯ ಪ್ರಕರಣವೇ ಅವಳ ಅವ್ಯವಸ್ಥಿತ ಜೀವನದ ವ್ಯಾಖ್ಯಾನ. ಇನಾಂದದಾರರು ಬದುಕನ್ನು ಹೇಗೆ ಕಂಡಿದ್ದಾರೆ, ತಮ್ಮ ಕಾದಂಬರಿಗಳಲ್ಲಿ ಕಂಡರಿಸಿದ್ದಾರೆ ಎಂಬುದಕ್ಕೆ ಇನ್ನೊಂದು ನಿದರ್ಶನವನ್ನು ಅವರ ‘ಊರ್ವಶಿ’ಯಿಂದ ಕೊಡಬಹುದು : ನಾರಾಯಣ ರಾಯರು ಸುಶಿಕ್ಷಿತರು, ಸುಂಸಕೃತರು. ಊರ್ವಶಿ ಅವರ ಔರಸಪುತ್ರಿಯಲ್ಲವಾದರೂ ಅದಕ್ಕಿಂತ ಕಡಮೆಯಲ್ಲ ಎಂಬಂತೆ ಅವಳನ್ನು ಸಾಕಿ-ಬೆಳೆಸಿ-ಮದುವೆಯಾಡಿ ಕೊಡುತ್ತಾರೆ. ಮುಂದೊಂದು ದಿನ ಊರ್ವಶಿ ಯಾರೆಂಬ ರಹಸ್ಯ ಸ್ಫೋಟವಾಗುತ್ತದೆ; ರಾಯರ ಹೃದಯ ಮಂಥನವಾಗುತ್ತದೆ. ಆ ಸನ್ನಿವೇಶವನ್ನು ಇನಾಂದಾರರ ಲೇಖನಿ ಹೀಗೆ ಚಿತ್ರಿಸುತ್ತದೆ, ಬದುಕಿನ ಒಗಟನ್ನು ಬಿಡಿಸುತ್ತದೆ :

“…ಒಳ್ಳೆಯದು ಯಾವುದು ಎನ್ನುವುದೇ ಒಂದು ಬಿಡಿಸಲಾಗದ ಪ್ರಶ್ನೆಯಾಗಿ ಕಾಣತೊಡಗಿತು. ನಾರಾಯಣ ರಾಯರಿಗೆ. ಒಳ್ಳೇಯದು ಎಂದು ಬಗೆದದ್ದು, ನಂಬಿದ್ದು, ಒಳ್ಳೆಯದಾಗದೆಯೂ ಇರಬಹುದು ಎನ್ನಬೇಕಾಯಿತು…. ಹಾಗಾದರೆ ಯಾವುದು ಒಳ್ಳೆಯದು? ಅನುಕಂಪ ಒಳ್ಳೆಯದಲ್ಲವೇ? ಕ್ಷೇಮದ ಬಯಕೆ ಒಳ್ಳೆಯದಲ್ಲವೇ? ಇನ್ನೊಬ್ಬರ ಬಗೆಯಲ್ಲಿ ಕಲ್ಯಾಣ ಚಿಂತನೆ ಒಳ್ಳೆಯದಲ್ಲವೇ? ದಾರಿಗೆಡಬಹುದಾಗಿದ್ದ ಒಂದು ಜೀವಕ್ಕೆ, ಒಂದು ಸಂದರ್ಭದಲ್ಲಿ ಬದುಕಿಗೆಯೇ ಎರವಾಗಬಹುದಾಗಿದ್ದ ಒಂದು ಜೀವಕ್ಕೆ ಸುಗಮವಾದ ಒಂದು ದಾರಿಯನ್ನು ಕಲ್ಪಿಸಿಕೊಟ್ಟು ಆ ಬಾಳು ಸುಖವಾಗಿ ಬೆಳೆಯಲಿ ಎನ್ನುವ ಬಯಕೆ ಒಳ್ಳೆಯದಲ್ಲವೇ?….”

ಜೀವನದಲ್ಲಿ ಎಲ್ಲವೂ ಸುಗಮವೂ ಸುಖಕರವೂ ಆಗಿದೆ ಎಂದು ಮನುಷ್ಯ ಭ್ರಮಿಸಿರುವಾಗಲೇ ಲೋಕ ಆತನನ್ನು ಹಿಡಿದು ನಿಲ್ಲಿಸಿ ಯಕ್ಷ ಪ್ರಶ್ನೆಗಳನ್ನು ಕೇಳುತ್ತದೆ. ಉತ್ತರ ತಿಳಿಯದ ಮನುಷ್ಯ ಅಸಹಾಯನಾಗುತ್ತಾನೆ, ದಿಙ್ಮೂಢನಾಗುತ್ತಾನೆ; ತನ್ನ ಸ್ಥಿತಿಗೆ ಕಾರ್ಯ-ಕಾರಣ ಸಂಬಂಧಗಳನ್ನು ಹುಡುಕಲು ಯತ್ನಿಸಿ, ಹತಾಶನಾಗಿ ಕೈ ಚೆಲ್ಲುತ್ತಾನೆ. ‘ಶಾಪ’ದ ಕೊನೆಯಲ್ಲಿ ಮಾಧವನಿಗೆ ಆಗುವುದಾದರೂ ಅದೇ. ತನ್ನ ಪ್ರೀತಿಪಾತ್ರಳಾದ ಸರೋಜಿನಿ ವೇಶ್ಯಾಪುತ್ರಿಯೆಂದು ತಿಳಿದಾಗ ಮೊದಲ ಸಿಡಿಲು; ಆಕೆ ಮತ್ತಾರೂ ಅಲ್ಲ ತನ್ನ ಅಪ್ಪನ ಪಾಪದ ಬೀಜ ಎಂದು ಗೊತ್ತಾದಾಗ ಮತ್ತೊಂದು ಸಿಡಿಲು. ಅದು ಅವನ ತಲೆಯೆ ಮೇಲೆಯೇ ಅಪ್ಪಳಿಸುತ್ತದೆ. ಅಂತಹ ಸನ್ನಿವೇಶಗಳನ್ನು ಇನಾಂದಾರರ ಲೇಖನಿ ಸವಿವರವಾಗಿ, ಮರ್ಮ ಸ್ಪರ್ಶಿಯಾಗಿ ಚಿತ್ರಿಸಬಲ್ಲುದು. ಅಲ್ಲಿ ಅವರ ಕಥನ ಕೌಶಲದೊಂದಿಗೆ ಲೋಕಜೀವನ ದೃಷ್ಟಿ ಏನೆಂಬುದೂ ವ್ಯಕ್ತವಾಗುತ್ತದೆ : ಬದುಕು ಒಳಿತು-ಕೆಡಕುಗಳ ಸಮ್ಮಿಶ್ರಮಫಲ: “ಒಂದು ಕೊಡದೆ ಇನ್ನೊಂದು ಸಿಕ್ಕುವುದಿಲ್ಲ, ಈ ಪ್ರಪಂಚದಲ್ಲಿ”.

‘ಮಂಜು ಮುಸುಕಿದ ದಾರಿ’ಯಲ್ಲಿ ಬರುವ ಶ್ರೀಧರ ಗೋಪಾಲರ ಪಾಡಾದರೂ ಅದೇ ಬಗೆಯದು. ಶ್ರೀಧರ ಗೋಪಾಲನನ್ನು ಸುಖಿ ಎಂದು ತಿಳಿದುಕೊಂಡರೆ, ಅವನು ಒಂದು ಅರ್ಥದಲ್ಲಿ ಶ್ರೀಧರನಿಗಿಂತ ದುಃಖಿ. ಕೊನೆಯಲ್ಲಿ ಒಬ್ಬರನ್ನೊಬ್ಬರು ಸಂತೈಸುವಂತಹ ಸನ್ನಿವೇಶ ನಿರ್ಮಾಣವಾಗುತ್ತದೆ. ಗೋಪಾಲ ಹೇಳುತ್ತಾನೆ. :

“…ನನ್ನ ಪುಣ್ಯದ ಕತೆ ನಿನಗೇನು ಗೊತ್ತು? ಹುಟ್ಟುವ ಮಗು ಸತ್ತು ನಿನ್ನಬದುಕಿನಲ್ಲೊಂದು ಬಿರುಗಾಳಿ. ಸತ್ತು ಹುಟ್ಟಿದ ಮಗುವಿನಿಂದ ನನ್ನ ಬದುಕಿನಲ್ಲಿ ಬಿರುಗಾಳಿ. ನಮ್ಮ ಯೋಚನೆ ಎಲ್ಲಿಗೂ ನಿಲುಕುವುದಿಲ್ಲ, ಶ್ರೀಧರ ಎಲ್ಲಿಗೂ ನಿಲುಕುವುದಿಲ್ಲ. ಎಂಥ ಬಿರುಗಾಳಿ ಎದರೂ ಅದಕ್ಕೊಂದು ಕೊನೆ ಇದ್ದೇ ತೀರಬೇಕು. ಅದೇ ಒಂದು ಸಮಾಧಾನ…” ಹೀಗೆ ಶ್ರೀಧರನನ್ನು ಸಂತೈಸುವ ಗೋಪಾಲ ಮತ್ತೆ ತನ್ನಲ್ಲೇ, “… ಈ ಲೋಕ ನಡೆಯುವ ರೀತಿ ಇದು. ಯಾರು ಏನು ಮಾಡಲಿಕ್ಕಾಗುತ್ತದೆ” ಎಂದುಕೊಂಡು ಸುಮ್ಮನಾದ. “ಹೀಗಾಗಬಾರದು ಎನ್ನುವ ಅಪೇಕ್ಷೆ ಸಹಜ. ಆ ಅಪೇಕ್ಷೆಯೇ ಬಾಳಿನ” ಮೊರೆತ. ಅವರವರೇ ಅಲ್ಲದೆ ಅದನ್ನು ಯಾರು ತಡೆಯಬೇಕು…” ಎಂದು ಹೇಳಿ ಉಪ ಶಾಂತನಾಗುತ್ತಾನೆ. ಅಂತಹ ವಿವೇಕ ಕಡಮೆಯಾದಲ್ಲಿ ಜೀವ ಕುದಿಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಕವಿ ಕುವೆಂಪು ಭಕ್ತ-ಭಗವಂತ ಸಂಬಂಧದಲ್ಲಿ ವರ್ಣಿಸಿದಂತೆ, “ಸುಖದವೋಲಾಶಿಸಲ್ ದುಃಖದೋಲ್ ಮೈದೋರಿ” ಜೀವನವನ್ನು ಪೀಡಿಸಿ, ಕಾಡಿಸಿ, ಆಡಿಸುತ್ತದೆ ದೈವ!

ನನಗೆ ತೋರುವಂತೆ ಇನಾಂದಾರರು ನಿರ್ಲಿಪ್ತ ದೃಷ್ಟಿ. ಬಹುಮಟ್ಟಿಗೆ ಕಲಾಕಾರರೆಲ್ಲರಲ್ಲೂ ಸ್ಪೃಹಣೀಯವೂ ಅಪೇಕ್ಷಣೀಯವೂ ಆದ ದೃಷ್ಟಿ ಇದು. ಮಳೆಗಾಲದಲ್ಲಿ ಉಕ್ಕಿ ಸೊಕ್ಕಿ ಹರಿಯುವ ಹೊಳೆ ತೊರೆಗಳನ್ನು ದಂಡೆಯಲ್ಲಿ ನಿಂತು ನೋಡುವ ಮಕ್ಕಳು ಏನೇನೋ ವ್ಯಾಖ್ಯಾನಿಸುವುದಿಲ್ಲವೇ? ಹಾಗೆ ಈ ದೃಷ್ಟಿ. ಕಣ್ಣ ಮುಂದೆ ಅನಂತವೂ ಅಗಾಧವೂ ನಾನಾ ನಾಮರೂಪವಿಕಾರಾದಿ ಚೇಷ್ಟಿತವೂ ಆಗಿರುವ ಲೋಕಜೀವನ ಪ್ರವಾಹ. ಅದರಲ್ಲಿ ಲೇಖಕ ತಾನು ಮುಳುಗದೆ, ಮುಳುಗಿದರೂ ಕೊಚ್ಚಿಹೋಗದೆ ಅದರ ಮೊದಲು-ಕೊನೆ, ಅದರ ಆಳ-ಅಗಲ, ಅದರ ಹರಿವು-ಮುರಿವು ಇವುಗಳನ್ನೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನೋಡಿ ತಿಳಿಯುವ ಕುತೂಹಲ, ತಿಳಿದು ಹೇಳುವ ಕೌಶಲ ಆತನದು. ರಾಗ ದ್ವೇಷಾದಿ ರಂಜಿತವಾದ ರೋಚಕ ಸಾಹಿತ್ಯದ ಬಗ್ಗೆ ನಾನು ಹೇಳುವುದಿಲ್ಲ. ಅಂತಹ ಸಾಹಿತ್ಯದಲ್ಲಿ ಕಾಣುವುದು ಅಪ್ತತೆ ನಮಗೆ ಬೇಕಾದದ್ದು. ಸಾರ್ವಕಾಲಿಕ, ಮೌಲಿಕ ಸಾಹಿತ್ಯ. ಅಲ್ಲಿ ಇರಬೇಕಾದದ್ದು “ಸತ್ಸಂಗತ್ವೇ ನಿಸ್ಸಂಗತ್ವಂ” ಎಂಬಂತಹ ಆಲಿಪ್ತತೆ. ಇನಾಂದಾರರು ಇದನ್ನು ಬಹುಮಟ್ಟಿಗೆ ಸಾಧಿಸಿದ್ದಾರೆ. ಅವರು ಸರೋಜಿನಿ, ಮೋಹಿನಿ, ಊರ್ವಶಿ, ಕಾವೇರಿ, ಶಾಂತಾ, ಸುಮಿತ್ರೆಯರ ಹಾಗೆಯೇ ಮಾಧವ, ವಸಂತ, ಆನಂದ, ಶ್ರೀಧರ, ಗೋಪಾಲ, ರಾಜು ಇವರೆಲ್ಲರ ಎದೆಯ ತುಡಿತವನ್ನೂ ಕೇಳುತ್ತಾರೆ, ಅವರ ನಡೆ ಜಾಡನ್ನು ಗುರುತಿಸುತ್ತಾರೆ. ಅವರ ಜತೆಗೂಡಿ ನಡೆದು ಅವರು ಬಿದ್ದಾಗ ಕೈಚಾಚಿ, ಎದ್ದಾಗ ಬೆನ್ನು ತಟ್ಟುತ್ತಾರೆ. ಆದರೂ ತಾನು ತಾನಾಗಿಯೇ ದೂರ ನಿಲ್ಲುತ್ತಾರೆ. ವಿಮರ್ಶನವಿದಗ್ಧರು ಈ ನಿಲುಮೆಯನ್ನು ಮೆಚ್ಚಕೊಂಡೂ ಇದ್ದಾರೆ! ಇನಾಂದಾರರ ಜೀವನದೃಷ್ಟಿಯಲ್ಲಿ ಅವರ ಸಾಹಿತ್ಯ ದೃಷ್ಟಿಯೂ ಸಮ್ಮಿಲನಗೊಂಡಿದೆ. ಈವೊತ್ತು ಪ್ರಾಚೀನ-ಅರ್ವಾಚೀನ, ಪಾಶ್ಚಾತ್ಯ-ಪೌರಸ್ತ್ಯ, ನವ್ಯ-ನವ್ಯೇತರ ಎಂಬ ಗುಲ್ಲು ಗದ್ದಲಗಳೂ ಸಾಹಿತ್ಯದ ರೂಪ, ಜೀವ, ಮಾರ್ಗ, ಉದ್ದೇಶಗಳ ಬಗೆಗೆ ವ್ಯಾಖ್ಯಾನ ವಿಮರ್ಶೆಗಳೂ ನಾನಾ ಮುಖವಾಗಿ ನಡೆಯುತ್ತಿವೆ. ಇವೆಲ್ಲವುಗಳನ್ನೂ ಸಹನೆಯಿಂದ ಕೇಳಿ, ಕುತೂಹಲದಿಂದ ನೋಡಿ, ಪ್ರಿಯವಾದುದಕ್ಕೆ ‘ಉಘೇ’ ಎಂದು ಹಾರಾಡದೆ, ಅಪ್ರಿಯವಾದುದಕ್ಕೆ ‘ಹಾಯ್! ಧಿಕ್’ ಎಂದು ಕೊರಚಾಡದೆ, ತೋಳು ತೊಡೆ ತಟ್ಟಿ ಯಾರನ್ನೂ ಕಾಳಗಕ್ಕೆ ಕರೆಯದೆ ತನಗೆ ಸರಿದೋರಿದ ದಾರಿಯಲಲಿ ಸ್ವಸ್ಥ ಮನಸ್ಸಿನಿಂದ ನಡೆಯುತ್ತಿರುವ ಕೆಲವರಲ್ಲಿ ಇನಾಂದಾರರೂ ಒಬ್ಬರು ಎಂಬುದು ನನ್ನ ನಂಬಿಕೆ; ಅದಕ್ಕಾಗಿ ಅವರಲ್ಲಿ ನನಗೆ ಮೆಚ್ಚಿಕೆ.

ಇನಾಂದಾರರು ನಿರ್ಲಿಪ್ತಭಾವ. ಸ್ವಸ್ಥ ಮನಸ್ಸು ಎಂದು ಹೇಳಿದೆ. ಹಾಗೆಯೇ ಅವರದು ಶುಚೀದೃಷ್ಟಿ. ನಮ್ಮಲ್ಲಿ ರುಚಿಯಾದ ಸಾಹಿತ್ಯ ವಿಪುಲವಾಗಿದೆ. ಆದರೆ ಶುಚಿಯಾದದ್ದು ಅದೇ ಪ್ರಮಾಣದಲ್ಲಿ ಇಲ್ಲ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗಿದೆ. ಡಾ. ಕಾರಂತರು ಹಿಂದೊಮ್ಮೆ ಹೇಳಿದಂತೆ “….ಕದ್ದು, ಮರೆಯಲ್ಲಿ ತಮ್ಮವರಿಂದ ಅಡಗಿ ಕುಳಿತು ಒದುವ ಸಾಹಿತ್ಯ ರುಚಿಯಾಗಿರಬಹುದು. ಅದಂತೂ ಶುಚಿಯಾದ ಸಾಹಿತ್ಯದ ಲಕ್ಷಣವಲ್ಲ…”. ಹಗಲು ಬೆಳಕಿನಲ್ಲಿ, ಹತ್ತು ಜನರ ಮುಂದೆ, ಓದಬಹುದಾದದ್ದೇ ಹೆಂಗಸರೂ ಮ್ಕಕಳೂ ನಿಸ್ಸಂಕೋಚವಾಗಿ ಕೇಳಬಹುದಾದುದ್ದೇ ಶುಚಿಯಾದ ಸಾಹಿತ್ಯ. ಇನಾಂದದಾರರ ಕಾದಂಬರಿಗಳಲ್ಲಿ ವ್ಯಭಿಚಾರ-ಬಲಾತ್ಕಾರಗಳ, ಪ್ರೇಮ-ಪ್ರಣಯಗಳ ಸನ್ನಿವೇಶಗಳು ಬೇಕಾದಷ್ಟಿವೆ. ಸ್ತ್ರೀ ರೂಪವರ್ಣನೆಯೂ ಧಾರಾಳವಾಗಿದೆ. ಆದರೆ, ನಮ್ಮ ರತ್ನಾಕರ ವರ್ಣಿ ಹೇಳಿದಂತೆ, ಶೃಂಗಾರವೆಂದೊಡನೆ ‘ಉಟ್ಟ ಬಟ್ಟೆಯನುಸುಲಿದು ಕೊಳ್ಳುವವರ’ ಪಂಕ್ತಿ ಪರಂಪರೆ ಇನಾಂದಾರರದಲ್ಲ. ಶೃಂಗಾರದ ಎಂತಹ ಉತ್ಕಟ ಸನ್ನವೇಶಗಳಲ್ಲೂ ಇನಾಂದಾರರ ಲೇಖನಿ ಮರ್ಯಾದೆಯನ್ನು ಅತಿಕ್ರಮಿಸಿಲ್ಲ ಎಂಬುದು ಅತ್ಯಂತ ಶ್ಲಾಘನೀಯ. ನಲವತ್ತೈದು ವರ್ಷಗಳ ಹಿಂದೆ, ಅವರ ‘ಮೂರಾಬಟ್ಟೆ’ಗೆ ಮರುನುಡಿ ಬರೆಯುತ್ತಾ ಪಿ.ವಿ. ಜೋಶಿಯವರು, “…ಗಾಳಿಯಲ್ಲಿ ಬರುವ ಮಲ್ಲಿಗೆಯ ಪರಿಮಳಕ್ಕಿದ್ದ ಗುಣವು ಮುಂಗೈಗೆ ಬಳಿದ ಅತ್ತರಿನ ಸುಗಂಧಕ್ಕೆ ಇರಲಾರದು” ಎಂದು ಹೇಳಿದ್ದರು. ಅದೇ ಜೋಶಿಯವರು ಈಗ ಹತ್ತು ವರ್ಷಗಳ ಹಿಂದಿನ “ನವಿಲು ನೌಕೆ”ಗೆ ಬರೆದ ‘ಹಿನ್ನುಡಿ’ಯಲ್ಲಿ, ಪ್ರಚಲಿಯ ಸಾಹಿತ್ಯದ ರೀತಿ-ನೀತಿಗಳನ್ನು ವಿವೇಚಿಸುತ್ತಾ, “…ಎಲ್ಲಿಯೋ ಹೊಗೆಯಾಡುತ್ತಿರುವ ಬೆಂಕಿಯನ್ನು ಎಲ್ಲ ಕಡೆಗೂ ಹತ್ತಿಸುವುದು ಉಪಾಯವಲ್ಲ…” ಎಂದು ಹೇಳಿ, “ಶ್ರದ್ಧೆ, ತಾಳ್ಮೆ,  ಪ್ರೀತಿ, ಸಹೃದಯತೆ, ಸಜ್ಜನಿಕೆಗಳನ್ನು ಚಿತ್ರಿಸುವ ಸಾಹಿತ್ಯದ ಘನತೆಯು ರುಗ್ಣ ಸ್ಥಿತಿಗಳ ಬಡಬಡಿಕೆಗಳಿಗಾಗಲಿ, ಆಕ್ರೋಶಗಳಿಗಾಗಲಿ ಬರಬಾರದು…” ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯದ ರಚನೆಯಲ್ಲಿ ಇದು ಇನಾಂದಾರರ ಮನೋಧರ್ಮ. ಅವರದು ನಿರೋಗವಾದ ದೃಷ್ಟಿ. ಅಷ್ಟಿದ್ದೂ ಅವರು ಹೇಳಬೇಕಾದುದನ್ನೆಲ್ಲ ಹೇಳುತ್ತಾರೆ. ಮನುಷ್ಯ ಜೀವನ ಮಿತಿ, ಮೌಲ್ಯಗಳ ಸೋಲು, ವ್ಯವಸ್ಥೆಗಳ ನಿರ್ಭಂಧ ಮುಂತಾದುವನ್ನೆಲ್ಲ ಇನಾಂದಾರರು ಚಿತ್ರಿಸಿದ್ದಾರೆ. ಬಹುಮಟ್ಟಿಗೆ ಎಲ್ಲ ಕಾದಂಬರಿಗಳಲ್ಲೂ, ಉದಾ. ಮೂರಾಬಟ್ಟೆ, ಶಾಪ, ಮೋಹಿನಿ, ಊರ್ವಶಿ, ಮಂಜು ಮುಸುಕಿದ ದಾರಿಗಳಲ್ಲಿ ಗುಣದೋಷ ಸಮ್ಮಿಶ್ರಿತವಾದ ವ್ಯಕ್ತಿಗಳ ಚಿತ್ರಣವಿದೆ. ಇದು ‘ಮಾಹಾಭಾರತ’ದ ಶೀಲ ಚಿತ್ರಣಗಳನ್ನು ನಮ್ಮ ನೆನಪಿಗೆ ತರುತ್ತವೆ. ಇನಾಂದಾರರು ಯಾರನ್ನೂ ‘ಹಾಲಲ್ಲಿ ಅದ್ದಿ ತೆಗೆದಿಲ್ಲ’. ಪಿ.ವಿ. ಜೋಶಿಯವರು ಹೇಳಿದಂತೆ ಆಕ್ರೋಶ, ಆವೇಶಗಳೂ ಇಲ್ಲ.

ಇನಾಂದಾರರಲ್ಲಿ ಗಾಲ್ಸ್‌ವರ್ದಿ, ಸಾಮರ್‌ಸೆಟ್‌ಮಾಮ್‌ಮುಂತಾದ ವಿದೇಶೀಯರ, ವಿ.ಸ. ಖಾಂಡೇಕರ ಮೊಲಾದ ದೇಶೀಯರ ಪ್ರಭಾವ ಮುದ್ರೆಯನ್ನು ಕಂಡವರಿದ್ದಾರೆ. ಇರಬಹುದು, ಇಲ್ಲದೆಯೂ ಇರಬಹುದು. ಇದ್ದರೂ ಅದು ನೀರಲ್ಲಿರುವ ಎಣ್ಣೆಯ ಹನಿಗಳಂತಲ್ಲ, ಹಾಲಲ್ಲಿ ಸೇರಿರುವ ಸಕ್ಕರೆಯ ಹರಳುಗಳಂತೆ. ಇನಾಂದಾರರ ಕೃತಿಗಳಲ್ಲಿ ಅನ್ಯಪ್ರಭಾವವನ್ನು ಗುರುತಿಸಿದ ಪ್ರೊ. ಕುರ್ತಕೋಟಿಯವರು, “ನೀತಿಯ ವಿಷಯವಾಗಿ ತಟಸ್ಥ ಮನೋವ್ಯಕ್ತಿ, ಜೀವನದ ಬಗ್ಗೆ ಒಂದು ಬಗೆಯ ಉದಾಸೀನತೆ ಇವರ ಕೃತಿಗಳ ಮುಖ್ಯಲಕ್ಷಣವಾಗಿವೆ. ಈ ಗುಣಗಳು ಕಾದಂಬರಿಯನ್ನು ಭಾವನಾವಶಕತೆಯ ಅಪಾಯದಿಂದ ತಪ್ಪಿಸುತ್ತವೆ” ಎಂದು ಮೆಚ್ಚು ಮಾತಾಡಿ. “ಆದರೆ ಕಲ್ಪನೆಯ ಧೀರ ಸಂಚಾರ ಮಾತ್ರ ಇಲ್ಲಿ ಇಲ್ಲವಾಗಿದೆ…” ಎಂದು ಮೊದಲಾಗಿ ‘ಷರಾ’ ಹಾಕಿದ್ದಾರೆ. ಅವರು ತಮ್ಮ ಅಭಿಪ್ರಾಯವನ್ನು ಉದಾಹರಣೆಗಳಿಂದ ಸಮರ್ಥಿಸುತ್ತಿದ್ದರೆ ಅದು ಉಚಿತವೆನಿಸುತ್ತಿತ್ತು. ನನ್ನಂತಹ ವಾಚಕ ಸಾಮಾನ್ಯ ‘ಈ ಪರಿಯ ಸೊಬಗು’, ‘ನವಿಲುನೌಕೆ’, ‘ತ್ರಿಶಂಕು’ ಮುಂತಾದ ಕಾದಂಬರಿಗಳಲ್ಲಿ ಕಲ್ಪನೆಯಧೀರ ಸಂಚಾರವನ್ನೂ ಕಾಣುತ್ತಾನೆ. ಅಲ್ಲಿಯ ಕಥೆ-ಕಥನಗಳು ಭಾವಗೀತದಂತೆ ಹೃದ್ಯವಾಗಿವೆ. ಇನಾಂದಾರರ ಪರವಾದ ‘ವಕಾಲತ್ತು’ ನನ್ನ ಉದ್ದೇಶವಲ್ಲ. ಆದರೆ ಮೇಲ್ನೋಟದ ತೀರ್ಪು (Passing remarks)ಗಳಿಂದ ಕೃತಿಗೆ-ಕೃತಿಕಾರನಿಗೆ ಅನ್ಯಾಯವಾಗಬಾರದೆಂಬುದೇ ನನ್ನ ಆಶಯ.

ಇನಾಂದಾರರ ಇನ್ನೊಂದು ದೃಷ್ಟಿಯನ್ನು ನಾನು ವಿಶೇಷತಃ ಮೆಚ್ಚಿದ್ದೇನೆ. ಅದೆಂದರೆ ಅವರ ನಿರಹಂಕಾರಿಕೆ. ತಾನೊಬ್ಬ ಸಾಹಿತ್ಯದ ಸಂರಾಜನೆಂದೋ ಪಾಳೆಯಗಾರನೆಂದೋ ಹೇಳುವ, ಹೇಳಿಸಿಕೊಳ್ಳುವ ಚಪಲ ಅವರಲ್ಲಿಲ್ಲ. ‘ಊರ್ವಶಿ’ ಮುನ್ನುಡಿಯಲ್ಲಿ ಈ ಮಾತುಗಳಿವೆ : “…ನಾನು ಸಾಹಿತಿಯಲ್ಲ, ವಿಶ್ವವಿಖ್ಯಾತಿಯನ್ನು ಪಡೆದ ಕೆಲವು ಕಾದಂಬರಿಗಳನ್ನಾದರೂ ಓದಿದವನಾದ್ದರಿಂದ ನಾನೊಬ್ಬ ಕಾದಂಬರಿಕಾರನೆಂದು ಹೇಳಿಕೊಳ್ಳುವ ಧೈರ್ಯ ನನಗಿಲ್ಲ….ಸುಮ್ಮನೆ ಸಂತೋಷಕ್ಕೆಂದು… ಮನಸ್ಸು ಬಂದಾಗ ಆಗೀಗ ಬರೆಯುವವ ನಾನು…” ಈ ಮಾತುಗಳನ್ನು ಓದುವಾಗ ನನಗೆ “ಹೆಚ್ಚು ಬರೆದವನಲ್ಲ, ಮಚ್ಚರಿಸಿ ಬರೆದಿಲ್ಲ…”ವೆಂಬ ಸೇಡಿಯಾಪು ಕೃಷ್ಣಭಟ್ಟರ ನೆನಪಾಗುತ್ತದೆ. ಹಿಮ್ಮೆಟ್ಟಿ ಗೆಲ್ಲುವ ರೀತಿ ಇದು!

ಇಲ್ಲಿಗೆ ನನ್ನೀ ಪ್ರಗಂವನ್ನು ಮುಗಿಸುತ್ತಿದ್ದೇನೆ. ಹೇಳಬೇಕಾದದ್ದನ್ನೆಲ್ಲ ಹೇಳಿದ್ದೇನೆ ಎಂದಾಗಲೀ, ಹೇಳಿದಷ್ಟನ್ನೂ ಓರಣವಾಗಿ ಪೋಣಿಸಿದ್ದೇನೆ ಎಂದಾಗಲೀ ನಾನು ತಿಳಿದಿಲ್ಲ. ನವ್ಯವಿಮರ್ಶೆಯಲ್ಲಿ ನನ್ನದು ಸಾಕಲ್ಯ ದೃಷ್ಟಿ. ಯಾವುದೋ ಪಾಶ್ಚಾತ್ಯ ಕಾದಂಬರೀ ರಮಣಿಯ ಕಣ್ಣ-ಕಿವಿ-ಮೂಗುಗಳನ್ನು ಮುಟ್ಟಿ ಮೆಚ್ಚಿ, ಇನಾಂದಾರರಲ್ಲಿ ಹಾಗಿಲ್ಲ ಹೀಗಿಲ್ಲರೆಂಬ ತೋಲನ ದೃಷ್ಟಿಯೂ ನನ್ನದಲ್ಲ. ತಮ್ಮ ಪಾಡಿನಲ್ಲಿ ಇನಾಂದಾರರ ಕಾದಂಬರಿಗಳು ಎಷ್ಟು ಚೆಲುವಾಗಿವೆ, ತಾವು ಹಿಡಿದ ಜಾಡಿನಲ್ಲಿ ಅವು ಹೇಗೆ ನಡೆದಿವೆ, ಅಲ್ಲಿ ಕಾದಂಬರೀಕಾರನ ದೃಷ್ಟಿ ಹೇಗೆ ಹರಿದಾಡಿದೆ ಎಂಬುದನ್ನು ಸ್ಥೂಲವಾಗಿ, ಆದರೆ ಪ್ರೀತಿಯಿಂದ ನಿರ್ದೇಶಿಸಲು ಪ್ರಯತ್ನಿಸಿದ್ದೇನೆ.

 


[1] ೧೯೫೦ರ ದಶಕ ಎಂಬುದು ತಾತ್ಪರ್ಯ. ಇದು ೧೯೮೧ರಲ್ಲಿ ಬಂದ ಉಪನ್ಯಾಸ.