ಕರ್ನಾಟಕದ ಒಬ್ಬ ದಾಸ ವರೇಣ್ಯ ಭಾರತದ ಒಬ್ಬ ಕವಿಕುಲ ಲಲಾಮನನ್ನು ಕುರಿತಾದ ಈ ಸಂಸ್ತವನಗಳು ಅವರಿಬ್ಬರ ನಾನ್ನೂರು ಮತ್ತು ನೂರನೆಯ ಹುಟ್ಟು ಹಬ್ಬಗಳ ನೆನಪಿನಲ್ಲಿ ಹಚ್ಚಿರಿಸಿದ ದೀಪಗಳಾದರೆ ಜಗಜ್ಯೋತಿ ಬಸವಣ್ಣನ ಕುರಿತಾದ ಕವಿತೆ ಸಂದರ್ಭ ಪ್ರೇರಿತವಲ್ಲ. ಸಹಜ ಸ್ಪೂರ್ತ ಎನ್ನಬಹುದಾದದ್ದು: ಆ ಎರಡಕ್ಕೂ ಸಮತೂಕವಾಗಿಯೇ ಇರತಕ್ಕದ್ದು. ಅವರ ಕ್ರಾಂತಿಕಾರಕ ಜೀವನ ವಿಧಾನ, ಅಂತರಂಗ ಮತ್ತು ಬಹಿರಂಗ ಶುಚಿತ್ವ, ಸಕಲ ಜೀವಾವಳಿಗೂ ಲೇಸನ್ನೇ ಬಯಸಿದ ಉದಾರತೆ, ತಮ್ಮ ಅಸಂಖ್ಯ ವಚನ ಜ್ಯೋತಿಗಳಿಂದ ಸಹಮಾನವರ ಮನದ ಕತ್ತಲೆಯನ್ನು ಕಳೆದು ತೊಳೆದ ಶುದ್ದೀಕರಣ ಕ್ರಿಯೆ, ಹಾರುವ ಮೊದಲಲ್ಲ, ಅಂತ್ಯಜ ಕಡೆಯಲ್ಲ, ಪರಮಶಿವನ ಕೃಪಾಪಾತ್ರರೇ ನಿಜವಾದ ಕುಲಜರು ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿ, ಸಾಧಿಸಿ ಸ್ಥಾಪಿಸಿದ ಭೂಮವ್ಯಕ್ತಿತ್ವ ಇವುಗಳ ಸಮ್ಯಗ್ದರ್ಶನವನ್ನು ‘ಬಸವೇಶ್ವರರು’ ಎಂಬ ಕವಿತೆಯ ಎಂಟು ಪದ್ಯಗಳಲ್ಲಿ ಸಮರ್ಥವಾಗಿ ಪಡಿಮೂಡಿಸಿದ್ದಾರೆ.

ಮಡುಗಟ್ಟಿ ನಾರಿದ್ದ ಸಂಪ್ರದಾಯಕೆ ನಾಲೆ
ಬಿಡಿಸಿ, ಹೊಸ ಹಾದಿಗಳ ರಚಿಸಿದಾತ,
ನಾಡ ಹಿರಿಬದುಕಿಗಂಟಿದ್ದ ಕಿಲುಬನ್ನು
ಉಜ್ಜುಜ್ಜಿ ಮತ್ತೊಮ್ಮೆ ಹೊಳೆಸಿದಾತ

ಹೀಗೆ ಬಸವಣ್ಣನ ಹಿರಿತನವನ್ನು ಎತ್ತಿ ಹೇಳಿ,

ಸೋಗು ಡಂಭಾಚಾರ ತೋರಿಕೆಗೆ ಧಿಕ್ಕಾರ,
ತೆರೆದ ಪುಸ್ತಕದಂತೆ ಮುಗ್ಧ ಮನಸು
ಮಾತು ಮುತ್ತಿನಹಾರ, ಕೊಂಕಿರದೆ ಗುರಿನೇರ
…………………………………

ಎಂದು ಅಣ್ಣನ ಒಳಗನ್ನು ತೆರೆದು ತೋರಿ,

ಹೊರಗಿನಂತೆಯೆ ಇರಲಿ ಒಳಮನೆಯ ಪರಿಶುದ್ಧಿ,
ಪ್ರತಿ ಚಣವು ಕಸ ಹೊಡೆವ ಬುದ್ಧಿಯಿರಲಿ,
ದೇಹ ದೇವರ ನೆಲಸು, ಅಂತರಂಗವೆ ಹಾಸು
ಸುತ್ತ ತಿಳಿವಿನ ಗಂಧ ಸೂಸುತಿರಲಿ

ಎಂಬುದಾಗಿ ‘ಕಾಯಕವೇ ಕೈಲಾಸ’, ‘ದೇಹವೇ ದೇವಾಲಯ’ವೆಂಬ ಬಸವಣ್ಣನ ಅಮೃತ ಸಂದೇಶವನ್ನು ಮತ್ತೊಮ್ಮೆ ಸಾರವತ್ತಾಗಿ ಸಂಗ್ರಹಿಸಿ ಕವಿತೆಯನ್ನು ಉಪಸಂಹರಿಸಿದ್ದಾರೆ.

()

ಈಗ ‘ನವೋದಯ’ವೆಂದು ಸ್ವೀಕೃತವಾದ ಕಾಲಖಂಡದ ಕನ್ನಡ ನಾಡಿಗೆ ಬರೋಣ. ಈಯೊಂದು ಕಾಲಾವಧಿಯಲ್ಲಿ ಎಂತೆಂತಹ ಕುಲರಸಿಕರು ಈ ನಾಡಲ್ಲಿ ಇದ್ದರು, ತಮ್ಮ ಹೆಜ್ಜೆ ಗುರುತನ್ನು ಉಳಿಸಿ ಮರೆಯಾದರು ಎಂಬುದನ್ನು ಭಾವಿಸಿದಾಗ ನಿಜವಾಗಿಯೂ ಕನ್ನಡಿಗರ ಹೆಮ್ಮೆಯ ನೆತ್ತಿ ಮುಗಿಲನ್ನು ಮುಟ್ಟಬೇಕು. ಅಂತಹ ಹಲವರ ಕೃತಿ ಆಕೃತಿಗಳನ್ನು ನಿಸಾರ್ ಅಹಮ್ಮದರು ಕಣ್ಣಾರೆ ಕಂಡವರು, ಮನದೊಳಗೆ ತುಂಬಿಕೊಂಡವರು. ಅಂತಹವರ ಬಗೆಗೆ ನಿಸಾರ್ ಅಹಮ್ಮದರು ತಮ್ಮ ಸರಸ ಲೇಖನಿಯಿಂದ ರಚಿಸಿರುವ ವರ್ಣಚಿತ್ರಗಳಲ್ಲಿ ಕೆಲವನ್ನು ಸಹೃದಯರು ಸಮೀಕ್ಷಿಸಬಹುದು :

ಭಾರತದ ಭೂಶಿರ ಕನ್ಯಾಕುಮಾರಿಯಲ್ಲಿ ನಿಂತ ಪ್ರೇಕ್ಷಣಕುತೂಹಲಿಗೆ ಪೂರ್ವದಿಗಂತದಲ್ಲಿ ಪೂರ್ಣಿಮೆಯ ಚಂದ್ರೋದಯವನ್ನೂ ಪಶ್ಚಿಮಾಕಾಶದಲ್ಲಿ ಸೂರ್ಯನ ಅಸ್ತಮಾನವನ್ನೂ ಏಕಕಾಲಕ್ಕೆ ದರ್ಶಿಸಿ ಪುಲಕಿತನಾಗುವ ಅವಕಾಶ ಪ್ರಾಪ್ತಿಯಾಗುವುದುಂಟು. ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಅಥವಾ ಮುದ್ದಣ ಅಂತಹ ಭಾಗ್ಯಶಾಲಿ – ಹತ್ತೊಂಬತ್ತನೆಯ ಶತಕದ ಅಂತ್ಯ ಮತ್ತು ಇಪ್ಪತ್ತನೆಯ ಶತಮಾನದ ಆದಿ ಕನ್ನಡ ಕಾವ್ಯಲೋಕದಲ್ಲಿ ಕನ್ಯಾಕುಮಾರಿ ಸದೃಶ್ಯವಾದ ಒಂದು ವಿಶಿಷ್ಟ ಘಟ್ಟ. ಹಳಗನ್ನಡಕ್ಕೆ ಭರತ ವಾಕ್ಯವನ್ನು ಆಡುವ, ಹೊಸಗನ್ನಡ ನಾಂದೀ ಪದ್ಯವನ್ನು ಹಾಡುವ ಅವಕಾಶ ಮುದ್ದಣನಿಗೆ ಲಭಿಸಿತು. ಹಾಗಾಗಿಯೇ ಅವನು ‘ಕನ್ನಡ ನವೋದಯದ ಮುಂಗೋಳಿ’ ಎಂದು ಕರೆಯಿಸಿಕೊಂಡಿದ್ದು. ಮುದ್ದಣ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಜನಿಸಿದವನಾದ್ದರಿಂದ ಷಟ್ಪದಿಯಲ್ಲಿ ಕಾವ್ಯ ಬರೆದು ಆ ಶತಮಾನಕ್ಕೆ ಗೌರವವನ್ನು ಸಲ್ಲಿಸಿದ; ಇಪ್ಪತ್ತನೆಯ ಶತಮಾನವನ್ನು ಕಂಡವನಾದ್ದರಿಂದ ಶ್ರೀ ರಾಮಾಶ್ವಮೇಧವನ್ನು ಗದ್ಯದಲ್ಲಿ ರಚಿಸಿ, ನವೋದಯದ ಹರಿಕಾರನೆನಿಸಿದ. ನಿಸಾರ್ ಅಹಮ್ಮದರು ‘ನವೋದಯ’ವೆಂಬ ಶೀರ್ಷಿಕೆಯಲ್ಲಿ, ಮುದ್ದಣನನ್ನು ಎಲ್ಲೂ ಹೆಸರಿಸದೆ ಕೆಲವಾರು ಪದಪುಂಜಗಳಿಂದಲೇ, – ಅದು ಅವನನ್ನೇ ಕುರಿತದ್ದು ಎಂಬುದು ಗೃಹಿತವಾಗುವಂತಹ – ಸುಂದರವಾದ ಕವನವನ್ನು ರಚಿಸಿದ್ದಾರೆ. ಕವಿತೆಯ ಆರಂಭವೇ ವಿನೂತನವಾಗಿದೆ, ಅರ್ಥವತ್ತಾಗಿದೆ:-

ಕೊಕ್ಕೊಕ್ಕೋ ನವೋದಯ, ಹೊಸನಗಾರಿಃ
ಕದಲಿತು ಪರಂಪರೆ ಒಂದೆರಡು ಡಿಗ್ರಿ

ಆ ನವೋದಯದ ಹಿಂದಿನ ಅಂಧಂಮಸ್ಸು, – ‘The darkest how is the night is nearest to the dawn’ ಎನ್ನುತ್ತಾರಲ್ಲ ಅಂತಹ ಕಡುಗತ್ತಲೆ – ಹೇಗಿತ್ತು ಎಂಬುದನ್ನು ಕೇಳುತ್ತೀರಾ? ಅದೊಂದು ಕತ್ತಲೇ ಕತ್ತಲಾಗಿರುವ ಒಂದು ಗೊಂಡಾರಣ್ಯ ಅಥವಾ ಬೆಂಗಾಡು ನಿಸಾರ್‌ರ ಅದನ್ನು ವಿವರಿಸುತ್ತಾರೆ :

ಕಂದ ವಾರ್ಧಕ ರಗಳೆ ವೃತ್ತಗಳ ದಟ್ಟಡವಿ
ನುಗ್ಗಿ ನಡೆದರೆ ಮುಂದೆ ಶತಮಾನಗಳ ಮರುಭೂಮಿ
ಉಸುಬಿನಲ್ಲಿ ಅಲ್ಲಲ್ಲಿ ಪೊದರು……….
ಸುತ್ತ ಮರಳೇ ಮರಳು……..

ಆದರೇನು? ಅಂತಹ ಕಗ್ಗತ್ತಲೆಯ ಕಡಲನ್ನೂ ಈಸಿಕೊಂಡು ಬಂದ ಕನ್ನಡ ಸರಸ್ವತಿಯ ತೇರು ಹೊಸಗನ್ನಡದ ಸೊಗಸಿನ ತೀರವನ್ನು ಮುಟ್ಟಿ ಏರುತ್ತದೆ. ಆಗ, –

ಉದಯಾನುಭವದಲ್ಲೆ ಹೊಸನೆಲೆಯ ಚೆಲುನೋಟ,
ಸಿಹಿನೀರ ತಿಳಿಬಾವಿ, ತೆಂಗು, ಬಾಳೆಯ ತೋಟ

ಮುದ್ದಣ ಹಳಮೆಯನ್ನು ಅನಾದರಿಸಲಿಲ್ಲ. ಆದರೆ, ‘ನಿನ್ನ ಅವಧಿ ಮುಗಿಯಿತು, ಇನ್ನು ವಿರಮಿಸು’ ಎಂದು ನಯವಾಗಿ ಬದಿಗೆ ಸರಿಸಿದ; ಹೊಸತನಕ್ಕೆ ಮಣೆ ಹಾಕಿದ. ಮುದ್ದಣ ಮನೋರಮೆಯರ ಸಂವಾದ ರೂಪದಲ್ಲೇ ಶ್ರೀ ರಾಮಶ್ವಮೇಧರ ಕಥಾವಲ್ಲರಿ ಹಬ್ಬಿ ಹರಡಿದೆಯಷ್ಟೆ. ನಿಸಾರ್ಅಹಮ್ಮದ್ ತಮ್ಮ ಕವಿತೆಯಲ್ಲೂ ಆ ತಂತ್ರವನ್ನು ಅನುಸರಿಸಿದ್ದಾರೆ. ನುಡಿತಾಯ ತೇರಿನೊಂದಿಗೆ ಬಂದಿದ್ದ ಹೊಸಕಾಲದ ಹುಡುಗ (ಕವಿಯೆಂಬುದು ಅಧ್ಯಾಹಾರ) ಅಜ್ಜ ಮುದ್ದಣನಲ್ಲಿ ಕತೆ ಹೇಳುವಂತೆ ಕೇಳುವ ನೆವದಲ್ಲಿ ಅವನ ಒಳಕ್ಕೆ ಇಳಿಯುತ್ತಾನೆ, ಅದರ ಆಳ ಅಗಲಗಳನ್ನು ಅಳೆಯುತ್ತಾನೆ. ಮುದ್ದಣ್ಣನ ಕೂಗಿಗೆ ನಾಡಿನ ನಾಲ್ಕು  ಮೂಲೆಗಳಿಂದ  ಕೇಳಿದ ಮರುದನಿ, ಅವನು ಕಡಿದ ದಾರಿಯಲ್ಲಿ ಮಿಕ್ಕವರು ಮೂಡಿಸಿದ ಹೆಜ್ಜೆ ಗುರುತುಗಳನ್ನು ಗುರುತಿಸಲು ಪ್ರಯತ್ನಿಸುತ್ತಾನೆ :

ಅಜ್ಜ, ಅಜ್ಜಾ ಹೇಳು, ರಾಮಾಯಣದ ಕತೆ ಹೇಳು
ಪದ್ಯ ವಧ್ಯವೆ? ಗದ್ಯ ಹೃದ್ಯವೆ ಅಜ್ಜ?
ವ್ಯಾಕರನದಾರೋಗ್ಯಕಾರಿಯಲ್ಲದ ಬೊಜ್ಜು
ನೀಗಿಸಲು ಕಾವ್ಯದಿಂದೀ ಮಾತು ಪುಟಿಸಿದೆಯಾ?
ಕಾಲಕ್ಕೆ ತಕ್ಕಂತೆ ನಟಿಸಿದೆಯಾ?
…………………………

ಹೀಗೆ ಕೇಳುತ್ತ ಹೊಸಕಾಲದ ಹುಡುಗ ಮುದ್ದಣ್ಣನ ಪ್ರಯೋಗ ಶೀಲತೆ, ಅದರ ಪರಿಣಾಮ ಮಿಕ್ಕವರ ಪ್ರತಿಕ್ರಿಯೆ ಅಥವಾ ಅನುಸರಣೇಗಳನ್ನು ವಿಶ್ಲೇಷಿಸುತ್ತಾನೆ.

ನೀರಿಳಿಯದ ಗಂಟಲಲಿ ಕಡುಬ ತುರಿಕಿದ ಹಾಗೆ
ಅನ್ನಿಸಿತು ಬರವಣಿಗೆ ನಿನಗಾಗ, ಬಲುಬೇಗ
ನಮಗಿನ್ನು ಹೋಗಿಲ್ಲ ಹಳೆಯರೋಗ
…………………………………………..

ಎಂದು ಹೇಳುತ್ತಲೇ ಮುದ್ದಣನ ಹೊಸತನ ಇರುವುದು ಎಲ್ಲಿ, ಅದರಲ್ಲಿ ಜನ ಒಪ್ಪಿಕೊಂಡದ್ದು ಎಷ್ಟು ಎಂಬುದನ್ನು ನಿಸಾರ್ ಅಹಮ್ಮದ್ ವಿಶ್ಲೇಷಿಸುತ್ತಾರೆ :

ಹಳೆಯದನ್ನು ಸಾಕಷ್ಟು ಕಂಡದ್ದಾಯಿತು, ಉಂಡದ್ದಾಯಿತು
ಇನ್ನು ಏನಾದರೂ ಹೊಸತನ್ನು ಬಿತ್ತಿ ಬೆಳೆಯೊಣ

ಮುದ್ದಣ ಉಳುಮೆ ಮಾಡುತ್ತಿದ್ದಾಗಲೇ ಅವನನ್ನು ಹಿಂದಿಕ್ಕಿ ಕಾಲ ಹೇಗೆ ಮುರಿದಕ್ಕೆ ಹಾರಿತು, ಕನ್ನಡದಲ್ಲಿ ತಾನು ಬಿತ್ತಿ ಬೆಳೆದದ್ದನ್ನು ಉಣ್ಣುವ ಭಾಗ್ಯ ಅವನಿಗೆ ಹೇಗೆ ದಕ್ಕದೆ ಹೋಯಿತು ಎಂಬುದನ್ನು ತಿಳಿಸಿ, ಮುದ್ದಣನ ಕಾಲದ ಜೀವನ ವಿಧಾನ, ಕಾವ್ಯಕರ್ಮಗಳು ಹೇಗಿದ್ದವು, ಅವನನ್ನು ಪ್ರೇರಿಸಿದ ಶಕ್ತಿ-ಪ್ರಭಾವ, ಅವನ ಕಾವ್ಯ ಸಂಸ್ಕಾರ, ಅವನ ಸರಸದಾಂಪತ್ಯ ಅವನನ್ನು ಹಿಂಡಿಹಿಳಿದ ಅನಾರೋಗ್ಯ, ಅವನು ಮಾಡಿದ ‘ಭವತಿಭಿಕ್ಷಾಂದೇಹಿ’ ಎಂಬ ಮಂತ್ರ ಜಪ, ಆದರೂ ಅವನ ತುಟಿಯಂಚಿನಿಂದ ಮಾಸದ ಮುಗುಳ್ನಗು ಇವುಗಳನ್ನು ಕವಿತೆಯ ಪಂಕ್ತಿಗಳು ಅತಿ ಮಾರ್ಮಿಕವಾಗಿ ನಿರೂಪಿಸುತ್ತವೆ. ಕವಿತೆಯ ಸಮಾಪನ ಹೀಗಿದೆ :

ನೀನಿಲ್ಲವೀಗ ದೇಹವ ಹೊತ್ತು,
ಬಂದನೇ ಪಥ್ಯಕ್ಕೆ ಸಂದು ಆಗಿದೆ ಬಹಳ ಹೊತ್ತು;
………………………………………..
ನೀ ನಟ್ಟ ಫಲವುಣದೆ ನಡೆದ ಮರಮರದಲ್ಲಿ
ನೂರು ಸಿಹಿ ಎಳನೀರು
ದಾರಿಹೋಕರ ತೃಪ್ತಿ, ತಣ್ಣೆಳಲ ಸೂರು
ಕೇಳು ಒಳಗೊಳಗೆ ನಕ್ಕು
ಕೊನೆಯ ವಾಕ್ಕು
……………………….
ಹೆಂಬೇಡಿಯಲ್ಲ, ಬಹದ್ದೂರ್ ಗಂಡ
ಅಮರತೆ ನಿನ್ನ ಟ್ರೇಡ್ ಮಾರ್ಕು

ಮುದ್ದಣನ ಕಾಲಮಿತಿ, ಕಾಲಾತೀತತೆ ಎರಡನ್ನೂ ಸಮನ್ವಯಿಸಿ, ವಿಶ್ಲೇಷಿಸುವ ಮುಕ್ತ ಛಂದಸ್ಸಿನ ಈ ಕವಿತೆ ಪಾಶ್ಚಾತ್ಯ ಸಂಪ್ರದಾಯದಲ್ಲಿರುವ Epitaph – ಸಮಾಧಿ ಲೇಖದ ಹಾಗೆ ಅವನಿಗೊಂದು ಸೂಕ್ತ ಶ್ರದ್ಧಾಂಜಲಿಯಾಗಿದೆ. ಮಾತ್ರವಲ್ಲ, ಕಣ್ಮರೆಯಲ್ಲಿರುವ ಅಥವಾ ಕಣ್ಮುಂದಿರುವ ಹಿರಿಯರನ್ನು ನಿಸಾರ್ ಅಹಮ್ಮದ್ ಹೇಗೆ ಕುತೂಹಲ, ಶ್ರದ್ಧೆ, ಆದರ ಮತ್ತು ಅಷ್ಟೇ ಚಿಕಿತ್ಸಕ ಭಾವದಿಂದ ಸಮೀಪಿಸುತ್ತಾರೆ ಎಂಬುದಕ್ಕೆ ನಿದರ್ಶನವೂ ಆಗಿದೆ.

ಇಪ್ಪತ್ತನೆಯ ಶತಮಾನದ ಕನ್ನಡ ನಾಡು ನುಡಿಗಳು ಕಂಡ ಒಬ್ಬ ಆಚಾರ್ಯ ಶ್ರೇಷ್ಠ, ವಿದ್ವದ್ರಸಿಕರೆಂದರೆ ತೀ.ನಂ.ಶ್ರೀಕಂಠಯ್ಯ. ‘ಕನ್ನಡದ ಕಣ್ವ’ ಬಿ.ಎಂ. ಶ್ರೀಯವರ ಪ್ರಿಯ ಶಿಷ್ಯನಾಗಿ, ಅನೇಕಾಂಶಗಳಲ್ಲಿ ಶ್ರೀಯವರ ಉತ್ತರಾಧಿಕಾರಿಯೆಂದೇ ಮಾನ್ಯರಾದ, ತೀ.ನಂ.ಶ್ರೀ ಹೆಚ್ಚು ಕಾಲ ಬದುಕಲಿಲ್ಲ ಹೆಚ್ಚು ಬರೆಯಲೂ ಇಲ್ಲ. ಆದರೆ ಅವರ ನೆನಪು ಕನ್ನಡಿಗರ ಮನದಲ್ಲಿ ನಿಚ್ಚ ಹಸಿರು; ಅವರು ಬರೆದದ್ದೆಲ್ಲ ಅಚ್ಚ ಬಂಗಾರ. ’ತೀ.ನಂ.ಶ್ರೀ’ ಎಂಬುದು ಅವರ ಅಕಾಲಿಕ ಮರಣಕ್ಕಾಗಿ ನಿಸಾರ್ ಸುರಿಸಿದ ಕಂಬನಿಯ ಮಣಿ ಮಾಲೆ :

ಹೋಗುವೆನೆಂದು ಹೋಗದೆಯೆ ಒದ್ದಾಡಿಸುವುದು
ಇಲ್ಲಿ ಹಲವರ ನೀತಿ;
ಹೇಳದೆಯೇ ಹೊರಟ್ಟೇ ಹೋಗಿ ಒದ್ದಾಡಿಸುವುದು
ಎಲ್ಲೋ ಕೆಲವರ ರೀತಿ.
ಇದ್ದಾಗ ಇದ್ದಂತೆ ಕಾಣಿಸದೆ, ಕಾಣಿಸದೆ ಇದ್ದಾಂಗ ಇದ್ದಂತೆ
ಭಾಸವಾದವ ನೀನು ಇದ್ದಕಿದ್ದಂತೆ…..

ತೀ.ನಂ.ಶ್ರೀ ಹಾಗೆ ಮರೆಯಾದರೂ ಬದುಕಿದ್ದಾಗ,

ಕೆಲವರಿಗೆ ಉಯ್ಯಾಲೆ, ನೆರಳು, ಸುಸ್ವರ, ಜೇನು
ಕೆಲವರಿಗೆ ಭಯಭಕ್ತಿ, ಪೂಜೆ, ವಿಧಿ, ವರ ನೀನು

ಎಂದು ಅವರನ್ನು ನೆನೆದು, ಕೈಗಳೆರಡನ್ನೂ ಜೋಡಿಸಿ ಹಣೆಯ ಮೇಲಿರಿಸಿ ‘ಚೊಕ್ಕತನ ಪಡೆದಿರುವ ಮನುಜಾಗೃತಿ’ಗೆ ಮುಗಿಯುತ್ತಾರೆ. ಹಾಗೆ ಕೈಮುಗಿದು ತೀ.ನಂ.ಶ್ರೀ ಯವರ ಕನ್ನಡ ಕಾಯಕದ ಸ್ವರೂಪಯಾವುದು ಎಂಬುದನ್ನು ವಿವರಿಸಿ, –

ಜೊಳ್ಳ ಕೇರುವ ಜರಡಿ, ಪಾತಾಳ ಗರಡಿ
ಹಂಸದಂತೊಮ್ಮೆ, ಇನ್ನೊಮ್ಮೆ ಗಡಿಯಾರ
ನೀ ಚಿಕಿತ್ಸಕ, ಗ್ರಾಮಫೋನು, ಬಾತ್ಮೀದಾರ
ಕಾಣುವುದು ಬೀದಿ ದಾಸನಿಗು ಗೊತ್ತು
ಕಾಣಿಸಿದ್ದನ್ನು ಮತ್ತೆ ಮನಗಾಣಿಸುವುದು ಮಾತ್ರ
ನಿನ್ನಂಥವರ ಸೊತ್ತು

ಎಂಬುದಾಗಿ ಅವುಗಳನ್ನು ಅಳೆದು ಸರಿದು ಸೋಸಿ ಬೆಲೆ ಕಟ್ಟುತ್ತಾರೆ. ತಾನು ತೀ.ನಂ.ಶ್ರೀಯವರನ್ನು “ಕಂಡದ್ದು ಮೂರೇ ಸಲ”, “ಕಾಲ ಬಳಿ ಕುಳಿತು ಕಲಿತನವನಲ್ಲ” ಎಂದು ಹೇಳುತ್ತಲೇ ನಿಸಾರ್ ಅಹಮ್ಮದ್.

ಕೈಮರ ಊರ ತೋರದಿದ್ದರು ದಾರಿ
ತೋರದಿರುವುದೇ ಹೇಳು?

ಎಂದು ಕೇಳುತ್ತಾರೆ. ಹಾಗೆ ದಾರಿ ತೋರಿದ ಪರೋಕ್ಷ ಗುರು ಅವರೆಂದು ಒಪ್ಪಿಕೊಂಡು ಅವರ ಋಣಭಾರವನ್ನು ಹೀಗೆ ನೆನೆಯುತ್ತಾರೆ :

ಋಣ ಹೊತ್ತು ನಿಂತಾಗ, ಋಣ
ತೀರಿತೆನಲಾರೆ
ಇರದಿದ್ದರೂ, ನನಗೆ ಇರುಳಲ್ಲಿ ಪ್ರತ್ಯಕ್ಷ
ನಿರ್ಭಯದ ಧ್ರುವತಾರೆ.

ಕವಿತೆಯ ಪ್ರತ್ಯೇಕಪಂಕ್ತಿಗಳನ್ನು ಇಲ್ಲಿ ಉದ್ಧರಿಸಿಲ್ಲ. ಆದರೆ ಅದನ್ನು ಓದಿ ಮುಗಿಸುತ್ತಿರುವಂತೆ ಪಂಕ್ತಿಗಳ ಮಧ್ಯದಿಂದ ಗಂಭೀರಸುಂದರವೂ ವಿದ್ವತ್‌ಪ್ರಭಾ ಪರಿವೇಷ್ಟಿತವೂ, ಆಗಿರುವ ತೀ.ನಂ.ಶ್ರೀಯವರ ಮೂರ್ತಿ ಪ್ರತ್ಯಕ್ಷವಾದಂತೆ ಭಾಸವಾಗುತ್ತದೆ. ‘ಕಾವ್ಯಾನುಭವ’ ಎಂಬುದು ಒಂದಿದ್ದರೆ ಅದು ಹೀಗೆಯೇ ಇರಬಹುದು; ಅಲ್ಲವೇ?

‘ಹುಟ್ಟಿದವನಿಗೆ ಸಾವು ತಪ್ಪಿದಲ್ಲ’ ಎಂಬುದು ಸನಾತನ ಉಕ್ತಿ, ಶಾಶ್ವತ ಸತ್ಯ. ಯಾರೂ ಯಾವುದೂ ಸಾವಿಗೆ ಅತೀತವಲ್ಲ. ಇಂದಲ್ಲ ನಾಳೆ, ನಾಳೆ ಅಲ್ಲ ಅದರಾಚೆ ಜೀವಿಗಳೆಲ್ಲವೂ ಸಾವಿನ ಉರುಳಿಗೆ ಕೊರಳೊಡ್ಡಲೇಬೇಕು. ಆದರೆ ಸಾವು ಬರುವ ರೀತಿ ಮಾತ್ರ ಅನೂಹ್ಯ ಅತಾರ್ಕಿಕ, ಅವರ್ಣನೀಯ. ಒಮ್ಮೆ ಬೆಕ್ಕಿನಂತೆ ಕಳ್ಳ ಹಜ್ಜೆಯಿರಿಸಿ ಬಂದರೆ ಮತ್ತೊಮ್ಮೆ ಬಿರುಗಾಳಿಯಂತೆ ಅಬ್ಬರಿಸಿ ನುಗ್ಗುತ್ತದೆ. ಬಾಲಕ, ತರುಣ, ವೃದ್ಧ, ರೋಗಿ, ನಿರೋಗಿ,  ನಿಶ್ಯಕ್ತ ಎಂಬ ಯಾವುದೇ ತಾರತಮ್ಯವಿಲ್ಲದೆ ಸಾವು ತನ್ನ ನಿರ್ದಯ ಶೀತಲ ಹಸ್ತದಿಂದ ಉಸಿರನ್ನು ಒತ್ತಿ ಹಿಡಿಯುತ್ತದೆ. ನಿಸಾರ್ ಅಹಮ್ಮದರ ‘ಸಾವಿಗೆ ಅತಿಥಿ ಪರಿಚಯ’ ಎಂಬ ಕವಿತೆ ವಿಭಿನ್ನ ಕ್ಷೇತ್ರಗಳಲ್ಲಿ ವಿಖ್ಯಾತರಾಗಿದ್ದ ಇಬ್ಬರು ಮಾನ್ಯರ ಮರಣವನ್ನು ಚಿತ್ರಿಸುತ್ತದೆ. ಅವರೆಂದರೆ ಬಿ.ಜಿ.ಎಲ್ ಸ್ವಾಮಿ ಮತ್ತು ಬಳ್ಳಾರಿ ಬೀಚಿ. ಅವರಿಬ್ಬರೂ ಒಂದೇ ವರ್ಷ ೧೯೮೦ರಲ್ಲಿ, ಒಂದೇ ತಿಂಗಳ ಅಂತರದಲ್ಲಿ, ದೀರ್ಘವಲ್ಲದ ಪ್ರಾಯದಲ್ಲಿ, ನಿಧನ ಹೊಂದಿದರು. ಮರಣಕಾಲಕ್ಕೆ ಸ್ವಾಮಿಗೆ ಅರುವತ್ತ ನಾಲ್ಕು ವರ್ಷವಾದರೆ ಬೀಚಿಗೆ ಅರುವತ್ತೇಳರ ಪ್ರಾಯ. ಸ್ವಾಮಿಯವರದು ನಿತ್ಯ ಹರಿದ್ವರ್ಣದ,  ತರು ಲತಾಗುಲ್ಮ ಸಮೃದ್ಧವಾದ ಉದ್ಯಾನ ಅಥವಾ ಕಾನನ ಪ್ರದೇಶಗಳಲ್ಲಿ ನಿರಂತರ ವಿಹರಣ – ಚಾರಣವಾದರೆ ಬೀಚಿಯವರದು ಬಿತ್ತರದ ನಗೆಯ ಕಡಲಲ್ಲಿ ಹಾಯಿ ದೋಣಿಯ ವಿಹಾರ. ಸ್ವಾಮಿಯವರ ಅನುಭವ ಸಂಪತ್ತಿನ ವಿತರಣೆಗೂ ಬೀಚಿಯವರ ಹಾಸ್ಯ ರಸಾಯನದ ಸೇವನೆಗೂ ‘ಜನ ನಾ ಮುಂದು’, ‘ತಾ ಮುಂದು’ ಎಂದು ನುಗ್ಗುವ ಕಾಲವೊಂದಿತ್ತು; ಒಂಟಿ ಕಾಲಲ್ಲಿ ಕಾಯುವುದಿತ್ತು. ಆದರೆ ಸಾವು ಅವರಿಗಾಗಿ ಕಾಯಲಿಲ್ಲ, ಇಬ್ಬರನ್ನೂ ಎತ್ತಿಕೊಂಡೇ ಹೋಯಿತು.

ನಿಸಾರ್ ಅಹಮ್ಮದರು ಸ್ವಾಮಿ ಮತ್ತು ಬೀಚಿಯವರ ನಿಧನಕ್ಕಾಗಿ ಗಾಢವಾಗಿ ಸಂತಪಿಸುವರಾದರೂ, ಅವರ ಸಾವು ಸಾವಲ್ಲ, ಸಾವಿಗೊಡ್ಡಿದ ಸವಾಲು ಎಂಬ ಭಾವವನ್ನು ಬಲವಾಗಿ ಸಮರ್ಥಿಸುತ್ತಾರೆ. ಏಕೆಂದರೆ ಅವರಿಬ್ಬರೂ, –

ಪ್ರಯತ್ನವೇ ಪರಮಾತ್ಮವೆಂದ ಶ್ರದ್ಧಾಳುಗಳು
ಎಲ್ಲ ಮೌಢ್ಯತೆ ಸೆಟೆದ ಬಲಾಢ್ಯ ತೋಳುಗಳು
ಬದುಕ ಬಿಮ್ಮನೆ ತಬ್ಬಿ ಘಮ್ಮೆಂದ ಬಾಳುಗಳು

ಅಂತಹವರನ್ನು ಸಾವು ಗೆಲ್ಲಬಾರದು. ಅವರೇ ‘ಸಾವೂ ಒಂದು ವಿಹಾರ, ವಿನೋದ ಅದನ್ನು ಕೊಂಚ ಸವಿಯೋಣ’ ಎಂದು ಅದರ ಕೆರೆಗೆ ಓಗೊಟ್ಟಿರಬೇಕು. ಹಾಗಾಗಿ ನಿಸಾರ್ ಅಹಮ್ಮದ್,-

ಸಾವೇ, ಹರ್ಷಪಡು ಮನವಾರೆ
ಹೊಸ್ತಿಲಿಗೆ ಬಂದು ನಿಂತಿದ್ದಾರೆ
ನಮ್ಮ ವಿಐಪಿಗಳು
……………………………
ಬರ ಮಾಡಿಕೊ ಬಳಿಗೆ,
ದಿವಾನಖಾನೆಯ ಒಳಗೆ

ಎಂದು ಆ ‘ಅಗವ್ಯ’ರನ್ನು ಪರಿಚಯಿಸಿ ಅವರನ್ನು ಸ್ವಾಗತಿಸಿ ಉಪಚರಿಸುವಂತೆ ಸಾವಿಗೆ ಸೂಚಿಸುವುದು ಎಷ್ಟು ಮಾರ್ಮಿಕವಾಗಿದೆ! ಕವಿತೆಯಲ್ಲಿ ಅವರಿಬ್ಬರ ಸಾವಿಗಾಗಿ ನೋವಿದ್ದರೂ, ಆ ವ್ಯಾಜ್ಯದಲ್ಲಿ ಇಬ್ಬರ ಹಿರಿಮೆ ಗೆಯ್ಮೆಗಳನ್ನೂ ಒಳ ಬಾಳಿನ ಒಳಬಗೆಯನ್ನೂ ಬಿತ್ತರಿಸಿ ಎತ್ತಿ ಹೇಳಿರುವ ರೀತಿಯೂ ಅಷ್ಟೇ ಮನೋಜ್ಞವಾಗಿದೆ. ಜಾನ್ ಡನ್ ಎಂಬ ಆಂಗ್ಲ ಕವಿಯ, “Death, be not proud, though some have called thee mighty and dreadfull, for thou art not so” ಎಂದು ಸಾವನ್ನು ಕೆಣಕಿ ಅಣಕಿಸುವ ರಚನೆಯೊಂದಿದೆ ನಿಸಾರರ ಸಾವಿಗೆ ಅತಿಥಿ ಪರಿಚಯವೂ ಬೇರೊಂದು ನೆಲೆಯಲ್ಲಿ ಅಂತಹದೇ ಕವಿತೆ ಎನ್ನಬಹುದು.

()

ಈ ವರೆಗೆ ನಿಸಾರ್ ಅಹಮ್ಮದ್ ಅವರು ತಮಗೆ ಅತಿಸ್ಮರಣೀಯರೋ ಆದರಣೀಯರೋ ಆತ್ಮೀಯರೋ ಆಗಿದ್ದು ಕಣ್ಣ ಮೆರೆಗೆ ಸರಿದಿರುವ ಮುದ್ದಣ, ತೀ.ನಂ.ಶ್ರೀ., ಬಿ.ಜಿ.ಎಲ್. ಸ್ವಾಮಿ ಮತ್ತು ಬೀಚಿಯವರನ್ನು ವರ್ಣಿಸಿರುವ ವೈಖರಿಯನ್ನು ಭಾಗಶಃ ಕಾಣಿಸಿದ್ದಾಯಿತು. ಇನ್ನು ಮುಂದಿನದು ವಯೋಮಾನದಲ್ಲಿ ತಮಗಿಂತ ಹೆಚ್ಚಿನವರಾದರೂ ಸಮಕಾಲೀನರಾಗಿ ಕಣ್ಣ ಮುಂದಿರುವ, ಅಥವಾ ಕವಿತೆ ಬರೆಯುವ ಕಾಲಕ್ಕೆ ಇದ್ದ ಮೂರು ಮಂದಿ ವಿಶಿಷ್ಟರನ್ನು ನಿಸಾರರ ರಸಾರ್ದ್ರ ಲೇಖನಿ ಹೇಗೆ ವರ್ಣಿಸಿದೆ ಎಂಬುದನ್ನು ನೋಡಬಹುದು. ಅವರೆಂದರೆ ಮಾಸ್ತಿ, ವೆಂಕಟೇಶ ಅಯ್ಯಂಗಾರ್, ಕೆ.ಎಸ್.ನರಸಿಂಹಸ್ವಾಮಿ ಮತ್ತು ಜಿ.ಟಿ. ನಾರಾಯಣರಾವ್. ವಿಶಿಷ್ಟ ಕಾರಣಕ್ಕಾಗಿ, ಈ ಮೂವರಲ್ಲಿ ಮಾಸ್ತಿಯವರನ್ನು ಕುರಿತ ಕವಿತೆಯನ್ನು ಕೊನೆಯಲ್ಲಿ ಎತ್ತಿಕೊಳ್ಳಲಾಗಿದೆ. ಈಗ ಮಾಸ್ತಿ ಮತ್ತು ಕೆ.ಎಸ್.ನ ಇಬ್ಬರೂ ಕಣ್ಮರೆಯಾಗಿದ್ದಾರೆ. ಅವರಿಬ್ಬರೂ ಹೇಗೆ ಬದುಕಿದರೆ ಅದಕ್ಕೆ ಬೆಲೆ ಬರುತ್ತದೆ, ಹೇಗೆ ಬರೆದರೆ ಅದು ಕಲೆಯೆನಿಸುತ್ತದೆ ಎಂಬುದಕ್ಕೆ ಒರೆಗಲ್ಲಿನಂತೆ ಇದ್ದವರು.

‘ಕೆ.ಎಸ್.ನ-೭೬’ ಎಂಬುದು ಶೀರ್ಷಿಕೆಯೇ ಸಾರುವಂತೆ ಒಂದು ಕಾವ್ಯಾಭಿನಂದನ. ೧೯೪೨ರಲ್ಲಿ ಕಟ್ಟುಕೊಂಡು ನಾಡಿನ ನಾಲ್ದೆಸೆಗಳಲ್ಲೂ ತಂಪು ಹರಡಿದ ‘ಮೈಸೂರು ಮಲ್ಲಿಗೆ’ ಯಿಂದ ಮೊದಲಾಗಿ ೨೦೦೩ರಲ್ಲಿ ಅಚ್ಚಾದ ‘ದೀಪಸಾಲಿನ ನಡುವೆ’ ಎಂಬ ಹದಿನಾರನೆಯ ಸಂಕಲನದ ತನಕ ಸುದೀರ್ಘ ಕಾವ್ಯಯಾತ್ರೆ ಮಾಡಿ ಕೃತಾರ್ಥರಾದವರು; ಡಿ.ವಿ.ಜಿ., ಡಿ.ಎಲ್.ಎನ್., ವಿ.ಸೀ., ಎಲ್.ಎಸ್.ಎಸ್., ಜಿ.ಎಸ್.ಎಸ್., ಕಣವಿ ಮೊದಲಾದವರಿಂದ ಬಗೆಬಗೆಯ ನಲ್ನುಡಿ ಮುನ್ನುಡಿಗಳ ಸುಗಂಧಹಾರವನ್ನು ಮುಡಿಗೇರಿಸಿಕೊಂಡವರು ಕೆ.ಎಸ್.ನರಸಿಂಹಸ್ವಾಮಿಯವರು. ಎಪ್ಪತ್ತಾರನ್ನು ಪೂರೈಸಿ ಎಪ್ಪತ್ತೇಳಕ್ಕೆ ಹೆಜ್ಜೆಯಿರಿಸಿದ ಮತ್ತು ಆರುವತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಯೋಜಿತರಾದ ಸಡಗರದಲ್ಲಿ ಕೆ.ಎಸ್.ನ ಅವರಿಗೆ ಒಸಗೆ ಒಪ್ಪಿಸುವ ನೆವದಲ್ಲಿ ‘ಮಲ್ಲಿಗೆ ಕವಿ’ಯ ಒಂದು ಸಂಕ್ಷಿಪ್ತ ಆದರೆ ಸಹೃದಯ ಮೌಲ್ಯಾಂಕನವನ್ನೇ ಕೆ.ಎಸ್.ನಿ ಮಾಡಿದ್ದಾರೆ.

ಒಂದು ನದೀ ಪಾತ್ರದಲ್ಲಿ ಒಂದೇ ನೀರು ಎರಡು ಸಲ ಹರಿಯುವುದಿಲ್ಲ ಎನ್ನುವುದುಂಟು. ಎಂದರೆ, ನದಿಯ ಹೆಸರು ಎಲ್ಲ ಕಾಲಕ್ಕೂ ಒಂದೇ ಆಗಿದ್ದರೂ ಹರಿಯುವ ನೀರು ಬೇರೆ ಬೇರೆಯಾಗಿರುತ್ತದೆ. ಹಾಗೆಯೇ ಯಾವನೇ ಒಬ್ಬ ಕವಿ ಸಾಹಿತಿ ಅಥವಾ ಕಲಾಕಾರನೂ ಎಲ್ಲ ಕಾಲದಲ್ಲೂ ಒಂದೇ ಚೆಲುವಿನ, ಬೆಲೆಯ ಕೃತಿಯನ್ನು ಸೃಷ್ಟಿಸಲಾರ. ಕಾಲದಿಂದ ಕಾಲಕ್ಕೆ, ಕೃತಿಯಿಂದ ಕೃತಿಗೆ ತಾರತಮ್ಯ ಇದ್ದೇ ಇರುತ್ತದೆ. ಕಾರನ ಆತನ ಮನಸ್ಥಿತಿ, ದೇಹಸ್ಥಿತಿ ಅಥವಾ ಪರಿಸ್ಥಿತಿ. ಕೆ.ಎಸ್.ನ ಅವರೂ ಈ ಮಾತಿಗೆ ಅಪವಾದವಲ್ಲ, ಮತ್ತೆ ಮತ್ತೆ ಅವರು’ಮೈಸೂರು ಮಲ್ಲಿಗೆ’ಯಂತಹ ಮಾಲೆಗಳನ್ನು ಕಟ್ಟಿಲ್ಲವೆಂಬುದು ನಿಜ. ಮಲ್ಲಿಗೆಯಂತೆಯೇ ಕಾಣುವ, ಆದರೆ ಸುಕುಮಾರತೆ, ಸುಗಂಧತೆಗಳಿಲ್ಲದ ಕಾಕಡಗಳ ಚೆಂಡನ್ನೂ ಅವರು ಹೆಣೆದಿಲ್ಲ. ಕೆ.ಎಸ್.ನ ಅವರ ಬರಹದ ಹೊಗರನ್ನೂ ಬದುಕಿನ ಚದುರನ್ನೂ ಕೆ.ಎಸ್.ನಿ ಅವರು ಓದುಗನ ಎದೆಮುಟ್ಟುವ ಬಗೆಯಲ್ಲಿ ಬಣ್ಣಿಸಿದ್ದಾರೆ.

ಈಗಿನವರ ಸುಪ್ರತಿಭೆ ಬಾನಾಡಿಯಲ್ಲ? ದಿಟ,
ಹಾಗೆಂದು ಕೊರಕಲಲಿ ಕುಪ್ಪಳಿಸಿ ಕುಸಿದಿಲ್ಲ;
ಕೊಕ್ಕನ್ನು ಮಸೆಮಸೆದು ಬೇರಾಗಗಳ ಹೊಸೆದಿಲ್ಲ

‘ಕೆ.ಎಸ್.ನ ಅವರ ಪದ್ಯದೊಡವೆಗಳಲ್ಲಿ ಚಿನ್ನ ಕಮ್ಮಿಯಿರಬಹುದು, ಆದರೆ ಹಿತ್ತಾಳೆ ಇಲ್ಲವೇ ಇಲ್ಲ; ಬೆಳ್ಳಿಯೇನೂ ಕಡಿಮೆಯಾಗಿಲ್ಲ’ವೆನ್ನುವ ನಿಸಾರ್ ‘ಬರಿಗೊಡಗಳಿಗೆ ಸಮಾಧಾನ ನೀಡುತಿದೆ ಇನ್ನೂ  ಹನಿತೊಟಕಿರುವ ನಲ್ಲಿ’ ಎಂದು ಅವರದೇ ಕವನ ಪಂಕ್ತಿಯನ್ನು ನೆನಪಿಗೆ ತರುತ್ತಾರೆ; ಕಾವ್ಯಪ್ರೇಮಿಗಳ ಎದೆಯ ಗದ್ದುಗೆಗಳಲ್ಲಿ ಕೆ.ಎಸ್.ನ ಅವರಿಗೆ ಎಲ್ಲ ಕಾಲದಲ್ಲೂ ಗಟ್ಟಿನೆಲೆ ಎಂಬುದನ್ನು ಒತ್ತಿ ಹೇಳುತ್ತಾರೆ.

ಕೆ.ಎಸ್.ನ ಅವರಿಗೆ ಎಪ್ಪತ್ತಾರು ತುಂಬುವ ಕಾಲಕ್ಕೆ ಅವರು ಮೈಸೂರಿನಲ್ಲಿ ನೆರವೇರಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು ತಾನೇ? ಅದನ್ನು ನಿಸಾರ್ ಅಹಮ್ಮದ್ ಹೀಗೆ ಪ್ರಸ್ತಾವಿಸಿದ್ದಾರೆ:-

ಸಮ್ಮೇಳನಾಧ್ಯಕ್ಷ ಇಳಿವಯಸ್ಸಿನಲೆ?
ಕವಿಗಿಲ್ಲ ಇದರಿಂದ ಹಿರಿಮೆ, ಕುಂದು,
ಕಿರಿಯರಿಗೆ ಬಡಿಸಿದ ಅನಂತರವೇ ಹಿರಿಯರಿಗೆ
ಊಟವಲ್ಲವೆ ಹೇಳಿ ಹಬ್ಬದಂದು?’

ಪದ್ಯದ ಉತ್ತರಾರ್ಧದ ಎರಡು ಪಂಕ್ತಿ ಮಾಸ್ತಿಯವರದು. ಅವರಿಗೆ ಜ್ಞಾನಪೀಠ ಪ್ರಶಸ್ತಿ ತಡವಾಗಿ ಬಂತು ಎಂದು ಯಾರೋ ನೊಂದು ನುಡಿದಾಗ ಮಾಸ್ತಿ ಅವರನ್ನು ಸಂತೈಸಿದ ರೀತಿ ಅದಾಗಿತ್ತು! ನಿಸಾರ್ ಅವರ ಭಾವವನ್ನೂ ಆ ಸಾಲುಗಳು ಚೆನ್ನಾಗಿಯೇ ಸಮರ್ಥಿಸುತ್ತವೆ.

ನಮ್ಮ ಜನ ಒಂದು ವ್ಯಕ್ತಿಯ ಗುಣವಿಶೇಷವನ್ನು ಗುರುತಿಸಿ ಗೌರವಿಸುವಲ್ಲಿ ಕಾಲವಿಳಂಬವೋ ಸ್ಥಾನಪಲ್ಲಟವೋ ಆಗುವುದುಂಟು. ಕೆ.ಎಸ್.ನ ಅವರ ವಿಷಯದಲ್ಲೂ ಹೀಗಾದದ್ದಿದೆ. ಅದು ಹೇಗೂ ಇರಲಿ, –

ಯಾರೆ ಬಂದರು ಮುಂದೆ ಕನ್ನಡಿಗರೆದೆಯೊಳಿಹ
ಪ್ರೇಮಗೀತದ ಪೀಠ ಬಿಟ್ಟುಕೊಡರು;
ಕುವೆಂಪು, ಬೇಂದ್ರೆ, ಪುತಿನ, ಅಡಿಗ ಜೊತೆ ಕೆಎಸ್
ನುಡಿ ತಾಯ ನಿತ್ಯೋತ್ಸವದೊಳೊಂದು ಹೆಸರು.

ಕೆ.ಎಸ್.ನ ಅವರು ಬಾಳಿನ ಬತ್ತಿ (೨೦೦೪ರಲ್ಲಿ) ಈಗ ನಂದಿದೆ. ಆದರೆ ಅವರ ಹೆಸರಿನ ಬೆಳಕು ನಿಚ್ಛಳವಾಗಿಯೇ ಇದೆ. ಅವರು ಬದುಕಿದ್ದಾಗ ನಿಸಾರ್ ಬರೆದ ಈ ಕವನ ಸ್ತವನ ಅವರು ಇಲ್ಲವಾದಾಗಲೂ ಅಷ್ಟೇ ಉಚಿತವಾಗಿ ಅವರಿಗೆ ಸಲ್ಲುತ್ತದೆ.