ಪ್ರಾಯಶಃ ನಿಸಾರ್ ಅವರ ಕವಿಸಾಹಿತಿ ಸ್ತವನಗಳಲ್ಲೆ ದೀರ್ಘತಮವಾದದ್ದು ಜಿ.ಟಿ.ಎನ್ ಎಂಬುದು. ಅದಕ್ಕೆ ಒಂದು ಕಾರಣ ವರ್ಣಿತ ಜಿ.ಟಿ.ಎನ್ ಮತ್ತು ವರ್ಣನಕಾರ ಕೆ.ಎಸ್.ನಿ ಕಾಲೇಜುಗಳಲ್ಲಿ ಸಹೋದ್ಯೋಗಿಗಳಾಗಿದ್ದುದ್ದೂ ಇರಬಹುದೋ ಏನೋ. ಆದರೆ ಅದನ್ನೇ ಮುಖ್ಯವೆಂದು ಹೇಳುವಂತಿಲ್ಲ. ಮುಖ್ಯವಾದದ್ದು ವ್ಯಕ್ತಿಗಳ ಮಧ್ಯದ ಭೌತಿಕ ಭೌಗೋಲಿಕ ಸಾಮಿಪ್ಯವಲ್ಲ-ಮಾನಸಿಕವಾದ ಸಾಮರಸ್ಯ ಮತ್ತು ಪಾರಸ್ಪರ್ಯ. ’ಜಿ.ಟಿ.ಎನ್’ ಎಂಬ ಕವಿತೆಯನ್ನು ಓದುತ್ತಿರುವಂತೆಯೇ ಈ ಅಂಶ ಅರಿವಿಗೆ ಬರುತ್ತದೆ. ಈ ಮೊದಲು ಉಲ್ಲೇಖಿಸಿದ ನಿಸಾರ್ ಅವರ ವ್ಯಕ್ತಿಪರ ಕವಿತೆಗಳಲ್ಲಿ ಒಂದೊಂದರ ಆರಂಭದಲ್ಲೂ ಭಾವವಿಸ್ತರಣದಲ್ಲೂ ಉಪಸಂಹರಣದಲ್ಲೂ ಒಂದೊಂದು ನಾವೀನ್ಯ, ಸ್ವಾರಸ್ಯ, ವೈಶಿಷ್ಟ್ಯಗಳಿವೆ. ಅದರಂತೆಯೇ ಜಿ.ಟಿ.ಎನ್. ಸಹ –

ಬದಲಾಗುವುದಿಲ್ಲ ಜಿ.ಟಿ.ಎನ್
ಮೊಹಲ್ಲಕ್ಕೆ ಮೊಹಲ್ಲ, ಮೈಸೂರಿಗೆ ಮೈಸೂರು
…………………………………………..
ಏನೆಲ್ಲ ಬದಲಾದೀತು
ಜಿ.ಟಿ.ಎನ್ ನಾವೆಯ ವೇಳಾಪಟ್ಟಿಯ ನರಾಕಾರ
ಮಾತ್ರ ಯಥಾಪ್ರಕಾರ

ಹೀಗೆ, ಓದುಗನಿಗೆ ಕಚಗುಳಿಯಿಟ್ಟು ಆತನ ಕುತೂಹಲವನ್ನು ಕೆರಳಿಸಿ ತೊಡಗುವ ಈ ಕವಿತೆ ಪ್ರೊ.ಜಿ.ಟಿ.ನಾರಾಯಣ ರಾಯರ ಭೌತವಿಜ್ಞಾನ ಪ್ರೀತಿ, ಸಂಗೀತ ಸಾಹಿತ್ಯಾಸಕ್ತಿ, ಜೀವನ ಶ್ರದ್ಧೆ ಮತ್ತು ಮೌಲ್ಯನಿಷ್ಠೆಗಳೆಂಬ ಚತುರ್ಮುಖಗಳನ್ನು ತುಂಬ ಸೊಗಸಾಗಿ, ಅಷ್ಟೇ ಆತ್ಮೀಯವಾಗಿ ಕಂಡರಸಿ ಕಾಣಿಸುತ್ತದೆ.

ಏಕಪ್ರಕಾರವಾದ ಜೀವನವಿಧಾನ ಮತ್ತು ಕ್ರಿಯಾಶೀಲತೆಗಳನ್ನು ಮೆಯ್ಯೂಡಿಸಿಕೊಂಡಿರುವ ಜಿ.ಟಿ.ಎನ್ ಅವರನ್ನು ವರ್ಣಿಸುತ್ತಾ ನಿಸಾರ್ ಹೇಳುತ್ತಾರೆ:

‘………………………………………………..
ಭೂಪನ್ನ ಒಂದಿಷ್ಟು ತಹಬಂದಿಗೆ ತರೋಣ
ಸಕಾಲೀನಗೊಳಿಸೋಣವೆಂದು
ಕಾಲಕೋವಿದ ಕುಂಚ ಹಿಡಿದು
ಕಣ್ಣಿನಡಿ ಕಪ್ಪು ಕೂದಲಿಗೆ ಬಿಳುಪು
ಬಳಿಯಲು ತೊಡಗಿ
ಕೂತಲ್ಲಿ ಕೂರದ ನಡುವಯಸ್ಕವ ಭರಾಟೆಗೆ
ದೈನಂದಿನ ಜೊತೆ ಮೂಡಿರುವ ಕರಾಟೆಗೆ
…………………………………..
ತಲೆಕಟ್ಟು
ಕೆಲಸವನ್ನರ್ಧಕ್ಕೇ ನಿಲ್ಲಿಸಿ, ಕುಂಚವನ್ನಲ್ಲೆ ಬೀಳಿಸಿ
ಕಿತ್ತಿದ್ದಾನೆ ಕಾಲ, ಬಡಪಾಯಿ ಕಾಲ!

ಜಿ.ಟಿ.ಎನ್. ಅವರನ್ನು ಹತ್ತಿರದಿಂದ ಕಂಡವರೆಲ್ಲ ನಿಸಾರ್ ಮಾಡಿರುವ ಈ ವರ್ಣನೆ ಪ್ರತಿಪದದಲ್ಲೂ ಯಥಾರ್ಥವೆಂದು ಒಪ್ಪಿಯೇ ಒಪ್ಪುತ್ತಾರೆ!

ಮುಂದಿನ ಪದ್ಯ ಪಂಕ್ತಿಗಳಲ್ಲಿ ಜಿ.ಟಿ.ಎನ್ ಅವರ ವ್ಯಕ್ತಿತ್ವ ಅದರ ವೈಶಿಷ್ಟ್ಯ ಮತ್ತು ವೈಚಿತ್ರ್ಯಗಳೆಲ್ಲವನ್ನು ಬಿಡಿ ಬಿಡಿಯಾಗಿ ತೊಳೆ ಬಿಡಿಸಿ ಓದುಗರ ಮುಂದಿರಿಸಿ “ನಿಮಗೆ ಯಾವುದು ಎಷ್ಟು ಬೇಕೋ ಅದನ್ನು ಆರಿಸಿಕೊಳ್ಳಿ” ಎಂಬ ಸ್ವಾತಂತ್ಯ್ರವನ್ನು ನಿಸಾರ್ ನೀಡುತ್ತಾರೆ. ಕವಿತೆಯ ಅಂತಿಮ ಭಾಗದಲ್ಲಿ ಜಿ.ಟಿ.ಎನ್ ಎಂಬ ಮನುಷ್ಯ ವಿಶೇಷವನ್ನು ನಿಸಾರ್ ಚಿತ್ರಿಸಿ ಅದನ್ನು ವರ್ಣಿಸಿರುವ ರೀತಿ ಸ್ನೇಹ ಸ್ನಿಗ್ಧವೂ ರಸಾರ್ದ್ರವೂ ಆದದ್ದು:

ಪಂಕ್ತಿ ಬೇದವನೆಣಿಸದವರು
ಭೂತಗಣವನ್ನ ಕುಣಿಸದವರು,
ಹೆರರಲ್ಲಿ ಸಕ್ಕರೆಯ ತುಣುಕು ಕಂಡರೂ
ಕಬ್ಬಿನ ತೋಟ ಪತ್ತೆ ಹಚ್ಚಿ
ಹತ್ತು ಕಡೆ ಸುದ್ದಿ ಬಿತ್ತುವವರು,
ಎತ್ತರಕ್ಕೆತ್ತುವವರು

ಇದು ನೋಡಿ ನಿಜವಾದ ಹೃದಯವಂತಿಕೆ, ಗುಣೈಕ ಪಕ್ಷಪಾತ “ಪರಗುಣ ಪರಮಾಣೂನ್ ಪರ್ವತೀ ಕೃತ್ಯ ನಿತ್ಯಂ, ನಿಜಹೃದಿ ವಿಕಸಂತಃ ಸಂತಿಃ ಸಂತ ಕಿಯಂತ” ಎಂಬ ಸುಂದರವಾದ ಒಂದು ಸುಭಾಷಿತ ಸಂಸ್ಕೃತದಲ್ಲಿದೆ. ಅದಕ್ಕೆ ಜೀವಂತ ನಿದರ್ಶನವಾಗಬಲ್ಲವರು ಜಿ.ಟಿ.ಎನ್.

ಒಂದು ತಲೆಮಾರಿನ ಹಲವಾರು ಹಿರಿಯರು ಹೀಗೆಯೇ ಇದ್ದವರು ಅವರು ಕವಿ, ಸಾಹಿತಿ, ಕಲಾಕಾರ, ಭೌತವಿಜ್ಞಾನಿ, ರಾಜನೀತಿಜ್ಞ, ಅಧಿಕಾರೀ ವರಿಷ್ಠ ಯಾರೇ ಇರಲಿ, ಅವರೆಲ್ಲರ ಸಮಾನ ಗುಣ ವಿಶೇಷವೆಂದರೆ ಇನ್ನೊಬ್ಬರ ದೊಡ್ಡತನವನ್ನು, ಒಳ್ಳೆತನವನ್ನು ಗುರುತಿಸುವುದು ಮಾತ್ರವಲ್ಲ, ಅಂತಹ ಗುಣವಂತರ ಹೆಚ್ಚುಗಾರಿಕೆಗಳನ್ನು ಮೆಚ್ಚಿನುಡಿಯುವುದು, ಬೆನ್ನು ತಟ್ಟುವುದು ಹುರಿದುಂಬಿಸುವುದು ಇದೆಲ್ಲವನ್ನೂ ಅವರು ಮಾಡುತ್ತಿದ್ದರು. ಅಂತಹವರು ಈಗಲೂ ಅಲ್ಲಿ ಇಲ್ಲಿ ಇದ್ದಾರೆ, ಇಲ್ಲವೆಂದಲ್ಲ ಅವರು ಹೆರವರ ಹಿರಿತನವನ್ನೂ, ಒಳ್ಳೆತನವನ್ನೂ ಒಪ್ಪುತ್ತಾರೆ, ಮೆಚ್ಚುತ್ತಾರೆ. ಆದರೆ ಹತ್ತು ಕಡೆ ಆ ಕುರಿತು ಆಡುವುದು, ಬರೆದು ಕೊಂಡಾಡುವುದು ಕಡಿಮೆ. ಇನ್ನೂ ಕೆಲವರಿರುತ್ತಾರೆ. ಅಸೂಯೆ, ಅಸಹನೆಗಳೇ ಅವರ ನೆತ್ತಿಯ ಮೇಲಿನ ಮುತ್ತಿನ ಸತ್ತಿಗೆ. ಅಕ್ಕರೆಯ ಹರಳನ್ನೆಲ್ಲ ತಾನೇ ಚಪ್ಪರಿಸುತ್ತ, ಮಿಕ್ಕವರನ್ನು ತಗ್ಗಿನಿಂದ ತಗ್ಗಿಗೆ ತಳ್ಳುವವರು. ಅಂತಹವರನ್ನು ಕುರಿತೂ ನಿಸಾರ್ ಅಹಮ್ಮದ್ ಬರೆದಿದ್ದಾರೆ. ‘ವಿಮರ್ಶಕ ಅಂದರಿಕಿ ಮಂಚಿವಾಡಯ್ಯ’ ಅದಕ್ಕೊಂದು ಉದಾಹರಣೆ. ಹೂವಿನ ದಂಡೆಯ ಎಡೆಯಲ್ಲಿ ಜಾಲಿಯ ಮುಳ್ಳನ್ನು ತಂದು ತುರುಕುವವರ ಮಾತು ಇಲ್ಲಿ ಹೆಚ್ಚು ಬೇಡ.

ಜಿ.ಟಿ.ಎನ್ ಅವರ ಬದುಕಿನ ಸೊಗಸಿನ ರಂಗವಲ್ಲಿಯಲ್ಲಿ ಅಲ್ಲಿ ಇಲ್ಲಿ ಸಲ್ಲದ ಬಣ್ಣದ ಹುಡಿ ಸೇರಿದ್ದನ್ನೂ, ನಿಸಾರ್ ಹೇಳದೇ ಬಿಟ್ಟಿಲ್ಲ. ಭಾಷೆ “ಜೊತೆ ದೊಂಬರಾಟ ಕೋಣೆಯಲ್ಲಾಡಿದಂತೆ ಕಾಲ್ಚೆಂಡು”, “ವ್ಯಾಕರಣಾವಲಂಬಿ ಪದಪಂಕ್ತಿ….. ಟೇಪಿನಳತೆಯ ಸಾಲು ಗಂಬಗಳ ತಾನ ರಹಿತ ವಿತಾನ…..”, “ನಡುವೆ ಹಾರಿಸುವ ಸ್ವಪ್ರತಾಪದ ಪತಾಕೆ…..” ಮೊದಲಾದ ಪಂಕ್ತಿಗಳು ಹೆಚ್ಚು ನೋವಾಗದಂತಹ, ಆದರೆ ಆಶಯವನ್ನು ಅರಿವಿಗೆ ತರುವಂತಹ ಚಿವುಟು ನುಡಿಗಳಾಗಿವೆ. ಅದು ಹಾಗಿರಲಿ, ಜಿ.ಟಿ.ಎನ್ ಕುರಿತು ಕೆ.ಎಸ್.ನಿ ಅವರ ಸ್ಥಾಯಿ ಭಾವ ಇದು:

ಎಲ್ಲ ಧಾರಾಳ : ಸಜ್ಜನಿಕೆ ಅಕ್ಕಾಸ್ಥೆ ಮೇಜವಾನಿಯಲ್ಲಿ
…………………………………………………….
ಬದಲಾಗುವುದಿಲ್ಲ ಜಿ.ಟಿ.ಎನ್.

ಈ ಕವಿತೆಯನ್ನು ಓದುತ್ತಿರುವಾಗ, ರಕ್ತಮಾಂಸಗಳಿಂದ ಸಜೀವವಾದ, ಕ್ರಿಯಾಶೀಲತೆಯಿಂದ ಚಟುಲವಾದ, ಬಹುಮುಖತೆಯಿಂದ ಸಮೃದ್ಧವಾದ, ಹಾಗೆಯೇ ಮನುಷ್ಯ ಸಾಮಾನ್ಯ ಗುಣಗಳಿಂದ ಸಹಜವಾದ ಒಂದು ಚಿತ್ರ ಪ್ರತ್ಯಕ್ಷವಾಗಿ ಪರಮಾಪ್ತವೆನಿಸುತ್ತದೆ.

ಪ್ರೊ. ನಿಸಾರ್ ಅಹಮ್ಮದರ ಕವಿಸ್ತವನಗೋಪುರದಲ್ಲಿ ಶೃಂಗವಾಗಿ, ಕವಿವಂದನ  ಮಾಲಿಕೆಯಲ್ಲಿ ನಾಯಕರತ್ನವಾಗಿ ಕಂಗೊಳಿಸತಕ್ಕ ಕವಿತೆ ‘ಮಾಸ್ತಿ’ ಕನ್ನಡಿಗರು ಅಕ್ಕರೆಯಿಂದ ‘ಅಣ್ಣ’ನೆಂದೂ ಹೆಮ್ಮೆಯಿಂದ ‘ಆಸ್ತಿ’ಯೆಂದೂ ಕರೆಯುತ್ತಿದ್ದ ಮಾಸ್ತಿಯವರು ಬದುಕಿದ್ದಾಗಲೇ ದಂತಕಥೆಯಾದವರು. ನಿಸಾರ್ ಈ ಕವಿತೆ ಬರೆದಾಗ ಮಾಸ್ತಿಯವರು ಬದುಕಿದ್ದರು. ಈಗ ಆ ‘ಅಣ್ಣ’ ಮಾಸ್ತಿ ಭೌತಿಕವಾಗಿ ನಮ್ಮೊಂದಿಗಿಲ್ಲ, ಆದರೆ ವಾಙ್ಮಯ ರೂಪದ ‘ಆಸ್ತಿ’ ಇದೆ. ಮಾಸ್ತಿಯವರನ್ನು ಕುರಿತು ಹಲವರು ಹಲ ಬಗೆಯಲ್ಲಿ ಬರೆದಿದ್ದಾರೆ. ಅವೆಲ್ಲ  ಚೆನ್ನಾಗಿಯೇ ಇವೆ. ಆದರೆ ಭಾರತೀಯ ಸಂಸ್ಕೃತಿಯ ಕೇತನವೂ ಸಂಕೇತವೂ ಆಗಿರುವ ಮಾಸ್ತಿಯವರ ಸಮಗ್ರ ವ್ಯಕ್ತಿತ್ವವನ್ನು ಕೆಲವೇ ಪಂಕ್ತಿಗಳ ಒಂದು ಚೌಕಟ್ಟಿನಲ್ಲಿ ಅಡಕಗೊಳಿಸಿರುವ ‘ಮಾಸ್ತಿ’ಯಂತಹ ಕವಿತೆ ಬೇರೆ ಇಲ್ಲ. ಕವಿತೆಯ ಆರಂಭವೇ ಆಕರ್ಷಕ, ನಾಟಕೀಯ:

ಸದಾ ಇವರು ಹೀಗೆಯೇ
ಇಲ್ಲೆ, ಗಾಂಧಿ ಬಜಾರಿನ ಹಿರಿಚೌಕದೆದುರಲ್ಲೇ,
ಸಿಗರೇಟು ಸೇದುತ್ತಲೋ ಪತ್ರಿಕೆಯನೋದುತ್ತಲೋ
ಹರಟುತ್ತಲೊ ಇದ್ದಾಗ ಎದುರಾಗುವರು ಇದ್ದಕಿದ್ದಂತೆ
ನಿರ್ದಿಷ್ಟ ಸಮಯದಂತೆ

ಮಾಸ್ತಿಯವರ ಏಕಮುಖವನ್ನು ಈ ರೀತಿ ಪರಿಚಯಿಸುವ ನಿಸಾರ್ ಆಮೇಲೆ ಅವರ ಬಹಿರಂಗದ ಚರ್ಯೆಯನ್ನೂ ಅಂತರಂಗದ ಸತ್ವವನ್ನೂ ಕಾಣಿಸುತ್ತಾರೆ:

ವಯಸು ಅನುಭವ ಕೂಡಿ ಸುಖದುಃಖ ಬೆಳೆದ ಮುಖ,
ಹಿಂದೊಮ್ಮೆ ನೆಲಸಿದ್ದ ಬೆಳಕ ಕನವರಿಸುತಿಹ ಮಂದಗಣ್ಣು;
………………………………………………..
ಅದೇ ಕೊಡೆಯ ಗದೆ

ಆಮೇಲೆ ಹೇಳುತ್ತಾರೆ –

ಇವರು ನನ್ನೆದುರು ಹಾದು ಹೋದಾಗಲೆಲ್ಲ
ಹಳ್ಳಿಗಾಡಿನ ಕಡೆಯ ಸುಪ್ರನ್ನತೆಯೊಂದು ನಗರಕ್ಕೆ ಸಂದಂತೆ
ಬೆಳಗಾಗ ಚಳಿಯಲ್ಲಿ ಬಿಸಿನೀರಿನ ಮಿಂದಂತೆ
ಎದೆ ಸ್ವಚ್ಛಗೊಳ್ಳುತ್ತದೆ, ಹಗುರಕ್ಕೆ ಸಲ್ಲುತ್ತದೆ

ಇದು ನಿಸಾರ್ ಅಹಮ್ಮದರೊಬ್ಬರದೇ ಮಾತಲ್ಲ; ಮಾಸ್ತಿಯವರ ಹತ್ತಿರ ಹೋಗುತ್ತಿದ್ದದ್ದುವರೆಲ್ಲರಿಗೂ ಆಗುತ್ತಿದ್ದದ್ದು ಅದೇ ಅನುಭವ, ಅದೇ ಸುಖ.

ಕವಿತೆಯಲ್ಲಿ ನಾಲ್ಕು ಘಟಿಕಗಳಿವೆ: ಅವು ಮೇಲುನೊಟಕ್ಕೆ ಅನ್ಯಾನ್ಯವಾಗಿ ತೋರಿದರೂ ಅವುಗಳ ಭಾವದಲ್ಲಿ ಅನ್ಯೋನ್ಯತೆ ಇದೆ. ಅವು ಮಾಸ್ತಿವ್ಯಕ್ತಿತ್ವದ ಚತುರಸ್ರತೆಯನ್ನು ಸ್ಥಾಪಿಸುತ್ತವೆ. ಈಗಾಗಲೇ ಮೊದಲ ಘಟಕದ ಕೆಲವು ಪಂಕ್ತಿಗಳನ್ನು ಉಲ್ಲೇಖಿಸಿದೆ. ಅದು ಮಾಸ್ತಿ ಅಂತರಂಗಕ್ಕೆ ಪ್ರವೇಶ ದ್ವಾರ. ಎರಡು ಮತ್ತು ಮೂರನೆಯ ಘಟಕದಲ್ಲಿ ಕಾಣುವುದು ಮಾಸ್ತಿಯವರ ದಿನಚರ್ಯೆಯ ವಿವರ. ಅಲ್ಲಿರುವುದೆಲ್ಲ ಅವರ ಬಾಳ ಹೊತ್ತಗೆಯ ಪದಪಂಕ್ತಿಗಳೇ ಆಗಿವೆ. ಆ ಪಂಕ್ತಿಗಳ ಎಡೆಯಲ್ಲೇ ಅವರ ಬದುಕಿನ ಎಳೆಗಳೂ ಕಾಣಿಸಿಕೊಳ್ಳುತ್ತವೆ. ಆಧುನಿಕತೆಯ ಅಬ್ಬರ ಆಡಂಬರದಲ್ಲಿ ವರ್ತಮಾನದ ಉದ್ವೇಗ ಉದ್ರೇಕಗಳಲ್ಲಿ ತನ್ನ ದಾರಿಯನ್ನು ಹುಡುಕಿ ನಡೆಯುವ ಮಾಸ್ತಿ –

ಕಾಲ ಕುಗ್ಗಿಸಿದೊಡಲು ಕಾಲನೆಳೆಯುತ ಬರಲು
ವೃದ್ಧರನು ಕಂಡು ಅಯ್ಯೋಎಂದಿದ್ದೇನೆ;
ಎನ್ನುತ್ತಿರುವಂತೆಯೆ ಕೈಯ ಮುಗಿದಿದ್ದೇನೆ

ಇಲ್ಲಿ ಮತ್ತೆ ಮಾಸ್ತಿಯವರ ಹಿರಿತನವನ್ನು ನಿಸಾರ್ ಓದುಗನಿಗೆ ಮನಗಾಣಿಸುತ್ತಾರೆ: ಏಕಾಂತವಿರಲಿ, ಲೋಕಾಂತವಿರಲಿ, ಎಲ್ಲೆಡೆಗಳಲ್ಲೂ ಏಕಪ್ರಕಾರವಾಗಿರುವುದೇ ನಿಜವಾದ ದೊಡ್ಡತನ. ಮಾಸ್ತಿ ಅಂತಹವರು, ಬರವಣಿಗೆಯ ಬಾಹುಳ್ಯದಿಂದಲೇ ಅಲ್ಲ, ಬದುಕಿನ ಸಮೃದ್ಧಿಯಿಂದಲೂ ಅವರು ಕನ್ನಡದ ಆಸ್ತಿ.

ಮಾಸ್ತಿಯವರ ಬಹುಕಾಲದ, ಏಕಮಾತ್ರ ಎನ್ನಬಹುದಾದ ಹವ್ಯಾಸ, ಆಕರ್ಷಣೆ ಎಂದರೆ ಗಾಂಧೀ ಬಜಾರಿನ ಇಸ್ಪೀಟು ಕ್ಲಬ್. ಮಾಸ್ತಿ  ಇಸ್ಪಿಟು ಎಲೆಗಳನ್ನು ತೆರೆದು, ಏಣಿಸಿ, ಗುಣಿಸಿ ಆಡುವುದರಲ್ಲೇ ನಿಸಾರ್ ಅಹಮ್ಮದ್ ಅವರ ರೀತಿ ನೀತಿ ಶುಚಿ ರುಚಿ ದೃಷ್ಟಿ ಧೋರಣೆಗಳನ್ನು ಗುರುತಿಸುತ್ತಾರೆ :

ಕ್ಲಬ್ಬಿನಲಿ ನಿಶ್ಚಿಂತೆಯಾಗಿ ಎಲೆ ಕಲಸುವುದು
ಇಪ್ಪತ್ತೆಂಟನಾಡುವುದುನಡುವೆ ಅದೂ ಇದೂ
ಇಪ್ಪತ್ತೆಂಟನಾಡುವುದು
…………………………..

ಕವಿ ರತ್ನಾಕರ ವರ್ಣಿ  ತನ್ನ ‘ಭರತೇಶ ವೈಭವ’ದ ಒಂದು ಸಂಧಿಯಲ್ಲಿ ಆಸ್ಥಾನದಲ್ಲಿ ಸಿಂಹಾಸನಾರೂಢನಾಗಿರುವ ಭರತ ಚಕ್ರೇಶನ ಚರ್ಯೆಯನ್ನು, “ಗಾನ ಮದ್ದಳೆ ತಾಳ ಲಯಕೆ ನರ್ತಿಪ ಮಂದಯಾನೆಗೆ ಶಿರದ ಕುಂಭದೊಳು ಧ್ಯಾನ ವಿಷ್ಪಂತೆ” ಎಂಬ ಹಾಗೆ ಚಿತ್ರಿಸುತ್ತಾನೆ. ಇಸ್ಪೀಟಾಟದ ಮಾಸ್ತಿಯವರೂ ಹಾಗೆಯೇ – ಕೈಯಲ್ಲಿ ಹತ್ತಾರು ಇಸ್ಪೀಟು ಎಲೆ, ಬಾಯಲ್ಲಿ ನೂರಾರು ಮಾತು, ತಲೆಯಲ್ಲಿ ಬದಕಿನ ಬಗೆಗೋ, ಬರಹದ ಕುರಿತೋ ಸಾವಿರಾರು ಚಿಂತನೆ ಆದರೆ ಎಲ್ಲದರಲ್ಲೂ ಒಂದು ತೂಕ, ಒಂದು ಹದ – ಅದು ಮಾಸ್ತಿ. ಆ ಮಾಸ್ತಿಯನನು ನಿಸಾರ್ ತುಂಬ ಚೆನ್ನಾಗಿ ಗ್ರಹಿಸಿದ್ದಾರೆ. ಹಾಗೆ ಗ್ರಹಿಸಿ ಹೀಗೆ ಹೇಳುತ್ತಾರೆ –

ಇನ್ನವರ ಜೀವನ? ಅದು ಕೂಡ ಹೀಗೆಯೇಎಲ್ಲ ಖುಲ್ಲ
ಖುಷಿಗಷ್ಟೆ ನಫೆಗಲ್ಲ,

ಇದು ಇನ್ನೊಂದು ಚಿತ್ರ. ನೀರಿನಲ್ಲಿದ್ದೂ ನೀರಂಟಿಸಿಕೊಳ್ಳದಿರುವ ಕಮಲ ಪುಷ್ಪದ ನಿರ್ಲೀಪ್ತತೆ; My life my masage ಎಂಬ ಗಾಂಧೀಜಿಯ ಮುಕ್ತತೆ. ಎಲ್ಲ ಖುಲ್ಲ, ಮುಚ್ಚು ಮರೆಯಿಲ್ಲ. ವಾಕ್ಯಕ್ತಿಯೆಂಬುದು ಒಂದು ಅದ್ಭುತ, ವರ್ಣ, ಪದ, ವಾಕ್ಯ, ತಾವಾಗಿ ಏನೂ ಹೇಳುವುದಿಲ್ಲ ಆದರೆ ಸಮರ್ಥ ಲೇಖಕ ಅವುಗಳಿಂದ ಎಂತೆಂತಹ ಅರ್ಥಗಳನ್ನು ಹಿಂಜಿ ಹಿಂಜಿ ಹೊರಡಿಸುತ್ತಾನೆ! ಕೇವಲ ಒಂದೂವರೆ ಪಂಕ್ತಿಯಲ್ಲಿ ನಿಸಾರ್ ಅಹಮ್ಮದ್ ಮಾಸ್ತಿಯವರ ಒಳ ಬದುಕಿಗೆ ಎಷ್ಟು ಸೊಗಸಾಗಿ ಇಣುಕು ನೋಟ ಹಾಯಿಸಿದ್ದಾರೆ!

ಮುಂದಿನದು ಇನ್ನಷ್ಟು ಹೃದ್ಯವಾದ ಚಿತ್ರ – ಆಟದ ಉತ್ಸಾಹ ಹೆಚ್ಚಿ. ಆವೇಶ ನೆತ್ತಿಗೇರಿದಾಗ ಕೂಗು ಗದ್ದಲ. (ಒಮ್ಮೊಮ್ಮೆ ಜಗಳವೂ ಆಗುವುದುಂಟು!) ಸಹಜ ತಾನೇ? ಆದರೆ ನಮ್ಮ ಮಾಸ್ತಿಯವರದು ಬೇರೆಯೇ ರೀತಿ:

ಕೂಗು ಹುಸಿಮುನಿಸುಗಳ ನಡುವೆ ತುಟಿಗಳ ಮೊಗ್ಗೆ
ಬಿರಿಸಿ ನಕ್ಕಾಗಿವರು ಥೇಟ್ ಜುಲೈ ತಿಂಗಳಿನ ಶಿವಮೊಗ್ಗೆ
ಚಣಕಷ್ಟು ಚಳಿನೂಲು, ಒಂದಿಷ್ಟು ಹೂಬಿಸಿಲು,
ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು

ಇಲ್ಲಿಯ ಮಾತುಗಳೆಲ್ಲ ತುಂಬ ಮುಚ್ಚಟೆಯಾಗಿ, ಮನೆಯಲ್ಲೆಲ್ಲ ಓಡಾಡುವ ಹಸುಗೂಸಿನಂತೆ, ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತವೆ. ಆಲಿವರ್ ಗೋಲ್ಡ್ ಸ್ಮಿಥ್ ಕವಿ ತನ್ನ ‘Deserted Village’ನಲ್ಲಿ ಒಬ್ಬ ಉಪದೇಶಿಯನ್ನು ವರ್ಣಿಸುತ್ತ, ಆತನನ್ನು ಮಿಂಚುಗುಡುಗು, ಗಾಳಿ, ಮಳೆ, ಮಂಜು ಮೋಡಗಳನ್ನೆಲ್ಲ ಮೀರಿ ಎತ್ತರೆತ್ತರಕ್ಕೆ ತಲೆ ಬಾಚಿರುವ ಪರ್ವತ ಶಿಖರಕ್ಕೆ (As some tall cliff lifts its aweful form…) ಹೋಲಿಸುತ್ತಾನೆ. ನಮ್ಮ ಮಾಸ್ತಿಯವರೂ ಹಾಗೆಯೇ ಜನಸಾಮಾನ್ಯರ ನಡುವಿನಲ್ಲೇ ಇದ್ದಾರೆ, ಸರಳಾತಿ ಸರಳವಾಗಿ ತೋರುತ್ತಾರೆ. ಆದರೆ ತುಂಬ ಎತ್ತರದ ಮನುಷ್ಯ! ನಿಸಾರ್ ಅಹಮ್ಮದ್ ಅದನ್ನು ಗುರುತಿಸಿದ್ದಾರೆ.

ಕವಿತೆಯ ನಾಲ್ಕೆಯ ಗಟಕ ಉಪಸಂಹರಣ: ಆಟ ಮುಗಿಸಿದ ಮಾಸ್ತಿ ಮತ್ತೆ ಮನೆಗೆ ಹೊರಡುತ್ತಾರೆ. “ಕೊಡೆ ತೆರೆದು ಏಕಾಕಿ ಮನೆಯತ್ತ….” (ನಾವೆಲ್ಲರೂ ಒಂದಲ್ಲೊಂದು ದಿನ, ಬಾಳ ಬಯಲಿನ ಆಟ ಮುಗಿಸಿ, ಎಂದಿಗೂ ಹಿಂದಿರುಗಿ ಬರಲಾಗದ ಮನೆಯತ್ತ ಒಂಟಿಯಾಗಿಯೇ ಹೊರಡಬೇಕಾಗುತ್ತದೆಲ್ಲ. ‘ಏಕಾಕಿ ಮನೆಯತ್ತ ನಡೆಯುವರು’ ಎಂಬುದರಲ್ಲಿರುವ ಅರ್ಧಧ್ವನಿಯನ್ನು ಹಾಗೆಯೇ ಗ್ರಹಿಸಬೇಕು.) ಮನೆಗೆ ಹೊರಟ ಮಾಸ್ತಿ ಮಬ್ಬುಗತ್ತಲಲ್ಲಿ ನೋಡಬಾರದ್ದು, ಕೇಳಬಾರದ್ದು ಎಲ್ಲವನ್ನೂ ನೋಡುತ್ತ, ಕೇಳುತ್ತ

ಸಾಗುವರು ಸದ್ದಿರದ ಚಂದ್ರನಂತೆ
ಗಂಭೀರವಾಗಿ
ಕರ್ತವ್ಯದೆಚ್ಚರಿನ ಸನ್ನೆಯಂತೆ
……………………………..
ನೋಡುತ್ತಲಿದ್ದಂತೆ
…………………………….
ಮರೆಯಾಗುವರು ಮಾಸ್ತಿ
ಸಂದ ಜೀವನದೊಂದು ರೀತಿಯಂತೆ,
ಸರಳಸದಭಿರುಚಿಯ ಖ್ಯಾತಿಯಂತೆ

‘ಮರೆಯಾಗುವವರು ಮಾಸ್ತಿ’ ಎಂದಿದ್ದಾರೆ ನಿಸಾರ್ ೧೯೮೬ರಲ್ಲಿ ಮಾಸ್ತಿ ನಿಜಾರ್ಥದಲ್ಲೂ ಮರೆಯಾಗಿಯೇ ಬಿಟ್ಟರು! ಸಂದ ಜೀವನದೊಂದು ರೀತಿಯೂ ಸರಲ ಸದಭಿರುಚಿಯ ಖ್ಯಾತಿಯೂ ಹೇಗಿರುತ್ತದೆ ಎಂದು ಕೇಳಿದರೆ ಎರಡೇ ಅಕ್ಷರಗಳ ಒಂದೇ ಉತ್ತರ -‘ಮಾಸ್ತಿ’!.

ಪ್ರೊ. ನಿಸಾರ್ ಅಹಮ್ಮದರ ಈ ಕವಿತೆ  ಮಾಸ್ತಿ ಎಂಬ ವ್ಯಕ್ತಿ ವಿಶೇಷದ ಜೀವನದ ಸಮ್ಯಗ್ದರ್ಶನವನ್ನು ಮಾಡಿಸುತ್ತದೆ ಎಂಬ ಕಾರಣ ಮಾತ್ರಕ್ಕಾಗಿಯೇ ಅಲ್ಲ, ಅದೊಂದು ಸಾರ್ಥಕ ಕಾವ್ಯರಹಸ್ಯವನ್ನು ಗರ್ಭೀಕರಿಸಿಕೊಂಡಿದೆ ಎಂಬ ಕಾರಣಕ್ಕಾಗಿಯೂ ಪಠನೀಯವೂ ಸ್ಮರಣೀಯವೂ ಆಗಿದೆ. ಯಾವುದೋ ಒಂದು ಕಾವ್ಯ ಖಂಡದ, ಇನ್ನು ಯಾವುದೋ ಒಂದು ಗದ್ಯ ಕಥನದ, ಮತ್ತಾವುದೋ ಒಂದು ನಾಟಕ ಪ್ರಭೇದದ ಒಂದು ಪದ, ಒಂದು ಪಂಕ್ತಿ ಅಥವಾ ಒಂದು ವಾಕ್ಯವೃಂದವನ್ನು ಯಾವಾಗ ಜನ ನೆನೆಯುತ್ತಾರೋ ಯುಕ್ತಸಂದರ್ಭಗಳಲ್ಲಿ ಉದ್ಧರಿಸುತ್ತಾರೋ ಅಂತಹ ಕೃತಿಗಳೇ ಸಾರ್ಥಕ ಮತ್ತು ಚಿರಕಾಲಿಕ. ಈ ಮಾತು ನಿಸಾರರ ‘ಮಾಸ್ತಿ’ಗೂ ಸಲ್ಲುತ್ತದೆ. ಕೃತಿಗಳ ಆಕೃತಿ ಮುಖ್ಯವಲ್ಲ; ಅಂತಸ್ಪತ್ವವೇ ಪ್ರಧಾನ. ‘ಮಾಸ್ತಿ’ಯಲ್ಲಿ ಅಂತಹ ಸತ್ವವಿದೆ.

()

ಕಾವ್ಯ ಅಥವಾ ಸಾಹಿತ್ಯೊದ್ಯಾನಗಳಲ್ಲಿ ಮಲ್ಲಿಗೆ ಮಂದಾರಗಳನ್ನೋ ಕಲ್ಪತರು ಶ್ರಿಗಂಧಗಳನ್ನೋ ಬೆಳೆಯಿಸಿದೇ ಇದ್ದರೂ ವಾಙ್ಮಯದ ಅನ್ಯಕ್ಷೇತ್ರಗಳಲ್ಲಿ ಅಥವಾ ಜೀವನದ ಇತರ ರಂಗಗಳಲ್ಲಿ ಕೃಷಿ ಮಾಡಿ ಜೀವನಕ್ಕೆ ಸಾರ್ಥಕತೆಯನ್ನೂ – ಸೌಂದರ್ಯವನ್ನೂ ತಂದುಕೊಂಡವರನ್ನು, ಸಮಾಜಕ್ಕಾಗಿ ಒಂದಲ್ಲೊಂದು ಬಗೆಯ ಕಲ್ಯಾಣ ಕಾರ್ಯ ಮಾಡಿದವರನ್ನು, ಹಾಗೆಯೇ ಸರಳ ಸುಂದರವಾಗಿ ನೀತಿನಿಷ್ಠವಾಗಿ ಜೀವಿಸಿದವರನ್ನು ನಿಸಾರ್ ಅಹಮ್ಮದ್ ಮೆಚ್ಚಿ ಬರೆದಿದ್ದಾರೆ. ಅದಕ್ಕೆ ‘ಕೆಂಪು ತೋಟ ಮತ್ತು ಡಾ.ಎಚ್ಚನ್’ ಹಾಗೂ ‘ಭೀಮಪ್ಪ ಮಾಸ್ತರರು’ ಎರಡು ಉದಾಹರಣೆ. ಒಬ್ಬರು ನಾಡಿಗೆಲ್ಲ ಸುಪರಿಚಿತರಾದವರು; ಮತ್ತೊಬ್ಬರು ಅಪರಿಚಿತರು, ನಿಸಾರರ ಗೊತ್ತಿನವರು. ಆದರೆ ಇಬ್ಬರಲ್ಲೂ ಇದ್ದ ಶ್ರೇಷ್ಠ ಮನುಷ್ಯ ಗುಣಗಳ ಎಳೆಗಳನ್ನು ಹಿಡಿದು ಎರಡು ಸುಂದರವಾದ ಕವಿತೆಗಳನ್ನು ನಿಸಾರ್ ನೆಯ್ದಿದ್ದಾರೆ :

ಮಾನಾಭಿಮಾನಗಳ ಪ್ರಶ್ನೆಯೆದುರಾದಾಗ
ಮಾಡಿಕೊಂಡದ್ದಿಲ್ಲ ಬಿಲ್ಕುಲ್ರಾಜಿ,
ಹಲವು ಪೊಗದಸ್ತು ಹುದ್ದೆಗಳ ಮಾಜಿ
ಹಾಗೆಯೇ, ಹಿರಿಯರೊ ಭೇದವೆಣಿಸದೆ,
ಅಂತಸ್ತು ಕುಲ ಆಚಾರ ಕಿಂಚಿತ್ತು ಗಣಿಸದೆ
ಕಂಡಿತೇ ಅವರಲ್ಲಿ ಕನದಷ್ಟು ಗುಣ,
ಹೊಗಳಿಕೆಯ ಹತ್ತು ಮಣ
ಹೊರಿಸಿದಲ್ಲದೆ ತಣಿವ ಕುಳವಲ್ಲ ಪರಹಿತೈಷಿ
ಅದಕಿಲ್ಲವೇ ನಾನು ಜ್ವಲಂತ ಸಾಕ್ಷಿ?

ಇದು ಎಚ್. ನರಸಿಂಹಯ್ಯನವರ ಸರಳ ಸಹಜ ಸ್ವಭಾವಚಿತ್ರಣ. ಅಷ್ಟು ಸರಳವಾಗಿದ್ದರೂ,

ಜಂಗುಳಿಯಲ್ಲಿ ಗುರುತಿಸದಷ್ಟು ಸರಳ ಖಾದಿ ವ್ರತಸ್ಥ ಎಚ್ಚನ್
ಮತ್ತವರ ಬದುಕು ಸದಾ ಕಾಲಕ್ಕೂ ದೊಡ್ಡ ಕ್ವೆಷ್ಚನ್

ಕವಿಗೇ ಕಾಣದಿದ್ದ ಉತ್ತರ ವಾಚಕನಿಗೆ ಸಿಗುವುದಾದರೂ ಎಲ್ಲಿ?.

“ಬಳ್ಳಿಗಾವೆಯ ನಿಸ್ಸಹಾಯ ಇತಿಹಾಸವನು ಕಾಲ ದುಶ್ಯಾಸನನ ಹಿಡಿಯಿಂದ ನಸು ಬಿಡಿಸಿ ಕಂಬನಿಯ ತೊಡೆದಿದ್ದ ಭೀಮಪ್ಪ ಮಾಸ್ತರರು” (ಮಹಾಭಾರತವನ್ನು ನೆನಪಿಗೆ ತರುವ ಈ ರೂಪಕ ಮನೋಜ್ಞವೂ ಮನನೀಯವೂ ಆದದ್ದು, ಬಳ್ಳಿಗಾವೆಯ ಇತಿಹಾಸವೇ. ದ್ರೌಪದಿ; ನಿರ್ದಯ ಕಾಲವೇ ದುಶ್ಯಾಸನ; ಕವಿಮಿತ್ರ ಭೀಮಪ್ಪ ಮಾಸ್ತರರೇ ಮಹಾಭಾರತದ ಭೀಮ!) ಅನಾಯಾಸವಾಗಿ ಮರಣ ಹೊಂದಿದಾಗ ಕವಿ ಕರೆಯುವ ಕಂಬನಿ ಇದು:

ಕಲಿಕೆ ಕದಡದ ನಿಮ್ಮ ಅಕುಶಲ ಹಳ್ಳಿತನ,
ನೆಂಟಸ್ತಿಕೆಯ ಅಡೆಯಲ್ಲಿ ಬಗೆ ಪಡೆದ ಹಣ್ಣುತನ
ಸಜ್ಜನಿಕೆಶಬ್ದಕ್ಕೆ ರೂಢಿವಾಕ್ಯಕ್ಕಿಂತ
ಮಿಗಿಲರ್ಥ ದಕ್ಕಿಸಿದ ಬಾಳ ದಾರಿ
ಇವನ ನೆನೆದಾಗ ಕಣ್ಣಾಗುವುವು ಜರತಾರಿ

ಇಂಗ್ಲಿಷಿನಲ್ಲಿ ‘Simple Strokes of Sublimity’ ಎಂಬ ಪ್ರಯೋಗವಿದೆ. ಭವ್ಯತೆಗೆ ಎತ್ತರ ತೋರ ತೂಕಗಳೇ ಅಳತೆಯಾಗಬೇಕಿಲ್ಲ. ಸಣ್ಣದರಲ್ಲು ದೊಡ್ಡತನ ಇರಬಹುದು. ವನಕುಸುಮ ನಾಡವರ ಕಣ್ಣಿಗೆ ಬಿದ್ದು ಹೆಸರಾಗದಿದ್ದರೂ ಅದರ ಸೊಂಪು ಕಂಪುಗಳಿಗೇನೂ ಕೊರತೆಯಿಲ್ಲ. ಭೀಮಪ್ಪ ಮಾಸ್ತರಂತಹವರ ಹೆಸರು ದಾಖಲೆಗಳ ಪುಟ ಸೇರದಿರಬಹುದು. ಆದರೇನಂತೆ?

ಬಳ್ಳಿಗಾವೆಯ ಸುತ್ತ ಹತ್ತು ಫಾಸಲೆಗೆಲ್ಲ
ಪರಿಮಳಿಸುತಿದೆ ಇನ್ನೂನು ನಿಮ್ಮ ಹೆಸರು

ಗುರುದೇವ ಠಾಕೂರರು ಬಣ್ಣಿಸಿದ ‘ಮಣ್ಣ ಹಣತೆ’ಯಂತಹ ಬದುಕು ಭೀಮಪ್ಪ ಮಾಸ್ತರರದು.

ಈ ವರೆಗೆ ಉಲ್ಲೇಖಿಸಿದ, ಅವಲೋಕಿಸಿದ ನಿಸಾರ್ ಅಹಮ್ಮದರ ವ್ಯಕ್ತಿ ವರ್ಣನೆ. ಅಥವ ಕಾವ್ಯ ಸ್ತವನಗಳಿಂದ ಒಂದು ಮಾತು ಸ್ಪಷ್ಟವಾಗುತ್ತದೆ: ಕಣ್ಣ ಮುಂದಿಲ್ಲದವರ ಕುರಿತು ಮಾತಾಡುವಾಗ ಅಥವಾ ಬರೆಯುವಾಗ ನಾವು ತೋರುವ ಧಾರಾಳತನ ಕಣ್ಣು ಮುಂದಿರುವವರ ಮಾತು ಬಂದಾಗ ಒಮ್ಮೊಮ್ಮೆ ಕಡಮೆಯಾಗುತ್ತದೆ. ಯಾವುದೋ ಲೋಪ, ದೋಷ ಅಥವಾ ನೂನ್ಯತೆಯನ್ನು ಎತ್ತಿ, ಇರುವುದಕ್ಕಿಂತ ಹೆಚ್ಚಾಗಿ ಹಿಗ್ಗಿಸಿ ಹೇಳುವುದರಲ್ಲೇ ನೆಮ್ಮದಿ ಕಾಣುವವರೂ ಇರುತ್ತಾರೆ. ಮೆಚ್ಚು ಮಾತು ಹೇಳುವುದಕ್ಕೆ ಹೊರಟು ಅಲ್ಲಲ್ಲಿ ಚುಚ್ಚುವುದೂ ಉಂಟು : ವ್ಯಾಜಸ್ತುತಿ ಅಥವಾ Left haaded compliment ಎಂಬ ಹಾಗೆ. ಅತಿಪ್ರಶಂಸೆಯತ್ತ ಓಲದಂತೆ ಪೂರ್ವಗ್ರಹವೆಂಬ ಭಾವಕ್ಕೆ ಎಡೆಯಾಗದಂತೆ ವಸ್ತುಸ್ಥಿತಿಯನ್ನು ಹೃದ್ಯವಾಗಿ ಚಿತ್ರಿಸುವುದೇ ಜಾಣ್ಮೆ, ಕಲೆಗಾರಿಕೆ. ಲೇಖಕದ ಆರಂಭದಲ್ಲೇ ಹೇಳಿದಂತೆ ಪ್ರೊ. ನಿಸಾರ್ ಅಹಮ್ಮದರು ತಮಗಿಂತ ಹಿರಿಯರಿರಲಿ, ಕಿರಿಯರಿರಲಿ, ಅಥವಾ ತಮ್ಮದೇ ಹರೆಯದವದಿರಲಿ ಅವರೆಲ್ಲರನ್ನೂ ತೂಕ ತಪ್ಪದಂತೆ ಹದವಾಗಿ, ಹದುಳವಾಗಿ ಚಿತ್ರಿಸಿದ್ದಾರೆಂಬುದನ್ನು ಈವರೆಗೆ ಉದ್ಧರಿಸಿದ ಕವಿತೆಗಳಿಂದ ಸಹೃದಯರು ಮನಗಾಣಬಹುದು “ವಚನೇಕಾ ದರಿದ್ರತಾ” ಎಂಬುದು ಒಂದು ಸಂಸ್ಕೃತ ಸೂಕ್ತಿ. ಒಂದು ಒಳ್ಳೆಯ ಮಾತಿಗೂ ಬರವೇ? ಇನ್ನೊಬ್ಬರನ್ನು ಕುರಿತು ನಾವು ಆಡುವ ಒಳ್ನುಡಿ ನಮ್ಮ ಅಂತರಂಗಕ್ಕೆ ಹಿಡಿಯುವ ಕನ್ನಡಿಯೂ ಆಗುತ್ತದೆ. ಅಂಗೈಯಲ್ಲಿ ಹೂದಂರಡೆಯನ್ನು ಮಿದುವಾಗಿ ಹಿಡಿದಾಗ ಅದರ ಸೊಬಗು ಎದ್ದು ಕಾಣುತ್ತದೆ; ಅದರೊಂದಿಗೆ ಅದು ಹಿಡಿದ ಕೈಯನ್ನೂ ಕಮ್ಮಿಸುತ್ತದೆ.