ಇಂದಿಗೆ ಸುಮಾರು ಐದೂವರೆ ದಶಕಗಳ ಹಿಂದೆ, ‘ಸುವರ್ಣ ಕರ್ನಾಟಕ’ದ ಹೊಂಗನಸು ಕನ್ನಡಿಗರ ಕಣ್ಣಲ್ಲಿ ಇನ್ನೂ ಕುಣಿಕುಣಿಯುತ್ತ ಇದ್ದ ಕಾಲದಲ್ಲಿ, ನಮ್ಮ ‘ನಯದ ಪತಾಕೆ’ ವಿ.ಸೀಯವರು ‘ದ್ರಾಕ್ಷಿ-ದಾಳಿಂಬೆ’ (೧೯೪೮) ಎಂಬ ಕವನ ಸಂಗ್ರಹವನ್ನು ಪ್ರಕಟಿಸಿದರು. ಅದರಲ್ಲಿ ಕನ್ನಡ ನಾಡನ್ನು ಚಿತ್ರಿಸುವ ಒಂದು ಕವಿತೆಯಿದೆ. ಆ ಕವಿತೆಯಲ್ಲಿ ನಾಡಿನ ಸಿರಿತನವನ್ನೂ ನಾಡವರ ಹಿರಿತನವನ್ನೂ ವಿ.ಸೀ ಹೆಮ್ಮೆಯಿಂದ ಎದೆಯುಬ್ಬಿಸಿ ಬಣ್ಣಿಸಿದ ಪರಿ ಹೀಗಿದೆ :

ಕಂಡಲ್ಲಿ ಗುಣಕೆ ಕೈಮುಗಿದು ಕೊಂಡಾಡಿ ಕರೆವ,
ಎತ್ತಿ ಮಡಿಲಲಿ ತೂಗಿ ಜನಕೆಲ್ಲ ತೋರಿ ತಣಿವ,
ಹಾಲ್ಬೆಣ್ಣೆ ಹೆಜ್ಜೇನು ಕೆನೆ ಮೊಸರನೂಡಿ
ಒಳ್ಪನುಪಚರಿಸಿ ಉಪಚರಿಸಿ ಮಣಿವ…..
ಧನ್ಯದಾನದ ನೆಲೆಯು ನಮ್ಮ ಹೊನ್ನಾಡು……”

ಈ ಗುಣಗಣ ಹಿಂದೆ ಮಾತ್ರವಲ್ಲ, ಈಗಲೂ ಕನ್ನಡಿಗರಲ್ಲಿ ಹೆಚ್ಚು ಕಮ್ಮಿ ಇದ್ದೇ ಇದೆ. ಸೊಬಗು ಎಲ್ಲಿಯೇ ಇರಲಿ ಅದನ್ನು ಕಣ್ತೆರೆದು ನೋಡಿ ಮೆಚ್ಚುವ, ಯಾರಲ್ಲಿ ಒಳಿತನ್ನು ನೋಡಿದರೂ ಅದನ್ನು ಎದೆದುಂಬಿಸಿ ತಣಿಯುವ, ಹಾಗೆ ಮೆಚ್ಚಿದ್ದನ್ನೂ ತಣಿದದ್ದನ್ನೂ ಬಾಯ್ತುಂಬ ಬಣ್ಣಿಸುವ ಕನ್ನಡಿಗರ ಗುಣಗ್ರಾಹಿತ್ವ ಸರ್ವವಿದಿತ. ಅದುದರಿಂದಲೇ ಹತ್ತಿರದ, ನೆರೆವ, ದೂರದ ಹತ್ತೂರುಗಳಿಂದ ಜನ ಗುಂಪು ಗುಂಪಾಗಿ ಇಲ್ಲಿಗೆ ಬಂದು ಗಟ್ಟಿಯಾಗಿ ನೆಲೆಯೂರಿರುವುದೂ ಅಷ್ಟೇ ನಿಜ. ಆ ಮಾತು ಹಾಗಿರಲಿ, ಕನ್ನಡಿಗರು ಹೊರಗಿನ ಚೆಲುವನ್ನು ಮಾತ್ರ ಮೆಚ್ಚುವವರಲ್ಲ, ಒಳಗಿನ ಒಳಿತು ಒಳ್ಪುಗಳಿಗೂ ಕಣ್ಣು ಕಿವಿಗಳನ್ನೂ ಎದೆಯ ಬಾಗಿಲನ್ನೂ ಸದಾ ತೆರೆದೇ ಇರಿಸಿದವರು. ಕನ್ನಡಿಗರು ಎಂದಾಗ ಕವಿ ಸಾಹಿತಿಗಳೂ ಅದರಲ್ಲಿ ಅಂತರ್ಗತ ಎಂಬುದು ಆಧ್ಯಾಹಾರ. ನಮ್ಮ ಸತ್ಕರ್ವಿಗಳೆಲ್ಲ ಗುಣಗ್ರಾಹಿಗಳು ಮಾತ್ರವಲ್ಲ ಗುಣವಾಗ್ಮಿಗಳೂ ಆಗಿದ್ದಾರೆ. ಅದನ್ನೇ ವಿ.ಸೀಯವರು ‘ಎತ್ತಿ ಮಡಿಲಲಿ ತೂಗಿ ತೋರಿ ತಣಿವ’ ಎಂದು ಒತ್ತಿ ಹೇಳಿದ್ದು. ಹೆರವರಲ್ಲಿರುವ ಹಿರಿತನವನ್ನು ಒಳಗೊಳಗೇ ಮೆಚ್ಚುವುದೊಂದೇ ಅಲ್ಲ, ಅದನ್ನು ಹತ್ತು ಜನರ ಮುಂದೆ ಬಾಯ್ತುಂಬ ಬಣ್ಣಿಸಲೂ ಬೇಕು. ನಮ್ಮ ಶ್ರೇಷ್ಠಾತಿಶ್ರೇಷ್ಠ ಕವಿಗಳಲ್ಲಿ ಈ ಸದ್ಗುಣಾಂಶ ಸಾಂದ್ರವಾಗಿಯೇ ಗೋಚರಿಸುತ್ತಿರುವುದು ನಾಡಿನ, ನುಡಿಯ ಪುಣ್ಯ ವಿಶೇಷವೇ ಸರಿ. ಶತಮಾನಗಳ ಹಿಂದೆ ಕೇಶಿರಾಜ ತನ್ನ ‘ಶಬ್ದ ಮಣಿದರ್ಪಣ’ದ ‘ನಾಮಪ್ರಕರಣ’ದಲ್ಲಿ ಚತುರ್ಥೀ ವಿಭಕ್ತಿಗೆ ಉದಾಹರಣೆಯಾಗಿ ‘ಕವಿಗೆ ಕವಿ ಮುನಿವನ್’ ಎಂಬ ಪ್ರಯೋಗ ಮಾಡಿದ್ದಿದೆ. ತತ್ಕಾಲೀನ ಅಥವಾ ಪೂರ್ವಕಾಲೀನ ಕವಿಗಳಲ್ಲಿ ಕೆಲವರು ಅಹಂಕಾರದಿಂದಲೋ ಅಥವಾ ಪೂರ್ವಗ್ರಹದಿಂದಲೋ ತಮಗಾಗದ ಕೆಲವು ಕವಿ-ಕಾವ್ಯಗಳನ್ನು ನಿಂದಿಸಿ ನಿರಾಕರಿಸುವುದನ್ನೂ ‘ಕುಕವಿ ನಿಂದೆ’ಯೆಂಬದಾಗಿ ಕೆಲವು ಪದ್ಯಗಳನ್ನೇ ಬರೆಯುತ್ತಿದ್ದದ್ದನ್ನೂ ಗಮನಿಸಿ ಕವಿಯೇ ಕೇಶಿರಾಜ ‘ಕವಿಗೆ ಕವಿ….’ ಎಂದು ಉದ್ಗರಿಸಿರಬೇಕು. ಆದರೆ ಕನ್ನಡದ ಆದಿಕವಿ ಪಂಪನೇ ‘ವ್ಯಾಸ ಮುನಿಂದ್ರ ರುಂದ್ರ ವಚನಾಮೃತವಾರ್ಧೀಯನೀಸುವೆಂ ಕವಿ ವ್ಯಾಸನೆನೆಂಬ ಗರ್ವಮೆನಗಿಲ್ಲ’ ಎಂದು ಉದ್ಘೋಷಿಸುವಲ್ಲಿ ಅವನ ನಿರಹಂಕಾರಿತೆ ಮಾತ್ರವಲ್ಲ, ಪೂರ್ವಸೂರಿ ವ್ಯಾಸಮಹರ್ಷಿಗಳ ಬಗೆಗೆ ಅವನಲ್ಲಿದ್ದ ಆದರ ಭಾವವೂ ಸುವ್ಯಕ್ತವಾಗಿದೆ. ಹಿಂದಿನ ಅಥವಾ ಇಂದಿನ ಕನ್ನಡ ಕಾವ್ಯರಾಶಿಯನ್ನೆಲ್ಲ ಪಿಕ್ಕಿ ನೋಡಿದರೆ ಕೇಶಿರಾಜನ ಉದ್ಗಾರವನ್ನು ಸಮರ್ಥಿಸುವ ಉದಾಹರಣೆಗಳು ಅಲ್ಲೊಂದು ಇಲ್ಲೊಂದು ಸಿಕ್ಕಿಯೇ ಸಿಕ್ಕುತ್ತವೆ. ಎಂದರೆ ಕಡೆಂಗೋಡ್ಲು ಶಂಕರಭಟ್ಟರು ಹೇಳಿದಂತೆ, “ಮಾನವೀಯತೆಯ ಉತ್ತಮ ಭಾವ ಸಂಸ್ಕಾರಗಳು ಯಾರಲ್ಲಿರಬಹುದೆಂದು ಸಮಾಜವು ನಿರೀಕ್ಷಿಸುವುದೋ ಅವು ಅವರಲ್ಲಿ ಕಾಣದಿರುವುದಕ್ಕಿಂತ ಘೋರತರ ದುರ್ದೈವ ಬೇರೇನಿದೆ.?” (ಕವಿ ಸಾಹಿತಿಯಾದವನು) “ಲೋಕದ ಡೊಂಕನ್ನು ತಿದ್ದುವ ಪ್ರತಿಜ್ಞೆಕೊಟ್ಟು ತಾನೇ ಡೊಂಕಾಗುವುದು ಸಾಹಿತ್ಯ ಕರ್ಮವಲ್ಲ”. ಆದುದರಿಂದ ಕವಿ ಕಾವ್ಯ ಸಹೃದಯರ ಕಣ್ಣು ವಾಙ್ಮರಂಗದಲ್ಲಿ ಕಾಮನಬಿಲ್ಲಿನ ಚೆಲುವನ್ನು ಕಾಣಬೇಕು; ಅವರ ಮೂಗು ಕಾವ್ಯೋದಾನದಲ್ಲಿ ಕಸ್ತೂರಿಯ ಕಂಪನ್ನು ಮೂಸಬೇಕು ವಿನಾ ಕಸದ ಗುಪ್ಪೆಯನ್ನಲ್ಲ, ಕೊಳಚೆಯ ಹೊಂಡವನ್ನೂ ಅಲ್ಲ.

ಭಾರತೀಯ ವಾಙ್ಮಯದಲ್ಲಿ ಪ್ರಾಚೀನತಮವಾಗಿರುವ ಸಂಸ್ಕೃತ ಕಾವ್ಯಗಳಲ್ಲಾಗಲೀ ಅಥವಾ ಹಳಗನ್ನಡ ಕಾವ್ಯಗಳಲ್ಲಾಗಲೀ ಪ್ರತ್ಯೇಕ ಕವಿಗಳು ತಾವು ಆದರಿಸುವ, ತಮಗಿಂತ ಪೂರ್ವಿಕರಾದ ಕವಿಗಳ ನಾಮ ನಿರ್ದೇಶನವನ್ನೂ ಸ್ತವನವನ್ನೂ ಮಾಡಿದ ಉದಾಹರಣೆಗಳು ಇವೆಯಾದರೂ ಕವಿ ವಂದನವನ್ನೇ ತೃಥಕ್ಕಾಗಿ ಮಾಡಿದ ದೃಷ್ಟಾಂತಗಳು ಹೆಚ್ಚು ಇಲ್ಲ. ಅದಕ್ಕೆ ಪ್ರಮುಖಕಾರಣ ಹಿಂದಿನವರು ಬರೆದದ್ದೆಲ್ಲ ಮಹಾಕಾವ್ಯ, ಖಂಡಕಾವ್ಯಗಳನ್ನು ವಿನಾ ಈಗಿನ ಭಾವಗೀತದಂತಹ ರಚನೆಗಳನ್ನಲ್ಲ. ಆದರೆ ಇಂಗ್ಲಿಷಿನಲ್ಲಿ ಪ್ರತ್ಯೇಕ ಕವಿ ವರ್ಣನೆಗಳಿಗೇ ಮೀಸಲಾಗಿರುವ ಕವಿತೆಗಳು ಅಲ್ಲಲ್ಲಿ ಗೋಚರಿಸುತ್ತವೆ. ಶೇಕ್ಸ್‌ಪಿಯರನ್ನು ಕುರಿತು ಮಾಥ್ಯೂ ಅರ್ನಾಲ್ಡ್ ಬರೆದಿರುವ ಕವಿತೆ ಒಂದರಲ್ಲಿ ‘ Others abide our question, thoue ant free’ ಎಂದು ಮುಂತಾಗಿ ಎತ್ತಿರುವ ಉದ್ಗಾರ ಆಗಾಗ ಅಲ್ಲಲ್ಲಿ ಅನುಣಿತವಾಗುತ್ತಿರುತ್ತದೆ. ಅದೇ ರೀತಿ ವರ್ಡ್ಸ್‌ವರ್ಥ್ ಕವಿ ಶೇಕ್ಸ್‌ಪಿಯರನನ್ನು ಕುರಿತು ಬರೆದಿರುವ ಸಾನೆಟ್ ಸಹ ಪ್ರಸಿದ್ಧನಾದದ್ದು. ಹಾಗೆಯೇ ಮಹಾಕವಿ ಮಿಲ್ಟನ್ ಬಗೆಗೆ ‘Milton! thoue shouldst be living at this hour’ ಎಂದು ಮೊದಲಾಗಿ ಆತ ಮಾಡಿರುವ ಗುಣಗಾನ ಅನೇಕ ಅನ್ಯಕವಿಗಳಿಗೂ ಪ್ರೇರಕವಾದದ್ದಾಗಿದೆ. (ಉದಾ. ಎಂ. ಗೋವಿಂದ ಪೈ – “ಮಹಾತ್ಮಾ! ಇನ್ನಿನಿಸು ಕಾಲ ನೀ ಬದುಕಬೇಕಿತ್ತು”) ಅದರಂತೆ ಪಿ.ಬಿ. ಶೆಲ್ಲಿ, ಅಕಾಲ ಮೃತ್ಯುವಶನಾದ ಜಾನ್ ಕೀಟ್ಸ್‌ನನ್ನು ಕುರಿತು ‘ಎಡೋನಿಯಸ್’ ಎಂಬ ಶೋಕಗೀತವನ್ನೇ ರಚಿಸಿದ್ದಾನೆ. ಪ್ರಾಯಃ ಇಂತಹವುಗಳ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವದಿಂದಲೇ ಇರಬಹುದು. ನವೋದಯ ಕಾಲಘಟ್ಟದಿಂದ ಮುಂದೆ ಕನ್ನಡದಲ್ಲೂ ಇಂತಹ ಕವಿತೆಗಳು ಒಂದೊಂದಾಗಿ ಪ್ರಕಟವಾಗತೊಡಗಿದವು.

ನವೋದಯ ಕಾಲ ಘಟ್ಟದ ಕವಿಗಳು ಮೊದಮೊದಲು ಪೂರ್ವಕವಿಗಳನ್ನು, ಕ್ರಮೇಣ ಸಮಕಾಲೀನ ಕವಿ ಸಾಹಿತಿಗಳನ್ನು ವಂದಿಸಿ, ವರ್ಣಿಸಿದ ಉದಾಹರಣೆಗಳೂ ಕನ್ನಡದಲ್ಲಿ ವಿಪುಲವಾಗಿಯೇ ಇವೆ. ಕವಿಶಿಷ್ಯ ಪಂಜೆ ಮಂಗೇಶರಾಯರು ‘ಲಕ್ಷ್ಮೀಶ’ನನ್ನು ಶ್ಲಾಘಿಸಿ (೧೯೩೦)ರಷ್ಟು ಹಿಂದೆಯೇ ನಾಲ್ಕು ವೃತ್ತಗಳನ್ನು ಬರೆದಿದ್ದರು. ಮಂಜೇಶ್ವರ ಗೋವಿಂದ ಪೈಯವರು ೧೯೩೦ರಲ್ಲಿ ಪ್ರಕಟಿಸಿದ ‘ಗಿಳಿ ವಿಂಡು’ ಎಂಬ ಸಂಗ್ರಹದಲ್ಲಿ ‘ಮಹಾಕವಿಕುಮಾರ ವ್ಯಾಸ’ನನ್ನು ವರ್ಣಿಸಿ ಬರೆದ ಇಪ್ಪತ್ತೊಂದು ಷಟ್ಪದಿಗಳನ್ನು ಕಾಣಬಹುದು. ಡಿ.ವಿ. ಗುಂಡಪ್ಪನವರೂ ಕುಮಾರವ್ಯಾಸನನ್ನು ಕುರಿತು ಸಣ್ಣದಾದರೂ, ಪ್ರತ್ಯೇಕವಾದ ಒಂದು ಷಟ್ಪದಿ ಕಾವ್ಯವನ್ನೇ ರಚಿಸಿದ್ದಿದೆ. ಸೇಡಿಯಾಪು ಕೃಷ್ಣಭಟ್ಟರು ಕನ್ನಡ ನವೋದಯದ ಮುಂಗೋಳಿ ‘ಮುದ್ದಣ’ನನ್ನು ಕುರಿತು ೧೯೪೦ರ ಸುಮಾರಿಗೆ ಒಂದು ಕವಿತೆಯನ್ನು ಬರೆದಿದ್ದರು. ಪಂಡಿತವರ್ಮ ಮುಳಿಯ ತಿಮ್ಮಪ್ಪಯ್ಯನವರು ಯಕ್ಷಗಾನ ಕವಿ ‘ಪಾರ್ಕಿಸುಬ್ಬ’ನ ಬಗೆಗೆ ಬರೆದಿರುವ ಗ್ರಂಥ(೧೯೪೫)ದ ಕೊನೆಯಲ್ಲಿ ಪದ್ಯರೂಪದಲ್ಲಿ ಆತನಿಗೆ ‘ಎದೆಯಾರತಿ’ಯನ್ನೇ ಬೆಳಗಿದ್ದಾರೆ.

ಸೋದರ ಕನ್ನಡಿಗರಿಂದ ‘ಕನ್ನಡದ ಆಸ್ತಿ’ಯೆಂದು ಅಕ್ಕರೆಯಿಂದ ಕರೆಯಿಸಿಕೊಂಡ ಮಾಸ್ತಿಯವರು ೧೯೩೩ರಲ್ಲಿ ‘ಮಲಾರ’ವೆಂಬ ಕವನ ಸಂಗ್ರಹವನ್ನು ಪ್ರಕಟಿಸಿದರು. ಆಂಗ್ಲ ಕಾವ್ಯಬಂಧಗಳಲ್ಲಿ ‘ಸಾನೆಟ್‌’ ಎಂದು ಜನಪ್ರಿಯವಾಗಿದ್ದ ಒಂದು ಪ್ರಕಾರವನ್ನು ಮಾಸ್ತಿಯವರು ‘ಅಷ್ಟ ಷಟ್ಪದಿ’ ಎಂದು ಕರೆದು ಛಂದಸ್ಸಿನಲ್ಲಿ ಬರೆದ ಕವಿತೆಗಳೇ ಈ ಸಂಗ್ರಹದಲ್ಲಿರುವುದು ಒಂದು ವಿಶೇಷತೆಯಾದರೆ, ಪೂರ್ವಿಕರೊಂದಿಗೆ ಸಮಕಾಲೀನ ಕವಿ ಸಾಹಿತಿಗಳನ್ನೂ ಅನ್ಯ ಕ್ಷೇತ್ರಗಳ ಮಹನೀಯರನ್ನೂ ಪ್ರೀತಿಯಿಂದ ಕಂಡು ಕಂಡರಸುವ ಒಂದು ಉತ್ತಮ ಪರಂಪರೆಯನ್ನು ಮಾಸ್ತಿಯವರಿಗೂ ಅವರ ‘ಮಲಾರ’ಕ್ಕೂ ಒಂದು ವಿಶಿಷ್ಟ ಸ್ಥಾನವಿದೆ ‘ಮಲಾರ’ದಲ್ಲಿ ಸಂಸ್ಕೃತದ ಕಾಳಿದಾಸ, ಇಂಗ್ಲಿಷಿನ ಶೇಕ್ಸ್‌ಪಿಯರ್, ಕನ್ನಡದ ಕುಮಾರವ್ಯಾಸರೊಂದಿಗೆ ಐನ್‌ಸ್ಟೈನ್, ಸಿ.ವಿ. ರಾಮನ್ ಕುರಿತಾದ ಕವಿತೆಗಳೂ ಇವೆ. ಹಾಗೆಯೇ ಹಿಟ್ಲರನನ್ನು ಕುರಿತದ್ದೂ ಇದೆ. ಆದರೆ ಮೊದಲಿನವುಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯ ಬೇರೆ, ಹಿಟ್ಲರನ ಕುರಿತಾದ ಭಾವನೆಯೇ ಬೇರೆ; ಅದು ಹಾಗಿರಲಿ, ಮಾಸ್ತಿಯವರು ‘ಮಲಾರ’ದಲ್ಲಿ ಹೊಸಗನ್ನಡದ ಮೂವರು ವಿಭೂತಿಗಳನ್ನು ತಮಗೆ ಸಹಜವಾದ ಸರಳ ಸುಂದರ ನುಡಿಗಡಣದಲ್ಲಿ ಕಡೆದು ನಿಲ್ಲಿಸಿದ್ದಾರೆ. ಅವರೇ ಬಿ.ಎಂ.ಶ್ರೀ. ಬೇಂದ್ರೆ ಮತ್ತು ಕಾರಂತ. ಶ್ರೀಯವರನ್ನು ‘ಕನ್ನಡದ ಕಣ್ವ’ರೆಂದೂ ಕಾರಂತರನ್ನು ‘ಕಡಲತೀರದ ಭಾರ್ಗವ’ ತಪೋವನದ ಕಲಿಯೆಂದೂ ಕರೆದವರೇ ಮಾಸ್ತಿ. (‘ತಪೋವನದ ಕಲಿ’ಯೆಂಬುದನ್ನು ಬಿಟ್ಟು ಹೇಳುವುದೇ ಈಗ ವಾಡಿಕೆಯಾಗಿದೆ.) ಬೇಂದ್ರೆಯವರನ್ನು ಬಣ್ಣಿಸುವ ಸಾನೆಟ್ ಕವಿಯ ಮಾಂತ್ರಿಕತೆಯನ್ನು ಕಣ್ಣೆದುರು ನಿಲ್ಲುಸುತ್ತದೆ. (ಅದೇ ಸುಮಾರಿಗೆ ಪ್ರಕಟವಾದ ಬೇಂದ್ರೆಯವರ ‘ನಾದಲೀಲೆ’ ಎಂಬ ಕವನ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ಮಾಸ್ತಿಯವರು ಅವರನ್ನು ‘ಗಾರುಡಿಗ’ ಎಂದು ಕರೆದದ್ದು ಈಗ ಒಂದು ಗಾದೆ ಮಾತಾಗಿ ಬಿಟ್ಟಿದೆ.)

ಪದ್ಯರೂಪದಲ್ಲಿ ತಮ್ಮ ಕಾಲದ, ಆದರೆ ತಮಗಿಂತ ಕೊಂಚ ಹಿರಿಯ, ತಮ್ಮ ಓರಗೆಯ ಅಥವಾ ತಮಗಿಂತ ಕಿರಿಯ ಕವಿ ಸಾಹಿತಿಗಳನ್ನು ಆದರ ಅಕ್ಕರೆಗಳಿಂದ ಬಣ್ಣಿಸಿ  ಬರೆಯುವ ಒಲುಮೆಯ ಹೆದ್ದಾರಿಯಲ್ಲಿ ಕನ್ನಡದ ಇನ್ನೂ ಅನೇಕ ಕವಿಗಳು ನಡೆದಿದ್ದಾರೆ, ನೆಡಯುತ್ತಿದ್ದಾರೆ; ಅಲ್ಲಿ ತಮ್ಮ ಹೆಜ್ಜೆಗುರುತುಗಳನ್ನೂ ಮೂಡಿಸಿದ್ದಾರೆ. ಕವಿವರ್ಮ ಬೇಂದ್ರೆಯವರು ವಿಶ್ವಕವಿ ಠಾಕೂರರನ್ನು ‘ಗುರುದೇವ’ನೆಂದು ಗುರುತಿಸಿ ವರ್ಣಿಸಿದ್ದು ಒತ್ತಟ್ಟಿಗಾದರೆ ‘ಕನ್ನಡ ಕುಲ ಪುರೋಹಿತ’ ಆಲೂರರನ್ನು ‘ಜಡೆ ಬೀಳಲವರು ಇವರಾರು ಎಂಬರೆ ಮಂಕೆ! ಕಲ್ಲೆದೆಯ ಸೀಳಿ ಎರಡಕ್ಷರವ ಕಂಡವರು…. ಇವರು ಆಲೂರವರು! ಏಕೆ ಬೇಕೀ ಶಂಕೆ?” ಎಂದು ಮುಂತಾಗಿ ಪ್ರಶ್ನೋತ್ತರೂಪದಲ್ಲಿ ಚಿತ್ರಿಸಿದ್ದಂತೂ ತುಂಬ ಮನೋಜ್ಞವಾಗಿದೆ. ಹಾಗೆಯೇ ತಮ್ಮ ‘ಗೆಳೆಯರ ಗುಂಪಿ’ನ ‘ಮಧುರಚೆನ್ನ’ರನ್ನು ‘ನನ್ನ ನಿನ್ನ ಬೆನ್ನ ಬಳಿಯಲಿ ವಿಶಾಲ ವರಕ್ಷ ಬೆಳೆದಿದೆ’ ಎಂದು ನೆನೆದದ್ದು ಒಂದು ಕೆಳೆಕಾಣಿಯಾದರೆ ‘ತಮ್ಮ ನೆನೆವ!’ ಎಂಬ ತಲೆಕಟ್ಟಿನಲ್ಲಿ ‘ಕಲ್ಲು ಕಾಗದ ಕಡತಗಳ ಕಾಲು ಸಿಕ್ಕು…..’ ಎಂದು ಪ್ರಾರಂಭಿಸಿ ‘ಪೈಗೆ ಪೈ ಲೆಕ್ಕ ಒಪ್ಪಿಸಿದಿರಾ?’ ಎಂದು ಪ್ರಶ್ನಿಸಿ ಗೋವಿಂದ ಪೈಯವರಿಗೆ ಅಕ್ಷನಮನ ಸಲ್ಲಿಸಿದ್ದಾರೆ. ಹಾಗೆಯೇ ತಮ್ಮ ಸಮಕಾಲೀನ ಕವಿಶ್ರೇಷ್ಠ ಕುವೆಂಪು ಅವರನ್ನು ವಂದಿಸಿ, ಅಭಿನಂದಿಸಿದ ರೀತಿಯಂತೂ ಅತಿಶಯವಾದದ್ದು, ಅತಿಮನೋಹರವಾದದ್ದು, ಒಬ್ಬ ಸ್ವೋಪಜ್ಞ ಕವಿ ಇನ್ನೊಬ್ಬ ಕವಿವಿಭೂತಿಯನ್ನು ಹೇಗೆ ಅಕ್ಕರೆಯಿಂದ ಕಾಣಬಲ್ಲ ಎಂಬುದಕ್ಕೆ ಚಿರಕಾಲಿಕವೂ ಸುಂದರ ತರವೂ ಆಗಿರುವ ಮಹೋನ್ನತ ಉದಾಹರಣೆಯಾಗಿದೆ:

ಯುಗದ ಕವಿಗೆ
ಜಗದ ಕವಿಗೆ
ಶ್ರೀ ರಾಮಾಯಣ ದರ್ಶನದಿಂದಲೆ ಕೈ
ಮುಗಿದ ಕವಿಗೆ ಮಣಿಯದವರಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?

ಕುವೆಂಪು ಅವರನ್ನು ಕುರಿತಾದ ಈ ಕವನಸ್ತವನ ಬೇಂದ್ರೆಯವರ ಹಿರಿತನಕ್ಕೂ ಹಿಡಿದ ಒಂದು ರನ್ನಗನ್ನಡಿಯೂ ಆಗಿದೆ.

ಸಮಕಾಲೀನ ಕವಿಶ್ರೇಷ್ಠ ಬೇಂದ್ರೆಯವರಿಂದ ಯುಗದ ಕವಿ, ಜಗದ ಕವಿಯೆಂದು ವರ್ಣಿತರಾದ ಕುವೆಂಪು ಅವರದೂ ಅಂತಹುದೇ ಉದಾರತೆ, ಅಂತಹುದೇ ಉದಾತ್ತತೆ. ಪಂಜೆ ಮಂಗೇಶರಾಯರನ್ನು ಅವರು ‘ಕಚ್ಚಿದರೆ ಕಬ್ಬು, ಹಿಂಡಿದರೆ ಜೇನು’ ಎಂದು ಬಣ್ಣಿಸಿ “ಅವರೇನು ಬರೆದಿಹರು ಅಂತಹ ಮಹಾಕಾವ್ಯ…” ಎಂದು ಕೇಳಿ, “ಅವರೆ ತಾವೊಂದು ಗೊಮ್ಮಟಸಮ ಮಹಾಕಾವ್ಯ” ಎಂದು ಬರೆದದ್ದು ಒಂದು ಅಸಾಮಾನ್ಯ ಕವಿಪೂಜನವೇ ಆಗಿದೆ. ಇನ್ನು, ತಮ್ಮ ಪರಮಪ್ರಿಯ ಗುರು ಟಿ.ಎಸ್. ವೆಂಕಣ್ಣಯ್ಯನವರಿಗೆ ತಮ್ಮ “ಜಗದ್ಭವ್ಯ ಮೇರುಕೃತಿ” ‘ರಾಮಾಯಣ ದರ್ಶನ’ವನ್ನು ಸಮರ್ಪಿಸಿ ಕೃತಾರ್ಥರಾದದ್ದಲ್ಲದೆ, ಅವರ ಕುರಿತು ಅತ್ಯಂತ ಆರ್ದ್ರವಾದ ಪ್ರತ್ಯೇಕ ಶೋಕಗೀತವೊಂದನ್ನು ರಚಿಸಿ ತಮ್ಮ ಶ್ರದ್ಧಾಂಜಲಿಯನ್ನು ಒಪ್ಪಿಸಿದ್ದಾರೆ.

ಹೊಸಗನ್ನಡದ ಕವಿರತ್ನತ್ರಯದಲ್ಲಿ ಒಬ್ಬರಾದ ಪು.ತಿ.ನ ಅವರು ‘ಕವಿಬೇಂದ್ರೆಯವರನ್ನು ಕುರಿತು’, ‘ತೀನಂಶ್ರೀಯವರನ್ನು ನೆನೆದು’. ‘ಗೋವಿಂದ ಪೈಗಳು’, ‘ಕರ್ಮಯೋಗಿ ಡಿವಿಜಿ’ ಇವೇ ಮೊದಲಾದ ರಚನೆಗಳಲ್ಲಿ ಆಯಾ ಕವಿಗಳನ್ನು ತಮಗೆ ಸಹಜವಾದ ಸರಸ ಮೃದುವಚನಗಳಲ್ಲಿ ಚಿತ್ರಿಸಿ ಒಬ್ಬ ಗುಣಗ್ರಾಹಿ ಕವಿಹೃದಯದ ರಮನೀಯ ಕಾಂತಿ ಏರ್ಪಟ್ಟಿರುತ್ತದೆ ಎಂಬುದನ್ನು ಕಾಣಿಸಿದ್ದಾರೆ. ವಿ.ಸೀಯವರು ಕಾರಂತರನ್ನು ಕಾಲ ನಟವೆಂದು ಚಿತ್ರಿಸಿದ್ದು, ಗೋಕಾಕರು ವಿ.ಸೀಯವರನ್ನು ‘ರೂಪಾರಾಧಕ’ನೆಂದು ರೂಪಿಸಿದ್ದು, ಒಲವಿನ ಕವಿ ಕೆ.ಎಸ್.ನ ಅವರು ‘ವಚನಭಾರತ’ ವರ್ಣನೆಯ ವ್ಯಾಜದಲ್ಲಿ ಎ.ಆರ್. ಕೃಷ್ಣಶಾಸ್ತ್ರಿಯವರನ್ನು ಶ್ಲಾಘಿಸಿದ್ದು ಮಾತ್ರವಲ್ಲದೆ ‘ಮಾಸ್ತಿಯವರ ಕವಿತೆ’, ‘ಶ್ರೀ ಅವರಿಗೆ’, ‘ತೀ.ನಂ.ಶ್ರೀಯವರಿಗೆ’ ಎಂಬ ಕವಿತೆಗಳನ್ನು ಬರೆದದ್ದು ಅವುಗಳೆಲ್ಲ ಅತ್ಯಂತ ಆಪ್ತವಾದ ಅಕ್ಷರ ನಮಸ್ಕಾರಗಳಾಗಿವೆ. ನವಜೀವ ನವಭಾವವನ್ನು ಪ್ರತಿನಿಧಿಸಿದ ಮತ್ತು ಪ್ರತಿಧ್ವನಿಸಿದ ಗೋಪಾಲಕೃಷ್ಣ ಅಡಿಗರ ‘ನಮ್ಮ ಸದಾಶಿವ’ ಎಂಬ ಅಶ್ರುತರ್ಪಣದಲ್ಲಿ, ‘ಬಿ.ಎಂ.ಶ್ರೀ ಅವರಿಗೆ’ ಎಂಬ ಶತಮಾನ ಸಂಸ್ಮರಣದಲ್ಲಿ, ‘ಯಶೋರೂಪಿ ಮಾಸ್ತಿಯವರಿಗೆ’ ಎಂಬ ಶತಾಬ್ಧ ನಮನದಲ್ಲಿ ಒಬ್ಬ ಕವಿ ಇನ್ನೊಬ್ಬ ಕಿರಿಯ ಅಥವಾ ಹಿರಿಯ ಕವಿಯನ್ನು ತನ್ನೆದೆಯ ಪಡಿತೆರೆದು ಹೇಗೆ ಒಳಗೆ ಬರಮಾಡಿಕೊಳ್ಳುತ್ತಾನೆ ಎಂಬುದನ್ನು ಕಾಣಿಸುತ್ತವೆ. ಪ್ರಾಯಃ ಸಮಕಾಲೀನ ಕವಿಸಾಹಿತಿಗಳನ್ನು ಕುರಿತು ಚೆನ್ನವೀರಕಣವಿಯವರಷ್ಟು ಕಣ್ಣೀರು ಕರೆದವರು ಬರೆದು ಬಣ್ಣಿಸಿದವರು, ಇನ್ನೊಬ್ಬರಿಲ್ಲ. ‘ಶ್ರೀ ಅವರನ್ನು ನೆನೆದು’, ‘ಬಸವನಾಳರಿಗೆ ಬಾಷ್ಪಾಂಜಲಿ’, ‘ಮಧುರ ಚೆನ್ನರ ನೆನಪಿಗೆ’, ‘ಶ್ರೀ ರಾಮಾಯಣ ದರ್ಶನವನ್ನೋದಿ’, ‘ಉತ್ತಂಗಿಯವರನ್ನು ನೆನೆದು’, ‘ನಮಿಸು ಗೋವಿಂದಪೈ’, ‘ದಬಾಕು ಸ್ಮೃತಿ’, ‘ಹಳಕಟ್ಟಿಯವರು’, ‘ಎಪ್ಪತ್ತರ ಬೇಂದ್ರೆ’, ‘ತೀ.ನಂ.ಶ್ರೀಯವರ ಪಯಣ’, ‘ವಿನಾಯಕರಿಗೆ ವಂದನೆ’, ‘ಪು.ತಿ.ನ ಪಂಜೆಯವರನ್ನು ನೆನೆದು’, ‘ಸ್ನೇಹಕಾರ್ತಿಕ’, ‘ಸಿಂಪಿಯೊಳಗಿನ ಮುತ್ತು’, ಜಯದೇವಿತಾಯಿ, ಕಟ್ಟೀಮನಿಯವರನ್ನು ನೆನೆದು, ಶಾಂತರಸ, ಮಹಾಮಾರ್ಗದ ಪಥಿಕ, ಲಂಕೇಶ, ಶಂ.ಗು., ದೇಜಗೌ ಗೌರವಾರ್ಥ ಮೊದಲಾದವುಗಳೆಲ್ಲ ನಿಜವಾದ ಒಬ್ಬಕವಿ ಹಿರಿಯಣ್ಣನಿಗೋ ಕಿರಿ ತಮ್ಮನಿಗೋ ಮಚ್ಚರಿಸುವುದಿಲ್ಲ ಆತನನ್ನು ಮೆಚ್ಚಿ ನಲಿಯುತ್ತಾನೆ ಎಂಬುದನ್ನು ರುಜುಪಡಿಸುತ್ತವೆ.

ಹೊಸಗಾಲದಲ್ಲಿ ಹೆಸರಾಗಿರುವ ಇನ್ನೊಬ್ಬ ಕವಿ ಜಿ.ಎಸ್. ಶಿವರುದ್ರಪ್ಪನವರಲ್ಲೂ ಹೀಗೆಯೇ ಸೊಗಸಾದ ನಾಲ್ಕಾರು ಕವಿ ವಂದನ ಅಭಿನಂದನಗಳನ್ನು ಕಾಣುತ್ತೇವೆ. ‘ತೀ.ನಂ.ಶ್ರೀ’, ‘ಶ್ರೀಕುವೆಂಪು ಅವರಿಗೆ’ ಎಂಬ ಎರಡು ಕವಿತೆಗಳೂ ‘ಬಿ.ಎಂ.ಶ್ರೀ’ ಎಂಬ ನಾಲ್ಕು ಸಾಲುಗಳ ಒಂದು ಪದ್ಯವೂ ಸೊಗಸಾದ ನುಡಿ ಚಿತ್ತಾರಗಳಾಗಿವೆ. ‘ಸಾವಧಾನದ ಕವಿಗೆ’ ಮತ್ತು ‘ನಮ್ಮ ಜತೆಗಿದ್ದಾರೆ’ ಎಂಬುದು ಎಲ್ಲೂ ಹೆಸರು ಹೇಳದೇ ಇದ್ದರೂ, ಕೆ.ಎಸ್.ನ ಮತ್ತು ಎಲ್.ಎಸ್. ಶೇಷಗಿರಿರಾಯರ ಮುಡಿಗಳಿಗೆ ಎದೆ ತುಂಬಿ ಹಾಡುವ ಜಿ.ಎಸ್.ಎಸ್. ಸಿಂಪಡಿಸುವ ಒಳ್ಗುಡಿಯ ಪನ್ನೀರು. ಗಡಿನಾಡಿನ ಕವಿ ಕಯ್ಯಾರರೂ ಚೆಲ್ನುಡಿಗಳ ಹೂಮಾಲೆಗಳನ್ನು ಪೋಣಿಸಿ, ಪಂಜೆಯವರ ಮತ್ತು ಪೈಯವರ ಕೊರಳಿಗೆ  ತೊಡಿಸಿ, ಕೈಮುಗಿದು ತಲೆಬಾಗಿ ಧನ್ಯರಾಗಿದ್ದಾರೆ. ಅವರಂತೆಯೇ ಜಿ.ಆರ್. ಪಾಂಡೇಶ್ವರರು ‘ಪಂಡಿತವಕ್ಕಿಗೆ’ ಎಂಬ ಶೀರ್ಷಿಕೆಯಲ್ಲಿ ರಚಿಸಿರುವ ಒಂದು ಕವಿತೆಯಲ್ಲಿ ಪೈಯವರು ಕವಿತಾಮಾರ್ಗವನ್ನು ಮರೆತು ಸಂಶೋಧನ ರಂಗದಲ್ಲೇ ಸಂಪೂರ್ಣ ನಿಮಗ್ನವಾಗಿರುವ ಕುರಿತು ತಮ್ಮ ಅತೃಪ್ತಿಯನ್ನು  ಹೇಳಿಕೊಳ್ಳುತ್ತಲೇ ಕವಿಯಲ್ಲಿ ತಮಗಿರುವ ವಿಶ್ವಾಸ ಗೌರವಗಳನ್ನು ಪ್ರಕಟಿಸಿದ್ದಾರೆ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇತರ ಅನೇಕ ಶ್ರೇಷ್ಠರೊಂದಿಗೆ ಕಿಟೆಲ್, ಅಡಿಗ, ಹಾಮನಾ, ತು.ಸು. ಶಾಮರಾವ್ ಮೊದಲಾದ ಮಹನೀಯರಿಗೆ ಕವನ ಕುಸುಮಾಂಜಲಿಯನ್ನು ಒಪ್ಪಿಸಿದ್ದಾರೆ. ಎಚ್.ಎಸ್. ವೆಂಕಟೇಶ ಮೂರ್ತಿ, ಕಂಬಾರ, ಎಕ್ಕುಂಡಿ, ಚಂಪಾ ಮೊದಲಾದವರೂ ಸಮಕಾಲೀನ ಕವಿಗಳ ಬಗೆಗೆ ಬರೆದದ್ದನ್ನು ಕಾಣಬಹುದು.

ಇದು ಸಮಗ್ರ ಸಮಾಲೋಕನವಲ್ಲ, ಒಂದು ಹಕ್ಕಿ ನೋಟ, ಅಷ್ಟೇ. ವಿವಿಧ ಸಂದರ್ಭಗಳಲ್ಲಿ ಪ್ರಕಟವಾದ ಕವಿಪ್ರಶಸ್ತಿ, ಅಭಿನಂದನ ಅಥವಾ ಸಂಸ್ಮರಣ ಸಂಪುಟಗಳ ಪುಟ ಬಿಡಿಸಿದರೆ ಹೆಚ್ಚುಕಡಿಮೆ ಎಲ್ಲವುಗಳ ಪ್ರಥಮ ಭಾಗಗಳಲ್ಲಿ ಒಂದೆರಡಾದರೂಕವನ ರೂಪದ ಸ್ತವನಗಳನ್ನು ಕಾಣಬಹುದಾಗಿದೆ.

ಹೀಗೆ, ಕನ್ನಡ ಕವಿವಿಭೂತಿಗಳನ್ನು ವರ್ಣನ ಅಥವಾ ಸ್ತವನಗಳ ಜತೆ ಜತೆಗೇ ಧಾರ್ಮಿಕ, ಸಾಂಸ್ಕೃತಿಕ, ರಾಜನೈತಿಕ ಅಥವಾ ಅನ್ಯಾನ್ಯ ಸಾಮಾಜಿಕ ಕ್ಷೇತ್ರಗಳಲ್ಲೂ ತಮ್ಮ ವ್ಯಕ್ತಿತ್ವದ ಮುದ್ರೆ ಮೂಡಿಸಿದ ಮಹಾಪುರುಷರನ್ನು ಸ್ಮರಿಸುವ, ಶ್ಲಾಘಿಸುವ, ವಂದಿಸುವ ಕವಿತೆಗಳೂ ಪ್ರಕಟವಾಗಿವೆ. ೧೯೨೨ರ ಸುಮಾರಿಗೆ ಡಿ.ವಿ.ಜಿಯವರು ಪ್ರಕಟಿಸಿದ ‘ವಸಂತ ಕುಸುಮಾಂಜಲಿ’ಯ ದ್ವಿತೀಯ ಭಾಗದಲ್ಲಿ ಶ್ರೀ ರಾಮಕೃಷ್ಣಪರಮಹಂಸ, ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ, ಗೋಪಾಲಕೃಷ್ಣ ಗೋಖಲೆ, ರವೀಂದ್ರನಾಥ ಠಾಕೂರ್, ಡಾ. ವಿಶ್ವೇಶ್ವರಯ್ಯನವರೇ ಮೊದಲಾದ ಮಹನೀಯರನ್ನು ಕುರಿತಾದ ಪದ್ಯಗಳನ್ನು ಕಾಣಬಹುದು. ಅನಂತರ ಕಾಲದ ಕವಿಗಳು ಇಂತಹ ಸುಂದರವಾದ ಕವಿತೆಗಳನ್ನು ಬರೆದಿದ್ದಾರೆ. ಆದರೆ ಅವಜ್ಞೆಯಿಂದಲ್ಲ ವಿಸ್ತಾರ ಭಯದಿಂದ ಅಂತಹುಗಳನ್ನೆಲ್ಲ ಇಲ್ಲಿ ಉಲ್ಲೇಖಿಸಿಲ್ಲ.

ನಮ್ಮ ಕನ್ನಡ ಕವಿಗಳು ಒಟ್ಟಿನಲ್ಲಿ, ಹಿಂದೆ ಹೇಳದಂತೆ, ಸಮಸಾಮಯಿಕ ಅಥವಾ ಸಮೀಪ ಪೂರ್ವ ಕವಿ ಸಾಹಿತಿಗಳ ಬಗೆಗೆ ಅನಸೂಯವಾದ, ಆತ್ಮೀಯವಾದ, ಗುಣಾತ್ಮಕ ದೃಷ್ಟಿ ಧೋರಣೆಗಳನ್ನೇ ಹೊಂದಿದ್ದರು ಎಂಬುದಕ್ಕೆ ಈ ಮೇಲಿನ ಕೆಲವು ಉದಾಹರಣೆಗಳು ಸಾಕಾಗಬಹುದು. ಹಿಂದೆ ಹೆಸರಿಸಿದವರ ಹಾಗೆಯೇ ಅತ್ಸರವೂ ಸ್ನೇಹಾರ್ದ್ರವೂ ಗುಣ ಗ್ರಾಹಕವೂ ಆಗಿರುವ ‘ಹೃದಯವಿರುವಂಥ’ ಇನ್ನೊಬ್ಬ ಕವಿ ಶ್ರೇಷ್ಠರೆಂದರೆ ಕೆ.ಎಸ್.ನಿಸಾರ್ ಅಹಮ್ಮದ್. ಅವರು ಮಾಡಿರುವ ಕವಿಸ್ತವನ, ವಿಭೂತಿ ಪೂಜನಗಳ ಮೇಲೆ ಒಂದು ಮಿಂಚುನೋಟವನ್ನು ಹಾಯಿಸುವ ಒಂದು ಸಣ್ಣ ಪ್ರಯತ್ನ ಭಾಗವೇ ಈ ಮುಂದಿನ ಲೇಖನ. ಈ ವರೆಗಿನದು ಪ್ರಯತ್ನಕ್ಕೊಂದು ಸಣ್ಣ ಪೀಠಿಕೆ ಅಷ್ಟೆ.

()

ಪ್ರೊ. ನಿಸಾರ್ ಅಹಮ್ಮದರ ಕವಿ ಸ್ತವನ, ಗುಣವರ್ಣನ ಅಥವಾ ಸಂಸ್ಮರಣಗಳು ಈ ಹಿಂದೆ ಉಲ್ಲೇಖಿಸಿ ಉದಾಹರಿಸಿರುವ ಅನೇಕ ಕವಿವರರು ಮಾಡಿರುವ ವರ್ಣನಗಳಂತೆಯೇ ದೇಶ ಕಾಲಾತೀತವಾಗಿವೆ – ಎಂದರೆ ಸಮಕಾಲೀನ ಅಥವಾ ಪೂರ್ವಕಾಲೀನ; ಕನ್ನಡದೊಂದಿಗೆ ಭಾರತ ಅಥವಾ ರಾಷ್ಟ್ರಾಂತರೀಯ ಕವಿ ಸಾಹಿತಿಗಳನ್ನೂ ಅವರು ತಮ್ಮ ಅಕ್ಕರೆಯ ತೆಕ್ಕೆಗಳಲ್ಲಿ ತಕ್ಕೈಸಿಕೊಂಡಿದ್ದಾರೆ; ಇಲ್ಲವೇ ಅವರಿಗೆ ತಲೆಬಾಗಿ ಕೈಮುಗಿದಿದ್ದಾರೆ. ಅದಕ್ಕೆ ಸಮರ್ಥನೆಯಾಗಿ ಎರಡು ಮೂರು ಕವಿತೆಗಳನ್ನಷ್ಟೇ ಉಲ್ಲೇಖಿಸುತ್ತೇನೆ..

ಪುರಂದರದಾಸರ ಚತುಶ್ಯತಮಾನೋತ್ಸವ ಸಂದರ್ಭದಲ್ಲಿ ಕನ್ನಡದ ಅನೇಕ ಲೇಖಕರು ಅವರನ್ನು ಪದ್ಯರೂಪದಲ್ಲಿ ಸ್ತುತಿಸಿದ್ದಾರೆ, ಗದ್ಯ ಲೇಖನಗಳಲ್ಲಿ ವರ್ಣಿಸಿದ್ದಾರೆ ಅಥವಾ ನಾಟಕರಂಗಗಳಲ್ಲಿ ಸಾಕ್ಷಾತ್ಕರಿಸಿದ್ದಾರೆ. ನಿಸಾರ್‌ಅಹಮ್ಮದ್ ಸಹ ನವಕೋಟಿನಾರಾಯಣ ನೆನಿಸಿದ್ದ ಶ್ರೀನಿವಾಸನಾಯಕ ಭಗವತ್ಕ್ರಷಾ ವಿಶೇಷದಿಂದ ಲೋಭಮೋಹಾದಿಗಳ ಕಾಳಿಮೆಯನ್ನು ಕಳೇದು, ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ತನ್ನ ಧನ ಕನಕಾದಿ ಸರ್ವಸ್ವವನ್ನೂ ಹರಿಸಮರ್ಪಣ ಮಾಡಿ, ತಕ್ಕಡಿಯನ್ನು ಬಿಟ್ಟು, ತಂಬೂರಿ ಹಿಡಿದು, ವಿರಕ್ತ ಹರಿಭಕ್ತ ಪುರಂದರ ದಾಸರಾಗಿ, ‘ಆದದ್ದೆಲ್ಲ ಒಳಿತೇ ಆಯಿತೆ’ಂದು ಹಾಡುತ್ತ ನಾಡಿನ ಉದ್ದಲಗಳ, ಕೇರಿಗಳಲ್ಲಿ ಸುತ್ತುತ್ತ, ಜನಮನದ ಬಿಂದಿಗೆಗಳಲ್ಲಿ ಹರಿನಾಮಾಮೃತವನ್ನು ತುಂಬುತ್ತ, ಅವರೆದೆಗಳ ಹೊಲಗಳನ್ನು ಹದಮಾಡಿ, ಹರಿನಾಮ ಸ್ಮರಣೆಯ ಬೀಜವನ್ನು ಅವುಗಳಲ್ಲಿ ಬಿತ್ತಿ ಬೆಳೆಯಿಸುತ್ತ, ‘ದಾಸರೆಂದರೆ ಪುರಂದರ ದಾಸರಯ್ಯ’ ಎಂದು ಗುರುವ್ಯಾಸರಾಯ ಸ್ವಾಮಿಗಳಿಂದಲೇ ಪುರಸ್ಕೃತರಾದ ಸೋಜಿಗದ ಪರಿಯನ್ನು ಬಗೆಬಗೆಯ ನುಡಿಬಣ್ಣಗಳ ಸೊಗಸಿನ ಚಿತ್ತಾರವಾಗಿ ಮಾಡಿದ್ದಾರೆ, ಓದು ಎದೆಯರ ಹಾಳೆಗಳಲ್ಲಿ ಅದನ್ನು ಮೂಡಿಸಿದ್ದಾರೆ.

‘ದಾಸರೆಂದರೆ ನಮ್ಮವರ ಪುರಂದರಯ್ಯ’ ಎಂದು ಮೊದಲಾಗುವ ಕವಿತೆ ಹೇಗೆ ದೈವದ ಚದುರಂಗದಾಟದಲ್ಲಿ ಅವರು – ಎಂದರೆ, ಪೂರ್ವಾಶ್ರಮದ ಶ್ರೀನಿವಾಸನಾಯಕ – ದಾಳವಾದರೆಂಬುದನ್ನು ಹೇಳುತ್ತ, ಕೈಹಿಡಿದ ನಾರಿ ವೈಕುಂಠದ ದಾರಿ ತೋರಿದ ಬಗೆಯನ್ನು ತುಂಬ ಸೊಗಸಾಗಿ ಬಣ್ಣಿಸುತ್ತದೆ :

ನತ್ತು ಕೊಟ್ಟಳು ಹರಿಗೆ, ಅತ್ತು ಬಿಟ್ಟಳು ಮರೆಗೆ
ಪತಿಯನ್ನಿತ್ತಳು ಕೊಡುಗೆ ದೇವನಡಿಗೆ
ಹೆಣ್ಣು ಮಾಯೆಯ ನೆರಳೆ? ಹೆಣ್ಣು ಗಂಡಿನ ಮರುಳೆ?
ಹೇಳಲೆದೆ ಉಂಟೇನು ಹಾಗಿವಳಿಗೆ?

ಸರಿ, ನಾಯಕನನ್ನು ಮುಚ್ಚಿದ್ದ ಹೊನ್ನಬಟ್ಟೆ ಹರಿಯಿತು; ಕಣ್ಣೂ, ಅದರೊಂದಿಗೆ ಹೊಸಬಾಳ ಬಟ್ಟೆಯೂ ತೆರೆಯಿತು. ಅದರಲ್ಲಿ ಹಜ್ಜೆಯೂರಿದರು, ‘ದಾರಿಯಾವುದಯ್ಯಾ ವೈಕುಂಠಕೆ’ ಎಂದು ಮಂದಿಯನ್ನು ಕೇಳುತ್ತ ಮುಂದುವರಿದರು.

ಮೈಮರೆತು ಹರಿಸ್ಮರಣೆ ಮಾಡಿದರು, ಹಾಡಿದರು,
ಹತ್ತುಜನ ಕೂಡಿದರು ಹರಿಭಕ್ತರು
ಈವೊತ್ತು ಈಕೊಂಪೆ, ನಾಳೆ ದೂರದ ಹಂಪೆ
ಹರಿಯಿಂಪ, ನರುಗಂಪ ಹರಡಿದ್ದರು

ಹೀಗೆ ಹರಿಯನ್ನು ಅರಸುತ್ತ, ತಮ್ಮ ಒಳಗನ್ನು ಅರಿಯುತ್ತ, ಮನವ ಶೋಧಿಸಿ ಕಸ ಮುಸುರೆಗಳನ್ನು ತೊಳೆಯುತ್ತ, ಅದನ್ನು ಬೆಳಗುತ್ತ, ಬಂಗಾರದ ಬೇಹಾರಿಯಾಗಿದ್ದವರು ತಾವೇ ಅಚ್ಚಬಂಗಾರವಾದರು. ಬದುಕಿಗೆ ನಿಜವಾದ ಕಳೆ ಕೂಡಿತು, ಬೆಲೆ ಬಂತು. ನಿಸಾರ್ ಹಾಡುತ್ತಾರೆ –

ಬೇರೆ ಸ್ಮಾರಕ ಬೇಕೆ ಇವರಂಥ ಭಕ್ತರಿಗೆ
ಎಲ್ಲರನ್ನೂ ಸೇರಿದಂಥವರಿಗೆ?
ಬೇರೆ ಬಣ್ಣನೆ ಯಾಕೆ ಇಂಥ ಮುಕ್ತರಿಗೆ
ಎಲ್ಲವನ್ನೂ ಮೀರಿ ನಿಂತವರಿಗೆ?

ಇದು ದಾಸಶ್ರೇಷ್ಠರ ನೆನಪಿಗೆ ನಿಸಾರ್ ಅಹಮ್ಮದರ ನುಡಿ ಕಾಣಿಕೆಯಾದರೆ ಗುರುದೇವ ಠಾಕೂರರ ಜನ್ಮಶತಾಬ್ಧಿ ಸನ್ನಿವೇಶದಲ್ಲಿ ಮಾಡಿರುವ ಸ್ಮರಣಾಂಜಲಿಯ ಸತ್ವ ಬೇರೊಂದು ಬಗೆಯದು. ಸಾಮಾನ್ಯವಾಗಿ ಭಾರತೀಯ ವಾಙ್ಮಯ ಕ್ಷೇತ್ರದಲ್ಲಿ ಕೃಷಿ ಮಾಡಿರುವ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಠಾಕೂರರಿಗೆ ಉಪಕೃತರು ಅಥವಾ ಅವರಿಂದ ಪ್ರಭಾವಿತರು. ನಿಸಾರ್ ಅಹಮ್ಮದ್ ಅದಕ್ಕೆ ಅಪವಾದವಲ್ಲ. ಅದನ್ನು ಅವರು ತಮ್ಮ ಕವಿತೆಯ ಮೊದಲಲ್ಲೇ ಪ್ರಾಂಜಲವಾಗಿ ಒಪ್ಪಿಕೊಂಡು, ಮುಂದೆ ಠಾಕೂರರ ಪ್ರತಿಭಾ ವಿಲಾಸ, ಅವರ ಭಾವಲೋಕದ ವಿಸ್ತಾರ, ಬಹುಮುಖವಾದ ಅಭಿರುಚಿ-ಆಸಕ್ತಿ, ನಿರಂತರವಾದ ಪ್ರಯೋಗಶೀಲತೆ ಮತ್ತು ಅದಮ್ಯವಾದ ಕ್ರಿಯಾಶಕ್ತಿಗಳನ್ನು ಸೂಚಿಸಿ, ಆಮೇಲೆ ಅವರ ವಿಶಾಲ ಹೃದಯ ಉದಾರ ಭಾವಗಳನ್ನು ವರ್ಣಿಸುತ್ತಾರೆ. ಠಾಕೂರರು –

ಮತದ ಮಿತಿ ಮೀರಿರುವ ಮಾನವೀ ದೃಷ್ಟಿಯಲಿ
ಮುಪ್ಪುರಿ : ಜೆರೂಲಸಂ, ಕಾಬ, ಕಾಶಿ

ಈ ಮುಪ್ಪರಿಯೊಂದಿಗೆ ಭಾರತದ ನಿಜಪರಂಪರೆಯ ಪರಿಜ್ಞಾನ, ರಸಾನುಭೂತಿ, ಸೂಕ್ಷ್ಮಸಂವೇದನೆ ಮತ್ತು ಕೋಮಲ ಮನೋಧರ್ಮಗಳೂ ಅವರಲ್ಲಿ ಸಮಭಾಗದಲ್ಲಿ ಸಮ್ಮಿಳಿತವಾಗಿದ್ದುವು. ಬೆಳ್ಮುಗಿಲ್, ನವಿಲುಗರಿ, ಜೇಡ ಬಲೆ, ಗುಲ್‌ಮೋಹರ್, ಚಿಟ್ಟೆ ರೆಕ್ಕೆಯೇ ಮೊದಲಾದ ಪದಪುಂಜಗಳಿಂದ ಠಾಕೂರರ ಬದುಕಿನ ಈ ಹಾಸು ಹೊಕ್ಕುಗಳನ್ನು ಗುರುತಿಸಿ ಅಲೇಯುತ್ತಲೇ ನಿಸಾರ್ ಹೇಳುತ್ತಾರೆ : ಠಾಕೂರರ ಕಾಲು ಈ ನೆಲದ ಮೇಲಿದ್ದರೂ ಅವರ ನೆತ್ತಿ ಅಗಸದ ಬಿತ್ತರದಲ್ಲಿ ಸುತ್ತುತ್ತಿತ್ತು ಎಂಬ ಅರ್ಥವಲ್ಲ. ಅವರಿಗೆ ವಾಸ್ತವಿಕೆಯ ಅರಿವೂ ಇತ್ತು. ಪರಾಧೀನ ಭಾರತದ ದುಗುಡ ದುಮ್ಮಾನಗಳ ಹೆದ್ದೆರೆಗಳು ಬಂದು ಅವರೆದೆಯನ್ನು ಬಡಿಯುತ್ತಿದ್ದವು. ಆದುದರಿಂದಲೇ,

ಪಾರತಂತ್ಯ್ರದತಂತ್ರ ನಾಡವರಿಗತಿ ನೊಂದು
ಬಿರುದ ಮರಳಿಸಿ ಮುಕ್ತಿ ಘೋಷಿಸಿದಿರಿ;
ಅಂತೆಯೇ ದೇಶಮತದತಿರೇಕವನು ಬದಿಗೊತ್ತಿ
ವಿಶ್ವಮಾನವರಾಗಲಾಶಿಸಿದಿರಿ

ಅಂತಹ ವಿಶ್ವಕವಿ ಠಾಕೂರರಿಗೆ, –

ಕಲೆಯೊಂದು ಕರವಸ್ತ್ರ; ಜಗದ ಕೊಳೆ, ಕಂಬನಿಗೆ
ಎಷ್ಟೊಂದು ಹೃದಯಗಳ ಪರಿಚಾರಿಕೆ

ಹೀಗೆ ಅವರ ಹೆಮ್ಮೆ ಹಿರಿಮೆಗಳನ್ನು ತುಂಬು ಮನದಿಮದ ಕೊಂಡಾಡುತ್ತ ಅವರಿಂದ ತಾನು ಕಲಿತ ಜೀವನಪಾಠ ಏನೆಂಬುದನ್ನು ನಿಸಾರ್ ಹೀಗೆ ನಿರೂಪಿಸುತ್ತಾರೆ. ಅದು –

ಆಟಿಕೆಯ ನಡುವಿರುವ ಶಿಶು ತನ್ಮಯಾನಂದ
ವೆನಗೆ ದಯಪಾಲಿಸಿದ ಕವಿಕುಲಲಲಾಮ

ಭಗವದ್ಗೀತೆ ‘ಯೋಗಃ ಕರ್ಮಸು ಕೌಶಲಂ’ ಎನ್ನುತ್ತದೆ. ಎಂದರೆ ಸ್ವಕರ್ಮವನ್ನು ಸೊಗಸಾಗಿ ಮಾಡುವುದೇ ಯೋಗ. ಗೀತೆಯ ಉಕ್ತಿ ಪ್ರೌಢ, ಭಾವ ಗಂಭೀರ; ಇಲ್ಲಿ ಅದನ್ನೇ ನಿಸಾರ್ ಸರಳ ಸುಂದರವಾಗಿ ಹೇಳಿದ್ದಾರೆ. ತನ್ನ ಸುತ್ತ ನೂರಾರು ಗೊಂಬೆಗಳನ್ನು ಹರಡಿ ಆಡುತ್ತಿರುವ ಮಗುವಿಗೆ ಅದರಲ್ಲಿ ಪೂರ್ಣ ತನ್ಮಯತೆ. ಆಟ ಸ್ವಲ್ಪ ಕೆಟ್ಟರೂ ನೋಯುತ್ತದೆ, ಅಳುತ್ತದೆ. ಏನು ಮಾಡಬೇಕೋ ಅದನ್ನು ಮನಮುಟ್ಟಿ, ತನಮುಟ್ಟಿ ಮಾಡಬೇಕು – ಅದೇ ಯೋಗ, ಅದು ಕರ್ಮ ಮಾತ್ರವಲ್ಲ, ಕಲೆಯೂ ಹೌದು. ಗೀತೆಯ ಶ್ಲೋಕಕ್ಕೆ ಠಾಕೂರರ ಬದುಕು ಒಂದು ಭಾಷ್ಯ. ಆ ಭಾಷ್ಯವೇ ತನ್ನ ಜೀವನದ ಪಥಕ್ಕೊಂದು ರಥರೇಖೆ – ಎಷ್ಟು ಸೊಗಸಾಗಿದೆ ನಿಸಾರ್ ಅಹಮ್ಮದರ ಈ ಅರ್ಥಭಾವ ಸಮನ್ವಯ!