ಇಂದಿನ ಬಳಕೆದಾರರ ದೃಷ್ಟಿಯಲ್ಲಿ ಹಿಂದಿನ ವ್ಯವಸ್ಥೆ

ಕಮಲಾಪುರ, ತಿಮ್ಮಲಾಪುರ ಮತ್ತು ಕಲ್‌ತಾವರೆಗೆರೆ ಊರಿನಲ್ಲಿರುವ ಕೆರೆ ನೀರಾವರಿ ಬಳಕೆದಾರರನ್ನು ಭೇಟಿಯಾಗಿ ಹಿಂದಿನ ಸಹಭಾಗಿತ್ವ ಕುರಿತು ಕೇಳಲಾಯಿತು. ಸಹಭಾಗಿತ್ವಕ್ಕೆ ಸಂಬಂಧಿಸಿದ ಸುಮಾರು ಇಪ್ಪತ್ತು ಅಂಶಗಳ ಕುರಿತು ಅವರ ಅಭಿಪ್ರಾಯ ಸಂಗ್ರಹಿಸಲಾಯಿತು. ಅವುಗಳನ್ನು ಸ್ಥೂಲವಾಗಿ ಆರು ಗುಂಪುಗಳಾಗಿ ವಿಂಗಡಿಸಿಕೊಳ್ಳಬಹುದು. ಒಂದು, ಬಳಕೆದಾರರ ಸಂಘಟನೆ ಕುರಿತು. ಇಲ್ಲಿ ಮುಖ್ಯವಾಗಿ ಸಂಘಟನೆಯ ಸದಸ್ಯರು, ಅವರು ನೀಡಬೇಕಾದ ಸದಸ್ಯತನ ಮತ್ತು ನಡೆಸಬೇಕಾದ ಸದಸ್ಯರ ಸಭೆ ಕುರಿತು ವಿಚಾರಿಸಲಾಗಿದೆ. ಹಿಂದೆ ಇದ್ದ ಕೆರೆ ನೀರಿನ ನಿರ್ವಹಣೆ ಮತ್ತು ಕೆರೆ ಸಂರಕ್ಷಣೆ ಕುರಿತು ರೈತರಲ್ಲಿ ವಿವಿಧ ನಿಲುವುಗಳಿವೆ. ಕೆಲವರು ಹಿಂದೆ ಸಹಭಾಗಿತ್ವ ಇತ್ತು ಎಂದರೆ ಇನ್ನು ಕೆಲವರು ಇಲ್ಲ ಮತ್ತು ಕೆಲವರು ಗೊತ್ತಿಲ್ಲ ಎಂದಿದ್ದಾರೆ. ಇಲ್ಲ ಮತ್ತು ಗೊತ್ತಿಲ್ಲ ಎನ್ನುವವರನ್ನು ಒಟ್ಟು ಸೇರಿಸಿದರೆ ಅವರ ಸಂಖ್ಯೆ ಸರಿ ಸುಮಾರು ಮೂರನೆ ಒಂದರಷ್ಟಿದೆ. ಕಮಲಾಪುರದಲ್ಲಿ ಭೇಟಿಯಾದ ರೈತರಲ್ಲಿ ಮೂರನೆ ಎರಡರಷ್ಟು ರೈತರು ಹಿಂದಿನ ವ್ಯವಸ್ಥೆ ಬಗ್ಗೆ ತಿಳುವಳಿಕೆ ಸೂಚಿಸಿದ್ದಾರೆ. ಜತೆಗೆ ಅರಿವಿದೆ ಎನ್ನುವವರಲ್ಲಿ ಹಿರಿಯರ ಸಂಖ್ಯೆ ಹೆಚ್ಚಿದೆ. ತಿಮ್ಮಲಾಪುರದ ಸುಮಾರು ಅರ್ಧದಷ್ಟು ಮಂದಿ ಹಿಂದಿನ ವ್ಯವಸ್ಥೆ ಬಗ್ಗೆ ಖಚಿತವಾಗಿ ಹೇಳಲು ಹಿಂದೆ ಮುಂದೆ ನೋಡಿದರು. ಅದಕ್ಕೆ ಕಾರಣವನ್ನು ಅವರೆ ನೀಡಿದರು. ಈಗ ಅವರು ವಾಸವಾಗಿರುವ ಊರು ಅವರ ಹಿರಿಯರು ಹುಟ್ಟಿ ಬೆಳೆದ ಊರಲ್ಲ. ಅವರ ಹಿರಿಯರು ಹುಟ್ಟಿ ಬೆಳದ ಊರು ಮರಿಯಮ್ಮನ ಹಳ್ಳಿ ಪಕ್ಕ ಒಂದೂರು. ಅದು ಐವತ್ತರ ದಶಕದಲ್ಲಿ ತುಂಗಭದ್ರಾ ಆಣೆಕಟ್ಟಿನ ನೀರು ನಿಂತು ಮುಳುಗಡೆಯಾಯಿತು. ಆವಾಗ ಸರಕಾರ ಅವರಿಗೆ ತಿಮ್ಮಲಾಪುರದಲ್ಲಿ ಭೂಮಿ ಕೊಟ್ಟು ಹೊಸ ಜೀವನಕ್ಕೆ ಅವಕಾಶ ಮಾಡಿಕೊಟ್ಟಿತು. ತಿಮ್ಮಲಾಪುರ ಊರವರ ಪ್ರಕಾರ ಹಿಂದೆ ಹಳ್ಳಿಯೇ ಆಗಿರಲಿಲ್ಲ. ಅದು ವಿಜಯನಗರ ಹೊರಹೊಲಯದಲ್ಲಿ ಇದ್ದ ಯಾವುದೋ ಒಂದು ಹಳ್ಳಿಯ ಸ್ಮಶಾನವಾಗಿತ್ತು. ಆದುದರಿಂದ ಅವರಿಗೆ ಆ ಹಳ್ಳಿ ಮತ್ತು ಅದರ ಮೇಲ್‌ಗಡೆ ಇರುವ ಕೆರೆಯ ಚರಿತ್ರೆ ಬಗ್ಗೆ ವಿಶೇಷ ಮಾಹಿತಿ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ. ಕಲ್‌ತಾವರೆಗೆರೆಯಲ್ಲಿ ಈ ಸಮಸ್ಯೆ ಇಲ್ಲ. ಅದು ಕಮಲಾಪುರದಂತೆ ಹಳೇ ಕೆರೆ ಮತ್ತು ಹಳೇ ತಲೆಮಾರಿನ ಜನ ಇಂದು ಇದ್ದಾರೆ. ಅಲ್ಲಿಯ ಹಿರಿಯರು ಕೂಡ ಕೆರೆ ನೀರಿನ ಉಸ್ತುವಾರಿಯನ್ನು ಹಿಂದೆ ಊರವರೆ ನೋಡಿಕೊಳ್ಳುತ್ತಿದ್ದರು ಎನ್ನುತ್ತಾರೆ. ಸಹಭಾಗಿತ್ವವನ್ನು ಪುನರ್ ಜೀವಗೊಳಿಸುವಲ್ಲಿ ಜನ ಸಾಮಾನ್ಯರ ಕಲ್ಪನೆಯಲ್ಲಿರುವ ಹಿಂದಿನ ವ್ಯವಸ್ಥೆ ಚರಿತ್ರೆಯಲ್ಲಿ ಬರುವ ಹಿಂದಿನ ವ್ಯವಸ್ಥೆಗಿಂತ ಗಟ್ಟಿ. ಯಾಕೆಂದರೆ ಚರಿತ್ರೆಯಲ್ಲಿನ ಹಿಂದಿನ ವ್ಯವಸ್ಥೆ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಕಷ್ಟ. ಆದರೆ ಅವರ ಕಲ್ಪನೆಯಲ್ಲಿರುವ ಸಹಭಾಗಿತ್ವಕ್ಕೆ ವಿಶೇಷ ಶ್ರಮ ಇಲ್ಲವೆ ಪುನರ್ ಜೀವ ನೀಡಬಹುದು. ಆದುದರಿಂದ ಹಿಂದೆ ಸಹಭಾಗಿತ್ವ ಇತ್ತು ಎನ್ನುವುದು ಇಂದಿನ ಸಹಭಾಗಿತ್ವದ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಆದರೆ ಈ ಕುರಿತು ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ಮತ್ತೊಂದು ವಿಚಾರದತ್ತ ಗಮನ ಹರಿಸಬೇಕಾಗಿದೆ. ಆ ಹಿಂದಿನ ವ್ಯವಸ್ಥೆಯ ರೂಪುರೇಶೆ ಬಗ್ಗೆ ವಿಚಾರಿಸಿದರೆ ತುಂಬಾ ನಿರಾಶದಾಯಕ ಉತ್ತರ ಬಂತು. ಬಳಕೆದಾರರ ಸಂಘಟನೆ ಅಥವಾ ನೀರು ಪಂಚಾಯತ್ ಹಿಂದೆ ಇದ್ದುದರ ಬಗ್ಗೆ ತಮಗೆ ಅರಿವಿಲ್ಲ ಎಂದು ಬಹುತೇಕ ಎಲ್ಲ ಹಳ್ಳಿಯ ಎಲ್ಲ ರೈತರು ಅಭಿಪ್ರಾಯ ಪಡುತ್ತಾರೆ. ಬಳಕೆದಾರರ ಸಂಘಟನೆ ಬಗ್ಗೆಯೇ ಅರಿವಿಲ್ಲ ಎಂದ ಮೇಲೆ ಸದಸ್ಯರು, ಸದಸ್ಯತನ, ಸದಸ್ಯರ ಸಭೆ ಇತ್ಯಾದಿಗಳ ಬಗ್ಗೆ ಮಾಹಿತಿ ಸಿಗುವುದು ದುರ್ಲಭ.

ಎರಡು, ಬಳಕೆದಾರರು ಪಾವತಿಸಬೇಕಾದ ತೆರಿಗೆಗೆ ಸಂಬಂಧಿಸಿದ ಪ್ರಶ್ನೆಗಳು. ಇಲ್ಲಿ ನೀರು ತೆರಿಗೆಯ ಇರುವಿಕೆ, ತೆರಿಗೆ ದರ ಅಥವಾ ಮೊತ್ತ ಮತ್ತು ತೆರಿಗೆ ಪಾವತಿ ಕುರಿತು ಜನರ ಅಭಿಪ್ರಾಯಗಳನ್ನು ಕೇಳಲಾಗಿತ್ತು. ಹಿಂದೆ ನೀರಿಗೆ ತೆರಿಗೆ ಕೊಡುವ ಕ್ರಮ ಇತ್ತೇ ಎಂದರೆ ಕಮಲಾಪುರ ಮತ್ತು ತಿಮ್ಮಲಾಪುರದ ಹೆಚ್ಚು ಕಡಿಮೆ ಎಲ್ಲ ರೈತರು ಇತ್ತು ಎಂದು ಹೇಳಿದ್ದಾರೆ. ಇಲ್ಲಿ ಹಿಂದೆ ಎನ್ನುವುದನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸಿಲ್ಲ. ಹಿಂದೆ ಎಂದರೆ ಕೆಲವರಿಗೆ ಕೆಲವು ವರ್ಷಗಳ ಹಿಂದೆ. ಇನ್ನು ಕೆಲವರಿಗೆ ಅವರ ಹಿರಿಯರ ಕಾಲದಲ್ಲಿ ಮತ್ತು ಕೆಲವರಿಗೆ ವಿಜಯನಗರ ಕಾಲದಲ್ಲಿ. ಸಂದರ್ಶನದ ಸಂದರ್ಭದಲ್ಲಿ ಹಿಂದೆ ಅಂದರೆ ತಮ್ಮ ಹಿರಿಯರ ಕಾಲದಲ್ಲಿ ಎನ್ನುವುದನ್ನು ಮನದಟ್ಟು ಮಾಡಲು ಪ್ರಯತ್ನಿಸಲಾಗಿತ್ತು. ಆದರೂ ತಿಮ್ಮಲಾಪುರದ ಎಲ್ಲ ರೈತರು ಹಿಂದೆ ತೆರಿಗೆ ಕೊಡುವ ಕ್ರಮ ಇತ್ತು ಎನ್ನುವಾಗ ಅವರು ತಿಮ್ಮಲಾಪುರಕ್ಕೆ ಬಂದ ನಂತರ ಇದ್ದಿರಬಹುದೋ ಏನೋ ಎಂದು ಕೇಳಲಾಯಿತು. ಅವರ ಪ್ರಕಾರ ನೀರಿಗೆ ತೆರಿಗೆ ಕೊಡುವ ಕ್ರಮ ಒಂದು ಸಾಮಾನ್ಯ ವಿಚಾರ. ಅದು ಎಲ್ಲರಿಗೂ ತಿಳಿದ ವಿಚಾರ ಮತ್ತು ಯಾವ ಊರಿಗೂ ಹೋದರೂ ಇದೆ ಎಂದು ಹೇಳುತ್ತಾರೆ. ಆದರೆ ವಿಚಿತ್ರವೆಂದರೆ ಕಲ್‌ತಾವರೆಗೆರೆ ಬಹುತೇಕ ಎಲ್ಲ ರೈತರು ಹಿಂದೆ ತೆರಿಗೆ ಕೊಡುವ ಕ್ರಮ ಇರಲಿಲ್ಲ ಎನ್ನುತ್ತಾರೆ. ತುಂಬಾ ಹಳೇ ಕೆರೆ ಮತ್ತು ಹಳೇ ತಲೆಮಾರಿನ ಜನರ ಅಭಿಪ್ರಾಯ ಅದು. ಬಹಳ ಅಭಿಪ್ರಾಯವನ್ನು ಹೇಗೆ ಅರ್ಥಮಾಡಿಕೊಳ್ಳುವುದು?

ತೆರಿಗೆ ದರ ಕುರಿತು ಕಮಲಾಪುರ ಮತ್ತು ತಿಮ್ಮಲಾಪುರದ ರೈತರ ಅಭಿಪ್ರಾಯ ಒಂದೇ ಇಲ್ಲ. ಕಮಲಾಪುರದ ಬಹುತೇಕ ರೈತರು ಹಿಂದೆ ತೆರಿಗೆ ದರ ಅಥವಾ ಮೊತ್ತ ಸರಿಯಾಗಿತ್ತು ಎಂದಿದ್ದಾರೆ. ಹಾಗೆ ಹೇಳುವಾಗ ಅವರ ಮನಸ್ಸಲ್ಲಿ ಯಾವ ಹಿಂದೆ ಇತ್ತು ಎನ್ನುವುದು ಕಷ್ಟ. ಕಮಲಾಪುರ ಕೆರೆ ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುತ್ತದೆ. ತುಂಗಾಭದ್ರಾ ಆಣೆಕಟ್ಟಿನ ನೀರು ಕೆರೆಗೆ ಮುಖ್ಯ ಆಧಾರ. ಕಬ್ಬು, ಭತ್ತ, ಬಾಳೆ ಇಲ್ಲಿನ ರೈತರ ಮುಖ್ಯ ಬೆಳೆಗಳು. ೨೦೦೦ ಇಸವಿಯವರೆಗೆ ಒಂದು ಎಕ್ರೆ ಕಬ್ಬಿನ ಬೆಳೆಗೆ ವಾರ್ಷಿಕ ನೀರಿನ ತೆರಿಗೆ ರೂ.೨೭೫ ಆಗಿತ್ತು. ೨೦೦೧ರಲ್ಲ ನೀರಿನ ತೆರಿಗೆಯನ್ನು ರೂ.೪೫೦ಕ್ಕೆ ಏರಿಸಲಾಗಿತ್ತು. ಆದುದರಿಂದ ಅಲ್ಲಿನ ಎಲ್ಲ ರೈತರು ಹಿಂದೆ ತೆರಿಗೆ ಸರಿ ಎತ್ತು ಎನ್ನುವಾಗ ಅವರ ಹಿಂದೆಯನ್ನು ಅವರ ಹಿರಿಯರ ಅಥವಾ ವಿಜಯನಗರ ಕಾಲದ ತೆರಿಗೆಗೆ ಹೋಲಿಸುವುದು ಕಷ್ಟ. ಇಲ್ಲಿ ಹಿಂದೆ ಸರಿ ಇತ್ತು ಎನ್ನುವಾಗ ಈಗ ಸರಿ ಇಲ್ಲ ಎನ್ನುವ ಧ್ವನಿ ಇದೆ. ತಿಮ್ಮಲಾಪುರದ ಮೂರನೆ ಒಂದಕ್ಕಿಂತ ಹೆಚ್ಚು ರೈತರು ಹಿಂದೆ ತೆರಿಗೆ ಮೊತ್ತ ಸರಿ ಇತ್ತು ಎಂದಿದ್ದಾರೆ. ಅವರಲ್ಲಿ ಈಗ ವಾರ್ಷಿಕ ತೆರಿಗೆ ದರ ಕೇವಲ ರೂ.೪೦. ಒಬ್ಬಳು ಅಜ್ಜಿ ಜತೆ, ‘ಅಲ್ಲ ನೀನು ರೂ.೪೦ನ್ನು ಕೂಡ ಜಾಸ್ತಿ ಎಂದರೆ ಹೇಗೆ?’ ಎಂದೆ. ಅದಕ್ಕೆ ಅವಳು, ‘ನನಗೆ ಇರುವುದು ಎರಡು ಎಕರೆ ಭೂಮಿ. ಅದರಲ್ಲಿ ವರ್ಷವಿಡೀ ಕೃಷಿ ಮಾಡಿದರೂ ನನ್ನ ಸಂಸಾರದ ಹೊಟ್ಟೆ ತುಂಬುವುದಿಲ್ಲ. ಕೆರೆ ನೀರು ಒಂದು ಕೃಷಿಗೂ ಸರಿಯಾಗಿ ಬರುವುದಿಲ್ಲ. ಅದಕ್ಕೆ ನಾನ್ಯಾಕೆ ನಲ್ವತ್ತು ರೂಪಾಯಿ ಕೊಡಬೇಕು’ ಎಂದು ಉತ್ತರಿಸಿದಳು. ಹಿಂದೆ ತೆರಿಗೆ ಕಡಿಮೆ ಇತ್ತು ಎನ್ನುವ ಅಜ್ಜಿಯ ವಾದದ ಹಿಂದೆ ಈಗ ಜಾಸ್ತಿ ಇದೆ ಎನ್ನುವ ಗೃಹಿಕೆ ಇದೆ. ಜತೆಗೆ ಅದು ಜಾಸ್ತಿ ಆದುದು ಮೊತ್ತದ ದೃಷ್ಟಿಯಿಂದ ಅಲ್ಲ; ಬದಲಿಗೆ ಪೂರೈಕೆಯಾಗುವ ನೀರಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಅಜ್ಜಿ ಆ ತೀರ್ಮಾನಕ್ಕೆ ಬಂದಿರುವುದು. ತೆರಿಗೆ ಪಾವತಿ ಬಗ್ಗೆ ವಿಚಾರಿಸಿದರೆ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಕಮಲಾಪುರದ ಕೇವಲ ೭ ರೈತರು (ಭೇಟಿಯಾದ ೨೫ರಲ್ಲಿ) ಹಿಂದೆ ತೆರಿಗೆ ಕ್ರಮ ಪ್ರಕಾರ ಪಾವತಿ ಆಗುತ್ತಿತ್ತು ಎಂದು ಹೇಳುತ್ತಾರೆ. ಉಳಿದವರು ಆಗುತ್ತಿರಲಿಲ್ಲ ಅಥವಾ ಗೊತ್ತಿಲ್ಲ ಅಂದಿದ್ದಾರೆ. ಇಲ್ಲೂ ಕೂಡ ವರ್ತಮಾನ ಅವರ ಭೂತಕ್ಕೆ ಸಂಬಂಧಿಸಿದ ಅಭಿಪ್ರಾಯವನ್ನು ಪ್ರಭಾವಿಸಿರಬಹುದು. ವರ್ತಮಾನದಲ್ಲಿ ಕಮಲಾಪುರದಲ್ಲಿ ನೀರಿನ ತೆರಿಗೆ ಕ್ರಮ ಪ್ರಕಾರ ವಸೂಲಿಯಾಗುತ್ತಿದೆ. ತಿಮ್ಮಲಾಪುರದ ಅರ್ಧಕ್ಕಿಂತ ಹೆಚ್ಚು ರೈತರು ಅದೇ ಅಭಿಪ್ರಾಯ (ಹಿಂದೆ ಕ್ರಮ ಪ್ರಕಾರ ತೆರಿಗೆ ಸಂದಾಯವಾಗುತ್ತಿತ್ತು) ನೀಡುತ್ತಾರೆ. ಇಲ್ಲೂ ಕೂಡ ಹಿಂದೆ ಅನ್ನುವಾಗ ವರ್ತಮಾನಕ್ಕೆ ಹೋಲಿಸಿಕೊಂಡು ಆ ತೀರ್ಮಾನಕ್ಕೆ ಬಂದಿರಲೂಬಹುದು.

ಮೂರು, ಕೆರೆ ಪಾತ್ರ ಒತ್ತುವರಿ ಕುರಿತಂತೆ ರೈತರ ಅಭಿಪ್ರಾಯ. ಕಮಲಾಪುರ ಕೆರೆಯ ಸುಮಾರು ನೂರು ಎಕ್ರೆಗಳಿಗಿಂತಲೂ ಹೆಚ್ಚು ಕೆರೆ ಪಾತ್ರ ಒತ್ತುವರಿ ಆಗಿದೆ. ಅಲ್ಲಿ ಸುಮಾರು ಐವತ್ತು ಕುಟುಂಬಗಳು ಕೃಷಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಹಿಂದೆ ಕೆರೆ ಪಾತ್ರ ಒತ್ತುವರಿ ಸಮಸ್ಯೆ ಇತ್ತೇ? ಎಂದು ವಿಚಾರಿಸಿದರೆ ಕಮಲಾಪುರದ ಬಹುತೇಕ ರೈತರು ಇತ್ತು ಎಂದು ಅಭಿಪ್ರಾಯಪಡುತ್ತಾರೆ. ಪುನಃ ಇಲ್ಲಿ ಹಿಂದೆ ಎಂದರೆ ಎಷ್ಟು ಹಿಂದೆ ಎನ್ನುವ ಪ್ರಶ್ನೆ ಕೇಳಬೇಕಾಗುತ್ತದೆ. ಕೆಲವು ಹಿರಿಯರ ಪ್ರಕಾರ ಹಿಂದೆ ಕೆರೆ ಪಾತ್ರ ಒತ್ತುವರಿ ಸಮಸ್ಯೆ ಇರಲಿಲ್ಲ. ಈ ಸಮಸ್ಯೆ ಇರಲಿಲ್ಲ. ಹಾಗೆ ಹೇಳುವಾಗ ಪುನಃ ವರ್ತಮಾನವೇ ಅವರ ಮುಂದೆ ಇದ್ದಂತೆ ಕಾಣುತ್ತದೆ. ತಿಮ್ಮಲಾಪುರದ ನಾಲ್ಕು ಕೆರೆಗಳು ಕೂಡ ರಕ್ಷಿತ ಅರಣ್ಯ ಪ್ರದೇಶದಲ್ಲಿವೆ. ಆದುದರಿಂದ ಆ ಸ್ಥಳದಲ್ಲಿ ಒತ್ತುವರಿ ಮಾಡುವುದು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದಂತೆ ಆಗುತ್ತದೆ. ಅದಕ್ಕೆ ಅರಣ್ಯ ಇಲಾಖೆಯವರು ಅವಕಾಶ ಕೊಡುವುದಿಲ್ಲ. ಹಾಗೆ ಅಲ್ಲಿ ಇಂದು ಒತ್ತುವರಿ ಆಗಿಲ್ಲ. ಇಂದು ಒತ್ತುವರಿ ಇಲ್ಲದಿರುವುದು ಹಿಂದೆ ಕೂಡ ಒತ್ತುವರಿ ಇರಲಿಲ್ಲ ಎಂದು ರೈತರು ಅಭಿಪ್ರಾಯಪಡಲು ಕಾರಣವಾಗಿರಬಹುದು. ಕಲ್ ತಾವರೆಗೆರೆಯಲ್ಲಿ ಹಿಂದೆ ಒತ್ತುವರಿ ಇರಲಿಲ್ಲ ಎಂದು ಬಹುತೇಕ ಎಲ್ಲ ರೈತರು ಅಭಿಪ್ರಾಯ ಪಡುತ್ತಾರೆ. ವರ್ತಮಾನದಲ್ಲೂ ಅಲ್ಲಿನ ಕೆರೆ ಪಾತ್ರ ಒತ್ತುವರಿ ಆಗಿಲ್ಲ. ಒತ್ತುವರಿ ತಡೆಯುವ ಅಗತ್ಯ ಕುರಿತು ಬಹುತೇಕ ಎಲ್ಲ ರೈತರಲ್ಲೂ ಸಹಮತವಿದೆ. ಹಿಂದೆ ಒತ್ತುವರಿ ಇಲ್ಲದಿರುವಲ್ಲಿ (ಆ ಹಿಂದೆ ಹೇಗೆ ವರ್ತಮಾನದ ಬೆಳವಣಿಗೆ ಮೇಲೆ ಆಧಾರಿತ ಎನ್ನುವುದನ್ನು ನಾವು ನೋಡಿದ್ದೇವೆ) ಅದನ್ನು ತಡೆಯುವ ಅಗತ್ಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವರ್ತಮಾನದಲ್ಲಿ ಒತ್ತುವರಿ ಸಮಸ್ಯೆ ಇರುವ ಪ್ರದೇಶದ ರೈತರು ಹಿಂದೆ ಕೂಡ ಆ ಸಮಸ್ಯೆ ಇತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಿಂದೆ ಆ ಸಮಸ್ಯೆ ಇದ್ದುದರಿಂದ ಹಿಂದೆ ಕೂಡ ಅದನ್ನು ತಡೆಯುವ ಅಗತ್ಯವಿತ್ತು ಎಂದು ಅಭಿಪ್ರಾಯ ಪಡುವುದು ಸಹಜವಾಗುತ್ತದೆ. ಒತ್ತುವರಿ ಕುರಿತಂತೆ ಇನ್ನೊಂದು ಬಹುಮುಖ್ಯ ಪ್ರಶ್ನೆ-ಒತ್ತುವರಿ ತಡೆಯುವ ಕೆಲಸ ಯಾರು ಮಾಡಬೇಕು? ಕಮಲಾಪುರ ಎಲ್ಲ ರೈತರು, ತಿಮ್ಮಲಾಪುರದ ಮೂರನೆ ಒಂದರಷ್ಟು ರೈತರು ಮತ್ತು ಕಲ್‌ತಾವರೆಗೆರೆಯ ಅರ್ಧದಷ್ಟು ರೈತರು ಒತ್ತುವರಿ ತಡೆಯುವುದು ಸರಕಾರದ ಕೆಲಸ ಎಂದು ಅಭಿಪ್ರಾಯ ಪಡುತ್ತಾರೆ. ತಿಮ್ಮಲಾಪುರದಲ್ಲಿ ಆ ಸಮಸ್ಯೆಯೇ ಇಲ್ಲದಿರುವುದುದರಿಂದ ಅದರ ಪರಿಹಾರಕ್ಕೆ ಯಾರನ್ನು ಹೊಣೆಯಾಗಿಸಬೇಕು ಎನ್ನುವ ಪ್ರಶ್ನೆ ರೈತರನ್ನು ಅಷ್ಟಾಗಿ ಕಾಡಿದಂತೆ ಕಾಣುವುದಿಲ್ಲ. ಒಂದು ವೇಳೆ ಅವರಲ್ಲೂ ಕಮಲಾಪುರದಷ್ಟೆ ಗಾಢವಾಗಿ ಒತ್ತುವರಿ ಸಮಸ್ಯೆ ಇರುತ್ತಿದ್ದರೆ ಅವರು ಇತರ ರೈತರಿಗಿಂತ ಭಿನ್ನವಾದ ಉತ್ತರ ಕೊಡುತ್ತಿದ್ದನು ಎಂದು ಊಹಿಸುವುದು ಕಷ್ಟ.

ನಾಲ್ಕು, ಕೆರೆ ಕಾಲುವೆ ಇತ್ಯಾದಿಗಳಿಗೆ ರಿಪೇರಿಗೆ ಶ್ರಮದಾನ ಮಾಡುವ ಕ್ರಮ ಹಿಂದೆ ಇತ್ತೇ ಎಂದು ಕೇಳಲು ಎಲ್ಲ ಹಳ್ಳಿಯ ಹೆಚ್ಚಿನ ರೈತರು ಇತ್ತೆಂದು ಉತ್ತರಿಸಿದ್ದಾರೆ. ಅದೇ ರೀತಿ ವರ್ತಮಾನದಲ್ಲೂ ಶ್ರಮದಾನ ಮಾಡುವ ಕ್ರಮ ಇದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಆಶ್ಚರ್ಯದ ಸಂಗತಿಯೆಂದರೆ ಕೆರೆ ಕಾಲುವೆ ಇತ್ಯಾದಿಗಳ ರಿಪೇರಿಗೆ ವಂತಿಗೆ ನೀಡುವ ಕ್ರಮ ಹಿಂದೆ ಅಥವಾ ವರ್ತಮಾನದಲ್ಲಿ ಇರಲಿಲ್ಲವೆಂದು ಎಲ್ಲ ರೈತರು ಹೇಳುತ್ತಾರೆ. ಹಣದ ವ್ಯವಹಾರ ತುಂಬಾ ಸೀಮಿತವಾಗಿದ್ದ ಕಾಲದಲ್ಲಿ ಕೆರೆ ಕಾಲುವೆ ಇತ್ಯಾದಿಗಳ ರಿಪೇರಿಗೆ ಹಣ ಕೊಡುವ ಸಂಪ್ರದಾಯ ದುಬಾರಿಯಾಗಿರಬಹುದು. ಆದರೆ ವಾಣಿಜ್ಯ ಬೆಳೆ ಬೆಳೆಯುವ ಇಂದಿನ ದಿನಗಳಲ್ಲಿ ಹಣ ಕೊಡುವ ಕ್ರಮ ಇಲ್ಲ ಎನ್ನುವ ರೈತರ ಅಭಿಪ್ರಾಯವನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ. ಕಮಲಾಪುರದ ಹೆಚ್ಚಿನ ರೈತರು ವಾಣಿಜ್ಯ ಬೆಳೆಗಾರರು. ಆದರೆ ಅವರಲ್ಲಿ ಹತ್ತು ಎಕ್ರೆಗಿಂತ ಭೂ ಹಿಡುವಳಿ ಇರುವವರ ಸಂಖ್ಯೆ ಸ್ವಲ್ಪ ಕಡಿಮೆ ಇದೆ. ಹೆಚ್ಚಿನ ರೈತರು ಎರಡರಿಂದ ಮೂರು ಎಕ್ರೆ ಹಿಡುವಳಿ ಇರುವವರು. ಇವರು ವಾಣಿಜ್ಯ ಬೆಳೆ ಬೆಳೆದರು ಅದರಿಂದ ಬರುವ ಆದಾಯ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟು ಮಾತ್ರ. ತಿಮ್ಮಲಾಪುರ ಅಥವಾ ಕಲ್‌ತಾವರೆಗಳಲ್ಲಿ ಒಂದು ವಿಧದ ಒಣ ಭೂಮಿ ವ್ಯವಸಾಯವೇ. ಯಾಕೆಂದರೆ ಅಲ್ಲಿನ ಕೆರೆಗಳು ಮಳೆ ಬಂದರೆ ತುಂಬುತ್ತವೆ; ಇಲ್ಲವಾದರೆ ಖಾಲಿ ಇರುತ್ತವೆ. ಉತ್ತರ ಕರ್ನಾಟಕದಲ್ಲಿ ಮಳೆ ಬರುವುದು ಗ್ಯಾರಂಟಿಯೇನಲ್ಲ. ಜತೆಗೆ ಬಹುತೇಕ ರೈತರ ಭೂಹಿಡುವಳಿ ಎರಡರಿಂದ ಮೂರು ಎಕ್ರೆಗಳು. ನೀರಾವರಿ ಇರುವಲ್ಲಿ ಇದೇನು ಕಡಿಮೆ ಹಿಡುವಳಿ ಅಲ್ಲ. ಆದರೆ ನೀರಾವರಿ ವ್ಯವಸ್ಥೆ ಇಲ್ಲದ ಕಡೆ ಮೂರು ಎಕ್ರೆ ಭೂ ಹಿಡುವಳಿ ಇರುವ ರೈತರು ಮೂರು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದೆ. ಆದುದರಿಂದ ಇಂದು ಕೂಡ ರೈತರು ಶ್ರಮದಾನ ಮಾಡಲು ತೋರುವ ಉತ್ಸಾಹವನ್ನು ವಂತಿಗೆ ನೀಡಲು ತೋರಿಸುತ್ತಿಲ್ಲ.

ಐದು, ಕೆರೆ ಹೂಳಿನ ಸಮಸ್ಯೆ. ಕೆರೆ ಹೂಳಿನ ಸಮಸ್ಯೆ ಹಿಂದೆ ಕೂಡ ಇತ್ತೆಂದು ಕಮಲಾಪುರದ ೧೮ ಮತ್ತು ತಿಮ್ಮಲಾಪುರದ ೪ ರೈತರು ಅಭಿಪ್ರಾಯ ಪಡುತ್ತಾರೆ. ಆದರೆ ಕಲ್‌ತಾವರೆಗೆರೆಯ ಇಬ್ಬರು (ಮಾತಾಡಿಸಿದ ೧೫ ರೈತರಲ್ಲಿ) ರೈತರು ಮಾತ್ರ ಕೆರೆ ಹೂಳಿನ ಸಮಸ್ಯೆ ಹಿಂದೆ ಇತ್ತೆಂದು ಹೇಳುತ್ತಾರೆ. ವರ್ತಮಾನದ ಬೆಳವಣಿಗೆಯ ಆಧಾರದಲ್ಲಿ ಹಿಂದಿನ ಸಮಸ್ಯೆ ಕುರಿತು ರೈತರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆಂದು ನೀರಿನ ತೆರಿಗೆ ಕುರಿತು ಚರ್ಚಿಸುವಾಗ ನೋಡಿದ್ದೇವೆ. ಆ ಥಿಸಿಸ್ ಇಲ್ಲೂ ಕೆಲಸ ಮಾಡುತ್ತಿದೆ. ಅದಕ್ಕೆ ಉದಾಹರಣೆಯೆಂದರೆ ಕಮಲಾಪುರ ಕೆರೆ ಹೂಳಿನ ಸಮಸ್ಯೆ. ಆ ಕೆರೆಯಲ್ಲಿ ತುಂಬಿದ ಹೂಳಿನ ಲೆಕ್ಕಚಾರವನ್ನು ಮುಂದೆ ಕೊಡಲಾಗಿದೆ. ಕೆರೆಯ ಸರಿ ಅರ್ಧ ಪಾತ್ರ ಹೂಳು ತುಂಬಿದೆ. ಅದುದರಿಂದಲೇ ಅಲ್ಲಿ ಮಾತಾಡಿಸಿದ ಎಲ್ಲ ರೈತರು ಕೆರೆ ಹೂಳಿನ ಸಮಸ್ಯೆ ಬಹು ದೊಡ್ಡ ಸಮಸ್ಯೆಯೆಂದು ಅಭಿಪ್ರಾಯಪಟ್ಟಿದ್ದಾರೆ. ಕಮಲಾಪುರ ಕೆರೆಗೆ ಹೋಲಿಸಿದರೆ ತಿಮ್ಮಲಾಪುರದಲ್ಲಿ ಹೂಳಿನ ಸಮಸ್ಯೆ ಅಷ್ಟು ಬೃಹತ್ ಪ್ರಮಾಣದಲ್ಲಿ ಇಲ್ಲ. ಕಲ್‌ತಾವರೆಗೆರೆಯಲ್ಲಿನ ಕೆರೆಯಲ್ಲಿ ಸ್ವಲ್ಪ ಮಟ್ಟಿಗೆ ಹೂಳಿನ ಸಮಸ್ಯೆ ಇದೆ. ಆದಾಗ್ಯೂ ಹಿಂದೆ ಕೂಡ ಹೂಳಿನ ಸಮಸ್ಯೆ ಇತ್ತೆಂದು ಅಭಿಪ್ರಾಯ ಪಟ್ಟವರಲ್ಲಿ ಕಮಲಾಪುರ ರೈತರ ಸಂಖ್ಯೆ ಜಾಸ್ತಿ ಇದೆ. ಕೆರೆ ಹೂಳೆತ್ತಲು ಶ್ರಮದಾನ ಮಾಡುವ ಕ್ರಮ ಹಿಂದೆ ಇತ್ತೆಂದು ಹೇಳುವ ರೈತರ ಸಂಖ್ಯೆ ತುಂಬಾ ಕಡಿಮೆ. ಕಮಲಾಪುರದ ನಾಲ್ವರು, ತಿಮ್ಮಲಾಪುರದ ಮೂವರು ಮತ್ತು ಕಲ್‌ತಾವರೆಗೆರೆಯ ಒಬ್ಬ ರೈತ ಮಾತ್ರ ಹಿಂದೆ ಕೆರೆ ಹೂಳೆತ್ತಲು ಶ್ರಮದಾನ ಮಾಡುವ ಕ್ರಮ ಇತ್ತೆಂದು ಹೇಳುತ್ತಾರೆ. ಹಿಂದೆ ಹೂಳಿನ ಸಮಸ್ಯೆ ಇತ್ತೆಂದು ಶ್ರಮದಾನ ಮಾಡುವ ಕ್ರಮ ಇತ್ತೆಂದು ಹೇಳುತ್ತಾರೆ. ಹಿಂದೆ ಹೂಳಿನ ಸಮಸ್ಯೆ ಇತ್ತೆಂದು ಹೇಳುವವರಲ್ಲಿ ಕಮಲಾಪುರದಲ್ಲಿ ರೈತರ ಸಂಖ್ಯೆ ಹೆಚ್ಚಿದೆ. ಆದರೆ ಹಿಂದೆ ಅಥವಾ ಈಗ ಹೂಳೆತ್ತಲು ಶ್ರಮದಾನ ಮಾಡುವ ಕುರಿತು ಕೇಳಿದರೆ ಇದೆ ಎನ್ನುವವರ ಸಂಖ್ಯೆ ಕಮಲಾಪುರದಲ್ಲಿ ಕಡಿಮೆ ಇದೆ. ತಿಮ್ಮಲಾಪುರದ ಬಹುತೇಕ ರೈತರು ಹೂಳೆತ್ತಲು ಶ್ರಮದಾನ ಮಾಡುವ ಕ್ರಮ ಕುರಿತು ಇಲ್ಲ ಅಥವಾ ಗೊತ್ತಿಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ಅಲ್ಲಿ ಹೂಳಿನ ಸಮಸ್ಯೆ ಇಲ್ಲದಿರುವುದಿರಬಹುದು. ಅದೇ ರೀತಿ ಹೂಳೆತ್ತಲು ವಂತಿಗೆ ನೀಡುವ ಕ್ರಮ ಹಿಂದೆ ಇರಲಿಲ್ಲವೆಂದು ಎಲ್ಲ ಹಳ್ಳಿಯ ಎಲ್ಲಾ ರೈತರು ಅಭಿಪ್ರಾಯ ಪಡುತ್ತಾರೆ. ಹಿಂದೆ ಮಾತ್ರವಲ್ಲ ಈಗಲೂ ಇಲ್ಲವೆಂದು ಅವರೆಲ್ಲರ ಅಭಿಪ್ರಾಯ. ಕೆರೆ ಹೂಳೆತ್ತುವ ಜವಾಬ್ದಾರಿ ಕೂಡ ರೈತರದಲ್ಲ; ಸರಕಾರದ್ದೆಂದು ಬಹುತೇಕ ಎಲ್ಲ ರೈತರ ಅಂಬೋಣ. ಕೆರೆ ಹೂಳಿನ ಕುರಿತು ರೈತರ ಅಭಿಪ್ರಾಯಗಳು ಚರಿತ್ರೆಯಲ್ಲಿನ ನಡಾವಳಿಕೆಗೆ ಸಂಪೂರ್ಣ ಭಿನ್ನ. ಯಾಕೆ ಹೀಗಾಯಿತು? ಇದನ್ನು ಹೇಗೆ ಅರ್ಥಮಾಡಿಕೊಳ್ಳಬಹುದು?

ಆರು, ನೀರು ಹಂಚಿಕೆ ಕ್ರಮ ಹಿಂದೆ ಸಮರ್ಪಕವಾಗಿತ್ತೆಂದು ಕಮಲಾಪುರ ಮತ್ತು ತಿಮ್ಮಲಾಪುರದ ಬಹುತೇಕ ಎಲ್ಲ ರೈತರ ಅಭಿಪ್ರಾಯ. ಕಲ್‌ತಾವರೆಗೆರೆಯ ಹನ್ನೆರೆಡು ರೈತರು ಸಮರ್ಪಕವಾಗಿತ್ತೆಂದರೆ ಮೂರು ಮಂದಿ ರೈತರು (ಗೊತ್ತಿಲ್ಲವೆಂದು ಹೇಳಿದವರನ್ನು ಸೇರಿಸಿಕೊಂಡು) ಸಮರ್ಪಕವಾಗಿರಲಿಲ್ಲವೆಂದು ಹೇಳುತ್ತಾರೆ. ಅದೇ ರೀತಿ ಎಲ್ಲ ರೈತರು ಹಿಂದೆ ನೀರು ಹಂಚಿಕೆ ನಿಯಮವನ್ನು ಎಲ್ಲ ರೈತರು ಪಾಲಿಸುತ್ತಿದ್ದರೆಂದು ಅಭಿಪ್ರಾಯ ಪಡುತ್ತಾರೆ. ಆದರೆ ನೀರು ಹಂಚಿಕೆ ಕುರಿತು ರೈತರ ಮಧ್ಯೆ ಜಗಳ ಇತ್ತೇ ಎಂದರೆ ಕಮಲಾಪುರದ ಬಹುತೇಕ ರೈತರು ಇತ್ತೆಂದು ಒಪ್ಪಿಕೊಳ್ಳುತ್ತಾರೆ. ಇದೊಂದು ರೀತಿಯ ವಿರೋಧಭಾಸ. ಎಲ್ಲ ರೈತರು ನೀರು ಹಂಚಿಕೆಯ ನಿಯಮ ಅನುಸರಿಸಿದರೆ ಜಗಳ ಆಗುವ ಸಾಧ್ಯತೆಗಳು ಕಡಿಮೆ. ಜಗಳ ಇದೆ ಎಂದು ಹೇಳಿದ ರೈತರಲ್ಲಿ ಹೆಚ್ಚಿನವರು ಕಮಲಾಪುರ ಕೆರೆ ನೀರು ಬಳಕೆದಾರರು. ಅಲ್ಲಿನ ರೈತರಿಗೆ ವರ್ಷವಿಡೀ ನೀರಿನ ಪೂರೈಕೆ ಇದೆ. ಹಾಗಿದ್ದರೂ ಏಫ್ರಿಲ್‌ನಿಂದ ಜುಲೈ ತನಕ ಕೆರೆಯಲ್ಲಿ ನೀರು ಕಡಿಮೆಯಾಗುತ್ತದೆ. ಆವಾಗ ಅಚ್ಚುಕಟ್ಟು ಪ್ರದೇಶದ ಕೊನೆಗೆ ಬರುವ ಹೊಲಗಳಿಗೆ ನೀರು ತಲುಪುವ ಸಾಧ್ಯತೆಗಳು ಕಡಿಮೆ. ಆ ಸಂದರ್ಭದಲ್ಲಿ ಜಗಳ ಆಗುವ ಸಾಧ್ಯತೆಗಳು ಹೆಚ್ಚು.

ಸಹಭಾಗಿತ್ವದ ಸಾಧ್ಯತೆಗಳು

ಸಹಭಾಗಿತ್ವದ ಸಾಧ್ಯತೆಗಳನ್ನು ಗುರುತಿಸಲು ಎರಡು ವಿಧಾನಗಳನ್ನು ಅನುಸರಿಸಲಾಗಿದೆ. ಒಂದು, ಸಹಭಾಗಿತ್ವ ಕುರಿತು ಬಳಕೆದಾರರ ಅಭಿಪ್ರಾಯ. ಎರಡು, ಒಟ್ಟು ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಸಹಭಾಗಿತ್ವದ ಸಾಧ್ಯತೆಯನ್ನು ವಿಶ್ಲೇಷಿಸುವುದು. ರೈತರು ಹೇಗೆ? ಯಾವ ರೂಪದಲ್ಲಿ? ಮತ್ತು ಎಷ್ಟರ ಮಟ್ಟಿಗೆ ನೀರಾವರಿ ನಿರ್ವಹಣೆಯಲ್ಲಿ ಪಾಲುಗೊಳ್ಳಲು ಸಿದ್ದರಿದ್ದಾರೆ? ಎನ್ನುವುದರ ಕುರಿತು ಅಭಿ‌ಪ್ರಾಯ ಸಂಗ್ರಹಿಸಲಾಗಿದೆ. ತುಂಬಾ ಸಂತೋಷದ ಸಂಗತಿಯೆಂದರೆ ಸಂದರ್ಶಿಸಿದ ಎಲ್ಲ ಹಳ್ಳಿಯ ಎಲ್ಲ ರೈತರು ಬಳಕೆದಾರರ ಸಂಘಟನೆ ಬೇಕು ಎಂದಿದ್ದಾರೆ. ಅಷ್ಟು ಮಾತ್ರವಲ್ಲ ಸಂಘಟನೆಯಲ್ಲಿ ಸದಸ್ಯರು, ಸದಸ್ಯತನ ಇರಬೇಕು, ಜತೆಗೆ ಕಾಲಕಾಲಕ್ಕೆ ಸದಸ್ಯರ ಸಭೆ ನಡೆಯಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ ಸದಸ್ಯತನವನ್ನು ಕೇವಲ ನೀರು ಬಳಕೆದಾರರಿಗೆ ಸೀಮಿತಗೊಳಿಸಬೇಕು ಎನ್ನುವ ವಿಚಾರದಲ್ಲೂ ತಕ್ಕಮಟ್ಟಿನ ಸಹಮತವಿದೆ. ನೀರಿನ ಮೇಲೆ ತೆರಿಗೆ ವಿಧಿಸುವ ಕುರಿತು ರೈತರ ಆಕ್ಷೇಪವಿಲ್ಲ. ಆದರೆ ಅದು ಒಂದು ಮಿತಿಯೊಳಗೆ ಇರಬೇಕು. ಎಲ್ಲ ರೈತರು ತೆರಿಗೆ ಪಾವತಿ ಮಾಡಬೇಕು ಮತ್ತು ಪಾವತಿ ಮಾಡದವರ ವಿರುದ್ಧ ಕ್ರಮ ಇರಬೇಕೆಂದು ವಾದಿಸುತ್ತಾರೆ. ಇದು ಯಾಕೆಂದರೆ ಇಂದು ತೆರಿಗೆ ಕಟ್ಟಿದವನಿಗೂ ಬಾಕಿ ಇಟ್ಟವನಿಗೂ ವಿಶೇಷ ವ್ಯತ್ಯಾಸವಿಲ್ಲ. ಕೆರೆ ತುಂಬಿರುವಷ್ಟು ಕಾಲ ಇಬ್ಬರಿಗೂ ನೀರು ದೊರೆಯುತ್ತದೆ ಹಾಗಿದ್ದರೆ ತೆರಿಗೆ ಕಟ್ಟುವುದಾದರೂ ಯಾಕೆಂದು ಕೆಲ ರೈತರು ಪ್ರಶ್ನೆ ಕೇಳುತ್ತಾರೆ.

ಕೆರೆ ಪಾತ್ರ ಒತ್ತುವರಿ ತಡೆಯುವ ಅಗತ್ಯವಿದೆ ಎಂದು ಎಲ್ಲ ರೈತರು ಒಪ್ಪುತ್ತಾರೆ. ಆದರೆ ಆ ಜವಾಬ್ದಾರಿಯನ್ನು ಹೊರಲು ಅವರು ಸಿದ್ದರಿಲ್ಲ. ಅದನ್ನು ಸರಕಾರವೇ ಹೊರಬೇಕೆಂದು ಅವರು ಬಯಸುತ್ತಾರೆ. ‘ನಿಮ್ಮ ಊರಿನ ಜನ, ನಿಮ್ಮ ಕಣ್ಣೆದುರೆ ಊರಿನ ಕೆರೆ ಪಾತ್ರ ಒತ್ತುವರಿ ಮಾಡುವಾಗ ಸುಮ್ಮನಿದ್ದು, ಈಗ ಅದನ್ನು ತಡೆಯುವ ಅಥವಾ ಖಾಲಿ ಮಾಡಿಸುವ ಜವಾಬ್ದಾರಿ ಸರಕಾರದ್ದು ಎನ್ನುವುದು ಸರಿಯೇ?, ಎಂದು ಕೇಳಿದೆ. ಕಮಲಾಪುರದ ಕೆಲವು ಹಿರಿಯರ ಪ್ರಕಾರ ಸ್ಥಳೀಯ ರಾಜಕಾರಿಣಿಗಳೇ ಈ ಸಮಸ್ಯೆಗೆ ಕಾರಣ. ಪಾರ್ಟಿ ರಾಜಕೀಯದಿಂದ ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಯಾವ ರಾಜಕೀಯ ಪಕ್ಷದವರೂ ಕೂಡ ಒತ್ತುವರಿ ಮಾಡುವವರ ವಿರುದ್ಧ ಮಾತಾಡುತ್ತಿಲ್ಲ. ಮಾತಾಡಿದರೆ ಎಲ್ಲಿ ತಮ್ಮ ಓಟಿಗೆ ತೊಂದರೆಯಾಗುತ್ತದೋ ಎನ್ನುವ ನಿಲುವು ಅವರದ್ದು ಎಂದು ಸ್ಥಳೀಯ ಹಿರಿಯರು ಹೇಳುತ್ತಾರೆ. ಒಬ್ಬ ಸ್ಥಳೀಯ ನಾಯಕರಂತೂ ಒತ್ತುವರಿ ಮಾಡುವುದು ತಮ್ಮ ಹಕ್ಕು ಎನ್ನುವ ರೀತಿಯಲ್ಲಿ ವಾದಿಸಿದರು. ಒತ್ತುವರಿ ಮಾಡಿದವರು ಭೂಮಿ ಇಲ್ಲದ ನಿರ್ಗತಿಕರು., ಸರಕಾರ ಅವರಿಗೆ ಬೇರೆ ಭೂಮಿ ಕೊಡಲಿ ಅವರು ಅಲ್ಲಿಗೆ ಹೋಗುತ್ತಾರೆ. ಜನರಿಗೆ ಬದುಕಲು ಅವಕಾಶ ಮಾಡಿಕೊಡದೆ ಕೆರೆ ಪಾತ್ರ ಒತ್ತುವರಿ ಆಯಿತೆಂದು ಯಾಕೆ ಗೋಳಿಡುತ್ತೀರಾ? ಎಂದು ವಾದಿಸಿದರು. ಹೀಗೆ ಒತ್ತುವರಿ ಸ್ವಲ್ಪ ಸಂಕೀರ್ಣವಾದ ಸಮಸ್ಯೆ. ಕೆರೆ ಕಾಲುವೆಗಳ ರಿಪೇರಿಗೆ ಶ್ರಮದಾನ ಮಾಡುವ ಕ್ರಮ ಹಿಂದೆ ಇತ್ತು. ಮುಂದೆಯೂ ಇರಬೇಕೆಂದು ಹೇಳುತ್ತಾರೆ. ಆದರೆ ಕಮಲಾಪುರದ ೧೭(ಒಟ್ಟು ೨೫) ಮತ್ತು ಕಲ್ ತಾವರೆಗೆರೆಯ ೧೪ (ಒಟ್ಟು ೧೫) ರೈತರು ಕೆರೆ ಕಾಲುವೆ ರಿಪೇರಿಗೆ ವಂತಿಗೆ ನೀಡುವ ಕ್ರಮ ಬೇಡವೆನ್ನುವ ಅಭಿಪ್ರಾಯ ಹೊಂದಿದ್ದಾರೆ. ಕೆರೆ ಹೂಳೆತ್ತಲು ಶ್ರಮದಾನ ಮಾಡುವ ಬಗ್ಗೆ ರೈತರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಮಲಾಪುರದ ೧೭ ಮತ್ತು ತಿಮ್ಮಲಾಪುರದ ೭ ಮಂದಿ ಶ್ರಮದಾನ ಮಾಡಲು ರೈತರು ಸಿದ್ಧರಿದ್ದಾರೆ ಎಂದಿದ್ದಾರೆ. ಕಲ್ ತಾವರೆಗೆರೆಯ ಮುಕ್ಕಾಲಂಶ ಮತ್ತು ತಿಮ್ಮಲಾಪುರದ ಅರ್ಧಕ್ಕಿಂತ ಸ್ವಲ್ಪ ಕಡಿಮೆ ರೈತರು ಹೂಳೆತ್ತಲು ಶ್ರಮದಾನ ಮಾಡುವ ಕುರಿತು ಉತ್ಸುಕರಾಗಿಲ್ಲ. ಅದೇ ರೀತಿ ಹೂಳೆತ್ತಲು ವಂತಿಗೆ ನೀಡಲು ಮುಂದೆ ಬರುವ ರೈತರ ಸಂಖ್ಯೆ ಅಷ್ಟು ಆಶಾದಾಯಕವಾಗಿಲ್ಲ. ಕಮಲಾಪುರದ ಮೂರನೆ ಒಂದಕ್ಕಿಂತ ಸ್ವಲ್ಪ ಹೆಚ್ಚಿನ, ತಿಮ್ಮಲಾಪುರದ ಮೂರನೇ ಒಂದರಷ್ಟು ಮತ್ತು ಕಲ್ ತಾವರೆಗೆರೆಯ ಕೇವಲ ಒಬ್ಬ ಬಳಕೆದಾರರು ಮಾತ್ರ ಕೆರೆ ಹೂಳೆತ್ತಲು ವಂತಿಗೆ ನೀಡಲು ಸಿದ್ದರಿದ್ದಾರೆ. ಉಳಿದವರು ಆ ಬಗ್ಗೆ ಅಷ್ಟು ಉತ್ಸುಕರಾಗಿಲ್ಲ.

ಇಷ್ಟಾಗಿಯೂ ಕೆರೆ ಹೂಳೆತ್ತುವ ಜಬಾಬ್ದಾರಿ ಪ್ರಶ್ನೆ ಬಂದಾಗ ಎಲ್ಲ ಹಳ್ಳಿಯ ಎಲ್ಲ ರೈತರು ಅದು ಸರಕಾರದ್ದು ಎಂದು ಅಭಿಪ್ರಾಯ ಸೂಚಿಸಿದ್ದಾರೆ. ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಇದಕ್ಕೆ ಮೂರು ರೀತಿಯ ವಿವರಣೆ ಸಾಧ್ಯ. ಒಂದು ಸಮಸ್ಯೆಯ ಅಗಾಧತೆ. ಸಮಸ್ಯೆಯ ಆಗಾಧತೆಯ ವಿವರಣೆಯನ್ನು ಅರ್ಥಮಾಡಿಕೊಳ್ಳಲು ಕಮಲಾಪುರ ಕೆರೆಯ ಹೂಳಿನ ಸಮಸ್ಯೆ ಒಳ್ಳೆಯ ಉದಾಹರಣೆಯಾಗಬಹುದು. ನೀರಾವರಿ ಇಲಾಖೆ ಸರ್ವೇ ರಿರ್ಪೋರ್ಟು ಪ್ರಕಾರ ೧೯೬೦ರಲ್ಲಿ ೧೦ ರಿಂದ ೧೨ ಅಡಿ ಹೂಳು ಕೆರೆ ಪಾತ್ರ ಸೇರಿದೆ. ಇದರಿಂದಾಗಿ ನೀರಿನ ಸಂಗ್ರಹ ಪ್ರಮಾಣ ೮೫ ಎಂ.ಸಿ.ಎಫ್.ಟಿ.ಯಿಂದ ೬೫ ಎಂ.ಸಿ. ಎಫ್.ಟಿ.ಗೆ ಇಳಿದಿದೆ. ೧೯೬೦ರಿಂದ ೨೦೦೧ರ ವರೆಗೆ ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಪ್ರಮಾಣವನ್ನು ಗಣನೀಯವಾಗಿ ಕಡಿಮೆಗೊಳಿಸಿರುವ ಸಾಧ್ಯತೆ ಇದೆ. ಇಷ್ಟೊಂದು ಬೃಹತ್ ಪ್ರಮಾಣದ ಹೂಳಿನ ಸಮಸ್ಯೆಗೆ ಅಪರೂಪಕ್ಕೆ ಬರುವ ಮಳೆ ಗಣಿಗಾರಿಕೆ ಹುಟ್ಟು ಹಾಕುವ ಧೂಳುಮಣ್ಣನ್ನು ಸುತ್ತಲಿನ ಹೊಲಗಳಲ್ಲಿ, ಕೆರೆಗಳಲ್ಲಿ ಪುಕ್ಸಟ್ಟೆಯಾಗಿ ತುಂಬಿ ಕೆರೆಗಳ ನೀರನ್ನು ಕೆಂಪಾಗಿಸುತ್ತಿದೆ. ಕೆರೆಯಲ್ಲಿನ ಹೂಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಈ ಗಣಿಗಳು ಹೊರಹಾಕಿದ ಧೂಳುಮಣ್ಣೆ ತುಂಬಿದೆ. ಈ ಹೂಳನ್ನು ಎತ್ತಲು ಕೆಲವು ಕೋಟಿ ರೂಪಾಯಿಗಳು ಬೇಕು. ಯಂತ್ರಗಳನ್ನು ಬಳಸಿದರೂ ಕೆಲವು ತಿಂಗಳುಗಳು ಬೇಕು. ಇಷ್ಟೊಂದು ಆಗಾಧ ಪ್ರಮಾಣದ ಕೆಲಸವನ್ನು ಮಾಡಲು ಸಾಧ್ಯವೆಂದು ಯಾವ ರೈತ ಹೇಳಲು ಸಾಧ್ಯ. ಎರಡು ಹಲವಾರು ದಶಕಗಳ ಆಧುನೀಕರಣದ ಸಂದರ್ಭದಲ್ಲಿ ಕೆರೆ ಸಂರಕ್ಷಣೆಯ ಜಬಾಬ್ದಾರಿಯನ್ನು ಸರಕಾರ ಹೊತ್ತದ್ದು ಮತ್ತೊಂದು ಕಾರಣ. ನೀರು ಬಳಕೆದಾರ ತನ್ನ ಪಾಲಿನ ತೆರಿಗೆ ನೀಡಿದರೆ ಆಯಿತು. ಕೆರೆ ರಿಪೇರಿ, ಹೂಳೆತ್ತುವುದು ಇತ್ಯಾದಿಗಳು ನೀರಾವರಿ ಇಲಾಖೆಯ ಹೊಣೆಯೆಂದು ರೈತರು ತಿಳಿಯುವಂತಾಯಿತು. ಇದರಿಂದಾಗಿ ಹೂಳಿನ ಸಮಸ್ಯೆ ಪರಿಹಾರಕ್ಕೆ ವಂತಿಗೆ ನೀಡುವ ಅಥವಾ ಶ್ರಮದಾನ ಮಾಡುವ ಕುರಿತು ರೈತ ಆಲೋಚನೆಯೇ ಮಾಡಿಲ್ಲ. ಮೂರು, ಕಮಲಾಪುರದ ಬಹುತೇಕ ರೈತರು ಇಂದು ಮಾರುಕಟ್ಟೆಗಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಜತೆಗೆ ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ವ್ಯವಹರಿಸಿ ಅವರಿಗೆ ವೆಚ್ಚ, ಲಾಭ, ನಷ್ಟ, ಇತ್ಯಾದಿಗಳ ಖಚಿತ ಅರಿವಿದೆ. ಇಷ್ಟೊಂದು ಅಗಾಧ ಪ್ರಮಾಣದ ಹೂಳೆತ್ತಲು ತಗಲುವ ವೆಚ್ಚದ ಹಣ ಅಥವಾ ಶ್ರಮ ರೂಪದಲ್ಲಿ ಕನಷ್ಠ ತಿಳುವಳಿಕೆ ಇದೆ. ಇದು ಅವರ ಒಟ್ಟು ವ್ಯವಹಾರವನ್ನು ಹೇಗೆ ಪ್ರಭಾವಿಸಬಹುದೆಂಬ ಆಲೋಚನೆ ಕೂಡ ತಮ್ಮ ಕೆರೆಯ ಹೂಳಿನ ಸಮಸ್ಯೆಯನ್ನು ಸಾರ್ವಜನಿಕ ನಿಧಿಗೆ ವರ್ಗಾಯಿಸಲು ಕಾರಣವಾಗಿರಬಹುದು. ಇನ್ನು ನೀರು ಹಂಚಿಕೆ ನಿಯಮ ಪಾಲನೆ ಕುರಿತು ಪರಸ್ಪರ ವಿರುದ್ಧ ನಿಲುವುಗಳು ವ್ಯಕ್ತವಾಗಿವೆ. ನೀರು ಹಂಚಿಕೆ ಕ್ರಮ ಸಮರ್ಪಕವಾಗಿದೆಯೇ ಎಂದರೆ ಬಹುತೇಕ ರೈತರು ಹಿಂದೆ ಮತ್ತು ಈಗ ಸಮರ್ಪಕವಾಗಿದೆ ಎಂದು ಉತ್ತರಿಸಿದ್ದಾರೆ. ಅದೇ ರೀತಿ ಹಂಚಿಕೆಯ ವಿಚಾರದಲ್ಲಿ ಎಲ್ಲರೂ ನಿಯಮ ಅನುಸರಿಸುತ್ತಾರೋ ಎನ್ನುವ ಪ್ರಶ್ನೆಗೆ ಹೌದು ಎನ್ನುವ ಉತ್ತರ ಬಂದಿದೆ. ಆದರೆ ನೀರು ಹಂಚಿಕೆಯ ವಿಚಾರದಲ್ಲಿ ಜಗಳಗಳು ಇಲ್ಲವೇ ಎಂದರೆ ಹೆಚ್ಚು ಕಡಿಮೆ ಅರ್ಧದಷ್ಟು ಮಂದಿ ನೀರಾವರಿ ಹಂಚಿಕೆಯಲ್ಲಿ ಜಗಳಗಳು ಇವೆ ಎಂದಿದ್ದಾರೆ. ಇದು ಅವರ ಹಿಂದಿನ ಅಭಿಪ್ರಾಯಗಳಿಗೆ ಭಿನ್ನವಾದ ನಿಲುವು. ನೀರು ಹಂಚಿಕೆ ಸಮರ್ಪಕವಾಗಿದ್ದರೆ ಅಥವಾ ಎಲ್ಲರೂ ನಿಯಮ ಪಾಲನೆ ಮಾಡುತ್ತಿದ್ದರೆ ಜಗಳಗಳು ಆಗುವ ಸಾಧ್ಯತೆ ಕಡಿಮೆ. ಆದರೆ ಇಲ್ಲಿ ಜಗಳಗಳು ಆಗುತ್ತಿವೆ. ಅಂದರೆ ನಿಯಮ ಪಾಲನೆ ಆಗುತ್ತಿಲ್ಲ ಅಥವಾ ಸಮರ್ಪಕವಾದ ಹಂಚಿಕೆ ಆಗುತ್ತಿಲ್ಲ. ಇದು ಹಿಂದಿನ ವ್ಯವಸ್ಥೆ ಸಮಸ್ಯೆ. ಮುಂದಿನ ವ್ಯವಸ್ಥೆ ಬಗ್ಗೆ ಸ್ವಲ್ಪ ಸಕರಾತ್ಮಕ ನಿಲುವು ತಾಳಬಹುದು. ಯಾಕೆಂದರೆ ಮುಂದಿನ ವ್ಯವಸ್ಥೆಯಲ್ಲಿ ನೀರು ಹಂಚಿಕೆ ಸಕರಾತ್ಮಕ ನಿಲುವು ತಾಳಬಹುದು. ಯಾಕೆಂದರೆ ಮುಂದಿನ ವ್ಯವಸ್ಥೆಯಲ್ಲಿ ನೀರು ಹಂಚಿಕೆ ನಿಯಮ ಇರಬೇಕು ಮತ್ತು ಅದರ ಪಾಲನೆ ಆಗಬೇಕು ಎನ್ನುವುದರ ಕುರಿತು ಎಲ್ಲ ರೈತರು ತಮ್ಮ ಸಹಮತ ಸೂಚಿಸಿದ್ದಾರೆ.