ಗ್ರಾಮ ವಿಕಾಸ ಒಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆ. ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಸಮುದಾಯದ ಶಾಶ್ವತ ಅಭಿವೃದ್ಧಿ ಹಾಗೂ ಆಹಾರ ಭದ್ರತೆ ಗುರಿ ಸಾಧಿಸಲು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ಆಹಾರ ಭದ್ರತೆ ಗುರಿ ಸಾಧಿಸಲು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹಾಗೂ ನಿರ್ವಹಣೆ ಬಹಳ ಮುಖ್ಯ ಎಂಬುದು ಗ್ರಾಮ ವಿಕಾಸದ ದೃಷ್ಟಿಕೋನ. ಇದಕ್ಕಾಗಿ ಕೆರೆಗಳ ರಕ್ಷಣೆ ಬಹಳ ಮುಖ್ಯ. ಈ ಅಂಶವನ್ನು ಗುರುತಿಸಿ ಪರಿಹಾರ ರೂಪವಾಗಿ ಗ್ರಾಮ ವಿಕಾಸ ೧೯೮೧-೮೨ರಿಂದ ಕೆಲಸ ಮಾಡುತ್ತಿದೆ. ಈ ದಿಸೆಯಲ್ಲಿ ಕೋಲಾರ ಜಿಲ್ಲೆ ಮತ್ತು ರಾಜ್ಯದ ಇತರ ನೀರಿನ ಸಂಪನ್ಮೂಲ ಕೊರತೆ ಇರುವ ಜಿಲ್ಲೆಗಳ ಗ್ರಾಮ ಸಮುದಾಯವನ್ನು ಉಳಿಸುವ ದಿಸೆಯಲ್ಲಿ ಕೆರೆಗಳ ಮರುಸಂವರ್ಧನೆಗಾಗಿ ಗ್ರಾಮ ವಿಕಾಸ ಜನರ ಅರಿವನ್ನು ಹೆಚ್ಚಿಸುವಲ್ಲಿ ತೊಡಗಿದೆ.

ನೀರಿನ ಅಮೂಲ್ಯ ಮೂಲಗಳನ್ನು ಮರುಸಂವರ್ಧನೆಗೊಳಿಸುವುದಕ್ಕೆ ಗಮನಕೊಡಬೇಕೆಂದು ಸಂಬಂಧಪಟ್ಟವರ ಮೇಲೆ ಒತ್ತಡ ತರುವ ದೃಷ್ಟಿಯಿಂದ ಜನರ ಅರಿವನ್ನು ಹೆಚ್ಚಿಸುವತ್ತ ಮತ್ತು ಕೆರೆಗಳ ಪ್ರಾಮುಖ್ಯತೆ ಬಗ್ಗೆ ತಿಳುವಳಿಕೆ ಮೂಡಿಸುವತ್ತ ಗ್ರಾಮ ವಿಕಾಸ ಕಾರ್ಯತತ್ಪರವಾಗಿದೆ. ಗ್ರಾಮೀಣ ಪ್ರದೇಶದ ಕೆರೆಗಳನ್ನು ಪುನಶ್ಚೇತನಗೊಳಿಸುವ ದಿಸೆಯಲ್ಲಿ ಹೂಳೆತ್ತುವುದು, ಸಾರವತ್ತಾದ ಹೂಳನ್ನು ಕೃಷಿ ಭೂಮಿಗೆ ಬಳಸುವುದು, ಕೆರೆಕಟ್ಟೆಗಳನ್ನು ಬಲಪಡಿಸುವುದು, ಕೃಷಿಗೆ ಅನುಕೂಲವಾಗುವಂಥ ಮರಗಳನ್ನು ಕೆರೆಕಟ್ಟೆಗಳ ಮೇಲೆ ಬೆಳೆಸುವುದು ಹಾಗೂ ಸಮುದಾಯ ಅರಣ್ಯವನ್ನು ಅಭಿವೃದ್ಧಿ ಮಾಡುವುದು ಮುಂತಾದ ಕಾರ್ಯಗಳ ಅಗತ್ಯವನ್ನು ಗ್ರಾಮ ವಿಕಾಸ ಒತ್ತಿ ಹೇಳುತ್ತ ಬಂದಿದೆ.

ಜನರು ಈ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗುವಂತೆ ಮಾಡಲು ಹಾಗೂ ಅದಕ್ಕೆ ಪ್ರೋತ್ಸಾಹ ನೀಡಲು ಗ್ರಾಮ ವಿಕಾಸ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗ್ರಾಮೀಣ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಗ್ರಾಮ ವಿಕಾಸ ಸಂಸ್ಥೆ ಗ್ರಾಮಗಳಲ್ಲಿ ಸಂವೇದನಾ ಆಂದೋಲವನ್ನು ನಡೆಸಿದೆ. ಪರಿಸರ ಜಾಥಾ ಎಂದು ಕರೆಯಲಾಗುವ ಈ ಕಾರ್ಯಕ್ರಮವನ್ನು ಎರಡು ಹಂತಗಳಲ್ಲಿ ನಡೆಸಲಾಗಿದೆ. ಮೊದಲ ಹಂತದ ಕಾರ್ಯಕ್ರಮ ೧೯೯೬ರಲ್ಲಿ ಹಾಗೂ ಎರಡನೆಯ ಹಂತದ ಕಾರ್ಯಕ್ರಮ ೧೯೯೯ರಲ್ಲಿ ನಡೆದಿದೆ. ಗ್ರಾಮೀಣ ಮಹಿಳಾ ಒಕ್ಕೂಟದ ೪೦ ಮಂದಿ ಕಾರ್ಯಕರ್ತರು ತಮ್ಮ ಮನೆಗೆಲಸಗಳಿಂದ ಒಂದು ತಿಂಗಳ ಕಾಲ ದೂರ ಬಂದು ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಹಾಗೂ ಕೋಲಾರ ತಾಲ್ಲೂಕುಗಳ ೪೦೦ ಹಳ್ಳಿಗಳಲ್ಲಿ ಪ್ರವಾಸ ಮಾಡಿದ್ದಾರೆ. ಕೆರೆಗಳ ಹೂಳೆತ್ತುವ ಅಗತ್ಯದ ಬಗ್ಗೆ ಕಿರು ಚಲನಚಿತ್ರವೊಂದನ್ನು ಈ ಸಂದರ್ಭದಲ್ಲಿ ನಿರ್ಮಿಸಲಾಗಿದೆ.

ಜನರೇ ನೇರವಾಗಿ ಭಾಗವಹಿಸುವ ಮೂಲಕ ಕೆರೆಗಳ ಹೂಳೆತ್ತುವುದರಿಂದ ಆಗಬಹುದಾದ ಅನುಕೂಲಗಳನ್ನು ಜನರಿಗೆ ತಿಳುವಳಿಕೆ ಮಾಡಿಕೊಡಲು ಗ್ರಾಮವಿಕಾಸ ಮಾದರಿ ಯೋಜನೆಯೊಂದನ್ನು ಸಿದ್ಧಪಡಿಸಿ ಜನರ ಸಹಕಾರದಿಂದ ಮುಳಬಾಗಿಲು ತಾಲ್ಲೂಕಿನ ೧೩ ಕೆರೆಗಳ ಹೂಳನ್ನು ಭಾಗಶಃ ತೆಗೆಯಲಾಯಿತು. ಇದು ಸಂಘಟನೆಗೆ ಕಲಿಕೆಯ ಕಾರ್ಯಕ್ರಮವಾಗಿತ್ತು. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸುದರ ಅರ್ಥವನ್ನು ಜನರಿಗೆ ಪುನರ್ ಮನನ ಮಾಡುವಂತಾಯಿತು. ಈ ಮಾದರಿ ಯೋಜನಾ ವ್ಯಾಪ್ತಿಯು ಬಡವರ್ಗದಲ್ಲಿನ ಅತಿ ಬಡವರಿಗೆ ಉದ್ಯೋಗ ಕಲ್ಪಿಸಿದಂತಾಯಿತು.

ಗ್ರಾಮವಿಕಾಸ ಇದುವರೆಗೆ ಕೆರೆಗಳ ಹೂಳೆತ್ತಿನ ವಿವರ ಇಲ್ಲಿದೆ. ಈ ಕಾರ್ಯವನ್ನು ಸ್ವಂತ ಸಂಪನ್ಮೂಲ, ಹೊರಗಿನವರ ವಂತಿಗೆ ನೆರವಿನಿಂದ, ನಬಾರ್ಡ್‌ ಮರ ಆರ್ಥಿಕ ನೆರವಿನ ಬ್ಯಾಂಕ್ ಸಾಲದಿಂದ, ಜನರ ನೆರವು ಹಾಗೂ ನೇರ ಭಾಗವಹಿಸುವಿಕೆಯಿಂದ ಈ ಕಾರ್ಯವನ್ನು ಮಾಡಲಾಗಿದೆ.

ವರ್ಷ ಗ್ರಾಮ ನೀರಿನಹರಹಿನ ಪ್ರದೇಶ (ಎಕರೆಗಳಲ್ಲಿ) ಅಚ್ಚುಕಟ್ಟು ಪ್ರದೇಶ (ಎಕರೆಗಳಲ್ಲಿ) ಖರ್ಚು (ರೂ.ಗಳಲ್ಲಿ) ಹಣದ ಮೂಲಗಳು
೧೯೮೭ ಕುಣಿಬಂಡೆ ೫.೦೦ ೭.೦೦ ೭೫,೦೦೦ ಜಿ.ವಿ. (ನೋವಿಬ್)
೧೯೯೩ ಹೊನ್ನೆಟ್ಟಳ್ಳಿ ೧೮.೪೦ ೪೦.೦೦ ೪೦,೦೦೦ ಜಿ.ವಿ. (ನೋವಿಬ್)
೧೯೯೪ ದೊಡ್ಡಗುಟ್ಟಹಳ್ಳಿ ೨೦.೦೦ ೬೭.೦೦ ೧,೦೦,೦೦೦ ಜಿ.ವಿ. (ನೋವಿಬ್)
೧೯೯೬ ನಾಗಮಂಗಲ (ದೊಡ್ಡಕೆರೆ) ೨೫.೦೦ ೩೧.೦೦ ೨,೬೫,೦೦೦ ಜಿ.ವಿ. / ಜನರು.
೧೯೯೭ ಬೇವನಾಥ ೯.೩೯ ೪೦.೦೦ ೨,೩೦,೦೦೦ ಬ್ಯಾಂಕ್ ಸಾಲ / ಮಹಿಳಾ ಒಕ್ಕೂಟಕ್ಕೆ
೧೯೯೮ ಸೀಗೆಹೊಸಹಳ್ಳಿ ಸೀಗೆಹಳ್ಳಿ ೯,೨೭ ೩೮.೦೦ ೪,೬೦,೦೦೦ ಬ್ಯಾಂಕ್ ಸಾಲ / ಜಿ.ವಿ. / ನೋವಿಬ್
೧೯೯೮ ನಾಗಮಂಗಲ, ಚಪರಹಳ್ಳಿ (ಮಲ್ಲಿಕುಂಟೆ) ೧೪.೦೦ ೪೪.೦೦ ೪,೬೦,೪೩೭ ಬ್ಯಾಂಕ್‌ಸಾಲ
೧೯೯೮ ನಾಗಮಂಗಲ (ಗಜಲಕುಂಟೆ) ೧೩.೦೦ ೩೧.೦೦ ೧,೮೮,೦೮೫ ಬ್ಯಾಂಕ್‌ ಸಾಲ
೧೯೯೮ ನಾಗಮಂಗಲ (ದೊಡ್ಡಕೆರೆ ೨ನೇ ಹಂತ) ೬.೧೮ ೩೧.೦೦ ೮೯,೬೭೭ ಜಿ.ವಿ. (ನೋವಿಬ್)
೧೯೯೯ ಬೊಮ್ಮಸಂದ್ರ ೬೫.೩೩ ೮೯.೧೫ ೧,೬೨,೧೮೩ ಜಿ.ವಿ. (ನೋವಿಬ್)
೨೦೦೦ ದೊಡ್ಡತಮ್ಮನಹಳ್ಳಿ ೨೨.೧೦ ೩೦.೧೫ ೭,೪೮,೬೬೦ ಜಿ.ವಿ. (ನೋವಿಬ್)
೨೦೦೦ ನಾಗಸಂದ್ರ ೧೨.೦೦ ೪೦.೦೦ ೩,೭೬,೪೩೧ ಜಿ.ವಿ. (ನೋವಿಬ್)
೨೦೦೧ ಮಿಣಿಜೇನಹಳ್ಳಿ ೧೬.೩೭ ೧೮.೦೦ ೩,೨೮,೧೪೪* ಜಿ.ವಿ. / ಕೋಲಾರ ಜಿ.ಪಂ.
ಒಟ್ಟು       ೪೩,೫೨,೫೧೭  

*೨೦೦೧ ಅಗಸ್ಟ್ ೩೧ರ ವೇಳೆಗೆ ಆದ ವೆಚ್ಚ. ಈ ವಾರ್ಷಾಂತ್ಯದವರೆಗೆ ವೆಚ್ಚ ಮಾಡಬಹುದಾದ ೧,೪೦,೦೦೦ ರೂ.ಹಣ ಲಭ್ಯವಿದೆ.

ಕೆರೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳು

ಕೆರೆಗಳ ಮರುಸಂವರ್ಧನೆಗೆ ಗ್ರಾಮವಿಕಾಸ (ಜ.ವಿ.)ಹಮ್ಮಿಕೊಂಡಿರುವ ಕಾರ್ಯವನ್ನು ಎರಡು ವಿಭಾಗಗಳಾಗಿ ಗುರುತಿಸಲಾಗಿದೆ.

೧. ಮಾದರಿಗಳಾಗಿ ಕೆರೆಗಳ ಮರುಸಂವರ್ಧನೆ

೨. ಕೆರೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ನೀತಿಗಳ ಮೇಲೆ ಪರಿಣಾಮ ಬೀರುವಂಥ ಕಾರ್ಯಕ್ರಮ ರೂಪಣೆ

 • ಕೆರೆಗಳ ಮರುಸಂವರ್ಧನೆಯಲ್ಲಿ ಜನರು ಭಾಗವಹಿಸಬೇಕು.
 • ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ಅನುಕೂಲವಾಗುವಂತಹ ಕೆರೆಗಳ ಪುನಶ್ಚೇತನ.
 • ಮಾನವ ಶ್ರಮದ ಗರಿಷ್ಠ ಬಳಕೆಯ ಮೂಲಕ ಕೆರೆಗಳ ಹೂಳೆತ್ತುವುದು.
 • ಹೂಳನ್ನು ಸಾಗಿಸಲು ಪರಿಸರ ಪ್ರೇಮಿ ಮಾರ್ಗಗಳಾದ ಎತ್ತಿನ ಗಾಡಿ ಮುಂತಾದವುಗಳನ್ನು ಬಳಸಬಹುದು. ಯಂತ್ರಗಳನ್ನು ಈ ಕಾರ್ಯಕ್ಕೆ ಬಳಸಬಾರದು.
 •  ಈ ಕಾರ್ಯಕ್ರಮದ ಯೋಜನೆ ತಯಾರಿಕೆ, ವೆಚ್ಚ, ಉತ್ತೇಜನ ಮತ್ತು ಜಾರಿಯನ್ನು ಮಹಿಳಾ ಸ್ವ ಸಹಾಯ ಗುಂಪುಗಳಿಂದಲೇ ಮಾಡಿಸಬೇಕು.
 • ಬರಗಾಲದಲ್ಲಿ ಬಡ ಹಾಗೂ ಮಧ್ಯಮ ಪ್ರಮಾಣದ ಕುಟುಂಬಗಳಿಗೆ ಅನುಕೂಲವಾಗುವಂಥ ‘ಕೂಲಿಗಾಗಿ ಕಾಳು’ ಕಾರ್ಯಕ್ರಮದ ಆಧಾರದ ಮೇಲೆಯೇ ಕೆರೆಗಳ ಸಂರಕ್ಷಣೆ ಕಾರ್ಯ ನಡೆಯಬೇಕು.

ಕೆರೆಗಳ ಮರುಸಂವರ್ಧನೆಯ ಕಾರ್ಯಕ್ರಮಗಳು

 • ಕೆರೆಗಳ ಸಂರಕ್ಷಣೆ ಅಗತ್ಯವಿರುವ ಕಡೆ ಗ್ರಾಮೀಣ ಮಹಿಳೆಯರಿಗೆ ಸಂಬಂಧಿಸಿದಂತೆ ಸಮಾವೇಶ ಏರ್ಪಡಿಸುವುದು.
 • ಈ ವಿಚಾರದ ಬಗ್ಗೆ ಗಮನ ಸೆಳೆಯಲು ಸಮಾವೇಶಕ್ಕೆ ರಾಜ್ಯಪಾಲರು, ಸ್ಪೀಕರ್, ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವರು, ರಾಜ್ಯದ ಸಚಿವರು, ಅಧಿಕಾರಿಗಳು ಹಾಗೂ ನೀತಿ ನಿರೂಪಕರು ಹಾಗೂ ಪ್ರಮುಖರನ್ನು ಆಹ್ವಾನಿಸುವುದು.
 • ಕೆರೆಗಳ ಸಂವರ್ಧನೆ ಯೋಜನೆಗಳಿಗೆ ಜಿಲ್ಲಾಪಂಚಾಯಿತಿಯಿಂದ ಹಣ ಒದಗಿಸುವಂತೆ ಮಾಡಲು ಮಹಿಳಾ ತಂಡಗಳನ್ನು ಉತ್ತೇಜಿಸುವುದು.
 • ಮಾದ್ಯಮಗಳ (ಮುದ್ರಿತ ಹಾಗೂ ದೃಶ್ಯ) ಗಮನ ಸೆಳೆಯುವುದು.

ಜನರ ಪಾತ್ರ

ಅಭಿವೃದ್ಧಿ ಪ್ರಕ್ರಿಯೆ ಸಾಧಿಸುವಲ್ಲಿ ಗುರಿಸಾಧಿಸಲು ಜನರು ಮು‌ಖ್ಯ ಪಾಲುದಾರರಾಗಿರುವುದು ಅಗತ್ಯ ಎಂದು ಗ್ರಾಮವಿಕಾಸ ಸಂಸ್ಥೆ ಭಾವಿಸಿದೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಪ್ರಕ್ರಿಯೆಗೆ ಬೆಂಬಲವಾಗಿರಬೇಕು ಎಂದು ಸಂಸ್ಥೆ ಭಾವಿಸಿದೆ. ಅಲ್ಲದೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಅದರಲ್ಲಿಯೂ ಮುಖ್ಯವಾಗಿ ಯೋಜನೆಗಳ ಅಂದಾಜು ವೆಚ್ಚ ತಯಾರಿಕೆ, ರೂಪುರೇಷೆಗಳ ತಯಾರಿ, ಅವುಗಳ ಕಲ್ಪನೆ ಹಾಗೂ ವಿಶ್ಲೇಷಣೆಯಲ್ಲಿ ಜನರು ಗರಿಷ್ಠ ಪ್ರಮಾಣದಲ್ಲಿ ಭಾಗವಹಿಸುವಂತಾಗಬೇಕು. ಹೀಗೆ ಜನರ ಒಳಗೊಳ್ಳುವಿಕೆಯಿಂದ ಮಾತ್ರ ಯೋಜನೆಗಳು ಬಾಳಿಕೆ ಬರುತ್ತದೆ ಅಷ್ಟೇ ಅಲ್ಲ ಯೋಜನಾ ಜಾರಿ ನಂತರದ ನಿರ್ವಹಣೆ ಸಾಧ್ಯವಾಗುತ್ತದೆ.

ಜನರು ಭಾಗವಹಿಸುವುದೆಂದರೆ ಹಣಕಾಸು ನೆರವು ನೀಡುವುದು ಎಂಬ ತಪ್ಪು ಕಲ್ಪನೆ ಕೆಲವೆಡೆ ಇದೆ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸರ್ಕಾರ ಏಕೈಕ ಪಾತ್ರದಾರ ಎಂಬ ಅರ್ಥ ಇದರಿಂದ ಬರುತ್ತದೆ. ಇಂಥ ತಪ್ಪು ಕಲ್ಪನೆಯಿಂದಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನರು ಭಾವನಾತ್ಮಕವಾಗಿ ಪಾಲ್ಗೊಳ್ಳುವುದರಿಂದ ದೂರ ಇಟ್ಟಂತಾಗುತ್ತದೆ. ಅಭಿವೃದ್ಧಿ ಪ್ರಕ್ರಿಯೆಗೆ ಜನರು ಹಣಕಾಸು ನೆರವು ನೀಡಿದರೆ ಅವರನ್ನು ಆ ಪ್ರಕ್ರಿಯೆಯಲ್ಲಿ ಹೆಚ್ಚು ತೊಡಗಿಸಿಕೊಂಡಂತಾಗುತ್ತದೆ. ಇದಕ್ಕೂ ಮುಖ್ಯವಾದುದು ಈ ಪ್ರಕ್ರಿಯೆಯ ಮುಖ್ಯ ಪಾಲುದಾರರಾದ ಸಮುದಾಯ ಭೌದ್ಧಿಕ ಮತ್ತು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವುದು ಹೆಚ್ಚು ಮೌಲಿಕವಾದುದು. ಇಂಥ ತತ್ವಗಳಲ್ಲಿ ಗ್ರಾಮವಿಕಾಸ ನಂಬಿಕೆಯಿಟ್ಟಿದೆ ಮತ್ತು ಕೆರೆಗಳ ಮರು ಸಂವರ್ಧನೆ ಕಾರ್ಯಕ್ರಮದಲ್ಲಿ ಇವುಗಳನ್ನು ಜಾರಿಗೆ ತರಲು ಯತ್ನಿಸುತ್ತಿದೆ.

ಸ್ವಸಹಾರ ಗುಂಪುಗಳ ನಾಯಕತ್ವ

ಕೆರೆಗಳ ಇಂದಿನ ಸ್ಥಿತಿಗೆ ಗ್ರಾಮಗಳ ಮಟ್ಟದಲ್ಲಿ ಸಮುದಾಯದ ನಾಯಕತ್ವ ಇಲ್ಲದಿರುವುದೇ ಕಾರಣ. ಇದಕ್ಕೆ ಕಾರಣಗಳು ಬಹಳಷ್ಟು ಇವೆ. ಆದರೆ ಗ್ರಾಮಮಟ್ಟದ ನಾಯಕತ್ವ ನಾಶಗೊಳ್ಳಲು ಸಮುದಾಯವನ್ನು ಜಾತಿ ಆಧಾರಿತ ರಾಜಕೀಯಕ್ಕೆ ಬಳಸಿಕೊಂಡದ್ದೇ ಬಹು ಮುಖ್ಯ ಕಾರಣ. ವಿಷಾದದ ವಿಷಯವೆಂದರೆ ಪಂಚಾಯತ್ ಚುನಾವಣೆಗಳು ಗ್ರಾಮಗಳ ಏಕತೆ ಹಾಗೂ ಅವಿನಾಭಾವ ಸಂಬಂಧಕ್ಕೆ ಹೆಚ್ಚು ಅಪಾಯವನ್ನು ಮಾಡಿವೆ ಎಂಬುದು. ಗ್ರಾಮಗಳ ಪ್ರಬಲ ಜಾತಿಗಳು ಭಿನ್ನ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಮೂಲಕ ಬಹಳ ಕಡೆ ಜಾತೀಯ ವಿಭಜನೆ ರಾಜಕೀಯ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ಇದರಿಂದಾಗಿ ಒಂದು ರಾಜಕೀಯ ಗುಂಪು ಆರಂಭಿಸುವ ಅಭಿವೃದ್ಧಿ ಕಾರ್ಯಗಳನ್ನು ಇನ್ನೊಂದು ರಾಜಕೀಯ ಗುಂಪು ವಿರೋಧಿಸುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರಿಂದ ಒಂದು ರಾಜಕೀಯ ಗುಂಪಿಗೆ ಆಗಬಹುದಾದ ರಾಜಕೀಯ ಲಾಭವನ್ನು ತಡೆಯುವುದೇ ಇಂಥ ಪ್ರತಿರೋಧದ ಉದ್ಧೇಶ.

ಇಂದಿನ ಗ್ರಾಮಗಳ ಪರಿಸ್ಥಿತಿಯನ್ನು ನೋಡಿದರೆ ಅವು ರಾಜಕೀಯ ಪಕ್ಷಗಳ ಆಧಾರದ ಮೇಲೆ ಒಡೆದು ಹೋಗಿವೆ. ಬಹಳಷ್ಟು ಹಳ್ಳಿಗಳಲ್ಲಿ ನಾಯಕತ್ವದ ಅಭಾವವನ್ನು ಕಾಣಬಹುದು. ಈಗ ಅಂಥ ಸಮುದಾಯವೇ ಮಾಡುತ್ತಿತ್ತು. ಕೆರೆಗಳ ನಿರ್ವಹಣೆಯ ವಿಚಾರದಲ್ಲಿ ಈಗ ಅಂಥ ಸಮುದಾಯದ ಪಾತ್ರದ ಅಭಾವ ಕಾಣುತ್ತಿದೆ. ಸರ್ಕಾರಗಳ ನೀತಿಯಿಂದಾಗಿ ಕೆರೆಗಳ ನಿರ್ವಹಣೆಯಿಂದ ಜನರು ದೂರ ಉಳಿದಿದ್ದಾರೆ.

ಕೆರೆಗಳು ಮತ್ತು ಇತರೆ ಗ್ರಾಮೀಣ ಸಮುದಾಯದ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಮತ್ತೆ ಗ್ರಾಮ ಸಮುದಾಯವನ್ನು ತೊಡಗಿಸುವಂತೆ ಮಾಡಲಾಗುವುದು. ಈ ಕಾರ್ಯಕ್ಕಾಗಿ ಸ್ವ-ಸಹಾಯ ಗುಂಪುಗಳು ಗ್ರಾಮೀಣ ನಾಯಕತ್ವವಹಿಸಿಕೊಳ್ಳುವಂತೆ ಉತ್ತೇಜಿಸಲಾಗುವುದು. ಇದು ಜಿ.ವಿ.ಯ ಕಾರ್ಯತಂತ್ರವಾಗಿದೆ. ಗ್ರಾಮ ವಿಕಾಸದ ವ್ಯಾಪ್ತಿಯ ಸ್ವ-ಸಹಾಯ ಗುಂಪುಗಳು ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಬಡ ಮಹಿಳೆಯರಲ್ಲಿ ಉಳಿತಾಯ ಭಾವನೆಯನ್ನು ಮೂಡಿಸಿವೆ. ಸಾಲ ಸೌಲಭ್ಯ ಒದಗಿಸುವ ದಿಸೆಯಲ್ಲಿ ಮೊದಲ ಹೆಜ್ಜೆಯನ್ನು ಸ್ವ-ಸಹಾಯ ಗುಂಪುಗಳು ಇಟ್ಟವು. ಈಗ ಅವು ಅವಿನಾಭಾವ ಸಂಬಂಧವುಳ್ಳ ಸಮಗ್ರ ಗುಂಪುಗಳಾಗಿ ಬೆಳೆದು ಕೆಲವು ಕಡೆ ಒಂದಕ್ಕಿಂತ ಹೆಚ್ಚು ಸಮಸ್ಯೆಗಳನ್ನು ಕೈಗೆತ್ತಿಕೊಂಡು ಪರಿಹಾರವನ್ನು ಕಂಡುಹಿಡಿಯಲು ಯತ್ನಿಸುತ್ತಿವೆ. ಕುಡಿಯುವ ನೀರು, ನೈರ್ಮಲೀಕರಣ, ಮೂಲಭೂತ ಸೌಕರ್ಯಗಳಾದ ಬಸ್ಸು, ರಸ್ತೆ, ಸಮುದಾಯ ಭವನದಂಥ ಸೌಲಭ್ಯಗಳನ್ನು ಕೊಡಿಸುವ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ. ಪುರುಷ ನಾಯಕತ್ವ ಗ್ರಾಮೀಣ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾದ ಕಡೆಯೂ ಸಮುದಾಯದ ಸಾಮಾನ್ಯ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನಗಳನ್ನು ಪುನಶ್ಚೇತನಗೊಳಿಸುವಂಥ ಸವಾಲನ್ನುಈ ಸ್ವ-ಸಹಾಯ ಗುಂಪುಗಳು ಕೈಗೆತ್ತುಕೊಂಡಿವೆ.

ತಂತ್ರಗಾರಿಕೆ

ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ಜನರು ಭಾಗವಹಿಸುವುದನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಗ್ರಾಮವಿಕಾಸ ಅನುಸರಿಸುತ್ತಿರುವ ಕಾರ್ಯತಂತ್ರ, ಮಾರ್ಗದರ್ಶಿಗಳು ಹಾಗೂ ಮಾನದಂಡಗಳು ಹೀಗಿವೆ.

 • ಕೆರೆಯನ್ನು ನೀರಿನ ಬಹು ಮುಖ್ಯ ಮೂಲವೆಂದು ಗ್ರಾಮೀಣ ಜನರಿಗೆ ತಿಳಿಯುವಂತೆ ಮಾಡುವುದು.
 • ಕೆರೆಯಲ್ಲಿ ತಮ್ಮ ಪಾಲು ಇದೆ ಎಂಬುದನ್ನು ಇಡೀ ಗ್ರಾಮ ಸಮುದಾಯಕ್ಕೆ ಮನವರಿಕೆ ಮಾಡುವುದು.
 • ಕೆರೆ ಹೂಳೆತ್ತುವ ವಿಚಾರದಲ್ಲಿ ಯೋಜನೆ ತಯಾರಿಕೆ, ಅಂದಾಜು ವೆಚ್ಚದ ಲೆಕ್ಕಾಚಾರದ ಹಂತದಿಂದ ಯೋಜನೆ ಕಾರ್ಯರೂಪಕ್ಕೆ ಬರುವವರೆಗೆ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಗ್ರಾಮ ಸಮುದಾಯ ಭಾಗವಹಿಸುವಂತೆ ಮಾಡುವುದು.
 • ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ಯಂತ್ರಗಳ ಬಳಕೆಗಿಂತ ಮಾನವ ಶಕ್ತಿ ಬಳಕೆಯ ಕಡೆಗೆ ಒತ್ತು ನೀಡುವಂತೆ ಗ್ರಾಮೀಣ ಸಮುದಾಯವನ್ನು ಉತ್ತೇಜಿಸುವುದನ್ನು, ಗ್ರಾಮೀಣ ಬಡ ಕಾರ್ಮಿಕರಿಗೆ ಉದ್ಯೋಗ ದೊರಕುವಂತೆ ಮಾಡುವುದು ಮತ್ತು ಕೂಲಿಯ ಹಣ ಗ್ರಾಮದಲ್ಲಿಯೇ ಅವರಿಗೆ ಸಿಗುವಂತೆ ಮಾಡುವುದು.
 • ಕೆರೆ ತಮ್ಮ ಗ್ರಾಮದ ಆಸ್ತಿ ಎಂಬ ಭಾವನೆ ಆ ಗ್ರಾಮದ ಸಮುದಾಯದಲ್ಲಿ ಬರುವಂತೆ ಮಾಡುವುದು. ಕೆರೆಯ ನಿರ್ವಹಣೆಯಲ್ಲಿ ತಾವು ಪಾಲುದಾರರು ಎಂಬ ಭಾವನೆ ಅವರಲ್ಲಿ ಮೂಡಿಸುವುದು.
 • ಕೆರೆಗಳ ಹೂಳೆತ್ತುವ ಕಾರ್ಯದಲ್ಲಿ ಸ್ಥಳೀಯರನ್ನೇ ತೊಡಗಿಸುವುದು. ಇದರಿಂದ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ತಮ್ಮ ಪಾತ್ರ ಇದೆ ಎಂಬ ಭಾವನೆ ಅವರಲ್ಲಿ ಮೂಡುವುದು. ಇದರಿಂದ ತಾವೂ ಕೂಡ ಕೆರೆಯ ಮಾಲೀಕರು ಎಂಬ ಭಾವನೆ ಅವರಲ್ಲಿ ಮೂಡುತ್ತದೆ.
 • ಕೆರೆಯ ಹೂಳು ರೈತರ ಹೊಲ ಗದ್ದೆಗಳಿಗೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೂಳು, ಇಟ್ಟಿಗೆ, ಹೆಂಚು ಕಾರ್ಖಾನೆಗಳಿಗೆ ಸಾಗಣೆ ಯಾಗದಂತೆ ನೋಡಿಕೊಳ್ಳಬೇಕು.
 • ಕೆರೆ ಹೂಳೆತ್ತುವುದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಹೆಚ್ಚು ಅನುಕೂಲ ಪಡೆಯುವಂತೆ ಮಾಡಬೇಕು.
 • ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಕುಟುಂಬಗಳಿಗೆ ಹೆಚ್ಚು ಅನುಕೂಲವಾಗುವಂತೆ ನೋಡಿಕೊಳ್ಳಬೇಕು.
 • ಸಮಾನವಾದ ನೀರಿನ ಹಂಚಿಕೆಯಾಗಬೇಕು.
 • ಕೆರೆ ನೀರು ವಿತರಣೆಗೆ ಪ್ರಸಕ್ತ ಅಸ್ತಿತ್ವದಲ್ಲಿರುವ ನೀರುಗಂಟಿ ವ್ಯವಸ್ಥೆಯನ್ನು ಬಲಪಡಿಸಬೇಕು.

ಈ ಕಾರ್ಯದ ಸಕಾರತ್ಮಕ ಅಂಶಗಳು

ಪ್ರತ್ಯಕ್ಷ ಲಾಭಗಳು

 • ಹೂಳೆತ್ತಿದ ಕೆರೆಯ ಸುತ್ತ ಅಂತರಜಲ ಮಟ್ಟದ ಏರಿಕೆ (ಅನುಚ್ಛೇದ ನೋಡಿ-ಗಜಲ ಕುಂಟೆ ಮತ್ತು ದೊಡ್ಡತಮ್ಮನಹಳ್ಳಿ ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿನ ಬಾವಿಗಳಲ್ಲಿ ನೀರಿನ ಅಂತರ್ಜಲ ಮಟ್ಟ ಏರಿದೆ.)
 • ಕೆರೆಗಳ ಹೂಳುಮಣ್ಣು ಬಳಸಿದ ಭೂಮಿಗಳಲ್ಲಿ ಉತ್ಪಾದನೆ ಹೆಚ್ಚಳ. ಮುಖ್ಯವಾಗಿ ಕಡಲೆಕಾಯಿ ಉತ್ಪಾದನೆ ಶೇಕಡ ೯೦ರಷ್ಟು ಏರಿಕೆ (ಅನುಚ್ಛೇದ ನೋಡಿ-ಬೆಳೆಗಳ ಮೇಲೆ ಕೆರೆ ಹೂಳುಮಣ್ಣಿನ ಪರಿಣಾಮ).
 • ಕೆರೆಗಳ ಹೂಳುಮಣ್ಣು ಬಳಸಿದ್ದರಿಂದ ರೈತರಿಗೆ ರಸಾಯನಿಕ ಗೊಬ್ಬರಕ್ಕೆ ಬಳಸುತ್ತಿದ್ದ ಹಣದ ಉಳಿತಾಯವಾಗಿದೆ. ಕನಿಷ್ಠ ನಾಲ್ಕು ಬೆಳೆಗಳಿಗೆ ಈ ಹಣದ ಉಳಿತಾಯ.

ಪರೋಕ್ಷ ಲಾಭಗಳು

 • ಕೆರೆಗಳ ಹೂಳೆತ್ತುವ ಕಾರ್ಯಕ್ಕಾಗಿ ಕೆರೆ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಇದರಿಂದ ಜನರು ಈ ಕಾರ್ಯದಲ್ಲಿ ಸಂಪೂರ್ಣವಾಗಿ ಭಾಗವಹಿಸಿದಂತಾಯಿತು. ಈ ಸಮಿತಿಯ ಜೊತೆಗೆ ಮಹಿಳಾ ಸ್ವ-ಸಹಾಯ ಗುಂಪುಗಳು ಈ ಕಾರ್ಯದ ಯೋಜನಾ ತಯಾರಿಕೆ. ಖರ್ಚು ವೆಚ್ಚ ಅಂದಾಜು ಹಾಗೂ ಈ ಕಾರ್ಯದ ಜಾರಿಯಲ್ಲಿ ಸಕ್ರಿಯವಾಗಿ ತೊಡಗುವುದರಿಂದ ಜನರನ್ನು ತೊಡಗಿಸಿದಂತಾಯಿತು.
 • ಸ್ವ-ಸಹಾಯ ಗುಂಪು ಹಾಗೂ ಕೆರೆ ಅಭಿವೃದ್ಧಿ ಸಮಿತಿಗಳ ಮೂಲಕ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ಸಶಕ್ತೀಕರಣದ ಮಟ್ಟ ಏರಿದಂತಾಯಿತು.
 • ಕೆರೆ ಹೂಳೆತ್ತುವುದರಿಂದ ಜನರಲ್ಲಿ ಬದ್ಧತೆ ಹಾಗೂ ಆಸಕ್ತಿ ಹೆಚ್ಚುತ್ತದೆ. ಹೆಚ್ಚು ಹಳ್ಳಿಗಳಲ್ಲಿ ಇಂಥದೇ ಆಸಕ್ತಿ ಬೇಡಿಕೆ ಮೂಡುತ್ತದೆ.
 • ಜನರು ಭಾಗವಹಿಸಿದ್ದರಿಂದ ಯೋಜಿಸಿದಂತೆ ಕಾರ್ಯಕ್ರಮ ಜಾರಿಗೆ ಬಂತು. ಯೋಜನೆಯ ಗುರಿ ಗರಿಷ್ಠ ಪ್ರಮಾಣದಲ್ಲಿ ತಲುಪಲಾಯಿತು. ಜನರಿಗೆ ಉದ್ಯೋಗ ದೊರಕುವಂತಾಯಿತು.
 • ಹೂಳನ್ನು ಗಾಡಿಗಳಲ್ಲಿ ಮತ್ತು ಟ್ರಾಕ್ಟರುಗಳಲ್ಲಿ ಸಾಗಿಸುವುದನ್ನು ಹೊರತುಪಡಿಸಿದರೆ ಎಲ್ಲ ಹಂತಗಳಲ್ಲಿಯೂ ಮಾನವನ ದೈಹಿಕ ಶ್ರಮದ ಬಳಕೆಯಾಗುವಂತಾಯಿತು.
 • ಪರಿಸರ ರಕ್ಷಣೆ ಸಾಮಾಜಿಕ, ಆರ್ಥಿಕವಾಗಿ ಬಹುಮುಖ್ಯ ಚಟುವಟಿಕೆಯಾಗಿರುವಂಥ ಕಾರ್ಯಕ್ಕೆ ಸ್ವ-ಸಹಾಯ ಗುಂಪುಗಳ ಮೂಲಕ ಬ್ಯಾಂಕುಗಳು ಹಣಕಾಸು ನೆರವು ನೀಡಲು ಸಿದ್ಧವಾದವು.
 • ಸ್ಥಳೀಯ ಶಾಸಕರು, ಮತ್ತು ನಬಾರ್ಡ್‌ ಅಧಿಕಾರಿಗಳನ್ನು ಈ ಕಾರ್ಯವನ್ನು ಪರಿಶೀಲಿಸಲು ಆಹ್ವಾನಿಸಲಾಯಿತು. ಇದರಿಂದ ಕೆರೆ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಅವರ ಮೇಲೆ ಜನರು ಒತ್ತಡ ತರಲು ಅವಕಾಶವಾಯಿತು.
 • ಎಲ್ಲಾ ಹಂತಗಳಲ್ಲಿ ಜನರ ಸಹಕಾರವನ್ನು ಕಾಣಬಹುದು.

ಕೆರೆ ಹೂಳೆತ್ತುವ ಕಾರ್ಯದಲ್ಲಿ ಜನರು ಭಾಗವಹಿಸುವಿಕೆ

೧. ಜನರಿಂದ ಬೇಡಿಕೆ ಬರುವಂತೆ ಮಾಡಬೇಕು.

೨. ಸ್ವಸಹಾಯ ಗುಂಪುಗಳನ್ನು ಈ ಯೋಜನೆಯ ಮುಖ್ಯ ಅಂಗವನ್ನಾಗಿ ಗುರುತಿಸಬೇಕು. ಆದರೆ ಇಡೀ ಸಮುದಾಯ ಈ ಯೋಜನೆಯ ಜಾರಿಯಲ್ಲಿ ತೊಡಗುವಂತೆ ಮಾಡಬೇಕು.

ಅಗತ್ಯವನ್ನು ಗುರುತಿಸಿ ಹೂಳೆತ್ತುವ ಕೆರೆಗಳನ್ನು ಆಯ್ಕೆಮಾಡಿಕೊಳ್ಳಬೇಕು (ಹೂಳೆತ್ತುವುದರಿಂದ ದಲಿತ ಸಮುದಾಯಕ್ಕೆ ಆಗುವ ಅನುಕೂಲದ ಪ್ರಮಾಣ, ಸಣ್ಣ ಮತ್ತು ಮದ್ಯಮ ಪ್ರಮಾಣದ ರೈತರಿಗೆ ಆಗುವ ಅನುಕೂಲ, ಸ್ವಸಹಾಯ ಗುಂಪುಗಳ ಸದಸ್ಯರ ಪ್ರಮಾಣ ಮುಂತಾದವು) ಹೂಳು ಜಾಸ್ತಿಯಾಗಿ ಕೆರೆ ನೀರು ಕೋಡಿ ಹೋಗಿ ಸಾಕಷ್ಟು ನೀರು ಸಂಗ್ರಹವಾಗದಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

೪. ಯೋಜನೆ ಜಾರಿಯಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಭೂಮಿ ಇರುವವರಿಗೂ, ಭೂಮಿ ಇಲ್ಲದವರಿಗೂ ಲಾಭವಾಗುವಂತಾಗಬೇಕು (ಹೂಳೆತ್ತುವುದರಿಂದ ಸಂಗ್ರಹವಾಗುವ ನೀರು ಬಡ ರೈತರಿಗೂ ಸಿಗುವಂತಾಗಬೇಕು, ಕೆರೆಯಲ್ಲಿ ಮೀನು ಬೆಳೆಸುವ ಮೂಲಕ ಭೂರಹಿತರು ಪಾಲುದಾರರಾಗುವಂತೆ ಮಾಡಬೇಕು.)

೫. ಸಾಮಾಜಿಕ ಮತ್ತು ತಾಂತ್ರಿಕ ಸಿದ್ಧತೆಗಾಗಿ ಹೂಳೆತ್ತಬೇಕಾದ ಕೆರೆಗಳನ್ನು, ಗ್ರಾಮವನ್ನು ಒಂದು ವರ್ಷ ಮೊದಲೇ ಗುರುತಿಸಬೇಕು.

೬. ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ಜಂಟಿ ಸಭೆಗಳನ್ನು ನಡೆಸಬೇಕು.

೭. ನೆರೆಯ ಸಮುದಾಯ ಜಾಲದ ನಾಯಕರನ್ನು (ಎನ್ ಸಿ ಎನ್) ಗುರುತಿಸಿ ಜನರಿಂದ ನೆರೆವು ಹಾಗೂ ಕಾರ್ಯಕ್ರಮದ ಜಾರಿಯನ್ನು ಅವರಿಗೆ ವಹಿಸಿಕೊಡಬೇಕು. ಪ್ರತಿ ಎನ್ ಸಿ ಎನ್ ನಾಯಕರಿಂದ ಒಪ್ಪಂದ ಪಡೆಯಬೇಕು. ಹಣಕಾಸು ನೆರವಿನ ವಸೂಲಿ ಹಾಗೂ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿಯನ್ನು ಅವನಿಗೆ/ಅವಳಿಗೆ ವಹಿಸಬೇಕು. ಒಪ್ಪಂದದಲ್ಲಿ ಬಾಕಿ ಕಂತುಗಳನ್ನು ನಮೂದಿಸಬೇಕು.

೮. ಹಣವನ್ನು ಬಳಸಿಕೊಳ್ಳುವಲ್ಲಿನ ಪ್ರತಿ ರೈತನ ಸಾಮರ್ಥ್ಯ ಹಾಗೂ ವಾಪಸಾತಿಯಲ್ಲಿನ ಅವನ ಶಕ್ತಿಯನ್ನು ಗುರುತಿಸಬೇಕು.

೯. ಕೊಳವೆ ಬಾವಿಗಳುಳ್ಳ ಹಾಗೂ ವಾಣಿಜ್ಯ ಬೆಳೆ ಬೆಳೆಯುವ ರೈತರನ್ನು ಗುರುತಿಸಿ ಅವರಿಗೆ ಹೆಚ್ಚು ಹಣ ವಿಧಿಸಬೇಕು.

೧೦. ಸಾಲ ವಸೂಲಾತಿ ಮೂಲಗಳನ್ನು ಗುರುತಿಸಬೇಕು: ಡೇರಿ ಮತ್ತು ರೇಷ್ಮೆ ಉದ್ಯಮ, ರೇಷ್ಮೆ ಉಪಕರಣಗಳನ್ನು ಸಮುದಾಯದಿಂದ ಬಾಡಿಗೆಗೆ ಪಡೆಯುವುದು, ಕುರಿ ಸಾಖಣೆ ಇತ್ಯಾದಿ.

೧೧. ಕೆರೆ ಹೂಳೆತ್ತಲು ತಗಲುವ ವೆಚ್ಚವನ್ನು ಹಂಚಿಕೊಳ್ಳ ಬಯಸುವ ಜನರ ಸಾಮರ್ಥ್ಯವನ್ನು ಗುರುತಿಸಬೇಕು. ಶೇ.೨೦; ಅಥವಾ ಶೇ ೨೫. ಒಪ್ಪಂದಕ್ಕೆ ಸಹಿ ಮಾಡಿದ ಎಲ್ಲರಿಗೂ ಹಾಗು ಸದಸ್ಯರಿಗೆ ಒಪ್ಪಂದದ ಜೆರಾಕ್ಸ್‌ ಪ್ರತಿ ಕೊಡಬೇಕು.

ಜನರು ಭಾಗವಹಿಸುವ ಮೂಲಕ ಕೆರೆ ಹೂಳೆತ್ತುವ ಗ್ರಾಮವಿಕಾಸ ಯೋಜನಾ ಪ್ರದೇಶದಲ್ಲಿ ತೆಗೆದುಕೊಳ್ಳುವ ಹಂತ ಹಂತದ ಪ್ರಕ್ರಿಯೆ-ಮೊದಲ ಹೆಜ್ಜೆ, ಯೋಜನೆ ರೂಪುರೇಷೆ ತಯಾರಿಕೆ ಮತ್ತು ಜಾರಿ.