ಪ್ರಸ್ತಾವನೆ

ನಮ್ಮ ರಾಜ್ಯದಲ್ಲಿರುವ ಸುಮಾರು ೨೭,೦೦೦ ಹಳ್ಳಿಗಳಿಗೆ, ಹೆಚ್ಚು ಕಮ್ಮಿ ೩೬,೬೭೫ ಕೆರೆಗಳಿವೆ ಎಂದು ರಾಜ್ಯ ಶಾಸನದ ಖಾತೆಯಲ್ಲಿ ಗಣಿಸಲಾಗಿದೆ. ಬಹಳಷ್ಟು ಕೆರೆಗಳು ಪುರಾತನ ಕಾಲದಿಂದಲೂ ಉಪಯೋಗಿಸಲ್ಪಟ್ಟಿವೆ. ಸಾವಿರಾರು ವರ್ಷಗಳ ಹಿಂದಿನಿಂದ, ರಾಜ ಮಹಾರಾಜರೋ, ಪಾಳೆಯಗಾರರೋ ಮತ್ತು ಜನ ಹಿತಾಸಕ್ತಿಯುಳ್ಳ ಧರ್ಮಾತ್ಮರೋ ಇವರುಗಳಿಂದ ನಿರ್ಮಿಸಲ್ಪಟ್ಟ ಕೆರೆಗಳು ಹಳ್ಳಿಯವರ ಜನಜೀವನದಲ್ಲಿ ಮುಖ್ಯವಾದ ಅಂಗವಾಗಿ ಉಳಿದು ಬಂದಿದೆ. ಕೆಲವು ಕೆರೆಗಳು ಜನಸಾಮಾನ್ಯರಿಂದಲೂ ನಿರ್ಮಿತವಾಗಿ ಉಳಿದಿರುವ ಪ್ರಸಂಗಗಳೂ ಇವೆ. ಉದಾಹರಣೆಯಾಗಿ ಸದ್ಗುಣಪ್ಪ ಒಬ್ಬ ವೇಶ್ಯೆಯಿಂದ ನಿರ್ಮಿಸಿದ ಚಿತ್ರದುರ್ಗದ ಸೂಳೆಕೆರೆ (ಈಗ ಅದನ್ನು ಶಾಂತಿಸಾಗರ ಎಂದು ಕರೆಯಲಾಗುತ್ತಿದೆ) ಮತ್ತೆ ನರಗುಂದದ ನೀಲಮ್ಮನಕೆರೆ ಇವುಗಳು ಈಗಲೂ ಜನರಿಗೆ ನೀರಾವರಿಗೋ ಅಥವಾ ಕುಡಿಯುವ ನೀರಿಗೋ ಲಾಭದಾಯಕವಾಗಿ ಉಪಯೋಗಿಸಲ್ಪಡುತ್ತಿವೆ. ಹೀಗೆ ಪ್ರತಿ ಹಳ್ಳಿಗೂ ಒಂದಕ್ಕಿಂತ ಹೆಚ್ಚಾಗಿ ಅತವಾ ಕನಿಷ್ಟ ಹಳ್ಳಿಗೊಂದು ಕೆರೆಯಂತೆ ಜನಜೀವನದಲ್ಲಿ ಹಾಸು ಹೊಕ್ಕಾಗಿದೆ. ಹಳ್ಳಿಗೆ ಕೆರೆಯ ಪ್ರಾಶಸ್ತ್ಯ ಎಷ್ಟೆಂದು ಹೇಳುವುದಾದರೆ ಖ್ಯಾತ ಕವಿ ನಿಸ್ಸಾರ್ ಅಹಮದ್ ಅವರ ವರ್ಣನೆಯಲ್ಲಿ ‘ಕೆರೆ ಹಳ್ಳಿಗೆ ಹೆಣ್ಣಿನ ಹಣೆಯ ಕುಂಕುಮ ಬಟ್ಟಿನ ಅಂದದಂತೆ ಶೃಂಗರಿಸುತ್ತದೆ.’

ಆದರೆ ವರ್ತಮಾನ ಕಾಲದಲ್ಲಿ ಸುಮಾರು ಐವತ್ತು (೫೦)ವರ್ಷಗಳಿಂದ ಕೆರೆಗಳು ಸರಕಾರದಿಂದಲೂ ಮತ್ತು ಜನರಿಂದಲೂ ನಿರ್ಲಕ್ಷ್ಯಗೊಂಡು ದುಃಸ್ಥಿತಿಯ ದಿಸೆಯಲ್ಲಿ ಅದೋಗತಿಗೆ ಈಡಾಗುತ್ತಿವೆ. ಶತಮಾನಗಳ ಹಿಂದೆ ಹಳ್ಳಿಯ ಜನಸಾಮಾನ್ಯರು ಒಟ್ಟುಗೂಡಿ ಕೆರೆಗಳ ನಿರ್ವಹಣೆ ನಡೆಸುತ್ತಿದ್ದರು. ಕೆರೆಗಳು ಸರಕಾರ ಹತೋಟಿಗೆ ಬಂದಾಗಲಿಂದ ನಶಿಸುತ್ತಿವೆ. ಸರ್ಕಾರದ ಸ್ವತ್ತು ಯಾರ ಸ್ವತ್ತು ಅಲ್ಲ ಅಥವಾ ಪಾಳುಗೊಳಿಸುವುದಕ್ಕೆ ಎಲ್ಲರ ಸ್ವತ್ತಾಗಿ ಬೀಳು ಬಿದ್ದಿವೆ. ನಿರ್ಲಕ್ಷ್ಯದಿಂದ ಹೂಳು ತುಂಬಿಕೊಂಡು ನಿರ್ವಹಣೆರಹಿತವಾಗಿವೆ. ಅವುಗಳಿಂದ ಆಗುತ್ತಿದ್ದ ನೀರಾವರಿ ಮತ್ತು ಜಲದ ಉಪಯೋಗ ಒಂದಾನೊಂದು ಕಾಲದಲ್ಲಿ ಉಚ್ಛಮಟ್ಟದಲ್ಲಿದ್ದು ಈಗ ಕೀಳುಸ್ಥಿತಿಯಲ್ಲಿ ಹಾಳಾಗುತ್ತಿವೆ. ಇಂದಿನ ರಾಜ್ಯ ಸರಕಾರ ಕೆರೆಗಳ ದುಃಸ್ಥಿತಿಯನ್ನು ಅರಿತು, ಅವುಗಳ ಪುನರುಜ್ಜೀವನಗೊಳಿಸುವ ಕಾರ್ಯಕ್ರಮಗಳಿಗೆ ಆದ್ಯತೆಯನ್ನು ಕೊಟ್ಟಿದೆ. ವಿಶ್ವಬ್ಯಾಂಕ್, ಹುಡ್ಕೋ ಮತ್ತು ನಬಾರ್ಡ್‌ ಸಂಸ್ಥೆಗಳಿಂದ ಹಣದ ಸಹಾಯ ಒದಗಿಸಲು ಪ್ರಯತ್ನ ಮಾಡಿದೆ. ಈಗಾಗಲೇ ಈ ಸಂಸ್ಥೆಗಳೊಂದಿಗೆ ಮಾತುಕತೆ ನಡೆಯುತ್ತಿದೆ. ವಿಶ್ವಬ್ಯಾಂಕ್ ಕೆರೆಗಳ ಪುನರುದ್ದಾರಕ್ಕೆ ಹಣ ಸಹಾಯ ಕೊಡುವುದಕ್ಕೆ ಸಮ್ಮತಿ ನೀಡಿದೆ. ಮಾತುಕತೆ ಮುಗಿದ ನಂತರ ಕೆಲವು ತಿಂಗಳುಗಳಲ್ಲೇ ಹಣ ಸಹಾಯ ಒದಗುವ ಸಂಭವವಿದೆ.

ಈ ಕಾರ್ಯಕ್ರಮಗಳನ್ನು ತ್ವರಿತವಾಗಿ ಜರುಗಿಸಲು ಸರಕಾರದ ಸ್ತರದಲ್ಲಿ ಜಲಸಂವರ್ಧನಾ ಯೋಜನಾ ಸಂಘವನ್ನು ಸ್ಥಾಪಿಸಿದೆ. ಈ ಸಂಘವು ಈಗಾಗಲೇ ಕೆರೆಗಳ ನೀರನ್ನು ಬಳಸುವವರ ಸಂಘಗಳನ್ನು ರಚಿಸುವ ಕಾರ್ಯವನ್ನು ಶುರು ಮಾಡುತ್ತಿದೆ. ಇದಲ್ಲದೆ ಸರಕಾರೇತರ ಸ್ವಸಹಾಯ ಸಂಘಗಳು ಕೂಡ ಜಲಸಂವರ್ಧನಾ ಸಂಘಕ್ಕೆ ಈ ಕಾರ್ಯಕ್ರಮದಲ್ಲಿ ನೆರವು ನೀಡುತ್ತಿವೆ. ‘ಸಹಯೋಗ’ ಸರಕಾರೇತರ ಸ್ವಸಹಾಯ ಸಂಘವೂ ಕೂಡ ಈ ಕಾರ್ಯಕ್ರಮದಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಸರಕಾರದ ಸ್ತರದಲ್ಲಿ ನೀರಾವರಿ ಸಂಬಂಧಿ ನೀತಿ ನಿಯಮಗಳ ಸುಧಾರಣೆಯಲ್ಲಿ ಸಹಯೋಗವು ಬಹುಮುಖ್ಯ ಯೋಗದಾನ ಮಾಡುತ್ತಿದೆ. ಇದಲ್ಲದೆ ರೈತರ ಸ್ತರದಲ್ಲೂ ಅವರೊಂದಿಗೆ ಒಳಕೂಡಿ ಅವರ ಅಭಿವೃದ್ಧಿಗೂ ಕೆಲಸ ಮಾಡುತ್ತಿದೆ. ಒಂದು ಕೆರೆಯ ಜಲ ಬಳಕೆಯನ್ನು ಮಾಡುವ ಎಲ್ಲಾ ಜನರನ್ನು ಕೂಡಿಸಿ ಬಳಕೆದಾರರ ಸಂಘವನ್ನು ಆಯಾ ಹಳ್ಳಿಯಲ್ಲೇ ರಚಿಸುವುದಕ್ಕೆ ಸಹಾಯ ಸೌಲಭ್ಯಗಳು ಮತ್ತು ಮಾರ್ಗದರ್ಶನವನ್ನು ಕೊಟ್ಟ ಸಹಕರಿಸುತ್ತದೆ. ಹೀಗೆ ಸ್ಥಾಪಿಸಿದ ಸಂಘಗಳಿವೆ ಸರಕಾರದಿಂದ ಕೆರೆಗಳ ಪುನರುದ್ಧಾರಕ್ಕೆ ಬೇಕಾದ ಧನಸಹಾಯ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಿಗಿಸುವುದಕ್ಕೆ ಬೆಂಬಲ ನೀಡುತ್ತಿದೆ. ಬಳಕೆದಾರರ ಮತ್ತು ಸರಕಾರದ ನಡುವೆ ನೇರವಾದ ಸಂಬಂಧ ಕಲ್ಪಿಸುವುದಕ್ಕೆ ಮಧ್ಯಸ್ಥಿಕೆಯ ರೂಪದಲ್ಲಿ ಕೆಲಸವನ್ನು ನಿರ್ವಹಿಸುತ್ತಿದೆ.

ಸಂಘಟನಾ ಕಾರ್ಯಕ್ರಮ

ರಾಜ್ಯದಲ್ಲಿ ೩೬,೦೦೦ಕ್ಕೂ ಹೆಚ್ಚು ಕೆರೆಗಳು ಇವೆ. ಸರಕಾರದ ನೀತಿಯ ಪ್ರಕಾರ, ಯಾವ ತಾಲ್ಲೂಕಿನಲ್ಲಿ ಹೆಚ್ಚಿನ ಜಲಸಂಕಟ, ಬಡತನ, ಹರಿಜನ ಗಿರಿಜನ ಸಂಖ್ಯೆ, ಸಮಾಜದಲ್ಲಿ ಜಲದ ವಿತರಣೆಯಲ್ಲಿ ಅವ್ಯವಸ್ಥೆ ಇತ್ಯಾದಿಗಳ ಆಧಾರದಲ್ಲಿ ಕೆರೆಯನ್ನು ಗುರುತಿಸಲಾಗುತ್ತದೆ. ಸಹಯೋಗದ ಕಾರ್ಯಕರ್ತರು ಅಂತಹ ಗುರುತಿಸಿದ ಹಳ್ಳಿಗೆ ಹೋಗಿ ಅಲ್ಲೇ ಬಿಡಾರ ಮಾಡಿ, ಕೆರೆಯ ನೀರನ್ನು ಬಳಸುವ ಎಲ್ಲ ಜನರನ್ನು ಸಂಪರ್ಕಿಸಿ ಆ ಗುಂಪಿನ ಸಮಾಜಿರೇಖ ರೂಪವನ್ನು ತಯಾರಿಸುತ್ತಾರೆ. ಈ ರೇಖಾರೂಪದಲ್ಲಿ ಪ್ರತಿಯೊಂದು ಸಂಬಂಧಿಸಿದ ಕುಟುಂಬದ ವ್ಯಕ್ತಿಗಳನ್ನು ಗುರುತಿಸಿ ಆ ಕುಟುಂಬದ ಆರ್ಥಿಕ ಸ್ತರ, ರೈತರೋ, ಮೀನುಗಾರಿಕೆ ಮಾಡುವವರೊ, ಕೂಲಿಗಳೋ, ಕುಂಬಾರರೋ ಹೀಗೆ ಕೆರೆಗಳಿಂದ ಜೀವನೋಪಾಯ ಮಾಡುವವರ ರೇಖಾಚಿತ್ರ ಮಾಡುತ್ತಾನೆ. ನಂತರದ ಹಂತದಲ್ಲಿ ಗಣನೆ ಮಾಡಿ ಜಲದ ಬಳಕೆ ಯಾವ ಯಾವ ರೀತಿಯಲ್ಲಿ ಪ್ರತಿಯೊಬ್ಬರೂ ಮಾಡುತ್ತಾರೆ ಎಂಬುವ ಒಂದು ಪಟ್ಟಿ ತಯಾರಿಸುತ್ತಾರೆ.

ಪಟ್ಟಿ ತಯಾರಿಸಿದ ಮೇಲೆ ಬಳಕೆದಾರರು ಮತ್ತು ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿ ಬಳಕೆದಾರ ಸಭೆಯನ್ನು ಒಂದು ನಿರ್ದಿಷ್ಟ ದಿನ ಸೇರಿಸುತ್ತಾರೆ. ಆ ಸಭೆಗೆ ಸಹಯೋಗದ ಒಬ್ಬಿಬ್ಬರು ನಿಪುಣರು ಬಂದು ಸೇರಿ ಕೆರೆಯ ಸ್ಥಿತಿ, ಕೊಡಿ, ಕಾಲುವೆ, ಏರಿ ಜಲಸಂಗ್ರಹದ ಕ್ಷೇತ್ರ ಬಗ್ಗೆ ವಿಶದವಾಗಿ ಚರ್ಚೆ ನಡೆಸುತ್ತಾರೆ. ಬಹಳ ಹಿಂದಿನಿಂದಲೂ ಹಳ್ಳಿಯ ಜನರಿಂದಲೇ ಕೆರೆಯ ಜಲನಿರ್ವಹಣೆಯನ್ನು ಅನೌಪಚಾರಿಕ ರೀತಿಯಲ್ಲಿ ಸಂಘಟಿಸಿ ನಡೆಸಿರುತ್ತಾರೆ. ಅನೌಪಚಾರಿಕ ಸಾಂಪ್ರದಾಯಹಿಕ ನಿರ್ವಹಣೆಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿ, ಬಳಕೆದಾರರ ಸಭೆಯಲ್ಲಿ ಚರ್ಚಿಸಲಾಗುವುದು. (ಸಾಂಪ್ರದಾಯಿಕ ಮತ್ತು ಅನೌಪಚಾರಿಕ ಸಂಘಟನೆಯ ಉದಾಹರಣೆ ಹೊಸಪೇಟೆ ತಾಲೂಕಿನ ದೊಣನಾಯಕನ ಕೆರೆಯಲ್ಲಿ ಕಾಣಬಹುದು.) ಚರ್ಚೆಯನಂತರ ವರ್ತಮಾನ ಕಾಲದಲ್ಲಿ ಬೇರೆ ರಾಜ್ಯದಲ್ಲಿ ಮತ್ತು ವಿಶ್ವದ ಕೆಲವು ದೇಶಗಳಲ್ಲಿ ಮೂಡುತ್ತಿವ ಆಧುನಿಕ ಮತ್ತು ಸುಸಂಘಟಿತ ಬಳಕೆದಾರರ ಸಂಘಗಳ ಬಗ್ಗೆ ಚರ್ಚೆ ಮಾಡಲಾಗುವುದು. ಇದಲ್ಲದೆ ಜಲಸಂವರ್ಧನಾ ಸಂಘದ ಅಡಿಯಲ್ಲಿ ರೂಪಿಸಿರುವ ಮಾದರಿ ಸಂಘದ ರೂಪರೇಖೆಯನ್ನು ವಿಸ್ತೃತವಾಗಿ ವಿವರಿಸಿ ಸಭೆಯಲ್ಲಿ ಸೇರಿರುವ ಜನರಿಂದ ಅಭಿಪ್ರಾಯವನ್ನು ಪಡೆದು ಪ್ರಸ್ತುತ ಕೆರೆಯ ಸಂಘದ ರೂಪ ಹೇಗಿರುಬೇಕೆಂದು ಅವರಿಂದಲೇ ಸಮ್ಮತಿ ಪಡೆಯಲಾಗುವುದು. ಎಲ್ಲರ ಒಪ್ಪಿಗೆ ಆದನಂತರ ನವೀನ ಸಂಘವನ್ನು ಓಪಚಾರಿಕ ಘಟಿಸಿ ಸಂಘದ ಕಾರ್ಯಕಾರಿ ಸಮಿತಿಯನ್ನು ಜಲಸಂವರ್ಧನಾ ಸಂಘದ ಮಾದರಿಯಂತೆ ಸ್ಥಾಪಿಸಲಾಗುವುದು. ತದನಂತರ ಈ ಹೊಸ ಸಂಘವನ್ನು ಕರ್ನಾಟಕ ರಾಜ್ಯ ಸಂಘ ಕಾಯಿದೆ ೧೯೬೦ರ ಪ್ರಕಾರ ನೋಂದಣಿ ಮಾಡಲಾಗುವುದು. ಈ ಮೇಲೆ ಹೇಳಿದ ಪ್ರಕ್ರಿಯೆಗೆ ಸುಮಾರು ೧ ವಾರದಿಂದ ೨ವಾರ ಬೇಕಾಗುತ್ತದೆ. ಅವಧಿ ಹೆಚ್ಚು ಕಡಿಮೆ ಆಗಬಹುದು. ಬಳಕೆದಾರರ ಮನೋಗುಣ, ಸ್ವಭಾವ ಮತ್ತು ಸಾಂಪ್ರದಾಯಿಕತೆ ಮತ್ತು ಇತರೇ ಗುಣಗಳ ಮೇಲೆ ಹೆಚ್ಚು ದಿನಗಳು ಬೇಕಾಗಬಹುದು.

ಸಂಘದಿಂದ ಕೆರೆಯ ಪುನರುದ್ಧಾರ ಮತ್ತು ನಿರ್ವಹಣೆ

ಸಂಘ ಸ್ಥಾಪನೆ ಮತ್ತು ರಿಜಿಸ್ಟ್ರೀಕರಣವಾದ ಮೇಲೆ ಜಲಸಂವರ್ಧನಾ ಸಂಘ (ಸರಕಾರದಲ್ಲಿ ರಚಿತವಾಗಿರುವ) ಕಾರ್ಯನಿರ್ವಹಕ ಡೈರೆಕ್ಟರ್‌ಗೋ ಅಥವಾ ಡಿಸ್ಟ್ರಿಕ್‌ನ ಡಿ.ಸಿ. ಮುಖಾಂತರ ಜಲಸಂವರ್ಧನಾ ಸಂಘಕ್ಕೆ ಬಳಕೆದಾರರ ಸಂಘದ ಕಾರ್ಯನಿರ್ವಾಹಕ ಸಮಿತಿ ಅಧ್ಯಕ್ಷ ಅಥವಾ ಕಾರ್ಯದರ್ಶಿ, ತಮ್ಮ ಕೆರೆಯ ಪುನರುದ್ಧಾರಕ್ಕೆ ಮತ್ತು ನಿರ್ವಹಣೆ ಮಾಡುವುದಕ್ಕೆ ಹಸ್ತಾಂತರ ಮಾಡಲು ಅಜಿ ಸಲ್ಲಿಸಲಾಗುವುದು. ಸಂಘವು, ಸಂಘದ ಕಾರ್ಯಕರ್ತರು ಮತ್ತು ಸಣ್ಣ ನೀರಾವರಿ ಇಲಾಖೆ ತಂತ್ರಜ್ಞರು ಸೇರಿ, ಜಂಟಿ ಸರ್ವೇಕ್ಷಣ ಮಾಡಿ ಪುನರುದ್ಧಾರ ಕೆಲಸಕ್ಕೆ ತಲಗುವ ಒಟ್ಟು ವಿನಿಯೋಜನೆಯನ್ನು ನಿರ್ಧರಿಸುತ್ತದೆ. ನಿಗದಿಗೊಳಿಸಿದ ಖರ್ಚಿನ ೧೫% ಬಾಬ್ತನ್ನು ವಹಿಸಿಕೊಳ್ಳುವುದಕ್ಕೆ ಸಿದ್ಧರಿದ್ದೇವೆ ಅಂತ ಸಂಘ ವಿಜ್ಞಾಪಿಸಬೇಕು. ಈ ೧೫% ವೆಚ್ಚ ಹಣದಿಂದ ಅಥವಾ ಶ್ರಮದಾನದಿಂದಲೋ, ಅಥವಾ ಸಾಮಾನು ಸರಕುಗಳಿಂದಲೋ ಅಥವಾ ಎಲ್ಲದರ ಮಿಶ್ರವಾಗಿ ವಹಿಸುವುದಕ್ಕೆ ತಯಾರಿರಬಹುದು.

ಮೇಲ್ಕಂಡ ರೀತಿಯಲ್ಲಿ ಸಂಘದಿಂದ ಅರ್ಜಿ ಬಂದರೆ ಜಲ ಸಂವರ್ಧನಾ ಸಂಘವು ನಿರ್ಧಾರಿತ ನೀತಿ ಮತ್ತು ಅನುಕ್ರಮಣಿಕೆ ಮೇರೆ ಪುನರುದ್ಧಾನ ಬಾಬ್ತು ಖರ್ಚಿನ ೮೫% ಮೊಬಗಲನ್ನು ಬಳಕೆದಾರರ ಸಂಘದ ಬ್ಯಾಂಕ್ ಖಾತೆಯಲ್ಲಿ ಸರಕಾರದ ಅನುಮೋದನೆಯ ನಿಯಮಗಳ ಅಡಿಯಲ್ಲಿ ಜಮಾಯಿಸುವುದು. ಈ ರೀತಿಯ ೮೫% ಅನುದಾನ ಕೆರೆಯ ನೀರಾವರಿ ಆಗುವ ಪ್ರತಿ ಹೆಕ್ಟೇರ್‌ಗೆ ರೂ. ೧೫,೦೦೦ ಅಥವಾ ಪ್ರತಿ ಎಕರೆ ರೂ.೬,೦೦೦ ಪ್ರಮಾಣದಂತೆ ಒಟ್ಟು ಪುನರುದ್ದಾನ ಖರ್ಚಿನ ಸೀಮಿತದಲ್ಲಿರುತ್ತದೆ.

ಸಂಘವು ತನ್ನ ಬ್ಯಾಂಕ್ ಖಾತೆಯಲ್ಲಿ ಸರಕಾರದಿಂದ ಹಣ ಸಹಾಯ ಪಡೆದ ನಂತರ, ಯಾವ ಸುಲಭ ಕೆಲಸಗಳು ಅಂದರೆ ಮಣ್ಣು ಅಗೆಯವುದು ಕೆರೆ ಅಂಗಳದ ಹೂಳು ಮತ್ತು ನಾಲೆಯಲ್ಲಿರುವ ಹೂಳು ತಮ್ಮ ಶ್ರಮದಾನದಿಂದ ಮಾಡಬಹುದು. ಯಾವ ಯಾವ ಕಾರ್ಯಗಳು ಅಂದರೆ ಇಟ್ಟಿಗೆ ಮತ್ತು ಕಲ್ಲಿನ ಪುನಃ ನಿರ್ಮಾಣ; ತೂಬಿನ ರಿಪೇರಿ, ಕೋಡಿ ರಿಪೇರಿ ಮುಂತಾದವು ತಮ್ಮಿಂದ ಅಸಾಧ್ಯವಾದುದನ್ನು ಠೇಕೇದಾರರಿಂದ ಟೆಂಡರ್ ಮುಖಾಂತರ ಠೇಕೇದಾರನನ್ನು ಚುನಾಯಿಸಿ, ಕೆಲಸ ಕಾರ್ಯಗಳನ್ನು ಪೂರೈಸಬಹುದು. ಇಂತಹ ವಿಶೇಷ ಕಾರ್ಯಗಳಿಗೆ ಸಣ್ಣ ನೀರಾವರಿ ಇಲಾಖೆಯಂತ ತಂತ್ರಜ್ಞಾನ ಸಹಾಯ ಪಡೆದು ನೆರವೇರಿಸಬಹುದು. ಇಲ್ಲದಿದ್ದರೆ ಖಾಸಗಿ ತಂತ್ರಜ್ಞರನ್ನು ನೇಮಕಾತಿ ಮಾಡಿಕೊಂಡು ವಿಶೇಷ ಕಾರ್ಯಗಳನ್ನು ಪೂರ್ಣಗೊಳಿಸಬಹುದು. ಈ ರೀತಿ ಸರಕಾರಿದ ವಿಭಾಗದ ಮಾಧ್ಯಮಕ್ಕಿಂತ ಕಡಿಮೆ ಖರ್ಚಿನಲ್ಲಿ ಕೆರೆಯ ಪುನರುದ್ಧಾರ ಮಾಡಿಕೊಂಡು, ಕೆರೆಯಿಂದ ಹಿಂದೆ ಯಾವ ರೀತಿ ಲಾಭವಾಗುತ್ತಿತ್ತೊ ಅದನ್ನು ಪುನಃಶ್ಚೇತನಗೊಳಿಸಿ ಎಲ್ಲರಿಗೂ ಲಾಭದಾಯಕವಾಗುವಂತೆ ಬಳಸಬಹುದು.

ಕೆರೆಯ ಜಲ ವಿತರಣಾಕಾರ್ಯ ಮತ್ತು ಸಂರಕ್ಷಣೆ

ಕೆರೆಗಳ ಮುಖ್ಯ ಉಪಯೋಗ ಕೃಷಿ ಭೂಮಿಗೆ ನೀರಾವರಿ ಒದಗಿಸಿ ಹೆಚ್ಚು ಹೆಚ್ಚಾಗಿ ಖಾದ್ಯಾನ್ನ ಬೆಳೆಯಲು ಸಹಾಯಕವಾಗುವುದು. ಇದಲ್ಲದೆ ಕುಡಿಯುವ ನೀರು, ಹಳ್ಳಿಯ ರೈತರೇತರ ಜನಗಳಿಗೆ ಅವರ ದುಡಿಮೆ ಅಥವಾ ವ್ಯವಸಾಯ ಅಂದರೆ ಕುಂಬಾರ, ಕುರುಬ, ಮೀನುಗಾರಿಕೆ ಹಳ್ಳಿಯ ಗೃಹ ಕೈಗರಿಕೋದ್ಯಮ ಮತ್ತು ಧಾರ್ಮಿಕ, ಸಾಮಾಜಿಕ ಹಬ್ಬ ಹರಿದಿನಗಳ ಕಾರ್ಯಕ್ಕೆ ಬಳಸಲು ಅವಕಾಶ ಕೊಡುವುದು. ಕೃಷಿ ಸಾಧನಕ್ಕೆ ಬೇಕಾದ ಜಲಕ್ಕಿಂತ, ಹಳ್ಳಿ ಜನರ ಇತರೇ ಕಾರ್ಯಗಳಿಗೆ ಬೇಕಾದ ಜಲದ ಪ್ರಮಾಣ ಬಹುಕಡಿಮೆ. ಆದರೂ, ಕೆರೆಗೆ ನಿಕಟವಾಗಿ ಬಳಸುವ ಪ್ರತಿಯೊಬ್ಬ ವ್ಯಕ್ತಿಗೂ ಕೆರೆಯ ಸಂಬಂಧ ತಲತಲಾಂದಿರದಿಂದ ಬಂದ ಹಕ್ಕಾಗಿರುತ್ತದೆ. ತಾನು ಪಡೆದ ಪ್ರತಿವ್ಯಕ್ತಿಗೂ ಜಲವಿತರಣೆ ಮಾಡುವುದು ಅವಶ್ಯಕ. ಯಾವುದೇ ಆಡಳಿತವಿದ್ದರೂ ಈ ಮುಖ್ಯ ಉದ್ದೇಶವನ್ನು ಪಾಲಿಸಬೇಕು.

ಆದರೆ ಕೆಲವು ಕಾರಣಗಳಿಂದ ಮತ್ತು ಸರಕಾರಿ ಆಡಳಿತದಲ್ಲಿ ಕೆರೆಗಳು ಬಂದಾಗಿನಿಂದ, ಜಲವಿತರಣಾ ವ್ಯವಸ್ಥೆ ಹದಗೆಟ್ಟಿದೆ. ಬಲಿಷ್ಟರು, ಶಕ್ತಿವಂತರು ಮತ್ತೆ ಕೆರೆಯ ಹತ್ತಿರ ಇರುವ ಕೃಷಿಕರು, ಹೆಚ್ಚು ಹೆಚ್ಚು ನೀರನ್ನು ಬಳಸುತ್ತಾ ಬಂದಿದ್ದಾರೆ. ಬಡವರು, ಕೆರೆಯ ಅಚ್ಚುಕಟ್ಟಿನ ಕೊನೆಯಲ್ಲಿರುವವರು ಮತ್ತು ಕೆಳಜಾತಿಯವರು ಜಲದಿಂದ ವಂಚಿತರಾಗಿದ್ದಾರೆ. ಈ ಅವ್ಯವಸ್ಥೆಯಿಂದ ಧನವಂತರು ಹೆಚ್ಚು ಧನಗಳಿಸುತ್ತಿದ್ದಾರೆ ಮತ್ತು ಬಡತನ ಹಳ್ಳಿಗಳಲ್ಲಿ ಜಾಸ್ತಿ ಆಗುತ್ತಿದೆ. ಈ ಪರಿಸ್ಥಿತಿಯನ್ನು ಪರಿವರ್ತಿಸಬೇಕಾದರೆ ಕೆರೆಗಳ ಸುಧಾರಣೆ ಅಥವಾ ಪುನರುದ್ದಾರದ ಜತೆಗೆ ಹೊಸ ಪದ್ಧತಿಯಲ್ಲಿ ಜಲವಿತರಣೆ ಮಾಡುವುದು ಅವಶ್ಯಕವಾಗಿದೆ. ಯಾವುದಾದರೂ ಹೊಸ ಪದ್ಧತಿಯನ್ನು ಚಾಲನೆಯಲ್ಲಿ ತರಬೇಕಾದಾಗ ಅದಕ್ಕೆ ವ್ಯತಿರಿಕ್ತವಾಗಿ ವರ್ತಮಾನದಲ್ಲಿ ಅನುಚಿತ ಲಾಭ ಪಡೆಯುತ್ತಿರುವ ಮತ್ತು ಶಕ್ತಿಯುತ ಗುಂಪುಗಳು ವಿರೋಧಿಸಲು ಪ್ರಯತ್ನಿಸುವರು. ಸರ್ಕಾರ ತನ್ನ ಕರ್ಮಚಾರಿಗಳಿಂದ ಹೊಸ ಪದ್ಧತಿಯನ್ನು ಅಳವಡಿಸಲು ತಕ್ಕ ಸಾಮರ್ಥ್ಯವನ್ನು ಎಷ್ಟೇ ನಿಯಮಗಳಿದ್ದರೂ ಹೊಂದಿರುವುದಿಲ್ಲ. ಈ ಪರಿಸ್ಥಿತಿ ನಮ್ಮ ರಾಜ್ಯಕ್ಕೇ ವಿಶೇಷವಾಗಿಲ್ಲ. ರಾಷ್ಟ್ರಾದ್ಯಂತಲೂ ಮತ್ತು ಪರದೇಶಗಳಲ್ಲೂ ಈ ಸಮಸ್ಯೆ ಇದೆ.

ಆದ್ದರಿಂದ ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಿ, ನೀರಾವರಿ ಪಾಲ್ಗೊಳ್ಳುವಿಕೆಯ ಕಾರ್ಯಕ್ರಮಗಳನ್ನು ಕೈಕೊಂಡು ಪರಿಸ್ಥಿತಿಯನ್ನು ಬದಲಾಯಿಸಿ, ಎಲ್ಲ ಬಳಕೆದಾರರಿಗೂ ಜಲ ಅವಶ್ಯಕನಾನುಸಾರವಾಗಿ, ವಿತರಿಸುತ್ತಿದ್ದಾರೆ. ಜನಸಂಖ್ಯೆ ಜಾಸ್ತಿಯಾದಂತೆ ಮತ್ತು ನಿರ್ದಿಷ್ಟವಾದ ಮತ್ತು ಪ್ರದರ್ಶನ ಮತ್ತು ಇತರೇ ಅವಶ್ಯಕತೆಗಳಿಂದ ಅಲ್ಪವಾಗುತ್ತಿರುವ ಜಲವನ್ನು ಹೆಚ್ಚುಗೊಳಿಸಿ ಉತ್ಪನ್ನವನ್ನು ಅಧಿಕಗೊಳಿಸುವುದು ಪಾಲ್ಗೊಳ್ಳುವಿಕೆಯಿಂದ ಸಫಲವಾಗುತ್ತಿದೆ.

ಎರಡು ಸಾವಿರ ಹೆಕ್ಟೇರ್ ವಿಸ್ತೀರ್ಣ ಅಚ್ಚುಕಟ್ಟು ಮತ್ತು ಅದಕ್ಕೂ ಕಡಿಮೆ ಸಾಮರ್ಥ್ಯ ಉಳ್ಳ ನೀರಾವರಿ ಯೋಜನೆಗಳು ಯೋಜನಾ ಆಯೋಗದ ಮಾಪಕದಿಂದ ಸಣ್ಣ ನೀರಾವರಿ ಎಂದು ಪರಿಗಣಿಸಲಾಗಿದೆ. ಇಂತಹ ಯೋಜನೆಗಳ ಪಟ್ಟಿಯಲ್ಲಿ ಕೆರೆಗಳು ಸೇರಲ್ಪಟ್ಟಿವೆ. ವರ್ತಮಾನದಲ್ಲಿ ೨೦೦೦ ha-೪೦-ha ಅಚ್ಚುಕಟ್ಟಿನ ಕೆರೆಗಳು ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಮತ್ತು ಆ ಇಲಾಖೆಯ ಆಡಳಿತದಲ್ಲಿವೆ. ೪೦ ha -ಕ್ಕಿಂತ ಕಡಿಮೆ ಅಚ್ಚುಕಟ್ಟಿನ ಕೆರೆಗಳು ಜಿಲ್ಲಾ ಪಂಚಾಯತ್ ಮತ್ತು ಗ್ರಾಮಪಂಚಾಯತ್‌ನ ಉಸ್ತುವಾರಿಯಲ್ಲಿವೆ.

ಜಲಸಂವರ್ಧನಾ ಯೋಜನಾ ಸಂಘವು, ಕ್ರಮೇಣ, ಎಲ್ಲಾ ಕೆರೆಗಳನ್ನು ಸರ್ಕಾರಿ ಪಂಚಾಯತ್ ವಿಭಾಗಗಳಿಂದ ಹಸ್ತಾಂತರಿಸಿಕೊಂಡು ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಿ ಕರ್ನಾಟಕ ಸಂಘಗಳ ನಿಯಮಾನುಸಾರ ನೋಂದಾಯಿಸಿ ತಕ್ಕ ಅಧಿಕಾರ ಮತ್ತು ಕೆರೆಗಳ ಘೋಷಣೆ ಮತ್ತು ನಿರ್ವಹಣೆಕಾರ್ಯವನ್ನು ಸಂಘಗಳಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ತೊಡಗಿದೆ. ಪೂರ್ಣವಾಗಿ ಹಸ್ತಾಂತರವಾಗುವ ಜಲಾನಯನ ಕ್ಷೇತ್ರ ಅಚ್ಚುಕಟ್ಟು, ಇವೆಲ್ಲವನ್ನು ಪುನರ್ಜೀವಗೊಳಿಸಿ ಸಂಘಗಳ ಪಾಲ್ಗೊಳ್ಳುವಿಕೆ ಕಾರ್ಯಕ್ರಮವನ್ನು ಪೂರ್ತಿ ಮಾಡುತ್ತವೆ.

ಪುನರ್ಜೀವಗೊಂಡ ಕೆರೆಗಳ ಜಲವಿತರಣೆ ಕಾರ್ಯಕ್ರಮಕ್ಕೆ ಸಂಘಗಳು ನಿರ್ದಿಷ್ಟ ನೀತಿ ನಿರ್ಧಾರ ಮಾಡಬೇಕು. ಕೆರೆಯ ಪೂರ್ಣ ಸಂಗ್ರಹಣೆ ಅದರಲ್ಲಿ ಕುಡಿಯುವ ನೀರಿಗೆ ಮತ್ತು ಇತರೇ ಅವಶ್ಯಕತೆಗಳಿಗೆ ಪರಿಮಾಣ ನಿರ್ಧರಿಸಿ, ಆ ಪರಿಮಾಣಕ್ಕೆ ಪ್ರಾಥಮಿಕ ಆದ್ಯತೆ ಕೂಡಬೇಕು. ಸಾಮಾನ್ಯವಾಗಿ ಇದರ ಪರಿಮಾಣ ಕಮ್ಮಿಯೇ ಇರುತ್ತದೆ. ಈ ಪರಿಮಾಣವನ್ನು ಸುರಕ್ಷಿತ ಮಾಡಿ, ಉಳಿದ ಹೆಚ್ಚು ಪರಿಮಾಣವನ್ನು ಕೃಷಿಗೋಸ್ಕರ ಪ್ರತಿ ಬೆಳೆ ಕಾಲ ಪರಿಮಾಣ ನಿರ್ಧರಿಸಬೇಕು. ನಿರ್ಧರಿಸಿದ ಪರಿಮಾಣ ಆಯಾ ಬೆಳೆಗಳ ಕಾಲದಲ್ಲಿ ವಿತರಣೆ ಶಾಖೆಗಳಿಂದ ಅಚ್ಚುಕಟ್ಟಿನ ಕೊನೆಯ ಜಮೀನವರೆಗೆ ಎಲ್ಲೆಲ್ಲಿ ಬೆಳೆಗಳನ್ನು ಕೃಷಿಕರು ಬಿತ್ತಿರುವುದೋ ಅವಶ್ಯಕತಾನುಸಾರವಾಗಿ ತಲುಪುವ ಒಂದು ವಿತರಣಾಕಾರ್ಯದ ರಚನಾಕ್ರಮವನ್ನು ಮುಂಗಡವಾಗಿ ತಯಾರಿಸಿ ಅದರಂತೆ ವಿತರಣೆಯನ್ನು ಮಾಡಬೇಕು. ಈ ವಿತರಣಾ ಕಾರ್ಯದಲ್ಲಿ ರೈತರಿಂದ ಬೆಳೆಕಾಲದ ಮುಂಗಡವಾಗಿ ಯಾವ ಯಾವ ಬೆಳೆ ಯಾರು ಯಾರು ಬಿತ್ತುತ್ತಾರೋ ಅವರಿಂದ ಸಲಹೆ ಪಡೆದು ಜಲಪ್ರಮಾಣದ ಮಟ್ಟಕ್ಕೆ ಅನುಗುಣವಾಗಿ cup pattern ನಿರ್ಧರಿಸಿ, ವಿತರಣಾ ಕಾರ್ಯದಲ್ಲಿ ಅಳವಡಿಸಬೇಕು.

ದೊಡ್ಡ ಕೆರೆಗಳಲ್ಲಿ ಅಂದರೆ ೪೦ haಅಧಿಕವಾಗಿರುವ ಅಚ್ಚು ಕಟ್ಟಿದ್ದರೆ, ಘನಪರಿಮಾಣ ಪ್ರಕಾರ ಪ್ರತಿ ಕೃಷಿಕರಿಗೆ ಹಂಚಬೇಕು. ನೀರಾವರಿಯ ಒಟ್ಟು ಪ್ರಮಾಣದಲ್ಲಿ, ವಿತರಣಾ ಕಾಲುವೆಗಳಲ್ಲಿ ಮತ್ತು ಕೆರೆಯಲ್ಲಿ ವರ್ಷದಲ್ಲಿ ಆಗುವ ಜಲದ ನಷ್ಟಗಳನ್ನು ಗುರುತಿಸಿ ಉಳಿದ ಪರಿಮಾಣವನ್ನು ಪ್ರತಿ ಅಚ್ಚುಕಟ್ಟುದಾರನಿಗೆ ಹಂಚಬೇಕು. ಹಂಚುವ ನೀತಿಯನ್ನು ಎಲ್ಲರ ಸಲಹೆಗಳನ್ನೊಳಗೊಂಡು, ಜಲದ ಪರಿಮಾಣವನ್ನು ಪ್ರತಿ ಬೆಳೆಯುವ ಕಾಲವನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಬೇಕು. ಅದು ಆಯಾ ಕೃಷಿಕನ ಜಲದ ಹಕ್ಕು ಎಂದು ನಿರ್ಧರಿಸಬೇಕು. ಜಲಾಶಯ ಪೂರ್ಣವಾಗದಿದ್ದರೆ ಸರಿಯಾದ (proportional) ಪ್ರಮಾಣದಲ್ಲಿ ಹಂಚಬೇಕು.

ವಿತರಣಾ ಕಾಲುವೆಗಳಲ್ಲಿ ಮುಖ್ಯ ಕಾಲುವೆ ಹೆಬ್ಗಾಗದಿಂದ ಅಲ್ಲಲ್ಲಿ ನೀರು ಅಳೆಯುವುದು ಸುಲಭ. ಗೇಜ್‌ಗಳಲ್ಲಿ ಸ್ಥಾಪಿಸದ್ದಲ್ಲಿ ಹಂಚುವುದಕ್ಕೆ ಅನುಕೂಲವಾಗುತ್ತದೆ. ಕಾಲುವೆಗಳಲ್ಲಿ ಹರಿಯುವ ನೀರು ಹೆಚ್ಚುಕಮ್ಮಿ ಆದಲ್ಲಿ ಆಗಾಗ್ಗೆ ಅಳೆದು ನಿಯಂತ್ರಿಸಬಹುದು. ಈ ಕೆಲಸ ನೀರ ಗಂಟಿಗೆ ಸೇರಿದ್ದು. ಆತನಿಗೆ ತಾಂತ್ರಿಕ ತರಬೇತಿಕೊಟ್ಟು ಹೊಸ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಕೊಡಬೇಕು.

ಪ್ರತಿಯೊಬ್ಬ ಕೃಷಕನು ವಿತರಣಾ ಯೋಜನೆಯಲ್ಲಿ ನಿರ್ಧರಿಸಿದ ಪ್ರಮಾಣ ಅವನ ಸರತಿ ಬಂದಾಗ ಮಾತ್ರವೇ ತನ್ನ ಹೊಲಕ್ಕೆ ತಿರುಗಿಸಬೇಕು. ಈ ಪರಿಮಾಣ ಸಣ್ಣಕಾಲುವೆ ಹರಿಯುವ ನಿರ್ದಿಷ್ಟ ಕಾಲಕ್ಕೆ ಅನುಗುಣವಾಗಿ ಹರಿಸಬೇಕು. ಯಾರು ಯಾರಿಗೆ ಯಾವ ಯಾವ ನಿಗದಿಕಾಲವನ್ನು ನಿರ್ಧರಿಸುತ್ತಾರೆ. ಅದೇ ಪ್ರಕಾರ ಪಾಲಿಸಿ ನೀರಾವರಿ ಮಾಡಬಹುದು. ಹೀಗೆ ಒಂದು ತಾಂತ್ರಿಕ ಆಧಾರದ ಮೇಲೆ ನಿರ್ದಿಷ್ಟ ವಿತರಣಾ ಯೋಜನೆ ಪ್ರಕಾರ ಕೆರೆಯ ಜಲ ವಿತರಣೆ ಮಾಡಿದರೆ ಪ್ರತಿಯೊಬ್ಬ ಅಚ್ಚುಕಟ್ಟುದಾರನಿಗೆ ಜಲ ಒದಗುವುದು. ಇದಲ್ಲದೆ ಕೃಷಿ ಉತ್ಪನ್ನವೂ ಜಾಸ್ತಿ ಆಗುವುದು.

ಅಚ್ಚುಕಟ್ಟಿನ ಮಧ್ಯೆ ಮತ್ತು ಕೊನೆಯ ಭಾಗಗಳಲ್ಲಿ ಬಾವಿಗಳು ಇದ್ದರೆ, ಇಲ್ಲದಿದ್ದರೆ ಅಲ್ಲಲ್ಲಿ ಬಾವಿಗಳನ್ನು ಅನುಕೂಲವಾದ ಸ್ಥಳಗಳಲ್ಲಿ ತೋಡಿದರೆ, ಬಾವಿಗಳಿಂದ ನೀರನ್ನು ಪಂಪ್ ಮಾಡಿ ಬೆಳೆಗಳಿಗೆ, ಕೆರೆಯ ನೀರು ಉಪಲಬ್ದವಿಲ್ಲದಿದ್ದಾಗ ಉಣಿಸಬಹುದು. ಇದಲ್ಲದೆ ಸಮಯಕ್ಕೆ ತಕ್ಕ ಹಾಗೆ ಬೆಳೆಗೆ ಬೇಕಾದಾಗ ಪಂಪ್ ಮೂಲಕ ತಕ್ಷಣವೇ ನೀರು ಹಾಯಿಸಲು ಅನುಕೂಲವಾಗುತ್ತದೆ. ಕೆಲವು ವೇಳೆ ಕಾಲುವೆಯ ನೀರು ಬೇರೆ ಬೇರೆ ಹೊಲ, ಗದ್ದೆ ಮತ್ತು ಬೆಳೆಗೆ ಸಮೆಯೋಚಿತವಾಗಿ ಒದಗಿಸಲು ಸಾಧ್ಯವಾಗುವುದಿಲ್ಲ. ಕಾರಣ ಇತರ ಹೊಲಗದ್ದೆಗಳಿಗೆ ನೀರು ಪೂರೈಕೆ ಆದ ಮೇಲೆ ನೀರು ಮೇಲಿಂದ ಕೆಳಗೆ ಹರಿಯುತ್ತೆ. ಆದ್ದರಿಂದ ಅಲ್ಲಲ್ಲಿ ಭಾವಿಗಳಿದ್ದರೆ, ಈ ಕೊರತೆಯನ್ನು ನಿವಾರಿಸಬಹುದು. ಹೀಗೆ ಕೆರೆಯ ಮತ್ತು ಬಾವಿಯ ನೀರು ಎರಡನ್ನು ಸಮಯೋಚಿತವಾಗಿ ಬಳಸುವುದರಿಂದ ಬೆಳೆಗಳ ಉತ್ಪನ್ನ ಇನ್ನೂ ಹೆಚ್ಚಿಸಬಹುದು. ಈ ವಿಧಾನಕ್ಕೆ ಭೂಮಿಯ ಮೇಲಿನ ಜಲ ಮತ್ತು ಅಂತರ್ಜಲದ ಜಂಟಿ ಉಪಯೋಗ ಎನ್ನುತ್ತಾರೆ. ಕೆರೆಗಳ ಜಲ ನಿರ್ವಹಣೆ ಹೀಗೆ ಮಾಡಿದರೆ ನೀರಿನ ಸದು ಉಪಯೋಗವಾಗುತ್ತದೆ. ಹೀಗೆ ಮಾಡುವದರಿಂದ ಉತ್ಪನ್ನ ಹೆಚ್ಚಿ ಕೃಷಿಕರ ಬಾಳು ಉನ್ನತ ದರ್ಜೆ ಏರುವುದು ಮತ್ತು ಹಳ್ಳಿಯ ಜೀವನ ಕುಶಲವಾಗುತ್ತದೆ.

ಸಣ್ಣ ಕೆರೆಗಳಲ್ಲಿ ಕೃಷಿಕರ ಸಂಖ್ಯೆ ಕಡಿಮೆ ಇರುವುದರಿಂದ ಜಲದ ಹಂಚಿಕೆಯನ್ನು ಪರಸ್ಪರ ಮೈತ್ರಿ ಮತ್ತು ಸೌಹಾರ್ದದಿಂದ ಪರಿಹರಿಸಿಕೊಳ್ಳಬಹುದು. ಹಿಂದಿನ ವರ್ಷದಲ್ಲಿ ಜಲದ ಹಂಚಿಕೆಯಲ್ಲಿ ಆದ ದೋಷ, ಅತೃಪ್ತಿ ಮತ್ತು ಸಮಾನ ಹಂಚಿಕೆಯಲ್ಲಿ ವಿರೋಧಾಭಾಸಗಳನ್ನು ಅಧ್ಯಯನ ಮಾಡಿ ಸಂಘದ ಆಡಳಿತ ಸಮಿತಿ ಎಲ್ಲರಿಗೂ ಆದಷ್ಟು ಸಮಾನ ಹಂಚಿಕೆ ಆಗುವಂತೆ ವಿಧಾನದಲ್ಲಿ ಬದಲಾವಣೆ ತರಬಹುದು. ಇದು ಸ್ವಲ್ಪ ನಿಧಾನವಾದ ಕೆಲಸ. ಆದರೆ ಅಧ್ಯಯನ ಮಾಡಿ ಉತ್ತಮ ರೀತಿಯಲ್ಲಿ ಆಯಾ ಕೆರೆಯ ಗುಣಕ್ಕೆ ತಕ್ಕಂತೆ ಒಂದು ಸಮಾನ ರೂಪದ ಹಂಚಿಕೆ ಅನುಭವದ ನಿಟ್ಟಿನಲ್ಲಿ ಸೃಷ್ಟಿಸಿ ಎಲ್ಲರಿಗೂ ಹಿತವಾಗುವಂತೆ ಅಳವಡಿಸಿಕೊಳ್ಳಬೇಕು.

ಸಮಾವೇಶ

ಕೆರೆಯ ನೀರನ್ನು ಬಳಸುವ ಹಳ್ಳಿಯ ಜನ ಸಮುದಾಯದಲ್ಲಿ ಎಲ್ಲರಿಗೂ ಸಂಘದ ವ್ಯವಹಾರದಲ್ಲಿ ಸಮಾನ ಹಕ್ಕಿರಬೇಕು. ಆಡಳಿತ ಸಮಿತಿಯಲ್ಲಿ ಅಲ್ಪಸಂಖ್ಯಾತರಿಗೆ, ಹಿಂದುಳಿದ ಕೋಮುಗಳಿಗೆ ಮತ್ತು ಅಶಕ್ತ ಗುಂಪಿಗೆ ಪ್ರತಿನಿಧಿತ್ವ ಮತ್ತು ಪ್ರಾಧಾನ್ಯತೆ ಇರಬೇಕು. ಕೆರೆಯಲ್ಲಿ ನೀರು ಬಳಸುವವರು ಹೆಚ್ಚಾಗಿ ಕೃಷಿಕರೆ ಇರುವುದರಿಂದ ಆಡಳಿತ ಸಮಿತಿಯು ಅವರಿಂದ ಜಲಕರವನ್ನು ವಸೂಲಿ ಮಾಡಿ ಸಂಘದ ಆದಾಯಕ್ಕೆ ಸೇರಿಸಬೇಕು. ಇದಲ್ಲದೆ ಕೆರೆಯ ಅಂಗಳದ ಮೀನುಗಾರಿಕೆಯ ಆದಾಯ, ಜಲಾನಯನ ಕ್ಷೇತ್ರದ ವನಸಂಪತ್ತಿನ ಆದಾಯ ಮತ್ತು ಕೆರೆಯಿಂದ ಉಪಯೋಗ ಪಟ್ಟವರಿಂದ ವಸೂಲಿ ಆಗುವ ತೆರಿಗೆ ಎಲ್ಲವೂ ಸಂಘಕ್ಕೆ ಸಂದಬೇಕು. ಹೀಗೆ ಕೆರೆಯ ಸಂಬಂಧಿಸಿದ ಹಣಕಾಸು ವಸೂಲಿಯನ್ನು ಕ್ರೋಢಿಕರಿಸಿ ಕೆರೆಯ ವಾರ್ಷಿಕ ಸಂರಕ್ಷಣೆ, ಪೋಷಣೆ, ಆಗಾಗ್ಗೆ ಹೂಳು ತೆಗೆಯುವುದು, ಕಾಲುವೆಗಳ ಸಂರಕ್ಷಣೆ ಮತ್ತು ಉತ್ತಮಗೊಳಿಸುವುದು, ಇತ್ಯಾದಿಗಳನ್ನು ನಿರ್ವಹಿಸಬೇಕು. ಈ ಎಲ್ಲಾ ಕಾರ್ಯಗಳನ್ನು ಸಂಘವೇ ನಿರ್ಧರಿಸಬೇಕು. ಹೀಗೆ ಆದರೆ ಜನಸಾಮಾನ್ಯರಲ್ಲಿ ಸಾಮೂಹಿಕವಾಗಿ ಕೆರೆಯ ಮೇಲೆ ತಮ್ಮ ಹಕ್ಕು ಮತ್ತು ಒಂದು ವಿಧದ ತನ್ನತನ ನಿಕಟ ಸಂಬಂಧ ಬೆಳೆದು ಹಿಂದಿನ ಕಾಲದಂತೆ ಕಲ್ಪಿಸಿ ಕೆರೆಗಳ ಉತ್ಥಾನ ಸದಾ ಬೆಳೆದು ಬರುತ್ತದೆ. ಇದು ರಾಜ್ಯದ ಹಿತ, ರಾಷ್ಟ್ರದ ಹಿತ.

ರಾಷ್ಟ್ರದ ೭೦% ಜನ ಸಮುದಾಯ ಹಳ್ಳಿಗಳಲ್ಲಿವೆ. ಮತ್ತು ಹಳ್ಳಿಗಳ ಕೆರೆಗಳು ಉಚ್ರಾಯ ಸ್ಥಿತಿಯಲ್ಲಿದ್ದರೆ ಹಳ್ಳಿಯೂ ಪಟ್ಟಣಗಳಂತೆ ಕುಶಲವಾಗಿ ಸಮೃದ್ಧವಾಗಬಲ್ಲದು. ಅಂತಹ ಪರಿಸ್ಥಿತಿ ಈಗ ಕಾಣುವಂತೆ ಪಟ್ಟಣದ ಕಡೆಗೆ ಜನಾಂಗದ ಓಟ ಕಡಿಮೆ ಆಗಿ ಒಂದು ಸಂತುಲನದೆಡೆಗೆ ರಾಷ್ಟ್ರ ಹೆಜ್ಜೆ ಇಡಬಹುದು. ಸಂತುಲನವಿದ್ದರೆ ಶಾಂತಿ ಇರುತ್ತದೆ. ಕೆರೆಯ ನಿರ್ವಹಣೆ ಜಲಪ್ರಬಂಧ ಎಷ್ಟು ಸಾಮಾಜಿಕ ತತ್ವವಿದೆಯೋ ಅದನ್ನು ಸಮರ್ಥ್ಯದಿಂದ ಪೋಷಿಸಬೇಕಾದರೆ ಅಷ್ಟೆ ತಾಂತ್ರಿಕ ತತ್ವಗಳೂ ಅಳವಡಿಸಿ ನೀರು ಬಳಕೆದಾರರ ಸಂಘಗಳ ಕಾರ್ಯಕರ್ತರಿಗೂ ಮತ್ತು ಸದಸ್ಯರ ಜ್ಞಾನವೃದ್ಧಿಗೋಸ್ಕರ ಒಂದು ಕೆರೆಯ ನಿರ್ವಹಣೆಗೆ ಅನುಕೂಲವಿರುವಂತೆ ಒಂದು ಕೈಪಿಡಿಯನ್ನು ತಯಾರಿಸಿದೆ. ಸಂಘಗಳಿಂದ ಕೆರೆಗಳ ಸಂರಕ್ಷಣೆ ಮತ್ತು ಎಲ್ಲರಿಗೂ ತೃಪ್ತಿಕರ ಜಲವಿತರಣೆ ಮಾಡಲು ಸಕ್ಷಮತೆ ಬರಬೇಕಾದರೆ ಸರಕಾರದ ತಾಂತ್ರಿಕ ವಿಭಾಗವು ಸಂಘಗಳಿಗೆ ಸಹಾಯಕವಾಗಿರಬೇಕು. ಪ್ರತಿ ವಿಭಾಗ ಮತ್ತು ಕರ್ಮಚಾರಿಗಳು ಸಲಹಾಕಾರರಂತೆ ಕೆಲಸ ಮಾಡಬೇಕು. ಸಂರಕ್ಷಣ ಕಾರ್ಯದಲ್ಲಿ ಅತ್ಯಂತ ಖರ್ಚಿನ ಕೆಲಸವಿದ್ದರೆ ಸರಕಾರ ಹಣ ಸಹಾಯ ಮಾಡಿ ಅನುಕೂಲ ಮಾಡಿ ಕೊಡಬೇಕು. ನೀರು ಬಳಕೆದಾರರ ಸಂಘಗಳು ಸಫಲವಾಗಿ ಕಾರ್ಯ ನಿರ್ಧರಿಸುವುದಕ್ಕೆ ಸರಕಾ ಸದಾ ತಯಾರಿರಬೇಕು. ಆಗಲೇ ಸರಿಯಾದ ಪಾಲ್ಗೊಳ್ಳುವಿಕೆ ಅರ್ಥವತ್ತಾಗಿರುತ್ತದೆ ಮತ್ತು ಸಕಲರಿಗೂ ಲಾಭದಾಯಕವಾಗಿರುತ್ತದೆ. ಜಲವಿದ್ದರೆ ಜೀವ, ಜೀವ ಇದ್ದರೆ ಜನಜೀವನ. ಹಳ್ಳಿ ಜನರು “ನಮ್ಮ ಕೆರೆ ನಮ್ಮ ಹಕ್ಕು” ಎನ್ನುವುದನ್ನು ಸಾಧಿಸಬೇಕು. ಆಗಲೇ ಕೆರೆಗಳು ಜನ್ಮಜನ್ಮಾಂತರಕ್ಕೂ ಮುಂಬರುವ ಪೀಳಿಗೆಗಳಿಗೆ ಉಳಿಯಲು ಸಾಧ್ಯ.