. ಜನರ ಬೇಡಿಕೆ ವಿವರದ ಸಂಗ್ರಹ

ಕೆರೆ ಮರುಸಂವರ್ಧನೆ ಕಾರ್ಯಕ್ರಮ ಪರಿಸರ ರಕ್ಷಣೆ ಮತ್ತು ಆಹಾರ ಭದ್ರತೆ ಕಾರ್ಯಕ್ರಮ. ಆದ್ದರಿಂದ ಕೆರೆಗೆ ಸಂಬಂಧಿಸಿದಂತೆ ಇಡೀ ಯೋಜನಾ ಪ್ರದೇಶದ ಸಮೀಕ್ಷೆಯನ್ನು ಗ್ರಾಮವಿಕಾಶ ನಡೆಸಿತು. ಗ್ರಾಮವಾರು ಮಾಹಿತಿಯನ್ನು ಸಂಗ್ರಹಿಸಲಾಯಿತು. ಕೆರೆಯ ಪರಿಸ್ಥಿತಿಯೂ ಸೇರಿದಂತೆ ಇದರ ಮಾಹಿತಿಗಳ ವಿವರ:

 • ಕೆರೆಯ ನೀರು ಆವರಿಸಿದ ಪ್ರದೇಶ.
 • ಕೆರೆಯ ಹೂಳೆತ್ತಬೇಕಾದ ಪ್ರಮಾಣ.
 • ಕೆರೆಯ ಅಚ್ಚುಕಟ್ಟು ಪ್ರದೇಶ.
 • ಕೆರೆಯ ಜಲಾನಯನ ಪ್ರದೇಶ
 • ಕೆರೆಯ ಜಲಾನಯನ ಪ್ರದೇಶ.
 • ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರತಿ ರೈತ ಪಡೆದಿರುವ ಜಮೀನಿನ ಪ್ರಮಾಣ ರೈತರ ಸಾಮಾಜಿಕ ಆರ್ಥಿಕ ಪರಿಸ್ಥಿತಿಯ ವಿವರ.
 • ಅನುಸರಿಸುತ್ತಿರುವ ಬೆಳೆ ಪದ್ಧತಿ.
 • ಕೆರೆಗೆ ಅಧಿಕ ನೀರು ಬರುತ್ತಿದೆಯೇ.
 • ಬೆಳೆ ಪ್ರದೇಶದ ನೀರಿನ ಕೊರತೆ, ಕೆರೆಯಲ್ಲಿನ ನೀರಿನ ಸಂಗ್ರಹದ ಕೊರತೆ.
 • ಅ‌ಚ್ಚಕಟ್ಟು ಪ್ರದೇಶದಲ್ಲಿರುವ ತೆರೆದ ಬಾವಿಗಳ ಸಂಖ್ಯೆ.
 • ಅಂತರ್ ಜಲದ ಮಟ್ಟ.

ಗ್ರಾಮವಿಕಾಸ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಹೆಚ್ಚು ಗ್ರಾಮಗಳ ಜನರು ಕೆರೆಗಳ ಹೂಳೆತ್ತಬೇಕೆಂಬ ಬೇಡಿಕೆಯನ್ನು ಪ್ರಸ್ತಾಪಿಸಿದರು. ಇದರ ಪರಿಣಾಮವಾಗಿ ಮಹಿಳಾ ಸ್ವ-ಸಹಾಯ ಗುಂಪಿಗೆ ನಾಯಕರ ನೇತೃತ್ವದಲ್ಲಿ ಗ್ರಾಮಗಳ ಜನರ ನಿಯೋಗಗಳು ಗ್ರಾಮವಿಕಾಸ ಯೋಜನಾ ಮುಖ್ಯ ಕಚೇರಿಗೆ ಭೇಟಿ ನೀಡಿದವು. ಕೆರೆಗಳ ಹೂಳೆತ್ತಲು ಅಗತ್ಯವಾದ ಸಂಪನ್ಮೂಲಗಳನ್ನು ಸಂಗ್ರಹಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಪ್ರಯತ್ನಿಸಿದರು. ಅಗತ್ಯಗಳನ್ನು ಪರಿಶೀಲಿಸಿದ ನಂತರ ಹೂಳೆತ್ತುವುದಕ್ಕಾಗಿ ಕೆರೆಗಳನ್ನು ಆಯ್ಕೆ ಮಾಡಲು ಜನರು ಎಲ್ಲ ರೀತಿಯಲ್ಲಿ ಭಾಗವಹಿಸುವುದು ಅನಿವಾರ್ಯ ಎಂದು ಗ್ರಾಮದ ಜನರ ಮುಖಂಡರಿಗೆ ತಿಳಿಸಲಾಯಿತು. ಹಣಕಾಸನ್ನು ಹೊಂದಿಸಬಹುದಾದಂಥ (ಹಣದ ಪ್ರಮಾಣ ಪರಿಗಣಿಸದೆ) ಗ್ರಾಮಗಳ ಕೆರೆಗಳನ್ನು ಆಯ್ಕೆ ಮಾಡಲಾಯಿತು. ಕಡು ಬಡವರ ಸಂಖ್ಯೆ ಜಾಸ್ತಿಯಿರುವ ಪ್ರದೇಶಗಳ ಗ್ರಾಮದ ಜನರನ್ನು ಈ ಷರತ್ತನ್ನು ಪಾಲಿಸಲು ಒತ್ತಾಯಿಸಲಿಲ್ಲ.

. ಕೆರೆಗಳ ಆಯ್ಕೆಯಲ್ಲಿ ಆದ್ಯತೆ

ಹೂಳೆತ್ತಲು ಕೆರೆಗಳ ಪಟ್ಟಿ ಸಿದ್ಧಪಡಿಸಿದ ನಂತರ ಆದ್ಯತೆಯ ಮೇಲೆ ಯೋಜನೆ ಜಾರಿ ಮಾಡಲು ನಿರ್ಧರಿಸಲಾಯಿತು. ಕೆರೆ ಹೂಳೆತ್ತಬೇಕೆಂದು ಜನರ ಬೇಡಿಕೆಯನ್ನು ಮುಂದಿಟ್ಟ ನಂತರ ಸಂಬಂಧಿಸಿದ ಗ್ರಾಮಗಳ ಸಾಮಾಜಿಕ ಆರ್ಥಿಕ ನಕ್ಷೆ ತಯಾರಿಸಲು ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನ ನಡೆಸಲಾಯಿತು. ಈ ಮಾಪನದ ನಂತರ ಸಮುದಾಯದ ಸಭೆಗಳನ್ನು ನಡೆಸಲಾಯಿತ. ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನ ಮತ್ತು ಸಮೀಕ್ಷೆಯ ಫಲಶೃತಿಗಳನ್ನು ಸಮೀಕರಿಸಿ, ಆದ್ಯತೆಯ ಮೇಲೆ ಕೆರೆಗಳ ಹೂಳೆತ್ತಲು ಆಯ್ಕೆ ಮಾಡಲಾಯಿತು. ಆಯ್ಕೆಗೆ ಅನುಸರಿಸಿದ ಮಾನದಂಡಗಳನ್ನು ಈ ರೀತಿ ಇವೆ.

 • ಗ್ರಾಮದ ಸಾಮಾಜಿಕ ಚಿತ್ರದ ವಿವರ (ದಲಿತ ಸಮುದಾಯ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ರೈತ ಪ್ರಮಾಣ)
 • ಸ್ವ-ಸಹಾಯ ಗುಂಪುಗಳ ವಿವರ (ಸಕ್ರಿಯವಾಗಿಯೇ ಇಲ್ಲವೇ, ಇಂಥ ಕಾರ್ಯ ಕೈಗೆತ್ತಿಕೊಳ್ಳಲು ಶಕ್ತವಾಗಿಯೇ ಇಲ್ಲವೆ, ಸ್ವ-ಸಹಾಯ ಗುಂಪುಗಳು ಈ ಯೋಜನೆಯ ಜಾರಿಯಲ್ಲಿ ಭಾಗಿಯಾಗುವವೇ ಇಲ್ಲವೇ, ಅಚ್ಚುಕಟ್ಟು ಪ್ರದೇಶದಲ್ಲಿ ಜಮೀನುಳ್ಳ ರೈತರ ಸಂಖ್ಯೆ).
 • ಕೆರೆಯ ಹೆಚ್ಚುವರಿ ನೀರಿನ ಪ್ರಮಾಣ (ಪ್ರತಿ ಮುಂಗಾರಿನಲ್ಲಿ ಕೆರೆ ಕೋಡಿ ಹೋಗುತ್ತದೆಯೇ, ಹಾಗಿದ್ದರೆ ಎಷ್ಟು ದಿನ ಹೆಚ್ಚು ನೀರು ಹೊರ ಹೋಗುತ್ತದೆ)
 • ಕೆರೆಯ ಪ್ರಸ್ತುತ ಸ್ಥಿತಿ (ಬೆಳೆಗೆ ಕೊರತೆಯಾಗುವ ನೀರಿನ ಪ್ರಮಾಣ, ಕಟ್ಟೆಯ ಕಾಲುವೆ, ಕ್ರೆಸ್ಟ್ ಗೇಟು ನಿರುಪಯುಕ್ತ ಒಡ್ಡುಗಳು ಮತ್ತಿತರೆ)
 • ಕೆರೆಗೆ ನೀರು ಬರುವ ಮೂಲ (ಉತ್ತಮ ಜಲಾನಯನ ಪ್ರದೇಶ ಇದೆಯೇ, ಕೆರೆಗೆ ನೀರು ಹರಿದು ಬರುವ ಮಾರ್ಗಗಳ ಒತ್ತುವರಿ ಆಗಿದೆಯೇ ಇತ್ಯಾದಿ)
 • ಕೆರೆಯಿಂದ ಅನುಕೂಲ ಪಡೆಯುತ್ತಿರುವವ ವ್ಯಾಪ್ತಿ (ಗ್ರಾಮವಿಕಾಸ ವ್ಯಾಪ್ತಿಗೆ ಬರುವ ಕುಟುಂಬಗಳ ಸಂಖ್ಯೆ, ಒಂದು ಗ್ರಾಮಕ್ಕಿಂತ ಹೆಚ್ಚು ಗ್ರಾಮಗಳ ಕುಟುಂಬಕ್ಕೆ ಕೆರೆ ನೀರು ಬಳಕೆಯಾಗುತ್ತಿದೆಯೇ ಇತ್ಯಾದಿ).

. ಸಮದರ್ಶಿತ್ವ

ಕೆರೆ ಹೂಳೆತ್ತುವ ಯೋಜನೆಗೆ ‘ಗ್ರಾಮವಿಕಾಸ’ ಬೆಂಬಲ ನೀಡಲು ಮತ್ತು ಇಂಥ ಕಾರ್ಯದಲ್ಲಿ ಭಾಗವಹಿಸಲು ಮುಖ್ಯವಾದ ಕಾರಣ ಎಲ್ಲರಿಗೂ ಸಮ್ಮತವಾದ ನ್ಯಾಯ ದೊರಕಿಸಿಕೊಡುವುದಾಗಿದೆ. ಆಯ್ಕೆಯಾದ ಕೆರೆಗಳ ರೈತರು ಕೆಲವು ಮಾನದಂಡಗಳನ್ನು ಪಾಲಿಸಬೇಕು.

 • ಹೆಚ್ಚವರಿ ನೀರು ಬಡ ರೈತರಲ್ಲಿ ಹಂಚಿಕೆಯಾಗಬೇಕು (ಬೆಳೆ ಹಂಚಿಕೊಳ್ಳುವುದು).
 • ಭೂರಹಿತರಿಗೆ ಕೆರೆಯ ಪಾಲನ್ನು ಹಂಚಿಕೊಳ್ಳಲು ರೈತರು ಸಿದ್ಧರಿರಬೇಕು (ಭೂರಹಿತರಿಗೆ ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅವಕಾಶ ನೀಡಬೇಕು)

. ಈ ಯೋಜನೆಯ ವ್ಯಾಪ್ತಿಯ ಕೆರೆ ಮತ್ತು ಹಳ್ಳಿಗಳ ಆಯ್ಕೆ

ಗ್ರಾಮ ಮತ್ತು ಕೆರೆಗಳನ್ನು ಗುರುತಿಸಿದ ನಂತರ ಮುಂದಿನ ಕ್ರಮ ಅನುಸರಿಸಬೇಕು. ಕಾರ್ಯಕ್ರಮ ಜಾರಿಗೆ ಬಂದ ಒಂದು ವರ್ಷದ ಮೊದಲೇ ಸಾಮಾಜಿಕ, ತಾಂತ್ರಿಕ ಪ್ರಕ್ರಿಯೆ ಆರಂಭಿಸಲಾಗುವುದು.

. ಸ್ವಸಹಾಯ ಗುಂಪು ಹಾಗೂ ಸಮುದಾಯದ ಪಾತ್ರದ ವಿಂಗಡಣೆ

ಇಡೀ ಸಮುದಾಯವನ್ನು ಈ ಕಾರ್ಯಕ್ರಮದ ಜಾರಿಯಲ್ಲಿ ಭಾಗಿಯನ್ನಾಗಿ ಮಾಡಿಕೊಳ್ಳಬೇಕು. ಈ ಯೋಜನೆಯ ಕೇಂದ್ರ ಬಿಂದು ಸ್ವ-ಸಹಾಯ ಗುಂಪುಗಳು. ಮಹಿಳೆಯರಲ್ಲಿ ನಾಯಕತ್ವ ಅಭಿವೃದ್ಧಿಗೆ ಅವಕಾಶ ನೀಡುವ ಕೆರೆಗಳ ಹೂಳೆತ್ತುವ ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಮಾರ್ಗ ಎಂದು ಗ್ರಾಮವಿಕಾಸ ಭಾವಿಸಿದೆ. ಜೊತೆಗೆ ಸಾರ್ವಜನಿಕ ಸಂಪನ್ಮೂಲಗಳ ನಿರ್ವಹಣೆ ಮತ್ತು ಮಾಲಿಕತ್ವದಲ್ಲಿ ಮಹಿಳೆಯರಿಗೆ ಸಮಾನ ಪಾಲು ನೀಡಬೇಕಾದ ಅಗತ್ಯವನ್ನು ಗುರುತಿಸಿ ಹಾಗೂ ಹಾಗೆ ನೀಡಬೇಕೆಂದು ಗ್ರಾಮವಿಕಾಸ ಬಯಸುತ್ತದೆ. ಗ್ರಾಮವಿಕಾಸ ಕೈಗತ್ತಿಕೊಂಡ ಯೋಜನೆಗಳ ಮುಂಚೂಣಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳೇ ಕಾರ್ಯನಿರ್ವಹಿಸುತ್ತಿವೆ. ಯೋಜನೆ ರೂಪುರೇಷೆ ತಯಾರಿಕೆಯಿಂದ ಜಾರಿಯವರೆಗೆ ಮಹಿಳಾ ಸ್ವ-ಸಹಾಯ ಗುಂಪುಗಳ ಮಹಿಳೆಯರೇ ಇದ್ದಾರೆ. ಗ್ರಾಮವಿಕಾಸದ ಬೆಂಬಳದ ಯೋಜನೆಯಲ್ಲಿ ಮಹಿಳೆಯರೇ ನಾಯಕತ್ವ ವಹಿಸುತ್ತಾರೆ ಅಥವಾ ಮುಂಚೂಣಿಯಲ್ಲಿರುತ್ತಾರೆ ಎಂದು ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ. ಬಹುಪಾಲು ಕಾರ್ಯತಂಡಗಳ ನಾಯಕರು ಮಹಿಳೆಯರು ಆಗಿದ್ದಾರೆ.

. ಸಭೆಗಳ ಯೋಜನೆ

ಆನಂತರ ಗ್ರಾಮವಿಕಾಸ ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ಸಭೆಗಳನ್ನು ನಡೆಸುತ್ತದೆ. ಸ್ವ-ಸೇವಾ ಗುಂಪುಗಳೂ ಈ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚಿಸಲಾಗುತ್ತದೆ. ಈ ಸಭೆಗಳಲ್ಲಿ ಗ್ರಾಮವಿಕಾಸ ಸಿಬ್ಬಂದಿಯ ಪಾತ್ರ ಇಲ್ಲ. ಎಲ್ಲ ತೀರ್ಮಾನ ರೈತರದೇ. ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಅಥವಾ ಸದಸ್ಯರೂ ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಸಂಬಂಧಿಸಿದ ವಿಷಯಗಳನ್ನು ಚರ್ಚಿಸಿ ನಿರ್ಧಾರಗಳನ್ನು ತಗೆದುಕೊಳ್ಳಲಾಗುತ್ತದೆ. ನಿರ್ಧಾರ ತೆಗೆದುಕೊಳ್ಳುವ ವಿಷಯಗಳು ಈ ರೀತಿ ಇವೆ.

 • ಸಂಪನ್ಮೂಲಗಳು ಸಮುದಾಯದ ಜವಾಬ್ದಾರಿಯನ್ನು ಹೊರುವ ಸಮಿತಿಯ ರಚನೆ.
 • ಯೋಜನೆಯ ಒಟ್ಟಾರೆ ಜವಾಬ್ದಾರಿಯನ್ನು ಹೊರುವ ಸಮಿತಿಯ ರಚನೆ.
 • ಜನರ ಪಾಲನ್ನು ನೀಡುವ ವಿಧಾನ ಕುರಿತು ನಿರ್ಧಾರ.
 • ಕೆರೆಗೆ ಸಂಬಂಧಿಸಿದ ಕೆಲಸಗಳನ್ನು ಆದ್ಯತೆ ಮೇರೆಗೆ ನಿರ್ಧರಿಸುವುದು.
 • ಕೆರೆ ಹೂಳೆತ್ತುವ ವಿಧಾನ (ಗ್ರಾಮವಿಕಾಸದ ಎಲ್ಲ ಹೂಳೆತ್ತುವ ಯೋಜನೆಗಳ ಮಾರ್ಗದರ್ಶಿ ಕೈಪಿಡಿಯಾಗಿರುತ್ತದೆ)
 • ಎತ್ತಿನ ಗಾಡಿ ಮತ್ತು ಟ್ರಾಕ್ಟರುಗಳ ಮೂಲಕ ಹೂಳಿನ ಸಾಗಣೆ.
 • ನಿರ್ದಿಷ್ಟ ಅವಧಿ-ಹಣ ಪಾವತಿ
 • ಹೂಳನ್ನು ಸಾಗಿಸಬೇಕಾದ ಜಮೀನುಗಳನ್ನು ನಿಗದಿ ಮಾಡುವುದು.
 • ಹೂಳು ತೆಗೆಯುವ ಕೆಲಸ ಮತ್ತು ಕೂಲಿ ನಿಗದಿ ಮಾಡುವುದು.
 • ಕೆಲಸದ ತಂಡಗಳ ವ್ಯವಸ್ಥೆ (ಕೊರತೆಯಿದ್ದರೆ ಬೇರೆ ಊರಿಗಳಿಂದ ಕಾರ್ಮಿಕರ ವ್ಯವಸ್ಥೆ)
 • ಕಾಮಗಾರಿ ಮೇಲುಸ್ತುವಾರಿ ವಹಿಸಲು ಕಾರ್ಮಿಕರ ನೇಮಕ.
 • ಹೂಳು ಸಾಗಣೆ ಮೇಲೆ ನಿಗಾ ಇಡಲು ಮತ್ತು ಹಣ ಪಾವತಿಗಾಗಿ ಟೋಕನ್ ನೀಡಿಕೆ ಪದ್ಧತಿ ಜಾರಿ.
 • ಕಾಮಗಾರಿ ವೆಚ್ಚದಲ್ಲಿನ ರೈತರ ಪಾಲನ್ನು ವಸೂಲು ಮಾಡಲು ಜವಾಬ್ದಾರಿ ನಿಗದಿ ಮಾಡುವುದು. (ನೆರೆಯ ಸಮುದಾಯ ಜಾಲದ ಸದಸ್ಯರೆಂದು ಗುರುತಿಸಿದವರಿಗೆ ರೈತ ರಿಂದ ಬಾಕಿ ವಸೂಲಿಮಾಡುವ ಜವಾಬ್ದಾರಿಯನ್ನು ವಹಿಸಲಾಗುವುದು. ಈ ವ್ಯಕ್ತಿಗಳು ಸಮುದಾಯದಲ್ಲಿ ಗೌರವಾನ್ವಿತರಾಗಿರಬೇಕು. ಕನಿಷ್ಠ ಐದು ಕುಟುಂಬಗಳಿಂದ ಬಾಕಿಯನ್ನು ಇವರು ವಸೂಲಿ ಮಾಡಿಕೊಡಬೇಕು. ಹೂಳು ಪಡೆಯುವ ರೈತರ ನಡುವೆ ವಾಸಿಸುವಂತವರು ಅವರಾಗಿರಬೇಕು. ಎಂಬ ಇನ್ನೊಂದು ಮಾನದಂಡ ಇದೆ. ಪ್ರತಿ ನೆರೆ ಸಮುದಾಯ ಜಾಲದ ನಾಯಕನ ಜವಾಬ್ದಾರಿಯನ್ನು ನಿಗದಿಮಾಡಲಾಗುತ್ತದೆ. ಪ್ರತಿಯೊಬ್ಬರಿಗೆ ನಿಗದಿಪಡಿಸಿದ ರೈತರ ವಿವರ ಅವು ಕೊಡಬೇಕಾದ ಹಣ ಮತ್ತಿತರ ವಿವರಗಳು ಅವರಿಗೆ ನೀಡಲಾಗುತ್ತದೆ. ಆ ಸಂಬಂಧ ಒಪ್ಪಂದವೊಂದಕ್ಕೆ ಪ್ರತಿಯೊಬ್ಬರೂ ಸಹಿ ಮಾಡಿರುತ್ತಾರೆ.
 • ಪ್ರತಿ ರೈತ ಮಾಡಬಹುದಾದ ಹಣದ ಬಳಕೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಗುರುತಿಸಲಾಗುತ್ತದೆ. (ಇದನ್ನು ತೀವ್ರತರ ಚರ್ಚೆಯ ನಂತರ ಸಮಿತಿ ನಿರ್ಧರಿಸುತ್ತದೆ) ಈ ಸಮಿತಿ ಪ್ರತಿ ರೈತ ಹೊರಬಹುದಾದ ಪಾಲನ್ನು ಗುರುತಿಸುತ್ತದೆ. ಒಪ್ಪಂದಕ್ಕೆ ಸಹಿ ಮಾಡಿದವರಿಗೆ ಮತ್ತು ಸಮಿತಿ ಸದಸ್ಯರಿಗೆ ಒಪ್ಪಂದದ ಜೆರಾಕ್ಸ್ ಪ್ರತಿಯೊಂದನ್ನು ನೀಡಲಾಗುವುದು. ಕೊಳವೆ ಬಾವಿ ಇರುವ ರೈತರು, ವಾಣಿಜ್ಯ ಬೆಳೆ ತೆಗೆಯುವ ರೈತರನ್ನು ಗುರುತಿಸಿ ಅವರಿಗೆ ಕೊಡಬೇಕಾದ ಹಣವನ್ನು, ಕಂತುಗಳನ್ನು ಈ ಚರ್ಚೆಯಲ್ಲಿ ನಿಗದಿಮಾಡಲಾಗುತ್ತದೆ. ಸಾಲದ ಹಣ ವಸೂಲಿಯ ಮೂಲಗಳನ್ನು ಗುರುತಿಸಲಾಗುತ್ತದೆ.

ಬಹುಪಾಲು ಯೋಜನೆಗಳಲ್ಲಿ ಗ್ರಾಮವಿಕಾಸವೇ ಸಂಪನ್ಮೂಲದ ಮುಖ್ಯಪಾಲನ್ನು ಒದಗಿಸುತ್ತದೆ. ಇತ್ತೀಚಿನ ಅನುಭವದ ಹಿನ್ನೆಲೆಯಲ್ಲಿ ಹೂಳು ತೆಗೆಯುವ ಕೆಲಸಕ್ಕೆ ಕ್ಯೂಬಿಕ್ ಮೀಟರ್ ಪದ್ಧತಿ ಅಳವಡಿಸಲಾಗಿದೆ. ಒಂದು ಕ್ಯೂಬಿಕ್ ಮೀಟರ್ ಹೂಳು ತೆಗೆಯಲು ಇಂತಿಷ್ಟು ಹಣ ಎಂದು ನಿಗದಿಮಾಡಿದ ಮೇಲೆ ಹಳೆಯ ಸಮಸ್ಯೆಗಳ ನಿವಾರಣೆಯಾಗಿವೆ.

ಕೆರೆಯಿಂದ ದೂರವಿರುವ ಜಮೀನಿಗೆ ಮೊದಲು ಹೂಳು ಸಾಗಿಸುವ ಒಂದು ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಈ ಮೊದಲು ಟ್ರಾಕ್ಟರುಗಳಲ್ಲಿ ಹತ್ತಿರದ ಜಮೀನುಗಳಿಗೆ ಹೂಳು ಸಾಗಿಸಲಾಗುತ್ತಿತ್ತು. ಡೀಸೆಲ್ ವೆಚ್ಚ ಉಳಿತಾಯವಾಗುವುದರಿಂದ ಹೀಗೆ ಮಾಡಲಾಗುತ್ತಿತ್ತು. ಗ್ರಾಮವಿಕಾಸದ ಸಲಹೆ ಮೇರೆಗೆ ಕಾಮಗಾರಿ ನಿರ್ವಹಣಾ ಸಮಿತಿಗಳು ಈಗ ಹೊಸ ನಿಯಮ ಅಳವಡಿಸಿವೆ. ಕೆರೆಯಿಂದ ದೂರವಿರುವ ಜಮೀನುಗಳಿಗೆ ಮೊದಲು ಹೂಳು ಸಾಗಿಸುವುದು ಕಡ್ಡಾಯ ಮಾಡಲಾಗಿದೆ. ಕೆರೆಯಿಂದ ದೂರವಿರುವ ಬಹುಪಾಲು ಜಮೀನುಗಳು ಬಡ ರೈತರಿಗೆ ಸೇರಿದವು. ಜೊತೆಗೆ ಭೂಮಿ ಕೂಡ ಫಲವತ್ತಾಗಿ ಇರುವುದಿಲ್ಲ. ಆದ್ದರಿಂದ ಈ ಜಮೀನುಗಳಿಗೆ ಮೊದಲು ಹೂಳು ಸಾಗಿಸಲು ಸೂಚಿಸಲಾಗಿದೆ. ಪ್ರತಿ ರೈತರ ಜಮೀನಿಗೆ ಒಂದು ಟ್ರಾಕ್ಟರನ್ನು ನಿಗದಿಪಡಿಸಲಾಗಿದೆ. ಹೆಚ್ಚು ಜಮೀನಿರುವವರು ಹೆಚ್ಚು ಟ್ರಾಕ್ಟರುಗಳನ್ನು ಬಾಡಿಗೆಗೆ ಪಡೆದು ಹೆಚ್ಚು ಹೂಳು ಸಾಗಿಸುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೊಸ ಪದ್ಧತಿಯಿಂದ ಹೂಳು ಎಲ್ಲ ರೈತರಿಗೂ ಸಮಾನವಾಗಿ ಹಂಚಿಕೆಗೆ ಲಭ್ಯವಾದಂತಾಗಿದೆ.

ವೆಚ್ಚದ ಪಾಲುಪ್ರಯೋಗ

೧೯೯೭ರಲ್ಲಿ ಕೆರೆ ಹೂಳೆತ್ತಲು ತಲಗುವ ವೆಚ್ಚವನ್ನು ಜನರ ಜೊತೆ ಹಂಚಿಕೊಳ್ಳುವ ವಿಚಾರದಲ್ಲಿ ಗ್ರಾಮವಿಕಾಸ ಪ್ರಯೋಗ ನಡೆಸಿದೆ. ಬೇವನಾಥ ಗ್ರಾಮದ ಸ್ವ-ಸಹಾಯ ಗುಂಪಿನ ಜೊತೆ ವಿವರವಾದ ಸಮಾಲೋಚನೆ ನಡೆಸಿದೆ. ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆಯಲು ಗ್ರಾಮವಿಕಾಸ ಪ್ರೋತ್ಸಾಹ ನೀಡಿದೆ. ಈ ಯೋಜನೆಗೆ ಸ್ಥಳೀಯವಾಗಿ ಸಂಪನ್ಮೂಲ ಕ್ರೋಢಿಕರಿಸುವ ಮತ್ತು ಬೆಂಬಲ ಒದಗಿಸುವ ದೃಷ್ಟಿಯಿಂದ ಈ ರೀತಿ ಮಾಡಲಾಗಿದೆ. ಆ ವೇಳೆಗೆ ಗ್ರಾಮವಿಕಾಸ ಮೂರು ಕೆರೆಗಳ ಹೂಳೆತ್ತುವ ಅನುಭವ ಪಡೆದಿತ್ತು. ನೆರೆವು ಸಂಸ್ಥೆಯಿಂದ ಬಂದಿದ್ದ ಹಣದ ಆಧಾರದ ಮೇಲೆ ಮಹಿಳಾ ಸ್ವ-ಸಹಾಯ ಗುಂಪಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಗ್ರಾಮವಿಕಾಸ ಸಂಸ್ಥೆ ಸಹಾಯ ನೀಡಿತು. ೧೯೯೮ರಲ್ಲಿ ಇನ್ನೂ ಎರಡು ಸ್ವ-ಸಹಾಯ ಗುಂಪುಗಳು ಬ್ಯಾಂಕಿನಲ್ಲಿ ಸಾಲ ಪಡೆಯಲು ಜಿ.ವಿ.ನೆರವಾಯಿತು. ೧೯೯೯ರಲ್ಲಿ ಕೆರೆಯ ಹೂಳೆತ್ತಲು ನೇರಳಹಳ್ಳಿ ಮತ್ತು ಗದ್ದೂರು ಸ್ವ-ಸಹಾಯ ಗುಂಪುಗಳಿಗೆ ನೆರವಿನ ಹಣ ನೀಡಿತು.

ಹಂತ:-ಎರಡು ಕೆರೆಗಳ ಹೂಳೆತ್ತುವ ಸಂಪೂರ್ಣ ವೆಚ್ಚವನ್ನು ಗ್ರಾಮವಿಕಾಸವೇ ಭರಿಸಿತು.

ಹಂತ:-ಕೆರೆಯೊಂದರ ಹೂಳೆತ್ತಲು ತಗುಲಿದ ವೆಚ್ಚದಲ್ಲಿ ಶೇಕಡ ೬೦ರಷ್ಟನ್ನು ಗ್ರಾಮವಿಕಾಸ ಭರಿಸಿತು. ಶ್ರಮದ ರೂಪದಲ್ಲಿ ಉಳಿದ ಶೇಕಡ ೪೦ರಷ್ಟು ವೆಚ್ಚವನ್ನು ಜನರು ಭರಿಸಿದರು.

ಹಂತ:-ಮಹಿಳಾ ಸ್ವ-ಸಹಾಯ ಗುಂಪುಗಳು ಬ್ಯಾಂಕ್ ಸಾಲದ ಮೂಲಕ ಶೇಕಡ ೭೫ರಷ್ಟನ್ನು ಭರಿಸಿದವು. ನಬಾರ್ಡ್‌ ಯೋಜನೆಯನ್ವಯ ಬ್ಯಾಂಕುಗಳಿಂದ ಈ ಸಾಲ ದೊರಕಿತು.

ಹಂತ:-ಗ್ರಾಮವಿಕಾಸದಿಂದ ಶೇಕಡ ೧೦೦ರಷ್ಟುಹಣ ಸಾಲ ಪಡೆದು ಜನರೇ ಕೆರೆಯ ಹೂಳೆತ್ತುವ ಯೋಜನೆ ನಿರ್ವಹಿಸಿದರು.

ಹಂತ ೧

ಹೊನ್ನಶೆಟ್ಟಿಹಳ್ಳಿಕೆರೆಯಲ್ಲಿನ ೨೫೦೦೦ ಕ್ಯೂಬಿಕ್ ಮೀಟರಿನಷ್ಟು ಹೂಳನ್ನು ತೆಗೆಸಲಾಯಿತು. ಸುಮಾರು ೩೦೦ ಪುರುಷರು/ಮಹಿಳೆಯರು ಪ್ರತಿದಿನ ಮೂರು ತಿಂಗಳ ಕಾಲ ದುಡಿದರು. ತೆಗೆದ ಹೂಳನ್ನು ಜಮೀನುಗಳಿಗೆ ಸಾಗಿಸಲಾಯಿತು. ಹೂಳಿನ ಸ್ವಲ್ಪ ಭಾಗವನ್ನು ಕಟ್ಟೆಯನ್ನು ಬಲಪಡಿಸಲು ಹಾಗೂ ಎತ್ತರಿಸಲು ಬಳಸಲಾಯಿತು. ಹೂಳನ್ನು ಸಾಗಿಸಲು ಅಧಿಕ ಸಂಖ್ಯೆಯಲ್ಲಿ ಎತ್ತಿನ ಗಾಡಿಗಳನ್ನು ಬಳಸಲಾಯಿತು. ಹನ್ನೊಂದು ಮಂದಿ ರೈತರು ಗ್ರಾಮವಿಕಾಸದಿಂದ ಸಾಲ ಪಡೆದು ಎತ್ತಿನಗಾಡಿಗಳನ್ನು ಕೊಂಡರು. ಹೂಳು ತೆಗೆಯುವ ಕೆಲಸ ಮುಗಿಯುವುದರೊಳಗಾಗಿ ಸಾಲವನ್ನು ಅವರು ಮರುಪಾವತಿ ಮಾಡಿದರು. ಈ ಗಾಡಿಗಳು ಆ ರೈತ ಕುಟುಂಬಕ್ಕೆ ಆಸ್ತಿಯಾದವು. ಹೂಳು ತೆಗೆಯಲು ಜನರಿಗೆ ನೀಡಿದ ಹಣ, ಸಾಗಿಸಲು ಹಣ ಎಲ್ಲವೂ ಹಳ್ಳಿಯಲ್ಲೇ ಉಳಿದವು. ಈ ಕಾಮಗಾರಿಯನ್ನು ನೋಡಿಕೊಳ್ಳಲು ಜನರ ಸಮಿತಿಯನ್ನು ನೇಮಿಸಲಾಗಿತ್ತು.

ಎರಡನೆಯ ಹಂತ

ದೊಡ್ಡಗುಟ್ಟಹಳ್ಳಿಯಲ್ಲಿ ನಡೆದ ಇಂಥದೇ ಚಟುವಟಿಕೆ ಮೊದಲ ಹಂತದಲ್ಲಿ ಅನುಸರಿಸಿದ ಮಾರ್ಗವನ್ನೇ ಅನುಸರಿಲಾಗಿತ್ತು. ಈ ಹಂತದಲ್ಲಿ ಜನರು ಶ್ರಮದ ಮೂಲಕ ಶೇಕಡ ೪೦ರಷ್ಟು ವೆಚ್ಚವನ್ನು ಭರಿಸಿದರು. ಎರಡನೆಯ ಹಂತದಲ್ಲೂ ಎತ್ತಿನ ಗಾಡಿಗಳಿಂದಲೇ ಕೆರೆ ಹೂಳನ್ನು ಸಾಗಿಸಲಾಯಿತು. ಸುಮಾರು ೯೦೦೦ ಟ್ರಾಕ್ಟರ್ ಲೋಡುಗಳಷ್ಟು ಹೂಳನ್ನು ೬೦೦ ಎಕರೆ ಜಮೀನಿಗೆ ಸಾಗಿಸಲಾಯಿತು.

ಮೂರನೆಯ ಹಂತ

ಈ ಹಂತದಲ್ಲಿ ಸ್ವ-ಸಹಾಯ ಗುಂಪುಗಳು ಬ್ಯಾಂಕುಗಳಿಂದ ಸಾಲ ಪಡೆದ ಕೆರೆ ಹೂಳು ತೆಗೆಸುವ ಕಾರ್ಯ ಮಾಡಿದವು. ಅವು ಬ್ಯಾಂಕುಗಳನ್ನು ಸಂಪರ್ಕಿಸಿದಾಗ ಯಾವುದೇ ಸಮಸ್ಯೆಯಿಲ್ಲದೆ ಸಾಲ ಕೊಡಲು ಮುಂದೆ ಬಂದವು. ಹೂಳೆತ್ತುವ ಕಾರ್ಯ ಆರಂಭವಾಗುವ ಮೊದಲೇ ಎರಡು ವರ್ಷಗಳಲ್ಲಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಬೇಕೆಂದು ಗ್ರಾಮವಿಕಾಸ ಮತ್ತು ಸ್ವ-ಸಹಾಯ ಗುಂಪುಗಳು ಒಪ್ಪಿದವು. ಗ್ರಾಮವಿಕಾಸ ವಾರ್ಷಿಕ ಶೇಕಡ ೧೨ಬಡ್ಡಿಯನ್ನು ಕೊಡುವುದಾಗಿ ಒಪ್ಪಿತ್ತು. ಮೂರು ಕೆರೆಗಳ ಹೂಳೆತ್ತುವ ಕಾರ್ಯಕ್ರಮಕ್ಕೆ ಈ ಒಪ್ಪಂದ ಅನ್ವಯವಾಯಿತು.

ಚಟುವಟಿಕೆಯ ಮಾರ್ಗ

ಕೆರೆ ಹೂಳೆತ್ತಲು ಮತ್ತು ಜಮೀನುಗಳಿಗೆ ಹೂಳು ಸಾಗಿಸಲು ಬ್ಯಾಂಕಿನಿಂದ ಪಡೆದ ಸಾಲವನ್ನು ಸ್ವ-ಸಹಾಯ ಗುಂಪುಗಳು ಉತ್ತಮವಾಗಿ ನಿರ್ವಹಿಸಿದವು. ರೈತರು ಹೂಳನ್ನು ಕೊಂಡು ತಮ್ಮ ಜಮೀನುಗಳಿಗೆ ಬಳಸಿದರು. ಉದಾಹರಣೆಗೆ:

 •  ಬೇವನಾಥ (೧೯೯೭)ದಲ್ಲಿ ಒಣಭೂಮಿ ಇರುವವರು ಟ್ರಾಕ್ಟರ್ ಹೂಳು ಮಣ್ಣಿಗೆ ರೂ. ೨೫/- ಕೊಡಬೇಕು, ಖುಷ್ಕಿ ಭೂಮಿ ಇರುವವರು ಗುಂಟೆಯೊಂದಕ್ಕೆ (೨.೫ ಸೇಂಟ್) ರೂ.೨೦೦/- ಕೊಡಲು ತಮ್ಮ ತಮ್ಮಲ್ಲೇ ರೈತರು ಒಪ್ಪಿದರು. ಸಾಲದ ಪ್ರಮಾಣ ಇದರ ಆಧಾರದ ಮೇಲೆಯೇ ನಿರ್ಧಾರವಾಯಿತು.
 • ಸೀಗೆ ಹೊಸಹಳ್ಳಿ ಮತ್ತು ನಾಗಮಂಗಲದಲ್ಲಿ ಹೂಳು ತೆಗೆಯಲು ತಗಲುವ ವೆಚ್ಚ ಹಾಗೂ ಸಾಗಿಸಲು ತಗಲುವ ವೆಚ್ಚದ ಆಧಾರದ ಮೇಲೆ ಸಾಲದ ಪ್ರಮಾಣ ನಿರ್ಧಾರ ಮಾಡಲಾಯಿತು. ಒಂದು ಎಕರೆ ಭೂಮಿಗೆ ೧೮ಟ್ರಾಕ್ಟರ್ ಲೋಡ್ ಹೂಳು ಹೊಡೆಸಲು ತಗುಲಿದ ವೆಚ್ಚ ೧೨೦೦/-ರೂ. ದಿನವೊಂದಕ್ಕೆ ೪೦ರೂ ಗಳಂತೆ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು.

ಹಣ ವಾಪಸಾತಿ

ಪ್ರತಿವಾರ ಕಾರ್ಮಿಕರು ಕೂಲಿ ಪಡೆಯುವ ಸಂದರ್ಭದಲ್ಲಿ ೪೦ರಿಂದ ೫೦ ರೂ ಸಾಲವನ್ನು ಹಿಂತಿರುಗಿಸುವಂತೆ ಪ್ರೋತ್ಸಾಹಿಸಲಾಯಿತು. ಕೆರೆ ಅಭಿವೃದ್ಧಿ ಸಮಿತಿ ಮತ್ತು ಗ್ರಾಮವಿಕಾಸದ ಸಿಬ್ಬಂದಿ ಸಾಲ ವಸೂಲಿಯ ಜವಾಬ್ದಾರಿ ಹೊತ್ತದ್ದರು. ಕೆರೆ ಕೆಲಸ ಮುಗಿದ ಮೇಲೂ ಸದಸ್ಯರು ಪ್ರತಿನಿತ್ಯ ೧೦ ರಿಂದ ೨೦ ರೂ ಸಾಲ ಹಿಂತಿರುಗಿಸುತ್ತಿದ್ದರು. ಸಾಲ ಪಡೆದ ಎಲ್ಲರಿಗೆ ಪಾಸ್ ಬುಕ್ ನೀಡಲಾಗಿತ್ತು. ಸಾಲ ಮರುಪಾವತಿಯನ್ನು ಆ ಪಾಸ್ ಬುಕ್‌ನಲ್ಲಿ ಪ್ರತಿದಿನ ನಮೂದಿಸಲಾಗುತ್ತಿತ್ತು. ಸಾಲದ ಪ್ರಮಾಣ ಮತ್ತು ಮರು ಪಾವತಿಯನ್ನು ಸ್ವ-ಸಹಾಯ ಗುಂಪುಗಳ ಸದಸ್ಯರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿತ್ತು.

ನಾಲ್ಕನೆಯ ಹಂತ

ಈ ಹಂತದಲ್ಲಿಯೂ ನೇರ್ನಹಳ್ಳಿ-ಗದ್ದೂರು ಮಾದರಿಯನ್ನೇ ಅನುಸರಿಸಲಾಯಿತು. ಬ್ಯಾಂಕ್ ಸಾಲದ ಬದಲಾಗಿ ಗ್ರಾಮವಿಕಾಸವೇ ಸ್ವ-ಸಹಾಯ ಗುಂಪುಗಳಿಗೆ ಬಡ್ಡಿರಹಿತ ಎರಡು ವರ್ಷಗಳ ಅವಧಿಯ ಸಾಲವನ್ನು ನೀಡಿತು. ಮೂರು ತಿಂಗಳ ಚಟುವಟಿಕೆಯ ಅವಧಿಯಲ್ಲಿ ೬೩೧೩ ಟ್ರ್ಯಾಕ್ಟರ್ ಲೋಡು ಹೂಳನ್ನು ತೆಗೆದು ಜಮೀನುಗಳಿಗೆ ಸಾಗಿಸಲಾಯಿತು. ತಲಾ ೧೪ ಸಾವಿರ ರೂ. ಗಳ ಸಾಲ ನೀಡಲಾಯಿತು. ತಮ್ಮ ಗಾಡಿಗಳಿಂದ ಬಂದ ಹಣದಲ್ಲಿ ಅವರು ಸಾಲವನ್ನು ಮರುಪಾವತಿಸಬೇಕೆಂದು ತೀರ್ಮಾನಿಸಲಾಗಿತ್ತು.

ವೆಚ್ಚದ ಪಾಲುದಾರಿಕೆ ಪ್ರಯೋಗಅನುಭವ ಮತ್ತು ತೀರ್ಮಾನಗಳು

ಕೆರೆ ಹೂಳೆತ್ತುವ ಕಾರ್ಯಕ್ರಮದಲ್ಲಿ ವೆಚ್ಚದ ಹಂಚಿಕೆಯನ್ನು ಪ್ರಯೋಗಿಕವಾಗಿ ಗ್ರಾಮವಿಕಾಸ ಜಾರಿಗೆ ತರಲು ಯತ್ನಿಸಿತು. ಹೂಳು ತೆಗೆಯುವುದರಿಂದ ಆಗುವ ಅನುಕೂಲದ ಹಿನ್ನೆಲೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮದಲ್ಲಿ ವೆಚ್ಚವನ್ನು ಹಂಚಿಕೊಳ್ಳುವಂಥ ಸ್ಥಿತಿಯಲ್ಲಿ ರೈತರು ಇನ್ನು ಇಲ್ಲದಿರುವುದು ಗ್ರಾಮವಿಕಾಸದ ಗಮನಕ್ಕೆ ಬಂದಿದೆ.

 • ಎರಡು ವರ್ಷಗಳ ಅವಧಿಯಲ್ಲಿ ಸಾಲ ಮರುಪಾವತಿ ಜನರಿಗೆ ಕಷ್ಟ. ದೊಡ್ಡ ಪ್ರಮಾಣದ ಸಾಲವನ್ನು ಕಡಿಮೆ ಅವಧಿಯಲ್ಲಿ ತೀರಿಸಬೇಕೆಂದು ಮಾಡಿದ ಯೋಚನೆ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿಲ್ಲ. ರೈತರಿಗೆ ಅಂಥ ಸಾಮರ್ಥ್ಯ ಇಲ್ಲ.
 • ಕೆರೆ ಹೂಳೆತ್ತಿದ ವರ್ಷದಲ್ಲಿ ಮುಂಗಾರು ಮಳೆ ಬೀಳದೆ ಬೆಳೆ ಆಗಲಿಲ್ಲ. ಹೀಗಗಿ ನಿಗದಿತ ಅವಧಿಯೊಳಗೆ ಸ್ವ-ಸಹಾಯ ಗುಂಪುಗಳು ಸಾಲ ಮರುಪಾವತಿ ಮಾಡಲಾಗಲಿಲ್ಲ.
 • ಪ್ರತಿ ಕುಟುಂಬ ಸರಾಸರಿ ೧೦ ಸಾವಿರ ರೂ.ಗಳಷ್ಟು ಭಾರ ಹೊತ್ತಿತ್ತು. ಇಷ್ಟು ಹಣ ತೀರಿಸುವ ದಾರಿ ಅವರಿಗಿರಲಿಲ್ಲ. ಅಷ್ಟೇ ಅಲ್ಲ ಸಾಮರ್ಥ್ಯವೂ ಇರಲಿಲ್ಲ.
 • ಕೆರೆ ಹೂಳೆತ್ತಿದ ವರ್ಷದಲ್ಲಿ ಮುಂಗಾರು ವಿಫಲವಾಗಿ ಬೆಳೆ ನಷ್ಟವಾಯಿತು. ಕೆರೆ ಹೂಳೆತ್ತುವ ಸಂದರ್ಭದಲ್ಲಿ ಮಾಡಿದ ಸಾಲ ಜೊತೆಗೆ ಮುಂಗಾರು ಕೈಕೊಟ್ಟು ಬೆಳೆ ನಷ್ಟದಿಂದಾದ ಬಿಕ್ಕಟ್ಟು ಒಂದಕ್ಕೊಂದು ಸೇರಿಕೊಂಡು ರೈತರು ತೀವ್ರ ಆರ್ಥಿಕ ಒತ್ತಡಕ್ಕೆ ಮತ್ತು ಸಂಕಷ್ಟಕ್ಕೆ ಈಡಾದರು.
 • ಕೆರೆ ಹೂಳೆತ್ತುವಂಥ ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕವಾಗಿ ಲಾಭದಾಯಕ ಕಾರ್ಯಕ್ಕೆ ನೀಡಲಾಗುವ ಹಣಕ್ಕೆ ನಿಗದಿಪಡಿಸಲಾಗಿರುವ ಶೇಕಡ ೧೨ರ ಬ್ಯಾಂಕ್ ಬಡ್ಡಿದರ ಅತಿ ಹೆಚ್ಚು ಮೂಲಧನ ಮತ್ತು ಬಡ್ಡಿ ಸೇರಿ ಕಟ್ಟಬೇಕಾದ ಹಣ ಸಾಮಾನ್ಯ ಜನರ ಸಾಮರ್ಥ್ಯವನ್ನು ಮೀರಿದ್ದು.
 • ಬಡ ರೈತರು ಹೊತ್ತು ಹೊತ್ತಿಗೆ ಜೀವನ ಸಾಗಿಸುವಂಥ ಸ್ಥಿತಿಯಲ್ಲಿದ್ದಾರೆ. ತಾವು ಹೂಡಿದ ಬಂಡವಾಳ ತಕ್ಷಣ ಫಲತಂದು ಕೊಡದಿದ್ದರೆ ಅಂಥ ಸಂದರ್ಭದಲ್ಲಿ ಅವರಲ್ಲಿ ಉಂಟಾಗುವ ನಿರಾಸೆ ಕೆರೆಗಳ ಹೂಳೆತ್ತುವಂಥ ಕಾರ್ಯಕ್ರಮಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
 • ಯಾವುದೇ ಯೋಜನೆಯ ವೆಚ್ಚದ ಪಾಲುದಾರಿಕೆ ಪ್ರಯೋಗ ನಡೆಸುವ ಕನಿಷ್ಠ ಒಂದು ವರ್ಷ ಮೊದಲು ರೈತರನ್ನು ಮಾನಸಿಕವಾಗಿ ಸಿದ್ಧಪಡಿಸುವ ಅಗತ್ಯವಿತ್ತು.

ತೀರ್ಮಾನಗಳು

ಕೆರೆಗಳ ಹೂಳೆತ್ತುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಿಗಷ್ಟೇ ಅನುಕೂಲವಾಗುವುದಿಲ್ಲ ಒಟ್ಟಾರೆ ಅವರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಕೆರೆಗಳು ಹವಾಮಾನದ ಮೇಲೆ ಪರಿಣಾಮ ಬೀರುತ್ತವೆ. ಆ ಪ್ರದೇಶದಲ್ಲಿ ಫಲಪುಷ್ಪಗಳು ಬೆಳೆದು ಅನುಕೂಲ ಮಾಡುವವು. ವಲಸೆ ಹಕ್ಕಿ ಪಕ್ಷಿಗಳು ನೆಲೆಯೂರಲು ಕೆರೆಗಳು ಅನುಕೂಲ ಕಲ್ಪಿಸುವವು. ಕೆರೆಗಳು ನಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ವರೂಪದ ಅಂಗಗಳು. ಕೊಳವೆ ಬಾವಿಗಳನ್ನು ತೋಡಿಸಲು ಶಕ್ತಿಯಿಲ್ಲದ ನಮ್ಮ ಬಡ ರೈತರಿಗೆ ಕೆರೆಗಳೇ ಆಧಾರ. ಕೆರೆಗಳ ಮೇಲಿನ ಅವರ ಅವಲಂಬನೆ ಪರೋಕ್ಷವಾಗಿ ಜಲಸಂಪನ್ಮೂಲದ ಸಂರಕ್ಷಣೆ. ಆದ್ದರಿಂದಲೇ ಪರಿಸರ ರಕ್ಷಣೆಯ ಚಟುವಟಿಕೆಯಾಗಿ ಕೆರೆಗಳ ಹೂಳೆತ್ತುವುದನ್ನು ಪ್ರೋತ್ಸಾಹಿಸಬೇಕು. ಸರ್ಕಾರವೇ ಅದರ ಪೂರ್ಣವೆಚ್ಚವನ್ನು ಭರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಸಾಂಪ್ರದಾಯಿಕ ಇಂಧನ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ ರೀತಿಯಲ್ಲಿ ಬಡ್ಡಿರಹಿತ ಸಾಲ ಮತ್ತು ಭಾರಿ ಪ್ರಮಾಣದ ಸಬ್ಸಿಡಿ ನೀಡಿ ಸರ್ಕಾರ ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಉತ್ತೇಜನ ನೀಡಬೇಕು. ಕೆರೆಗಳ ಬಳಕೆದಾರರ ಸಾಮಾಜಿಕ -ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವುದರಿಂದ ಮತ್ತು ಅವರಿಗೆ ಆರ್ಥಿಕ ಮತ್ತು ರಾಜಕೀಯ ಶಕ್ತಿ ಇಲ್ಲದಿರುವುದರಿಂದ ಸರ್ಕಾರ ಕೆರೆಗಳನ್ನು ನಿರ್ಲಕ್ಷಿಸುತ್ತಿದೆ ಎನ್ನಿಸುತ್ತದೆ.

ಈ ಹಿನ್ನೆಲೆಯಲ್ಲಿ ಕೆರೆಗಳ ಹೂಳೆತ್ತುವುದರಿಂದ ಲಾಭ ಪಡೆಯುವ ರೈತರು ಅಂಥ ಚಟುವಟಿಕೆಯ ವೆಚ್ಚವನ್ನು ಬಹುಪಾಲು ಭರಿಸಬೇಕೆಂದು ಅಪೇಕ್ಷಿಸುವುದು ಸರಿಯಾದುದಲ್ಲ. ಅಷ್ಟೇ ಅಲ್ಲ ಅವಾಸ್ತವಿಕ ಕೂಡ. ೧೩ ಕೆರೆಗಳ ಹೂಳೆತ್ತಿನ ಅನುಭವವನ್ನು ಗ್ರಾಮವಿಕಾಸ ಪಡೆದಿದೆ. ವಿವಿಧ ರೀತಿಯಲ್ಲಿ ಹಣಕಾಸು ತೊಡಗಿಸಿದ ಪ್ರಯೋಗಗಳನ್ನು ಈ ದಿಸೆಯಲ್ಲಿ ಮಾಡಲಾಗಿದೆ. ಈ ಕೆರೆ ಹೂಳೆತ್ತುವ ಚಟುವಟಿಕೆಯಿಂದ ಅನುಕೂಲ ಪಡೆಯುವ ರೈತರಿಂದ ಹೆಚ್ಚು ನಿರೀಕ್ಷಿಸಲಾಗುವುದಿಲ್ಲ. ಒಟ್ಟು ವೆಚ್ಚದ ಶೇಕಡ ೧೦ರಷ್ಟಕ್ಕಿಂತ ಹೆಚ್ಚು ಹಣವನ್ನು ಅವರು ಭರಿಸಲಾರರು.

ಗ್ರಾಮವಿಕಾಸ ಕೆರೆ ಹೂಳೆತ್ತುವ ಯೋಜನೆಗಳನ್ನು ಆರಂಭಿಸಿತು. ಅವು ಕೆರೆ ಆಧುನೀಕರಣ ಯೋಜನೆಗಳಲ್ಲ. ಕೆರೆ ತನಗೆ ತಾನೇ ಸಂಪೂರ್ಣ ಇಲ್ಲ. ಅದೊಂದು ವ್ಯವಸ್ಥೆ. ಕೆರೆಗೆ ಜಲಾನಯನ ಪ್ರದೇಶ ಇರುತ್ತದೆ. ನೀರು ಪೂರೈಕೆ ವ್ಯವಸ್ಥೆ, ಕಾಲುವೆ, ಕಟ್ಟೆ, ನಿರುಪಯುಕ್ತ ಒಡ್ಡುಗಳು ಮತ್ತು ನೀರಾವರಿ ಪ್ರದೇಶಗಳು ಕೆರೆಗಳ ಭಾಗಗಳು. ಕೆರೆಗಳು ಸಂಪೂರ್ಣವಾಗಿ ಉಪಯೋಗಕ್ಕೆ ಬರಬೇಕಾದರೆ ಇಡೀ ವ್ಯವಸ್ಥೆಯನ್ನು ಆಧುನೀಕರಿಸಬೇಕು. ೨೦ ರಿಂದ ೨೫ಹೆಕ್ಟೇರ್ ಗಳಷ್ಟು ಅಚ್ಚುಕಟ್ಟು ಪ್ರದೇಶವುಳ್ಳ ಮಧ್ಯಮ ಪ್ರಮಾಣದ ಒಂದು ಕೆರೆಯನ್ನು ಕನಿಷ್ಠ ನಿರ್ವಹಣೆಯ ಮೂಲಕ ಅರ್ಧಶತಮಾನದಷ್ಟು ಕಾಲ ಉಳಿಯಬೇಕಾದರೆ ಅದರ ಆಧುನೀಕರಣಕ್ಕೆ ಸರಾಸರಿ ಸುಮಾರು ೨೫ಲಕ್ಷ ರೂ. ವೆಚ್ಚವಾಗಬಹುದು.

ಗ್ರಾಮವಿಕಾಸ ಕೈಗೆತ್ತಿಕೊಂಡ ಕೆರೆ ಹೂಳೆತ್ತುವ ಯೋಜನೆಗಳಲ್ಲಿ ಸಾಲ ಮರುಪಾವತಿಗೆ ನೀಡಲಾದ/ವಸೂಲಾತಿಗೆ ನೀಡಲಾದ ಎರಡು ವರ್ಷದ ಅವಧಿ ತೀರ ಕಡಿಮೆ. ಕನಿಷ್ಠ ೫ ವರ್ಷಗಳಾದರೂ ನೀಡುವುದು ಹೆಚ್ಚು ವಾಸ್ತವ. ಹೂಳೆತ್ತಿದ ಕೆರೆಗಳಿಂದ ರೈತರಿಗೆ ಲಾಭ ಬರಬೇಕಾದರೆ ಉತ್ತಮ ಮಳೆಯಾಗಬೇಕು. ಕೆರೆಗಳು ತುಂಬಬೇಕು. ಮಳೆ ಬರುವಲ್ಲಿ ವಿಳಂಬವಾದರೆ ಅಂಥ ಯೋಜನೆಯ ಲಾಭಗಳು ರೈತರಿಗೆ ಸಿಗುವಲ್ಲಿಯೂ ವಿಳಂಬವಾಗುತ್ತವೆ. ಜೊತೆಗೆ ಯೋಜನೆಯ ವೆಚ್ಚವನ್ನು ಭರಿಸಬೇಕಾದರೆ ಅದು ಅವರಿಗೆ ಹೆಚ್ಚುವರಿ ಹೊರೆಯಾಗುತ್ತದೆ.

ಆರ್ಥಿಕ ಸಾಧ್ಯತೆಗಳು

ರಾಜ್ಯದಲ್ಲಿ ಕೆರೆಗಳ ಹೂಳೆತ್ತುವ ಅಥವಾ ಮರುಸಂವರ್ಧನೆ ಕುರಿತಂತೆ ದೊಡ್ಡ ಪ್ರಶ್ನೆಯೇ ಎದ್ದಿದೆ. ಅದು ಅಷ್ಟು ಲಾಭದಾಯಕವಲ್ಲವೆಂದು ಹೇಳಲಾಗುತ್ತಿದೆ. ಈ ವಾದವನ್ನು ಹೀಗೆ ಅರ್ಥೈಸಬಹುದು.

 • ಬಹಳ ಕೆರೆಗಳು ಹೂಳಿನಿಂದ ತುಂಬಿದ್ದು, ಹೂಳು ತೆಗೆಯುವ ಸ್ಥಿತಿಯಲ್ಲಿ ಇಲ್ಲ.
 • ಹೂಳು ತೆಗೆಯುವ ಕಾರ್ಯಕ್ರಮದ ಹಣಕಾಸು ವೆಚ್ಚವನ್ನು ಭರಿಸುವಷ್ಟು ಸಾಮರ್ಥ್ಯ ಸರ್ಕಾರಕ್ಕೆ ಇಲ್ಲ.
 • ಕೆರೆಗಳ ಹೂಳೆತ್ತುವುದರಿಂದ ಬರಬಹುದಾದ ಲಾಭ ಮಾಡಿದ ಖರ್ಚನ್ನು ಸಮರ್ಥಿಸುವುದಿಲ್ಲ.

ಈ ವಾದಗಳ ಹುರುಳಿಲ್ಲ. ರಾಜ್ಯದ ಬಹು ಜನರಿಗೆ ಅನುಕೂಲವಾಗಿರುವ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಹಾಕಿಕೊಳ್ಳದೆ ಸರ್ಕಾರ ಕಾವೇರಿ, ಕೃಷ್ಣ ಹಾಗೂ ತುಂಬಭದ್ರಾದಂಥ ಮೂರು ಮುಖ್ಯ ನೀರಾವರಿ ಯೋಜನೆಗಳ ಬಗ್ಗೆ ತನ್ನ ಎಲ್ಲಗಮನವನ್ನು ಕೇಂದ್ರೀಕರಿಸಿದೆ. ಇದರಿಂದಾಗಿ ಕೆರೆಗಳನ್ನು ಅವಲಂಬಿಸಿರುವ ಒಣ ಭೂಮಿ ಕೃಷಿವಲಯ ಲಾಭದಾಯಕವಾಗಿ ಕಂಡಿಲ್ಲ. ಇದರಿಂದಾಗಿ ಲಕ್ಷಾಂತರ ಬಡಜನರ ಆಹಾರ ಭದ್ರತೆ ಇಕ್ಕಟ್ಟಿಗೆ ಒಳಗಾಗಿದೆ.

ಒಂದು ಉತ್ತಮ ಹಾಗೂ ಸ್ವಾಗತಾರ್ಹ ಬೆಳವಣಿಗೆಯಲ್ಲಿ ಪ್ರಸಕ್ತ ಕರ್ನಾಟಕ ಸರ್ಕಾರ ಕೆರೆ ಹೂಳೆತ್ತುವ ಕಾರ್ಯಕ್ರಮವನ್ನು ತನ್ನ ಆದ್ಯತಾ ಪಟ್ಟಿಯಲ್ಲಿ ಸೇರಿಸಿದೆ. ಆದರೂ ಕೆರೆಗಳ ಮರುಸಂವರ್ಧನೆಯಿಂದಾಗುವ ಆರ್ಥಿಕ ಲಾಭದ ಬಗ್ಗೆ ಸರ್ಕಾರ ಸರಿಯಾಗಿ ಅರಿತುಕೊಂಡಂತೆ ಕಾಣುತ್ತಿಲ್ಲ. ಅದರ ದೃಷ್ಟಿಯಲ್ಲೇ ದೋಷವಿದ್ದಂತೆ ಕಾಣುತ್ತಿದೆ. ಕೆರೆಗಳ ವ್ಯವಸ್ಥೆಯನ್ನು ಸುಧಾರಿಸುವುದರಿಂದ ಕೃಷಿ ಉತ್ಪಾದನೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಪರಿಸರ ಒಣಭೂಮಿ ಪ್ರದೇಶಗಳಲ್ಲಿನ ಜೀವನ ಸುಧಾರಿಸುತ್ತದೆ ಎನ್ನುವುದನ್ನು ಸರ್ಕಾರ ಗಮನಿಸಬೇಕು.

ಕೆರೆಗಳ ಸಮಗ್ರ ರಕ್ಷಣೆ ಆರ್ಥಿಕವಾಗಿ ಅನುಕೂಲಕರ. ಇಂಥ ಯೋಜನೆಗಳ ವೆಚ್ಚ ಮತ್ತು ಲಾಭದ ಪ್ರಮಾಣ (ಡಿಬಿಸಿಆರ್) ಸುಮಾರು ೧.೭ ಲಾಭದ ಪ್ರಮಾಣ ಜಾಸ್ತಿಯಿರುವುದರಿಂದ ಕೆರೆಗಳ ಹೂಳೆತ್ತುವ ಕಾರ್ಯ ಲಾಭದಾಯಕ. ಎಂಥ ಪರಿಸ್ಥಿತಿಯಲ್ಲಿಯೂ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕಾದ ಅಗತ್ಯವಿದೆ.

ವೆಚ್ಚ ನಿಯಂತ್ರಣ

 • ಯಂತ್ರಗಳ ಬದಲಾಗಿ ಮಾವನ ಶ್ರಮ ಆಧಾರಿತ ಕೆರೆ ಆಧಾರಿತ ಕೆರೆ ಹೂಳೆತ್ತುವ ಯೋಜನೆಗಳನ್ನು ರೂಪಿಸಿದರೆ ಯಂತ್ರಗಳ ಮೇಲೆ ವೆಚ್ಚತಗಲುವುದಿಲ್ಲ.
 • ಶ್ರಮ ಆಧಾರಿತ ಕೆಲಸ ವಿಳಂಬ, ತಡೆ, ಇಂಧನ ಅಗತ್ಯ, ಯಂತ್ರಗಳಿಂದ ಆಗಬಹುದಾದ ಪರಿಸರ ಮಾಲಿನ್ಯವನ್ನು ತಡೆಯಬಹುದು.
 • ಯಂತ್ರಗಳ ಮೂಲಕ ಕೆರೆ ಹೂಳೆತ್ತಿದರೆ ತಗಲುವ ವೆಚ್ಚಕ್ಕೆ ಹೋಲಿಸಿದರೆ ಶ್ರಮಿಕರಿಂದ ಮಾಡುವ ಕಾರ್ಯದ ವೆಚ್ಚ ಸ್ವಲ್ಪ ಹೆಚ್ಚಾಗಬಹುದು. ಹಾಗೆಯೇ ಶ್ರಮಿಕರ ದುಡಿಮೆಯ ನಿರ್ವಹಣಾ ವೆಚ್ಚ ಸ್ವಲ್ಪ ಹೆಚ್ಚಾಗಬಹುದಷ್ಟೆ.

ಸಾಮಾಜಿಕವಾಗಿ ಆಗಬಹುದಾದ ಲಾಭದ ವಿಶ್ಲೇಷಣೆ

 • ಕುಟುಂಬಗಳ ಆದಾಯ ಹೆಚ್ಚುವುದರಿಂದ ಜೀವನದ ಗುಣಮಟ್ಟ ಸುಧಾರಿಸುತ್ತದೆ.
 • ಮಹಿಳೆಯರು ಈ ಯೋಜನೆಗಳ ಜಾರಿಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅವರು ಸಬಲಗೊಳ್ಳುತ್ತಾರೆ.
 • ಕೆರೆಗಳ ಹೂಳೆತ್ತುವುದರಿಂದ ಸಾಮಾಜಿಕವಾಗಿ ಹಿಂದುಳಿದ, ದಲತರಂಥ ವರ್ಗಗಳು ಅನುಕೂಲ ಪಡೆಯುತ್ತವೆ. (ಉದಾಹರಣೆಗೆ ಪೂರ್ವದ ಒಣ ಕೃಷಿ ಪ್ರದೇಶವನ್ನು ನೋಡಬಹುದು) ಈ ಯೋಜನೆಗಳನ್ನು ಅವರ ಆದಾಯ ಮೂಲವನ್ನು ಸುಧಾರಿಸುವ, ಅವರಲ್ಲಿ ಅರಿವು ಮೂಡಿಸುವ ಮತ್ತು ಅವರ ಜೀವನದ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ರೂಪಿಸಲಾಗಿದೆ.

ನೆಲದ ಫಲವಂತಿಕೆ ಸುಧಾರಿಸುತ್ತದೆ, ನೀರಿನ ಲಭ್ಯತೆ ಜಾಸ್ತಿಯಾಗುವುದರಿಂದ ಬಡ ಮತ್ತು ಶ್ರಮಿಕ ವರ್ಗದವರು ತಮ್ಮ ಜಮೀನುಗಳನ್ನು ಹಾಗೆಯೇ ಬಿಡುವುದಿಲ್ಲ. ಕೃಷಿ ಕ್ಷೇತ್ರ ಕ್ರಮೇಣ ಆರ್ಥಿಕವಾಗಿ ಲಾಭದಾಯಕವಲ್ಲವಾಗಿ ಪರಿಣಮಿಸಿರುವುದರಿಂದ ಅವರು ತಮ್ಮ ಜಮೀನನ್ನು ಉತ್ಪಾದನೆಗೆ ಬಳಸದೇ ಇರುವ ಸಾಧ್ಯತೆಗಳು ಕೆರೆಗಳ ಹೂಳೆತ್ತುವುದರಿಂದ ಕಡಿಮೆಯಾಗುತ್ತದೆ.

 • ಬರಗಾಲದಲ್ಲಿ ತಮ್ಮ ಆಸ್ತಿ ಪಾಸ್ತಿ ಮಾರಿ ನಗರಗಳಿಗೆ ಬಡ ರೈತರು ಹಾಗೂ ಕಾರ್ಮಿಕರು ವಲಸೆ ಬರುವುದು ನಿಲ್ಲುತ್ತದೆ. ವಲಸೆ ಜನರಿಂದ ಬರಬಹುದಾದ ಹೆಚ್.ಐ.ವಿ., ಏಡ್ಸ್, ಮತ್ತಿತರ ರೋಗಗಳು ಹರಡುವುದನ್ನು ತಡೆಯಬಹುದು. ವಲಸೆ ಜನರ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ, ಗ್ರಾಮ ಮಟ್ಟದಲ್ಲಿಯೇ ಅನುಕೂಲ ಸೃಷ್ಟಿ ಮಾಡುವುದರಿಂದ ಮಕ್ಕಳು ಹಳ್ಳಿಗಳಲ್ಲಿಯೇ ಉಳಿದು ಶಿಕ್ಷಣ ಮುಂದುವರಿಯಲು ಸಾಧ್ಯವಾಗುತ್ತದೆ.
 • ಇಂಥ ಯೋಜನೆಗಳ ಜಾರಿಯಿಂದ ಸಮುದಾಯ ಸಂಘಟನೆಗಳು ಬಲಗೊಳ್ಳುತ್ತವೆ.
 • ಕುಟುಂಬಗಳ ಆದಾಯ ಹೆಚ್ಚುವುದರಿಂದ ಸಾಕ್ಷರತೆ ಪ್ರಮಾಣ ಹೆಚ್ಚುತ್ತದೆ. ಶಾಲೆ ಬಿಡುವ ಮಕ್ಕಳ ಸಂಖ್ಯೆ ತಗ್ಗುತ್ತದೆ.
 • ಕುಟುಂಬಗಳ ಆದಾಯ ಮೂಲ ಹೆಚ್ಚುವುದರಿಂದ ಅವರು ಸೇವಿಸುವ ಆಹಾರದ ಪೌಷ್ಟಿಕಾಂಶದ ಮಟ್ಟವೂ ಹೆಚ್ಚುತ್ತದೆ. ಆರೋಗ್ಯ ಮತ್ತು ಸ್ವಚ್ಛತೆಯ ಪ್ರಮಾಣವೂ ವೃದ್ಧಿಸುತ್ತದೆ.
 • ಮಾನವ ಅಭಿವೃದ್ಧಿ ಸೂಚ್ಯಾಂಕಗಳು ಏರುವುದನ್ನು ಕಾಣಬಹುದು.
 • ಯೋಜನೆಗಳನ್ನು ರೂಪಿಸುವುದರಲ್ಲಿ ಮತ್ತು ಜಾರಿಯಲ್ಲಿದೆ ಮತ್ತು ಅವುಗಳ ಮೇಲುಸ್ತುವಾರಿ ಹಾಗೂ ಮೌಲ್ಯಮಾಪನದಲ್ಲಿ ಸಮುದಾಯ ಭಾಗವಹಿಸುವಂತಾಗುತ್ತದೆ.
 • ಕೆರೆ ಹೂಳೆತ್ತುವ ಯೋಜನೆ ಜಾರಿಯಿಂದ ಪರಿಸರ ಪ್ರೇಮಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲು ಹಾಗೂ ಭೂಮಿ ಮತ್ತು ನೀರಿನ ಸಂಪನ್ಮೂಲ ಹೆಚ್ಚಿದಂತಾಗುತ್ತದೆ.
 • ಬಡತನ, ಸಾಮಾಜಿಕ ತುಳಿತಕ್ಕೆ ಒಳಗಾಗಿರುವ ಮಹಿಳೆಯರಿಗೆ ಈ ಯೋಜನೆಗಳಲ್ಲಿ ಮುಂಚೂಣಿ ಸ್ಥಾನ ನೀಡುವುದರಿಂದ ಲಿಂಗಭೇದ ಹೋಗುತ್ತದೆ.
 • ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಈ ಯೋಜನೆಗಳು ನೆರವಾಗುತ್ತವೆ. ಸಮುದಾಯ ಆಧಾರಿತ ಭೂಮಿ ಮತ್ತು ನೀರಿನ ನಿರ್ವಹಣೆ ಅಗತ್ಯವನ್ನು ಒತ್ತಿ ಹೇಳುವಂತಾಗುತ್ತದೆ.
 • ಈ ಯೋಜನೆಗಳಿಗೆ ಸಾಂಪ್ರದಾಯಿಕ ಮುಖವೂ ಇದೆ. ಜನರಿಗೆ, ದನಕರುಗಳಿಗೆ ನೀರು ಒದಗಿಸುತ್ತದೆ. ಹಕ್ಕಿಗಳಿಗೆ ನಿಸರ್ಗಧಾಮ, ಕಟ್ಟಡ ನಿರ್ಮಾಣಕ್ಕೆ ಮರಗಳನ್ನು ಈ ಯೋಜನೆ ಒದಗಿಸುತ್ತದೆ.
 • ಕೆರೆ ಹೂಳೆತ್ತುವ ಯೋಜನೆ ಜಾರಿಯಿಂದ ಮಳೆ ಆಧಾರಿತ ಪ್ರದೇಶದಲ್ಲಿಯೂ ಮಳೆಯಿಲ್ಲದ ಕಾಲದಲ್ಲಿ ಕೃಷಿ ಉತ್ಪಾದನೆ ಸ್ಥಿರಗೊಳ್ಳಲು ನೆರವಾಗುತ್ತದೆ.
 • ಹೂಳಿನ ಕೈಗಾರಿಕಾ ಬಳಕೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.
 • ಕೆರೆ ಸಂರಕ್ಷಣೆಯ ಸಮಗ್ರ ಯೋಜನೆ ಪರಿಸರ ಸಮತೋಲನ ಹಾಳು ಮಾಡದೆ ಜಿಲ್ಲೆಯ ಕೃಷಿ ಆಧಾರಿತ ಕೈಗಾರಿಕೆಗಳ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುತ್ತದೆ.