ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಠಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಭಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡ ಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು. ವಿಶ್ವಪ್ರಜ್ಞೆ ಕನ್ನಡ ದೇಶೀಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡ ಮಾನವ ವಿಶ್ವಮಾನವನಾಗಿ ಬೆಳೆಯಲು ಇದು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ವದ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡ ವಿಶ್ವವಿದ್ಯಾಲಯವು ಕೇವಲ ಕನ್ನಡ ಭಾಷೆ ಮತ್ತು ಸಾಹಿತ್ಯಗಳನ್ನು ಕುರಿತು ಸಂಶೋಧನೆ ಮಾಡುವ ಮತ್ತು ಪುಸ್ತಕ ಪ್ರಕಟಿಸುವ ವಿಶ್ವವಿದ್ಯಾಲಯವೆಂಬ ಮಿತ ಕಲ್ಪನೆ ಶಿಕ್ಷಣ ಲೋಕದ ಬಹಳ ಮಂದಿಗಿದೆ. ಆದರೆ, ಈ ನಮ್ಮ ಸಂಸ್ಥೆ ಜನಜೀವನದ ಸಮಗ್ರ ಉನ್ನತಿಗೆ ಸಹಕಾರಿಯಾಗುವ ಎಲ್ಲ ವಿಷಯಗಳ ಸಾಂದ್ರ ಅಧ್ಯಯನ, ಸಂಶೋಧನೆ, ವಿಶ್ಲೇಷಣೆಯನ್ನು ಮತ್ತು ಅದರಿಂದ ಲಭ್ಯವಾದ ಅನನ್ಯವಾದ ಮಾಹಿತಿ ಹಾಗೂ ವಿಶಿಷ್ಟ ಜ್ಞಾನ ಜನಸಮುದಾಯಕ್ಕೆ ಮತ್ತು ಅವರ ಬದುಕಿನ ಉನ್ನತಿಗೆ ಸಹಾಯವಾಗಬೇಕೆಂಬ, ಅವರ ಮನಸ್ಸಿಗೆ ಮೆದುಳಿಗೆ ಮುಟ್ಟಬೇಕೆಂಬ, ಅದು ಅವರ ಕ್ರಿಯಾಯೋಜನೆಗಳಲ್ಲಿ ‌ಪ್ರಕಟವಾಗಬೇಕೆಂಬ, ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಆದ್ದರಿಂದ ಮನಸ್ಸಿಗೆ ಮತ್ತು ಮೆದುಳಿಗೆ ಸತ್ವಶೀಲವಾದ ಆಹಾರವನ್ನು ಶೋಧಿಸಿಕೊಡುವ ಹೊಣೆಯ ಜೊತೆಗೆ ಮರೆತುಹೋದ ನಮ್ಮ ನಾಡಿನ ಜ್ಞಾನಝರಿಯನ್ನು ಅವುಗಳ ಪಳೆಯುಳಿಕೆಗಳಿಂದ ಹೊರತೆಗೆದು ನಿತ್ಯ ಜೀವನಕ್ಕೆ ಅವು ನೀರುಣಿಸುವಂತೆ ಮಾಡುವ ಅನನ್ಯ ಪ್ರಯತ್ನಗಳು ವಿಹರಿಸುವ ವಿದ್ವಾಂಸರ ತಂಡವನ್ನು ಸೃಷ್ಟಿಸುವ ವಿಶ್ವವಿದ್ಯಾಲಯ ಇದಲ್ಲ. ಬದಲಾಗಿ, ಮಾನವನ ಸಮಗ್ರ ಉನ್ನತೀಕರಣಕ್ಕೆ ಜೀವಸತ್ವ ಊಡುವ ಎಲ್ಲ ಸದಂಶಗಳೊಡನೆ ಸಂವಾದಗೈಯುತ್ತ ಅವುಗಳ ಸಾಹಚರ್ಯವನ್ನು ಸಾಧಿಸುತ್ತ ಅವುಗಳ ಅಂತರಂಗದ ಅಮೃತಸತ್ವವನ್ನು ಹೀರಿಕೊಳ್ಳುವ ಮತ್ತು ಜನಕಲ್ಯಾಣಕ್ಕಾಗಿ ಹಂಚುವ ಕಾಯಕದಲ್ಲಿ ಇದು ನಿರತವಾಗಿದೆ. ಹೀಗೆ ನಮ್ಮ ವಿಶ್ವವಿದ್ಯಾಲಯದಲ್ಲಿ ಸತತ ಕ್ರಿಯಾಶೀಲವಾಗಿರುವ ೧೮ ವಿಭಾಗಗಳಲ್ಲಿ ನಮ್ಮ ಅಭಿವೃದ್ಧಿ ಅಧ್ಯಯನ ವಿಭಾಗ ಒಂದು ಬಹುಮುಖ್ಯ ಅಂಗ. ಇದು ಏಕಕಾಲದಲ್ಲಿ ವಿಜ್ಞಾನಿಗಳೊಡನೆ, ವಿದ್ವಾಂಸರೊಡನೆ, ವ್ಯವಹಾರಸ್ಥ ಉದ್ಯಮಿಗಳೊಡನೆ, ಸಂಸ್ಕೃತಿ ಚಿಂತಕರೊಡನೆ, ಮಣ್ಣಿನ ಮಕ್ಕಳೊಡನೆ ಜೀವಂತ ಸಂಪರ್ಕವನ್ನು ಸಾಧಿಸುತ್ತಲೇ ತನ್ನ ಕಕ್ಷೆಯಲ್ಲಿ ತಾನು ಹೊಸದಾಗಿ ಕಂಡುಕೊಂಡ ತಿಳಿವನ್ನು ಮತ್ತೆ ಆ ಸಮುದಾಯದ ವಿಕಾಸಕ್ಕಾಗಿ ಧಾರೆಯೆರೆಯುವ ಕ್ರಿಯಾಪೂರ್ಣ ವಿಭಾಗವಾಗಿದೆ. ಈ ಕಾರಣದಿಂದಲೇ ಅದು ನಮ್ಮ ಜನತೆಯ ನಿತ್ಯ ಬದುಕಿನೊಡನೆ ಬೆರೆತುಕೊಂಡಿವೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಶಿವಮೊಗ್ಗದ ಇತಿಹಾಸ ಇತಿಹಾಸ ವೇದಿಕೆಯೊಡನೆ ಸಂಯುಕ್ತವಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ವಿಚಾರಸಂಕಿರಣವನ್ನು ಸಂಯೋಜಿಸಿತ್ತು. ಜಲ ಸಂವರ್ಧನೆ, ಜಲ ನಿರ್ವಹಣೆಗಳ ಸಮಸ್ಯೆ ಇಂದು ಕೇವಲ ಪ್ರಾದೇಶಿಕ ಸಮಸ್ಯೆಯಾಗದೆ ಜಾಗತಿಕ ಸಮಸ್ಯೆಯಾಗಿದೆ. ನಮ್ಮ ಪ್ರಾಚೀನರು ಈ ಸಂವರ್ಧನೆ ಮತ್ತು ವಿತರಣೆಯ ಸಮಸ್ಯೆಯನ್ನು ತಮ್ಮ ದೇಶೀಯ ಜ್ಞಾನದ ಮೂಲಕ ಅತ್ಯಂತ ಸಮರ್ಥವಾಗಿ ಮತ್ತು ಸಮರ್ಪಕವಾಗಿ ನಿರ್ವಹಿಸುತ್ತಿದ್ದರೆಂಬುದು ಪ್ರಾಚೀನ ಇತಿಹಾಸದಿಂದ ವೇದ್ಯವಾಗುತ್ತದೆ.

ಪ್ರಸ್ತುತ ಈ ಜಲಸಂವರ್ಧನೆ ಮತ್ತು ನಿರ್ವಹಣೆಯ ಕಾರ್ಯವನ್ನು ಸರ್ಕಾರ ಕೈಗೆತ್ತಿಕೊಂಡಿವುದರಿಂದ, ಅನುಭವದ ಆಳವಿಲ್ಲದ ಪುಸ್ತಕ ಜ್ಞಾನದಿಂದ ತುಂಬಿಕೊಂಡ ಮೆದುಳಿನ ಕಾರ್ಯದಿಂದಲೇ ದಿನದಿನಕ್ಕೆ ಸಂಕೀರ್ಣವಾಗುತ್ತಿರುವ ಜನರ ಜೀವನ್ಮರಣದ ಪ್ರಶ್ನೆಯಾಗುತ್ತಿರುವ ಈ ಸಮಸ್ಯೆಯನ್ನು ಕೇವಲ ಹಣ ಚೆಲ್ಲಿ ಕೆಲಸ ಮಾಡಿಸುವ ಉಮೇದಿನೊಡನೆ ಪರಿಹರಿಸಲು ಯತ್ನಿಸಲಾಗುತ್ತಿದೆ. ಅನುಭೋಗಿಗಳಾದ ಸಮುದಾಯದ ಜನರ ಪ್ರಾಮಾಣಿಕ ಮತ್ತು ಸ್ವಯಿಚ್ಚಾಪೂರ್ಣ ಸಹಭಾಗಿತ್ವವಿಲ್ಲದೆ ಎಂಥ ಮಹದುದ್ದೇಶದ ಕಾರ್ಯವಾದರೂ ಫಲಕಾರಿಯಾಗುವುದಿಲ್ಲ. ಆದ್ದರಿಂದ ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರನ್ನು ಅರ್ಪಣಾ ಮನೋಧರ್ಮದ ಕ್ರಿಯಾಶೀಲ ಸಹಾಭಾಗಿಗಳಾಗಿ ಹೇಗೆ ಮಾಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಅವರ ಪರಂಪರಾಗತವಾದ ಮತ್ತು ಪ್ರಯೋಗಶೀಲವಾದ ತಿಳುವಳಿಕೆ ಹಾಗೂ ಪರಿಶ್ರಮವನ್ನು ಹೇಗೆ ಬಳಸಿಕೊಳ್ಳಬೇಕು, ಆ ಮೂಲಕ ಈ ಬೃಹತ್ ಸಮಸ್ಯೆಯನ್ನು ಶ್ರಮದ, ವೆಚ್ಚದ, ಅನುಭೋಗದ ವಿಕೇಂದ್ರಕರಣವನ್ನಾಗಿ ಹೇಗೆ ಪರಿವರ್ತಿಸಬೇಕು ಎಂಬುದು ಸ್ಪಷ್ಟವಾಗಬೇಕಾದರೆ ಈ ಅಂಶಗಳಲ್ಲಿ ಪರಿಣತರಾದ ನಮ್ಮ ಜನಸಮುದಾಯವನ್ನು ನಮ್ಮ ಅಧಿಕಾರಿ ವರ್ಗ ಮತ್ತು ವಿದ್ವತ್‌ವರ್ಗ ತಮ್ಮ ಚಿಂತನೆ ಮತ್ತು ಕ್ರಿಯೆಯ ಚಕ್ರದೊಳಕ್ಕೆ ಆಹ್ವಾನಿಸಿಕೊಳ್ಳಬೇಕು ಮತ್ತು ಆಪ್ತವಾಗಿಸಿಕೊಳ್ಳಬೇಕು. ಇದನ್ನರಿತ ನಮ್ಮ ಅಭಿವೃದ್ಧಿ ಅಧ್ಯಯನ ವಿಭಾಗ ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ, ಬುದ್ಧಿಯ ವಾರಸುದಾರರಾದ ವಿದ್ವಾಂಸರು ಮತ್ತು ಲೋಕಜ್ಞಾನದ ನಿಧಿಗಳಾದ ರೈತರು ಇವರ ಸಮನ್ವಯದ ವಿಶಿಷ್ಟ ವಿಚಾರಸಂಕಿರಣವನ್ನು ಅರ್ಥಪೂರ್ಣವಾಗಿ ನಡೆಸಿತು.

ನೂರಕ್ಕಿಂತ ಹೆಚ್ಚು ಜನ ರೈತರು ಈ ಸಂಕಿರಣದಲ್ಲಿ ಪಾಲ್ಗೊಂಡು ತಮ್ಮ ತಾಜಾ ಅನುಭವಗಳನ್ನು ವಿದ್ವಾಂಸರೊಡನೆ ನಿರ್ಭಿಡೆಯಿಂದ ಹಂಚಿಕೊಂಡರು. ಪ್ರಶ್ನೆಗಳನ್ನು ಕೇಳಿದರು, ಉತ್ತರಗಳನ್ನು ಪಡೆದರು. ಸಮಾಧಾನವಾಗದಿದ್ದಾಗ ಮತ್ತೆ ಮತ್ತೆ ಕೆದಕಿ ಸಮಸ್ಯೆಗಳ ಸ್ವರೂಪವನ್ನು ಬಿಡಿ ಬಿಡಿಸಿ ಹೇಳುವಂತೆ ಮಾಡಿದರು. ವಿದ್ವಾಂಸರೂ ಸಹ ತಮ್ಮ ಕ್ಷೇತ್ರಕಾರ್ಯಜ್ಞಾನ ಮತ್ತು ಪುಸ್ತಕ ಜ್ಞಾನದ ಜೊತೆಗೆ ಈ ರೈತರ ಅನುಭವ ವೇದದ ಜ್ಞಾನವನ್ನು ಪ್ರಾಂಜಲವಾಗಿ ತಮ್ಮೊಳಗೆ ಆಹ್ವಾನಿಸಿಕೊಂಡು ಪ್ರತಿಸ್ಪಂದಿಸಿದರು. ನಮ್ಮ ವಿದ್ವಾಂಸರ ನಿಶಿತವಾದ ಚಿಂತನೆಗಳು, ಅವುಗಳ ಹರಹು ಮತ್ತು ರೈತ ಬಂಧುಗಳು ಎತ್ತಿದ ಆಕ್ಷೇಪಗಳು, ಸಮಸ್ಯೆಗಳ ಕಣ್ಣಿನಿಂದ ಕಂಡುಕೊಂಡ ಹೊಸ ತತ್ಯಗಳು ಈ ಪುಸ್ತಕದ ಪ್ರಬಂಧಗಳಲ್ಲಿ ಮಿಡಿಯುತ್ತಿವೆ. ಈ ನಿತ್ಯ ಹಸಿರಾದ ಸಮಸ್ಯೆಯನ್ನು ತಾತ್ವಿಕ, ಚಾರಿತ್ರಿಕ, ಭಾವನಾತ್ಮಕ, ಕಾನೂನಾತ್ಮಕ, ತಾಂತ್ರಿಕ ದೃಷ್ಟಿಕೋನಗಳ ಚೌಕಟ್ಟಿನಲ್ಲಿ ಇಲ್ಲಿ ಬಿಂಬಿಸಲಾಗಿದೆ. ಇದು ಈ ಬೃಹತ್ ಸಮಸ್ಯೆಯ ಅರಿವಿಗೆ ಒಂದು ಮುಖ್ಯವಾದ ಕೀಲಿ ಕೈಯಾಗಿ ಪರಿಣಮಿಸಿದೆ ಎಂಬುದು ನನ್ನ ಅಭಿಮತ. ಈ ಸಂಕಿರಣದಲ್ಲಿ ಪಾಲ್ಗೊಂಡು ಉಪನ್ಯಾಸ ಮಾಡಿ ರೈತರ ಸಮಸ್ಯೆಗಳೊಡನೆ ಸ್ಪಂದಿಸಿ ತಮ್ಮ ವಿವೇಕವನ್ನು ಮತ್ತು ರೈತ ಕಾಳಜಿಯನ್ನು ಪ್ರಾಮಾಣಿಕವಾಗಿ ಮೆರೆದ ರಾಜ್ಯದ ಸಣ್ಣ ನೀರಾವರಿ ಸಚಿವರಾದ ಶ್ರೀ ಕುಮಾರ ಬಂಗಾರಪ್ಪ ಅವರನ್ನು ಸ್ಮರಿಸುವುದು ನನ್ನ ಕರ್ತವ್ಯ. ಈ ವಿಶಿಷ್ಟ ಚಿಂತನಾ ಚಾವಡಿಗೆ ಮೊದಲ ಬಾರಿಗೆ ರೈತರು ಪಾಲ್ಗೊಳ್ಳುವಂತಾದುದಕ್ಕೆ ಅವರು ತಮ್ಮ ಹರ್ಷವನ್ನು ವ್ಯಕ್ತಪಡಿಸಿ ರೈತರು ಮತ್ತು ವಿಶ್ವವಿದ್ಯಾಲಯದ ಸಂಪರ್ಕ ಇನ್ನಷ್ಟು ನಿಕಟವಾಗಲೆಂದು ಹಾರೈಸಿದರು.

ನಮ್ಮ ವಿದ್ವಾಂಸರು ಗಂಭೀರ ಕಾಳಜಿಯಿಂದ ಸಿದ್ಧಪಡಿಸುವ ಪ್ರಬಂಧಗಳನ್ನು ಮಂಡಿಸಿ ರೈತರ ಪ್ರತಿಕ್ರಿಯೆಗಳಿಗೆ ಅಹಂ ಇಲ್ಲದೆ ಸ್ಪಂದಿಸಿದರು. ಹೀಗಾಗಿ ವಿದ್ವತ್‌ಲೋಕ ಮತ್ತು ಅನುಭವಲೋಕಗಳೆರಡರ ಸತ್ವಪೂರ್ಣ ಸಮಾಗಮ ಈ ವಿಚಾರಸಂಕಿರಣದಲ್ಲಿ ಜರುಗಿತು ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಅಭಿವೃದ್ಧಿ ಅಧ್ಯಯನ ವಿಭಾಗದ ಡಾ.ಎಂ.ಚಂದ್ರ ಪೂಜಾರಿ ಅವರು ಮತ್ತು ಅವರ ಸಹೋದ್ಯೋಗಿಗಳು ಈ ವಿಚಾರಸಂಕಿರಣವನ್ನು ಸಂಯೋಜಿಸಿದ್ದಲ್ಲದೆ, ಅಲ್ಲಿ ಮಂಡನೆಗೊಂಡ ಪ್ರಬಂಧಗಳನ್ನು ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿದ್ದಾರೆ. ರೈತರ ಮನೆ ಮನೆಗಳಿಗೆ ತಲುಪಬೇಕಾದ ಪುಸ್ತಕವಿದು. ಇದಕ್ಕೆ ಕಾರಣರಾದವರೆಲ್ಲರಿಗೂ ವಿಶ್ವವಿದ್ಯಾಲಯದ ಪರವಾಗಿ ಧನ್ಯವಾದಗಳು.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಗಳು