ಕೆರೆ ನೀರಾವರಿ ವ್ಯವಸ್ಥೆಯ ಪ್ರಾದೇಶಿಕ ನೆಲೆಗಳು

ಬಹುಶಃ ಎರಡನೆಯ ಪ್ರಕಾರದ ಆಡಳಿತಗಾರರು ಈ ಮೇಲಿನ ಎಲ್ಲರಿಗಿಂತ ಹೆಚ್ಚಿನ ಹಿತಾಸಕ್ತಿಯನ್ನು ಕೆರೆಗಳ ಸಂಬಂಧಿಸಿ ಹೊಂದಿದ್ದರುಲ. ಏಕೆಂದರೆ ಪ್ರಾದೇಶಿಕವಾಗಿ ರಾಜ್ಯ ನಿರ್ಮಾಣದ ನೇತೃತ್ವ ವಹಿಸಿದವರೇ ಅವರು. ಇವರು ಪ್ರಾದೇಶಿಕ ಆಳುವ ಮನೆತನಗಳಾಗಿದ್ದು ಪ್ರಾದೇಶಿಕ ಕೃಷಿ ಸಮೃದ್ಧಿ ಹಾಗೂ ಸ್ಥಾನಿಕ ಮುಂದಾಳತ್ವದ ಆಳುವ ವರ್ಗವನ್ನು ಬೆಳೆಸುತ್ತ ತಾವೂ ತಮ್ಮ ಪ್ರಭುತ್ವವನ್ನು ಬೆಳೆಸಿಕೊಂಡರು. ಮಧ್ಯಕಾಲದ ಮೇಲ್ಮಟ್ಟದ ಪ್ರಭುತ್ವವನ್ನು ಸ್ಥಾಪಿಸಿದ ಕದಂಬರಾದಿಯಾಗಿ ಎಲ್ಲ ಮನೆತನಗಳೂ ಮೂಲತಃ ಈ ಅವಸ್ಥೆಯಿಂದಲೇ ಮೇಲೇರಿ ಬಂದವರಾಗಿದ್ದರು. ಇವರು ತಾವು ಆಳಿದ ಪ್ರದೇಶದಲ್ಲಿ ಸ್ವತಃ ಕೆರೆಗಳನ್ನು ಕಟ್ಟಿ ನಿರ್ವಹಣೆಗಳಿಗಾಗಿ ತಮ್ಮ ಸಂಪನ್ಮೂಲದಿಂದಲೇ ಕೊಡುಗೆಗಳನ್ನು ನೀಡಿದರು ಅಥವಾ ಅವುಗಳನ್ನು ‘ಕಟ್ಟಿದವರಿಗೆ ಸಹಾರ ಮಾಡಿ ಕೊಡುಗೆಗಳನ್ನು ಮಂಜೂರು ಮಾಡಿದರು. ಈ ನೀತಿ ಅವರು ಸಾಮ್ರಾಟರಾಗಿ ಬೆಳೆದ ಮೇಲೂ ಒಂದು ವಿಸ್ತೃತ ರೂಪವನ್ನು ಪಡೆದ ಪರಿಣಾಮವಾಗಿಯೇ ಇಂಥ ಸ್ಥಾನಿಕ ಹಿತಾಸಕ್ತಿ ಇಲ್ಲದ ಅವರ ಅಧಿಕಾರಿ ವರ್ಗವನ್ನೂ ಕೆರೆಗಳ ನಿರ್ಮಾಣದಲ್ಲಿ ತೊಡಗಿಸಿದರು. ಕರ್ನಾಟಕದಲ್ಲಿ ಮಹಾರಾಜರು ಹಾಗೂ ಅವರ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದೇ ಹೊಯ್ಸಳರ ಕೇಂದ್ರಭಾಗವಾದ ಇಂದಿನ ಹಾಸನ ಜಿಲ್ಲೆಯಲ್ಲಿ, ಹೊಯ್ಸಳರ ರಾಜ್ಯ ನಿರ್ಮಾಣ ಈ ಪ್ರದೇಶದಲ್ಲೇ ನಡೆಯಿತೆಂದನ್ನು ಗಮನಿಸಿದರೆ ಈ ಮೇಲಿನ ಪ್ರಕ್ರಿಯೆ ಹೊಲಬಾಗುತ್ತದೆ.

ಕೆರೆಗಳ ಸಂಬಂಧಿಸಿ ಮೇಲ್ಮಟ್ಟದಿಂದ ಸ್ಥಾನಿಕ ಹಂತಕ್ಕೆ ಬಂದಂತೇ ಜನರ ತೊಡಗುವಿಕೆಯ ಸ್ವರೂಪದಲ್ಲಿ ಬದಲಾವಣೆಯಾಗುವುದನ್ನೂ ಗುರುತಿಸಬಹುದು. ಮೂಲತಃ ಕೆರೆನೀರಾವರಿ ಸ್ಥಾನಿಕ ಜನರ ಹಿತಾಸಕ್ತಿಯಾಗಿತ್ತು. ಮೇಲ್ಮಟ್ಟದ ಆಡಳಿತಗಾರನೂ ಹೆಚ್ಚಿನ ಸಂದರ್ಭಗಳಲ್ಲಲಿ ತಮ್ಮ ಊರು ಅಥವಾ ಪ್ರದೇಶಗಳಲ್ಲೇ ಇಂಥ ಕೆರೆಗಳನ್ನು ಕಟ್ಟಿಸಿದ್ದರು. ಊರಿನಲ್ಲಿ ಅಥವಾ ನಾಡಿನಲ್ಲಿಯ ಗಾವುಂಡರ ಸಮೂಹಗಳು, ಅಗ್ರಹಾರಗಳು, ದೇವಾಲಯ ಸಂಸ್ಥೆಗಳು, ವ್ಯಾಪಾರಿ ಶ್ರೇಣಿಗಳು ಮುಂತಾದವು ಬಹುತೇಕ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿದ್ದರು. ಕೆರೆಗಳ ನಿರ್ಮಾಣಕ್ಕೆ ಮೇಲಿನ ಅಧಿಕಾರಿಗಳು ಅಥವಾ ಶ್ರೀಮಂತರನ್ನೂ ಈ ಹಿಂದೆ ಕೆಲವೊಮ್ಮೆ ಪಡೆದರೂ ಅದನ್ನು ನಿರ್ವಹಿಸುವ ಸಂಪೂರ್ಣ ಕರ್ತವ್ಯ ಇಂಥ ಸ್ಥಾನಿಕ ಸಮೂಹಗಳೇ ನಿಭಾಯಿಸುತ್ತಿದ್ದವು. ಈ ಹಂತದಲ್ಲಿ ಕೃಷಿ ಉತ್ಪಾದನೆಯ ಸಂಬಂಧಿಸಿ ಸ್ಥಳೀಯ ಸಾಮೂಹಿಕ ಅಥವಾ ಖಾಸಗಿ ಆಸಕ್ತಿಯೇ ನಿರ್ಣಾಯಕವಾಗಿತ್ತು. ಹಳ್ಳಿಗಳಲ್ಲಿ ಕೆರೆ ಕಟ್ಟಿದ ನಂತರ ಇಂಥ ಕೃಷಿಕರು ಸಾಮೂಹಿಕವಾಗಿ ಕೊಡುಗೆಗಳನ್ನು ನೀಡಿದ ಉದಾಹರಣೆಗಳು ಶಾಶನಗಳಲ್ಲಿ ಸಿಗುತ್ತವೆ. ಬಹುಶಃ ಸಾಮುದಾಯಿಕವಾಗಿ ಕೃಷಿ ಭೂಮಿಯ ಮೇಲೆ ಒಡೆತನ ಹೊಂದಿದ ಗರುಡ ಪ್ರಜೆಗಳು ಅಥವಾ ಮಹಾಜನರು ಹೊಸ ಭೂಮಿಯನ್ನು ನೀರಾವರಿಗೆ ಅಳವಡಿಸಿ ತಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಬಹುಶಃ ಇಂಥ ಸಮುದಾಯಗಳಲ್ಲೇ ಕೆಲ ವ್ಯಕ್ತಿಗತ ಪ್ರಯತ್ನಗಳು ಶಾಸನಗಳಲ್ಲಿ ದಾಖಲಾಗಿವೆ. ಏಕೆಂದರೆ ನಮಗೆ ಸಿಗುವ ಶಾಸನಗಳಲ್ಲಿ ಇಂಥವೇ ಉದಾಹರಣೆಗಳು ಸಾಕಷ್ಟಿವೆ. ಇಂಥ ವ್ಯಕ್ತಿಗಳು ಊರಿನವರೇ ಆಗಿರುತ್ತಿದ್ದು ಅವರಿಗೆ ಕೆರೆಕೆಳಗಿನ ಗದ್ದೆಯಲ್ಲಿ ಪಾಲುನೀಡಿ ಅಥವಾ ದಶವಂದದಂಥ ಆದಾಯವನ್ನು ನೀಡಿ ಊರಿನ ಸಮುದಾಯಗಳು ಗೌರವಿಸುತ್ತಿದ್ದವು. ಒಂದು ಉದಾಹರಣೆಯಲ್ಲಿ ಕೆರೆಕಟ್ಟಿಸಿ ಕಾಡುಕಡಿದು ಗದ್ದೆ ಮಾಡಿದ ದೇವಸೆಟ್ಟಿ ಎಂಬ ವ್ಯಕ್ತಿಗೇ ಆ ಗದ್ದೆಯನ್ನು ಬಿಟ್ಟು ಕೆರೆಯ ನಿರ್ವಹಣೆಯ ಭಾರವನ್ನೂ ಆತನಿಗೇ ಮಹಾಜನರು ವಹಿಸುತ್ತಾರೆ.[1] ಇಲ್ಲಿ ಮಹಾಜನರಿಗೆ ಏನು ಲಾಭವಾಯಿತು ಎಂಬುದು ತಿಳಿಯುವುದಿಲ್ಲ. ಆದರೆ ವಿಜಯನಗರೋತ್ತರ ಕಾಲದಲ್ಲಿ ಅಗ್ರಹಾರಗಳು ಹಾಗೂ ದೇವಾಲಯಗಳು ತಮ್ಮ ಉತ್ಪಾದನೆಯ ಹೆಚ್ಚಳಕ್ಕಾಗಿ ನೀರಾವರಿ ಕಾರ್ಯವನ್ನು ಹಮ್ಮಿಕೊಂಡಿದ್ದು ಅನೇಕ ಶಾಸನಗಳಲ್ಲಿ ವ್ಯಕ್ತವಾಗಿದೆ. ಕೆಲ ವ್ಯಕ್ತಿಗಳು ಇದನ್ನು ನಡೆಸಿಕೊಟ್ಟು ಕೊಡುಗೆಗಳನ್ನು ಪಡೆದ ಉದಾಹರಣೆಗೂ ಇವೆ. ವ್ಯಕ್ತಿಗತ ಪ್ರತಿಫಲಗಳನ್ನು ಪಡೆದ ಕಾರಣಕ್ಕಾಗಿ ಅವರು ಆ ಕೆರೆಗಳನ್ನು ನಿರ್ವಹಿಸಬೇಕಾಗಿತ್ತು. ತಮಿಳ್ನಾಡಿನಲ್ಲಿ ಹಳ್ಳಿಗಳ ಮಟ್ಟದಲ್ಲಿ ನೀರಾವರಿಯ ಉಸ್ತುವಾರಿ ನೋಡಿಕೊಳ್ಳುವ ಒಂದು ವಿಭಾಗ ಹಲವೆಡೆ ಇತ್ತು. ಆದರೆ ಕರ್ನಾಟಕದಲ್ಲಿ ಈ ಮೇಲಿನ ವ್ಯವಸ್ಥೆಯ ಕುರಿತು ಮಾತ್ರ ಶಾಸನಗಳು ತಿಳಿಸುತ್ತವೆ. ವಿಜಯನಗರ ಕಾಲದ ನಂತರ ಬೆಳೆದುಬಂದ ಆಯಗಾರ ಪದ್ಧತಿಯಲ್ಲಿ ನೀರ್ಗಂಟಿ ಎಂಬೊಬ್ಬ ಅಧಿಕಾರಿ ನೀರಿನ ಹಂಚಿಕೆಗಾಗಿ ಹಳ್ಳಿಗಳಲ್ಲಿ ಇದ್ದುದು ಕಂಡುಬರುತ್ತದೆ. ಆದರೆ ಕೆರೆಗಳ ಹೂಳೆತ್ತುವುದು, ರಿಪೇರಿ ಮುಂತಾದ ಖರ್ಚಿನ ಕೆಲಸಗಳನ್ನೆಲ್ಲ ವ್ಯಕ್ತಿಗಳಿಗೆ ಹಣ, ಭೂಮಿ, ಅಥವಾ ಕರಗಳನ್ನು ನೀಡಿ ವಹಿಸಿಕೊಟ್ಟಿದ್ದರು.

ಈ ರೀತಿ ಕೆರೆಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಹಳ್ಳಿಗಳ ಸಮುದಾಯಗಳು ವ್ಯಕ್ತಿಗಳ ಹಾಗೂ ಖಾಸಗಿ ಆಸ್ತಿಯ ಕಲ್ಪನೆಯ ಮೂಲಕ ಸಾಧಿಸಿದ್ದು ಶಾಸನಗಳಲ್ಲಿ ದಾಖಲಾಗಿದೆ. ಬಹುಶಃ ವ್ಯಕ್ತಿಯೋರ್ವನಿಗೆ ಈ ಜವಾಬ್ದಾರಿಯನ್ನು ವಹಿಸಿಕೊಟ್ಟಾದ ಮೇಲೆ ಈ ಒಪ್ಪಂದವನ್ನು ವ್ಯಕ್ತಿಯಾಗಲೀ, ಸಮುದಾಯವಾಗಲೀ ಮುರಿಯುವಂತಿರಲಿಲ್ಲ. ಈ ವ್ಯವಸ್ಥೆ ೧೯ನೇ ಶತಮಾನದ ವರೆಗೂ ಹಳ್ಳಿಗಳಲ್ಲಿ ಮುಂದುವರಿದುಕೊಂಡು ಬಂದಿತ್ತು. ಕೆರೆಯನ್ನು ನಿರ್ವಹಿಸದಿದ್ದರೆ ವ್ಯಕ್ತಿಗೂ ಕೊಡುಗೆಯನ್ನು ಅನುಭವಿಸುವ ಅಧಿಕಾರ ಹೊರಟುಹೋಗುತ್ತಿತ್ತು. ಬಹುಶಃ ಇದೇ ವಾಸ್ತವದಲ್ಲೇ ರೂಪುಗೊಂಡ ಮಧ್ಯಕಾಲದ ಸ್ಮೃತಿಗಳು ಒಂದು ಗ್ರಾಮದ ಸಭಾಲಯ, ದೇವಾಲಯ, ಕೆರೆ, ಆರಾಮ, ಅರವಟ್ಟಿಗೆ ಮುಂತಾದವನ್ನು ನೋಡಿಕೊಳ್ಳುವುದು ಗ್ರಾಮದ ಕುಲ, ಶ್ರೇಣಿ, ಗಣಗಳ ಧರ್ಮ ಎನ್ನುತ್ತವೆ. ಇಂಥ ಸಮೂಹಗಳು ಒಪ್ಪಿಕೊಂಡ ನಿಯಮಗಳನ್ನು ಸಮಯ ಎಂದು ಕರೆಯಲಾಗಿತ್ತು. ಇವನ್ನು ಲಿಖಿತರೂಪದಲ್ಲಿ ಬರೆದಿಡಬೇಕು, ಇವುಗಳನ್ನು ಪಾಲಿಸದಿದ್ದವರ ಸರ್ವಸ್ವವನ್ನೂ ಕಸಿದುಕೊಂಡು ಗ್ರಾಮದಿಂದ ಓಡಿಸುವ ಹಕ್ಕು ಈ ಸಮೂಹಗಳಿಗಿದೆ, ಸಹಾ ಮಾಡಿದವರಿಗೆ ಪ್ರತಿಫಲ ನೀಡುವ ಹಕ್ಕೂ ಅವರಿಗಿದೆ, ಈ ಕುಲ, ಗಣ, ಶ್ರೇಣಿಗಳ ಕ್ರಮಗಳನ್ನು ರಾಜನೂ ಮನ್ನಿಸಬೇಕು. ಏಕೆಂದರೆ ಸ್ಮೃತಿಗಳು ಅವುಗಳಿಗೆ ಆ ಹಕ್ಕನ್ನು ನೀಡಿವೆ ಎಂದು ಬೃಹಸ್ಪತಿ ನಿರ್ದೇಶಿಸುತ್ತಾನೆ.[2] ಈ ಗಣ, ಕುಲ, ಶ್ರೇಣಿಗಳ ಧರ್ಮವನ್ನು ಶಾಸನಗಳು ಕೂಡ ಈ ಸ್ಮೃತಿ ನಿರ್ದೇಶನಗಳು ಸಮೂಹಗಳ ಸಂಬಂಧಿಸಿ ವ್ಯತಿರಿಕ್ತವಾಗೇನೂ ಇರಲಿಲ್ಲ ಎಂಬುದನ್ನು ಸೂಚಿಸುತ್ತವೆ. ಆದರೂ ಸ್ಮೃತಿಗಳು ದಾಖಲಿಸದ ತೀರ ಮುಖ್ಯವಾದ ವಿಷಯ ಶಾಸನಗಳಲ್ಲಿ ಪ್ರಕಟವಾಗುತ್ತದೆ. ಅದೆಂದರೆ ಈ ಮೇಲಿನ ಸ್ಥಾನಿಕ ಸಮುದಾಯಗಳು ರಾಜ್ಯಗಳಲ್ಲಿ ಮುಚ್ಚಿಕೊಂಡ ಅಥವಾ ತಟಸ್ಥ ಅಂಶಗಳಾಗಿರಲಿಲ್ಲ ಹಾಗೂ ಹಾಗಿದ್ದಿದ್ದರೆ ಮೇಲ್ಮಟ್ಟದ ಪ್ರಭುತ್ವಗಳಿಗೆ ಸ್ಥಾನಿಕ ಮಟ್ಟದಲ್ಲಿ ಪ್ರಸ್ತುತತಯೇ ನಿರ್ಮಾಣವಾಗುತ್ತಿರಲಿಲ್ಲ. ಶಾಸನಗಳಲ್ಲಿ ಇಂತಹ ಸಮೂಹ ಧರ್ಮಗಳಲ್ಲಿ ಒಂದಾದ ಕೆರೆ ನೀರಾವರಿಯ ಸಂದರ್ಭದಲ್ಲಿ ವ್ಯಕ್ತಿಗಳು ಸಮೂಹದಲ್ಲಿ ವಿಶೇಷವಾಗಿ ಮುಂದೊತ್ತಿಕೊಳ್ಳುವ ಮೂಲಕ ಅಥವಾ ವಿಶೇಷ ಪ್ರಭಾವವನ್ನು ಗಳಿಸಿಕೊಳ್ಳುವುದರ ಮೂಲಕ ಈ ವ್ಯವಹಾರ ನಡೆದಿದ್ದು ಕಂಡುಬರುತ್ತದೆ. ಇಂಥ ಕುಲ, ಗಣ ಮುಂತಾದ ಸಮೂಹಗಳ ಮುಂದಾಳುಗಳು ರಾಜ್ಯದ ಜೊತೆ ಸಂವಾದಿಸುತ್ತ ಸ್ಥಾನಿಕ ಆಳುವ ವರ್ಗವೊಂದು ಮುಂಚೂಣಿಗೆ ಅದಾಗಲೇ ಬಂದಿದ್ದು ಕೂಡ ವಿದಿತವಾಗಿದೆ ಹಾಗೂ ಶಾಸನಗಳಲ್ಲಿ ನೀರಾವರಿಗೆ ಸಂಬಂಧಿಸಿ ಇಂಥವರ ಖಾಸಗಿ ಪ್ರಯತ್ನಗಳೇ ಸಾಮಾನ್ಯವಾಗಿ ದಾಖಲಾಗಿವೆ ಎಂಬುದು ಕುತೂಹಲಕಾರಿಯಾಗಿದೆ. ಶಾಸನಗಳ ಮೂಲಕವೇ ಕೆರೆ ನೀರಾವರಿಯ ಇತಿಹಾಸವನ್ನು ಕಟ್ಟುವುದಾದರೆ ಈ ಅಂಶವನ್ನು ಗಮನಿಸದಿರುವುದು ಸಾಧ್ಯವಿಲ್ಲ.

ಮಧ್ಯಕಾಲದ ರಾಜ್ಯಗಳಲ್ಲಿ ಸಾಮ್ರಾಜ್ಯದಿಂದ ನಿಯಮಿತವಾದ ಅಧಿಕಾರಿಗಳ ಜೊತೆಗೇ ಪ್ರಾದೇಶಿಕ ಹಾಗೂ ಸ್ಥಾನಿಕ ಮಟ್ಟದಲ್ಲಿ ಬೆಳೆದು ಬಂದ ನಾಳ್ಪ್ರಭು, ಮಾಂಡಲಿಕ, ಮಹಾಮಂಡಲೇಶ್ವರ, ಅರಸ, ಒಡೆಯ, ನಾಯಕ ಮುಂತಾದವರೂ ಕಾಣಿಸಿಕೊಳ್ಳುತ್ತಾರೆ. ಇವರ ಜೊತೆಗೇ ಅಗ್ರಹಾರ, ದೇವಾಲಯ ಮತ್ತು ಮಠಗಳೂ ಪ್ರಬಲವಾಗಿದ್ದವು. ಸಾಮ್ರಾಟರು ಈ ಮೇಲಿನ ಸ್ಥಾನಿಕ ವರ್ಗದವರ ಮಧ್ಯವರ್ತಿತ್ವವನ್ನು ಆಧರಿಸಿ ಪ್ರಾದೇಶಿಕವಾಗಿ ಆಳ್ವಿಕೆಯನ್ನು ರಚಿಸುತ್ತಿದ್ದರು. ಏಕೆಂದರೆ ಸ್ಥಾನಿಕ ಸಮೂಹಗಳ ಹಿತಾಸಕ್ತಿಯ ಸಂಬಂಧಿಸಿ ಬೆಳೆದುಕೊಂಡ ಈ ಆಳುವ ವರ್ಗ ಮೇಲಿನ ಪ್ರಭುತ್ವಗಳ ನೆಲೆಗಳಾಗುತ್ತಾ ಪ್ರಬಲರಾದರು. ಸ್ಥಾನಿಕ ಕೃಷಿ ಸಮೃದ್ಧಿ ಈ ಆಳುವ ವರ್ಗಕ್ಕೆ ನಿರ್ಣಾಯಕವಾಗಿತ್ತು. ಅಂದಿನ ಪ್ರಾದೇಶಿಕ ರಾಜ್ಯಗಳ ನಿರ್ಮಾಣದಲ್ಲಿ ಕೆರೆ ನೀರಾವರಿ ಹಾಗೂ ವ್ಯವಸಾಯ ವಿಸ್ತರಣೆ ವಹಿಸಿದ ಪಾತ್ರವು ಇತಿಹಾಸಕಾರರು ಒಂದು ಒಪ್ಪಿಕೊಂಡ ವಿಚಾರವಾಗಿದೆ. ಹಾಗೂ ನೀರಾವರಿ ವ್ಯವಸ್ಥೆಯನ್ನು ನಿರ್ವಹಿಸಲು ಇಂಥ ಸ್ಥಳೀಯ ಶಕ್ತಿಗಳು ತಮ್ಮ ಅಧಿಕಾರ ಮತ್ತು ಸಂಪನ್ಮೂಲಗಳನ್ನೇ ಬಳಸಿಕೊಂಡಿದ್ದು ಕಂಡುಬರುತ್ತದೆ. ಈ ಪ್ರಾದೇಶಿಕ ವ್ಯವಸ್ಥೆಯೊಳಗೆ ತಮ್ಮ ಪ್ರಭುತ್ವವನ್ನು ಪ್ರವರ್ತಿಸುವ ಮೇಲ್ಮಟ್ಟದ ರಾಜರು ತಮ್ಮದೇ ಅಧಿಕಾರಿ ವರ್ಗವನ್ನೂ ಹೊಂದಿದ್ದರು. ಕೇಂದ್ರೀಕರಣದ ಪ್ರವೃತ್ತಿ ಜಾಸ್ತಿಯಾದಾಗ ಅಧಿಕಾರಿ ವರ್ಗ ಪ್ರಧಾನವಾಗಿ ಶಾಸನಗಳಲ್ಲಿ ಬರುತ್ತದೆ. ವಿಜಯನಗರ ಅರಸರು ಇಂಥ ಪ್ರಯತ್ನದಲ್ಲಿ ನಾಯಕ ವ್ಯವಸ್ಥೆಯನ್ನು ಉಪಯೋಗಿಸಿಕೊಂಡರು. ಅದಕ್ಕೂ ಮೊದಲು ಮಹಾಸಾಮಂತರನ್ನು ಕಾಣುತ್ತೇವೆ. ಅಂಥ ಪ್ರಯತ್ನಗಳಿಲ್ಲದಿದ್ದಾಗ ಪ್ರಾದೇಶಿಕ ಅರಸರೇ ಮಹಾಮಂಡಲೇಶ್ವರರೇ ರಾಜನಿಂದ ಪ್ರಭುತ್ವದ ಬಿರುದನ್ನು ಪಡೆದು ಆಳುತ್ತಿದ್ದರು. ಇಷ್ಟಾಗಿಯೂ ಸಾಮ್ರಾಜ್ಯದ ವಸೂಲಿ ಅಧಿಕಾರಿಗಳಾದ ದಂಡನಾಯಕರು, ಹೆರ್ಗಡೆಗಳು, ಕರಣಗಳು ಮುಂತಾದವರು ಇದ್ದೇ ಇರುತ್ತಿದ್ದರು. ಆದರೆ ಸ್ಥಾನಿಕ ಉತ್ಪಾದನೆ ಪ್ರಾದೇಶಿಕ ಶಕ್ತಿಗಳಿಗೇ ನೇರವಾದ ಕಾಳಜಿಯಾಗಿತ್ತು. ವಿಜಯನಗರ ಕಾಲದ ನಂತರ ಅಗ್ರಹಾರಗಳು ಮತ್ತು ದೇವಾಲಯಗಳು ತಮ್ಮ ಖಾಸಗಿ ಆಸಕ್ತಿಯಿಂದ ನೀರಾವರಿ ಯೋಜನೆಗಳನ್ನು ಭರಿಸಿದ ಉದಾಹರಣೆಗಳು ಶಾಸನಗಳಲ್ಲಿ ಸಿಗುತ್ತವೆ.

ಕೆರೆ ನೀರಾವರಿಯ ಪೋಷಕರು: ಕೀರ್ತಿ ಮತ್ತು ಪುಣ್ಯ

ಇಂಥ ನೇರ ಹಿತಾಸಕ್ತಿಯನ್ನೂ ಗುರುತಿಸಲಾಗದ ಹಲವಾರು ವ್ಯಕ್ತಿಗಳೂ ಕೆರೆಗಾಗಿ ವೆಚ್ಚ ಮಾಡಿದ್ದು ಮತ್ತೂ ಕುತೂಹಲಕಾರಿಯಾಗಿದೆ. ವ್ಯಾಪಾರಿಗಳು, ವಿರಕ್ತರು, ಪ್ರತಿಷ್ಟಿತರು ಹಾಗೂ ವಿಭಿನ್ನ ಹಿನ್ನೆಲೆಯ ಪುರುಷರು, ಸ್ತ್ರೀಯರು ಮುಂತಾದವರು ಧರ್ಮಕಾರ್ಯ ಎಂಬಂತೇ ಈ ಕೆಲಸವನ್ನು ಮಾಡಿದ್ದರು. ಕೆಲ ಸುಪ್ರಸಿದ್ಧ ಉದಾಹರಣೆಗಳೆಂದರೆ ಹೊಂಬುಚದ ಪಟ್ಟಣಸ್ವಾಮಿ ನೊಕ್ಕಯ್ಯ, ಕೆರೆಸಂತೆಯ ಅಲ್ಲಾಳದೇವ, ಕೆರೆಯ ಪದ್ಮರಸ ಮುಂತಾದವರು. ನೊಕ್ಕಯ್ಯನು ನಾಲ್ಕು ಕೆರೆಗಳನ್ನು ಕಟ್ಟಿಸಿದ್ದನು.[3] ೧೫೩೬ರ ಶಾಸನವೊಂದರ ಪ್ರಕಾರ ಬಯಕರ ರಾಮಪ್ಪಯ್ಯನೆಂಬವನು ಹದಿನಾರು ದೊಡ್ಡ ಕೆರೆಗಳನ್ನು ಕಟ್ಟಿಸಿದ್ದನು.[4] ವಿಜಯನಗರ ರಾಜರು ಶ್ರೀಮಂತ ವ್ಯಾಪಾರಿಗಳಿಗೆ ಪುರಗಳನ್ನು ಸ್ಥಾಪಿಸಲು ಹಳ್ಳಿಗಳನ್ನು ನೀಡುತ್ತಿದ್ದರು ಹಾಗೂ ಅಂಥ ಶ್ರೀಮಂತರು ಕೆರೆಗಳನ್ನೂ ಆ ಪಟ್ಟಣಗಳ ಆಸುಪಾಸಿನಲ್ಲಿ ನಿರ್ಮಿಸುತ್ತಿದ್ದರು. ಅಳಗಿಸೆಟ್ಟಿಯೆಂಬವನು ಈ ರೀತಿ ಬೆಟ್ಟಹಳ್ಳಿ ಎಂಬಲ್ಲಿ ಎರಡು ಕೆರೆಗಳನ್ನು ಕಟ್ಟಿಸಿದನು.[5] ಕೆರೆಯನ್ನು ಕಟ್ಟಿದವರ ಪಟ್ಟಿಯಲ್ಲಿ ತಳವಾರ, ಮಾವುತ, ನಟಿ, ವೇಶ್ಯೆ, ಮುಂತಾದವರಲ್ಲದೇ ವಿರಾಗಿಗಗಳು ಮತ್ತು ಶರಣರೂ ಸೇರಿದ್ದಾರೆ. ಅಂದರೆ ಕೆರೆ ಕಟ್ಟುವ ವೆಚ್ಚವನ್ನು ಕೃಷಿಕರಲ್ಲದ ವರ್ಗದಿಂದ ಹರಿಸುವ ಒಂದು ತಾತ್ವಿಕತೆ ಕೂಡ ಪ್ರಚಲಿತದಲ್ಲಿತ್ತು.

ಕೆರೆ ನೀರಾವರಿಗೆ ಸಂಬಂಧಿಸಿ ಆರ್ಥಿಕತೆಗೆ ಸಂಬಂಧಿಸಿದ ದೃಷ್ಟಿ ಅದರ ಹುಟ್ಟುವಳಿಯನ್ನು ನೇರವಾಗಿ ಅನುಭವಿಸಿದವರಿಗೆ ಪ್ರಧಾನವಾಗಿತ್ತು. ಆದರೆ ಇದರಲ್ಲಿ ತೊಡಗಿಸಿಕೊಂಡ ದಾತರಿಗೆ ಇನ್ನಿತರ ಕೆಲ ಅಂಶಗಳೇ ಪ್ರಧಾನವಾಗಿದ್ದವು. ಅದರಲ್ಲಿ ಸಾಮಾಜಿಕ ಪ್ರತಿಷ್ಟೆಯನ್ನುಮ ಕೀರ್ತಿಯನ್ನು ಗಳಿಸುವುದು ಹಾಗೂ ಧರ್ಮವನ್ನು ಆಚರಿಸುವುದು ಮುಖ್ಯವಾಗಿದ್ದವು. ಕೆರೆಕಟ್ಟಿಸುವುದು ಒಂದು ಹೆಗ್ಗಳಿಕೆಯಾಗಿತ್ತು ಎಂಬುದು ಆ ಸಂಬಂಧಿಸಿ ಶಾಸನಗಳಲ್ಲಿ ನೀಡಿದ ವಿಶೇಷ ವಿವರಣೆಗಳಿಂದ ವ್ಯಕ್ತವಾಗುತ್ತದೆ. ಅಂದರೆ ಕೆರೆ ಕಟ್ಟಿದ್ದನ್ನು ದಾಖಲಿಸಲೆಂದೇ ದಾತರು ತಮ್ಮ ಖಾಸಗಿ ಹೆಸರುಗಳನ್ನು ಹಾಗೂ ಬಂಧುಗಳ ಹೆಸರುಗಳನ್ನೂ ಇಂಥ ಕೆರೆಗಳಿಗೆ ಇಡುತ್ತಿದ್ದರು. ಶಾಸನಗಳಲ್ಲಿ ಪರೋಕ್ಷವಾಗಿ ಬರುವ ಕೆರೆಯ ಹೆಸರುಗಳಲ್ಲಿ ಕೂಡ ಅನೇಕವು ವ್ಯಕ್ತಿ ನಾಮದಿಂದ ಗುರುತಿಸಲ್ಪಟ್ಟಿವೆ. ಕಟ್ಟಿದವರ ಹೆಸರು ಅಥವಾ ಅದಕ್ಕೆ ಆಶ್ರಯ ನೀಡಿದ ರಾಜರ ಹೆಸರನ್ನು ಅವುಗಳಿಗೆ ಇಡುವುದು ಹೆಚ್ಚು ಪ್ರಚಲಿತದಲ್ಲಿತ್ತೆಂದು ತೋರುತ್ತದೆ. ಹಿಂದೆ ಉಲ್ಲೇಖಿಸಿದ ರಾಮಪ್ಪಯ್ಯನು ಕಟ್ಟಿಸಿದ ೧೬ ಕೆರೆಗಳೂ ಆತನ ಹೆಸರು, ರಾಜನ ಹೆಸರು ಹಾಗೂ ಆತನ ಬಂಧುಗಳ ಹೆಸರನ್ನು ಹೊತ್ತಿದ್ದವು. ಕರ್ನಾಟಕದಲ್ಲಿ ಕೆರೆಗಳನ್ನು ಸಮುದ್ರ ಎಂದು ಕರೆದಿರುವುದೂ ಅವುಗಳ ಕುರಿತ ಅವಾಸ್ತವ ಹೆಗ್ಗಳಿಕೆಯನ್ನು ಎತ್ತಿ ತೋರಿಸುತ್ತದೆ. ಅದರಲ್ಲೂ ರಾಜರು ಇದನ್ನೊಂದು ರಾಜತ್ವದ ಘನತೆಯನ್ನೂ, ಔದಾರ್ಯವನ್ನೂ ಎತ್ತಿ ಹಿಡಿಯುವ ಕಾರ್ಯವನ್ನಾಗಿ ಗ್ರಹಿಸಿದ್ದು ಕಂಡುಬರುತ್ತದೆ.

ಕೆರೆ ಕಟ್ಟಿಸುವುದು ಹಾಗೂ ರಿಪೇರಿ ಮಾಡುವುದನ್ನು ಸದ್ಗತಿಯನ್ನು ನೀಡುವ ಧರ್ಮಕಾರ್ಯ ಎಂದು ಶಾಸನಗಳೂ, ಧರ್ಮಶಾಸ್ತ್ರಗಳೂ ಪ್ರತಿಪಾದಿಸುತ್ತವೆ. ಕೆರೆಗಳು ಜೀವನಾಧಾರ ಹಾಗೂ ಸಮೃದ್ಧಿಗೆ ಕಾರಣ ಎಂಬ ತಿಳುವಳಿಕೆಯೇ ಈ ತಾತ್ವಿಕತೆಯ ಹಿಂದಿದ್ದುದೂ ಶಿವ ಶರಣ ಸಿದ್ಧರಾಮನ ಪ್ರಸಂಗದಿಂದ ವಿದಿತವಾಗುತ್ತದೆ.[6] ಆತನು ದೇವಾಲಯವನ್ನು ಕಟ್ಟಿಸುವುದಕ್ಕಿಂತ ಕೆರೆ ಕಟ್ಟಿಸುವುದೇ ನಿಜವಾದ ಧರ್ಮ ಎಂದು ಪ್ರತಿಪಾದಿಸಿದನು. ಆದರೆ ಸಾಮಾನ್ಯವಾಗಿ ಜನರು ಇದನ್ನೊಂದು ಪುಣ್ಯಕಾರ್ಯ ಎಂಬಂತೇ ಆಚರಿಸಿದ್ದರು. ಹಾಗಾಗಿ ಕೆರೆ ಹಾಗೂ ದೇವಾಲಯಗಳನ್ನು ತಾವು ಕಟ್ಟಿಸಿದ್ದೇವೆಂದು ಒಟ್ಟೊಟ್ಟಿಗೇ ಶಾಸನಗಳಲ್ಲಿ ಹೇಳಿಕೊಳ್ಳುತ್ತಿದ್ದರು. ಕೆರೆಯನ್ನು ಕಟ್ಟಿಸಿ ಅದರ ಮಗ್ಗುಲಲ್ಲೊಂದು ದೇವಾಲಯವನ್ನು ಕಟ್ಟಿಸಿದ ಉದಾಹರಣೆಗಳ ಜೊತೆಗೇ ದೇವಾಲಯದ ವಿಧಿಗಳಿಗಾಗಿ ಹಾಗೂ ನಿರ್ವಹಣೆಗಾಗಿ ರಾಜರಲ್ಲಿ ನಿವೇದಿಸಿ ದಾನ ಪಡೆದು ಕೆರೆ ಕಟ್ಟಿಸಿದ ಪ್ರಸಂಗಗಳೂ ಇದ್ದವು.[7] ಈ ಕೆಲಸಗಳೆಲ್ಲ ದೇವಾಲಯವನ್ನೋ, ಕೆರೆಯನ್ನೋ ಕಟ್ಟಿಸುವಷ್ಟಕ್ಕೇ ಉದ್ದೇಶಿತವಾಗದೇ ಅಂತಿಮವಾಗಿ ತಮಗೆ, ತಮ್ಮ ಬಂಧುಗಳಿಗೆ, ಸ್ವಾಮಿಗಳಿಗೆ ಸದ್ಗತಿ ಪಡೆಯುವುದಕ್ಕಾಗಿದ್ದವು. ದೇವಾಳಯ ಸಂಸ್ಥೆಗಳಿಂದ ಕೆರೆಗಳಿಗೆ ಭೌತಿಕವಾಗಿ ಇದ್ದ ಪ್ರಯೋಜನಕ್ಕಿಂತ ದೇವಾಳಯಗಳಿಗೇ ಕೆರೆಗಳ ಪ್ರಯೋಜನವಿತ್ತು. ಮಧ್ಯಕಾಳದ ಕೆರೆಗಳ ನೀರಾವರಿಯನ್ನು ಆಧರಿಸಿ ದೇವಾಳಯ ಸಂಸ್ಥೆಗಳು ಬೆಳೆದವು. ರಾಜ್ಯದ ದಾನದಿಂದ ಭೂ ಒಡೆಯರಾದ ಅವು ತಮ್ಮ ಭೂಮಿಯ ಅಭಿವೃದ್ಧಿಗಾಗಿ ನೀರಾವರಿ ಯೋಜನೆಗಳನ್ನು ಹಮ್ಮಿಕೊಂಡವು. ಅವು ಅದನ್ನೊಂದು ಧರ್ಮಕಾರ್ಯ ಎಂಬ ಪಾರಮಾರ್ಥಿಕತೆಯಲ್ಲಿ ನೋಡುವ ಅಗತ್ಯ ಇರಲಿಲ್ಲ.

ದೇವಾಲಯ ಮತ್ತು ಕೆರೆಗಳನ್ನು ದಾತರು ಒಂದೇ ರೀತಿಯ ಧರ್ಮಕಾರ್ಯ ಎಂದು ಗ್ರಹಿಸಿದ್ದರು. ಇಂಥ ದಾತರಿಂದ ಒಟ್ಟಾರೆ ಎಷ್ಟು ಪ್ರಮಾಣದ ಪ್ರಯೋಜನವಾಯಿತು ಎಂಬುದು ಗೊತ್ತಾಗುವುದಿಲ್ಲ. ಆದರೆ ಧರ್ಮ ಕಲ್ಪನೆ ಕೆರೆಗಳ ಸಂಬಂಧಿಸಿ ರಚನಾತ್ಮಕ ವಾಗಿದ್ದದ್ದು ಸ್ಪಷ್ಟ. ಧರ್ಮ ಶಾಸ್ತ್ರಗಳು ಈ ಧರ್ಮವನ್ನು ಎಲ್ಲರಿಗೂ ನಿರ್ದೇಶಿಸುತ್ತವೆ ಯಾದರೂ, ಅನ್ಯ ಸದ್ಗತಿಯ ಮಾರ್ಗಗಳು ವರ್ಣಧರ್ಮದಲ್ಲಿ ಕಡಿಮೆ ಇರುವ ಶೂದ್ರ ವರ್ಣಕ್ಕೆ ಇದೊಂದು ಸವಲತ್ತು ಎಂಬ ವಿಶೇಷ ಸೂಚನೆಯೂ ಅವುಗಳಲ್ಲಿದೆ. ಕೆರೆಗಳನ್ನು ಕಟ್ಟುವುದು ಧರ್ಮಶಾಸ್ತ್ರಗಲ್ಲಿ ರಾಜ ಧರ್ಮ, ಶ್ರೇಣಿ ಧರ್ಮ, ಕುಲ, ಗಣಗಳ ಧರ್ಮಗಳಲ್ಲಿ ಸೇರಿಸಲ್ಪಟ್ಟಿವೆ. ಈ ಧರ್ಮವು ಪೂರ್ತಧರ್ಮ ಎಂದು ಕರೆಯಲ್ಪಟ್ಟಿದೆ.[8] ಪೂರ್ತದಲ್ಲಿ ವಾಪಿ, ಕೂಪ, ತಟಾಕ, ದೇವಾಲಯ, ಆರಾಮ, ಬಡವರಿಗೆ, ಬ್ರಾಹ್ಮಣರಿಗೆ ಮನೆ ಕಟ್ಟಿಸುವುದು, ಅನ್ನದಾನ ಮಾಡುವುದು ಮುಂತಾದವು ಸೇರಿವೆ. ಪೂರ್ತವು ವೇದಾಧಿಕಾರವಿಲ್ಲದ ಶೂದ್ರರಿಗೆ ಧರ್ಮಸಾಧನ; ಯಜ್ಞ ಯಾಗಾದಿ ಮುಂತಾದವು ಇಷ್ಟಧರ್ಮಗಳಾಗಿದ್ದುದರಿಂದ ಅವುಗಳಿಂದ ಕೇವಲ ಸ್ವರ್ಗ ಸಿಗುತ್ತದೆಯಾದರೆ ಪೂರ್ತದಿಂದ ಮೋಕ್ಷವೇ ಸಿಗುತ್ತವೆ ಎಂದು ಕೆಲ ಸ್ಮೃತಿಗಳು ಸಾರುತ್ತವೆ. ಶ್ರೇಣಿಗಳಿಗೂ ದೇವಾಲಯ, ಭಾವಿ, ಕೆರೆಗಳನ್ನು ಕಟ್ಟಿಸಿದ್ದಂತೂ ಶಾಸನಗಳಲ್ಲಿ ನಿದರ್ಶಿತವಾಗಿದೆ. ಇವೆಲ್ಲ ಸೂಚಿಸುವಂತೇ ವ್ಯಕ್ತಿಗಳಿಗೆ ಧಾರ್ಮಿಕ ಸ್ಥಾನಮಾನಗಳನ್ನು ಗಳಿಸಲು ಇಂಥ ಕಾರ್ಯಗಳು ಸಾಧನವಾಗಿದ್ದವು.

ಹೀಗೆ ಮಧ್ಯಕಾಲದ ತಾತ್ವಿಕತೆ ಪ್ರಯೋಜನದ ತೀರ ಅಮೂರ್ತ ಕಲ್ಪನೆಗಳನ್ನು ಆವಿಷ್ಕರಿಸಿ ಅವನ್ನು ಕೂಡ ಭೌತಿಕ ಅಗತ್ಯಗಳನ್ನಾಗಿ ಪರಿವರ್ತಿಸಿ ಕೆರೆಕಟ್ಟುವ ಕೆಲಸವನ್ನು ನೇರವಾಗಿ ಪ್ರಯೋಜನದ ದೃಷ್ಟಿ ಕೆರೆ ಕಟ್ಟುವುದರಲ್ಲಿ ಮಹತ್ವದ ಪಾತ್ರ ವಹಿಸಿರಲಿಲ್ಲ ಎಂದಲ್ಲ. ಅನೇಕ ದೃಷ್ಟಾಂತಗಳಲ್ಲಿ ಕೆರೆಯ ಕೆಳಗಿನ ಭೂಮಿ ಅಥವಾ ಕೊಡುಗೆಗಾಗಿ ಕೆರೆಗಳನ್ನ ವ್ಯಕ್ತಿಗಳು ನಿರ್ಮಿಸಿದ್ದರು. ಬಹುಶಃ ದಾಖಲೆಯೇ ಇಲ್ಲದ ಅಸಂಖ್ಯಾತ ಕೆರೆಗಳನ್ನು ಆರ್ಥಿಕ ಪ್ರಯೋಜನಕ್ಕಾಗೇ ಕಟ್ಟಿಸಿದ್ದರಬಹುದು. ಅದರಲ್ಲಿ ದಾಖಲಿಸಬಹುದಾದಂಥ ಧರ್ಮ ಇಲ್ಲದ್ದರಿಂದ ಅವುಗಳ ದಾಖಲೆ ಇಲ್ಲ. ಹಾಗೂ ಅಂಥ ಕಾರ್ಯಗಳಿಗೆ ಕಾರಣಗಳೂ ಸ್ಪಷ್ಟವಾಗಿವೆ. ಕೆರೆಗಳ ಸಂಬಂಧಿಸಿ ಕೇಂದ್ರ ನಿರ್ದೇಶಿತ ಕಾರ್ಯಕ್ರಮವೊಂದು ಇಲ್ಲದ ಪ್ರಭುತ್ವದಲ್ಲಿ ಅವುಗಳು ಹೇಗೆ ಕಟ್ಟಿ ಉಳಿದು ಬಂದವು ಎಂಬ ಕುರಿತು ಇವೆಲ್ಲ ವಿವರಣೆಗಳಾಗಬಹುದಷ್ಟೆ. ಕ್ರಿ.ಶ.೧೮೦೦ ರಲ್ಲಿ ಬುಕಾನನ್ ಕರ್ನಾಟಕದಲ್ಲಿ ಪ್ರವಾಸಮಾಡುವಾಗ ಕೆರೆ ಕಟ್ಟಿಸಿದ ಶ್ರೀಮಂತರಿಗೆ ಕೆರೆ ಕೆಳಗಿನ ಭೂಮಿಯನ್ನು ಅನುವಂಶಿಕವಾಗಿ ನೀಡುವ ಪರಿಪಾಠ ಇದ್ದುದನ್ನು ತಿಳಿಸುತ್ತಾನೆ.[9]ಸಾಂಪ್ರದಾಯಿಕವಾಗಿ ನೀರ್ಗಂಟಿ ಎಂಬ ಆಯಗಾರನೊಬ್ಬ ನೀರಿನ ಹಂಚಿಕೆಗಾಗಿ ಹಳ್ಳಿಗಳಲ್ಲಿ ಇರುತ್ತಿದ್ದನು.

ಉಪಸಂಹಾರ

ಈ ಮೇಲಿನ ವಿವರಗಳಿಂದ ಸ್ಪಷ್ಟವಾಗುವುದೆಂದರೆ ಚಾರಿತ್ರಿಕವಾಗಿ ಕೆರೆ ನೀರಾವರಿ ಸ್ಥಳೀಯ ಹಿತಾಸಕ್ತಿಯ ಗುಂಪುಗಳ ಪಾಲ್ಗೊಳ್ಳುವಿಕೆಯಲ್ಲಿ ಉಳಿದು ಬಂದ ಒಂದು ವ್ಯವಸ್ಥೆ. ರಾಜ್ಯಗಳು ಈ ವ್ಯವಸ್ಥೆಯನ್ನು ಮಾನ್ಯ ಮಾಡಿ ಪೋಷಕರಾಗುವ ಮೂಲಕ ಕರವಸೂಲಿಯ ಅಧಿಕಾರವನ್ನು ಹೊಂದುತ್ತಿದ್ದವು. ವೈಯಕ್ತಿಕವಾಗಿ ಕೆರೆಗಳ ನಿರ್ಮಾಣವನ್ನು ಕೆಲವೊಮ್ಮೆ ಮಾಡುವುದು ಹಾಗೂ ಇತರ ನಿರ್ಮಾತೃಗಳನ್ನು ಪೋಷಿಸಿ ಕೊಡುಗೆಗಳನ್ನು ಮಾನ್ಯ ಮಾಡುವುದು ಇವುಗಳನ್ನು ಬಿಟ್ಟರೆ ಅದರಾಚೆಗೆ ಒಂದು ಪ್ರತ್ಯೇಕ ನೀರಾವರಿ ಕಾಮಗಾರಿ ಹಾಗೂ ಆಡಳಿತ ರಾಜ್ಯಕ್ಕೆ ಇದ್ದುದು ಕಂಡುಬರುವುದಿಲ್ಲ. ರಾಜ್ಯದ ಕರದಲ್ಲೂ ಒಂದು ಭಾಗ ಕೆರೆಗಳ ರಿಪೇರಿಗೆ ಬಳಕೆಯಾಗುವ ಉದಾಹರಣೆಗಳು ಸೂಚಿಸುವಂತೇ ರಾಜ್ಯವು ಈ ರೂಪದಲ್ಲಿ ಕೆರೆಗಳ ಸಲುವಾಗಿ ತನ್ನ ಪಾಲನ್ನೂ ಕಡಿತಗೊಳಿಸಲು ತಯಾರಿತ್ತು. ಆದರೆ ಇದಕ್ಕೆ ಪ್ರೇರಣೆ ಸ್ಥಳೀಯರಿಂದಲೇ ಬರುತ್ತಿಲ್ಲದೇ ಕೆರೆಗಳ ನಿರ್ವಹಣೆಯನ್ನು ಸಂಬಂಧಪಟ್ಟವರೇ ನಡೆಸುತ್ತಿದ್ದರು. ಅದರೆ ಇಲ್ಲಿ ಸಂಬಂಧಪಟ್ಟವರು ರಾಜ್ಯವನ್ನು ಕೆರೆ ನೀರಾವರಿಯಲ್ಲಿ ತೊಡಗಿಸುತ್ತಿದ್ದರು ಹಾಗೂ ರಾಜ್ಯ ತನ್ನದೇ ಆದ ಲಾಭಗಳಿಗಾಗಿ ಅದರಲ್ಲಿ ತೊಡಗಿಕೊಂಡಿತ್ತು. ಇತಿಹಾಸದುದ್ದಕ್ಕೂ ರಾಜ್ಯ, ಸಾಮ್ರಾಜ್ಯಗಳ ಆಳ್ವಿಕೆಗಳು ಮನೆತನಗಳ ಮೂಲಕ ಬದಲಾದಂತೆ ಕೆರೆ ನೀರಾವರಿ ವ್ಯವಸ್ಥೆ ಬದಲಾಗಲಿಲ್ಲ. ಬದಲಾಗಿ ಕೆರೆಗಳ ನಿರ್ವಹಣೆಯ ವ್ಯವಸ್ಥೆ ಸ್ಥಳೀಯ ಗ್ರಾಮಾಡಳಿತ ವ್ಯವಸ್ಥೆಯ ಸ್ವರೂಪ ಬದಲಾದಂತೆ ಬದಲಾಗುತ್ತ ಬಂದಿವೆ. ಕೆಲ ಮಹತ್ವಾಕಾಂಕ್ಷೀ ರಾಜರ ಕಾಲದಲ್ಲಿ ಹೆಚ್ಚು ಕೇಂದ್ರೀಕರಣದ ಪ್ರಯತ್ನಗಳು ನಡೆದರೂ ಸ್ಥಳೀಯ ವ್ಯವಸ್ಥೆಗಳು ಅವರ ಆಡಳಿತ ಮಧ್ಯವರ್ತಿಗಳಾಗಿ ಪರಿವರ್ತಿತವಾಗುತ್ತಿದ್ದವು. ಈ ಸ್ಥಳೀಯ ಘಟಕಗಳ ಮುಂದಾಳತ್ವ ಪ್ರಭುತ್ವಕ್ಕೆ ತಕ್ಕಂತೇ ಬದಲಾಗಿರಬಹುದು, ಆದರೆ ಅವುಗಳ ಕಾರ್ಯವೈಖರಿಯ ಬದಲಾವಣೆಗೆ ಅದೊಂದು ಮಾಧ್ಯಮವಾಗಲಿಲ್ಲ.

೧೯ನೇ ಶತಮಾನದಲ್ಲಿ ಇಂಥ ಸ್ಥಾನಿಕ ಮಧ್ಯವರ್ತಿಗಳನ್ನು ಹಾಗೂ ಹಿತಾಸಕ್ತಿಯನ್ನು ಕಡೆಗಣಿಸಿದ್ದು ಕೆರೆಗಳ ಅವನತಿಗೆ ಕಾರಣವಾಯಿತು ಎಂಬ ವಾದ ಅಂಕಿ ಅಂಶಗಳ ವಿವರಗಳಿಂದ ಸಿದ್ಧವಾಗುವುದಿಲ್ಲ. ಆದರೆ ಕೆರೆಗಳ ಸಂಖ್ಯೆಯನ್ನು ಬೆಳೆಸಿದ ಮಾತ್ರಕ್ಕೇ ತನ್ನ ಅಭಿವೃದ್ಧಿ ಕಾರ್ಯಕ್ರಮ ಸಫಲವಾದ ಹಾಗಲ್ಲ ಎಂಬ ಸತ್ಯ ಕೇಂದ್ರೀಕೃತ ಪ್ರಭುತ್ವಕ್ಕೆ ಹೊಲಬಾಯಿತು. ಆಧುನಿಕ ಮೈಸೂರಿನಲ್ಲಿ ನಮಗೆ ಸಿಗುವ ಲೆಕ್ಕದ ಪ್ರಕಾರ ೧೮೪೬ ರಿಂದ ೧೯೦೫ರ ಅವಧಿಯಲ್ಲಿ ಕೆರೆಗಳ ಸಂಖ್ಯೆ ಹಾಗೂ ಒಟ್ಟು ನೀರಾವರಿ ಕ್ಷೇತ್ರ ದ್ವಿಗುಣವಾದವು. ೧೮೪೬ರಲ್ಲಿ ೨೦,೦೦೦ ಇದ್ದ ಕೆರೆಗಳು ೧೯೦೨ರಲ್ಲಿ ೩೯,೦೦೦ ಆದವು ಹಾಗೂ ಕೃಷಿಕ್ಷೇತ್ರ ೧೮೩೭-೩೮ ರಲ್ಲಿ, ೩,೪೧, ೦೩೦ ಎಕರೆ ಇದ್ದದ್ದು ೧೯೦೫-೬ ರಲ್ಲಿ ೫,೦೬,೮೮ ಎಕರೆ ಇತ್ತು.[10] ೧೯ನೇ ಶತಮಾನದಲ್ಲಿ ಕೇಂದ್ರೀಕರಣದಿಂದ ಉಂಟಾದ ಮುಖ್ಯ ಸಮಸ್ಯೆ ರಾಜ್ಯದ ಎಲ್ಲ ಕೆರೆಗಳನ್ನೂ ನಿರ್ವಹಿಸುವುದು ನಷ್ಟದ ಉದ್ದಿಮೆ ಎಂಬುದಾಗಿತ್ತು. ಶೇಷಾದ್ರಿ ಐಯರ್ ಅವರೂ ಜನರ ಸಹಭಾಗಿತ್ವ ರಾಜ್ಯದ ಈ ಹೊರೆಯನ್ನು ಕಡಿಮೆ ಮಾಡಲು ಒಂದು ಸಾಂಪ್ರದಾಯಿಕ ಪರಿಹಾರ ಎಂಬರ್ಥದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಆದರೆ ಅದಾಗಲೇ ಕೆರೆ ನೀರಾವರಿ ೧೯೦೦ ರಲ್ಲಿದ್ದುದಕ್ಕಿಂತ ದುಪ್ಪಟ್ಟು ವಿಸ್ತಾರವಾಗಿತ್ತು. ಅವುಗಳನ್ನು ರಿಪೇರಿ ಮಾಡಿ ನಿರ್ವಹಿಸುವುದು ರಾಜ್ಯಕ್ಕೆ ಅಸಾಧ್ಯವಾದಂತೆ ಅವು ರಾಜ್ಯಕ್ಕೆ ಆರ್ಥಿಕ ಲಾಭಗಳಲ್ಲ ಎಂಬ ತಿಳುವಳಿಕೆಯೂ ಬಂದಿತು. ಅಂದರೆ ಕೆರೆಗಳ ಸಂಖ್ಯೆ ಜಾಸ್ತಿಯಾದರೆ ಅವುಗಳನ್ನು ರಿಪೇರಿ ಮಾಡಿ ನಿರ್ವಹಿಸುವ ರಾಜ್ಯಕ್ಕೆ ಅದು ಲಾಭದಾಯಕವಾಗುವುದರ ಬದಲು ಹೆಚ್ಚೆಚ್ಚು ಹೊರೆಯಾಗುತ್ತದೆ. ಕೇಂದ್ರೀಕೃತವಾಗಿ ಅವನ್ನು ನಿರ್ವಹಿಸಬಹುದೆಂಬ ಆಧುನಿಕ ಲೆಕ್ಕಾಚಾರ ವಿಫಲವಾಗಿದ್ದಂತೂ ಸ್ಪಷ್ಟ. ಕೆರೆ ನೀರಾವರಿಯಲ್ಲಿ ಸ್ಥಳೀಯ ನಿರ್ಣಯ ಹಾಗೂ ನಿರ್ವಹಣೆಯ ವ್ಯವಸ್ಥೆ ಇಲ್ಲದಿದ್ದರೆ ಅದು ಬಾಳುವಂತೇ ಮಾಡಲು ಕೇಂದ್ರೀಕೃತ ಪ್ರಭುತ್ವಕ್ಕೆ ಅಂಥ ಆಮಿಷಗಳೂ ಇಲ್ಲ ಹಾಗೂ ಅದರ ಶೈಲಿಗೆ ಅದು ಸಾಧ್ಯವೂ ಇಲ್ಲ ಎಂಬುದು ರಾಜ್ಯ ವ್ಯವಸ್ಥೆಗೂ ಅನುಭವ ವೇದ್ಯವಾಗಿದೆ.

ಪ್ರಭುತ್ವವು ೧೯ನೇ ಶತಮಾನದ ಅಂತ್ಯ ಭಾಗದಲ್ಲಿ ಸ್ಥಳೀಯರನ್ನು ಒಳಗೊಳ್ಳಲು ಅನೇಕ ಪ್ರಯೋಗಗಳನ್ನು ಕೂಡ ನಡೆಸಿತು. ಅದರಲ್ಲಿ ೩೦೦ ರೂಪಾಯಿಗಿಂತ ಕಡಿಮೆ ಕಂದಾಯವನ್ನು ನೀಡುವ ಕೆರೆಗಳನ್ನು ರೈತರ ಉಸ್ತುವಾರಿಗೆ ವಹಿಸಲಾಯಿತು. ೩೦೦ ರೂಪಾಯಿಗಳಿಗಿಂತ ಹೆಚ್ಚಿನವುಗಳನ್ನು ಸರ್ಕಾರದ ಲೋಕೋಪಯೋಗಿ ವಿಭಾಗಕ್ಕೆ ತೆಗೆದುಕೊಳ್ಳಲಾಯಿತು.[11] ಇಲ್ಲಿ ಸಣ್ಣ ಕೆರೆಗಳು ಸರ್ಕಾರಕ್ಕೆ ಆರ್ಥಿಕ ಹೊರೆ ಎಂಬ ಲೆಕ್ಕಾಚಾರವೇ ಪ್ರಧಾನವಾಗಿರುವುದನ್ನು ಗಮನಿಸಬಹುದು. ಆದರೆ ಕೇಂದ್ರೀಕೃತ ಸರ್ಕಾರದ ಉದ್ಧೇಶಕ್ಕೆ ತಕ್ಕಂತೆ ಸ್ಥಳೀಯ ಜನರನ್ನು ತೊಡಗಿಸಲು ಅದು ವಿಫಲವಾಯಿತು. ಕೆರೆ ನೀರಾವರಿಗೆ ಹಾಗೂ ಅದರ ಅಭಿವೃದ್ಧಿಯ ಕಾರ್ಯಕ್ರಮದ ಮಿತಿಗಳನ್ನು ಕೂಲಂಕಷವಾಗಿ ಅರಿಯುವ ಪ್ರಯತ್ನಗಳು ಇನ್ನೂ ನಡೆಯಬೇಕಿತ್ತು. ಬದಲಾಗಿ ಸರ್ಕಾರಕ್ಕೆ ಅಂಥ ಪ್ರಯೋಗಗಳೇ ಅಪ್ರಸ್ತುತವೆನ್ನಿಸಿತು. ಇದರ ಪರಿಣಾಮವಾಗಿ ೧೯ನೇ ಶತಮಾನದ ಅದಿಭಾಗದಲ್ಲಿ ಸಣ್ಣ ಕೆರೆಗಳನ್ನು ಉಪೇಕ್ಷಿಸಿ ದೊಡ್ಡ ಕೆರೆಗಳು ಹಾಗೂ ಬೃಹತ್ ನೀರಾವರಿಯತ್ತ ತಮ್ಮ ಲಕ್ಷ್ಯವನ್ನು ಕೇಂದ್ರೀಕರಿಸಿದರು. ಬಹುಶಃ ಸಣ್ಣ ಕೆರೆಗಳ ಅವನತಿ ಅಷ್ಟರ ನಂತರ ಪ್ರಾರಂಭವಾಯಿತು. ಅಂದರೆ ಅವನ್ನು ಉಳಿಸಿಕೊಂಡು ಬಂದ ಸ್ಥಳೀಯ ವ್ಯವಸ್ಥೆಯನ್ನು ಆಕ್ರಮಿಸಿದ ಸರ್ಕಾರ ಪರಿಣಾಮಕಾರೀ ಬದಲೀ ವ್ಯವಸ್ಥೆಯನ್ನು ರೂಪಿಸಲು ವಿಫಲವಾಗಿ ನಿರಾಸಕ್ತಿ ತಳೆಯಿತು. ಈ ಕಾರ್ಯಕ್ರಮ ಈಗ ಎಲ್ಲಿಗಿ ಬಂದು ಮುಟ್ಟಿದೆಯೆಂದರೆ ಇಂದು ಕೆರೆಗಳಿಗಿಂತ ಅದನ್ನು ನಿರ್ವಹಿಸುವ ಸರ್ಕಾರೀ ಯಂತ್ರವೇ ಸರ್ಕಾರಕ್ಕೆ ಒಂದು ದೊಡ್ಡ ಹೊರೆಯಾಗಿದೆ.

ಇಂಥ ಪ್ರಯೋಗಗಳು ಪ್ರಾರಂಭವಾಗಿ ಹೆಚ್ಚು ಕಡಿಮೆ ೨೦೦ ವರ್ಷಗಳೆ ಗತಿಸಿವೆ. ೧೯೮೮-೮೯ರಲ್ಲಿ ಕೆರೆ ನೀರಾವರಿ ಕೃಷಿ ಕ್ಷೇತ್ರ ೬,೨೪,೭೧೭ ಎಕರೆ ಇತ್ತು. ಅಂದರೆ ೧೯೦೫ ರಿಗಿಂತ ಒಂದು ಲಕ್ಷ ಎಕರೆಗೂ ಜಾಸ್ತಿ. ಆದರೆ ಅದೇ ವೇಳೆಗೆ ಕಾಲುವೆ ನೀರಾವರಿ ಬೃಹತ್ ಯೋಜನೆಗಳಿಂದಾಗಿ ೪೦೦% ಹೆಚ್ಚಾಗುತ್ತದೆ. ಅಂದರೆ ಇಂದು ನೀರಾವರಿಗೆ ಒಳಪಟ್ಟ ಭೂಮಿಯ ವಿಸ್ತಾರವನ್ನು ಯಾವ ಐತಿಹಾಸಿಕ ಕಾಲದಲ್ಲೂ ಕಾಣಲು ಸಾಧ್ಯವಿಲ್ಲ ಎಂಬುದನ್ನು ಕೂಡ ಗಮನಿಸಬೇಕು. ಇದರ ಜೊತೆಗೇ ಕಾಲುವೆ ನೀರಾವರಿಗೆ ಒಳಪಡದ ಭಾಗದಲ್ಲಿ ಕೊಳವೆ ಭಾವಿಗಳ ಮೂಲಕ ಅಂತರ್ಜಲದ ಉಪಯೋಗ ಪರಿಣಾಮಕಾರಿಯಾಗಿ ಆಗುವುದರಿಂದ ಇದ್ದ ಕೆರೆಗಳೂ ಕೃಷಿಕರ ಹಿತಾಸಕ್ತಿಗೆ ಅಪ್ರಸ್ತುತವಾಗುತ್ತಿವೆ. ಬಹುಶಃ ಕೆರೆಗಳ ಅವನತಿಗೆ ಕೊಳವೆ ಭಾವಿಗಳೇ ನಿರ್ಣಾಯಕವಾಗಿವೆ. ಇವೆಲ್ಲದರ ಜೊತೆಗೇ ಜನಸಂಖ್ಯೆಯ ಹೆಚ್ಚಳದಿಂದ ಹಾಗೂ ಸರ್ಕಾರಿ ನೀತಿಗಳಿಂದ ಕೆರೆಗಳ ಅಂಗಳಗಳು ಕೃಷಿ ಭೂಮಿಗಳೊ ಇಲ್ಲ ಸೈಟುಗಳೊ ಆಗಿ ಪರಿವರ್ತನೆಯಾಗಿವೆ. ಇಂದಿನ ಮಾರುಕಟ್ಟೆ ಪ್ರೋತ್ಸಾಹದಾಯಕವಾಗಿಲ್ಲ. ನಗರಗಳ ಪ್ರದೇಶದಲ್ಲಿ ಹಾಗೂ ಕೃಷಿ ಪ್ರದೇಶದಲ್ಲಿ ಹೀಗೆ ಕೆರೆಗಳು ಜನರ ಬದಲಾದ ಹಿತಾಸಕ್ತಿಯಿಂದಲೇ ಮಾಯವಾಗುತ್ತಿವೆ. ಇವೆಲ್ಲ ತೀರ ಈಚೆಗಿನ ಫಲಾನುಭವಿಗಳ ಸಮಸ್ಯೆಗಳು. ಈ ಕೆರೆಗಳನ್ನೆಲ್ಲ ಉಳಿಸಿಕೊಂಡು ಬರುವುದು ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ ಹಾಗೂ ಸರ್ಕಾರದ ವೆಚ್ಚಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರಿ ಯಂತ್ರ ವಿಫಲವಾಗುತ್ತಿರುವುದೂ ಅದಕ್ಕೊಂದು ಪ್ರಮುಖ ಕಾರಣವಾಗಿದೆ. ಅದಕ್ಕಿಂತ ಇಂದಿನ ಪ್ರಭುತ್ವ ರಚನೆಗೆ ಮಧ್ಯಕಾಲದಂತೇ ಕೆರೆಗಳು ಪ್ರಸ್ತುತವಾಗಿಲ್ಲ. ಅವು ರಾಜಕೀಯ ಸಾಮಾಜಿಕ ಶಕ್ತಿಯನ್ನು ಸಂವರ್ಧಿಸುವ ಅಂಶಗಳೂ ಆಗಿಲ್ಲ. ಹೊಸ ವ್ಯವಸ್ಥೆಗೆ ಜನರನ್ನು ತೊಡಗಿಸುವ ರಾಜಕೀಯ ಸಾಮಾಜೀಕರಣವೂ ಆಗಿಲ್ಲ. ಕೆರೆಗಳು ಅಂತರ್ಜಲ ಕಾಪಾಡುವ ಹಾಗೂ ಜೀವ ವೈವಿಧ್ಯವನ್ನು ಪೋಷಿಸುವ, ಹಾಗೂ ದೊಡ್ಡ ನೀರಾವರಿ ತಲುಪದ ಪ್ರದೇಶಗಳಲ್ಲಿ ತೀವ್ರವಾದ ಕೃಷಿಗೆ ಇಂದೂ ಅತ್ಯಗತ್ಯ ಎಂಬ ಸತ್ಯವನ್ನು ಈ ೨೧ನೇ ಶತಮಾನದ ಹೊಸ ಸಮಸ್ಯೆಗಳ ಮಧ್ಯೆ ಅರಿತು ಕಾರ್ಯಕ್ರಮ ರೂಪಿಸುವ ಜರೂರಂತೂ ಇದ್ದೇ ಇದೆ.

 

[1] EC, VIII (Rice ed)ಸೊರಬ, ೩೧೭

[2]ಕಾಣೆ ಪಿ.ವಿ.ಸಂಪುಟ ೩, (೧೯೯೩ ಮುದ್ರಣ) ಪು.೧೫೩.

[3] EC, VIII,(Rice ed) ನಗರ ೫೮.

[4] SII, IX, ಕೂಡ್ಲಿಗಿ ತಾಲೂಕು, ಚಿಕ್ಕಕಿರೆಯಾಗಿನಹಳ್ಳಿ, ಸಂ,೫೯೩.

[5] EC IX ಚನ್ನಪಟ್ಟಣ ೨ ಮತ್ತು ೪, ಕೃಷ್ಣಾಪುರ ಕ್ರಿ.೧೪೩-೪೦ ವರಹ ನೀಡುವ ಬೆಟ್ಟಹಳ್ಳಿ ಹಾಳಾಗಲು ಚಿಕ್ಕ ಪರುಮಾಳೆದೇವನು ಅಲಗಿಸೆಟ್ಟಿಗೆ ಅದನ್ನು ಸರ್ವಮಾನ್ಯವಾಗಿ ನೀಡಿದ್ದನು.

[6]ದೀಕ್ಷಿತ ಜಿ.ಎಸ್., ಪೂರ್ಪೋಕ್ತ, ಪು.೪೯.

[7] ECI ಸಂ. ೫೫೮, ವಿಷ್ಣುವರ್ಧನನ ದಂಡನಾಯಕ ಗಂಗಪಯ್ಯನು ಯುದ್ಧದಲ್ಲಿ ಗೆದ್ದಾಗ ಏನು ಬೇಕೆಂದು ಕೇಳಲು ತನ್ನ ಕುಲದೈವದ ಪೂಜೆಗಾಗಿ ಎರೆ ಕಟ್ಟಿಸಲು ಒಂದು ಹಳ್ಳಿಯನ್ನು ಕೇಳಿದನು.

[8]ಕಾಣೆ ಪಿ.ವಿ., ಪೂರ್ವೋಕ್ತ, ಸಂಪುಟ ೫ ಭಾಗ ೨(೧೯೭೭ ಮುದ್ರಣ) ಪು. ೯೪೮-೪೯.

[9]ದೀಕ್ಷಿತ ಜಿ.ಎಸ್., ಪೂರ್ವೋಕ್ತ, ಪು.೧೬೩,೧೯೫.

[10]ಅದೇ, ಪು.೯೦-೯೯.

[11]ಅದೇ, ಪು.೧೦೨-೧೦೩.