ಕರ್ನಾಟಕದಲ್ಲಿನ ಚಾರಿತ್ರಿಕ ಕಾಲದ ಕೆರೆ ನೀರಾವರಿ ವ್ಯವಸ್ಥೆಯ ಕುರಿತು ಸಾಕಷ್ಟು ವಿವರಗಳು ಹಾಗೂ ಚರ್ಚೆಗಳು ಈಗಾಗಲೇ ಬಂದಿವೆ. ಜಿ.ಎಸ್. ದೀಕ್ಷಿತ, ಜಿ.ಆರ್. ಕುಪ್ಪುಸ್ವಾಮಿ ಮತ್ತು ಎಸ್.ಕೆ. ಮೋಹನ್ ಅವರ ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ ಗ್ರಂಥವು ಈ ನಿಟ್ಟಿನಲ್ಲಿ ಒಂದು ಸಮಗ್ರವಾದ ಅಧ್ಯಯನವಾಗಿದೆ[1].ಜೊತೆಗೆ ಸಿ.ಟಿ.ಎಂ. ಕೊಟ್ರಯ್ಯ.[2]ಜಿ.ಆರ್. ಕುಪ್ಪುಸ್ವಾಮಿ, ಎಂ.ಎಲ್. ಸರಸ್ವತಿ ಮುಂತಾದವರೂ ಈ ಕುರಿತು ಸಾಕಷ್ಟು ಚರ್ಚಿಸಿದ್ದಾರೆ. ಕುಪ್ಪುಸ್ವಾಮಿಯವರು ತಮ್ಮ ಅನೇಕ ಬಿಡಿ ಲೇಖನಗಳಲ್ಲಿ ನೀರಾವರಿ ವಿಧಾನಗಳು, ತಂತ್ರಜ್ಞಾನ, ಆಶ್ರಯದಾತರು, ನಿರ್ವಹಣೆ, ಆಕರಗಳು ಮುಂತಾದ ವಿಷಯಗಳನ್ನು ಪರಿಶೀಲಿಸಿದ್ದಾರೆ.[3]ಈ ಎಲ್ಲ ಅಧ್ಯಯನಗಳಲ್ಲಿ ರಾಜಮನೆತನಗಳ ಚೌಕಟ್ಟು ಪ್ರಧಾನವಾಗಿ ಕಾಣಿಸಿಕೊಂಡರೂ ಕೆರೆ ನೀರಾವರಿಗೂ ಪ್ರಭುತ್ವಕ್ಕೂ ಇದ್ದ ಸಂಬಂಧ ವಿಶೇಷ ಚರ್ಚೆಗೊಳಗಾಗಿಲ್ಲ. ಅಂದಿನ ರಾಜ್ಯಗಳಿಗೆ ಒಂದು ನೀರಾವರಿ ನೀತಿ ಅಥವಾ ಕಾರ್ಯಕ್ರಮ ಇದ್ದಿದ್ದರೆ ಅದರ ಸ್ವರೂಪ ಹೇಗಿತ್ತು ಹಾಗೂ ಅದರ ನಿರೀಕ್ಷೆಗಳು ಏನಿದ್ದವು? ಆಧುನಿಕ ಪ್ರಭುತ್ವಕ್ಕೆ ಅವು ಎಷ್ಟರಮಟ್ಟಿಗೆ ಪ್ರಾಯೋಗಿಕವಾಗಬಲ್ಲವು ಎಂಬುದು ಇದರ ಸ್ವರೂಪ ಮತ್ತು ನಿರೀಕ್ಷೆಗಳು ಎಲ್ಲೆಲ್ಲಿ ಒಂದಾಗುತ್ತವೆ ಹಾಗೂ ಬೇರೆಯಾಗುತ್ತವೆ ಎಂಬುದನ್ನು ಅವಲಂಬಿಸಿದೆ.

ಆಧುನಿಕ ಪ್ರಯೋಗಗಳು ಮತ್ತು ನಿರೀಕ್ಷೆಗಳು :

ಟ್ಯಾಂಕ್ ಇರಿಗೇಶನ್ ಇನ್ ಕರ್ನಾಟಕ ಗ್ರಂಥದಲ್ಲಿ ಹಿಂದಿನ ಮತ್ತು ಇಂದಿನ ವ್ಯವಸ್ಥೆಗಳಲ್ಲಿ ಆಗಿರಬಹುದಾದ ವ್ಯತ್ಯಾಸಗಳ ಕುರಿತು ಕೆಲ ಮಹತ್ವಪೂರ್ಣ ಅಂಶಗಳನ್ನು ಗುರುತಿಸಲಾಗಿದೆ ಹಾಗೂ ಈ ನಿಟ್ಟಿನಲ್ಲಿ ಕೆಲ ಸೂಚನೆಗಳನ್ನೂ ಅಲ್ಲಿ ಕಾಣಬಹುದು. ಮೊದಲು ಹಳ್ಳಿ ಸಮಾಜಗಳು ಸಾಮುದಾಯಿಕ ಗುಂಪುಗಳಾಗಿದ್ದು ಕೆರೆ ಕೆಳಗಿನ ನೀರಾವರಿ ಭೂಮಿಯಲ್ಲಿ ಅವರಲ್ಲಿ ಹಲವರಿಗೆ ಪಾಲು ಇತ್ತು. ಈ ಕೆರೆಗಳಲ್ಲಿ ಸುಸ್ಥಿತಿಯಲ್ಲಿ ಇಡುವುದು ಅವರಿಗೆ ಒಂದು ಖಾಸಗಿ ಆಸ್ತಿಯಾಗಿತ್ತು. ಆದರೆ ಕಾಲಕ್ರಮೇಣ ಈ ಕೆರೆಗಳ ಒಡ್ಡುಗಳು ಒಡೆದವು; ರಾಜರು ಅತಿಯಾದ ತೆರಿಗೆ ಹೇರಿದರು ಹಾಗೂ ಹಳ್ಳಿ ಸಮುದಾಯಗಳು ವಲಸೆ ಹೋದವು. ಬಹುಶಃ ಇವು ಕೆರೆ ನೀರಾವರಿ ಅವನತಿ ಹೊಂದಲು ಕಾರಣವಾದವು.[4]ಯಾವ ಕಾಲದವರೆಗೆ ಈ ಮೇಲಿನ ವ್ಯವಸ್ಥೆ ಇತ್ತು, ಎಂದು ಹಳ್ಳಿ ಸಮುದಾಯಗಳು ಅದನ್ನು ಉಪೇಕ್ಷಿಸತೊಡಗಿದವು, ಹಾಗೂ ಅದಕ್ಕೆ ಈ ಮೇಲೆ ವಿವರಿಸಿದ ಕಾರಣ ಸರಿಯೆ? ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಬಹುಶಃ ಇವೆಲ್ಲ ಬ್ರಿಟಿಷ್ ರಾಜ್ಯ ಸ್ಥಾಪನೆಯಾಗುವ ಸ್ವಲ್ಪ ಪೂರ್ವದಲ್ಲಿ ನಡೆದಂತೆ ಗ್ರಹಿಸಲಾಗಿದೆ. ಇನ್ನೊಂದೆಡೆ ಸ್ವಲ್ಪ ಸ್ಪಷ್ಟವಾಗಿ ಈ ಕುರಿತು ತಿಳಿಸಲಾಗಿದೆ. ಸರ್ಕಾರವು ಭೂ ಕಂದಾಯದ ನೇರ ವಸೂಲಿ ಮಾಡಲು ತೊಡಗಿದನಂತರ ಹಳ್ಳಿಯ ಪಟೇಲರು, ಶಾನುಭೋಗರ ಇನಾಂ ಭೂಮಿಯನ್ನು ರದ್ದು ಮಾಡಲಾಯಿತು. ಈ ಕೆಲಸ ದಿವಾನ್ ಪೂರ್ಣಯ್ಯನವರ ಕಾಲಕ್ಕೇ ನಡೆದಿತ್ತು. ಇದು ಹಳೇ ದಬ್ಬಾಳಿಕೆಗಳನ್ನು ನಿಲ್ಲಿಸಿದರೂ ಅದರ ಜೊತೆಗೇ ಕೆರೆಗಳ ನಿರ್ವಹಣೆಯ ಸ್ಥಾನಿಕ ವ್ಯವಸ್ಥೆಯೂ ನಿರ್ಮೂಲವಾಯಿತು. ಬ್ರಿಟಿಷರಿಗೆ ಈ ವ್ಯವಸ್ಥೆಗೆ ಪ್ರತಿಯಾದ ಸಮರ್ಥ ವ್ಯವಸ್ಥೆಯನ್ನು ಬೆಳೆಸಲಾಗಲಿಲ್ಲ. ಬ್ರಿಟಿಷರಿಗೆ ಈ ವ್ಯವಸ್ಥೆಗೆ ಪ್ರತಿಯಾದ ಸಮರ್ಥ ವ್ಯವಸ್ಥೆಯನ್ನು ಬೆಳೆಸಲಾಗಲಿಲ್ಲ. ಇಂದಿನ ಹಳ್ಳಿ ಸಮುದಾಯಗಳಿಗೆ ಕೆರೆಗಳು ತಮಗೆ ಸೇರಿದ ಸಂಪನ್ಮೂಲವೆಂಬ ಭಾವನೆ ಹೊರಟುಹೋಗಿದೆ. ಅದು ಸರ್ಕಾರಕ್ಕೆ ಸೇರಿದ್ದು ಎಂಬ ಭಾವನೆ ಬಂದಿದೆ[5]ಎಂದು ಇಲ್ಲಿ ಅಭಿಪ್ರಾಯ ಪಡಲಾಗಿದೆಯಲ್ಲದೇ ಬಿತ್ತುವಟ್ಟ, ದಶವಂದ, ಕಟ್ಟುಕೊಡಿಗೆ ಮುಂತಾದ ಹಳೆ ಪದ್ಧತಿಗಳಲ್ಲಿ ಖಾಸಗಿ ಆಸಕ್ತಿ ಹಾಗೂ ಜವಾಬ್ದಾರಿಗಳಿದ್ದು ಅಂಥ ವಿಧಾನಗಳನ್ನು ಪರಿಶೀಲಿಸುವ ಕುರಿತು ಸೂಚನೆಯೂ ಇದೆ ಮತ್ತು ಕೆರೆ ಪಂಚಾಯತಿ ಕೂಡ ಸಾಮುದಾಯಿಕ ನಿರ್ವಹಣೆಗೆ ಉಜಪಾಯವಾಗಬಲ್ಲದು ಎಂಬ ಸಲಹೆಯೂ ಇದೆ.

ಸರ್ಕಾರ ನೇರವಾಗಿ ರೈತರ ಜೊತೆ ಕಂದಾಯ ಹೊಂದಾಣಿಕೆ ಎಂಬ ಸಲಹೆಯೂ ಇದೆ. ವ್ಯವಸ್ಥೆ ಕೆರೆಯನ್ನು ಪೋಷಿಸಿದ ಸಾಂಪ್ರದಾಯಿಕ ಸ್ಥಾನಿಕ ವ್ಯವಸ್ಥೆಯನ್ನು ಪಲ್ಲಟಮಾಡಿತು ಎಂಬ ವಾದವನ್ನು ಇಲ್ಲಿ ಸಕಾರಣವಾಗಿ ಸಮರ್ಥಿಸಲಾಗಿದೆ. ಆದರೆ ಈ ಸ್ಥಾನಿಕ ವ್ಯವಸ್ಥೆ ಮೇಲೆ ಹೇಳಿದಂತೆ ಚಾರಿತ್ರಿಕವಾಗಿ ಖಾಸಗಿ ಹಿತಾಸಕ್ತಿಯಿಂದ ಉಳಿದುಕೊಂಡು ಬಂದಿದ್ದಲ್ಲಿ ಇಂದು ಬದಲಾದ ಸಮಾಜ ಕಲ್ಪನೆಯಲ್ಲಿ ಸಾಮುದಾಯಿಕ ನಿರ್ವಹಣೆಗಾಗಿ ನಾವು ಅದರಿಂದ ಏನನ್ನು ಅಳವಡಿಸಿಕೊಳ್ಳಬಹುದು ಎಂಬ ಪ್ರಶ್ನೆ ಉಳಿಯುತ್ತದೆ. ಅಥವಾ ಕೆರೆಯ ಸಂಬಂಧಿಸಿ ಇಂದಿನ ರಾಜ್ಯದ ಕಾರ್ಯಕ್ರಮ ಇಂಥ ಹಿತಾಸಕ್ತಿಯ ವರ್ಗಗಳ ಮೂಲಕವೇ ಆದಲ್ಲಿ ಮಾತ್ರ ವ್ಯವಸ್ಥೆ ಹಳೆಯ ರೀತಿ ನಡೆಯಲು ಸಾಧ್ಯ ಎಂದಾಗುವುದು. ಈ ಸಮಸ್ಯೆಯನ್ನು ಬಗೆಹರಿಸುವುದು ಈ ಲೇಖನದ ಉದ್ದೇಶವಲ್ಲ. ಕೆರೆ ನೀರಾವರಿ ನಡೆದುಕೊಂಡು ಬಂದ ಹಿಂದಿನ ಪ್ರಭುತ್ವಕ್ಕೂ ಇಂದಿನದಕ್ಕೂ ಇರುವ ವ್ಯತ್ಯಾಸಗಳನ್ನು ಗ್ರಹಿಸುವುದು ಅಗತ್ಯವಾಗಿದೆ. ಕಲ್ಪಿಸಿಕೊಳ್ಳುತ್ತಿದ್ದೇವೆ. ಅಂದರೆ ಒಂದು ಕೇಂದ್ರಿಕೃತ ಪ್ರಭುತ್ವ ಕಾಲಕ್ರಮದಲ್ಲಿ ಬೆಳಸಿಕೊಂಡ ಒಂದು ತಂತ್ರ ಇದಾಗಿದೆ. ಅದು ಸ್ಥಳೀಯ ಘಟಕಗಳಿಗೆ ಕಾರ್ಯಕ್ರಮಗಳನ್ನು ನೀಡುತ್ತದೆ. ಕೆರೆ ನೀರಾವರಿ ಚಾರಿತ್ರಿಕವಾಗಿ ಇಂಥ ಬಾಹ್ಯ ನಿರ್ದೇಶನ ವ್ಯವಸ್ಥೆಯನ್ನು ಅವಲಂಬಿಸಿ ಬೆಳೆದುಕೊಂಡು ಬಂದದ್ದಲ್ಲ. ಕೆರೆಗಳನ್ನು ಉಳಿಸುವಲ್ಲಿ ನಮ್ಮ ಆಧುನಿಕ ತಾತ್ವಿಕತೆ ಕೂಡ ಬೇರೆಯೇ ಆಗಿದೆ; ಅಂತರ್ಜಲ ಅಭಿವೃದ್ಧಿ, ಪರಿಸರ ವಾದ ಹಾಗೂ ಸಣ್ಣ ನೀರಾವರಿಯ ದೃಷ್ಟಿಯಿಂದ ನಾವು ಇಂದು ಕೆರೆಗಳ ಮಹತ್ವವನ್ನು ಅರಿಯುತ್ತಿದ್ದೇವೆ. ನೀರಾವರಿಗೆ ಇಂದು ಬೃಹತ್ ಯೋಜನೆಗಳಿವೆ, ಕೊಳವೆ ಬಾವಿಗಳಿವೆ. ಚಾರಿತ್ರಿಕ ಕಾಲದಲ್ಲಿ ಕೆರೆನೀರಾವರಿ ಸಣ್ಣ ನೀರಾವರಿಯಾಗಿರಲಿಲ್ಲ. ಒಂದು ಹಳ್ಳಿಗೆ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಕುಡಿಯುವುದಕ್ಕೆ ಹಲವು ಹಳ್ಳಿಗಳಲ್ಲಿ ಅವೇ ಆಧಾರಗಳಾಗಿದ್ದವು. ಹಾಗೂ ಕರ್ನಾಟಕದ ಅರೆಮಲೆನಾಡು ಮತ್ತು ಒಳನಾಡಿನಲ್ಲಿ (ಬಹುಶಃ ನದೀತೀರಗಳನ್ನು ಬಿಟ್ಟು) ಕೆರೆಗಳಿಲ್ಲದೇ ವಸತಿಗಳೂ ಹುಟ್ಟಿಕೊಳ್ಳಲಿಕ್ಕೆ ಸಾಧ್ಯವಿರಲಿಲ್ಲ.

ಬ್ರಿಟಿಷರು ಭಾರತದಲ್ಲಿ ತಮ್ಮ ಸರ್ಕಾರವನ್ನು ಸ್ಥಾಪಿಸಿದಾಗ ಯುರೋಪಿನ ಸ್ಟೇಟ್ ಎಂಬರ್ಥದ ಪ್ರಭುತ್ವವನ್ನು ಇಲ್ಲಿ ನೆಲೆಗೊಳಿಸಲು ಉದ್ಯುಕ್ತರಾದರು. ಡೇವಿಡ್ ಲಡ್ಡನ್ ಅವರ ಹೇಳಿಕೆಯನ್ನು ಉದ್ಧರಿಸುವುದಾದರೆ, ಕಂಪನಿ ಮತ್ತು ಕೃಷಿಕರ ಮಧ್ಯದ ಮಧ್ಯವರ್ತಿಗಳನ್ನು ತೆಗೆದುಹಾಕಿ ತನ್ನ ಪ್ರಭುತ್ವವನ್ನು ಹೆಚ್ಚಿಸಿಗೊಳ್ಳವುದಕ್ಕೆ ಇಲ್ಲಿನ ಮಾಹಿತಿಯನ್ನು ಕೂಲಂಕಷವಾಗಿ ಸಂಗ್ರಹಿಸುವುದು ಅವರ ಕಾರ್ಯವಾಯಿತು. ಇಲ್ಲಿನ ಕೃಷಿ ಸಂಪತ್ತನ್ನು ನೇರವಾಗಿ ವಸೂಲಿ ಮಾಡುವ ಪ್ರಯತ್ನದಲ್ಲಿ ಅವರ ಭೂ ಹಿಡುವಳಿ ನೀತಿಗಳು ರೂಪಿತವಾದುವು. ಕೃಷಿಯನ್ನು ಅವರು ಒಂದು ಉದ್ಯಮ ಎಂದು ಪರಿಗಣಿಸಿ ಅದರ ವೆಚ್ಚ ಹಾಗೂ ಲಾಭವನ್ನು ಅವರು ಲೆಕ್ಕ ಹಾಕಿದರು. ಕಂಪೆನಿಯು ತಾನೊಬ್ಬ ಜಮೀನ್ದಾರನಾಗಿ ಕೃಷಿಕರ ತೆರಿಗೆಯನ್ನು ಬಾಡಿಗೆ ಎಂದು ಪರಿಭಾವಿಸಿತು. ಲಾರ್ಡ್‌ ಮೇಯೋ ೧೯೬೯ರಲ್ಲಿ ಈ ಕಾರಣಕ್ಕಾಗಿ ಅವರು ವ್ಯವಸಾಯ ವಿಭಾಗವನ್ನು ಪ್ರಾರಂಭಿಸಿದರು. ಆಗ ಅವರು ನೀಡಿದ ಹೇಳಿಕೆ ಹೀಗಿದೆ, ಇಂಗ್ಲೆಂಡಿನಲ್ಲಿ ಒಬ್ಬ ಒಳ್ಳೇ ಜಮೀನ್ದಾರನ ಕರ್ತವ್ಯಗಳನ್ನು ಭಾರತದಲ್ಲಿ ಬ್ರಿಟಿಶ್ ಸರ್ಕಾರ ನಡೆಸಬೇಕಾಗಿದೆ. ಇದಕ್ಕಾಗಿ ಸರ್ಕಾರ ದೊಡ್ಡ ನೀರಾವರಿಯ ಜವಾಬ್ದಾರಿಯನ್ನು ಕೈಗೆ ತೆಗೆದುಕೊಂಡಿತು. ಸರ್ಕಾರದ ಮೊದಲ ಆದ್ಯತೆ ಯುರೋಪಿನ ವೈಜ್ಞಾನಿಕ ವಿಧಾನಗಳನ್ನು ಇಲ್ಲಿ ಅಳವಡಿಸುವುದು. ಎಲ್ಲಕ್ಕಿಂತ ಹೆಚ್ಚಾಗಿ ನೀರಾವರಿ ವ್ಯವಸ್ಥೆ ಆಧುನಿಕ ರಾಜ್‌ನ ಲಕ್ಷಣವಾಯಿತು.[6]

ಬ್ರಿಟಿಷರು ತಮ್ಮ ಈ ರೀತಿಯ ರಾಜ್ಯ ಸ್ಥಾಪನೆಗಾಗಿ ವ್ಯವಸ್ಥಿತವಾಗಿ ಸರ್ವೇಕ್ಷಣೆ ನಡೆಸಿ ಅಂಕಿ ಅಂಶಗಳ ಮಾಹಿತಿ ಸಂಗ್ರಹಿಸಿದರು. ೧೮೦೦ರ ಪ್ರಾರಂಭದಲ್ಲಿ ಅರ್ಥರ್ ವೆಲ್ಲೆಸ್ಲಿಯ ಆದೇಶದ ಮೇರೆಗೆ ಕರ್ನಾಟಕದಲ್ಲಿ ಸಂಚರಿಸಿದ ಫ್ರಾನ್ಸಿಸ್ ಬುಕಾನನ್‌ ಇಂಥ ಮಾಹಿತಿಗಳನ್ನು ದಾಖಲಿಸಿದ್ದು ಕಂಡುಬರುತ್ತದೆ. ಆತನು ಇಲ್ಲಿ ಏನೇನಿದೆ ಎಂಬುದಷ್ಟೇ ಅಲ್ಲ, ಅದರಲ್ಲಿ ಯಾವ ಸುಧಾರಣೆಯನ್ನು ತರಬೇಕು, ಆದಾಯ ಹೆಚ್ಚಿಸುವ ಸಾಧ್ಯತೆ ಎಲ್ಲೆಲ್ಲಿದೆ ಎಂಬ ಲೆಕ್ಕವನ್ನು ಉದ್ದಕ್ಕೂ ಮಾಡಿದ್ದಾನೆ. ಹಾಗಾಗಿ ಸ್ಥಾನಿಕ ಪದ್ಧತಿಗಳನ್ನು ಅವರು ಉದ್ದೇಶಪೂರ್ವಕವಾಗಿಯೇ ಮಾನ್ಯ ಮಾಡಲಿಲ್ಲ. ಏಕೆಂದರೆ ಲಾಭ ನಷ್ಟಗಳ ಲೆಕ್ಕ ಹಾಕುವ ಈ ಹೊಸ ಪ್ರಭುತ್ವಕ್ಕೆ ಮಧ್ಯಯುಗದ ಈ ಸ್ಥಾನಿಕ ವ್ಯವಸ್ಥೆಗಳು ಅಪ್ರಸ್ತುತವಾಗಿದ್ದವು. ಮೈಸೂರು ಸಂಸ್ಥಾನದಲ್ಲೂ ಕೂಡ ಅವರ ನೀತಿ ಪ್ರಯೋಗಕ್ಕೆ ಬಂದಿತು ಹಾಗೂ ಅದರ ದುಷ್ಟರಿಣಾಮಗಳೂ ಕಾಣಿಸಿಕೊಂಡವು. ೧೮೯೪ರಲ್ಲಿ ದಿವಾನ್ ಶೇಷಾದ್ರಿ ಐಯರ್ ಅವರು ಇಡೀ ಪ್ರಾಂತ್ಯದ ಎಲ್ಲ ಕೆರೆಗಳ ರಿಪೇರಿ ಮತ್ತು ನಿರ್ವಹಣೆ ಸರ್ಕಾರದ ಶಕ್ತಿಗೆ ಮೀರಿದ್ದು ಹಾಗೂ ಅಂತಿಮವಾಗಿ ಇದರಿಂದ ಕಂದಾಯದ ಲಾಭವೂ ಸಿಗದು. ಕೆರೆಗಳ ನಿರ್ವಹಣೆಯಲ್ಲಿ ಸರ್ಕಾರದ ಪಾತ್ರಕ್ಕೆ ಅನಗತ್ಯ ಮಹತ್ವವನ್ನು ನೀಡಲಾಗಿದೆ. ರೈತರ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ರೈತರಿಗೆ ನೀಡುತ್ತಿದ್ದ ಇನಾಂ ಹಾಗೂ ಇತರ ಸವಲತ್ತುಗಳನ್ನು ಕಸಿದುಕೊಂಡು ಸರ್ಕಾರ ಅವರ ಕೆಲಸ ಮಾಡಬಹುದೆಂದು ರೈತರಿಗೆ ತೆರಿಗೆ ವಿಧಿಸಲಾಗಿದೆ. ಇದರಿಂದ ರೈತರ ಜವಾಬ್ದಾರಿ ತಪ್ಪಿದೆ ಎಂದು ವಿಷಾದಿಸಿದ್ದು ಕಂಡು ಬರುತ್ತದೆ.[7]ಅಂದರೆ ಬ್ರಿಟಿಷ್ ರಾಜ್ಯದ ಲೆಕ್ಕಾಚಾರ ಕೆರೆಗಳ ಸಂದರ್ಭದಲ್ಲಿ ಕೈಕೊಟ್ಟಿತ್ತು. ಕಂದಾಯವನ್ನೇ ದೃಷ್ಟಿಯಲ್ಲಿಟ್ಟಿದ್ದ ಪ್ರಭುತ್ವಕ್ಕೆ ನಷ್ಟ ತರಬಹುದಾದ ಬಹುಸಂಖ್ಯಾತ ಸಣ್ಣ ಪುಟ್ಟ ಕೆರೆಗಳ ಕೂಡ ಅಪ್ರಸ್ತುತವಾದವು. ಹಾಗೂ ಇದರಿಂದ ವೇದ್ಯವಾಗುವ ವಿಷಯವೆಂದರೆ ಬ್ರಿಟಿಷರಷ್ಟೂ ಲೆಕ್ಕ ಹಾಕದೆ ಹಿಂದಿನ ಯಾವದೇ ರಾಜ್ಯಗಳಿಗೂ ಈ ಬಹುಸಂಖ್ಯಾತ ಕೆರೆಗಳ ಕೇಂದ್ರೀಕೃತ ನಿರ್ವಹಣೆ ಲಾಭದ ಉದ್ಯಮವಾಗಿರಲಿಲ್ಲ. ಲಾಭದಾಸೆಗೆ ಅತಿಯಾದ ತೆರಿಗೆ ಹಾಕಿದರೆ ಭೂಮಿಗಳು ಬೀಳುಬೀಳುತ್ತಿದ್ದವು ಎಂಬುದು ಶಾಸನಗಳಲ್ಲೂ ವ್ಯಕ್ತವಾಗಿದೆ. ಹಾಗಾಗಿ ರಾಜ್ಯ, ಭೂ ಮಾಲಿಕರು ಮತ್ತು ಕೃಷಿಕರು ಇವರೆಲ್ಲರ ಹಿತಾಸಕ್ತಿಗೆ ಹೊಂದಾಣಿಕೆಯಾಗುವ ಒಂದು ವ್ಯವಸ್ಥೆ ಈ ಸಂಬಂಧಿಸಿ ಸಾಧ್ಯವಾಗಿರದಿದ್ದರೆ ಈ ಕೆರೆಗಳೆಲ್ಲ ಮುಂದು ವರಿದುಕೊಂಡು ಬರುತ್ತಿರಲಿಲ್ಲ. ಇದಕ್ಕೆ ಮಧ್ಯಕಾಲೀನ ವ್ಯವಸ್ಥೆ ಹಾಗೂ ಅದು ಪೋಷಿಸಿಕೊಂಡು ಬಂದು ನಂಬಿಕೆಗಳು ಮತ್ತು ಅದರಲ್ಲಿನ ಹಿತಾಸಕ್ತಿಗಳನ್ನು ಗಮನಿಸಬೇಕಾಗುತ್ತದೆ. ಕೊಂಡು ಬಂದು ನಂಬಿಕೆಗಳು ಮತ್ತು ಅದರಲ್ಲಿನ ಹಿತಾಸಕ್ತಿಗಳನ್ನು ಗಮನಿಸಬೇಕಾಗುತ್ತದೆ.

ಚಾರಿತ್ರಿಕ ರಾಜ್ಯ ವ್ಯವಸ್ಥೆಯ ಕುರಿತ ವಾದಗಳು ಮತ್ತು ಕೆರೆ ನೀರಾವರಿ

ಭಾರತದ ಚಾರಿತ್ರಿಕ ವ್ಯವಸ್ಥೆಯ ಕುರಿತು ೧೯ನೇ ಶತಮಾನದಲ್ಲಿ ಬ್ರಿಟಿಷರಾದಿಯಾಗಿ ಎಲ್ಲ ಐರೋಪ್ಯರಿಗೆ ಇದ್ದ ಕಲ್ಪನೆಗಳಿಗೆ ಅನುಗುಣವಾಗಿ ಅಂದಿನ ಅವರ ಕೇಂದ್ರೀಕೃತ ನೀರಾವರಿ ನೀತಿ ರೂಪು ತಳೆದಂತೆ ಕಾಣುತ್ತದೆ. ಅದೆಂದರೆ ಓರಿಯೆಂಟಲ್ ಡೆಸ್ಪಾಟಿಸಂ ಕಲ್ಪನೆ. ೧೯ನೇ ಶತಮಾನದ ಪ್ರಾರಂಭದಲ್ಲಿ ಬ್ರಿಟಿಷ್ ಭಾರತದ ಪ್ರಪ್ರಥಮ ಇತಿಹಾಸ ಬರೆದ ಜೇಮ್ಸ್ ಮಿಲ್ಲ್ ಈ ಕಲ್ಪನೆಯನ್ನು ಬಳಸಿಕೊಂಡನು. ಬ್ರಿಟಿಷ್ ಆಡಳಿತಗಾರರಿಗೆ ಈ ಇತಿಹಾಸ ಬಹುಕಾಲ ಗತ ಭಾರತದ ಕಲ್ಪನೆಯನ್ನು ನೀಡಿತು. ೧೯ನೇ ಶತಮಾನದ ಉತ್ತರಾರ್ಧ ಭಾಗದಲ್ಲಿ ಪ್ರಚಲಿತದಲ್ಲಿ ಬಂದ ಮಾರ್ಕ್ಸ್‌ ಮತ್ತು ಎಂಗೆಲ್ಸವರ ಏಶಿಯಾಟಿಕ್ ಉತ್ಪಾದನಾ ವಿಧಾನದ ಪರಿಕಲ್ಪನೆ ಕೂಡ ಇದೇ ಕಲ್ಪನೆಯಿಂದಲೇ ರೂಪುಗೊಂಡಿತ್ತು.[8] ಮಳೆಯ ಪ್ರಮಾಣ ಕೂಡ ಸಾಕಷ್ಟಿಲ್ಲ. ಇಲ್ಲಿ ನೀರಾವರಿಗೆ ಜಲಮೂಲಗಳು ವಸತಿಗಳಿಗೆ ಸಾಮರ್ಥ್ಯಕ್ಕೆ ಮೀರಿದ್ದು. ಒಂದು ಬಲವಾದ ಆಶ್ರಯದಾತ ಕೇಂದ್ರ ಪ್ರಭುತ್ವ ಮಾತ್ರ ಅಂಥ ಯೋಜನೆಗಳನ್ನು ಹಮ್ಮಿಕೊಳ್ಳಬಹುದಿತ್ತು. ಹಾಗಾಗಿ ರಾಜ್ಯವು ಇಲ್ಲಿ ಜನರಿಂದ ನೀರಾವರಿ ತೆರಿಗೆಯನ್ನು ಸಂಗ್ರಹಿಸಿ ನೀರನ್ನು ಹಂಚುವ ಏಕೈಕ ಅಧಿಕಾರಿಯಾಗಿತ್ತು. ಕೃಷಿಕರು ಈ ವ್ಯವಸ್ಥೆಯಲ್ಲಿ ಬದ್ಧರಾಗಿದ್ದರು. ಹಾಗೂ ಈ ಹಳ್ಳಿ ಸಮಾಜಗಳು ಹೇಗಿದ್ದವೆಂದರೆ ಇಲ್ಲಿ ಖಾಸಗಿ ಆಸ್ತಿಯ ಕಲ್ಪನೆ ಇರಲಿಲ್ಲ. ಹಳ್ಳಿಯ ಜಮೀನೆಲ್ಲವೂ ಸಾಮುದಾಯಿಕ ವಹಿವಾಟಿಗೆ ಒಳಪಟ್ಟಿದ್ದು ನೀರಾವರಿ ಭೂಮಿಯನ್ನು ಕುಟುಂಬಗಳಿಗೆ ಹಂಚಲಾಗುತ್ತಿತ್ತು. ಕಾಲಕಾಲಕ್ಕೆ ಹಂಚಿಕೆಯನ್ನು ಬದಲಿಸಲಾಗುತ್ತಿತ್ತು. ಈ ಹಳ್ಳಿಗಳು ಹೆಚ್ಚೂ ಕಡಿಮೆ ಸ್ವಾವಲಂಬಿಗಳಾಗಿದ್ದವು. ಜಾತಿಪದ್ಧತಿಯು ಈ ಜನರಲ್ಲಿ ಸಾಮಾಜಿಕ ಚಲನೆಯನ್ನು ಅಸಾಧ್ಯವಾಗಿಸಿದ್ದು, ಪ್ರತೀ ಕುಟುಂಬಗಳಿಗೂ ಅವರ ಜೀವನವನ್ನು ಸುರಕ್ಷಿತವಾಗಿ ಮಾಡಿತ್ತಾದ್ದರಿಂದ ಸಾಮಾಜಿಕ ಬದಲಾವಣೆ ಉಂಟಾಗಲಿಲ್ಲ.

ಈ ವ್ಯವಸ್ಥೆ ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ಒಡೆಯಿತು. ಬ್ರಿಟಿಷರು ಇಲ್ಲಿನ ನೀರಾವರಿ ವ್ಯವಸ್ಥೆಯನ್ನು ಕಡೆಗಣಿಸಿದರು ಹಾಗೂ ಹಳ್ಳಿ ಸಮುದಾಯಗಳು ಶಿಥಿಲವಾದವು. ಜಮೀನ್ದಾರಿ, ರೈತವಾರಿ ಪದ್ಧತಿಗಳ ಮೂಲಕ ಈ ಸಮಾಜದಲ್ಲಿ ಪರಿವರ್ತನೆಶೀಲತೆಯ ಮದ್ದನ್ನು ಚುಚ್ಚಿದರು ಎಂದು ಮಾರ್ಕ್ಸ್ ಅಭಿಪ್ರಾಯಪಟ್ಟಿದ್ದನು. ಹಳ್ಳಿ ಸಮುದಾಯಗಳನ್ನು ಚರಿತ್ರೆಗೂ ಪೂರ್ವದ ಒಂದು ಅವಸ್ಥೆ ಎಂದು ಗ್ರಹಿಸಿ ಅವುಗಳನ್ನು ಶಿಥಿಲಗೊಳಿಸುವುದು ಇಲ್ಲಿನ ಸಾಮಾಜಿಕ ಪ್ರಗತಿಯ ಸೂಚನೆ ಎಂಬ ಒಂದು ಸಾಮಾನ್ಯ ನಂಬಿಕೆ ಬ್ರಿಟಿಷ್‌ ರಾಜ್ಯಕ್ಕೂ ಇತ್ತು. ಮಾರ್ಕ್ಸ್‌‌ನ ಚಿಂತನೆ ಈ ನಂಬಿಕೆಯನ್ನು ಹಂಚಿಕೊಳ್ಳುತ್ತದೆ. ಪೌರಾತ್ಯ ವಿದ್ವಾಂಸರಲ್ಲಿ ಒಂದು ಗುಂಪು ಈ ಹಳ್ಳಿ ಸಮುದಾಯಗಳನ್ನು ಪಾಶ್ಚಾತ್ಯ ವ್ಯಕ್ತಿವಾದಕ್ಕೆ ಪ್ರತಿಯಾಗಿ ಪೂರ್ವದ ಅಮೂಲ್ಯ ಪರಂಪರೆ ಎಂದು ಗ್ರಹಿಸಿತು. ಭಾರತೀಯ ರಾಷ್ಟ್ರೀಯ ಇತಿಹಾಸದಲ್ಲಿ ಕೂಡ ಈ ಹಳ್ಳಿಯ ಸಮುದಾಯಗಳ ಕಲ್ಪನೆ ಅದೊಂದು ರಾಷ್ಟ್ರೀಯ ಇತಿಹಾಸದಲ್ಲಿ ಕೂಡ ಈ ಹಳ್ಳಿಯ ಸಮುದಾಯಗಳ ಕಲ್ಪನೆ ಅದೊಂದು ರಾಷ್ಟ್ರೀಯ ಹೆಗ್ಗಳಿಕೆಯಾಗಿ ಮುಂದುವರಿಯಿತು ಎಂಬುದು ಗಮನಾರ್ಹ. ಆ ಮೂಲಕ ಭಾರತೀಯ ಹಳ್ಳಿ ಸಮುದಾಯಗಳಲ್ಲಿನ ವಾಸ್ತವಿಕ ಶ್ರೇಣೀಕರಣ ಇವರ ಚರ್ಚೆಯಿಂದ ಹಿನ್ನೆಲೆಗೆ ಸರಿಯುತ್ತದೆ.

೧೯ನೇ ಶತಮಾನದ ಸಿದ್ಧಾಂತಗಳ ಅಸಂಗತತೆಯನ್ನು ನಂತರದ ವಿದ್ವಾಂಸರು ಗುರುತಿಸಿ ವಿಮರ್ಶಿಸಿದ್ದಾರೆ. ಭಾರತದಲ್ಲಿ ೨೦೦೦ ವರ್ಷಗಳಷ್ಟು ಹಿಂದೆಯೇ ಖಾಸಗಿ ಆಸ್ತಿ ಕಲ್ಪನೆ ಬೆಳೆದಿತ್ತು. ನೀರಾವರಿಗಾಗಿ ಹಳ್ಳಿ ಸಮುದಾಯಗಳು ನಿರಂಕುಶ ಪ್ರಭುತ್ವದ ಪರಾಧೀನರಾಗಿದ್ದವು ಎಂಬುದು ನಿರಾಧಾರ ಹೇಳಿಕೆ. ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಕಾಲೀನ ನೀರಾವರಿ ವ್ಯವಸ್ಥೆಯಲ್ಲಿ ಒಂದು ಪ್ರಭುತ್ವ ಕೇಂದ್ರೀಕೃತ ಪ್ರಯತ್ನಗಳನ್ನೇ ಮಧ್ಯಕಾಲೀನ ನೀರಾವರಿ ವ್ಯವಸ್ಥೆಯಲ್ಲಿ ಒಂದು ಪ್ರಭುತ್ವ ಕೇಂದ್ರೀಕೃತ ಪ್ರಯತ್ನಗಳೇ ಕಾಣುವುದು ದುಸ್ತರ. ರಾಷ್ಟ್ರೀಯ ಇತಿಹಾಸಕಾರರು ಅಗ್ರಹಾರ, ನಾಡು, ವ್ಯಾಪಾರಿ, ಹಾಗೂ ವ್ಯತ್ತಿಕಾರರ ಸಂಘಗಳು, ದೇವಾಲಯಗಳು ಮುಂತಾದ ಸ್ಥಾನಿಕ ಸ್ವಾಯುತ್ತ ಆಡಳಿತ ಘಟಕಗಳ ಕುರಿತು ಮಾಹಿತಿಯ ಮಹಾಪೂರವನ್ನೇ ಹರಿಸಿದ್ದಾರೆ.[9] ಆದರೆ ಅಂಥ ಆಡಳಿತ ವ್ಯವಸ್ಥೆ ಒಂದು ವಿಕೇಂದ್ರೀಕೃತ ರಾಜ್ಯ ವ್ಯವಸ್ಥೆ ಎಂಬ ಅಭಿಪ್ರಾಯ ಅವರದ್ದು. ಈಗಾಗಲೇ ಉಲ್ಲೇಖಿಸಿದಂತೇ ವಿಕೇಂದ್ರೀಕೃತ ವ್ಯವಸ್ಥೆ ಕೂಡ ಒಂದು ಕೇಂದ್ರೀಕೃತ ಪ್ರಭುತ್ವದ ತಂತ್ರವೇ ಆಗಿದೆ. ಹಾಗಾಗಿ ವಿಭಿನ್ನ ಸಾಮ್ರಾಜ್ಯಗಳು ಇಂಥ ಕೇಂದ್ರಗಳನ್ನು ಅಲಂಕರಿಸುತ್ತದೆ. ಆದರೆ ಇಂಥ ಕೇಂದ್ರೀಕೃತ ಪ್ರಭುತ್ವಗಳು ಅಂದು ಇದ್ದವೇ? ಎಂಬ ಜಿಜ್ಞಾಸೆ ಇಂದು ನಮ್ಮ ಚರಿತ್ರೆಯಲ್ಲಿ ಪ್ರಧಾನ ಸ್ಥಾನ ಪಡೆದಿವೆ.

ಇಂಥ ಚರ್ಚೆಗಳಲ್ಲಿ ಬರ್ಟನ್ ಸ್ಟೈನ್ ಎಂಬವರು ದಕ್ಷಿಣ ಭಾರತದಲ್ಲಿನ ರಾಜ್ಯಗಳದು ಸಂಪೂರ್ಣವಾಗಿ ರೂಪು ತಳೆದ ಕೇಂದ್ರ ಪ್ರಭುತ್ವವಾಗರದೇ ಇಂಥ ತುಂಡು ತುಂಡು ಸ್ಥಾನಿಕ ಪ್ರಭುತ್ವಗಳನ್ನು (ಸೆಗ್ಮೆಂಟರಿ ಸ್ಟೇಟ್) ಒಟ್ಟಿಗೇ ಸೇರಿಸಿ ಆದುದ್ದಾಗಿತ್ತು ಎಂದು ವಾದಿಸಿದರು. ಇಂಥ ಪ್ರಭುತ್ವಗಳಲ್ಲಿ ನಾವು ಕೇಂದ್ರ ರಾಜ್ಯವೆಂದು ಕರೆಯುವ ಪ್ರಭುತ್ವವು ಭೌತಿಕ ಉಪಸ್ಥಿತಿಯನ್ನು ಪಡೆದಿರಲಿಲ್ಲ. ಈ ರಾಜ್ಯದ ಲಕ್ಷಣವನ್ನು ಬರ್ಟನ್ ಸ್ಟೈನ್ ಅವರು ಈ ರೀತಿ ವಿವರಿಸುತ್ತಾರೆ.[10]೧) ಈ ರಾಜ್ಯದಲ್ಲಿ ಹಲವಾರು ಪ್ರಭುತ್ವ ಕೇಂದ್ರಗಳಿರುತ್ತವೆ. ೨) ಈ ವಿಭಿನ್ನ ಕೇಂದ್ರಗಳಿಗೆಲ್ಲ ಸ್ವಾಯತ್ತ ಆಡಳಿತ ಶಕ್ತಿ ಮತ್ತು ದಂಡ ಶಕ್ತಿಗಳಿರುತ್ತವೆ. ೩) ಇವೆಲ್ಲ ಅಭಿಷಿಕ್ತ ರಾಜನೊಬ್ಬನನ್ನು ತಮ್ಮ ಕೇಂದ್ರವೆಂದು ಸಾಂಪ್ರದಾಯಿಕ ವಿಧಿಗಳ ಮೂಲಕ ಒಪ್ಪಿಕೊಂಡಿರುತ್ತವೆಯಾದ್ದರಿಂದ ಒಂದು ರಾಜ್ಯ ಅಸ್ತಿತ್ವದ್ಲಲಿರುತ್ತದೆ. ಈ ಎಲ್ಲ ಪ್ರಭುತ್ವಗಳ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಪ್ರಯತ್ನವನ್ನು ಕೂಡ ಈ ರಾಜರು ತಮ್ಮ ಆಳ್ವಿಕೆಯ ಕೇಂದ್ರ ಭಾಗದಲ್ಲಿ ನಡೆಸಿದ್ದರು. ವಿಜಯನಗರ ರಾಯರ ಕಾಲದಲ್ಲಿದ್ದ ಪ್ರಾದೇಶಿಕ ನಾಯಕರು ತಂತಮ್ಮ ಆಳ್ವಿಕೆಯ ಪ್ರದೇಶದಲ್ಲಿನ ವಿಭಿನ್ನ ಸಂಸ್ಥೆಗಳ ಮೇಲೆ ಈ ರೀತಿಯ ಹತೋಟಿಯನ್ನು ಸ್ಥಾಪಿಸಿದ್ದರು. ಆದರೆ ಇಂಥ ರಾಜ್ಯಗಳನ್ನು ೧೮ನೇ ಶತಮಾನದ ಯುರೋಪಿನ ಕೇಂದ್ರೀಕೃತ ಪ್ರಭುತ್ವಗಳಿಗೆ ಹೋಲಿಸುವಂತಿಲ್ಲ. ಏಕೆಂದರೆ ಇವುಗಳಲ್ಲಿ ಯಾವುದೇ ರಾಜ್ಯದ ಆಳ್ವಿಕೆಯಲ್ಲಿ ಕೂಡ ಸ್ಥಾನಿಕ ಗುಂಪುಗಳು ಸಂಪನ್ಮೂಲದ ಮೇಲೆ ತಮ್ಮ ಸಾಮುದಾಯಿಕ ಹಕ್ಕನ್ನು ಬಿಟ್ಟುಕೊಡಲಿಲ್ಲ. ರಾಜ್ಯವೂ ಅದನ್ನು ಮನ್ನಿಸಿದ್ದವು. ಬ್ರಿಟಿಷರು ಬಂದ ಮೇಲೆ ಈ ಹಕ್ಕುಗಳನ್ನು ನಾಶಮಾಡುವ ಪ್ರಯತ್ನಗಳು ಗಂಭೀರವಾಗಿ ನಡೆದವು. ಇಂಥದೊಂದು ರಾಜ್ಯಕ್ಕೆ ಕೃಷಿವಿಸ್ತರಣೆ ಮತ್ತು ನೀರಾವರಿಯ ಕಾರ್ಯಕ್ರಮದ ಸ್ವರೂಪ ಹೇಗೆ ಇದ್ದರಿಬಹುದು ಎಂಬ ಕುರಿತೂ ಸ್ಟೈನ್ ಅವರು ಸಾಂದರ್ಭಿಕವಾಗಿ ಚರ್ಚಿಸುತ್ತಾರೆ. ತಿರುಪತಿ ದೇವಾಲಯದ ಸಂದರ್ಭದಲ್ಲಿ ದೇವಾಲಯಗಳನ್ನು ಹೇಗೆ ವಿಜಯನಗರ ರಾಜರು ದಾನ ನೀಡಿ ಪೋಷಿಸಿದ್ದರು ಮತ್ತು ಇವು ನೀರಾವರಿ ಯೋಜನೆಯನ್ನು ಹಮ್ಮಿಕೊಂಡು ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸಿದವು ಎಂದು ಚರ್ಚಿಸುತ್ತಾ ಇಂಥ ನೀರಾವರಿ ಹಾಗೂ ಕೃಷಿ ಅಭಿವೃದ್ಧಿ ರಾಜ್ಯದ ಕಾರ್ಯಕ್ರಮ ಅಥವಾ ರಾಜ್ಯ ಕೃಷಿ ಅಭಿವೃದ್ಧಿಗಾಗಿ ದಾನ ನೀಡಿತು ಎಂದು ಭಾವಿಸಬಹುದೆ? ಎಂಬ ಪ್ರಶ್ನೆಯನ್ನು ಎನ್ನುತ್ತಾರೆ.[11] ಅವರ ಪ್ರಕಾರ ಇದನ್ನು ಹೀಗೆ ಗ್ರಹಿಸಬಹುದು: ರಾಜ್ಯದ ನೇರ ಮತ್ತು ಪ್ರಕಟ ಕಾರ್ಯಕ್ರಮದಲ್ಲಿ ಇದನ್ನು ಸೇರಿಸುವಂತಿಲ್ಲ. ಆದರೆ ಅದು ರಾಜ್ಯದ ಅಂತಸ್ಥ ಕಾರ್ಯಕ್ರಮವಾಗಿ ಪರಿಣಮಿಸುತ್ತದೆ. ದೇವಾಲಯ ಮತ್ತು ಕೆರೆ ಕೊಡಿಗೆಗಳ ದಾನಗಳ ಪ್ರಕಟ ಉ‌ದ್ದೇಶ ಪುಣ್ಯ ಸಂಪಾದಿಸುವುದು. ಇದರ ಪರಿಣಾಮ ಕೃಷಿ ಅಭಿವೃದ್ಧಿಯಾಯಿತು. ಅಂದ ಮಾತ್ರಕ್ಕೇ ರಾಜ್ಯದ ದಾನಕ್ಕೆ ಆರ್ಥಿಕ ಉದ್ದೇಶ ಇತ್ತು ಎನ್ನುವುದು ಸರಿಯಲ್ಲ ಎನ್ನುವ ಅವರು ವಿಜಯನಗರ ಕಾಲದಲ್ಲಿ ದೇವಾಲಯಗಳ ಪಾರುಪತ್ಯಕ್ಕೆ ರಾಜ್ಯದ ಆಧಿಕಾರಿಗಳಿದ್ದರು. ಆದರೆ ಕೃಷಿ, ನೀರಾವರಿ ಮುಂತಾದವುಗಳಿಗೆ ಇರಲಿಲ್ಲ ಎಂಬ ಸಂಗತಿಯತ್ತ ನಮ್ಮ ಗಮನ ಸೆಳೆಯುತ್ತಾರೆ. ಅಂದಿನ ರಾಜ್ಯಕ್ಕೆ ಇಂದಿನ ರಾಜ್ಯಗಳ ಹಾಗೇ ನೇರ ಗುರಿಗಳು ಹಾಗೂ ಉ‌ದ್ದೇಶಗಳತ್ತ ಹೆಚ್ಚು ಪರಿಶೀಲನೆಗಳ ಕಾರ್ಯಕ್ರಮ ಇರಲಿಲ್ಲ ಎನ್ನುತ್ತಾರೆ.

ಮಧ್ಯಕಾಲದಲ್ಲಿ ಫ್ಯೂಡಲ್ ಪ್ರಭುತ್ವ ಭಾರತದಲ್ಲಿ ಇತ್ತೆಂದು ಗ್ರಹಿಸುವ ಇತಿಹಾಸಕಾರರು ಈ ಮೇಲಿನ ಅಂಶಗಳು ಒಂದು ಪ್ರಭುತ್ವ ತನ್ನ ಅಧಿಕಾರವನ್ನು ಪಾಲುಮಾಡಿ ಕೊಡುವ ಪ್ರಕ್ರಿಯೆಯಲ್ಲಿ ರೂಪುಗೊಂಡವುಗಳೆಂದು ವಾದಿಸುತ್ತಾರೆ. ಕ್ರಿಸ್ತಾಬ್ದ ೫ನೇ ಶತಮಾನದ ನಂತರ ಪ್ರಾಚೀನ ಭಾರತದ ನಗರ ಸಮಾಜವು ಅವನತಿ ಹೊಂದಿ ಫ್ಯೂಡಲ್ ರಾಜ್ಯ ವ್ಯವಸ್ಥೆ ನಿರ್ಮಾಣವಾಯಿತು. ಇದು ಪ್ರಧಾನವಾಗಿ ಭೂ ಒಡೆತನ ಹಾಗೂ ಕೃಷಿ ಉತ್ಪಾದನೆಯನ್ನವಲಂಬಿಸಿದ ವ್ಯವಸ್ಥೆಯಾಗಿತ್ತು. ವ್ಯಾಪಾರ ಅವನತಿಹೊಂದಿದ ಪರಿಣಾಮವಾಗಿ ನಾಣ್ಯಗಳ ಬಳಕೆ ಮಿತವಾಗಿ ಭೂಮಿಯ ಉಂಬಳಿ ಮತ್ತು ಮಾನ್ಯದ ರೂಪದಲ್ಲೇ ಅಧೀನ ಅಧಿಕಾರಿಗಳಿಗೆ ಪ್ರತಿಫಲವನ್ನು ನೀಡುವ ಪದ್ಧತಿ ಬೆಳೆದುಕೊಂಡುಬಂದಿತು. ಕೃಷಿ ವಿಸ್ತರಣೆ ಈ ರೀತಿಯಗಿ ರಾಜರ, ಸಾಮಂತರ, ಸ್ಥಾನಿಕ ಆಳುವರ್ಗಗಳ ಹಾಗೂ ಹಳ್ಳಿಗಳಿಗೆ ವಲಸೆಹೋದ ಕುಶಲ ಕರ್ಮಿಗಳ ವಿಶೇಷ ಕಾಳಜಿಯಾಯಿತು. ಸುಮಾರು ೫೦ರಷ್ಟು ವ್ಯವಸಾಯ ರಾಜ್ಯಗಳು ಈ ಕಾಲದಲ್ಲಿ ಆಗಿಹೋದವು. ಇವೆಲ್ಲ ಭೂಮಾಲಿಕರ ಪ್ರಾಬಲ್ಯ ಹಾಗೂ ಕೃಷಿಕರ ಪರಾಧೀನತೆಯನ್ನಾಧರಿಸಿ ನಿಂತಿದ್ದವು. ಈ ಕಾಲದಲ್ಲಿ ಈ ಮೇಲಿನ ವರ್ಗದಿಂದ ನೀರಾವರಿಗೆ ವಿಶೇಷ ಮಹತ್ವ ಸಿಕ್ಕು ಕೆರೆ ಕಾಲುವೆಗಳು ನಿರ್ಮಾಣವಾದವು. ಈ ಕಾಲದ ಧರ್ಮಶಾಸ್ತ್ರಗಳು ಪ್ರತಿಬಿಂಬಿಸುವಂತೇ ಕೆರೆ ಕಟ್ಟೆಗಳನ್ನು ನಿರ್ಮಿಸುವುದು ಪುಣ್ಯಕಾರ್ಯ ಎಂಬ ಶೃದ್ಧೆ ಬೆಳೆದಿದ್ದಲ್ಲದೇ ಅವುಗಳನ್ನು ಹಾಳುಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಕೃಷಿ ಉತ್ಪಾದನೆಯ ಮೇಲೇ ಆಧರಿಸಿದ್ದ ಈ ರಾಜ್ಯವು ತನ್ನ ತಾತ್ವಿಕತೆಯನ್ನು ನೆಲೆನಿಲ್ಲಿಸುವ ದೇವಾಲಯ, ಅಗ್ರಹಾರಗಳಂಥ ಸಂಸ್ಥೆಗಳನ್ನು ಮತ್ತು ಆಡಳಿತ ನಡೆಸುವ ಅಧಿಕಾರಿಗಳನ್ನು ಭೂ ದಾನಗಳನ್ನು ನೀಡಿ ಪೋಷಿಸಿತು. ಇವರೆಲ್ಲ ಅಧಿಕಾರದ ಮಧ್ಯವರ್ತಿಗಳಾದುದಲ್ಲದೇ ಭೂಮಾಲಿಕರಾಗಿ ಬೆಳೆದರು. ಹಳ್ಳಿಯ ಕೃಷಿ ಸಮುದಾಯಗಳ ಸಾಮುದಾಯಿಕ ಆಸ್ತಿಯಲ್ಲಿ ಖಾಸಗಿ ಆಸ್ತಿಯ ನಿರ್ಮಾಣವಾದ ಪರಿಣಾಮ ಕೃಷಿಕರು ಗೇಣಿದಾರರಾಗಿ ಪರಿವರ್ತಿತರಾದರು. ನೀರಾವರಿ ವ್ಯವಸ್ಥೆ ಈ ಪ್ರಕ್ರಿತೆಯ ಒಂದು ಭಾಗವಾಗಿದೆ.[12] ಅನೇಕ ಪ್ರಾದೇಶಿಕ ಅಧ್ಯಯನಗಳು ಈ ನಿಟ್ಟಿನಲ್ಲಿ ಬಂದಿವೆ.[13] ನೀರಾವರಿಯು ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸಿದ್ದು ಖಾಸಗಿ ಒಡೆಯರು ಪ್ರಬಲರಾಗಿ ಬೆಳೆಯಲು ಒಂದು ಕಾರಣವಾಯಿತು. ಇಂಥವರು ಹೆಚ್ಚೆಚ್ಚು ಭೂಮಿಯನ್ನು ಖರೀದಿಸಿದರು. ಇಲ್ಲ ತಮ್ಮ ಭೂಮಿಯನ್ನು ನೀರಾವರಿಗೆ ಒಳಪಡಿಸಿ ಉತ್ಪಾದನೆಯನ್ನು ಜಾಸ್ತಿ ಮಾಡಿದರು. ಇದು ಸ್ಥಾನಿಕವಾಗಿ ಕೃಷಿಕರ ಮತ್ತು ಭೂ ಒಡೆಯರ ಮಧ್ಯದ ಸಂಘರ್ಷಕ್ಕೂ ಎಡೆಮಾಡಿಕೊಟ್ಟಿತು.

ರಾಜ್ಯಕ್ಕೂ ಕೆರೆನೀರಾವರಿಗೂ ಇರಬಹುದಾದ ಸಂಬಂಧದ ಸ್ವರೂಪವನ್ನು ಕುರಿತು ಈ ಮೇಲಿನ ಚರ್ಚೆ ಇದ್ದರೂ ಕೆಲ ಸಾಮಾನ್ಯ ವಿಷಯಗಳು ಇದರಿಂದ ತಿಳಿದು ಬರುತ್ತವೆ: ೧) ಕೆರೆ ನೀರಾವರಿಯ ನಿರ್ವಹಣೆ ಸ್ಥಾನಿಕ ಜವಾಬ್ದಾರಿಯಾಗಿತ್ತು. ಖಾಸಗಿ ಆಸ್ತಿ ಹಾಗೂ ಆಸಕ್ತಿಗಳೊಂದೇ ಇಲ್ಲಿ ನಿರ್ಣಾಯಕವಾಗಬೇಕೆಂದೇನೂ ಇಲ್ಲವಾದರೂ ಅವೂ ಮಹತ್ವದ ಅಂಶಗಳೇ ಆಗಿದ್ದವು. ೨) ಕೆರೆ ನೀರಾವರಿ ವ್ಯವಸ್ಥೆಯ ಮಧ್ಯಕಾಲದಲ್ಲಿ ಆರ್ಥಿಕ ಸಮೃದ್ಧಿಯನ್ನು ಉಂಟುಮಾಡಿದ್ದು ಅಧ್ಯಯನಗಳಿಂದ ಸ್ಪಷ್ಟವಾಗುತ್ತದೆ. ಇಂದು ಆರ್ಥಿಕವಾಗಿ ಹಿಂದುಳಿದಿರುವ ಕರ್ನಾಟಕದ ಅರೆಮಲೆನಾಡಿನ ಭಾಗಗಳು ೧೧-೧೨ನೇ ಶತಮಾನದಲ್ಲಿ ಉಳಿದೆಲ್ಲ ಭಾಗಗಳಿಗಿಂತ ಸಮೃದ್ಧ ಭಾಗಗಳಾಗಿದ್ದವು. ರಾಜಸ್ಥಾನದಂಥ ಒಣ ಪ್ರದೇಶವೂ ನೀರಾವರಿಯಿಂದ ಆರ್ಥಿಕ ಪ್ರಗತಿಯನ್ನು ಸಾಧಿಸಿದ್ಧೂ ವೇದ್ಯವಾಗುತ್ತದೆ. ಬಹುಶಃ ಹೆಚ್ಚು ಇಳುವರಿ, ವರ್ಷಾದ್ಯಂತ ಬೆಳೆ, ನೀರಾವರಿ ವಾಣಿಜ್ಯ ಬೆಳೆಗಳ ಉತ್ಪಾದನೆ ಮುಂತಾದವುಗಳು ಮಧ್ಯಕಾಲದಲ್ಲಿ ಕೃಷಿಯನ್ನೇ ಆಧರಿಸಿದ್ದ ಉದ್ಯಮ ಹಾಗೂ ವ್ಯಾಪಾರಿಗಳಿಗೆ ನಿರ್ಣಾಯಕವಾಗಿದ್ದಿರಬಹುದು. ೩) ಹಾಗಾಗಿ ನೀರಾವರಿ ಆ ಕಾಲದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಬಲವನ್ನು ಸಂವರ್ಧಿಸುವ ಶಕ್ತಿಯಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ.[14] ಆ ಕಾಲದ ಶ್ರೀಮಂತ ಹಾಗೂ ಆಳುವ ವರ್ಗಕ್ಕೆ ಈ ರೀತಿ ಅದು ಆಧಾರವಾಗಿತ್ತು. ಹಾಗೂ ಇವರನ್ನಾಶ್ರಯಸಿದ ರಾಜ್ಯಗಳಿಗೂ ಅದು ಮಹತ್ವದ್ದಾಗಿತ್ತು.

ಕೆರೆ ನೀರಾವರಿಗೆ ಆಶ್ರಯ: ಮೇಲ್ಮಟ್ಟದ ಪ್ರಭುತ್ವಗಳು

ಕೆರೆಗಳ ಸಂಬಂಧಿಸಿ ನಮಗೆ ಅಂಕಿ ಅಂಶಗಳು ಸಿಗುವುದೇ ಆಧುನಿಕ ಕಾಲದ ನಂತರ. ಹಿಂದಿನ ಪ್ರಭುತ್ವಗಳಿಗೆ ಅಂಥ ಅಂಕಿ ಅಂಶಗಳನ್ನು ಕಾಪಾಡುವ ಅಗತ್ಯ ಇರಲಿಲ್ಲ. ಆದರೆ ಅವುಗಳಿಗೆ ಕೆಲ ಕೆರೆಗಳ ಸಂಬಂಧಿಸಿ ಶಾಸನಗಳನ್ನು ನಡೆಸುವ ಜರೂರು ಬಂದಿದ್ದು ಕುತೂಹಲಕಾರಿಯಾಗಿದೆ. ಇಂಥ ಶಾಸನಗಳು ಕೆರೆ ಕಟ್ಟಿಸಿದ, ರಿಪೇರಿ ಮಾಡಿದ, ನಿರ್ವಹಣೆಗೆ ಸಂಬಂಧಿಸಿ ಕೊಟ್ಟ ಕೊಡುಗೆಗಳನ್ನು ಅಥವಾ ಏರ್ಪಡಿಸಿದ ವ್ಯವಸ್ಥೆಯನ್ನು ಶಾಶ್ವತವಾಗಿ ದಾಖಲಿಸುವ ಕೆಲಸ ಮಾಡುತ್ತವೆ. ಹಾಗೆಂದು ಕೆರೆನೀರಾವರಿಯ ಅಸ್ತಿತ್ವ ಇಂಥ ದಾಖಲೆಗಳನ್ನು ಅಲವಂಬಿಸಿರಲಿಲ್ಲ. ಕರ್ನಾಟಕದ ಕೆರೆಗಳ ಒಟ್ಟೂ ಸಂಖ್ಯೆಗೆ ಹೋಲಿಸಿದರೆ ಇಂಥ ದಾಖಲೆಗಳು ಅತ್ಯಲ್ಪ ಹಾಗೂ ಅವುಗಳ ಹಿಂದೆ ಯಾವುದೆ ಥರದ ತಾರತಮ್ಯಗಳು ಇದ್ದಂತೆ ಕಾಣಿಸುವುದಿಲ್ಲ. ಅನೇಕ ಶಾಸನಗಳಲ್ಲಿ ಕೆರೆ ಕಟ್ಟಿಸಿದ ವಿಷಯ ಧರ್ಮಕಾರ್ಯದ ಅಥವಾ ಸಾಧನೆಯ ದಾಖಲೆಯಾಗಿ ಬರುತ್ತದೆಯೇ ಹೊರತೂ ಅದರ ನಿರ್ವಹಣೆಗೆ ಶಿಲಾಶಾಸನದ ಅಗತ್ಯ ಇರಲಿಲ್ಲ. ಕೆರೆಯ ಗಾತ್ರ ಹಾಗೂ ನೀರಾವರಿ ಮಹತ್ವವಂತೂ ಇಂಥ ಶಾಶ್ವತ ದಾಖಲೆಗಳ ಪರಿಗಣನೆಯಲ್ಲಿರಲಿಲ್ಲ. ಬಹುಶಃ ಅವುಗಳಿಗೆಲ್ಲ ತಾತ್ಕಾಲಿಕ ದಾಖಲೆಗಳಿದ್ದಿರಬಹುದು ಅಥವಾ ದಾಖಲೆಯೇ ಇಲ್ಲದೇ ರೂಢಿಯ ಮೇಲೇ ನಡೆದಿರಬಹುದು. ಹಾಗಾಗಿ ಶಾಸನಗಳ ಅಭಾವ ಮತ್ತು ಸಿಕ್ಕ ಶಾಸನಗಳ ಸ್ವರೂಪ ತಿಳಿಸುವಂತೆ ಅಂದಿನ ಕೆರೆ ಕಾರಣಗಳೇ ನಿರ್ಧರಿಸಿದ್ದವು. ಅದೇನೇ ಇದ್ದರೂ ಅವುಗಳಿಂದ ಸ್ಥಾನಿಕ ನಿದರ್ಶನಗಳನ್ನು ನಾವು ಪಡೆಯುತ್ತೇವೆ. ಚಾರಿತ್ರಿಕ ಧರ್ಮ, ಅರ್ಥ ಮತ್ತು ನೀತಿ ಶಾಸ್ತ್ರಗಳಿಂದ ಈ ಕುರಿತು ಅಂದಿನ ಪ್ರಭುತ್ವದ ಕೆಲ ನೀತಿ ಹಾಗೂ ಧರ್ಮ ನಿರ್ದೇಶನಗಳು ಏನಿದ್ದವು ಎಂಬುದನ್ನು ತಿಳಿಯಬಹುದು.

ಶಾಸನಗಳಲ್ಲಿ ಕೆರೆಗಳಿಗೆ ಸಂಬಂಧಿಸಿದ ದಾನಗಳನ್ನು ವಿಶ್ಲೇಷಿಸುವಾಗ ಯಾರು ಇದರಲ್ಲಿ ಆಸಕ್ತಿ ವಹಿಸಿದರು, ಏಕೆ ಆಸಕ್ತಿ ವಹಿಸಿದರು ಎಂಬುದನ್ನು ಗಮನಿಸುವುದು ಬಹುಮುಖ್ಯ ವಾಗುತ್ತದೆ. ಬಹುತೇಕ ಶಾಸನಗಳಲ್ಲಿ ರಾಜ-ಮಹಾರಾಜರ ಹೆಸರುಗಳು ಬಂದರೂ ಅವು ಸ್ಥಾನಿಕ ನಿರ್ಣಯಗಳ ಅಥವಾ ಖಾಸಗಿ ಸಾಧನೆಗಲ ದಾಖಲೆಗಳಾಗಿದ್ದವು. ಕುಪ್ಪುಸ್ವಾಮಿಯವರು ಹಳೆ ಮೈಸೂರಿನ ಶಾಸನ ದಾಖಲೆಗಳ ಮೂಲಕ ಕೆರೆ ಕಟ್ಟಿಸಿದವರ ಕುರಿತ ಅಂಕಿ ಅಂಶಗಳನ್ನು ನೀಡುತ್ತಾರೆ.[15] ರಾಜ್ಯದ ಯಾವುದೇ ಅಧಿಕಾರದಲ್ಲಿ ಗುರುತಿಸಲ್ಪಡುವ ನಿರ್ಮಾತೃಗಳು ಒಟ್ಟೂ ದಾಖಲೆಗಳ ೨೭.೫೬ ಸಾಮಂತರು ಮತ್ತು ಸ್ಥಾನಿಕ ಅಧಿಕಾರಿಗಳು ೫೦%ರಷ್ಟು, ರಾಜ್ಯದ ಅಧಿಕಾರಿಗಳು ೧೬% ರಷ್ಟು. ಆದರೆ ರಾಜ ಮತ್ತು ಆತನ ಪರಿವಾರ ಶೇ. ೫ರಷ್ಟಿದ್ದಾರೆ. ಅಂದರೆ, ಈ ಶಾಶ್ವತ ದಾಖಲೆಯ ಸಂಬಂಧಿಸಿದ ಖಾಸಗಿ ಹಿತಾಸಕ್ತಿ ರಾಜನಿಗಂತೂ ಮಹತ್ವದ್ದಾಗಿರಲಿಲ್ಲ. ಮಧ್ಯಕಾಳದ ಪ್ರಭುತ್ವವನ್ನು ಸ್ಥೂಲವಾಗಿ ಅನೇಕ ಪ್ರಾದೇಶಿಕ, ಸ್ಥಾನಿಕ ಪ್ರಭುತ್ವಗಳನ್ನು (ರಾಜ್ಯಗಳನ್ನು) ಒಳಗೊಂಡ ಒಂದು ಮೇಲ್ಮಟ್ಟದ ವ್ಯವಸ್ಥೆ (ಸಾಮ್ರಾಜ್ಯ) ಎಂದು ಗುರುತಿಸಬಹುದು. ಇಂಥ ರಾಜರನ್ನು ಮಹಾರಾಜಾಧಿರಾಜ ಎಂದು ಕರೆಯಲಾಗಿದೆ. ಇವನು ಪ್ರಾದೇಶಿಕ ರಾಜರನ್ನೂ, ಇಂಥ ರಾಜರನ್ನು ಅದಾಗಲೇ ಅಂಕೆಯಲ್ಲಿ ತಂದುಕೊಂಡ ಮಹಾರಾಜರನ್ನೂ ತನ್ನ ಪ್ರಭುತ್ವದಲ್ಲಿ ಒಳಗೊಂಡಿರುತ್ತಿದ್ದನು. ಈ ಮೇಲ್ಮಟ್ಟದ ಪ್ರಭುತ್ವವು ತಾನೇ ಅಂಥದೊಂದು ಹಂತದಿಂದ ಮೇಲೇರಿ ಕೆಳಮಟ್ಟದ ಪ್ರಭುತ್ವಗಳನ್ನು ಆವರಿಸಿಕೊಳ್ಳುವ ಪ್ರಯತ್ನ ಸುಪ್ರಸಿದ್ಧ ರಾಜವಂಶಗಳ ನೇತೃತ್ವದಲ್ಲಿ ನಡೆದವು. ಇಂಥ ರಾಜವಂಶಗಳು ಒಮ್ಮೊಮ್ಮೆ ಒಂದು ಕೇಂದ್ರೀಕೃತ ಆಡಳಿತಕ್ಕೆ ಪ್ರಯತ್ನಿಸಿದರೂ ಅದು ರಾಜ್ಯದ ಹುಟ್ಟುವಳಿಯುತ್ತಲೇ ಕೇಂದ್ರಿತವಾಗಿತ್ತೇ ಹೊರತೂ ಉತ್ಪಾದನಾ ವಿಧಾನ ಮತ್ತು ಸಾಧನದ ಮೇಲಿನ ನೇರ ಹಿಡಿತವಾಗಿರಲಿಲ್ಲ. ಅದು ಸ್ಥಾನಿಕ ಹಿತಾಸಕ್ತಿಗಳ ಜವಾಬ್ದಾರಿಯಾಗಿತ್ತು. ಈ ಸ್ಥಾನಿಕ ಘಟಕಗಳು ತಮ್ಮ ಸಾಮರ್ಥ್ಯ ಮತ್ತು ವ್ಯಾಪ್ತಿಗೆ ಮೀರಿದ ಕೆಲಸಕ್ಕಾಗಿ ತಮಗಿಂತಲೂ ಮೇಲಿನ ಶಕ್ತಿಗಳನ್ನು ಸಂಪರ್ಕಿಸುತ್ತಿದ್ದರು. ಹೀಗೆ ತೀರ ಮೇಲ್ಮಟ್ಟದ ಪ್ರಭುತ್ವಕ್ಕೂ ಸ್ಥಾನಿಕ ಕೃಷಿ ಮತ್ತು ನೀರಾವರಿಯಲ್ಲಿ ಪ್ರವೇಶಿಸುವ ಅವಕಾಶ ನಿರ್ಮಾಣವಾಗುತ್ತಿತ್ತು. ಈ ಮೇಲ್ಮಟ್ಟದ ಪ್ರಭುತ್ವಕ್ಕೆ ಸ್ಥಾನಿಕ ಅಭಿವೃದ್ಧಿ ಹಾಗೂ ಕೃಷಿ ವಿಸ್ತರಣೆ ಒಂದು ನಿರೀಕ್ಷೆಯೇ ಆಗಿತ್ತು. ಆದರೆ ರಾಜ್ಯದ ಹುಟ್ಟುವಳಿಯಲ್ಲಿ ಸ್ಥಾನಿಕ ಘಟಕಗಳು ಮಧ್ಯವರ್ತಿಗಳಾದ್ದರಿಂದ ಅವುಗಳನ್ನು ಮಾನ್ಯಮಾಡುವುದು ಅದರ ನೇರ ಜವಾಬ್ದಾರಿಯಾಗಿತ್ತು. ಅದರಾಚೆಗೆ ಅಗತ್ಯ ಇಲ್ಲದಿದ್ದಾಗ ಅದು ಪ್ರವೇಶಿಸದಿದ್ದುದ್ದು ಕಂಡುಬರುತ್ತದೆ. ತಮ್ಮ ನಿರೀಕ್ಷೆ ಆ ವ್ಯವಸ್ಥೆಗೆ ಪ್ರತಿಕೂಲವಾದರೆ ಅದು ತನ್ನ ಪಾಲನ್ನು ಬಿಟ್ಟು ಔದಾರ್ಯ ತೋರಿದ ರಾಜರೂ ಇದ್ದರು. ಎಲ್ಲೆಲ್ಲಿ ರಾಜರಿಗೆ ಈ ಮಧ್ಯವರ್ತಿಗಳಿಲ್ಲವೋ, ಅಲ್ಲಿ ರಾಜ್ಯ ನೀರಾವರಿಯ ಕುರಿತು ನೇರ ಕಾರ್ಯವಹಿಸಿತ್ತೆಂದು ತೋರುತ್ತದೆ. ಉದಾಹರಣೆಗೆ ಒಂದು ಶಾಸನದಲ್ಲಿ ವಿವರಿಸಿದಂತೆಯೇ ಸ್ಥಾನಿಕ ಅಧಿಕಾರಿ ಕೆರೆಯ ನಿರ್ಮಾಣದ ಸಲುವಾಗಿ ಕೃಷಿಕರಿಗೆ ಅತಿಯಾದ ತೆರಿಗೆ ಹಾಕಿದಾಗ ಅಲ್ಲಿ ಕೃಷಿ ನಿಂತುಹೋದಾಗ ರಾಜ್ಯ ತೆರಿಗೆಗಳನ್ನು ಕಡಿಮೆ ಮಾಡಿಸಿದ್ದಲ್ಲದೆ ಕೆರೆಯನ್ನೂ ರಿಪೇರಿಮಾಡುತ್ತದೆ.[16]

ಅರ್ಥಶಾಸ್ತ್ರವು ರಾಜನು ಜನಪದಗಳಲ್ಲಿ ಆಣೆಕಟ್ಟುಗಳನ್ನು, ಕೆರೆಗಳನ್ನು ಕಟ್ಟಿಸಬೇಕು, ಇಲ್ಲಿ ಕಟ್ಟಿಸುವವರಿಗೆ ಸ್ಥಳ, ಉಪಕರಣ ಮುಂತಾದವನ್ನು ಕೊಟ್ಟು ಸಹಕರಿಸಬೇಕು, ಆದರೆ ನೀರಿನಲ್ಲಿರುವ ವಿಕ್ರಯ ವಸ್ತುಗಳ ಮೇಲೆ ಮಾತ್ರ ಅವನಿಗೆ ಅಧಿಕಾರ ಎನ್ನುತ್ತದೆ.[17] ರಾಜನು ತನ್ನ ರಾಜ್ಯವು ಕೇವಲ ದೇವಮಾತೃಕೆ (ಮಳೆನೀರನ್ನಾಶ್ರಯಸಿದ ಭೂಮಿ) ಯಾಗದಂತೇ ನೋಡಿಕೊಳ್ಳಬೇಕು, ಅದಕ್ಕಾಗಿ ತಟಾಗಗಳನ್ನು ಕಟ್ಟಿಸಿ ನದೀಮಾತೃಕೆ (ನೀರಾವರಿಯನ್ನಾಶ್ರಯಿಸಿದ ಭೂಮಿ) ಯನ್ನಾಗಿ ಮಾಡಬೇಕು ಎಂಬ ನಿರ್ದೇಶನಗಳೂ ಇವೆ.[18] ಇವೆಲ್ಲ ಪ್ರಾಚೀನ ಕಾಲದವಾದರೆ ಮಧ್ಯಕಾಲದಲ್ಲಿನ ಸ್ಮೃತಿಗಳು ರಾಜನು ನದೀಮಾತೃಕೆಯಾದ ಭೂಮಿಯುಳ್ಳ ರಾಜ್ಯವನ್ನೇ ಆಯ್ದುಕೊಳ್ಳಬೇಕೆನ್ನುತ್ತವೆ.

ಚಾರಿತ್ರಿಕ ಕಾಲದಲ್ಲಿ ಅನೇಕ ಮಹಾರಾಜರು ಹಾಗೂ ಮಹಾರಾಜಾಧಿರಾಜರೂ ಅಲ್ಲಲ್ಲಿ ನೇರವಾಗಿ ಕೆರೆಗಳ ದಾನದಲ್ಲಿ ತೊಡಗಿಸಿಕೊಂಡಿದ್ದು ಕಂಡುಬರುತ್ತದೆ. ಆದರೆ ಇಂಥ ಪ್ರಯತ್ನಗಳನ್ನು ಒಂದು ಆಶ್ರಯದಾತರಂತೇ ಕೆರೆಕಟ್ಟಿಸಿ ಅಥವಾ ರಿಪೇರಿ ಮಾಡಿಸಿ ದಾನ ನೀಡಿದ್ದರೇ ವಿನಃ ಅದರ ನಿರ್ವಹಣೆಯ ಜವಾಬ್ದಾರಿಯನ್ನು ನೇರವಾಗಿ ರಾ‌ಜ್ಯಾಧಿಕಾರಿ ಇಲಾಖೆಯ ಮೂಲಕ ಹೊತ್ತಿರಲಿಲ್ಲ. ಮಹಾರಾಜರಂತೇ ಅವರ ಕುಟುಂಬದ ಸದಸ್ಯರೂ ಇಂಥ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದುದನ್ನು ಗಮನಿಸಿದರೆ ಅದಕ್ಕಿರುವ ಖಾಸಗಿ ಆಯಾಮಗಳು ಸ್ಪಷ್ಟವಾಗುತ್ತವೆ. ಇಂಥ ಕಾರ್ಯಗಳು ಮಹಾರಾಜರ ಪ್ರತಿಷ್ಠೆಯನ್ನು ಹೆಚ್ಚಿಸಿದ್ದವೆಂಬುದು ಅವರ ಶಾಸನಗಳಿಂದ ತಿಳಿದು ಬರುತ್ತದೆ. ಈ ಮಹತ್ಕಾರ್ಯವನ್ನು ಆಚಂದ್ರಾರ್ಕವಾಗಿ ದಾಖಲಿಸಲೆಂದೇ ಶಿಲಾಶಾಸನಗಳನ್ನು ನಡೆಸಿದರು. ಜುನಾಗಢದಲ್ಲಿ ಇಂಥದೊಂದು ಕೆರೆಯನ್ನು ಅಶೋಕನ ಕಾಲದಲ್ಲಿ ಕಟ್ಟಿಸಿದ್ದು ಅದು ಒಡೆದು ಹೋದ ನಂತರ ಶಕ ಕ್ಷಾತ್ರಪ ರುದ್ರದಾಮನ್ ಅದನ್ನು ಇನ್ನೂ ವಿಸ್ತರಿಸಿ ಕಟ್ಟಿಸುತ್ತಾನೆ. ಅದು ಪುನಃ ಒಡೆದು ಹೋಗಲಾಗಿ ಸ್ಕಂಧಗುಪ್ತನು ಅದನ್ನುಇನ್ನೂ ದೃಢಗೊಳಿಸಿ ಕಟ್ಟಿಸಿದನು. ಈ ಸಂಬಂಧಿಸಿ ಅವರು ನಡೆಸಿದ ಶಾಸನಗಳು ಇದನ್ನೊಂದು ಹೆಗ್ಗಳಿಕೆ ಎಂಬಂತೆ ಸಾರುತ್ತವೆ. ಇದೇ ರೀತಿ ಕದಂಬ ಅರಸರಾದ ಮಯೂರವರ್ಮನ ಚಂದ್ರವಳ್ಳಿ ಕೆರೆ, ರವಿವರ್ಮನ ಗುಡ್ನಾಪುರ ಕೆರೆಗಳೂ ಸುಪ್ರಸಿದ್ದವಾಗಿವೆ. ಈ ಸಂಪ್ರದಾಯವನ್ನು ನಂತರದ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ರಾಜರೂ ಮುಂದುವರಿಸಿದರು. ಬುಕ್ಕರಾಯನ ೧೩೮೮ರ ಕಲ್ಲೂಡಿಯ ಶಾಸನದಲ್ಲಿ ಆತನು ಸಿರುವರ ಕೆರೆಗೆ ಹೆನ್ನೆ ನದಿಯಿಂದ ನೀರು ಬರುವ ವ್ಯವಸ್ಥೆ ಮಾಡಿದ್ದಾಗಿ ಹೇಳಿದೆ.[19] ವಿಜಯನಗರದ ಕಾಲದಲ್ಲಿ ಕೆರೆಗಳು ಸಂಖ್ಯೆಯಲ್ಲೂ, ಗಾತ್ರದಲ್ಲೂ, ಹೆಚ್ಚಿದವು. ಆದರೆ ಈ ಬೆಳವಣಿಗೆಯಲ್ಲಿ ರಾಯರ ನೇರವಾದ ಪಾತ್ರ ಅತ್ಯಲ್ಪ. ರಾಯರ ಆಶ್ರಯ ಹಾಗೂ ಸಮ್ಮತಿಯನ್ನು ಪಡೆದು ಆತನ ಕೆಳಗಿನವರು ಹಾಗೂ ಸ್ಥಾನಿಕ ವ್ಯಕ್ತಿ ಮತ್ತು ಸಂಸ್ಥೆಗಳು ಈ ಕೆಲಸವನ್ನು ಸಾಧಿಸಿದರು. ಇಂಥ ಕಾರ್ಯಗಳಿಂದ ಸಾಮ್ರಾಜ್ಯದ ಕೃಷಿ ವಿಸ್ತರಣೆಯಾದರೂ ರಾಜ್ಯಕ್ಕೆ ಅದರ ನೇರ ಪ್ರಯೋಜನವೇನೂ ಇರಲೇಬೇಕೆಂದಿರಲಿಲ್ಲ. ಏಕೆಂದರೆ ಖಾಸಗಿ ಜವಾಬ್ದಾರಿ ಸಂಸ್ಥೆಗಳಾದ ದೇವಾಲಯ, ಅಗ್ರಹಾರ ಮುಂತಾದವುಗಳು ಇದರ ಫಲಾನುಭವಿಗಳಾಗಿದ್ದರು. ಸಾಮ್ರಾಜ್ಯಕ್ಕೆ ಇವರನ್ನು ಪೋಷಿಸಿದ ಪುಣ್ಯ ಹಾಗೂ ಅದರಿಂದ ಸಿಗಬಹುದಾದ ಮಾನ್ಯತೆಯೇ ಬಹುಮುಖ್ಯವಾಗಿತ್ತು.

ಅಂದಿನ ಸಾಮ್ರಾಜ್ಯವು ನೀರಾವರಿ ಹಾಗು ಕೃಷಿ ವ್ಯವಸ್ಥೆಗಳ ಸಂಬಂಧಿಸಿ ಇಂದಿನ ರೀತಿಯ ಒಂದು ಕೇಂದ್ರೀಕೃತ ಕಾರ್ಯಕ್ರಮವನ್ನು ಹೊಂದಿರಲಿಲ್ಲ. ಅಂದ ಮಾತ್ರಕ್ಕೇ ಈ ಕುರಿತು ಅದಕ್ಕೊಂದು ಕಾರ್ಯಕ್ರಮವೇ ಇರಲಿಲ್ಲ ಎಂದರೆ ತಪ್ಪಾಗುತ್ತದೆ. ರಾಜ್ಯದ ತುಂಬೆಲ್ಲ ನಾನಾ ರೀತಿಯ ಕರಗಳನ್ನು, ಸುಂಕಗಳನ್ನು ವ್ಯವಸ್ಥಿತವಾಗಿದ ಎತ್ತುತ್ತಿದ್ದ ಮಹಾರಾಜರಿಗೆ ರಾಜ್ಯದ ಸಮೃದ್ಧಿಯ ಕುರಿತು ನಿರೀಕ್ಷೆಗಳೇ ಇರಲಿಲ್ಲ ಎಂದರೆ ಸರಿಯಾಗಲಾರದು. ಆದರೆ ಮಧ್ಯಕಾಲದಲ್ಲಿ ಈ ನಿರೀಕ್ಷೆಗಳೇ ಇರಲಿಲ್ಲ ಎಂದರೆ ಸರಿಯಾಗಲಾರದು. ಆದರೆ ಮಧ್ಯಕಾಲದಲ್ಲಿ ಈ ನಿರೀಕ್ಷೆಗಳು ಈಡೇರುತ್ತಿದ್ದ ರೀತಿ ವಿಶಿಷ್ಟವಾಗಿತ್ತು. ಅದನ್ನು ಕೇಂದ್ರೀಕರಣ ಅಥವಾ ವಿಕೇಂದ್ರೀಕರಣ ಎಂಬ ಪರಿಭಾಷೆಗಳ ಮೂಲಕವೇ ಅರ್ಥೈಸುವುದು ಸಮಂಜಸವಾಗಲಾರದು. ಸಾಮ್ರಾಜ್ಯಗಳು ಮೇಲ್ಮಟ್ಟದ ಪ್ರಭುತ್ವಗಳಾಗಿದ್ದವೇ ಹೊರತೂ ಪರಿಪೂರ್ಣ ಅಧಿಕಾರ ಕೇಂದ್ರಗಳಾಗಿರಲಿಲ್ಲ. ಮಹಾರಾಜರು ಸ್ಥಾನಿಕ ರಾಜ್ಯಗಳನ್ನು ತಮ್ಮ ಆಳ್ವಿಕೆಯಲ್ಲಿ ನೆಲೆಗೊಳಿಸುವಾಗ ಅವುಗಳ ಆಳ್ವಿಕೆಯನ್ನೂ ನಾಶಮಾಡಲಿಲ್ಲ. ಬದಲಾಗಿ ಅವುಗಳ ಆಳ್ವಿಕೆಯಲ್ಲಿ ತಾವೊಂದು ಮೇಲ್ಮಟ್ಟದ ಶಾಸನಾಧಿಕಾರಿಗಳಾಗಿ ತಮ್ಮ ಮಾನ್ಯತೆಯನ್ನು ಸ್ಥಾಪಿಸಿದವು. ಸ್ಥಾನಿಕ ರಾಜರನ್ನು ಇವರ ಅಧಿಕಾರಿಗಳೆಂದಾಗಲೀ, ಆಡಳಿತ ಘಟಕಗಳನ್ನು ವಿಕೇಂದ್ರಿಕೃತ ವ್ಯವಸ್ಥೆ ಎಂದಾಗಲೀ ಕೆರಯುವಷ್ಟರ ಮಟ್ಟಿಗ ಸಾಮ್ರಾಜ್ಯಗಳ ನಿರ್ದೇಶನ ಇವುಗಳಲ್ಲಿ ಇದ್ದಂತೆ ತೋರುವುದಿಲ್ಲ. ಪ್ರಾದೇಶಿಕವಾಗಿ ನಿರ್ಮಾಣವಾದ ಈ ವ್ಯವಸ್ಥೆಗಳು ಮೇಲ್ಮಟ್ಟದ ಒಂದು ಪ್ರಭುತ್ವ ಇಲ್ಲದೆಯೂ ನಡೆದುಕೊಂಡು ಬರುವ ತಂತ್ರವನ್ನು ಹೊಂದಿದ್ದವು. ಮೇಲ್ಮಟ್ಟದ ಪ್ರಭುತ್ವದೊಳಗೆ ಅವು ಬಂದಾಗ ಪ್ರಾದೇಶಿಕ ಕೃಷಿ ಸಮಾಜಕ್ಕೆ ಹೊಸ ಆರ್ಥಿಕ ಮತ್ತು ಆಡಳಿತಾತ್ಮಕ ಆಯಾಮಗಳು ಸಿಕ್ಕು ಅದು ಬೆಳೆಯುತ್ತಿತ್ತು ಹಾಗೂ ರಾಜ್ಯಗಲ ನಿರಂತರ ಪೋಷಣೆಯೂ ಅವುಗಳು ಉಳಿದುಕೊಂಡು ಬರಲು ಕಾರಣವಾಯಿತು ಎಂಬುದೂ ಗಮನಿಸಬೇಕಾದ ವಿಷಯ. ಮೇಲ್ಮಟ್ಟದ ಪ್ರಭುತ್ವಗಳು ಕೂಡ ಈ ವ್ಯವಸ್ಥೆಗಳನ್ನು ಪೋಷಿಸಿ ತಮ್ಮ ಹಿತಾಸಕ್ತಿಯನ್ನು ಕಂಡುಕೊಂಡವು. ಮಧ್ಯಕಾಳದ ರಾಜ್ಯವೇ ಹೀಗೆ ವ್ಯವಸ್ಥಿತವಾಗಿದ್ದಾಗ ರಾಜ್ಯಕ್ಕೇ ಆರ್ಥಿಕ ಉತ್ಪಾದನೆಯಷ್ಟೇ ತಮ್ಮ ಅಧಿಕಾರಕ್ಕೆ ಮಾನ್ಯತೆ ಒದಗಿಸುವ ದಾನಗಳೂ ಮುಖ್ಯವಾಗಿದ್ದವು.

ಸಾಮ್ರಾಜ್ಯಗಳಲ್ಲಿ ಎರಡು ಪ್ರಕಾರದ ಆಡಳಿತಗಾರರಿದ್ದರು. ಮೊದಲನೆಯ ಪ್ರಕಾರದವರು ಮಹಾರಾಜರಿಂದ ನೇಮಕವಾದವರಾದರೆ ಎರಡನೆಯ ಪ್ರಕಾರದವರು ಮಹಾರಾಜರು ತಮ್ಮ ರಾಜ್ಯ ವಿಸ್ತರಣೆಯಲ್ಲಿ ಒಳಗೊಂಡ ಅಧೀನ ರಾಜರಾಗಿದ್ದರು. ಮೊದಲನೆಯವರು ಕೇಂದ್ರ ನಿರ್ದೇಶಿತ ಅಧಿಕಾರಿಗಳೆಂದು ಗುರುತಿಸಬಹುದು. ಅವರಲ್ಲಿ ಅಧ್ಯಕ್ಷ ಅಧಿಕಾರ, ಪಸಾಯಿತ, ಕರಣ, ದಂಡನಾಯಕ ಮುಂತಾದವರು ೧೩ನೇ ಶತಮಾನದವರೆಗೆ ಕಾಣಿಸಿಕೊಳ್ಳುತ್ತಾರೆ. ಎರಡನೆಯ ಪ್ರಕಾರದವರನ್ನು ಬಿಗುವಾದ ಆಡಳಿತ ಮಾಡಬಯಸಿದ ಮಹಾರಾಜರು ಕೇಂದ್ರದ ಅಧಿಕಾರಿಗಳೆಂದು ನಿಯಮಿಸಿ ಅವರನ್ನು ಸಾಮಂತರೆಂದು ಕರೆದಿದ್ದು ಕಂಡುಬರುತ್ತದೆ. ಅದಿಲ್ಲದಿದ್ದಲ್ಲಿ ಅವರಿಗೇ ಪಂಚಮಹಾಶಬ್ದ (ರಾಜತ್ವದ) ಮಾನ್ಯತೆ ನೀಡಿ ಅವರ ವಿಧೇಯತೆಯನ್ನು ಗಟ್ಟಿಮಾಡಿದ್ದರು. ವಿಜಯನಗರ ಅರಸರು ನಾಯಕ ಪದ್ಧತಿಯನ್ನು ಅಳವಡಿಸಿ ಎರಡನೆಯ ಪ್ರಕಾರದವನ್ನು ಅಳಿಸಿದರೂ ನಾಯಕರು ಸಾಮಂತ ಪದ್ಧತಿಯ ಮುಂದುವರಿಕೆಗಳಾಗಿದ್ದರು. ಹಾಗಾಗಿ ಈ ಸಾಮ್ರಾಜ್ಯಗಳಲ್ಲಿ ಪ್ರಾದೇಶಿಕ ಅರಸರೇ ನೇರ ಆಳ್ವಿಕೆ ನಡೆಸುವವರಾಗಿದ್ದರು ಎಂಬುಸು ಸ್ಪಷ್ಟ. ಈ ಎರಡು ಪ್ರಕಾರದ ಆಡಳಿತಗಾರರೂ ಕೆರೆಗಳನ್ನು ಕಟ್ಟಿಸುವಲ್ಲಿ ಆಸಕ್ತಿವಹಿಸಿದ್ದು ಶಾಸನಗಳಲ್ಲಿ ಬಿಂಬಿತವಾಗಿದೆ.

ಮೊದಲ ಪ್ರಕಾರದ ಅಧಿಕಾರಿಗಳು ಸ್ವ ಇಚ್ಛೆಯಿಂದಲೇ ಇಲ್ಲ ಮೇಲಿನವರ ನಿರ್ದೇಶನದ ಮೇರೆಗೋ ಕೆರೆ ಕಟ್ಟಿಸಿದ್ದರು. ಕಲ್ಯಾಣ ಚಾಲುಕ್ಯರ ಮೊದಲನೆಯ ಸೋಮೇಶ್ವರನ ಕಾಲದಲ್ಲಿ ಒಬ್ಬ ಅಧಿಕಾರಿಯು ಉತ್ತರ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ೧೩ ಕೆರೆಗಳನ್ನು ಕಟ್ಟಿಸಿದನು.[20] ವೀರದೇವನೆಂಬ ಹೊಯ್ಸಳ ಅಧಿಕಾರಿ ೧೧೮೬ರಲ್ಲಿ ಒಂದು ಪಟ್ಟಣವನ್ನು ಕಟ್ಟಿಸಿ ಅದರ ಸುತ್ತಮುತ್ತ ನಾಲ್ಕು ಕೆರೆಗಳನ್ನು ಕಟ್ಟಿಸಿದನು ಹಾಗೂ ಕೆರೆಗಳನ್ನು ಕಟ್ಟಿಸಬಯಸುವ ವ್ಯಕ್ತಿಗಳಿಗೆ ಕೊಡುಗೆಗಳನ್ನು ನೀಡುವುದಾಗಿ ಸಾರಿದನು.[21] ಕೆರೆ ಕಟ್ಟುವ ವ್ಯಕ್ತಿಗಳಿಗೆ ಕೊಡುಗೆಗಳನ್ನು ನೀಡುವ ಪದ್ಧತಿಯನ್ನು ಖಾಸಗಿ ನಿರ್ಮಾತೃಗಳ ಪ್ರೋತ್ಸಾಹಕ್ಕಾಗಿ ರಾಜ್ಯ ಅಳವಡಿಸಿಕೊಂಡಿದ್ದು ಈ ಶಾಸನದಿಂದ ವಿದಿತವಾಗುತ್ತದೆ. ೧೫೨೭ ರ ಒಂದು ಶಾಸನದ ಪ್ರಕಾರ ತಿಮ್ಮರಸ ಎಂಬವನು ನಾಗರಸ ಎಂಬ ತನ್ನ ಮೇಲಧಿಕಾರಿಯ ಆದೇಶದ ಮೇರೆಗೆ ಅರಸಿಕೆರೆ ಕೆರೆಯ ತೂಬನ್ನು ರಿಪೇರಿ ಮಾಡಿಸಿದನು.[22] ಬಾಗಳಿಯ ಹಿರಿಯ ಕೆರೆಯ ರಿಪೇರಿಗೆ ಎರಡು ದಂಡನಾಯಕರು ನೂರು ವರ್ಷದ ಅಂತರದಲ್ಲಿ ರಾಜ್ಯದ ತೆರಿಗೆಯ ಒಂದು ಭಾಗವನ್ನು ನೀಡಿದ್ದರು.[23]ಒಮ್ಮೆ ಎರಡು ಹಳ್ಳಿಗಳಲ್ಲಿ ಹಳ್ಳಿಗರಿಂದ ವಸೂಲಾದ ಅನಧಿಕೃತ ತೆರಿಗೆಯನ್ನು ಅಲ್ಲಿನ ಕೆರೆಗೇ ರಾಜ್ಯವು ವೆಚ್ಚಮಾಡಿದ್ದು ಕಂಡುಬರುತ್ತದೆ.[24]ಮಹಾರಾಜನನ್ನೋ ಇಲ್ಲ ಇಂಥ ಅಧಿಕಾರಿಗಳನ್ನೋ ಸ್ಥಾನಿಕ ಜನರು ವಿನಂತಿಸಿಕೊಂಡೂ ಅವರು ಈ ಕಾರ್ಯಗಳನ್ನು ಮಾಡಿದ್ದಿದೆ. ೧೦೮೦ರ ಶಾಸನವೊಂದು ತಿಳಿಸುವಂತೇ ಬನ್ನೂರಿನ ಮಹಾಜನರು ತಂಬರಸನೆಂಬ ಅಧಿಕಾರಿಯಲ್ಲಿ ಬಂದು ತಮ್ಮ ಊರಿನ ಕೆರೆ ಯಾರು ಕಟ್ಟಿದರೂ ನಿಲ್ಲುತ್ತಿಲ್ಲ, ತಂಬರಸನ ಹೆಸರಲ್ಲಿ ಕಟ್ಟಿದರೆ ನಿಲ್ಲಬಹುದು ಎಂದು ಕೇಳಿಕೊಂಡಾಗ ಆತನು ಜಕ್ಕಿಗೋಸಿ ಎಂಬವನನ್ನು ಈ ಕೆಲಸಕ್ಕೆ ನೇಮಿಸಿ ತನ್ನ ಹೆಸರಿನಲ್ಲಿ ತಂಬಸಮುದ್ರ ಎಂಬ ಕೆರೆ ಕಟ್ಟಿಸಿ ಅದರ ಹೂಳೆತ್ತಿ ಸುಸ್ಥಿತಿಯಲ್ಲಿಡುವ ವ್ಯವಸ್ಥೆಯನ್ನೂ ಮಾಡುತ್ತಾನೆ.[25] ಅಂದರೆ ಸ್ಥಾನಿಕವಾಗಿ ಆ ಹಳ್ಳಕ್ಕೆ ಕಟ್ಟೆ ಕಟ್ಟಿ ನಿಲ್ಲಿಸುವುದು ಅಸಾಧ್ಯವಾದಾಗ ರಾಜ್ಯದ ಅಧಿಕಾರಿಗಳು ಸಹಾಯ ಮಾಡಿದ್ದು ಕಂಡು ಬರುತ್ತದೆ.

 

[1]ದಿಕ್ಷತ ಜಿ.ಎಸ್ ಕುಪ್ಪುಸ್ವಾಮಿ ಜಿ.ಆರ್ ಮತ್ತು ಮೋಹನ್ ಎಸ್.ಕೆ. (Tank Irrigation in Karnataka ಬೆಂಗಳೂರು, ೧೯೯೩.

[2]ಕೊಟ್ರಯ್ಯ ಸಿ.ಏ.ಎಂ.ಏ Irrigation Systrms Under vijayangara Empire ಮೈಸೂರು, ೧೯೯೫.

[3]ಕುಪ್ಪುಸ್ವಾಮಿ ಜಿ.ಆರ್.ಅವರು Quarterluy Journal of Mythic Society (QJMS) ನಿಯತಕಾಲಿಕೆಯಲ್ಲಿ LXXIV, NO. ೧;LXXVII, No.೪; LCCCI, NO.೩ &೪; LXXXII, NO. ೩&೪; LXXXIII, NO.೧ ಇವುಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ.

[4]ದೀಕ್ಷಿತ ಜಿ.ಎಸ್. ಮುಂತಾದವರು, ಪೂರ್ವೋಕ್ಷ, ಪು.೧೬೬

[5]ಅದೇ, ಪು.೧೮೨-೮೪

[6]ಡೇವಿಡ್ ಲಡ್ಡನ್, (Ed) Argicultural Production and Indian History, OUP, Delhi, ೧೯೯೪, ವು ೩-೫.

[7]ದೀಕ್ಷಿತ ಜಿ.ಎಸ್.ಎ.ಮುಂತಾದವರು, ಪೂರ್ವೋಕ್ಷ. ಪು.೧೬೬-೬೭.

[8]ನಖ್ವಿ ಎಸ್. “Marx on Pre British Indian Society and Econovy” in Science and Human Progress, Popular Prakashan, ೧೯೭೪, ಪು.೪೮-೭೬.

[9]ದೀಕ್ಷಿತ ಜಿ.ಎಸ್. Local Self -Government in Medieval Karnataka ಧಾರವಾಡ, ೧೯೬೪ ಹಾಗೂ ವೆಂಕಟರತ್ನಂ

[10]ಬರ್ಟನ್ ಸ್ಟೈನ್, “The Segmantary State: Intereem Reflections” in The State in India ೧೦೦೧೭೦೦ ಸಂ. ಹರ್ಮನ್ ಕುಲ್ಕೆ, OUT ದೆಹಲಿ ೧೯೯೭, ಪು. ೧೩೪-೬೨.

[11]ಬರ್ಟನ್ ಸ್ಟೈನ್, All the Kings Mana, ಮದ್ರಾಸ್ ೧೯೮೪, ಪು.೧೭೩-೧೭೮.

[12]ಶರ್ಮ ಆರ್.ಎಸ್. Urban Decay ದೆಹಲಿ, ೧೯೮೭, ಪು.೧೭೩.

[13]ಉದಾಹರಣೆಗೆ ನೋಡಿ ಝಾ ಡಿ.ಎನ್.. (ed) Feuddal Social Formation ೧೯೮೭, ರಲ್ಲಿ ನಂದಿ ಆರ್.ಎನ್. “Agrarian Growth and Social Conflict in Early India” ಚಿ.೨೩೯-೮೧ ಹಾಗೂ ಕಾರಾಶಿಮಾ ನೊಬೊರು, “The Prevlence of Private Land Holding in the Lower Kaveri Valley” ಪು.೧೨೧-೧೩೯.

[14]ಚಟ್ಟೋಪಾಧ್ಯಾಯ ಬಿ.ಡಿ. The Making of Early Medieval India OUP ದೆಹಲಿ, ೧೯೯೪, ಪು.೪೨-೫೭ ರಲ್ಲಿ ಮಧ್ಯಕಾಲೀನ ರಾಜಸ್ಥಾನದ ನೀರಾವರಿಯ ಕುರಿತು ನೀಡುವ ವಿವರಗಳು ವಿಶೇಷವಾಗಿ ಭಾವಿ ಮತ್ತು ಅರಘಟ್ಟಗಳನ್ನು ಕುರಿತು ಇದ್ದರೂ ಅವರು ಕೃತಕ ನೀರಾವರಿಯ ಸಾಮಾಜಿಕ ಸಂಘಟನೆಯ ಬಗ್ಗೆ ಕೂಡ ಚರ್ಚಿಸುತ್ತಾರೆ. ಯಾರು ಇವುಗಳಿಗೆ ದಾನ ನೀಡಿದರು ಮತ್ತು ಯಾರು ಅವುಗಳ ಲಾಭ ಪಡೆದರು ಎಂಬುದು ನೀರಾವರಿ ವ್ಯವಸ್ಥೆಯ ಸಾಮಾಜಿಕ ಮುಖವನ್ನು ಅರಿಯಲು ಬಹಳ ಮುಖ್ಯವಾದ ಪ್ರಶ್ನೆಗಳು ಎನ್ನುತ್ತಾರೆ. ಹಾಗೂ ತೀರ ಸ್ಥಾನಿಕ ಮಟ್ಟದಲ್ಲಾದರೂ ನೀರಾವರಿ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ಉತ್ಪಾದಿಸಿತ್ತು ಎಂಬುದನ್ನು ತೋರಿಸುತ್ತಾರೆ.

[15]ಕುಪ್ಪುಸ್ವಾಮಿ ಜಿ.ಆರ್. “Some Aspects of Irrigation System in Karnataka” QJMS ಸಂ.೪, ಪು.೪೦೪-೪೨೦.

[16]ಗೋಪಾಲ್ ಬಿ.ಆರ್. Vijayanagar Inscriptions Vol II Karnataka ೫೯೨.

[17]ಅರ್ಥಶಾಸ್ತ್ರ ೨.೨೨.೧೯ ಜನಪದ ನಿವೇಶ: ಅರ್ಥಶಾಸ್ತ್ರವು ಬೇರೆ ಬೇರೆ ಪ್ರಮಾಣದಲ್ಲಿ ನೀರಾವರಿಗೆ ಒಳಪಟ್ಟ ಭೂಮಿಗೆ ಬೇರೆ ಬೇರೆ ತೆರಿಗೆಗಳನ್ನು ನಿರ್ಧರಿಸುತ್ತದೆ.

[18]ಕಾಣೆ ಪಿ.ವಿ. History of Dharmasastras Vol III Poona ೧೯೯೩ ಪು.೧೬೨.

[19] Epigraphia Carnatika (EC) Vol X ಗೌರಿಬಿದನೂರು, ೬.

[20] South Indian Inscriptions (SII) no XI ಸಂ.೧೦೩, ನಂದವಾಡಿಗೆ, ಬಿಜಾಪುರ ಜಿಲ್ಲೆ. ಸೋಮೇಶ್ವರನ ಅಧಿಕಾರಿ ಭಾವನ ಗಂಧವಾರಣ ಎಂಬ ಬಿರುದು ಉಳ್ಳವನೊಬ್ಬ ವ್ಯಕ್ತಿ.

[21] ECV ಬೇಲೂರು, ಸಂ.೭-೧೭೫.

[22] SII IX, ii ಸಂ. ೭-೧೭೫.

[23] SII, IX,I, ಸಂ.೧೭೩, ೧೯೨,ಕ್ರಿ.೧೧೦೭ ರಲ್ಲಿ ದಂಡನಾಯಕ ಬಮರರಸ ಬಾಗಳಿಯ ಪನ್ನಾಯದ ಸುಂಕದಲ್ಲಿ ತಿಂಗಳಿಗೊಂದು ಗದ್ಯಾಣವನ್ನು ಕೆರೆ ರಿಪೇರಿಗೆ ನೀಡಿದರು. ಕ್ರಿ.೧೧೧೫ ದಂಡನಾಯಕ ತಿಕ್ಕಭಟ್ಟನು ಹಿರಿಯ ಕೆರೆಯ ರಿಪೇರಿಗೆ ಸುಂಕವನ್ನು ಬಿಟ್ಟನು.

[24] EC, XI, ಮೊಳಕಾಲ್ಮುರು, ೪ ಮತ್ತು ೫ ಮುರಡಿ ಮತ್ತು ಕರಡಿಹಳ್ಳಿ.

[25] Mysore Archaeological Reports, ೧೯೩೦, ಸಂ.೭೬.