ಭಾರಿ ಕೆರೆಗಳ ನಿರ್ವಹಣೆ ಮತ್ತು ಸಣ್ಣಕೆರೆಗಳ ಜೀರ್ಣೋದ್ಧಾರ, ದುರಸ್ತಿ ಹಾಗೂ ನಿರ್ವಹಣೆಗಳನ್ನು ರೈತರು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಕೆರೆಗಳ ಮೇಲಿನ ಹತೋಟಿ ಹಾಗೂ ಅವುಗಳ ಜೀರ್ಣೋದ್ಧಾರ, ದುರಸ್ತಿ ಹಾಗೂ ನಿರ್ವಹಣೆಗಳಿಗೆ ಮೀಸಲಿಟ್ಟ ಹಣಕಾಸು ಇವುಗಳ ಜವಾಬ್ದಾರಿ ಹೊತ್ತ ಪಂಚಾಯತಿಗಳನ್ನು ರಚಿಸುವ ಉದ್ದೇಶದಿಂದ ಘನತೆವೆತ್ತ ಮಹಾರಾಜರು ಕೆಳಕಂಡ ಕಾಯಿದೆ ರೂಪಿಸಿದ್ದಾರೆ.

೧ (ಅ) ಈ ಕಾಯಿದೆಯನ್ನು “ಕೆರೆ ಪಂಚಾಯತಿ ಕಾಯಿದೆ – ೧೯೧೧” ಎಂದು ಕರೆಯಬಹುದು.

(ಆ) ಇದರ ಕಾರ್ಯವ್ಯಾಪ್ತಿಯ ಬಳ್ಳಾರಿ ಜಿಲ್ಲೆಯನ್ನು ಹೊರತುಪಡಿಸಿ ಮೈಸೂರು ಸಂಸ್ಥಾನವನ್ನು ಒಳಗೊಂಡಿದೆ.

(ಇ) ಈ ಕಾಯಿದೆಯು ಫೆಬ್ರವರಿ ೬, ೧೯೧೧ರಂದು ಜಾರಿಗೆ ಬರುತ್ತದೆ.

೨. ವಿಷಯ ಅಥವಾ ಸಂದರ್ಭಕ್ಕೆ ವ್ಯತಿರಿಕ್ತವಾದ ಪ್ರಸಂಗವನ್ನು ಬಿಟ್ಟು ಉಳಿದಂತೆ ಈ ಕಾಯಿದೆ ಪ್ರಕಾರ

(ಅ) “ಕೆರೆ” ಎಂದರೆ ನೀರಾವರಿ ಕೆರೆ ಎಂದು ಅರ್ಥ. ಕೆರೆ ಎಂಬುದು ಅಣೆಕಟ್ಟು, ವಡ್ಡು ಮತ್ತು ಕೆರೆಗಳಿಂದ ನೀರು ಪಡೆಯುವ ಕಾಲುವೆಗಳನ್ನು ಒಳಗೊಂಡಿರುತ್ತದೆ.

(ಆ) “ಭಾರಿ ಕೆರೆ” ಎಂದರೆ ಯಾವ ಕೆರೆಯ ಅಚ್ಚುಕಟ್ಟು ಪ್ರದೇಶದ ವಾರ್ಷಿಕ ಕಂದಾಯವು ರೂ.೩೦೦ ಮೀರುತ್ತದೊ ಮತ್ತು ಸರ್ಕಾರವು ಕಾಲಕಾಲಕ್ಕೆ ಯಾವುದನ್ನು ಬಾರಿ ಕೆರೆಯೆಂದು ಘೋಷಿಸಿ ಪ್ರಕಟಣೆ ಹೊರಡಿಸುತ್ತದೋ ಅವು ಎಂದು ಅರ್ಥ.

ಉಳಿದ ಎಲ್ಲ ಕೆರೆಗಳು “ಸಣ್ಣ ಕೆರೆಗಳು”

(ಇ) “ನಿರ್ಮಾಣ”ವೆಂದರೆ ಹೊಸಕೆರೆಯನ್ನು ಕಟ್ಟುವುದು ಎಂದು ಅರ್ಥ.

(ಈ) “ಜೀರ್ಣೋದ್ಧಾರ” ವೆಂದರೆ ಅಲಕ್ಷ್ಯದಿಂದ, ಅಪಘಾತದಿಂದ ಅಥವಾ ಇನ್ನಾವುದೇ ಕಾರಣಗಳಿಂದ ಹಾಳಾದ ಅಥವಾ ದುರ್ಬಲಗೊಂಡ ಅಥವಾ ಉಪಯೋಗಿಸಲು ಸಾಧ್ಯವಿಲ್ಲದಂತಾದ ಕೆರೆಗಳನ್ನು ಸರಿಪಡಿಸಿ ಅದರ ಕಾರ್ಯಕ್ಷಮತೆಯನ್ನು ಮರುಸ್ಥಾಪಿಸುವುದು ಎಂದು ಅರ್ಥ.

(ಉ) “ಸುಧಾರಣೆ” ಎಂದರೆ ನೀರಾವರಿ ಉದ್ಧೇಶಕ್ಕೆ ಹೆಚ್ಚಾಗಿ ಉಪಯುಕ್ತವಾಗುವಂತೆ ಅಥವಾ ನೀರಾವರಿಗೆ ಅಧಿಕ ನೀರು ಒದಗುವಂತೆ ಕೆರೆಯ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುವುದು ಎಂದು ಅರ್ಥ.

(ಊ) “ನಿರ್ವಹಣೆ” ಎಂದರೆ ಕೆರೆಯು ನಿರ್ಮಾಣವಾದ ಸಂದರ್ಭದಲ್ಲಿ ನಿಗದಿಪಡಿಸಿದ್ದ ಅದರ ಭದ್ರತೆಯ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಜೀರ್ಣೋದ್ಧಾರ ಮಾಡುವುದು ಅಥವಾ ಸುಧಾರಣೆಗೆ ಅಗತ್ಯವಾದ ಲಘು ದುರಸ್ತಿ ಕಾರ್ಯ ನಡೆಸುವುದು ಎಂದು ಅರ್ಥ ಮತ್ತು ಇದು ಕೆಳಕಂಡ ಸಂಗತಿಗಳನ್ನು ಒಳಗೊಂಡಿರುತ್ತದೆ.

(i) ನಿರ್ದಿಷ್ಟ ಗುಣಮಟ್ಟದಲ್ಲಿ ಕೆರೆಯ ಏರಿಯನ್ನು ಕಾಯ್ದುಕೊಳ್ಳವುದು, ಏರಿಯ ಇಳುಕಲು, ಎತ್ತರ ಮತ್ತು ಕಾರ್ಯನಿರ್ವಹಣಾ ಅಭಿಯಂತರರು ಹಾಗೂ ಜಿಲ್ಲಾಧಿಕಾರಿಗಳು ನಿರ್ದಿಷ್ಟ ಪಡಿಸಿದ ರೀತಿಯಲ್ಲಿ ಏರಿಯ ಸ್ಥಿತಿಗತಿಗಳನ್ನು ಸಂರಕ್ಷಿಸುವುದು,

(ii) ಮಳೆಯಿಂದ, ದನಗಳ ತಿರುಗಾಟದಿಂದ ಅಥವಾ ಇನ್ನಾವುದೇ ಕಾರಣದಿಂದ ಏರಿಯಲ್ಲಿ ಹಾಗೂ ಕಾಲುವೆಗಳಲ್ಲಿ ಉಂಟಾಗುವ ತಗ್ಗುಗಳನ್ನು ಮತ್ತು ಕೊರಕಲುಗಳನ್ನು ತುಂಬುವುದು,

(iii) ಮುಳ್ಳಿನ ಗಿಡ, ಮುಳ್ಳಿನ ಪೊದೆ ಮತ್ತು ಅದೇ ರೀತಿಯ ಇನ್ನಾವುದೇ ವಿನಾಶಕಾರಿ ಕಳೆ ಏರಿಯ ಮೇಲೆ ಬೆಳೆಯದಂತೆ ತಡೆಯುವುದು,

(iv) ಕೆರೆಯ ಏರಿಗೆ ದಕ್ಕೆ ಉಂಟು ಮಾಡಬಲ್ಲ ಸಣ್ಣ-ಪುಟ್ಟ ಗಿಡ-ಮರಗಳನ್ನು ತೆಗೆದು ಹಾಕುವುದು,

(v) ನೀರಾವರಿ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿದು ಹೋಗುವಂತೆ ಕಾಲುವೆಗಳಲ್ಲಿ ಹಾಗೂ ತೂಬುಗಳಲ್ಲಿ ತುಂಬಿಕೊಂಡಿರುವ ಹೂಳು, ಮಣ್ಣು, ಕಸ ತೆಗೆದು ಸರಿಪಡಿಸುವುದು.

(vi) ಕೆರೆಯ ಕಾಲುವೆಗಳನ್ನು ನೀರು ಸರಾಗವಾಗಿ ಹರಿಯುವಂತೆ ಮಾಡುವುದು,

(vii) ಮಳೆಗಾಲದಲ್ಲಿ ಕೆರೆಗಳ ಏರಿಗಳ ಮೇಲೆ ನಿಗಾ ಇಡುವುದು, ಗಾಳಿ-ಮಳೆಯಿಂದ ಏರಿಯ ಮೇಲೆ ಉಂಟಾಗುವ ತಗ್ಗು-ಕೊರಕಲುಗಳನ್ನು ತುಂಬುವುದು. ತೂಬಿನ ಬಾಗಿಲುಗಳನ್ನು ತೆಗೆಯಲು ಹಾಗೂ ಮುಚ್ಚಲು ನೆರವಾಗುವುದು ಮತ್ತು ಕೆರೆಯ ಏರಿ ಒಡೆದು ಹೋಗದಂತೆ ಅಥವಾ ಇನ್ನಾವುದೇ ಅಪಘಾತ ನಡೆಯದಂತೆ ಜಾಗ್ರತೆ ವಹಿಸುವುದು.

(ಋ) “ಹಳ್ಳಿ” ಎಂದರೆ ಕೆರೆ ಪಂಚಾಯತಿ ಕಾರ್ಯವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಗುಂಪು ಅಥವಾ ನಿರ್ದಿಷ್ಟ ಭೂ ಪ್ರದೇಶವೆಂದು ಅರ್ಥ.

(ಋ) “ಸಾಂಪ್ರದಾಯಿಕ ಜವಾಬ್ದಾರಿ” ಎಂದರೆ ೧೮೭೩, ಅಕ್ಟೋಬರ್ ೨ ರಂದು ಮೈಸೂರಿನ ಪ್ರಧಾನ ಆಯುಕ್ತರು ಹೊರಡಿಸಿದ ಸಂಖ್ಯೆ ೬೫ರ ಪ್ರಕಟಣೆಯಲ್ಲಿ ಮತ್ತು ಅಲ್ಲಿಂದ ಮುಂದೆ ೧೯೦೪ರ ಡಿಸೆಂಬರ್ ೧೫ರಂದು ಸಂಖ್ಯೆ ೫೨೬೨ರ ಪ್ರಕಟಣೆಗಳಲ್ಲಿ ಸೇರಿಸುವ ಎಲ್ಲಾ ಜಬಾಬ್ದಾರಿಗಳು ಎಂದು ತಿಳಿಯಬೇಕು.

(ಎ) “ಪಟೇಲ ಮತ್ತು ಶಾನುಭೋಗ” ಎಂದರೆ ಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟೇಲ ಮತ್ತು ಶಾನುಭೋಗರೆಂದು ಮತ್ತು ಪಟೇಲ ಮತ್ತು ಶಾನುಭೋಗರ ಸಂಖ್ಯೆ ಹಳ್ಳಿಯೊಂದರಲ್ಲಿ ಒಂದಕ್ಕಿಂತ ಅಧಿಕವಿದ್ದರೆ ಜಿಲ್ಲಾಧಿಕಾರಿಗಳು ಸದರಿ ಕಾಯಿದೆ ಉದ್ಧೇಶಕ್ಕಾಗಿ ಆಯ್ಕೆ ಮಾಡುವ ಪಟೇಲ ಮತ್ತು ಶಾನುಭೋಗ ಎಂದು ಅರ್ಥ.

೩. ಯಾವುದೇ ಹಳ್ಳಿಗೆ ಸಂಬಂಧಿಸಿದಂತೆ ಸರ್ಕಾರವು ಅಗತ್ಯವೆಂದು ಪರಿಗಣಿಸಿದರೆ ಮತ್ತು ಸದರಿ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಾಗುವಳಿ ಪ್ರದೇಶದಲ್ಲಿ ಅರ್ಧದಷ್ಟು ಪ್ರದೇಶದ ಎರಡನೇ ಮೂರರಷ್ಟು ರೈತರು ಬಯಸಿದರೆ ಸರ್ಕಾರವು ಪಟೇಲ ಮತ್ತು ಶಾನುಭೋಗರನ್ನು ಒಳಗೊಂಡಂತೆ ಇಲ್ಲಿ ನಿರ್ದೇಶಿಸಿರುವ ರೀತಿಯಲ್ಲಿ ರೈತರಿಂದ ಚುನಾಯಿತರಾದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರುಗಳಿಂದ ಕೂಡಿದ ಪಂಚಾಯತಿಯೊಂದನ್ನು ರಚಿಸಬಹುದು.

೪. ಪ್ರಕರಣ-೫ರಲ್ಲಿ ನಿರ್ದಿಷ್ಟ ಅನರ್ಹತೆಗಳನ್ನು ಬಿಟ್ಟು, ಉಳಿದಂತೆ ಯಾವ ರೈತ

(ಅ) ಗ್ರಾಮದಲ್ಲಿ ಖುಷ್ಕಿ ಅಥವಾ ಬಾಗಾಯತು ಜಮೀನಿಗೆ ರೂ. ೨೦ಕ್ಕಿಂತ ಹೆಚ್ಚು ಕಂದಾಯ ಸಲ್ಲಿಸುತ್ತಿದ್ದಾರೋ

(ಆ) ಗ್ರಾಮದಲ್ಲಿ ತರಿ ಜಮೀನಿಗೆ ರೂ. ೧೦ಕ್ಕಿಂತ ಕಡಿಮೆಯಿಲ್ಲದಂತೆ ಕಂದಾಯ ಕಟ್ಟುತ್ತಿದ್ದಾರೋ

(ಇ) ಹಳ್ಳಿಯಲ್ಲಿ ರೂ. ೫ಕ್ಕಿಂತ ಕಡಿಮೆಯಿಲ್ಲದಂತೆ ಮೋಹತರ್ಫಾ ತೆರಿಗೆ ಕಟ್ಟುತ್ತಿದ್ದಾರೋ

(ಈ) ಒಟ್ಟಾರೆ ರೂ. ೨೫ ಕಂದಾಯ ಸಲ್ಲಿಸುತ್ತಿದ್ದಾರೋ

ಅವರು ಪಂಚಾಯತಿಗೆ ಚುನಾಯಿತರಾಗಲು ಅರ್ಹರಾಗಿರುತ್ತಾರೆ ಮತ್ತು ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಣೆ ನೀಡಿ ಸ್ಥಳೀಯ ಪ್ರದೇಶದಲ್ಲಿ ಕಂದಾಯ ಅಥವಾ ಮೊಹತರ್ಪಾ ತೆರಿಗೆಯ ಮೊತ್ತವನ್ನು ಕಡಿತಗೊಳಿಸಿದೆ ಇದ್ದ ಪಕ್ಷದಲ್ಲಿ ಯಾರು ಖುಷ್ಕಿ, ತರಿ ಅಥವಾ ಬಾಗಾಯತು ಇನಾಂಭೂಮಿ ಪಡೆದಿರುತ್ತಾರೋ, ಸರ್ವೆ ಮೂಲಕ ನಿಗದಿ ಪಡಿಸಿದ ಕಂದಾಯ ಮೌಲ್ಯವು ಮೇಲೆ ವರ್ಗೀಕರಿಸಿರುವ (ಅ) ಮತ್ತು (ಆ)ವರ್ಗದ ಭೂಮಿಯ ಕಂದಾಯಕ್ಕಿಂತ ಕಡಿಮೆಯಿಲ್ಲದಂತೆ ಭೂಮಿ ಪಡೆದಿದ್ದಾರೋ ಅಥವಾ ಇನಾಂ ಭೂಮಿಯ ಸರ್ವೇ ಮೌಲ್ಯ ಮತ್ತು ಮೊಹತರ್ಫಾ ತೆರಿಗೆಗಳ ಒಟ್ಟು ಮೊತ್ತ ರೂ.೨೫ಕ್ಕಿಂತ ಕಡಿಮೆಯಿರುವುದಿಲ್ಲವೋ ಅಂತಹ ರೈತರು ಪಂಚಾಯತಿಗೆ ಚುನಾಯಿತರಾಗಲು ಅರ್ಹರಾಗಿರುತ್ತಾರೆ.

೫. ಪಂಚಾಯತಿ ಸದಸ್ಯರಾಗಿ ಚುನಾಯಿತರಾಗಲು ಅನರ್ಹರೆಂದು ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಸರ್ಕಾರಕ್ಕೆ ಕೆಳಕಂಡ (ಅ) ಮತ್ತು (ಆ) ಗಳಿಗೆ ಸಂಬಂದಿಸಿದಂತೆ ಅಪೀಲು ಮಾಡಿದ ಸಂದರ್ಭವನ್ನು ಹೊರತುಪಡಿಸಿ,

(ಅ) ಕ್ರಿಮಿನಲ್ ನ್ಯಾಯಾಲಯವು ಅಪರಾಧಿಯೆಂದು ಶಿಕ್ಷೆ ನೀಡಿದ ಸಂದರ್ಭದಲ್ಲಿ ಅವರು ಪಂಚಾಯತಿಯಲ್ಲಿ ಅಧಿಕಾರ ಸ್ಥಾನಕ್ಕೆ ಅನರ್ಹನೆಂದು ಜಿಲ್ಲಾಧಿಕಾರಿ ಘೋಷಿಸಿದಾಗ, ಅಂತವರು

(ಆ) ಜಿಲ್ಲಾಧಿಕಾರಿಯ ತಿಳುವಳಿಕೆ ಪ್ರಕಾರ ಅಧಿಕಾರ ಸ್ಥಾನದ ಜವಾಬುದಾರಿಗಳನ್ನು ನಿರ್ವಹಿಸಲು ಶಾರೀರಿಕ ಮತ್ತು ಬೌದ್ಧಿಕ ಸಾಮರ್ಥ್ಯವಿಲ್ಲದವರು,

(ಇ) ೨೧ ವರ್ಷ ವಯಸ್ಸು ತುಂಬದವರು

(ಈ) ಪುರುಷರಲ್ಲದವರು

ಪಂಚಾಯತಿ ಸದಸ್ಯರಾಗಲು ಚುನಾವಣೆಗೆ ನಿಲ್ಲಲು ಅರ್ಹರಾಗಿರುವುದಿಲ್ಲ.

೬. ಕೆರೆ ಪಂಚಾಯತಿಯ ಚುನಾಯಿತ ಸದಸ್ಯರ ಸಂಖ್ಯೆಯನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ. ಹೀಗೆ ನಿಗದಿಪಡಿಸುವ ಸದಸ್ಯರಲ್ಲಿ ಒಂದನೇ ನಾಲ್ಕರಷ್ಟು ಖುಷ್ಕಿ ಮತ್ತು ಬಾಗಾಯಿತು ಜಮೀನುಗಳಿಲ್ಲದೆ ಕೇವಲ ತರಿ ಜಮೀನು ಹೊಂದಿದ ಅಥವಾ ಮೊಹತರ್ಫಾ ತೆರಿಗೆ ನೀಡುವವರಿರಬೇಕು. ಉಳಿದ ಸದಸ್ಯರುಗಳು ತರಿ ಜಮೀನು ಇರಲಿ ಅಥವಾ ಇಲ್ಲದಿರಲಿ ಖುಷ್ಕಿ ಮತ್ತು ಬಾಗಾಯಿತು ಜಮೀನು ಹೊಂದಿರುವ ರೈತರು ಇರುತ್ತಾರೆ.

೭.(ಅ) ಕೆರೆ ಪಂಚಾಯತಿಯ ರಚನೆ ಹಾಗೂ ಅದರ ಸದಸ್ಯರುಗಳ ಹೆಸರುಗಳನ್ನು ಅಧಿಕೃತ ಗೆಜೆಟಿನಲ್ಲಿ ಪ್ರಕಟಿಸಬೇಕು.

(ಆ) ಕೆರೆ ಪಂಚಾಯತಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಮೂರು ವರ್ಷಗಳು.

೮. (ಅ) ಪಂಚಾಯತಿಯ ಸದಸ್ಯರು ಅಪರಾಧವೆಸೆಗಿದಾಗ ಅಥವಾ ತಮ್ಮ ಸ್ಥಾನಕ್ಕೆ ಕುಂದು ಬರುವಂತೆ ನಡೆದುಕೊಂಡಾಗ ಅಥವಾ ಜವಾಬುದಾರಿ ನಿರ್ವಹಿಸಲು ಅಸಮರ್ಥರೆಂದು ಕಂಡು ಬಂದಾಗ, ಕೆರೆ ಪಂಚಾಯತಿಯ ಶಿಫಾರಸ್ಸಿನ ಮೇರೆಗೆ ಜಿಲ್ಲಾಧಿಕಾರಿಯು ಅಂತಹ ಪಂಚಾಯತಿ ಸದಸ್ಯನನ್ನು ಸದಸ್ಯತ್ವದಿಂದ ತೆಗೆದು ಹಾಕಬಹುದು.

(ಆ) ಪಂಚಾಯತಿಯ ಚುನಾಯಿತ ಸದಸ್ಯನು ಸಾವಿಗೀಡಾದರೆ, ರಾಜೀನಾಮೆ ನೀಡಿದರೆ, ಅನರ್ಹರಾದರೆ, ಅಸಮರ್ಥನೆಂದು ಸಿದ್ಧವಾದರೆ ಅಥವಾ ಅಧಿಕಾರಾವಧಿ ಮುಗಿಯುವ ಮೊದಲೆ ಸದಸ್ಯತ್ವ ಕಳೆದುಕೊಂಡ ಪರಿಣಾಮವಾಗಿ ಪಂಚಾಯತಿಯಲ್ಲಿ ತೆರವಾಗುವ ಸ್ಥಾನವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚುನಾವಣೆ ಅಥವಾ ನೇಮಕಾತಿ ಮೂಲಕ ಸ್ಥಾನ ಕಳೆದುಕೊಂಡ ಸದಸ್ಯನ ಉಳಿದ ಅಧಿಕಾರಾವಧಿಗೆ ಅಥವಾ ಸ್ಥಾನಕಳೆದುಕೊಂಡ ಸದಸ್ಯನ ಅಧಿಕಾರಾವಧಿ ಎಲ್ಲಿಯವರೆಗೆ ಇರುತ್ತಿತ್ತೋ ಅಲ್ಲಿಯವರೆಗೆ, ತುಂಬಬೇಕು.

೯. ಪಟೇಲನು ಕೆರೆ ಪಂಚಾಯತಿ ಅಧ್ಯಕ್ಷನಾಗಿರುತ್ತಾನೆ ಮತ್ತು ಕೆರೆ ಪಂಚಾಯತಿ ಪರವಾಗಿ ಎಲ್ಲ ವ್ಯವಹಾರಗಳನ್ನು ನಡೆಸುತ್ತಾನೆ.

೧೦. (i) ಕೆಳಕಂಡ ಮೂಲಗಳಿಂದ ಸಂಗ್ರಹವಾದ ಕೆರೆ ನಿಧಿಯ ನಿಯಂತ್ರಣದ ಅಧಿಕಾರ ಪಂಚಾಯತಿಗಿರುತ್ತದೆ.

(ಅ) ಪ್ರಕರಣ-೧೨ರ ಪ್ರಕಾರ ರೈತರಿಂದ ಸಂಗ್ರಹಿಸಿದ ಮೊತ್ತ

(ಆ) ಗೇಣಿ ಅಥವಾ ಉತ್ಪತ್ತಿಯಲ್ಲಿನ ಪಾಲು ಅಥವಾ ಪ್ರಕರಣ-೧೩ರ ಪ್ರಕಾರ ಮಾರಾಟದಿಂದ ಬಂದ ವರಮಾನ

(ಇ) ಕೆರೆ ನಿಧಿಗೆ ಕಾಲಕಾಲಕ್ಕೆ ನೀರಾವರಿ ಸೆಸ್ ನಿಧಿಯಿಂದ ಬರುವ ಅನುದಾನ

(ಈ) ಸರ್ಕಾರವು ಕೆರೆ ನಿಧಿಗೆ ನೀಡುವ ಇತರೆ ಯಾವುದಾದರೂ ಕೊಡುಗೆ

(ಉ) ಪ್ರಕರಣ-೧೬ರ ಪ್ರಕಾರ ಕಲ್ಲು-ಮಣ್ಣು ಕಾಮಗಾರಿ ನಡೆಸಲು ಪಂಚಾಯತಿಗೆ ಸರ್ಕಾರವು ನೀಡುವ ಮುಂಗಡ

(ಊ) ಕಾಯಿದೆಯಲ್ಲಿ ನಿರ್ಧರಿಸಿರುವ ಉದ್ಧೇಶಗಳು ಸಾಧಿಸುವುದಕ್ಕಾಗಿ ಪಂಚಾಯತಿಗೆ ಸರ್ಕಾರವು ನೀಡುವ ಯಾವುದೇ ಸಾಲ.

(ii) ಈ ನಿಧಿಯನ್ನು ಸರ್ಕಾರದ ಉಳಿತಾಯ ಬ್ಯಾಂಕಿನ ಖಾತೆಯಲ್ಲಿ ಠೇವಣಿ ಇಡಬೇಕು ಅಥವಾ ಜಿಲ್ಲಾಧಿಕಾರಿ ಶಿಫಾರಸ್ಸು ಮಾಡಿದ ಕೃಷಿ ಬ್ಯಾಂಕ್‌ ಅಥವಾ ಸಹಕಾರಿ ಸೊಸೈಟಿ ಖಾತೆಗಳಲ್ಲಿ ಠೇವಣಿ ಇಡಬೇಕು. ಈ ನಿಧಿಯು ಭಾರಿ ಕೆರೆ ಮತ್ತು ಸಣ್ಣ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಕಾಮಗಾರಿ ಕೈಗೊಳ್ಳಲು ಪಂಚಾಯತಿಗೆ ದೊರೆಯುವಂತಿರಬೇಕು. ಪ್ರಕರಣ -೧೬ರ ಅಡಿಯಲ್ಲಿ ಪಂಚಾಯತಿಗೆ ಒಪ್ಪಿಸಿರುವ ಸಣ್ಣ ಕೆರೆಗಳ ನಿರ್ಮಾಣ, ಜೀರ್ಣೋದ್ಧಾರ ಅಥವಾ ಸುಧಾರಣಾ ಕಾಮಗಾರಿ ಕೈಗೊಳ್ಳಲು, ವಿಶೇಷ ಕಾರಣಗಳಿಂದ ಉಂಟಾಗುವ ಕೆಲಸಗಳನ್ನು ನಿರ್ವಹಿಸಲು ಅದು ದೊರೆಯುವಂತಿರಬೇಕು.

೧೧. ಸರ್ಕಾರವು ಗ್ರಾಮದ ಕೆರೆ ಅಥವಾ ಕೆರೆಗಳನ್ನು ಪಂಚಾಯತಿಯ ವ್ಯಾಪ್ತಿಯಿಂದ ಹೊರಗಿಟ್ಟ ಸಂದರ್ಭವನ್ನು ಬಿಟ್ಟು ಉಳಿದಂತೆ ಪ್ರಕರಣ-೩ರಂತೆ ಅಸ್ತಿತ್ವಕ್ಕೆ ಬಂದ ಪಂಚಾಯತಿಯು ಗ್ರಾಮದ ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಕಾರ್ಯಗಳನ್ನು ಸಾಂಪ್ರದಾಯಿಕ ಜವಾಬುದಾರಿಯೆಂದು ತಿಳಿದು ರೈತರು ನಿಭಾಯಿಸುವಂತೆ ನೋಡಿಕೊಳ್ಳಬೇಕು.

೧೨. (i) ಕೆರೆಯ/ಕೆರೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಕಾಮಗಾರಿ ಖರ್ಚು ತನ್ನ ಕಾರ್ಯ ವ್ಯಾಪ್ತಿಯಲ್ಲಿರುವ ರೈತರಿಗೆ ಅವರವರ ಹೊಣೆಗೆ ಅನುಗುಣವಾಗಿ ವಿಧಿಸುವ ಅಧಿಕಾರ ಪಂಚಾಯತಿಗೆ ಇರುತ್ತದೆ.

(ii) ರೈತನೊಬ್ಬ ಅವನಿಗೆ ವಹಿಸಿಕೊಟ್ಟ ಕಾಮಗಾರಿಯನ್ನು ನಡೆಸಲು ಸಾಧ್ಯವಾಗದಿದ್ದಾಗ ಅಥವಾ ವಹಿಸಿದ ಕಾಮಗಾರಿಗೆ ಸಂಬಂಧಿಸಿದ ಶ್ರಮಕ್ಕೆ ಪರ್ಯಾಯವಾಗಿ ಹಣವನ್ನು ನೀಡಲು ಅಪೇಕ್ಷಿಸಿದಾಗ ಪಂಚಾಯತಿಯು ತನ್ನ ನಿಧಿಯಿಂದ ಸಂಬಂಧಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಸದರಿ ಕಾಮಗಾರಿಗೆ ತಗುಲಿದ ಖರ್ಚನ್ನು ಸಂಬಂಧಿಸಿದ ರೈತನಿಂದ ವಸೂಲು ಮಾಡಿಕೊಳ್ಳಬೇಕು.

(iii) ಮೇಲಿನ ಉಪಪ್ರಕರಣದಲ್ಲಿ ವಿಷದ ಪಡಿಸಿರುವಂತೆ ರೈತರಿಂದ ಹಣವನ್ನು ವಸೂಲಿ ಮಾಡುವಾಗ ಪಂಚಾಯತಿಗೆ ನಿರ್ದಿಷ್ಟ ಪಡಿಸಿದ ಶ್ರಮಕ್ಕೆ ಸಂಬಂಧಿಸಿದಂತೆ ದಿನಗೂಲಿಯನ್ನು ಸರ್ಕಾರವು ನಿಗದಿಪಡಿಸಿದ ಕನಿಷ್ಟ ಮತ್ತು ಗರಿಷ್ಟ ವ್ಯಾಪ್ತಿಯೊಳಗೆ ನಿರ್ಧರಿಸುವ ಅಧಿಕಾರವಿರುತ್ತದೆ.

೧೩. (i) ಕೆರೆ ಪಂಚಾಯತಿಗೆ

(ಅ) ತನ್ನ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮೀನುಗಾರಿಕೆ ನಡೆಸುವ ಹಕ್ಕನ್ನು,

(ಆ) ಕೆರೆಯ ಮೇಲೆ ಬೆಳೆದ ಹುಲ್ಲನ್ನು ಕಟಾವು ಮಾಡಿಕೊಳ್ಳುವ ಹಕ್ಕನ್ನು ಮತ್ತು ದನಗಳನ್ನು ಮೇಯಲು ಕೆರೆ ಅಂಗಳಕ್ಕೆ ಬಿಡುವ ಹಕ್ಕನ್ನು

(ಇ) ಕೆರೆ ಮತ್ತು ಏರಿಯಲ್ಲಿ ಇರುವ ಮರಗಳಿಂದ ಬರುವ ಉತ್ಪತ್ತಿಯನ್ನು ಸಂಗ್ರಹಿಸಿಕೊಳ್ಳುವ ಹಕ್ಕನ್ನು ಮಾರಾಟ ಮಾಡುವ ಅಧಿಕಾರವಿರುತ್ತದೆ.

(ii) ಜಿಲ್ಲಾಧಿಕಾರಿಯು ಯಾವುದೇ ಹಂಗಾಮಿನಲ್ಲಿ ಕೆರೆಯ ಅಂಗಳವನ್ನು ಸಾಗುವಳಿ ಮಾಡುವುದನ್ನು ನಿಷೇಧಿಸದೆ ಇದ್ದ ಪಕ್ಷದಲ್ಲಿ ತಾತ್ಕಾಲಿಕವಾಗಿ ಗೇಣಿ ಅಥವಾ ಉತ್ಪನ್ನದ ಒಂದು ಭಾಗ ನೀಡುವ ಕರಾರಿನ ಮೇಲೆ ಕೆರೆ ಅಂಗಳದಲ್ಲಿ ಶೀಘ್ರವಾಗಿ ಬೆಳೆಯುವ ಬೆಳೆಯನ್ನು ಸಾಗುವಳಿ ಮಾಡಲು ಅನುಮತಿ ನೀಡುವ ಅಧಿಕಾರ ಪಂಚಾಯತಿಗಿರುತ್ತದೆ.

೧೪. ನೀರಾವರಿ ಉದ್ಧೇಶವನ್ನು ಕುರಿತಂತೆ ತನ್ನ ವ್ಯಾಪ್ತಿಯಲ್ಲಿರುವ ಕೆರೆಗಳಿಗೆ ಸಂಬಂಧಿಸಿದಂತೆ

(ಅ) ನೀರನ್ನು ಸಾಗುವಳಿ ಮಾಡಲು ಕೆರೆಯಿಂದ ಕಾಲುವೆಗೆ ಯಾವ ದಿನಾಂಕದಿಂದ ಬಿಡಲಾಗುವುದು ಎಂಬುದನ್ನು ನಿರ್ಧರಿಸುವ

(ಆ) ನೀರನ್ನು ಸಾಗುವಳಿಗೆ ಎಷ್ಟು ಕಾಲಾವಧಿಗೆ ಬಿಡಲಾಗುತ್ತದೆ ಎಂಬುದನ್ನು ನಿರ್ಧರಿಸುವ

(ಇ) ಕೆರೆಯಿಂದ ಕಾಲುವೆಗೆ ಬಿಡುವ ನೀರಿನ ಪ್ರಮಾಣವನ್ನು ನಿರ್ಧರಿಸುವ ಅಧಿಕಾರ ಪಂಚಾಯತಿಗೆ ಇರುತ್ತದೆ.

೧೫. (i) ಸರ್ಕಾರದಿಂದ ಅಧಿಕಾರ ಪಡೆದುಕೊಂಡ ಕೆರೆ ಪಂಚಾಯತಿಯು ಯಾವುದೇ ಸಾಲಿನಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಗಣಿಸಿ

(ಅ) ಕೆರೆಯ ಅಚ್ಚುಕಟ್ಟಿನಲ್ಲಿ ಖುಷ್ಕಿ ಅಥವಾ ತರಿ ಅಥವಾ ಅರೆ ತರಿ ಬೆಳೆಗಳನ್ನು ಸಾಗುವಳಿ ಮಾಡುವ ಪ್ರದೇಶದ ವಿಸ್ತೀರ್ಣವನ್ನು ನಿರ್ಧರಿಸಬೇಕು ಮತ್ತು ನೀರಾವರಿಗೆ ಒದಗಿಸುವ ನೀರಿನ ಪೂರೈಕೆಯನ್ನು ನಿಯಂತ್ರಿಸಬೇಕು.

(ಆ) ಕೆರೆಯ ತೂಬಿಗೆ ಹತ್ತಿರವಿರುವ ಜಮೀನನ್ನು ಆಯ್ಕೆ ಮಾಡಿ ಅದನ್ನು ಒಂದು ಕ್ಷೇತ್ರವನ್ನಾಗಿ ಮಾಡಿ, ಯಾರು ತಯಾರಿದ್ದಾರೋ ಅಂತಹ ರೈತರಿಗೆ ಗೇಣಿ ಅಥವಾ ವಾರ್ಷಿಕ ಉತ್ಪತ್ತಿಯ ಒಂದು ಭಾಗವನ್ನು ಪಂಚಾಯತಿಯು ಆಯ್ಕೆ ಮಾಡಿರುವ ಜಮೀನಿನ ಮಾಲೀಕರಿಗೆ ಅಥವಾ ಮಾಲೀಕರುಗಳಿಗೆ ನೀಡುವ ಕರಾರಿನ ಮೇಲೆ ಕಬ್ಬು ಬೆಳೆಯಲು ನೀಡಬೇಕು.

(ii) ಮೇಲಿನ ಉಪ-ಪ್ರಕರಣ-೧ರಲ್ಲಿ ದತ್ತವಾಗಿರುವ ಅಧಿಕಾರವನ್ನು ಹೊರತುಪಡಿಸಿ ಉಳಿದಂತೆ ಎರಡನೇ ಮೂರರಷ್ಟು ರೈತರ ಮತ್ತು ಅಚ್ಚುಕಟ್ಟಿನ ಎರಡನೇ ಮೂರರಷ್ಟು ಖುಷ್ಕಿ ಸಾಗುವಳಿದಾರರ ಒಪ್ಪಿಗೆ ಇಲ್ಲದೆ ಯಾವುದೇ ಹೆಚ್ಚಿನ ಅಧಿಕಾರ ತನ್ನ ವ್ಯಾಪ್ತಿಯಲ್ಲಿರುವ ಕೆರೆಯ ಮೇಲೆ ಕೆರೆ ಪಂಚಾಯತಿಗೆ ಇರುವುದಿಲ್ಲ.

(iii) ಒಂದು ವೇಳೆ ಉಪ ಪ್ರಕರಣ-೧ರ(ಅ)ಭಾಗದಲ್ಲಿ ತಿಳಿಸಿರುವಂತೆ ಖುಷ್ಕಿ ಕಂದಾಯ ನಿಗದಿಪಡಿಸಿರುವ ಜಮೀನಿಗೆ ನೀರಾವಳಿ ಬೆಳೆ ಬೆಳೆಯಲು ಕ್ರಮವಾಗಿ ನೀರು ಪೂರೈಕೆಯಾಗದಿದ್ದರೆ ಅಂತಹ ಸಾಗುವಳಿದಾರರು ತಮ್ಮ ಭೂಮಿಯ ಒಟ್ಟು ಕಂದಾಯದ ಅರ್ಧ ಭಾಗಕ್ಕೆ ವಿನಾಯಿತಿ ಪಡೆಯುತ್ತಾರೆ.

೧೬. (i) ೧೯೨೩ರ ಕಾಯಿದೆ ೨೫ರಂತೆ ಸಣ್ಣ ಕೆರೆಯ ಜೀರ್ಣೋದ್ಧಾರದ ಕೆಲಸವನ್ನು ಸರ್ಕಾರವು ಮಂಜೂರು ಮಾಡಿದಾಗ ಕೆರೆ ಪಂಚಾಯತಿ ಅಥವಾ ಗ್ರಾಮಪಂಚಾಯತಿ ಕಾಯಿದೆ-೧೯೨೬ರ ಪ್ರಕಾರ ಅಧಿಕಾರ ಪಡೆದಿರುವ ಗ್ರಾಮಪಂಚಾಯತಿಯು ನಿಯಮಾನುಸಾರ ಕೈಗೊಳ್ಳಬೇಕು.

(ii) ಕೆರೆ ಪಂಚಾಯತಿ ಅಥವಾ ೧೯೨೬ರ ಗ್ರಾಮ ಪಂಚಾಯತಿ ಕಾಯಿದೆಯ ಪ್ರಕರಣ ೨೩ರ ಪ್ರಕಾರ ತನಗೆ ವಹಿಸಿರುವ ಜೀರ್ಣೋದ್ಧಾರ ಕಾಮಗಾರಿಯನ್ನು ಸರ್ಕಾರವು ನಿರ್ದಿಷ್ಟಪಡಿಸಿರುವ ನಿಬಂಧನೆ ಹಾಗೂ ಕಟ್ಟಡ ಸೂಚನೆಗಳಿಗೆ ಅನುಗುಣವಾಗಿ ನಿಗದಿಪಡಿಸಿರುವ ಕಾಲಾವಧಿಯಲ್ಲಿ ಮಾಡಿ ಮುಗಿಸಬೇಕು.

೧೭. ಈ ಕಾಯಿದೆ ಪ್ರಕರಣ-೧೦ರ ಪ್ರಕಾರ ಕೆರೆ ನಿಧಿಗೆ ರೈತರಿಗೆ ಬರಬೇಕಾದ ತೆರಿಗೆ-ಕಂದಾಯಗಳನ್ನು ರೈತರು ಪಾವತಿ ಮಾಡಲು ತಪ್ಪಿದಾಗ, ಜಿಲ್ಲಾಧಿಕಾರಿಯು ಪಂಚಾಯತಿಯ ಅರ್ಜಿಯನ್ನು ಪರಿಗಣಿಸಿ ಕಂದಾಯ ಬಾಕಿಯೆಂದು ಪರಿಗಣಿಸಿ, ಸದರಿ ಮೊತ್ತವನ್ನು ಸಂಬಂಧಿಸಿದ ರೈತರಿಂದ ವಸೂಲು ಮಾಡಬೇಕು.

೧೮. ಸರ್ಕಾರದ ಅಭಿಪ್ರಾಯದಲ್ಲಿ ೧೯೨೬ರ ಗ್ರಾಮ ಪಂಚಾಯತಿ ಕಾಯಿದೆಯ ಪ್ರಕರಣ-೨೩ರ ಪ್ರಕಾರ ರಚಿಸಿರುವ ಗ್ರಾಮ ಪಂಚಾಯತಿ ಅಥವಾ ಕೆರೆ ಪಂಚಾಯತಿಯು ತನಗೆ ವಹಿಸಿರುವ ಕಾರ್ಯ ನಿರ್ವಹಿಸುವಲ್ಲಿ ಅಸಮರ್ಥವೆಂದು, ಅಥವಾ ಕಾಯಿದೆಯಲ್ಲಿ ದತ್ತವಾಗಿರುವ ಅಥವಾ ಅದಕ್ಕೆ ವಹಿಸಿಕೊಡಲಾಗಿರುವ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲಗೊಂಡಾಗ ಅಥವಾ ತನಗೆ ದತ್ತವಾದ ಅಧಿಕಾರದ ಮಿತಿಯನ್ನು ಮೀರಿದಾಗ ಅಥವಾ ತನಗೆ ದತ್ತವಾದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಾಗ ಅಂತಹ ಕೆರೆ ಪಂಚಾಯತಿಯನ್ನು ಸಕಾರಣ ನೀಡಿ ಗೆಜೆಟಿನಲ್ಲಿ ಪ್ರಕಟಣೆ ನಿಡುವುದರ ಮೂಲಕ ರದ್ದು ಪಡಿಸಬಹುದು.

(ಆ) ಕೆರೆ ಪಂಚಾಯತಿಯನ್ನು ರದ್ದು ಪಡಿಸಿದಾಗ ಅಥವಾ ಗ್ರಾಮ ಪಂಚಾಯತಿಯ ಅಧಿಕಾರವನ್ನು ರದ್ದು ಪಡಿಸಿದಾಗ, ಅವುಗಳಿಗೆ ಸಂಬಂಧಿಸಿದ ಹಣಕಾಸು ನಿಧಿಯ ಜಬಾಬು ದಾರಿಯನ್ನು ಜಿಲ್ಲಾಧಿಕಾರಿ ವಹಿಸಿಕೊಳ್ಳಬೇಕು ಮತ್ತು ಕೆರೆ ಪಂಚಾಯತಿ ಅಥವಾ ಗ್ರಾಮಪಂಚಾಯತಿ ಇದ್ದಿದ್ದರೆ ಹೇಗೆ ರೈತರ ಸಾಂಪ್ರದಾಯಿಕ ಕರ್ತವ್ಯಗಳು ನೇರವೇರುವಂತೆ ಮಾಡುತ್ತಿದ್ದವೊ ಅದೇ ರೀತಿ ರೈತರು ತಮ್ಮ ಸಾಂಪ್ರದಾಯಿಕ ಕರ್ತವ್ಯಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ನೋಡಿಕೊಳ್ಳಬೇಕು ಹಾಗೂ ಪಂಚಾಯತಿ ಇದ್ದಿದ್ದರೆ ಹೇಗೆ ಬಳಸಲಾಗುತ್ತಿತ್ತೋ ಅದೇ ರೀತಿ ಪ್ರಕರಣ-೧೦ರಲ್ಲಿ ನಿಯಮಗೊಳಸಿರುವಂತೆ ಹಣಕಾಸು ನಿಧಿಯನ್ನು ಬಳಸಬೇಕು. ರದ್ದುಗೊಳಿಸಿದ ಕೆರೆ ಪಂಚಾಯತಿ ಅಥವಾ ಅಧಿಕಾರವನ್ನು ಕಳೆದುಕೊಂಡಿರುವ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ, ಸರ್ಕಾರವು ಸೂಕ್ತವೆಂದು ಭಾವಿಸಿದಾಗ ಕೆರೆ ಪಂಚಾಯತಿಯನ್ನು ಪುನಾರಚಿಸಬಹುದು ಅಥವಾ ಗ್ರಾಮ ಪಂಚಾಯತಿಗೆ ಅಧಿಕಾರವನ್ನು ವಾಪಸ್ಸು ನೀಡಬಹುದು.

೧೯. ಈ ಕಾಯಿದೆಯಿಂದಾಗಿ ಕೆರೆಗಳ ಜೀರ್ಣೋದ್ಧಾರ, ದುರಸ್ತಿ ಹಾಗೂ ನಿರ್ವಹಣೆಗಳಿಗೆ ಸಂಬಂಧಿಸಿದಂತೆ ಇನ್ನಾವುದೇ ಕಾಯಿದೆ, ನಿಯಮ, ಆದೇಶ ಅಥವಾ ಶಾಸನ ಬಲವುಳ್ಳ ಸಾಂಪ್ರದಾಯಿಕ ಕರ್ತವ್ಯಗಳಿಂದ ರೈತರಿಗೆ ವಿನಾಯತಿ ದೊರೆಯುವುದಿಲ್ಲ.

೨೦. ಈ ಕಾಯಿದೆಯ ಪ್ರಕರಣಗಳ ವ್ಯಾಪ್ತಿಯಲ್ಲಿ ಸದುದ್ಧೇಶದಿಂದ ಕೆರೆ ಪಂಚಾಯತಿ ಮಾಡಿದ ಕಾರ್ಯ ಅಥವಾ ಕಾರ್ಯ ಮಾಡುವಂತಗೆ ನೀಡಿದ ಆದೇಶ ಕುರಿತಂತೆ ಕೆರೆ ಪಂಚಾಯತಿ ಸದಸ್ಯರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ.

೨೧. (i) ಸರ್ಕಾರವು ಇಡೀ ರಾಜ್ಯಕ್ಕೆ ಅಥವಾ ರಾಜ್ಯದ ಕೆಲವು ಭಾಗಕ್ಕೆ (ಬಳ್ಳಾರಿ ಜಿಲ್ಲೆ ಬಿಟ್ಟು ಉಳಿದ ಮೈಸೂರು ರಾಜ್ಯ) ಅಥವಾ ಪಂಚಾಯತಿ ಅಥವಾ ಪಂಚಾಯತಿಗಳದ ಗುಂಪಿಗೆ ಸಂಬಂಧಿಸಿದಂತೆದ ಕಾಯಿದೆಯನ್ನು ಜಾರಿಗೊಳಿಸುವ ಉದ್ದೇಶದಿಂದ ನಿಯಮಗಳನ್ನು ರೂಪಿಸುವ ಅಧಿಕಾರ ಪಡೆದಿರುತ್ತದೆ.

(ii) ಮೇಲೆ ತಿಳಿಸಿರುವ ಅಧಿಕಾರಕ್ಕೆ ಯಾವುದೇ ವ್ಯತ್ಯಯ ಬಾರದಂತೆ ಕೆಳಕಂಡ ನಿಯಮಗಳನ್ನು ಸರ್ಕಾರ ರೂಪಿಸಬಹುದು. (ಅ) ಪ್ರಕರಣ ೬, ೧೫ ಮತ್ತು ೧೬ಗಳಿಗೆ ಸಿದ್ಧಪಡಿಸುವುದು ಹಾಗೂ ಪ್ರಕರಣ-೪ ಮತ್ತು ೫ರಂತೆ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಾದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸುವುದು.

(ಆ) ಮತದಾರರ ಸಭೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ನಿಗದಿಪಡಿಸುವುದು.

(ಇ) ಪಂಚಾಯತಿ ಸಭೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ನಿಗದಿಪಡಿಸುವುದು.

(ಈ) ಪಂಚಾಯತಿಯ ಹಣಕಾಸು ವ್ಯವಹಾರಗಳ ಲೆಕ್ಕ ಹಾಗೂ ಲೆಕ್ಕದ ಪುಸ್ತಕಗಳನ್ನು ಇಡುವುದಕ್ಕೆ ಸಂಬಂಧಿಸಿದಂತೆ ಹಾಗೂ ಹಣಕಾಸು ವ್ಯವಹಾರದ ಆಡಿಟ್ ಮಾಡಿಸುವ ಬಗ್ಗೆ ಕ್ರಮಗಳನ್ನು ನಿಗದಿಪಡಿಸುವುದು.

(ಉ) ಪಂಚಾಯತಿಯು ಸಲ್ಲಿಸಬೇಕಾದ ಹಣಕಾಸು ಲೆಕ್ಕ, ವರಮಾನದ ವಿವರ ಮತ್ತು ವರದಿಗಳ ಪಟ್ಟಿ ಮಾಡುವದು,

(ಊ) ಪಂಚಾಯತಿಯು ತನ್ನ ಬಾಕಿಯನ್ನು ವಸೂಲು ಮಾಡಲು ಕ್ರಮಗಳನ್ನು ನಿಗದಿಪಡಿಸುವುದು.

ಅನು:ಟಿ ಆರ್ ಚಂದ್ರಶೇಖರ**

 

*ಮೂಲ : ಮೈಸೂರು ಮಹಾರಾಜರ ಮೈಸೂರು ಕಾಯಿದೆ ಸಂಖ್ಯೆ-೧, ೧೯೧೧

**ಅಭಿವೃದ್ಧಿ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ