ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವದ ಸಾಧ್ಯತೆಗಳನ್ನು ಗುರುತಿಸುವುದು ಈ ಲೇಖನದ ಉದ್ದೇಶ. ಸಹಭಾಗಿತ್ವದ ಪ್ರಶ್ನೆ ಯಾಕೆ ಹುಟ್ಟಿಕೊಂಡಿತು ಎನ್ನುವುದರ ವಿವರಣೆಯೊಂದಿಗೆ ಪ್ರಬಂಧ ಆರಂಭವಾಗುತ್ತದೆ. ನಂತರದ ಪುಟಗಳಲ್ಲಿ ಸಹಭಾಗಿತ್ವ ಅಂದರೇನು? ಅರ್ಥಪೂರ್ಣ ಸಹಭಾಗಿತ್ವದ ವ್ಯಾಖ್ಯಾನದೊಳಗೆ ಸೇರುವ ಅಂಶಗಳೇನು? ಇತ್ಯಾದಿಗಳ ಸಂಕ್ಷಿಪ್ತ ವಿವರ ಇದೆ. ಅಧ್ಯಯನದ ಉದ್ದೇಶ, ವಿಧಾನ ಇತ್ಯಾದಿಗಳ ಕುರಿತು ಕಿರು ಪರಿಚಯದ ನಂತರ ಕ್ಷೇತ್ರಕಾರ್ಯದಿಂದ ಬಂದ ಮಾಹಿತಿಯ ವಿಶ್ಲೇಷಣೆಯನ್ನು ಕೊಟ್ಟಿದ್ದೇನೆ. ಕೆಲವು ವಾಕ್ಯಗಳಲ್ಲಿ ಲೇಖನದ ಮಿತಿಯನ್ನು ವಿವರಿಸಿ ಮುಂದುವರಿಯುತ್ತೇನೆ. ಇದೊಂದು ಪೂರ್ಣ ಪ್ರಮಾಣದ ಅಧ್ಯಯನವಲ್ಲ. ವಿಜಯನಗರ ಕಾಲದ ಕೆವಲು ಕೆರೆಗಳ ನೀರು ಬಳಕೆದಾರರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ. ಮಾಹಿತಿ ಕೂಡ ಸಹಭಾಗಿತ್ವದ ಪ್ರಾಥಮಿಕ ವಿವರಗಳನ್ನು ನೀಡುವ ರೀತಿಯಲ್ಲಿದೆ. ಕೆರೆ ನೀರಾವರಿ ನಿರ್ವಹಣೆ ಮತ್ತು ಅದರ ತಾಂತ್ರಿಕತೆ ಕುರಿತು ಮಾಹಿತಿ ಕಡಿಮೆ ಇದೆ. ಅಧ್ಯಯನದ ಉದ್ದೇಶಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಇತರ ಅಧ್ಯಯನ ಸಂದರ್ಭದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಲೇಖನ ಸಾಕಷ್ಟು ಬಳಸಿದೆ. ಇದು ಲೇಖನದ ಮಿತಿಯೂ ಆಗಬಹುದು ಅಥವಾ ಶಕ್ತಿಯೂ ಆಗಬಹುದು. ಆದರು ಒಂದು ಶಿಸ್ತುಬದ್ಧ ಅಧ್ಯಯನದ ದೃಷ್ಟಿಯಿಂದ ಇದನ್ನೊಂದು ಮಿತಿಯೆಂದೇ ಪರಿಗಣಿಸುವುದು ಉಚಿತ. ಹಾಗಾಗಿ ಇಲ್ಲಿ ಬರುವ ತೀರ್ಮಾನಗಳನ್ನು ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವದ ಸಮಸ್ಯೆಗೆ ಪರಿಹಾರವಾಗಲಿಕ್ಕಿಲ್ಲ. ಹೆಚ್ಚೆಂದರೆ ಅವು ಆ ಸಮಸ್ಯೆಗಳನ್ನು ಇನ್ನೂ ಹೆಚ್ಚು ಸಮಸ್ಯೀಕರಿಸಬಹುದು.

ತಾತ್ವಿಕ ಹಿನ್ನೆಲೆ

ಪ್ರಸ್ತಾವನೆಯಲ್ಲಿ ಚರ್ಚಿಸಿದ ಕೆಲ ವಿಚಾರಗಳನ್ನು ಇಲ್ಲಿ ಪುನಃ ನೆನಪಿಸಲಾಗುವುದು. ಜನರ ಸಹಭಾಗಿತ್ವದ ಚರ್ಚೆ ಇಂದು ಬಲಗೊಳ್ಳುವುದರ ಹಿಂದೆ ಅಂತರಾಷ್ಟ್ರೀಯ ಮತ್ತು ಆಂತರಿಕ ಕಾರಣಗಳಿವೆ. ಒಂದು ಕಾಲದಲ್ಲಿ ಬಂಡವಾಳದ ವಿಸ್ತರಣೆ (ಆಧುನೀಕರಣ) ಮತ್ತು ಸಾಂಪ್ರದಾಯಿಕ ಸಮುದಾಯ ಬದುಕು ಪರಸ್ಪರ ವಿರುದ್ಧ ಎನ್ನುವ ವಿವರಣೆ ಚಾಲ್ತಿಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ, ಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದ ಆಧುನೀಕರಣವನ್ನು ಆಧರಿಸಿ ಬಂಡವಾಳ ಮತ್ತು ಸಮುದಾಯ ಬದುಕಿನ ಬಗ್ಗೆ ಹೊಸ ಥಿಯರಿಗಳು ಬಂದವು. ಅವುಗಳ ಪ್ರಕಾರ ಬಂಡವಾಳದ ವಿಸ್ತರಣೆ ಮತ್ತು ಸಾಂಪ್ರದಾಯಿಕ ಸಮುದಾಯ ಬದುಕು ಪರಸ್ಪರ ವಿರುದ್ಧ ಆಗಬೇಕಿಲ್ಲ; ಪೂರಕವೂ ಆಗಬಹುದು. ಈ ಬದಲಾವಣೆ ಎರಡು ರೀತಿಯ ಬೆಳವಣಿಗೆಗಳನ್ನು ಆಧರಿಸಿವೆ. ಒಂದು, ಆಧುನೀಕರಣದ ನಡುವೆಯೂ ಸಾಂಪ್ರದಾಯಿಕ ಸಮುದಾಯಗಳು ಸಣ್ಣ ಪುಟ್ಟ ಪರಿವರ್ತನೆಗಳನ್ನು ಮಾಡಿಕೊಂಡು ಜೀವಂತ ಉಳಿದಿರುವುದು. ಮಾತ್ರವಲ್ಲ ಕೆಲವು ವಿಚಾರಗಳಲ್ಲಿ ಹಿಂದಿಗಿಂತಲೂ ಹೆಚ್ಚು ಪ್ರಬಲವಾಗಿ ವ್ಯಕ್ತವಾದವು. ನಮ್ಮ ದೇಶದ ಉದಾಹರಣೆ ತೆಗೆದುಕೊಳ್ಳುವುದಾದರೆ ಆಧುನೀಕರಣದೊಂದಿಗೆ ನಮ್ಮ ಜಾತಿ, ಧರ್ಮ ಮತ್ತು ಕುಟುಂಬ ವ್ಯವಸ್ಥೆ ಮೂಲಭೂತವಾಗಿ ಬದಲಾಗಬೇಕಿತ್ತು. ಆದರೆ ಅವೆಲ್ಲ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ಬಲಯುತಗೊಂಡವು. ಎರಡನೇ ಅಂಶ-ಹಲವಾರು ವ್ಯಾಪಾರಿ ಸಮುದಾಯಗಳು ತಮ್ಮ ಸಮುದಾಯ ಬದುಕನ್ನು ಬಂಡವಾಳದ ವೃದ್ಧಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡವು. ಇದು ಕೇವಲ ಭಾರತದ ಮಾರ್ವಾಡಿ ಅಥವಾ ಜೈನ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುವುದಲ್ಲ. ಪ್ರಪಂಚದ ಎಲ್ಲ ಕಡೆ ಇಂತಹ ವ್ಯಾಪಾರಿ ಸಮುದಾಯಗಳು ಇವೆ. ಮತ್ತು ಇವು ಇದೇ ರೀತಿ ಹೊಂದಾಣಿಕೆ ಮಾಡಿಕೊಂಡಿವೆ.

ಇದೇ ಸಂದರ್ಭದಲ್ಲಿ ಸಂಘಟಿತ ನಾಗರಿಕ ಬದುಕು ಅಥವಾ ಸಿವಿಲ್ ಸೊಸೈಟಿ ಮತ್ತು ಅದು ಅಭಿವೃದ್ಧಿಯ ಮೇಲೆ ಬೀರುವ ಪ್ರಭಾವದ ಕುರಿತು ಸಾಕಷ್ಟು ಬರಹಗಳು ಬಂದವು. ಅವುಗಳಲ್ಲಿ ಅಲೆಕ್ಸಿ ಡಿ ತೊವಿಲ್ಲೆ (೧೯೬೯), ಜೇಮ್ಸ್ ಎಸ್ ಕೊಲ್ ಮೆನ್ (೧೯೯೦) ಮತ್ತು ರೊಬರ್ಟ್‌ ಪುನಮ್ (೧೯೯೩) ಅವರ ಥಿಯರಿಗಳು ಮುಖ್ಯ. ಇವರ ಥಿಯರಿಗಳು ಸಿವಿಲ್ ಸೊಸೈಟಿ ಮತ್ತು ಒಳ್ಳೆಯ ಆಡಳಿತ ಸಂಬಂಧವನ್ನು ವಿವರಿಸುತ್ತವೆ. ನೆರೆಕರೆಯವರ ಸುಖ ದುಃಖಗಳಲ್ಲಿ ಭಾಗಿಯಾಗಲು ತರಬೇತಿಯನ್ನು ಈ ಸಣ್ಣಪುಟ್ಟ ಸಂಘಟನೆಗಳು ನೀಡುತ್ತವೆ. ಅದೇ ರೀತಿಯಲ್ಲಿ ಪರಸ್ಪರಲ್ಲಿ ನಂಬಿಕೆ ಮತ್ತು ಎಲ್ಲರು ಸೇರಿ ರೂಪಿಸಿಕೊಳ್ಳುವ ನೀತಿ ನಿಯಮಗಳಿಗೆ ಅನುಗುಣವಾಗಿ ವ್ಯವಹರಿಸುವ ತರಬೇತಿಯನ್ನು ಇಂತಹ ಸಂಘಟನೆಗಳಲ್ಲಿ ಕಲಿಯಬಹುದಾಗಿದೆ. ಸಂಘಟಿತ ಬದುಕಿನ ಇಂತಹ ಸಣ್ಣ ಸಣ್ಣ ಹನಿಗಳು ಸೇರಿ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಎಂದು ಮೇಲಿನ ಥಿಯರಿಗಳು ವಾದಿಸುತ್ತವೆ. ಕೋಟಿಗಟ್ಟಲೆ ದುಡ್ಡನ್ನು ಬಡ ದೇಶಗಳಲ್ಲಿ ವಿನಿಯೋಜಿಸುವ ವಿಶ್ವ ಬ್ಯಾಂಕಿಗೆ ಈ ಥಿಯರಿಗಳು ವರದಾನವಾದವು. ಯಾಕೆಂದರೆ ಶ್ರೀಮಂತ ದೇಶಗಳು ಕೊಡಮಾಡುವ ಅಭಿವೃದ್ಧಿ ಮಾದರಿಗಳನ್ನು ಯಾಥಾ ರೂಪದಲ್ಲಿ ಅನುಸರಿಸಿದರೂ ಬಡ ದೇಶಗಳು ಉದ್ಧಾರವಾಗುವ ಲಕ್ಷಣ ಕಾಣುತ್ತಿಲ್ಲ. ಅಂತಹ ಸಂದರ್ಭದಲ್ಲಿ ನೀವು ಪುನಃ ಬಂಡವಾಳ ಹೂಡಿ ಎಂದು ಬಡ ದೇಶಗಳಿಗೆ ಸಾಲ ಕೊಡುವುದಾದರೂ ಹೇಗೆ? ಇಂತಹ ಸಂದಿಗ್ಧ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಸಿವಿಲ್ ಸೊಸೈಟಿ ಮಧ್ಯೆ ಸಂಬಂಧ ಬೆಸೆಯುವ ಈ ಥಿಯರಿಗಳು ವಿಶ್ವ ಬ್ಯಾಂಕಿನವರಿಗೆ ಪ್ರಿಯವಾದವು (ಜೋನ್ ಹೇರಿಸ್, ೨೦೦೧). ಇಂದು ಪ್ರಪಂಚದ ಮೂಲೆ ಮೂಲೆಯಲ್ಲೂ ವಿಶ್ವಬ್ಯಾಂಕ್ ಹಣಕಾಸು ನೆರವಿನೊಂದಿಗೆ ನಡೆಯುವ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಇವೆ. ಕೆರೆ ನೀರಾವರಿಗೂ ವಿಶ್ವಬ್ಯಾಂಕ್ ನೆರವು ಇದೆ. ಇಲ್ಲೂ ಕೂಡ ಅದು ಜನರ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲು ಸೂಚಿಸಿದೆ. ಈ ರೀತಿಯಲ್ಲಿ ಬಾಹ್ಯ ಕಾರಣದಿಂದ ಜನರ ಸಹಭಾಗಿತ್ವ ಇಂದು ನಮ್ಮ ಯೋಜನೆಗಳ ಭಾಗವಾಗಿದೆ.

ಇದರೆ ಇತರೆ ಆಂತರಿಕ ಕಾರಣವು ಇದೆ. ಇದನ್ನು ಸಮುದಾಯವಾದ ಅಥವಾ ಕಮ್ಯುನಿಟೇರಿಯನ್ ರಾಜಕೀಯ ಮತ್ತು ಪರಿಸರ ಚಳವಳಿಗಳ ಫಲ ಎನ್ನಬಹುದು. ಇವರು ತಾಂತ್ರಿಕ ಆಧೂನೀಕರಣವನ್ನು ಕಟುವಾಗಿ ಟೀಕಿಸುತ್ತಾರೆ. ಇವರ ಪ್ರಕಾರ ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಂಘಿಕ ರಚನೆಗಳನ್ನು ನಮ್ಮಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಂಬುವುದು ತುಂಬಾ ಸೀಮಿತ ದೃಷ್ಟಿಕೋನ. ಯಾಕೆಂದರೆ ಈ ದೃಷ್ಟಿಕೋನ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ (ಆಶಿಶ್ ನಂದಿ, ೧೯೯೮). ವಸಾಹತು ಪೂರ್ವದಲ್ಲಿ ನೆಲ,ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಕುರಿತು ನಮ್ಮದೇ ವ್ಯವಸ್ಥೆಗಳು ಇದ್ದವು. ಸಾಂಪ್ರದಾಯಿಕ ಸಮಾಜದಲ್ಲಿನ ನಿಕಟ ಮತ್ತು ಪರಸ್ಪರ ಅರಿತಿರುವ ಸಂದರ್ಭದಲ್ಲಿ ಸಮುದಾಯದ ಸಂಪನ್ಮೂಲ ಬಳಕೆ ಮತ್ತು ನಿರ್ವಹಣೆ ಕುರಿತಂತೆ ಸ್ವಯಂ ಪ್ರೇರಿತ ನಿಬಂಧನೆಗಳಿದ್ದವು. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಬದುಕುತ್ತಿದ್ದ ಸಮುದಾಯಗಳಿಗೆ ಆ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ ಕುರಿತು ತಿಳುವಳಿಕೆಯಿತ್ತು, ಜವಾಬ್ದಾರಿಯಿತ್ತು (ಮಾಧವ ಗಾಡ್ಗಿಲ್ ಮತ್ತು ರಾಮಚಂದ್ರ ಗುಹ ೧೯೯೫). ಆದರೆ ಆಧುನಿಕತೆ ಮುಚ್ಚಿಕೊಂಡಿದ್ದ ಸಮುದಾಯ ಬದುಕನ್ನು ತೆರೆದು ಇತರ ಸಮುದಾಯಗಳೊಂದಿಗೆ ಸಂಪರ್ಕ ಮತ್ತು ವಿನಿಮಯವನ್ನು ಕಲಿಸಿತು. ಈ ಸಂಪರ್ಕ ಮತ್ತು ವಿನಿಮಯ ಇಂದು ಸ್ಥಳೀಯ ಸಂಪನ್ಮೂಲಗಳ ಬಳಕೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಜೋಡಿಸಿದೆ. ಹಾಗಾಗಿ ಸಂಪನ್ಮೂಲಗಳ ಬಳಕೆ ಕುರಿತಂತೆ ನಿರ್ಧಾರಗಳು ಇಂದು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿತವಾಗುವುದಿಲ್ಲ. ಬದಲಿಗೆ ಮಾರುಕಟ್ಟೆಗಳ ಅಗತ್ಯಗಳಿಗೆ ಅನುಗುಣವಾಗಿ ಅಮೂರ್ತ ರೂಪದಲ್ಲಿ ಆಗುತ್ತಿದೆ. ಇದು ಎರಡು ರೀತಿಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಒಂದು, ಸಂಪನ್ಮೂಲಗಳ ಎಗ್ಗಿಲ್ಲದ ನಾಶ ಮತ್ತು ಎರಡು, ಸ್ಥಳೀಯ ಸಮುದಾಯಗಳು ಕೂಡ ಅವುಗಳ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುವುದು, ಈ ಸಮಸ್ಯೆಗಳಿಂದ ಹೊರಬರಲು ಒಂದೇ ದಾರಿ-ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳು ಭಾಗವಹಿಸುವುದು. ತಮ್ಮ ಪರಿಸರದಲ್ಲಿನ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಗಳನ್ನು ಸ್ಥಳೀಯ ಸಮುದಾಯಗಳು ವಹಿಸಿಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸಮುದಾಯವಾದಿಗಳು ವಾದಿಸುತ್ತಾರೆ. ಇದೇನು ಹೊಸ ಪ್ರಯೋಗವಲ್ಲ. ಕೆರೆ ಮತ್ತು ಇತರ ಜಲ ಸಂಪನ್ಮೂಲಗಳ ನಿರ್ವಹಣೆ ಕುರಿತು ಧಾರಾಳ ಮಾಹಿತಿ ನಮ್ಮ ಚರಿತ್ರೆಯಲ್ಲಿ ಸಿಗುತ್ತದೆ. ಕೆರೆ ಕಟ್ಟಿಸುವುದರಲ್ಲಿ ಊರಿನ ಧನಿಕರ, ವ್ಯಾಪಾರಿಗಳು, ದೇವಸ್ಥಾನಗಳ ಮತ್ತು ರಾಜರ ಪಾತ್ರ ಮಹತ್ವದ್ದು. ಆದರೆ ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ರೈತಾಪಿ ಜನರ ಪಾತ್ರ ಅಲ್ಲಗೆಳೆಯುವಂತಿರಲಿಲ್ಲ. ನಮ್ಮ ಹಿರಿಯರು ಮಾಡಿದ ಪ್ರಯೋಗಗಳಿಂದ ಇಂದಿನ ನಮ್ಮ ಸಮಸ್ಯೆಗಳಿಗೆ ಕೆಲವು ಪರಿಹಾರಗಳಾದರೂ ಸಿಗಬಹುದು. ಆ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಅಗತ್ಯವೆಂದು ಸಮುದಾಯವಾದಿಗಳು ವಾದಿಸುತ್ತಾರೆ.

ಸರಕಾರದ ಸಹಭಾಗಿತ್ವ ನೀತಿ

ಸ್ವಾತಂತ್ರ್ಯ ನಂತರದ ಆಧುನಕ ನೀರಾವರಿ ವ್ಯವಸ್ಥೆ ಜಾರಿ ಬಂತು. ಹೊಸ ವ್ಯವಸ್ಥೆ ಒಂದು ಕಡೆಯಿಂದ ಬೃಹತ್ ನೀರಾವರಿ ವ್ಯವಸ್ಥೆಗೆ ಮಹತ್ವ ಕೊಟ್ಟರೆ ಇನ್ನೊಂದು ದಿಕ್ಕಿನಲ್ಲಿ ನೀರಾವರಿ ನಿರ್ವಹಣೆಯಲ್ಲಿ ಸಮುದಾಯದ ಪಾತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆರೆ ನೀರಾವರಿ ವ್ಯವಸ್ಥೆ ಅರ್ಥ ಕಳೆದುಕೊಳ್ಳುತ್ತಾ ಬಂತು. ಜತೆಗೆ ಕೆರೆ ನಿರ್ಮಾಣ, ಉಸ್ತುವಾರಿ, ನೀರಿನ ಹಂಚುವಿಕೆ, ಇತ್ಯಾದಿಗಳು ಸರಕಾರದ ಜವಾಬ್ದಾರಿಯಾದವು ೨೦೦೦ ಹೆಕ್ಟೇರಿಗಿಂತ ಹೆಚ್ಚು ಅಚ್ಚುಕಟ್ಟು ಪ್ರದೇಶವುಳ್ಳ ಕೆರೆಗಳು ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯೊಳಗೆ ಬಂದವು. ೪೦ ಹೇಕ್ಟೇರಿಗಿಂತ ಹೆಚ್ಚು ಅಂದರೆ ೨೦೦೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಉಳ್ಳ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯೊಳಗೆ ಬರುತ್ತವೆ. ೪೦ ಹೆಕ್ಟೇರಿಗಿಂತ ಕಡಿಮೆ ಅಚ್ಚುಕಟ್ಟು ಉಳ್ಳ ಕೆರೆಗಳು ಜಿಲ್ಲಾ ಪಂಚಾಯತ್ ವ್ಯಾಪ್ತಿಯೊಳಗೆ ಸೇರಿಕೊಂಡಿವೆ. ಈ ಎಲ್ಲಾ ಬೆಳವಣಿಗೆಗಳಿಂದ ಕೆರೆ ನೀರಿನ ನಿರ್ವಹಣೆಯಲ್ಲಿ ಸಮುದಾಯದ ಪಾತ್ರ ಕಡಿಮೆಯಾಗುತ್ತಾ ಬಂತು. ಈ ಬೆಳೆವಣಿಗೆಗಳ ದುಷ್ಟರಿಣಾಮಗಳನ್ನು ನಾವಿಂದು ಮನಗಾಣುತ್ತಿದ್ದೇವೆ. ಬಹುತೇಕ ಕೆರೆಗಳು ಹೂಳು ತುಂಬಿ ನಿರುಪಯುಕ್ತವಾಗಿವೆ. ಮಳೆ ನೀರನ್ನು ಸಂಗ್ರಹಿಸುವ ಕಾಲುವೆಗಳು, ಹೊಲಗಳಿಗೆ ನೀರುಣ್ಣಿಸುವ ಕಾಲುವೆಗಳ, ಕೆರೆ ಏರಿ, ಇತ್ಯಾದಿಗಳು ಜೀರ್ಣಾವಸ್ಥೆಯಲ್ಲಿವೆ. ಎಲ್ಲಾ ಕೆರೆಗಳಿಗೆ ಪುನರ್‌ಜೀವ ನೀಡಲು ಕೋಟ್ಯಾಂತರ ರೂಪಾಯಿಗಳ ವಿನಿಯೋಜನೆ ಅಗತ್ಯವಿದೆ. ಆದರೆ ಅಷ್ಟು ಸಂಪನ್ಮೂಲ ಸರಕಾದಲ್ಲಿ ಇಲ್ಲ. ಅಗತ್ಯ ಹಣಕಾಸು ಒದಗಿಸಲು ವಿಶ್ವ ಬ್ಯಾಂಕಿನ ನೆರವು ಕೇಳಲಾಯಿತು. ನಮ್ಮಲ್ಲಿನ ಕೆರೆಗಳ ಇಂದಿನ ಸ್ಥಿತಿ ಬಗ್ಗೆ ತಕ್ಕ ಮಟ್ಟಿನ ಅರಿವು ಬ್ಯಾಂಕಿಗೆ ಇದೆ. ಕೆರೆಗಳ ನಿರ್ವಹಣೆಯಿಂದ ಸಮುದಾಯಗಳು ಹಿಂದೆ ಸರಿದಿರುವುದು, ಜಲಾನಯನ ಮತ್ತು ಕೆರೆ ಪಾತ್ರ ಒತ್ತುವರಿ ಆಗಿರುವುದು, ಬಹುತೇಕ ಕೆರೆಗಳು ಜೀರ್ಣಾವಸ್ಥೆಯಲ್ಲಿರುವುದು ಇತ್ಯಾದಿಗಳು ಬ್ಯಾಂಕಿನ ಗಮನಕ್ಕೆ ಬಂದಿದೆ. ಆದುದರಿಂದ ಅದು ಹಣಕಾಸು ನೆರವು ನೀಡಲು ಹಲವಾರು ಶರತ್ತುಗಳನ್ನು ಮುಂದಿಟ್ಟಿದೆ. ಒತ್ತುವರಿ ತಡೆಯುವುದು, ಕೆರೆ ಹೂಳೆತ್ತುವುದರಲ್ಲಿ ಮತ್ತು ನಂತರದ ಕೆರೆ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳು ಪಾಲುಗೊಳ್ಳುವಿಕೆ, ಒತ್ತುವರಿ ಮಾಡಿದವರು ಭೂ ರಹಿತರಾಗಿದ್ದರೆ ಅವರಿಗೆ ಪುನರ್ ವಸತಿ ಕಲ್ಪಿಸುವುದು, ಇತ್ಯಾದಿಗಳು ಬ್ಯಾಂಕ್ ಮುಂದಿಟ್ಟ ಶರತ್ತುಗಳಲ್ಲಿ ಮುಖ್ಯವು. ಹಾಗಾಗಿ ಕೆರೆ ನೀರಿನ ನಿರ್ವಹಣೆಯಲ್ಲಿ ನೀರು ಬಳಸುವ ಸಮುದಾಯಗಳು ಭಾಗವಹಿಸುವಿಕೆಂದು ಸರಕಾರ ಬಯಸುತ್ತಿದೆ.

ಬೃಹತ್ ನೀರಾವರಿ ಇಲಾಖೆ ಕೆಳಗೆ ಬರುವ ಕೆರೆ ನೀರು ಬಳಸುವವರ ಸಹಕಾರಿ ಸಂಘಟನೆಯನ್ನು ರಾಜ್ಯದ ಎಲ್ಲ ಕಡೆಗಳಲ್ಲೂ ಆರಂಭಿಸಲಾಗಿದೆ (ಕರ್ನಾಟಕ ಸರಕಾರ, ೨೦೦೦). ಸಣ್ಣ ನೀರಾವರಿ ಇಲಾಖೆ ಕೂಡ ಆ ನಿಟ್ಟಿನ್ನಲ್ಲಿ ಆಲೋಚಿಸುತ್ತಿದೆ. ಹೀಗೆ ತಳಮಟ್ಟದಲ್ಲಿ ಕೆರೆ ನೀರಾವರಿ ನಿರ್ವಹಣೆಗೆ ಬಳಕೆದಾರರ ಸಹಕಾರಿ ಸಂಘಟನೆಗಳು ಜಾರಿ ಬರಲಿವೆ ಮತ್ತು ಕೆಲವು ಕಡೆಗಳಲ್ಲಿ ಜಾರಿ ಬಂದಿವೆ. ಬಳಕೆದಾರರು ಕೆರೆ ನೀರಾವರಿ ನಿರ್ವಹಣೆಯ ಜವಾಬ್ದಾರಿ ಹೊರುವುದನ್ನು ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಾಭಾಗಿತ್ವ ಎನ್ನಬಹುದು. ಕೆರೆ ನೀರಾವರಿ ನಿರ್ವಹಣೆಯಲ್ಲಿ ಬರುವ ಮುಖ್ಯ ಅಂಶಗಳು ಯಾವುವು? ಜಲಾನಯನ ಪ್ರದೇಶ, ಅಲ್ಲಿಂದ ನೀರು ಹರಿದು ಬರಲು ಕಾಲುವೆ ನಿರ್ಮಾಣ ಮತ್ತು ಕಾಲಕಾಲಕ್ಕೆ ಅದರ ರಿಪೇರಿ, ಕೆರೆಯ ಪಾತ್ರ ಮತ್ತು ಅದರ ನಿರ್ವಹಣೆ ಅಂದರೆ ಅದು ಹೂಳು ತುಂಬದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಒತ್ತುವರಿ ಮಾಡಿಕೊಳ್ಳದಂತೆ ನೋಡಿಕೊಳ್ಳವುದು. ಕರೆ ಕಟ್ಟೆ, ನೀರು ಬಿಡುವ ತೂಬುಗಳನ್ನು ಸೇರಿಸಿ ಅಲ್ಲಿಂದ ಕೆರೆ ಕೆಳಭಾಗದಲ್ಲಿ ಬರುವ ಹೊಲಗಳಿಗೆ ಕ್ರಮಪ್ರಕಾರ ನೀರು ಹೋಗಲು ಕಾಲುವೆ ನಿರ್ಮಾಣ ಮತ್ತು ಉಸ್ತುವಾರಿ. ಹೊಸ ಕೆರೆ ಅಥವಾ ಕಾಲುವೆ ನಿರ್ಮಾಣದ ಕೆಲಸ ಇಂದಿಲ್ಲ. ಇಂದು ಏನಿದ್ದರೂ ಈಗಾಗಲೇ ಇರುವ ಕೆರೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ನಿರ್ಮಾಣಗಳನ್ನು ಕೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ. ಮೇಲಿನ ಎಲ್ಲ ಜವಾಬ್ದಾರಿಗಳ ನಿರ್ವಹಣೆ, ನೀರು ಹಂಚಿಕೆ, ತೆರಿಗ ಸಂಗ್ರಹ, ಇವುಗಳಿಗೆ ಸಂಬಂಧಿಸಿದ ತಕರಾರುಗಳ ಪರಿಹಾರ ಇತ್ಯಾದಿಗಳು ಜನರ ಸಹಭಾಗಿತ್ವದ ವ್ಯಾಪ್ತಿಯೊಳಗೆ ಬರಬಹುದಾದ ವಿಚಾರಗಳು.

ಸರಕಾರದ ಹೊಸ ನೀರಿ-ಕೆರೆ ನೀರಾವರಿ ನಿರ್ವಣೆಯಲ್ಲಿ ಸಹಾಭಾಗಿತ್ವ -ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಕೆರೆ ನೀರಾವರಿ ನಿರ್ವಹಣೆಯಲ್ಲಿ ಸಮುವಾಯ ಪಾಲು ಗೊಳ್ಳುವ ಬಗ್ಗೆ ನಮ್ಮ ಚರಿತ್ರೆಯಲ್ಲಿ ಸಾಕಷ್ಟು ಮಾಹಿತಿ ಇದೆ ಎಂದು ಸಮುದಾಯವಾದಿಗಳು ಮತ್ತು ಪರಿಸರವಾದಿಗಳು ವಾದಿಸುತ್ತಾರೆ. ಒಂದು ವೇಳೆ ಹಿಂದೆ ಕೂಡ ಸಹಭಾಗಿತ್ವ ಇದ್ದರೆ ಅದು ಯಾವ ರೂಪದಲ್ಲಿ ಇತ್ತು? ಕೆರೆ ನೀರು ಬಲಸುವ ಇಂದಿನ ಬಳಕೆದಾರರು ಆ ವ್ಯವಸ್ಥೆ ಬಗ್ಗೆ ಎಷ್ಟು ತಿಳಿದ್ದಾರೆ? ಅದೇ ವ್ಯವಸ್ಥೆಯನ್ನು ಪುನರ್‌ಜೀವಗೊಳಿಸುವ ಬಗ್ಗೆ ಬಳಕೆದಾರರು ಏನು ಹೇಳುತ್ತಾರೆ? ಸ್ವಾತಂತ್ರ್ಯ ನಂತರ ಹಲವಾರು ದಶಕಗಳಿಂದ ಕೆರೆ ನೀರಾವರಿ ನಿರ್ವಹಣೆಯಲ್ಲಿ ಸರಕಾರ ವಹಿಸಿಕೊಂಡಿತ್ತು, ಆ ವ್ಯವಸ್ಥೆ ಕುರಿತು ಅವರ ಅಭಿಪ್ರಾಯಗಳೇನು? ಕೆರೆ ಸಂರಕ್ಷಣೆಯ ಜವಾಬ್ದಾರಿಯನ್ನು ನೀರು ಬಳಕೆದಾರರು ಹೊರಬೇಕೆಂದು ಸರಕಾರದ ಹೊಸ ನೀತಿ ಹೇಳುತ್ತದೆ. ಆಧುನೀಕರಣಕ್ಕೆ ಒಗ್ಗಿ ಹೋಗಿರುವ ಜನರು ಒಮ್ಮಿಂದೊಮ್ಮೆಲೆ ಈ ಜವಾಬ್ದಾರಿ ಹೊರಲು ಸಿದ್ದರಾಗಿದ್ದಾರೆಯೇ? ಒಂದು ವೇಳೆ ಅವರ ಸಿದ್ಧತೆ ಬಗ್ಗೆ ವಿಶೇಷ ತಲೆ ಕೆಡಿಸಿಕೊಳ್ಳದೆ ವಿವಿಧ ಕೆಲಸಗಳಿಗೆ ಅವರನ್ನು ಜವಾಬ್ದಾರರನ್ನಾಗಿಸುವುದೆಂದು ತೀರ್ಮಾನಿಸಿದರೆ (ತೀರ್ಮಾನಿಸಲಾಗಿದೆ)ಅದನ್ನು ಯಾವ ರೀತಿಯಲ್ಲಿ ಮಾಡುವುದು? ಕೆರೆ ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವದ ಸಾಧ್ಯತೆಗಳನ್ನು ತಿಳಿಯಲು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಗತ್ಯ. ಮೇಲಿನ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಿರು ಪ್ರಯತ್ನ ಈ ಅಧ್ಯಯನದ ಉದ್ದೇಶ.

ಅಧ್ಯಯನದ ಉದ್ದೇಶ, ವಿಧಾನ ಇತ್ಯಾದಿಗಳು

ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವದ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಈ ಅಧ್ಯಯನದ ಮುಖ್ಯ ಉದ್ದೇಶ.ಧ ಸಹಭಾಗಿತ್ವದ ಪ್ರಶ್ನೆ ನಮಗೇನು ಹೊಸತಲ್ಲ. ಅದು ನಮ್ಮ ಸಂಸ್ಕೃತಿಯ ಭಾಗವೆಂಬ ವಾದವು ಇದೆ. ಹಿಂದೆ ಇದ್ದ ಸಹಭಾಗಿತ್ವ, ಅದರ ಅರಿವು, ಇಂದಿನ ಸಮಸ್ಯೆಗಳಿಗೆ ಹಿಂದಿನ ವ್ಯವಸ್ಥೆ ಪರಿಹಾರವಾಗುವ ಸಾಧ್ಯತೆ. ಇಂದಿನ ಸಹಭಾಗಿತ್ವ ಕುರಿತು ರೈತರ ನಿಲುವು ಇತ್ಯಾದಿಗಳ ಕುರಿತು ಕರೆ ನೀರು ಬಳಕೆದಾರರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಕೂಡ ಅಧ್ಯಯನದ ಉದ್ಧೇಶವಾಗಿದೆ. ಈ ಎಲ್ಲವನ್ನು ನಿರ್ದಿಷ್ಟವಾಗಿ ಈ ಕೆಳಗಿನಂತೆ ಪಟ್ಟಿಮಾಡಬಹುದು

೧. ಹಿಂದೆ ಇದ್ದ ಸಹಭಾಗಿತ್ವದ ಗುಣ ಲಕ್ಷಣಗಳ ಕಿರು ಪರಿಚಯ ಮಾಡಿಸುವುದು.

೨. ಹಿಂದಿನ ಸಹಭಾಗಿತ್ವ ಕುರಿತು ಇಂದಿನ ಕೆರೆ ನೀರು ಬಳಕೆದಾರರು ಹೊಂದಿರುವ ಅಭಿಪ್ರಾಯಗಳನ್ನು ಸಂಗ್ರಹಿಸುವುದು.

೩. ಸರಕಾರದ ಹೊಸ ಸಹಭಾಗಿತ್ವ ನೀತಿ ಕುರಿತು ಕೆರೆ ನೀರು ಬಳಕೆದಾರರ ನಿಲುವುಗಳನ್ನು ತಿಳಿಯುವುದು.

೪. ಈ ಎಲ್ಲದರ ಹಿನ್ನೆಲೆಯಲ್ಲಿ ಸರಕಾರ ಮುಂದಿಡುವ ಕೆರೆ ನೀರಿನ ನಿರ್ವಹಣೆಯಲ್ಲಿ ಜನರ ಪಾಲುಗೊಳ್ಳುವಿಕೆಯ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವುದು.

ಇದೊಂದು ಎಂಪಿರಿಕಲ್ ಅಧ್ಯಯನ. ಅಧ್ಯಯನದ ಉದ್ದೇಶದಲ್ಲಿ ತಿಳಿಸಿರುವ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಎರಡು ಮೂಲಗಳಿಂದ ಪಡೆಯಲಾಗಿದೆ. ಹಿಂದೆ ಇದ್ದ ಸಹಭಾಗಿತ್ವದ ಗುಣಲಕ್ಷಣಗಳನ್ನು ಈಗಾಗಲೇ ಮುದ್ರಿತವಾಗಿರುವ ಅಧ್ಯಯನಗಳಿಂದ ಪಡೆಯಲಾಗಿದೆ. ಶಾಸನಗಳು ಆ ಅಧ್ಯಯನಗಳು ಮುಖ್ಯ ಆಕರ ಮೂಲಗಳು. ಎಷ್ಟೋ ಸಂದರ್ಭಗಳಲ್ಲಿ ಶಾಸನಗಳು ಕೊಡುವ ಮಾಹಿತಿ ವಸಾಹತು ಪೂರ್ವದ ಮೇಲ್ ವರ್ಗಕ್ಕೆ ಹೆಚ್ಚು ಸಂಬಂಧಿಸಿರುತ್ತವೆ. ಅಂದಿನ ಸಮಾಜದ ಕೆಳವರ್ಗದ ಪಾಲುಗೊಳ್ಳುವಿಕೆ ಕುರಿತು ಶಾಸನಗಳಲ್ಲಿ ಮಾಹಿತಿ ಸ್ವಲ್ಪ ಕಡಿಮೆಯೇ ಇದೆ. ಈ ಕೊರತೆಯನ್ನು ತುಂಬಲು ಇಂದಿನ ಕೆರೆ ನೀರು ಬಳಕೆದಾರರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಕಮಲಾಪುರ, ತಿಮ್ಮಲಾಪುರ ಮತ್ತು ಕಲ್‌ತಾವರೆಗೆರೆ- ಈ ಮೂರು ಹಳ್ಳಿಗಳದ ರೈತರುಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಮೂರು ಹಳ್ಳಿಗಳಲ್ಲಿ ವಿಜಯನಗರ ಕಾಲದ ಕೆರೆಗಳು ಜನರ ನೀರಿನ ಬೇಡಿಕೆಯನ್ನು ಇಂದೂ ಪೂರೈಸುತ್ತಿವೆ. ಕಮಲಾಪುರ ಕೆರೆ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಉಳಿದೆರಡು ಕೆರೆಗಳು ಎಲ್ಲಾ ಪಂಚಾಯಯತ್ ವ್ಯಾಪ್ತಿಗೆ ಬರುತ್ತವೆ. ಕಮಲಾಪುರ ಕೆರೆ ಹಂಪಿಗೆ ಸಮೀಪವಿದೆ. ಈ ಕೆರೆಗೆ ಸುಮಾರು ೧೮ ಚದರ ಮೈಲು ವಿಸ್ತೀರ್ಣದ ಜಲಾನಯನ ಪ್ರದೇಶವಿದೆ. ಆದರೆ ಆ ಪ್ರದೇಶವೆಲ್ಲ ಇಂದು ಗಣಿಗಾರಿಕೆ ಚಟುವಟಿಕೆಗಳಿಂದ ತುಂಬಿದೆ. ಅಪರೂಪಕ್ಕೆ ಬರುವ ಮಳೆ ಆ ಪ್ರದೇಶಗಳಿಂದ ಗಣಿಗಾರಿಕೆ ಹೊರ ಹಾಕುವ ಹುಡಿ ಮಣ್ಣನ್ನು ತಂದು ಕೆರೆ ಪಾತ್ರ ತುಂಬುತ್ತದೆ. ತುಂಗಭದ್ರಾ ಆಣೆಕಟ್ಟು ನೀರು ಪ್ರತಿವರ್ಷ ಕೆರೆ ತುಂಬುವುದರಿಂದ ರೈತರಿಗೆ ನೀರಿನ ಅಭಾವ ಕಾಡಿಲ್ಲ. ಸರಕಾರಿ ದಾಖಲೆ ಪ್ರಕಾರ ಸುಮಾರು ೧೨೦೦ ಎಕ್ರೆ ಭೂಮಿ ಕಮಲಾಪುರದ ಕೆರೆಯಿಂದ ಕೃಷಿಯಾಗುತ್ತಿದೆ. ಅನಧಿಕೃತವಾಗಿ ಇನ್ನು ಕೆಲವು ಎಕ್ರೆ ಭೂಮಿ ಕೃಷಿಯಾಗುತ್ತಿದೆ. ಈ ಕೆರೆಯ ನೀರು ಬಳಸುವ ೨೦೫ ಕೃಷಿಕರಿದ್ದಾರೆ. ಅವರಲ್ಲಿ ೨೫ ಜನ ರೈತರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ.

ತಿಮ್ಮಲಾಪುರ ಚಿಲಕನಹಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಹೊಸಪೇಟೆಯಿಂದ ಸುಮಾರು ೩೦ ಕಿ.ಲೋ. ಮೀಟರು ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಳ್ಳಿ ಇದೆ. ಅಲ್ಲಿ ಒಟ್ಟು ನಾಲ್ಕು ಕೆರೆಗಳಿವೆ. ಅವುಗಳಲ್ಲಿ ಒಂದು ಕೆರೆ ಮಾತ್ರ ರಿಪೇರಿಯಾಗಿ ನೀರು ಸಂಗ್ರಹಿಸಲು ಯೋಗ್ಯವಾಗಿದೆ. ತೂಬು ಮತ್ತು ಕೆರೆ ಕಟ್ಟೆ ಹಲವು ಕಡೆಗಳಲ್ಲಿ ಸೋರುವುದರಿಂದ ಉಳಿದ ಮೂರು ಕೆರೆಗಳು ರೈತರ ಉಪಯೋಗಕ್ಕೆ ಬರುತ್ತಿಲ್ಲ. ನಾಲ್ಕು ಕೆರೆಗಳಿಗೂ ವಿಸ್ತಾರವಾದ ಜಲಾನಯನ ಪ್ರದೇಶವಿದೆ. ಅವೆಲ್ಲ ಅರಣ್ಯ ಪ್ರದೇಶವಾದುದರಿಂದ ಇಂದು ಕೂಡ ಜಲಾನಯನ ಪ್ರದೇಶವಾಗಿ ಕೆಲಸಮಾಡುತ್ತಿವೆ. ಮಳೆಗಾಲದಲ್ಲಿ ಎಲ್ಲ ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ ತೂಬು ಮತ್ತು ಇತರ ಸೋರುವಿಕೆಯಿಂದಾಗಿ ಕೇವಲ ಒಂದು ಕೆರೆಯಲ್ಲಿ ಮಾತ್ರ ನೀರು ರೈತರ ಕೃಷಿ ಬಳಕೆಯಾಗುತ್ತಿದೆ. ಈ ಹಳ್ಳಿಯ ಸುಮಾರು ೫೪ ರೈತರು ಈ ಕೆರೆಯ ನೀರನ್ನು ತಮ್ಮಕೃಷಿಗೆ ನಂಬಿದ್ದಾರೆ. ಅವರಲ್ಲಿ ೧೨ ಜನರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ.

ಕಲ್‌ತಾವರೆಗೆರೆ ಗ್ರಾಮಪಂಚಾಯತ್‌ನ ಕಲ್‌ತಾವರೆಗೆರೆ ಹಳ್ಳಿ ಕೊಪ್ಪಳ ತಾಲ್ಲೂಕಿನಲ್ಲಿದೆ. ಕೆರೆಯ ಹೆಸರೆ ಊರಿನ ಹೆಸರು. ಇಲ್ಲಿನ ಕೆರೆ ಕೂಡ ವಿಜಯನಗರದ ಕಾಲದ್ದು. ಅದರ ಪಾತ್ರ ಸುಮಾರು ೨೦ ಹೆಕ್ಟೇರಿನಷ್ಟಿದೆ. ಹಳ್ಳಿಯಲ್ಲಿ ಒಟ್ಟು, ಸಣ್ಣ ಮತ್ತು ದೊಡ್ಡ ಹಿಡುವಳಿದಾರರನ್ನು ಸೇರಿಸಿ, ೪೨೨ ಕೃಷಿ ಹಿಡುವಳಿದಾರರು ಇದ್ದಾರೆ. ಕೆರೆ ನೀರಾವರಿ ಆಧರಿತ ಕೃಷಿ ಸಂಖ್ಯೆ ಸುಮಾರು ೮೫. ಅಲ್ಲಿನ ೧೫ ಕೆರೆ ನೀರು ಬಳಕೆದಾರರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ಮಾಹಿತಿಯನ್ನು ವಿವರಣಾತ್ಮಕ ವಿಧಾನದಲ್ಲಿ ವಿಶ್ಲೇಷಿಸಿದ್ದೇನೆ.

ಹಿಂದೆ ಇದ್ದ ಸಹಭಾಗಿತ್ವ

ದೊರೆಗಳು, ಶ್ರೀಮಂತ ಅಧಿಕಾರಿಗಳು, ವ್ಯಾಪಾರಿಗಳು, ದೇವಸ್ಥಾನದ ಅಧಿಕಾರಿಗಳು ಮುಂತಾದವರು ಕೆರೆ ಕಟ್ಟಿಸುತ್ತಿದ್ದರು. ಜನ ಸಾಮಾನ್ಯರು ತಮ್ಮ ಶಕ್ತಿಯಾನುಸಾರ ಕೆರೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕಿತ್ತು (ವಾಸುದೇವನ್, ೨೦೦೧). ಆದರೆ ಕೆರೆಗಳ ಸಂರಕ್ಷಣೆ ಸಂಪೂರ್ಣ ಬಳಕೆದಾರರ ಜವಾಬ್ದಾರಿಯಾಗಿತ್ತು. ಹೂಳೆತ್ತುವುದು, ಕಟ್ಟೆ ರಿಪೇರಿ ಮಾಡಿಸುವುದು, ತೂಬು ಕೋಡಿಗಳ ದುರಸ್ತಿ, ಕೆರೆ ಪಾತ್ರ ಅಥವಾ ಜಲಾನಯನ ಪ್ರದೇಶದ ಒತ್ತುವರಿ ಆಗದಂತೆ ನೋಡಿಕೊಳ್ಳುವುದು ಇತ್ಯಾದಿಗಳು ನೀರು ಬಳಕೆದಾರರ ಹೊಣೆ (ಕೊಟ್ರಯ್ಯ, ೨೦೦೧). ಕೌಟಿಲ್ಯನ ಅರ್ಥಶಾಸ್ತ್ರ, ನೀರಿನ ತೆರಿಗೆ ಕುರಿತು ಹೀಗೆ ಹೇಳುತ್ತದೆ. “ರಾಜನು ಭೂಮಿಗೆ ಒಡೆಯನಾಗಿರುವಂತೆ ನೀರಿಗೂ ಒಡೆಯನಾದ್ದರಿಂದ ನೀರಿನ ತೆರಿಗೆಯನ್ನು ಕೊಡಬೇಕು. ತಮ್ಮ ದೇಹಾಯಾಸ ಮತ್ತು ತಮ್ಮ ಧನ ವ್ಯಯದಿಂದ ನಿರ್ಮಿಸಿದ ಕೆರೆಯಿಂದ ಕೊಡದಿಂದ ನೀರು ಹಾಕಿ ಬೆಳೆಸಿದ ಬೆಳೆಯಿಂದ ಐದನೆ ಒಂದು ಭಾಗವನ್ನು ನೀರಿನ ತೆರಿಗೆಯಾಗಿ ರಾಜನಿಗೆ ಕೊಡಬೇಕು. ಹೆಗಲಿನಿಂದ ಹೊರುವ ಯಂತ್ರದಿಂದ ನೀರು ಹಾಕಿ ಬೆಳೆಸಿದ ಬೆಳೆಯಿಂದ ನಾಲ್ಕನೆ ಒಂದು ಭಾಗವನ್ನು ಕೊಡಬೇಕು. ಏತ ಮೊದಲಾದವುಗಳಿಂದ ನೀರು ಹಾಯಿಸಿದ ಬೆಳೆಯಿಂದ ಮೂರನೆ ಒಂದು ಭಾಗವನ್ನು ಕೊಡಬೇಕು. (“ಕೌಟಿಲ್ಯನ ಅರ್ಥಶಾಸ್ತ್ರ, ೨೦೦೦). ಕೆರೆ ನಿರ್ಮಾಣದಲ್ಲಿದ ಪಾಲುಗೊಳ್ಳಲು ತಪ್ಪಿಸುವ ರೈತರ ಕಠಿಣ ಶಿಕ್ಷೆಗೆ ಗುರಿಯಾಗುತ್ತಿದ್ದರು. “ಎಲ್ಲರೂ ಒಟ್ಟಿಗೆ ಸೇರಿ ನೀರಾವರಿಯನ್ನು ಮಾಡುವಾಗ ತನ್ನ ಅಂಶದ ಕೆಲಸವನ್ನು ಮಾಡಲು ತಪ್ಪಿಸುವವನ ಕೆಲಸದವರೂ ಎತ್ತುಗಳೂ ಕೆಲಸ ಮಾಡುವಂತೆ ರಾಜನು ಮಾಡಬೇಕು. ಅಷ್ಟು ಮಾತ್ರವಲ್ಲದೆ ನೀರಾವರಿಗೆ ತಗಲಿದ ಖರ್ಚಿನಲ್ಲಿ ಪಾಲುದಾರನಾಗುತ್ತಾನೆ. ಆದರೆ ನಂತರ ಉಂಟಾಗುವ ಫಲದಲ್ಲಿ ಅವನಿಗೆ ಪಾಲು ಸಿಗಲಾರದು” (ಕೌಟಿಲ್ಯನ ಅರ್ಥಶಾಸ್ತ್ರ, ೨೦೦೧).

ಕೆರೆ ಸಂರಕ್ಷಣೆ ಕುರಿತು ಅರ್ಥಶಾಸ್ತ್ರ ಈ ರೀತಿ ಹೇಳುತ್ತದೆ. ‘ಕೆರೆ ಇತ್ಯಾದಿಗಳ ಕೆಳಗೆ ಬೇಸಾಯ ಮಾಡುವ ವ್ಯಕ್ತಿಗಳು ಅಥವಾ ಯಾವುದೇ ರೀತಿಯ ಕಂದಾಯವೂ ಇಲ್ಲದೆ ಅಂಥ ಭೂಮಿಯನ್ನು ಅನುಭವಿಸಲು ಅನುಮತಿ ಪಡೆದ ವ್ಯಕ್ತಿಗಳು ಕೆರೆ ಇತ್ಯಾದಿಗಳನ್ನು ಒಳ್ಳೆಯ ದುರಸ್ತಿಯಲ್ಲಿ ಇಟ್ಟಿರಬೇಕು. ಇಲ್ಲವಾದರೆ ಅವರಿಗೆ ನಷ್ಟದ ಎರಡರಷ್ಟು ಜುಲ್ಮಾನೆಯ ಶಿಕ್ಷೆ ವಿಧಿಸಬೇಕು’ (ಕೌಟಿಲ್ಯನ ಅರ್ಥಶಾಸ್ತ್ರ, ೨೦೦೦). ಅಂದರೆ ಕೆರೆ ಸಂರಕ್ಷಣೆ ಕೆಲಸ ಅದರ ಲಾಭ ಪಡೆಯುವುದರ ಅಥವಾ ನೀರು ಬಳಕೆದಾರರ ಜಬಾಬ್ದಾರಿ ಎಂದಾಯಿತು. ಹೀಗೆ ಹಿಂದೆ ಕೆರೆ ಸಂರಕ್ಷಣೆ ಗ್ರಾಮ ಸಮುದಾಯದ ಹೊಣೆಯಾಗಿತ್ತು. ಜಿ.ಎಸ್.ದೀಕ್ಷಿತ್ ಮಧ್ಯಯುಗೀನ ಕರ್ನಾಟಕದಲ್ಲಿ ಕೆರೆ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವ ಕುರಿತು ಹೀಗೆ ಹೇಳುತ್ತಾರೆ, “ಫಲಾನುಭವಿಗಳು ಆ ಸಮುದಾಯದ ಪ್ರಮುಖ ಭಾಗವಾಗಿದ್ದರು. ಅವರು ಈ ಕೆಲಸವನ್ನು ಹಳ್ಳಿಯ ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ತಂಡಕ್ಕೆ ವಹಿಸುತ್ತಿದ್ದರು. ಆತ ಅಥವಾ ಅವರು ಸಂರಕ್ಷಣಾ ಕಾರ್ಯವನ್ನಿ ನಡೆಸುವ ಸಲುವಾಗಿ ಅವರಿಗೆ ಕೆಲವು ಭೂಮಿಗಳನ್ನು ಬಿತ್ತುವಟ್ಟ ಅಥವಾ ದಶವಂದವಾಗಿ ನೀಡುತ್ತಿದ್ದರು. ಇಲ್ಲವೆ ಕಂದಾಯದಲ್ಲಿ ರಿಯಾಯಿತಿ ನೀಡುತ್ತಿದ್ದರು. ಭಾರಿ ನೀರಾವರಿ ಕಾರ್ಯಗಳಲ್ಲಿ ದುರಸ್ತಿ ಕಾರ್ಯವನ್ನು ನಡೆಸುವುದಕ್ಕಾಗಿ ಕೆಲವು ಸ್ಥಳೀಯ ತೆರಿಗೆಗಳ ಬಳಕೆಯ ಸೌಲಭ್ಯವನ್ನು ಸ್ಥಳೀಯ ಸಂಸ್ಥೆಗಳಿಗೆ ದೊರೆಗಳು ನೀಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಕೆರೆ ಸಂರಕ್ಷಣೆಗಾಗಿ ಬಂಡಿಗಳನ್ನು, ಭೂಮಿಯನ್ನು ಕೊಡಲಾಗುತ್ತಿತ್ತು. ಬಂಡಿಗಳನ್ನು ಕೊಡುತ್ತಿದ್ದುದು ಕೆರಯಿಂದ ಹೂಳೆತ್ತಲು.” (ಜಿ.ಎಸ್. ದೀಕ್ಷಿತ್ ಮತ್ತು ಇತರರು, ೨೦೦೦). ವಿಜಯನಗರದ ಆಡಳಿತ ಅವಧಿಯಲ್ಲಿ ಕೆರೆ ನೀರಾವರಿ ನಿರ್ವಹಣೆ ಕಾರ್ಯವನ್ನು ಸ್ಥಳೀಯರಿಗೆ ಬಿಟ್ಟು ಕೊಡಲಾಗುತ್ತಿತ್ತು. ಯಾರು ಇವುಗಳಿಂದ ಲಾಭ ಪಡೆಯುತ್ತಿದ್ದರೋ ಅವರೇ ಅದರ ಉಸ್ತುವಾರಿ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರು. ಪ್ರಭುತ್ವ ಆದೇಶ ನಿರ್ದೇಶನಗಳನ್ನು ನೀಡುತ್ತಿತ್ತು. ಹಲವು ಬಾರಿ ಆರ್ಥಿಕ ಸಹಾಯವನ್ನು ನೀಡುತ್ತಿತ್ತು. ಈ ಕಾರ್ಯವನ್ನು ಸ್ಥಳೀಯ ಹಳ್ಳಿಯ ಅಧಿಕಾರಿಗಳು, ದೇವಾಲಯದ ಧರ್ಮದರ್ಶಿಗಳು ಮತ್ತು ಇತರ ಪ್ರಮುಖರಿಂದ ನಡೆಸಲಾಗುತ್ತಿತ್ತು. ಇದರ ಜತೆಗೆ ಹಳ್ಳಿಯ ಸಮಿತಿಯ ಪಾತ್ರ ಅಪಾರವಾಗಿತ್ತು (ಕೊಟ್ರಯ್ಯ, ೨೦೦೧).

ಕೌಟಿಲ್ಯ, ಮಧ್ಯ ಯುಗದ ಕರ್ನಾಟಕ ಇತ್ಯಾದಿಗಳು ತುಂಬಾ ದೂರದ ಸಂಗತಿಗಳು. ಅಂದಿನ ಸಹಭಾಗಿತ್ವದ ಚಿತ್ರಣ ವಾಸ್ತವಕ್ಕೆ ಎಷ್ಟು ಹತ್ತಿರ ಎಂದು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಆದರೆ ಮಧ್ಯಯುಗಕ್ಕೂ ಆಧುನಿಕಕ್ಕೂ ಕೊಂಡಿಯಾಗಿದ್ದ ಮೈಸೂರು ರಾಜರ ಕಾಲದಲ್ಲಿನ ಸಹಭಾಗಿತ್ವದ ಚಿತ್ರಣ ವಾಸ್ತವಕ್ಕೆ ಎಷ್ಟು ಹತ್ತಿರ ಒಂದು ಉಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಆದರೆ ಮಧ್ಯಯುಗಕ್ಕೂ ಆಧುನಿಕಕ್ಕೂ ಕೊಂಡಿಯಾಗಿದ್ದ ಮೈಸೂರು ರಾಜರ ಕಾಲದಲ್ಲಿನ ಸಹಭಾಗಿತ್ವದ ಮಾಹಿತಿ ಹಿಂದಿನ ವ್ಯವಸ್ಥೆ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಬಹುದು. ತಮ್ಮ ಅಧೀನ ಪ್ರದೇಶಗಳಲ್ಲಿ ಬರುವ ಕೆರೆಗಳ ನಿರ್ವಹಣೆಗೆ ರೈತರನ್ನು ಹೊಣೆಯನ್ನಾಗಿಸುವ ಉದ್ದೇಶದಿಂದ ಮೈಸೂರು ಅರಸರು ಕೆರೆ ಪಂಚಾಯಿತಿ ಮಸೂದೆಯನ್ನು ಜಾರಿ ತಂದರು (ಮೈಸೂರು ಆಕ್ಟ್‌,೧೯೧೧). ಆ ಕಾಯಿದೆ ಪ್ರಕಾರ ಕೆರೆ ಸಂರಕ್ಷಣೆ ಮತ್ತು ನಿರ್ವಹಣೆ ಕೆರೆ ಪಂಚಾಯತ್‌ನ ಜವಾಬ್ದಾರಿ. ನಿರ್ದಿಷ್ಟ ಮೊತ್ತದ ಭೂ ಕಂದಾಯ ಕಟ್ಟುವ ರೈತರು ಮಾತ್ರ ಕೆರೆ ಪಂಚಾಯತ್‌ನ ಸದಸ್ಯರಾಗಲು ಅರ್ಹರಾಗಿದ್ದರು. ಮಹಿಳೆಯರು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಿದ್ದರು. ಅದರಲ್ಲಿ ನಾಲ್ಕನೇ ಒಂದಂಶದಷ್ಟು ಸದಸ್ಯರನ್ನು ಒಣ ಭೂಮಿ ಹೊಂದಿರುವವರು ಆಯ್ಕೆ ಮಾಡುತ್ತಾರೆ. ಉಳಿದವರನ್ನು ನೀರಾವರಿಯುಳ್ಳ ರೈತರಿಂದ ಆರಿಸುತ್ತಾರೆ. ಊರಿನ ಪಟೇಲರು ಪಂಚಾಯತ್ ಅಧ್ಯಕ್ಷರಾಗಿರುತ್ತಾರೆ. ಕೆರೆ ನಿರ್ವಹಣೆಗೆ ತಗಲುವ ವೆಚ್ವವನ್ನು ಭರಿಸಲು ವಿವಿಧ ಮಾರ್ಗಗಳನ್ನು ಸೂಚಿಸಲಾಗಿತ್ತು. ಕೆರೆ ಸಂರಕ್ಷಣೆಯ ಕೆಲಸವನ್ನು ಪಂಚಾಯತ್ ತಮ್ಮ ಸದಸ್ಯರಿಗೆ ವಹಿಸುತ್ತಿತ್ತು. ತಮ್ಮ ಪಾಲಿನ ಸಂರಕ್ಷಣಾ ಕೆಲಸವನ್ನು ಪೂರೈಸಲು ರೈತರು ವಿಫಲರಾದರೆ ಅವರು ಒಂದೋ ಆ ಕೆಲಸಕ್ಕೆ ತಗಲುವ ವೆಚ್ಚವನ್ನು ಭರಿಸಬೇಕು. ಇಲ್ಲವಾದರೆ ತಮ್ಮ ಪರವಾಗಿ ಕೆಲಸ ಮಾಡಲು ಕೂಲಿಗಳನ್ನು ಕಳುಹಿಸಬೇಕಿತ್ತು. ತನ್ನ ಆದಾಯಕ್ಕಾಗಿ ಕೆರೆಯಲ್ಲಿನ ಮೀನುಗಳನ್ನು ಮಾರಲು ಪಂಚಾಯತ್‌ಗೆ ಅಧಿಕಾರವಿತ್ತು. ಕೆರೆ ಪಾತ್ರದಲ್ಲಿನ ಹುಲ್ಲನ್ನು ಏಲಂ ಮಾಡುವುದರಿಂದ, ಕೆರೆ ಏರಿ ಮೇಲೆ ಇರುವ ಮರಗಿಡಗಳ ಮಾರಾಟದಿಂದ ಮತ್ತು ಕೆಲವು ಬಾರಿ ಕೆರೆ ಪಾತ್ರವನ್ನು ತಾತ್ಕಾಲಿಕವಾಗಿ ಕೃಷಿ ಮಾಡಲು ಗೇಣಿಗೆ ಕೊಡುವುದರಿಂದ ಪಂಚಾಯತ್ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಇದರ ಜತೆಗೆ ಸಹಾಯ ಧನ, ಮುಂಗಡ ಮತ್ತು ಕೆಲವು ಬಾರಿ ಸಾಲ ರೂಪದಲ್ಲಿ ಸರಕಾರದಿಂದ ಸಹಾಯ ದೊರೆಯುವ ಸಾಧ್ಯತೆಗಳಿದ್ದವು. ಹೀಗೆ ೧೯೧೧ರಲ್ಲಿ ಮೈಸೂರು ಅರಸರು ಕೆರೆ ಸಂರಕ್ಷಣೆ ಕುರಿತು ಮಾಡಿದ ಕೆರೆ ಪಂಚಾಯತ್‌ ಕಾಯಿದೆ ಹಿಂದೆ ಇದ್ದ ಸಹಭಾಗಿತ್ವದ ಚಿತ್ರಣವನ್ನು ಇನ್ನೂ ಸ್ಪಷ್ಟಗೊಳಿಸುತ್ತದೆ (ಮೈಸೂರು ಆಕ್ಟ್ ೧೯೧೧). ನಮ್ಮ ಸಂಸ್ಕೃತಿಯಲ್ಲಿ ಇದ್ದ ಸಹಭಾಗಿತ್ವದ ಕಿರು ಪರಿಚಯ ಆದಂತಾಯಿತು. ಅದರ ಮುಖ್ಯ ಗುಣ ಲಕ್ಷಣಗಳನ್ನು ಹೀಗೆ ಪಟ್ಟಿ ಮಾಡಬಹುದು. ಒಂದು, ದೊರೆಗಳು, ಅಧಿಕಾರಿಗಳು, ಶ್ರೀಮಂತ ವ್ಯಾಪಾರಿಗಳು, ದೇವಸ್ಥಾನದ ಅಧಿಕಾರಿಗಳು ಮುಂತಾದವರು ಕೆರೆ ಕಟ್ಟಿಸುತ್ತಿದ್ದರು. ಕೆರೆ ನಿರ್ಮಾಣದಲ್ಲಿ ರೈತರು ತಮ್ಮ ಶಕ್ತಿಯಾನುಸಾರ ಪಾಲುಗೊಳ್ಳಬೇಕಿತ್ತು. ಎರಡು, ಕೆರೆಗಳ ಸಂರಕ್ಷಣೆ ಮತ್ತು ನೀರಾವರಿ ನಿರ್ವಹಣೆ ರೈತರ ಹೊಣೆ. ಮೂರು, ಆ ಹೊಣೆಯಿಂದ ನೀರು ಬಳಕೆದಾರರು ತಪ್ಪಿಸಿಕೊಳ್ಳುವ ಸಾಧ್ಯತೆ ಇರಲಿಲ್ಲ. ನಾಲ್ಕು, ಕೆರೆ ನೀರಾವರಿ ನಿರ್ವಹಣೆಗಾಗಿ ಕೆರೆ ಪಂಚಾಯತ್‌ಗಳನ್ನು ಸಂಘಟಿಸುತ್ತಿದ್ದರು. ಐದು, ಅದರ ಸದಸ್ಯತ್ವ ಕೇವಲ ದೊಡ್ಡ ಮೊತ್ತದ ಭೂ ಕಂದಾಯ ಸಂದಾಯ ಮಾಡುವ ರೈತರಿಗೆ ಸೀಮಿತವಾಗಿತ್ತು. ಆರು, ಸಣ್ಣ ರೈತರು, ಕೃಷಿ ಕೂಲಿಗಳು, ಮಹಿಳೆಯವರು, ಕೆರೆ ನೀರು ಬಳಸುವ ಇತರರು ಪಂಚಾಯತ್ ಸದಸ್ಯರಾಗುವ ಸಾಧ್ಯತೆಗಳು ಇರಲಿಲ್ಲ ಅಥವಾ ಹಿಂದಿನ ಸಹಭಾಗಿತ್ವದ ಭಾಗವಾಗಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಅಂದಿನ ಸಹಭಾಗಿತ್ವ ಸಮಾಜದ ಮೇಲ್ ಸ್ತರಕ್ಕೆ ಸೀಮಿತವಾಗಿದ್ದ ಒಂದು ವ್ಯವಸ್ಥೆ.