ಒಟ್ಟು ಪರಿಸರದ ಹಿನ್ನೆಲೆಯಲ್ಲಿ ಸಹಭಾಗಿತ್ವದ ಸಾಧ್ಯತೆಗಳು

ಸಹಭಾಗಿತ್ವ ಒಂದು ಸಾಮಾಜಿಕ ಪರಿಸರದಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ. ಆ ಪರಿಸರದಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳು ಮತ್ತು ಮೌಲ್ಯಗಳು ಸಹಭಾಗಿತ್ವವನ್ನು ಪ್ರಭಾವಿಸುತ್ತದೆ. ಇಂತಹ ಸಂಸ್ಥೆಗಳು ಮತ್ತು ಮೌಲ್ಯಗಳು ಆಧುನಿಕ ಸಹಭಾಗಿತ್ವವನ್ನು ಹೇಗೆ ಪ್ರಭಾವಿಸಬಹುದು ಎನ್ನುವುದರ ಕಿರು ಪರಿಚಯ ಮುಂದೆ ಇದೆ. ಇಲ್ಲಿ ನಾಲ್ಕೈದು ವಿಚಾರಗಳ ಕಡೆಗೆ ಗಮನ ಹರಿಸಲಾಗಿದೆ. ಒಂದು, ನಮ್ಮಲ್ಲಿ ಕಾರ್ಯರೂಪಕ್ಕೆ ಬಂದ ಆಧುನೀಕರಣ. ಐದು ದಶಕಗಳ ಆಧುನೀಕರಣ ಅಥವಾ ಸರಕಾರದ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಪ್ರಕ್ರಿಯೆ ನಮ್ಮ ಸಾಂಪ್ರದಾಯಿಕ ಆರ್ಥಿಕ, ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಮೂಲಭೂತವಾಗಿ ಬದಲಾಯಿಸದಿದ್ದರೂ ಗಾಢವಾಗಿ ಪ್ರಭಾವಿಸಿದೆ. ಹಿಂದೆ ಕೃಷಿಕರಲ್ಲದ ಎಷ್ಟೋ ಜಾತಿ ಮತ್ತು ಕುಟುಂಬಗಳು ಇಂದು ಕೃಷಿಕರಾಗಿದ್ದಾರೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಕ್ಕ ಮಟ್ಟಿನ ಮುಂದುವರಿಕೆ ಇದ್ದರೂ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಗಣನೀಯವಾದ ಬದಲಾವಣೆಯನ್ನು ಗಮನಿಸಬೇಕಾಗಿದೆ. ಒಂದು ಕಾಲದಲ್ಲಿ ಗ್ರಾಮವೊಂದರ ಅಧಿಕಾರ ಕೇಂದ್ರ ಪಟೇಲ ಅಥವಾ ಗೌಡನಾದರೆ ಇಂದು ಆ ಸ್ಥಿತಿ ಉಳಿದಿಲ್ಲ. ಪಂಚಾಯತ್ ವ್ಯವಸ್ಥೆ ಜಾರಿ ಬರುವುದರೊಂದಿಗೆ ಒಂದೇ ಹಳ್ಳಿಯಲ್ಲಿ ಹಲವಾರು ಅಧಿಕಾರ ಕೇಂದ್ರಗಳು ರೂಪುಗೊಂಡಿದೆ. ಇದು ಒಳ್ಳೆಯದು ಕೆಟ್ಟದು ಎನ್ನುವ ತೀರ್ಮಾನಕ್ಕಿಂತ ಆ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳುವುದು ಇಂತಹ ಪರಿಸರದಲ್ಲಿ ಸಾಧ್ಯವಾಗಬಹುದಾದ ಸಂಘಟಿತ ಕಾರ್ಯಕ್ರಮಗಳ ಬಗ್ಗೆ ಆಲೋಚಿಸಲು ಸಾಧ್ಯ. ಜಾತಿ ನೆಲೆಯಲ್ಲಿ ರಾಜಕೀಯ ಸಂಘಟನೆ ಮತ್ತು ಆ ಮೂಲಕ ಸಮುದಾಯದ ಸಂಪನ್ಮೂಲ ವಿತರಣೆಯ ನಿರ್ಣಯದಲ್ಲಿ ಪಾಳುಗೊಳ್ಳುವುದು ಇಂದು ಸಹಜವಾಗಿದೆ. ಇಂತಹ ವಾತಾವರಣದಲ್ಲಿ ಸಹಕಾರಿ ಸಂಘಟನೆಗಳು ರೂಪುಗೊಳ್ಳಬೇಕಾಗಿದೆ.

ಹೊಸ ಮಾನದಂಡ ಪ್ರಕಾರ ಕೆರೆ ನೀರು ಬಳಸುವ ಪ್ರತಿಯೊಬ್ಬರು ಸಹಕಾರಿ ಸಂಘದ ಸದಸ್ಯರಾಗಲು ಅರ್ಹರು. ಎಲ್ಲ ಜಾತಿಗಳಿಂದಲೂ ಸದಸ್ಯರನ್ನು ಮಾಡಿ ಸಂಘಟನೆ ಸ್ಥಾಪಿಸುವುದು ಕಷ್ಟವಾಗುವುದಿಲ್ಲ. ಇದರ ಜತೆಗೆ ಅವರು ಒಂದು ಸಮುದಾಯವಾಗಿ ಕಾರ್ಯ ನಿರ್ವಹಿಸುವ ಮೌಲ್ಯ ನಿರ್ಮಾನವಾಗಬೇಕಾಗಿದೆ. ಪ್ರತ್ಯೇಕಿತ ಗುಂಪಾಗಿ ಅಥವಾ ಸಮುದಾಯವಾಗಿ (ಜಾತಿ ನೆಲೆಯಲ್ಲಿ) ಕಾರ್ಯಕ್ರಮ ಹಮ್ಮಿಕೊಳ್ಳುವ ಪರಿಪಾಠ ನಮಗಿದೆ. ಈಗ ಪ್ರತ್ಯೇಕಿತ ಸಮುದಾಯಗಳು ಒಂದಾಗಬೇಕಾಗಿದೆ. ತಾಂತ್ರಕವಾಗಿ ಒಂದಾಗುವುದು ಕಷ್ಟವಲ್ಲ. ಆದರೆ ಇವರೆಲ್ಲ ಒಟ್ಟು ಕಲೆತು ವ್ಯವಹರಿಸಲು ಅಗತ್ಯವಾದ ಮೌಲ್ಯ ನಿರ್ಮಾಣವಾಗಬೇಕಾಗಿದೆ. ಪ್ರಶ್ನೆ ಇರುವುದು ಇದು ಈಗಾಗಲೇ ಇರುವ ಯಾವುದಾದರೂ ಒಂದು ಸಮುದಾಯದ ಮೌಲ್ಯ ಆಗಬೇಕೇ? ಅಥವಾ ಎಲ್ಲರಿಗೂ ಅನುಕೂಲವಾಗುವ ಒಂದು ಹೊಸ ಮೌಲ್ಯ ನಿರ್ಮಾಣವಾಗಬೇಕೇ? ಐದು ದಶಕಗಳ ಆಧುನೀಕರಣದ ಇತಿಹಾಸ ನೋಡಿದರೆ ಪ್ರತ್ಯೇಕಿತ ಅಥವಾ ಯಾವುದಾದರು ಒಂದು ಅಥವಾ ಯಜಮಾನಿಕೆಯಲ್ಲಿ ಭಾಗವಹಿಸುವ ಕೆಲವು ಜಾತಿ ಜನರು ಸಮುದಾಯದ ಸಂಪನ್ಮೂಲಗಳ ವಿತರಣೆಯನ್ನು ನಿರ್ಧರಿಸುವ ಪರಿಪಾಠವಿದೆ. ಪ್ರತಿಯೊಂದನ್ನು ಪ್ರತ್ಯೇಕ ಜಾತಿ ಅಥವಾ ಗುಂಪಿನ ಹಿತಾಸಕ್ತಿಯ ನೆಲೆಯಿಂದ ನೋಡುವ ಅಭ್ಯಾಸವನ್ನು ಇಲ್ಲಿ ಬದಲಾಯಿಸಿಕೊಳ್ಳಬೇಕಾಗಿದೆ. ಇದು ಒಂದೆರಡು ವರ್ಷಗಳಲ್ಲಿ ಆಗುವಂತಹ ಕೆಲಸವಲ್ಲ. ಹಲವಾರು ವರ್ಷಗಳ ಪ್ರಯೋಗದ ಅಗತ್ಯವಿದೆ.

ಎರಡು, ಸಾಮಾಜಿಕ ಪರಿವರ್ತನೆಗೆ ರೂಢಿಸಿಕೊಳ್ಳುವ ನಮ್ಮ ಕ್ರಮ. ಚಾರಿತ್ರಿಕವಾಗಿ ನಾವು ಸಾಮಾಜಿಕ ಅಥವಾ ಸಾಂಸ್ಕೃತಿಕ ಚಳವಳಿಗಳ ಮೂಲಕ ಇತರ ಕ್ಷೇತ್ರಗಳಲ್ಲಿನ ಮುಖ್ಯವಾಗಿ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿನ ಬದಲಾವಣೆಗಳನ್ನು ರೂಢಿಸಿ ಕೊಳ್ಳಲು ಪ್ರಯತ್ನಿಸುತ್ತೇವೆ. ಈಗ ಅದಕ್ಕೆ ವಿರುದ್ಧ ಪ್ರಕ್ರಿಯೆ ಅಗತ್ಯವಿದೆ. ಅಂದರೆ ಆರ್ಥಿಕ ಹಾಗೂ ರಾಜಕೀಯ ಸಂಪನ್ಮೂಲ ವಿತರಣೆಯ ಪ್ರಶ್ನೆ ಪರಿಹರಿಸಲು ಸಂಘಟನೆಗಳು ರೂಪುಗೊಳ್ಳಬೇಕಾಗಿದೆ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಮರಸ್ಯವನ್ನು ಆರ್ಥಿಕ ಹಾಗು ರಾಜಕೀಯ ವಿತರಣೆಯ ಅಂಶಗಳಿಗೆ ವಿಸ್ತರಿಸಲು ಸಾಧ್ಯವಾಗಬೇಕು. ಇಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಮರಸ್ಯ ಎನ್ನುವುದನ್ನು ನಾನು ತುಂಬಾ ಸೀಮಿತ ನೆಲೆಯಲ್ಲಿ ಬಳಸುತ್ತಿದ್ದೇನೆ. ವಿವಿಧ ಜಾತಿ/ಸಮುದಾಯಕ್ಕೆ ಸೇರಿದ ಜನರು ಒಂದು ಕಡೆ ಸೇರುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ದೃಷ್ಟಿಯಿಂದ ಬಳಸಿದ್ದೇನೆ. ಜತೆಗೆ ಇದನ್ನು ನಾನು ಗ್ರಾಮೀಣ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿದ್ದೇನೆ. ಇಲ್ಲೊಂದು ತೋರಿಕೆಯ ಒಗ್ಗಟ್ಟಿದೆ. ತೋರಿಕೆ ಯಾಕೆಂದರೆ ಈ ಸಾಂಸ್ಕೃತಿಕ ಆಚರಣೆಗಳಲ್ಲೂ ಸಾಕಷ್ಟು ಸೇರಿಸಿಕೊಳ್ಳುವ ಮತ್ತು ದೂರ ಇಡುವ ಪ್ರಕ್ರಿಯೆ ನಡೆದೆ ಇರುತ್ತದೆ. ಜತೆಗೆ ದಿನ ನಿತ್ಯದ ಬದುಕಿನ ಏಣಿಶ್ರೇಣಿಗಳನ್ನು ಸೂಕ್ಷ್ಮವಾಗಿ ಇಲ್ಲಿ ಕೂಡ ಕಾಪಾಡಲಾಗುತ್ತದೆ. ಆದಾಗ್ಯೂ ನಮ್ಮಲ್ಲೊಂದು ನಂಬಿಕೆಯಿದೆ. ಅದೇನೆಂದರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಏಣಿಶ್ರೇಣಿಯ ಪ್ರಶ್ನೆಯೇ ಇಲ್ಲ. ದೇವರು ದಿಂಡರುಗಳ ವಿಚಾರ ಬಂದರೆ ತಕ್ಕ ಮಟ್ಟಿನ ಸಹಮತ ನಮ್ಮಲ್ಲಿದೆ ಎನ್ನುವ ನಂಬಿಕೆ ಇದೆ. ಊರ ಜಾತ್ರೆ ಅಥವಾ ಊರಿಗೆ ಸಂಬಂಧಿಸಿದ ಸಾಂಸ್ಕೃತಿಕ ಆಚರಣೆಯಲ್ಲಿ ಸಮುದಾಯವಾಗಿ ಭಾಗವಹಿಸುವುದು ಚಾರಿತ್ರಿಕವಾಗಿ ರೂಪುಗೊಂಡ ನಮ್ಮ ಸಮಾಜದ ಗುಣ. ಊರಿನ ಬಹುತೇಕರು ಊರ ಜಾತ್ರೆಯಲ್ಲಿ, ಸತ್ಯನಾರಾಯಣ ಪೂಜೆಗಳಲ್ಲಿ, ಮೊಹರಂ ಹಬ್ಬದಲ್ಲಿ ಪಾಲುಗೊಳ್ಳುವುದನ್ನು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಕಾಣಬಹುದು. ಇಲ್ಲಿ ಕೂಡ ಸಮಾಜದ ಕೆಳ ಸ್ತರದಲ್ಲಿರುವ ದಲಿತರನ್ನು ಸೂಕ್ಷ್ಮವಾಗಿ ದೂರ ಇಡಲಾಗುತ್ತಿದೆ.

ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಿಷ್ಠ ಒಂದಾದರೂ ಸಂಘ ಸಂಸ್ಥೆಯನ್ನು ಪ್ರತಿ ಹಳ್ಳಿಯಲ್ಲೂ ಕಾಣಬಹುದು. ವಿಚಿತ್ರವೆಂದರೆ ಇದು ಯಾವುದು ಕೂಡ ಸರಕಾರ ಅಥವಾ ಹೊರಗಿನ ಪ್ರೋತ್ಸಾಹದಿಂದ ಹುಟ್ಟಿಕೊಂಡವಲ್ಲ. ನಾನು ಕ್ಷೇತ್ರ ಕಾರ್ಯ ಮಾಡಿದ ಹಳ್ಳಿಗಳಲ್ಲಿ ಇರುವ ಸಂಘ ಸಂಸ್ಥೆಗಳ ಪಟ್ಟಿ ಮಾಡಿದ್ದೇನೆ. ಪ್ರತಿ ಹಳ್ಳಿಯಲ್ಲಿ ಇರುವ ಸಂಘ ಸಂಸ್ಥೆಗಳಲ್ಲಿ ಶೇಕಡಾ ೯೦ರಷ್ಟು ಸಂಘಗಳ ಮುಖ್ಯ ಕಾರ್ಯಕ್ರಮಗಳು ಸಾಮಾಜಿಕ ಅಥವಾ ಸಾಂಸ್ಕೃತಿಕ ಉದ್ದೇಶಗಳಿಗಾಗಿ ರೂಪುಗೊಂಡಿವೆ. ಅವು ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಿಲ್ಲವೆಂದಲ್ಲ. ಆದರೆ ಅವುಗಳು ಮುಖ್ಯ ಉದ್ದೇಶವಾಗಿ ಅಲ್ಲ; ಒಂದು ಉಪ ಕಾರ್ಯಕ್ರಮವಾಗಿ. ಅದೇನೆ ಇರಲಿ ಇಲ್ಲಿ ನಾವು ಗಮನಿಸಬೇಕಾದ ವಿಚಾರ ಅಂದರೆ ಸಂಘ ಸಂಸ್ಥೆಗಳನ್ನು ರೂಪಿಸುವ ಮತ್ತು ಅವುಗಳ ಮೂಲಕ ಸಮುದಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೂವ ಅಭ್ಯಾಸ ಈಗಾಗಲೇ ಇದೆ ಎನ್ನುವ ಅಂಶ ಮುಖ್ಯ. ಇದು ಜನರಿಗೆ ಸಮುದಾಯವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಕೆಲವೊಂದು ಮೂಲಭೂತ ಪಾಠಗಳನ್ನು ಕಲಿಸಿಕೊಟ್ಟಿದೆ. ಮುಖ್ಯವಾಗಿ ಮೂರು ವಿಚಾರಗಳನ್ನು ಇಲ್ಲಿ ಕಾಣಬಹುದು. ಸಂಘಟನೆಯಲ್ಲಿ ಬರುವ ಇತರ ಸದಸ್ಯರ ಸಂಕಷ್ಟದ ಬಗ್ಗೆ ಸಹಾನುಭೂತಿ, ಒಂದು ಸಂಸ್ಥೆಯ ನಿಯಮಕ್ಕೆ ಅನುಸಾರ ಕಾರ್ಯನಿರ್ವಹಿಸುವ ಅಭ್ಯಾಸ, ಇತರ ಸದಸ್ಯರು ಮತ್ತು ಸಂಸ್ಥೆಯ ವ್ಯಾಪ್ತಿಯೊಳಗೆ ಬರುವ ಇತರರ ಬಗ್ಗೆ ನಂಬಿಕೆ ಇತ್ಯಾದಿಗಳು ಈಗಾಗಲೇ ಇರುವ ಸಂಘಗಳಿಂದ ಕಲಿಯಬಹುದಾದ ಮೂಲಭೂತ ಪಾಠ. ಈ ಗುಣಗಳನ್ನು ಆರ್ಥಿಕ ವಿಚಾರಕ್ಕೆ ರೂಪುಗೊಳ್ಳುವ ಸಂಘಟನೆಗಳಿಗೆ ವರ್ಗಾಯಿಸಲು ಸಾಧ್ಯವಾದರೆ ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವವನ್ನು ರೂಪುಗೊಳಿಸುವ ಕೆಲಸ ಸ್ವಲ್ಪಮಟ್ಟಿಗೆ ಸುಲಭವಾಗಬಹುದು.

ಮೂರು, ತಳಮಟ್ಟದಲ್ಲಿ ಪ್ರಜಾಪ್ರಭುತ್ವ ಮೀಡಿಯೇಟ್ ಆಗುವ ವಿಧ. ತಳ ಮಟ್ಟದಲ್ಲಿ ಈಗಾಗಲೇ ಹಲವಾರು ಸಂಸ್ಥೆಗಳು ಕಾರ್ಯರೂಪದಲ್ಲಿವೆ. ಕೃಷಿಕರ ಸಹಕಾರಿ ಸೊಸೈಟಿಗಳು, ಪಂಚಾಯತ್ ಸಂಸ್ಥೆಗಳು, ಸಮುದಾಯ ಅರಣ್ಯ ಸಮಿತಿಗಳು ಅವುಗಳಲ್ಲಿ ಮುಖ್ಯ. ಅವುಗಳು ಕೆಲವು ಕೃಷಿಕರ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿವೆ ಮತ್ತೆ ಕೆಲವು ಕೃಷಿಗೆ ಅವಶ್ಯವಾದ ಹಣಕಾಸು ವ್ಯವಸ್ಥೆ ಮಾಡುತ್ತಿವೆ. ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಪಂಚಾಯತ್ ವ್ಯವಸ್ಥೆ ಜಾರಿಯಲ್ಲಿದೆ. ಇವೆಲ್ಲ ತಕ್ಕಮಟ್ಟಿಗೆ ಗ್ರಾಮೀಣ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಿವೆ. ಆದರೆ ಇವುಗಳಿಗೆ ಸಂಬಂಧಿಸಿದಂತೆ ಕೆಲವು ನ್ಯೂನತೆಗಳು ಇಂದಿಗೂ ಮುಂದುವರಿಯುತ್ತಿವೆ. ಇವುಗಳು ತಾಂತ್ರಿಕ ಬದ್ಧತೆಗಳನ್ನು ಸರಿಯಾಗಿ ಅನುಸರಿಸುತ್ತಿವೆ. ಅಂದರೆ ಕನಿಷ್ಠ ಸಂಖ್ಯೆಯ ಸದಸ್ಯರು ಇಲ್ಲದಿದ್ದರೂ ಇದ್ದಾರೆ ಎಂದು ಪ್ರಮಾಣ ಪತ್ರ ನೀಡುವುದು ಸದಸ್ಯರ ಸಭೆ ನಡೆಯದಿದ್ದರೂ ನಡೆದಿದೆ ಎಂದು ವರದಿ ಮಾಡುವುದು ಇತ್ಯಾದಿಗಳನ್ನು ತಾಂತ್ರಿಕ ಬದ್ದತೆ ಎನ್ನಬಹುದು. ಆದರೆ ಇವುಗಳ ಮೂಲ ಉದ್ದೇಶಕ್ಕೆ ಅಗತ್ಯವಾದ ಪ್ರಜಾಪ್ರಭುತ್ವ ಮಾದರಿಯಲ್ಲಿ ನಿರ್ಣಯ ಕೈಗೊಳ್ಳುವುದು ಮತ್ತು ಕೈಗೊಂಡ ನಿರ್ಣಯಗಳನ್ನು ಜಾರಿ ತರುವುದರಲ್ಲಿ ಇಂದಿಗೂ ಸಫಲವಾಗಿಲ್ಲ. ಪ್ರತಿಯೊಂದು ಸಂಸ್ಥೆಯಲ್ಲೂ ಸ್ಥಳೀಯ ಸಾಂಪ್ರದಾಯಿಕ ಅಥವಾ ಆಧುನಿಕ ಯಜಮಾನಿಕೆಯ ಗುಂಪುಗಳು ತಮ್ಮ ಹಿತಾಸಕ್ತಿಗಳಿಗೆ ಅನುಸಾರವಾಗಿ ನಿರ್ಣಯ ಕೈಗೊಳ್ಳುವುದು ನಡೆಯುತ್ತಿದೆ. ಜತೆಗೆ ನಿರ್ಣಯಗಳನ್ನು ಜಾರಿ ತರುವಾಗ ಸ್ಥಳೀಯ ಪ್ರಭಾವಿ ಕುಲಗಳು ಸಮುದಾಯದ ನಿರ್ಣಯಗಳನ್ನು ಮುರಿಯುವುದರಲ್ಲಿ ಪ್ರಮುಖರು. ಎಲ್ಲರಿಗೂ ಅನ್ವಯವಾಗುವ ನಿಯಮಗಳನ್ನು ಪಾಲಿಸುವುದೇ ಮರ್ಯಾದೆಗೆ ಕಡಿಮೆ ಎನ್ನುವುದು ನಮ್ಮಲ್ಲಿ ಮೇಲಿನಿಂದ ಕೆಳಗಿನ ತನಕ ಇರುವ ಒಂದು ದೊಡ್ಡ ರೋಗ. ಒಂದು ಕಾಲದಲ್ಲಿ ಸಮಾಜದ ಮೇಲ್ ವರ್ಗಗಳು ನಿಯಮಗಳನ್ನು ಮುರಿಯುವುದನ್ನು ನೋಡುತ್ತಿದ್ದೆವು. ಇಂದು ಬಹುತೇಕ ಸಂಸ್ಥೆಗಳಲ್ಲಿ ಸಮಾಜದ ಕೆಳವರ್ಗದವರು ಸ್ಥಾನ ಪಡೆದಿದ್ದಾರೆ. ಆದರೆ ಅವರು ಕೂಡ ನಿಯಮಗಳನ್ನು ಅನುಸರಿಸಿ ಇತರರಿಗೆ ಮಾದರಿಯಾಗುವುದರತ್ತ ಗಮನ ಹರಿಸಿಲ್ಲ. ಬದಲಿಗೆ ಬಹುತೇಕ ಸಂದರ್ಭದಲ್ಲಿ ತಮ್ಮ ಮೇಲ್ ವರ್ಗದ ಚಾಳಿಯನ್ನು ಮುಂದುವರಿಸುವುದೇ ತಾವು ಯಜಮಾನರದ್ದನ್ನು ತೋರಿಸಲು ಸರಿಯಾದ ಮಾರ್ಗ ಎಂದು ತಿಳಿದಂತಿದೆ. ನಿಯಮ ಅನುಸರಿಸಿದರೆ ಸಾಮಾನ್ಯ, ಅನುಸರಿಸದಿದ್ದರೆ ಅಸಮಾನ್ಯ ಎನ್ನುವ ಅಭ್ಯಾಸ ನಮ್ಮ ಸಾರ್ವಜನಿಕ ಬದುಕಿನಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಇದು ಬದಲಾಗಬೇಕಾಗಿದೆ.

ನಾಲ್ಕು, ಸಮುದಾಯದ ಸಂಪನ್ಮೂಲದ ವೆಚ್ಚ ಭರಿಸುವ ಕ್ರಮ. ನಾವು ಬಳಸುವ ಪ್ರತಿಯೊಂದಕ್ಕು ವೆಚ್ಚವಿದೆ. ಯಾವುದು ಕೂಡ ಪುಕ್ಸಟ್ಟೆಯಾಗಿ ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಕೆರೆ ನೀರು ಬಳಸುವವರು ಅದರ ವೆಚ್ಚ ಬರಿಸುತ್ತಿದ್ದರು. ಕೆರೆ ಕಟ್ಟಿಸುವವರಿಗೆ ಅವರಿಗೆ ಕೆರೆ ರಿಪೇರಿ ಮಾಡುವವರಿಗೆ ಭೂಮಿ ದಾನವಾಗಿ ಕೊಡುವ ಅಥವಾ ಕಡಿಮೆ ಕಂದಾಯಕ್ಕೆ ಕೊಡುವ ಕ್ರಮವಿತ್ತು. ಕೆರೆ ರಿಪೇರಿ ಅಥವಾ ಹೂಳೆತ್ತುವುದಕ್ಕೆ ರೈತರಿಂದ ಹಣ ಅಥವಾ ಧಾನ್ಯ ಅಥವಾ ಶ್ರಮ ರೂಪದಲ್ಲಿ ದೇಣಿಗೆ ಪಡೆಯುತ್ತಿದ್ದರು. ಹೀಗೆ ಹಿಂದೆ ಕೂಡ ಕೆರೆ ನೀರಾವರಿ ಪುಕ್ಸಟ್ಟೆಯಾಗಿ ಬರುತ್ತಿರಲಿಲ್ಲ. ಇಂದು ಅದರಲ್ಲೂ ೧೯೪೭ರ ನಂತರ ಕೆರೆ ನಿರ್ಮಾಣ, ರಿಪೇರಿ ಇತ್ಯಾದಿಗಳನ್ನು ಸರಕಾರವೇ ಮಾಡಲು ಹೊರಟಿದೆ. ಇದರಿಂದಾಗಿ ನಮ್ಮಲ್ಲೊಂದು ಮುಗ್ಧ ದೋರಣೆ ಬೆಳೆದಿದೆ. ಅದೇನೆಂದರೆ ಕೆರೆ ರಿಪೇರಿ ಅಥವಾ ಹೂಳೆತ್ತುವುದು ಇತ್ಯಾದಿಗಳು ಸರಕಾರದ ಜವಾಬ್ದಾರಿ. ಇದರ ಅರ್ಥ ರೈತರು ಕೆರೆ ನೀರಾವರಿಗೆ ಯಾವುದೇ ತೆರಿಗೆ ನೀಡುತ್ತಿಲ್ಲ ಎಂದು ನಾನು ವಾದಿಸುತ್ತಿಲ್ಲ ಈಗಲೂ ಸಣ್ಣ ಮತ್ತು ಬೃಹತ್ ನೀರಾವರಿ ವ್ಯಾಪ್ತಿಯಲ್ಲಿ ಬರುವ ಕೆರೆ ನೀರಾವರಿಗೆ ರೈತರು ನಿಗದಿತ ತೆರಿಗೆ ಸಂದಾಯ ಮಾಡುತ್ತಿದ್ದಾರೆ. ಆದರೆ ಅವರು ಕಟ್ಟುವ ತೆರಿಗೆ, ಮುಖ್ಯವಾಗಿ ಬೃಹತ್ ನೀರಾವರಿ ವ್ಯಾಪ್ತಿಯೊಳಗೆ ಬರುವ ಕೆರೆ ನೀರಾವರಿ ವ್ಯವಸ್ಥೆಯ ವೆಚ್ಚಕ್ಕೆ ಅನುಗುಣವಾಗಿಲ್ಲ. ಒಂದು ಎಕರೆಗೆ ಕನಿಷ್ಠ ರೂ.೨೫೦೦ ವೆಚ್ಚ ಬರುತ್ತದೆ. ಆದರೆ ರೈತರು ಸಂದಾಯ ಮಾಡುವುದು ಕೇವಲ ರೂ.೪೫೦. ಇನ್ನು ಸಣ್ಣ ನೀರಾವರಿ ವ್ಯಾಪ್ತಿಯೊಳಗೆ ಬರುವ ಕೆರೆಗಳ ಸ್ಥಿತಿಯು ಬೇರೆಯೇ ಇದೆ. ಎಷ್ಟೋ ಸಂದರ್ಭದಲ್ಲಿ ಇಲಾಖೆ ಹೆಸರಿಗೆ ಮಾತ್ರ ಇದೆ. ಕೆರೆ ರಿಪೇರಿ ಇಲ್ಲದೆ ಸೊರಗಿದೆ. ಸರಿ ಇದ್ದ ಕಡೆ ತುಂಬಾ ಕಡಿಮೆ ತೆರಿಗೆ ವಸೂಲಾಗುತ್ತಿದೆ. ವರ್ಷಕ್ಕೆ ರೂ ೨೦ ರಿಂದ ೪೦. ಇದು ಕೂಡ ಜಾಸ್ತಿ ಎನ್ನುವ ಅಭಿಪ್ರಾಯವಿದೆ. ಎರಡನೇ ಸಮಸ್ಯೆ ನಿಗದಿಯಾದ ತೆರಿಗೆ ಸಂದಾಯ ಮಾಡಿದಿರುವು. ಸುಮಾರು ಮೂರನೇ ಒಂದರಷ್ಟು ಜನ ತೆರಿಗೆ ಸರಿಯಾಗಿ ಪಾವತಿ ಆಗುತ್ತಿಲ್ಲ ಎಂದಿದ್ದಾರೆ. ಇದು ಕೆರೆ ನೀರಾವರಿ ಸಂಬಂಧಿಸಿ ಮಾತ್ರವಲ್ಲ. ಮನೆ ತೆರಿಗೆಯಿಂದ ಹಿಡಿದು ಎಲ್ಲ ತೆರಿಗೆಯನ್ನು ಕಟ್ಟದಿರುವ ಅಭ್ಯಾಸ ನಮಗಿದೆ. ನೀರಾವರಿ ತೆರಿಗೆ ಮತ್ತು ವೆಚ್ಚ ಭರಿಸುವುದರ ಮೂಲಕ ಪಾಲುದಾರರಾಗುವ ಕುರಿತ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ಸಿಕ್ಕಿಲ್ಲ. ಕೆರೆ, ಕಾಲುವೆ ರಿಪೇರಿಗೆ ಅಥವಾ ಹೂಳೆತ್ತಲು ಶ್ರಮದಾನ ಮಾಡಲು ರೈತರು ಸಿದ್ಧರಿದ್ದಾರೆ. ಆದರೆ ವಂತಿಗೆ ನೀಡುವ ವಿಚಾರದಲ್ಲಿ ಬಳಕೆದಾರರು ಧಾರಾಳತನ ಪ್ರದರ್ಶಿಸುವುದಿಲ್ಲ. ಕೆರೆ ಹೂಳೆತ್ತುವುದು ಸರಕಾರದ ಜವಾಬ್ದಾರಿಯಾಗಬೇಕೆಂದು ಸಂದರ್ಶಿಸಿದ ಬಹುತೇಕರ ಅಭಿಪ್ರಾಯ.

ಐದು, ಖಾಸಗಿ ಮತ್ತು ಸಮುದಾಯದ ಸಂಪನ್ಮೂಲ ಬಳಸುವಲ್ಲಿ ಮಾಡುವ ವ್ಯತ್ಯಾಸ. ಖಾಸಗಿ ಸಂಪನ್ಮೂಲದ ಬಳಕೆಯಲ್ಲಿ ಸಾಕಷ್ಟು ಜಾಗ್ರತೆ ವಹಿಸುವುದನ್ನು ಎಲ್ಲರಲ್ಲೂ ಕಾಣುತ್ತೇವೆ. ಆದರೆ ಸಾರ್ವಜನಿಕ ಸಂಪನ್ಮೂಲ ಬಳಕೆಯಲ್ಲಿ ಅದೇ ನಿಯಮವನ್ನು ಪಾಲಿಸುವುದಿಲ್ಲ. ಅದು ಸಾರ್ವಜನಿಕ ಹಣ ಇರಬಹುದು, ಕೆರೆ ನೀರು ಇರಬಹುದು, ಸಮುದಾಯದ ಅರಣ್ಯ ಇರಬಹುದು, ರಸ್ತೆ ಇರಬಹುದು, ವಿದ್ಯುತ್ ಇರಬಹುದು ಅಥವಾ ಇನ್ಯಾವುದೋ ಸಾರ್ವಜನಿಕ ಆಸ್ತಿ ಇರಬಹುದು. ಅದು ಸಾರ್ವಜನಿಕ ಎಂದ ಕೂಡಲೇ ನಮ್ಮದಲ್ಲ ಎನ್ನುವ ಧೋರಣೆ. ಆದುದರಿಂದ ಅದನ್ನು ಹೇಗೆ ಬೇಕೆಂದಾಗ ಉಪಯೋಗಿಸುವುದು ನಮ್ಮ ಹಕ್ಕು ಎಂದು ತಿಳಿದುಕೊಂಡಂತಿದೆ. ತನ್ನ ಸ್ವಂತ ದುಡ್ಡಿನ ಬಗ್ಗೆ ನೂರು ಬಾರಿ ಯೋಚಿಸಿ ಖರ್ಚು ಮಾಡುವವರು ಪಂಚಾಯತ್ ದುಡ್ಡು ಅಥವಾ ಇನ್ಯಾವುದೋ ಸಾರ್ವಜನಿಕ ದುಡ್ಡಿನ ಪ್ರಶ್ನೆ ಬಂದರೆ ತುಂಬಾ ಧಾರಾಳವಾಗಿ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಕೆರೆ ಸಂರಕ್ಷಣೆ ಮತ್ತು ನೀರು ಬಳಕೆಯಲ್ಲೂ ಇದೇ ರೀತಿಯ ಧೋರಣೆಯನ್ನು ಕಾಣಬಹುದು. ಅದು ಎಲ್ಲರ ಆಸ್ತಿ ಆದುದರಿಂದ ಯಾರ ಆಸ್ತಿನೂ ಅಲ್ಲ. ಕೆರೆ ಪಾತ್ರ ಒತ್ತುವರಿ, ಕೆರೆ ಜಲಾನಯನ ಪ್ರದೇಶದ ಒತ್ತುವರಿ, ಕೆರೆ ನೀರು ಬರುವ ಕಾಲುವೆ ಹಾನಿಯಾಗುವಂತೆ ತಮ್ಮ ಹೊಲದ ಕೆಲಸ ಮಾಡುವುದು ಇತ್ಯಾದಿಗಳು ಈ ಸಾಲಿನಲ್ಲಿ ಬರುವಂತಹ ಸಂಗತಿಗಳು. ತಮ್ಮ ಕಣ್ಣೆದುರೆ ಕೆರೆ ಹೂಳು ತುಂಬಿ ನಿರುಪಯುಕ್ತ ಸ್ಥಿತಿ ತಲುಪುವಾಗಲು ಅದರ ರಿಪೇರಿಗಿಂತ ಈ ವರ್ಷದ ಕೃಷಿ ಮುಖ್ಯ ಎಂದು ತಿಳಿಯುವುದು ದೂರದೃಷ್ಟಿಯ ಕೊರತೆ ಹೊರತು ಬುದ್ಧಿವಂತಿಕೆಯಲ್ಲ. ಇದೊಂದು ರೀತಿ ಕೊಂಬೆಯಲ್ಲಿ ಕುಳಿತು ಬುಡ ಕಡಿದಂತೆ. ಕೆಲವೊಂದು ಕೆರೆಗಳ ವಿಚಾರದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಿಂಗಡಣೆಯ ಚರ್ಚೆ ಆಯಾಯ ಊರಿಗೆ ಸೀಮಿತಗೊಂಡರೆ ಸಾಲುವುದಿಲ್ಲ. ಉದಾಹರಣೆಗೆ ಪಾಪಿನಾಯಕನ ಹಳ್ಳಿಯ ಸೆಟ್ಟಿಕೆರೆ, ವಡ್ಡರಹಳ್ಳಿ ಕೆರೆ, ಕಮಲಾಪುರ ಕೆರೆ ಮುಂತಾದವು ಕೇವಲ ಆ ಊರಿನವರ ಅನಾಸಕ್ತಿಯಿಂದ ಈ ಸ್ಥಿತಿ ತಲುಪಿದೆ ಎನ್ನಲಾಗುವುದಿಲ್ಲ. ಅಲ್ಲಿನ ಕೆರೆಗಳ ಬಹುಪಾಲು ಸಮಸ್ಯೆಗೆ ಊರಿನಿಂದ ಹೊರಗೆ ನಡೆಯುವ ಗಣಿಗಾರಿಕೆ ಕಾರಣ. ಕೆರೆಯ ಜಲಾನಯನ ಪ್ರದೇಶವೆಲ್ಲ ಇಂದು ಗಣಿಗಾರಿಕೆಯ ಮುಖ್ಯ ಪ್ರದೇಶಗಳಾಗಿವೆ. ಗಣಿಗಾರಿಕೆಯಿಂದ ಹೊರಬೀಳುವ ಬಿಡಿ ಮಣ್ಣು ಮಳೆಗಾಲದಲ್ಲಿ ಕೆರೆಗೆ ಸೇರುತ್ತಿದೆ. ಕಮಲಾಪುರ ಕೆರೆಯ ಸರಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಹೂಳು ತುಂಬಿದೆ. ಇದನ್ನು ತೆಗೆಯಲು ಕನಿಷ್ಠ ಕೆಲವು ಕೋಟಿ ರೂಪಾಯಿಗಳು ಹೆಚ್ಚು ಭಾಗ ಹೂಳು ತುಂಬಿದೆ. ಇದನ್ನು ತೆಗೆಯಲು ಕನಿಷ್ಠ ಕೆಲವು ಕೋಟಿ ರೂಪಾಯಿಗಳು ಬೇಕು. ಇದನ್ನು ಭರಿಸುವವರು ಯಾರು? ಅಥವಾ ಭರಿಸಬೇಕದವರು ಯಾರು? ಗಣಿಗಾರಿಕೆಯಿಂದ ನಾಶವಾಗುವ ಅರಣ್ಯ ಪ್ರದೇಶವನ್ನು ಸರಿಗಟ್ಟಿಸುವಷ್ಟು ಅರಣ್ಯ ಬೆಳಸಬೇಕು ಅಥವಾ ಅರಣ್ಯ ಬೆಳೆಸಲು ಒಂದು ನಿರ್ದಿಷ್ಟ ಕರ ಸಂದಾಯ ಮಾಡಬೇಕೆಂಬ ನಿಯಮ ಇದೆ. ಆದರೆ ಎಲ್ಲೂ ಗಣಿಗಾರಿಕೆಯಿಂದಲೇ ತುಂಬಿದ ಹೂಳನ್ನು ತೆಗೆಯಲು ಗಣಿಮಾಲಿಕರು ವಂತಿಗೆ ನೀಡಬೇಕೆಂದಿಲ್ಲ. ಆದುದರಿಂದ ಸಾರ್ವಜನಿಕ ಆಸ್ತಿಯ ದುರುಪಯೋಗ ನೇರ ಹಾನಿ ಮಾಡುವುದರ ಜೊತೆಗೆ ಪರೋಕ್ಷ ಹಾನಿಗೂ ಕಾರಣವಾಗುತ್ತದೆ. ನೇರ ಹಾನಿ ಮಾಡುವವರನ್ನು ಕಾನೂನು ಪ್ರಕಾರ ಜವಾಬ್ದಾರರನ್ನಾಗಿಸಬಹುದು. ಆದರೆ ಈ ರೀತಿ ಪರೋಕ್ಷವಾಗಿ ಸಮುದಾಯದ ಆಸ್ತಿಗೆ ಹಾನಿ ತರುವವರನ್ನು ಹೇಗೆ ಜವಾಬ್ದಾರರನ್ನಾಗಿಸುವುದು? ಇಷ್ಟೇ ಪ್ರಾಮುಖ್ಯವಾದ ವಿಚಾರವೆಂದರೆ ಕೆರೆ ಪಾತ್ರದ ಒತ್ತುವರಿ, ಜಲಾನಯನ ಪ್ರದೇಶದ ಒತ್ತುವರಿ ಅಥವಾ ದುರುಪಯೋಗ, ಕೆರೆ ಕಾಲುವೆಗಳಿಗೆ ಅಥವಾ ಏರಿಗೆ ಹಾನಿ ತರುವಂತಹ ಕೆಲಸ ಇತ್ಯಾದಿಗಳನ್ನು ಸರಿಪಡಿಸುವುದು ಹೇಗೆ? ಕಮಲಾಪುರ ಕೆರೆಯ ಹಲವಾರು ಎಕ್ರೆಗಳಷ್ಟು ಪಾತ್ರ ಒತ್ತುವರಿಯಾಗಿದೆ. ಇವೆಲ್ಲವನ್ನು ಯಾವ ರೀತಿಯಲ್ಲಿ ಪರಿಹರಿಸುವುದು. ಸುಮಾರು ಶೇಕಡಾ ೭೫ರಷ್ಟು ಮಂದಿ ಒತ್ತುವರಿ ತಡೆಯುವ ಅವಶ್ಯಕತೆ ಇದೆ ಎಂದು ಒಪ್ಪುತ್ತಾರೆ. ಆದರೆ ಅಷ್ಟೇ ಮಂದಿ ಒತ್ತುವರಿ ತಡೆಯುವುದು ಸರಕಾರದ ಕೆಲಸ ಎನ್ನುತ್ತಾರೆ. ಅಂದರೆ ನಮ್ಮ ಕಣ್ಣೆದುರೇ ನಮ್ಮವರೇ ಸಮುದಾಯದ ಸಂಪನ್ಮೂಲಗಳನ್ನು ತಮ್ಮ ಖಾಸಗಿ ಉಪಯೋಗಕ್ಕೆ ಬಳಸುವಾಗ ಸುಮ್ಮನಿದ್ದು ಅದನ್ನು ತೆರವು ಗೊಳಿಸುವ ಪ್ರಶ್ನೆ ಬಂದಾಗ ಸರಕಾರದ ಜವಾಬ್ದಾರಿ ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟ. ಸಹಭಾಗಿತ್ವ ಪರಿಣಾಮಕಾರಿಯಾಗಬೇಕಾದರೆ ಸರಕಾರದ ಜವಾಬ್ದಾರಿ ಎನ್ನುವಲ್ಲಿ ನಮ್ಮ ಜವಾಬ್ದಾರಿ ಎನ್ನುವುದು ಜಾಗ್ರತವಾಗಬೇಕು. ಇಲ್ಲೊಂದು ಬಹು ದೊಡ್ಡ ದ್ವಂದ್ವಂತೆ ಇದೆ. ಸಮಾನತೆ ಇಲ್ಲದ ಒಂದು ಸಮಾಜದಲ್ಲಿ ಸಮಾಜದ ಕೆಳವರ್ಗ ಸಮುದಾಯದ ಸಂಪನ್ಮೂಲವನ್ನು ಒತ್ತುವರಿ ಮಾಡಿದರೆ ತಪ್ಪೇನು ಎನ್ನುವ ಧೋರಣೆ ಇದೆ. ಆ ರೀತಿ ಮಾಡುವುದರಿಂದ ಕೆಳವರ್ಗದ ಎಲ್ಲ ಸಮಸ್ಯೆಗಳು ಪರಿಹಾರಗೊಂಡು ಸಮಾನತೆ ಸಾಧ್ಯವಾಗುವುದಾದರೆ ತಪ್ಪಿಲ್ಲ ಎನ್ನಬಹುದು. ಆದರೆ ಆ ರೀತಿ ಆಗುವುದಿಲ್ಲ. ಜತೆಗೆ ಒಂದು ವೇಳೆ ಇಂತ ಕ್ರಮಗಳಿಂದ ಹೆಚ್ಚು ಕಡಿಮೆ ಸಮಾನತೆಯುಳ್ಳ ಒಂದು ಸಮಾಜ ರೂಪುಗೊಂಡಿತು ಎಂದು ಊಹಿಸುವ ಅಲ್ಲಿ ಕೂಡ ಊರ ಎಲ್ಲರು ಬಳಸುವ ಹಲವಾರು ವ್ಯವಸ್ಥೆಗಳು ಬೇಕಲ್ಲ. ಆ ಸಂದರ್ಭದಲ್ಲಿ ಸಮುದಾಯದ ಸಂಪನ್ಮೂಲವನ್ನು ಖಾಸಗಿ ಆಸಕ್ತಿಗಾಗಿ ಬಳಸುವ ಈ ಅಭ್ಯಾಸವನ್ನು ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುವುದು.

ಕೆಲವು ತಾತ್ಕಾಲಿಕ ತೀರ್ಮಾನಗಳು

ಸ್ಥಳೀಯ ಸಂಪನ್ಮೂಲ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ ನಮಗೇನು ಹೊಸತಲ್ಲ. ಅದು ನಮ್ಮ ಸಂಸ್ಕೃತಿಯ ಭಾಗವಾಗಿಯೇ ಇತ್ತು. ಆದುದರಿಂದ ಅದನ್ನು ಪುನರುಜ್ಜೀವನ ಗೊಳಿಸುವುದು ವಿಶೇಷ ಕಷ್ಟವಲ್ಲ ಎನ್ನುವ ವಾದ ಪ್ರಚಲಿತದಲ್ಲಿದೆ. ಹಿಂದಿನ ಪುಟಗಳಲ್ಲಿ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಹಭಾಗಿತ್ವದ ಗುಣ ಲಕ್ಷಣಗಳನ್ನು ನೋಡಿದ್ದೇವೆ. ಅಂದಿನ ಪ್ರಭುತ್ವ ಮತ್ತು ಅದು ತನ್ನ ಜವಾಬ್ದಾರಿಯನ್ನು ವ್ಯಾಖ್ಯಾನಿಸಿಕೊಂಡ ಬಗೆ ಹೇಗೆ ಅಂದಿನ ಸಹಭಾಗಿತ್ವವನ್ನು ಪ್ರಭಾವಿಸಿದೆ ಎನ್ನುವುದರ ಕಿರು ಪರಿಚಯ ಆಗಿರಬಹುದು. ಪ್ರಭುತ್ವಕ್ಕೆ ಆದಾಯ ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿತ್ತು. ಚಾರಿತ್ರಿಕವಾಗಿ ರೂಪುಗೊಂಡ ಅಂದಿನ ಸಾಮಾಜಿಕ ಸಂಬಂಧಗಳನ್ನು ಬಳಸಿಕೊಂಡು ಉತ್ಪಾದನೆ ಹೆಚ್ಚಿಸುವ ಕೆಲಸವನ್ನು ಅಂದಿನ ಪ್ರಭುತ್ವ ಮಾಡಿದೆ. ಕೆರೆಗಳ ನಿರ್ಮಾಣ, ಸಂರಕ್ಷಣೆ ಇತ್ಯಾದಿಗಳಿಗೆ ಒಂದು ಧಾರ್ಮಿಕ ಚಟುವಟಿಕೆಯ ರೂಪ ಕೊಟ್ಟದ್ದು ಕೂಡ ಅದರಲ್ಲಿ ಸೇರುತ್ತದೆ. ಜತೆಗೆ ಅಲ್ಲಿ ದಲಿತರ, ಕೆಳಜಾತಿ ಜನರ, ಮಹಿಳೆ ಮುಂತಾದವರ ಶೋಷಣೆ ಅಸಹಜವಾಗಿರಲಿಲ್ಲ. ಇವೆಲ್ಲ ಅಂದಿನ ಸಹಭಾಗಿತ್ವದ ರೂಪುರೇಷೆಗಳನ್ನು ಪ್ರಭಾವಿಸಿದೆ. ಸಣ್ಣ ಕೃಷಿಕರು, ದಲಿತರು, ಮಹಿಳೆಯರು, ಕೆರೆ ನೀರು ಬಳಸುವ ಅಗಸರು ಮತ್ತು ಇತರ ಸಾಂಪ್ರದಾಯಿಕ ಕಸುಬುದಾರರು ಅಂದಿನ ಸಹಭಾಗಿತ್ವದ ಭಾಗವಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಅಂದಿನ ವ್ಯವಸ್ಥೆಯಲ್ಲಿನ ಕೆಲವೊಂದು ಒಳ್ಳೆಯ ಅಂಶಗಳನ್ನು ಅಲ್ಲಗೆಳೆಯಲಾಗುವುದಿಲ್ಲ. ದೊಡ್ಡ ಕೃಷಿಕರನ್ನು ಮತ್ತು ಕೆರೆ ನೀರಾವರಿಯಿಂದ ಪರೋಕ್ಷ ಲಾಭ ಗಳಸುತ್ತಿದ್ದ ಸಮಾಜದ ಇತರ ಅನುಕೂಲಸ್ಥರನ್ನು ಕೆರೆಗಳ ಸಂರಕ್ಷಣೆಯ ಹೊಣೆಗಾರರನ್ನಾಗಿಸಿದ್ದು ಅದರಲ್ಲಿ ಬಹು ಮುಖ್ಯವಾದ ಅಂಶ. ಇಂದಿನ ಬಳಕೆದಾರರಿಗೆ ಅಂದಿನ ವ್ಯವಸ್ಥೆ ಬಗ್ಗೆ ಒಂದು ಸಾಮಾನ್ಯ ಅರಿವಿದೆ. ಆದರೆ ಅಂದಿನ ವ್ಯವಸ್ಥೆಯ ನಿಖರವಾದ ಮಾಹಿತಿ ಇಲ್ಲ. ಆದಾಗ್ಯೂ ಸಹಭಾಗಿತ್ವವನ್ನು ಪುನರ್ ಜೀವಗೊಳಿಸುವಲ್ಲಿ ಜನ ಸಾಮಾನ್ಯರ ಕಲ್ಪನೆಯಲ್ಲಿರುವ ಹಿಂದಿನ ವ್ಯವಸ್ಥೆ ಚರಿತ್ರೆಯಲ್ಲಿ ಬರುವ ಹಿಂದಿನ ವ್ಯವಸ್ಥೆಗಿಂಗ ಗಟ್ಟಿ. ಯಾಕೆಂದರೆ ಚರಿತ್ರೆಯಲ್ಲಿನ ಹಿಂದಿನ ವ್ಯವಸ್ಥೆ ಬಗ್ಗೆ ಜನರಿಗೆ ಮನವರಿಗೆ ಮಾಡುವುದು ಕಷ್ಟ. ಆದರೆ ಅವರ ಕಲ್ಪನೆಯಲ್ಲಿರುವ ಸಹಭಾಗಿತ್ವಕ್ಕೆ ವಿಶೇಷ ಶ್ರಮ ಇಲ್ಲದೆ ಪುನರ್ ಜೀವ ನೀಡಬಹುದು. ಆದುದರಿಂದ ಹಿಂದೆ ಸಹಭಾಗಿತ್ವ ಇತ್ತು ಎನ್ನುವುದು ಇಂದಿನ ಸಹಭಾಗಿತ್ವದ ಸಾಧ್ಯತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಆಧುನಿಕ ಸಹಭಾಗಿತ್ವಕ್ಕೆ ಪೂರಕವಾಗುವ ಹಲವಾರು ವಿಚಾರಗಳ ಕುರಿತು ರೈತರು ಸಹಮತ ವ್ಯಕ್ತ ಪಡಿಸಿದ್ದಾರೆ. ನೀರು ಬಳಕೆದಾರರ ಸಂಘಟನೆ, ಸದಸ್ಯತ್ವ, ಸದಸ್ಯತನ ಮತ್ತು ಸದಸ್ಯರ ಸಭೆ ಇತ್ಯಾದಿಗಳು ಇರಬೇಕೆಂದು ರೈತರು ಬಯಸುತ್ತಾರೆ. ನೀರಿಗೆ ತೆರಿಗೆ ಕೊಡುವ ಕುರಿತು ರೈತರ ತಕರಾರು ಇಲ್ಲ. ತೆರಿಗೆ ದರ ನಿರ್ಧರಿಸುವಾಗ ಅವರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ಇದನ್ನು ಅವರು ನೇರವಾಗಿ ಹೇಳಿಲ್ಲ. ತೆರಿಗೆ ದರ ತಮ್ಮ ಇತಿಮಿತಿಯೊಳಗೆ ಇರಬೇಕು ಎಂದು ಸೂಚಿಸುವುದರ ಮೂಲಕ ದರ ನಿರ್ಧಾರದಲ್ಲಿ ತಮ್ಮ ಸಹಭಾಗಿತ್ವವನ್ನು ಪರೋಕ್ಷವಾಗಿ ವ್ಯಕ್ತ ಪಡಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ತಮ್ಮ ಸಹಭಾಗಿತ್ವವನ್ನು ಪರೋಕ್ಷವಾಗಿ ವ್ಯಕ್ತಿ ಪಡಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ತೆರಿಗೆ ಸಂಗ್ರಹ ಕಟ್ಟುನಿಟ್ಟಾಗಿ ಆಗಬೇಕೆಂದು ಎಲ್ಲ ರೈತರು ಅಭಿಪ್ರಾಯ ಪಡುತ್ತಾರೆ. ಕೆರೆ, ಕಾಲುವೆ,ಇತ್ಯಾದಿಗಳ ಸಣ್ಣ ಮಟ್ಟಿನ ರಿಪೇರಿಗೆ ಶ್ರಮದಾನ ಮಾಡುವ ಬಗ್ಗೆ ರೈತರ ಆಕ್ಷೇಪವಿಲ್ಲ. ಹೂಳಿನ ಸಮಸ್ಯೆಯನ್ನು ಅವರಿಗೆ ಮನದಟ್ಟು ಮಾಡಿ ಸರಿಯಾದ ನಾಯಕತ್ವ ದೊರೆತರೆ ಹೂಳೆತ್ತಲು ಕೂಡ ಶ್ರಮದಾನ ಮಾಡಲು ಅವರು ಮುಂದೆ ಬರಬಹುದು. ಕೆಲವು ಹಳ್ಳಿಗಳಲ್ಲಿ ಹೂಳೆತ್ತಲು ಆಸಕ್ತಿ ತೋರಿಸದಿರಲು ಕಾರಣವನ್ನು ಮೇಲೆ ವಿವರಿಸಿದ್ದೇನೆ. ಅದರಲ್ಲಿ ಬಹು ಮುಖ್ಯವಾದುದು ಸಮಸ್ಯೆಯ ಅಗಾಧತೆ. ಕಮಲಾಪುರದ ಕೆರೆಯ ಹೂಳೆತ್ತಲು ಕೆಲವು ಕೋಟಿ ರೂಪಾಯಿಗಳ ವಿನಿಯೋಜನೆ ಬೇಕು. ರೈತರ ಶ್ರಮ ಬಳಸಿ ಹೂಳೆತ್ತಲು ಕನಿಷ್ಠ ಎರಡು ವರ್ಷಗಳು ಬೇಕು. ಹೀಗಿರುವಾಗ ರೈತರು ಹೂಳೆತ್ತಲು ಮುಂದೆ ಬರುವುದಾದರೂ ಹೇಗೆ? ಇನ್ನು ಒತ್ತುವರಿ ತಡೆಯಬೇಕೆಂದು ಹೆಚ್ಚಿನ ಎಲ್ಲ ರೈತರ ಆಶಯ. ಆದರೆ ಸ್ಥಳೀಯ ರಾಜಕಾರಣ ಅದಕ್ಕೆ ಅವಕಾಶ ಕೊಡುತ್ತಿಲ್ಲ ಎನ್ನುವುದು ಅವರ ಕೊರಗು. ಒತ್ತುವರಿಯನ್ನು ತಡೆಯುವ ಕಾನೂನು ತಂದು ಪರಿಣಾಮಕಾರಿಯಾಗಿ ಜಾರಿ ತಂದರೆ ಒತ್ತುವರಿ ಸಮಸ್ಯೆ ಪರಿಹಾರವಾಗಬಹುದು. ಇಲ್ಲಿ ಕೇವಲ ರೈತರ ಪಾತ್ರ ಮಾತ್ರ ಮುಖ್ಯವಲ್ಲ. ಕಾನೂನನ್ನು ಜಾರಿ ತರುವವರ ಪಾತ್ರ ಕೂಡ ಮುಖ್ಯ. ಜತೆಗೆ ಒತ್ತುವರಿ ಮಾಡಿದವರು ಸ್ಥಳೀಯ ಭೂರಹಿತರಾಗಿದ್ದರೆ ಅವರಿಗೆ ಬದಲಿ ವ್ಯವಸ್ಥೆ ಮಾಡುವ ಹೊಣೆಯೂ ಇದೆ. ಈ ಸಮಸ್ಯೆ ಸ್ಥಳೀಯ ಸಮುದಾಯಗಳ ಪ್ರಯತ್ನದಿಂದ ಮಾತ್ರ ಪರಿಹಾರ ಆಗಲಿಕ್ಕಿಲ್ಲ. ಇನ್ನು ನೀರು ಹಂಚಿಕೆ ನಿಯಮ ಪಾಲಿಸುವುದರ ಕುರಿತು ಯಾವ ರೈತನೂ ವಿರೋಧ ಸೂಚಿಸಿಲ್ಲ. ಬದಲಾಗಿ ನೀರು ಹಂಚಿಕೆ ಕುರಿತು ಕಟ್ಟುನಿಟ್ಟಾದ ನೀತಿ ನಿಯಮ ಬೇಕು ಮತ್ತು ಅದನ್ನು ಸಂಬಂಧಪಟ್ಟವರೆಲ್ಲ ಚಾಚೂ ತಪ್ಪದೆ ಅನುಸರಿಸಬೇಕೆಂದು ಬಹುತೇಕ ರೈತರು ಅಭಿಪ್ರಾಯ ಪಡುತ್ತಾರೆ. ಇಡೀ ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ನಾನು ಕಂಡು ಕೊಂಡ ಒಂದು ಬಹು ಮುಖ್ಯ ಅಂಶವೆಂದರೆ ರೈತರು ಎಲ್ಲೂ ಕೂಡ ಸರಕಾರ ತರುವ ಬದಲಾವಣೆಗಳಿಗೆ ತಾವು ವಿರುದ್ಧ ಎನ್ನುವ ನಿಲುವು ವ್ಯಕ್ತ ಪಡಿಸಿಲ್ಲ. ಬದಲಿಗೆ ಹಲವಾರು ವಿಚಾರಗಳ ಕುರಿತು ತಮ್ಮ ಸಹಮತ ಸೂಚಿಸಿದ್ದಾರೆ. ರೈತರನ್ನು ಉದ್ದಾರ ಮಾಡುವ ಕಾನೂನು ತರುವ ಮುನ್ನ ರೈತರನ್ನು ಭೇಟಿಯಾಗಿ ಆ ಕುರಿತು ಅವರ ಅಭಿಪ್ರಾಯವೇನೆಂದು ವಿಚಾರಿಸುವ ಗೋಜಿಗೆ ಯಾರು ಹೋಗದಿರುವುದೇ ಬಹು ದೊಡ್ಡ ದುರಂತ. ತಳ ಮಟ್ಟದ ವಸ್ತವಿಕತೆಯನ್ನು ಅರ್ಥಮಾಡಿಕೊಳ್ಳದೆ ಕಾನೂನು ತರುವುದು. ನಂತರ ಅದನ್ನು ಬೇಕಾಬಿಟ್ಟಿಯಾಗಿ ಜಾರಿ ತರುವುದು ನಮ್ಮ ಆಧುನೀಕರಣದ ಬಹು ದೊಡ್ಡ ದುರಂತ.

ಇದೇ ಸಂದರ್ಭದಲ್ಲಿ ಸಹಭಾಗಿತ್ವ ಕಾರ್ಯರೂಪಕ್ಕೆ ಬರಬೇಕಾದ ಒಟ್ಟು ಪರಿಸರದ ಬಗ್ಗೆಯೂ ತಕ್ಕಮಟ್ಟಿನ ತಿಳುವಳಿಕೆ ಅಗತ್ಯ. ಅವುಗಳಲ್ಲಿ ಎರಡು ಮುಖ್ಯ ವಿಚಾರಗಳನ್ನು ಇಲ್ಲಿ ಪರಿಗಣಿಸಬೇಕಾಗಿದೆ. ಒಂದು, ಹೆಪ್ಪುಗಟ್ಟಿರುವ ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆಯ ಕನಸು. ನಮ್ಮ ಸಮಾಜದಲ್ಲಿ ಹಿಂದೆ ಮತ್ತು ಈಗ ಸಮಾನತೆ ಇಲ್ಲ. ಆದಾಗ್ಯೂ ಪ್ರತಿಯೊಂದು ಯೋಜನೆಯಲ್ಲೂ ಸಮಾನತೆಯ ಕುರಿತು ಧಾರಾಳಿಗಳಾಗುವುದರಲ್ಲಿ ನಾವು ಹಿಂದೆ ಬಿದ್ದಿಲ್ಲ. ಅಂದ ಮಾತ್ರಕ್ಕೆ ಸಮಾನತೆಯ ಅಂಶ ಇರಬಾರದೆಂದಲ್ಲ. ಆದರೆ ಸಮಾನತೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಸಮಾನತೆಯ ಬಗ್ಗೆ ಧಾರಾಳಿಗಳಾಗುವುದರಿಂದ ಸಮಾಜದ ಕೆಳ ವರ್ಗಕ್ಕೆ ವಿಶೇಷ ಉಪಯೋಗವಿಲ್ಲ. ಯಾಕೆಂದರೆ ಎಷ್ಟೋ ಬಾರಿ ಅಂತಹ ಯೋಜನೆಗಳು ಕೇವಲ ನಾಮಕಾವಸ್ಥೆ ರೂಪದಲ್ಲಿ ಜಾರಿ ಬರುತ್ತವೆ. ಅದರ ಮೂಲ ತತ್ತ್ವಕ್ಕೆ ಅನುಸಾರ ಜಾರಿ ತರುವ ಇಚ್ಚೆ ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸುವವರಿಗೆ ಇರುವುದಿಲ್ಲ. ಅದರ ನಿಜರೂಪದಲ್ಲಿ ಜಾರಿ ತರುವಂತೆ ಒತ್ತಡ ಏರುವಷ್ಟು ಅರಿವು ಅಥವಾ ಸಂಘಟನಾ ಶಕ್ತಿ ಅದರಿಂದ ಲಾಭ ಪಡೆಯಬೇಕಾದ ವರ್ಗಕ್ಕೆ ಇಲ್ಲ. ಐದು ದಶಕಗಳ ಆಧುನೀಕರಣದಿಂದ ನಮ್ಮ ಮೇಲ್ ವರ್ಗಕ್ಕೆ ಒಂದಂತು ಸ್ಪಷ್ಟವಾಗಿದೆ. ಅದೇನೆಂದರೆ ಎಷ್ಟೇ ಕ್ರಾಂತಿಕಾರಿ ಕಾನೂನು ಅಥವಾ ಯೋಜನೆಯನ್ನು ಯಾವುದೇ ಭಯವಿಲ್ಲದ ರೂಪಿಸಬಹುದು. ಯಾಕೆಂದರೆ ಅದು ಖಂಡಿತವಾಗಿಯೂ ಅದರ ಯಥಾ ರೂಪದಲ್ಲಿ ಜಾರಿ ಬರುವುದಿಲ್ಲ ಎನ್ನುವ ವಿಶ್ವಾಸ ಮೇಲ್ ವರ್ಗಕ್ಕೆ ಇದೆ. ಆದುದರಿಂದಲೇ ನಮ್ಮಲ್ಲಿ ಇಡೀ ಸಮಾಜವನ್ನು ಅಡಿಮೇಲು ಮಾಡುವ ಕಾನೂನು ಅಥವಾ ಯೋಜನೆ ತರುವಾಗಲೂ ಯಾರು ಕೂಡ ವಿರೋಧಿಸುವುದಿಲ್ಲ. ಹಾಗೆಂದು ಸಮಾನತೆಯ ಕನಸನ್ನು ಬಿಟ್ಟು ಬಿಡಬೇಕೆಂದು ವಾದಿಸುತ್ತಿಲ್ಲ. ಅದೊಂದು ಆದರ್ಶ ಎನ್ನುವುದನ್ನು ಗಮನದಲ್ಲಿರಿಸಿ ಕೊಳ್ಳುವುದು ಮುಖ್ಯ. ಅದು ಕಾರ್ಯ ರೂಪಕ್ಕೆ ಬರಬೇಕಾದ ಸಾಮಾಜಿಕ ಪರಿಸರದ ಕನಿಷ್ಠ ತಿಳುವಳಿಕೆ ಇದ್ದರೆ ನಾವು ಚರ್ಚಿಸುವ ವಿಚಾರಗಳು ಸ್ವಲ್ಪ ಮಟ್ಟಿಗೆ ರಿಲೆವೆಂಟ್ ಆಗಬಹುದು. ಅಂದರೆ ಸಾಮಾಜಿಕ ಹಾಗೂ ಆರ್ಥಿಕ ಏಣಿಶ್ರೇಣಿಗಳನ್ನು ಗಣನೆಗೆ ತೆಗೆದುಕೊಳ್ಳುವ ನಡೆಯುವ ಕಾರ್ಯಕ್ರಮಗಳು ಆದರ್ಶವಾಗಿರಬಹುದು. ಆದರೆ ಅವು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬೇಕಾದರೆ ಸಾಮಾಜಿಕ ವಾಸ್ತವಿಕತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಅಗತ್ಯ.

ಎರಡನೇ ವಿಚಾರ ಮೂಲೆ ಮೂಲೆಗೆ ಹಬ್ಬುತ್ತಿರುವ ಮಾರುಕಟ್ಟೆ ನೀತಿ. ಕೆರೆ ನೀರಾವರಿ ನಿರ್ವಹಣೆಗೆ ಜನರ ಸಹಭಾಗಿತ್ವ ಅಥವಾ ನಮ್ಮ ಸಾಂಪ್ರದಾಯಿಕ ಸಮಾಜದ ಸಮುದಾಯ ಪ್ರಜ್ಞೆಯನ್ನು ಪುನರುಜ್ಜಿವನಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ. ಒಂದು ಕಾಲದಲ್ಲಿ ಮಾರುಕಟ್ಟೆ ನೀತಿಯ ಪಸರಿಸುವಿಕೆಗೆ ಸಮುದಾಯ ಪ್ರಜ್ಞೆ ಅಡ್ಡಿ ಎನ್ನುವ ಧೋರಣೆ ಇತ್ತು. ಆದರೆ ಇಂದು ಒಂದು ಕಡೆಯಿಂದ ಮುಕ್ತ ಮಾರುಕಟ್ಟೆಯ ಬಗ್ಗೆ ಭರದಿಂದ ಚರ್ಚೆ ನಡೆಯುವಾಗಲೇ ಸಮುದಾಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಅಗತ್ಯದ ಚರ್ಚೆಯೂ ನಡೆಯುತ್ತಿದೆ. ಇದೊಂದು ರೀತಿಯ ದ್ವಂದ್ವತೆ ಅನ್ನುವುದಕ್ಕಿಂತ ವಾಸ್ತವಿಕತೆ ಎನ್ನುವುದು ಉತ್ತಮ. ಯಾಕೆಂದರೆ ಮಾರುಕಟ್ಟೆ ಸಮಾಜದ ಅಸಮಾನತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದು ಬಡವ ಶ್ರೀಮಂತ, ಮೇಲ್ ಕೆಳ ಜಾತಿ ಎಲ್ಲರನ್ನೂ ಒಂದೇ ಮಾನದಂಡದಿಂದ ಅಳೆಯುತ್ತದೆ. ಇದೊಂದು ರೀತಿ ಬಲವಾಗಿ ಬೀಸುವ ಬಿರುಗಾಳಿ ಇದ್ದಂತೆ. ಇದರಿಂದ ಬಹುಬೇಗ ಕುಸಿದು ಬೀಳುವುದು ಜೋಪಡಿ ಪಟ್ಟಿಗಳು ಮತ್ತು ಮುರುಕಲು ಗುಡಿಸಲುಗಳು. ಇಂತಹ ಸಂದರ್ಭದಲ್ಲಿ ಪ್ರಭುತ್ವ ಕೆಳವರ್ಗದ ಪರವಾಗಿ ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಪ್ರಭುತ್ವ ತನ್ನ ಜವಾಬ್ದಾರಿಯಿಂದ ಹಿಂದಕ್ಕೆ ಸರಿಯುತ್ತಿದೆ. ಅಂದ ಮಾತ್ರಕ್ಕೆ ಅದು ಕೋಟಿಗಟ್ಟಲೆ ಜನರ ಬದುಕಿಗೆ ಕನಿಷ್ಠ ವ್ಯವಸ್ಥೆ ಮಾಡದಿರಲು ಸಾಧ್ಯವಿಲ್ಲ. ಆದುದರಿಂದ ಮಾರುಕಟ್ಟೆಯಲ್ಲಿ ಎಲ್ಲ ರೀತಿಯಿಂದಲೂ ಭಾಗವಹಿಸಲು ಸಾಧ್ಯವಿಲ್ಲದವರು ತಮ್ಮ ಸಮುದಾಯ ಪ್ರಜ್ಞೆಯ ಮೊರೆ ಹೋಗಬೇಕಾಗಿದೆ. ಆದರೆ ಇಲ್ಲೂ ಸಾಕಷ್ಟು ವಿರೋಧಾ ಭಾಸಗಳಿವೆ. ಹೊರ ಪರಿಸರವೆಲ್ಲ ಮಾರುಕಟ್ಟೆ ನೀತಿಗನುಗುಣವಾಗಿ ಕಾರ್ಯನಿರ್ವಹಿಸುವಾಗ ಅದರಿಂದ ಯಾರಿಗೂ ಸಂಪೂರ್ಣ ಹೊರಗಿರಲು ಸಾಧ್ಯವಿಲ್ಲ. ಅದರ ಆಕರ್ಷಣೆ ರೈತರನ್ನು ಮಾರುಕಟ್ಟೆಗಾಗಿ ಬೆಳೆಯುವುದಕ್ಕೆ ಪ್ರೇರೆಪಿಸುತ್ತದೆ. ಮಾರುಕಟ್ಟೆಗೆ ಬೆಳೆಯುವುದೆಂದರೆ ಲಾಭ ನಷ್ಟದ ಪ್ರಶ್ನೆ ಇದ್ದೇ ಇರುತ್ತದೆ. ಲಾಭ ನಷ್ಟದ ಪ್ರಶ್ನೆ ಬಂದಾಗ ವೆಚ್ಚ ಕಡಿಮೆಗೊಳಿಸುವ ದಾರಿ ಹುಡುಕಬೇಕಾಗುತ್ತದೆ. ವೆಚ್ಚ ಹಲವು ರೀತಿಯಲ್ಲಿ ಕಡಿಮೆಗೊಳಿಸಬಹುದು. ಅವುಗಳಲ್ಲಿ ಸುಲಭದ ದಾರಿಯೆಂದರೆ ಸಮುದಾಯದ ಸಂಪನ್ಮೂಲವನ್ನು ಖಾಸಗಿ ಲಾಭಕ್ಕೆ ಬಳಸುವುದು. ಅದರಿಂದ ಲಾಭ ಖಾಸಗಿಯವರಿಗೆ ಆದರೆ ನಷ್ಟ ಸಮುದಾಯಕ್ಕೆ ವರ್ಗಾವಣೆ ಆಗುತ್ತದೆ. ಅದು ಸಮುದಾಯ ಪ್ರಜ್ಞೆಯಿಂದ ಸಂಪನ್ಮೂಲ ಬಳಸುವ ಕ್ರಮವನ್ನು ಖಂಡಿತವಾಗಿಯೂ ಪ್ರಭಾವಿಸುತ್ತದೆ.