ನಮ್ಮ ಸಂಸ್ಕೃತಿಯ ಜೀವಾಳ ಕೆರೆಗಳು. ಪ್ರಪಂಚ ಗೋಲಾಕಾರದಲ್ಲಿ ಇದ್ದು ಕೆರೆ ಅದರಲ್ಲಿ ಒಂದು ಬಿಂದು ಇದ್ದ ಹಾಗೆ. ಅಕ್ಷಯ ಪಾತ್ರೆ ಇದ್ದಂತೆ. ಈ ಅಕ್ಷಯ ಪಾತ್ರೆ ನಮ್ಮನ್ನು ಶತ ಶತಮಾನಗಳಿಂದ ಆಧರಿಸಿದೆ. ಹಾಗೆ ನಾವು ಕೂಡ ಪ್ರಕೃತಿ ಕೊಟ್ಟದನ್ನು ದೇವರ ಪ್ರಸಾದವೆಂದು ನಂಬಿಕೊಂಡು ಬದುಕುತ್ತಾ ಇದ್ದೆವು. ಕಾಲಕ್ರಮೇಣ ಈ ಪ್ರಕೃತಿ ಅಥವಾ ದೇವರು ನಮ್ಮದಾಗಿರಬೇಕು ಅನ್ನುವಂತಹ ಸ್ವಾರ್ಥ ಶುರುವಾಯಿತು. ಅಂದಿನಿಂದ ಈ ಅವ್ಯವಸ್ಥೆಗಳು ಶುರುವಾದವು. ಪ್ರಕೃತಿಯ ಸಂಪತ್ತು ನಮ್ಮ ಬಳಕೆಗೆ ಬರಬೇಕು ಎನ್ನುವುದರೊಂದಿಗೆ ನಾವು ಅದರ ಮೇಲೆ ಹತೋಟಿ ಸಾಧಿಸಲು ಆರಂಭಿಸಿದೆವು. ಸ್ವಾರ್ಥ ಹೆಚ್ಚಾದಂತೆ ತಾನು ಹೇಳಿದ ಹಾಗೆ ನಡೀಬೇಕು ಅನ್ನುವ ಯೋಚನೆ ಶುರುವಾಯಿತು. ಇಡೀ ಪ್ರಕೃತಿಯೇ ತನ್ನ ಸ್ವಾರ್ಥಕ್ಕೆ, ತನ್ನ ಅನುಕೂಲಕ್ಕೆ ಇರುವುದು ಎಂದು ಅದನ್ನು ಮನ ಬಂದಂತೆ ಬಳಸಲು ಆರಂಭಿಸಿದೆವು. ಅದು ಮಿತಿ ಮೀರಿ ಅವ್ಯವಸ್ಥೆಯಾಗಿರುವುದನ್ನು ನಾವು ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸುತ್ತೇವೆ. ಸುಮಾರು ನೂರರಲ್ಲಿ ಶೇಕಡಾ ಒಂದು ಮಾತ್ರ ಕೀಟನಾಶಕಕ್ಕೆ ಅನುಕೂಲವಾದರೆದ ಇನ್ನುಳಿದ ಶೇಕಡಾ ೯೯ ತಿರುಗಿ ನಮ್ಮ ಮೇಲೆ ದುಷ್ಟರಿಣಾಮ ಬೀರುತ್ತದೆ. ಅದೇ ರೀತಿ ದಶಲಕ್ಷ ವರ್ಷಗಳಿಂದ ಪ್ರಕೃತಿಯಲ್ಲಿ ಸಂಗ್ರಹವಾಗಿರುವ ಸಂಪತ್ತನ್ನು ನಮ್ಮ ದುರಾಶೆಗೆ ಬಳಸುತ್ತಾ ನಾಶ ಮಾಡುತ್ತಲೇ ಬಂದಿ‌ದ್ದೀವಿ. ಪ್ರಕೃತಿಯ ಸಂಪತ್ತು ಯಾವ ರೀತಿ ಬಳಕೆಯಾಗುತ್ತದೆ ಅಂದರೆ ವಾಹನಗಳ ಚಾಲನೆಗೆ ಪೆಟ್ರೋಲಿಯಂ ಅಂತ ಹೇಳಿ ಪೆಟ್ರೋಲ್ ತೆಗೆಯುತ್ತೇವೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಪೆಟ್ರೋಲ್‌ ತೆಗೆಯುವುದು ಹೆಚ್ಚಾಗುತ್ತಿದೆ. ಕುಡಿಯಲು ಮತ್ತು ಬೇಸಾಯಕ್ಕೆಂದು ನೀರು ತೆಗೆಯುತ್ತೇವೆ. ಇಂಧನಕ್ಕಾಗಿ ಕಲ್ಲಿದ್ದಲು ತೆಗೆಯುತ್ತೇವೆ. ಪ್ರಕೃತಿ ಬಳಸಿದರೆ ಸಮಸ್ಯೆ ಇಲ್ಲ. ಯಾವಾಗ ನಾವು ಎಲ್ಲವನ್ನೂ ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ಬಳಸುವುದರಿಂದ ಇಂದು ಪ್ರಕೃತಿಯ ಖಜಾನೆ ಖಾಲಿಯಾಗುವ ಸ್ಥಿತಿ ಬಂದಿದೆ.

ಇಂದು ನನಗೆ ಮೊಟ್ಟೆ ಇಡುವ ಕೋಳಿ ಕತೆ ನೆನಪಿಗೆ ತರುತ್ತದೆ. ಕೋಳಿ ಮೊಟ್ಟೆಯನ್ನು ಬಳಸುವುದಾದರೆ ಒಂದೊಂದು ಮೊಟ್ಟೆಯನ್ನು ಹಾಕುತ್ತಾ ಇದ್ದ ಹಾಗೆ ಬಳಸುತ್ತಾ ಬರಬೇಕು. ಹೊಟ್ಟೆಯಲ್ಲಿ ತುಂಬಾ ಕೋಳಿ ಮೊಟ್ಟೆಯೇ ಇದೆ, ಅದಕ್ಕೆ ಕೋಳಿಯನ್ನೇ ಕೊಂದು ಬಿಡುವ ಅನ್ನುವ ಮಟ್ಟಕ್ಕೆ ನಾವು ಬಂದಿದ್ದೇವೆ. ನಮ್ಮ ಕೆರೆಗಳ ವ್ಯವಸ್ಥೆಗೂ ಹಾಗೆ ಆಗಿರುವುದು. ರಾಜಮಹಾರಾಜರುಗಳು ಕಟ್ಟಿಸಿರುವ ಈ ಕೆರೆಗಳ ಶತಮಾನಗಳಿಂದ ನಮ್ಮ ಬೇಕು ಬೇಡಗಳನ್ನು ಪೂರೈಸಿವೆ. ಸರಕಾರ, ರಾಜಕಾರಣ, ಆಧುನಿಕ ತಂತ್ರಜ್ಞಾನ ಇವೆಲ್ಲ ಹಿಂದಿನ ವ್ಯವಸ್ಥೆಯನ್ನು ಬದಲಾಯಿಸಿದವು. ಕೆರೆ ತೊರೆಗಳು ಬದಲು ಜನರಿಗೆ ಕಾಲುವೆಗಳಿಂದ, ನಲ್ಲಿಯಿಂದ ನೀರು ಕೊಡಲು ಶುರುವಾಯಿತು. ಎಲ್ಲ ಪೈಪ್‌ನಲ್ಲೇ ಬರಬೇಕಾದರೆ ಈ ಕೆರೆಗಳೇನು ಎನ್ನುವ ಲೆಕ್ಕಕ್ಕೆ ನಾವೆಲ್ಲರೂ ಬಂದಿದ್ದೇವೆ. ಒಟ್ಟಿನಲ್ಲಿ ನೀರು ಬರುತ್ತದೆ. ಈ ಕೆರೆಗಳನ್ನು ಕಟ್ಟಿಕೊಂಡು ಏನು ಮಾಡಬೇಕಾಗಿದೆ ಎನ್ನುವ ಧೋರಣೆ ಶುರುವಾಯಿತು. ಅಂತಹ ವಾದಗಳ ಮೇಲೆ ಯಾವಾಗ ನಾವು ನಿಲ್ಲಲು ಶುರು ಮಾಡಿದೆವೋ ಆವಾಗ ಕೆರೆಗಳನ್ನು ಕೈ ಬಿಟ್ಟೆವು. ಅಂದಿನಿಂದ ಒಂದಲ್ಲ ಒಂದು ರೀತಿ ಸಮಸ್ಯೆಗಳು ಶುರುವಾದವು. ರಾಜಮಹಾರಾಜರು ಕಟ್ಟಿಸಿದಂತಹ ಕೆರೆಗಳು ಇವೆ ನಮ್ಮಲ್ಲಿ. ಶತಮಾನಗಳ ಇತಿಹಾಸವನ್ನು ಹೇಳುವ ಕೆರೆಗಳು ಇವೆ. ಇದೇ ಹಂಪಿ ಸುತ್ತಮುತ್ತ ತಿರುಗಾಡಿದರೆ ವಿಜಯನಗರದ ಇತಿಹಾಸವನ್ನು ಹೇಳುವ ನೂರಾರು ಕೆರೆಗಳು ಇಂದಿಗೂ ಇವೆ. ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಮಾಡಿರುವಂತಹ ಕೆರೆಗಳು ಇಂದಿಗೂ ಇವೆ. ಆಧುನಿಕ ತಂತ್ರಜ್ಞಾನದ ಸಹಾಯವಿಲ್ಲದೆ ಮಾಡಿರುವಂತಹ ಕೆರೆಗಳು ಆ ಕಾಲದ ಜನಸಂಖ್ಯೆಗೆ ಬೇಕಾಗುವಷ್ಟು ನೀರನ್ನು ಕೊಟ್ಟಿವೆ. ಆವತ್ತಿನಿಂದ ಹಿಡಿದು ಇವತ್ತಿನವರೆಗೂ ಅದರ ನಿರ್ವಹಣೆಯನ್ನು ನಾವು ನೋಡಿಲ್ಲ. ಆಗ ಭಾರತದಲ್ಲಿ ಪಾಕಿಸ್ತಾನ ಬರ್ಮ ಸೇರಿಕೊಂಡು ೩೩ಕೋಟಿ ಜನಸಂಖ್ಯೆ ಇತ್ತು. ಇವತ್ತು ಪಾಕಿಸ್ತಾನ ಬರ್ಮ ನಮ್ಮ ಜತೆ ಇಲ್ಲ. ನಮ್ಮದೇ ಜನಸಂಖ್ಯೆ ನೂರು ಕೋಟಿ ದಾಟಿದೆ. ಆದರೆ ಇಂದು ಕೂಡ ನಮ್ಮ ಬಹುತೇಕ ಜನರಿಗೆ ನೀರು ಕೊಡುತ್ತಿರುವುದು ಅದೇ ರಾಜಮಹಾರಾಜರು ಕಟ್ಟಿಸಿದ ಕೆರೆಗಳು. ಇವತ್ತು ಕೂಡ ಗ್ರಾಮೀಣ ಪ್ರದೇಶದಲ್ಲಿ ನಮ್ಮ ರೈತಾಪಿ ಜನ ಕುಡಿಯುವ ನೀರಿಗೆ ಮತ್ತು ಬೇಸಾಯಕ್ಕೆ ಅದೇ ಹಳೇ ವ್ಯವಸ್ಥೆಯನ್ನು ನಂಬಿದ್ದಾರೆ.

ಎಲ್ಲೋ ಒಂದು ಕೆರೆ ನೋಡುವುದು ಮೈನರ್ ಇರಿಗೇಶನ್ ಅನ್ನುವುದು, ಮತ್ತೆಲ್ಲೋ ಒಂದು ಅಣೆಕಟ್ಟು ನೋಡುವುದು ಮೇಜರ್ ಇರಿಗೇಶನ್ ಅನ್ನುವುದು ನಡೆಯುತ್ತಿದೆ. ಆದರೆ ನಾವು ಬಹುಮುಖ್ಯವಾದ ಒಂದು ಅಂಶವನ್ನು ಮರೆಯುತ್ತಿದ್ದೇವೆ. ಇವತ್ತು ಈ ವ್ಯವಸ್ಥೆ – ಮೈನರ್ ಅಥವಾ ಮೇಜರ್ ಇರಿಗೇಶನ್ – ಸಂಪೂರ್ಣವಾಗಿ ನಿಂತಿರುವುದು ಮಳೆ ಮೇಲೆ. ಮಳೆ ಸಂಪೂರ್ಣವಾಗಿ ಬರಬೇಕು ಅನ್ನುವುದಾದರೆ ನಮ್ಮ ಅರಣ್ಯ ವ್ಯವಸ್ಥೆ ಬೆಳೆಯಬೇಕು. ಆದರೆ ಜನಸಂಖ್ಯೆ ಹೆಚ್ಚಿದಂತೆ ಹೆಚ್ಚಿದಂತೆ ಕಾಡು ಬರಿದಾಗಿ ನಾಡು ಹೆಚ್ಚುತ್ತಾ ಬಂದಿದೆ. ಕೆರೆಗಳ ಎಡಬಲಕ್ಕೆ ಮತ್ತು ಜಲಾನಯನ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡುಗಳು ಇಂದು ಕಾಣೆಯಾಗುತ್ತಿವೆ. ಕಾಡನ್ನು ಕಡಿದು ಬೇಸಾಯ ಮಾಡುತ್ತಾ ಬಂದೆವು. ಒಂದು ಕಾಲದಲ್ಲಿ, ಕಾಡುಗಳು ಇದ್ದ ಕಾಲದಲ್ಲಿ, ಮಳೆ ಬಿದ್ದ ತಕ್ಷಣ ಕೆರೆಗೆ ತಿಳಿಯಾದ ನೀರು ಬರುತ್ತಾ ಇತ್ತು. ಇವತ್ತು ಬರುವಾಗ ದಾರಿಯಲ್ಲಿ ಕಮಲಾಪುರದ ಕೆರೆ ನೋಡಿದೆ. ಇಡೀ ಕೆರೆ ನೀರು ಕೆಂಪಾಗಿದೆ. ಆ ಕೆರೆಯ ಜಲಾನಯನ ಪ್ರದೇಶವೆಲ್ಲ ಈಗ ಗಣಿಗಾರಿಕೆಯಿಂದ ತುಂಬಿದೆ. ಗಣಿಯಿಂದ ಬರುವ ಎಲ್ಲಾ ಹೂಳು ಕೆರೆಗೆ ಸೇರಿಕೊಂಡಿದೆ. ಇದು ಮಾತ್ರ ತಲತಲಾಂತರಗಳಿಂದ ಆಗಿದೆ ಅನ್ನುವ ಮಾತನ್ನು ನಾವು ನೀವು ಯಾರೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಸುಮಾರು ಹತ್ತು ಹದಿನೈದು ವರ್ಷಗಳಿಂದ ಈ ತರ ಆಗಿದೆ. ಇದಕ್ಕಿಂತ ಮುಂಚಿತವಾಗಿ ನಾವು ವರ್ಷದಲ್ಲಿ ಒಂದು ಸಲ ಹೂಳನ್ನು ತೆಗೆದು ನಮ್ಮ ಜಮೀನುಗಳಿಗೆ ಹಾಕುವುದನ್ನು ಬಿಟ್ಟೆವು. ಈಗ ಸರಕಾರಿ ಗೊಬ್ಬರ ಬಂದ ಮೇಲೆ ಯೂರಿಯ ಪೊಟೇಷ್ ಇವೆಲ್ಲಾ ಜಾಸ್ತಿ ಆಗಿವೆ. ಅಂದರೆ ಎಷ್ಟು ಗೊಬ್ಬರ ಹಾಕ್ತೀವಿ ಅಷ್ಟು ಚೆನ್ನಾಗಿ ಬೆಳೆ ಬರುತ್ತದೆ ಎಂದು ತಿಳಿಯುತ್ತೇವೆ. ಒಂದು ರೀತಿಯಲ್ಲಿ ಕಡಿಮೆ ಶ್ರಮ ಹೆಚ್ಚು ಲಾಭ ಎನ್ನುವ ನೀತಿ ಕಡೆ ನಾವೆಲ್ಲ ಹೋಗುತ್ತಿದ್ದೇವೆ.

ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕು ಅನ್ನುವುದು ಒಂದು ಸಣ್ಣ ಕೆಸಲವಲ್ಲ. ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ್ದು ಅಥವಾ ಐದು ವರ್ಷದಲ್ಲಿ ಮುಗಿಯುವ ಕಾರ್ಯಕ್ರಮ ಅಂತ ನಾವು ಹೇಳುವುದಿಲ್ಲ. ಯಾವುದೇ ಸರಕಾರ ಇದ್ದರೂ ಕೂಡ ಇದು ನಡೆಯುತ್ತಲೇ ಇರಬೇಕಾಗಿದೆ. ದಾಖಲೆ ಪ್ರಕಾರ ಸುಮಾರು ೩೬ ಸಾವಿರ ಕೆರೆಗಳು ಇವೆ. ದಾಖಲೆ ಇಲ್ಲದೆ ಸಾವಿರಾರು ಕೆರೆಗಳು ಇವೆ. ಸಣ್ಣಪುಟ್ಟ ಹೊಂಡಗಳು ಸೇರಿ ಸುಮಾರು ೭೦ ರಿಂದ ೭೫ ಸಾವಿರ ಕೆರೆಗಳು ನಮ್ಮ ಕರ್ನಾಟಕ ರಾಜ್ಯದಲ್ಲಿವೆ. ಇವೆಲ್ಲವನ್ನು ಐದು ವರ್ಷದಲ್ಲಿ ಅಭಿವೃದ್ಧಿ ಮಾಡುತ್ತೇವೆ ಅನ್ನುವುದು ಸಲ್ಲದ ಮಾತು. ಒಂದಲ್ಲ, ಎರಡಲ್ಲ, ಮೂರ್ನಾಲ್ಕು ಸರಕಾರಗಳು ಒತ್ತಡ ಕೊಡುತ್ತಾ ಹೋದರೆ ಮಾತ್ರ ಇದನ್ನ ಸಾಧಿಸಬಹುದು. ಇದೇ ನವೆಂಬರ್ ಒಂದನೇ ತಾರೀಕಿಗೆ ೨೦೦ ಕೋಟಿ ರೂಪಾಯಿಗಳ ಹೋಬಳಿಗೆ ಒಂದು ಕೆರೆ ಎನ್ನುವ ಕಾರ್ಯಕ್ರಮ ಶುರುಮಾಡುತ್ತಾ ಇದ್ದೇವೆ. ಈ ಕಾರ್ಯಕ್ರಮವನ್ನು ಸರಕಾರದ ಸಾಧನೆ ಅಂಥ ಹೇಳೀ ಶುರುಮಾಡೋಕ್ಕೆ ಹೊರಟಿಲ್ಲ. ಇದು ಮೊದಲ ಹೆಜ್ಜೆ. ತುಂಬಾ ದೂರ ಸಾಗಬೇಕಾಗಿದೆ; ಹಲವಾರು ಹೆಜ್ಜೆಗಳನ್ನು ಇಡಬೇಕಾಗಿದೆ. ಹೊಸ ಕೆರೆಗಳನ್ನು ಕಟ್ಟಬೇಕು. ಹಳೇ ಕೆರೆಗಳ ದುರಸ್ತಿ ನಡೆಯಬೇಕಾಗಿದೆ. ನಾವು ಈ ಹಿಂದೆ ಎಷ್ಟು ಹೆಜ್ಜೆಗಳನ್ನು ಇಟ್ಟಿದ್ದೇವೆ ಮತ್ತು ಎಷ್ಟು ತಪ್ಪ ಹೆಜ್ಜೆಗಳನ್ನು ಇಟ್ಟಿದ್ದೇವೆ ಅನ್ನುವುದರ ಮೇಲೆ ನಾವು ಮೊದಲ ಹೆಜ್ಜೆ ಇಡಬೇಕಾಗಿದೆ. ಅದರಲ್ಲಿ ಮುಖ್ಯವಾಗಿ ಯಾರು ಈ ಕೆರೆ ನೀರು ಬಳಸುತ್ತಾರೋ ಅವರನ್ನೇ ಮರೆತು ಕಾರ್ಯಕ್ರಮ ರೂಪಿಸಿದ್ದು ಹಿಂದಿನ ತಪ್ಪು. ಅದನ್ನು ನಾವು ಮುಂದುವರಿಸಲು ಇಚ್ಛಿಸುವುದಿಲ್ಲ. ಹಾಗಾಗಿ ರೈತರ ಸಹಭಾಗಿತ್ವಕ್ಕೆ ಯಾಕೆಂದರೆ ಇವತ್ತು ಒಬ್ಬ ರೈತರ ಮಾರ್ಗದರ್ಶನ ಇಲ್ಲದೆ ಕೆರೆಗಳ ದುರಸ್ತಿ ಸಾಧ್ಯವಾಗುವುದಿಲ್ಲ. ಸರಕಾರ ದುಡ್ಡು ಕೊಟ್ಟ ತಕ್ಷಣ ವಿಧಾನಸೌಧದಲ್ಲಿ ಪೇಪರ್ ಮೇಲೆ ಮಾತ್ರ ಕಾರ್ಯಕ್ರಮಗಳು ಪ್ರಿಂಟ್ ಆಗುತ್ತವೆ. ಅಷ್ಟೆ. ಅದಕ್ಕಿಂತ ಮುಂದೆ ರೈತರಿಗೆ ತಲುಪುವುದೇ ಇಲ್ಲ. ಅದು ರೈತರಿಗೆ ತಲುಪಿ ಯಶಸ್ವಿ ಆಗಬೇಕಾದರೆ ರೈತರು ನೇರವಾಗಿ ಪಾಲುಗೊಳ್ಳವುದು ಅಗತ್ಯ.

ರೈತರ ಸಹಭಾಗಿತ್ವ ಯಾಕೆಂದರೆ ಕೆರೆಗಳ ಬಗ್ಗೆ ಮತ್ತು ಅದರ ನಿರ್ವಹಣೆ ಬಗ್ಗೆ ಅವರಿಗೆ ತಿಳಿದಷ್ಟು ನಮಗೆ ಅಥವಾ ಅಧಿಕಾರಿಗಳಿಗೆ ತಿಳಿದಿಲ್ಲ. ಇವತ್ತು ಹೂಳು ತೆಗಿಬೇಕು ಅಂತೀವಿ. ಯಾವ ನಿಟ್ಟಿನಲ್ಲಿ ಹೂಳು ತೆಗಿಬೇಕು, ಎಲ್ಲಿ ಹಾಕಬೇಕು, ಹೀಗೆ ಹಲವಾರು ತೀರ್ಮಾನಗಳು ಆಗಬೇಕು. ಎಲ್ಲಾ ಕೆರೆಯ ಹೂಳನ್ನು ನಮ್ಮ ಜಮೀನಿಗೆ ಹಾಕಲಾಗುವುದಿಲ್ಲ. ಕಪ್ಪು ಮಣ್ಣಿನ ಹೂಳು ಮತ್ತೊಂದು ಕಪ್ಪು ಮಣ್ಣಿನ ಜಮೀನಿನ ಮೇಲೆ ಹಾಕಲು ಬರುವುದಿಲ್ಲ. ಒಳ್ಳೆ ಫಲವತ್ತಾಗಿದೆ ಎಂದು ಟ್ರಾಕ್ಟರಲ್ಲಿ ತಂದು ಜಮೀನಿಗೆ ಕೆರೆ ಹೂಳು ಜಾಸ್ತಿ ಹಾಕಿದರೆ ಮುಂದಿನ ಹತ್ತು ವರ್ಷ ಪ್ರಮಾಣ ಇದೆ. ಒಂದೇ ಸಾರಿ ಹೂಳನ್ನೆಲ್ಲ ಜಮೀನಿಗೆ ಹಾಕಿದರೆ ಬೆಳೆ ಬೆಳೆಯುವುದಿರಲಿ ಓಡಾಡಲೂ ಆಗುವುದಿಲ್ಲ. ನಾವು ಏನೇ ಬಿತ್ತಿದರೂ ಅದು ಮೊಳಕೆಯೊಡೆದು ಹೊರಗೆ ಬರುವುದಿಲ್ಲ. ಇವನ್ನೆಲ್ಲ ನಮ್ಮ ರೈತರು ತಮ್ಮ ಹಲವಾರು ವರ್ಷಗಳ ಬೇಸಾಯದ ಅನುಭವದಿಂದ ಕಂಡುಕೊಂಡಿದ್ದಾರೆ. ಇದೇ ರೀತಿ ಬೇರೆ ಬೇರೆ ಪ್ರದೇಶಗಳಲ್ಲಿನ ಕೆರೆಗಳಿಗೆ ವ್ಯತ್ಯಾಸ ಇದೆ. ಪಶ್ಚಿಮ ಘಟ್ಟದ ಮೇಲಿನ ಕೆರೆಗಳಿಗೂ ಬಯಲು ಸೀಮೆಯಲ್ಲಿ ಬರತಕ್ಕಂತಹ ಕೆರೆಗಳಿಗೂ ಬಳ್ಳಾರಿ ರಾಯಚೂರು ಕಡೆ ಬರತಕ್ಕಂತಹ ಕೆರೆಗಳಿಗೂ ಬಿಜಾಪುರ ಅಥವಾ ಕೋಲಾರದ ಕಡೆ ಇರುವಂತಹ ಕೆರೆಗಳಿಗೂ ಬಹಳ ವ್ಯತ್ಯಾಸಗಳಿವೆ. ಕೆರೆ ಹೂಳು ತೆಗಿಯುವ ಕಾರ್ಯಕ್ರಮದಲ್ಲಿ ರೈತರು ಕೆಲವು ಕಡೆ ಮುಂದೆ ಬರುತ್ತಾರೆ. ಉದಾಹರಣೆಗೆ ನಮ್ಮ ಕೋಲಾರ ಜಿಲ್ಲೆಯಲ್ಲಿ ನೀವು ಸುಮ್ಮನೆ ರೈತರಿಗೆ ಹೇಳಿದರು ಸಾಕು ತಕ್ಷಣ ಬಂದು ಆ ಹೂಳನ್ನೆಲ್ಲಾ ತಮ್ಮ ಗದ್ದೆಗಳಿಗೆ ಹೊಡೆದುಕೊಳ್ಳುತ್ತಾರೆ. ಆದರೆ ನಮ್ಮ ಮಲೆನಾಡ ಕಡೆ ಇದನ್ನು ಮಾಡುವುದಿಲ್ಲ. ನಮ್ಮ ಉತ್ತರ ಕನ್ನಡದ ಕೆಲವು ಕಡೆ ಮಾಡುವುದಿಲ್ಲ. ಧಾರವಾಡದ ಕೆಲವು ಕಡೆ ಮಾಡುತ್ತಾರೆ. ಆದುದರಿಂದ ರೈತರ ಸಹಭಾಗಿತ್ವ ಎಂದ ಕೂಡಲೇ ಕರ್ನಾಟಕದ ಎಲ್ಲಾ ಕಡೆ ರೈತರು ತಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎನ್ನುವ ನಂಬಿಕೆ ನಮಗೆ ಬೇಡ.

ಶಿವಮೊಗ್ಗ ಜಿಲ್ಲೆಯನ್ನು ಮಲೆನಾಡ ಪ್ರದೇಶ; ಬಹಳ ಮಳೆ ಬೀಳುವ ಪ್ರದೇಶ ಅಂತ ಹೇಳುತ್ತೇವೆ. ಅಂತಹ ಪ್ರದೇಶದಲ್ಲಿ ಈ ವರ್ಷ ಸರಿಯಾಗಿ ಮಳೆ ಬಂದಿಲ್ಲ. ಮುಂಗಾರು ಇನ್ನೂ ಪಶ್ಚಿಮಘಟ್ಟವನ್ನು ಏರಿಲ್ಲ. ಬಂಗಾಲಕೊಲ್ಲಿಯಿಂದ ಬರುವ ಡಿಪ್ರೆಷನ್ ಶಿವಮೊಗ್ಗ ಜಿಲ್ಲೆಗೆ ತಲುಪಲಿಲ್ಲ. ಇವತ್ತಿನ ತನಕ ನಮ್ಮ ಕರೆ ಕಟ್ಟೆಗಳಿಗೆ ಒಂದು ಹನಿ ನೀರಿಲ್ಲ. ೧೨-೧೩ ಅಡಿ ಆಳದ ಕೆರೆಗಳಲ್ಲಿ ಇಂದು ಎರಡರಿಂದ ಮೂರು ಅಡಿ ನೀರಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಬಳಿ ಹೋಗಿ ಹೂಳೆತ್ತಲು ಬನ್ನಿ ಅಂದರೆ ಯಾರು ಬರುವುದಿಲ್ಲ. ಅದಕ್ಕಾಗಿ ಅವರನ್ನು ದೂರುವ ಅಗತ್ಯವಿಲ್ಲ. ದಿನನಿತ್ಯದ ಕೂಳಿಗಾಗಿ ಒದ್ದಾಡುವ ಅವರನ್ನು ಕೆರೆ ದುರಸ್ತಿಯಲ್ಲಿ ಭಾಗವಹಿಸುವಂತೆ ಮಾಡುವುದು ಸಾಧ್ಯವಿಲ್ಲದ ಮಾತು. ಇನ್ನು ಬೀದರ್, ಗುಲಬರ್ಗಾ, ಬಳ್ಳಾರಿಯಂತಹ ಪ್ರದೇಶಗಳಲ್ಲಿ ರೈತರು ಕೃಷಿಯಿಂದ ಹೆಚ್ಚು ಕೂಲಿ ಮಾಡಿ ಬದುಕುತ್ತಾ ಇದ್ದಾರೆ. ಅವರನ್ನು ಸಹಭಾಗಿಯಾಗಿ ಎಂದು ಒಪ್ಪಿಸುವುದು ಸುಲಭದ ಕೆಲಸವಲ್ಲ. ನಾವು ತುಂಬಾ ಸಂಕಷ್ಟದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆರಂಭಿಸಿದ್ದೇವೆ. ಬರಗಾಲದಲ್ಲಿ ಕೂಸು ಹುಟ್ಟಿದ ಹಾಗೆ. ತಾಯಿಗೇ ಊಟಕ್ಕಿಲ್ಲದಾಗ ಮಗುವನ್ನು ಸಾಕುವುದು ಹೇಗೆ? ತಾಯಿಗೆ ಊಟ ಹಾಕಿ ಮಗುವನ್ನು ಉಳಿಸಿಕೊಳ್ಳುವ ವಾದ ನಮ್ಮದು. ಹಾಗಾಗಿ ಇವತ್ತು ನೀರು ಅನ್ನುವಂತಹ ಒಂದು ವಿಚಾರವನ್ನು ನಾವು ಬಹಳ ವಿಶಾಲವಾಗಿ ಯೋಚನೆ ಮಾಡಬೇಕು. ಅಂದರೆ ನೀರಾವರಿ ಕಾರ್ಯಕ್ರಮ ಜಾರಿ ತರುವಾಗ ಇದರ ಪ್ರಯೋಜನ ಯಾರು ಯಾರಿಗೆ ಆಗುತ್ತದೆ ಅನ್ನುವುದನ್ನು ವಿಶಾಲವಾಗಿ ಯೋಚನೆ ಮಾಡಬೇಕು. ಅಂದರೆ ನೀರಾವರಿ ಕಾರ್ಯಕ್ರಮ ಜಾರಿ ತರುವಾಗ ಇದರ ಪ್ರಯೋಜನ ಯಾರು ಯಾರಿಗೆ ಆಗುತ್ತದೆ ಅನ್ನುವುದನ್ನು ವಿಶಾಲವಾಗಿ ಆಲೋಚಿಸಬೇಕು. ಆ ಯೋಚನೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಉದಾಹರಣೆಗೆ ಹೂಳು ತೆಗಿತೀವಿ ಅಂತ ಸರಕಾರ ಹೇಳುತ್ತದೆ. ಒಂದು ಕೆರೆ ಹೂಳು ತೆಗೆಯಲು ಲಕ್ಷ ಅಥವಾ ಕೆಲವು ಕೋಟಿಗಳಲ್ಲಿ ವಿನಿಯೋಜನೆ ಬೇಕು. ಇದನ್ನೆಲ್ಲ ಸರಕಾರವೇ ಭರಿಸಬೇಕು ಎನ್ನುವುದಾದರೆ ಸಹಭಾಗಿತ್ವದ ಪ್ರಶ್ನೆ ಬರುವುದಿಲ್ಲ. ಹೂಳು ತೆಗೆಯಲು ನೂರಾರು ಸಂಖ್ಯೆಯಲ್ಲಿ ಆಳುಗಳು ಬೇಕು. ರೈತರು ಇದರಲ್ಲಿ ಪಾಲುಗೊಳ್ಳಬಹುದು ಅಥವಾ ತಮ್ಮ ಆಳುಗಳನ್ನು ಕಳೂಹಿಸಿಕೊಡಬಹುದು. ಹೂಳು ಸಾಗಿಸಲು ದಿನಕ್ಕೆ ೨೦ ಟ್ರಾಕ್ಟರ್‌ಗಳು ನಿಲ್ಲಬೇಕಾಗುತ್ತದೆ. ಈ ೨೦ ಟ್ರಾಕ್ಟರ್‌ಗಳು ಸ್ಥಳೀಯ ಜಮೀನ್ದಾರರು ಕೊಡಬಹುದು. ಇದನ್ನೇ ಜನರ ಸಹಭಾಗಿತ್ವ ಅಂತ ನಾವು ಮಾತಾಡಿದ್ದೇವೆ. ಈ ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ.೧೫ನ್ನು ರೈತರು ಕೊಡಬೇಕೆಂದು ಸರಕಾರ ಕಾನೂನು ಮಾಡಿದೆ. ಕೆರೆ ದುರಸ್ತಿಗೆ ವಿಶ್ವಬ್ಯಾಂಕ್ ನೆರವು ಕೋರಲಾಗಿದೆ. ಅವರು ಕೂಡ ರೈತರ ಅಥವಾ ಬಳಕೆದಾರರ ಪಾಲುಗಾರಿಕೆ ಬಗ್ಗೆ ಮಾತಾಡುತ್ತಾರೆ. ಹೀಗೆ ನಮ್ಮ ರೈತರ ಸಹಭಾಗಿತ್ವವನ್ನು ಅವರ ಶೇರ್ ಮುಖಾಂತರ ನಾವು ತೆಗೆದುಕೊಳ್ಳತ್ತೇವೆ. ಎಂದು ನಮ್ಮ ಮಂತ್ರಿಮಂಡಲ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ರೈತರಿಗೆ ಹೋಗಿ ೧೫% ಕೇಳಿದರೆ ಅವರು ಎಲ್ಲಿಂದ ತರುತ್ತಾರೆ? ಹೆಕ್ಟೇರಿಗೆ ೧೫ ಸಾವಿರದಂತೆ ರೈತರು ನೀಡಬೇಕೆಂದು ನಿರ್ಧಾರವಾಗಿದೆ. ೧೦೦ ಹೆಕ್ಟೇರ್ ಅಚ್ಚುಕಟ್ಟು ಇದ್ದರೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಆದರೆ ಬರ ಇರುವ ಕಡೆ ರೈತರು ಇಷ್ಟು ಹಣ ಎಲ್ಲಿಂದ ತರುವುದು? ಅದಕ್ಕೆ ಮೊನ್ನೆ ಸಚಿವ ಸಂಪುಟದಲ್ಲಿ ಅದನ್ನು ಶ್ರಮದಾನ ಅಥವಾ ಹಣಕಾಸಿನ ರೂಪದಲ್ಲಿ ಅಂದರೆ ಕ್ಯಾಶ್/ಕೈಂಡ್ ರೂಪದಲ್ಲಿ ಸಂಗ್ರಹಿಸಲು ನಿರ್ಧರಿಸಲಾಯಿತು.

ನಾವು ಏನೇ ಕಾರ್ಯಕ್ರಮ ಮಾಡುವುದಾದರೂ ಕೂಡ ನಾನು ಒಬ್ಬನೇ ಕೂತು ಮಾಡಿದ ಚಿಂತನೆಯಂತೂ ಅಲ್ಲ. ರೈತರಿಗೆ ಸಂಬಂಧಪಟ್ಟ ಸಮಸ್ಯೆ ಬಂದರೆ ನಾನು ನೇರವಾಗಿ ರೈತರ ಜೊತೆ ಸೇರಿಕೊಂಡು ಬಿಡುತ್ತಿದ್ದೆ. ನಮ್ಮ ತಾಲೂಕಿನ ರೈತರ ಜೊತೆ ಕೂತು ಇಲ್ಲೊಂದು ಸಮಸ್ಯೆ ಬಂದಿದೆ. ಇದಕ್ಕೆ ಪರಿಹಾರ ನೀವೇ ಹೇಳಿ ಅಂತ ಅವರ ಉತ್ತರವನ್ನು ಸಂಗ್ರಹಿಸಿ ಅದೇ ಉತ್ತರವನ್ನು ನಾನು ವಿಧಾನಸೌಧದಲ್ಲಿ ಹೇಳುವುದು. ಅಂದರೆ ರೈತರ ಸಮಸ್ಯೆಗಳಿಗೆ ಅವರ ಹತ್ತಿರ ಹೋಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇಂಜಿನಿಯರ್ ಗಳಾಗಲೀ ಅಥವಾ ಇತರ ಅಧಿಕಾರಿ ವರ್ಗದವರಾಗಲೀ ಉತ್ತರಿಸಲಾಗುವುದಿಲ್ಲ. ರೈತರ ಉತ್ತರ ಕಂಡುಕೊಳ್ಳದ ಹೊರತು ಯಾವ ಕಾರ್ಯಕ್ರಮಗಳೂ ಯಶಸ್ವಿಯಾಗದು. ರೈತರು ಭಾಗಿಯಾಗಬೇಕು. ಇಲ್ಲದಿದ್ದರೆ ನಮ್ಮ ಹಣಕಾಸುಗಳಾಗಲಿ ನಮ್ಮ ಕಾನೂನುಗಳಾಗಲಿ ಸಮರ್ಪಕವಾಗಿ ಬಳಕೆ ಬರಲು ಸಾಧ್ಯವಿಲ್ಲ. ಅಂತಹ ಒಂದು ವ್ಯವಸ್ಥೆ ಬರಬೇಕು. ಆ ವ್ಯವಸ್ಥೆ ಬೆಳೆಯಲು ತುಂಬಾ ಅವಶ್ಯ ಇರುವುದು ರೈತರ ಸಹಭಾಗಿತ್ವ. ಹಿಂದೆ ಒಂದು ಕೆರೆಗೆ ಇಂತಿಷ್ಟು ಹಣ ಎಂದು ಕೊಡುತ್ತಿದ್ದರು. ಅದರಲ್ಲಿ ಏನು ಕೆಲಸ ಮಾಡುತ್ತಿದ್ದಾರೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ರೈತರ ಗಮನಕ್ಕೆ ಬಾರದೆ ರೈತರು ಪರಿತಪಿಸುತ್ತಿದ್ದರು. ಇವಾಗ ಹಾಗಿಲ್ಲ. ರೈತರ ಸಹಭಾಗಿತ್ವ ಅಗತ್ಯ. ಒಂದು ಕೆರೆ ಕೆಲಸ ತೆಗೆದುಕೊಳ್ಳತ್ತೇವೆ ಅಂದರೆ ಅದಕ್ಕೆ ಕಡ್ಡಾಯವಾಗಿ ನೀರಾವರಿ ಸಂಘಗಳು ಅಥವಾ ಹಿಂದೆ ಮಾಡಿರತಕ್ಕಂತಹ ಸಹಕಾರಿ ಸಂಘಗಳು ಇರಬೇಕು. ಇರಿಗೇಶನ್ ಇರಬಹುದು, ಬ್ಯಾರೇಜ್‌ಗಳಿರಬಹುದು, ಕರೆಗಳಿರಬಹುದು, ಯಾವುದೇ ಆದರೂ ಅದು ಕಡ್ಡಾಯವಾಗಿ ರೈತರ ಸಹಭಾಗಿತ್ವ ಇದ್ದರೆ ಮಾತ್ರ ಕೈ ಹಾಕಲು ಸಾಧ್ಯವಾಗುತ್ತದೆ. ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ಕೆಲಸ ತೆಗೆದುಕೊಳ್ಳಲಾಗದು. ಹೀಗೆ ಫಲಾನುಭವಿಗೆ ಅಥವಾ ರೈತನ ಗಮನಕ್ಕೆ ಕಾರ್ಯಕ್ರಮದ ವಿವರಗಳು ತರಬೇಕು. ಎಷ್ಟು ಹಣಕಾಸು ಸರಕಾರದಿಂದ ಅದಕ್ಕೆ ಕೊಟ್ಟಿದ್ದೇವೆ? ಏನು ಕೆಲಸ ಆಗಬೇಕು? ಯಾರು, ಯಾವಾಗ ಮಾಡಿಸಬೇಕು? ಇತ್ಯಾದಿಗಳು ರೈತರ ಗಮನಕ್ಕೆ ಬರಬೇಕು. ಕೆರೆ ರಿಪೇರಿ, ತೂಬು ರಿಪೇರಿ, ಅಚ್ಚುಕಟ್ಟು ಪ್ರದೇಶದಲ್ಲಿ ಏನು ಕೆಲಸ ಮಾಡ್ತೀವಿ ಅನ್ನುವುದು ರೈತರಿಗೆ ಗೊತ್ತಾಗಿಲ್ಲ ಅಂದರೆ ವಿಧಾನಸೌಧದಲ್ಲಿ ಇರುವಂತಹ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಪ್ರತಿ ಪ್ರದೇಶಕ್ಕೆ ಹೋಗಿ ನಿರೀಕ್ಷಿಸುವುದು ಕಷ್ಟವಾಗಬಹುದು. ಸ್ಥಳದಲ್ಲೇ ಇರುವ ರೈತ ಪ್ರತಿನಿಧಿಗಳಿಗೆ ಆ ಕಾರ್ಯಕ್ರಮದ ಅರಿವು ಇರಬೇಕು. ಅವರು ಅದರಲ್ಲಿ ಭಾಗಿಯಾಗಬೇಕು. ನಮಗೆ ತೂಬಿನ ರಿಪೇರಿ ಅಗತ್ಯವಿದೆ, ಕೆರೆ ದುರಸ್ತಿ ಆಗಬೇಕು, ಕೋಡಿಯಾಗಬೇಕು, ಇತ್ಯಾದಿಗಳನ್ನು ರೈತರು ನಿರ್ಧರಿಸಬೇಕಾಗಿದೆ. ಅದು ಬಿಟ್ಟು ದೂರದಲ್ಲಿರುವ ಅಧಿಕಾರಿಗಳು ಅಥವಾ ಇತರರು ನಿರ್ಧರಿಸಲು ಸಾಧ್ಯವಿಲ್ಲ. ಒಂದು ವೇಳೆ ನಾವು ಅಲ್ಲಿ ಕೂತು ತೀರ್ಮಾನ ಮಾಡಿದರೆ ಅದು ಯುದ್ವತದ್ವ ಆಗುತ್ತೆ.

ಇಂದು ಕೆರೆಯನ್ನು ಕೇವಲ ಪಾತ್ರ ಅಥವಾ ಅಚ್ಚುಕಟ್ಟು ಪ್ರದೇಶಕ್ಕೆ ಸೀಮಿತಗೊಂಡಂತೆ ನೋಡಲಾಗುವುದಿಲ್ಲ. ಜಲಾನಯನ ಪ್ರದೇಶಕ್ಕೆ ೧೫%, ಹೂಳು ತೆಗೆಯುವ ವ್ಯಾಪ್ತಿಗೆ ೨೦%, ಕೆರೆ ಏರಿ, ತೂಬು ಮತ್ತೆ ಚಾನಲ್‌ಗಳಿಗೆ ೨೦ ರಿಂದ ೨೫% ಹಾಗೆ ಅಚ್ಚುಕಟ್ಟು ಭಾಗಕ್ಕೆ ೨೦%. ಈ ತರ ಅದನ್ನ ವಿಂಗಡಿಸಿ ಇಟ್ಟಿದ್ದೇವೆ. ಇವತ್ತು ಯಾರೋ ಬಂದು ಕೆಲವು ಲಕ್ಷ ಕೊಡಿ ಕೆರೆ ಕೆಲಸ ಮಾಡಿಸುತ್ತೇವೆ ಎಂದರೆ ಆಗುವುದಿಲ್ಲ. ಹೂಳು ತೆಗೆದ ಕೂಡಲೇ ಕೆರೆ ತುಂಬುವುದಿಲ್ಲ. ಕೆರೆಗೆ ನೀರು ಎಷ್ಟು ಬರುತ್ತದೆ ಎನ್ನುವುದು ಬಹಳ ಮುಖ್ಯ. ಅಂದರೆ ಕೆರೆಗೆ ಜಲಾನಯನ ಪ್ರದೇಶ ಇರಬೇಕು. ಅಷ್ಟು ಮಾತ್ರವಲ್ಲ. ಆ ಪ್ರದೇಶ ಒತ್ತುವರಿ ಆಗದೆ ಅಥವಾ ಇತರ ಬಳಕೆಗೆ ಒಳಪಡದೆ ಮಳೆ ನೀರನ್ನು ಕೆರೆಗೆ ಸಾಗಿಸುವಂತಿರಬೇಕು. ಹಾಗಾಗಿ ಮೊದಲು ಜಲಾನಯನ ಪ್ರದೇಶ, ನಂತರ ಕೆರೆಯಂಗಳ, ಅದಾದ ಮೇಲೆ ಕೋಡಿ, ತೂಬು, ಕೆರೆ ಏರಿ, ಇದಾದ ನಂತರ ಅಚ್ಚುಕಟ್ಟು ಹೀಗೆ ಪ್ರತಿಯೊಂದು ರಿಪೇರಿ ಆಗಬೇಕು. ಫಲಾನುಭವಿಗಳಿಗೆ ಹೋಗತಕ್ಕಂತಹ ಅಚ್ಚುಕಟ್ಟು ಕೂಡ ಮುಖ್ಯ ಅಂಶವೇ. ಯಾಕೆಂದರೆ ಏರಿ ಪಕ್ಕದಲ್ಲಿರುವ ಜಮೀನುಗಳಿಗೆ ಸುಲಭವಾಗಿ ನೀರು ಬಂದು ಬಿಡುತ್ತದೆ. ಬರಿ ಅಂತರ್ಜಲದಲ್ಲೇ ಅವರ ಗದ್ದೆಗಳಿಗೆ, ತೋಟಗಳಿಗೆ ನೀರು ಹಾಯಿಸಿಕೊಳ್ಳಬಹುದು. ಆದರೆ ಕೊನೆ ಮೂಲೆಯ್ಲಲಿರುವ ಸಣ್ಣ ಹಿಂಡುವಳಿದಾರನಿಗೆ ನೀರು ಸಿಗುವುದು ಕಷ್ಟ. ಆತನಿಂದ ಅಚ್ಚುಕಟ್ಟುದಾದ ಅಂತ ಹೇಳಿ ಪ್ರತಿವರ್ಷನೂ ರೆವೆನ್ಯು ಕಲೆಕ್ಷನಿಗೆ ಅಥವಾ ನೀರು ಕರ ಕಲೆಕ್ಷನಿಗೆ ಹೋಗ್ತೀವಿ. ಅವನಿಗೆ ನೀರು ಸಿಗದಿದ್ದರೆ ಆತ ಸಹಭಾಗಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕೊನೆಯ ಜಮೀನು ತನಕ ನೀರು ಹೋಗುವಂತೆ ನೋಡಿಕೊಳ್ಳಬೇಕಾಗಿದೆ. ಇದು ಸಾಧ್ಯವಾಗಬೇಕಾದರೆ ಪ್ರತಿಯೊಬ್ಬರು ರೈತ ಕೂಡ ನೀರು ಹಂಚಿಕೆ ನಿರ್ಧಾರದಲ್ಲಿ ಭಾಗಿಯಾಗಬೇಕು. ನೀರಾವರಿ ಸಂಘಗಳನ್ನು ರಚಿಸಲು ಪ್ರೋತ್ಸಾಹಿಸುವುದು ಆ ಉದ್ದೇಶದಿಂದಲೇ ಈ ನೀರಾವರಿ ಸಂಘ ಹೊಸದೇನಲ್ಲ. ಹಿಂದೆ ತಲೆತಲಾಂತರಗಳಿಂದ ನೀರು ಘಂಟಿ ಎಂದು ಮಾಡಿ ರಾಜಮಹಾರಾಜರುಗಳ ಕಾಲದಲ್ಲೇ ಇದರ ವ್ಯವಸ್ಥೆ ಇತ್ತು. ಯಾರ್ಯಾರಿಗೆ ನೀರು ಬಿಡಬೇಕು? ಯಾರ್ಯಾರಿಗೆ ಎಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು? ಯಾರು ನೀರಿಗೆ ಹೊಣೆಗಾರರು? ಇತ್ಯಾದಿಗಳು ಕೂಡ ನಿರ್ಧಾರವಾಗುತ್ತಿತ್ತು. ನೀರು ಬಿಡುವ ಕೆಲಸವನ್ನು ನೀರುಘಂಟಿ ನೋಡಿಕೊಳ್ಳುತ್ತಾನೆ. ಆ ಕೆಲಸಕ್ಕಾಗಿ ಆತನಿಗೆ ೨-೪ ಎಕ್ರೆ ಜಮೀನು ಬಿಟ್ಟು ಕೊಡುವ ಕ್ರಮ ಇತ್ತು. ಈಗ ನೀರುಘಂಟಿನೂ ಇಲ್ಲ, ತೂಬು ಕೆರೆ ನೋಡಿಕೊಳ್ಳುವವರೂ ಇಲ್ಲ. ನಮ್ಮ ಕೆರೆಗಳಿಗೆ ಪುನರ್ ಜೀವ ತುಂಬಬೇಕಾದರೆ ಮತ್ತೆ ಅದೇ ಹಳೆ ಇತಿಹಾಸದ ವ್ಯವಸ್ಥೆಗೆ ಹೋಗಬೇಕಾಗಿದೆ.

ನೀರಿಲ್ಲ ಅಂದ್ರೆ ನಾವಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮುಂದುವರಿಯಬೇಕಾದರೆ ನೀರು ಅಗತ್ಯ. ನೀರಿನ ಒಂದೊಂದು ಹನಿಯನ್ನೂ ಉಳಿಸಿಕೊಳ್ಳಬೇಕು. ನೀರಿನಿಂದಲೇ ಬದುಕು ನೀರಿನಿಂದಲೇ ಸಂಪತ್ತು. ಆದುದರಿಂದಲೇ ನೀರಿಗಾಗಿ ದೊಡ್ಡ ದೊಡ್ಡ ಯುದ್ಧಗಳೇ ನಡೆದಿದೆ ಮತ್ತು ನಡೆಯುತ್ತಿದೆ. ಉದಾಹರಣೆಗೆ ನಮ್ಮ ಕಾವೇರಿ ಗಲಾಟೆ ಅಥವಾ ಕೃಷ್ಣ ನೀರಿನ ಗಲಾಟೆಗಳು. ಇವು ಅಂತರ್‌ರಾಜ್ಯ ಹಾಗೂ ಅಂತರಾಷ್ಟ್ರೀಯ ಜಗಳಗಳಿಗೆ ಕಾರಣವಾಗಿದೆ. ಸಾವಿರಾರು ಜನ ನೀರಿಗಾಗಿ ತಮ್ಮ ಜೀವ ಬಲಿಕೊಟ್ಟಿದ್ದಾರೆ. ಈ ತರಹದ ಉದಾಹರಣೆಗಳು ನಮ್ಮ ಕಣ್ಣ ಮುಂದಿರುವಾಗಲೂ ನೀರಿನ ವ್ಯವಸ್ಥೆಯನ್ನು ಸರಿಮಾಡಿಸಿಕೊಳ್ಳದಿದ್ದರೆ ಮುಂದೆ ಬಹಳ ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಈ ಮಾತನ್ನು ಒಬ್ಬ ಶಾಸಕನಾಗಿ ಅಥವಾ ಮಂತ್ರಿಯಾಗಿ ಹೇಳ್ತಾ ಇಲ್ಲ. ಒಬ್ಬ ಸಾಮಾನ್ಯ ಮನುಷ್ಯನಾಗಿ ಹೇಳುತ್ತಿದ್ದೇನೆ. ಈ ಸಮಸ್ಯೆಯನ್ನು ನಾವು ಆದಷ್ಟು ಶೀಘ್ರವಾಗಿ ಪರಿಹರಿಸಿ ಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಜನಾಂಗ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸುವುದಿಲ್ಲ. ವಿಚಾರ ಸಂಕಿರಣವನ್ನು ಉದ್ಘಾಟಿಸಿ ನನ್ನ ಕೆಲವು ಅಭಿಪ್ರಾಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಕುಲಪತಿಗಳಿಗೂ, ಸಿಬ್ಬಂದಿ ವರ್ಗದವರಿಗೂ, ಹಿರಿಯರಿಗೂ ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

(ಬರಹರೂಪ: ಜನಾರ್ದನ)

 

– ಶ್ರೀ ಎಸ್. ಕುಮಾರ ಬಂಗಾರಪ್ಪ*

 

*ಸಚಿವರು, ಸಣ್ಣ ನೀರಾವರಿ ಇಲಾಖೆ, ಕರ್ನಾಟಕ ಸರ್ಕಾರ