ಸಮಾನತೆ ಸಾಧ್ಯತೆಯುಳ್ಳ ಸಮಾಜ ನಿರ್ಮಾಣಕ್ಕಾಗಿ ಸ್ವತಂತ್ರ ಭಾರತ ಆಧುನೀಕರಣ ಪ್ರಕ್ರಿಯೆ ಆರಂಭಿಸಿತು. ನಾಲ್ಕು ದಶಕಗಳ ಆಧುನೀಕರಣದ ನಂತರವು ಶತಮಾನಗಳ ಅಸಮಾನತೆ ಕಡಿಮೆಯಾಗಲಿಲ್ಲ. ಇದಕ್ಕೆ ವಿವಿಧ ಕಾರಣಗಳನ್ನು ಮುಂದಿಡಲಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಭುತ್ವದ ಅತಿಯಾದ ಮೂಗು ತೂರಿಸುವಿಕೆ ಅದರಲ್ಲಿ ತುಂಬಾ ಪ್ರಚಾರದಲ್ಲಿರುವ ಅಂಶ ಪ್ರಭುತ್ವವನ್ನು ಹೊರತು ಪಡಿಸಿದ ಪ್ರಯತ್ನಗಳಿಗೆ ಪ್ರಾಮುಖ್ಯತೆ ಕೊಡುವುದೆ ಈ ಸಮಸ್ಯೆಗಳಿಗೆ ಸರಿಯಾದ ಪರಿಹಾರವೆಂದು ಮನಗಾಣಲಾಗಿದೆ (ರಜನಿ ಕೊಥಾರಿ, ೧೯೯೫). ಹೀಗೆ ಇಂದು ಎಲ್ಲ ಕ್ಷೇತ್ರಗಳಲ್ಲು ಖಾಸಗಿ ಮತ್ತು ಸಮುದಾಯ ಪ್ರಯತ್ನಗಳ ಬಗ್ಗೆ ಹಿಂದೆ ಕೇಳರಿಯದ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಪ್ರಭುತ್ವ ಬಲಯುತವಾಗಿ ಇದ್ದುದರಿಂದಲೇ ಖಾಸಗಿ ಮತ್ತು ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಸರಿಯಾಗಿ ಬೇರೂರಲು ಆಗಿಲ್ಲ. ಖಾಸಗಿ ಮತ್ತು ಸಮುದಾಯ ಪ್ರಯತ್ನಗಳು ಸರಿಯಾಗಿ ಬೇರೂರಬೇಕಾದರೆ ಪ್ರಭುತ್ವ ಹಿಂದಕ್ಕೆ ಸರಿಯಲೇ ಬೇಕು ಎನ್ನುವ ನಿಲುವು ದಿನೇ ದಿನೇ ಬಲಗೊಳ್ಳುತ್ತಿದೆ (ಡಿ.ಎಲ್.ಸೇತ್, ೧೯೪೮). ಈ ನಿಲುವು ಯಾವ ಹಂತಕ್ಕೆ ತಲುಪಿದೆಯೆಂದರೆ ಕೆಲವರು ಪ್ರಭುತ್ವದ ಇರುವಿಕೆಯೇ ಅನಾವಶ್ಯ ಎನ್ನುವ ವಾದವನ್ನೂ ಮಂಡಿಸುತ್ತಿತಿದ್ದಾರೆ. ಇದರ ಜತೆಗೆ ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಅತಿ ಸುಲಭದಲ್ಲಿ ಬೇರೂರಬಹುದು ಎನ್ನುವ ಗ್ರಹಿಕೆನೂ ಇದೆ. ಯಾಕೆಂದರೆ ನಮ್ಮದು ಮೂಲತಃ ಒಂದು ಸಮುದಾಯದ ನೆಲೆಯಲ್ಲಿ ಗುರುತಿಸಿಕೊಳ್ಳುವ ಸಮಾಜ. ಇಲ್ಲಿ ಪಶ್ಚಿಮದಲ್ಲಿ ಇದ್ದಂತೆ ವ್ಯಕ್ತಿಗಳು ಇಲ್ಲ; ಸಮುದಾಯಗಳು ಮಾತ್ರ ಇರುವುದು (ಪಾರ್ಥ ಚಟರ್ಜಿ, ೧೯೯೮). ಈ ಹಿನ್ನೆಲೆಯಲ್ಲಿ ಸಮುದಾಯಗಳನ್ನು ರೂಪಿಸುವ ಮತ್ತು ಆ ಮೂಲಕ ಅವುಗಳನ್ನು ಆಧುನಿಕ ಅವಶ್ಯಕತೆಗಳಿಗೆ ತಯಾರುಗೊಳಿಸುವ ಪ್ರಶ್ನೆಯೇ ಇಲ್ಲ. ಚಾರಿತ್ರಿಕವಾಗಿ ನಮ್ಮ ಸಂಸ್ಕೃತಿಯಲ್ಲಿ ರೂಪುಗೊಂಡ ನಮ್ಮ ಸಮುದಾಯಗಳು ವಿಶೇಷ ಬದಲಾವಣೆ ಇಲ್ಲದೆ ಇಂದಿನ ಅಗತ್ಯಗಳಿಗೆ ಧಾರಾಳ ಸ್ಪಂದಿಸಬಹುದು ಎನ್ನುವ ಗ್ರಹಿತವೂ ಇದೆ. ಇಲ್ಲಿ ಸಮುದಾಯವನ್ನು ಒಂದು ಘರ್ಷಣೆ ಇಲ್ಲದ, ಸಮಸ್ಯೆರಹಿತ ಸ್ಪೇಸ್ ಆಗಿ ನೋಡಲಾಗುತ್ತಿದೆ. ಇಂತಹ ಸಮುದಾಯಗಳು ಸ್ವತಂತ್ವಾಗಿ ಒಟ್ಟು ಸೇರಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ. ಎನ್ನುವ ನಂಬಿಕೆ ಇದೆ. ಅವುಗಳು ಒಟ್ಟು ಸೇರಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲು ಹೆಚ್ಚೆಂದರೆ ಕೆಲವು ಸರಕಾರೇತರ ಸಂಸ್ಥೆಗಳ (ಎನ್.ಜಿ.ಓ.) ಸಹಕಾರ ಇದ್ದರೆ ಸಾಕು ಅನ್ನುವವರು ಇದ್ದಾರೆ (ದಾಂಟೆವಾಲ, ೧೯೯೮). ಪ್ರಭುತ್ವ ಮತ್ತು ಸಮುದಾಯ ಕುರಿತ ಈ ಗ್ರಹಿತಗಳು ಎಷ್ಟರಮಟ್ಟಿಗೆ ನಿಜ ಎನ್ನುವುದನ್ನು ವಿಶ್ಲೇಷಿಸುವುದು ಈ ಅಧ್ಯಾಯದ ಉದ್ದೇಶ.

ಎರಡು ಹಳ್ಳಿಗಳಲ್ಲಿ ಸಣ್ಣ ನೀರಾವರಿ ನಿರ್ವಹಣೆ ಸಂಬಂಧಿಸಿದಂತೆ ನಡೆದ ಸಮುದಾಯ ಪ್ರಯತ್ನಗಳನ್ನು ಅಧ್ಯಯನ ಮಾಡುವ ಮೂಲಕ ಮೇಲಿನ ಗ್ರಹಿತಗಳನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಮಹಮ್ಮದ್ ನಗರ ಬೇಸಾಯ ಸಹಕಾರಿ ಸಂಘದವರು ನಡೆಸುತ್ತಿರುವ ಏತ ನೀರಾವರಿ ತಮ್ಮ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನ ಹಳ್ಳಿ ಗ್ರಾಮಸ್ಥರು ತಮ್ಮ ಊರಿನ ಕೆರೆ ನಿರ್ಮಾಣ ಮತ್ತು ರಿಪೇರಿಗೆ ಕಟ್ಟಿಕೊಂಡ ಸಂಘಗಳೇ ಈ ಅಧ್ಯಯನದ ಮುಖ್ಯ ವಸ್ತುಗಳು. ಈ ಸಂಘಗಳ ಚರಿತ್ರೆ, ಹಿಂದಿನ ಮತ್ತು ಇಂದಿನ ವ್ಯವಹಾರ ಕುರಿತು ಮಾಹಿತಿಯನ್ನು ಎರಡು ಮೂಲಗಳಿಂದ ಸಂಗ್ರಹಿಸಲಾಗಿದೆ. ಒಂದು, ನೇರ ಸಂದರ್ಶನದ ಮೂಲಕ. ಆಡಳಿತ ಮಂಡಳಿ ಸದಸ್ಯರನ್ನು, ಪದಾಧಿಕಾರಿಗಳನ್ನು ಮತ್ತು ಸಾಮಾನ್ಯ ಸದಸ್ಯರನ್ನು ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸಿಲಾಗಿದೆ. ಕಾರ್ಯಕಾರಿ ಸಭೆಗಳಿಗೆ ಹಾಜರಾಗಿ ಅದು ನಡೆಯುವ ವಿಧಾನ ಕುರತು ತಿಳಿದುಕೊಳ್ಳಲಾಗಿದೆ. ಎರಡು, ಸಂಘದ ಚರಿತ್ರೆ, ಹಿಂದಿನ ಮತ್ತು ಇಂದಿನ ವ್ಯವಹಾರ ಬಗ್ಗೆ ಸೆಕೆಂಡರಿ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕಾರ್ಯಕಾರಿ ಸಮಿತಿ ಮೀಟಿಂಗ್ ವರದಿ, ವಾರ್ಷಿಕ ಮಹಾಸಭೆ ವರದಿ, ಲೆಕ್ಕ ಪರಿಶೋಧಕರ ವರದಿ ಮತ್ತು ಸಂಘ ಹೊರಗಿನವರ ಜತೆ ಮಾಡಿದ ಪತ್ರ ವ್ಯವಹಾರಗಳು ಇಲ್ಲಿ ಬಳಸಿದ ಮುಖ್ಯ ಸೆಕೆಂಡರಿ ಮಾಹಿತಿ ಮೂಲಗಳು. ಈ ಅಧ್ಯಾಯ ಮೂರು ಭಾಗಗಳಲ್ಲಿ ಇದೆ. ಮೊದಲ ಭಾಗದಲ್ಲಿ ಮಹಮ್ಮದ್ ನಗರ ಬೇಸಾಯ ಸಹಕಾರಿ ಸಂಘದವರು ನಡೆಸುತ್ತಿರುವ ಏತ ನೀರಾವರಿಯನ್ನು ವಿವರಿಸಿದ್ದೇನೆ. ಎರಡನೆ ಭಾಗದಲ್ಲಿ ಪಾಪಿನಾಯಕನ ಹಳ್ಳಿ ಗ್ರಾಮಸ್ಥರು ತಮ್ಮ ಊರಿನ ಕೆರೆ ನಿರ್ಮಾಣ ಮತ್ತು ರಿಪೇರಿಗೆ ನಡೆಸಿದ ಪ್ರಯತ್ನಗಳು ವಿವರ ಇದೆ. ಈ ಎರಡು ಪ್ರಯತ್ನಗಳ ವಿಶ್ಲೇಷಣೆ ಮತ್ತು ಕೆಲವು ತೀರ್ಮಾನಗಳನ್ನು ಅಧ್ಯಾಯನ ಕೊನೆ ಭಾಗದಲ್ಲಿ ಕೊಟ್ಟಿದ್ದೇನೆ.

ಭಾಗ

ಬೃಹತ್ ಕೈಗಾರಿಕೆಗಳು, ಬೃಹತ್ ಆಣೆಕಟ್ಟು ಇತ್ಯಾದಿಗಳಂತೆ ಸಹಕಾರಿ ಚಳವಳಿ ಕೂಡ ನೆಹರೂರವರ ಆಧುನೀಕರಣದ ಮುಖ್ಯ ಲಕ್ಷಣ. ಎಷ್ಟೋ ಸಂದರ್ಭಗಳಲ್ಲಿ ಇಂತಹ ಬೃಹತ್ ಯೋಜನೆಗಳು ಸಾವಿರಾರು ಎಕರೆ ಭೂಮಿಯನ್ನು ಕಬಳಿಸುವ ಜತೆಗೆ ಸಾವಿರಾರು ಕುಟುಂಬಗಳನ್ನು ಬೀದಿ ಪಾಲು ಮಾಡಿವೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ತುಂಗಭದ್ರಾ ಅಣೆಕಟ್ಟು ಆದಾಗಲೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಂದು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದ ಸಹಕಾರಿ ಚಳವಳಿ ಕೆಲವರಿಗಂತೂ ಸ್ವಲ್ಪ ಭಿನ್ನವಾದ ಬದುಕನ್ನು ಸಾಧ್ಯವಾಗಿಸಿತು. ಅಣೆಕಟ್ಟಿನಿಂದ ಮುಳುಗಡೆಯಾದ ಪ್ರದೇಶದ ಜನರಿಗೆ ಹೊಸಪೇಟೆ, ಕೊಪ್ಪಳ ಮತ್ತು ಹಡಗಲಿ ತಾಲ್ಲೂಕುಗಳಲ್ಲಿ ಭೂಮಿ ಕೊಟ್ಟ ಹೊಸ ಬದುಕಿಗೆ ಅವಕಾಶ ಮಾಡಿಕೊಡಲಾಯಿತು. ಹಾಗೆ ಸಂತ್ರಸ್ತರಾದ ೨೭ ಕುಟುಂಬಗಳಿಗೆ ಕೊಪ್ಪಳ ಜಿಲ್ಲೆಯ (ಮೊದಲು ರಾಯಚೂರು ಜಿಲ್ಲೆ) ಕೊಪ್ಪಳ ತಾಲ್ಲೂಕಿನ ಶಿವಪುರ ಪಂಚಾಯತ್‌ನ ಮಹಮ್ಮದ್ ನಗರ ಗ್ರಾಮದ ಕವಳಿಯಲ್ಲಿ ಮರು ವಸತಿ ಮಾಡಲಾಯಿತು. ಐದರಿಂದ ಇಪ್ಪತ್ತು ಸಾವಿರಗಳಷ್ಟು ಪರಿಹಾರ ಧನ ನೀಡುವುದರ ಜತೆಗೆ ಸರಕಾರ ಅವರಿಗೆ ೧೦೫ ಎಕರೆ ಭೂಮಿ ಕೊಟ್ಟಿತು. ಪರಿಹಾರ ಹಣದ ಬಹುಭಾಗ ಹೊಸ ಊರಿನಲ್ಲಿ (ಶಿವಪುರದಲ್ಲಿ)ಮನೆ ನಿರ್ಮಾಣಕ್ಕೆ ಹೋಯಿತು. ಇನ್ನು ದಿನನಿತ್ಯದ ಊಟದ ಚಿಂತೆ ಶುರು. ಕೃಷಿ ಮಾಡುವ ಎಂದರೆ ಭೂಮಿ ಸಮತಟ್ಟಾಗಿ ಇಲ್ಲ, ನೀರಿಲ್ಲ, ಉಳುಮೆಗೆ ಎತ್ತುಗಳು ಇಲ್ಲ. ಆಗಾಧವಾದ ಸಮಸ್ಯೆ ಒಂದು ಕಡೆಯಾದರೆ ಪರಿಹಾರಕ್ಕೆ ವೈಯಕ್ತಿಕವಾಗಿ ಯಾರಲ್ಲೂ ಬಂಡವಾಳ ಉಳಿದಿಲ್ಲ. ಇಂತಹ ಸಂದರ್ಭದಲ್ಲಿ ಅಂದಿನ ಸರಕಾರ ಸಹಕಾರಿ ಚಳವಳಿಗೆ ಕೊಟ್ಟ ಮಹತ್ವ        ಅವರಿಗೆ ಉಪಯೋಗಕ್ಕೆ ಬಂತು. ಸಹಕಾರಿ ಸಂಘ ಮಾಡಿಕೊಂಡರೆ ಅನುಕೂಲವಾದಿತೆಂದು ನಿರ್ವಸತಿಗರಿಗೆ ಸಲಹೆ ಇತ್ತರು.

ಅದರಂತೆ ೧೯೬೦ರಲ್ಲಿ ಮಹಮ್ಮದ ನಗರ ಸಹಕಾರಿ ಸಾಮೂಹಿಕ ಬೇಸಾಯ ಸಂಘ ಹುಟ್ಟಿಕೊಂಡಿತು. ಸಾಮೂಹಿಕ ಬೇಸಾಯ ಆರಂಭಿಸಲು ಹಳ್ಳ ದಿನ್ನೆಗಳನ್ನು ಸಮತಟ್ಟುಗೊಳಿಸಬೇಕಿತ್ತು, ನೀರಿನ ವ್ಯವಸ್ಥೆ ಆಗಬೇಕಿತ್ತು ಮತ್ತು ಉಳುಮೆಗೆ ಎತ್ತುಗಳ ವ್ಯವಸ್ಥೆ ಆಗಬೇಕಿತ್ತು. ಸಮಸ್ಯೆ ಪರಿಹಾರಕ್ಕೆ ಸಹಕಾರಿ ಅಧಿಕಾರಿಗಳ ಸಲಹೆ ಕೇಳಿದರು. ಸಹಕಾರಿ ನಿಯಮ ಪ್ರಕಾರ ಪ್ರತಿಯೊಂದಕ್ಕು ಅಧಿಕಾರಿಗಳ ಅನುಮತಿಯ ಅಗತ್ಯನೂ ಇತ್ತು. ಸಂಘದ ಹೊಲಗಳು ನದಿ ಪಾತ್ರದಿಂದ ಸುಮಾರು ಮೂವತ್ತು ಅಡಿ ಎತ್ತರದಲ್ಲಿ ಇದ್ದವು. ನದಿ ದಂಡೆಯಲ್ಲಿ ಒಂದು ಬಾವಿ ತೋಡಿಸಿ ಏತ ನೀರಾವರಿ (ಲಿಫ್ಟ್ ಇರಿಗೇಶನ್) ಮಾಡಲು ಅಧಿಕಾರಿಗಳು ಸಲಹೆ ಇತ್ತರು. ಅದರಂತೆ ಇಪ್ಪತ್ತು ಅಡಿ ಆಳ ಮತ್ತು ಆರು ಅಡಿ ಅಗಲದ ಬಾವಿ ತೋಡಿಸಿ ಕಲ್ಲು ಕಟ್ಟಿಸಿದರು. ಬಾವಿಗೆ ತಾಗಿಕೊಂಡಂತೆ ಪಂಪ್ ಶೆಡ್ ಕೂಡ ಕಟ್ಟಿಸಿದರು. ಲಿಫ್ಟ್ ಆದ ನೀರು ಎಲ್ಲ ಹೊಲಗಳಿಗೆ ಹರಿದು ಹರಿದು ಹೊಗಲು ಶೆಡ್ ನಿಂದ ಸುಮಾರು ಹತ್ತು ಅಡಿ ಎತ್ತರದಲ್ಲಿ ನೂರು ಮೀಟರು ಉದ್ದದ ಕಾಲುವೆ ನಿರ್ಮಿಸಿದರು. ಒಂದು ಹತ್ತು ಹೆಚ್.ಪಿ.ಪಂಪ್ ಖರೀದಿಸಿ ನೀರಿನ ವ್ಯವಸ್ಥೆ ಮಾಡಿಕೊಂಡರು. ಬುಲ್ ಡೋಜರ್ ಕಳುಹಿಸಿ ಸರಕಾರವೇ ಭೂಮಿ ಸಮತಟ್ಟುಗೊಳಿಸಿಕೊಟ್ಟಿತು. ಹೀಗೆ ಅವರ ಸಮಸ್ಯೆಗಳು ತಕ್ಕಮಟ್ಟಿಗೆ ಪರಿಹಾರವಾಗಿ ಸಾಮೂಹಿಕ ಕೃಷಿ ಆರಂಭವಾಯಿತು. ಮೊದಲ ಕೆಲವು ವರ್ಷ ಹುರುಳಿ, ನವಣೆ, ಸಜ್ಜೆ ಇತ್ಯಾದಿಗಳನ್ನು ಮಾತ್ರ ಬೆಳೆಯುತ್ತಿದ್ದರು. ನಂತರ ಭತ್ತ ಬೆಳೆಯಲು ಆರಂಭಿಸಿದರು. ತಾವು ಹುಟ್ಟಿ ಬೆಳೆದ ಮನೆ, ಪರಿಸರ, ತಮ್ಮ ಸ್ವಂತ ಭೂಮಿ ಇತ್ಯಾದಿಗಳನ್ನು ಕಳಕೊಂಡು ನೋವುಂಡ ಸಂಸಾರಗಳಿಗೆ ಪುನಃ ಇಲ್ಲಿನ ಬದುಕಿಗೆ ಒಗ್ಗಿಕೊಳ್ಳುವುದು ಕಷ್ಟವೇ ಆಯಿತು. ಕೆಲವು ಸದಸ್ಯರು ಸಾಮೂಹಿಕ ಬೇಸಾಯಕ್ಕೆ ಒಗ್ಗಿಕೊಳ್ಳಲು ಆಗದೆ ಬಿಟ್ಟು ಹೋದರು. ಕೆಲವರು ಹೋದರೇನು ಭೂಮಿ ಇಲ್ಲದವರನ್ನು ಹುಡುಕುವುದು ಕಷ್ಟವಾಗಲಿಲ್ಲ. ಹೋದವರ ಬದಲಿಗೆ ಹೊಸಬರನ್ನು ಸೇರಿಸಿಕೊಳ್ಳಲಾಯಿತು. ಇಷ್ಟಾದರೂ ಕ್ರಮ ‌ಪ್ರಕಾರ ಬೇಸಾಯವಾಗಿ ಎಲ್ಲರ ಮೂಲಭೂತ ಅಗತ್ಯಗಳನ್ನು ಪೂರೈಸುವಷ್ಟು ಬೆಳೆ ಬರುತ್ತಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ಉಳುಮೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು. ಇದ್ದ ಒಂದೆರಡು ಜೋಡು ಎತ್ತುಗಳಿಂದ ಎಷ್ಟು ಬೇಸಾಯ ಮಾಡಬಹುದು? ಉಳುಮೆಗೆ ವ್ಯವಸ್ಥೆ ಮಾಡುವ ಕುರಿತು ಚರ್ಚಿಸುವಾಗ ಟ್ರ್ಯಾಕ್ಟರ್ ಖರೀದಿಸುವ ವಿಚಾರ ಬಂತು. ಹೆಚ್ಚು ಕಡಿಮೆ ಎಲ್ಲ ಸದಸ್ಯರು ಆ ಕುರಿತು ಸಹಮತ ತೋರಿದರು. ಅದರ ಖರೀದಿಗೆ ಮತ್ತು ಇತರ ವಿನಿಯೋಜನೆಗಳಿಗೆ ಹೆಚ್ಚಿನ ಬಂಡವಾಳದ ಅಗತ್ಯ ಬಿತ್ತು. ಸಂಘ ಶುರು ಮಾಡಿದ ೨೭ ಸದಸ್ಯರು ಹೆಚ್ಚು ಶೇರು ಬಂಡವಾಳ ಹಾಕುವ ಸ್ಥಿತಿಯಲ್ಲಿ ಇರಲಿಲ್ಲ. ಆದುದರಿಂದ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವ ಅನಿವಾರ್ಯತೆ ಬಂತು. ೨೭ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು. ನಂತರ ಕೊಪ್ಪಳದ ಸಹಕಾರಿ ಅಧಿಕಾರಿಗಳಿಗೆ ಟ್ರ್ಯಾಕ್ಟರ್ ಖರೀದಿ ಬಗ್ಗೆ ಮನವಿ ಸಲ್ಲಿಸಿದರು. ಅವರು, ‘ಹೊಸ ಟ್ರ್ಯಾಕ್ಟರ್ ಖರೀದಿಸುವುದು ಬೇಡ. ಕೊಪ್ಪಳ ತಾಲ್ಲೂಕಿನ ಮತ್ತೊಂದು ಸಹಕಾರಿ ಸಂಘದವರು ತಮ್ಮ ಟ್ರ್ಯಾಕ್ಟರ್ ಮಾರಲು ಅನುಮತಿ ಕೋರಿದ್ದಾರೆ. ಅದು ನಿಮಗೆ ಆಗುವುದಾದರೆ ನಿಮ್ಮ ಹೆಸರಿಗೆ ವರ್ಗಾಯಿಸಲು ವ್ಯವಸ್ಥೆ ಮಾಡುತ್ತೇನೆ. ಅವರು ಖರೀದಿಸಿ ಒಂದು ವರ್ಷ ಆಗಿದೆ, ಸುಸ್ಥಿತಿಯಲ್ಲಿ ಇದೆ. ಅವರು ಕಟ್ಟಿ ಬಾಕಿ ಉಳಿದಿರುವ ಸಾಲವನ್ನು ನೀವು ಸಂದಾಯ ಮಾಡಿದರೆ ಟ್ರ್ಯಾಕ್ಟರ್ ನಿಮ್ಮದಾಗುತ್ತದೆ’, ಎಂದು ಟ್ರ್ಯಾಕ್ಟರ್ ಖರೀದಿ ಸಮಸ್ಯೆಯನ್ನು ಪರಿಹರಿಸಿದರು (ಆಡಳಿತ ಮಂಡಳಿ ವರದಿ, ೧೯೬೪).

ಟ್ರ್ಯಾಕ್ಟರ್ ಬಂತು. ಸದಸ್ಯರ ಸಂಖ್ಯೆ ಹೆಚ್ಚಿತು. ನೀರಿನ ವ್ಯವಸ್ಥೆ ಹಿಂದೆಯೇ ಆಗಿತ್ತು. ಸಾಮೂಹಿಕ ಬೇಸಾಯಕ್ಕೆ ಹೊಸ ಕಳೆ ಬಂತು. ಕವಳಿಯಲ್ಲಿ ಸಂಘದ ಕಚೇರಿ ಕಟ್ಟಿಸಿಕೊಂಡರು. ಮನೆ ಇಲ್ಲದವರಿಗೆ ಉಳಕೊಳ್ಳಲು ಕಚೇರಿ ಹತ್ತಿರವೇ ಎಂಟು ಕೊಠಡಿಗಳಿರುವ ಒಂದು ಕಟ್ಟಡ ಕಟ್ಟಿಸಿದರು. ಹೀಗೆ ಸಾಮೂಹಿಕ ಬೇಸಾಯ ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಆರಂಭಿಸಿತು. ಆದರೆ ಅದೇ ಸಂದರ್ಭದಲ್ಲಿ ಹೊಸ ಸಮಸ್ಯೆಗಳೂ ಬಂದವು. ಎಪ್ಪತ್ತರ ದಶಕದಲ್ಲಿ ಮುನಿರಾಬಾದ್‌ನಲ್ಲಿ ಸಲಾರ್‌ಜಂಗ್ ಶುಗರ್ ಮಿಲ್ ಎನ್ನುವ ಸಕ್ಕರೆ ಕಾರ್ಖಾನೆ ಶುರುವಾಯಿತು. ಶುಗರ್ ಮಿಲ್‌ಗೆ ಕಬ್ಬು ಬೆಳೆಯಲು ಮಿಲ್ಲಿನ ಸುತ್ತಮುತ್ತಲಿರುವ ಹಳ್ಳಿಗಳಲ್ಲಿ ಭೂಮಿ ಬೇಕಿತ್ತು. ಬೀಳು ಬಿದ್ದ ಬಹುತೇಕ ಸರಕಾರಿ ಭೂಮಿ ಸಿಗಲಿಲ್ಲ. ನಿವೃತ್ತಿ ಹೊಂದಿದ ಡೆಪ್ಯುಟಿ ತಹಸಿಲ್ದಾರರೊಬ್ಬರನ್ನು ತಮ್ಮ ಮಿಲ್‌ನಲ್ಲಿ ಮೇನೇಜರ್ ಆಗಿ ನೇಮಿಸಿಕೊಂಡಿದ್ದರು. ಆತ, ಸೊಸೈಟಿಯವರ ಪ್ರಕಾರ, ನಿರ್ವಸತಿಗರಿಗೆ ಕೊಟ್ಟ ಜಮೀನುಗಳಿಗೆ ಸಂಬಂಧಿಸಿದ ಕಾಗದ ಪತ್ರಗಳನ್ನು ನಾಶ ಪಡಿಸಿ ಸರಕಾರಿ ಭೂಮಿ ಪಟ್ಟಾ ಭೂಮಿ ಎಂಬ ಗುರುತು ಹತ್ತದಂತೆ ಮಾಡಿದ. ಸೊಸೈಟಿಗೆ ಹಂಚಿಕೆಯಾದ ಭೂಮಿಯನ್ನು ಖಾಲಿ ಭೂಮಿ ಎಂದು ತೋರಿಸಿ ಶುಗರ್ ಮಿಲ್ಲಿನವರು ಸಂಘದ ಮೂವತ್ತು ಎಕರೆ ಭೂಮಿಯನ್ನು ಕಬಳಿಸಲು ಸಹಕರಿಸಿದ (ಸಂಘದ ಪತ್ರ,೧೯೮೫). ಸೊಸೈಟಿಯವರು ಎಷ್ಟೇ ಪ್ರಯತ್ನ ಪಟ್ಟರು ಆ ಭೂಮಿಯನ್ನು ಪುನರ್ ವಶ ಪಡಿಸಿಕೊಳ್ಳಲಾಗಲಿಲ್ಲ. ಹೊರಗಿನ ಈ ಸಮಸ್ಯೆ ಸಾಲದೆಂಬಂತೆ ಆಂತರಿಕವಾಗಿ ಹಲವು ಸಮಸ್ಯೆಗಳು ಹಟ್ಟಿಕೊಂಡವು. ಒಂದು ಸಂಘದ ಜಮೀನು ವಿತರಣೆ ಕುರಿತ ತಕರಾರು. ತಕರಾರು ತೀರ್ಮಾನಕ್ಕಾಗಿ ಕೆಲವು ಸದಸ್ಯರು ಕೋರ್ಟ್‌ ಮೆಟ್ಟಲು ಹತ್ತಿದರು. ಸಂಘದ ಕೆಲವು ಸದಸ್ಯರ ಪ್ರಕಾರ ಅವರು ಕೋರ್ಟ್‌ ಮೆಟ್ಟಲು ಹತ್ತಲು ಕೇವಲ ಜಮೀನಿನ ಪ್ರಶ್ನೆ ಮಾತ್ರ ಕಾರಣವಲ್ಲ. ಕೋರ್ಟ್‌ಗೆ ಹೋದವರಲ್ಲಿ ಒಬ್ಬರು ಹಿಂದೆ ಸಂಘದ ಅಧ್ಯಕ್ಷರಾಗಿದ್ದರು. ಸಂಘದ ವ್ಯವಹಾರವನ್ನು ಅವರ ಇಚ್ಚೆಗೆ ಅನುಸಾರ ನಡೆಸಿದ್ದರು. ಸಂಘ ಅವರಿಂದಾಗಿ ತುಂಬ ನಷ್ಟ ಅನುಭವಿಸಿತು. ಅವರ ಕೆಟ್ಟ ಆಡಳಿತವನ್ನು ಇಷ್ಟ ಪಡದ ಸದಸ್ಯರು ಒಟ್ಟು ಸೇರಿ ಅವರನ್ನು ಅಧಿಕಾರದಿಂದ ಇಳಿಸಿದರು. ಇದರಿಂದ ಅವಮಾನಗೊಂಡ ಅವರು ತನ್ನ ಸಂಗಡಿಗರನ್ನು(ನಾಲ್ಕು ಮಂದಿ ಸದಸ್ಯರು)ಸೇಋಇಕೊಂಡು, ‘ನಮ್ಮ ಪಾಲಿನ ಭೂಮಿ ನಮಗೆ ಕೊಟ್ಟು ಬಿಡಿ (ಆರಂಭದಲ್ಲಿ ಹಂಚಿಕೆಯಾದ ನಾಲ್ಕು ಎಕರೆ),ನಾವು ಸಂಘ ಬಿಟ್ಟು ಪ್ರತ್ಯೇಕ ಬೇಸಾಯ ಮಾಡಿಕೊಳ್ಳುತ್ತೇವೆ’, ಎಂಬ ಬೇಡಿಕೆ ಮುಂದಿಟ್ಟರು. ಅದಕ್ಕೆ ಸಂಘದ ಇತರ ಸದಸ್ಯರು ಒಪ್ಪಲಿಲ್ಲ. ಜಗಳ ಕೋರ್ಟ್‌‌ಗೆ ಹೋಯಿತು. ಕೇಸ್ ಜಿಲ್ಲಾ ಮಟ್ಟದಿಂದ ಹೈಕೋರ್ಟ್‌ ತನಕ ಹೋಗಿ ಕೊನೆಗೆ ಸಂಘದ ಪರ ತೀರ್ಪು ಬಂತು.

ಇದರ ಜತೆಗೆ ಸಂಘದ ಸಾಮೂಹಿಕ ಬೇಸಾಯ ಕೂಡ ಅದರ ಉದ್ಧೇಶಿತ ರೂಪದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಸಾಮೂಹಿಕ ಬೇಸಾಯದಲ್ಲಿ ಪ್ರತಿಯೊಂದು ಮನೆಯಿಂದಲೂ ನಿರ್ದಿಷ್ಟ ಸಂಖ್ಯೆಯ ಆಳುಗಳು ಬೇಸಾಯದಲ್ಲಿ ಪಾಲುಗೊಳ್ಳಬೇಕೆಂದಿದೆ. ಆರಂಭದಲ್ಲಿ ಅಧಿಕಾರದಲ್ಲಿ ಇದ್ದ ಕೆಲವರು ಉಡಾಫೆ ಕಾರಣಗಳನ್ನು ಕೊಟ್ಟು ಬೇಸಾಯದ ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದರು. ಅವರ ಉದಾಹರಣೆಯನ್ನು ಇತರರು ಅನುಸರಿಸಲು ಆರಂಭಿಸಿದರು. ಕೇಳಿದರೆ ಮತ್ತೊಬ್ಬನ ಉದಾಹರಣೆ ತೋರಿಸಿ, ‘ಅವನು ನಿನ್ನೆ ಬಂದಿಲ್ಲ; ಯಾಕೆ ಅವನ್ನ ಕೇಳಿಲ್ಲ. ಅವನಿಗೊಂದು ನ್ಯಾಯ ನನಗೊಂದು ನ್ಯಾಯವೇ?’ ಎಂದು ಕೇಳಿ ಪ್ರಶ್ನಿಸಿದವರ ಬಾಯಿ ಮುಚ್ಚಿಸುತ್ತಿದ್ದರು. ಸಂಘದ ಜಮೀನಿನ ಉಳುಮೆಗೆ ಖರೀದಿಸಿ ಟ್ರಾಕ್ಟರ್ ದುರುಪಯೋಗವಾಗಿ ನಷ್ಟ ಅನುಭವಿಸಬೇಕಾಯಿತು. ಸಾಮೂಹಿಕ ಬೇಸಾಯದಲ್ಲಿ ಬೀಜ, ರಸ ಗೊಬ್ಬರ, ಕ್ರಿಮಿನಾಶಕ, ನೀರು ಪೂರೈಕೆಗೆ ಅಗತ್ಯವಿರುವ ಸಾಮಗ್ರಿ ಇತ್ಯಾದಿಗಳನ್ನು ಮಾರುಕಟ್ಟೆಯಿಂದ ಖರೀದಿಸಬೇಕು. ಆ ಜವಾಬ್ದಾರಿಯನ್ನು ಸಂಘದ ನಿರ್ದೇಶಕರು ಅಥವಾ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ನಿರ್ವಹಿಸುತ್ತಿದ್ದರು. ಎಷ್ಟೋ ಸಂದರ್ಭಗಳಲ್ಲಿ ಇವರು ಸಂಘದ ಆಸಕ್ತಿಗಿಂತ ತಮ್ಮ ಸ್ವಂತದ ಆಸಕ್ತಿಗೆ ಪೂರಕವಾಗಿ ನಿರ್ಧಾರ ತಳೆದು ಸಂಘ ನಷ್ಟ ಅನುಭವಿಸುವಂತೆ ಮಾಡಿದರು. ಸಂಘದ ಉತ್ಪನ್ನಗಳನ್ನು ಮಾರುವಾಗ ವ್ಯಾಪಾರಿಗಳ ಜತೆ ಶಾಮೀಲಾಗಿ ಬಿಲ್ಲಿನಲ್ಲಿ ಕಡಿಮೆ ಬೆಲೆ ನಮೂದಿಸಿ ನಿಜ ಬೆಲೆಯನ್ನು ತಮ್ಮ ಜೇಬಿಗೆ ಸೇರಿಸಿದರು. ಹೀಗೆ ಸಾಮೂಹಿಕ ಬೇಸಾಯ ವರ್ಷದಿಂದ ವರ್ಷಕ್ಕೆ ನಷ್ಟ ಅನುಭವಿಸುತ್ತಾ ಬಂತು. ಈ ಸಮಸ್ಯೆಯಿಂದ ಹೊರಬರಲು ಹಿರಿಯ ಸದಸ್ಯರು ಅನ್ಯಮಾರ್ಗದ ಕುರಿತು ಆಲೋಚಿಸಿದರು. ಸಾಮೂಹಿಕ ಬೇಸಾಯ ಮಾಡುವುದರಿಂದ ಸದಸ್ಯರು ವೈಯಕ್ತಿಕ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಲಾಭವನ್ನು ತಮ್ಮ ಸ್ವಂತಕ್ಕೆ ಬಳಸಿ ನಷ್ಟವನ್ನು ಸಂಘದ ಹೆಸರಿಗೆ ವರ್ಗಾಯಿಸುತ್ತಿದ್ದರು. ಈ ಸಮಸ್ಯೆ ಪರಿಹಾರಕ್ಕೆ ಬೇಸಾಯ ಮತ್ತು ಅದರಿಂದ ಬರುವ ಲಾಭ ನಷ್ಟಕ್ಕೆ ಸದಸ್ಯರನ್ನೇ ಹೊಣೆ ಮಾಡಬೇಕೆಂಬ ತೀರ್ಮಾನಕ್ಕೆ ಬಂದರು (ತಿದ್ದುಪಡಿಯಾದ ಬೈಲಾ, ೧೯೮೦). ಅದಕ್ಕಾಗಿ ಸಂಘದ ಬೈಲಾದಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಮಾಡಿಕೊಂಡರು.

೧. ಸಹಕಾರಿ ಸಾಮೂಹಿಕ ಬೇಸಾಯ ಸಂಘವನ್ನು ಸಹಕಾರಿ, ಬೇಸಾಯ ಸಂಘ ಎಂದು ಬದಲಾಯಿಸಿಕೊಳ್ಳುವುದು.

೨. ಜಮೀನು ಸಂಘದ ಹೆಸರಲ್ಲೇ ಮುಂದುವರಿಯುವುದು, ಸದಸ್ಯರ ವ್ಯಕ್ತಿಗತ ಜಮೀನಿನ ಪ್ರಮಾಣ (೧ ಎಕರೆ ೧೦ ಗುಂಟೆ) ಈಗಾಗಲೇ ನಿರ್ಧರಿತವಾದಂತೆ ಮುಂದುವರಿಯುವುದು.

೩. ಸಂಘದಿಂದ ಹಂಚಿಕೆಯಾದ ಜಮೀನುಗಳನ್ನು ಆಯಾ ಸದಸ್ಯರುಗಳೇ ಸಾಗುವಳಿ ಮಾಡುವುದು.

೪. ಸಂಘದ ಜಮೀನು ಬೇಸಾಯ ಮಾಡುವುದಕ್ಕೆ ಪ್ರತಿಫಲವಾಗಿ ಪ್ರತಿ ಸದಸ್ಯನೂ ಸಂಘವು ನಿರ್ಧರಿಸುವ ಲಾವಣಿಯನ್ನು ಪ್ರತಿ ಬೆಳೆಗೆ (ಈಗ ರೂ.೮೦೦)ಸಂಘಕ್ಕೆ ಕಟ್ಟಬೇಕು.

೫. ಆಯಾ ಸದಸ್ಯರ ಪಾಲಿನ ಸಂಘದ ಜಮೀನಿನ ಕೃಷಿಗೆ ಅಗತ್ಯವಿರುವ ನೀರಿನ ಪೂರೈಕೆಯ ನಿರ್ವಹಣೆ ಮತ್ತು ಜವಾಬ್ದಾರಿ ಸಂಘದ್ದು.

ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವ

ಹೊಸ ವ್ಯವಸ್ಥೆ ೧೯೮೨ರಿಂದ ಜಾರಿ ಬಂತು. ಕೂಡ ಬೇಸಾಯ ಕೈಬಿಟ್ಟು ವ್ಯಕ್ತಿಗತ ಬೇಸಾಯ ಆರಂಭವಾಯಿತು. ಸದಸ್ಯರ ಕಬ್ಜಾದಲ್ಲಿರುವ ಸಂಘದ ಜಮೀನನ್ನು ಆಯಾಸದಸ್ಯರು ಬೇಸಾಯ ಮಾಡಲು ಕೊಡಬೇಕಾದ ಲಾವಣಿಯನ್ನು ಆಡಳಿತ ಮಂಡಳಿ ನಿರ್ಧರಿಸುತ್ತದೆ ಮತ್ತು ವಸೂಲಿ ಮಾಡುತ್ತದೆ. ಸದ್ಯಕ್ಕೆ ಸಂಘದ ಮುಖ್ಯ ಕೆಲಸ ಸದಸ್ಯರ ಹೊಲಗಳಿಗೆ ನೀರು ಪೂರೈಕೆ ಮಾಡುವುದು. ಅದಕ್ಕೆ ಬೇಕಾಗಿರುವ ಮೂಲಭೂತ ವಿನಿಯೋಜನೆ ಹಿಂದೆಯೇ ನಡೆದಿದೆ. ಇಂದು ಅವುಗಳ ರಿಪೇರಿ ಮತ್ತು ಉಸ್ತುವಾರಿ ನೋಡಿಕೊಳ್ಳುವುದು ಸಂಘದ ಜವಾಬ್ದಾರಿಯಾಗಿದೆ. ಸಂಘದ ವ್ಯವಹಾರವನ್ನು ನೋಡಿಕೊಳ್ಳಲು ಆಡಳಿತ ಮಂಡಳಿ ಅಥವಾ ಕಾರ್ಯಕಾರಿ ಸಮಿತಿ ಇದೆ. ಇದನ್ನು ವರ್ಷಕ್ಕೊಮ್ಮೆ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡುತ್ತಾರೆ. ಕಾರ್ಯಕಾರಿ ಸಮಿತಿ ತಿಂಗಳಿಗೊಮ್ಮೆ ಸಭೆ ಸೇರಿ ಸಂಘದ ನಿರ್ವಹಣೆಗೆ ಸಂಬಂಧಿಸಿದ ನಿರ್ಣಯ ಕೈಗೊಳ್ಳುತ್ತಿದೆ. ಒಂದು ಸಭೆಗೆ ಹಾಜರಾಗಿ ಕಂಡುಕೊಂಡ ಕೆಲವು ವಿಚಾರಗಳನ್ನು ಮುಂದೆ ಕೊಟ್ಟಿದ್ದೇನೆ. ಅವತ್ತು ನಾನು ಹೋದದ್ದು ಸೊಸೈಟಿಯ ಕೆಲವು ಹಿರಿಯ ಸದಸ್ಯರನ್ನು ಭೇಟಿಯಾಗಿ ಅವರ ಅನುಭವಗಳನ್ನು ಸಂಗ್ರಹಿಸಲು. ಸೊಸೈಟಿಯ ಫೌಂಡರ್ ಅಧ್ಯಕ್ಷರಾದ ಕುರುಗೋಡಪ್ಪನವರನ್ನು ಅವರ ಶಿವಪುರದ ಮನೆಯಲ್ಲಿ ಮಾತಾಡಿಸುತ್ತಿದ್ದೆ. ಅಷ್ಟೊತ್ತಿಗೆ ಅವರ ತಂಗಿ ಮಗ ಅವರ ಮನೆಗೆ ಬಂದು ನಮ್ಮ ಜತೆ ಸೇರಿ ಕೊಂಡರು. ಸ್ವಲ್ಪ ಹೊತ್ತಿನ ನಂತರ ಕುರುಗೋಡಪ್ಪನ ತಂಗಿ ಮಗ, ‘ನನಗೆ ಮೀಟಿಂಗ್‌ಗೆ ಹೋಗಬೇಕು ತಡವಾಯಿತು, ನಾನು ಹೋಗುತ್ತೇನೆ’ ಎಂದು ಎದ್ದರು. ನಾನು, ‘ಯಾವ ಮೀಟಿಂಗ್?’ ಎಂದು ವಿಚಾರಿಸಿದಾಗ ಸೊಸೈಟಿಯ ನಿರ್ದೇಶಕರ ಮೀಟಿಂಗ್ ಕವಳಿಯ ಸೊಸೈಟಿ ಕಟ್ಟಡದಲ್ಲಿ ನಡೆಯುವ ವಿಚಾರ ತಿಳಿಸಿದರು. ‘ಕುರು ಗೋಡಪ್ಪನವರ ಜತೆ ನಾನು ಇನ್ನೊಂದಿನ ಮಾತಾಡುತ್ತೇನೆ, ಇವತ್ತು ನಿಮ್ಮ ಜತೆ ಮೀಟಿಂಗ್‌ಗೆ ಬರುತ್ತೇನೆ,’ ಎಂದೆ. ‘ಆಯಿತು,’ ಎಂದು ಕುರುಗೋಡಪ್ಪನ ಕಡೆಗೆ ತಿರುಗಿ, ‘ನೀವು ಬರುತ್ತೀರಾ?’ ಎಂದು ವಿಚಾರಿಸಿದರು. ಕುರುಗೋಡಪ್ಪ, ಸುಮಾರು ಎಂಬತ್ತೆರಡು ವರ್ಷ ಪ್ರಾಯದ ವ್ಯಕ್ತಿ. ಕೋಲು ಹಿಡಿದೇ ಓಡಾಡೇಕು. ಬರುವುದಿಲ್ಲ ನೀವು ಹೋಗಿ ಎನ್ನಬಹುದು ಎಂದು ನಾನು ಆಲೋಚಿಸುತ್ತಿರುವಾಗಲೇ, ‘ನಾನು ಬರುತ್ತೇನೆ,’ ಎಂದು ರೆಡಿಯಾಗಬೇಕೆ! ಬಸಪ್ಪ, ಕುರುಗೊಡಪ್ಪನ ತಂಗಿ ಮಗ ತನ್ನ ಸೈಕಲ್ಲಲ್ಲಿ ಮುಂದೆ ಹೋರಟನು. ನಾನು ಕುರುಗೋಡಪ್ಪನವರನ್ನು ಬೈಕಲ್ಲಿ ಕೂರಿಸಿಕೊಂಡು ಸೊಸೈಟಿಗೆ ಹೊರಟೆ.

ಶಿವಪುರದಿಂದ ಸುಮಾರು ಎರಡು ಕಿ.ಮೀ.ದೂರ ಕವಳಿ. ನಾವು ಸಂಘದ ಕಚೇರಿ ತಲುಪುವಾಗ ೧೧ ಗಂಟೆ. ಸಂಘದ ಕಚೇರಿಗಾಗಿ ಕಟ್ಟಿಸಿದ ಕಟ್ಟಡದಲ್ಲಿ ಎರಡು ಕೋಣೆಗಳಿವೆ. ಮೊದಲ ಕೊಠಡಿ ಹದಿನೈದು ಅಡಿ ಉದ್ದ ಮತ್ತು ಹತ್ತು ಅಡಿ ಅಗಲವಿರಬಹುದು. ಅದು ಸಂಘದ ಕಚೇರಿಯಾಗಿ ಕೆಲಸ ಮಾಡುತ್ತಿದೆ. ಅದಕ್ಕೆ ತಾಗಿಕೊಂಡಂತೆ ಕಚೇರಿಗಿಂತ ಸ್ವಲ್ಪ ವಿಶಾಲವಾಗಿರುವ ಮತ್ತೊಂದು ಕೋಣೆ ಇದೆ. ಅದು ಸಂಘದ ಗೋದಾಮು. ಈಗ ಅಲ್ಲಿ ನ್ಯಾಯ ಬೆಲೆ ಅಂಗಡಿ ಇದೆ. ಎಲ್ಲ ನಿರ್ದೇಶಕರು ಬಂದಿದ್ದರು. ಎರಡು ಉದ್ದದ ಬೆಂಚು. ಒಂದು ಟೇಬಲ್ ಅದರ ಒಂದು ಕಡೆ ಮೂರು ಬಾಟ ಚೇಯರ್, ಮತ್ತೊಂದು ಕಡೆ ಎರಡು ಬಾಟ ಚೇಯರ್ ಮತ್ತು ಒಂದು ಪ್ಲಾಸ್ಟಿಕ್ ಚೇಯರ್ ಇತ್ತು. ಗೋದಾಮು ಬದಿಯ ಗೋಡೆ ಮೇಲೆ ಅಧ್ಯಕ್ಷರು ಎಂದು ಬರೆದಿತ್ತು. ಈಗಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಆ ಗೋಡೆ ಬದಿಯ ಬಾಟ ಚೇಯರ್‌ಗಳಲ್ಲಿ ಕೂತಿದ್ದರು. ಅವರ ಎದುರುಗಡೆ ಹಿಂದಿನ ವರ್ಷದ ಅಧ್ಯಕ್ಷರು ಮತ್ತು ಮತ್ತೊಬ್ಬ ನಿರ್ದೇಶಕರು ಕುಳಿತಿದ್ದರು. ಅಧ್ಯಕ್ಷರದ ಹತ್ತಿರ ಒಂದು ಚೇಯರ್ ಮತ್ತು ಮಾಜಿ ಅಧ್ಯಕ್ಷರ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಚೇಯರ್ ಖಾಲಿ ಇತ್ತು. ಹಾಲಿ ಅಧ್ಯಕ್ಷರ ಪಕ್ಕದ ಚೇಯರಲ್ಲಿ ಕರುಗೋಡಪ್ಪನವರನ್ನು ಕುಳ್ಳಿರಿಸಿ ಮಾಜಿ ಅಧ್ಯಕ್ಷರ ಪಕ್ಕದ ಪ್ಲಾಸ್ಟಿಕ್ ಚೇಯರನ್ನು ನನಗೆ ತೋರಿಸಿದರು. ಟೇಬಲ್ ಮತ್ತೊಂದು ಬದಿಗೆ ಐದು ಜನ ಕುಳಿತುಕೊಳ್ಳಬಹುದಾದ ಒಂದು ಬೇಂಚ್ ಇತ್ತು. ಅದರಲ್ಲಿ ಮಾಜಿ ಕಾರ್ಯದರ್ಶಿಯವರು, ಬಸಪ್ಪ ಮತ್ತು ಒಬ್ಬ ಮಹಿಳಾ ನಿರ್ದೇಶಕಿ ಇದ್ದರು. ನನ್ನ ಹಿಂದುಗಡೆ ಇದ್ದ ಉದ್ದನೆಯ ಬೇಂಚ್ ಮೇಲೆ ಇತರ ನಿರ್ದೇಶಕರು ಇದ್ದರು.

ಮೀಟಿಂಗ್ ಆರಂಭಿಸುವ ಲಕ್ಷಣ ಕಾಣಲಿಲ್ಲ. ನಾನು ಇರುವುದರಿಂದ ಇವರಿಗೆ ಮೀಟಿಂಗ್ ಆರಂಭಿಸಲು ಸಮಸ್ಯೆ ಆಗುತ್ತದೋ ಏನೋ ಎಂದು, ‘ನಾನು ಇಲ್ಲಿ ಇರುವುದು ನಿಮಗೆ ಇರುಸು ಮುರುಸು ಆಗುವುದಾದರೆ ಹೊರಗೆ ಇರುತ್ತೇನೆ,’ ಎಂದೆ. ಹಾಗೆ ಹೇಳುವಾಗ ಇವರು ಖಂಡಿತವಾಗಿಯೂ ನನ್ನನ್ನು ಹೊರಗೆ ಹೋಗಿ ಎನ್ನುವುದಿಲ್ಲ ಎನ್ನುವ ವಿಶ್ವಾಸವಿತ್ತು. ನನ್ನ ಮಾತಿಗೆ ಯಾರು ವಿಶೇಷ ಗಮನ ಕೊಟ್ಟಂತೆ ಕಾಣಲಿಲ್ಲ. ನನ್ನ ಮಾತನ್ನು ಪುನಃ ಉಚ್ಚರಿಸಿದೆ. ‘ಇವರಿಗೆ ನಮ್ಮ ಪಂಪ್ ಶೆಡ್ ಪಕ್ಕ ಸ್ವಲ್ಪ ಸಮಯ ಇರಲು ವ್ಯವಸ್ಥೆ ಮಾಡಿ,’ ಎಂದು ಮಾಜಿ ಕಾರ್ಯದರ್ಶಿಯವರು ಹಾಲಿ ಕಾರ್ಯದರ್ಶಿಯವರಿಗೆ ಹೇಳಿದರು (ಹಾಲಿಯವರು ಮಾಜಿಯವರ ಮಗ) ಅವರಿಂದ ಆ ಉತ್ತರವನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಉದ್ದೇಶ ಹೆಚ್ಚೆಂದರೆ ಮೀಟಿಂಗ್ ನಡೆಯುವ ಕೊಠಡಿಯ ಹೊರಗಿರುವುದಾಗಿತ್ತು. ಅವರು ಸೂಚಿಸಿದ ಪಂಪ್ ಶೆಡ್ ಅಲ್ಲಿಂದ ಸುಮಾರು ನೂರು ಮೀಟರು ದೂರ ಇದೆ. ನಾನು ಅಂದು ಹೋದದ್ದೇ ಮೀಟಿಂಗ್ ಹೇಗೆ ನಡೆಯುತ್ತದೆ ಎಂದು ನೋಡಲು. ಒಂದು ವೇಳೆ ಅದಕ್ಕೆ ಅವಕಾಶ ಸಿಗದಿದ್ದರೆ ಕನಿಷ್ಠ ಕೊಠಡಿಯ ಹೊರಗೆ ಇದ್ದು ಏನು ಚರ್ಚೆ ಆಗುತ್ತಿದೆ ಎಂದು ತಿಳಿದುಕೊಳ್ಳುವ ಉದ್ದೇಶವಿತ್ತು. ಮಾಜಿ ಕಾರ್ಯದರ್ಶಿಯ ಸೂಚನೆ ನನ್ನ ಇಡಿ ಯೋಜನೆಯನ್ನೇ ಬುಡಮೇಲು ಮಾಡಿತು. ಈ ಸಂದಿಗ್ಧ ಪರಿಸ್ಥಿತಿಯಿಂದ ಹೇಗೆ ಹೊರಬರುವುದೆಂದು ಯೋಚಿಸುತ್ತಿರುವಾಗ, ‘ಇಲ್ಲೇ ಇರಿ ನೀವು;ನೀವು ಕೇಳಬಾರದಂತಹ ಚರ್ಚೆ ನಾವೇನು ಮಾಡುತ್ತಿಲ್ಲ,’ ಎಂದು ಹೇಳಿ ಒಬ್ಬ ಸದಸ್ಯರು ನನ್ನ ಸಮಸ್ಯೆ ಪರಿಹರಿಸಿದರು. ಅಂದಿನ ಮೀಟಿಂಗ್‌ಗೆ ನಾಲ್ಕು ವಿಚಾರಗಳಿದ್ದವು- ಹಿಂದಿನ ಎರಡು ತಿಂಗಳ ಆಯಾ ವ್ಯಯ ಅಥವಾ ಲೆಕ್ಕ ಪತ್ರದ ಮಂಡನೆ, ಸೊಸೈಟಿಯ ಗೊದಾಮಿನ ಸಣ್ಣಪುಟ್ಟ ರಿಪೇರಿ, ಸೊಸೈಟಿ ತೋಟದ ಸುತ್ತ ಇರುವ ಬೇಲಿ ರಿಪೇರಿ ಮತ್ತು ಕರೆಂಟ್ ಕಡಿತದಿಂದ ಹುಟ್ಟಿಕೊಂಡ ನೀರು ಪೂರೈಕೆ ಸಮಸ್ಯೆ. ಲೆಕ್ಕ ಪತ್ರ ಕುರಿತು ಚರ್ಚೆ ಮೊದಲಿಗೆ ಎತ್ತಿಕೊಂಡರು. ಹಾಲಿ ಕಾರ್ಯದರ್ಶಿಯವರು ಸ್ವಲ್ಪ ಮಂದಗತಿಯವರಂತೆ ಕಂಡರು. ಅವರು ಕರ್ಚಿಗೆ ಸಂಬಂಧಿಸಿ ಮಂಡಿಸಿದ ಬಿಲ್ಲುಗಳನ್ನು ಒಂದೊಂದಾಗಿ ಮಾಜಿ ಅಧ್ಯಕ್ಷ ತಿಪ್ಪಣ್ಣನವರು ಪರೀಕ್ಷಿಸುತ್ತಿದ್ದರು. ಆರ್ನೂರ ಐವತ್ತು ರೂಪಾಯಿಗಳ ಒಂದು ಬಿಲ್ಲು ದೊಡ್ಡ ಕಗ್ಗಂಟಾಗಿ ಪರಿಣಮಿಸಿತು. ಅದರಲ್ಲಿ ಬರೆದ ಅಕ್ಷರದಿಂದ ಅದು ಯಾವ ವಸ್ತುಗಳ ಖರೀದಿಗೆಂದು ಯಾರಿಗೂ ಓದಲು ಸಾಧ್ಯವಾಗಲಿಲ್ಲ.

ಕಾರ್ಯದರ್ಶಿಯವರಲ್ಲಿ ಕೇಳಿದರೆ ಅವರಿಗೂ ಅದನ್ನು ಓದಿ ವಸ್ತುಗಳ ವಿವರ ಕೊಡಲು ಸಾಧ್ಯವಾಗಲಿಲ್ಲ. ‘ಅಲ್ಮಾರೀ ಯಾವುದೋ ವಸ್ತು ಖರೀದಿಸಿ ಬಿಲ್ಲು ತಂದಿದ್ದೀರಾ, ಆ ವಸ್ತುಗಳು ಯಾವುವು ಎಂದು ಹೇಳಲು ನಿಮ್ಮಿಂದ ಸಾಧ್ಯವಾಗದಿದ್ದರೆ ನಾವು ಏನೂಂತ ತಿಳಿದುಕೊಳ್ಳಬೇಕೆಂದು,’ ಸ್ವಲ್ಪ ಏರು ಸ್ವರದಲ್ಲೇ ತಿಪ್ಪಣ್ಣನವರು ಗದರಿಸಿದರು. ಅಲ್ಲೇ ಇದ್ದ ಕಾರ್ಯದರ್ಶಿಯವರ ತಂದೆಗೆ ಅದು ಇಷ್ಟವಾದಂತೆ ತೋರಲಿಲ್ಲ. ‘ಅವ ತಂದ ಬಿಲ್ಲಿನ ಬಗ್ಗೆ ಸಂಶಯವಿದ್ದರೆ ನೇರ ಅಂಗಡಿಯಲ್ಲಿ ಹೋಗಿ ವಿಚಾರಿಸಬಹುದು; ಬಿಲ್ಲಿನಲ್ಲಿ ಅಂಗಡಿಯ ಹೆಸರಂತು ಇದೆಯಲ್ಲ,’ ಎಂದು ಸ್ವಲ್ಪ ನೊಂದುಕೊಂಡೆ ನುಡಿದಂತಿತ್ತು. ‘ನೋಡಿ ಇದು ಸಂಶಯ ಪಡುವ ಅಥವಾ ಬಿಡುವ ವಿಚಾರವಲ್ಲ. ಆತ ಬಿಲ್ಲು ತಂದರೆ ಅದು ಏತಕ್ಕೆಂದು ಕನಿಷ್ಠ ಅರಿವು ಆತನಿಗೆ ಇರಬೇಕು; ನೀವು ಸುಮ್ಮನಿರಿ. ನೀವು ಕಾರ್ಯದರ್ಶಿ ಆಗಿರುವಾಗ ನಾವು ಯಾರು ಇಂತಹ ಪ್ರಶ್ನೆ ಕೇಳಿಲ್ಲ,’ ಎಂದು ತಿಪ್ಪಣ್ಣ ಸ್ವಲ್ಪ ಖಾರವಾಗಿಯೇ ಉತ್ತರಿಸಿದರು. ಆತನನ್ನು ಈ ರೀತಿ ತಿದ್ದದಿದ್ದರೆ ಆತ ಯಾವಾಗ ಕೆಲಸ ಕಲಿಯುವುದೆಂದು ಇತರ ಸದಸ್ಯರು ತಿಪ್ಪಣ್ಣನ ವಾದಕ್ಕೆ ಧ್ವನಿಗೂಡಿಸಿದರು. ಪಂಪ್ ಆಪರೇಟರ್‌ಗೆ ಬುಲಾವ್ ಹೋಯಿತು. ಆತನಲ್ಲಿ ಆ ಬಿಲ್ಲು ಕುರಿತು ವಿಚಾರಿಸಲಾಯಿತು. ನೀರು ಸೆಳೆಯುವ ಪಂಪಿನ ಫುಟ್ ಬಾಲ್ ರಿಪೇರಿ, ಡಿಸೆಂಬರ್ ತಿಂಗಳಲ್ಲಿ, ಆದ ಕುರಿತು ತಿಳಿಸಿದ. ಹೊಸ ಫುಟ್ ಬಾಲ್ ಮತ್ತು ಅದರ ಜೋಡಣೆಗೆ ಬೇಕಾದ ನೆಟ್ ಬೋಲ್ಟ್ ವಿವರ ಆ ಬಿಲ್ಲೆಂದು ತೀರ್ಮಾನಕ್ಕೆ ಬರಲಾಯಿತು. ಸೊಸೈಟಿ ತೋಟದಲ್ಲಿ ತೆಂಗಿನ ಜೆತೆಗೆ ಸಾಕಷ್ಟು ಸಂಖ್ಯೆಯಲ್ಲಿ ಮಾವಿನ ಮರ ಹಾಗೂ ಸಪೋಟ ಮರಗಳನ್ನು ಹಾಕಿದ್ದಾರೆ. ಪ್ರತಿ ವರ್ಷ ಅದು ಕಡಿಮೆ ಅಂದರೆ ಹದಿನೈದು ಸಾವಿರಕ್ಕೆ ಹರಾಜು ಆಗುತ್ತದೆ. ಈ ವರ್ಷ ಇಪ್ಪತ್ತೈದು ಸಾವಿರಕ್ಕೆ ಹರಾಜು ಆಗಿದೆ. ಅದರ ಬಾಬ್ತು ಹತ್ತು ಸಾವಿರ ರೂಪಾಯಿಗಳನ್ನು ಕಾರ್ಯದರ್ಶಿಯವರು ಪಡಕೊಂಡಿದ್ದರು. ಆ ಹತ್ತು ಸಾವಿರದಿಂದಲೇ ಸೊಸೈಟಿ ಭೂ ಕಂದಾಯ ರೂ.೮೬.೨೨ನ್ನು ಕಾರ್ಯದರ್ಶಿ ಕಟ್ಟಿದ್ದರು. ಬಂದ ಹಣವನ್ನು ಬ್ಯಾಂಕಿಗೆ ಜಮಾ ಮಾಡದೆ ನೇರ ಬಳಸಿದ ಕುರಿತು ತಕರಾರು ಬಂತು. ಮುಂದೆ ಆ ರೀತಿ ಆಗುವುದಿಲ್ಲವೆಂದು ಕಾರ್ಯದರ್ಶಿ ಭರವಸೆ ನೀಡಿದ ನಂತರ ಒಪ್ಪಿಕೊಳ್ಳಲಾಯಿತು.

ನಂತರ ಅಧ್ಯಕ್ಷರ ಪ್ರಮಾಣ ಭತ್ಯೆ ಬಗ್ಗೆ ಸ್ವಲ್ಪ ಮಾತುಕತೆ ಆಯಿತು. ಕೆಲವು ಅಡಿ ಪೈಪು ತರಲು ಅಧ್ಯಕ್ಷರು ಕೊಪ್ಪಳಕ್ಕೆ ಹೋಗಿದ್ದರು. ಹೋಗುವಾಗ ಕಾರ್ಯದರ್ಶಿಯವರಿಂದ ರೂ.೪೦೦ ಮುಂಗಡವಾಗಿ ತೆಗೆದುಕೊಂಡಿದ್ದರು. ರೂ.೩೨೫ ಪೈಪು ಖರೀದಿ ಬಿಲ್ಲು ಕೊಟ್ಟು, ಐವತ್ತು ರೂಪಾಯಿ ಪ್ರಯಾಣ ಭತ್ಯೆ, ಇಪ್ಪತ್ತು ರುಪಾಯಿ ಉಳಿದಿದೆ ಎಂದು ಕಾರ್ಯದರ್ಶಿಗೆ ಇತ್ತರು. ಇಪ್ಪತ್ತು ಅಲ್ಲ ನೀವು ಮೂವತ್ತೈದು ರೂಪಾಯಿ ಕೊಡಬೇಕೆಂದು ಕಾರ್ಯದರ್ಶಿಯ ವಾದ. ನನಗೆ ಐವತ್ತೈದು ರೂಪಾಯಿ ಒಟ್ಟು ಕರ್ಚಿ ಆಗಿದೆ. ನಾನೆಲ್ಲಿಂದ ಮೂವತ್ತೈದು ರೂಪಾಯಿ ಕೊಡುವುದೆಂದು ಅಧ್ಯಕ್ಷರ ಪ್ರತಿವಾದ. ಕಾರ್ಯದರ್ಶಿ ಪ್ರಕಾರ ಪ್ರಯಾಣ ಭತ್ಯೆ ಕೇವಲ ನಲ್ವತ್ತು ಕೊಡಬಹುದು; ಅದಕ್ಕಿಂತ ಹೆಚ್ಚು ಕರ್ಚು ಆದರೆ ಅದನ್ನು ಸದಸ್ಯರೆ ತೆರಬೇಕೆಂದು ಕಾರ್ಯದರ್ಶಿ ಕಾನೂನು ಮಾಹಿತಿ ನೀಡಿದರು. ಸ್ವಲ್ಪ ಹೊತ್ತಿನ ನಂತರ ತಿಪ್ಪಣ್ಣನವರು ಕಾರ್ಯದರ್ಶಿಯವರನ್ನು ಪ್ರಯಾಣ ಭತ್ಯೆ ಕುರಿತು ಸಿಕ್ಕಿಸಿ ಹಾಕಿದರು. ಕಾರ್ಯದರ್ಶಿ ನಾಲ್ಕು ಪ್ರಯಾಣ ಭತ್ಯೆ ಎಂದು ರೂ.೧೯೦ಲೆಕ್ಕ ದಾಖಲಿಸಿದ್ದರು. ಇದು ಹೇಗೆ ಸಾಧ್ಯ ಎಂದು ಎಲ್ಲರು ಪ್ರಶ್ನಿಸಿದರು. ಕಾರ್ಯದರ್ಶಿ ಎಷ್ಟು ಹುಡುಕಿದರು ಮೂವತ್ತು ರೂಪಾಯಿಗೆ ಓಚರ್ ಸಿಗಲಿಲ್ಲ. ‘ಕಾನೂನು ತಿಳಿದ ನೀವೇ ಹೀಗೆ ಮಾಡಿದರೆ ಹೇಗೆ?’ ಎಂದು ತಿಪ್ಪಣ್ಣ ಮತ್ತು ಇತರ ಸದಸ್ಯರು ಕಾರ್ಯದರ್ಶಿಯನ್ನು ಹಂಗಿಸಿದರು. ಅಂದಿನ ಮೀಟಿಂಗ್‌ನ ಎರಡನೆ ಎಜಂಡಾ ತೋಟದ ಬೇಲಿ ರಿಪೇರಿ. ಬೇಲಿ ರಿಪೇರಿ ಮಾಡಿಸಿ ಎಂದು ತಿಪ್ಪಣ್ಣ ಮತ್ತು ಕೆಲವು ಸದಸ್ಯರು ಒಪ್ಪಿಗೆ ಇತ್ತರು. ಅದರ ಒಟ್ಟು ಕರ್ಚು, ಯಾರು ಮಾಡಿಸುವುದು, ಇತ್ಯಾದಿಗಳ ಕುರಿತು ಚರ್ಚೆಯೇ ಆಗಲಿಲ್ಲ. ಅದೇ ರೀತಿ ಗೊದಾಮು ರಿಪೇರಿ ಕೂಡ ಚರ್ಚೆಯೇ ಇಲ್ಲದೆ ಒಪ್ಪಿಗೆ ಪಡೆಯಿತು. ಕೊನೆಗೆ ವಿಚಾರ ಕರೆಂಟ್ ಕಡಿತದಿಂದ ಉಂಟಾಗಿರುವ ನೀರಿನ ಸಮಸ್ಯೆ. ದಿನಕ್ಕೆ ಆರು ಗಂಟೆ ಕರೆಂಟ್ ಇದೆ. ಅದೂ ಸರಿಯಾಗಿ ಬರುತ್ತಿಲ್ಲ. ಹಾಗಾಗಿ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಕೆಲವರು ಸಿಂಗಲ್ ಫೇಸ್ ಕರೆಂಟ್ ನಲ್ಲಿ ಸ್ಟಾರ್ಟರ್ ಉಪಯೋಗಿಸಿಕೊಂಡು ಪಂಪ್ ರನ್ ಮಾಡಲು ಸೂಚಿಸಿದರು. ಡಬ್ಬಲ್ ಫೇಸ್‌ಲ್ಲಿ ಕರೆಂಟ್ ಯಾವಾಗ ಬರುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಒಮ್ಮಲೆ ಕರೆಂಟ್ ಬಂದರೆ ಎಂಜಿನ್ ಸುಟ್ಟು ಹೋಗುತ್ತದೆ. ಆದುದರಿಂದ ಸಿಂಗಲ್ ಫೇಸ್ ನಲ್ಲಿ ಪಂಪ್ ಚಾಲು ಮಾಡುವುದು ಬೇಡ ಎಂದಾಯಿತು.

‘ಫೆಬ್ರವರಿ ತಿಂಗಳಿನಿಂದ ಎಂಟು ಗಂಟೆ ಕರೆಂಟ್ ಇದೆ. ನಮ್ಮ ನೀರು ಬಳಕೆದಾರರು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ಸಮಸ್ಯೆ ಪರಿಹರಿಸಬಹುದೆಂದು’, ತಿಪ್ಪಣ್ಣನವರು ಅಭಿಪ್ರಾಯ ಸೂಚಿಸಿದರು. ‘ಏನು ಹೊಂದಾಣಿಕೆ ಮಾಡಿಕೊಳ್ಳುವುದು. ಈಗಾಗಲೇ ಹೊಂದಾಣಿಕೆ ಮಾಡಿಕೊಂಡು ನಮ್ಮ ನೆಲ್ಲು ಹೊಲಗಳು ಒಣಗುತ್ತಿವೆ,’ ಎಂದು ಕೆಲವು. ಸದಸ್ಯರು ಗೊಣಗಾಡಿದರು. ‘ನೀವು ನೆಲ್ಲು ಬಗ್ಗೆ ಮಾತಾಡುತ್ತೀರಿ ಸರಿ. ಆದರೆ ಶೇಂಗಾಕ್ಕೆ ನೀರು ಬಿಟ್ಟದ್ದನ್ನು ಅರ್ಧಕ್ಕೆ ನಿಲ್ಲಿಸಿ ನೆಲ್ಲಿಗೆ ಬಿಡಬೇಕೆಂದು ಜಗಳ ಮಾಡುವುದು ಯಾವ ನ್ಯಾಯ?’ ಎಂದು ಮತ್ತೆ ಕೆಲವು ಸದಸ್ಯರು ಪ್ರಶ್ನಿಸಿದರು. ನೆಲ್ಲು ಮತ್ತು ಶೇಂಗಾ ಬೆಳೆಗಾರರ ನಡುವೆ ಜಟಾಪಟಿ ಶುರುವಾಯಿತು. ಶೇಂಗಾ ಬೆಳೆಗೆ ಬಿಟ್ಟ ನಂತರವೇ ನೆಲ್ಲು ಬೆಳೆಗಾರರು ತಮ್ಮ ಹೊಲಗಳಿಗೆ ನೀರು ಒಯ್ಯಬೇಕೆಂದು ತಿಪ್ಪಣ್ಣನವರ ವಾದ. ಕೆಲವರು ಶೇಂಗಾ ನೆಲ್ಲು ಎಂಬ ವರ್ಗೀಕರಣ ಬೇಡ ಒಂದು ಪಂಪಿನ ನೀರನ್ನು ಒಂದು ಕಡೆಯ ಹೊಲಕ್ಕೆ ಬಿಡುವ ಮತ್ತೊಂದು ಪಂಪಿನ ನೀರು ಮತ್ತೊಂದು ಕಡೆಗೆ ಹೋಗಲಿ ಎಂದು ವಾದಿಸಿದರು. ಆದರೆ ಅಲ್ಲೂ ಶೇಂಗಾ ಮತ್ತು ನೆಲ್ಲು ಬೆಳೆಗಾರರಿದ್ದಾರೆ. ಅಲ್ಲಿ ಪುನಃದ ಯಾರಿಗೆ ಆದ್ಯತೆ ಎನ್ನುವ ಪ್ರಶ್ನೆ ಬರುತ್ತದೆ ಎಂದು ಆ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿಲ್ಲ. ಮತ್ತೆ ಕೆಲವರು ಬೆಳೆ ಮೇಲೆ ನಿರ್ಧರಿಸುವುದೇ ಬೇಡ. ಸರದಿ ಪ್ರಕಾರ ಬಿಡುವ ಎಂದು ಸಲಹೆ ಇತ್ತರು. ಅಂದರೆ ಶೆಡ್ ಪಕ್ಕದ ಹೊಲದಿಂದ ಸರದಿ ಆರಂಭವಾಗುತ್ತದೆ. ಅದು ತುಂಬಿದ ನಂತರ ಅದರ ಪಕ್ಕದ ಹೊಲಕ್ಕೆ ಹೀಗೆ ತುಂಬುತ್ತ ಕಡೇ ಹೊಲ ತನಕ ಹೋಗುತ್ತದೆ. ಕರೆಂಟ್ ಇರುವುದೇ ಆರು ಗಂಟೆ. ಅದು ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಇಂತಹ ಸ್ಥಿತಿಯಲ್ಲಿ ಸರದಿ ಪ್ರಕಾರ ನೀರು ಕೊಟ್ಟರೆ ಕಡೇ ರೈತ ಕೃಷಿ ಮಾಡಿದ ಹಾಗೆ ಎಂದು ಸರದಿಗೆ ವಿರೋಧ ಬಂತು. ತಿಪ್ಪಣ್ಣನವರು ಸೂಚಿಸಿದ ಶೇಂಗಾ ಫಸ್ಟ್ ಸಲಹೆ ಕಡೆಗೆ ಒಪ್ಪಿತವಾಯಿತು. ಮೀಟಿಂಗ್ ನಂತರ ಅದ್ಯಾಕೆ ಶೇಂಗಾಕ್ಕೆ ಆದ್ಯತೆ ಕೊಡುವ ತೀರ್ಮಾನ ಕೈಗೊಂಡಿರಿ ಎಂದು ಒಬ್ಬ ಸದಸ್ಯರನ್ನು ಕೇಳಿದೆ. ಶೇಂಗಾಕ್ಕೆ ಹದಿನೈದು ಅಥವಾ ಇಪ್ಪತ್ತು ದಿನಕ್ಕೆ ಒಂದು ಬಾರಿ ನೀರು ಬಿಟ್ಟರೆ ಸಾಕು. ಆದರೆ ನೆಲ್ಲಿಗೆ ಕನಿಷ್ಟ ನಾಲ್ಕು ಅಥವಾ ಐದು ದಿನಕ್ಕೊಮ್ಮೆ ನೀರು ಬೇಕು. ಶೇಂಗಾ ಹೊಲ ಭರ್ತಿಯಾಗುವ ಮುನ್ನವೇ ನೀರು ನಿಲ್ಲಿಸಿದರೆ ಇಡಿ ಬೆಳೆಯೇ ನಷ್ಟವಾಗುತ್ತದೆ. ಆದುದರಿಂದ ಶೇಂಗಾ ಬೆಳೆಗಾರರಿಗೆ ನೀರು ಬಳಸುವ ಆದ್ಯತೆ ಎಂದು ವಿವರಿಸಿ ನನ್ನ ಸಂದೇಹ ಪರಿಹರಿಸಿದರು. ಸೊಸೈಟಿ ಹೊಲಗಳ ಅಂಚಿನಲ್ಲಿ ಇರುವ ಕೆಲ ಸದಸ್ಯ ರೈತರ ಹೊಲಗಳನ್ನು ಒತ್ತುವರಿ ಮಾಡಿಕೊಂಡು ಅಥವಾ ಲೀಸ್‌ಗೆ ತೆಗೆದುಕೊಂಡು ಕೃಷಿ ಮಾಡುವ ವಿಚಾರ ಚರ್ಚೆಯಾಯಿತು. ಅವರು ಸೊಸೈಟಿ ನೀರನ್ನು ತಮ್ಮ ಇತರ ಹೊಲಗಳ (ಸೊಸೈಟಿಗೆ ಸೇರಿರದ) ಕೃಷಿಗೆ ಬಳಸುವುದು ಸರಿಯಲ್ಲ. ಅದನ್ನು ನಿಲ್ಲಿಸಬೇಕೆಂದು ಕಾರ್ಯದರ್ಶಿಗೆ ಸೂಚನೆ ನೀಡಲಾಯಿತು. ನೀರು ಮತ್ತು ಲೆಕ್ಕ ಪತ್ರ ಮೀಟಿಂಗ್‌ನ ಶೇಕಡಾ ತೊಂಬತ್ತು ಸಮಯ ತೆಗೆದುಕೊಂಡರೆ ಇತರ ವಿಚಾರಗಳು ಏನೇನೂ ಚರ್ಚೆ ಇಲ್ಲದೆ ಒಪ್ಪಿತವಾದವು.