ಭಾಗ

ಅಧ್ಯಾಯದ ಆರಂಭದಲ್ಲಿ ಪ್ರಭತ್ವ ಮತ್ತು ಸಮುದಾಯ ಬಗ್ಗೆ ಇರುವ ಗೃಹಿತಗಳನ್ನು ತಿಳಿಸಿದ್ದೇನೆ. ಎರಡು ಹಳ್ಳಿಗಳಲ್ಲಿ ನಡೆದ ಸಹಭಾಗಿತ್ವ ಪ್ರಯತ್ನಗಳನ್ನು ವಿವರಿಸಿದ್ದೇನೆ. ಇವುಗಳ ಹಿನ್ನೆಲೆಯಲ್ಲಿ ಮೇಲಿನ ಗೃಹಿಕೆಗಳನ್ನು ಈ ಭಾಗದಲ್ಲಿ ವಿಶ್ಲೇಸಿಲಾಗುವುದು. ಮೊದಲಿಗೆ ಪ್ರಭುತ್ವದ ಪ್ರಶ್ನೆಯನ್ನು ಎತ್ತಿಕೊಳ್ಳೋಣ. ಪ್ರಭುತ್ವ ಬಲಯುತವಾಗಿ ಇದ್ದುದರಿಂದಲೇ ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಸರಿಯಾಗಿ ಬೇರೂರಲು ಆಗಿಲ್ಲ. ಸಮುದಾಯ ಪ್ರಯತ್ನಗಳು ಸರಿಯಾಗಿ ಬೇರೂರಬೇಕಾದರೆ ಪ್ರಭುತ್ವ ಹಿಂದಕ್ಕೆ ಸರಿಯಲೇ ಬೇಕು. ಪ್ರಭುತ್ವದ ಇರುವಿಕೆಯೇ ಅನಾವಶ್ಯ ಎನ್ನುವ ಗೃಹಿಕೆ ಇದೆ. ಆದರೆ ಎರಡು ಹಳ್ಳಿಗಳಲ್ಲಿ ನಡೆದ ಸಹಭಾಗಿತ್ವ ಪ್ರಯತ್ನ ಈ ಗೃಹಿಕೆಗೆ ಭಿನ್ನವಾದ ಚಿತ್ರಣ ಕೊಡುತ್ತಿದೆ. ಮಹಮ್ಮದ್ ನಗರದ ಬೇಸಾಯ ಸಹಕಾರಿ ಸಂಘ ರೂಪುಗೊಳ್ಳುವುದೆ ಹಿಂದೆ ಅಂದಿನ ಪ್ರಭುತ್ವ ಮತ್ತು ಅದು ಸಹಕಾರಿ ಚಳವಳಿಗೆ ಕೊಡುತ್ತಿದ್ದ ಮಹತ್ವದ ಪಾತ್ರ ತುಂಬಾ ಇದೆ. ಶಿವಪುರದ ರೀತಿಯಲ್ಲಿ ಉತ್ತರ ಕರ್ನಾಟಕದ ಇತರ ಹಲವಾರು ಕಡೆಗಳಲ್ಲಿ ಸಾಮೂಹಿಕ ಬೇಸಾಯ ಸಹಕಾರಿ ಸಂಘಗಳು ಶುರುವಾಗಿದ್ದವು. ಅಂದಿನ ಸರಕಾರ ರಾಜ್ಯ ಮಟ್ಟದಲ್ಲಿ ಸಹಕಾರಿ ಚಳವಳಿಯನ್ನು ಒಂದು ದೊಡ್ಡ ಪ್ರಮಾಣದಲ್ಲಿ ಮಾಡಿತ್ತು. ತಾಲ್ಲೂಕು ಮಟ್ಟದಲ್ಲಿ ಸರಕಾರಿ ಅಧಿಕಾರಿಗಳು ಓದು ಬರಹ ಇಲ್ಲದ ಜನರಿಗೆ ಸಹಕಾರಿ ಚಳವಳಿಯ ಲಾಭಗಳನ್ನು ತಿಳಿಹೇಳಿದರು. ಜತೆಗೆ ಪ್ರತಿ ಹಂತದಲ್ಲೂ ರೈತರಿಗೆ ಸಲಹೆಗಳನ್ನು ನೀಡುತ್ತಾ ಸಂಘ ರೂಪುಗೊಳ್ಳಲು ಸಹಕರಿಸಿದ್ದಾರೆ.

ಇದಕ್ಕೆ ಹೋಲಿಸಿದರೆ ಪಾಪಿನಾಯಕನ ಹಳ್ಳಿಯಲ್ಲಿ ಊರವರೇ ಸ್ವತಂತ್ರವಾಗಿ ಸಂಘಟಿತವಾಗಿ ತಮ್ಮ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದರು. ಇಲ್ಲಿ ಪ್ರಭುತ್ವ ಯಾವುದೇ ಪಾತ್ರ ವಹಿಸಿಲ್ಲ. ಆದರೆ ಅದು ಯಶಸ್ವಿಯಾಗಲಿಲ್ಲ. ಅದು ವಿಫಲವಾಗುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒಂದು ಹಳ್ಳಿಯಲ್ಲಿನ ವಿವಿಧ ಸಮುದಾಯಗಳನ್ನು ಒಟ್ಟು ಸೇರಿಸಲು ಪೂರಕವಾದ ಸಾಂಘಿಕ ಚೌಕಟ್ಟಿನ ಕೊರತೆ. ಸಹಭಾಗಿತ್ವದ ಬಹುಮುಖ್ಯ ಲಕ್ಷಣ ಸಂಪನ್ಮೂಲ ಬಳಕೆದಾರರು ಅದರ ಬಳಕೆ ಮತ್ತು ನಿರ್ವಹಣೆ ಕುರಿತ ನಿರ್ಧಾರದಲ್ಲಿ ಪಾಲುಗೊಳ್ಳುವುದು. ಅದು ಸಾಧ್ಯವಾಗಬೇಕಾದರೆ ಒಂದು ಸಾಂಘಿಕ ಚೌಕಟ್ಟಿನ ಅವಶ್ಯಕತೆಯಿದೆ. ಮಹಮ್ಮದ್ ನಗರದಲ್ಲಿ ಆ ಕೆಲಸವನ್ನು ಸಹಕಾರಿ ಸಂಘ ಮಾಡಿದೆ. ಸಂಘದ ಸದಸ್ಯರು ನೀರು ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ. ಎಲ್ಲ ಸದಸ್ಯರು ನೇರವಾಗಿ ಪಾಲುಗೊಳ್ಳದಿರಬಹುದು. ಆದರೆ ಪರೋಕ್ಷವಾಗಿ ತಮ್ಮ ಕಾರ್ಯಕಾರಿ ಸಮಿತಿ ಸದಸ್ಯರ ಮೂಲಕ ತಮ್ಮ ಆಶಯಗಳನ್ನು ವ್ಯಕ್ತ ಪಡಿಸುತ್ತಾರೆ. ಸಂಘದ ಆಡಳಿತ ಮಂಡಳಿ ಸಾಮಾನ್ಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದುದನ್ನು ನೋಡಿದ್ದೇನೆ. ಇಷ್ಟಾಗಿಯೂ ಸಾಮಾನ್ಯ ಸದಸ್ಯರ ಈ ಕ್ರಮದ ಪಾಲುಗೊಳ್ಳುವಿಕೆಯನ್ನು ಒಂದು ದೊಡ್ಡ ಸಕರಾತ್ಮ ವಿಚಾರವೆಂದು ತಿಳಿಯಬೇಕಿಲ್ಲ. ಯಾಕೆಂದರೆ ಸಭೆ ಕೊನೆಗೆ ತೀರ್ಮಾನಕ್ಕೆ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವು ವ್ಯವಸ್ಥೆ ಇದೆಯೇ? ಮತ್ತು ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆಯೇ?ಎನ್ನುವುದು ಮುಖ್ಯ. ಪಾಪಿನಾಯಕನ ಸಂಘಕ್ಕೆ ಹೋಲಿಸಿದರೆ ಮಹಮ್ಮದ್ ನಗರದ ಸಂಘದಲ್ಲಿ ಈ ಎರಡೂ ಅಂಶಗಳು ಇದ್ದವು ಮಾತ್ರವಲ್ಲ ಅವು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದವು.

ಪ್ರಭುತ್ವ ಮತ್ತು ಸಾಂಘಿಕ ಚೌಕಟ್ಟಿನಂತೆ ಸಹಭಾಗಿತ್ವವನ್ನು ಪ್ರಭಾವಿಸುವ ಮತ್ತೊಂದು ಅಂಶ ಪಾರದರ್ಶಕತೆ ವಿವಿಧ ಹಂತಗಳಲ್ಲಿ ಅಗತ್ಯ. ಆಡಳಿತ ಸದಸ್ಯರ ಆಯ್ಕೆ. ಆಡಳಿತ ಸಮಿತಿ ಸಭೆ ನಡೆಸುವುದು, ಅಲ್ಲಿನ ನಿರ್ಣಯಗಳನ್ನು ಜಾರಿ ತರುವುದು ಇತ್ಯಾದಿಗಳಲ್ಲಿ ಪಾರದರ್ಶಕತೆ ಇರಬೇಕು. ಈ ವಿಚಾರದಲ್ಲಿ ಪಿ.ಕೆ.ಹಳ್ಳಿ ಮತ್ತು ಮಹಮ್ಮದ್ ನಗರದ ಸಂಘಗಳ ಮಧ್ಯೆ ವಿಶೇಷ ಭಿನ್ನತೆ ಇಲ್ಲ. ಪಿ.ಕೆ.ಹಳ್ಳಿಯ ಸಂಘ ಒಂದು ವರ್ಷವನ್ನು ಪೂರೈಸಿಲ್ಲ. ಆದುದರಿಂದ ಸದಸ್ಯರ ಮಹಾಸಭೆ ನಡೆಸುವ ಪ್ರಶ್ನೆಯೇ ಇಲ್ಲ. ಮಹಮ್ಮದ್ ನಗರದಲ್ಲಿ ವಾರ್ಷಿಕ ಮಹಾಸಭೆ ನಡೆಯುತ್ತದೆ. ಅಲ್ಲಿ ಹಿಂದಿನ ವರ್ಷ ಮಾಡಿದ ಕೆಲಸಗಳ ವರದಿ ವಾಚನ ಇರುತ್ತದೆ. ಲೆಕ್ಕ ಪರಿಶೋಧಕರಿಂದ ಪರೀಕ್ಷಿಸಲ್ಪಟ್ಟ ಲೆಕ್ಕ ಪತ್ರಗಳನ್ನು ಮಂಡಿಸಿ ಸದಸ್ಯರ ಒಪ್ಪಿಗೆ ಪಡೆಯಬೇಕಾಗುತ್ತದೆ. ಕಾರ್ಯ ಕಾರಿ ಸಮಿತಿ ಸದಸ್ಯರ ಆಯ್ಕೆ ವಿಚಾರದಲ್ಲಿ ಎರಡೂ ಸಂಘಗಳು ಪಾರದರ್ಶಕತೆ ಹೊಂದಿವೆ. ಎರಡೂ ಕಡೆ ಜವಾಬ್ದಾರಿ ಹೊರಲು ಜನ ಮುಂದೆ ಬರುವುದಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಮಹಮ್ಮದ್ ನಗರದ ಸಂಘ. ಇಲ್ಲಿಯವರೆಗೆ ಕಾರ್ಯಕಾರಿ ಸಮಿತಿ ಸದಸ್ಯರು ಆಯ್ಕೆಗಾಗಿ ಚುನಾವಣೆ ನಡೆದಿಲ್ಲ. ಹಿರಿಯ ಸದಸ್ಯರು ಕೆಲವರನ್ನು ಸಮಿತಿ ಸದಸ್ಯರಾಗಬಹುದೆಂದು ಸೂಚಿಸುತ್ತಾರೆ. ಅವರೇ ಸದಸ್ಯರು ಆಗುತ್ತಾರೆ. ಆ ರೀತಿ ಆಯ್ಕೆ ಮಾಡುವಾಗ ಜಾತಿ ಅಥವಾ ಇತರ ಸಾಮಾಜಿಕ ಸಂಗತಿಗಳಿಗಿಂತ ವ್ಯಕ್ತಿಯ ಗುಣ ನಡೆತ, ಪ್ರಾಮಾನಿಕತೆ ಇತ್ಯಾದಿಗಳೇ ಮುಖ್ಯ. ಅದೇ ರೀತಿ ಎರಡೂ ಕಡೆ ಪ್ರತಿ ಸಮುದಾಯದಿಂದ ಕನಿಷ್ಠ ಒಬ್ಬ ಸದಸ್ಯನಾದರು ಆಯ್ಕೆ ಆಗುವಂತೆ ನೋಡಿಕೊಳ್ಳಲಾಗುತ್ತದೆ. ಮಹಮ್ಮದ್ ನಗರದಲ್ಲಿ ಪ್ರಮುಖರ ಈ ಕ್ರಮದ ಆಯ್ಕೆ ವಿರುದ್ಧ ಇಷ್ಟರವರೆಗೆ ಯಾರು ಅಸಮಧಾನ ಸೂಚಿಸಿಲ್ಲ.

ನಿರ್ಣಯಗಳನ್ನು ಜಾರಿ ತರುವ ವಿಚಾರದಲ್ಲಿ ಪಿ.ಕೆ.ಹಳ್ಳಿ ಸಂಘ ಅಷ್ಟು ಕಟ್ಟುನಿಟ್ಟು ಇದ್ದಂತೆ ತೋರುವುದಿಲ್ಲ. ಪ್ರತಿ ಕಾರ್ಯಕಾರಿ ಸದಸ್ಯರು ಹತ್ತು ಬಳಕೆದಾರರನ್ನು ಸೇರಿಸುವ (ಒಂದು ನಿರ್ದಿಷ್ಟ ಮೊತ್ತದ ಸದಸ್ಯತನದ ಜತೆಗೆ), ಸತ್ಯ ನಾರಾಯಣ ಪೂಜೆಯನ್ನು ಕೆರೆ ಪಾತ್ರದಲ್ಲಿ ಮಾಡುವ, ಮುಂತಾದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಲೇ ಇಲ್ಲ. ನಿರ್ಣಯಗಳನ್ನು ಜಾರಿ ತರುವ ವಿಚಾರದಲ್ಲಿ ಮೇಲ್ನೋಟಕ್ಕೆ ಮಹಮ್ಮದ್ ನಗರದ ಸಂಘ ಕೂಡ ಕಟ್ಟುನಿಟ್ಟು ಇದ್ದಂತೆ ಕಾಣುವುದಿಲ್ಲ. ಉದಾಹರೆಣೆಗೆ ಮನೆ ಬಾಡಿಗೆ ಸಂಗ್ರಹಿಸುವ ವಿಚಾರ ಅಥವಾ ನೀರಿನ ಹಂಚಿಕೆ ಕುರಿತ ನಿಯಮ ಪಾಲನೆ ವಿಚಾರವನ್ನು ತೆಗೆದುಕೊಳ್ಳಬಹುದು. ಆದರೆ ಇಲ್ಲಿ ಸಂಘ ಹಿಂದುಳಿದಿದೆ ಎನ್ನುವ ತೀರ್ಮಾನಕ್ಕೆ ಬರುವ ಮುನ್ನ ಕೆಲವು ವಿಚಾರಗಳನ್ನು ಗಮನಿಸಬೇಕಾಗಿದೆ. ಕಟ್ಟು ನಿಟ್ಟಾಗಿ ಜಾರಿ ತರುವುದೆನ್ನುವಾಗ ನಾವು ನಮ್ಮ ಕಲ್ಪನೆಯ ಕಟ್ಟುನಿಟ್ಟಿನ ಮಾನದಂಡದಲ್ಲಿ ಅವರ ವ್ಯವಹಾರವನ್ನು ಅಳೆಯುತ್ತೇವೆ. ಉದಾಹರಣೆಗೆ ರೈತರೊಬ್ಬರು ನೀರು ಹಂಚಿಕೆ ಜಗಳ ಅಧ್ಯಕ್ಷರ ಹತ್ತಿರ ತಂದಾಗ ನಾನು ಒಂದು ವಿಧದ ಜಗಳ ತೀರ್ಮಾನವನ್ನು ಊಹಿಸಿದ್ದೆ. ಅದರ ಪ್ರಕಾರ ತಕರಾರು ಇರುವ ಇಬ್ಬರು ರೈತರನ್ನು ಕರೆಸಿ, ಅವರಿಬ್ಬರು ವಾದಗಳನ್ನು ಕೇಳಿ ಅಥವಾ ತಾನೇ ಹೊಲಗಳಿಗೆ ಕುದ್ದಾಗಿ ಹೋಗಿ ಪರೀಕ್ಷಿಸಿ ಅಧ್ಯಕ್ಷರು ತೀರ್ಮಾನಕ್ಕೆ ಬರುತ್ತಾರೆ ಎಂದು ತಿಳಿದಿದ್ದೆ. ಆದರೆ ಅವರು ಹೋಗಲಿಲ್ಲ. ದಿನ ನಿತ್ಯ ನೋಡುವ ರೈತರ ನಡವಳಿಕೆ ಬಗ್ಗೆ ಅವರಿಗಿರುವ ತಿಳುವಳಿಕೆ, ಜತೆಗೆ ಆ ಸಮಸ್ಯೆ ಖಂಡಿತವಾಗಿಯೂ ವಿಶೇಷ ರೂಪದಲ್ಲ ಮತ್ತು ಅದು ಸುಲಭದಲ್ಲಿ ಪರಿಹಾರವಾಗುತ್ತದೆ ಎನ್ನುವ ವಿಶ್ವಾಸ ಇತ್ಯಾದಿಗಳ ಅಧ್ಯಕ್ಷರು ಹೋಗದಿರಲು ಕಾರಣವೆಂದು ಅವರ ಮಾತುಗಳಿಂದಲೇ ತಿಳಿಯಬಹುದು. ಅದೇ ರೀತಿ ಮನೆ ಬಾಡಿಗೆ ಸಂಗ್ರಹಿಸುವ ವಿಚಾರದಲ್ಲೂ ಸಂಘ ಅದನ್ನು ಅಷ್ಟು ಸಿರೀಯಸ್ ಆಗಿ ತೆಗೆದುಕೊಂಡಿಲ್ಲ. ತೆಗೆದುಕೊಂಡರೆ ಸಂಘ ವಸೂಲು ಮಾಡುತ್ತದೆ. ಇದನ್ನು ಸಂಘದ ಹಿಂದಿನ ಹೋರಾಟಗಳಿಂದ ತಿಳಿಯಬಹುದು. ಜತೆಗೆ ಪ್ರತಿ ಬೆಳೆಗೆ ನಿಗದಿಯಾದ ಲಾವಣಿ ಸಂಗ್ರಹದಲ್ಲೂ ಸಂಘ ತುಂಬಾ ಕಟ್ಟುನಿಟ್ಟಾಗಿದೆ. ವರ್ಷಕ್ಕೆ ಒಬ್ಬ ರೈತನಿಂದ ಎರಡು ಬೆಳೆಗೆ ಎಂಟು ನೂರು ಸಂಗ್ರಹಿಸುವ ಸಂಘಕ್ಕೆ ಹತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸುವುದು ಸರಿಯಲ್ಲ.

ಸಮುದಾಯ ಮತ್ತು ಸಹಭಾಗಿತ್ವ ಸಂಬಂಧ ಕುರಿತಂತೆ ಇರುವ ಗ್ರಹಿತಗಳನ್ನು ನೋಡುವ. ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಅತಿ ಸುಲಭದಲ್ಲಿ ಬೇರೂರಬಹುದು ಎನ್ನುವ ಗ್ರಹಿಕೆ ಇದೆ. ಯಾಕೆಂದರೆ ನಮ್ಮದು ಮೂಲತಃ ಒಂದು ಸಮುದಾಯದ ನೆಲೆಯಲ್ಲಿ ಗುರುತಿಸಿಕೊಳ್ಳುವ ಸಮಾಜ. ಇಲ್ಲಿ ಪಶ್ಚಿಮದಲ್ಲ ಇದ್ದಂತೆ ವ್ಯಕ್ತಿಗಳು ಇಲ್ಲ; ಸಮುದಾಯಗಳು ಮಾತ್ರ ಇರುವುದು. ಈ ಹಿನ್ನೆಲೆಯಲ್ಲಿ ಸಮುದಾಯಗಳನ್ನು ರೂಪಿಸುವ ಮತ್ತು ಆ ಮೂಲಕ ಅವುಗಳನ್ನು ಆಧುನಿಕ ಅವಶ್ಯಕತೆಗಳಿಗೆ ತಯಾರುಗೊಳಿಸುವ ಪ್ರಶ್ನೆಯೇ ಇಲ್ಲ. ಜತೆಗೆ ಇಲ್ಲಿ ಸಮುದಾಯ ಒಂದು ಘರ್ಷಣೆ ಇಲ್ಲದ, ಸಮಸ್ಯೆರಹಿತ ಸ್ಪೇಸ್ ಆಗಿದೆ. ಇಂತಹ ಸಮುದಾಯಗಳು ಸ್ವತಂತ್ರವಾಗಿ ಒಟ್ಟು ಸೇರಿ ತಮ್ಮ ಸಮಸ್ಯೆಗಳಿಗೆ ತಾವೆ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಇದು ಸರಿಯಲ್ಲ ಎನ್ನುವುದು ಪಿ.ಕೆ.ಹಳ್ಳಿಯ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಯುವಕರ ಪ್ರಯತ್ನ ಒಂದು ಹಂತ ತಲುಪದಂತೆ ನೋಡಿಕೊಳ್ಳುವುದರಲ್ಲಿ ಅಲ್ಲಿನ ಜಾತಿ ರಾಜಕೀಯದ ಪಾತ್ರ ತುಂಬಾ ಇದೆ. ಮೇಲ್ನೋಟಕ್ಕೆ ಅಲ್ಲಿಯ ಹಿರಿಯರು ಯುವಕರ ಪ್ರಯತ್ನಗಳಿಗೆ ಸ್ಪಂದಿಸದಿರುವುದು ಗೊತ್ತಾಗುತ್ತದೆ. ಅದರಿಂದಲು ಮುಖ್ಯವಾಗಿ ಅಲ್ಲಿಯ ಜಾತಿ ರಾಜಕೀಯ ಪ್ರಮುಖ ಪಾತ್ರ ವಹಿಸಿದೆ. ಮಂಡಲ ಪಂಚಾಯತ್ ಬರುವ ವರೆಗೂ ಅಲ್ಲಿ ಒಂದಲ್ಲ ಒಂದು ಲಿಂಗಾಯತ ಕುಟುಂಬಗಳು ನಾಯಕತ್ವ ಕೆಳ ಜಾತಿಯವರಿಗೆ ಹೋಗಿದೆ. ಇದನ್ನು ನೇರವಾಗಿ ಪ್ರತಿಭಟಿಸಲು ಸಾಧ್ಯವಿಲ್ಲ. ಆದರೆ ೨೦೦೦ದ ವರೆಗು ಅಲ್ಲಿ ಪಂಚಾಯತ್‌ಗೆ ಚುನಾವಣೆ ನಡೆದಿಲ್ಲ. ಸದಸ್ಯರು ಮತ್ತು ಅಧ್ಯಕ್ಷರ ಅವಿರೋಧ ಆಯ್ಕೆ ನಡೆಯುತ್ತಿತ್ತು. ಊರಿನ ಪ್ರಮುಖರು ಯಾವ ಜಾತಿಯಿಂದ ಯಾರು ಅಭ್ಯರ್ಥಿ ಆಗಬೇಕೆಂದು ನಿರ್ಧರಿಸುತ್ತಾರೆ. ಈ ಕ್ರಮದಲ್ಲಿ ಸಾಂಪ್ರದಾಯಿಕ ನಾಯಕತ್ವ ಪರೋಕ್ಷವಾಗಿ ತನ್ನ ಹಿಡಿತವನ್ನು ಮುಂದುವರಿಸಿದೆ (ಚಂದ್ರ ಪೂಜಾರಿ, ೨೦೦೦). ಲಿಂಗಾಯತರ ನಂತರ ಕುರುಬರು ಮತ್ತು ನಾಯಕರು ಊರಿನ ನಾಯಕತ್ವಕ್ಕೆ ಪ್ರತಿಸ್ಪರ್ಧಿಗಳು. ಅಧಿಕಾರಕ್ಕಾಗಿ ಇವರ ನಡುವೆ ನಡೆಯುವ ಹೋರಾಟ ಅಲ್ಲಿನ ಸಹಭಾಗಿತ್ವವನ್ನು ಹೇಗೆ ಪ್ರಭಾವಿಸಿದೆ ಎನ್ನುವುದನ್ನು ಮೇಲಿನ ವಿವರಣೆ ಸ್ಪಷ್ಟಪಡಿಸುತ್ತದೆ.

ಅಲ್ಲಿನ ವಿವಿಧ ಜಾತಿಗಳು ಮತ್ತು ಅವುಗಳ ನಡುವಿನ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಸಂಬಂಧಗಳು ಸಮಾನತೆಯ ನೆಲೆಯಲ್ಲಿ ರೂಪಿತವಾಗಿಲ್ಲ. ಒಂದು ಗುರುತು ಮತ್ತೊಂದರ ಮೇಲೆ ಯಜಮಾನಿಕೆ ಸಾಧಿಸಲು ಪ್ರಯತ್ನಿಸುತ್ತಲೇ ಇರುತ್ತದೆ. ಒಂದು ಗುರುತಿನ ನೆಲೆಯಲ್ಲಿ ಗುರುತಿಸಿಕೊಳ್ಳುವುದೆಂದರೆ ಅದು ಯಾವತ್ತು ಮತ್ತೊಂದು ಗುರುತನ್ನು ದೃಷ್ಟಿಯಲ್ಲಿ ಇಟ್ಟುಕೊಂಡೆ ನಡೆಯುವ ಪ್ರಕ್ರಿಯೆ. ಇದಕ್ಕಾಗಿ ಕೆಲವು ಸಂದರ್ಭಗಳಲ್ಲಿ ಮತ್ತೊಂದನ್ನು ನೆಗೆಟಿವ್ ಆಗಿ ಚಿತ್ರಿಸುವ ಪ್ರಯತ್ನಗಳೂ ಇವೆ. ಮೇಲು ಜಾತಿಯವರು ತಮ್ಮ ಯಜಮಾನಿಕೆಯನ್ನು ಕೇವಲ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾತ್ರ ಚಲಾಯಿಸುವುದಿಲ್ಲ. ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಯಜಮಾನಿಕೆಯ ಮುಂದುವರಿಕೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ ಕೂಡ ಅಗತ್ಯ. ಅದಕ್ಕಾಗಿ ಕೆಳ ವರ್ಗದವರು ಸಂಪನ್ಮೂಲದಲ್ಲಿ ಮಾತ್ರ ಬಡವರಲ್ಲ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಡವರೆಂಬ ಚಿತ್ರಣ ಸದಾ ಬಿಂಬಿತವಾಗುತ್ತದೆ. ಅದು ಹರಿಜನರನ್ನು ಹೊಟೇಲಿಗೆ ಸೇರಿಸುವ ಪ್ರಶ್ನೆ ಇರಬಹುದು, ಗುಡಿಗೆ ಪ್ರವೇಶ ನಿರಾಕರಿಸುವ ವಿಚಾರ ಇರಬಹುದು. ಕೆಳ ಜಾತಿಯವರ ಜತೆ ಊಟ, ಪಾನೀಯ ತೆಗೆದುಕೊಳ್ಳುವ ವಿಚಾರ ಇರಬಹುದು, ಜಾತ್ರೆಗಳಲ್ಲಿ ಜಾತಿಗನುಸಾರ ಕೆಲಸ ಕಾರ್ಯಗಳ ಹಂಚುವಿಕೆ ಇರಬಹುದು. ಇಲ್ಲೆಲ್ಲಾ ಸೇರಿಸಿಕೊಳ್ಳುವ ಮತ್ತು ಹೊರಗಿಡುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಹೀಗೆ ಒಂದು ನಿರ್ದಿಷ್ಟ ಜಾತಿಗೆ (ಗುರುತು) ಸೇರಿದ್ದೇನೆ ಎನ್ನುವ ಮೂಲಕ ತನ್ನ ತನ ಸಾಧಿಸಲು ಹೋರಾಟ ಆರಂಭವಾಗುತ್ತದೆ. ಆ ಹೋರಾಟ ಯಾವುದೋ ನಿರ್ವಾತ ವಾತಾವರಣದಲ್ಲಿ ನಡೆಯುವುದಿಲ್ಲ. ಒಂದು ಸಾಮಾಜಿಕ ಪರಿಸರದಲ್ಲಿ ನಡೆಯುತ್ತದೆ. (ಚಂದ್ರ ಪೂಜಾರಿ,೨೦೦೦).

ಮಹಮ್ಮದ್ ನಗರದ ಸಂಘ ಯಶಸ್ಸು ಕಾಣಬೇಕಾದರೆ ಅಲ್ಲಿ ಒಂದೇ ಜಾತಿಗೆ ಸೇರಿದವರು ಇರಬೇಕು ಅಥವಾ ಯಾವುದೋ ಒಂದು ಜಾತಿಯ ಸದಸ್ಯರ ಸಂಖ್ಯೆ ಹೆಚ್ಚಿರಬೇಕು ಎನ್ನುವ ಗುಮಾನಿ ಬರಬಹುದು. ಆದರೆ ವಸ್ತು ಸ್ಥಿತಿ ಆ ರೀತಿ ಇಲ್ಲ. ಇಲ್ಲೂ ವಿವಿಧ ಸಾಮಾಜಿಕ ಹಿನ್ನೆಲಯಿಂದ ಸದಸ್ಯರು ಬಂದಿದ್ದಾರೆ. ೧೯೬೦ರಲ್ಲಿ ಸೊಸೈಟಿ ಆರಂಭವಾದಾಗ ಇದ್ದ ೨೭ ಸದಸ್ಯರ ಸಾಮಾಜಿಕ ಹಿನ್ನೆಲೆ ಇಂತಿದೆ. ೫ ಹರಿಜನರು, ೧೨ ಕುರುಬರು, ೨ ನಾಯಕರು, ೩ ಲಿಂಗಾಯಿತರು, ೧ ಬ್ರಾಹ್ಮಣರು, ಮತ್ತು ೪ ಆಂಧ್ರದವರು. ಅವರಲ್ಲಿ ಕೆಲವರು ಮಧ್ಯದಲ್ಲಿ ಬಿಟ್ಟು ಹೋದರು. ನಂತರ ಕೆಲವು ಹೊಸ ಸದಸ್ಯರು ಬಂದರು. ಅಂತಿಮವಾಗಿ ಇಂದು ಸಂಘದಲ್ಲಿ ೩ ಹರಿಜನ, ೨೨ ಕುರುಬ, ೮ ನಾಯಕ, ೮ ಲಿಂಗಾಯತ, ೪ ಮುಸ್ಲಿಮ, ೬ ಆಂಧ್ರದ, ೨ ಜೈನ ಮತ್ತು ೧ ಬ್ರಾಹ್ಮಣ ಕುಟುಂಬಗಳಿವೆ. ಸದಸ್ಯರ ಸಾಮಾಜಿಕ ಹಿನ್ನಲೆ ವಿಭಿನ್ನವಾಗಿದ್ದರೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯಲ್ಲಿ ಅದು ಅಷ್ಟಾಗಿ ಪ್ರಭಾವ ಬೀರಿಲ್ಲ. ಅದಕ್ಕೆ ಬೇರೆ ಬೇರೆ ವಿವರಣೆಗಳನ್ನು ಕೊಡಬಹುದು. ಮುಖ್ಯವಾಗಿ ಸದಸ್ಯರ ಸಂಖ್ಯೆ ಕಡಿಮೆ ಇರುವುದು ಮತ್ತು ಅವರು ಇತರರಿಂದ ಪ್ರತ್ಯೇಕ ಇರುವುದು ಇತರ ಗ್ರಾಮೀಣ ಪ್ರದೇಶದಲ್ಲಿ ಕಾಣುವ ಜಾತಿ ರಾಜಕೀಯ ಇಲ್ಲಿ ಇರದಿರಲು ಕಾರಣವೆಂದು ಹೇಳಬಹುದು. ಒಂದು ವಿಧದಲ್ಲಿ ಅದು ಸರಿ ಇರಬಹುದು. ಅವರು ತಮ್ಮ ಹುಟ್ಟೂರನ್ನು ಬಿಟ್ಟು ಬಂದವರು. ಇಲ್ಲಿ ಕೂಡ ಸುಮಾರು ಅರ್ಧದಷ್ಟು ಜನ ಕವಳಿಯಲ್ಲೇ ವಾಸವಾಗಿದ್ದಾರೆ. ಕವಳಿ ಹಿಂದಿನ ಯಾವುದೇ ಹಳ್ಳಿಯ ಮುಂದುವರಿಕೆ ಅಲ್ಲ. ಬದಲಿಗೆ ಸೊಸೈಟಿಯವರಿಂದಲೇ ಶುರುವಾದ ಮತ್ತು ಅವರು ಮಾತ್ರ. ಇರುವ ಪುಟ್ಟ ಹಳ್ಳಿ, ಹಳ್ಳಿ ಎನ್ನುವುದು ಸರಿಯಾಗಲಿಕ್ಕಿಲ್ಲ; ಮನೆಗಳ ಗುಂಪು ಎನ್ನುವುದು ಸರಿಯಾಗಬಹುದು. ಮತ್ತೊಂದು ದೃಷ್ಟಿಯಿಂದ ನೋಡಿದರೆ ಇದು ಸರಿಯಾದ ವಿವರಣೆ ಅಲ್ಲ. ಯಾಕೆಂದರೆ ಸದಸ್ಯರ ನಡುವೆ ಎಲ್ಲ ವಿಧದ ಸಾಮಾಜಿಕ ಅಥವಾ ಸಾಂಸ್ಕೃತಿಕ ಸಂಬಂಧಗಳಿಲ್ಲ. ಸದಸ್ಯರೆಲ್ಲ ಒಟ್ಟು ಸೇರುವುದು ವಾರ್ಷಿಕ ಮಹಾಸಭೆಗೆ ಮಾತ್ರ. ಉಳಿದ ಸಂದರ್ಭದಲ್ಲಿ ಅವರ ಮಧ್ಯೆ ಪರಿಚಿತರ ಸಂಬಂಧ ಮಾತ್ರ ಇದೆ. ಹೀಗಾಗಿ ಸಾಮಾಜಿಕ ಅವಶ್ಯಕತೆಗಳಿಗಾಗಿ ಸಂಘದ ಸದಸ್ಯರು ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ತಮ್ಮ ಜಾತಿಯ ಜನರ ಜತೆ ಸಂಬಂಧ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ಆ ಸಂಬಂಧಗಳ ಪ್ರಭಾವದಿಂದ ಅವರು ಜಾತಿ ರಾಜಕೀಯ ಮಾಡಬಹುದಿತ್ತು. ಜತೆಗೆ ಸೊಸೈಟಿಯ ಬಹುತೇಕ ಮಂದಿ (೩೫ ಸದಸ್ಯರು) ಶಿವಪುರದಲ್ಲೇ ಮನೆ ಮಾಡಿದ್ದಾರೆ. ಅವರು ಆ ಹಳ್ಳಿಯ ಭಾಗವಾಗಿದ್ದಾರೆ. ಅಲ್ಲಿ ಎಲ್ಲ ಹಳ್ಳಿಗಳಲ್ಲಿ ಇರುವಂತೆ ಜಾತಿ ರಾಜಕೀಯ ಇದೆ. ಅದರ ಪ್ರಭಾವ ಸಂಘದ ವ್ಯವಹಾರದಲ್ಲಿ ಆಗಬೇಕಿತ್ತು. ಆದರೆ ಆಗಿಲ್ಲ. ಇದರ ಅರ್ಥ ಸಂಘದ ವ್ಯವಹಾರದಲ್ಲಿ ಯಾವತ್ತು ರಾಜಕೀಯ ಇರಲಿಲ್ಲವೆಂದಲ್ಲ. ಹಲವಾರು ದಶಕಗಳ ಇತಿಹಾಸ ಇರುವ ಸಂಘ ಸಾಕಷ್ಟು ಪ್ರಯೋಗಗಳನ್ನು ಮಾಡಿದೆ. ಬೇಕಾದಷ್ಟು ಸಾರಿ ಜಾತಿ ಅಂಶ ಬಂದಿದೆ ಮತ್ತು ಅದರಿಂದ ಸಾಕಷ್ಟು ಕೈ ಸುಟ್ಟುಕೊಂಡಿದ್ದಾರೆ. ಆದುದರಿಂದಲೇ ಇಂದು ಒಬ್ಬ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಾಗಬೇಕಾದರೆ ಆತನ ಸಾಮಾಜಿಕ ಹಿನ್ನೆಲೆಗಿಂತ ಆತನ ಪ್ರಮಾಣಿಕತೆ ಮತ್ತು ಸಂಘದ ವ್ಯವಹಾರದ ಬಗ್ಗೆ ಆತನ ತಿಳುವಳಿಕೆ ಮುಖ್ಯವಾಗುತ್ತದೆ.

ಹಳ್ಳಿಯ ವಿವಿಧ ಸಮುದಾಯಗಳ ಸಮುದಾಯತ್ವವನ್ನು ಪ್ರಭಾವಿಸುವ ಮತ್ತೊಂದು ಅಂಶ ಸದಸ್ಯರ ಭೂ ಹಿಡುವಳಿ. ಪಿ.ಕೆ.ಹಳ್ಳಿಯಲ್ಲಿನ ಭೂ ಹಿಡುವಳಿ ತುಂಬ ಅಸಮಾನವಾಗಿದೆ. ಲಿಂಗಾಯತರು ಪ್ರಮುಖ ಭೂಮಾಲಿಕರು. ಇತರರಿಗೂ ಜಮೀನು ಇದೆ. ಆದರೆ ಅದು ಕಡಿಮೆ ಪ್ರಮಾಣದಲ್ಲಿ. ಮಹಮ್ಮದ್ ನಗರದಲ್ಲಿ ಎಲ್ಲ ಭೂಮಿ ಸಂಘಕ್ಕೆ ಸೇರಿದೆ. ಬೇಸಾಯಕ್ಕಾಗಿ ಸದಸ್ಯರಿಗೆ ಕಬ್ಜಾ ಕೊಡಲಾಗಿದೆ. ಸದಸ್ಯರು ಸಾಮೂಹಿಕವಾಗಿ ಜಮೀನಿನ ಮಾಲಿಕರು; ಆದರೆ ವ್ಯಕ್ತಿಗತವಾಗಿ ಅಲ್ಲ. ಇಷ್ಟು ಕಾಲ ಮುಂದುವರಿಯುವಲ್ಲಿ ಈ ಅಂಶ ಮುಖ್ಯ ಎಂದು ವಾದಿಸಬಹುದು. ಆದರೆ ಈ ಸಂಘ ಸ್ಥಾಪನೆಯಾದ ಕಾಲದಲ್ಲೇ ಸುತ್ತಮುತ್ತ ಹಳ್ಳಿಗಳಲ್ಲಿ ಇದೇ ರೀತಿಯ ಸಹಕಾರಿ ಸಾಮೂಹಿಕ ಬೇಸಾಯ ಸಂಘಗಳು ಇದ್ದವು. ಅವುಗಳು ಯಾವೂ ಕೂಡ ಸಹಕಾರಿ ಸಂಘಗಳಾಗಿ ಉಳಿದಿಲ್ಲ. ಪ್ರತಿಯೊಂದರಲ್ಲೂ ಸದಸ್ಯರು ಸಂಘವನ್ನು ಮುಚ್ಚಿ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಅಷ್ಟಾಗ್ಯೂ ಒಂದೇ ಪ್ರಮಾಣದ ಹಿಡುವಳಿ ಪ್ರಭಾವ ಬೀರಿಲ್ಲವೆಂದು ವಾದಿಸುವುದು ಸರಿಯಲ್ಲ. ರೈತರ ದಿನ ನಿತ್ಯದ ಸಂಬಂಧವನ್ನು ಪ್ರಭಾವಿಸುವ ಹಲವಾರು ಸಂಗತಿಗಳು ಭೂ ಹಿಡುವಳಿ ಮೇಲೆ ನಿಂತಿದೆ. ಯಜಮಾನಿಕೆ, ಶೋಷಣೆ, ಇತ್ಯಾದಿಗಳು ನಿಂತಿರುವುದೇ ಭೂ ಹಿಡುವಳಿ ಮೇಲೆ. ಆದುದರಿಂದ ಒಂದೇ ಪ್ರಮಾಣ ಭೂಮಿ ಇರುವುದು ಸಂಘದ ಯಶಸ್ಸಿಗೆ ಬಹು ಮುಖ್ಯ ಪೂರಕ ಅಂಶವೆಂದು ಪರಿಗಣಿಸಬಹುದು. ಕೊನೆಯದಾಗಿ ಹಲವಾರು ವರ್ಷಗಳ ಸಹಕಾರದ ಪ್ರಯೋಗ ಸಮುದಾಯದ ಸಹಭಾಗಿತ್ವನ್ನು ಪ್ರಭಾವಿಸುತ್ತದೆ. ಪಿ.ಕೆ.ಹಳ್ಳಿಯಲ್ಲಿ ಸಂಘ ಆರಂಭದಿಂದಲೇ ಕುಂಟುತ್ತ ತೆವಳುತ್ತ ಸಾಗಿತ್ತು. ಅದು ಬೆಳೆದು ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವ ದಿನವೇ ಬರಲಿಲ್ಲ. ಇದು ಸಂಘದ ಮೇಲೆ ಊರಿನವರ ಮತ್ತು ಸದಸ್ಯರ ಭರವಸೆಯನ್ನು ಕಡಿಮೆ ಮಾಡಿದೆ. ಇದಕ್ಕೆ ಹೋಲಿಸಿದರೆ ಮಹಮ್ಮದ್ ನಗರದಲ್ಲಿ ಸಂಘಟಿತವಾಗಿ ದುಡಿಯುವುದರ ಮಹತ್ವ ಸದಸ್ಯರೆಲ್ಲರಿಗೂ ಈಗ ಅರ್ಥವಾಗಿದೆ. ಹಿಂದೆ ಈ ಸಂಘದಲ್ಲೂ ಬೇಕಾದಷ್ಟು ಸಮಸ್ಯೆಗಳಿದ್ದವು. ಸಮಸ್ಯರಿಗೆ ಸಂಘಟಿತ ಪ್ರಯತ್ನದಿಂದ ಸ್ವಂತ ಪ್ರಯತ್ನದ ಮೇಲೆ ಭರವಸೆ ಇತ್ತು. ಆದುದರಿಂದಲೇ ಕೆಲವು ಸದಸ್ಯರು ಸಂಘ ಬಿಟ್ಟು ಹೋಗಿರುವುದು. ಆದರೆ ಹಲವಾರು ವರ್ಷಗಳ ಸಂಘಟಿತ ಬದುಕು ಅವರಿಗೆ ಹಲವಾರು ಸಾಧ್ಯತೆಗಲನ್ನು ತೋರಿಸಿದೆ. ಇಂದು ಯಾರು ಕೂಡ ಸದಸ್ಯತನ ಬಿಡುವ ಬಗ್ಗೆ ಮಾತಾಡುತ್ತಿಲ್ಲ. ಅಂದರೆ ಸಂಘಟಿತ ಬದುಕಿನಿಂದ ಲಾಭ ಇದೆ ಎಂದು ಸಾಧಿತವಾದರೆ ಜನರು ಒಟ್ಟಿಗಿರಲು ಇಷ್ಟಪಡುತ್ತಾರೆ.

ಸುಮಾರು ಎಂಬತ್ತರವರೆಗೆ ನಮ್ಮಲ್ಲಿ ನೇತೃತ್ವದ ಅಭಿವೃದ್ಧಿ ಪರ ಚರ್ಚಿಸುವ, ಬರೆಯುವ ಟ್ರೆಂಡ್ ಇತ್ತು. ಆವಾಗ ಅದನ್ನು ಬಿಟ್ಟು ಬೇರೆ ವಿಷಯಗಳ ಚರ್ಚೆಗಳು ಗಂಭೀರವಾಗಿ ಪರಿಗಣಿಸಲ್ಪಡುತ್ತಿರಲಿಲ್ಲ. ಆ ಟ್ರೆಂಡ್ ಎಂಬತ್ತರ ಅರ್ಧಭಾಗದಿಂದಲೇ ತನ್ನ ಮಹತ್ವ ಕಳಕೊಂಡು ತೊಂಬತ್ತರ ವೇಳೆಗೆ ಸಂಪೂರ್ಣ ಅವಾಸ್ತವ ಎನ್ನುವ ಹಂತಕ್ಕೆ ತಲುಪಿದೆ. ಈಗಂತೂ ಪ್ರಭುತ್ವ ನೇತೃತ್ವದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗೆ ಎಲ್ಲವೂ ಒಂದು ಎಕ್ಸ್‌ಟ್ರೀಮ್ ಫಾರ್ಮ್‌‌ಲ್ಲೇ ಅಭಿವ್ಯಕ್ತಗೊಳ್ಳುವುದು ನಮ್ಮ ಬಹು ದೊಡ್ಡ ಸಮಸ್ಯೆ. ವಾಸ್ತವದಲ್ಲಿ ಆ ರೀತಿ ಇರಲು ಸಾಧ್ಯವಿಲ್ಲ. ಸಂಪೂರ್ಣ ಪ್ರಭುತ್ವದ ನೇತೃತ್ವದ ಅಭಿವೃದ್ಧಿ ಹೇಗೆ ಸಾಧ್ಯವಿಲ್ಲವೇ ಅದೇ ಪ್ರಭುತ್ವವನ್ನು ಪೂರ್ಣವಾಗಿ ಹೊರಗಿಟ್ಟು ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಹಭಾಗಿತ್ವಕ್ಕಂತೂ ಇದು ತುಂಬ ಅಗತ್ಯ. ಸಮಾಜದ ಕೆಳವರ್ಗಗಳು ತಮ್ಮ ಆಸಕ್ತಿಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಕರಿಸುವುದು ಸಹಭಾಗಿತ್ವದ ಮುಖ್ಯ ಲಕ್ಷಣ. ಅದು ಸಾಧ್ಯವಾಗಬೇಕಾದರೆ ಅದಕ್ಕೆ ಪೂರಕವಾಗುವಂತಹ ಪರಿಸರವನ್ನು, ಸಾಂಘಿಕ ರಚನೆಗಳನ್ನು, ಮೌಲ್ಯಗಳನ್ನು ರೂಪಿಸಿ ಪ್ರೋತ್ಸಾಹಿಸಲು ಪ್ರಭುತ್ವ ಅಗತ್ಯ. ಇನ್ನು ಸಮುದಾಯವನ್ನು ಸಂಘರ್ಷವಿಲ್ಲದ, ತಾರತಮ್ಯ ಇಲ್ಲದ ಒಂದು ಸ್ಪೇಸ್ ಆಗಿ ಉಹಿಸಿಕೊಳ್ಳುವುದು ಅವಾಸ್ತವ. ಸಹಭಾಗಿತ್ವಕ್ಕೆ ತುಂಬ ಅಗತ್ಯವಿರುವ ಅಂಶಗಳೆಂದರೆ ಸಮಾನತೆ ಮತ್ತು ಸ್ವಾತಂತ್ರ್ಯ. ಆದರೆ ಚಾರಿತ್ರಿಕವಾಗಿ ರೂಪುಗೊಂಡ ನಮ್ಮ ಸಮುದಾಯಗಳಲ್ಲಿ ಆ ಗುಣಗಳು ತುಂಬ ಕಡಿಮೆ ಇವೆ. ವಾಸ್ತವ ಹೀಗಿದ್ದರೂ ಮೇಲಿನ ಗುಣಗಳನ್ನು ನಮ್ಮ ಸಮುದಾಯಗಳಿಗೆ ಹೇರಲಾಗುತ್ತಿದೆ. ಇದು ನಮ್ಮ ಸಮುದಾಯಗಳ ಸರಿಯಾದ ಕಲ್ಪನೆ ಇಲ್ಲದವನು ಮಾತ್ರ ಮಾಡಲು ಸಾಧ್ಯ. ಒಂದು ವಿಧದಲ್ಲಿ ಈ ಅಸಮಾನ ವ್ಯವಸ್ಥೆಯೇ ಪ್ರಭುತ್ವದ ಇರುವಿಕೆಯನ್ನು ಹೆಚ್ಚು ಹೆಚ್ಚಾಗಿ ಬಯಸುವಂತೆ ಮಾಡುತ್ತದೆ.

ಪರಾಮರ್ಶನ ಬರಹಗಳು

೧. ರಜನಿ ಕೊಥಾರಿ, “ಅಂಡರ್ ಗ್ಲೊಬಲೈಸೇಶನ್ ವಿಲ್ ದಿ ನೇಶನ್ ಸ್ಟೇಟ್ ಹೋಲ್ಡ್,” ಎಕಾನಮಿಕ್ ಆಂಡ್ ಪೊಲಿಟಿಲ್ ವೀಕ್ಲಿ, ಜುಲೈ ೧,೧೯೯೫, ಪು. ೧೫೯೩-೧೬೦೩

೨. ಡಿ.ಎಲ್.ಸೇಥ್, “ಗ್ರಾಸ್ ರೂಟ್ಸ್ ಇನಿಶೇಟಿವ್ಸ್ ಇನ್ ಇಂಡಿಯ,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ.೧೯, ೧೯೮೪, ಪು. ೬೧೫-೨೬.

೩. ಪಾರ್ಥ ಚಟರ್ಜಿ, “ಕಮ್ಯುನಿಟಿಸ್ ಆಫ್ ದಿ ಈಸ್ಟ್,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ.೩೩, ಫೆಬ್ರವರಿ, ೭, ೧೯೯೮, ಪು. ೨೭೭-೨೮೨.

೪. ದಾಂಟೆವಾಲ, ಸೇಥಿ, ಆಂಡ್ ಮಿಸಾರಿಯ (ಸಂ), ಸೋಶಿಯಲ್ ಚೇಂಜ್ ಥ್ರೋ ವಾಲೆಂಟರಿ ಆಕ್ಷನ್,ನ್ಯೂಡೆಲ್ಲಿ; ಸೇಜ್,೧೯೯೮.

೫. ಸಹಕಾರಿ ಸಂಘಗಳ ಉಪ ನಿಬಂಧಕರ ಪತ್ರ ಸಂಖ್ಯೆ ವಿ-೯:೧೦೩:೮೬-೮೭, ರಾಯಚೂರು, ವಿಷಯ: ಶ್ರೀ ಶಿವಪ್ಪ ಅವರಿಂದ ಮಹಮ್ಮದ್ ನಗರ ಜೋಯಿಂಟ್ ಫಾರ್ಮಿಂಗ್.ಕೋ ಸೊಸೈಟಿ ಆದ ಏರು ಪೇರು ಬಗ್ಗೆ.

೬. ಮಹಮ್ಮದ್ ನಗರ ಸಹಕಾರಿ ಬೇಸಾಯ ಸಂಘ, ತಿದ್ದುಪಡಿಯಾದ ಬೈಲಾ, ೧೯೮೨.

೭. ಮಹಮ್ಮದ್ ನಗರ ಸಹಕಾರಿ ಸಾಮೂಹಿಕ ಬೇಸಾಯ ಸಂಘ ತಮ್ಮ ಭೂಮಿಯನ್ನು ಸಲಾರ್ ಜಂಗ್ ಶುಗರ್ ಮಿಲ್‌ನವರಿಂದ ಮರುವಶಪಡಿಸಿಕೊಳ್ಳಲು ಕೋರಿ ತಹಶೀಲ್ದಾರರಗಿಎ ಬರಕೊಂಡ ಪತ್ರ, ೧೯೮೫.

೮. ಮಹಮ್ಮದ್ ನಗರ ಸಹಕಾರಿ ಸಾಮೂಹಿಕ ಬೇಸಾಯ ಸಂಘದ ಕಾರ್ಯಕಾರಿ ಸಮಿತಿ ಸಭೆ ವರದಿ, ೧೯೬೩-೬೪.

೯. ಸಂಘದ ಪತ್ರ, ಸಂಘದ ವ್ಯವಹಾರ ಕುರಿತು ವಿವರಣೆ ನೀಡಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಬರೆದ ಪತ್ರ, ೧೯೮೭.

೧೦. ಉಪ ನಿಬಂಧಕರು, ೨೦-೨-೮೩ ರಿಂದ ೨೭-೯-೮೩ರ ವರೆಗೆ ಮಾಡಿದ ಪರಿಶೀಲನಾ ವರದಿ, ಕೊಪ್ಪಳ, ೧೯೮೩.

೧೧. ಗ್ರಾಮ ಪಂಚಾಯತ್ ಕಛೇರಿ, ಮನೆ ತೆರಿಗೆ ಸಂಗ್ರಹ ರಿಜಿಸ್ಟರ್ -೧೯೯೯-೨೦೦೦, ಪಾಪಿನಾಯಕನಹಳ್ಳಿ; ಪಂಚಾಯತ್ ಕಾರ್ಯದರ್ಶಿ, ೧೯೯೯.

೧೨. ಅರುಣೋದಯ, ರಿಪ್ರೊಡಕ್ಟಿವ್ ಆಂಡ್ ಚೈಲ್ಡ್ ಹೆಲ್ತ್ ಕೇರ್ ಸಮೀಕ್ಷೆ (ಆರ್.ಸಿ.ಹೆಚ್.ಸಮೀಕ್ಷೆ), ಪಾಪಿನಾಯಕ ಹಳ್ಳಿ; ಪೊಯಿರಾಡ, ೧೯೯೯.

೧೩. ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಷನ್, ಡಿಸ್ಟ್ರಿಕ್ಟ್ ಸೆನ್ಸಸ್ ಹೇಂಡ್ ಬುಕ್ – ಬಳ್ಳಾರಿ ಡಿಸ್ಟ್ರಿಕ್ಟ್, ಬೆಂಗಳೂರು: ಗವರ್ನಮೆಂಟ್ ಆರ್ಫ ಕರ್ನಾಟಕ, ೧೯೯೧.

೧೪. ಚಂದ್ರ ಪೂಜಾರಿ, ದೇಶಿಯತೆಯ ನೆರಳಲ್ಲಿ ವಿಕೇಂದ್ರಿಕರಣ, ಹಂಪಿ: ಕನ್ನಡ ವಿಶ್ವವಿದ್ಯಾಲಯ, ೨೦೦೦.