ಅನುಭವದಿಂದ ಕಲಿತ ಪಾಠ

ಮರು ದಿವಸ ಸಂಘದ ಹಾಲಿ ಅಧ್ಯಕ್ಷರ ಜತೆ ಮಾತಾಡುತ್ತಾ ‘ನಿನ್ನೆ ಮೀಟಿಂಗ್‌ನಲ್ಲಿ ಲೆಕ್ಕಪತ್ರದ ಬಗ್ಗೆ ಚರ್ಚೆಯಾದಷ್ಟು ಉಳಿದ ಚರ್ಚೆ ಆಗಿಲ್ಲ. ಯಾಕೆ?’ ಎಂದು ವಿಚಾರಿಸಿದೆ. ಅದಕ್ಕೆ ಕಾರನ ಇದೆ ಎಂದು ಸಂಘದ ಚರಿತ್ರೆ ಶುರು ಮಾಡಿದರು. ‘ಸುಮಾರು ಮೂವತ್ತು ವರ್ಷಗಳಿಂದ ನಾನು ಈ ಸಂಘದಲ್ಲಿ ಇದ್ದೇನೆ. ಇತ್ತೀಚಿನ ಕೆಲವು ವರ್ಷಗಳಿಂದ ದುಡ್ಡಿನ ಸಮಸ್ಯೆ ಇಲ್ಲದೆ ಸಂಘ ನಡೆಯುತ್ತಿದೆ. ಹಿಂದೆ ನಮಗೆ ಪ್ರತಿ ವರ್ಷ ಹಿಂದಿನ ವರ್ಷದ ಸಾಲ ಕಟ್ಟುವುದೇ ಆಗುತ್ತಿತ್ತು.’ ಅಷ್ಟೊಂದು ದೊಡ್ಡ ವ್ಯವಹಾರ ಏನಿತ್ತು ಸಂಘಕ್ಕೆ ಎಂದು ಕೆದಕಿದೆ. ೧೯೬೫ರಲ್ಲಿ ಸಂಘದ ಜಮೀನಿನ ಉಳುಮೆ ಸಮಸ್ಯೆ, ಅಂದಿನ ಸಹಕಾರಿ ಸಂಘಗಳ ರಿಜಿಸ್ಟಾರ್ ಟ್ರ್ಯಾಕ್ಟರ್ ಖರೀದಿಸುವ ಸಲಹೆ ನೀಡಿದ್ದು ಇತ್ಯಾದಿಗಳನ್ನು ವಿವರಿಸಿದರು. ಎಲ್ಲ ಸದಸ್ಯರಿಗೂ ಅಧಿಕಾರಿಯ ಸಲಹೆ ಸರಿ ಬಂದು ರೂ.೩೪೦೦೦ ಸಾಲದೊಂದಿಗೆ ಟ್ರ್ಯಾಕ್ಟರ್ ಸಂಘಕ್ಕೆ ಬಂದ ನಂತರದ ಬೆಳವಣಿಗೆಯನ್ನು ಅವರು ವಿವರಿಸಿದರು. ಬಂದ ಕೆಲವು ದಿನ ಟ್ರ್ಯಾಕ್ಟರ್ ಸರಿಯಾಗಿಯೇ ಬಳಕೆ ಯಾಯಿತು. ನಮ್ಮ ೭೦ ಎಕರೆ ಉಳುಮೆ ಕೆಲವೇ ದಿನಗಳಲ್ಲಿ ಮುಗಿಯಿತು. ಉಳಿದ ದಿನಗಳಲ್ಲಿ ಟ್ರಾಕ್ಟರನ್ನು ಹೇಗೆ ಉಪಯೋಗಿಸುವುದೆಂದು ನಿರ್ಧರಿಸಲು ಸಭೆ ಕರೆದರು. ಅದನ್ನು ಸುತ್ತ ಮುತ್ತಲಿನ ರೈತರಿಗೆ ಬಾಡಿಗೆ ಕೊಡಬಹುದೆಂಬ ಸಲಹೆ ಬಂತು. ಅದರಂತೆ ಅದನ್ನು ಬಾಡಿಗೆಗೆ ಓಡಿಸುವ ಜವಾಬ್ದಾರಿಯನ್ನು ಸಂಘದ ನಿರ್ದೇಶಕರೊಬ್ಬರಿಗೆ ವಹಿಸಲಾಯಿತು. ಅವರು ದಿನ ನಿತ್ಯ ಟ್ರಾಕ್ಟರ್ ಬಾಡಿಗೆಗೆಂದು ಕೊಂಡು ಒಯ್ಯುತ್ತಿದ್ದರು. ಆದರೆ ತಿಂಗಳ ಕೊನೆಗೆ ಬಾಡಿಗೆ ಮಾತ್ರ ಒಂದು ಸಾವಿರ ರುಪಾಯಿ ಕೂಡ ಸಿಗುತ್ತಿರಲಿಲ್ಲ. ಕಡಿಮೆ ಬಾಡಿಗೆ, ಬಾಡಿಗೆ ಇಲ್ಲ, ಅಥವಾ ರಿಪೇರಿ ಬಂತು ಹೀಗೆ ಕೆಲವು ರೆಡಿ ಉತ್ತರಗಳು ಸಿಗುತ್ತಿದ್ದವು. ನೂರು ರೂಪಾಯಿ ಬಾಡಿಗೆ ಪಡೆದರೆ ಐವತ್ತು ರೂಪಾಯಿ ಮಾತ್ರ ರಸೀದಿಯಲ್ಲಿ ನಮೂದಿಸಿ ಉಳಿದುದ್ದನ್ನು ತನ್ನ ಜೇಬಿಗೆ ಇಳಿಸುತ್ತಿದ್ದರು. ಅಷ್ಟು ಸಾಲದೆಂದು ರಿಪೇರಿ ಬಿಲ್ಲು, ಅದು ಬಾಡಿಗೆ ರೀತಿ ಕಡಿಮೆ ಬರುತ್ತಿರಲಿಲ್ಲ. ನೂರು ರೂಪಾಯಿ ರಿಪೇರಿ ಆದರೆ ನೂರೈವತ್ತು ಬರೆಸಿ ತರುತ್ತಿದ್ದರು. ಒಂದು ಕಡೆ ಟ್ರಾಕ್ಟರ್ ನಿಂದ ಆದಾಯ ಇಲ್ಲ ಮತ್ತೊಂದು ಕಡೆಯಿಂದ ಅದರ ನಿರ್ವಹಣಾ ಕರ್ಚು ಹೆಚ್ಚುತ್ತಾ ಹೋಯಿತು. ಇದರಿಂದ ಬೇಸತ್ತ ರೈತರು ಅದನ್ನು ಮಾರುವುದೇ ಒಳಿತೆಂಬ ನಿರ್ಧಾರಕ್ಕೆ ಬಂದರು. ಇದು ಮಾತ್ರವಲ್ಲ ಸಾಮೂಹಿಕ ಬೇಸಾಯ ಮಾಡುತ್ತಿದ್ದ ಕಾಲದಲ್ಲಿ ಗೊಬ್ಬರ, ಬೀಜ, ಕೀಟನಾಶಕ, ಇತ್ಯಾದಿಗಳ ಖರೀದಿ ಆಗಬೇಕಿತ್ತು. ಅಲ್ಲೂ ಇದೇ ರೀತಿ ನಿಜ ಬೆಲೆಗಿಂತ ಹೆಚ್ಚು ಬರಿಸಿ ತರುತ್ತಿದ್ದರು. ಸಂಘ ಬೆಳೆದ ಉತ್ಪನ್ನಗಳನ್ನು ಮಾರುವಾಗ ಕಡಿಮೆ ಬೆಳೆ ನಮೂದಿಸಿ ವ್ಯಾಪಾರಿ ಕೊಡುವ ನಿಜ ಬೆಲೆಯನ್ನು ತಮ್ಮ ಸ್ವಂತಕ್ಕೆ ಬಳಸುತ್ತಿದ್ದರು. ಇಂತಹ ಅಡ್ಡ ವ್ಯವಹಾರಗಳಿಂದ ಸಂಘ ಸಾಕಷ್ಟು ನಷ್ಟ ಅನುಭವಿಸಿದೆ (ಸಂಘದ ಪತ್ರ,೧೯೮೭). ಅದರಿಂದ ಪಾಠ ಕಲಿತ ಸದಸ್ಯರು ಇಂದು ಪ್ರತಿಯೊಂದು ಬಿಲ್ಲನ್ನು ಕೂಲಂಕಷವಾಗಿ ಪರೀಕ್ಷಿಸಿದ ನಂತರವೇ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಿ‌ದ್ದಾರೆ ಎಂದು ಅಧ್ಯಕ್ಷರು ಸಂಘದ ಹಿಂದಿನ ಅನುಭವದ ಕಿರು ಪರಿಚಯ ಮಾಡಿಸಿದರು.

‘ಅದೆಲ್ಲ ಸರಿ, ನೀವು ಬೇಲಿ ರಿಪೇರಿ ಅಥವಾ ಗೊಡೌನ್ ರಿಪೇರಿ ಬಗ್ಗೆ ಯಾಕೆ ಚರ್ಚೆ ಮಾಡದೆ ಒಪ್ಪಿಕೊಂಡಿರಿ ಎನ್ನುವುದು ನನಗೆ ಇನ್ನೂ ಅರ್ಥವಾಗಿಲ್ಲ,’ ಎಂದೆ. ‘ಅವುಗಳ ಕುರಿತು ಚರ್ಚಿಸಲು ಏನಿದೆ?’, ಎಂದು ಅಧ್ಯಕ್ಷರು ನನಗೆ ಮರು ಪ್ರಶ್ನೆ ಕೇಳಿದರು. ಯಾರು ರಿಪೇರಿ ಮಾಡಿಸುವುದು?, ಅಂದಾಜು ವೆಚ್ಚ ಎಷ್ಟು?, ಎಷ್ಟು ಸಮಯದಲ್ಲಿ ಕೆಲಸ ಆಗಬೇಕು? ಇತ್ಯಾದಿಗಳ ಚರ್ಚೆ ಎಂದೆ. ‘ಬೇಲಿ ರಿಪೇರಿ ತುಂಬಾ ಸರಳ. ಕಲ್ಲಿನ ಕಂಬಗಳಿಗೆ ಮೆಶ್ ವೈರ್ ಹಾಕಿದೆ. ಕಂಬಗಳ ಕೆಲವು ಕಡೆ ವಾಲಿವೆ. ಹೊಂಡ ತೋಡಿ ಅವುಗಳನ್ನು ನೇರ ನಿಲ್ಲಿಸಬೇಕು. ಅಷ್ಟೆ ಗೊಡೌನ್ ಒಳಭಾಗದಲ್ಲಿ ಗೆದ್ದಲು ಹತ್ತಿದೆ. ಗೆದ್ದಲು ಬರದಂತೆ ಮಾಡಬೇಕು ಇದೆಲ್ಲ ನಾವೇ ಮಾಡಿಸುತ್ತೇವೆ. ದಿನ ನಿತ್ಯ ನಾವೆಲ್ಲ ನಮ್ಮ ಹೊಲಗಳನ್ನು ನೋಡಲು ಇಲ್ಲಿಗೆ ಬಂದೇ ಬರಬೇಕು. ಅದೇ ಸಂದರ್ಭದಲ್ಲಿ ಇಲ್ಲಿ ಕೆಲಸ ನಡೆಯುತ್ತಿರುತ್ತದೆ. ನಮ್ಮಲ್ಲಿ ಕೆಲವರಾದರೂ ಕೆಲಸ ನಡೆಯುವಲ್ಲಿ ಇರುತ್ತೇವೆ. ಇನ್ನು ಕೆಲಸಕ್ಕೆ ಬೇಕಾದ ಸಣ್ಣ ಪುಟ್ಟ ಸಾಮಾನು ಬೇಕಾದರೆ ನಮ್ಮಲ್ಲಿ ಯಾರಾದರೊಬ್ಬರನ್ನು ಹೊಸಪೇಟೆಗೋ ಕೊಪ್ಪಳಕ್ಕೋ ಕಳುಹಿಸಿ ತರಿಸುತ್ತೇವೆ. ಇದಕ್ಕೆಲ್ಲ ಚರ್ಚೆ ಏನು?’, ಎಂದು ನನ್ನ ಮುಖ ನೋಡಿದರು.

ನೀರು ಹಂಚಿಕೆ ನಿಯಮ ಪಾಲನೆ

ನೀರು ಹಂಚಿಕೆ ಕುರಿತು ವಿಚಾರಿಸಿದರೆ ಪ್ರತಿಯೊಬ್ಬ ಸದಸ್ಯ ಕೂಡ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಸುಧಾರಿಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಿದ್ದರು. ಸದಸ್ಯರ ಮಧ್ಯೆ ಜಗಳವೇ ಇರಲಿಲ್ಲವೇ ಎಂದರೆ ಇಲ್ಲ ಎನ್ನುತ್ತಿದ್ದರು. ಎಲ್ಲರೂ ಅನುಸರಿಸಿಕೊಂಡು ಹೋಗುತ್ತಾರೆ ಎನ್ನುವುದು ನಾನು ಹಲವಾರು ಬಾರಿ ಕೇಳಿದ ಮಾತು. ತಕರಾರು ಇದ್ದರೆ ಮನುಷ್ಯರಲ್ಲಿ ಕೇಳುವ ಪದ್ಧತಿ ಇಲ್ಲ; ಭೂಮಿಯನ್ನೇ ಕೇಳುವುದು ಎಂದು ಹಿಂದಿನ ಒಬ್ಬ ಕಾರ್ಯದರ್ಶಿ ಹೇಳುತ್ತಿದ್ದರು. ನನಗೆ ಅರ್ಥವಾಗಿಲ್ಲ ಎಂದೆ. ಭೂಮಿಯನ್ನು ಕೇಳುವುದು ಎಂದರೆ ತಕರಾರು ಇರುವ ರೈತರ ಹೊಲಗಳನ್ನು ಹೋಗಿ ನೋಡುವುದು. ಯಾವುದು ಹೆಚ್ಚು ಒಣಗಿರುತ್ತದೋ ಅದಕ್ಕೆ ಮೊದಲು ನೀರು ಬಿಡುವುದು ಎಂದು ವಿವರಿಸಿ ನನ್ನ ಮೌಢ್ಯವನ್ನು ದೂರಗೊಳಿಸಿದರು. ಒಂದು ವಿಧದಲ್ಲಿ ಅವರ ಅಭಿಪ್ರಾಯ ಸರಿಯಾಗಿಯೇ ಇತ್ತು. ಅದಕ್ಕೆ ಕಾರಣ ಯಾವುದೇ ಅಡೆತಡೆ ಇಲ್ಲದೆ ನೀರು ಪೂರೈಕೆ ಆಗುವುದು. ಎರಡು ಹತ್ತು ಹೆಚ್.ಪಿ.ಪಂಪ್‌ಗಳು ದಿನದ ಹದಿನೆಂಟು ಗಂಟೆ ಓಡುತ್ತಿದ್ದವು. ಕರೆಂಟ್ ಅಥವಾ ನೀರಿನ ಕೊರೆತ ಇರಲಿಲ್ಲ. ವರ್ಷದ ಒಂಭತ್ತು ತಿಂಗಳು ನದಿಯಲ್ಲಿ ನೀರು ಹರಿಯುತ್ತದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ನದಿ ಪಾತ್ರದಲ್ಲಿ ಸಣ್ಣ ಸಣ್ಣ ಅಡ್ಡಗಳನ್ನು ನಿರ್ಮಿಸಿ ನೀರು ಏತ ನೀರವರಿಯ ಬಾವಿ ಕಡೆ ಬರುವಂತೆ ಮಾಡಬೇಕಿತ್ತು. ಉಳಿದ ದಿನಗಳಲ್ಲಿ ಆ ಸಮಸ್ಯೆನೂ ಇಲ್ಲ. ಧಾರಾಳ ಇರುವಾಗ ರೈತ ನಡವಳಿಕೆಯಲ್ಲೂ ಧಾರಾಳತೆ ಇತ್ತು. ನೆಂಟರ ಮನೆಗೆ ಹೋಗಿರುವುದರಿಂದಲೋ ಅಥವಾ ಇನ್ನಿತರ ಕಾರಣದಿಂದಲೇ ರೈತನೊಬ್ಬನಿಗೆ ಆತನಿಗೆ ನಿಗದಿ ಪಡಿಸಿದ ದಿನದಂದು ನೀರು ಬಿಡಲು ಸಾಧ್ಯವಾಗದ್ದಿರೆ ಚಿಂತಿಸುವ ಅಗತ್ಯವಿರಲಿಲ್ಲ. ಮರು ದಿವಸ ಬಂದು ನೆರೆಯ ರೈತನಲ್ಲಿ ಹೇಳಿಕೊಂಡರೆ ಯಾರು ಬೇಡ ಎನ್ನುತ್ತಿರಲಿಲ್ಲ.

ಆದರೆ ಈ ವರ್ಷ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ನದಿಯಲ್ಲಿ ನೀರು ಕಡಿಮೆ ಆಗಿಲ್ಲ ಆದರೆ ಕರೆಂಟ್ ಪೂರೈಕೆ ಕಡಿತವಾಗಿದೆ. ದಿನಕ್ಕೆ ಕೇವಲ ಆರೇ ಗಂಟೆ ಪೂರೈಕೆ ಇದೆ. ಸೊಸೈಟಿಯ ಒಟ್ಟ ಕೃಷಿ ಭೂಮಿ ಎಪ್ಪತ್ತು ಎಕರೆಗಳು. ಎಲ್ಲ ಹೊಲಗಳ ಕೃಷಿಗೆ ೧೦ ಹೆಚ್.ಪಿ.ಯ ಎರಡು ಪಂಪ್‌ಗಳು ದಿನದ ಹದಿನೆಂಟು ಗಂಟೆ ಓಡುತ್ತಿರಬೇಕಾಗುತ್ತದೆ. ಕರೆಂಟ್ ಕಡಿತ ಆಗುತ್ತದೆ ಎಂದು ತಿಳಿದ ಕೂಡಲೇ ಸೊಸೈಟಿತಯವರು ರೈತರಿಗೆ ಶೇಂಗಾ ಹಾಕಲು ಸೂಚಿಸಿದ್ದಾರೆ. ಆದರೆ ಕೆಲವು ಹೊಲಗಳು ಮುಖ್ಯವಾಗಿ ಶೆಡ್ ಪಕ್ಕಕಿರುವವು ಮತ್ತು ನೀರಿನ ಕಾಲುವೆಗಿಂತ ಕೆಳಮಟ್ಟದಲ್ಲಿರುವ ಹೊಲಗಳಲ್ಲಿ ಶೇಂಗಾ ಹಾಕಲು ಸಾಧ್ಯವಿಲ್ಲ. ಅವುಗಳಲ್ಲಿ ನೀರಿನ ತೇವಾಂಶ ಜಾಸ್ತಿ. ಶೇಂಗಾಕ್ಕೆ ಸ್ವಲ್ಪ ಒಣಭೂಮಿ ಬೇಕು. ಮತ್ತೆ ಕೆಲವು ರೈತರಿಗೆ ಶೇಂಗಾ ಅಷ್ಟು ಲಾಭದಾಯಕವಲ್ಲ. ಆದುದರಿಂದ ಸೊಸೈಟಿಯ ಸೂಚನೆ ಪ್ರಕಾರ ರೈತರು ಭಿತ್ತನೆ ಮಾಡುವುದಿಲ್ಲ. ಇದನ್ನು ಸೊಸೈಟಿಯ ನಿರ್ದೇಶಕರುಗಳ ಜತೆ ಮತ್ತು ರೈತರ ಜತೆ ಚರ್ಚಿಸಿದರೆ ವಿವಿಧ ಅಭಿಪ್ರಾಯಗಳು ಸಿಗುತ್ತವೆ. ‘ಶೇಂಗಾಕ್ಕೆ ಹದಿನೈದು ಅಥವಾ ಇಪ್ಪತ್ತು ದಿನಕ್ಕೊಮ್ಮೆ ನೀರು ಬಿಟ್ಟರೆ ಸಾಕು. ಆದರೆ ನೆಲ್ಲಿಗಾದರೆ ನಾಲ್ಕು ಅಥವಾ ಐದು ದಿನಕ್ಕೊಮ್ಮೆ ನೀರು ಬಿಡಬೇಕು. ಈ ಆರು ಗಂಟೆ ಕರೆಂಟ್‌ನಲ್ಲಿ ನೆಲ್ಲಿಗೆ ಬೇಕಾಗುವಷ್ಟು ನೀರು ಕೊಡಲು ಸಾಧ್ಯವಿಲ್ಲ. ಅದಕ್ಕೆ ಶೇಂಗಾ ಬೆಳೆಯಿರಿ ಎಂದು ಹೇಳಿದ್ದೇನೆ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಅವರು ಏನು ಬೇಕಾದರು ಬೆಳೆಯಲಿ. ಆದರೆ ನೀರಿಲ್ಲ ಎಂದು ನಮ್ಮನ್ನು ದೂರುವ ಹಾಗಿಲ್ಲ’ ಎಂದು ನಿರ್ದೇಶಕರ ಅಭಿಪ್ರಾಯ. ಒಂದೋ ನಮ್ಮ ಜಮೀನು ಶೇಂಗಾಕ್ಕೆ ಸರಿಯಲ್ಲ ಅಥವಾ ಅದರಿಂದ ಲಾಭವಿಲ್ಲ ಎಂದೋ ರೈತರ ಅಭಿಪ್ರಾಯ. ಹೀಗೆ ಸೊಸೈಟಿಯವರ ಸೂಚನೆಯ ನಡುವೆಯೂ ಶೇಂಗಾಕ್ಕಿಂತ ನೆಲ್ಲು (ಭತ್ತ) ಹಾಕಿದವರ ಸಂಖ್ಯೆ ಹೆಚ್ಚು.

ಒಂದು ದಿನ ಕಾರ್ಯದರ್ಶಿಯವರನ್ನು ಕಂಡು ಮಾತಾನಾಡಿಸುವ ಎಂದು ಸೊಸೈಟಿ ಕಚೇರಿ ಹತ್ತಿರ ಹೋದೆ. ಸೊಸೈಟಿ ಬಾಗಿಲು ತೆರೆದಿತ್ತು. ಒಳ ಹೋಗಿ ನೋಡಿದರೆ ಕಾರ್ಯದರ್ಶಿ ಇರಲಿಲ್ಲ. ಸೊಸೈಟಿ ಕಚೇರಿ ಕೊಠಡಿಗೆ ಸೇರಿದಂತೆ ಗೊದಾಮು ಇದೆ. ಅದರ ಬಾಗಿಲು ತೆರೆದಿತ್ತು. ಅಲ್ಲಿ ನ್ಯಾಯ ಬೆಲೆ ಸರಕುಗಳನ್ನು ಮಾರಲು ವ್ಯವಸ್ಥೆ ಆಗಿದೆ. ಹಿಂದೆ ನ್ಯಾಯ ಬೆಲೆ ಅಂಗಡಿಯನ್ನು ಸೊಸೈಟಿಯವರೆಗೆ ನಡೆಸುತ್ತಿದ್ದರು. ಅಧಿಕಾರಿಗಳ ಉಪದ್ರ ತಾಳಲಾರದೆ ಸೊಸೈಟಿಯವರು ಆ ವ್ಯವಹಾರವನ್ನು ಕೈಬಿಟ್ಟಿದ್ದಾರೆ. ಅದನ್ನು ಈಗ ನೆರೆಯ ಹಳ್ಳಿಯವರೊಬ್ಬರು ನಡೆಸುತ್ತಿದ್ದಾರೆ. ಅವರಲ್ಲಿ ಕಾರ್ಯದರ್ಶಿ ಬಗ್ಗೆ ವಿಚಾರಿಸಿದೆ. ಪಂಪ್ ಶೆಡ್ ಬಳಿ ಇರಬಹುದು ನೋಡಿ ಅಂದ್ರು ಅವರು. ಹಾಗೆ ನಾನು ಪಂಪ್ ಶೆಡ್ ಬಳಿ ಹೋದೆ. ನೀರು ಶೇಖರಣ ಬಾವಿಗೆ ತಾಗಿಕೊಂಡಂತೆ ಎರಡು ಪಂಪ್‌ಗಳನ್ನು ಇಡಲು ಒಂದು ಕೋಣೆ ಕಟ್ಟಿಸಿದ್ದರು. ರಾತ್ರಿ ಎಲ್ಲ ಪಂಪ್ ರನ್ ಮಾಡಲು, ಪಂಪ್ ಕೆಟ್ಟರೆ ರಿಪೇರಿ ಮಾಡಲು ಆಪರೇಟರ್ ಸ್ಥಳದಲ್ಲೇ ಇರಲು ಅನುಕೂಲವಾಗುತ್ತದೆ ಎಂದು ೧೯೯೬ರಲ್ಲಿ ಪಂಪ್‌ಶಡ್‌ನ್ನು ವಿಸ್ತಿರಿಸಿ ಒಂದು ಕೋಣೆ ಕಟ್ಟಿಸಿದ್ದಾರೆ. ಆ ಕೋಣೆ ಹಗಲು ಹೊತ್ತಂತು ಅದರ ಮೂಲ ಉದ್ದೇಶಕ್ಕಿಂತ ಭಿನ್ನವಾಗಿಯೇ ಉಪಯೋಗವಾಗುತ್ತಿದೆ. ಸೊಸೈಟಿ ರೈತರು ಸೇರಿಕೊಂಡು ಇಸ್ಟೀಟ್ ಎಲೆ ಆಟ ಆಡುವುದು ಸಾಮಾನ್ಯ. ಈ ಬಾರಿಯು ಹಾಗೆ ಆಯಿತು. ಅಧ್ಯಕ್ಷರು, ಇಬ್ಬರು ನಿರ್ದೇಶಕರು ಮತ್ತು ಕೆಲವು ರೈತರು ಸೇರಿಕೊಂಡು ಆಟವಾಡುತ್ತಿದ್ದರು. ನನ್ನನ್ನು ಅಲ್ಲಿ ನೋಡಿ ಅಧ್ಯಕ್ಷರಿಗೆ ಸ್ವಲ್ಪ ಇರುಸು ಮುರುಸಾಯಿತು. ‘ಕರೆಂಟ್ ಇಲ್ಲ. ಹನ್ನೆರಡು ಗಂಟೆಗೆ ಬರುತ್ತದೆ ಎಂದು ಆಪರೇಟರ್ ಹೇಳಿದ. ಹಾಗೆ ಸಮಯ ಕಳೆಯಲ್ಲಿಕ್ಕಾಗಿ ಆಟ ಶುರು ಹಚ್ಚಿದ್ದೇವೆ,’ ಎಂದು ಅಧ್ಯಕ್ಷರು ಸಮಜಾಯಿಸಿ ನೀಡಿದರು. ‘ಅದಕ್ಕೇನಂತೆ, ದುಡ್ಡಿಗಲ್ಲದಿದ್ದರೆ ನಾನು ನಿಮ್ಮ ಜತೆ ಸೇರಿಕೊಳ್ಳುತ್ತೇನೆ’ ಎಂದು ಅಧ್ಯಕ್ಷರ ಪಕ್ಕ ಇದ್ದ ಖಾಲಿ ಸಿಮೆಂಟ್ ತಾಟಿನ ಮೇಲೆ ನಾನು ಕುಳಿತೆ. ಆದರೆ ಆಟ ಶುರು ಮಾಡುವ ಲಕ್ಷಣ ಕಾಣಲಿಲ್ಲ. ಅಷ್ಟೊತ್ತಿಗೆ ರೈತರೊಬ್ಬರು ಅಧ್ಯಕ್ಷರನ್ನು ಹುಡುಕಿಕೊಂಡು ಶೆಡ್ ಬಳಿ ಬಂದರು. ಬಂದವರೆ, ‘ನೀವು ಮೀಟಿಂಗ್‌ನಲ್ಲಿ ತೆಗೆದುಕೊಂಡು ತೀರ್ಮಾನ ಏನಾಯಿತು ನೋಡಿ. ಲಮಾಣಿ (ಲಂಬಾಣಿ) ರಾಮಣ್ಣ ನಿನ್ನೇನೂ ನೀರು ಬಿಟ್ಟುಕೊಂಡಿದ್ದ. ಇವತ್ತು ನಾನು ಕಿತ್ತುಕೊಳ್ಳಲು (ಬಿಡಲು) ಹೋದರೆ ಹೊಲಕ್ಕೆ ಉಪ್ಪು (ರಾಸಾಯನಿಕ ಗೊಬ್ಬರ) ಹಾಕುತ್ತಿದ್ದೇನೆ ನಾಳೆ ನೀನು ಬಿಟ್ಟುಕೋ ಅನ್ನುತ್ತಾನೆ,’ ಎಂದು ಒಂದೆ ಉಸಿರಿಗೆ ತಮ್ಮ ಅಹವಾಲನ್ನು ಹೇಳಿ ಅಧ್ಯಕ್ಷರು ಪ್ರತಿಕ್ರಿಯೆಗಾಗಿ ಕಾದರು. ನನಗೂ ಇ ಪ್ರಸಂಗ ಸ್ವಲ್ಪ ಆಸಕ್ತಿ ಕುದುರಿಸಿತು. ನೀರು ಹಂಚುವಿಕೆಯಲ್ಲಿ ಜಗಳವೇ ಇಲ್ಲ ಎಂದು ನನ್ನನ್ನು ನಂಬಿಸಿದ್ದಾರೆ. ಈಗ ನೋಡಿದರೆ ಜಗಳದ ಒಂದು ಹಸಿ ಹಸಿ ಪ್ರಸಂಗ ನಮ್ಮೆದುರು ನಿಂತಿದೆ. ಅಧ್ಯಕ್ಷರು ಇದನ್ನು ಹೇಗೆ ಪರಿಹರಿಸುತ್ತಾರೆ ಎಂದು ನೋಡುವ ಕುತೂಹಲ ನನ್ನದು. ತಕರಾರು ಇರುವ ಎರಡು ಪಕ್ಷದವರನ್ನು ಕರೆಸಿ, ಇಬ್ಬರ ವಾದಗಳನ್ನು ಆಳಿಸಿ ಒಂದು ತೀರ್ಮಾನಕ್ಕೆ ಅಧ್ಯಕ್ಷರು ಬರಬಹುದೆಂದು ನಾನು ಆಲೋಚಿಸುತ್ತಿದೆ. ಆದರೆ ಈ ರೀತಿ ಆಗಲಿಲ್ಲ.’ಸ್ವಲ್ಪ ಸುಧಾರಿಸಿಕೊಂಡು ಹೋಗಿ, ನಾಳೆ ಬಿಟ್ಟುಕೊಳ್ಳಲು ಅವನಿಗೆ ಹೇಳಿ; ನೀನು ಬಿಟ್ಟುಕೊ’ ಎಂದು ಅಧ್ಯಕ್ಷರು ದೂರು ತಂದ. ರೈತನಿಗೆ ಸಮಧಾನ ಹೇಳಿ ಕಳುಹಿಸಿದರು. ಆತ ಹೋದ. ಆತನ ಹಿಂದಿನಿಂದಲೇ ನಾವು ಸೊಸೈಟಿ ಕಚೇರಿ ಹತ್ತಿರ ಬಂದೆವು. ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದವ ಒಬ್ಬ ಮುಸ್ಲಿಂ ಯುವಕ. ಅಂದು ಶುಕ್ರವಾರ. ಮಧ್ಯಾಹ್ನ ಸೊಸೈಟಿ ಕಚೇರಿ ಬೀಗ ಹಾಕಿಕೊಂಡು ಆತ ಹೋಗಿದ್ದ.

ಕಚೇರಿ ಅಂಗಳದಲ್ಲಿದ್ದ ತೆಂಗಿನ ಮರದ ನೆರಳಲ್ಲಿ ನಾವು ನಿಂತು ಸೊಸೈಟಿ ಬಗ್ಗೆ ಚರ್ಚಿಸುತ್ತಿದ್ದೆವು. ದೂರು ತಂದ ರೈತ ಪುನಃ ನಾವಿದ್ದಲ್ಲಿ ಬಂದು, ‘ಆತ ನೀರು ಬಿಡುತ್ತಿಲ್ಲ, ನೀವೇ ಬಂದುಹೇಳಿ,’ ಎಂದು ಅಧ್ಯಕ್ಷರಿಗೆ ದುಂಬಾಲು ಬಿದ್ದ. ಆತನ ನಿವೇದನೆ ಅಧ್ಯಕ್ಷರಿಗೆ ಅಷ್ಟೊಂದು ಹಿತವಾದಂತೆ ಕಾಣಲಿಲ್ಲ. ‘ನಿಂದೊಳ್ಳೆ ಸಮಸ್ಯೆ ಆಯಿತಲ್ಲ. ಅನುಸರಿಸಿಕೊಂಡು ಹೋಗ್ ಬೇಕಪ್ಪ. ನೀವು ರೈತರೇ ಹೊಂದಾಣಿಕೆ ಮಾಡಿಕೊಂಡು ಹೋಗದಿದ್ದರೆ ನಾವೇನು ಮಾಡಬಹುದು,’ ಎಂದು ಸ್ವಲ್ಪ ಖಾರವಾಗಿಯೇ ಹೇಳಿದರು. ಅಧ್ಯಕ್ಷರ ಮಾತುಗಳನ್ನು ನನಗೆ ಜೀರ್ಣಿಸಿಕೊಳ್ಳವುದು ಸ್ವಲ್ಪ ಕಷ್ಟವಾಯಿತು. ‘ಸದಸ್ಯರು ನಿಮ್ಮ ಮುಂದೆ ಸಮಸ್ಯೆ ಹೇಳಿಕೊಳ್ಳುವುದಾದರೂ ಯಾಕೆ? ನಿಮ್ಮಿಂದ ಪರಿಹಾರ ಸಿಗಬಹುದೆಂದು, ನೀವು ಪರಿಹಾರ ಸೂಚಿಸದಿದ್ದರೆ ಅವರು ಎಲ್ಲಿಗೆ ಹೋಗಬೇಕು?’ ಎಂದು ಕೇಳಿದೆ. ‘ಇಷ್ಟರವರೆಗೆ ನಮಗೆ ನೀರಿನ ಸಮಸ್ಯೆ ಬಂದಿಲ್ಲ. ಎಲ್ಲರು ಅನುಸರಿಸಿಕೊಂಡು ಹೋಗುತ್ತಿದ್ದರು. ಶೇಂಗಾ ಹಾಕಿ ಅಂದ್ರು ನೆಲ್ಲು ಹಾಕಿದ್ದಾರೆ. ಎಲ್ಲರಿಗೂ ಒಂದೇ ದಿನ ಹೊಲ ತುಂಬಬೇಕು ಅಂದ್ರೆ ಈ ಆರು ಗಂಟೆ ಕರೆಂಟ್‌ನಲ್ಲಿ ಹೇಗೆ ನೀರು ಕೊಡುವುದು’, ಎಂದು ಅಧ್ಯಕ್ಷರು ತಮ್ಮ ಹಳೇ ರಾಗ ಹಾಡಿದರು. ‘ಅವರ ಹೊಲಕ್ಕೆ ಹೋಗಿ ನೋಡಿ ಒಂದ ಪರಿಹಾರ ಸೂಚಿಸಿ’. ಎಂದು ಅಲ್ಲೆ ಇದ್ದ ಒಬ್ಬ ನಿರ್ದೇಶಕರು ಅಧ್ಯಕ್ಷರಿಗೆ ಸಲಹೆ ಇತ್ತರು. ‘ಹೊಲಕ್ಕೆ ಹೋದರೆ ಇಬ್ಬರೂ ನೀರಿನ ಪಸೆ(ತೇವಾಂಶ) ಕಾಣದ ಭಾಗ ತೋರಿಸುತ್ತಾರೆ. ಏನೂಂತ ನ್ಯಾಯ ಹೇಳುತ್ತಿರಿ?’ ಎಂದು ಅಧ್ಯಕ್ಷರು ಸವಾಲು ಹಾಕಿದರು. ಹಿಂದೆ ಒಂದು ಬಾರಿ ನೀರು ಹಂಚಿಕೆ ತಕರಾರು ಪರಿಹಾರ ಕುರಿತು ಮಾಜಿ ಕಾರ್ಯದರ್ಶಿಯವರೊಬ್ಬರು ‘ನೀರು ಕುರಿತು ಎರಡು ರೈತರ ನಡುವೆ ಜಗಳ ಆದರೆ ನಾನು ರೈತರ ಮಾತು ಕೇಳುವುದಿಲ್ಲ; ಹೊಲಗಳ ಮಾತು ಕೇಳುತ್ತೇನೆ,’ ಎಂದು ಹೇಳಿದ್ದು ನೆನಪಿಗೆ ಬಂತು. ಅದನ್ನು ಅಧ್ಯಕ್ಷರಿಗೆ ಜ್ಞಾಪಿಸಿ ಪುನಃ ಅವರನ್ನು ಪೇಚಿಗೆ ಸಿಕ್ಕಿಸುವುದು ಬೇಡ ಎಂದು ಸುಮ್ಮನಾದೆ. ದೂರು ತಂದ ರೈತನಿಗೆ ಈ ಅಧ್ಯಕ್ಷರಿಂದ ಏನೂ ಉಪಯೋಗವಿಲ್ಲವೆಂದು ಮನವರಿಕೆಯಾಗಿರಬೇಕು. ವಾಪಸ್ಸು ತನ್ನ ಹೊಲಕ್ಕೆ ಹೋಗಿ ನೆರೆಯ ರೈತನನ್ನು (ರಾಮಣ್ಣನನ್ನು) ಎತ್ತರದಲ್ಲಿ ಸ್ವರದಲ್ಲಿ ಬೈಯ್ಯಲು ಆರಂಭಿಸಿದೆ. ನಾವು ನಿಂತು ಮಾತಾಡುವ ಜಾಗದಿಂದ ಕೇವಲ ಐವತ್ತು ಮೀಟರು ದೂರದಲ್ಲಿ ಅವರಿಬ್ಬರ ಜಗಳ ಸಾಗಿತ್ತು. ‘ಬನ್ನಿ ನಾವು ಹೊಲಕ್ಕೆ ಹೋಗಿ ನೋಡುವ,’ ಎಂದು ಅಲ್ಲೆ ಇದ್ದ ನಿರ್ದೇಶಕರೊಬ್ಬರನ್ನು ಕೇಳಿಕೊಂಡೆ. ಮನಸಿಲ್ಲದ ಮನಸ್ಸಿನಿಂದ ಅವರು ನನ್ನ ಜತೆ ಬಂದರು. ದೂರು ತಂದ ರೈತನ ಹೊಲ ನಿಜವಾಗಿಯೂ ಒಣಗುತ್ತಿತ್ತು. ನೆರೆಯ ರೈತನ ಎರಡು ಹೊಲಗಳೂ ತುಂಬಿ ಮೂರನೆಯದ್ದು ಅರ್ಧ ತುಂಬಿತ್ತು. ಕೊನೆಯ ಹೊಲಕ್ಕೆ ಆತ ಉಪ್ಪು (ಗೊಬ್ಬರ) ಹಾಕುತ್ತಿದ್ದ. ರಾಮಣ್ಣನ ಅಣ್ಣ ಮೂರನೇ ಹೊಲದ ಬದುವಿನಲ್ಲಿ ನಿಂತು ನೀರು ಬಿಡುತ್ತಿದ್ದ. ನಮ್ಮನ್ನೆಲ್ಲ ಕಂಡು ದೂರು ತಂದ ರೈತರ ಧ್ವನಿ ಇನ್ನೂ ಜೋರಾಯಿತು. ನೀರು ಬಿಡುತ್ತಿದ್ದವನಿಗೆ ಸಮಸ್ಯೆ ಬಿಗಡಾಯಿಸುವ ಲಕ್ಷಣ ಕಂಡುಬಂದಿರಬೇಕು ಅಂತ, ‘ಅದ್ಯಾಕಪ್ಪ ಅಷ್ಟು ಮಾತಾಡುತ್ತಿ; ಸ್ವಲ್ಪ ಹೊತ್ತಿಗೆ ಹೊಲ ತುಂಬುತ್ತದೆ, ನಂತರ ನೀನು ಕಿತ್ತುಕೋ,’ ಎಂದು ಸಮಾಧಾನ ಪಡಿಸಿದ. ಆದರೆ ರಾಮಣ್ಣ ಮಾತ್ರ ಯಾವುದಕ್ಕೂ ಸೊಪ್ಪು ಹಾಕದೆ ತನ್ನ ಗೊಬ್ಬರ ಹಾಕುವ ಕೆಲಸ ಮುಂದುವರಿಸಿದ್ದ. ಸ್ವಲ್ಪ ಹೊತ್ತು ಬಿಟ್ಟ ನಂತರ ಅಧ್ಯಕ್ಷರ ಮತ್ತು ಮಾಜಿ ಕಾರ್ಯದರ್ಶಿಯವರು ನಾವಿದ್ದಲ್ಲಿ ಬಂದರು. ಅವರನ್ನೆಲ್ಲ ಕಂಡೋ ಅಥವಾ ಆತನ ಹೊಲ ತುಂಬಿತ್ತೋ ರಾಮಣ್ಣನ ಅಣ್ಣ, ದೂರು ನೀಡಿದ ರೈತನನ್ನು ಉದ್ದೇಶಿಸಿ, ‘ಆಯಿತಪ್ಪ, ನೀನು ಕಿತ್ತುಕೊ (ಬಿಟ್ಟುಕೊ),’ ಎಂದು ಈ ಕಡೆಗೆ ಬಂದ. ಅಧ್ಯಕ್ಷರು ಮತ್ತು ಮಾಜಿ ಕಾರ್ಯದರ್ಶಿಯವರು ದೂರು ನೀಡಿದ ರೈತನಿಗೆ ನೀರು ಬಿಟ್ಟುಕೊಳ್ಳಲು ಸೂಚಿಸಿ ಈ ಕಡೆ ಬಂದರು. ಹೀಗೆ ನೀರಿನ ಜಗಳ ಪರಿಹಾರ ಕಂಡಿತು.

ಸಂಘದ ತೀರ್ಮಾನ ಅಂತಿಮ

ನೀರಿನ ಜಗಳ ಪರಿಹಾರದಲ್ಲಿ ಸೊಸೈಟಿ ಪದಾಧಿಕಾರಿಗಳ ಪಾತ್ರ ನೋಡಿ ಅವರ ಮಾತೇನು ನಡೆಯುವುದಿಲ್ಲ ಎಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ. ಸೊಸೈಟಿ ತನ್ನ ಹಕ್ಕು ಸ್ಥಾಪನೆಗಾಗಿ ಹೈಕೋರ್ಟ್‌ ತನಕ ಹೋದ ಉದಾಹರಣೆಯು ಇದೆ. ಇದು ಸ್ವಲ್ಪ ದೊಡ್ಡ ಕತೆಯೇ. ಆದಷ್ಟು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ. ೧೯೬೦ರಲ್ಲಿ ಸಾಮೂಹಿಕ ಬೇಸಾಯ ಸಹಕಾರಿ ಸಂಘ ನೋಂದಣಿ ಆದಾಗ ೭೨ ಜನ ಸದಸ್ಯರಿದ್ದರು. ಕೆಲವು ವರ್ಷ ೭೨ ಮಂದಿ ಸಾಮೂಹಿಕ ಬೇಸಾಯ ಮಾಡಿದರು. ಅದರಿಂದ ಅವರ ಮೂರು ಹೊತ್ತಿನ ಊಟ ಬರುವುದು ಸಮಸ್ಯೆಯಾಯಿತು. ನೀರಿನ ವ್ಯವಸ್ಥೆ ಇಲ್ಲ, ಉಳುಮೆ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಎತ್ತುಗಳು ಇಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ಇವುಗಳನ್ನು ಕೊಳ್ಳುವಷ್ಟು ಸಂಘದಲ್ಲಿ ಬಂಡವಾಳ ಇರಲಿಲ್ಲ. ಸಂಘದ ಪಾಲು ಬಂಡವಾಳ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಹೊಸ ಸದಸ್ಯರನ್ನು ಸೇರಿಸಿಕೊಳ್ಳುವುದು ಅನಿವಾರ್ಯವಾಯಿತು. ಹಾಗೆ ೧೯೭೦ರಲ್ಲಿ ೭೨ ಮಂದಿ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು. ಹೊಸ ಸದಸ್ಯರು ಬಂದ ನಂತರ ಜಮೀನು ಪುನರ್ವಿಂಗಡನೆಯಾಯಿತು. ಹಿಂದೆ ಪ್ರತಿಯೊಬ್ಬರ ಕಬ್ಜಾದಲ್ಲೂ ನಾಲ್ಕು ಎಕರೆ ಜಮೀನು ಇತ್ತು. ಮರುವಿಂಗಡಣೆಯ ನಂತರ ಪ್ರತಿ ಸದಸ್ಯನಿಗೂ ಒಂದು ಎಕರೆ ೧೦ ಗುಂಟೆ ಜಮೀನು ಬಂತು. ಇದನ್ನು ವಿರೋಧಿಸಿ (ಅವರ ಜಗಳಕ್ಕೆ ಬೇರೆ ಕಾರಣಗಳೂ ಇವೆ) ಕೆಲವು ಸದಸ್ಯರು ಕೋರ್ಟ್‌ ಮೆಟ್ಟಿಲು ಹತ್ತಿದರು. ನಮಗೆ ನಮ್ಮ ಹಿಂದಿನ ನಾಲ್ಕು ಎಕರೆ ಜಮೀನು ಕೊಡಬೇಕು. ನಾವು ಸ್ವಂತ ಕೃಷಿ ಮಾಡಿಕೊಳ್ಳುತ್ತೇವೆ ಎಂದು ಐದು ಜನ ರೈತರು ಕೊಪ್ಪಳ ಕೋರ್ಟಿನಲ್ಲಿ ಸಿವಿಲ್ ಕೇಸ್ ದಾಖಲಿಸಿದರು. ಅಲ್ಲಿ ಅವರಿಗೆ ಸೋಲಾಯಿತು. ನಂತರ ಅದು ಜಿಲ್ಲಾ ಕೋರ್ಟಿಗೆ ಹೋಯಿತು. ಅಲ್ಲೂ ಅವರು ಸೋತರು. ಕಡೆಗೆ ಆ ಕೇಸ್ ಹೈಕೋರ್ಟಿಗೂ ಹೋಯಿತು. ಅಲ್ಲೂ ಸಂಘಕ್ಕೆ ಜಯವಾಯಿತು. ಹೀಗೆ ಸಂಘ ತನ್ ನಿರ್ಧಾರವನ್ನು ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿದೆ. ಹಲವಾರು ಸಾವಿರ ರೂಪಾಯಿ ಖರ್ಚು ಕೂಡ ಆಗಿದೆ. ಅದನ್ನು ಎಲ್ಲ ಸದಸ್ಯರು ಸಮನಾಗಿ ಭರಿಸಿದ್ದಾರೆ (ಸಹಕಾರಿ ಉಪ ನಿಬಂಧಕರ ಪತ್ರ, ೧೯೮೭)

ನೀರಿನ ಸಮಸ್ಯೆ ಇಲ್ಲದಿರುವುದರಿಂದ ನೀರು ಹಂಚಿಕೆ ಜಗಳ ಅವರಿಗೆ ದೊಡ್ಡ ಸಮಸ್ಯೆ ಆಗಿ ಪರಿಣಮಿಸಿಲ್ಲ. ಆದುದರಿಂದ ಅದರ ಪರಿಹಾರ ಕುರಿತು ಅವರು ವಿಶೇಷ ತಲೆ ಕೆಡಿಸಿಕೊಂಡಿಲ್ಲ. ಇದನ್ನು ಒಪ್ಪುವ. ಆದರೆ ಇತರ ಕೆಲವು ವಿಚಾರಗಳಲ್ಲೂ ಕೂಡ ಸೊಸೈಟಿ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದಿಲ್ಲ. ಅದರಲ್ಲಿ ಮುಖ್ಯವಾಗಿ ಕಾಣವುದು ಮನೆ ಬಾಡಿಗೆ ಸಮಸ್ಯೆ. ಬಹು ಹಿಂದೆಯೇ ಸೊಸೈಟಿ ಕವಳಿಯಲ್ಲಿ (ಸೊಸೈಟಿ ಕಚೇರಿ ಮತ್ತು ಜಮೀನು ಇರುವ ಸ್ಥಳ) ಎಂಟು ಮನೆ ಕಟ್ಟಿಸಿತ್ತು. ಕೆಲವು ವರ್ಷಗಳ ಹಿಂದೆ ಹದಿಮೂರು ಜನತಾ ಮನೆ ಕಟ್ಟಿಸಿ ತನ್ನ ಸದಸ್ಯರಿಗೆ ಇರಲು ವ್ಯವಸ್ಥೆ ಮಾಡಿದೆ. ಆ ಮನೆಗಳಿಗೆ ತಿಂಗಳಿಗೆ ರೂ.೧೦ ಬಾಡಿಗೆ ನಿರ್ಧಾರವಾಗಿದೆ. ಕೆಲವರು ಆ ಹತ್ತು ರೂಪಾಯಿಗಳನ್ನು ಕೂಡ ಸಂದಾಯ ಮಾಡಿಲ್ಲ (ಲೆಕ್ಕ ಪರಿಶೀಲನಾ ವರದಿ, ೧೯೮೩). ಇವತ್ತು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಕಾಲ ದೂಡುತ್ತಿದ್ದಾರೆ. ಸಂಘದ ಪದಾಧಿಕಾರಿಗಳಲ್ಲಿ ಯಾಕೆ ನೀವು ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಕೇಳಿದೆ. ‘ಆ ಮನೆಗಳು ಸೊಸೈಟಿ ಮನೆಗಳೆಂದು ಕಾನೂನು ಪ್ರಕಾರ ಇರಬೇಕಾದರೆ ಅವರಿಂದ ಬಾಡಿಗೆ ವಸೂಲು ಆಗಲೇ ಬೇಕು. ಹಾಗೆಂದೆ ನಾವು ತುಂಬಾ ಕಡಿಮೆ ಬಾಡಿಗೆ ಇಟ್ಟಿದ್ದೇವೆ. ಹಾಗೆಂದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳವಷ್ಟು ಸ್ಥಿತಿ ಹದಗೆಟ್ಟಿಲ್ಲ. ಸೊಸೈಟಿ ಕಾನೂನು ಸಮಸ್ಯೆಯನ್ನು ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಿದರೆ ಅವರನ್ನು ಒಪ್ಪಿಸಬಹುದು,’ ಎಂದು ಪದಾಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ಮನೆಯಲ್ಲಿ ಇರುವವರನ್ನು ಕೇಳಿದರೆ ಬೇರೆಯೆ ಉತ್ತರ ಸಿಗುತ್ತದೆ. ಕವಳಿ ಮಹಮ್ಮದ್ ನಗರ ಮತ್ತು ಶಿವಪುರಗಳ ನಡುವೆ ಇದೆ. ಅಲ್ಲಿ ಸೊಸೈಟಿಯವರು ಇಪ್ಪತ್ತೊಂದು ಮನೆಗಳನ್ನು ಬಿಟ್ಟರೆ ಬೇರ ಮನೆಗಳು ಇಲ್ಲ. ಕವಳಿಯಲ್ಲಿ ಸೊಸೈಟಿಯ ಮೂರುವರೆ ಎಕರೆ ತೋಟ ಇದೆ. ಅದರಲ್ಲಿ ಸುಮಾರು ೯೦ ತೆಂಗಿನ ಮರಗಳು, ೬೦ ಮಾವಿನ ಮರಗಳು ಮತ್ತು ಅಷ್ಟೇ ಸಂಖ್ಯೆಯ ಸಪೋಟ ಮರಗಳಿವೆ. ಪ್ರತಿ ವರ್ಷ ಆ ತೋಟದ ಹರಾಜಿನಿಂದ ಸೊಸೈಟಿಗೆ ಕನಿಷ್ಠ ಹದಿನೈದು ಸಾವಿರ ಆದಾಯ ಬರುತ್ತದೆ. ಈ ವರ್ಷ ಇಪ್ಪತ್ತೈದು ಸಾವಿರಕ್ಕೆ ಅಂದಾಜು ಆಗಿದೆ. ನಾವಿಲ್ಲದಿದ್ದರೆ ಆ ತೋಟವನ್ನು ಕಾಯುವುದು ಯಾರು? ಹೆಚ್ಚಿನ ಸದಸ್ಯರಿಗೆ ಶಿವಪುರದಲ್ಲಿ ಜಮೀನು ಇದೆ ಮನೆನೂ ಇದೆ. ನಮಗೆ ಬೇರೆ ಕಡೆ ಮನೆ ಇಲ್ಲ. ಮನೆ ಕಟ್ಟಿಸಿಕೊಳ್ಳುವಷ್ಟು ಆದಾಯವೂ ಇಲ್ಲ. ಹೀಗಿರುವಾಗ ನಾವು ಅಲ್ಲಿಗೆ ಹೋಗುವುದು? ಸೊಸೈಟಿಯೇ ನಮ್ಮ ವಸತಿ ವ್ಯವಸ್ಥೆ ಮಾಡಬೇಕೆಂದು ಮನೆಯಲ್ಲಿ ವಾಸ ಇರುವವರ ನಿಲುವುಗಳು.

ಮತ್ತೊಂದು ಸಮಸ್ಯೆ ಸೊಸೈಟಿ ಜಮೀನಿನ ಅಂಚಿನಲ್ಲಿರುವ ರೈತರು ಇತರ (ಸೊಸೈಟಿಗೆ ಸೇರಿರದ) ಜಮೀನು ಕೃಷಿ ಮಾಡುವ ಕುರಿತು. ಕೆಲವು ರೈತರು ತಮ್ಮ ಹೊಲಗಳಿಗೆ ತಾಗಿಕೊಂಡಿರುವ ಜಮೀನನ್ನು ಲೀಸ್ ಪಡಕೊಂಡು ಬೇಸಾಯ ಮಾಡುತ್ತಾರೆ. ಬೇಸಾಯ ಮಾಡುವುದರ ಬಗ್ಗೆ ಸೊಸೈಟಿ ಚಿಂತಿತವಾಗಿಲ್ಲ. ಆದರೆ ಅವರು ಆ ಬೇಸಾಯಕ್ಕೆ ಸೊಸೈಟಿ ಮಾಡುವುದರ ಬಗ್ಗೆ ಸೊಸೈಟಿ ಚಿಂತಿತವಾಗಿಲ್ಲ. ಆದರೆ ಅವರು ಆ ಬೇಸಾಯಕ್ಕೆ ಸೊಸೈಟಿ ನೀರನ್ನು ಬಳಸುವುದು ಸಭೆಗಳಲ್ಲಿ ಆಕ್ಷೇಪಕ್ಕೆ ಒಳಗಾಗಿದೆ. ಹಿಂದಿನ ಸಭೆಯಲ್ಲೂ ಆ ವಿಚಾರ ಚರ್ಚೆಗೆ ಬಂದುದರ ಕುರಿತು ಮೇಲೆ ತಿಳಿಸಿದ್ದೇನೆ. ಇದು ಕೆಲವು ವರ್ಷಗಳಿಂದ ನಡೆಯುತ್ತಾ ಬಂದಿದೆ. ಕೆಲವು ನಿರ್ದೇಶಕರ ಪ್ರಕಾರ ಇದೇನೂ ಅಷ್ಟು ದೊಡ್ಡ ಸಮಸ್ಯೆ ಅಲ್ಲ. ಅವರು ಕೆಲವು ಗುಂಟೆ ಬೇಸಾಯ ಮಾಡುವುದರಿಂದ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಏನೋ ಸ್ವಲ್ಪ ಸೊಸೈಟಿ ನೀರನ್ನು ಬಳಸುತ್ತಿದ್ದಾರೆ. ಅದಕ್ಕೆ ಒಂದು ಫೀಸು ತೀರ್ಮಾನ ಮಾಡಿ ಅವರಿಂದ ವಸೂಲು ಮಾಡಿದರೆ ಆಯಿತು. ಇನ್ನು ಕೆಲವರ ಪ್ರಕಾರ ನಾವು ಹಲವಾರು ವರ್ಷದಿಂದ ಅವರನ್ನು ಈ ರೀತಿ ಬೇಸಾಯ ಮಾಡಲು ಬಿಟ್ಟು ಈಗ ಒಮ್ಮಿಂದೊಮ್ಮೆಲೆ ನೀರು ನಿಲ್ಲಿಸಿದರೆ ಹೇಗೆ? ಹೂವಿನ ತೋಟ ಮಾಡಿಕೊಂಡ ಒಬ್ಬ ರೈತನ ಉದಾಹರಣೆ ಕೊಟ್ಟರು. ಆತ ಮೂರು ವರ್ಷಗದಿಂದ ಹೂವಿನ ಗಿಡ ಬೆಳೆಯುತ್ತಿದ್ದಾನೆ. ಆ ಗಿಡಗಳು ಬೆಳೆದು ಹೂ ಬಿಡುತ್ತಿವೆ. ಈಗ ನಾವು ನೀರು ನಿಲ್ಲಿಸಿದರೆ ಆ ಗಿಡಗಳೇನಾಗಬೇಕು, ಆತ ಎಲ್ಲಿಗೆ ಹೋಗಬೇಕು? ಹೀಗೆ ನೀರು ಕೊಡುವುದರ ಪರ ಕೆಲವರು ವಾದ ಮಂಡಿಸುತ್ತಾರೆ. ಅದನ್ನು ವಿರೋಧಿಸುವವರು ಕೂಡ ಅಷ್ಟೆ ಬಲವಾಗಿ ಮರಗಳನ್ನು ಮಂಡಿಸುತ್ತಾರೆ. ಅವರು ಯಾರನ್ನು ಕೇಳಿ ಹೆಚ್ಚಿನ ಬೇಸಾಯ ಶುರು ಮಾಡಿದ್ದಾರೆ? ನಮ್ಮಲ್ಲಿ ಅಂದರೆ ಸಂಘದಲ್ಲಿ ಆ ಕುರಿತು ಚರ್ಚೆ ಆಗಿಲ್ಲ. ನಾವು ಅವರಿಗೆ ನೀರು ಕೊಡುತ್ತೇವೆ ಎಂದು ಎಲ್ಲೂ ಭರವಸೆ ನೀಡಿಲ್ಲ. ಸಂಘದ ಕರ್ತವ್ಯ ಅದರ ಸದಸ್ಯರಿಗೆ ಸಂಘದ ಜಮೀನು ಬೇಸಾಯ ಮಾಡಲು ನೀರು ಕೊಡುವುದು. ಊರಲ್ಲಿ ಇರುವ ಎಲ್ಲ ಜಮೀನು ಬೇಸಾಯ ಮಾಡಲು ನೀರು ಕೊಡುತ್ತೇವೆ ಎಂದು ನಾವು ಎಲ್ಲೂ ಹೇಳಿಕೊಂಡು ಬಂದಿಲ್ಲ. ಸಂಘದ ಜಮೀನಿಗೆ ಉಪಯೋಗವಾಗಿ ನೀರು ಉಳಿದರೆ ನಾವು ನಿರ್ಧರಿಸಿದ ಫೀಸು ತೆತ್ತು ಬೇಸಾಯ ಮಾಡಬೇಕು. ಈ ವರ್ಷವಂತೂ ಕರೆಂಟ್ ಕಡಿತದಿಂದ ಸಂಘದ ಹೊಲಗಳಿಗೆ ನೀರಿಲ್ಲ. ಹೀಗಿರುವಾಗ ಸೊಸೈಟಿಗೆ ಸೇರಿರದ ಜಮೀನಿಗೆ ಬೇಸಾಯಕ್ಕೆ ನೀರು ಕೊಡಬೇಕೆಂದು ವಾದಿಸುವುದು ಸರಿಯಲ್ಲ ಎಂದು ಇತರ ಜಮೀನು ಬೇಸಾಯ ಮಾಡುವವರಿಗೆ ನೀರು ಕೊಡುವುದನ್ನು ವಿರೋಧಿಸುವವರು ಹೇಳುತ್ತಾರೆ. ಆ ರೀತಿ ಬೇಸಾಯ ಮಾಡುವವರು ತಮ್ಮ ಕೆಲಸವನ್ನು ಸಮರ್ಥಿಕೊಳ್ಳುತ್ತಿಲ್ಲ. ಅವರ ಪ್ರಕಾರ ಇಷ್ಟರವರೆಗೆ ಇದೊಂದು ಸಮಸ್ಯೆ ಎಂದು ಯಾರು ಪರಿಗಣಿಸಿಲ್ಲ. ಸಂಘದವರು ನೀರಿಗೆ ದರ ನಿರ್ಧರಿಸಿದರೆ ನಾವು ಕೊಡಲು ರೆಡಿ ಇದ್ದೇವೆ. ಸಂಘದ ಜಮೀನಿಗೆ ನಾವು ನೀರಿನ ದರ ತೆತ್ತೇ ಉಪಯೋಗಿಸುತ್ತಿರುವುದು; ಯಾವುದು ಪುಕ್ಸಟ್ಟೆಯಾಗಿ ಇಲ್ಲ. ಹೆಚ್ಚಿನ ಬೇಸಾಯಕ್ಕೆ ಕೇಳಿದರೆ ನಾವು ಕೊಡುತ್ತೇವೆ ಎನ್ನುತ್ತಾರೆ.

ಮೇಲಿನ ವಿವರಗಳು ಮಹಮ್ಮದ್ ನಗರ ಬೇಸಾಯ ಸಹಕಾರ ಸಂಘದ ಕಿರು ಪರಿಚಯ ಮಾಡಿಸಬಹುದು. ತುಂಗಭದ್ರಾ ಆಣೆಕಟ್ಟಿನಿಂದ ಭೂಮಿ ಕಳಕೊಂಡವರಿಗೆ ಪುನರ್ ವಸತಿ ಕಲ್ಪಿಸಲು ಭೂಮಿ ನೀಡಲಾಗಿತ್ತು. ಈ ೫೪ ರೈತರು ಮಾತ್ರ ರೀತಿ ಭೂಮಿ ಪಡೆದವರಲ್ಲ. ಹಳ್ಳಿಗೆ ಹಳ್ಳಿಯೇ ನೀರಿನಿಂದ ಮುಳುಗಿ ಸ್ಥಳಾಂತರವಾದ ಉದಾಹರಣೆಗಳು ತುಂಬ ಇವೆ. ಆ ರೀತಿ ಸ್ಥಳಾಂತರವಾದವರೆಲ್ಲ ಹೊಸ ಜಾಗದಲ್ಲಿ ಸಹಕಾರಿ ಬೇಸಾಯ ಆರಂಭಿಸಿಲ್ಲ. ಹಿಂದಿನ ರೀತಿಯಲ್ಲಿ ಖಾಸಗಿ ಒಡೆತನದಲ್ಲಿ ಬೇಸಾಯ ಮುಂದುವರಿಸಿದ್ದಾರೆ. ಕೆಲವರು ಮಾತ್ರ ಸಹಕಾರಿ ಬೇಸಾಯಕ್ಕೆ ಒಪ್ಪಿಕೊಂಡಿರುವುದು. ಮಹಮ್ಮದ್ ನಗರದ ಸಹಕಾರಿ ಬೇಸಾಯ ಸಂಘ ಅವುಗಳಲ್ಲಿ ಒಂದು. ಮಹಮ್ಮದ್ ನಗರದಲ್ಲಿ ಸಹಕಾರಿ ಬೇಸಾಯ ಆರಂಭವಾಗುವುದರ ಹಿಂದೆ ಅಂದಿನ ಸರಕಾರದ ಸಹಕಾರಿ ನೀತಿ ಮತ್ತು ಸಾಮೂಹಿಕ ಬೇಸಾಯಕ್ಕೆ ಅದು ಕೊಡುತ್ತಿದ್ದ ಬೆಂಬಲದ ಪಾತ್ರ ಇದೆ. ಇದರ ಜತೆಗೆ ಶುರುವಾದ ಇನ್ನು ಕೆಲವು ಸಹಕಾರಿ ಸಂಘಗಳು ಮುಚ್ಚಿ ರೈತರು ಜಮೀನನ್ನು ಖಾಸಗಿ ಒಡೆತನದಲ್ಲಿ ಕೃಷಿ ಮಾಡುತ್ತಿದ್ದಾರೆ. ಇಲ್ಲಿ ಸಂಘ ಇದೆ. ಜತೆಗೆ ಹೊರಗಿನ ಬದಲಾವಣೆಗಳಿವೆ ಹೊಂದಾಣಿಕೆ ಮಾಡಿಕೊಳ್ಳಲು ಸಂಘ ಆಂತರಿಕ ಬದಲಾವಣೆಗಳನ್ನು ಮಾಡುತ್ತಲೇ ಬಂದಿವೆ. ಸಾಮೂಹಿಕ ಬೇಸಾಯ ಬದಲು ಲಾವಣಿ ಆಧಾರಿತ ಖಾಸಗಿ ಬೇಸಾಯ ಮಾಡಿಕೊಂಡರು. ಹೊಸ ವ್ಯವಸ್ಥೆಯಲ್ಲಿ ರೈತರಿಂದ ಲಾವಣಿ ಸಂಗ್ರಹಿಸಿ ನೀರು ಪೂರೈಸುವುದು ಸಂಘದ ಮುಖ್ಯ ಜವಾಬ್ದಾರಿ ಇದನ್ನು ಸಂಘ ತುಂಬ ಕ್ರಮ ಪ್ರಕಾರ ಮಾಡುತ್ತಿದೆ. ದಿನದಿಂದ ದಿನಕ್ಕೆ ಸಂಘ ಬಲಗೊಳ್ಳುತ್ತಿದೆ.