ನೀರು ಮಾನವನಿಗೆ ಅತ್ಯಂತ ಅವಶ್ಯವಾದ ವಸ್ತು. ಮಾನವನ ಉಳಿವು ಮತ್ತು ಬದುಕಿಗೆ ನೀರು ಬೇಕಾಗಿದ್ದು, ಅದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಅವನ ಸರ್ವಾಂಗೀಕ ಬೆಳವಣಿಗೆಗಳಾದ ಕೃಷಿ, ಕೈಗಾರಿಕೆ, ಆರ್ಥಿಕ, ಕಲೆ ಮುಂತಾದ ವಿಷಯಗಳಿಗೆ ಮೂಲ ವಸ್ತು ನೀರು. ಪುರಾತನ ಕಾಲದಿಂದಲೂ ಇಂದಿನವರೆಗೆ ಭಾರತದಲ್ಲಿ ಹಾಗೂ ಇನ್ನಿತರ ದೇಶಗಳಲ್ಲಿಯೂ ಮಾನವನು ಕೃಷಿಯನ್ನೇ ಮುಖ್ಯ ಕಸುಬಾಗಿಸಿಕೊಂಡಿರುವುದು ಇತಿಹಾಸದಿಂದ ತಿಳಿದುಬರುವ ವಿಷಯ. ನೀರಿಗಾಗಿ ಮಾನವನು ನದಿ ಮತ್ತು ಮಳೆಯನ್ನೇ ಪ್ರಧಾನವಾಗಿ ಅವಲಂಬಿಸಿಕೊಂಡಿದ್ದಾನೆ. ನದಿಗಳು ಮಳೆಯ ಮೂಲವನ್ನು ಆಶ್ರಯಿಸಿವೆ. ಮಳೆಯು ನಿಯತಕಾಲಿಕವಾಗಿ ಬೀಳುತ್ತಿ‌ದ್ದು, ಅದು ವರ್ಷದ ಕೆಲ ಮಾಸಗಳಲ್ಲಿ ಮಾತ್ರವಿರುತ್ತಿತ್ತು. ಮಳೆಯು ವಿಫಲವಾದಾಗ ಸಹಜವಾಗಿ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಕೃಷಿಗೆ ಬೇಕಾದ ನೀರು ಯಾವಾಗ ಬೇಕೆಂದರೆ ಆವಾಗದ ದೊರಕದ ಕಾರಣವಾಗಿ ಮಾನವನು ನೀರನ್ನು ಕೃತಕವಾಗಿ ಸಂಗ್ರಹಿಸಿಕೊಂಡು, ಬೇಕೆಂದಾಗ ಕೃಷಿಗೆ ಬಳಸಿಕೊಳ್ಳುತ್ತಿದ್ದರು. ಇಂತಹ ಕೃತಕ ಜಲಸಂಗ್ರಾಹಕಗಳೇ ಕೆರೆಗಳು. ಭಾರತದಲ್ಲಿ ಪ್ರಾಗೈತಿ ಹಾಸಿಕ ಕಾಲದಿಂದಲೂ ಜನರು ಕೃತಕ ಬಲ ಸಂಗ್ರಾಹಕಗಳನ್ನು ನಿರ್ಮಿಸಿ, ನೀರನ್ನು ಶೇಖರಿಸಿ ಕೃಷಿಗೆ ಬಳಸಿಕೊಳ್ಳುತ್ತಿದ್ದುದರ ಬಗೆಗೆ ಸಾಕ್ಷ್ಯಾಧಾರಗಳು ದೊರಕಿವೆ.

ಭಾರತದ ಸಿಂಧೂಕೊಳ್ಳದ ನಾಗರಿಕತೆಯ ಕೆಲವು ನೆಲೆಗಳಲ್ಲಿ ಕೃತಕ ಜಲಸಂಗ್ರಾಹಕಗಳು ಇದ್ದವೆಂಬ ಅಂಶವು ಉತ್ಖನನಗಳಿಂದ ಬೆಳಕಿಗೆ ಬಂದಿವೆ. ಕೆಲವು ಪುರಾತತ್ತ್ವ ವಿದ್ವಾಂಸರುಗಳು, ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಿಗೆ ಕೃಷಿಯನ್ನು ಪ್ರಾರಂಭಿಸಿದರಂದು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಜನರು ಕೃಷಿಯನ್ನು ಈ ಭಾಗಗಳಲ್ಲಿ ಪ್ರಾರಂಭಿಸಿದರೆಂದು ದೊರಕಿರುವ ಪುರಾವೆಗಳ ಆಧಾರಗಳಿಂದ ಈ ಅಭಿಪ್ರಾಯಗಳನ್ನು ಹೊಂದಿರುವರು. ಪ್ರಾಚೀನ ಕೃತಿಗಳಾದ ಯಜುರ್ವೇದ, ಅಥರ್ವವೇದ, ಕೌಟಿಲ್ಯನ ಅರ್ಥಶಾಸ್ತ್ರ, ಮಹಾಭಾರತ, ಜಾತಕ ಕಥೆಗಳು ಮುಂತಾದವುಗಳು ಕೆರೆ ನೀರಾವರಿಯನ್ನು ಕುರಿತ ಹಲವಾರು ಅಂಶಗಳನ್ನು ತಿಳಿಸುತ್ತದೆ.

[1] ಆದಿ ಇತಿಹಾಸ ಕಾಲದಿಂದಲೂ ಕೃಷಿಗೆ ಮುಖ್ಯ ಸ್ಥಾನವನ್ನು ಅಂದಿನ ಜನರು ನೀಡುತ್ತಿದ್ದರು.[2] ಆದಿ ಇತಿಹಾಸ ಕಾಲದ ಕೆಲವು ಶಾಸನಗಳು ಸಹ ಕೆರೆಗಳ ಬಗೆಗೆ ಉಲ್ಲೇಖಿಸುತ್ತವೆ. ನೀರಾವರಿ ತಂತ್ರಜ್ಞಾನಕ್ಕೆ ಪ್ರಸಿದ್ಧಿಯನ್ನು ಪಡೆದ ಸುದರ್ಶನ ಕೆರೆಯ ಉಲ್ಲೇಖವನ್ನು ಗುಜರಾತಿನಲ್ಲಿರುವ ಜುನಾಗಡದ ರಾಜ ಮಹಾಕ್ಷತ್ರಪ ರುದ್ರದಾಮನ ಶಾಸನವು ತಿಳಿಸುತ್ತದೆ.[3] ಈ ಕೆರೆಯನ್ನು ಚಂದ್ರಗುಪ್ತ ಮೌರ್ಯನ (ಕ್ರಿ.ಪೂ. ೩೨೪-೩೦೦) ಪ್ರಾಂತೀಯ ರಾಜ್ಯಪಾಲನಾದ ವೈಶ್ಯ ಪುಷ್ಯಗುಪ್ತನೆಂಬುವನು ಕಟ್ಟಿಸಿದನು. ಇದನ್ನು ಓರ್ವ ಯುವರಾಜನು ಅಭಿವೃದ್ಧಿಗೊಳಿಸಿದನು. ನಂತರ ಅಶೋಕನ ಕಾಲದಲ್ಲಿ ಪ್ರಾಂತೀಯ ರಾಜ್ಯಪಾಲನು ಕೆರೆಯ ಹೂಳನ್ನು ಎತ್ತಿ ನೀರು ಹರಿಯುವ ಕಾಲುವೆಗಳನ್ನು ದುರಸ್ತಿಗೊಳಿಸಿದನು.

ದಕ್ಷಿಣ ಭಾರತದಲ್ಲಿ ಕ್ರಿಸ್ತಾಬ್ದದ ಪ್ರಾರಂಭದಲ್ಲಿ ಚೋಳರು ಸಹ ನೀರಾವರಿ ವ್ಯವಸ್ಥೆಗೆ ಸಾಕಷ್ಟು ಉತ್ತೇಜನವಿತ್ತರು. ಅವರ ತರುವಾಯದಲ್ಲಿ ಶಾತವಾಹನರು, ಇಕ್ಷ್ವಾಕುಗಳು ಸಹ ಕೆರೆಗಳ ಬಗೆಗೆ ಸಾಕಷ್ಟು ಕಾಳಜಿವಹಿಸಿ ಉತ್ತೇಜನವನ್ನು ನೀಡಿರುವುದು ಪುರಾತತ್ವೀಯವಾಗಿ ಪುರಾವೆಗಳು ಸಿಕ್ಕಿವೆ. ಪಲ್ಲವರು, ಚೋಳರು, ಪಾಂಡ್ಯರು, ಕದಂಬ, ಗಂಗರು, ಚಾಳುಕ್ಯರು, ಹೊಯ್ಸಳರು, ಹಿಂದಿನ ಅರಸರ ಸಾರ್ವಜನಿಕ ಹಿತಾಶಕ್ತಿ ಕಾರ್ಯಗಳನ್ನು ಮುಂದುವರಿಸಿಕೊಂಡು ಸಾಗಿದರು. ಇವರ ಕಾಲದ ಅನೇಕ ಶಾಸನಗಳು ವಿಫುಲವಾದ ಮಾಹಿತಿಗಳನ್ನು ನಮಗೆ ಒದಗಿಸಿಕೊಡುತ್ತದೆ.[4]ಕರ್ನಾಟಕದ ಚಂದ್ರವಳ್ಳಿ ಕೆರೆ,[5] ತಮಿಳುನಾಡಿನ ವೈರಮೇಘ ತಟಾಕ,[6]ಆಂಧ್ರಪ್ರದೇಶ ಕವಿತಾಗುಣಾರ್ಣವ ಕೆರೆಗಳು[7] ಇತಿಹಾಸ ಕಾಲದಿಂದಲೂ ಪ್ರಸಿದ್ಧಿಯನ್ನು ಪಡೆದ ಕೆರೆಗಳಾಗಿವೆ.

ವಿಜಯನಗರದ ಇತಿಹಾಸವು ದಕ್ಷಿಣ ಭಾರತದ ಇತಿಹಾಸದಲ್ಲಿಯೇ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಿಜಯನಗರ ಇತಿಹಾಸದ ಪೂರ್ವದಲ್ಲಿದ್ದ ರಾಜಕೀಯ ಪರಿಸ್ಥಿತಿಯು, ವಿಜಯನಗರ ಇತಿಹಾಸದಲ್ಲಿಯೇ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ವಿಜಯನಗರ ಇತಿಹಾಸದ ಪೂರ್ವದಲ್ಲಿದ್ದ ರಾಜಕೀಯ ಪರಿಸ್ಥಿತಿಯು, ವಿಜಯನಗರದ ಅರಸರು ಆಳ್ವಿಕೆಯನ್ನು ಪ್ರಾರಂಭಿಸಿದ ಕಾಲದಿಂದ ಹೊಸ ಆಯಾಮಗಳನ್ನು ಪಡೆದು, ನವ ಚೈನತ್ಯದೊಂದಿಗೆ ಚದುರಿ ಹಂಚಿಹೋಗಿದ್ದ ರಾಜ್ಯಗಳು ಒಂದಾದವು. ಪರಕೀಯರ ದಾಳಿಗೆ ಒಳಗಾಗಿ ರಾಜಕೀಯ ಅಭದ್ರತೆಯು, ಒಂದು ಹೊಸ ಬುನಾದಿಯೊಂದಿಗೆ ನಿರ್ದಿಷ್ಟರೂಪ ಪಡೆದದ್ದು ವಿಜಯನಗರದ ಅರಸರ ಆಳ್ವಿಕೆಯಿಂದಲೇ ಎಂಬುದು ಸ್ಪಷ್ಟವಾಗಿದೆ. ಇವರ ಕಾಲದಲ್ಲಿ ಇಡೀ ದಕ್ಷಿಣ ಭಾರತವು ಒಂದಾಗಿ ಸಮಗ್ರತೆಯನ್ನು ಪಡೆಯಿತು. ಇಂದಿನ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ಮತ್ತು ಕೇರಳದ ಭಾಗಗಳನ್ನು ಒಳಗೊಂಡಂತೆ ವಿಜಯನಗರ ಸಾಮ್ರಾಜ್ಯವು ವ್ಯಾಪಿಸಿತ್ತು. ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿಯೂ ಈ ಅರಸು ಮನೆತನವು ಸುಭದ್ರತೆಯನ್ನು ತಂದುಕೊಟ್ಟಿತು. ಆರ್ಥಿಕ ಕ್ಷೇತ್ರಗಳಲ್ಲಿಯೂ ಈ ಅರಸು ಮನೆತನವು ಸುಭದ್ರತೆಯನ್ನು ತಂದುಕೊಟ್ಟಿತು. ಆರ್ಥಿಕ ಭದ್ರತೆಯನ್ನು ಮುಖ್ಯ ಕಾರಣವು, ಅವರು ಕೃಷಿ ಮತ್ತು ವ್ಯಾಪಾರಕ್ಕೆ ನೀಡಿದ ಉತ್ತೇಜನ ಮತ್ತು ಪ್ರಾಮುಖ್ಯತೆಯೆಂದರೆ ತಪ್ಪಾಗಲಾರದು. ವಿಜಯನಗರದರಸರು ಹಿಂದಿನ ಅರಸು ಮನೆಗಳವರು ಕೈಗೊಂಡ ಪ್ರಜಾಹಿತಾತ್ಮಕ ಕಾರ್ಯಗಳನ್ನು ಮುಂದುವರಿಸಿದರು. ನದಿ ಮತ್ತು ಹಳ್ಳಗಳಿಗೆ ಹೊಸ ಅಣೆಕಟ್ಟುಗಳನ್ನು ನಿರ್ಮಿಸುವುದು, ಬಾವಿ, ಕುಂಟೆ, ಕೆರೆ ಮುಂತಾದವುಗಳನ್ನು ನಿರ್ಮಿಸುವುದರ ಮೂಲಕ ಕೃಷಿಗೆ ನವಚೈತನ್ಯವನ್ನು ತುಂಬಿದರು. ಬೀಳು ಬಿದ್ದ ಭೂಮಿಯನ್ನು ಮತ್ತು ಹೆಚ್ಚುವರಿ ಪ್ರದೇಶಗಳನ್ನು ಕೃಷಿಗೆ ಒಳಪಡಿಸಿದರು. ಇವುಗಳಿಂದ ರಾಜ್ಯದ ಬೊಕ್ಕಸವು ತುಂಬಿ ಆರ್ಥಿಕ ಭದ್ರತೆಯನ್ನು ಕಂಡಿತು.

ವಿಜಯನಗರ ಕಾಲದಲ್ಲಿಯೂದ ಕೆರೆ ಕಟ್ಟಿಸುವುದು, ಬಾವಿ ತೋಡಿಸುವುದು ಮುಂತಾದ ಕೆಲಸಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯ ಕೆಲಸವೆಂದು ಪರಿಗಣಿಸಲಾಗಿತ್ತು. ಇವರ ಪೂರ್ವದ ಕಾಲದಲ್ಲಿದ್ದ ಈ ನಂಬಿಕೆಯು ಮುಂದುವರೆದು ನಿರ್ದಿಷ್ಟ ರೂಪವನ್ನು ಪಡೆಯಿತೆಂಬುದು ವಿಜಯನಗರ ಕಾಲದ ಕ್ರಿ.ಶ. ೧೪೧೦ರ ಮೊದಲನೆಯ ದೇವರಾಯನ ಕಾಲದಲ್ಲಿ ರಚನೆಗೊಂಡ ಶಾಸನದಿಂದ ತಿಳಿಯುತ್ತದೆ. ಅದರಂತೆ ಮಧುರಕವಿಯು, ಲಕ್ಷ್ಮೀಧರನ ತಾಯಿಯು ಮಗನಿಗೆ ಹಾಲನ್ನು ನೀಡುವ ಸಂದರ್ಭದಲ್ಲಿ ಏಳು ಉತ್ತಮ ಕೆಲಸಗಳನ್ನು ಮಾಡುವುದು ಎಂದು ಹೇಳುತ್ತಾಳೆ.[8] ಇದರಲ್ಲಿ ಕೆರೆ ಕಟ್ಟುವುದು, ಬಾವಿ ತೋಡಿಸುವುದು, ದೇವಾಲಯ ನಿರ್ಮಿಸುವುದು, ಸೆರೆಯಾಳುಗಳನ್ನು ಬಿಡಿಸುವುದು, ಉತ್ತಮರನ್ನು ರಕ್ಷಿಸುವುದು, ಸಜ್ಜನ/ಮಿತ್ರರಿಗೆ ಆಶ್ರಯ ನಿಡುವುದು, ನಂಬಿದವರನ್ನು ಕೈ ಬಿಡದೆ ಕಾಪಾಡುವುದು ಮುಂತಾದ ವಿಷಯಗಳನ್ನು ಮಗನಿಗೆ ಹಾಲನ್ನು ನೀಡುವಾಗ ಹೇಳಿ ಕೈಕೂಸಾಗಿದ್ದಾಗಲೇ ಪ್ರಜಾಹಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳುವುದು ಅಂದಿನ ಕಾಲದಲ್ಲಿದ್ದ ಸಾಮಾಜಿಕ ಪ್ರಜ್ಞೆಯನ್ನು ನಮಗೆ ತಿಳಿಸಿಕೊಡುತ್ತವೆ. ಕೆರೆಗಳನ್ನು ನಿರ್ಮಿಸುವುದು ಪುಣ್ಯ ಕೆಲಸವೆಂದು, ಧಾರ್ಮಿಕ ಲೇಪನದೊಂದಿಗೆ ಈ ಕೆಲಸಗಳನ್ನು ಮಾಡಿಸುತ್ತಿದ್ದುದರ ಹಿನ್ನೆಲೆಯ ಸಾಮಾಜಿಕ ಏಳಿಗೆ ಮತ್ತು ಉನ್ನತಿಗಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾಹಿತಾತ್ಮಕ ಕೆಲಸಗಳಲ್ಲಿ ಕೆರೆ ಕಟ್ಟಿಸುವುದು, ಬಾವಿ ತೋಡಿಸುವುದು ಮುಂತಾದ ಕೆಲಸಗಳಿಂದ ಪುಣ್ಯವು ದೊರಕುತ್ತದೆ ಎಂದು ಸಾಮಾನ್ಯ ಜನರು, ಅಧಿಕಾರಿಗಳು, ಅರಸರು, ಮಾಂಡಲಿಕರು, ವ್ಯಾಪಾರಿಗಳು ಇಂತಹ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅವರುಗಳು ನಿರ್ಮಿಸಿದ ಕೆರೆ, ಕುಂಟೆಗಳಿಗೆ ಹಿರಿಯರ, ಅರಸರ, ತಂದೆ, ತಾಯಿ, ಸಹೋದರ, ಸಹೋದರಿ, ಪುತ್ರ, ಪುತ್ರಿಯರ ಹೆಸರುಗಳನ್ನು ಇರಿಸಿ, ಅವರುಗಳ ಹೆಸರುಗಳ ಶಾಶ್ವತವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ವಿಜಯನಗರ ಕಾಲದಲ್ಲಿ ಹೇಗೆ ನೀರಾವರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದರೆಂಬುದನ್ನು ಅವರ ಕಾಲಕ್ಕೆ ಸೇರಿದ ಕೆರೆಗಳು, ಅಣೆಕಟ್ಟೆಗಳು, ನಾಲೆಗಳು ಮತ್ತು ಶಾಸನಗಳ ಆಧಾರಗಳಿಂದ ಅರಿಯಬಹುದು. ಅವರು ನಿರ್ಮಿಸಿದ ಅನೇಕ ಕೆರೆಗಳು ಉಳಿದು ಬಂದ್ದಿದ್ದು ಇಂದಿಗೂ ಅವುಗಳನ್ನು ಬಳಸಲಾಗುತ್ತಿದೆ. ಪುರಾತತ್ವೀಯ ಆಧಾರಗಳಿಗಿಂತ ಶಾಸನಗಳಿಂದ ಅನೇಕ ಮಾಹಿತಿಗಳು ನಮಗೆ ದೊರಕುತ್ತವೆ. ದಕ್ಷಿಣ ಭಾರತದ ಇಂದಿನ ನಾಲ್ಕು ರಾಜ್ಯಗಳನ್ನು, ಅಂದಿನ ವಿಜಯನಗರದ ಸಾಮ್ರಾಜ್ಯವು ಆವರಿಸಿತ್ತು. ಈ ಎಲ್ಲಾ ರಾಜ್ಯಗಳಿಂದ ಇಂದಿನವರೆಗೆ ಸುಮಾರು ಹತ್ತು ಸಾವಿರಕ್ಕೂ ಅಧಿಕವಾದ ಅವರ ಶಾಸನಗಳು ದೊರಕಿವೆ. ಅವುಗಳ ಕೂಲಂಕಷ ಅಧ್ಯಯನದಿಂದ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಲಿವೆ. ಶಾಸನಗಳ ಒಂದು ಅಂಕಿ ಅಂಶದಂತೆ ವಿಜಯನಗರ ಕಾಲದಲ್ಲಿ ಕೆರೆ ನಿರ್ಮಿಸಿದವರ ಶೇಕಡಾವಾರು ವಿವರಗಳು ಇಂತಿವೆ.[9]

ಕ್ರ.ಸಂ ಕೆರೆ ಕಟ್ಟಿಸದ ವರ್ಗ ಶೇಕಡ
೧. ಅರಸರು ೫.೭೨
೨. ಮಂತ್ರಿವರ್ಗ ೭.೯೦
೩. ಸ್ಥಳೀಯ ಅಧಿಕಾರಿಗಳು ೨೯.೯೦
೪. ಸಾಮಂತರು ೨೦.೫೪
೫. ವ್ಯಾಪಾರಿ, ಸಂಘಸಂಸ್ಥೆಗಳು, ವ್ಯಕ್ತಿಗಳು ೨೬.೫೬
೬. ಕೇಂದ್ರ ಅಧಿಕಾರಿಗಳು ೫.೭೨
೭. ಪ್ರಾಂತೀಯ ಅಧಿಕಾರಿಗಳು ೩.೬೬

ವಿಜಯನಗರ ಕಾಲದ ಕೆರೆಗಳ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವವನ್ನು ಎರಡು ಹಂತಗಳಲ್ಲಿ ಗುರುತಿಸಬಹುದು. ಮೊದಲನೆಯ ಹಂತದಲ್ಲಿ ಕೆರೆಗಳನ್ನು ಕಟ್ಟುವುದು ಮತ್ತು ಕೆರೆಯ ನೀರನ್ನು ವಿತರಿಸುವುದು ಆಗಿದ್ದರೆ, ಎರಡನೆಯ ಹಂತದಲ್ಲಿ ಕೆರೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರುವಲ್ಲಿ ಜನರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಮೇಲೆ ಸುಸ್ಥಿತಿಯಲ್ಲಿಟ್ಟುಕೊಂಡಿರುವಲ್ಲಿ ಜನರು ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಈ ಮೇಲೆ ನೀಡಿರುವ ಅಂಕಿಅಂಶಗಳಂತೆ ಕೆರೆಗಳನ್ನು ನಿರ್ಮಿಸುತ್ತಿದ್ದವರಲ್ಲಿ ಸ್ಥಳೀಯ ಅಧಿಕಾರಿಗಳು, ವ್ಯಾಪಾರಿಗಳು, ಸಂಘಸಂಸ್ಥೆಗಳು, ವ್ಯಕ್ತಿಗಳು ಮತ್ತು ಸಾಮಂತರುಗಳು ಅಧಿಕವಾಗಿ ತೊಡಗಿಸಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಸ್ಥಳೀಯವಾಗಿ ದೊರಕುತ್ತಿದ್ದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸಮಪರ್ಕವಾಗಿ ಬಳಸಿಕೊಳ್ಳುತ್ತಿದ್ದರೆಂಬ ಅಂಶವು ಸ್ಪಷ್ಟವಾಗುತ್ತದೆ.

ಕ್ರಿ.ಶ. ೧೩೫೭ ಶಾಸನದಂತೆ ಮೊದಲನೆಯ ಬುಕ್ಕನು ರಾಜಕುಮಾರನಾಗಿದ್ದಾಗ, ಮಹಾವಡ್ಡ ವ್ಯವಹಾರಿ ಮಹದೇವಣ್ಣನು ಅರಸನಿಂದ ಅಪ್ಪಣೆ ಪಡೆದು ಲಕ್ಷ್ಮೀಪುರ ಎಂಬ ಹಳ್ಳಿ ಮತ್ತು ಅಲ್ಲಿ ಕೆರೆಯನ್ನು ನಿರ್ಮಿಸಿದ. ಈ ಕೆರೆಯಿಂದ ಹೊರಟ ಕಾಲುವೆಗೆ “ರಾಜ ಕಾಲುವೆ” ಯೆಂದು ಹೆಸರಿಸಲಾಗಿದ್ದು, ಆ ಕಾಲುವೆಯು ನಾಲ್ಕು ಊರುಗಳ ಮೂಲಕ ಹರಿದುಹೋಗುತ್ತಿತ್ತು. ಸದರು ಪ್ರದೇಶವನ್ನು ರಾಜಕುಮಾರನ ಆಳ್ವಿಕೆಗೆ ಒಳಪಟ್ಟಿದ್ದವು. ಹರಿಹರ ಮಹಾರಾಜನು, ಈ ಕಾಲುವೆಯ ಎರಡು ಬದಿಗಳಿಗೆ ಕಲ್ಲು ಚಪ್ಪಡಿಗಳನ್ನು ಅಳವಡಿಸಬೇಕೆಂದು ಆಜ್ಞೆ ಮಾಡಿದನು. ಅದರಂತೆ ರಾಜಕುಮಾರ ಮತ್ತು ಪ್ರಧಾನ ಸೋವಪ್ಪ ರಸ ಕಲ್ಲಿನ ಹೊದಿಕೆಯನ್ನು ಪೂರೈಸಿದರು.[10] ಕಾಲುವೆಗೆ ಕಲ್ಲುಚಪ್ಪಡಿಗಳನ್ನು ಕೂರಿಸುವುದರಿಂದ ನೀರು ವೃಥಾ ಪೋಲಾಗದಂತೆ ಹರಿದು ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ಮಾಡಿದವರಿಗೆ ಉಂಬಳಿಯನ್ನು ನೀಡಲಾಯಿತು. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪೊರುಮಾಮಿಲ್ಲ ಕೆರೆಯು ಹಲವಾರು ವಿಷಯಗಳಿಗೆ ಮಹತ್ವವನ್ನು ಪಡೆದಿದೆ. ಈ ಕೆರೆಯ ಸಮೀಪವಿರುವ ಶಾಸನವು ಕೆರೆಗಳ ನಿರ್ಮಾಣದ ಮತ್ತು ನಿರ್ವಹಣೆಯನ್ನು ಕುರಿತ ಮುಖ್ಯವಾದ ಮಾಹಿತಿಯನ್ನು ನೀಡುತ್ತದೆ.[11] ಒಂದು ಕೆರೆಯನ್ನು ನಿರ್ಮಾಣ ಮಾಡಬೇಕಾದರೆ, ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಮುನ್ನೆಚ್ಚರಿಕೆಯ ಕ್ರಮಗಳನ್ನು ಸಹ ತಿಳಿಸುತ್ತದೆ. ಸದರಿ ಕೆರೆಯು ಇಂದಿಗೂ ಬಳಕೆಯಲ್ಲಿದ್ದು, ಅಂದಿನ ಕಾಲದ ಉನ್ನತಮಟ್ಟದ ತಂತ್ರಜ್ಞಾನವನ್ನು ಪರಿಚಯಿಸುತ್ತದೆ. ಕಡಪಾ ಜಿಲೆಲಯ ಇಂದಕೂರು ಗ್ರಾಮದ ಕ್ರಿ.ಶ.೧೩೮೬ ಶಾಸನವು ಎರಗಮರೆಡಿ ಮತ್ತು ಮಾರಂರೆಡಿ ಎಂಬ ಸಹೋದರರು ಕೆರೆಯನ್ನು ನಿರ್ಮಿಸಿದರೆಂದು ಹೇಳುತ್ತದೆ.[12]ಕ್ರಿ.ಶ. ೧೩೯೭ ಕರ್ನೂಲು ಜಿಲ್ಲೆಯ ತಿರುಮೆಲ್ಲಾದ ಶಾನಸವು ಕಠಾರಿ ಸಾಳುವ ಗುಂಡಯ್ಯದೇವ ಮಹಾರಾಜನು ಅಲ್ಲಿಯ ಪ್ರಾಂತೀಯ ಅಧಿಕಾರಿಯಾಗಿದ್ದಾಗ ಹಲವಾರು ಕುಟುಂಬಗಳು, ಹಳ್ಳಿಯ ಕರ್ಣಗಳು (ಶಾನುಭೋಗರು) ಸೇರಿದಂತೆ, ಕೆರೆಯ ನಿರ್ಮಾಣ ಮಾಡಿ, ಕೆರೆಯ ಕೆಳಗಣ ಭೂಮಿಯನ್ನು ಹಂಚಿಕೊಂಡರು ಎಂದು ಉಲ್ಲೇಖಿಸುತ್ತದೆ.[13] ಹಂಪಿಯಲ್ಲಿನ ಒಂದು ಶಾಸನದಂತೆ ವಿರೂಪಾಕ್ಷ ಪಂಡಿತ ಮತ್ತು ವಿನಾಯಕ ಪಂಡಿತ ಎಂಬ ಸಹೋದರರು ಒಂದು ಹೊಸ ದೇವಾಲಯ ಸರೋವರಗಳನ್ನು ಕ್ರಿ.ಶ. ೧೩೯೬ರಲ್ಲಿ ನಿರ್ಮಿಸಿದರೆಂದು ತಿಳಿಸುತ್ತದೆ.[14]

ಕೆರೆಗಳ ನಿರ್ಮಾಣ ಕಾರ್ಯಗಳಲ್ಲಿ ಸ್ತ್ರೀಯರು ತೊಡಗಿಸಿಕೊಳ್ಳುತ್ತಿದ್ದರು ಎಂಬುದು ವಿಜಯನಗರ ಕಾಲದ ಶಾಸನಗಳಿಂದ ತಿಳಿದುಬರುವ ವಿಷಯ. ಬುಕ್ಕರಾಯನ ಪುತ್ರಿ ಜೊಮ್ಮದೇವಿ ಪೆನುಗೊಂಡೆಯ ನಿವಾಸಿಯಾಗಿದ್ದು, ತಿರುಮಣೆಯೂರಿನಲ್ಲಿ ಒಂದು ಕೆರೆಗೆ ನೀರು ಹರಿದು ಬರುವಂತೆ ಕಾಲುವೆಯನ್ನು ಅಗೆಸಿದಳು. ಪೆದ್ದಭೈರೋಜ ಮತ್ತು ಪಿನ್ನಭೈರೋಜ ಎಂಬುವವರು ಈ ಕೆಲಸವನ್ನು ಸಮಪರ್ಕವಾಗಿ ನಿರ್ವಹಿಸಿದರೆ ೧೩೦ ಬಂಗಾರನಾಣ್ಯ (ಸಿಂಗೆಯ ಗದ್ಯಾಣ), ತೂಬಿನಡಿಯ ಭೂಮಿ, ಹಳ್ಳಿಯಲ್ಲಿ ಮನೆ, ಬಂಗಾರದ ಕಡಗ ನೀಡಬೇಕೆಂಬ ಒಪ್ಪಂದದ ಮೇರೆಗೆ ಕೆಲಸವನ್ನು ಪ್ರಾರಂಭಿಸಿದರು. ಕೆಲಸವು ಅಸಪರ್ಮಕವಾದಲ್ಲಿ ಅವರು ಪಡೆದ ಎಲ್ಲ ವಸ್ತುಗಳನ್ನು ಹಿಂತಿರುಗಿಸಬೇಕೆಂದು ಸಹ ಒಪ್ಪಂದವಾಗಿತ್ತು. ಆದರೆ ಇವರಿಬ್ಬರೂ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲಾ ವಸ್ತುಗಳನ್ನು ಹೊಂದಿದರು ಎಂದು ಕ್ರಿ.ಶ.೧೩೯೭ ಶಾಸನವು ಹೇಳುತ್ತದೆ,[15] ಕ್ರಿ.ಶ.೧೪೦೩ರ ಶಾಸನದಂತೆ ಇರುಗಶೆಟ್ಟಿ ಎಂಬ ವ್ಯಾಪಾರಿಯು ಆರು ಕೆರೆಗಳನ್ನು ಮತ್ತು ವೀರಭದ್ರ ದೇವಾಲಯಗಳನ್ನು ನಿರ್ಮಿಸಿ, ಆ ಕೆರೆಯ ಸಾಗುವಳಿ ಉತ್ಪನ್ನಗಳನ್ನು ದೇವಾಲಯಕ್ಕೆ ದಾನವಾಗಿ ನೀಡಬೇಕೆಂಬ ಷರತ್ತನ್ನು ವಿಧಿಸಿದ್ದನು.[16]

ಕೆಲವು ಸಂದರ್ಭಗಳಲ್ಲಿ ರಾಜ್ಯವು ವ್ಯಕ್ತಿಗಳಿಗೆ ಭೂಮಿಯನ್ನು ನೀಡಿ, ಆ ಭೂಮಿಯನ್ನು ಕೆರೆಗಳ ನಿರ್ಮಾಣಕ್ಕೆ ಬಳಸಬೇಕೆಂದು ಹೇಳುತ್ತಿದ್ದರು. ಕ್ರಿ.ಶ. ೧೪೧೬ ಶಾಸನವು ಈ ವಿಷಯದ ಬಗೆಗೆ ಬೆಳಕನ್ನು ಚೆಲ್ಲುತ್ತದೆ.[17] ಅದರಂತೆ “ನಾವು ನಿಮಗೆ ತುಂಡುಭೂಮಿ ನೀಡುವೆವು ಅದರಲ್ಲಿ ಕಾಡುಕಡಿದು, ಸಾಗುವಳಿಗೆ ಏರ್ಪಡಿಸಬೇಕು ನೀವು ತೋಡುವ ಕೆರೆಯನ್ನು ಬಳಸಬೇಕು” ಎಂದು ಮತ್ತು ಕೆರ ನಿರ್ಮಿಸಿದವರು ಹಾಗೂ ರಾಜ್ಯವು ೩:೧ ದಾಮಾಂಶದಂತೆ ಅಲ್ಲಿಯ ಭೂಮಿಯನ್ನು ಹಂಚಿಕೊಳ್ಳಬೇಕೆಂದು ಸೂಚಿಸಿರುವುದು ಗಮನಾರ್ಹ.

ನೆಲ್ಲೂರು ಜಿಲ್ಲೆಯ ವೆಂಕಟಾಪುರಹಳ್ಳಿಯ ತೆಲುಗು ಶಾಸನವು ಕುತೂಹಲಕಾರಿಯಾಗಿದೆ. ಇದರ ತೇದಿಯು ಕ್ರಿ.ಶ. ೧೪೨೬. ಈ ಶಾಸನದಂತೆ ದಾನಿಯು ತನ್ನ ವಶದಲ್ಲಿದ್ದ ಕೆರೆಯನ್ನು ಮಾರಾಟ ಮಾಡಿದುದನ್ನು ತಿಳಿಸುವ ಶಾಸನವು ಕೆರೆಯನ್ನು ‘ದಾಸವಂದನಕು ಕಟ್ಟಿಂಚಿನ ಚೆರುವು’ ಎಂದು ಉಲ್ಲೇಖಿಸುತ್ತದೆ.[18] ಉದಯಗಿರಿ ರಾಜ್ಯದಲ್ಲಿದ್ದ ಬೋಯವೀಡು ಮತ್ತು ಕುಡಿಚಿಪಾಡು ಎಂಬ ಗ್ರಾಮಗಳಲ್ಲಿ ನಿರ್ಮಿಸಿದ್ದ ಕೆರೆಗಳನ್ನು ಬಾಯಿಚಿನ್ನಬ್ಬೋಯಡು ಎಂಬ ವ್ಯಕ್ತಿಗೆ ಮಾರಾಟ ಮಾಡಿದುದನ್ನು ಶಾಸನವು ದಾಖಲಿಸಿದೆ. ಕೆರೆಗಳು ರಾಜ್ಯದ ಒಂದು ಭಾಗವಾಗಿದ್ದರೂ, ಕೆಲವೊಂದು ನಿದರ್ಶನಗಳಲ್ಲಿ ವೈಯಕ್ತಿಕ ಆಸ್ತಿಯಾಗಿದ್ದು, ಅವುಗಳನ್ನು ಮಾರಾಟ ಮಾಡುವ ಹಕ್ಕು ಅದರ ನಿರ್ಮಾತೃವಿಗೆ ಇತ್ತೆಂದು ಮೇಲಿನ ಶಾಸನದಿಂದ ಸ್ಪಷ್ಟವಾಗುತ್ತದೆ.

ಜನರಂತೆ ದೇವಾಲಯಗಳು ಸಹ ಜನರ ಹಿತಾತ್ಮಕ ಕಾರ್ಯಗಳಲ್ಲಿ ತೊಡಗಿದ್ದವು. ಅದರಂತೆ ಅವುಗಳು ಅಂದಿನ ಸಮಾಜವನ್ನು ನಿಯಂತ್ರಿಸುತ್ತಿತ್ತು. ಈ ದಿಸೆಯಲ್ಲಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಯ ದೇವಾಲಯವು ಮುಖ್ಯಪಾತ್ರವನ್ನು ವಹಿಸುತ್ತದೆ. ಈ ದೇವಾಲಯದಲ್ಲಿ ಮತ್ತು ಅದರ ಸಮೀಪದಲ್ಲಿರುವ ದೇವಾಲಯಗಳಲ್ಲಿ ಒಂದು ಸಾವಿರಕ್ಕೂ ಅಧಿಕವಾದ ಶಾಸನಗಳು ಲಭ್ಯವಿದೆ. ಅವುಗಳಲ್ಲಿ ಬಹುಪಾಲು ಶಾಸನಗಳು ವಿಜಯನಗರ ಕಾಲಕ್ಕೆ ಸೇರಿದ್ದು, ದೇವಾಲಯಕ್ಕೆ ನೀಡಿದ ದಾನ ವಿವರಗಳಿವೆ. ದೇವಸ್ಥಾನದ ಕ್ರಿ.ಶ. ೧೪೫೬ ಶಾಸನದಂತೆ ಕೋವಿಲ್ ಕೇಳ್ವಿ ಎಂಪೆರುಮನಾರ್ ಜೀಯರ್ ೫,೦೦೦ ನರ್‌ಪಣಂ (ಬಂಗಾರದ ನಾಣ್ಯ)ಗಳನ್ನು ಶ್ರೀ ಭಂಡಾರಕ್ಕೆ ಸಲ್ಲಿಸಿದರು. ಆ ಹಣವನ್ನು ದೇವಾಲಯಕ್ಕೆ ಸೇರಿದ ಭೂಮಿಯನ್ನು ಬಳಸಿ ಕೃಷಿ ಮಾಡಿ ಅದರ ಉತ್ಪನ್ನಗಳನ್ನು ದೇವಾಲಯಕ್ಕೆ ಸೇರುವಂತಹ ವ್ಯವಸ್ಥೆಯನ್ನು ದೇವಾಲಯದ ಉಸ್ತುವಾರಿ ಸಮಿತಿಯವರು ಏರ್ಪಾಡುಗಳನ್ನು ಮಾಡಿದರು.[19] ಕ್ರಿ.ಶ. ೧೫೦೭ ಶಾಸನದಂತೆ ತಿಪ್ಪಶೆಟ್ಟಿಯೆಂಬ ವ್ಯಕ್ತಿಯು ೮,೩೦೫ ಪಣಂಗಳನ್ನು ದೇವಾಲಯದಲ್ಲಿ ಠೇವಣಿಯಾಗಿಟ್ಟು, ಆ ಹಣದಿಂದ ದೇವಾಲಯಗಳ ಹಳ್ಳಿ ಮತ್ತು ಕೆರೆ-ಕಾಲುವೆಗಳ ರಚನೆಗೆ ಬಳಸಬೇಕೆಂದು ಷರತ್ತನ್ನು ವಿಧಿಸಿದ್ದರು.[20] ಶ್ರೀಶೈಲದ ಮತ್ತೊಂದು ಶಾಸನವು ಕ್ರಿ.ಶ.೧೫೧೬ಕ್ಕೆ ಸೇರಿದ್ದು, ಸಿದ್ಧಾಪುರದಲ್ಲಿನ ದಂಪತಿಗಲು ಒಂದು ಕೆರೆಯನ್ನು ನಿರ್ಮಿಸಿದರೆಂದು ಹೇಳುತ್ತದೆ.[21] ಕೃಷ್ಣದೇವರಾಯನ ಕ್ಷೌರಿಕ ಜೀಯಪ್ಪ ನಾಯಕನ ಸಹಾಯಕ ಭೂಪತಿರಾಜು ಒಂದು ಕೆರೆಯನ್ನು ದುರಸ್ತಿಗೊಳಿಸಿ ಕಡೂರು ಜಿಲ್ಲೆಯ ಯಾಗಟ್ಟಹಳ್ಳಿಯ ದೇವಾಲಯಕ್ಕೆ ದಾನ ನೀಡಿದನೆಂದು ಒಂದು ಶಾಸನ ದಾಖಲಿಸಿದೆ.[22] ತಮಿಳುನಾಡಿನ ಶ್ರೀರಂಗಂನ ಶಾಸನದಂತೆ ರಾಮಾನುಜದಾಸ ಬಿನ್ ಲಕ್ಷ್ಮೀಪತಿಶೆಟ್ಟಿ ಮತ್ತು ಆತನ ಸಹೋದರ ಅಂತಪ್ಪ ದೇವಾಲಯದ ಭಂಡಾರಕ್ಕೆ ೧೦,೫೦೦ ಚಕ್ರಪಣಂಗಳನ್ನು ಠೇವಣಿಯಾಗಿ ನೀಡಿ, ಭೂಮಿಯ ಅಭಿವೃದ್ಧಿಗೆ ಬಳಸಬೇಕೆಂದು ತಿಳಿಸುತ್ತಾರೆ.[23] ಈ ರೀತಿಯಾಗಿ ಸಮಾಜದ ಎಲ್ಲಾ ವರ್ಗಗಳಿಗೆ ಸೇರಿದ ಜನರು ಕೆರೆ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೇಲೆ ವಿವರಿಸಿದವುಗಳು ಕೆರೆಗಳನ್ನು ಕಟ್ಟುವುದರ ಬಗೆಗೆ ತಿಳಿಸಿದರೆ, ಎರಡನೆಯ ಭಾಗದಲ್ಲಿ ಕೆರೆಗಳು ನಿರ್ಮಾಣಗೊಂಡ ನಂತರ ಅವುಗಳ ದುರಸ್ತಿ, ಉಸ್ತುವಾರಿ ಮತ್ತು ಸಂರಕ್ಷಣೆಯಲ್ಲಿ ಜನರು ಹೇಗೆ ತೊಡಗಿಸಿಕೊಂಡಿದ್ದರು ಎಂಬ ಅಂಶಗಳನ್ನು ಶಾಸನಗಳ ಆಧಾರದಿಂದಲೇ ಅರಿಯಬಹುದು.

ಅಂದಿನ ಜನತೆಯು ಕೆರೆಗಳನ್ನು ಸಂಪೂರ್ಣವಾಗಿ ನಿರ್ಮಿಸುತ್ತಿದ್ದರು. ಕೆಲವೊಂದು ನಿದರ್ಶನಗಳಲ್ಲಿ ಕೆರೆಯ ಕೆಲವು ಭಾಗಗಳನ್ನು ನಿರ್ಮಿಸಿ ತಮ್ಮ ಯಥಾಶಕ್ತಿ ಕೊಡುಗೆಯನ್ನು ನೀಡಿದ ಉದಾಹರಣೆಗಳು ಲಭ್ಯವಿದೆ. ಕೆರೆಯ ತೂಬು, ಏರಿ, ಕೋಡಿ, ನಾಲೆಗಳ ನಿರ್ಮಾಣ ಮುಂತಾದವುಗಳು ಸಹ ಕೆರೆಯನ್ನು ನಿರ್ಮಿಸುವಷ್ಟೇ ಮುಖ್ಯತ್ವವನ್ನು ಪಡೆದಿತ್ತು ಎಂಬ ವಿಷಯವು ಶಾಸನಗಳ ಅಧ್ಯಯನದಿಂದ ತಿಳಿದುಬರುವ ವಿಷಯ.

ಕೆರೆಯನ್ನು ಕಟ್ಟಿದವರಿಗೆ ವಿಜಯನಗರ ಕಾಲದಲ್ಲಿ ‘ಕಟ್ಟುಕೊಡಿಗೆ’, ‘ಕಟ್ಟುಮಾನ್ಯ’, ‘ಕೆರೆ ಬಿತ್ತುನಾಟ’, ‘ಬಿತ್ತುವಟ್ಟ’, ‘ದಸವಂದ’ ಎಂಬ ಉಂಬಳಿ ಮತ್ತು ದಾನಗಳನ್ನು ನೀಡುತ್ತಿದ್ದರು. ಇವುಗಳು ಕೆರೆಗಳ ದುರಸ್ತಿ ಮತ್ತು ನಿರ್ವಹಣೆಗಾಗಿಯೂ ನೀಡಲಾಗುತ್ತಿತ್ತು.[24] ಸಾಮಾನ್ಯವಾಗಿ ಕೆರೆಗಳ ಉಸ್ತುವಾರಿಯನ್ನು ಸ್ಥಳೀಯ ಅಧಿಕಾರಿಗಳು, ಸ್ಥಳೀಯರೊಂದಿಗೆ ಒಡಗೂಡಿ ಗಮನಿಸುತ್ತಿದ್ದರು. ಕೆರೆಗಳ ಮೇಲೆ ತೆರಿಗೆಗಳನ್ನು ವಿಧಿಸುವುದು, ತೆರಿಗೆ ವಿನಾಯ್ತಿ ನೀಡುವುದು ಸಹ ಸ್ಥಳೀಯ ಅಧಿಕಾರಿಗಳೇ ಮಾಡುತ್ತಿದ್ದರು. ಇದು ಅವರಿಗೆ ಇದ್ದ ದತ್ತವಾದ ಅಧಿಕಾರ. ಸಾಮಾನ್ಯವಾಗಿ ಒಡ್ಡರು ಮತ್ತು ಉಪ್ಪಾರ ಜನಾಂಗಕ್ಕೆ ಸೇರಿದವರು ಕೆರೆಗಳನ್ನು ಕಟ್ಟುತ್ತಿದ್ದರು. ಈ ಜನಾಂಗದವರಿಗೆ, ಅದರಲ್ಲಿಯೂ ಕೆರೆ ನಿರ್ಮಿಸಿದವರಿಗೆ ಭೂಮಿ, ತೆರಿಗೆ ವಿನಾಯ್ತಿ ನೀಡುವುದರ ಮೂಲಕ ಅವರನ್ನು ಈ ಕಾರ್ಯದಲ್ಲಿ ತೊಡಗಿರುವಂತೆ ನೋಡಿಕೊಳ್ಳುತ್ತಿದ್ದರು. ಇದರೊಂದಿಗೆ ಇಂತಹ ಕೆಲಸಗಳನ್ನು ಮಾಡುವುದರಿಂದ ಪುಣ್ಯವು ಪ್ರಾಪ್ತವಾಗುತ್ತದೆಂಬ ನಂಬಿಕೆಯ ಅಂದಿನ ಜನರನ್ನು ಈ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿತ್ತು.

ಕೆರೆಗಳನ್ನು ವೈಯಕ್ತಿಕವಾಗಿಯೂ ಜನರು ನಿರ್ವಹಿಸುತ್ತಿದ್ದರು. ಆದರೆ ಕೆರೆಗಳ ಉಸ್ತುವಾರಿ ಸಮಿತಿಯನ್ನು ಸ್ಥಳೀಯರೊಡಗೂಡಿ ರಚಿಸಿಕೊಂಡು ನಿರ್ವಹಿಸುತ್ತಿದ್ದ ಉದಾಹರಣೆಗಳೇ ಅಧಿಕವಾಗಿ ದೊರಕುತ್ತವೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಕೆಲವು ಶಾಸನಗಳು ಉಸ್ತುವಾರಿ ಸಮಿತಿಯ ಬಗೆಗೆ ಬೆಳಕನ್ನು ಚೆಲ್ಲುತ್ತವೆ. ಚೋಳರ ಕಾಲಕ್ಕೆ ಸೇರಿದ ಉತ್ತರಮೇರೂರಿನ ಶಾಸನವು ಮುಖ್ಯತ್ವವನ್ನು ಪಡೆದಿದೆ. ಚೋಳರ ‘ಏರಿವಾರಿಯಂ’ ಎಂಬ ಸಮಿತಿಗಳು ಕೆರೆಗಳನ್ನು ನಿರ್ವಹಿಸುತ್ತಿದ್ದವು. ಮೇಲೆ ಉಲ್ಲೇಖಿಸಿದ ಶಾಸನದಲ್ಲಿ ಕೆರೆಗಳ ಉಸ್ತುವಾರಿ ಸಮಿತಿಯಾದ ‘ಏರಿವಾರಿಯಂ’ ಅಸ್ಥಿತ್ವದಲ್ಲಿತ್ತೆಂದು, ಅದರಲ್ಲಿ ಆರು ಜನ ಸದಸ್ಯರುಗಳನ್ನು ಹೊಂದಿದ್ದರು ಎಂಬುದಾಗಿ ಉಲ್ಲೇಖಿಸಿದೆ. ಅವರ ಕಾಲಾವಧಿಯು ೩೬೦ ದಿನಗಳಾಗಿದ್ದು, ಕೆರೆಯ ಸಂಪೂರ್ಣ ಜವಾಬ್ದಾರಿ ಅವರ ಮೇಲೆ ಇರುತ್ತಿತ್ತು. ಸದಸ್ಯರು ಕೆರೆಗಳ ವಿಷಯದಲ್ಲಿ ಅಪರಾಧ ಮಾಡಿದರೆ, ಅವರನ್ನು ಸಮಿತಿಯಿಂದ ಹೊರಹಾಕಲಾಗುತ್ತಿತ್ತು ಮತ್ತು ಕೆರೆಯ ನೀರಿನಿಂದ ಸಾಗುವಳಿ ಮಾಡಿಸುವುದು ಸಹ ಅವರ ಕರ್ತವ್ಯಗಳಲ್ಲಿ ಒಂದಾಗಿತ್ತು.[25] ಇಂತಹ ಸಮಿತಿಯಲ್ಲದೆ, ಹಲವಾರು ನಿದರ್ಶನಗಳಲ್ಲಿ ಸಭೇ ಮಹಾಜನರು, ಮುಂತಾದ ಸಮಿತಿಯವರು ಸಹ ಕೆರೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ವಿಜಯನಗರ ಕಾಲದಲ್ಲಿ ಅಂತಹ ಸಮಿತಿಯ ಉಲ್ಲೇಖಗಳು ಅಷ್ಟಾಗಿ ಕಂಡುಬರುವುದಿಲ್ಲ. ಇವರ ಕಾಲದಲ್ಲಿ ‘ನಾಯಕ’ ಅಥವಾ ‘ಅಮರನಾಯಕ’ ಪದ್ಧತಿಯು ಜಾರಿಯಲ್ಲಿದ್ದು, ಅವರೇ ಈ ಜವಾಬ್ದಾರಿಯನ್ನು ಹೊರುತ್ತಿದ್ದರು.

ಒಂದು ಕುತೂಹಲಕಾರಿಯಾದ ಶಾಸನವು ತಮಿಳುನಾಡಿನ ತಿರುಪ್ಪಂಗಾಡು ಗ್ರಾಮದಲ್ಲಿ ದೊರೆತಿದ್ದು, ಅದರಂತೆ ಆ ಗ್ರಾಮದ ದೇವಸ್ಥಾನದ ಅಧಿಕಾರಿಗಳು ದೇವಾಲಯಕ್ಕೆ ಸೇರಿದ ಭೂಮಿಗಳನ್ನು ಮಾರಿ ಕೆರೆಯ ದುರಸ್ತಿಯ ಕಾರ್ಯವನ್ನು ಕೈಗೊಂಡರು.[26] ಮತ್ತೊಂದು ನಿದರ್ಶನದಲ್ಲಿ ಇರುಂಬಳ್ಳಿ ಊರಿನವರು ತಿರುವೆಂಗವಾಸಲ್ ಊರಿನವರ ಮತ್ತು ದೇವಾಲಯದ ಅಧಿಕಾರಿಗಳ ಮಧ್ಯೆ ಒಂದು ಒಪ್ಪಂದವಾಯಿತು. ತಿರುವೆಂಗವಾಸಲ್ ಗ್ರಾಮಸ್ಥರು ಅವರ ಊರಿನ ಕೆರೆಯ ಕೋಡಿ ದುರಸ್ತಿ ಮಾಡಿದಕ್ಕೆ ಪ್ರತಿಫಲವಾಗಿ ಇರುಂಬಳ್ಳಿ ಗ್ರಾಮಸ್ಥರಿಗೆ ಪಡಿಕಾವಲ್ ಅಧಿಕಾರವನ್ನು ನೀಡಿದರು.[27] ಈ ನಿದರ್ಶನದಲ್ಲಿ ಮೊದಲು ಉಲ್ಲೇಖಿಸಿರುವ ಗ್ರಾಮದಲ್ಲಿ ಆರ್ಥಿಕ ಸ್ಥಿತಿಯು ಸುಭದ್ರವಾಗಿಲ್ಲದೇ ಇದ್ದಿರಬಹುದು ಅಥವಾ ಕೆರೆಗಳ ದುರಸ್ತಿ ಮಾಡುವವರ ಕೊರತೆ ಇದ್ದಿರುವ ಕಾರಣದಿಂದ ಇನ್ನೊಂದು ಹಳ್ಳಿಯ ಜನರಿಗೆ ಈ ನಿರ್ವಹಣಾ ಕಾರ್ಯವನ್ನು ವಹಿಸಿದರೆಂದು ಅಭಿಪ್ರಾಯಪಡಬಹುದು.

ಕ್ರಿ.ಶ. ೧೩೭೭ ರಲ್ಲಿ ಮಾಂಡಲಿಕನಾದ ಲಕ್ಕನ್ನ ಒಡೆಯನು, ವಿರುಪಣ್ಣ ಒಡೆಯನ ಆದೇಶದಂತೆ, ಶೃಂಗೇರಿಯ ವಿದ್ಯಾರಣ್ಯ ಶ್ರೀಪಾದರ ಸಮ್ಮುಖದಲ್ಲಿ ೧೦೦ ಹೊನ್ನು ಬಂಗಾರ ನಾಣ್ಯಗಳನ್ನು ಮತ್ತು ದೇವಾಲಯದ ಕೆರೆಯ ದುರಸ್ತಿಗಾಗಿಯೇ ನೂಗೂರು ಅಗ್ರಹಾರದ ಮಹಾಜನರಿಗೆ ದಾನ ನೀಡಿದನೆಂದು ಒಂದು ಶಾಸನ ಹೇಳುತ್ತದೆ.[28] ಕ್ರಿ.ಶ.೧೩೮೧ರಲ್ಲಿ ವಿರೂಪಾಕ್ಷನ ಆಳ್ವಿಕೆಯ ಕಾಲದಲ್ಲಿ ದೇವಾಲಯದ ಅಧಿಕಾರಿಗಳು, ತಮ್ಮ ಹಳ್ಳಿಯ ಕೆರೆ ಒಡೆದು ಹೋದುದನ್ನು ಸರಿಪಡಿಸಲು ತಮ್ಮ ಜಮೀನನ್ನು ಮಾರಾಟ ಮಾಡಿ, ಅದರ ಹಣದಿಂದಲೇ ಕೆರೆಯನ್ನು ಸರಿಪಡಿಸಿದರೆಂದು ಇನ್ನೊಂದು ಶಾಸನ ತಿಳಿಸುತ್ತದೆ.[29] ಕಡಪಾ ಜಿಲ್ಲೆಯ ಪಾಡ್ಲಿಮಾರಿ ಹಳ್ಳಿಯ ಕೆರೆಗಳ ದುರಸ್ತಿಗೆಂದು ಮಲ್ಲನಯನಿಂಗಾರು ಎಂಬ ವ್ಯಕ್ತಿಯು ‘ದಾಸವಂದ’ ಪದ್ಧತಿಯಂತೆ ಭೂಮಿಯನ್ನು ಮಾಲನಗಾರ ಓಬಳ ಓಜಿಯಲು ಎಂಬಾತನಿಗೆ ದಾನ ನೀಡಿದನು. ದಾನ ಪಡೆದಾತ ಮತ್ತು ಅವನ ಸಂಗಡಿಗರು ಕೆರೆಯ ಏರಿಯನ್ನು ಭದ್ರಪಡಿಸಿ, ಅದು ಹಾಳಾಗದಂತೆ ನೋಡಿಕೊಳ್ಳುವುದು ಅವರ ಮುಖ್ಯ ಜವಾಬ್ದಾರಿಯಾಗಿತ್ತು.[30]

ಕ್ರಿ.ಶ. ೧೪೨೩ ರಲ್ಲಿ ದೇವರಾಯನ ಕಾಲಕ್ಕೆ ಸೇರಿದ ತಮಿಳು ಶಾಸನವು ನೆರ್‌ಗುಣಂ ಎಂಬಲ್ಲಿ ಕೆರೆ ತೋಡಲು ಅನುಮತಿ ನೀಡುವುದರೊಂದಿಗೆ ಆಳವನ್ನು ಹೆಚ್ಚಿಸಿ, ಹೂಳನ್ನು ತೆಗೆಸಿ, ಅದರ ಮಣ್ಣನ್ನು ಏರಿಗೆ ಉಪಯೋಗಿಸಬೇಕೆಂದು ನಿಬಂಧನೆ ವಿಧಿಸಲಾಯಿತೆಂದು ತಿಳಿಸುತ್ತದೆ.[31] ಹಾಸನ ಜಿ‌ಲ್ಲೆಯ ತಿಮ್ಮನಹಳ್ಳಿಯ ಎರಡು ಶಾಸನಗಳಂತೆ ನೇರಲಿಗೆ ಹಳ್ಳಿಯ ಕೆರೆಯನ್ನು ಕ್ರಿ.ಶ. ೧೪೨೯ರಲ್ಲಿ ಜಯಪನಾಯಕನ ಅಪ್ಪಣೆಯಂತೆ, ವಿರುಪಣ್ಣನು ಕೆರೆಯನ್ನು ಸ್ವಚ್ಛಗೊಳಿಸಿ, ಹೂಳನ್ನು ತೆಗೆದು, ಏರಿಯನ್ನು ಭದ್ರಪಡಿಸಿದಕ್ಕೆ ಭೂಮಿಯನ್ನು ದಾನವಾಗಿ ಪಡೆದನು;[32] ಆದರೆ ಈ ಕೆಲಸವು ಅಪೂರ್ಣವಾದ್ದರಿಂದ ಮುಂದಿನ ಮೂರು ವರ್ಷಗಳಲ್ಲಿ ಇದೇ ಕೆಲಸವನ್ನು ಕ್ರಿ.ಶ.೧೪೩೨ರಲ್ಲಿ ಬಸವಶಂಕರಶೆಟ್ಟಿ ಎಂಬ ವ್ಯಾಪಾರಿ ಕೈಗೊಂಡು ಅದರ ದುರಸ್ತಿಗಾಗಿ ದಾನ ನೀಡಿದನೆಂದು ತಿಳಿಸುತ್ತದೆ.[33]

ತಿರುವಾಮತ್ತೂರು ಗ್ರಾಮದ ಕೆರೆಯು ಒಡೆದ ಕಾರಣದಿಂದ ಹಾಳು ಬಿದ್ದಿತ್ತು. ಸ್ಥಳೀಯ ಅಧಿಕಾರಿಯು ಅಲ್ಲಿ ಸಂಗ್ರಹಿಸಿದ ತೆರಿಗೆಗಳಾದ ವಿಭೂತಿ ಕಾಣಿಕೆ, ಜೋಡಿ, ಸೂಲವರಿ, ರೇಕೈಗಳಿಂದ ಹಳ್ಳಿಯನ್ನು ಪುನನಿರ್ಮಾಣ ಮಾಡಿ ಕೆರೆಯನ್ನು ದುರಸ್ತಿಗೊಳಿಸಿದನೆಂದು ಕ್ರಿ.ಶ.೧೪೭೧ರ ಶಾಸನವು ಹೇಳುತ್ತದೆ.[34] ಬಳ್ಳಾರಿ ಜಿಲ್ಲೆಯ ದೊಂಡಾವತಿ ಗ್ರಾಮಸ್ಥರು ನೀರಾವರಿ ವ್ಯವಸ್ಥೆಯಿಲ್ಲದಿರುವಾಗ ಸ್ಥಳೀಯ ಅಧಿಕಾರಿಯೊಂದಿಗೆ ಅಹವಾಲು ನೀಡಿದರು. ಆ ಅಧಿಕಾರಿಯು ಭೂಮಿಯನ್ನು ನೀಡಿ, ಮೆಲಸಾನಿ ಎಂಬುವವನಿಗೆ ಕೆರೆಯ ದುರಸ್ತಿಗೆಂದು ಹಣವನ್ನು ನೀಡಿದನೆಂದು ಕ್ರಿ.ಶ.೧೫೨೯ರ ಶಾಸನವು ಈ ವಿಷಯವನ್ನು ದಾಖಲಿಸಿದೆ.[35] ಅನಂತಪುರ ಜಿಲ್ಲೆಯ ಭೂಪಸಮುದ್ರದ ಮಹಾಜನರು ಒಡಗೂಡಿ ಗಡಾದ ಬಸವಿರೆಡ್ಡಿಗೆ ಕ್ರಿ.ಶ. ೧೫೩೪ರಲ್ಲಿ ಭೂಮಿಯನ್ನು ನೀಡಿ ಕೆರೆಯ ದುರಸ್ತಿಯನ್ನು ಮಾಡಿದರೆಂದು ಇನ್ನೊಂದು ಶಾಸನವು ಉಲ್ಲೇಖಿಸಿದೆ.[36]ಅಚ್ಯುತದೇವರಾಯನ ಕಾಲದಲ್ಲಿ ಮೇಲು ಕೋಟೆಯ ಬಳಿಯ ಎರಡು ಕೆರೆಗಳು ಕ್ರಿ.ಶ. ೧೫೩೪ರಲ್ಲಿ ಮಳೆಯಿಂದ ಒಡೆದುಹೋಯಿತು. ಪೆರಿರಾಜನೆಂಬ ಶ್ರೀವೈಷ್ಣವನು ಒಂದು ನೂರು ಗಟ್ಟಿವರಾಹವನ್ನು, ಪ್ರತಿ ಕೆರೆಗೆ ತಲಾ ಐವತ್ತು ವರಾಹದಂತೆ ಖರ್ಚು ಮಾಡಲು ನೀಡಿದನು.[37] ಕ್ರಿ.ಶ. ೧೫೪೧ ರಲ್ಲಿ ತಿರುಮದಿ ಗ್ರಾಮಸ್ಥರು ತಮ್ಮ ಊರ ಕೆರೆಯು ಮೂರು ಕಡೆಯಲ್ಲಿ ಒಡೆದು ಹೋದುದನ್ನು ತಾವೇ ದುರಸ್ತಿ ಮಾಡಿದರು ಮತ್ತು ಅದಕ್ಕೆ ಪ್ರತಿಫಲವಾಗಿ ಅವರು ಒಂದು ಖಂಡುಗಕಾಳು ಬೆಳೆಯಬಲ್ಲ ಭೂಮಿಯನ್ನು ಕಟ್ಟುಕೊಡಿಗೆಯಾಗಿ ಪಡೆದದ್ದು ಶಾಸನೋಕ್ತ ವಿಷಯ.[38]

ಕೊನೆಯ ದೇವಮಹಾ ಅರಸು ಎಂಬ ಅಧಿಕಾರಿಯು ಕೆರೆಗಳ ಹೂಳು ತೆಗೆಸಲು ಹಾಗೂ ಆಳವನ್ನು ಹೆಚ್ಚಿಸಲು, ಕುಣಿಗಳು ೩ ಚದುರ ಅಡಿ ಮತ್ತು ೨ ಅಡಿ ಆಳ ಎಂದು ನಿಗದಿಪಡಿಸಿ ಕುಣಿಗಳ ಮಣ್ಣನ್ನು ಕೆರೆಯ ಒಡ್ಡಿಗೆ ಹರಡುವಂತೆ ಏರ್ಪಾಡು ಮಾಡಿ ದಾನವನ್ನು ನೀಡಿದನೆಂದು ಚಿತ್ರದುರ್ಗ ಜಿಲ್ಲೆಯ ಸಿದ್ಧಾಪುರ ಹಳ್ಳಿಯ ಕ್ರಿ.ಶ. ೧೫೫೧ರ ಒಂದು ಶಾಸನ ತಿಳಿಸುತ್ತದೆ.[39]ಕುಣಿಗಳ ಆಧಾರದ ಮೇಲೆ ಹಣವನ್ನು ನೀಡಲಾಗುತ್ತಿತ್ತು ಎಂಬ ವಿಷಯವು ಸಹ ಅದರಲ್ಲಿ ಉಲ್ಲೇಖಿತವಾಗಿದೆ. ಸಿಡಾಲಯದ ಕೋಟೆಯ ಕೆರೆಯು ಕ್ರಿ.ಶ. ೧೫೫೪ರಲ್ಲಿ ಬಿರುಕು ಬಿಟ್ಟಿದ್ದರಿಂದ ಸ್ಥಳೀಯ ಅಧಿಕಾರಿಗಳು, ಗೌಡರು ಮತ್ತು ಶಾನುಭೋಗರು ಇತರರೊಂದಿಗೆ ಸೇರಿ ಸ್ಥಳೀಯ ಅಧಿಕಾರಿ ಮಹಾನಾಯಕಾಚಾರ್ಯನಿಗೆ ಮನವಿ ಸಲ್ಲಿಸಿದರು. ಅದರಂತೆ ಕೆರೆಯ ತೂಬಿನ ಬಳಿಯ ಜಮೀನು ನೀಡಿದರೆ ತಾವುಗಳು ಕೆರೆಯ ನಿರ್ಮಾಣ ಕಾರ್ಯವನ್ನು ಆರಂಭಿಸುವುದಾಗಿ ಸೂಚಿಸಿ, ಕೆಲಸವನ್ನು ಪೂರೈಸಿ, ಜಮೀನುಗಳನ್ನು ಪಡೆದುದಾಗಿ ಶಾಸನವು ಹೇಳುತ್ತದೆ.[40] ತೂಬಿನ ಸಮೀಪದ ಜಮೀನಿಗೆ ಅಧಿಕ ಮೌಲ್ಯವಿರುತ್ತದೆ. ಈ ಭಾಗದ ಜಮೀನುಗಳಿಗೆ ನೀರು ಬೇಗ ಪೂರೈಕೆಯಾಗುತ್ತದೆ ಎಂಬುದೇ ಮುಖ್ಯ ಕಾರಣ.

ಕ್ರಿ.ಶ. ೧೫೫೬ ಸದಾಶಿವರಾಯನ ಕಾಲದ ರಾಯದುರ್ಗ ತಾಲೂಕಿನ ಯಲಹಂಜಿ ಹಳ್ಳಿಯಲ್ಲಿನ ಶಾಸನದಂತೆ, ಆ ಭಾಗದ ಆಡಳಿತಾಧಿಕಾರಿಯು ಯಲಹಂಜಿ, ಸೋಮಲಾಪುರ ಮತ್ತು ಇತರ ಹಳ್ಳಿಗಳಲ್ಲಿ ಅಕ್ರಮವಾಗಿ ತೆರಿಗೆಗಳನ್ನು ಪಡೆದನೆಂದು ಯಲಹಂಜಿ ಗ್ರಾಮಸ್ಥರು, ಸ್ಥಳೀಯ ಆಡಳಿತಾಧಿಕಾರಿ ತಿರುಮಲರಾಜಯ್ಯ ದೇವನಿಗೆ ದೂರನ್ನು ನೀಡದರು. ಈ ರೀತಿಯಾಗಿ ಅಕ್ರಮವಾಗಿ ಸಂಗ್ರಹಿಸಿದ ತೆರಿಗೆಗಳನ್ನು ಕೆರೆಯ ದುರಸ್ತಿ ಮತ್ತಿತರ ನೀರಾವರಿ ಕೆಲಸಗಳಿಗೆ ಬಳಸಬೇಕೆಂದು ಸಂಗ್ರಹಿಸಿದ ತೆರಿಗೆಗಳನ್ನು ಕೆರೆಯ ದುರಸ್ತಿ ಮತ್ತಿತರ ನೀರಾವರಿ ಕೆಲಸಗಳಿಗೆ ಬಳಸಬೇಕೆಂದು ತಿರುಮಲರಾಜಯ್ಯ ದೇವರು ಆಜ್ಞಾಪಿಸಿದನೆಂದು ಶಾಸನದಿಂದ ತಿಳಿಯಬರುತ್ತದೆ.[41] ಇದರಂತೆಯೇ, ಚಿತ್ರದುರ್ಗ ಜಿಲ್ಲೆಯ ಕರಡಿಹಳ್ಳಿಯನ್ನು ಹರಿಹರ ರಾಯನಪುರವೆಂದು ಹೆಸರಿಸಿ ಬ್ರಾಹ್ಮಣರಿಗೆ ಕ್ರಿ.ಶ.೧೫೫೬ ರಲ್ಲಿ ದಾನ ನೀಡಲಾಯಿತು. ಆದರೆ ಸ್ಥಳೀಯ ಅಧಿಕಾರಿಯು ಅಕ್ರಮವಾಗಿ ತೆರಿಗೆಗಳನ್ನು ಸಂಗ್ರಹಿಸಿದರು. ಆದರೆ ಸ್ಥಳೀಯ ಅಧಿಕಾರಿಯು ಅಕ್ರಮವಾಗಿ ಸಂಗ್ರಹಿಸಿದ್ದ ತೆರಿಗೆಗಳನ್ನು ದೇವಾಲಯ ಮತ್ತು ಕೆರೆಗಳ ಕಾರ್ಯಕ್ಕೆ ವಿನಿಯೋಗಿಸಬೇಕೆಂದು ಆಜ್ಞಾಪಿಸಿದನೆಂದು ಶಾಸನವು ದಾಖಲಿಸಿದೆ.[42]ಈ ಜಿಲ್ಲೆಗೆ ಸೇರಿದ ಇನ್ನೊಂದು ಶಾಸನವು ಕುತೂಹಲಕಾರಿಯಾದ ಅಂಶವನ್ನು ತಿಳಿಸುತ್ತದೆ. ಕ್ರಿ.ಶ.೧೩೭೫ರಲ್ಲಿ ಯಾದವನಾರಾಯಣ ಎಂಬ ವ್ಯಕ್ತಿಯು ಲಕ್ಷ್ಮೀನಾರಾಯಣಪುರ ಅಗ್ರಹಾರದಲ್ಲಿ ವಾರಿಸುದಾರರು ಇರದೇ ತೀರಿಕೊಂಡವರ ಆಸ್ತಿಯನ್ನು ಹಳ್ಳಿಯ ಬ್ರಾಹ್ಮಣರಿಗೆ ದಾನ ನೀಡಿ, ಅದನ್ನು ಕೆರೆಯ ಉಸ್ತುವಾರಿಗೆ ಬಳಸಿಕೊಳ್ಳಬೇಕೆಂದು ತಿಳಿಸಿದನೆಂದು ಉಲ್ಲೇಖಿಸಿದೆ.[43] ‘ಕೂಡಿ ಮರಾಮತ್’ ‘ಆಳಮಂಜಿ’ ಪದ್ಧತಿಯಂತೆ ಕೆರೆಯನ್ನು ಜನರು ಸಾಮೂಹಿಕ ಪ್ರಯತ್ನದಿಂದ ಸಂರಕ್ಷಿಸಿ ಅವುಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು ಎಂಬುದು ಶಾಸನಗಳ ಅಧ್ಯಯನದಿಂದ ತಿಳದು ಬರುವ ವಿಷಯ.[44]

ಕೆರೆಯನ್ನು ಕಟ್ಟುವುದಕ್ಕೆ ಮತ್ತು ಅವುಗಳನ್ನು ಸಂರಕ್ಷಿಸಿವುದಕ್ಕೆ ಅರಸರು, ಸ್ಥಳೀಯ ಅಧಿಕಾರಿಗಳು ಜನರಿಗೆ ಹಲವು ವಿಧಗಳಿಂದ ಪ್ರೋತ್ಸಾಹಿಸುತ್ತಿದ್ದರು. ಭೂಮಿ, ಹಣ, ಮನೆ, ತೆರಿಗೆಗಳಿಂದ ವಿನಾಯ್ತಿ, ಮುಂತಾದವುಗಳ ಮೂಲಕ ನೀರಾವರಿ, ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದರು. ಅಂತಹ ಒಂದು ಪದ್ಧತಿಯು ‘ದಸವಂದ’ ಈ ಪದದ ಬಳಕೆಯು ತಮಿಳುನಾಡು ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಕಾಣಬಹುದು. ಕನ್ನಡ ಶಾಸನಗಳಲ್ಲಿ ‘ಕಟ್ಟುಕೊಡಿಗೆ’ ಎಂದು ದಸವಂದ ಪದ್ಧತಿಗೆ ಬಳಸಲಾಗಿದೆ. ದಸವಂದ ಪದಕ್ಕೆ ಹಲವಾರು ಅರ್ಥಗಳಿದ್ದರೂ, ಕೆರೆ ನೀರಾವರಿ ವ್ಯವಸ್ಥೆಗೆ ಸಂಬಂಧಪಟ್ಟಂತೆ ೧/೧೦ ಭಾಗವೆಂದಾಗಿದೆ. ಸಾಗುವಳಿ ಮಾಡಿದವರಿಗೆ ಅಥವಾ ಕೂಲಿಯವರಿಗೆ ಹತ್ತನೇ ಒಂದು ಭಾಗದಷ್ಟು ಉತ್ಪನ್ನ ಅಥವಾ ಹಣ ನೀಡುವ ಭಾಗವಾಗಿದೆ. ಕಾಲಕಾಲಕ್ಕೆ ಹತ್ತನೆಯ ಒಂದು ಭಾಗವಾಗಿರದೆ ಹತ್ತನೆಯ ಎರಡು ಭಾಗಗಳಾಗಿಯೂ ಇದ್ದವು ಎಂಬುದಕ್ಕೆ ಶಾಸನಾಧರಗಳಿವೆ.[45]

ಕೃಷ್ಣದೇವರಾಯನ ಕಾಲದ ಒಂದು ಶಾಸನವು ಬೆಂಗಳೂರು ಜಿಲ್ಲೆಯಲ್ಲಿ ದೊರಕಿದ್ದು ‘ಕಟ್ಟುಗುತ್ತಿಗೆ’ ಮತ್ತು ‘ಗೌಂಡಗೊಡಿಕೆ’ ಎಂಬ ಪದಗಳ ಉಲ್ಲೇಖವಿದೆ. ಕೇತಗೌಂಡನು ಸ್ಥಳೀಯದ ಅಧಿಕಾರಿಯಾಗಿದ್ದ ಗೋಪನಾಯಕನ ಹೆಸರಿನಲ್ಲಿ ಕಟ್ಟಿದ ಗೋಪಸಮುದ್ರ ಕೆರೆಯನ್ನು ನೀಡಿದಕ್ಕೆ ಮೇಲೆ ಉಲ್ಲೇಖಿಸಿದ ಎರಡು ದಾನಗಳನ್ನು ನೀಡಲಾಗಿತ್ತು. ಪ್ರಸ್ತುತ ದಾನವನ್ನು ದಾನಿಯು ತನ್ನ ಹೆಂಡತಿ ಹಾಗೂ ಮಕ್ಕಳ ಒಪ್ಪಿಗೆಯನ್ನು ಪಡೆದು ನಂತರ ದಾನ ಮಾಡಿದನೆಂದು ಶಾಸನ ಹೇಳುವುದು ಗಮನಾರ್ಹ.[46]

ಬಳ್ಳಾರಿ ಜಿಲ್ಲೆಯ ಹಾವಿನಹಾಳು ಹಳ್ಳಿಯ ಶಾಸನದ ತೇದಿ ಕ್ರಿ.ಶ.೧೫೨೯. ದೊಂಡವತಿ ಕೆರೆಯ ನಿರ್ಮಾಣಕ್ಕೆ ಮುದ್ದಣ ನಾಯಕನ ಸಮ್ಮತಿಯ ಮೇರೆಗೆ ಗ್ರಾಮಸ್ಥರೆಲ್ಲರೂ ಸೇರಿ ಸ್ಥಿರವಾದ ದಸವಂದದ ದಾನವನ್ನು ಮಲೆಸಾನಿ ಎಂಬ ವ್ಯಕ್ತಿಗೆ ನೀಡಿದರು. ಮಲೆಸಾನಿಯು ಕೆರೆಯನ್ನು ಕಟ್ಟಿ, ನೀರಾವರಿ ಸೌಕರ್ಯವನ್ನು ಏರ್ಪಡಿಸಿಕೊಟ್ಟ ಕಾರಣಕ್ಕೆ ಅವನು ದಸವಂದವನ್ನು ಪಡೆದನೆಂದು ಶಾಸನವು ದಾಖಲಿಸಿದೆ.[47] ಇಂತಹ ಅನೇಕ ಉಲ್ಲೇಖಗಳನ್ನು ಶಾಸನಗಳಿಂದ ತಿಳಿಯಬಹುದು.

ಕೆರೆಗಳ ನಿರ್ವಹಣೆಯಲ್ಲಿ ಕೆರೆಬಂಡಿಗಳು ಮುಖ್ಯ ಪಾತ್ರವನ್ನು ಮಹಿಸಿತ್ತೆಂದು ಶಾಸನಗಳ ಆಧಾರದಿಂದ ಹೇಳಬಹುದು. ಕೆರೆಯನ್ನು ಸುಸ್ಥಿತಿಯಲ್ಲಿಡಲು, ಕೆರೆಯ ಹೂಳನ್ನು ಎತ್ತಿ ಸಾಗಿಸಲು ಎತ್ತಿನ ಬಂಡಿಗಳನ್ನು ಬಳಸಲಾಗುತ್ತಿದ್ದು, ಅವುಗಳಿಗೆ ಕೆರೆ ಬಂಡಿಗಳೆಂದು ಕರೆಯಲಾಗಿದೆ. ಕೆರೆಬಂಡಿಗಳಿಗೆ, ಅವುಗಳನ್ನು ನಿರ್ವಹಿಸುವವರಿಗೆ ಸಹ ದಾನ ದತ್ತಿಗಳನ್ನು ನೀಡಿ ವ್ಯವಸ್ಥೆಯು ಸುಗಮವಾಗಿರುವಂತೆ ನೋಡಿಕೊಳ್ಳುತ್ತಿದ್ದರು. ದಾನ ಪಡೆದವರು ನಿಯತವಾಗಿ ಕೆರೆಯಲ್ಲಿ ಸಂಗ್ರಹಗೊಂಡ ಹೂಳು, ಕಸ, ಕಲ್ಮಶಗಳನ್ನು ಎತ್ತಿ ಕೆರಗೆ ಮತ್ತು ತೂಬಿಗೆ ಯಾವುದೇ ವಿಧದ ದಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿತ್ತು.

ಕ್ರಿ.ಶ. ೧೩೬೭ರ ಮೊದಲನೆಯ ಬುಕ್ಕರಾಯನ ಶಾಸನವು ಹಾಸನ ಜಿಲ್ಲೆಯ ಕೆಲ್ಲಂಗೆರಿಯ ಶಾಸನದಂತೆ, ವಿಜಯನಗರ ಕಾಲದ ಪೂರ್ವದಲ್ಲಿಯೇ ಇದ್ದ ಕೆರೆಯ ವ್ಯವಸ್ಥೆಯನ್ನು ಗಮನಿಸಲು ಅಗ್ರಹಾರದ ಮಹಾಜನರಿಗೆ, ನೋಟದ ಚಂದಪ್ಪ ಎಂಬ ವ್ಯಕ್ತಿಯು ಹತ್ತು ಬಂಡಿಗಳನ್ನು ಮತ್ತು ಎತ್ತುಗಳನ್ನು ನೀಡಿದ್ದರೂ, ವ್ಯವಸ್ಥೆಯು ಸಮರ್ಪಕವಾಗಿ ಸಾಗದ ಕಾರಣದಿಂದ ಅಗ್ರಹಾರದ ಮಹಾಜನರು ಹಣವನ್ನು ಒದಗಿಸಿದರು. ಈ ಹಣವನ್ನು ಒಂದು ಹೇರಿನ ದವಸಕ್ಕೆ ಎರಡು ತಾರಾಗಳನ್ನು (ಬೆಳ್ಳಿನಾಣ್ಯ) ಸಂಗ್ರಹಿಸುತ್ತಿದ್ದರು. ಜೊತೆಗೆ ಆಯಕಟ್ಟು ಪ್ರದೇಶದಲ್ಲಿ ಬೆಳೆಯಲಾದ ಅಡಿಕೆ, ತೆಂಗು, ವೀಳೆ ಮತ್ತು ಹಣ್ಣುಗಳ ಮೇಲೆ ತೆರಿಗೆ ವಿಧಿಸಿ ಸಂಗ್ರಹಿಸುತ್ತಿದ್ದರು. ಸಂಗ್ರಹಗೊಂಡ ಹಣವನ್ನು ಕೆರೆಬಂಡಿಗೆ, ಕಬ್ಬಿಣದ ಹಾರೆ, ಕೀಲೆಣ್ಣೆ, ಮುಂತಾದವುಗಳಿಗೆ ಬಳಸುತ್ತಿದ್ದರು ಎಂದು ಶಾಸನವು ತಿಳಿಸುತ್ತದೆ.[48]

ಕ್ರಿ.ಶ.೧೪೧೩ರ ಕೃಷ್ಣದೇವರಾಯನ ಕಾಲದ ಶಾಸನದಂತೆ ಬೆಂಗಳೂರು ಜಿಲ್ಲೆಯ ಕಡ್ಲೂರು ಗ್ರಾಮದ ಹಿರಿಯ ಕೆರೆಯು ನಿರುಪಯುಕ್ತವಾದಾಗ ಅದರ ದುರಸ್ತಿಗೆ ಮತ್ತು ಕೆರೆಬಂಡಿಗಳಿಗಾಗಿ ಹೊಸಹಳ್ಳಿ ಗ್ರಾಮವನ್ನು ದಾನ ನೀಡಲಾಯಿತು.[49] ಇದರಂತೆಯೇ ಚೆನ್ನಪಟ್ಟಣ ತಾಲೂಕಿನ ಕಡಲೂರು ಮತ್ತು ಮೊಗೆಹಳ್ಳಿಗಳ ಎರಡೂ ಕೆರೆಗಳನ್ನು ಕ್ರಿ.ಶ. ೧೫೧೩ರಲ್ಲಿ ದುರಸ್ತಿ ಮಾಡಲಾಯಿತು. ಈ ಕೆಲಸಕ್ಕೆಂದು ಆರು ಕೆರೆಬಂಡಿಗಳನ್ನು ನಿಯೋಜಿಸಲಾಯಿತೆಂದು ಶಾಸನವು ಉಲ್ಲೇಖಿಸಿದೆ.[50] ಇಂತಹ ವ್ಯವಸ್ಥೆಯು ಕೆರೆಯ ಸಂರಕ್ಷಣೆಯಲ್ಲಿ ಉಪಯೋಗವಾಗುತ್ತಿತ್ತು ಎಂಬುದರಲ್ಲಿ ಸಂಶಯವಿಲ್ಲ.

ಕೆರೆಬಂಡಿಯಷ್ಟೇ ಮುಖ್ಯತ್ವವನ್ನು ಪಡೆದಿರುವುದು ಮೀನುಗುತ್ತಿಗೆ. ಕೆರೆಯಲ್ಲಿನ ಮೀನುಗಳನ್ನು ಹಿಡಿಯಲು ಗುತ್ತಿಗೆಯನ್ನು ವಿಜಯನಗರ ಕಾಲದಲ್ಲಿ ನೀಡಲಾಗುತ್ತಿತ್ತು. ಗುತ್ತಿಗೆ ಪಡೆದವರು ಮೀನು ಹಿಡಿಯುವುದರೊಂದಿಗೆ ಕೆರೆಯ ರಕ್ಷಣಾ ಕಾರ್ಯವನ್ನು ಸಹ ಮಾಡಬೇಕಾಗುತ್ತಿತ್ತು. ಇದಕ್ಕೆ ನಿದರ್ಶನವೆಂಬಂತೆ ಮಹಾಮಂಡಲೇಶ್ವರ ಮಾಚೆರೆಡ್ಡಿ ಗಣಪತಿರೆಡ್ಡಿಯಾರ್ ಸೀಯಪಾಡಿ ಕೆರೆಗೆ ತೂಬನ್ನು ನಿರ್ಮಿಸಿ ಅದರ ಮೇಲ್ವಿಚಾರಣೆಗೆ ತಲಗುವ ವೆಚ್ಚವನ್ನು ಮೀನುಗಾರಿಕೆಯ ಗುತ್ತಿಗೆಯನ್ನು ಪಡೆದ ಮೀನುಗಾರರಿಂದ ಸಂಗ್ರಹಿಸುವ ವ್ಯವಸ್ಥೆ ಮಾಡಿದನೆಂದು ಒಂದು ಶಾಸನವು ತಿಳಿಸುತ್ತದೆ.[51] ಇನ್ನೊಂದು ಶಾಸನದಂತೆ ಅಕ್ಕದೇವಿ ಎಂಬಾಕೆ ಕ್ರಿ.ಶ.೧೪೬೬ರಲ್ಲಿ ತೆನ್ನಮಹಾದೇವಿ ಮಂಗಳಂ ಕೆರೆಯ ಹೂಳನ್ನು ತೆಗೆಸಲು ಹಳ್ಳಿಯ ಜನರಿಂದ ಅಲ್ಪಪ್ರಮಾಣದ ಭತ್ತ, ಏರಿಮೀನು ವಿಲೈಪ್ಪಣಂ (ಮೀನು ಮಾರಾಟದಿಂದ ಸಂಗ್ರಹಗೊಂಡ ಹಣ) ಮತ್ತು ಮೀನುಗುತ್ತಿಗೆಯ ಹಣವನ್ನು ಸಂಗ್ರಹಿಸದಳೆಂದು ತಿಳಿಸುವುದು ಗಮನಾರ್ಹ.[52] ಕ್ರಿ.ಶ. ೧೪೪೬ರಲ್ಲಿ ತಿಮ್ಮನಾಯಕರು ಕೆರೆಯ ಹೂಳನ್ನು ತೆಗೆಸುವ ಖರ್ಚನ್ನು ಮೀನುಗಾರರಿಂದ ಪಡೆದನೆಂದು ಇಂದಿರಾವನಮ್ ಶಾಸನವು ಉಲ್ಲೇಖಿಸಿದೆ.[53] ತಮಿಳುನಾಡಿನ ಶಾಸನಗಳು ಏರಿವಿಲೈಪ್ಪಣಂ, ಏರಿಮೀನ್ ಪಾಸಂ ಎಂಬ ಪದಗಳು ಉಲ್ಲೇಖಿಸುತ್ತವೆ. ಇವುಗಳ ಮುಖ್ಯವಾಗಿ ಕೆರೆ ಮೀನುಗುತ್ತಿಗೆ ಮೀನು ಮಾರಾಟದಿಂದ ಸಂಗ್ರಹಗೊಳ್ಳುವ ಹಣಗಳಾಗಿದ್ದು, ಅವುಗಳಿಂದ ಕೆರೆಯನ್ನು ರಕ್ಷಿಸುತ್ತಿದ್ದರು. ಮೇಲೆ ವಿವರಿಸಿದ ಏರ್ಪಾಡುಗಳೊಂದಿಗೆ ಕೆರೆಗಳಿಗೆ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಶಾಸನಗಳು ಅನೇಕ ಬಗೆಯ ತೆರಿಗೆಗಳನ್ನು ಉಲ್ಲೇಖಿಸುತ್ತವೆ. ಈ ತೆರಿಗೆಗಳು ‘ಏರಿ ಆಯಂ’, ‘ಚೆರುವು ಕುಂಚಾಲು’, ‘ನೀರಬಿರಾಡ’, ‘ವಿಭೂತಿ’, ‘ಕಾಣಿಕೆ ಜೋಡಿ’, ‘ಸೂಲವರಿ’, ‘ರೇಖಿ’ ಮುಂತಾದವುಗಳಾಗಿವೆ. ತಮಿಳು, ತೆಲುಗು ಮತ್ತು ಕನ್ನಡ ಶಾಸನಗಳಲ್ಲಿ ಈ ಪದಗಳನ್ನು ಬಳಸಿರುವುದು ಕಂಡುಬರುತ್ತದೆ. ತಮಿಳು ಪ್ರದೇಶಗಳಲ್ಲಿ ‘ಏರಿಂ ಆಯಂ’ ಮತ್ತು ‘ನೀರುಕೂಲಿ’ ಎಂಬ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು.[54] ಕ್ರಿ.ಶ. ೧೫೧೩ರ ಹಂಪಿಯ ಕೃಷ್ಣದೇವರಾಯನ ಕಾಲಕ್ಕೆ ಸೇರಿದ ಒಂದು ಶಾಸನವು ವಿರೂಪಾಕ್ಷ ದೇವರ ಹೆಸರಲ್ಲಿ ‘ನೀರು ಕಂದಾಯ’ ವಿಧಿಸಿದ್ದನ್ನು ದಾಖಲಿಸಿದೆ.[55] ಇದನ್ನು ‘ಕಾಲುವೆ ನೀರಿನ ಬಿರಾಡ’ ಎಂದಿದ್ದು, ಬಹುಶಃ ತುರ್ತು ಕಾಲುವೆಯನ್ನು ಕುರಿತು ಉಲ್ಲೇಖಿಸುತ್ತದೆಯೆಂದು ಊಹಿಸಬಹುದು. ಕೆಲವೊಮ್ಮೆ ಅಧಿಕಾರಿಗಳು ಅಕ್ರಮ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದರೆಂದು ಹಾಗೂ ಈ ವಿಷಯ ಅವರ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಾಗ ಅವರು ಕೈಗೊಳ್ಳುತ್ತಿದ್ದ ಕ್ರಮಗಳನ್ನು ಕುರಿತು ಈಗಾಗಲೇ ಉಲ್ಲೇಖಿಸಲಾಗಿದೆ.

ಮೇಲಿನ ವ್ಯವಸ್ಥೆಗಳಿಂದ ಜನರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೆರೆಗಳ ನಿರ್ಮಾಣ ಕಾರ್ಯಗಳಲ್ಲಿ ಮತ್ತು ಅವುಗಳ ಸಂರಕ್ಷಣೆ, ನಿರ್ವಹಣಾ ಕಾರ್ಯಗಳಲ್ಲಿ ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬುದನ್ನು ವಿಜಯನಗರ ಕಾಲದ ಕೆರೆ ನೀರಾವರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿದಾಗ ತಿಳಿದು ಬರುವ ವಿಷಯವಾಗಿದೆ. ಇಂದು ಪ್ರಚಲಿತವಾಗಿರುವ ಸಮಸ್ಯೆಗಳು, ವಿಜಯನಗರ ಕಾಲದಲ್ಲಿಯೂ ಇತ್ತೆಂದು ಕಂಡುಬರುತ್ತದೆ. ಅದರೊಂದಿಗೆ ಜನರ ಸಾಮೂಹಿಕ ಮತ್ತು ವೈಯಕ್ತಿಕ ಪ್ರಯತ್ನಗಳಿಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವ ಉದಾಹರಣೆಗಳನ್ನು ಮೇಲೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಅಂದಿನ ಜನರು, ಅಧಿಕಾರಿಗಳು ಅನುಸರಿಸಿದ ಮಾರ್ಗಗಳನ್ನು ನಾವು ಇಂದಿನ ಸಮಸ್ಯೆಗಳಿಗೆ ಅಳವಡಿಸಿಕೊಂಡರೆ, ಕರ್ನಾಟಕದಲ್ಲಿರುವ ಸಹಸ್ರಾರು ಕೆರೆಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಉಪಯೋಗಿಸಿಕೊಳ್ಳಬಹುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 

[1]ಕೊಟ್ರಯ್ಯ, ಸಿ.ಟಿ.ಎಂ. (ಮೂಲ), ಧ್ರವನಾರಾಯಣ, ಎಂ. (ಅನು). ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಪು.೨-೭; ವಾಸುದೇವನ್, ಸಿ.ಎಸ್., ಹಂಪಿ ಪರಿಸರದ ಕೆರೆಗಳು, ಪು.೪-೧೬.

[2]ಅದೇ, ಪು. ೭-೯

[3]ಎಪಿಗ್ರಾಫಿಯ ಇಂಡಿಕಾ (ಎಫ್.ಇಂಡ್.), ಸಂ. VIII, ಪು.೪೦-೪೯; ಇಂಡಿಯನ್ ಆಂಟಿಕ್ವೇರಿ, ಸಂ. VII, ಪು. ೨೫೯-೨೬೧

[4]ಕೊಟ್ರಯ್ಯ ಸಿ.ಟಿ.ಎಂ. (ಮೂಲ), ಧ್ರುವನಾರಾಯಣ, ಎಂ. (ಅನು.), ಪೂರ್ವೋಕ್ತ, ಪು.೯-೨೮

[5]ಎಂ.ಎ.ಆರ್.೧೯೨೯,ಪು. ೫೦ ಮತ್ತು ಶಾಸನ ಸಂ.I, ಪು. ೧೦

[6]ಶಾಸ್ತ್ರೀ, ಕೆ.ಎ.ಎನ್., ದಿ ಚೋಳಾಸ್, ಪು.೫೮೩-೫೮೪; ಎ ಆರ್ ಎಸ್ ಐ ಇ ೧೯೨೩,ಪು. ೧೨೩

[7]ಪಂಪಭಾರತ, ೧೪, ೫೬-೫೭; ಚಿದಾನಂದಮೂರ್ತಿ, ಎಂ. “ಜಿನವಲ್ಲಭನ ಕುರಿಕ್ಯಾಲ ಶಾಸನ: ಹೆಚ್ಚಿನ ಶೋಧಗಳು ಮತ್ತು ವ್ಯಾಖ್ಯಾನಗಳು” ಹೊಸತು ಹೊಸತು, ಪು.೯೭-೧೨೦; ವಾಸುದೇವನ್, ಸಿ.ಎಸ್.(ಸಂ.), ಕನ್ನಡ ಇನ್ಸ್‌ಕ್ರಿಪ್ಶನ್ಸ್ ಆಫ್ ಆಂದ್ರಪ್ರದೇಶ್, ಪೀಠಿಕೆ, ಪು.XL ಮತ್ತು ಸಂ. ೪೨೮ಮತ್ತು ೪೨೯

[8]ವಾಸುದೇವನ್, ಸಿ.ಎಸ್. ಪೂರ್ವೋಕ್ತ. ಪು.೧ ಮತ್ತು ಸೌತ್ ಇಂಡಿಯನ್ ಇನ್ಸ್‌ ಕ್ರಿಪ್ಶನ್ಸ್, (ಎಸ್.ಐ.ಐ) ಸಂ. IV, ಸಂ ೨೬೭

[9]ಅದೇ, ಪು. ೨೦-೨೧ ಮತ್ತು ಕೊಟ್ರಯ್ಯ, ಸಿ.ಟಿ.ಎಂ. (ಮೂಲ), ಧ್ರುವನಾರಾಯಣ, ಎಂ. (ಅನು), ಪೂರ್ವೋಕ್ತ, ಪು. ೭೧-೭೨

[10]ಎಪಿಗ್ರಾಫಿಯ ಕರ್ನಾಟಿಕ (ಹಳೆಯ ಸಂಪುಟ: ಇನ್ನು ಮುಂದೆ ಎಫ್.ಕಾರ್ನ್‌). ಸಂ. XI, ಸಂ. ಡಿಜಿ ೬೭

[11]ಎಫ್.ಇಂಡ್.ಸಂ. XIV, ಸಂ.೪, ಪು. ೯೭ರಿಂದ ; ಕೊಟ್ರಯ್ಯ, ಸಿ.ಟಿ.ಎಂ. (ಮೂಲ), ಪೂರ್ವೋಕ್ತ, ಪು. ೭೨-೭೩

[12]ಎಆರ್ ಎಸ್ ಐಇ, ೧೯೩೫-೩೬, ಸಂ. ೩೧೨

[13]ಅದೇ, ೧೯೪೯-೫೦, ಸಂ.೨೭೮

[14]ಅದೇ, ೧೯೩೪-೩೫, ಸಂ. ೩೫೧

[15]ಎಫ್.ಕಾರ್ನ್‌ (ಹಳೆಯ), ಸಂ. V, ಸಂ.ಬಿಜಿ ೧೦

[16]ಅದೇ, ಸಂ X,ಸಂ. ಕೆಎಲ್ ೭೩

[17]ಅದೇ, ಸಂ.IX, ಸಂ ಸಿಪಿ ೧೬೯

[18]ಎಸ್ ಐಐ, ಸಂ. IX, ಭಾಗ II, ಸಂ. ೪೪೦

[19]ತಿರುಮಲ ತಿರುಪತಿ ದೇವಸ್ಥಾನಂ ಇನ್ಸ್ ಕ್ರಿಪ್ಶನ್ಸ್, ಸಂ. I, ಸಂ. ೨೨೩

[20]ಅದೇ, ಸಂ. III, ಸಂ. ೧೧: ಈ ವಿಷಯವನ್ನು ಕುರಿತು ಹಲವಾರು ಶಾಸನಗಳು ಉಲ್ಲೇಖವನ್ನು ಮಾಡುತ್ತವೆ.

[21]ಟೋಪೋಗ್ರಾಫಿಕಲ್ ಲಿಸ್ಟ್, ಸಂ. I, ಸಂ. ೪೪೮

[22]ಎಫ್. ಕಾರ್ನ್‌ (ಹಳೆಯ), ಸಂ. VI, ಸಂ. ೨೦

[23]ಎಸ್ ಐಐ, ಸಂ. XXIV, ಸಂ. ೩೭೮

[24]ಕೊಟ್ರಯ್ಯ ಸಿ.ಟಿ.ಎಂ. (ಮೂಲ), ಪೂರ್ವೋಕ್ತ, ಪು. ೧೪೨-೧೪೩

[25]ಶಾಸ್ತ್ರಿ, ಕೆ.ಎ.ಎನ್., ಪೂರ್ವೋಕ್ತ. ಪು. ೫೮೩ -೫೮೪,

[26]ಮಹಾಲಿಂಗಂ, ಟಿ.ವಿ., ಎಕನಾಮಿಕ್ ಲೈಫ್ ಇನ್ ದಿ ವಿಜಯನಗರ ಎಂಪೈರ್, ಪು. ೮೯

[27]ಟೋಪೋಗ್ರಾಫಿಕಲ್ ಲಿಸ್ಟ್, ಸಂ. III, ಪುದುಕೊಟ್ಟೈ, ಸಂ. ೩೮೦

[28]ಎಫ್.ಕಾರ್ನ್‌ (ಹಳೆಯ), ಸಂ. VI, ಸಂ. ಕೆಪಿ. ೧೯

[29]ಟೋಪೋಗ್ರಾಫಿಕಲ್ ಲಿಸ್ಟ್, ಸಂ. I, ನಾರ್ತ್‌ ಆರ್ಕಾಟ್, ಪು.೬೪

[30]ಹೈದರಾಬಾದ್ ಎಪಿಗ್ರಾಫಿಕಲ್ ಸೀರೀಸ್, ಸಂ. III, ಸಂ. ೩೪

[31]ಎಆರ್ ಎಸ್ ಐ ಇ ೧೯೯೦೯, ಸಂ. ೮೭

[32]ಗೋಪಾಲ್, ಬಿ.ಆರ್., ವಿಜಯನಗರ ಇನ್ಸ್ ಕ್ರಿಪ್ಶನ್ಸ್, ಸಂ. II,ಸಂ. ೭೫೧ ಮತ್ತು ಎಫ್.ಕಾರ್ನ್‌, ಸಂ. XV, ಸಂ. ಎಕೆ ೨೩೮

[33]ಅದೇ, ಸಂ. ೭೫೨ ಮತ್ತು ಅದೇ, ಸಂ. ೨೩೯

[34]ಆನ್ಯುಯಲ್ ರಿರ್ಪೋರ್ಟ್ ಆನ್ ಇಂಡಿಯನ್ ಎಪಿಗ್ರಾಫಿ (ಎಆರ್‌ಎಪ್), ೧೯೨೨, ಸಂ. ೮ ಮತ್ತು ಪ್ಯಾರ ೪೯

[35]ಎಸ್ ಐಐ, ಸಂ. IX, ಭಾಗ II, ಸಂ. ೫೨೮

[36]ರಾಮರಾವ್, ಇನ್ಸ್‌ಕ್ರಿಪ್ಶನ್ಸ್ ಆಫ್ ಆಂಧ್ರಪ್ರದೇಶ, ತಿರುಪತಿ, ಸಂ. ೧೫೭

[37]ಎಫ್. ಕಾರ್ನ್‌ (ಹಳೆಯ), ಸಂ. VI, ಸಂ. ಪಿಪುರ. ೧೩೮

[38]ಮಹಾಲಿಂಗಂ, ಟಿ.ವಿ.,ಪೂರ್ವೋಕ್ತ, ಪು.೮೯

[39]ಎಫ್.ಕಾರ್ನ್‌, ಸಂ. XI, ಸಂ. ಎಂಕೆ. ೮

[40]ಅದೇ, ಸಂ. ಹೆಚ್ ಆರ್. ೨೨

[41]ಎಸ್ ಐಐ, ಸಂ. XVI, ಸಂ. ೨೧೩

[42]ಎಫ್.ಕಾರ್ನ್, ಸಂ. XI, ಸಂ. ಎಂಕೆ. ೫

[43]ಎಫ್. ಕಾರ್ನ್‌, ಸಂ. XI, ಸಂ. ಡಿವಿ ೭೦ ಮತ್ತು ಮಹಾಲಿಂಗಂ, ಟಿ.ವಿ. ಪೂರ್ವೋಕ್ತ, ಪು. ೫೫

[44]ಕೊಟ್ರಯ್ಯ, ಸಿ.ಟಿ.ಎಂ. (ಮೂಲ), ಪೂರ್ವೋಕ್ತ, ಪು. ೧೫೩-೫೫

[45]ಅದೇ, ಪು. ೧೫೫

[46]ಎಫ್.ಕಾರ್ನ್‌ (ಹಳೆಯ), ಸಂ. XI, ಸಂ. ಸಿಪಿ. ೧೬೯

[47]ಎಸ್ ಐಐ, ಸಂ. IX, ಭಾಗ II, ಸಂ. ೫೨೮

[48]ಎಫ್.ಕಾರ್ನ್‌ (ಹಳೆಯ), ಸಂ. V, ಸಂ. ಎಕೆ ೧೧೫ ಮತ್ತು ಮಹಾಲಿಂಗಂ, ಟಿ.ವಿ., ಪೂರ್ವೋಕ್ತ, ಪು.೫೪

[49]ಎಫ್, ಕಾರ್ನ್‌ (ಹಳೆಯ), ಸಂ. IX, ಸಂ.ಸಿಪಿ ೧೫೬

[50]ಮಹಾಲಿಂಗಂ, ಟಿ.ವಿ., ಪೂರ್ವೋಕ್ತ, ಪು.೫೪

[51]ಎಆರ್ ಎಸ್ ಐಇ, ೧೯೪೨-೪೩, ಸಂ. ೧೬೪

[52]ಅದೇ, ೧೯೩೩-೩೪, ಸಂ. ೪೭ ಮತ್ತು ಮಹಾಲಿಂಗಂ, ಟಿ.ವಿ. ಅಡ್ ಮಿನಿಸ್ಟ್ರೇಟಿವ್ ಆಂಡ್ ಸೋಶಿಯಲ್ ಲೈಫ್ ಅಂಡರ್ ವಿಜಯನಗರ, ಪು.೮೭

[53]ಎ ಆರ್ ಎಸ್ ಐಇ, ೧೯೨೩, ಸಂ. ಬಿ ೪೨೪

[54]ಅದೇ, ೧೯೩೪-೩೫, ಸಂ. ೫೪

[55]ಎಸ್ ಐಐ, ಸಂ. IX, ಭಾಗ II, ಸಂ. ೪೯೩