ಸಹಭಾಗಿತ್ವ ಮತ್ತು ಸಮುದಾಯವಾದ

ಇದರ ಜೊತೆಗೆ ಆಂತರಿಕ ಕಾರಣವು ಇದೆ. ಇದನ್ನು ಸಮುದಾಯವಾದ ಅಥವಾ ಕಮ್ಯುನಿಟೇರಿಯನ್ ರಾಜಕೀಯ ಮತ್ತು ಪರಿಸರ ಚಳವಳಿಗಳು ಫಲ ಎನ್ನಬಹುದು. ಇವರ ಪ್ರಕಾರ ಮಾರುಕಟ್ಟೆ ಆಧಾರಿತ ಮತ್ತ ಪ್ರಭುತ್ವ ಕೇಂದ್ರಕೃತ ಅಭಿವೃದ್ಧಿ ಮಾದರಿಗಳು ನಮ್ಮ ಸಾಮಾಜಿಕ ಪರಿಸರಕ್ಕೆ ಹೇಳಿದ್ದಲ್ಲ. ಐದು ದಶಕಗಳ ಆಧುನೀಕರಣದ ನಂತರವೂ ನಮ್ಮಲ್ಲಿ ಮಾರುಕಟ್ಟೆಯಲ್ಲಿ ವ್ಯವಹರಿಸಿದ ಬಹುದೊಡ್ಡ ಜನವರ್ಗ ಇದೆ. ಈ ವರ್ಗದ ಜನರು ತಮ್ಮ ಸಾಂಪ್ರದಾಯಿಕ ಜೀವನ ಕ್ರಮದಲ್ಲೆ ಬದುಕುತ್ತಿದ್ದಾರೆ (ಮಾಧವ ಗಾಡ್ಗಿಲ್ ಅಂಡ್ ರಾಮಚಂದ್ರ ಗುಹ, ೧೯೯೫). ಭೂಮಿ, ನೀರು, ಅರಣ್ಯ ಇತ್ಯಾದಿಗಳನ್ನು ಅದೇ ಹಳೇ ಕ್ರಮದಲ್ಲಿ ಇವರು ಬಳಸುತ್ತಾರೆ. ಇವರು ಬೆಳೆಯುವುದು ಮಾರುಕಟ್ಟೆಗಾಗಿ ಅಲ್ಲ; ತಮ್ಮ ಹೊಟ್ಟೆ ಪಾಡಿಗಾಗಿ. ಅದೇ ರೀತಿ ಇವರು ಪ್ರಭುತ್ವದ ಕಾನೂನು ಪ್ರಕಾರ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿಲ್ಲ. ಅಸಂಘಟಿತ ವಲಯದಲ್ಲಿ ದುಡಿಯುವ ಕೋಟಿಗಟ್ಟಲೆ ಜನರಿಗೆ ಪ್ರಭುತ್ವ ಯಾವುದೇ ಸೌಲಭ್ಯ ಕೊಡುತ್ತಿಲ್ಲ. ಅವರಿಗೆ ವಸತಿ, ಶಿಕ್ಷಣ, ಆರೋಗ್ಯ ಇತ್ಯಾದಿಗಳನ್ನು ಅವರ ಕುಟುಂಬ ಭರಿಸುತ್ತದೆ. ಜತೆಗೆ ಕುಟುಂಬ ಮತ್ತು ಸಮುದಾಯ ಅವರ ಬಾಲ್ಯ ಮತ್ತು ಮುಪ್ಪಿನ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತಿದೆ. ಹೀಗೆ ಮಾರುಕಟ್ಟೆ ಅಥವಾ ಪ್ರಭುತ್ವ ಕೇಂದ್ರಕೃತ ಅಭಿವೃದ್ಧಿ ಮಾದರಿ ನಮ್ಮ ಪರಿಸರಕ್ಕೆ ಸರಿಯಲ್ಲ ಎಂದು ಸಮುದಾಯವಾದಿಗಳು ವಾದಿಸುತ್ತಾರೆ (ರಜನಿ ಕೊಥಾರಿ, ೧೯೮೮). ಇದರ ಜತೆಗೆ ಆಧುನೀಕರಣ ರೂಪಿಸುವ ಅಮೂರ್ತ ಸ್ವರೂಪದ ವ್ಯಕ್ತಿ ಅಚಾರಿತ್ರಿಕವಾದುದು. ಅಚಾರಿತ್ರಿಕವಾದುದು ಯಾಕೆಂದರೆ ವ್ಯಕ್ತಿ ಕೇವಲ ಸರಕು ಅಥವಾ ಸೇವೆಯನ್ನು ಅನುಭವಿಸುವ ಪ್ರಾಣಿಯಾಗಿರುವುದಿಲ್ಲ. ಆತ ಯಾವುದೋ ಕುಟುಂಬಕ್ಕೆ ಜಾತಿ, ಧರ್ಮಕ್ಕೆ ಸೇರಿದವನು. ಅವುಗಳ ವ್ಯಕ್ತಿ ಬದುಕುವ ಪರಿಸರದ ಮೌಲ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹುಟ್ಟಿನಿಂದ ಸಾವಿನ ತನಕ ವ್ಯಕ್ತಿಯ ಅರಿವನ್ನು ರೂಪಿಸುವ ಕೆಲಸವನ್ನು ಇವು ಮಾಡುತ್ತವೆ. ಹೀಗೆ ಅವುಗಳು ಆತನ ಬೇಕು ಬೇಡಗಳನ್ನು ಪ್ರಭಾವಿಸುತ್ತವೆ. ಆಧುನಿಕ ಅರ್ಥ ಶಾಸ್ತ್ರ ತಿಳಿಸುವಂತೆ ಅದು ವ್ಯಕ್ತಿ ಆಧಾರಿತವಲ್ಲ. ಅದರಿಂದಲೂ ಮುಖ್ಯವಾಗಿ ಅಮೂರ್ತ ಸ್ವರೂಪದ ವ್ಯಕ್ತಿ ಇತರರೊಂದಿಗೆ ಕೇವಲ ಒಪ್ಪಂದ ಆಧಾರಿತ ಸಂಬಂಧ ಇಟ್ಟುಕೊಳ್ಳುತ್ತಾನೆ. ಆ ಸಂಬಂಧ ಕೂಡ ತನ್ನ ವೈಯಕ್ತಿಕ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ನಡೆಯುವುದರಿಂದ ಸಮುದಾಯ ಬದುಕು ನಶಿಸಿದೆ. ಈ ಕ್ರಮದಲ್ಲಿ ರೂಪುಗೊಂಡ ಅಮೂರ್ತ ವ್ಯಕ್ತಿಗೆ ತ್ವರಿತಗತಿಯಲ್ಲಿ ನಡೆಯುವ ಎಲ್ಲ ಬಗೆಯ ಪರಿವರ್ತನೆಗಳನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆಧುನಿಕ ಪರಿಕರಗಳ ಮೂಲಕ ಜೀರ್ಣಿಸಿಕೊಳ್ಳುವಷ್ಟು ತಯಾರು ಸಮಾಜದ ಎಲ್ಲಾ ವರ್ಗಗಳಲ್ಲಿ ಇಲ್ಲ. ಈ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಮುದಾಯ ಆಧಾರಿತ ಸಂಪನ್ಮೂಲ ನಿರ್ವಹಣೆ ಪ್ರಕ್ರಿಯೆಗಳನ್ನು ಪುನರ್ ಜೀವಗೊಳಿಸುವ ಅಗತ್ಯವಿದೆ ಎಂದು ಸಮುದಾಯದವರಿಗೂ ಅಭಿಪ್ರಾಯಪಡುತ್ತಾರೆ (ಆಶಿಸ್ ನಂದಿ, ೧೯೮೪).

ವಸಾಹತು ಪೂರ್ವದಲ್ಲಿ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಕುರಿತು ನಮ್ಮದೇ ವ್ಯವಸ್ಥೆಗಳು ಇದ್ದವು (ಜೋದ ೧೯೯೪). ಸಾಂಪ್ರದಾಯಿಕ ಸಮಾಜದಲ್ಲಿನ ನಿಕಟ ಮತ್ತು ಪರಸ್ಪರ ಅರಿತಿರುವ ಸಂದರ್ಭದಲ್ಲಿ ಸಮುದಾಯದ ಸಂಪನ್ಮೂಲ ಬಳಕೆ ಮತ್ತು ನಿರ್ವಹಣೆ ಕುರಿತಂತೆ ಸ್ವಯಂ ಪ್ರೇರಿತ ನಿಬಂಧನೆಗಳಿದ್ದವು. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಬದುಕುತ್ತಿದ್ದ ಸಮುದಾಯಗಳಿಗೆ ಆ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ ಕುರಿತು ತಿಳುವಳಿಕೆಯಿತ್ತು, ಜವಾಬ್ದಾರಿಯಿತ್ತು (ಆಶಿಸ್ ಕೊಥಾರಿ ಮತ್ತು ಇತರರು, ೧೯೮೮). ಆದರೆ ಆಧುನಿಕತೆ ಮುಚ್ಚಿಕೊಂಡಿದ್ದ ಸಮುದಾಯ ಬದುಕನ್ನು ತೆರೆದು ಇತರ ಸಮುದಾಯಗಳೊಂದಿಗೆ ಸಂಪರ್ಕ ಮತ್ತು ವಿನಿಮಯಗಳನ್ನು ಕಲ್ಪಿಸಿತು. ಈ ಸಂಪರ್ಕ ಮತ್ತು ವಿನಿಮಯ ಇಂದು ಸ್ಥಳೀಯ ಸಂಪನ್ಮೂಲಗಳ ಬಳಕೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಜೋಡಿಸಿದೆ. ಹಾಗಾಗಿ ಸಂಪನ್ಮೂಲಗಳ ಬಳಕೆ ನಿರ್ಧಾರಗಳು ಇಂದು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿತವಾಗುವುದಿಲ್ಲ. ಬದಲಿಗೆ ಮಾರುಕಟ್ಟೆಗಳ ಅಗತ್ಯಗಳಿಗೆ ಅನುಗುಣವಾಗಿ ಅಮೂರ್ತ ರೂಪದಲ್ಲಿ ಆಗುತ್ತಿವೆ. ಇದು ಎರಡು, ರೀತಿಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಒಂದು ಸಂಪನ್ಮೂಲಗಳ ಎಗ್ಗಿಲ್ಲದ ನಾಶ ಮತ್ತು ಸ್ಥಳೀಯ ಸಮುದಾಯಗಳು ಕೂಡ ಅವುಗಳ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ ತೋರುವುದು. ಈ ಸಮಸ್ಯೆಗಳಿಂದ ಹೊರಬರಲು ಒಂದೇ ದಾರಿ – ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಮುದಾಯಗಳ ಸಹಭಾಗಿತ್ವ. ತಮ್ಮ ಪರಿಸರದಲ್ಲಿನ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಗಳನ್ನು ಸ್ಥಳೀಯ ಸಮುದಾಯಗಳು ವಹಿಸಿಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸಮುದಾಯ ವಾದಿಗಳು ವಾದಿಸುತ್ತಾರೆ. ಇದೇನು ಹೊಸ ಪ್ರಯೋಗವಲ್ಲ. ಕೆರೆ ಮತ್ತು ಇತರ ಜಲ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸಮುದಾಯ ಪಾಲುಗೊಂಡಿರುವುದರ ಕುರಿತು ಧಾರಾಳ ಮಾಹಿತಿ ನಮ್ಮ ಚರಿತ್ರೆಯಲ್ಲಿ ಸಿಗುತ್ತದೆ. ಕೆರೆ ಕಟ್ಟಿಸುವುದರಲ್ಲಿ ಊರಿನ ಧನಿಕರ, ವ್ಯಾಪಾರಿಗಳ, ದೇವಸ್ಥಾನಗಳ ಮತ್ತು ರಾಜನ ಪಾತ್ರ ಮಹತ್ವದ್ದು. ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ರೈತಾಪಿ ಜನರ ಪಾತ್ರ ಅಲ್ಲಗೆಳೆಯುವಂತಿರಲಿಲ್ಲ. ನಮ್ಮ ಹಿರಿಯರು ಮಾಡಿದ ಪ್ರಯೋಗಗಳಿಂದ ಇಂದಿನ ನಮ್ಮ ಸಮಸ್ಯೆಗಳಿಗೆ ಕೆಲವು ಪರಿಹಾರಗಳಾದರೂ ಸಿಗಬಹುದು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯವೆಂದು ಸಮುದಾಯವಾದಿಗಳು ವಾದಿಸುತ್ತಾರೆ. ಜತೆಗೆ ಆಧುನೀಕರಣ ಸಾಂಪ್ರಾದಾಯಿಕ ಸಂಸ್ಥೆಗಳನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದೆ; ಆದರೆ ಅವುಗಳನ್ನು ಸಂಪೂರ್ಣ ನಾಶಗೊಳಿಸಿಲ್ಲ. ಇಷ್ಟೆಲ್ಲಾ ಆಧುನೀಕರಣ ಪ್ರಕ್ರಿಯೆಯ ನಡುವೆಯೂ ಅವುಗಳ ಜೀವಂತ ಇರುವುದೇ ಅವುಗಳ ಅಂತ:ಸತ್ವಕ್ಕೆ ಸಾಕ್ಷಿ. ಆದುದರಿಂದ ಅವುಗಳನ್ನು ಸಾಂಪ್ರಾದಾಯಿಕ ಸಂಸ್ಥೆಗಳೆಂದು ಮೂಲೆಗುಂಪಾಗಿಸುವುದು ಸರಿಯಲ್ಲ. ಅವುಗಳನ್ನು ನಾಶವಾಗಲು ಬಿಡಬಾರದು; ರಕ್ಷಿಸಿ ಬೆಳಸಬೇಕೆಂದು ಇವರುಗಳ ವಾದ. ಈ ಹಿನ್ನೆಲೆಯಿಂದಲೂ ಜನರ ಸಹಭಾಗಿತ್ವದ ವಿಚಾರವನ್ನು ನೋಡಬಹುದು.

ಹೀಗೆ ನಾಲ್ಕು ದಶಕಗಳ ಆಧುನೀಕರಣ ನಂತರವೂ ಶತಮಾನಗಳ ಅಸಮಾನತೆ ಕಡಿಮೆಯಾಗದಿರಲು ಕಾರಣ ಎಲ್ಲ ಕ್ಷೇತ್ರಗಳಲ್ಲೂ ಪ್ರಭುತ್ವದ ಅತಿಯಾಗಿ ಮೂಗು ತೂರಿಸುವುದೇ ಆಗಿದೆ ಎನ್ನುವ ತೀರ್ಮಾನಕ್ಕೆ ಸಮುದಾಯವಾದಿಗಳು ಬರುತ್ತಾರೆ. ಪ್ರಭುತ್ವವನ್ನು ಹೊರತು ಪಡಿಸಿದ ಪ್ರಯತ್ನಗಳಿಗೆ ಪ್ರಾಮುಖ್ಯತೆ ಕೊಡುವುದೆ ಈ ಸಮಸ್ಯೆಗಳಿಗೆ ಸರಿಯಾದ ಪರಿಹಾರವೆಂದು ಮನಗಾಣಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಖಾಸಗಿ ಮತ್ತು ಸಮುದಾಯ ಪ್ರಯತ್ನಗಳಿಗೆ ಮಹತ್ವ ಕೊಡುವುದು ತುಂಬಾ ಅಗತ್ಯ ಎನ್ನುವ ಧೋರಣೆ ಇಲ್ಲಿದೆ. ಪ್ರಭುತ್ವ ಬಲಯುತವಾಗಿ ಇದ್ದುದರಿಂದಲೇ ಖಾಸಗಿ ಮತ್ತು ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಸರಿಯಾಗಿ ಬೇರೂರಲು ಆಗಿಲ್ಲ. ಖಾಸಗಿ ಮತ್ತು ಸಮುದಾಯ ಪ್ರಯತ್ನಗಳು ಸರಿಯಾಗಿ ಬೇರೂರಬೇಕಾದರೆ ಪ್ರಭುತ್ವ ಹಿಂದಕ್ಕೆ ಸರಿಯಲೇ ಬೇಕು ಎನ್ನುವ ನಿಲುವು ಇದೆ. ಅವರಲ್ಲಿ ಕೆಲವರು ಈ ವಾದವನ್ನು ಅದರ ಪರಾಕಾಷ್ಠೆಗೆ ಒಯ್ದು ಪ್ರಭುತ್ವದ ಇರುವಿಕೆಯೇ ಅನಾವಶ್ಯ ಎನ್ನುವ ಅರ್ಥ ಬರುವ ಹಾಗೆ ಮಾತಾಡುತ್ತಿದ್ದಾರೆ. ಇದರ ಜತೆಗೆ ಸಮುದಾಯ ಪ್ರಯತ್ನಗಳು ನಮ್ಮಲ್ಲಿ ಅತಿ ಸುಲಭದಲ್ಲಿ ಬೇರೂರಬಹುದು ಎನ್ನುವ ಗ್ರಹಿಕೆನೂ ಇದೆ. ಯಾಕೆಂದರೆ ನಮ್ಮದು ಮೂಲತಃ ಒಂದು ಸಮುದಾಯದ ನೆಲೆಯಲ್ಲಿ ಗುರುತಿಸಿಕೊಳ್ಳುವ ಸಮಾಜ. ಇಲ್ಲಿ ಪಶ್ಚಿಮದಲ್ಲಿ ಇದ್ದಂತೆ ವ್ಯಕ್ತಿಗಳು ಇಲ್ಲ; ಸಮುದಾಯಗಳು ಮಾತ್ರ ಇರುವುದು. ಈ ಹಿನ್ನೆಲೆಯಲ್ಲಿ ಸಮುದಾಯಗಳನ್ನು ರೂಪಿಸುವ ಮತ್ತು ಆ ಮೂಲಕ ಅವುಗಳನ್ನು ಆಧುನಿಕ ಅವಶ್ಯಕತೆಗಳಿಗೆ ತಯಾರುಗೊಳಿಸುವ ಪ್ರಶ್ನೆಯೇ ಇಲ್ಲ. ಚಾರಿತ್ರಿಕವಾಗಿ ನಮ್ಮ ಸಂಸ್ಕೃತಿಯಲ್ಲಿ ರೂಪುಗೊಂಡ ನಮ್ಮ ಸಮುದಾಯಗಳು ವಿಶೇಷ ಬದಲಾವಣೆ ಇಲ್ಲದೆ ಇಂದಿನ ಅಗತ್ಯಗಳಿಗೆ ಧಾರಾಳ ಸ್ಪಂದಿಸಬಹುದು ಎನ್ನುವ ಗ್ರಹಿತವೂ ಇದೆ. ಇಲ್ಲಿ ಸಮುದಾಯವನ್ನು ಒಂದು ಘರ್ಷಣೆ ಇಲ್ಲದ, ಸಮಸ್ಯೆರಹಿತ ಸ್ಪೇಸ್ ಆಗಿ ನೋಡಲಾಗುತ್ತಿದೆ. ಇಂತಹ ಸಮುದಾಯಗಳೂ ಸ್ವತಂತ್ರವಾಗಿ ಒಟ್ಟು ಸೇರಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.

ಕಾರ್ಯರೂಪದಲ್ಲಿ ಸಹಭಾಗಿತ್ವ

ತಮ್ಮ ಸಮಸ್ಯೆಗಳೇನು? ಅವುಗಳ ಹಿಂದಿರುವ ಮುಖ್ಯ ಕಾರಣಗಳೇನು? ಮತ್ತು ಅವುಗಳನ್ನು ಹೇಗೆ ಪರಿಹರಿಸಬಹುದು? ಎನ್ನುವ ಪ್ರಶ್ನೆಗಳೊಂದಿಗೆ ಸಹಭಾಗಿತ್ವ ಅಭಿವೃದ್ಧಿ ಆರಂಭವಾಗುತ್ತದೆ. ಸಮಸ್ಯೆಗಳ ಹಿಂದಿರುವ ಕಾರಣಗಳನ್ನು ವಿಶ್ಲೇಷಿಸುವ ಮೂಲಕ ತಾವು ಬದುಕುವ ಪರಿಸರದ ಪರಿಚಯವಾಗುತ್ತದೆ. ಅಲ್ಲಿರುವ ವಿವಿಧ ಸಾಮಾಜಿಕ ಸ್ತರಗಳು, ಅವುಗಳ ಆರ್ಥಿಕ ಸ್ಥಿತಿಗತಿ, ಅಧಿಕಾರದ ಹಂಚಿಕೆ, ಇತ್ಯಾದಿಗಳ ಕಿರು ಪರಿಚಯ ತಾವು ಬದುಕುವ ಪರಿಸರದ ಪರಿಚಯಕ್ಕೆ ಅಗತ್ಯ. ನಂತರದ ಹಂತದಲ್ಲಿ ಸಂಘಟಿತರಾಗಿ ತಮ್ಮ ಸ್ಥಿತಿಗೆ ಕಾರಣವಾದ ಪರಿಸರದ ಪರಿಚಯಕ್ಕೆ ಅಗತ್ಯ. ನಂತರದ ಹಂತದಲ್ಲಿ ಸಂಘಟಿತರಾಗಿ ತಮ್ಮ ಸ್ಥಿತಿಗೆ ಕಾರಣವಾದ ಪರಿಸರದ ಪರಿಚಯಕ್ಕೆ ಅಗತ್ಯ. ನಂತರದ ಹಂತದಲ್ಲಿ ಸಂಘಟಿತರಾಗಿ ತಮ್ಮ ಸ್ಥಿತಿಗೆ ಕಾರಣವಾದ ಪರಿಸರದ ಪರಿವರ್ತನೆಗೆ ಪ್ರಯತ್ನ. ಹೀಗೆ ತಮ್ಮ ಕುಂಟಿತ ಅಭಿವೃದ್ಧಿಗೆ ಕಾರಣವಾದ ಪರಿಸರದ ಪರಿಚಯ ಮಾಡಿಕೊಂಡು ಅದರ ಪರಿವರ್ತನೆಗೆ ಪ್ರಯತ್ನಿಸುವ ಪ್ರಕ್ರಿಯೆ ಜನರನ್ನು ಸಶಕ್ತೀಕರಣಗೊಳಿಸುತ್ತದೆ ಎನ್ನುವ ಗ್ರಹಿತವಿದೆ. ಕುಂಟಿತ ಅಭಿವೃದ್ಧಿಗೆ ಕಾರಣವಾದ ಪರಿಸರವನ್ನು ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಕೆಳವರ್ಗದ ಜನರು ಪ್ರಪಂಚವನ್ನು ನೋಡುವ ತಮ್ಮ ದೃಷ್ಟಿಕೋನದಲ್ಲಿ ಸಾಕಷ್ಟು ಪರಿವರ್ತನೆ ಮಾಡಿಕೊಳ್ಳುತ್ತಾರೆ. ಇದು ಕೆಳವರ್ಗದ ಸಶಕ್ತೀಕರಣಕ್ಕೆ ಅಥವಾ ಹೆಚ್ಚಿನ ಅಧಿಕಾರಕ್ಕೆ ಮೂಲವಾಗುತ್ತದೆ ಎನ್ನುತ್ತಾರೆ. ಆದರೆ ಅಷ್ಟು ಸುಲಭದಲ್ಲಿ ಅಧಿಕಾರದ ಮರುವಿತರಣೆ ಸಾಧ್ಯವೇ? ಸಾಮಾನ್ಯವಾಗಿ ಸಮಾಜದಲ್ಲಿನ ಅಧಿಕಾರದ ಹಂಚುವಿಕೆಯನ್ನು ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಊಹಿಸಿಕೊಳ್ಳಲಾಗುತ್ತದೆ. ಅಂತಹ ನಿರ್ದಿಷ್ಟ ಪ್ರಮಾಣದ ಅಧಿಕಾರ ಸಮಾಜದ ವಿವಿಧ ಸ್ತರಗಳಲ್ಲಿ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಇರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಒಂದು ವರ್ಗದ ಅಧಿಕಾರದ ಪ್ರಮಾಣದಲ್ಲಿನ ಏರುಪೇರು ಅನಿವಾರ್ಯವಾಗಿ ಮತ್ತೊಂದು ವರ್ಗದ ಅಧಿಕಾರದ ಪ್ರಮಾಣವನ್ನು ಪ್ರಭಾವಿಸುತ್ತದೆ. ಆವಾಗ ಅಧಿಕಾರ ಕಳಕೊಳ್ಳಬೇಕಾದ ವರ್ಗ ಪ್ರತಿಭಟಿಸುವುದಿಲ್ಲವೇ? ಈ ಸಂದೇಹಕ್ಕೂ ಸಹಭಾಗಿತ್ವ ಚಿಂತನೆಯಲ್ಲಿ ಪರಿಹಾರವಿದೆ. ಅವರ ಪ್ರಕಾರ ಅಧಿಕಾರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟ ಕ್ಷೇತ್ರದಲ್ಲಿ ಊಹಿಸಿಕೊಳ್ಳುವುದೇ ಸರಿಯಲ್ಲ. ಅಧಿಕಾರ ಅನಿರ್ದಿಷ್ಟ ಮತ್ತು ಬಹುರೂಪಿ. ಆದುದರಿಂದ ಅದರ ಬಹುರೂಪಿ ಮೂಲಗಳನ್ನು ಕೆದಕುವ ಮೂಲಕ ಇಡೀ ಸಮುದಾಯದ ಅಧಿಕಾರದ ಪ್ರಮಾಣವನ್ನು ಹೆಚ್ಚಿಸಬಹುದು. ಆ ರೀತಿ ಹೆಚ್ಚುವ ಅಧಿಕಾರದಲ್ಲಿ ಪಾಲು ಪಡೆಯುವುದು ಸುಲಭ ಎಂದು ಸಹಭಾಗಿತ್ವವಾದಿಗಳ ಅಭಿಪ್ರಾಯ. ಆದರೆ ವಾಸ್ತವ ಸಹಭಾಗಿತ್ವ ಅಥವಾ ಸೋಶಿಯಲ್ ಕ್ಯಾಪಿಟಲ್ ಥಿಯರಿಯಲ್ಲಿ ಹೇಳಿದಂತೆ ಇರುತ್ತದೆಯೇ?

ಭಾರತದಂತಹ ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆಯೇ ಅವಾಸ್ತವ ಆಗಬಹುದೆಂಬ ನಿಲುವುಗಳಿವೆ (ಸುಸಾನೆ ಹೊಬರ್ ರುಡಾಲ್ಪ, ೨೦೦೦). ಇದರ ಜತೆ ನಮ್ಮ ಸಮಾಜದ ಸಂಕೀರ್ಣತೆಯನ್ನು ಹಿಡಿದು ಕೊಡಲು ಸೋಶಿಯಲ್ ಕ್ಯಾಪಿಟಲ್ ಶಕ್ತವಾಗಿಲ್ಲವೆಂದು ಅಧ್ಯಯನಗಳು ತಿಳಿಸುತ್ತವೆ. ಗ್ರಾಮ ಪಂಚಾಯತಿ ರಾಜಕೀಯದ ಬಗ್ಗೆ ಅಧ್ಯಯನ ಮಾಡಿದ ಸುಧಾ ಪೈಯವರ ಪ್ರಕಾರ ಒಂದು ಸಮುದಾಯಕ್ಕೆ ಸೇರಿದವರ ನಡುವೆ ಸೋಶಿಯಲ್ ಕ್ಯಾಪಿಟಲ್ ಇರುತ್ತದೆ. ಆದರೆ, ಎರಡು ಸಮುದಾಯಗಳ ನಡುವೆ ಸೋಶಿಯಲ್ ಕ್ಯಾಪಿಟಲ್ ಇರುತ್ತದೆ ಎನ್ನಲು ಸಾಧ್ಯವಿಲ್ಲ (ಸುಧಾ ಪೈ ೨೦೦೧). ಉತ್ತರ ಪ್ರದೇಶದಲ್ಲಿ ಮಾಯಾವತಿ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿನ ಗ್ರಾಮ ಪಂಚಾಯತ್ ರಾಜಕೀಯವನ್ನು ಅಧ್ಯಯನ ಮಾಡಿ ಈ ತೀರ್ಮಾನಕ್ಕೆ ಅವರು ಬರುತ್ತಾರೆ. ಬಹುಜನ ಸಮಾಜವಾದಿ ಪಕ್ಷದ ಪ್ರಭಾವದಿಂದ ಅಲ್ಲಿ ಗ್ರಾಮೀಣ ಪ್ರದೇಶದಲ್ಲೂ ದಲಿತರು ರಾಜಕೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳಲು ರಾಜಕೀಯದಲ್ಲಿ ಪಾಲುಗೊಳ್ಳುತ್ತಿದ್ದವು. ಅವು ಗ್ರಾಮ ಪಂಚಾಯತ್ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲುಗೊಂಡು ನಿರ್ಣಾಯಕ ಪಾತ್ರವಹಿಸಲು ಆರಂಭಿಸಿದವು. ಗ್ರಾಮ ಪಂಚಾಯತ್‌ನಲ್ಲಿ ದಲತರ ಪ್ರಭಾವ ಹೆಚ್ಚಿದಂತೆ ಇತರ ಕೆಳ ಜಾತಿಯವರು ಮತ್ತು ದಲಿತರ ನಡುವೆ ಬಿರುಕು ಹೆಚ್ಚುತ್ತಾ ಹೋಯಿತು. ಹಲವಾರು ಕೆಳ ಜಾತಿಗಳು ದಲಿತರಷ್ಟೆ ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದವರು ಇಂತಹ ದಲಿತ ಸಂಘಟನೆಗಳಿಂದ ಹೊರಗುಳಿಯಬೇಕಾಯಿತು. ಒಂದು ಕಾಲದಲ್ಲಿ ದಲಿತರು ಮತ್ತು ಮೇಲ್ ಜಾತಿ ನಡುವೆ ಬಿರುಕಿತ್ತು. ಆದರೆ ಹೊಸ ರಾಜಕೀಯ ಪ್ರಕ್ರಿಯೆಯಿಂದ ಕೆಳವರ್ಗದ ನಡುವೆ ಬಿರುಕು ಸೃಷ್ಟಿಯಾಯಿತೆಂದು ಅಧ್ಯಯನಕಾರರ ಅಭಿಪ್ರಾಯ. ಆದುದರಿಂದ ಸಂಪನ್ಮೂಲ ನಿರ್ವಹಣೆಗಾಗಿ ರೂಪುಗೊಳ್ಳುವ ಸಮುದಾಯಗಳಲ್ಲಿ ಆಂತರಿಕವಾಗಿ ಸದಸ್ಯರ ನಡುವೆ ಹೆಚ್ಚು ಕಡಿಮೆ ಒಳ್ಳೆಯ ಸಂಬಂಧ ಇರುತ್ತದೆ. ಆದರೆ ಸಮುದಾಯದಿಂದ ಹೊರಗಿನವರ ಜತೆ ಘರ್ಷಣೆ ನಡೆದಿರುತ್ತದೆ.

ಸೋಶಿಯಲ್ ಕ್ಯಾಪಿಟಲ್, ಸಿವಿಲ್ ಸೊಸೈಟಿ ಇತ್ಯಾದಿಗಳು ಮತ್ತು ಪ್ರಜಾಪ್ರಭುತ್ವ ಮಾದರಿಯಲ್ಲಿ ಕೆಲಸ ಮಾಡುವ ಸಂಸ್ಥೆಗಳ ನಡುವೆ ಒಂದು ವಿಧದ ಆರೋಗ್ಯಕರ ಸಂಬಂಧವನ್ನು ಸೋಶಿಯಲ್ ಕ್ಯಾಪಿಟಲ್‌ನ ಥಿಯರಿಸ್ಟ್‌ರು ಪ್ರತಿಪಾದಿಸುತ್ತಾರೆ. ಸಂಘಟನೆ, ಸಿವಿಲ್ ಸೊಸೈಟಿ, ಸೋಶಿಯಲ್ ಕ್ಯಾಪಿಟಲ್ ಇತ್ಯಾದಿಗಳು ಪ್ರಜಾಪ್ರಭುತ್ವದ ಅಡಿಪಾಯಗಳಾಗಿ ಚಿತ್ರಿತವಾಗಿವೆ. ಆದರೆ ನಮ್ಮಲ್ಲಿನ ಸಾಮಾಜಿಕ ವಾಸ್ತವತೆ ಆ ರೀತಿ ಇದೆಯೇ? ಎಷ್ಟೋ ಸಂದರ್ಭಗಳಲ್ಲಿ ಅವೆರಡರ ನಡುವೆ ನಕರಾತ್ಮಕ ಸಂಬಂಧವಿರುವುದನ್ನು ನಾವು ಕಾಣಬಹುದು. ತಳ ಮಟ್ಟದಲ್ಲಿ ಪ್ರಜಾಪ್ರಭುತ್ವ ಕಾರ್ಯರೂಪಕ್ಕೆ ಬರುವುದು ಚುನಾವಣೆ, ಪಾರ್ಟಿ, ಪ್ರಚಾರ ಇತ್ಯಾದಿಗಳ ಮೂಲಕ. ಇವು ಸೋಶಿಯಲ್ ಕ್ಯಾಪಿಟಲ್‌ನ್ನು ಬೆಳಸುವುದರ ಬದಲು ಮುರಿದ ಸಂದರ್ಭಗಳು ಹೆಚ್ಚು ಇವೆ. ನಿರಜಾ ಜಯಲ್ ಅವರು ಹಿಮಾಲಯ ಪ್ರದೇಶದ ಎರಡು ಹಳ್ಳಿಗಳಲ್ಲಿ ಸಮುದಾಯ ಅರಣ್ಯ ನಿರ್ವಹಣೆ ಕುರಿತ ಅಧ್ಯಯನ ಕೈಗೊಂಡಿದ್ದರು (ನಿರಜಾ ಗೋಪಾಲ್ ಜಯಲ್, ೨೦೦೧). ಆ ಹಳ್ಳಿಗಳ ಸರಹದ್ದಿನಲ್ಲಿ ಸಾಕಷ್ಟು ಪ್ರಮಾಣದ ಗಿಡಮರಗಳಿದ್ದವು. ಕಾಲಕ್ರಮೇಣ ಊರವರ ಮತ್ತು ಇತರರ ದಿಕ್ಕುದಿಸೆಯಿಲ್ಲದ ಮರ ಕಡಿಯುವಿಕೆಯಿಂದ ಅರಣ್ಯ ಸಂಪೂರ್ಣ ನಾಶವಾಗುವ ಸ್ಥಿತಿಬಂತು. ಆ ಸಂದರ್ಭದಲ್ಲಿ ಗಾಂಧಿ ತತ್ತ್ವ ಆಧಾರಿತ ಚಿಪ್ಕೊ ಚಳವಳಿ ಆ ಪ್ರದೇಶಗಳಲ್ಲಿ ಶುರುವಾಯಿತು. ಅದರಿಂದ ಪ್ರಭಾವಿತರಾದ ಊರವರು ಊರ ಪ್ರಮುಖರ ನಾಯಕತ್ವದಲ್ಲಿ ಅರಣ್ಯ ರಕ್ಷಣೆಗಾಗಿ ಸಂಘಟನೆಗಳನ್ನು ಮಾಡಿಕೊಂಡರು. ಆ ಸಂಘಟನೆಗಳಲ್ಲಿ ಊರಿನ ಎಲ್ಲ ಜನರು ಪಾಲುಗೊಂಡರು. ಅರಣ್ಯ ಬೆಳೆಸುವುದರಿಂದ ಹಿಡಿದು ಅದರ ರಕ್ಷಣೆ, ಉಪಯೋಗ ಇತ್ಯಾದಿಗಳ ಕುರಿತು ಊರವರೆಲ್ಲ ಸೇರಿ ನೀತಿ ನಿಬಂಧನೆಗಳನ್ನು ಮಾಡಿಕೊಂಡರು. ಆ ನಿಬಂಧನೆಗಳನ್ನು ಮೀರಿದವರಿಗೆ ದಂಡ ವಿಧಿಸುವ ಮತ್ತು ಇತರ ಶಿಕ್ಷೆ ವಿಧಿಸುವ ಕ್ರಮ ಮಾಡಿಕೊಂಡರು. ಹೀಗೆ ತಮ್ಮ ಸರಹದ್ದಿನ ಅರಣ್ಯ ಹಿಂದಿನ ರೀತಿಯಲ್ಲಿ ನಲನಲಿಸುವಂತೆ ಮಾಡಿದರು. ಸ್ವಲ್ಪ ಕಾಲದ ನಂತರ ಉತ್ತರ ಪ್ರದೇಶ ಸರಕಾರ ಅರಣ್ಯ ಪಂಚಾಯತ್‌ಗಳನ್ನು ರಚಿಸಲು ಆರಂಭಿಸಿತು. ಅರಣ್ಯ ಪಂಚಾಯತ್‌ನಲ್ಲಿ ಊರವರೆಲ್ಲ ಸದಸ್ಯರಾಗಿರುತ್ತಾರೆ. ಅಧ್ಯಕ್ಷ ಮತ್ತು ಪದಾಧಿಕಾರಿಗಳು ಚುನಾಯಿತರಾಗುತ್ತಾರೆ. ಹೀಗೆ ಸಮುದಾಯದ ಅರಣ್ಯ ಸಂರಕ್ಷಣೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ಸಂಸ್ಥೆಗಳು ಕಾರ್ಯರೂಪಕ್ಕೆ ಬರಲು ಆರಂಭವಾದವು. ಇದು ಜನರ ಮಧ್ಯೆ ಮತ್ತೊಂದು ವಿಧದ ಸಂಘಟನೆಗೆ ನಾಂದಿ ಹಾಡಿತು. ಜತೆಗೆ ಇಡೀ ಅರಣ್ಯದ ಸಂರಕ್ಷಣೆಯ ಕೇವಲ ಪಂಚಾಯತ್ ನವರ ಜವಾಬ್ದಾರಿಯಾಗುತ್ತಾ ಬಂತು. ಹಿಂದೆ ಸ್ವ ಇಚ್ಚೆಯಿಂದ ಪಾಲುಗೊಳ್ಳುತ್ತಿದ್ದ ಜನ ದೂರ ಸರಿಯಲು ಆರಂಭಿಸಿದರು. ಅರಣ್ಯ ಪಂಚಾಯತ್ ಶುರುವಾಗುವುದರೊಂದಿಗೆ ಕಾನೂನು ಪ್ರಕಾರ ಅರಣ್ಯ ರಕ್ಷಣೆ ಎಲ್ಲರ ಜವಾಬ್ದಾರಿ ಆಯಿತು. ಆದರೆ ವಾಸ್ತವದಲ್ಲಿ ಯಾರ ಜವಾಬ್ದಾರಿಯೂ ಆಗಲಿಲ್ಲ. ಮರಗಿಡಗಳು ಹಿಂದಿನ ರೀತಿಯಲ್ಲಿ ಖಾಲಿಯಾದವು. ಹೀಗೆ ಪ್ರಜಾಪ್ರಭುತ್ವದ ಸ್ಪರ್ಧೆ ಮತ್ತು ರೆಶನಾಲಿಟಿ ಜನರ ಹಿಂದಿನ ಸ್ವ ಇಚ್ಚೆಯಿಂದ ರೂಪುಗೊಂಡ ಸೋಶಿಯಲ್ ಕ್ಯಾಪಿಟಲ್‌ನ್ನು ವೃದ್ಧಿಸುವ ಬದಲು ಕ್ಷೀಣಿಸಿದವು.

ಒಂದು ಕಾಲದಲ್ಲಿ ಯಾವುದೋ ಚಾರಿತ್ರಿಕ ಕಾರಣಗಳಿಂದ ಸೋಶಿಯಲ್ ಕ್ಯಾಪಿಟಲ್ ಇದ್ದು ನಂತರದ ದಿನಗಳಲ್ಲಿ ಆರ್ಥಿಕ ಪ್ರಗತಿಯೊಂದಿಗೆ ಅದು ಕ್ಷೀಣಿಸಿದರೆ ಅದನ್ನು ಪುನಃ ಬೆಳೆಸುವುದು ಹೇಗೆ? ಕಳೆದ ವರ್ಷ ಕೇರಳದಲ್ಲಿ ಗ್ರಾಮ ಮಟ್ಟದ ಯೋಜನೆ ತಯಾರಿಯನ್ನು ಒಂದು ಸಾಮಾಜಿಕ ಚಳವಳಿ ರೂಪದಲ್ಲಿ ನಡೆಸಲಾಯಿತು. ಆ ಸಂದರ್ಭದಲ್ಲಿ ಉತ್ತರ ಕೇರಳದ ಜನರು ದಕ್ಷಿಣ ಕೇರಳದ ಜನರಿಗಿಂತ ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದರು ಮತ್ತು ಯೋಜನೆ ತಯಾರಿ ಕೆಲಸ ಉತ್ತರದಲ್ಲಿ ಪರಿಣಾಮಕಾರಿಯಾಗಿ ಜಾರಿ ಬಂದಿದೆ. ಇದನ್ನು ರಾಬರ್ಟ್‌ ಪುನಮ್‌ನ ಸಮುದಾಯದ ಪಾಲುಗೊಳ್ಳುವಿಕೆಯ ಥಿಯರಿಯ ದೃಷ್ಟಿಯಿಂದ ನೋಡಿದರೆ ದಕ್ಷಿಣ ಕೇರಳದಲ್ಲಿ ಚಾರಿತ್ರಿಕವಾಗಿಯೇ ಸಹಭಾಗಿತ್ವ ಇರಲಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಚಾರಿತ್ರಿಕವಾಗಿ ದಕ್ಷಿಣ ಕೇರಳ ಆ ರೀತಿ ಇರಲಿಲ್ಲ. ಸಾಮಾಜಿಕ ಹಾಗೂ ರಾಜಕೀಯ ಚಳವಳಿಗಳು ದಕ್ಷಿಣ ಕೇರಳದಲ್ಲಿ ಹಿಂದಿನಿಂದಲೇ ಜೋರಾಗಿದ್ದವು. ಕಮ್ಯುನಿಷ್ಟ್ ಚಳವಳಿ, ಗುರು ನಾರಾಯಣ್ ಚಳವಳಿ, ರೈತ ಕಾರ್ಮಿಕ ಚಳವಳಿ, ಅಸಂಘಟಿತ ಕಾರ್ಮಿಕ ಚಳವಳಿ ಹೀಗೆ ಹಲವಾರು ಚಳವಳಿಗಳು ದಕ್ಷಿಣ ಕೇರಳದಲ್ಲಿ ತುಂಬಾ ಪ್ರಬಲವಾಗಿದ್ದವು. ಹಾಗಿದ್ದರು ಇಂದು ಅಲ್ಲಿ ಸಹಭಾಗಿತ್ವ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕೇರಳದಲ್ಲಿ ತುಂಬಾ ಪ್ರಬಲವಾಗಿದ್ದವು. ಹಾಗಿದ್ದರು ಇಂದು ಅಲ್ಲಿ ಸಹಭಾಗಿತ್ವ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ದಕ್ಷಿಣ ಕೇರಳ ತುಂಬಾ ಸಕ್ರಿಯವಾಗಿ ಅಭಿವೃದ್ಧಿಯಲ್ಲಿ ಪಾಲುಗೊಂಡಿದ್ದು (ರಾಜನ್ ಗುರುಕಲ್, ೨೦೦೧). ಅಂದರೆ ಬಂಡವಾಳ ಸಂಗ್ರಹ ಕಾರ್ಯಕ್ರಮದಲ್ಲಿ. ದಕ್ಷಿಣ ಕೇರಳ ಸಹಭಾಗಿತ್ವದಲ್ಲಿ ಹಿಂದೆ ಉಳಿದಿರಬಹುದು. ಆದರೆ ಅಲ್ಲಿ ಹೆಚ್ಚು ಕಾರ್ಖಾನೆಗಳಿವೆ, ನಗರೀಕರಣ ಜಾಸ್ತಿ ಆಗಿದೆ, ಕೃಷಿಯಿಂದ ಕೃಷಿಯೇತರ ಚಟುವಟಿಕೆಗಳು ಹೆಚ್ಚಾಗಿವೆ. ಹೀಗೆ ನಾವು ಏನನ್ನು ಅಭಿವೃದ್ಧಿ ಎಂದು ಗುರುತಿಸುತ್ತೇವೆಯೋ ಅದು ದಕ್ಷಿಣ ಕೇರಳದಲ್ಲಿ ಇದೆ. ಆದರೆ ಸೋಶಿಯಲ್ ಕ್ಯಾಪಿಟಲ್ ಕಡಿಮೆ ಇದೆ. ಅಂದರೆ ನಾವು ಮಾರುಕಟ್ಟೆಯಲ್ಲಿ ವ್ಯವಹರಿಸುವುದು ಅನಿವಾರ್ಯವಾದ ಹಾಗೆ ನಮ್ಮ ಸಾಂಪ್ರದಾಯಿಕ ಸಂಬಂಧಗಳನ್ನು ಹಿಂದಿನ ರೀತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಎಲ್ಲ ವಿಧದ ಅಸಮಾನತೆಗಳಿಂದ ತುಂಬಿರುವ ನಮ್ಮ ಸಮಾಜದಲ್ಲಿ ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆ ಮತ್ತು ಅದರಿಂದ ಸಾಧ್ಯವಾಗುವ ಸಹಭಾಗಿತ್ವ ಹೇಗೆ ಬೇರೆಯ ರೂಪ ಪಡೆಯಬಹುದು ಎನ್ನುವುದನ್ನು ಮೇಲಿನ ಉದಾಹರಣೆಗಳು ತೋರಿಸಿವೆ. ಅದೇ ಸಂದರ್ಭದಲ್ಲಿ ಸೋಶಿಯಲ್ ಕ್ಯಾಪಿಟಲ್‌ನಿಂದ ಸಮುದಾಯ ಮತ್ತು ಸಮುದಾಯದಿಂದ ಸಹಭಾಗಿತ್ವ ಎನ್ನುವ ಸರಳ ರೇಖಾತ್ಮಕ ಸಂಬಂಧವನ್ನು ಕೂಡ ಇವು ಪ್ರಶ್ನಿಸುತ್ತವೆ. ಇದಕ್ಕೆ ಮುಖ್ಯ ಕಾರಣ ಕೆಲವು ವಿಚಾರಗಳನ್ನು ವಿಶೇಷ ಸಮಸ್ಯೀಕರಿಸಿದೆ ಒಪ್ಪಿಕೊಂಡಿರುವುದು. ಅವುಗಳಲ್ಲಿ ಒಂದು ಸಮುದಾಯ ರೂಪುಗೊಳ್ಳುವ ಪ್ರಶ್ನೆ. ಸೋಶಿಯಲ್ ಕ್ಯಾಪಿಟಲ್‌ನ ಪ್ರವಾದಿ ರಾಬರ್ಟ್‌ ಪುನಮ್ ಪ್ರಕಾರ ಅದು ಚಾರಿತ್ರಿಕವಾಗಿ ರೂಪುಗೊಳ್ಳುತ್ತದೆ. ಅಂದರೆ ಪ್ರಯತ್ನ ಪೂರ್ವಕವಾಗಿ ರೂಪುಗೊಳ್ಳಲು ಅವಕಾಶ ಇಲ್ಲವೆಂದಲ್ಲ. ಇದೆ ಆದರೆ ಅವುಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದರ ಬಗ್ಗೆ ಗುಮಾನಿ ಇದೆ. ನಮ್ಮಲ್ಲಿ ಚಾರಿತ್ರಿಕವಾಗಿ ರೂಪುಗೊಂಡಿರುವ ಸಮುದಾಯಗಳೆಂದರೆ ಜಾತಿ ಆಧಾರಿತ ಸಮುದಾಯಗಳು. ಪಾರ್ಥ ಚಟರ್ಜಿ ಪ್ರಕಾರ ಸಮುದಾಯದ ಕಲ್ಪನೆಯನ್ನು ಜಾತಿಗೆ ಸೀಮಿತಗೊಳಿಸಿದ್ದು ವಸಾಹತು ಶಾಹಿ (ಪಾರ್ಥ ಚಟರ್ಜಿ, ೧೯೯೮). ವಸಾಹತುಶಾಹಿ ಸ್ಥಳೀಯ ಸಮುದಾಯಗಳನ್ನು ಹತೋಟಿಯಲ್ಲಿ ಇಡಲು ಅವುಗಳನ್ನು ಅರ್ಥಮಾಡಿಕೊಳ್ಳಬೇಕಾಯಿತು. ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ವಿಂಗಡಿಸಬೇಕಾಯಿತು. ವಿಂಗಡಿಸಲು ಜಾತಿಯನ್ನು ಮಾನದಂಡವಾಗಿ ಬಳಸಲಾಯಿತು. ಜಾತಿ ಆಧಾರದ ವಿಂಗಡನೆ ಸಮುದಾಯಗಳ ನಡುವೆ ಖಚಿತವಾದ ಗೆರೆ ಎಳೆಯಿತು. ಹಿಂದೆ ಸಮುದಾಯಗಳ ನಡುವೆ ಅಷ್ಟು ಖಚಿತವಾದ ಗೆರೆಗಳು ಇರಲಿಲ್ಲ. ಒಂದು ಸಮುದಾಯ ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಇನ್ನೊಂದು ಸಮುದಾಯ ಎಲ್ಲಿಂದ ಶುರುವಾಗುತ್ತದೆ ಎಂದು ಹೇಳುವುದು ಸುಲಭವಾಗಿರಲಿಲ್ಲ. ಆದರೆ ಯಾವಾಗ ಸೆನ್ಸಸ್ ಮೂಲಕ ಜಾತಿ ಲೆಕ್ಕಚಾರ ಮತ್ತು ರಾಜಕೀಯ ಲಾಭಕ್ಕಾಗಿ ಜಾತಿ ಜನರ ಓಟು ಲೆಕ್ಕಾಚಾರ ಆರಂಭವಾಯಿತೋ ಅಂದಿನಿಂದ ಸಮುದಾಯಗಳ ನಡುವಿನ ಗೆರೆ ಬಲಗೊಳ್ಳುತ್ತಾ ಬಂತು ಎಂದು ಪಾರ್ಥ ಚಟರ್ಜಿಯವರ ವಾದ.

ಇದೇ ಸಂದರ್ಭದಲ್ಲಿ ಆಧುನೀಕರಣದೊಂದಿಗೆ ಸಮುದಾಯಗಳ ನಡುವಿನ ಗೆರೆ ಬಲಗೊಂಡಿತು ಎನ್ನುವುದು ಸರಿಯಲ್ಲ ಎನ್ನುವ ವಾದಗಳು ಇವೆ. ಬಹುಹಿಂದಿನಿಂದಲೇ ನಮ್ಮಲ್ಲಿ ಜಾತಿಗಳಿದ್ದವು, ಜಾತಿ ಪಂಚಾಯತ್‌ಗಳಿದ್ದವು, ಜಾತಿ ಜಾತಿಗಳ ನಡುವೆ ಸಾಕಷ್ಟು ದೊಡ್ಡ ಕಂದರಗಳಿದ್ದವು. ವಸಾಹತು ಪೂರ್ವದಲ್ಲಿ ಜಾತಿ ಜಾತಿ ನಡುವಿನ ಗೆರೆಗಳ ತುಂಬ ಸ್ಪಷ್ಟವಾಗಿದ್ದವು. ವಸಾಹತು ಮತ್ತು ನಂತರದ ಆಧುನೀಕರಣ ಆ ಗೆರೆಗಳನ್ನು ಮಸುಕುಗೊಳಿಸಿವೆ. ಜತೆಗೆ ಸಂಖ್ಯೆಯ ಆಧಾರದಲ್ಲಿ ನಡೆಯುವ ಪ್ರಜಾಪ್ರಭುತ್ವ ಹಿಂದೆ ಆಗಾಧವಾದ ಭಿನ್ನತೆಯನ್ನು ಪ್ರದರ್ಶಿಸುತ್ತಿದ್ದ ಹಲವಾರು ಸಮುದಾಯಗಳನ್ನು ಒಟ್ಟುಗೂಡಿಸಿದೆ ಎನ್ನುವ ವಾದಗಳೂ ಇವೆ (ಆಂದ್ರೆ ಬಿಟೆ ೧೯೯೭). ಹೀಗೆ ಇದೊಂದು ಮುಗಿಯಲಾರದ ಜಗಳ. ಆದುದರಿಂದ ಇದನ್ನು ಈ ದೃಷ್ಟಿಯಿಂದ ನೋಡುವ ಬದಲು ಜಾತಿ ಅಥವಾ ಸಮುದಾಯ ರೂಪುಗೊಳ್ಳುವಿಕೆಯನ್ನು ಒಂದು ಸತತ ಪ್ರಕ್ರಿಯೆಯಾಗಿ ನೋಡಿದರೆ ನಮ್ಮ ಸಮಾಜವನ್ನು ಅರ್ಥಮಾಡಿಕೊಳ್ಳಲು ಸುಲಭವಾದೀತು. ಬೇರೆ ಬೇರೆ ಚಾರಿತ್ರಿಕ ಸಂದರ್ಭಗಳಲ್ಲಿ ಬೇರೆ ಬೇರೆ ನೆಲೆಯಲ್ಲಿ ಸಮುದಾಯಗಳು ನಡುವಿನ ಗೆರೆಗಳು ಬೇರೆಯೇ ಆಗಿದ್ದವು. ಆದುದರಿಂದ ಸಮುದಾಯಗಳ ನಡುವೆ ಹಿಂದೆ ಬಲವಾದ ಗೆರೆಗಳು ಇರಲಿಲ್ಲ ಅಥವಾ ಈಗ ಅಂದರೆ ಆಧುನೀಕರಣದೊಂದಿಗೆ ಆ ಗೆರೆಗಳು ಸ್ಪಷ್ಟವಾಗಿವೆ ಎನ್ನುವ ವಾದ ನಮ್ಮ ಇಂದಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಲ್ಲ. ಸಮುದಾಯಗಳ ನಡುವಿನ ಸಂಬಂಧ ಮತ್ತು ವ್ಯಕ್ತಿ ಮತ್ತು ಸಮುದಾಯದ ನಡುವಿನ ಸಂಬಂಧ ಕುರಿತು ನಾವು ಇಂದು ಗಮನ ಹರಿಸಬೇಕಾಗಿದೆ.

ಜಾತಿಯ ಮೂಲಕ ಸಮುದಾಯ ರೂಪುಗೊಳ್ಳುವುದು ವಾಸ್ತವಾದರೆ ಅದನ್ನು ಒಪ್ಪಿಕೊಳ್ಳಲು ಸಮಸ್ಯೆ ಏನು? ಸಮಸ್ಯೆ ಇದೆ. ಅವು ತಮ್ಮ ಜಾತಿಯ ಸದಸ್ಯರಿಗೆ ಸಂಬಂಧಿಸಿದಂತೆ ಕೆಲವು ಒಳ್ಳೆಯ ಗುಣಗಳನ್ನು ಪ್ರದರ್ಶಿಸಬಹುದು. ನಿಜ. ಆದರೆ ಒಂದು ಜಾತಿಯ ಗುರುತಿನ ನೆಲೆಯಲ್ಲಿ ಗುರುತಿಸಿಕೊಳ್ಳುವುದೆಂದರೆ ಅದು ಯಾವತ್ತು ಮತ್ತೊಂದು ಗುರುತನ್ನು ದೃಷ್ಠಿಯಲ್ಲಿ ಇಟ್ಟುಕೊಂಡೆ ನಡೆಯುವ ಪ್ರಕ್ರಿಯೆ. ಇದಕ್ಕಾಗಿ ಕೆಲವು ಸಂದರ್ಭಗಳಲ್ಲಿ ಮತ್ತೊಂದನ್ನು ನೆಗೆಟಿವ್ ಆಗಿ ಚಿತ್ರಿಸುವ ಪ್ರಯತ್ನಗಳೂ ಇವೆ. ಮೇಲು ಜಾತಿಯವರು ತನ್ನ ಯಜಮಾನಿಕೆಯನ್ನು ಕೇವಲ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮಾತ್ರ ಚಲಾಯಿಸುವುದಲ್ಲ (ಚಂದ್ರ ಪೂಜಾರಿ, ೨೦೦೦). ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಯಜಮಾನಿಕೆಯ ಮುಂದುವರಿಕೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ ಕೂಡ ಅಗತ್ಯ. ಅದಕ್ಕಾಗಿ ಕೆಳ ವರ್ಗದವರು ಸಂಪನ್ಮೂಲದಲ್ಲಿ ಮಾತ್ರ ಬಡವರಲ್ಲ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಬಡವರೆಂಬ ಚಿತ್ರಣ ಸದಾ ಬಿಂಬಿತವಾಗುತ್ತದೆ. ಅದು ಹರಿಜನರನ್ನು ಹೊಟೇಲಿಗೆ ಸೇರಿಸುವ ಪ್ರಶ್ನೆ ಇರಬಹುದು, ಗುಡಿಗೆ ಪ್ರದೇಶ ನಿರಾಕರಿಸುವ ವಿಚಾರ ಇರಬಹುದು, ಕೆಳ ಜಾತಿಯವರ ಜತೆ ಊಟ, ಪಾನೀಯ ತೆಗೆದುಕೊಳ್ಳದ ವಿಚಾರ ಇರಬಹುದು, ಜಾತ್ರೆಗಳಲ್ಲಿ ಜಾಗಿಗನುಸಾರ ಕೆಲಸ ಕಾರ್ಯಗಳ ಹಂಚುವಿಕೆ ಇರಬಹುದು. ಇಲ್ಲೆಲ್ಲಾ ಸೇರಿಸಿಕೊಳ್ಳುವ ಮತ್ತು ಹೊರಗಿಡುವ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಹೀಗೆ ಒಂದು ನಿರ್ದಿಷ್ಟ ಜಾತಿಗೆ (ಗುರುತು) ಸೇರಿದ್ದೇನೆ ಎನ್ನುವ ಮೂಲಕ ತನ್ನತನ ಸಾಧಿಸಲು ಹೋರಾಟ ಆರಂಭವಾಗುತ್ತದೆ.

ಜಾತಿ ನೆಲೆಯಲ್ಲಿ ಸಮುದಾಯಗಳು ರೂಪುಗೊಳ್ಳುವುದರಿಂದ ಉಂಟಾಗುವ ಸಮಸ್ಯೆಗಳ ಸಂಕ್ಷಿಪ್ತ ಪರಿಚಯವಾಗಿರಬಹುದು. ಅದೊಂದು ಚಾರಿತ್ರಿಕ ವಾಸ್ತವ ಆಗಿರುವುದರಿಂದ ಒಮ್ಮಿಂದೊಮ್ಮೆಲೆ ಅದಕ್ಕಿಂಥ ಭಿನ್ನವಾದ ಸಮುದಾಯ ರೂಪುಗೊಳ್ಳುವಿಕೆಯನ್ನು ಉಹಿಸಿಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಇದೇ ಸಂದರ್ಭದಲ್ಲಿ ಇಂದು ಕಾರ್ಯರೂಪಕ್ಕೆ ಬರುತ್ತಿರುವ ಸಾಂಸ್ಥಿಕ ರಚನೆಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ಗ್ರಾಮೀಣ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿ ಜಾರಿಗೆ ಬರುತ್ತಿರುವ ಸಂಘಟನೆಗಳೆಲ್ಲಾ ಆಧುನಿಕ ಮೌಲ್ಯ ಪ್ರಕಾರ ರೂಪುಗೊಳ್ಳಬೇಕಾಗುತ್ತದೆ. ಅಲ್ಲಿ ವ್ಯಕ್ತಿಯ ಸಾಂಪ್ರದಾಯಿಕ ಹಿನ್ನೆಲೆ ಅಂದರೆ ಆತನ/ಅವಳ ಹುಟ್ಟು, ಜಾತಿ, ಧರ್ಮ, ಕಸುಬು ಇತ್ಯಾದಿಗಳು ಮುಖ್ಯವಲ್ಲ. ಆತ ಗ್ರಾಮಕ್ಕೆ ಸೇರಿರುವುದು ಅಥವಾ ಸಂಪನ್ಮೂಲ ಬಳಕೆದಾರನಾಗಿರುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬನು/ಳು ಇಲ್ಲಿ ಸದಸ್ಯನಾಗಬಹುದು. ಸದಸ್ಯನಾಗುವ ಮೂಲಕ ಸಮನಾದ ಹಕ್ಕಿಗೆ ಭಾದ್ಯನಾಗುತ್ತಾನೆ. ಇದು ನಮ್ಮ ಸಾಮಾಜಿಕ ವಾಸ್ತವತೆ ಮತ್ತು ಸಂಘಟನೆಗಳು ಬಯಸುವ ಆದರ್ಶದ ನಡುವೆ ಕಂದರವನ್ನು ಸೃಷ್ಟಿಸುತ್ತದೆ. ಇದೊಂದು ಬಗೆಯ ತ್ರಿಶಂಕು ಸ್ಥಿತಿ ನಿರ್ಮಾಣಕ್ಕೆ ಎಡೆ ಮಾಡಿಕೊಡುತ್ತದೆ. ಇದರಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಹಲವಾರು ಸಮುದಾಯಗಳು ಏಕ ಕಾಲದಲ್ಲಿ ಒಂದು ಸಾಂಸ್ಥಿಕ ಚೌಕಟ್ಟಿನೊಳಗೆ ವ್ಯವಹರಿಸಬೇಕು. ಹಿಂದಿನ ಎಲ್ಲ ಮೌಲ್ಯಗಳು ಇಂದು ಹೆಚ್ಚು ಕಡಿಮೆ ಪ್ರಶ್ನಿಸಲ್ಪಟ್ಟಿವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ವ್ಯವಹಾರ ಯಾರ ಮೌಲ್ಯ ಪ್ರಕಾರ ನಡೆಯಬೇಕು? ಯಾವುದೋ ಒಂದು ಸಮುದಾಯದ ಪ್ರಕಾರ ನಡೆದರೆ ಅದು ಇತರ ಸಮುದಾಯಗಳ ಮೇಲೆ ಸವಾರಿ ಮಾಡಿದಂತೆ ಆಗುತ್ತದೆ. ಆದುದರಿಂದ ಎಲ್ಲರಿಗೂ ಅನುಕೂಲವಾಗುವ ಮೌಲ್ಯ ನಿರ್ಮಾಣವಾಗಬೇಕಾಗುತ್ತದೆ. ಇದು ಯಾವ ಅಥವಾ ಯಾರ ಮೌಲ್ಯ? ಹೀಗೆ ಪರದೇಶಿ ಥಿಯರಿಗಳನ್ನು ಸಾರಾಸಗಟಾಗಿ ನಮ್ಮ ಪರಿಸರಕ್ಕೆ ಅನ್ವಯಿಸಿದಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ.