ಕೆರೆ ನೀರಾವರಿ ನಿರ್ವಹಣೆ ಮತ್ತು ಸಹಭಾಗಿತ್ವ

ಸಮುದಾಯ ವಾದಿಗಳ ಪ್ರಕಾರ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆಯಲ್ಲಿ ಹಿಂದಿನಿಂದಲೂ ನಮ್ಮಲ್ಲಿ ಸಮುದಾಯದ ಪಾತ್ರ ಇತ್ತು. ಕೆರೆ ಕಟ್ಟುವುದು, ಅದರ ರಿಪೇರಿ, ನೀರಿನ ಹಂಚುವಿಕೆ, ಇತ್ಯಾದಿಗಳನ್ನು ಹಿಂದೆ ನೀರು ಬಳಸುವವರು ನೋಡಿಕೊಳ್ಳುತ್ತಿದ್ದರು (ದೀಕ್ಷಿತ್ ಮತ್ತು ಇತರರು ೨೦೦೦). ಸ್ವಾತಂತ್ರ್ಯ ನಂತರ ಆಧುನಿಕ ನೀರಾವರಿ ವ್ಯವಸ್ಥೆ ಜಾರಿ ಬಂತು. ಅದು ಒಂದು ಕಡೆಯಿಂದ ಬೃಹತ್ ನೀರಾವರಿ ವ್ಯವಸ್ಥೆಗೆ ಮಹತ್ವ ಕೊಟ್ಟರೆ ಇನ್ನೊಂದು ದಿಕ್ಕಿನಲ್ಲಿ ನೀರಾವರಿ ನಿರ್ವಹಣೆಯಲ್ಲಿ ಸಮುದಾಯದ ಪಾತ್ರವನ್ನು ಕಡೆಗಣಿಸಿದೆ. ಇದರಿಂದಾಗಿ ಕೆರೆ ನೀರಾವರಿ ವ್ಯವಸ್ಥೆ ಅರ್ಥ ಕಳೆದುಕೊಳ್ಳುತ್ತಾ ಬಂತು. ಜತೆಗೆ ಕೆರೆ ನಿರ್ಮಾಣ, ಉಸ್ತುವಾರಿ, ನೀರಿನ ಹಂಚುವಿಕೆ, ಇತ್ಯಾದಿಗಳು ಸರಕಾರದ ಜವಾಬ್ದಾರಿಯಾದವು. ಕೆರೆ ನೀರಿನ ನಿರ್ವಹಣೆಯಲ್ಲಿ ಸಮುದಾಯದ ಪಾತ್ರ ಕಡಿಮೆಯಾಗುತ್ತಾ ಬಂತು. ಈ ಎಲ್ಲ ಬೆಳವಣಿಗೆಗಳ ದುಷ್ಟರಿಣಾಮಗಳನ್ನು ನಾವಿಂದು ಮನಗಾಣುತ್ತಿದ್ದೇವೆ. ಬಹುತೇಕ ಕೆರೆಗಳು ಹೂಳು ತುಂಬಿ ನಿರುಪಯುಕ್ತವಾಗಿವೆ. ಮಳೆ ನೀರನ್ನು ಸಂಗ್ರಹಿಸುವ ಕಾಲುವೆಗಳೂ, ಹೊಲಗಳಿಗೆ ನೀರುಣ್ಣಿಸುವ ಕಾಲುವೆಗಳೂ, ಕೆರೆ ಏರಿ, ಇತ್ಯಾದಿಗಳು ಜೀರ್ಣಾವಸ್ಥೆಯಲ್ಲಿವೆ. ಎಲ್ಲಾ ಕೆರೆಗಳಿಗೆ ಪುನರ್ ಜೀವ ನೀಡಲು ಕೋಟ್ಯಾಂತರ ರೂಪಾಯಿಗಳ ವಿನಿಯೋಜನೆ ಅಗತ್ಯವಿದೆ. ಆದರೆ ಉದಾರೀಕೃತ ಆರ್ಥಿಕ ನೀತಿಯ ಬಲವಾದ ಗಾಳಿ ಬೀಸುವ ಇಂದಿನ ಸಂದರ್ಭದಲ್ಲಿ ಕೆರೆಗಳ ಪುನರ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಸರಕಾರವೇ ಹೊರುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಕೆರೆ ನೀರಿನ ನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಗೆ ಇಂದು ಮಹತ್ವ ಬಂದಿದೆ.

ಬಳಕೆದಾರರು ಕೆರೆ ನೀರಾವರಿ ನಿರ್ವಹಣೆಯ ಜವಾಬ್ದಾರಿ ಹೊರುವುದನ್ನು ಕೆರೆ ನೀರಾವರಿ ನಿರ್ವಹಣೆಯಲ್ಲಿ ಜನರ ಸಹಭಾಗಿತ್ವ ಎನ್ನಬಹುದು. ಕೆರೆ ನೀರಾವರಿ ನಿರ್ವಹಣೆಯಲ್ಲಿ ಬರುವ ಮುಖ್ಯ ಅಂಶಗಳು ಯಾವುವು? ಜಲಾನಯನ ಪ್ರದೇಶ, ಅಲ್ಲಿಂದ ನೀರು ಹರಿದು ಬರಲು ಕಾಲುವೆ ನಿರ್ಮಾಣ ಮತ್ತು ಕಾಲಕಾಲಕ್ಕೆ ಅದರ ರಿಪೇರಿ, ಕೆರೆಯ ಪಾತ್ರ ಮತ್ತು ಅದರ ನಿರ್ವಹಣೆ ಅಂದರೆ ಅದು ಹೂಳು ತುಂಬದಂತೆ ನೋಡಿಕೊಳ್ಳುವುದು ಮತ್ತು ಅದನ್ನು ಒತ್ತುವರಿ ಮಾಡಿಕೊಳ್ಳದಂತೆ ನೋಡಿಕೊಳ್ಳುವುದು. ಕೆರೆ ಕಟ್ಟೆ, ನೀರು ಬಿಡುವ ತೂಬುಗಳನ್ನು ಸೇರಿಸಿ ಅಲ್ಲಿಂದ ಕೆರೆ ಕೆಳಭಾಗದಲ್ಲಿ ಬರುವ ಹೊಲಗಳಿಗೆ ಕ್ರಮಪ್ರಕಾರ ನೀರು ಹೋಗಲು ಕಾಲುವೆ ನಿರ್ಮಾಣ ಮತ್ತು ಉಸ್ತುವಾರಿ. ಹೊಸ ಕೆರೆ ಅಥವಾ ಕಾಲುವೆ ನಿರ್ಮಾಣದ ಕೆಲಸ ಇಂದಿಲ್ಲ. ಇಂದು ಏನಿದ್ದರೂ ಈಗಾಗಲೇ ಇರುವ ಕೆರೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ನಿರ್ಮಾಣಗಳನ್ನು ಕೆಡದಂತೆ ನೋಡಿಕೊಳ್ಳುವುದು ಮಾತ್ರ ಈಗ ನಡೆಯುತ್ತಿರುವ ಕೆಲಸ. ಮೇಲಿನ ಎಲ್ಲ ಜವಾಬ್ದಾರಿಗಳ ನಿರ್ವಹಣೆ, ನೀರು ಹಂಚಿಕೆ, ತೆರಿಗೆ ಸಂಗ್ರಹ, ಇವುಗಳಿಗೆ ಸಂಬಂಧಿಸಿದ ತಕರಾರುಗಳ ಪರಿಹಾರ ಇತ್ಯಾದಿಗಳು ಜನರ ಸಹಭಾಗಿತ್ವದ ವ್ಯಾಪ್ತಿಯೊಳಗೆ ಬರಬಹುದಾದ ವಿಚಾರಗಳು. ಈಗ ನಮ್ಮ ಮುಂದೆ ಎರಡು ಪ್ರಶ್ನೆಗಳಿವೆ. ಒಂದು, ಹಲವಾರು ದಶಕಗಳ ಆಧುನೀಕರಣಕ್ಕೆ ಒಗ್ಗಿ ಹೋಗಿರುವ ಜನರು ಒಮ್ಮಿಂದೊಮ್ಮೆಲೆ ಈ ಜವಾಬ್ದಾರಿ ಹೊರಲು ಸಿದ್ದರಾಗಿದ್ದಾರೆಯೇ? ಎರಡು, ಒಂದು ವೇಳೆ ಅವರ ಸಿದ್ಧತೆ ಆಗುವುದು ಅಥವಾ ಆಗದಿರುವುದರ ಬಗ್ಗೆ ವಿಶೇಷ ತಲೆ ಕೆಡೆಸಿಕೊಳ್ಳದೆ ವಿವಿಧ ಕೆಲಸಗಳಿಗೆ ಅವರನ್ನು ಜವಾಬ್ದಾರರನ್ನಾಗಿಸುವದೆಂದು ತೀರ್ಮಾನಿಸಿದರೆ (ತೀರ್ಮಾನಿಸಲಾಗಿದೆ) ಅದನ್ನು ಯಾವ ರೀತಿಯಲ್ಲಿ ಮಾಡುವುದು? ಎರಡನೇ ಪ್ರಶ್ನೆ ಕುರಿತು ಚಿಂತಿಸಬೇಕಾಗಿಲ್ಲ. ಯಾಕೆಂದರೆ ಸರಕಾರ ಈ ಕುರಿತು ಕೆಲವು ತೀರ್ಮಾನಗಳನ್ನು ಕೈಗೊಂಡು ಜಾರಿಗೊಳಿಸಿದೆ. ದೊಡ್ಡ ನೀರಾವರಿ ಇಲಾಖೆ ಕೆಳಗೆ ಬರುವ ನೀರು ಬಳಸುವವರ ಸಹಕಾರಿ ಕೂಡ ಆ ನಿಟ್ಟಿನಲ್ಲಿ ಆಲೋಚಿಸುತ್ತಿದೆ. ಹೀಗೆ ತಳ ಮಟ್ಟದಲ್ಲಿ ಕೆರೆ ನೀರಾವರಿ ನಿರ್ವಹಣೆಗೆ ಊರವರ ಸಹಕಾರಿ ಸಂಘಟನೆಗಳು ಜಾರಿ ಬರಲಿವೆ ಮತ್ತು ಕೆಲವು ಕಡೆಗಳಲ್ಲಿ ಜಾರಿ ಬಂದಿವೆ.

ಸೊಸೈಟಿಗಳನ್ನು ರಚಿಸುವ ವಿಚಾರವನ್ನು ಒಂದು ತಾಂತ್ರಿಕ ದೃಷ್ಟಿಯಿಂದ ನೋಡುವುದಾದರೆ ಒಂದೇ ವರ್ಷದಲ್ಲಿ ನೂರಾರು ಸಹಕಾರಿ ಸಂಘಟನೆಗಳನ್ನು ರಚಿಸುವುದು ಕಷ್ಟವಲ್ಲ. ಆದರೆ ಅವೆಲ್ಲಾ ನಿಜವಾದ ಅರ್ಥದಲ್ಲಿ ಜನರ ಸಹಭಾಗಿತ್ವದ ಮಾಧ್ಯಮಗಳಾಗಬಹುದೇ? ಈ ಪ್ರಶ್ನೆ ಯಾಕೆಂದು ವಿವರಿಸಬೇಕಾಗಿದೆ. ಜನರ ಸಹಭಾಗಿತ್ವದ ವಿಚಾರ ಕೆರೆ ನೀರಾವರಿ ನಿರ್ವಹಣೆಯ ಜತೆ ಆರಂಭವಾಗಿಲ್ಲ. ಗ್ರಾಮ ಪಂಚಾಯತ್, ಸಮುದಾಯ ಅರಣ್ಯ ಸಮಿತಿ, ಗ್ರಾಮೀಣ ಸಹಕಾರಿ ಸಂಘಗಳು ಮತ್ತು ಇತರ ಗ್ರಾಮೀಣ ಸಂಘಟನೆಗಳಲ್ಲೂ ಜನರ ಸಹಭಾಗಿತ್ವದ ಅಂಶಗಳಿವೆ. ಆ ಕ್ಷೇತ್ರಗಳಿಗೆ ಸಂಬಂಧಿಸಿದ ಅಧ್ಯಯನಗಳು ಜನರ ಸಹಭಾಗಿತ್ವದ ಅಂಶಗಳಿವೆ. ಆ ಕ್ಷೇತ್ರಗಳಿಗೆ ಸಂಬಂಧಿಸಿದ ಅಧ್ಯಯನಗಳು ಜನರ ಭಾಗವಹಿಸುವಿಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಪಟ್ಟಿ ಮಾಡಿವೆ. ಅವುಗಳೆಂದರೆ ಒಂದು, ಸಂಘಟನೆ ಯಾವ ಮಾನದಂಡದಲ್ಲಿ ನಡೆಯಬೇಕು? ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳ ಮೂಲಕ ಸಿವಿಲ್ ಸೊಸೈಟಿ ರೂಪುಗೊಳ್ಳುವುದರ ಪರ ಸಮುದಾಯವಾದಿಗಳು ಇದ್ದಾರೆ. ಹಿಮಾಲಯದ ಎರಡು ಹಳ್ಳಿಗಳ ಅಧ್ಯಯನ ಈ ವಾದವನ್ನು ತುಂಬಾ ಪರಿಣಾಮಕಾರಿಯಾಗಿ ಸಮರ್ಥಿಸುತ್ತದೆ. ಆಧುನಿಕ ಅರಣ್ಯ ಪಂಚಾಯತ್ ಬಂದ ನಂತರ ಊರಿನವರ ನಡುವೆ ಇದ್ದ ಸೋಶಿಯಲ್ ಕ್ಯಾಪಿಟಲ್ ಕ್ಷೀಣಿಸುತ್ತಾ ಹೋಯಿತು. ಇದಕ್ಕೆ ಕಾರಣ ನಂತರ ಬಂದ ಪಾರ್ಟಿ ರಾಜಕೀಯ ಅಥವಾ ಚುನಾವಣೆ ಮಾತ್ರ ಎನ್ನಲು ಸಾಧ್ಯವಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಸೀಟು ಕಾದಿರಿಸುವಿಕೆಯ ಮೂಲಕ ಕೆಳ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತ್ ಸದಸ್ಯರಾಗಿರುವುದು ಕಾರಣವಾಗಿರಬಹುದು. ಒಂದು ಕಾಲದಲ್ಲಿ ಇಡೀ ಹಳ್ಳಿಯ ಎಲ್ಲ ವ್ಯವಹಾರದಲ್ಲೂ ಮೇಲ್ ಜಾತಿಯವರು ಹೊಂದಿದ್ದ ಏಕಸ್ವಾಮ್ಯ ಹಕ್ಕನ್ನು ಪ್ರಶ್ನಿಸಿದ್ದು ಕೂಡ ಸೋಶಿಯಲ್ ಕ್ಯಾಪಿಟಲ್ ಕ್ಷೀಣಿಸುವುದಕ್ಕೆ ಕಾರಣವಾಗಿರಬಹುದು. ಹಾಗೆ ಎಂದಾದರೆ ಹಿಂದಿನ ವ್ಯವಸ್ಥೆ ಎಷ್ಟೇ ಘರ್ಷಣೆರಹಿತವಾದರೂ ಸಮಾಜದ ಕೆಳವರ್ಗದ ದೃಷ್ಟಿಯಿಂದ ಲಾಭದಾಯಕವಾಗಿರಲು ಸಾಧ್ಯವೇ? ಆಧುನಿಕ ಮಾನದಂಡಗಳಿಗೆ ಅನುಸಾರವಾಗಿ ರೂಪುಗೊಳ್ಳುವ ಸಂಘಟನೆಗಳು ಯಾಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ? ಕೆಲವು ಸಂದರ್ಭಗಳಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳ ಮೂಲಕ ಆಧುನಿಕ ಸಂಘಟನೆಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯವಾಗಬಹುದು. ಅಂತಹ ಸಂದರ್ಭಗಳಲ್ಲಿ ಸಂಪನ್ಮೂಲದ ನಿರ್ವಹಣೆ ಕುರಿತ ನಿರ್ಧಾರ ಪ್ರಶ್ನೆ ವ್ಯಕ್ತಿಯ ಹಕ್ಕು ಮತ್ತು ಸಮಾನತೆಯ ನೆಲೆಯಲ್ಲಿ ನಿರ್ಧಾರವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ.

ಎರಡು, ಸಮಾಜದ ಕೆಳವರ್ಗದವರಲ್ಲಿ ಪರಸ್ಪರ ಬಂಧಿಸುವ ಸೋಶಿಯಲ್ ಕ್ಯಾಪಿಟಲ್ ಹೆಚ್ಚಿದೆ. ಅವರು ಅವರದ್ದೇ ಸ್ಥಿತಿಯಲ್ಲಿ ಇರುವ ಇತರ ಸಮುದಾಯಗಳ ಜತೆ ಸಂಪರ್ಕ ಬೆಳೆಸಿಕೊಳ್ಳಬೇಕಾಗುತ್ತದೆ. ಹೀಗೆ ತಳಮಟ್ಟದಲ್ಲಿ ಒಂದಾದ ಸಮುದಾಯಗಳು ತಮ್ಮ ಮೇಲ್ ಸ್ತರದಲ್ಲಿರುವ ಸಮುದಾಯಗಳ ಜತೆ ಸಂಬಂಧ ಬೆಳಸಬೇಕು. ಒಟ್ಟು ಪರಿಸರದಿಂದ ಬೇರ್ಪಡಿಸಿ ಚರ್ಚಿಸಲು ಇದು ತುಂಬ ಸುಲಭ. ಆದರೆ ಅಸಮಾನ ಅಧಿಕಾರ ಮತ್ತು ಸಂಪನ್ಮೂಲಗಳ ವಿತರಣೆ ಇರುವ ನಮ್ಮಂತಹ ಸಮಾಜದಲ್ಲಿ ಇದು ಕಾರ್ಯರೂಪಕ್ಕೆ ಬರುವುದು ಹೇಗೆ? ಹೆಚ್ಚೆಂದರೆ ಒಂದೇ ಜಾತಿಗೆ ಸೇರಿದ ಕೆಳವರ್ಗಕ್ಕೆ ಸೇರಿದವರು ಒಗ್ಗಟ್ಟಾಗಬಹುದು. ಅವರ ಒಳಗೂ ಬೇಕಾದಷ್ಟು ಬಿರುಕುಗಳಿರುತ್ತವೆ. ಅವೆನ್ನೆಲ್ಲ ಬದಿಗಿಟ್ಟು ಅವರು ಒಗ್ಗಟ್ಟಾಗುತ್ತಾರೆ ಎಂದು ಗೃಹಿಸುವ. ಅದೇ ರೀತಿ ಹೆಚ್ಚು ಕಡಿಮೆ ಒಂದೇ ಸ್ಥಿತಿಯಲ್ಲಿರುವ ಕೆಳಜಾತಿಗಳು ಒಂದಾಗುತ್ತಾರೆ ಎಂದಿಟ್ಟುಕೊಳ್ಳೋಣ. ಆದರೆ ಇವರಿಬ್ಬರೂ ಕೂಡಿ ಮೇಲ್ ಸ್ತರದ ಸಮುದಾಯಗಳನ್ನು ಅಧಿಕಾರದಲ್ಲಿ ಪಾಲುಕೊಡಲು ಒತ್ತಾಯಿಸಲು ಸಾಧ್ಯವೇ? ಸಾಧ್ಯವಾಗಹಬುದು. ದ್ವೀಪದಂತಹ ಪರಿಸರದಲ್ಲಿ ಸಂಖ್ಯೆಯಲ್ಲಿ ಬಲಯುತರಾಗಿರುವ ಕೆಳಜಾತಿಯವರು ಸಂಘಟಿತರಾಗಿ ಮೇಲ್ ಜಾತಿಯವರನ್ನು ಅಧಿಕಾರದ ಮರು ವಿತರಣೆಗೆ ಒತ್ತಾಯಿಸಬಹುದೋ ಏನೋ? ಇಷ್ಟಾಗ್ಯೂ ಇದೊಂದು ಅಧಿಕಾರದ ಹಂಚುವಿಕೆಯ ವಿವರಣೆಯಾಗುತ್ತದೆ. ಅಧಿಕಾರ ಕೇವಲ ಆರ್ಥಿಕ ಹಾಗು ರಾಜಕೀಯ ಕ್ಷೇತ್ರದ ಅಸಮಾನತೆ ಮೇಲೆ ಆಧಾರಿತವಲ್ಲ. ಸಾಮಾಜಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದ ಅಸಮಾನತೆಗಳನ್ನು ಮುಂದುವರಿಸಲು ಪೂರಕ ಆಗುವ ರೀತಿಯಲ್ಲೇ ಇವೆ. ಇಂತಹ ಪರಿಸರದಲ್ಲಿ ತಳಮಟ್ಟದಲ್ಲಿನ ಸಮುದಾಯಗಳು ಸಂಘಟಿತರಾಗಿ ಅಧಿಕಾರದಲ್ಲಿ ಕಲ್ಪಿಸಿಕೊಳ್ಳುವ ನಾಗರಿಕ ಸಂಘಟನೆಗಳು ಕೆಳವರ್ಗದ ಜನರ ದೃಷ್ಟಿಯಿಂದ ಉಪಯೋಗವಿಲ್ಲ. ಹಲವಾರು ಸಾಂಸ್ಥಿಕ ವ್ಯವಸ್ಥೆಗಳನ್ನು ಕಾನೂನು ಮೂಲಕ ಜಾರಿ ತರುವುದು ಮತ್ತು ಅವುಗಳಲ್ಲಿ ಕೆಳಜಾತಿಗಳಿಗೆ ಸೀಟು ಕಾದಿರಿಸುವಿಕೆ ಮೂಲಕ ಪ್ರವೇಶ ಗ್ಯಾರಂಟಿ ಮಾಡುವುದು ಅಗತ್ಯ. ಆದುದರಿಂದ ಪ್ರಭುತ್ವದ ಪಾತ್ರವನ್ನು ನಿರಾಕರಿಸುವ ಸಿವಿಲ್ ಸೊಸೈಟಿ ಕಲ್ಪನೆಗಳು ಅಭಿವೃದ್ಧಿಶೀಲ ದೇಶಗಳ ಮಟ್ಟಿಗೆ ಸಹಕಾರಿಯಾಗಲಿಕ್ಕಿಲ್ಲ (ಗುರುಪ್ರೀತ್ ಮಹಾಜನ್, ೧೯೯೯).

ಜನರ ಬೇಕು ಬೇಡಗಳ ಕುರಿತು ಅವರೇ ನಿರ್ಧಾರ ತೆಗೆದುಕೊಂಡು ಅದರ ಪೂರೈಕೆಗೆ ಅಗತ್ಯವಿರುವ ಯೋಜನೆಗಳನ್ನು ಅವರೇ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವ ಸಹಭಾಗಿತ್ವ ಆದರ್ಶರೂಪದ್ದು. ವಾಸ್ತವದಲ್ಲಿ ಸಹಭಾಗಿತ್ವ ಈ ರೂಪದಲ್ಲಿ ಬರುವುದು ತುಂಬಾ ಅಪರೂಪ. ವಾಸ್ತವದಲ್ಲಿ ಅದರ ಹಲವಾರು ಡ್ಯೆಲ್ಯುಟೆಡ್ ರೂಪಗಳನ್ನು ಕಾಣಬಹುದು. ನಮ್ಮಲ್ಲಂತೂ ಅದನ್ನೊಂದು ತಂತ್ರದ ರೀತಿಯಲ್ಲಿ ಬಳಸಲಾಗುತ್ತಿದೆ. ಅಂದರೆ ಯೋಜನೆಗಳು ಹಿಂದಿನ ರೀತಿಯಲ್ಲಿ ಕೇಂದ್ರ ಅಥವಾ ರಾಜ್ಯ ಮಟ್ಟದಲ್ಲಿ ತಯಾರಾಗುತ್ತವೆ. ತಳ ಮಟ್ಟದಲ್ಲಿ ಯೋಜನೆಗಳನ್ನು ಜಾರಿ ತರಲು ಸೃಷ್ಟಿಸಿದೆ ಮೆಕಾನಿಸಮ್‌ಗಳ ಮುಂದೆ ಯೋಜನೆಗಳನ್ನು ಮಂಡಿಸುವ ಶಾಸ್ತ್ರ ನಡೆಯುತ್ತದೆ. ಜನರಿಗೆ ಯೋಜನೆಗಳ ಬಗ್ಗೆ ಸರಿಯಾದ ಕಲ್ಪನೆಯೇ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಸಕ್ರಿಯವಾಗಿ ಪಾಲುಗೊಳ್ಳುವ ವಿಚಾರವೇ ಹುಟ್ಟುವುದಿಲ್ಲ. ಇದೊಂದು ರೀತಿ ಒಪ್ಪಿಗೆ ಪಡೆಯುವ ಶಾಸ್ತ್ರ ಇನ್ನು ಕೆಲವು ಸಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಜನರು ಸಹಕರಿಸುವುದನ್ನು ಸಹಭಾಗಿತ್ವ ಎಂದು ವ್ಯಾಖ್ಯನಿಸುತ್ತಾರೆ. ಅಂದರೆ ಸಹಭಾಗಿತ್ವ ಕೂಡ ಒಂದು ಅಸ್ತ್ರದ ರೀತಿಯಲ್ಲಿ ಬಳಕೆಯಾಗತ್ತಿದೆ. ಆದರೆ ಜನರು ಸಹಭಾಗಿತ್ವದಿಂದ ಸಶಕ್ತೀಕರಣಗೊಳ್ಳಬೇಕಾದರೆ ಯೋಜನೆಗಳನ್ನು ರೂಪಿಸುವಲ್ಲಿಂದ ಅದು ಕಾರ್ಯರೂಪಕ್ಕೆ ಬರುವವರೆಗೆ ಸಕ್ರೀಯವಾಗಿ ಭಾಗವಹಿಸಬೇಕು. ಇದು ಒಮ್ಮಿಂದೊಮ್ಮೆಲ್ಲೆ ಸಾಧ್ಯವಾಗಲಿಕ್ಕಿಲ್ಲ. ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಗುರುತಿಸಬಹುದು. ಒಂದು ಮೇಲ್‌ಸ್ತರದ ಸಮಸ್ಯೆ. ಅಂದರೆ ಅಭಿವೃದ್ಧಿ ಮಾಡುವ ವರ್ಗದ ಸಮಸ್ಯೆ. ಅದು ಅಧಿಕಾರದಲ್ಲಿ ಉಳಿಯಬೇಕಾದರೆ ಅಭಿವೃದ್ಧಿ ಮಾಡಬೇಕಾಗಿರುವ ಕುರಿಮಂದೆ ಸದಾ ಅದರ ಮುಂದಿರಬೇಕು. ಆದುದರಿಂದ ಅದು ಯಾವತ್ತು ಅಭಿವೃದ್ಧಿಗೊಳಿಸಬೇಕಾದ ಜನರನ್ನು ತಿಳುವಳಿಕೆ ಉಳ್ಳವರು, ಜವಾಬ್ದಾರಿಯುಳ್ಳವರು, ಸರಿಯಾದ ಪರಿಸರ ನಿರ್ಮಿಸಿದರೆ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಂಡರು ಎಂದು ಪರಿಗಣಿಸುವುದಿಲ್ಲ. ಆದುದರಿಂದ ಜನರನ್ನು ಅಭಿವೃದ್ಧಿಗೊಳಿಸುವ ತನ್ನ ವಿಧಾನ ಮತ್ತು ಗುರಿಯ ಬಗ್ಗೆ ಅದಕ್ಕೆ ಯಾವತ್ತು ಸಂಶಯ ಬಂದಿಲ್ಲ. ಇದು ನಿಜವಾಗಿಯೂ ಬಹುದೊಡ್ಡ ಸಮಸ್ಯೆ. ತಿಳುವಳಿಕೆ ಇಲ್ಲದವರನ್ನು ಮತ್ತು ಅದರ ಅರಿವಿರುವವರನ್ನು ಒಪ್ಪಿಸಬಹುದು. ಆದರೆ ತಾವು ಮಾಡುವುದೇ ಸರಿಯೆಂದು ಬಲವಾಗಿ ನಂಬುವವರನ್ನು ತಿದ್ದುವುದು ಬಹು ಕಷ್ಟ.

ಇನ್ನು ಎರಡನೇ ಸಮಸ್ಯೆ ಸಹಭಾಗಿತ್ವದಲ್ಲಿ ಪಾಲುಗೊಳ್ಳುವ ಜನರದ್ದು. ಹಲವಾರು ದಶಕಗಳಿಂದ ತಮ್ಮ ಅಭಿವೃದ್ಧಿಗಾಗಿ ಅಧಿಕಾರದಲ್ಲಿರುವವರ ಕಡೆ ನೋಡಿ ಅಭ್ಯಾಸವಾಗಿರುವ ಜನ ಒಮ್ಮಿಂದೊಮ್ಮಲೆ ತಮ್ಮ ಅಭಿವೃದ್ಧಿಯ ಜವಾಬ್ದಾರಿಯನ್ನು ತಾವೆ ಹೊರಲು ಸಿದ್ಧವಾಗಬೇಕಾಗಿದೆ. ಇಲ್ಲಿ ಎರಡು ರೀತಿಯ ಸಿದ್ಧತೆಗಳು ಅಗತ್ಯ. ಒಂದು ಮಾನಸಿಕ ಎರಡು ಭೌತಿಕ. ಮಾನಸಿಕ ಸಿದ್ಧತೆ ಅರಿವಿನಿಂದ ಸಾಧ್ಯ. ಸರಿಯಾದ ಶಿಕ್ಷಣ ಮತ್ತು ಇತರ ವಿಧಾನಗಳಿಂದ ಸಹಭಾಗಿತ್ವದ ಮಹತ್ವ ಮತ್ತು ಅದರಲ್ಲಿ ಅವರ ಪಾತ್ರ ಕುರಿತು ಅರಿವು ಮೂಡಿಸಬಹುದು. ಅರಿವು ಕಾರ್ಯರೂಪಕ್ಕೆ ಬರಬೇಕಾದರೆ ಜನರ ಭೌತಿಕ ಸಿದ್ಧತೆಯೂ ಆಗಬೇಕಾಗಿದೆ. ಜನರು ತಮ್ಮ ಪಾಲಿನ ಶ್ರಮ ಅಥವಾ ಧನ ಕೊಡಲು ಮುಂದಾಗಬೇಕಾಗುತ್ತದೆ. ಅದಕ್ಕೆ ಸಾಕಾಗುವಷ್ಟು ಅವರ ಆರ್ಥಿಕ ಸ್ಥಿತಿ ಅನುಕೂಲವಾಗಿರಬೇಕು. ಸಾವಿರಾರು ರೂಪಾಯಿಗಳನ್ನು ತೆರಿಗೆ ಅಥವಾ ದೇಣಿಗೆ ನೀಡುವುದು ಬಡಜನರಿಗೂ ಸಮಸ್ಯೆಯಾಗಬಹುದು. ಆದರೆ ವರ್ಷಕ್ಕೆ ನೂರು ಅಥವಾ ಇನ್ನೂರು ರೂಪಾಯಿಗಳಷ್ಟು ತೆರಿಗೆ ಸಂದಾಯ ಮಾಡುವುದು ಕೆಳವರ್ಗದವರಿಗೂ ಸಮಸ್ಯೆಯಾಗಲಿಕ್ಕಿಲ್ಲ. ಮನವರಿಕೆ ಮಾಡಿದರೆ ತಳಮಟ್ಟದಲ್ಲಿರುವವರು ತಮ್ಮ ಪಾಲಿನ ಕೊಡುಗೆಯನ್ನು ಕೊಡಲು ಹಿಂದಕ್ಕೆ ಸರಿಯುವುದಿಲ್ಲ. ಆದರೆ ಅವರು ಬದುಕುವ ಪರಿಸರ ಅವರಿಗೆ ಬೇರೆಯದ್ದೇ ಪಾಠ ಹೇಳಿಕೊಡುತ್ತಿದೆ. ಉಳ್ಳವರು ತಮ್ಮ ಕಣ್ಣ ಮುಂದೆಯೇ ತಮ್ಮ ಪಾಲಿನ ಕೊಡುಗೆಯನ್ನು ಕೊಡಲು ನಿರಾಕರಿಸುವುದು ಕೆಳವರ್ಗದವರಿಗೂ ಮನೆ ತೆರಿಗೆ, ನೀರಿನ ತೆರಿಗೆ ಇತ್ಯಾದಿಗಳನ್ನು ಬಾಕಿ ಉಳಿಸಲು ಸಬೂಬುಗಳಾಗುತ್ತವೆ. ತೆರಿಗೆ ಸಂದಾಯ ಮಾಡಿದವರಿಗೂ ಮಾಡದವರಿಗೂ ವಿಶೇಷ ವ್ಯತ್ಯಾಸವೇ ಇರುವುದಿಲ್ಲ. ತಮ್ಮ ಪಾಲಿನ ಬಾಕಿಯನ್ನು ಕಟ್ಟದವರ ವಿರುದ್ಧ ಯಾವುದೇ ಕ್ರಮ ಇರುವುದಿಲ್ಲ. ಜತೆಗೆ ಅವರಿಗೂ ಇತರರಂತೆ ನೀರು, ವಿದ್ಯುತ್ ಅಥವಾ ಇತರ ಸೌಲಭ್ಯಗಳು ಸಿಗುತ್ತಿರುತ್ತವೆ. ಇಂತಹ ಭೌತಿಕ ಪರಿಸರ ಬದಲಾಗಬೇಕಾಗಿದೆ.

ಜನರು ಮಾನಸಿಕವಾಗಿ ಹಾಗೂ ಭೌತಿಕವಾಗಿ ತಯಾರು ಆದಾಗ್ಯೂ ಸಹಭಾಗಿತ್ವ ಪರಿಣಾಮಕಾರಿಯಾಗಬೇಕಾದರೆ ಆರಂಭದ ಹಂತದಲ್ಲಿ ಜನರನ್ನು ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ. ಇದಕ್ಕೆ ಒಂದೋ ಸ್ಥಳೀಯ ನಾಯಕತ್ವ ಜವಾಬ್ದಾರಿ ವಹಿಸಬೇಕು ಅಥವಾ ಹೊರಗಿನ ನಾಯಕತ್ವದ ಆಸರೆ ಪಡೆಯಬೇಕು. ಸ್ಥಳೀಯರು ಆಸಕ್ತಿ ವಹಿಸಿಕೊಂಡು ಸಹಭಾಗಿತ್ವ ಬೆಳೆದರೆ ಉತ್ತಮ. ಆದರೆ ಎಷ್ಟೋ ಸಂದರ್ಭಗಳಲ್ಲಿ ಸ್ಥಳೀಯ ನಾಯಕತ್ವ ಸಿಗದಿರಬಹುದು. ಒಂದು ವೇಳೆ ಸಿಕ್ಕಿದರೂ ಅದು ಪಾರಂಪರಿಕವಾಗಿ ಯಜಮಾನಿಕೆಯಲ್ಲಿದ್ದು ಇಂದು ಅದರ ಯಜಮಾನಿಕೆಯನ್ನು ಮುಂದುವರಿಸುವ ರೀತಿಯಲ್ಲಿ ನಾಯಕತ್ವ ನೀಡುವ ಸಾಧ್ಯತೆ ಇರಬಹುದು. ಅಂತಹ ಸಂದರ್ಭಗಳಲ್ಲಿ ಆ ಕೆಲಸವನ್ನು ಸರಕಾರೇತರ ಸಂಸ್ಥೆಗಳು ಮತ್ತು ಸರಕಾರಿ ಅಧಿಕಾರಿಗಳು ನಿರ್ವಹಿಸುತ್ತಾರೆ. ಸರಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ ಉದಾಹರಣೆಗಳು ಇವೆ. ಸಿವಿಲ್ ಸೊಸೈಟಿ ಮತ್ತು ಸಹಭಾಗಿತ್ವದ ಪ್ರಚಾರ ನಮ್ಮಲ್ಲಿ ಒಂದು ವಿಧದಲ್ಲಿ ಸರಕಾತೇರ ಸಂಸ್ಥೆಗಳು ಬಲವಾಗಿ ಬೇರೂರುವುದನ್ನು ತೋರಿಸುತ್ತಿವೆ. ನಿಜವಾದ ಅರ್ಥದಲ್ಲಿ ಜನಸಾಮಾನ್ಯರು ತಮ್ಮ ಹಕ್ಕಿಗಾಗಿ ಅಥವಾ ತಮ್ಮ ಸಂಪನ್ಮೂಲಗಳ ನಿರ್ವಹಣೆಗೆ ಸಮುದಾಯವಾಗಿ ಪ್ರಯತ್ನಿಸುವುದು ಕಂಡು ಬರುತ್ತಿಲ್ಲ. ಹಿಂದೆ ಅಭಿವೃದ್ಧಿ ಮಾಡುವುದು ಸರಕಾರದ ಮತ್ತು ಅಧಿಕಾರಗಳ ಜವಾಬ್ದಾರಿಯಾದರೆ; ಇಂದು ಅದು ಸರಕಾರೇತರ ಸಂಸ್ಥೆಗಳದ್ದಾಗಿದೆ. ಹಿಂದೆ ತಳಮಟ್ಟದ ಜನರು ಅವರ ಬೇಕು ಬೇಡಗಳಿಗೆ ಅನುಸಾರ ಯೋಜನೆಗಳನ್ನು ರೂಪಿಸುವುದರಲ್ಲಿ ಪಾಲುಗೊಳ್ಳುತ್ತಿರಲಿಲ್ಲ. ಇಂದು ಸರಕಾರೇತರ ಸಂಸ್ಥೆಗಳು ಬಂದು ಸ್ಥಿತಿ ವಿಶೇಷ ಬದಲಾಗಿಲ್ಲ. ಹೆಚ್ಚೆಂದರೆ ರಾಜ್ಯ ಅಥವಾ ಕೇಂದ್ರ ಸರಕಾರದ ಮಟ್ಟದಲ್ಲಿ ರೂಪಿತವಾದ ಯೋಜನೆಗಳಿಗೆ ಒಪ್ಪಿಗೆ ಪಡೆಯುವ ಶಾಸ್ತ್ರಕ್ಕೆ ಪುರೋಹಿತ್ಯ ಒದಗಿಸುವ ಕೆಲಸವನ್ನು ಸರಕಾರೇತರ ಸಂಸ್ಥೆಗಳು ಮಾಡುತ್ತಿವೆ. ಇದಕ್ಕೆ ಮುಖ್ಯ ಕಾರಣ ಕುಂಟಿತ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಪ್ರಶ್ನೆಯನ್ನಾಗಿ ನೋಡುವುದು. ಆದರೆ ಕೆಳವರ್ಗದವರ ಸಮಸ್ಯೆ ಕೇವಲ ಆರ್ಥಿಕ ಕೊರತೆ ಮಾತ್ರ ಅಲ್ಲ. ಅದು ಬಹು ಆಯಾಮವುಳ್ಳ ವಿಚಾರ. ಚಾರಿತ್ರಿಕವಾಗಿ ರೂಪುಗೊಂಡ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ, ರಚನೆಗಳು ಕುಂಟಿತ ಅಭಿವೃದ್ಧಿಯನ್ನು ಮುಂದುವರಿಸಲು ಅವಶ್ಯವಾದ ಚೌಕಟ್ಟನ್ನು ಒದಿಗಿಸುತ್ತಿರುವುದು ಬಹು ದೊಡ್ಡ ಸಮಸ್ಯೆ. ಆ ಚೌಕಟ್ಟನ್ನು ಸುಧಾರಿಸುವ ಕಾರ್ಯಕ್ರಮಗಳು ಇಲ್ಲದಿದ್ದರೆ ಭೌತಿಕ ಕೊರತೆ ಮುಂದುವರಿಯುತ್ತಲೇ ಇರುತ್ತದೆ. ಬಹುತೇಕ ಸರಕಾರೇತರ ಸಂಸ್ಥೆಗಳು ಭೌತಿಕ ಕೊರತೆಗಳನ್ನು ಮುಂದುವರಿಸಲು ಪೂರಕವಾಗುವ ಚೌಕಟ್ಟನ್ನು ಸುಧಾರಿಸುವ ಜವಾಬ್ದಾರಿ ವಹಿಸುವುದಿಲ್ಲ. ಹಾಗೆಂದು ಮೂಲಭೂತವಾದ ಪರಿವರ್ತನೆಗಳನ್ನು ಉದ್ಧೇಶವಾಗಿ ಇಟ್ಟುಕೊಂಡು ದುಡಿಯುವ ಸರಕಾರೇತರ ಸಂಸ್ಥೆಗಳು ಇಲ್ಲವೆಂದಲ್ಲ. ಇವೆ. ಆದರೆ ಅಂತಹ ಸಂಸ್ಥೆಗಳಿಗೆ ವಿದೇಶಿ ನೆರವು ಸಿಗುವುದಿಲ್ಲ. ಜತೆಗೆ ನಮ್ಮ ಸರಕಾರಗಳು ಕೂಡ ಅಂತಹ ಸಂಸ್ಥೆಗಳನ್ನು ಗಾವುದ ದೂರ ಇರಿಸುತ್ತವೆ. ಅವುಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳು ಮಿಡಿಯೇಟ್ ಆಗದಂತೆ ಸರಕಾರಗಳು ನೋಡಿಕೊಳ್ಳುತ್ತವೆ. ಇಂತಹ ಸ್ಥಿತಿಯಲ್ಲಿ ಸಹಭಾಗಿತ್ವವನ್ನು ಒಂದು ಸಾಮಾಜಿಕ ಚಳವಳಿಯ ರೂಪದಲ್ಲಿ ಜನರಿಗೆ ತಲುಪಿಸುವುದು ಹೆಚ್ಚು ಪರಿಣಾಮಕಾರಿ. ಇದು ಹೊರಗಿನ ಎಜಂಟರ್‌ಗಳ ಮೇಲೆ ಡಿಪೆಂಡ್ ಆಗುವುದನ್ನು ತಪ್ಪಿಸುತ್ತದೆ. ಜತೆಗೆ ತಳ ಮಟ್ಟದಲ್ಲಿ ಪಾಲುದಾರರ ಅರಿವಿನ ಮಟ್ಟವನ್ನು ಗಣನೀಯವಾಗಿ ಪ್ರಭಾವಿಸುತ್ತದೆ.

ಭಾರತದಂತಹ ಅಸಮಾನ ಸಮಾಜದಲ್ಲಿ ಸೋಶಿಯಲ್ ಕ್ಯಾಪಿಟಲ್‌ನ ಸೀಮಿತ ಅನ್ವಯಿಕೆಯ ಕಂಡಿದ್ದೇವೆ. ಆದಾಗ್ಯೂ ಇಂದು ಈ ಪದ ಅಭಿವೃದ್ಧಿ ಚಿಂತಕರ, ಪಾಲಿಸಿ ರೂಪಿಸುವ ಅಧಿಕಾರಿಗಳ, ಸರಕಾರೇತರ ಸಂಸ್ಥೆಗಳ ಮುಖ್ಯ ಮಂತ್ರವಾಗಿದೆ. ಇದಕ್ಕೆ ಒಂದು ಕಾರಣ ವರ್ಲ್ಡ್ ಬ್ಯಾಂಕಿನ ಕೃಪೆಯಿಂದ ಸೋಶಿಯಲ್ ಕ್ಯಾಪಿಟಲ್ ಇಂದು ಅಭಿವೃದ್ಧಿಯ ಹೊಸ ಮಿಸ್ಸಿಂಗ್ ಲಿಂಕ್ ಆಗಿರುವುದು. ಇಲ್ಲಿ ಸೋಶಿಯಲ್ ಕ್ಯಾಪಿಟಲಿಗೂ ಸಹಭಾಗಿತ್ವಕ್ಕೂ ನೇರ ಸಂಬಂಧ ಹಣಿಯಲಾಗುತ್ತಿದೆ. ಈ ಕ್ರಮದ ಸಹಭಾಗಿತ್ವದ ಮುಖ್ಯ ಸಮಸ್ಯೆಯೆಂದರೆ ಇಲ್ಲಿ ಸಮುದಾಯವನ್ನು ಒಂದು ಘರ್ಷಣೆ ಇಲ್ಲದ, ಸಮಸ್ಯೆರಹಿತ ಸ್ಪೇಸ್ ಆಗಿ ನೋಡಲಾಗುತ್ತಿದೆ. ಇಂತಹ ಸಮುದಾಯಗಳು ಸ್ವತಂತ್ರವಾಗಿ ಒಟ್ಟ ಸೇರಿ ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಅವುಗಳು ಒಟ್ಟು ಸೇರಿ ತಮ್ಮ ಸಮಸ್ಯೆಗಳು ಪರಿಹಾರಕ್ಕೆ ಪ್ರಯತ್ನಿಸಲು ಹೆಚ್ಚೆಂದರೆ ಕೆಲವು ಸರಕಾರೇತರ ಸಂಸ್ಥೆಗಳು (ಎನ್.ಜಿ.ಓ) ಸಹಕಾರ ಇದ್ದರೆ ಸಾಕು ಎನ್ನುವ ಗೃಹಿಕೆ ಇದೆ. ಇದಕ್ಕೆ ಮುಖ್ಯ ಕಾರಣ ತಳಮಟ್ಟದಲ್ಲಿನ ಅಧಿಕಾರ ಸಂಬಂಧ ಬಗ್ಗೆ ತುಂಬ ಸರಳೀಕೃತ ನಿಲುವನ್ನು ಸೋಶಿಯಲ್ ಕ್ಯಾಪಿಟಲ್ ಥಿಯರಿ ಪ್ರತಿಪಾದಿಸುತ್ತಿರುವುದು. ಆದರೆ ವಾಸ್ತವಿಕದಲ್ಲಿ ಈ ಅಧಿಕಾರ ಸಂಬಂಧಗಳು ಎಷ್ಟು ಸಂಕೀರ್ಣವಾಗಿದೆ ಎನ್ನುವುದನ್ನು ಮೇಲಿನ ಉದಾಹರಣೆಗಳು ದೃಢಪಡಿಸುತ್ತವೆ. ಇಷ್ಟೊಂದು ಸೀಮಿತ ಅನ್ವಯಿಕೆ ಇದ್ದಾಗ್ಯೂ ಸೋಶಿಯಲ್ ಕ್ಯಾಪಿಟಲ್ ಇಂದು ತುಂಬಾ ಪ್ರಚಾರದಲ್ಲಿದೆ. ಅದಕ್ಕೆ ಕಾರಣ ಸೋಶಿಯಲ್ ಕ್ಯಾಪಿಟಲ್‌ನ ವಿಶ್ಲೇಷಣ ಶಕ್ತಿಯಲ್ಲ; ಅದು ಇಂದು ಯಜಮಾನಿಕೆಯಲ್ಲಿರುವ ಅಭಿವೃದ್ಧಿ ಚಿಂತನೆಂದು ಭಾಗವಾಗಿರುವುದು. ಇಂದು ಯಜಮಾನಿಕೆಯಲ್ಲಿರುವ ಅಭಿ ವೃದ್ಧಿ ಚಿಂತನೆ ಸಹಭಾಗಿತ್ವವನ್ನು ಒಂದು ಅಸ್ತ್ರದ ರೂಪದಲ್ಲಿ ಬಳಸುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ತಳಮಟ್ಟ ತಲುಪಿಸುವ ಒಂದು ಮೆಕಾನಿಸಮ್ ಆಗಿ ಇಲ್ಲಿ ಸಹಭಾಗಿತ್ವವನ್ನು ನೋಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಮೇಲ್‌ಸ್ತರದಲ್ಲಿ ರೂಪುಗೊಳ್ಳುವ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜ ಆರಿ ತರುವುದು. ಇಲ್ಲಿ ತಳಮಟ್ಟದ ಅಧಿಕಾರ ಸಂಬಂಧಗಳನ್ನು ಕೆದಕುವ ಅಥವಾ ಏರುಪೇರುಗೊಳಿಸುವ ಪ್ರಶ್ನೆ ಇಲ್ಲ.

ಪರಾಮರ್ಶನ ಬರಹಗಳು

೧. ಹರ್ಶ್‌‌ಮನ್, ದಿ ಸ್ಟ್ರಟಜಿ ಆಫ್ ಎಕಾನಮಿಕ್ ಡೆವಲಪ್ಮೆಂಟ್, ನ್ಯೂಯಾರ್ಕ್‌ :ಯೇಲ್ ಯುನಿವರ್ಸಿಟಿ ಪ್ರೆಸ್, ೧೯೫೮.

೨. ಶಂಪೀಟರ್, ದಿ ಥಿಯರಿ ಆಫ್ ಎಕಾನಮಿಕ್ ಡೆವಲಪ್ಮೆಂಟ್, ಮೆಪಶುಸೆಟ್ಸ್:ಹಾರ್‌ವರ್ಡ್‌ ಯುನಿವರ್ಸಿಟಿ ಪ್ರಸ್, ೧೯೩೪.

೩. ಮೆಕ್‌ಲೆಂಡ್, ದಿ ಎಚೀವಿಂಗ್ ಸೊಸೈಟಿ, ಬಾಂಬೆ :ವಕೀಲ್ಸ್, ಪೆಪ್ಪರ್ ಅಂಡ್ ಸೈಮನ್ಸ್ ಲಿಮಿಟೆಡ್, ೧೯೬೧.

೪. ವೇನ್ ಇ ನಫೀಜರ್, ಕ್ಲಾಸ್, ಕಾಸ್ಟ್ಆಂಡ್ ಎಂತ್ಪ್ರನರ್ ಶಿಪ್: ಎ ಸ್ಟಡಿ ಆಫ್ ಇಂಡಿಯನ್ ಇಂಡಸ್ಟ್ರಿಯಲಿಸ್ಟ್ಸ್, ಹೊನಲುಲು :ಯುನಿವರ್ಸಿಟಿ ಆಫ್ ಹಾವಯಿ, ೧೯೭೮.

೫. ಕೀತ್ ಗ್ರಿಫಿನ್ ಆಂಡ್ ಜಾನ್ ನೈಟ್, ಹ್ಯೂಮನ್ ಡೆವಲಪ್ಮೆಂಟ್ ಆಂಡ್ ದಿ ಇನ್ಟರ್ನೇಶನಲ್ ಡೆವಲಪ್ಮೆಂಟ್ ಸ್ಟ್ರಟಜಿ, ಲಂಡನ್ :ಮೆಕ್‌ ಮಿಲನ್ ೧೯೯೦.

೬. ಥಿಯೊಡರ್ ಸಲ್ಜ್, ಇನ್ ವೆಸ್ಟಮೆಂಟ್ ಇನ್ ಹ್ಯೂಮನ್ ಕ್ಯಾಪಿಟಲ್, ನ್ಯೂಯಾರ್ಕ್‌:ಫ್ರಿ ಪ್ರೆಸ್, ೧೯೭೧.

೭. ಜೇಮ್ಸ್ ಎಸ್ ಕೊಲಮೆನ್ ಸೋಶಿಯಲ್ ಕ್ಯಾಪಿಟಲ್ ಇನ್ ದಿ ಕ್ರಿಯೇಶನ್ ಆಫ್ ಹ್ಯೂಮನ್ ಕ್ಯಾಪಿಟಲ್,” ಅಮೇರಿಕನ್ ಜರ್ನಲ್ ಆಫ್ ಸೋಶಿಯಲಾಜಿ,೯೪, ೧೯೮೮, ಪು. ೯೫-೧೨೦.

೮. ಕೆಲ್ಲಿ ಜೊನಾಥೆನ್, “ವೆಲ್ತ್ ಆಂಡ್ ಫೆಮಿಲಿ ಬೇಗ್ರೌಂಡ್ ಇನ್ ದಿ ಒಕ್ಯುಪೆಶನಲ್ ಕೆರೀಯರ್ : ಥಿಯರಿ ಆಂಡ್ ಕ್ರಾಸ್ ಕಲ್ಚರಲ್ ಡಾಟ,” ಬ್ರಿಟಿಷ್ ಜರ್ನಲ್ ಆಫ್ ಸೋಶಿಯಲಾಜಿ, ವಾ.೨೯,ನಂ.೧,ಮಾರ್ಚ್೧೯೭೮, ಪು. ೯೪-೧೦೭.

೯. ಜೂಲಿಯ ಕ್ವಾಂಗ್, “ಈಸ್ ಎವರಿ ಒನ್ ಇಕ್ವಲ್ ಬಿಫೋರ್ ದಿ ಸಿಸ್ಟಮ್ ಆಫ್ ಗ್ರೇಡ್ಸ್ : ಸೋಶಿಯಲ್ ಬೇಗ್ರೌಂಡ್ ಅಂಡ್ ಒಪರ್ಚುನಿಟಿಸ್ ಇನ್ ಚೈನ್,” ಬ್ರಿಟಿಷ್ ಜರ್ನಲ್ ಆಫ್ ಸೋಶಿಯಲಾಜಿ,ವಾ.೩೪, ನಂ.೧, ಮಾರ್ಚ್ ೧೯೮೩, ಪು.೯೩-೧೦೮.

೧೦. ಪಾರಿ ಬಾರ್ಡಿ, ಸೋಶಿಯಲಾಜಿ ಇನ್ ಕ್ವಶ್ಚನ್,ಲಂಡನ್:ಸೇಜ್ ಪಬ್ಲಿಕೇಶನ್ಸ್, ೧೯೯೩

೧೧. ರಾಬರ್ಟ ಪುನಮ್, ಮೇಕಿಂಗ್ ಡೆಮಾಕ್ರಸಿ ವರ್ಕ್‌. ಸಿವಿಕ್ ಟ್ರೆಡಿಶನ್ಸ್ ಇನ್ ಮೊಡರ್ನ್ಇಟಲಿ, ಪ್ರಿನ್ಸ್ಟನ್:ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್, ೧೯೯೩.

೧೨. ಮಹಮ್ಮದ್ ಮೊಹಿದ್ದೀನ್ ಅಬ್ದುಲ್ಲ, ರೂರಲ್ ಡೆವಲಪ್ಮೆಂಟ್ ಇನ್ ಬಾಂಗ್ಲಾದೇಶ್ : ಪ್ರೊಬ್ಲೆಮ್ಸ್ ಆಂಡ್ ಪ್ರೊಸ್ಪೆಕ್ಷ್ಸ್, ಡಾಕ್ಕಾ:ನೂರ್ ಜಹಾನ್ ಬೇಗಂ, ೧೯೭೯.

೧೩. ಮಾಧವ ಗಾಡ್ಗಿಲ ಅಂಡ್ ರಾಮಚಂದ್ರ, ಇಕಲಾಜಿ ಆಂಡ್ ಇಕ್ವಿಟಿ: ದಿ ಯೂಸ್ ಆಂಡ್ ಎಬ್ಯೂಸ್ ಆಫ್ ನೇಚರ್ ಇನ್ ಕಾಂಟೆಂಪರರಿ ಇಂಡಿಯಾ, ನ್ಯೂಡೆಲ್ಲಿ : ಪೆಂಗ್ವಿನ್ ಬುಕ್ಸ್, ೧೯೯೫.

೧೪. ರಜನಿ ಕೊಥಾರಿ, ಸ್ಟೇಟ್ ಎಗೆಯಿನ್ಸ್ಟ್ಡೆಮಾಕ್ರಸಿ: ಇನ್ ಸರ್ಚ್ ಆಫ್ ಹ್ಯೂಮನ್ ಗವರ್ನೆರ್ಸ್,ಡೆಲ್ಲಿ: ಅಜಂತಾ ಪಬ್ಲಿಷರ್ಸ್‌, ೧೯೮೮.

೧೫. ಆಶಿಸ್ ನಂದಿ, ಕಲ್ಚರ್ ಸ್ಟೇಟ್ ಆಂಡ್ ರಿಡಿಸ್ಕವರಿ ಆಫ್ ಇಂಡಿಯನ್ ಪೊಲಿಟಿಕ್ಸ್,” ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ,ವಾ. ೧೯.೧೯೮೪. ಪು. ೨೦೭೮-೮೩.

೧೬. ಜೋದ ಎನ್ ಎಸ್., “ಕಾಮನ್ ಪ್ರಪರ್ಟಿ ರಿಸೊರ್ಸಸ್,” ಇನ್ ರಾಮಚಂದ್ರ ಗುಹ (ಎಡಿಟೆಡ್), ಸೋಶಿಯಲ್ ಇಕಲಾಜಿ,ಡೆಲ್ಲಿ: ಆಕ್ಸ್ ಪರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೪.

೧೭. ಆಶಿಸ್ ಕೊಥಾರಿ ಮತ್ತು ಇತರರು, ಕಮ್ಯುನಿಟೀಸ್ ಆಂಡ್ ಕನ್ಸರ್ವೇಶನ್: ನೇಚುರಲ್ ರಿಸೋರ್ಸ್ಮೇನೇಜ್ಮೆಂಟ್ ಇನ್ ಸೌತ್ ಅಂಡ್ ಸೆಂಟ್ರಲ್ ಏಶ್ಯಾ,ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮.

೧೮. ಸುಧಾ ಪೈ “ಸೋಶಿಯಲ್ ಕ್ಯಾಪಿಟಲ್, ಪಂಚಾಯತ್ಸ್ ಆಂಡ್ ಗ್ರಾಸ್ ರೂಟ್ಸ್ ಡೆಮಾಕ್ರಸಿ: ಪೊಲಿಟಿಕ್ಸ್ ಆಫ್ ದಲಿತ ಎಸರ್ಸನ್ ಇನ್ ಉತ್ತರ್‌ಪ್ರದೇಶ್‌,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ. ೩೬, ನಂ.೮, ಫೆಬ್ರವರಿ ೨೦೦೧, ಪು.೬೪೫-೬೫೪.

೧೯. ನಿರಜಾ ಗೋಪಾಲ್ ಜಯಲ್, “ಡೆಮಾಕ್ರಸಿ ಆಂಡ್ ಸೋಶಿಯಲ್ ಕ್ಯಾಪಿಟಲ್ ಇನ್ ಸೆಂಟ್ರಲ್ ಹಿಮಾಲಯ: ಟೇಲ್ ಆಫ್ ಟು ವಿಲೇಜಸ್,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ. ೩೬, ನಂ.೮ ಫೆಬ್ರವರಿ ೨೦೦೧, ಪು.೬೫೫-೬೬೪.

೨೦. ರಾಜನ್ ಗುರುಕಲ್, “ವೆನ್ ಎ ಕೊಯಿಲೇಶನ್ ಆಫ್ ಕಾನ್‌ಫ್ಲಿಕ್‌ಟಿಂಗ್ ಇನ್ ಟರೆಸ್ಟ್ಸ, ಡಿಸೆಂಟ್ರಲೈಸ್ : ಎ ಥಿಯರೆಟಿಕಲ್ ಕ್ರಿಟೀಕ್ ಆಫ್ ಡಿಸೆಂಟ್ರಲೈಸೇಶನ್ ಪೊಲಿಟಿಕ್ಸ್ ಇನ್ ಕೇರಳ,” ಸೋಶಿಯಲ್ ಸೈಯಿನ್ಟಿಸ್ಟ್,ವಾ.೨೯,ನಂ೯-೧೦, ಸೆಪ್ಟಂಬರ್ ಅಕ್ಟೋಬರ್ ೨೦೦೧, ಪು.೬೦-೭೬.

೨೧. ಪಾರ್ಥ ಚಟರ್ಜಿ, “ಕಮ್ಯುನಿಟಿ ಇನ್ ದಿ ಈಸ್ಟ್,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ.೩೩, ನಂ.೬, ಪೆಬ್ರವರಿ ೧೯೯೮, ಪು.೨೭೭-೮೦.

೨೨. ಜಿ.ಎಸ್ ದೀಕ್ಷಿತ್ ಮತ್ತು ಇತರರು, ಕರ್ನಾಟಕದಲ್ಲಿ ಕೆರೆ ನೀರಾವರಿ,ಅನು : ನೀಲತ್ತಹಳ್ಳಿ ಕಸ್ತೂರಿ, ಹಂಪಿ: ಕನ್ನಡ ವಿಶ್ವವಿದ್ಯಾಲಯ, ೨೦೦೦.

೨೩. ಎಂ. ಚಂದ್ರಪೂಜಾರಿ, ದೇಶಿಯತೆಯ ನೆರಳಲ್ಲಿ ವಿಕೇಂದ್ರೀಕರಣ,ಹಂಪಿ: ಕನ್ನಡ ವಿಶ್ವವಿದ್ಯಾಲಯ, ೨೦೦೦.

೨೪. ಗುರುಪ್ರೀತ್ ಮಹಾಜನ್, “ಸಿವಿಲ್ ಸೊಸೈಟಿ ಆಂಡ್ ಇಟ್ಸ್‌ಅವತಾರಸ್,” ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ,ವಾ.೩೪, ನಂ ೨೦, ಮೇ ೧೯೯೯, ಪು.೧೧೮೮-೯೫.

೨೫. ಸುಸಾನೆ ಹೊಬರ್ ರುಡಾಲ್ಪ್, “ಸಿವಿಲ್ ಸೊಸೈಟಿ ಆಂಡ್ ದಿ ರೆಲ್ಮ್ ಆಫ್ ಫ್ರಿಡಂ,” ಎಕಾನಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ,ವಾ.೩೫, ನಂ ೨೦, ಮೇ ೨೦೦೦, ಪು.೧೭೬೨-೬೯.

೨೬. ಜೋನ್ ಹೇರಿಸ್, ಡಿಪೊಲಿಟಿಸೈಜಿಂಗ್ ಡೆವಲಪ್‌ಮೆಂಟ್ : ದಿ ವರ್ಲ್ಡ್ಬೇಂಕ್ ಆಂಡ್ ಸೋಶಿಯಲ್ ಕ್ಯಾಪಿಟಲ್,ನ್ಯೂಡೆಲ್ಲಿ: ಲೆಪ್ಟವರ್ಡ್‌ಬುಕ್ಸ್, ೨೦೦೧.

೨೭. ಅಲೆಕ್ಸಿ ಡಿ ತೊವಿಲ್ಲೆ, ಡೆಮಾಕ್ರಸಿ ಇನ್ ಅಮೇರಿಕ,ನ್ಯಯಾಕ್ : ಹೇಂಕರ್ ಬುಕ್ಸ್, ೧೯೬೯.

೨೮. ಜೇಮ್ಸ ಎಸ್ ಕಾಲೆಮನ್, ಫೌಂಡೇಶನ್ಸ ಆಫ್ ಸೋಶಿಯಲ್ ಥಿಯರಿ, ಕೇಂಬ್ರಿಡ್ಜ್ : ಹಾರ್‌ವರ್ಡ್ ಯುನಿವರ್ಸಿಟಿ ಪ್ರೆಸ್, ೧೯೯೦.