ಜೀವಿಗಳ ಉಗಮದ ತಾಣವನ್ನು ಮನುಷ್ಯ ಕಸದತೊಟ್ಟಿಯನ್ನಾಗಿ ಮಾಡಿಕೊಂಡಿದ್ದಾನೆ.

ಎಲ್.ಇ. ಒಬೆಂಗ್, ಸಮುದ್ರತಜ್ಞ

ಸಮುದ್ರ ತನ್ನೊಳಗೆ ಯವುದನ್ನೂ ಉಳಿಸಿಕೊಳ್ಳದು ಎಂಬುದು ಆಡುಮಾತು.  ಹಾಗಿದ್ದರೆ ದಿನನಿತ್ಯ ನಾವು ತುಂಬುತ್ತಿರುವ ಕೋಟಿ ಕೋಟಿ ಟನ್ ತ್ಯಾಜ್ಯಗಳು ಸಮುದ್ರದಿಂದ ಭೂಮಿಗೆ ಮತ್ತೆ ತಿರುಗಿ ಬರಬೇಕಿತ್ತಲ್ಲವೇ?

ಸಮುದ್ರವನ್ನು ಮಾನವನು ತ್ಯಾಜ್ಯ ಶೇಖರಣಾ ಘಟಕವೆಂದು ಎಂದಿನಿಂದಲೂ ಭಾವಿಸಿದ್ದಾನೆ.  ಒಂದು ಅರ್ಥದಲ್ಲಿ ಸಮುದ್ರ ತ್ಯಾಜ್ಯ ಸಂಸ್ಕರಣಾಘಟಕವೇ ಹೌದು, ಆದರೆ….. ಇಂದಿನ ಅಗಾಧ ಪ್ರಮಾಣದ ತ್ಯಾಜ್ಯವನ್ನು ಸಹಿಸುವ ಶಕ್ತಿಯನ್ನು ಸಮುದ್ರದಿಂದ ನಿರ್ವಹಣೆ ಮಾಡಲು ಅಸಾಧ್ಯ.

ಜ್ವಾಲಾಮುಖಿಗಳು, ಬಿರುಗಾಳಿ, ಹೊಗೆ, ಧೂಳು, ಸತ್ತ ಜೀವಿಗಳು, ನದಿಗಳೊಂದಿಗೆ ಬರುವ ಹೂಳು, ಸಸ್ಯ, ಮರಮುಟ್ಟುಗಳು ಹೀಗೆ ಇವೆಲ್ಲಾ ಕಡಲ ಒಡಲಿನ ಬಂಧಿಗಳು.  ಪುನಃ ಪರಿವರ್ತನೆಯಾಗುವ ಜೈವಿಕಗಳು.  ಆದರೆ ಮಾನವನ ಆವಿಷ್ಕಾರಗಳಾದ ಡಿ.ಡಿ.ಟಿ. ಹಾಗೂ ಇನ್ನಿತರ ನೂರಾರು ವಿಷ ರಾಸಾಯನಿPಗಳು,ಕೀಟನಾಶಕಗಳು, ಮಾರ್ಜಕಗಳು ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಅತ್ಯಂತ ವಿಷಕಾರಿ ರಾಸಾಯನಿಕ ತ್ಯಾಜ್ಯಗಳನ್ನೆಲ್ಲಾ ಸಮುದ್ರಕ್ಕೆ ಸತತ ಸೇರಿಸಲಾಗುತ್ತಿದೆ.  ಇವು ಜೈವಿಕವಾಗಿ ವಿಘಟನೆಯಾಗದು, ರೂಪಾಂತರಗೊಳ್ಳದು, ಯಾವುದರೊಂದಿಗೂ ವಿಲೀನಗೊಳ್ಳದು.  ಪ್ರಕೃತಿಗೆ ಯಾವುದೇ ರೀತಿಯಲ್ಲಿ ಪರಿವರ್ತನೆ ಮಾಡಲು ಸಾಧ್ಯವಾಗದಷ್ಟು ಕಠಿಣ ರಾಸಾಯನಿಕಗಳಿವು.

ನಮ್ಮ ದೇಶದಲ್ಲಿಯೇ ತೆಗೆದುಕೊಂಡರೆ ನಗರ, ಪಟ್ಟಣಗಳಲ್ಲಿ ಯಾವುದೇ ತ್ಯಾಜ್ಯ ವಿಲೇವಾರಿ ಘಟಕಗಳಿಲ್ಲ.  ಅಲ್ಲಿನ ಕೊಚ್ಚೆ, ಕೊಳಚೆಗಳೆಲ್ಲವೂ ಸೇರುವುದು ನದಿಗಳಿಗೆ.  ಬೆಂಗಳೂರಿನ ವೃಷಭಾವತಿ ನದಿ ನೆನಪಿಸಿಕೊಳ್ಳಿರಿ.  ಕಾಶಿಯ ಗಂಗಾನದಿಯನ್ನು ಇಂದಿಗೂ ಶುದ್ಧ ಮಾಡಲು ಸಾಧ್ಯವಾಗಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.  ಈ ನದಿಗಳೆಲ್ಲಾ ಸೇರುವುದು ಸಮುದ್ರವನ್ನೇ ತಾನೆ?

ಜನಸಂಖ್ಯೆ ಬೆಳೆದಂತೆಲ್ಲಾ ಕೊಳಚೆಯೂ ಬೆಳೆಯುತ್ತಲೇ ಹೋಗುತ್ತದೆ.  ಘನತ್ಯಾಜ್ಯಗಳಿರಲಿ, ಜೈವಿಕ ತ್ಯಾಜ್ಯಗಳಿರಲಿ ಕೊನೆಗೂ ನಗರಸಭೆಯವರು ತಂದುಹಾಕುವುದು ನದಿಯ ಬುಡಕ್ಕೇ ಆಗಿದೆ.  ಇವುಗಳ ಅಂತಿಮ ನಿಲ್ದಾಣ ಸಮುದ್ರ.

ಈ ಕೊಚ್ಚೆಯು ರೋಗಕಾರಕಗಳ ತವರು.  ಕಾಲರಾದಿಂದ ಪ್ರಾರಂಭವಾಗಿ ಕಾಲಾಅಜಾರ್‌ವರೆಗಿನ ನಲವತ್ತಕ್ಕೂ ಹೆಚ್ಚು ರೋಗಗಳನ್ನು ತರಬಲ್ಲ ಅಪಾಯಕಾರಿ ಸೂಕ್ಷ್ಮಜೀವಿಗಳ ವಾಸ ತಾಣ.  ಇವು ಸಮುದ್ರದ ನೀರಿನಲ್ಲಿ ಸಾಯುತ್ತವೆ, ನಿಜ.  ಆದರೆ ಅಷ್ಟರೊಳಗೆ ಇವುಗಳನ್ನೇ ತಿಂದು ಜೀವಿಸುವ ಚಿಪ್ಪು ಮೀನುಗಳ ದೇಹವನ್ನೂ ಸೇರಿಕೊಳ್ಳುತ್ತವೆ.  ಅವುಗಳ ದೇಹದೊಳಗೆ ಇವುಗಳ ಬದುಕಿನ ಚಕ್ರ ಮುಂದುವರಿಯುತ್ತದೆ.  ಇವುಗಳನ್ನು ಬೇಯಿಸದೇ ತಿಂದರೆ ರೋಗಾಣುಗಳು ಮಾನವ ದೇಹದೊಳಗೆ ಸುಲಭವಾಗಿ ಪ್ರವೇಶಿಸುತ್ತವೆ.

ಕೊಚ್ಚೆ, ಕಾರ್ಖಾನೆಗಳಲ್ಲಿನ ರಾಸಾಯನಿಕಗಳು, ಮಾರ್ಜಕಗಳೂ ಸಮುದ್ರದ ಕೆಲವು ಪಾಚಿಗಳಿಗೆ ಅಸ್ವಾಭಾವಿಕ ಪೋಷಕಾಂಶಗಳನ್ನು ನೀಡುತ್ತವೆ.  ಇದರಿಂದಾಗಿ ಪಾಚಿಗಳ ಸಂಖ್ಯಾಸ್ಫೋಟವಾಗುತ್ತದೆ.  ಇದು ಕಳೆದ ದಶಕದ ಮಹತ್ವದ ಸಂಶೋಧನೆಯೂ ಆಗಿದೆ.  ಈ ಪಾಚಿಗಳು ಸಮುದ್ರದ ಮೇಲ್ಮೈಯನ್ನೆಲ್ಲಾ ಆಕ್ರಮಿಸಿಕೊಳ್ಳುತ್ತವೆ.  ಸೂರ್ಯನ ಬೆಳಕು ಹಾಗೂ ಉಷ್ಣಾಂಶ ಸಮುದ್ರದಾಳಕ್ಕೆ ಪ್ರವೇಶಿಸದಂತಹ ತಡೆಗೋಡೆಯ ನಿರ್ಮಾಣವಾಗುತ್ತದೆ.  ಪರಿಣಾಮ ಆಳದ ಜೀವಿಗಳಿಗೆ ಆಮ್ಲಜನಕ ಸಿಗದೇ ಒದ್ದಾಟ ಪ್ರಾರಂಭವಾಗುತ್ತದೆ.  ಅವುಗಳ ದ್ಯುತಿ ಸಂಶ್ಲೇಷಣೆಗೆ ಹಾಗೂ ಜೈವಿಕ ಚಟುವಟಿಕೆಗಳಿಗೆ ಅವಕಾಶ ಸಿಗದೇ ಕ್ರಮೇಣ ನಾಶವಾಗುತ್ತಾ ಹೋಗುತ್ತದೆ.  ಅಲ್ಲಿ ನಿರ್ಜೀವ ಪ್ರದೇಶ ಉಂಟಾಗುತ್ತದೆ.

ರಾಸಾಯನಿಕ ಕೊಳಚೆಯಲ್ಲಿ ಭಾರಲೋಹದ ಅಂಶಗಳು ಇದ್ದರೆ ಇನ್ನಷ್ಟು ದುಷ್ಪರಿಣಾಮ ಖಚಿತ.  ಉದಾಹರಣೆ, ಪಾಚಿಗಳು ಈ ಭಾರಲೋಹಗಳನ್ನು ತಮ್ಮಲ್ಲಿ ಸೇರಿಸಿಕೊಳ್ಳುತ್ತವೆ.  ಅವುಗಳನ್ನು ಮೀನುಗಳು ತಿನ್ನುತ್ತವೆ.  ಆಗ ಮೀನುಗಳ ಮಾರಣಹೋಮ ಆಗಬಹುದು ಅಥವಾ ಕೆಲವು ಮೀನುಗಳು ಆ ಭಾರಲೋಹಗಳನ್ನು ತಮ್ಮ ದೇಹದೊಳಗೆ ಹಾಗೇ ಉಳಿಸಿಕೊಂಡು ಬದುಕಲೂಬಹುದು.  ಅಂತಹ ಮೀನುಗಳನ್ನು ತಿನ್ನುವ ಪಕ್ಷಿಗಳು ಸಾಯಬಹುದು.  ಅವುಗಳ ಸಂತತಿ ಕ್ಷೀಣಿಸಬಹುದು.  ಇದೊಂದು ರೀತಿಯಲ್ಲಿ ಆಹಾರ ಸರಪಳಿಯನ್ನು ಅವಲಂಬಿಸಿದೆ.  ಈ ವಿಷ ಸರಪಳಿಯಿಂದ ಸಮುದ್ರವನ್ನು ಅವಲಂಬಿಸಿದ ದೊಡ್ಡ ಜೀವಿಗಳು ಕಣ್ಮರೆಯಾಗುತ್ತಿರುವುದು ಕಾಣಿಸುತ್ತಿದೆ.

ಕೃಷಿ ಚಟುವಟಿಕೆಗಳಿಗೆ ಬಳಸಲಾಗುವ ಪೀಡೆನಾಶಕ, ಕೀಟನಾಶಕಗಳೂ ಅತ್ಯಂತ ಅಪಾಯಕಾರಿಗಳು.  ಭೂಮಿಯ ಮೇಲೆ ಮಾಡುವ ಅನಾಹುತಗಳ ಸರಣಿ ಅಪಾರ.  ಇವು ವಿಘಟನೆಯಾಗದ ಕಾರಣ ಮಳೆಯ ನೀರಿನ ಮೂಲಕ ನದಿ ಸೇರಿ ಕೊನೆಗೆ ಸಮುದ್ರಕ್ಕೆ ತಲುಪುತ್ತದೆ.  ಸಾಗರದ ವಿವಿಧ ಆಹಾರ ಸರಪಣಿಗಳ ಮೂಲಕ ತಮ್ಮ ಸಾರತೆಯನ್ನು ಹೆಚ್ಚಿಸಿಕೊಳ್ಳುತ್ತವೆ.  ಗಂಡಾಂತರಕಾರಿ ಈ ರಾಸಾಯನಿಕಗಳು ಮೀನು, ಮೃದ್ವಂಗಿ, ಸೀಗಡಿ ಮುಂತಾದ ಆಹಾರಜೀವಿಗಳಲ್ಲಿ ಸೇರುತ್ತವೆ.  ಅವುಗಳ ದೇಹದೊಳಗೂ ವಿಘಟನೆಯಾಗದೇ ಇನ್ನಷ್ಟು ಪ್ರಬಲವಾಗುತ್ತದೆ.  ಕೊನೆಗೆ ಮಾನವನ ದೇಹದೊಳಗೆ ಸೇರುತ್ತದೆ.

ಜಪಾನಿನ ಮೀನಮಾಟ ಕೊಲ್ಲಿಯಲ್ಲಿ ಇಸವಿ ೧೯೫೦ರಲ್ಲಿ ನಡೆದ ದುರಂತ ಇದಕ್ಕೊಂದು ಉದಾಹರಣೆ.   ಕಾರ್ಖಾನೆಗಳಿಂದ ಹೊರಬರುತ್ತಿದ್ದ ಪಾದರಸ ಅಂಶವಿರುವ ಕೊಳಚೆಯೆಲ್ಲಾ ಸಮುದ್ರಕ್ಕೆ ಸೇರುತ್ತಿತ್ತು.  ಪಾದರಸ ಸೇವಿಸಿದ ಮೀನುಗಳನ್ನು ತಿಂದ ೪೦೦ ಜನ, ಸಾವಿರಾರು ಜೀವಿಗಳು ಸತ್ತಾಗ ಸರ್ಕಾರಕ್ಕೆ ಎಚ್ಚರವಾಯಿತು.  ಇಸವಿ ೧೯೯೦ರಲ್ಲಿ ೩,೦೦೦ ಜನರು ಮೆದುಳುಸಂಬಂಧಿ ಕಾಯಿಲೆಯಿಂದ ನರಳುತ್ತಿರುವುದು ದಾಖಲಾಗಿದೆ.  ಈಗಲೂ ಅಂದಿನ ಮಾಲಿನ್ಯದ, ವಿಷದ ಪರಿಣಾಮ ದಾಖಲಾಗುತ್ತಲೇ ಇದೆ.

ಯಾವುದೇ ಕಾರ್ಖಾನೆಗಳಿಂದ ಹೊರಹೊಮ್ಮುವ ತ್ಯಾಜ್ಯವು ಯಾವುದೇ ರೂಪದಲ್ಲಿರಲಿ, ಕೊನೆಗೆ ಸೇರುವುದು ಸಮುದ್ರವನ್ನು.  ವಿಶಾಖಪಟ್ಟಣದ ಸುತ್ತಲಿನ ಪ್ರದೇಶದಲ್ಲಿರುವ ಗೊಬ್ಬರ ತಯಾರಿಸುವ ನೂರಾರು ಕಾರ್ಖಾನೆಗಳ ತ್ಯಾಜ್ಯದ್ರವ ಸಮುದ್ರಕ್ಕೆ ಸೇರುತ್ತಿದೆ.  ಹೊಗೆಯು ಗಾಳಿಯಲ್ಲಿ ಮೇಲೇರಿದರೂ, ನಭೋಮಂಡಲದೊಳಗೆ ಹೋಗದೆ ಮತ್ತೆ ಮಳೆ, ಇಬ್ಬನಿ, ಹಿಮದ ಮೂಲಕ ಭೂಮಿಗೆ ಬಂದು ಸಮುದ್ರಕ್ಕೆ ಸೇರುತ್ತದೆ.  ಅದರಲ್ಲಿರುವ ಪಾದರಸ, ಕ್ಯಾಡ್ಮಿಯಂ, ಸೀಸ, ಯುರೇನಿಯಂ [ಕೈಗಾ ನೆನಪಿಸಿಕೊಳ್ಳಿರಿ.  ಏಕೆ ಸಮುದ್ರದ ಬಳಿಯೇ ನಿರ್ಮಿಸಿದ್ದಾರೆಂಬುದು ಇದರಿಂದ ತಿಳಿಯಬಹುದು] ಮುಂತಾದ ಭಾರಲೋಹಗಳನ್ನು ಭೂಮಿಯೊಳಗೆ ಅಡಗಿಸಿಡಲಾಗದು.  [ಲವ್‌ಕೆನಾಲ್ ದುರಂತದಂತೆ ನಿರಂತರ ರಾಸಾಯನಿಕ ದುಷ್ಪರಿಣಾಮವಾಗುತ್ತದೆ] ಅದರ ಬದಲು ಭೂಮಿಯ ಮೂರು ಪಟ್ಟಿರುವ ಸಮುದ್ರಕ್ಕೆ ಸೇರಿಸಿದರಾಯಿತು.  ಅಣುಸ್ಥಾವರಗಳ ವಿಕಿರಣಶೇಷ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳ ಭಾರಜಲಗಳಂತೂ ಸಮುದ್ರದ ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಕುಲನಾಶಕಗಳಾಗಿವೆ.  ಉಷ್ಣವಲಯದ ಬೆಚ್ಚಗಿನ ಸಮುದ್ರದ ನೀರಿನ ಉಷ್ಣಾಂಶ ಏರಿಕೆಯಿಂದ ಮತ್ತಷ್ಟು ಅವನತಿಯಾಗುತ್ತಿದೆ.  ನೇತ್ರಾಣಿ ಸಮೀಪದ ಹವಳದ ಕಾಡಿನ ಅವನತಿ ಕ್ರಮೇಣ ನಿರ್ಜೀವ ಪ್ರದೇಶಕ್ಕೆ ಕಾರಣವಾಗಬಹುದು.  ಇತ್ತೀಚೆಗೆ ಪಾಕಿಸ್ತಾನದ ಸಮುದ್ರದಲ್ಲಿ ಯುರೇನಿಯಂ ತರುತ್ತಿದ್ದ ಹಡಗು ಸಿಡಿದು ಅದರಲ್ಲಿದ್ದ ಸಂಪೂರ್ಣ ಯುರೇನಿಯಂ ಸಮುದ್ರ ಪಾಲಾಗಿದ್ದು ಭೀಕರ ದುರಂತ.

ಸಮುದ್ರದಲ್ಲಿ ತೈಲ ಸೋರಿಕೆಯಾದಾಗಲೆಲ್ಲಾ ದೊಡ್ಡ ಸುದ್ದಿಯಾಗುತ್ತದೆ.  ಸಾವಿರಾರು ಮೀನುಗಳ ಮಾರಣಹೋಮದ ಚಿತ್ರ ಮುಖ್ಯಪುಟದಲ್ಲಿ ರಾರಾಜಿಸುತ್ತದೆ.  ಆದರೆ ತೈಲಬಾವಿಗಳು, ಹಡಗುಗಳಿಂದಾಗುವ ಸೋರಿಕೆ ಮತ್ತು ತೈಲ ಟ್ಯಾಂಕರ್‌ಗಳ ಶುದ್ಧೀಕರಣಗಳಿಂದಾಗಿ ಪ್ರತಿವರ್ಷ ೧.೧ಮಿಲಿಯನ್ ಟನ್ ತೈಲವು ಸಮುದ್ರ ಸೇರುತ್ತಿರುವುದು ಅಂಕಿಅಂಶಗಳ ಮೂಲಕ ದಾಖಲಾಗಿದೆ.  ಕೊಲ್ಲಿ ದೇಶಗಳಿಂದ ಬರುವ ತೈಲದಿಂದಾಗಿ ಅರೇಬಿಯನ್ ಸಮುದ್ರದೊಂದಿಗೆ ಅಪಾರ ಜೀವಿವೈವಿಧ್ಯ ತಾಣ ಅತ್ಯಂತ ಆಳದ-ಬೃಹತ್ತಾದ ಹಿಂದೂ ಮಹಾಸಾಗರವು ಅಪಾಯಕ್ಕೆ ಸಿಕ್ಕಿದೆ.  ಅದೃಷ್ಟವಶಾತ್ ಶ್ರೀಲಂಕಾ-ಮಲಕ್ಕಾ ಜಲಸಂಧಿ-ಬಂಗಾಳಕೊಲ್ಲಿ ಹಾಗೂ ಜಪಾನ್‌ವರೆಗಿನ ಈ ಮಾರ್ಗದಲ್ಲಿ ತೈಲಟ್ಯಾಂಕ್ ಅಪಘಾತ ಕಡಿಮೆ.  ಇದರ ಉತ್ತರಭಾಗದಲ್ಲಿ ತೈಲಸೋರಿಕೆಯಿಂದಾಗಿ ನಿರ್ಮಾಣವಾದ ಟಾರ್ ಪದರ ಹೆಚ್ಚು ಕಾಣಿಸುತ್ತದೆ.  ಇದೇ ರೀತಿ ಅರೇಬಿಯನ್ ಮಾರ್ಗದಲ್ಲಿ ೩,೭೦೦ ಟನ್ ಟಾರ್, ಬಂಗಾಳಕೊಲ್ಲಿಯಲ್ಲಿ ೧,೧೦೦ ಟನ್ ಟಾರ್ ಇರುವುದನ್ನು ಗುರುತಿಸಲಾಗಿದೆ.

ಕರಾವಳಿಗಳ ತೀರದಲ್ಲೇ ತೈಲ ಸಂಸ್ಕರಣಾ ಘಟಕಗಳು ಇರುತ್ತವೆ.  ಇವುಗಳಿಂದ ಸೋರಿಕೆ, ಆಕಸ್ಮಿಕ ತೈಲ ನಷ್ಟ, ಶುದ್ಧೀಕರಣಗಳಿಂದಾಗುವ ಮಾಲಿನ್ಯ ಅತ್ಯಧಿಕ.  ವಾರ್ಷಿಕ ಸಾವಿರಾರು ಟನ್‌ಗಳಷ್ಟು ತೈಲವು ಸಮುದ್ರ ಸೇರುತ್ತಿರುತ್ತದೆ.ಒಟ್ಟಾರೆ ಪ್ರತಿವರ್ಷ ನಾಲ್ಕು ಮಿಲಿಯನ್ ಟನ್ ತೈಲವು ಸಮುದ್ರ ಸೇರುತ್ತಿದೆ ಎಂಬುದನ್ನು ಅಧ್ಯಯನ ತಿಳಿಸುತ್ತದೆ.

ಗಲ್ಫ್ ಯುದ್ಧದ ಸಮಯದಲ್ಲಿ ಆರು ಮಿಲಿಯನ್ ಬ್ಯಾರಲ್‌ಗಳಲ್ಲಿರುವ ಕಚ್ಚಾತೈಲವನ್ನು ಸಮುದ್ರಕ್ಕೆ ಸುರಿದರು.  ಮೂವತ್ತು ಸಾವಿರ ಕಡಲಹಕ್ಕಿಗಳು ಸತ್ತವು.  ಮ್ಯಾಂಗ್ರೂ ಕಾಡು ಸರ್ವನಾಶವಾಯಿತು. ಉಪ್ಪು ತಯಾರಿಕೆ ನಿಂತಿತು.  ಇಂದಿಗೂ ಅಲ್ಲಿನ ಪರಿಸರ ಸರಿಯಾಗಿಲ್ಲ.

ಆದರೆ ತೈಲಗಳು ನಿಸರ್ಗದ ಕೊಡುಗೆಯೇ ತಾನೆ.  ಹೀಗಾಗಿ ನಿಸರ್ಗವು ಇದನ್ನು ನಿಧಾನವಾಗಿ ಜೀರ್ಣಿಸಿಕೊಳ್ಳಬಹುದಿತ್ತೇನೋ.  ಆದರೆ ಸೋರಿಕೆ ಹೆಚ್ಚಾಗುತ್ತಲೇ ಇರುವ ಕಾರಣ ಹಾನಿಯ ಪ್ರಮಾಣ ಹೆಚ್ಚುತ್ತಲೇ ಇದೆ.

ಆದರೆ ಪ್ಲಾಸ್ಟಿಕ್ ಮಾತ್ರ ಯಾವ ರೀತಿಯಲ್ಲೂ ವಿಘಟಿಸದೇ ತೇಲುವ ಖಾಯಂ ತ್ಯಾಜ್ಯ.  ಜಲಚರಗಳು ಎಷ್ಟೋ ಸಾರಿ ಪ್ಲಾಸ್ಟಿಕ್ಕನ್ನು ತಿನ್ನುವ ಪದಾರ್ಥವೆಂದು ತಿಳಿದು ತಿನ್ನುತ್ತವೆ.  ಆಮೇಲೆ ಉಸಿರುಕಟ್ಟಿ ಸಾಯತ್ತವೆ.  ಇಸವಿ ೨೦೦೪ರಲ್ಲಿ ಬಂಗಾಳದ ಕರಾವಳಿಯಲ್ಲಿ ಸತ್ತುಬಿದ್ದ ತಿಮಿಂಗಿಲವೊಂದರ ಸಾವಿಗೆ ಕಾರಣ ಪ್ಲಾಸ್ಟಿಕ್ ಎಂಬುದು ತಿಳಿದುಬಂದಿದೆ.  ಸುಮಾರು ಐದು ಕಿಲೋಗ್ರಾಂ ಪ್ಲಾಸ್ಟಿಕ್ ಕೈಚೀಲ ಅದರ ಗಂಟಲಿನಲ್ಲಿದ್ದುದು ಶಸ್ತ್ರಚಿಕಿತ್ಸೆ ಮಾಡಿದಾಗ ಗೊತ್ತಾಯಿತು.  ಈ ರೀತಿ ಇನ್ನೆಷ್ಟೋ ಜೀವಿಗಳು ಸಾವನ್ನಪ್ಪುತ್ತಿರುವುದು ವರದಿಯಾಗುತ್ತಲೇ ಇದೆ.

ಟೋರ್‌ಹೇರ್‌ಡಾಲ್ ಇತಿಹಾಸ ತಜ್ಞ ಹಾಗೂ ಸಾಗರಾನ್ವೇಷಕ.  ತನ್ನ ಪ್ರಯಾಣದ ಅವಧಿಯಲ್ಲಿ ಕಂಡುಬಂದ ವಿಷಯಗಳನ್ನು ಆತ ದಾಖಲಿಸಿದ್ದಾನೆ.  ಅದರಂತೆ ೧೯೪೭ರಲ್ಲಿ ೧೦೧ ದಿನಗಳ ಪ್ರವಾಸ.  ೮,೦೦೦ಕಿಲೋಮೀಟರ್ ಸುತ್ತಾಟ.  ಆಗ ಕೇವಲ ಒಂದು ದೋಣಿಯ ಅವಶೇಷ ಮಾತ್ರ ಸಿಕ್ಕಿತ್ತು ಎಂದು ಬರೆದಿದ್ದಾನೆ.  ೧೯೬೯ರಲ್ಲಿ ಇಡೀ ಅಟ್ಲಾಂಟಿಕ್ ಸಾಗರದ ತುಂಬಾ ಪ್ಲಾಸ್ಟಿಕ್ ಪದರ.  ಪ್ಲಾಸ್ಟಿಕ್ ಬಾಟಲಿಗಳು, ನೈಲಾನ್ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳ ಜೊತೆಗೆ ತೈಲಪದರವೂ ತುಂಬಿತ್ತು.  ಗೆರೆಣೆಗಟ್ಟಿದ ತೈಲದ ಹನಿಗಳು ಅಪಾರವಾಗಿದ್ದವು ಎಂದು ದಾಖಲಿಸಿದ್ದಾನೆ.  ೧೯೭೦ರಲ್ಲಿ ಮತ್ತೊಂದು ಯಾತ್ರೆ ಮಾಡಿದಾಗ ಪ್ಲಾಸ್ಟಿಕ್ ತ್ಯಾಜ್ಯ ದುಪ್ಪಟ್ಟಾಗಿತ್ತು.  ತೈಲದ ಹನಿಗಳ ಗಾತ್ರ ಆಲೂಗಡ್ಡೆಯಿಂದ ಬೃಹತ್ ಬಂಡೆಗಳಷ್ಟಿತ್ತು.  ಬಲೆಗೆ ಸಿಗುವಂತೆ ಟಾರ್ ಗೆರೆಣೆಗಳು ತೇಲುತ್ತಿರುವುದನ್ನು ಆತ ದಾಖಲಿಸಿದ್ದಾನೆ.

ನದಿಗಳಿಂದ ಹರಿದುಬರುವ ಹೂಳು ಮತ್ತೊಂದು ರೀತಿಯಲ್ಲಿ ಅಪಾಯಕಾರಿ.  ಇವು ಸೀದಾ ಸಮುದ್ರವನ್ನು ಸೇರದು.  ನದೀಮುಖಜ ಭೂಮಿಗಳಲ್ಲಿ, ಕರಾವಳಿಗಳಲ್ಲಿ ಸಂಗ್ರಹವಾಗುತ್ತವೆ.  ಸೂಕ್ಷ್ಮಜೀವಿಗಳು, ಮೀನುಗಳ ಸಂಕುಲಕ್ಕೆ ಇದರಿಂದ ಬಹಳ ಹಾನಿ.  ನೀರಿನ ಉತ್ಪಾದಕತೆ ಗಣನೀಯವಾಗಿ ಕಡಿಮೆಯಾಗಿ ಸಮುದ್ರ ಜೀವಿವೈವಿಧ್ಯ ನಷ್ಟವಾಗುತ್ತದೆ.  ಹೂಳು ಹೆಚ್ಚಾಗಿ ಹರಿದುಬರಲು ಅರಣ್ಯನಾಶ, ನಗರೀಕರಣ, ಕೈಗಾರೀಕರಣದಂತಹ ಚಟುವಟಿಕೆಗಳು ಕಾರಣವಾಗಿವೆ.

ಬಂದರುಗಳ ನಿರ್ಮಾಣ, ಬಂದರುಗಳ, ಕಾಲುವೆಗಳ ಆಳ ಹೆಚ್ಚಾಗಿಸುವಿಕೆ ಇವೆಲ್ಲಾ ಸಮುದ್ರದೊಳಗೆ ಹೂಳು ಹೆಚ್ಚಲು ಕಾರಣವಾಗಿದೆ.  ಇದರಿಂದ ನೀರು ಆವಿಯಾಗುವಿಕೆ ಹೆಚ್ಚುತ್ತದೆ.  ನೀರಿನ ಉಷ್ಣಾಂಶದಲ್ಲಿ ಏರುಪೇರಾಗುತ್ತದೆ.  ಆಳದೊಳಕ್ಕೆ ಸೇರಿದ್ದ ವಿಷ ರಾಸಾಯನಿಕಗಳೂ ಮತ್ತೆ ಮೇಲೆದ್ದು ಬರಬಹುದು.  ಇವೆಲ್ಲಾ ಮೊದಲು ಜಲಚರಗಳ ಸಾವಿಗೆ, ಆಮೇಲೆ ಮನುಷ್ಯರ ರೋಗಗಳಿಗೆ ಕಾರಣವಾಗುತ್ತದೆ.

ಸಮುದ್ರಗಳು ಕಸದ ತೊಟ್ಟಿಯೇನಲ್ಲ.  ನಿರಂತರವಾಗಿ ಹರಿವ, ಅಲ್ಲಿಂದಿಲ್ಲಿಗೆ ಚಲಿಸುವ ನೀರಿನ ಒಡಲು.  ತನ್ನೊಳಗೆ ಸೇರುವ ವಸ್ತುಗಳನ್ನು ಅಲ್ಲಿಂದಿಲ್ಲಿಗೆ-ಇಲ್ಲಿಂದಲ್ಲಿಗೆ ಸಾಗಿಸುತ್ತಲೇ ಇರುವ ವಾಹಕ.  ಸಮುದ್ರದ ಸುತ್ತಲೂ ಭೂಭಾಗವೇ ಇದೆ.  ಇನ್ನು ಕೊಂಡೊಯ್ಯುವುದಾದರೂ ಎಲ್ಲಿಗೆ?  ಒಂದೋ ದಡಕ್ಕೆ ಎಸೆಯಬೇಕು, ಒಡಲಾಳದಲ್ಲಿ ಹಾಗೇ ಹುಗಿದಿಟ್ಟುಕೊಳ್ಳಬೇಕು.  ಸಮುದ್ರಕ್ಕೆ ಒಳಬರುವ ದಾರಿಗಳು ಕೋಟಿ ಕೋಟಿ.  ಆದರೆ ಸಮುದ್ರದಿಂದ ಹೊರಹೋಗಲು ಒಂದೇ ಒಂದು ದಾರಿಯೂ ಇಲ್ಲ.  ನಾವು ಸಮುದ್ರ ತೀರದಲ್ಲಿ ಸುತ್ತಾಡುವಾಗ ಸಿಗುವ ತ್ಯಾಜ್ಯಗಳನ್ನು ನೋಡಿದರೂ ಅರ್ಥವಾದೀತು.  ಇನ್ನು ನಾವು ನೋಡದ ಕಸಗಳು, ಹಾನಿಕಾರಕ ರಾಸಾಯನಿಕಗಳ ಪ್ರಮಾಣವೆಷ್ಟಿರಬಹುದು.  ಇತ್ತೀಚಿನ ಅಧ್ಯಯನ ಹೀಗೆ ಹೇಳಿದೆ.

೧೯೫೦ರ ಮಹಾನ್ ಸಂಶೋಧನೆ ಡಿಡಿಟಿಯ ಬಳಕೆಯನ್ನು ಮುಂದುವರೆದ ದೇಶಗಳು ನಿಷೇಧಿಸಿದವು.  ಅಲ್ಲಿರುವ ಕಾರ್ಖಾನೆಗಳು ಅಲ್ಲಿಂದ ತಂದಿದ್ದನ್ನೆಲ್ಲಾ ಮುಂದುವರೆಯುತ್ತಿರುವ ದೇಶಗಳಲ್ಲಿ ಮಾರಾಟ ಮಾಡತೊಡಗಿದವು.  ತಾಯಿಯ ಎದೆಹಾಲಿನಲ್ಲಿ ಡಿಡಿಟಿಯ ಅಂಶ ಕಾಣಿಸಿದ್ದನ್ನು ದಾಖಲಿಸಲಾಯಿತು.  ಇದರಿಂದ ನಮಗೇನು ತೊಂದರೆ ಎಂದು ಮುಂದುವರೆದ ದೇಶಗಳು ಯೋಚಿಸಿದವು.  ಇದೀಗ ಅಂಟಾರ್ಟಿಕಾದ ಪೆಂಗ್ವಿನ್‌ಗಳಲ್ಲಿ, ಆರ್ಕ್‌ಟೆಕ್‌ನ ಸೀಲ್‌ಗಳಲ್ಲಿ, ಗ್ರೀನ್‌ಲ್ಯಾಂಡ್‌ನ ತಿಮಿಂಗಿಲಗಳ ದೇಹದಲ್ಲಿಯೂ ಡಿಡಿಟಿಯ ಅಂಶ ಗಣನೀಯ ಪ್ರಮಾಣದಲ್ಲಿ ಕಾಣಿಸುತ್ತಿದೆ.

ಕಡಲು ತನ್ನ ಒಡಲೊಳಗೆ ಏನನ್ನೂ ಇಟ್ಟುಕೊಳ್ಳುವುದಿಲ್ಲ.