ನನ್ನ ಮಾತುಗಳಿಗೆ ಎರಡು ಸಂಗತಿಗಳು ಆಧಾರವಾಗಿವೆ. ಜಾನಪದವು ಸ್ವಾತಂತ್ರ‍್ಯಪೂರ್ವ ಸ್ಥಿತಿಯಲ್ಲಿದ್ದಂತೆ ಸಮೃದ್ಧವಾಗಿ ಬೆಳೆಯುತ್ತಿಲ್ಲ ಎನ್ನುವುದೊಂದು. ಜಾನಪದ ತಜ್ಞರು ಈ ಬಗ್ಗೆ ಆಲೋಚನೆ ಮಾಡಿ ಸಹಾಯ ಮಾಡುವುದು ಸಾಧ್ಯವಿದೆಯೆಂಬ ನಂಬಿಕೆ ಇನ್ನೊಂದು. ಜಾನಪದಕ್ಕೆ ಸಾವಿಲ್ಲ ಅದು ಭಿನ್ನರೂಪದಲ್ಲಿ ಮುಂದುವರಿಯುತ್ತದೆ ಎಂಬ ತಜ್ಞರ ಮಾತು ಗೊತ್ತಿದ್ದೂ ಹೀಗೆ ಹೇಳುತ್ತಿದ್ದೇನೆ. ಹಾಗೆಯೇ ಜಾನಪದ ಪಳೆಯುಳಿಕೆ ಎಂಬ ಮಾತೂ ಇದೆ. ಪಳೆಯುಳಿಕೆ ಎಂದರೆ ಅಪ್ರಸ್ತುತ ಪಳಡೆಯುಳಿಕೆ ಎಂದಲ್ಲ. ಪಳೆಯುಳಿಕೆಯ ಪುನಃ ಸೃಷ್ಟಿ ಅಂದರೆ ’ಪಳೆಯುಳಿಕೆಯನ್ನು ಪುನಃ ಸೃಷ್ಟಿಸುತ್ತ ಪ್ರಸ್ತುತಗೊಳಿಸಿಕೊಳ್ಳುವ ಪ್ರಕ್ರಿಯೆಯೇ ಜಾನಪದ’ ಎಂಬ ತಿದ್ದುಪಡಿಯೊಂದಿಗೆ ತಿಳಿದು ಕೊಳ್ಳಬೇಕು. ಜಾನಪದದ ಬೆಳವಣಿಗೆಗೆ ಪಂಡಿತರು ಸಹಾಯ ಮಾಡುವುದು ಸಾಧ್ಯವಿದೆಯೇ ಎಂಬ ಅನುಮಾನವೂ ಇದೆ. ಪರಿಸ್ಥಿತಿಯನ್ನು ಸರಿಯಾಗಿ ಗ್ರಹಿಸಿ ಅಧ್ಯಯನದ ಜೊತೆಗೆ ಜಾನಪದದ ಭಾಗವಾಗುತ್ತ ಕಲಾವಿದರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಸಾಧ್ಯವಿದೆಯೆಂದೂ ನಾನು ನಂಬಿದ್ದೇನೆ.

ನನಗೆ ಇದೂ ಗೊತ್ತು: ಜನಪದ ಕಲೆಗಳಿಗೆ ಸಿಕ್ಕುತ್ತಿರುವ ಪ್ರೋತ್ಸಾಹ ಈಗ ಹಿಂದೆಂದಿಗಿಂತ ಹೆಚ್ಚು. ಜಾನಪದ ಮತ್ತದರ ಕಲಾವಿದರ ಉಸ್ತುವಾರಿ ನೋಡಿಕೊಳ್ಳಲೆಂದೇ ಸ್ವತಂತ್ರ ಅಕಾಡೆಮಿಯಿದೆ. ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಈಗ ಅಧ್ಯಯನ ವಿಷಯವಾಗಿದೆ. ಎಷ್ಟೊಂದು ಪುಸ್ತಕಗಳು, ಸಂಗ್ರಹಗಳು, ಸಂಶೋಧನ ಪ್ರಬಂಧಗಳುಬರುತ್ತಿವೆ. ಜಾನಪದ ಮೇಳಗಳು,ವಿಚಾರ ಸಂಕಿರಣಗಳು, ಶಿಬಿರಗಳುನಡೆಯುತ್ತಿವೆ. ರಾಜ್ಯಮಟ್ಟದಲ್ಲಿ ಪರಿಷತ್ತು, ಸಂಸ್ಕೃತಿ ಇಲಾಖೆಗಳಿದ್ದರೆ ರಾಷ್ಟ್ರಮಟ್ಟದಲ್ಲಿ ಅಪನಾ ಉತ್ಸವಗಳುನಡೆದು ವಿದೇಶಗಳಿಗೂ ನಮ್ಮಕಲಾವಿದರು ಹೋಗಿ ಬಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಗೌರವಗಳು. ಬಹುಮಾನಗಳು. ಪ್ರಶಸ್ತಿಗಳು. ಮಾಸಾಶನ. ಗೌರವಧನಗಳು ಜನಪದ ಕಲಾವಿದರಿಗೂ ಲಭ್ಯವಾಗುತ್ತಿವೆ. ಶಿಷ್ಟ ಕಲಾವಿದರೊಂದಿಗೆ ಇವರನ್ನು ಸಮಾನವಾಗಿ ಕಾಣುವ ಸದ್ಬುದ್ಧಿ ಸರಕಾರಗಳಿಗೆ ಬಂದದ್ದರ ಬಗ್ಗೆ ಸಂತೋಷ ಪಡೋಣ. ನಮ್ಮ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಶ್ರೀಸಾಮಾನ್ಯ ಪಡೆದ ವಿಜಯ ಒಂದು ಕಡೆಯಾದರೆ, ಜನಪದ ಕಲೆಗಾರ ಸಂಸ್ಕೃತಿಯ ಇತಿಹಾಸದಲ್ಲಿ ಪಡೆದ ವಿಜಯ ಇನ್ನೊಂದೆಡೆಯ ಮಹತ್ವದ ಸಂಗತಿ. ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲ ಉತ್ಸವಗಳಲ್ಲಿ ಜನಪದ ಕಲಾವಿದ ಇಂದು ಗೌರವದ ಸ್ಥಾನ ಗಳಿಸಿದ್ದಾನೆ.

ಇಷ್ಟಾದರೂ ನಮ್ಮ ದೇಶದ ಜಾನಪಥ ಈಗೊಂದು ನಿಲುಗಡೆಗೆ ಬಂದಿದೆ ಎಂದು ಹೇಳದೆ ವಿಧಿಯಿಲ್ಲ. ಜಾನಪದ ಸಂಗ್ರಾಹಕರ, ತಜ್ಞರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಲಾವಣಿಕಾರರ. ಹಾಡುಗಾರರ ಸಂಖ್ಯೆ ಆ ಪ್ರಮಾಣದಲ್ಲಿ ಹೆಚ್ಚಿಲ್ಲ. ಮೊದಲಿದ್ದ ಕಲಾವಿದರ ತಲೆಮಾರು ಮುಗಿಯುತ್ತ ಬಂದಿದ್ದು ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಿಲ್ಲ. ಜಾನಪದದ ಖಣಜ ಖಾಲಿಯಾಗುತ್ತಿರುವಂತೆ ತೋರುತ್ತದೆ. ಹಾಲಿ ಕಂಡುಬರುತ್ತಿರುವ ಹೊಸಬರ ಜಾನಪದಕ್ಕೆ ಸಾಂಸ್ಕೃತಿಕ ಬೇರುಗಳಿದ್ದಂತಿಲ್ಲ. ಅದೆಲ್ಲ Folklore ಎಂದು ನಾವು ತಮಾಷೆಗೆ ಕರೆಯುವಂಥಾದ್ದು. ಅಥವಾ ನಾವು ನಿರೀಕ್ಷಿಸಿದ್ದಂಥ ಜಾನಪದ ಬರುತ್ತಿಲ್ಲವಾದ್ದರಿಂದ ನಿರಾಶೆಯಾಗಿ ಈ ಮಾತು ಹೇಳುತ್ತಿದ್ದೇವೆಯೋ ಅಂಥ ಅಭಿಪ್ರಾಯದವರು ಭಿನ್ನರೂಪದ ಜಾನಪದದ ಸತ್ವವನ್ನು ಖಾತ್ರಿಯಾಗಿಸುವ ಕೆಲಸವನ್ನಾದರೂ ಮಾಡಬೇಕು. ಅಂತೂ ಜಾನಪದದ ಸತ್ವವನ್ನು ಖಾತ್ರಿಯಾಗಿಸುವ ಕೆಲಸವನ್ನಾದರೂ ಮಾಡಬೇಕು. ಅಂತೂ ಜಾನಪದದ ಸೃಜನಶೀಲತೆಯ ಮೂಲ ಸೆಲೆ ಬತ್ತಿಹೋಗಿದ್ದರೂ ಅದರ ಅಭ್ಯಾಸ ಮಾತ್ರ ಬೇಕಾದಷ್ಟು ಹುರುಪಿನಿಂದ ಸಾಗಿದೆ.

ಅಥವಾ ಬೇರೆಲ್ಲ ಊರುಗಳಿಗಿಂತ ಹೆಚ್ಚು ಚೆನ್ನಾಗಿ ನಾನು ಬಲ್ಲ ನನ್ನ ಊರಿನ ಉದಾಹರಣೆಯಿಂದಲೇ ನನ್ನ ವಾದ ಮಂಡಿಸುತ್ತೇನೆ. ನನ್ನ ಊರು ಬೆಳಗಾಂವಿ ಜಿಲ್ಲೆಯ ಘೋಡಗೇರಿ ಎಂಬ ಗ್ರಾಮ. ನಾನು ಚಿಕ್ಕವನಾಗಿದ್ದಾಗ ಅಲ್ಲಿ ಒಂದು ವರ್ಷದ ಅವಧಿಯಲ್ಲಿ ಬೇಕಾದಷ್ಟು ಬಯಲಾಟಗಳಾಗುತ್ತಿದ್ದವು. ರಾಧಾನಾಟ. ಪಾರಿಜಾತಗಳು ವರ್ಷದಲ್ಲಿ ನಾಲ್ಕೈದು ಬಾರಿಯಾದರೂ ಆಗುತ್ತಿದ್ದವು. ಅಪರೂಪಕ್ಕೆ ದೊಡ್ಡಾಟವೂ ಇತ್ತು. ಹತ್ತೆಂಟು ಜನ ಹುಟ್ಟು ಕಲಾವಿದರಿದ್ದರು. ಕಲಾವಿದರ ಖ್ಯಾತಿ ಒಂದಾದರೆ ನಮ್ಮೂರಿನ ರಸಿಕರದ್ದೇ ಒಂದು ಖ್ಯಾಲಿ. ನಮ್ಮೂರಿನ ರಸಿಕರಿಂದ ಭೇಶ್‌ ಅನ್ನಿಸಿಕೊಳ್ಳದಿದ್ದರೆ ಅಷ್ಟರಮಟ್ಟಿಗೆ ಅದು ತಮ್ಮ ಖ್ಯಾತಿಯ ಕುಂದು ಎಂದು ಆ ಭಾಗದ ಕಲಾವಿದರು ನಂಬಿದ್ದರು. ಕೌಟುಂಬಿಕವಾದ ಮದುವೆ, ಮುಂಜಿವೆ, ಕುಲದೈವಗಳ ಆರಾಧನೆ ಇತ್ಯಾದಿ ಬಿಟ್ಟರೂ ಊರವರೆಲ್ಲ ಸೇರಿ ಆಚರಿಸುವ ಆಚರಣೆಗಳೇ ಏಳೆಂಟಿದ್ದವು. ಮತ್ತು ಅಗೆಲ್ಲ ಕಲಾವಿದರ ಭಾಗ್ವಹಿಸುವಿಕೆ ಅನಿವಾರ್ಯವಾಗಿರುತ್ತಿತ್ತು. ಅಂದಿನ ಬೆಳಗಾವಿ ನಮಗೆ ಹೆಳವಂತಾಗಿತ್ತು. ಆದರೆ ಈ ದಿನ ಆ ಬಯಲಾಟಗಳಾಗಲಿ ಆಚರಣೆಗಳಾಗಲಿ ಇಲ್ಲ. ಕಲಾವಿದರೂ ಇಲ್ಲ.

ಕೆಲವು ಪ್ರದರ್ಶಕ ಕಲೆಗಳೇನೂ ಮುಂದುವರಿಯುತ್ತಿವೆ ಹಳೆಯ ಕಲಾವಿದರಿಂದ. ಆದರೆ ಪರಂಪರೆಯನ್ನು ಮುಂದುವರಿಸುವ ತರುಣ ಹಾಡುಗಾರರು ಮುಂದೆ ಬರುತ್ತಿಲ್ಲ. ಬ್ರಿಟಿಷ್ ಆಡಳಿತಕ್ಕೆ ಪ್ರತಿಭಟನೆ ತೋರಿದ ಹಳೆತಲೆಮಾರಿನ ಕಲಾವಿದರು ಕಿತ್ತೂರ ಚೆನ್ನಮ್ಮ ಸಂಗೊಳ್ಳಿರಾಯಣ್ಣ. ಸಿಂಧೂರ ಲಕ್ಷ್ಮಣ. ನರಗುಂದ ಬಾಬಾಸಾಹೇಬ ಮುಂತಾದ ಸಾಂಸ್ಕೃತಿಕ ನಾಯಕರನ್ನು ವೈಭವಿಸಿ ಹಾಡುತ್ತಿದ್ದಾಗ ನಮ್ಮೂರ ಜನ ಮೈಮರೆತು ಕೇಳುತ್ತಿದ್ದರು. ಆದರೆ ಮಹಾತ್ಮಗಾಂಧಿಯವರೂ ಅದೇ ಕೆಲಸ ಇನ್ನೂ ವ್ಯಾಪಕವಾಗಿ ಮಾಡಿದರೂ ಅವರ ಜೀವನ ಜನಪದ ಕವಿಗಳ ಕಾವ್ಯ ಪ್ರಜ್ಞೆಗೆ ಇಳಿಯಲ್ಲೇ ಇಲ್ಲ. ಬದುಕಿನ ಅಗತ್ಯವಾಗಿದ್ದ ಕಾವ್ಯ. ಬದುಕಿನ ಭಾಗವಾಗಿದ್ದ ಕಲಾವಂತಿಕೆ ಒಮ್ಮೆಲೆ ಹೀಗೆ ಅದೃಶ್ಯವಾಗಲು ಕಾರಣವೇನು? ನೀವು ಒಪ್ಪುವುದಾದರೆ ಈ ಪ್ರಶ್ನೆಯನ್ನು ನಾಡಿಗೂ ದೇಶಕ್ಕೂ ವಿಸ್ತರಿಸಿ ಕೇಳಬೇಕನಿಸುತ್ತದೆ. ಜಾನಪದ ತಜ್ಞರಾಗಿ ನಾವು ಈ ಬಗ್ಗೆಯೂ ವಿಚಾರ ಮಾಡಬೇಕಾದ್ದಿದೆ ಎಂದು ಅನ್ನಿಸುತ್ತದೆ.

ಮೊದಲಿನಂಥ ಜಾನಪದ ಯಾಕಿಲ್ಲ ಎನ್ನುವುದಕ್ಕೆ ಸ್ಥೂಲ ಕಾರಣಗಳು ಬೇಕಾದಷ್ಟಿವೆ. ಹಳ್ಳಿ ಸಿಟಿಗಳ ಸಂಬಂಧ ಸರಿಯಲ್ಲ. ಒಂದು ಹಳ್ಳಿ ಈಗ ಸಿಟಿ ಮತ್ತು ರಾಜಧಾನಿಯ ಸಂಪರ್ಕವಿಲ್ಲದೆ ಬದುಕೋದು ಸಾಧ್ಯವಿಲ್ಲ. ವ್ಯಕ್ತಿ ವ್ಯಕ್ತಿಗಳ ಸಂಬಂಧದಲ್ಲಿ ಬದಲಾವಣಿಯಾಗಿದೆ. ರಸಿಕನ ಕಲ್ಪನೆಯಲ್ಲಿ ಬದಲಾವಣೆಯಾಗಿದೆ. ಹಿಂದಿನ ಕಲಾವಿದರು ವತರ್ರ‍ಮಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಯಜಮಾನ, ಕಾರ್ಮಿಕ, ಪ್ರಜೆ, ಅಧಿಕಾರಿ, ವ್ಯಕ್ತಿ, ರಾಜಕಾರಣ ಮುಂತಾದ ಹೊಸ ಸಂಬಂಧಗಳು ಹುಟ್ಟಿಕೊಂಡಿವೆ. ಭಾಷೆಯಲ್ಲಿ ಕೂಡ ನಂಬಿಕೆ ಕಡಿಮೆಯಾಗಿರುವ ಕಾಲ ಇದು. ಭಾಷೆ ಮೌಲಿಕವಾಗೋದು ಸತ್ಯದ ಹತ್ತಿರಕ್ಕೆ ಹೋದಾಗ. ಅಂಥ ಭಾಷೆಗೆ ಸತ್ಯದ ಬಗ್ಗೆ ಖಾತ್ರಿಯಿರಬೇಕು. ಖಾತ್ರಿಯಿಲ್ಲದಿದ್ದರೆ ಭಾಷೆ ಸುಂದರವಾಗುತ್ತ ಹೋಗುತ್ತದೆ. ಪ್ರಜಾಪ್ರಭುತ್ವ ಕೂಡ ನಮಗೆ ಸತ್ಯದ ಇನ್ನೊಂದು ಮುಖ ತೋರಿಸುತ್ತಿಲ್ಲ. ಅದು ತೋರೀತು ಎಂಬ ಭರವಸೆ ಕೂಡ ಅನೇಕರಲ್ಲಿ ಮಾಯವಾಗುತ್ತಿದೆ. ರಾಜಕಾರಣವೇ ಈಗ ಜಾತಿಗೆ ವ್ಯಕ್ತಿಗೆ ಯಶಸ್ಸಿನ ಪ್ರಮಾಣ ಪತ್ರ ಕೊಡುವ ಅಧಿಕೃತ ಸಂಸ್ಥೆಯಾಗಿದೆ. ತುಳಿಯಲ್ಪಟ್ಟ ವರ್ಗಗಳಿಗೆ ಕೂಡ ಅವರ ರಾಜಕೀಯ ಶಕ್ತಿಯ ಅರಿವಾಗಿದೆಯೇ ಹೊರತು ಸಾಂಸ್ಕೃತಿಕ ಶಕ್ತಿಯ ಅರಿವಾಗಿಲ್ಲ. ಹೀಗೆ ಕಾರಣ ಪರಿಣಾಮಗಳ ಪಟ್ಟಿಯನ್ನು ಬೆಳೆಸಬಹುದು. ಆದರೆ ಸೂಕ್ಷ್ಮವಾದ ಕಾರಣಗಳೂ ಕೆಲವಿವೆ.

ಸಮೂಹ ಮತ್ತು ಸಾರ್ವಜನಿಕರು

ಸ್ವಾತಂತ್ರೋತ್ತರ ಜನಜೀವನದಲ್ಲಿ ಬೇಕಾದಷ್ಟು ಬದಲಾವಣೆಗಳಾಗಿವೆ. ಸಾಮಾಜಿಕ ಗುಂಪುಗಳ ವಿಂಗಡಣೆ ಈಗ ಬೇರೆ ರೀತಿಯಲ್ಲಾಗಿದೆ. ಈ ಹಿಂದೆ ಸಮೂಹದ ಒಂದು ಘಟಕ ಹಳ್ಳಿಯಾಗಿತ್ತು (ಚಿಕ್ಕ ಘಟಕವೆಂದರೆ ಕುಟುಂಬ) ಮತ್ತು ಜಾತಿಗಳು, ಕಸಬುಗಳು ಕಾರಣವಾಗಿ ಇನ್ನಷ್ಟು ಸಣ್ಣ ಸಣ್ಣ ಘಟಕಗಳು ಈ ದೊಡ್ಡ ಘಟಕದ ಭಾಗಗಳಾಗಿದ್ದವು. ಹಿಂದಿನ ಕಾಲದ ನಗರ ಕೂಡ ಒಂದು ದೊಡ್ಡ ಸಮೂಹವೇ ಆಗಿತ್ತು. ಆದರೆ ಈಗ ಹಿಂದಿನ ಕಾಲದ ಸಮೂಹ ಹೋಗಿ ಸಾರ್ವಜನಿಕರು (public) ಆಗಿದ್ದಾರೆ. ಜನ ಗುಂಪಾಗುವುದು ಆ ಗುಂಪಿನ ಎಲ್ಲರಿಗೂ ಸಾಮಾನ್ಯವಾದ ಒಂದು ಆಸಕ್ತಿಯಿಂದ. ಅದು ಜಾತಿಯಾಗಿರಬಹುದು, ಕಸಬಾಗಿರಬಹುದು. ಅದನ್ನು ಆ ಗುಂಪಿನ ಅಥವಾ ಸಮೂಹದ ಜೀವಕೇಂದ್ರ ಅನ್ನಬಹುದು.

ಆದರೆ ಸಾರ್ವಜನಿಕರಿಗೆ ಈ ಜೀವಕೇಂದ್ರ ಇರುವುದಿಲ್ಲ. ಸ್ಥೂಲವಾಗಿ ಆ ಸಮಾಜದ ಎಲ್ಲರೂ ಅನ್ನೋದರ ಬದಲು ಸಾರ್ವಜನಿಕರು ಅನ್ನುತ್ತೇವೆ. ಇವರೂ ಗುಂಪಾಗುತ್ತಾರೆ. ಎಲ್ಲರಿಗೂ ಸಮಾನವಾದ ಅಗತ್ಯಗಳ ಬೇಡಿಕೆಗಾಗಿ ಉದಾ: ತಾವಿರುವಲ್ಲಿ ರಸ್ತೆ ಬೇಕಾದಾಗ, ನೀರು ಬೇಕಾದಾಗ, ಮತ ಚಲಾಯಿಸಿ ಒಬ್ಬರನ್ನು ಅಥವಾ ಒಂದು ಪಕ್ಷವನ್ನು ಆರಿಸಿ ತರುವಾಗ, ಅನ್ಯಾಯಗಳನ್ನು ಪ್ರತಿಭಟಿಸುವಾಗ ಸತ್ಯಾಗ್ರಹ ಮಾಡುವಾಗ ಇತ್ಯಾದಿ. ಆದರೆ ಅದು ಅಷ್ಟಕ್ಕೇ ಸೀಮಿತಿ. ಸಮೂಹದ ಜೀವಕೇಂದ್ರಕ್ಕೆ ಸಾಂಸ್ಕೃತಿಕ ಅಗತ್ಯವಿರುವಂತೆ ಇವರಿಗಿರುವುದಿಲ್ಲ. ಜಾನಪದದಲ್ಲಿ ಆಯಾ ಕುಟುಂಬಗಳನ್ನು ಒಂದಾಗಿಸುವ ಕೆಲವು ಆಚರಣಿಗಳಿದ್ದಂತೆ, ಇಡೀ ಸಮೂಹವನ್ನೇ ತೊಡಗಿಸುವ ಆಚರಣಿಗಳೂ ಇರುತ್ತವೆ. ಉದಾಹರಣೆಗೆ: ಆಯಗಾರರಿಗೇ ವಿಶಿಷ್ಟವಾದ ಕೆಲವು ಆಚರಣೆಗಳಿವೆ. ಹಾಗೆಯೇ ಇಡೀ ಊರಿಗೂರೇ ಸೇರಿ ಆಚರಿಸುವ ಗ್ರಾಮದೇವತೆಯ ಜಾತ್ರೆಯಂಥ ಆಚರಣೆಗಳೂ ಇರುತ್ತವೆ. ಇಲ್ಲಿ ಪ್ರತಿಯೊಬ್ಬರ ತೊಡಗುವಿಕೆಯೂ ತೀವ್ರ ಸ್ವರೂಪದ್ದು. ಆದರೆ ಈ ಸಮೂಹ ಹೋಗಿ ಸಾರ್ವಜನಿಕರು ಹುಟ್ಟೋದು ಶಿಕ್ಷಣದಿಂದ, ಶಿಕ್ಷಣದ ಪ್ರಸಾರದಿಂದ, ಶಿಕ್ಷಣದ ಮಾಧ್ಯಮವಾದ ಬರೆಹದಿಂದ. ಅಲ್ಬರ್ಟ್‌ಬಿ. ಲಾರ್ಡ್‌ಹೇಳುವಂತೆ ಶಿಕ್ಷಣ ಬರೆಹಗಳೆರಡೂ ಜಾನಪದದ ವೈರಿಗಳು. ಈ ಕಾರಣದಿಂದಾಗಿ  ಜಾನಪದದ ಸೃಜನಶೀಲತೆ ನಿಂತು ಹೋಗಿದೆ. ಹೀಗೆಂದರೆ ನಾನು ಶಿಕ್ಷಣ ಪ್ರಸಾರದ ವಿರೋಧಿಯೆಂದು ನಿಂತು ಹೋಗಿದೆ. ಹೀಗೆಂದರೆ ನಾನು ಶಿಕ್ಷಣ ಪ್ರಸಾರದ ವಿರೋಧಿಯೆಂದು ಯಾರೂ ತಿಳಿಯಬಾರದು. ಶಿಕ್ಷಣವೂ ಇರುತ್ತ ಜಾನಪದವೂ ಸೃಜನಶೀಲವಾಗಿರುವ ಒಂದು ಸ್ಥಿತಿಯನ್ನು ಅನ್ವೇಷಿಸಲು ಪ್ರಯತ್ನಿಸುತ್ತಿದ್ದೇನೆ ಅಷ್ಟೆ.

ಔದ್ಯಮೀಕರಣ:

ನಾವು ಬಯಸಲಿ ಬಿಡಲಿ, ಔದ್ಯಮೀಕರಣವಂತೂ ಬಂದಿದೆ. ಉದ್ಯಮೆಗಳಿಗೆ ವಿದ್ಯುತ್ತು ಬೇಕು. ನಾವೀಗ ವಿದ್ಯುತ್ತು ನಿರ್ಮಿಸಿದ ಗೊಂದಲಗಳಲ್ಲಿದ್ದೇವೆಂದು ಸಂಸ್ಕೃತಿ ಚರಿತ್ರೆಯ ಪಂಡಿತರು ಹೇಳುತ್ತಾರೆ. ಈ ವಿದ್ಯುತ್ತಿನಿಂದಾಗಿ ಜಾನಪದದ ದೆವ್ವಭೂತಗಳ ಶ್ರೀಮಂತ ಪ್ರಪಂಚವೇ ಕುಸಿದು ಬಿದ್ದುದಂತೂ ನಿಜ. ಇದೆಲ್ಲ ಹೆಚ್ಚಲ್ಲ. ಇದಕ್ಕಿಂತ ಅಪಾಯಕಾರಿಯಾದದ್ದು ಔದ್ಯಮೀಕರಣ. ಔದ್ಯಮೀಕರಣ ಅಧಿಕಾರದ ಕೇಂದ್ರೀಕರಣ ಬೇಡುತ್ತದೆ. ಜಾನಪದ ಮೂಲತಃ ವಿಕೇಂದ್ರೀಕೃತ ಗುಂಪುಗಳಿಗೆ ಸೇರಿದ್ದು.

ಉತ್ಪಾದನೆ ಮತ್ತು ಅದರ ಮಾರಾಟವನ್ನೇ ಮೂಲಭೂತ ಅಂಶಗಳಾಗಿ ಉಳ್ಳ ಔದ್ಯಮೀಕರಣ ವ್ಯಕ್ತಿಯನ್ನೇ ಆಗಲಿ, ಅದರ ಉತ್ಪಾದನಾ ಸಾಮರ್ಥ್ಯದಿಂದ ಅಥವಾ ಕೊಳ್ಳುವ ಸಾಮರ್ಥ್ಯದಿಂದ ಅಳೆಯುತ್ತದೆ. ಇದಕ್ಕೆ ಕಲೆಗಾರ ಕೂಡ ಒಂದು ಕಮಾಡಿಟಿ ಅಷ್ಟೆ. ಕಲೆ ಒಮ್ಮೆ ವ್ಯಾಪಾರಿ ಚಟುವಟಿಕೆಯಾದರೆ ನವೀನತೆ ಅದರ ಚಟವಾಗಿ ಬಿಡುತ್ತದೆ. ಉತ್ಪಾದನೆ ದಿನನಿತ್ಯ ಹೊಚ್ಚ ಹೊಸದಾಗಿರಬೇಕು, original ಆಗಿರಬೇಕೆಂದು ಬಯಸುತ್ತದೆ. ಅದಕ್ಕೆ ಪಳೆಯುಳಿಕೆಯಾಗಲಿ, ಪಲೆಯುಳಿಕೆಯ ಪುನಃ ಸೃಷ್ಟಿಯಾಗಲಿ ಬೇಡ. ಕನಸುಗಳನ್ನು ಸೃಷ್ಟಿಸಿ ಜನರನ್ನುಭ್ರಮೆಗೊಯ್ಯುವ ಜನಪ್ರಿಯ ಕಲೆ ಅದಕ್ಕೆ ಬೇಕು. ಜೊತೆಗೆ ದಿನನಿತ್ಯ ಹೊಚ್ಚ ಹೊಸದನ್ನು original ಆದದ್ದನ್ನು ಹೇಳುವ ಕಲೆ ಬೇಕಾದ್ದರಿಂದ ಕಲಾವದರಲ್ಲಿ ಸ್ಪರ್ಧೆ ಹುಟ್ಟಿಸುತ್ತದೆ. ಜನಪದ ಕಲಾವಿದ ಇಂಥಲ್ಲಿ ದುರ್ಬಲನಾಗುತ್ತಾನೆ ನಿರುಪಯುಕ್ತನಾಗುತ್ತಾನೆ. ಜಾನಪದಕ್ಕೆ ವಿಶಾಲ ಅರ್ಥ ನೀಡಿ ವ್ಯಾಖ್ಯಾನಿಸುವವರು ಔದ್ಯಮೀಕರಣದ ಸಂದರ್ಭದಲ್ಲಿ ಕೂಡ ಕಾರ್ಮಿಕ ಜಾನಪದ. ಕಾಲೇಜು ಜಾನಪದ ಹುಟ್ಟುತ್ತವೆ ಎನ್ನುತ್ತಾರೆ. ಸ್ವಾತಂತ್ರ‍್ಯೋತ್ತರ ೪೦ ವರ್ಷಗಳ ಅವಧಿಯಲ್ಲಿ ನಮ್ಮಲ್ಲಿ ಕಾರ್ಮಿಕ ಜಾನಪದವೂ ಹುಟ್ಟಲಿಲ್ಲ. ಕಾಲೇಜು ಜಾನಪದವೂ ಹುಟ್ಟಲಿಲ್ಲ, ಯಾಕೆ?

ಔದ್ಯಮೀಕರಣದ ಸಂದರ್ಭದಲ್ಲೇ ಮನುಷ್ಯನನ್ನು Tool Making Animal ಎಂದು ವ್ಯಾಖ್ಯಾನಿಸುತ್ತಾರಲ್ಲವೆ? ನಾಗರಿಕತೆಯ ಬೆಳವಣಿಗೆಯನ್ನು ಗಮನಿಸಿ ಹೇಳಿದ ಈ ಮಾತು ಭಾಗಶಃ ನಿಜವೂ ಹೌದು. ಮನುಷ್ಯ ತನ್ನ ಒಂದಿಲ್ಲೊಂದು ಇಂದ್ರಿಯಗಳನ್ನು ಬದಿಗೊತ್ತಿ ಇನ್ನೊಂದು ಇಂದ್ರಿಯ ಅಥವಾ ಅವಯವವನ್ನು ವಿಸ್ತರಿಸರುತ್ತಲೆ ಬಂದಿದ್ದಾನೆ. ಹಲ್ಲು ಮುಷ್ಟಿಗಳನ್ನು ಆಯುಧವಾಗಿ ಉಪಯೋಗಿಸುತ್ತಿದ್ದವನು ಈಗ ಬಾಂಬಿನ ತನಕ ತನ್ನ ಆಯುಧದ ಕಲ್ಪನೆಯನ್ನು ವಿಸ್ತರಿಸಿಕೊಂಡಿದ್ದಾನೆ. ಅಂದರೆ ಬಾಂಬು ಹಲ್ಲು ಮುಷ್ಟಿಗಳ ವಿಸ್ತೃತ ರೂಪ. ಹಾಗೆಯೇ ನೆಲದ ಮೇಲೆ ಕೂರುತ್ತಿದ್ದವನು ಈಗ ಫನಿರ್ಚರ್ ಮಾಡಿಕೊಂಡಿದ್ದಾನೆ. ಹಾಗೆಯೇ ಕಿವಿಯ ಮೇಲಿದ್ದ ಒತ್ತು ಈಗ ಕಣ್ಣಿನ ಮೇಲೆ ಬಿದ್ದಿದೆ-ಅಥವಾ ಬದಲಾಗಿದೆ ಎಂದೂ ಹೇಳುತ್ತಾರೆ. ಅಂದರೆ ಕಣ್ಣನ್ನು ಮನುಷ್ಯ ಚಲನಚಿತ್ರ, ಟಿ.ವಿ.ಗಳವರೆಗೆ ವಿಸ್ತರಿಸಿಕೊಂಡಿದ್ದಾನೆ. ಇನ್ನೂ ಮುಂದೆ ಹೋಗಿ ಹಣವನ್ನು ರೂಪಕವಾಗಿ ಮಾಡಿಕೊಂಡಿದ್ದಾನೆ. ಅಂದರೆ ಸಾಹಿತ್ಯದ ರೂಪಕ ಅನುಭವವನ್ನು store ಮಾಡಿ Translate ಮಾಡುವ ಹಾಗೆ ಹಣ ಶ್ರಮವನ್ನು store ಮಾಡುತ್ತದೆ; ಮತ್ತು ಬೇಕಾದಾಗ ಇನ್ನೊಂದಾಗಿ ಪರಿವರ್ತಿಸುತ್ತದೆ. ಔದ್ಯಮೀಕರಣಕ್ಕೆ ಇನ್ನೇನು ಬೇಕು? ಕಾಲಿನ ವಿಸ್ತರಣೆಯನ್ನು ಮೊದಲು ಗಾಳಿ ಈಗ ವಿಮಾನದವರೆಗೆ ವಿಸ್ತರಿಸಿ ಕೊಂಡಿದ್ದಾನೆ.

ಸರಕಾರ:

ಸರಕಾರ ಸಹಜವಾಗಿಯೇ ಔದ್ಯಮೀಕರಣವನ್ನು ಪ್ರೋತ್ಸಾಹಿಸುತ್ತದೆ ಮತ್ತು ಅದರ ಭಾಗವಾಗುತ್ತದೆ. ಸರಕಾರಕ್ಕೆ ಅಧಿಕಾರ ಕೇಂದ್ರೀಕರಣವೂ ಬೇಕು. ಮತ ಚಲಾಯಿಸಿ ಆರಿಸಿ ತರುವ ಸಾಮಾನ್ಯರೂ ಬೇಕು. ಆದ್ದರಿಂದ ಜಾನಪದವನ್ನು ಅದು ಒಂದು ಮಾಧ್ಯಮವನ್ನಾಗಿ ಉಪಯೋಗಿಸಬಯಸುತ್ತದೆ. ಸುಶಿಕ್ಷಿತರನ್ನು ತಲುಪುವುದಕ್ಕೆ ಶಿಕ್ಷಣ ಮತ್ತು ಶ್ರೀಮಂತಿಕೆಯನ್ನು ಆಧಾರವಾಗುತ್ತ ರೇಡಿಯೋ, ಟಿ.ವಿ, ಪತ್ರಿಕೆಗಳು ಅದರ ಬಳಿ ಇವೆ. ಆದರೆ ಅಶಿಕ್ಷಿತರನ್ನು, ಬಡವರನ್ನು ತಲುಪುವುದಕ್ಕೆ ಮಾಧ್ಯಮಗಳಿಲ್ಲ. ಜಾನಪದ  ಖರ್ಚೆ. ಇಲ್ಲದ, ಆದರೆ ಸುಲಭವಾಗಿ ಸಾಮಾನ್ಯರಿಗೆ ತಲುಪಬಲ್ಲ ಫಲಕಾರಿಯಾದ ಮಾಧ್ಯಮ. ಆದ್ದರಿಂದ ಸರಕಾರ ಮುಂದೆ ಬಂದು ದೇವಸ್ಥಾನ, ಮರ, ಮುಂತಾದ ಸಾಂಸ್ಕೃತಿಕ, ಕೇಂದ್ರಗಳ ಸಂಪರ್ಕ ತಪ್ಪಿಸಿ, ತಾನೇ ಆಶ್ರಯ ನೀಡುವ ಸೋಗು ಹಾಕಿಕೊಂಡ ಶ್ರೀಮಂತ ಸಂಸ್ಥೆಯಾಗುತ್ತದೆ. ಸರಕಾರವೇ ಕಲೆಗಳಿಗೆ ಆಶ್ರಯ ನೀಡುವ ಸಂಸ್ಥೆಯಾದಾಗ ಸಹಜವಾಗಿ ಅಧಿಕಾರಶಾಹಿಯ ಮೂಲಕ ಕಲೆಯ ಆಶ್ರಯ ನೀಡುವ ಸಂಸ್ಥೆಯಾದಾಗ ಸಹಜವಾಗಿ ಅಧಿಕಾರಶಾಹಿಯ ಮೂಲಕ ಕಲೆಯ ಬೆಲೆಗಟ್ಟುವ ಟ್ರಿಬುನಲ್ ಕೂಡ ಆಗುತ್ತದೆ. ಜನಪದ ಕಲಾವಿದ ಎಷ್ಟೇ ತನ್ನ ಸ್ವಂತಿಕೆ ಮತ್ತು ಕಲೆಗಾರಿಕೆ ಮೆರೆದರೂ ಸರಕಾರಿ ಆಶ್ರಯವೆಂದ ಮೇಲೆ ಸರಕಾರದ ತುತ್ತೂರಿಯನ್ನೇ ಊದುತ್ತಿರುತ್ತಾನೆ. ಜೊತೆಗೆ ಟ್ರಿಬುನಲ್‌ನಲ್ಲಿ ಇರೋದರಿಂದ ಅನಗತ್ಯ ಸ್ಪರ್ಧೆಗೂ ಇಳಿಯಬೇಕಾಗುತ್ತದೆ.

ಅಧಿಕಾರಶಾಹಿಯಿಂದ ಇನ್ನೂ ಒಂದು ಅಪಾಯವಿದೆ. ಅದು ತನ್ನ ಮತ್ತು ಸರಕಾರದ ಸಮರ್ಥನೆಗಾಗಿ ಎಲೀಟನ್ನು ಸೃಷ್ಟಿಸುತ್ತದೆ. ಎಲೀಟಿದ್ದಲ್ಲೆ ಅದು ಉತ್ತಮ ಪ್ರಭುತ್ವದ ಸಮರ್ಥನೆ ಮಾಡುತ್ತ, ಉತ್ತಮನಿಗಾಗಿ ಮೌಲ್ಯಗಳನ್ನು ಮತ್ತು  ಕಲಾಕೃತಿಗಳನ್ನು ಸೃಷ್ಟಿಸುವತ್ತ ಗಮನ ಕೊಟ್ಟು ಸಾಮಾನ್ಯನನ್ನು ಇನ್ನಷ್ಟು ಸಾಮಾನ್ಯ ನನ್ನಾಗಿ ದರಿದ್ರನನ್ನಾಗಿ ಮಾಡುತ್ತದೆ. ಅವನ ಮಿತಿಗಳನ್ನು ಜಾಸ್ತಿ ಮಾಡುತ್ತದೆ. ಅವನ ಕಲಾಪ್ರಜ್ಞೆಯ ವಿಕಾಸವನ್ನು ನಯವಾದ ದಾರಿಗಳಿಂದ ನಿರಾಕರಿಸುತ್ತದೆ. ಈ ಬುದ್ಧಿಜೀವಿ ಸಾಮಾನ್ಯನಲ್ಲಿ ಅಭಿರುಚಿಯ ಪ್ರಶ್ನೆ ಹುಟ್ಟಿಸಿ ಕೆಟ್ಟ ಅಭಿರುಚಿ, ಒಳ್ಳೆಯ ಅಭಿರುಚಿಯೆಂದು ಬೇರ್ಪಡಿಸಿ, ಜಾನಪದರಿಂದ ಕೆಟ್ಟ ಅಭಿರುಚಿಯನ್ನು ಆರೋಪಿಸಿ ಅವರಲ್ಲಿ ಕೀಳರಿಮೆ ಹುಟ್ಟುವಂತೆ ಮಾಡುತ್ತಾನೆ. ಹಾಗೂ ಈ ಮೂಲಕ ಜನಪದ ಕಲಾವಿದ ಸರಕಾರಕ್ಕೆ ಹೆಚ್ಚು ಹೆಚ್ಚು ವಿಧೇಯನಾಗುವಂತೆ ಮಾಡುತ್ತಾನೆ.

ಈ ಎಲ್ಲಾ ಕಾರಣಗಳಿಂದ ಕಲಾವಿದ ಮತ್ತವನ ರಸಿಕ-ಇಬ್ಬರ ಮಧ್ಯೆ ಇದ್ದ ಸಂಬಂಧವೂ ಮೊದಲಿನಂತಿಲ್ಲ. ಜನಪದ ಕಲೆಗಳ ಸೃಜನಶೀಲತೆಯ ಗುಟ್ಟಿರೋದು ಕಲಾವಿದನ ಕಾರಯತ್ರೀ ಹಾಗೂ ರಸಿಕನ ಭಾವಯತ್ರೀ ಪ್ರತಿಭೆಗಳು ಸಂಧಿಸುವ ಸ್ಥಳದಲ್ಲಿ. ಯಕ್ಷಗಾನ ಬಲ್ಲವರಿಗೆ ಈ ಮಾತಿನರ್ಥ ಬೇಗನೆ ಹೊಳೆಯಬಲ್ಲುದು. ಪ್ರೇಕ್ಷಕರ ಸ್ಪಂದನದ ತೀವ್ರತೆಯನ್ನು ಅನುಸರಿಸಿ ರಂಗದ ಮೇಲಿನ ಕ್ರಿಯೆ ಹಿಗ್ಗುತ್ತದೆ ಇಲ್ಲವೆ ಕುಗ್ಗುತ್ತದೆ. ಆದರೆ ಈಗಿನ ರಸಿಕ ನಿರ್ಲಿಪ್ತನಾಗಿರ ಬಯಸುತ್ತಾನೆ. ಮತ್ತು ಕೊನೆಯಲ್ಲಿ ಆ ಕಲೆಯ ಬಗ್ಗೆ ತೀರ್ಮಾನವನ್ನು ಕೊಡಬಯಸುತ್ತಾನೆ. ಇಂಥವನನ್ನು ಎದರಿಸುವಾಗ ಕಲಾವಿದ By product ಆಗಿದ್ದ ತನ್ನ ಕಲೆಯನ್ನು ಶುದ್ಧಾಂಗವಾಗಿ ಕಲೆಯಾಗಿಸೋದಕ್ಕೆ ಪ್ರಯತ್ನ ಮಾಡುತ್ತಾನೆ ಮತ್ತು ಸೋಲುತ್ತಾನೆ. ಈಗಿನ ರಸಿಕನಿಗೆ ಜಾನಪದವೆಂದರೆ ಜೀವನಾವಶ್ಯಕವಾದ, ಪೂರೈಸಲೇಬೇಕಾದ ಅಗತ್ಯವಲ್ಲ. ಇಂಥವನು ಒಂದು ಲೆಯಲ್ಲಿ ಅದರ ಜೀವಾಳವಾದ ರಿಪಿಟೆಶನ್ ಬಂದರೆ, ಅಲಂಕರಣ ಬಂದರೆ ತಾಳ್ಮೆಗೆಡೋದರಲ್ಲಿ ಆಶ್ಚರ‍್ಯವಿಲ್ಲ.

ಆಶಾಕಿರಣ:

ಸ್ನೇಹಿತರೆ, ಇಷ್ಟೆಲ್ಲಾ ನಿರಾಶೆಗಳ ಮಧ್ಯದಲ್ಲೂ ಜಾನಪದಕ್ಕೆ ತುಂಬ ಆಶಾದಾಯಕವಾದ ಅಂಶಗಳಿನ್ನೂ ನಮ್ಮಲ್ಲಿ ಉಳಿದಿವೆ. ನಮ್ಮ ಸಂಸ್ಕೃತಿಯ ಜಿಗುಟುತನಕ್ಕೆ ವಂದನೆ ಹೇಳೋಣ. ಸಮೂಹದಲ್ಲಿನ ವ್ಯಕ್ತಿ ವ್ಯಕ್ತಿಗಳ ಸಂಬಂಧಗಳಲ್ಲಿ ಬದಲಾವಣೆಗಳಾಗಿದ್ದರೂ ಕುಟುಂಬದ ಸದಸ್ಯರ ಸಂಬಂಧಗಳಲ್ಲಿ ವ್ಯತ್ಯಾಸಗಳಾಗಿಲ್ಲ. ಕುಟುಂಬವೇ ಜಾನಪದದ ಸಣ್ಣ ಘಟಕ; ಮತ್ತು ಆ ಕುಟುಂಬ ವ್ಯವಸ್ಥೆ ಇನ್ನೂ ನಮ್ಮಲ್ಲಿ ಜೀವಂತವಾಗಿದೆ. ಮಹಾಯುದ್ಧಗಳಲ್ಲಿ ನೇರ ಭಾಗಿಯಾಗಿದ್ದ ಪಶ್ಚಿಮದ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಕುಸಿದುಬಿದ್ದು ಸಂಬಂಧಗಳು ಅಸಂಗತ ಸ್ಥಿತಿಗೆ ತಲುಪಿವೆ. ನಾವಿನ್ನೂ ಆ ಸ್ಥಿತಿಗೆ ತಲುಪಿಲ್ಲ.

ಅಮೆರಿಕದಂಥ ದೇಶದಲ್ಲಿ ಜಾನಪದ ಇಲ್ಲದಿದ್ದರೆ ಜಗತ್ತೇನೂ ನಾಶವಾಗುವುದಿಲ್ಲ. ಕುಟುಂಬ ನಾಶವಾದಾಗಲೇ ಅರ್ಥಪೂರ್ಣ ಜಾಣಪದವೂ ನಾಶವಾಗುತ್ತದೆ. ಇದು ಅವರಿಗೂ ಗೊತ್ತಿದೆ. ಆದ್ದರಿಂದಲೇ ತಮ್ಮಲ್ಲೂ ಜಾನಪದ ಇದೆ ಎಂದು ಕೊಚ್ಚಿಕೊಳ್ಳಳು ’ಕಕ್ಕಸು ಗೋಡೆಯ ಮೇಲಿನ ಬರೆಹಗಳೂ ಜಾನಪದವೇ’ ಎಂದು ಹೇಳುವ ಮಟ್ಟಿಗೆ ಜಾನಪದವನ್ನು ಅಧೋಗತಿಗೆ ತಂದಿದ್ದಾರೆ. ಅಮೆರಿಕದಂಥ ದೊಡ್ಡ ದೇಶ ಕಥನತಂತ್ರವನ್ನೇ ಕಳೆದುಕೊಂಡಿದೆಯೆಂದು ವಿಮರ್ಶಕರು ಹೇಳುತ್ತಾರೆ. ಇನ್ನೊಬ್ಬರಿಗೆ ತಿಳಿಯೋ ಹಾಗೆ ಒಂದು ಕಥೆ ಹೇಳುವ ತಂತ್ರಕ್ಕೆ ಅಮೆರಿಕದ ಕಾದಂಬರಿಕಾರ ಎರವಾಗಿದ್ದಾನೆ. ಕಥೆ ಹೇಳೋದಕ್ಕೆ ಒಬ್ಬ ಕಥೆಗಾರ ಮತ್ತು ಕಥೆ ಹ್ಯಾಗೋ ಹಾಗೆ ಕೇಳೊದಕ್ಕೆ ಒಂದು ಗುಂಪು ಅಥವಾ ಒಂದು ಕುಟುಂಬವಾದರೂ ಬೇಕು, ಅಂಥ ಕುಟುಂಬ ಪದ್ಧತಿಯನ್ನು ಅರ್ಥಪೂರ್ಣವಾಗಿ ಸಮರ್ಥವಾಗಿ ಮುಂದುವರಿಸಿಕೊಂಡು ಹೋಗುತ್ತಿರುವ ಒಂದೇ ಪ್ರದೇಶ ಮೂರನೇ ಜಗತ್ತು-ಅದರಲ್ಲೂ ಭಾರತ. ಭಿನ್ನ ಶೈಲಿಯ ಜೀವನ ಪದ್ಧತಿಯೊಂದು ಈಗಲೂ ಇರೋದಕ್ಕೆ ಸಾಧ್ಯವಾಗಿರೋದೇ ಈ ದೇಶದಲ್ಲಿ. ಪ್ರಜಾಪ್ರಭುತ್ವದ ಪ್ರಯೋಗ ಮಾಡುತ್ತ. ಪಶ್ಚಿಮದ ಬೆಳಕಿನಲ್ಲಿ ನಮ್ಮ ದೇಶವನ್ನು ಕಂಡ ಮೇಲೂ ಕುಟುಂಬದಲ್ಲಿಯ ನಮ್ಮ ವಿಶ್ವಾಸ ಕಮ್ಮಿ ಆಗಿಲ್ಲ. ಇದು ಸಣ್ಣ ಮಾತಲ್ಲ.

ಮಂಡಲ ಪಂಚಾಯಿತಿ:

ಈ ಮಧ್ಯೆ ಜಾನಪದಕ್ಕೆ ವರವಾಗಬಲ್ಲ ಮಂಡಲ ಪಂಚಾಯಿತಿಯ ಪವಾಡ ಸದೃಶ ಘಟನೆಯೊಂದು ಜರುಗಿ ಬಿಟ್ಟಿದೆ. ಸರಿಯಾದ ಅರ್ಥದಲ್ಲಿ ಅದು ಜಾರಿಗೆ ಬಂದರೆ ಒಂದೊಂದು ಹಳ್ಳಿಯೂ ಮಾವೋತ್ಸೆತುಂಗ್ ಕಲ್ಪಿಸಿದ ಕಮ್ಯೂನ್‌ಥರದ ಸಮೂಹವಾಗುತ್ತದೆ. ಹಾಗಾದಾಗ ವ್ಯಕ್ತಿ ವ್ಯಕ್ತಿಯ, ಕುಟುಂಬ ಮತ್ತು ಸಮೂಹದ, ಜನಪದ ಕಲೆಗಳು ಮತ್ತು ಸಮೂಹ ಸದಸ್ಯರ ಸಂಬಂಧಗಳು ಪುನರ್ ವ್ಯಾಖ್ಯಾನಗೊಳ್ಳುವ ಸಂಭವವಿದೆ. ಒಂದು ಹಳ್ಳಿ ಸ್ವತಂತ್ರ ಹಾಗೂ ಸಮಗ್ರ ಘಟಕವಾದಾಗ ತನ್ನ ಕಲಾಭಿಜ್ಞತೆಯ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಬೇಕಾಗುತ್ತದೆ. ಸರಿಯಾದ ಅರ್ಥದಲ್ಲಿ ಸಾಂಸ್ಕೃತಿಕ ಕ್ರಾಂತಿಯ ಮಾದರಿಯೂ ಇದೆ ಆಗಿದೆ. ಈಗ ಬುದ್ಧೀ ಜೀವಿಗಳ , ವಿಮರ್ಶಕರ, ಅಧಿಕಾರ ಶಾಹಿಯ, ಸಿಟಿ ಮತ್ತು ರಾಧಾನಿಯ ಕಲಾಮಾದರಿಗಳು ಆಮದಾಗುವುದಿಲ್ಲ. ಸ್ಥಳೀಯ ಕಲಾಭಿಜ್ಞತೆಯ ಅಗತ್ಯಕ್ಕೆ ತಕ್ಕ ಸಾಂಸ್ಕೃತಿಕ ಜಾನಪದ ರೂಪಗಳು ಸೃಷ್ಟಿಗೊಳ್ಳುತ್ತವೆ. ಪರಸ್ಥಳದಿಂದ ಅನುಕರಣೀಯ ರೂಪಗಳು ಬಂದರೂ ಅವು ಸ್ಥಳೀಯ ಸಾಮಗ್ರಿಯಲ್ಲಿ ಪುನಃ ಸೃಷ್ಟಿಗೊಳ್ಳಬೇಕಾಗುತ್ತದೆ.

ಈ ಸಂಕ್ರಮಣಾವಸ್ಥೆಯಲ್ಲಿ ಜಾನಪದ ವಿದ್ಯಾರ್ಥಿಗಳು. ತಜ್ಞರು ವಹಿಸಿ ಕೊಳ್ಳಬೇಕಾದ ಜವಾಬ್ದಾರಿಯೂ ಇದೆ. ಪಶ್ಚಿಮದ ಸಿದ್ಧಾಂತಗಳಿಗೆ ನಮ್ಮಲ್ಲಿಯ ಉದಾಹರಣೆಗಳನ್ನು ತಾಳೆ ಹಚ್ಚುವ ಕೆಲಸ ಇನ್ನು ಸಾಕು. ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಸ್ಪಂದಿಸುತ್ತ ನಮ್ಮ ಕಲಾವಿದರಿಗೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಬೇಕಾಗಿದೆ. ನಮ್ಮ ಸಿದ್ಧಾಂತಗಳೂ ಇಲ್ಲಿಯ ಸಾಮಗ್ರಿಯಲ್ಲಿ ಸೃಷ್ಟಿಗೊಳ್ಳಬೇಕಾಗಿದೆ. ನಮ್ಮ ಜನರ ರಸಿಕತೆ ಅವರ ಪ್ರಜ್ಞೆಯ ಶೀಲವಾಗಬೇಕಾಗಿದೆ. ಅದಕ್ಕಾಗಿ ಆ ದಿಶೆಯಲ್ಲಿ ನಾವು ಮಾಡಬೇಕಾದ ಕೆಲಸವೂ ಇದೆಯೆಂದು ನಂಬಿ ನಿಮಗೂ ಸೂಚಿಸ ಬಯಸುತ್ತೇನೆ.