ಸಯ್ಯಾಜಿರಾವ್ ಗಾಯಕವಾಡಭಾರತ ಸ್ವತಂತ್ರವಾಗುವ ಮೊದಲು ಬರೋಡ ಸಂಸ್ಥಾನವನ್ನಾಳಿದ ಮಹಾರಾಜರು, ಹಿಂದುಳಿದಿದ್ದ ರಾಜ್ಯವನ್ನು ಪ್ರಗತಿಯ ದಾರಿಯಲ್ಲಿ ನಡೆಸಿದರು. ಸ್ವತಂತ್ರ ಭಾರತದ ಕನಸನ್ನು ಕಂಡರು.

 ಸಯ್ಯಾಜಿರಾವ್ ಗಾಯಕವಾಡ

ಮೈಸೂರು ವಿಶಾಲವಾದ ರಸ್ತೆಗಳ ಊರು. ಒಂದು ವಿಶಾಲವಾದ ರಸ್ತೆ ಸಯ್ಯಾಜಿರಾವ್ ರಸ್ತೆ.

ಈ ರಸ್ತೆಗೆ ಈ ಹೆಸರು ಬಂದ ಕಾರಣ ಸ್ವಾರಸ್ಯವಾಗಿದೆ. ಈ ಶತಮಾನದ ಆರಂಭದಲ್ಲಿ ಮೈಸೂರಿಗೆ ಭೇಟಿಯಿತ್ತ ಬರೋಡೆಯ ಜನಪ್ರಿಯ ದೊರೆಯಾಗಿದ್ದ ಮುಮ್ಮಡಿ ಸಯ್ಯಾಜಿರಾವ್ ಗಾಯಕವಾಡರ ಸ್ಮರಣಾರ್ಥವಾಗಿ ಅಂದಿನ ಮೈಸೂರು ದೊರೆಗಳಾಗಿದ್ದ ಚಾಮರಾಜ ಒಡೆಯರು ಈ ರಸ್ತೆಗೆ ಅತಿಥಿಯ ಹೆಸರನ್ನು ಇರಿಸಿದ್ದರೆಂದು ಬಲ್ಲವರು ಹೇಳುತ್ತಾರೆ.

ಪ್ರತಿಭೆಗೆ ಆಹ್ವಾನ

ಸಯ್ಯಾಜಿರಾವ್ ಗಾಯಕವಾಡರ ಹೆಸರನ್ನು ಸ್ಮರಣೀಯವಾಗಿಸುವ ಇನ್ನೊಂದು ಸಂಗತಿ ಉಲ್ಲೇಖನಾರ್ಹವಾಗಿದೆ.

ಲಂಡನ್ನಿನಲ್ಲಿ ಅನೇಕ ಶ್ರೀಮಂತ ನಿವಾಸಗಳಿವೆ. ಅಂಥ ಒಂದು ನಿವಾಸ ಪಿಕೆಡೆಲ್ಲಿ ವಿಸ್ತರಣ. ಅಲ್ಲಿನ ಒಂದು ಹೋಟೆಲಿನ ಕೊಠಡಿ ಗಾಯಕವಾಡರ ಸ್ಮರಣೆಯನ್ನು ಹೊತ್ತು ನಿಂತಿದೆ.

ಸುಮಾರು ಎಂಬತ್ತು ವರ್ಷಗಳ ಹಿಂದಿನ ಮಾತು. ಆ ಕೊಠಡಿಯಲ್ಲಿ ಒಬ್ಬ ಶ್ರೀಮಂತ ಕುಳಿತಿದ್ದಾನೆ. ರಾಜ ಗಾಂಭೀರ್ಯವೇ ಮೈವೆತ್ತಂತಿತ್ತು. ನಡು ಹರೆಯದ ತೇಜಸ್ವಿಯಾದ ವ್ಯಕ್ತಿ, ತಲೆಗೆ ಮುತ್ತು ರತ್ನಗಳನ್ನು ಅಳವಡಿಸಿದ್ದ ಮಹಾರಾಷ್ಟ್ರದ ತಲೆಯುಡುಗೆ ಪಾಗು. ನಿಲುವಂಗಿ, ಕತ್ತಿನಲ್ಲಿ ಬೆಲೆಬಾಳುವ ಮುತ್ತುರತ್ನ ವೈಢೂರ್ಯಗಳ ಹಾರಗಳು. ಸಂದರ್ಶನಕ್ಕೆ ಬರಲಿದ್ದ ಅತಿಥಿಯನ್ನು ಸ್ವಾಗತಿಸಲು ಸಿದ್ಧವಾಗಿ ಅವನು ಕುಳಿತಿದ್ದ.

ನಿರೀಕ್ಷಿಸಿದ್ದ ಸಮಯಕ್ಕೆ ಸರಿಯಾಗಿ ಇಂಗ್ಲಿಷ್ ಉಡುಗೆಯನ್ನು ತೊಟ್ಟ ಒಬ್ಬ ಯುವಕನು ಅಲ್ಲಿಗೆ ಬಂದು ಅವನ ಆಪ್ತ ಕಾರ್ಯದರ್ಶಿಯನ್ನು ಭೇಟಿ ಮಾಡಿದನು.

ಆ ಯುವಕ ಬೇರೆ ಯಾರೂ ಆಗಿರದೆ ಅರವಿಂದ ಘೋಷರಾಗಿದ್ದರು. ಕಾರ್ಯದರ್ಶಿಯು ಅರವಿಂದರನ್ನು ಸಯ್ಯಾಜಿರಾವ್ ಗಾಯಕವಾಡರಿಗೆ ಪರಿಚಯ ಮಾಡಿಸಿ ಕೊಟ್ಟನು.

ಅರವಿಂದರ ತಂದೆ ಡಾಕ್ಟರ್ ಕೃಷ್ಣಧನ ಘೋಷರು. ತಾಯಿಯ ಹೆಸರು ಸ್ವರ್ಣಲತಾದೇವಿ. ಪಾಶ್ಚಾತ್ಯ ನಾಗರಿಕತೆಯಿಂದ ಪ್ರಭಾವಿತರಾಗಿದ್ದ ಕೃಷ್ಣಧನರು ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಕಳುಹಿಸಿದ್ದರು. ಮ್ಯಾಂಚೆಸ್ಟರ್‌ನಲ್ಲಿದ್ದ ಡ್ಯೂವೆಟ್ ದಂಪತಿಗಳ ಬಳಿ ಅವರನ್ನು ಇಟ್ಟಿದ್ದರು.

ಅರವಿಂದರು ತಮ್ಮ ಸಹೋದರರಾದ ವಿನಯಭೂಷಣ ಮತ್ತು ಮನಮೋಹನರೊಡನೆ ಇಂಗ್ಲೆಂಡಿನ ಶಾಲೆಗೆ ಸೇರಿ ಇಂಗ್ಲಿಷ್ ಸಾಹಿತ್ಯದ ಜತೆಗೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿತು ಅವುಗಳಲ್ಲಿ ಪಾಂಡಿತ್ಯ ಗಳಿಸಿದರು.

ಆಗಿನ ಕಾಲದಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಒಬ್ಬ ಯುವಕ ಉತ್ತೀರ್ಣನಾದರೆ ಅವನ ಭಾಗ್ಯದ ಬಾಗಿಲು ತೆರೆದಂತೆ ಎಂದು ಜನ ಎನ್ನುತ್ತಿದ್ದರು. ಅವನಿಗೆ ಭಾರತ ಸರಕಾರದಲ್ಲಿ ಬಹು ದೊಡ್ಡ ಕೆಲಸ ಸಿಕ್ಕುತ್ತಿತ್ತು. ಅರವಿಂದರು ತಮ್ಮ ಹದಿನೆಂಟನೆ ವಯಸ್ಸಿನಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಕುಳಿತು ತೇರ್ಗಡೆಯಾಗಿದ್ದರು. ಆದರೆ ಆ ಪರೀಕ್ಷೆಗೆ ಅಗತ್ಯವಾಗಿದ್ದ ಕುದುರೆ ಸವಾರಿಯಲ್ಲಿ ಮಾತ್ರ ಅನುತ್ತೀರ್ಣರಾಗಿದ್ದರು.

ಅರವಿಂದರು ಕುದುರೆ ಸವಾರಿಯಲ್ಲಿ ಹಿಂದೆ ಉಳಿಯಲು ಅವರಿಗಿದ್ದ ರಾಷ್ಟ್ರಪ್ರೇಮ ಕಾರಣವಾಗಿತ್ತು. ಐ.ಸಿ.ಎಸ್. ಪರೀಕ್ಷೆಯಲ್ಲಿ ತಾವು ತೇರ್ಗಡೆಯಾಗಿ ಭಾರತಕ್ಕೆ ಮರಳಿ ಇಂಗ್ಲಿಷ್ ಸರಕಾರದ ಕೈಕೆಳಗೆ ಅಧಿಕಾರಿಯಾಗಿ ಸೇವೆ ಸಲ್ಲಿಸುವುದು ಅವರಿಗೆ ಇಷ್ಟವಿರಲಿಲ್ಲ. ಅವರು ಇಂಗ್ಲೆಂಡಿನಲ್ಲಿ ಓದುತ್ತಿರುವಾಗಲೇ ಕಮಲ ಮತ್ತು ಕಠಾರಿ ಸಂಕೇತವುಳ್ಳ ಕ್ರಾಂತಿಕಾರರ ಒಂದು ರಹಸ್ಯ ಸಂಘಕ್ಕೆ ಸೇರಿದ್ದರು. ಅವರು ಭಾರತಕ್ಕೆ ಹಿಂದಿರುಗಿದ ಮೇಲೆ ರಾಷ್ಟ್ರೀಯ ಅಂದೋಳನದಲ್ಲಿ ಭಾಗವಹಿಸಿ ದೇಶದ ಬಿಡುಗಡೆಗಾಗಿ ಹೋರಾಡಬೇಕೆಂದು ನಿಶ್ಚಯಿಸಿದ್ದರು.

ಇಂಥ ಸಮಯದಲ್ಲಿ ಲಂಡನ್ನಿಗೆ ಬಂದಿದ್ದ ಬರೋಡೆಯ ಮಹಾರಾಜ ಸಯ್ಯಾಜಿರಾವ್ ಗಾಯಕವಾಡರನ್ನು ಅವರು ಸಂದರ್ಶಿಸಿದ್ದರು. ಗಾಯಕವಾಡರು ಭಾರತದ ದೇಶೀಯ ಸಂಸ್ಥಾನಗಳಲ್ಲೇ ಸ್ವಾತಂತ್ರ್ಯಾಕಾಂಕ್ಷಿ ಸ್ವಾಭಿಮಾನಿ ರಾಜರೆಂದು ತಿಳಿದಿತ್ತು. ಇಂಥವರ ಬಳಿಯಲ್ಲಿ ತಾವು ನೌಕರಿಗೆ ಸೇರಿದರೆ ತಮ್ಮ ಬಾಳಿನ ಆದರ್ಶವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದೆಂದು ಊಹಿಸಿ ಅರವಿಂದರು ಈ ಶ್ರೀಮಂತ ಹೋಟೆಲಿನಲ್ಲಿ ಅವರನ್ನು ನೋಡಲು ಬಂದಿದ್ದರು. ದೊರೆ ಗಾಯಕವಾಡರಿಗೆ ಪ್ರತಿಭೆಯನ್ನು ಗುರುತಿಸುವ ಕಲೆ ಹಸ್ತಗತವಾಗಿತ್ತು. ಅರವಿಂದರ ಪ್ರತಿಭಾಪೂರ್ಣ ಕಣ್ಣುಗಳನ್ನು ನೋಡುತ್ತಲೇ ಅವರ ವ್ಯಕ್ತಿತ್ವವನ್ನೂ, ಅಸಾಧಾರಣ ಪ್ರತಿಭೆಯನ್ನೂ ಗುರುತಿಸಿದರು. ಅವರು ಅರವಿಂದರನ್ನು ಭಾರತಕ್ಕೆ ಹಿಂದಿರುಗಿ ಬಂದ ಮೇಲೆ ತಮ್ಮ ರಾಜ್ಯದಲ್ಲಿ ಕೆಲಸ ಕೊಡುವುದಾಗಿ ಆಶ್ವಾಸನವಿತ್ತು ಬೀಳ್ಕೊಟ್ಟರು.

ಅದರಂತೆ ಅರವಿಂದರು ವಿದೇಶದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಭಾರತಕ್ಕೆ ಹಿಂದಿರುಗಿ ಗಾಯಕವಾಡರನ್ನು ಭೇಟಿ ಮಾಡಿದರು. ಅವರು ತಮ್ಮ ಮಾತಿನಂತೆ ಅರವಿಂದ ಘೋಷರಿಗೆ ನೌಕರಿ ಕೊಟ್ಟರು. ಹೀಗೆ ಅವರು ಬರೋಡಾ ರಾಜ್ಯದಲ್ಲಿ ಹದಿಮೂರು ವರ್ಷಗಳ ಕಾಲ ನೌಕರಿ ಮಾಡಿದರು.

ಮೊದಲು ರಾಜ್ಯದ ಕಂದಾಯದ ಇಲಾಖೆಯಲ್ಲಿ ಕೆಲಸ ಮಾಡಿದರು. ಅನಂತರ ಸೆಕ್ರೆಟರಿಯೇಟ್‌ನಲ್ಲಿ ದುಡಿದರು. ತಮ್ಮ ಒಲವು ಶಿಕ್ಷಣ ಕ್ಷೇತ್ರದಲ್ಲಿ ಇದ್ದುದರಿಂದ ಮಹಾರಾಜರ ಮನವೊಲಿಸಿಕೊಂಡು ಬರೋಡಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. ಮುಂದೆ ಆ ಕಾಲೇಜಿನ ವೈಸ್ ಪ್ರಿನ್ಸಿಪಾಲರೂ ಆದರು. ಆದರೆ ಅರವಿಂದ ಘೋಷರು ಕಡೆತನಕ ಅಲ್ಲಿ ಉಳಿದಿರಲಿಲ್ಲ.

ಅವರು ನೌಕರಿಯಲ್ಲಿದ್ದಾಗಲೇ ದೇಶದ ರಾಜಕೀಯವು ಅವರನ್ನು ತನ್ನ ಸುಳಿಯೊಳಗೆ ಎಳೆದುಕೊಂಡಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಹಂಬಲಿಸುತ್ತಿದ್ದರು. ಅವರು ರಾಜಕೀಯ ಲೇಖನಗಳನ್ನು ಬರೆಯಲಾರಂಭಿಸಿದ್ದರು. ಕಡೆಗೆ ದೇಶದ ಕರೆಯನ್ನು ಮನ್ನಿಸಿ ಅನುಕೂಲವಾಗಿದ್ದ ನೌಕರಿಯನ್ನು ಬಿಟ್ಟು ಬರೋಡೆಯ ಗಾಯಕವಾಡರಿಂದ ಬೀಳ್ಕೊಂಡು, ಬಂಗಾಳಕ್ಕೆ ಬಂದರು. ಅಲ್ಲಿ ದೇಶಭಕ್ತರು ಸ್ಥಾಪಿಸಿದ ಕಾಲೇಜಿಗೆ ಸೇರಿದರು. ಮುಂದೆ ವೃತ್ತಪತ್ರಿಕಾ ಕ್ಷೇತ್ರವನ್ನು ಪ್ರವೇಶಿಸಿದರು. ದೇಶ ಸೇವೆಯ ವ್ರತವನ್ನು ಸ್ವೀಕರಿಸಿದರು. ಮುಂದೆ ಅವರ ಒಲವು ವೈರಾಗ್ಯದ ಕಡೆಗೆ ಹರಿದು, ಅವರು ಪಾಂಡಿಚೇರಿ ಯನ್ನು ಸೇರಿದರು.

ಹೀಗೆ ಅರವಿಂದರ ವ್ಯಕ್ತಿತ್ವವು ಅರಳಲು ಬೇಕಾದ ಭೂಮಿಕೆಯನ್ನು ಒದಗಿಸಿದವರೇ ಗಾಯಕವಾಡರೆಂದರೆ ಅವರ ಹಿರಿಮೆ ಎಂಥದು?

ಅಂಬೇಡಕರರಿಗೆ ನೆರವು

ಮನುಷ್ಯರ ಪ್ರತಿಭೆಯನ್ನು ಗುರುತಿಸಿ ಸಹಾಯ ಮಾಡುವುದರಲ್ಲಿ ಗಾಯಕವಾಡರು ಸಿದ್ಧಹಸ್ತರು. ಇದಕ್ಕೆ ಇನ್ನೊಂದು ಉದಾಹರಣೆ ಅಂಬೇಡಕರರಿಗೆ ಕೊಟ್ಟ ಪ್ರೋತ್ಸಾಹ. ಅಂಬೇಡಕರರು ಸ್ವತಂತ್ರ ಭಾರತದ ರಾಜ್ಯಾಂಗವನ್ನು ರೂಪಿಸಿದ ಮಹಾಶಿಲ್ಪಿಗಳಲ್ಲಿ ಒಬ್ಬರು. ಅಲ್ಲದೆ ಹಿಂದೂ ಕೋಡ್ ಮಸೂದೆಯ ನಿರ್ಮಾತೃ ಎಂದು ಹೆಸರು ಪಡೆದವರು. ಇಂಥ ಪ್ರತಿಭಾವಂತರನ್ನು ಚಿಕ್ಕವಯಸ್ಸಿನಲ್ಲೆ ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಟ್ಟವರಲ್ಲಿ ಗಾಯಕವಾಡರು ಮೊದಲಿಗರಾಗಿದ್ದರು.

ಭೀಮರಾವ್ ಅಂಬೇಡಕರರು ಮಹರ್ ಎಂಬ ಹಿಂದುಳಿದ ಪಂಗಡಕ್ಕೆ ಸೇರಿದ್ದರು. ಇವರನ್ನು ಅಸ್ಪ ಶ್ಯರಂತೆ ಆ ಕಾಲದ ಜನ ನಡೆಸಿಕೊಂಡಿದ್ದರು. ಅಂಬೇಡಕರರು ತಂದೆಗೆ ಹದಿನಾಲ್ಕನೇ ಮಗ. ಸಮಾಜದ ತಿರಸ್ಕಾರಕ್ಕೆ ಗುರಿಯಾಗಿದ್ದರೂ ಬಹಳ ಕಷ್ಟಪಟ್ಟು ಮೆಟ್ರಿಕ್ಯುಲೇಷನ್ ಮುಗಿಸಿದರು. ಮುಂದೆ ಅವರಿಗೆ ಬಿ.ಎ. ಪದವಿಯೂ ದೊರಕಿತು.

ಒಂದು ದಿನ ಯುವಕ ಅಂಬೇಡಕರರ ಭಾಗ್ಯದ ಬಾಗಿಲು ತೆರೆಯಿತು. ಆ ದಿನ ನೌಕರಿಗಾಗಿ ಪ್ರಯತ್ನಿಸಿ ಬೇಸತ್ತು, ಹಣವಿಲ್ಲದಿದ್ದುದರಿಂದ ಬೊಗಸೆ ನೀರು ಕುಡಿದು ತೃಪ್ತಿ ಹೊಂದಿ, ಹೊತ್ತು ಕಳೆಯಲು ಅಲ್ಲಿನ ಗ್ರಂಥ ಭಂಡಾರಕ್ಕೆ ಹೋಗಿ ಯಾವುದೋ ಗ್ರಂಥವನ್ನು ಓದುತ್ತಾ ಕುಳಿತಿದ್ದರು.

ಅವರ ಸುದೈವದಿಂದ ಆ ದಿನ ಗಾಯಕವಾಡರು ಯಾವುದೋ ಗ್ರಂಥದ ಸಲುವಾಗಿ ಪಬ್ಲಿಕ್ ಲೈಬ್ರರಿಗೆ ಬಂದಿದ್ದರು.

ಪುಸ್ತಕದಲ್ಲಿ ಮಗ್ನರಾಗಿದ್ದ ಅಂಬೇಡಕರರು ತಲೆ ಎತ್ತಿ ನೋಡಲೂ ಇಲ್ಲ. ಎದ್ದು  ನಿಲ್ಲಲೂ ಇಲ್ಲ. ಇದರಿಂದ ಕುಪಿತರಾದ ಗ್ರಂಥಪಾಲರು ಅವರನ್ನು ತಿವಿದು ಎಬ್ಬಿಸಲು ಪ್ರಯತ್ನಿಸಿದರು. ಗಾಯಕವಾಡರೇ ಮುಂದೆ ಬಂದು ತಡೆದರು. ವಿಶಾಲಮನಸ್ಸಿನಿಂದ ಕೂಡಿದ ಗಾಯಕವಾಡರು ಅಂಬೇಡಕರರನ್ನು ಕರೆಸಿಕೊಂಡು ಅವರ ಬಗೆಗೆ ಎಲ್ಲವನ್ನೂ ವಿಚಾರಿಸಿಕೊಂಡರು. ಅಂಬೇಡಕರರು ಗಾಯಕವಾಡರಲ್ಲಿ ತಮ್ಮ ಬಡತನದ ಕಥೆಯನ್ನು ತೋಡಿಕೊಂಡರು. ಅವರಿಗೆ ವಿದ್ಯಾಭ್ಯಾಸವನ್ನು ಮುಂದುವರಿಸುವ ಇಚ್ಛೆ ಇರುವುದರನ್ನು ಅರಿತು ಗಾಯಕವಾಡರು ಈ ಪ್ರತಿಭಾಶಾಲಿಯಾದ ಯುವಕನಿಗೆ ವಿದ್ಯಾರ್ಥಿವೇತನವಿತ್ತು ಉನ್ನತವ್ಯಾಸಂಗಕ್ಕೆ ಪರದೇಶಕ್ಕೆ ಕಳುಹಿಸಿಕೊಟ್ಟರು.

ಅಂಬೇಡಕರರು ಅಮೆರಿಕೆಯಲ್ಲಿ ವ್ಯಾಸಂಗ ಮುಂದುವರೆಸಿ ಎಂ.ಎ. ಪದವಿಯನ್ನು ಪಡೆದರು. ಅನಂತರ ಇಂಗ್ಲೆಂಡಿಗೂ ಹೋಗಿ ನ್ಯಾಯವಾದಿ ಆಗಿ ಭಾರತಕ್ಕೆ ಹಿಂದಿರುಗಿದರು. ದೇಶದ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು.

ಮುಂದೆ ಭಾರತವು ಸ್ವತಂತ್ರವಾದ ಮೇಲೆ ಅದರ ಸಂವಿಧಾನವನ್ನು ರೂಪಿಸುವ ಹೊಣೆಗಾರಿಕೆ ಅಂಬೇಡಕರರ ಮೇಲೆ ಬಿದ್ದಿತು. ಹೀಗೆ ಗಾಯಕವಾಡರ ಮುಂದಾಲೋಚ ನೆಯ ಫಲವಾಗಿ ರಾಷ್ಟ್ರನಾಯಕನೊಬ್ಬನು ಭಾರತಕ್ಕೆ ದೊರಕುವಂತೆ ಆಯಿತು.

ಬರೋಡೆಯ ಭಾಗ್ಯಶಿಲ್ಪಿ

ಇಂಥ ಸಯ್ಯಾಜಿರಾವ್ ಗಾಯಕವಾಡರು ಹಿಂದಿನ ಬರೋಡ ರಾಜ್ಯದ ಜನಪ್ರಿಯ ದೊರೆಗಳಾಗಿದ್ದರು. ಅವರು ಅರವತ್ತನಾಲ್ಕು ವರ್ಷಗಳ ಕಾಲ (೧೮೭೫-೧೯೩೯) ಬರೋಡೆಯನ್ನು ಆಳಿ ಅದನ್ನು ಭಾರತದ ಅತ್ಯಂತ ಮುಂದುವರೆದ ಆಶ್ರಿತ ಸಂಸ್ಥಾನಗಳಲ್ಲಿ ಒಂದಾಗಿ ಪರಿವರ್ತಿಸಿ ಆಧುನಿಕ ಬರೋಡೆಯ ಭಾಗ್ಯಶಿಲ್ಪಿಯಾದರು.

ಇಂದಿನ ಗುಜರಾತ್ ರಾಜ್ಯದೊಳಗೆ ಸಮಾವೇಶಗೊಂಡಿರುವ ಬರೋಡಾ ರಾಜ್ಯವು ಸಯ್ಯಾಜಿರಾಯರ ಕಾಲದಲ್ಲಿ ವಿಸ್ತಾರವಾದ ರಾಜ್ಯವಾಗಿತ್ತು. ಅದು ಸುಮಾರು ಇಪ್ಪತ್ತೆ ದು ಲಕ್ಷ ಜನಸಂಖ್ಯೆಯನ್ನು ಪಡೆದಿತ್ತು. ಅಜ್ಞಾತವಾಗಿದ್ದ ದೇಸೀ ರಾಜ್ಯವೊಂದನ್ನು ಸಯ್ಯಾಜಿರಾವ್ ಗಾಯಕವಾಡರು ಭಾರತದಲ್ಲೆಲ್ಲ ಸಂಪನ್ನ ರಾಜ್ಯಗಳಲ್ಲಿ ಒಂದಾಗಿ ಪರಿವರ್ತಿಸಿದ್ದರು. ಅವರ ಪ್ರತಿಭೆ, ಆಡಳಿತ ದಕ್ಷತೆ, ಪ್ರಗತಿಪರ ವಿಚಾರಗಳು ಅವರನ್ನು ನವಭಾರತದ ಶಿಲ್ಪಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಅವರು ತಮ್ಮ ರಾಜ್ಯದಲ್ಲಿ ಮೇಲಿಂದ ಮೇಲೆ ಸಂಚರಿಸಿ, ಪ್ರಜೆಗಳ ಕಷ್ಟ ಸುಖಗಳನ್ನು ಖುದ್ದು ವಿಚಾರಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ಅವರು ವೇಷಾಂತರದಲ್ಲಿ ಸಂಚರಿಸುತ್ತಾ ಜನರ ಕುಂದು ಕೊರತೆಗಳನ್ನು ವಿಚಾರಿಸಿಕೊಂಡು ಶೀಘ್ರಪರಿಹಾರ ಕಲ್ಪಿಸುತ್ತಿದ್ದರಂತೆ. ಅವರು ದೀನದಲಿತರ ಉದ್ಧಾರಕ್ಕಾಗಿ ಅದರಲ್ಲೂ ಸ್ತ್ರೀಯರ ಏಳಿಗೆಗಾಗಿ ಬಹುವಾಗಿ ಶ್ರಮಿಸಿದ ಮಹಾನುಭಾವರು.

ಸಯ್ಯಾಜಿರಾವ್ ಗಾಯಕವಾಡರ ಆಳ್ವಿಕೆಯ ಅವಧಿಯಲ್ಲಿ ರಾಜ್ಯದಲ್ಲಿ ಉಂಟಾದ ಸರ್ವತೋಮುಖ ಪ್ರಗತಿಗೆ ಈ ಕೆಳಗಿನ ವಿವರಗಳು ದಿಕ್ಸೂಚಿಯಂತಿವೆ. ಇಂಗ್ಲಿಷ್ ಶಾಲೆಗಳು ೧೮೮೧ ರಲ್ಲಿ ೧೩ ಇದ್ದುದ್ದು ೧೯೩೯ ರಲ್ಲಿ  ೧೨೮ಕ್ಕೆ ಏರಿದವು. ದೇಶೀ ಶಾಲೆಗಳು ೧೮೮೧ ರಲ್ಲಿ ೨೦೪; ೧೯೩೯ ರಲ್ಲಿ ೨,೪೧೪. ಪುಸ್ತಕ ಭಂಡಾರಗಳು ೧೮೮೧ ರಲ್ಲಿ ಒಂದು. ೧೯೩೯ರಲ್ಲಿ ೧೫೦೪. ಸಹಕಾರ ಸಂಘಗಳು ೧೮೮೧ ರಲ್ಲಿ ಒಂದೂ ಇರಲಿಲ್ಲ. ೧೯೩೯ ರಲ್ಲಿ ೧೦೨೫. ಗ್ರಾಮ ಪಂಚಾಯಿತಿಗಳು ೧೮೮೧ ರಲ್ಲಿ ಒಂದೂ ಇರಲಿಲ್ಲ. ೧೯೩೯ ರಲ್ಲಿ ೨೧೦೪. ರೈಲ್ವೆ ಮಾರ್ಗ ಮೊದಲು ೬೦ ಮೈಲಿ ಇದ್ದದ್ದು ೭೨೩ ಮೈಲಿಗಳಿಗೆ ವಿಸ್ತರಿಸಿತು.

ಹೀಗೆ ರಾಜ್ಯವು ಅವರ ದಕ್ಷ ಆಡಳಿತದಲ್ಲಿ ಎಲ್ಲ ರೀತಿಯಲ್ಲಿ ಪ್ರಗತಿಯನ್ನು ಸಾಧಿಸಿತು. ಅವರು ತಮ್ಮ ಅಧಿಕಾರಾವಧಿಯ ನಾಲ್ಕು ದಶಕಗಳಲ್ಲಿ ಸಹಸ್ರಾರು ರಾಜಾಜ್ಞೆಗಳನ್ನು ಜಾರಿಗೆ ತಂದು ಪ್ರಜೆಗಳ ಕಷ್ಟಗಳನ್ನು ಬಗೆಹರಿಸಲೆತ್ನಿಸಿದರು. ಬರೋಡಾ ರಾಜ್ಯದಲ್ಲಿ ಬಹು ಸಂಖ್ಯಾತರು ಹಿಂದುಳಿದ ಕೋಮಿನವರು. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಅತ್ಯಲ್ಪ. ಅವರು ದೈನ್ಯವೇ ಮೂರ್ತಿವೆತ್ತಂತೆ ಜೀವಿಸುತ್ತಿದ್ದರು. ಒಮ್ಮೆ ಅಸ್ಪ ಶ್ಯತೆಯ ಪಿಡುಗಿನ ಬಗ್ಗೆ ಮಾತನಾಡುತ್ತಾ ಗಾಯಕವಾಡರು ಹೀಗೆ ಹೇಳಿದರು!

‘ಅಸ್ಪ ಶ್ಯತೆಯ ಬಗೆಗೆ ಉದ್ವಿಗ್ನಗೊಳ್ಳದೆ ಮಾತನಾಡಲು ಸಾಧ್ಯವಿಲ್ಲ. ಯಾರನ್ನು ನಮ್ಮ ಸಹೋದರ ಸಹೋದರಿಯರೆಂದು ಭಾವಿಸಿಕೊಳ್ಳಬೇಕಾಗಿದ್ದಿತೋ ಅಂಥವರನ್ನು ಕಲಂಕದಿಂದ ಹೆಸರಿಸುವುದು ನಮ್ಮ ಮಾನವತೆಗೇ ಹೀನಾಯ. ನನ್ನ ಹಾಗೂ ಸರಕಾರದ ದೃಷ್ಟಿಯಲ್ಲಿ ಮನುಷ್ಯ ಮನುಷ್ಯರಲ್ಲಿ ಯಾವುದೇ ಭೇದವಿರುವುದಿಲ್ಲ.’’

ಸಯ್ಯಾಜಿರಾವ್ ಗಾಯಕವಾಡರು ಇಂಥ ಉದಾತ್ತ ವಿಚಾರಗಳಿಂದ ತುಂಬಿದ್ದರು.

ಅಂದಿನ ಅರಸರ ನಡುವೆ

ಗಾಯಕವಾಡರು ರಾಷ್ಟ್ರ ಭಕ್ತರಲ್ಲಿ ಅಗ್ರಮಾನ್ಯರಾಗಿದ್ದರು. ತಮ್ಮ ಸಂಸ್ಥಾನದ ಆಡಳಿತದಲ್ಲಿ ನೆರವಾಗಲು ಬಹು ಸಮರ್ಥರನ್ನು ಆರಿಸಿಕೊಳ್ಳುವ ವಿವೇಚನೆ ಅವರದು. ದಾದಾಭಾಯಿ ನವರೋಜಿಯವರ ಸಮಾಲೋಚನೆಯಂತೆ ಆಡಳಿತ ನಡೆಸುತ್ತಿದ್ದರು. ದಕ್ಷ ಆಡಳಿತಗಾರರೆಂದು ಹೆಸರು ಪಡೆದಿದ್ದ ಟಿ. ಮಾದವ ರಾಯರು ಪ್ರಧಾನ ಸಚಿವರಾಗಿದ್ದರು. ಇವರಲ್ಲದೆ ಹಲವರು ಸಮರ್ಥ ಅಧಿಕಾರಿಗಳಿದ್ದರು.

ಗಾಯಕವಾಡರು ಅಧಿಕಾರಿಗಳಿಗೆ ರಾಜರತ್ನ, ರಾಜಮಿತ್ರ, ರಾಜ ದುರಂಧರ ಮುಂತಾದ ಬಿರುದುಗಳನ್ನಿತ್ತು ಪ್ರೋತ್ಸಾಹಿಸುತ್ತಿದ್ದರು.

ಗಾಯಕವಾಡರು ಮಹಾರಾಜರಾಗಿದ್ದ ಕಾಲದಲ್ಲಿ ಭಾರತದಲ್ಲಿ ಆರುನೂರಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಕೆಲವು-ಹೈದರಾಬಾದ್, ಮೈಸೂರು, ತಿರುವಾಂಕೂರು ಗಳಂತೆ-ದೊಡ್ಡ ರಾಜ್ಯಗಳು; ಕೆಲವೇ ಚದರ ಮೈಲಿಗಳಷ್ಟಿದ್ದ ಸಂಸ್ಥಾನಗಳೂ ಇದ್ದವು. ಇವುಗಳನ್ನಾಳುತ್ತಿದ್ದ ರಾಜ ಮಹಾರಾಜರುಗಳು ನವಾಬರುಗಳು ಬ್ರಿಟಿಷರ ಅಧೀನರಾಗಿದ್ದರು, ಆದರೆ ರಾಜ್ಯದೊಳಗೆ ಆಡಳಿತದಲ್ಲಿ ಬೇಕಾದಷ್ಟು ಸ್ವಾತಂತ್ರ್ಯವಿತ್ತು. ಇವರಲ್ಲಿ ಬಹು ಮಂದಿ ಪ್ರಜೆಗಳಿಂದ ಬಂದ ತೆರಿಗೆಯ ಹಣವನ್ನು ತಮ್ಮ ಸುಖಕ್ಕಾಗಿ ಮನಸ್ಸು ಬಂದಂತೆ ಖರ್ಚು ಮಾಡುತ್ತಿದ್ದವರು. ಲೆಖ್ಖಾಚಾರವಿಲ್ಲದೆ ಕುಡಿತ, ಜೂಜು, ತಮಗೆ ತಮ್ಮ ಹೆಂಡತಿಯರಿಗೆ ತಮಗೆ ಬೇಕಾದವರಿಗೆ ಒಡವೆ ಮತ್ತು ವಸ್ತ್ರ, ಅರಮನೆಗಳು ಇವುಗಳಿಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಖಜಾನೆ ಬರಿದು ಮಾಡುತ್ತಿದ್ದವರು ಬಹು ಮಂದಿ. ಒಬ್ಬ ನವಾಬನಂತೂ ಅರಮನೆಯ ಎರಡು ನಾಯಿಗಳ ಮದುವೆಗೆ ಇಡೀ ಸಂಸ್ಥಾನಕ್ಕೆ ರಜಾಕೊಟ್ಟು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ. ಬ್ರಿಟಿಷರೂ ಬಹು ಮಟ್ಟಿಗೆ ಈ ರಾಜ-ನವಾಬರುಗಳನ್ನು ಅವರ ಪಾಡಿಗೆ ಬಿಟ್ಟಿರುತ್ತಿದ್ದರು.

ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರು, ಬರೋಡದ ಸಯ್ಯಾಜಿಹಾವ್ ಗಾಯಕವಾಡರು ಇಂತಹವರ ಆಡಳಿತದ ರೀತಿಯ ಬೆಲೆ ಕಟ್ಟುವಾಗ ಇದನ್ನು ನೆನಪಿನಲ್ಲಿಡಬೇಕು. ಸಯ್ಯಾಜಿರಾವ್ ಅವರು ಸಿಂಹಾಸನಕ್ಕೆ ಬಂದಾಗ ಬರೋಡ ಭಾರತದಲ್ಲಿ ಅತ್ಯಂತ ಹಿಂದುಳಿದ ಸಂಸ್ಥಾನಗಳಲ್ಲಿ ಒಂದಾಗಿತ್ತು. ಅವರು ತೀರಿಕೊಳ್ಳುವ ಕಾಲಕ್ಕೆ ಭಾರತದಲ್ಲಿ ಮೆಚ್ಚುವಂತೆ ಮುಂದುವರಿದ ಸಂಸ್ಥಾನಗಳಲ್ಲಿ ಒಂದಾಗಿತ್ತು.

ಗಾಯಕವಾಡ ಮನೆತನ

ಸ್ವಾತಂತ್ರ್ಯವೀರ ಶಿವಾಜಿಯ ನಂತರ ತಲೆ ಎತ್ತಿದ ಮರಾಠರಾಜ್ಯವು ಪೇಷ್ವೆಗಳ ಕಾಲದಲ್ಲಿ ಭಾರತದ ಅನೇಕ ಭೂಭಾಗಗಳನ್ನು ಒಳಗೊಂಡು ಸಾಮ್ರಾಜ್ಯವಾಗಿ ಬೆಳೆದಿತ್ತು. ಮರಾಠ ದಂಡು ಹಣದ ಅಗತ್ಯವಾದಾಗಲೆಲ್ಲ ಸಂಪದ್ಭರಿತವಾದ ಗುಜರಾತು ಪ್ರದೇಶಕ್ಕೆ ದಾಳಿಯಿಟ್ಟು ಕೈಗೆ ಸಿಕ್ಕಿದುದನ್ನು ದೋಚಿ ಹಿಂದಿರುಗುತ್ತಿತ್ತು.

೧೭೨೧ ರಲ್ಲಿ ದಾಮಾಜಿರಾವ್ ಗಾಯಕವಾಡ ನೆಂಬುವನು ಸಾಹು ಛತ್ರಪತಿಯ ಆದೇಶದಂತೆ ಆ ಪ್ರದೇಶದಲ್ಲಿ ಚೌತಾಯ ಹೆಸರಿನ ಕಂದಾಯವನ್ನು ಎತ್ತಿ ಸಂಷೇರ್ ಬಹುದ್ದೂರ್‌ನೆನಿಸಿದನು. ೧೭೬೧ ರಲ್ಲಿ ನಡೆದ ೩ನೇ ಪಾಣಿಪತ್ ಯುದ್ಧದಲ್ಲಿ ಮರಾಠಾ ರಾಜ್ಯವು ಕುಸಿದು ಬೀಳಲು ಗಾಯಕವಾಡ ವಂಶದ ದಾಮಾಜಿಯು ಗುಜರಾತಿಗೆ ಹಿಂದಿರುಗಿ ಸ್ವತಂತ್ರನಾದನು.

ಈ ವಂಶದ ದೊರೆಗಳಲ್ಲಿ ಒಬ್ಬ ಮಲ್ಹಾರಿರಾಯ. ಅವನ ಕಾಲದಲ್ಲಿ ದೇಶದಲ್ಲಿ ಅರಾಜಕತೆ ಉಂಟಾಯಿತು. ಇಂಗ್ಲಿಷರು ಅವನಿಂದ ರಾಜ್ಯವನ್ನು ಕಿತ್ತುಕೊಂಡು ತಮ್ಮದು ಮಾಡಿಕೊಂಡು ರೀಜೆಂಟನನ್ನು ನೇಮಿಸಿದರು.

ಗಂಡು ಮಕ್ಕಳಿಲ್ಲದ ರಾಣಿ ಜಮುನಾಬಾಯಿಯು ಇಂಗ್ಲಿಷರ ಸಲಹೆಯಂತೆ ಬೇರೆ ವಂಶದ ಬಾಲಕನನ್ನು ದತ್ತು ತೆಗೆದುಕೊಳ್ಳಬೇಕಾಯಿತು. ಹೀಗೆ ದತ್ತು ಪುತ್ರನಾಗಿ ಬಂದವನೇ ಗೋಪಾಲರಾಯ. ಇವನೇ ಮುಂದೆ ಸಿಂಹಾಸನವನ್ನೇರಿ ಮುಮ್ಮಡಿ ಸಯ್ಯಾಜಿರಾವ್ ಗಾಯಕವಾಡನೆಂದು ಕೀರ್ತಿಶಾಲಿಯಾದನು.

ಹಳ್ಳಿಯ ಹುಡುಗ

ಸಾಮಾನ್ಯಹಳ್ಳಿಯಲ್ಲಿ ಅಜ್ಞಾತನಾಗಿ ಹುಟ್ಟಿದ ಓದುಬರಹಬಾರದಿದ್ದ ಒಬ್ಬ ಬಾಲಕನು ವಿಸ್ತಾರವಾದ ರಾಜ್ಯಕ್ಕೆ ಅಧಿಪತಿಯಾದುದು ಹೀಗೆ. ದೈವಾನುಗ್ರಹಕ್ಕೆ ಪಾತ್ರನಾಗಿದ್ದ ಈ ಬಾಲಕನು ಬರೋಡಾ ರಾಜ್ಯದ ನವ ನಿರ್ಮಾಪಕನೆನಿಸಿದುದು ಒಂದು ದೈವಯೋಗವೇ ಸರಿ.

ಬರೋಡ ಸಂಸ್ಥಾನಕ್ಕೆ ಸೇರಿದಂತೆ ಕವಲನ ಎಂಬ ಹಳ್ಳಿ ಇತ್ತು. ಇಲ್ಲಿ ಕಾಶಿರಾಯನೆಂಬ ಮರಾಠ ವಂಶಸ್ಥನು ತನ್ನ ಪತ್ನಿ ಉಮಾಬಾಯಿ ಎಂಬುವಳೊಂದಿಗೆ ಜೀವಿಸುತ್ತಿದ್ದನು. ಸಾಕಷ್ಟು ಅನುಕೂಲವಂತರಾಗಿದ್ದ ಈ ದಂಪತಿಗಳಿಗೆ ಊರಿನಲ್ಲಿ ಗೌರವಾದರಗಳು ಇದ್ದವು. ಇವರು ಆಶ್ರಿತವತ್ಸಲರೂ, ದಯಾವಂತರೂ ಆಗಿದ್ದರು. ಅತಿಥಿಸತ್ಕಾರಕ್ಕೆ ಇವರ ಮನೆ ಎತ್ತಿದ ಕೈಯ್ಯಾಗಿತ್ತು.

ಬಹಳ ಕಾಲ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಅವರು ಮಾಡಿದ ಯಾತ್ರೆಯ ಫಲದಿಂದ ಒಂದು ಗಂಡು ಮಗು ಜನಿಸಿತು. ಇವನಿಗೆ ತಾಯಿತಂದೆಗಳು ಆನಂದರಾಯನೆಂದು ಹೆಸರಿಟ್ಟರು. ಈ ಬಾಲಕನು ವೃದ್ಧಿಚಂದ್ರನಂತೆ ಬೆಳೆದು ಎಲ್ಲರನ್ನು ಸಂತೋಷಪಡಿಸಿದನು. ಇವನು ಹುಟ್ಟಿದಮೇಲೆ ಐದುವರ್ಷದ ನಂತರ ಉಮಾಬಾಯಿಯು ಮತ್ತೆ ಗರ್ಭಿಣಿಯಾದಳು. ನವಮಾಸಗಳು ತುಂಬಿ ೧೮೬೩ ನೆ ಮಾರ್ಚಿ ತಿಂಗಳು ದಿನಾಂಕ ೧೧ ರಂದು ಒಂದು ತೇಜಸ್ವಿಯಾದ ಗಂಡು ಮಗುವಿಗೆ ಜನ್ಮವಿತ್ತಳು. ಈ ಮಗುವಿಗೆ ತಂದೆತಾಯಿಗಳು ಗೋಪಾಲನೆಂದು ಹೆಸರಿಟ್ಟರು.ಇವನು ತನ್ನ ಬಾಲಲೀಲೆಗಳಿಂದ ಎಲ್ಲರನ್ನು ಸಂತೋಷಪಡಿಸಿದನು. ಮನೆಗೆ ಮಣಿದೀಪವಾಗಿ ಬೆಳಗಿನ ಈ ಬಾಲಕನೇ ಮುಂದೆ ನಾಡಿನ ಶಿಲ್ಪಿಯಾಗುವ ಅದೃಷ್ಟವನ್ನು ಪಡೆದಿದ್ದನು. ಗೋಪಾಲರಾಯನು ಹುಟ್ಟಿದ ಎರಡು ವರ್ಷಗಳ ಅನಂತರ ಈ ತಾಯಿತಂದೆಗಳಿಗೆ ಸಂಪತ್‌ರಾಯನೆಂಬ ಮೂರನೆಯ ಮಗನು ಹುಟ್ಟಿದನು. ಹೀಗೆ ಕಾಶಿರಾಯ ದಂಪತಿಗಳು ತಮ್ಮ ಮೂವರು ಪುತ್ರರೊಂದಿಗೆ ನೆಮ್ಮದಿಯಿಂದ ಜೀವಿಸುತ್ತಿದ್ದರು.

ಇಮ್ಮಡಿ ಸಯ್ಯಾಜಿರಾವ್ ಗಾಯಕವಾಡನು ಒಳ್ಳೆಯ ದೊರೆಯಾಗಿದ್ದರೂ ಮುಂಬಯಿ ಪ್ರಾಂತದ ಇಂಗ್ಲಿಷ್ ಸರಕಾರದೊಂದಿಗೆ ಹಿತವೆನಿಸುವ ಸಂಬಂಧ ಪಡೆದಿರಲಿಲ್ಲ. ಅವನು ೧೮೪೭ ರಲ್ಲಿ ತೀರಿಕೊಳ್ಳಲು ಅವನ ನಂತರ ಅವನ ಮೂವರು ಮಕ್ಕಳು ಕ್ರಮವಾಗಿ ಸಿಂಹಾಸನವನ್ನೇರಿದರು. ಹಿರಿಯ ಪುತ್ರ ಗಣಪತಿರಾಯನು ಒಂಬತ್ತು ವರ್ಷ ರಾಜ್ಯವಾಳಿ ಮಡಿಯಲು ಅನಂತರ ಖಂಡೇರಾಯನೂ, ಅವನ ನಂತರ ಮಲ್ಹಾರಿರಾಯನೂ ಪಟ್ಟಕ್ಕೆ ಬಂದರು.

ಈ ಮಲ್ಹಾರಿರಾಯನ ಕಾಲದಲ್ಲಿ ಅರಮನೆ, ಆಸ್ಥಾನಗಳು ಒಳಸಂಚು, ದ್ವೇಷಾಸೂಯೆಗಳ ಹುತ್ತವಾಗಿದ್ದವು. ಅವನು ಈ ಅಂತಃಕಲಹಗಳಲ್ಲಿ ಆಡಳಿತ ನಡೆಸಲಾಗದೆ ಹಣ್ಣಾದನು. ಕಡೆಗೆ ಇಂಗ್ಲಿಷರಿಂದ ಮದರಾಸಿಗೆ ಗಡಿಪಾರಾದನು. ರಾಣಿ ಜಮುನಾಬಾಯಿಯು ರೆಸಿಡೆಂಟ್ ರಿಚರ್ಡ್ ಮೇಡೆಯ ಸಹಕಾರದಿಂದ ರಾಜ್ಯಸೂತ್ರ ಕೈಗೆ ತೆಗೆದುಕೊಂಡಳು. ಇವಳಿಗೆ ಗಂಡು ಸಂತಾನ ಇರಲಿಲ್ಲ. ರೆಸಿಡೆಂಟ್ ಹಾಗೂ ದಿವಾನರ ಸಲಹೆಯಂತೆ ಸಿಂಹಾಸನಕ್ಕೆ ಯೋಗ್ಯನಾದ ಬಾಲಕನನ್ನು ದತ್ತು ತೆಗೆದುಕೊಂಡಳು. ಅವರ ದೃಷ್ಟಿಗೆ ಕಾಶೀರಾವ್ ಮತ್ತು ಉಮಾಬಾಯಿಯವರ ಪುತ್ರ ಗೋಪಾಲರಾಯನು ಯೋಗ್ಯ ಬಾಲಕನಾಗಿ ಕಂಡನು. ಅವನನ್ನು ದತ್ತು ಸ್ವೀಕರಿಸಿ ೧೮೭೪ ಮೇ ೨೭ ನೇ ದಿನಾಂಕ ದೊರೆಯಾಗಿ ಘೋಷಿಸಲಾಯಿತು.

ವಿದ್ಯಾಭ್ಯಾಸ

ಕಲವನವು ಸುಮಾರು ನೂರು ನೂರೈವತ್ತು ಮನೆಗಳ ಒಂದು ಕುಗ್ರಾಮವಾಗಿತ್ತು. ಅಲ್ಲಿ ಎರಡು ಸಣ್ಣ ದೇವಾಲಯಗಳು ಇದ್ದವು. ಸಮೀಪದಲ್ಲಿ ಸಣ್ಣದೊಂದು ತೊರೆಯು ಹರಿಯುತ್ತಿತ್ತು. ಯಥೇಚ್ಛವಾಗಿ ಹಾಲು ಮೊಸರುಗಳು ದೊರಕುತ್ತಿದ್ದವು. ಇಲ್ಲಿ ಗೆಳೆಯರೊಡನೆ ಖೊಖೋ, ಗೋಲಿ, ಚಿನ್ನಿದಾಂಡು ಮುಂತಾದ ಆಟಗಳನ್ನು ಆಡುತ್ತಾ, ನದಿಯಲ್ಲಿ ಈಜುತ್ತಾ, ಸೋಮಾರಿಯಾಗಿ, ಓದುಬರಹವಿಲ್ಲದೆ ಉಂಡಾಡಿಯಾಗಿ ತಿರುಗುತ್ತಿದ್ದ ಬಾಲಕ ಗೋಪಾಲರಾಯನಿಗೆ ಈಗ ಹೊಸಜೀವನ ತೆರೆದಿತ್ತು. ಅವನು ಹೊಸ ಲೋಕಕ್ಕೆ ಬಂದಿದ್ದನು.

ಅಕ್ಷರ ಗಂಧವಿಲ್ಲದೆ ಇದ್ದ ಅವನಿಗೆ ದೊರೆಯಾದ ಮೇಲೆ ಅಕ್ಷರಾಭ್ಯಾಸಕ್ಕೆ ಆರಂಭ. ಅರಮನೆಯಲ್ಲಿ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಯಿತು. ಯೋಗ್ಯರಾದ ಉಪಾಧ್ಯಾಯರನ್ನು ನೇಮಿಸಿದರು. ಬಾಲಕ ಸಯ್ಯಾಜಿರಾಯನಿಗೆ ಇಂಗ್ಲಿಷು, ಗುಜರಾತಿ, ಮರಾಠಿ ಮತ್ತು ಉರ್ದು ಭಾಷೆಗಳನ್ನು ವರ್ಣಮಾಲೆಯಿಂದ ಕಲಿಸಲಾಯಿತು. ಇದರ ಜೊತೆಗೆ ಇತಿಹಾಸ, ಭೂಗೋಳ, ಗಣಿತಗಳನ್ನೂ ಚೆನ್ನಾಗಿ ಕಲಿಸಲಾಯಿತು. ಬಾಲ ದೊರೆಯ ಶಿಕ್ಷಣದ ಜವಾಬ್ದಾರಿ ಯನ್ನು ಐ.ಸಿ.ಎಸ್. ಅಧಿಕಾರಿಯಾಗಿದ್ದ ಇಲಿಯಟ್ ಎಂಬವನಿಗೆ ಒಪ್ಪಿಸಲಾಗಿತ್ತು. ಅವನೂ, ದಿವಾನ ಮಾಧವ ರಾಯರೂ ಇಂಗ್ಲಿಷ್ ಸರಕಾರಕ್ಕೆ ಕುಮಾರ ಗಾಯಕ ವಾಡನ ವಿದ್ಯಾಪ್ರಗತಿಯನ್ನು ಕುರಿತು ವರದಿಗಳನ್ನು ಕಳುಹಿಸುತ್ತಿದ್ದರು.

ಬಾಲ್ಯದಿಂದಲೂ ಗಾಯಕವಾಡನಿಗೆ ಬೇರೆಬೇರೆ ವಿಷಯಗಳನ್ನು ಕಲಿಯುವುದರಲ್ಲಿ ತೀವ್ರಾಸಕ್ತಿಯಿತ್ತು. ಆದರೆ ಅವನಿಗೆ ಗಣಿತ ಆಕರ್ಷಣೆ ನೀಡದಾಯಿತು. ಪರೀಕ್ಷೆಯಲ್ಲಿ ಅದರಲ್ಲಿ ಒಮ್ಮೆ ನಪಾಸಾದುದೂ ಉಂಟು. ಆದರೇನು, ಅವನು ಅತ್ಯಲ್ಪಕಾಲದಲ್ಲೇ ಇಂಗ್ಲಿಷ್ ಹಾಗೂ ಇತರ ದೇಶೀ ಭಾಷೆಗಳನ್ನು ಚೆನ್ನಾಗಿ ಕಲಿತುಕೊಂಡನು. ಕೇವಲ ಆರು ವರ್ಷಗಳಲ್ಲಿ ಅವನು ಇಂಗ್ಲಿಷ್  ಭಾಷೆಯಲ್ಲಿ ಓದಿ ಬರೆದು ಮಾತನಾಡಲು ಸಮರ್ಥನಾದನು. ಬಾಲ್ಯದಲ್ಲಿ ದೊರೆತ ಈ ಶಿಕ್ಷಣ ಮುಂದೆ ದೊರೆಯಾದ ಮೇಲೆ ಸಯ್ಯಾಜಿರಾಯನನ್ನು ಶಿಕ್ಷಣ ಪ್ರೇಮಿಯನ್ನಾಗಿ ಮಾಡಿತು. ಜನತೆಯ ದುಃಖ, ದಾರಿದ್ರ್ಯ, ಅಜ್ಞಾನಗಳಿಗೆ ವಿದ್ಯಾಭ್ಯಾಸವೇ ಪರಮೌಷಧವೆಂದು ಮನಗೊಳ್ಳುವಂತೆ ಆಯಿತು. ದೊರೆಯಾದ ಮೇಲೆ ಗಾಯಕವಾಡನು ತನ್ನ ಹೆಚ್ಚಿನ ಸಮಯವನ್ನೆಲ್ಲ ಈ ಕಡೆ ಹರಿಸಿದನು. ರಾಜ್ಯದ ಸಂಪತ್ತನ್ನೆಲ್ಲ ಶಿಕ್ಷಣ ಕಾರ್ಯಗಳಿಗೆ ವ್ಯಯಮಾಡಿದನು.

ಇಷ್ಟೆಲ್ಲ ಇಂಗ್ಲಿಷ್ ಶಿಕ್ಷಣ ಪಡೆದರೂ ಗಾಯಕವಾಡನು ಅಂತರಂಗದಲ್ಲಿ ಹಿಂದೂ ಆಗಿಯೇ ಉಳಿದನು. ಅವನು ಹಿಂದೂ ರೀತಿಯ ಊಟ, ಉಡಿಗೆಗಳನ್ನು ಮೆಚ್ಚಿಕೊಂಡಿದ್ದನು. ಪ್ರತಿದಿನ ಅರಮನೆಯ ದೇವರ ಕೋಣೆಯಲ್ಲಿ ದೇವತಾ ಪೂಜೆಯನ್ನು ಮಾಡುತ್ತಿದ್ದನು. ಹಿಂದೂ ಹಬ್ಬ ಹರಿದಿನಗಳನ್ನು ಆಚರಿಸುವುದರಲ್ಲಿ ಅವನಿಗೆ ಉತ್ಸಾಹ ಸಂಭ್ರಮಗಳಿದ್ದವು.

ಆಡಳಿತ ವಿಷಯಗಳಲ್ಲೂ ಸಮರ್ಥರಾದ ಅಧಿಕಾರಿಗಳು ಅವನಿಗೆ ಶಿಕ್ಷಣ ನೀಡುತ್ತಿದ್ದರು. ಕಂದಾಯದ ವಿಷಯ, ಲೆಖ್ಖಪತ್ರಗಳನ್ನು ಇಡುವ ಮತ್ತು ಸರಿಮಾಡುವ ರೀತಿ, ಕಾನೂನು, ಸೈನ್ಯದ ನಿರ್ವಹಣೆ, ಪೋಲಿಸ್ ಇಲಾಖೆ, ಸೆರೆಮನೆಗಳ ಆಡಳಿತ ಇಂತಹ ಹಲವಾರು ವಿಷಯಗಳನ್ನು ಕುರಿತು ಅವರಿಗೆ ಶಿಕ್ಷಣ ಕೊಡುತ್ತಿದ್ದರು. ದಿವಾನ್ ಟಿ. ಮಾಧವರಾಯರು, ರಾಜನು ಪ್ರಜೆಗಳ ಹಿತಕ್ಕಾಗಿಯೇ ಬಾಳಬೇಕು ಎಂದು ಮತ್ತೆ ಮತ್ತೆ ಉಪದೇಶಿಸುತ್ತಿದ್ದರು.

೧೮೭೭ ರಲ್ಲಿ ಗಾಯಕವಾಡರು ದೆಹಲಿಗೆ ಹೋಗಿ, ಅಲ್ಲಿಂದ ಆಗ್ರಾ, ಲಕ್ನೋ, ಕಾಶಿ, ಅಲಹಾಬಾದ್ ಮೊದಲಾದ ಸ್ಥಳಗಳಿಗೆ ಭೇಟಿಕೊಟ್ಟು ಬಂದರು. ಈ ಸಮಯದಲ್ಲಿ ಅವರ ತಂದೆ ತೀರಿಕೊಂಡರು. ಇದು ಅವರ ಬಾಳಿನಲ್ಲಿ ಪ್ರಥಮ ವಿಯೋಗ. ಈಗ ಸಯ್ಯಾಜಿರಾಯರಿಗೆ ಹದಿನೇಳು ತುಂಬಿ ಹದಿನೆಂಟನೆ ವರ್ಷ ನಡೆಯುತ್ತಿತ್ತು. ಅವರಿಗೆ ವಿವಾಹವಾಗಲು ಪ್ರಾಪ್ತವಯಸ್ಸಾಗಿತ್ತು. ಹಿರಿಯರೂ, ಹಿತೈಷಿಗಳೆಲ್ಲರೂ ಸೇರಿ ತಂಜಾವೂರಿನ ಹರಿಬತ್‌ರಾವ್ ಮೋಹಿತೆ ಎಂಬುವರ ಪುತ್ರಿ ಲಕ್ಷ್ಮೀಬಾಯಿ ಯನ್ನು ವಧುವಾಗಿ ಆರಿಸಿದಿರು. ಅವಳ ಜೊತೆಯಲ್ಲಿ ೧೮೮೧ ರಲ್ಲಿ ವಿವಾಹವು ವಿಜೃಂಭಣೆಯಿಂದ ನಡೆಯಿತು. ಮುಂದೆ ಈಕೆಯ ಹೆಸರನ್ನು ಜಮುನಾಬಾಯಿ ಎಂದು ಬದಲಾಯಿಸಲಾಯಿತು.

ಈಗ ಸ್ಯಯಾಜಿರಾಯನು ಸಂಸ್ಥಾನವನ್ನು ಸ್ವತಂತ್ರನಾಗಿ ಆಳಲು ಬೇಕಾದ ಅರ್ಹತೆಯನ್ನು ಪಡೆದಿದ್ದನು. ತನಗೆ ಅಧಿಕಾರ ವರ್ಗಾವಣೆ ಮಾಡಲು ಅವನು ಇಂಗ್ಲಿಷರನ್ನು ಪ್ರಾರ್ಥಿಸಿದನು. ಇದಕ್ಕೆ ಅನುಮತಿಯನ್ನು ಬೇಡಿ ರೆಸಿಡೆಂಟನು ಬ್ರಿಟಿಷ್ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದನು.

ಪ್ರಜೆಗಳ ಹಿತಕ್ಕೆ ಮುಡಿಪು

ನ್ಯಾಯ, ಸುಭದ್ರತೆ, ಅಭ್ಯುದಯ ಮತ್ತು ಗೌರವ-ಇವು ಸಯ್ಯಾಜಿರಾಯರ ಕಣ್ಣು ಮುಂದಿದ್ದ ನಾಲ್ಕು ಆದರ್ಶಗಳು. ಈ ಆದರ್ಶಗಳನ್ನು ಕಾರ್ಯರೂಪಕ್ಕೆ ತರಲು ಯುವಕ ಸಯ್ಯಾಜಿರಾಯನು ನಿಶ್ಚಯಿಸಿದ್ದನು.

ದಿವಾನ್ ಟಿ. ಮಾಧವರಾಯರ ಆರು ವರ್ಷಗಳ ಆಳ್ವಿಕೆಯಲ್ಲಿ ಸಯ್ಯಾಜಿರಾಯರಿಗೆ ಸುಭದ್ರವಾದ ಆಡಳಿತ ಯಂತ್ರ ದೊರೆತಿತ್ತು. ಅದರ ಚುಕ್ಕಾಣಿಯನ್ನು ಹಿಡಿಯುವುದು ಹೇಗೆಂಬುದು ಈ ತರುಣ ಮಹಾರಾಜನಿಗೆ ತಿಳಿದಿತ್ತು. ೧೮೮೧ ಡಿಸೆಂಬರ್ ೨೮ನೇ ದಿನಾಂಕ ಸಯ್ಯಾಜಿರಾಯರ ಜೀವನದಲ್ಲಿ ಒಂದು ಸ್ಮರಣೀಯ ದಿನ. ಅವರಿಗೆ ಸಂಪೂರ್ಣ ಅಧಿಕಾರವನ್ನು ಕೊಡಲು ಬ್ರಿಟಿಷ್ ಸರ್ಕಾರವು ಸಮ್ಮತಿಸಿ ಈ ಬಗ್ಗೆ ಒಂದು ಫರಮಾನನ್ನು ಪ್ರಕಟಿಸಿತು.

ಈ ಸಿಂಹಾಸನಾರೋಹಣ ಉತ್ಸವಕ್ಕೆ ಗವರ್ನರ್ ಜನರಲ್ಲರು ಬರಲು ಅನನುಕೂಲವಾದುದರಿಂದ ಮುಂಬಯಿಯ ಗವರ್ನರ್ ಆಗಿದ್ದ ಸರ್ ಜೇಮ್ಸ್ ಫರ್ಗುಸನ್ ಆಗಮಿಸಿ ಪಟ್ಟಾಭೀಷೇಕ, ಸಿಂಹಾಸನಾ ರೋಹಣ ಉತ್ಸವಗಳನ್ನು ವೈಭವದಿಂದ ನೆರವೇರಿಸಿ ಕೊಟ್ಟನು. ಅಂದು ಗಾಯಕವಾಡರು ಮಾಡಿದ ಭಾಷಣದಲ್ಲಿ, ಪ್ರಜೆಗಳ ಹಿತಕ್ಕೆ ತಮ್ಮ ಜೀವನವನ್ನು ಮೀಸಲಿಡುವುದಾಗಿ ಹೇಳಿದರು.

ಪ್ರಜೆಗಳೊಡನೆ ನಿಕಟ ಸಂಪರ್ಕ

ಬರೋಡೆಯಲ್ಲಿ ಗುಜರಾತಿಗಳು ಅಧಿಕ ಸಂಖ್ಯೆಯಲ್ಲಿದ್ದರೂ, ಮಹಾರಾಷ್ಟ್ರೀಯರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಬಂಗಾಳಿಗಳೂ, ಮದರಾಸಿನವರೂ, ಪಂಜಾಬಿಗಳೂ, ಇಂಗ್ಲಿಷರೂ, ಪಾರ್ಸಿಗಳೂ, ಯಹೂದ್ಯರೂ, ಮುಸಲ್ಮಾನರೂ ಅಲ್ಪ ಸಂಖ್ಯಾತರಾದರೂ ಸಾಕಷ್ಟು ಗಣನೀಯ ಸಂಖ್ಯೆಯಲ್ಲಿದ್ದರು. ಇವರಲ್ಲಿ ಪರಸ್ಪರ ಹೊಂದಾಣಿಕೆ, ಮತಸಹಿಷ್ಣುತೆಗಳು ಇದ್ದವು. ಇದು ಸಯ್ಯಾಜಿರಾಯರಿಗೆ ಬೇಕಾದ ಮತಸಹಿಷ್ಣುತಾ ಭೂಮಿಕೆಯನ್ನು ಒದಗಿಸಿತ್ತು. ಪ್ರಜೆಗಳನ್ನು ತಮ್ಮ ಖಾಸಗಿ ಸಂಚಾರ, ಸಂದರ್ಶನ, ಭೇಟಿಗಳಿಂದ ಒಲಿಸಿಕೊಳ್ಳಬಹು ದೆಂದು ಅವರಿಗೆ ಅನಿಸಿತು.

ಮೊದಲು ಆರಂಭವಾದ ಸವಾರಿ-ಹೂಜೂರ್ ಸವಾರಿಗಳು ಮುಂದೆ ಜನಪ್ರಿಯವಾದವು. ದೊರೆಯು ಮೂವತ್ತೆ ದು ಬಾರಿ ಬರೋಡೆಯ ಮೂಲೆ ಮೂಲೆಗಳನ್ನು ಬಿಡದೆ ಕ್ರಮವಾಗಿ ಸಂಚರಿಸಿದರು. ಅವರ ಪ್ರಜಾವಾತ್ಸಲ್ಯ ಎಷ್ಟೆಂದು ಇದರಿಂದ ತಿಳಿಯುತ್ತದೆ.

ಪ್ರಗತಿಯ ದಾರಿಯಲ್ಲಿ

ಅಧಿಕಾರಕ್ಕೆ ಬಂದ ಸಯ್ಯಾಜಿರಾಯರು ಕೈಗೊಂಡ ಮೊದಲ ಕಾರ‍್ಯವೆಂದರೆ ಭೂಮಿಯನ್ನು ಸರಿಯಾಗಿ ಸರ್ವೆ (ಅಳತೆ) ಮಾಡಿಸಿ ಅವುಗಳಿಗೆ ತಕ್ಕಂತೆ ಕಂದಾಯವನ್ನು ವಿಧಿಸಿದುದು. ಅವರು ರಾಜ್ಯದ ಲೆಖ್ಖ ಮತ್ತು ಆಡಿಟ್ ಇಲಾಖೆಗಳನ್ನು ಪುನರ್‌ವಿಂಗಡಿಸಿದರು. ದೇಶದಲ್ಲಿ ಕೈಗಾರಿಕೆಗಳು ಬೆಳೆಯಲು ಪ್ರೋತ್ಸಾಹ ನೀಡಿದರು. ಹೀಗಾಗಿ ೧೮೮೨ ರಲ್ಲಿ ಬರೋಡೆಯ ಪ್ರಥಮ ಹತ್ತಿಬಟ್ಟೆಯ ಗಿರಣಿಯು ಆರಂಭವಾಯಿತು. ೧೮೮೫ ರಲ್ಲಿ ಪ್ರಥಮ ಸಕ್ಕರೆ ಕಾರ್ಖಾನೆ ಆರಂಭವಾಯಿತು.

ಆದರೂ ತರುಣ ದೊರೆಯ ಮುಂದೆ ಬರೋಡೆಯ ಆಡಳಿತ ಮುಖ್ಯ ಸವಾಲೊಂದನ್ನು ನೀಡಿತ್ತು. ಅದು ಕುಡಿಯುವ ನೀರಿನ ಸಮಸ್ಯೆ.

ಬೆಳೆಯುತ್ತಿದ್ದ ಬರೋಡಾ ನಗರಕ್ಕೆ ಕುಡಿಯುವ ನೀರಿನ ಕೊರತೆ ತುಂಬಾ ಇತ್ತು. ಹಿಂದಿನ ದೊರೆಗಳಾದ ಖಂಡೇ ರಾಯರು ನರ್ಮದಾನದಿಯಿಂದ ನೀರು ತರುವ ಯೋಜನೆ ಹಾಕಿಕೊಂಡಿದ್ದರು. ಮಲ್ಹಾರಿರಾಯರು ಮಾಹೀ ನದಿಯಿಂದ ನೀರನ್ನು ತರುವ ಸಾಹಸ ಮಾಡಿದ್ದರು.

ಸಯ್ಯಾಜಿರಾಯರು ತಮ್ಮ ಹೆಸರಿನಲ್ಲಿ ಸಯ್ಯಾಜಿ ಸರೋವರ ಎಂಬ ನಿರ್ಮಲ ನೀರಿನಿಂದ ಕೂಡಿದ ಒಂದು ಕೆರೆಯನ್ನು ನಿರ್ಮಿಸಿ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಿದರು. ಇದಕ್ಕಾಗಿ ತುಂಬಾ ಹಣ ವೆಚ್ಚವಾದರೂ ಅವರು ಹಿಂಜರಿಯಲಿಲ್ಲ. ಮುಂದೆ ಅವರ ಗಮನ ಶಿಕ್ಷಣ ಕ್ಷೇತ್ರದ ಕಡೆ ಹರಿಯಿತು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಆರಂಭಿಸಿದರು. ದೇಶದ ಮಕ್ಕಳಿಗೆ ಕಡ್ಡಾಯಶಿಕ್ಷಣ ವ್ಯವಸ್ಥೆ ಜಾರಿಗೆ ತಂದರು; ಶಿಕ್ಷಣ ಕಾಲೇಜು, ಸಂಗೀತ ಕಾಲೇಜು, ಸಾಹಿತ್ಯ ಸಂಸ್ಥೆಗಳು, ಕಲಾಶಾಲೆ, ಪ್ರಾಚ್ಯವಸ್ತು ಸಂಗ್ರಹ, ಪುಸ್ತಕಭಂಡಾರ ಮುಂತಾದ ರಾಜ್ಯವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಅನೇಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದರು. ಇಂಗ್ಲಿಷ್ ಹಾಗೂ ದೇಶ ಭಾಷೆಗಳಾದ ಗುಜರಾತಿ ಮತ್ತು ಮರಾಠಿ ಭಾಷೆಗಳಿಗೆ ಶ್ರೇಷ್ಠ ಕೃತಿಗಳನ್ನು ಅನುವಾದಿಸುವ ವ್ಯವಸ್ಥೆ ಮಾಡಿದರು. ಬ್ಯಾಂಕುಗಳು ಸ್ಥಾಪಿತವಾಗಲು ಪ್ರೋತ್ಸಾಹ ನೀಡಿದರು.

ಇಷ್ಟೆಲ್ಲಾ ಪ್ರಗತಿ ಕಾರ್ಯಕ್ರಮದಲ್ಲಿ ಅವರಿಗೆ ವಿಘ್ನಗಳು ತಲೆದೋರದೆ ಇರಲಿಲ್ಲ. ಅವುಗಳು ಮೂರು ರೀತಿಯಲ್ಲಿ ದೊರೆಯನ್ನು ಕಾಡಿದವು.

ಅವುಗಳಲ್ಲಿ ಮೊದಲನೆಯದು ಭಾರತಕ್ಕೆ ಹೊಸದಾಗಿ ಕಾಲಿಟ್ಟ ಪ್ಲೇಗ್ ಮಾರಿಯ ಉಪದ್ರವ. ಎರಡನೆಯದು ಅನಾವೃಷ್ಟಿಯ ದೆಸೆಯಿಂದ ಉಂಟಾದ ಘೋರ ಕ್ಷಾಮ. ಇವುಗಳ ಜೊತೆಗೆ ಪಿಲವಾಯಿ ಪ್ರದೇಶದಲ್ಲಿ ನಡೆದ ದಂಗೆ. ಇವುಗಳ ಅಗ್ನಿ ಪರೀಕ್ಷೆಯಲ್ಲಿ ಸಯ್ಯಾಜಿರಾವ್ ಗಾಯಕವಾಡರು ಗೆದ್ದು ಬಂದರು. ಅವರು ನೆಟ್ಟ ವೃಕ್ಷ ಫಲ ನೀಡಲಾರಂಭಿಸಿತ್ತು.

೧೯೨೭ ರ ವೇಳೆಗೆ ಅವರು ಆರಂಭಿಸಿದ್ದ ಕೇಂದ್ರ ಪುಸ್ತಕ ಭಂಡಾರದಲ್ಲಿ ಒಂದು ಲಕ್ಷ ಗ್ರಂಥಗಳಿದ್ದವು. ಇದು ರಾಷ್ಟ್ರದಲ್ಲಿನ ಶ್ರೇಷ್ಠ ಗ್ರಂಥಭಂಡಾರಗಳಲ್ಲಿ ಒಂದಾಗಿ ಪರಿಗಣಿತವಾಗಿತ್ತು.

ಗಾಯಕವಾಡರು ತಮ್ಮ ಆಳ್ವಿಕೆಯ ಮೂವತ್ತನೆ ವರ್ಷದಲ್ಲಿ, ತಾವು ಕೈಗೊಂಡ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತಂದುದರ ಸವಿನೆನಪಿಗಾಗಿ ರಾಜಧಾನಿಯಲ್ಲಿ ಒಂದು ವಿಜಯಸ್ತಂಭವನ್ನು ನಿರ್ಮಿಸಿದರು.

ಇದು ಅವರ ಕೀರ್ತಿಸ್ತಂಭವೂ ಆಗಿತ್ತು.

ಸಂಸಾರ

ಸ್ವಭಾವತಃ ಗಾಯಕವಾಡರು ಏಕಾಂತಪ್ರಿಯರು. ಅವರು ತಮ್ಮ ಮನಸ್ಸಿನಲ್ಲಿ ನಡೆಯುವ ವ್ಯಾಪಾರಗಳನ್ನು ಬೇರೆ ಯಾರಿಗೂ ಮುಖಭಾವದಿಂದಾಗಲೀ ಮಾತುಕತೆಗಳಿಂದಾಗಲೀ ತಿಳಿಸುತ್ತಿರಲಿಲ್ಲ. ಎಲ್ಲವನ್ನೂ ತಾವೇ ಅನುಭವಿಸುತ್ತಾ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದರು. ತಮ್ಮ ಆಸೆನಿರಾಶೆಗಳನ್ನು ತೋಡಿಕೊಳ್ಳಲು ಅವರ ಪತ್ನಿಯ ಹೊರತು ಯಾರೂ ಅವರಿಗೆ ಆಪ್ತರು ಇರಲಿಲ್ಲ. ತಾವು ನೂರಾರು ಜನರೊಡನೆ ಇದ್ದೂ ಏಕಾಂಗಿ ಎಂಬ ಭಾವನೆ ಅವರಿಗಿತ್ತು.  ಹೆಂಡತಿಯೊಡನೆ ತಮ್ಮ ವಿಚಾರಗಳನ್ನೆಲ್ಲ ಹಂಚಿಕೊಳ್ಳುತ್ತಿದ್ದರು. ಅವರದು ಆದರ್ಶ ದಾಂಪತ್ಯವಾಗಿತ್ತು. ಪತಿಯನ್ನು ನೆರಳಿನಂತೆ ಅನುಸರಿಸಿದ್ದ ಆಕೆಯು ೧೮೮೫ ರಲ್ಲಿ ತೀರಿಕೊಂಡರು. ಆಗ ಗಾಯಕವಾಡರಿಗೆ ಇನ್ನೂ ೨೨ ವರ್ಷ. ಪ್ರೀತಿಯ ಹೆಂಡತಿಯ ಸಾವಿನ ದುಃಖವನ್ನು ತಡೆದುಕೊಳ್ಳುವುದು ಗಾಯಕವಾಡರಿಗೆ ಬಹಳ ಕಷ್ಟವಾಯಿತು. ಮುಂದೆ ಇದೇ ಚಿಂತೆಯಲ್ಲಿ ಅವರು ಹಾಸಿಗೆ ಹಿಡಿದರು.

ಇದೆಲ್ಲದರ ಪರಿಣಾಮವಾಗಿ ಅವರನ್ನು ಬೇರೊಂದು ವಿವಾಹವಾಗಲು ಒತ್ತಾಯ ಮಾಡಲಾಯಿತು. ದೊರೆಯು ೧೮೮೫ರಲ್ಲಿ ಗಜ್ರಾಬಾಯಿ ಎಂಬ ೧೪ ವರ್ಷದ ಹುಡುಗಿಯೊಂದಿಗೆ ವಿವಾಹವಾದರು. ಆದರೆ ದೊರೆಗೆ ಅವಳೊಡನೆ ಆತ್ಮೀಯತೆ ಮಾತ್ರ ಬರಲಿಲ್ಲ. ಹದಿಮೂರು ವರ್ಷಗಳ ನಂತರ ಈಕೆಯೂ ಮರಣ ಹೊಂದಿದರು.

ಮೊದಲನೆ ಪತ್ನಿ ಲಕ್ಷ್ಮೀಬಾಯಿಯಿಂದ ಗಾಯಕವಾಡರಿಗೆ ರಾಜ್ಯಕ್ಕೆ ಹಕ್ಕುದಾರನಾದ ಪುತ್ರನು ಜನಿಸಿದ್ದನು. ಅವನಿಗೆ ಫಡ್ತೆಸಿಂಹನೆಂದು ಹೆಸರಿಟ್ಟರು. ಅವನ ಹಾಗೂ ತಮ್ಮನ ಶಿಕ್ಷಣವು ವಿದೇಶದಲ್ಲಿ ನಡೆಯುವಂತೆ ದೊರೆ ವ್ಯವಸ್ಥೆ ಮಾಡಿದ್ದರು.

ವಿದೇಶಿ ಯಾತ್ರೆಗಳ ಪ್ರಭಾವ

ಮೊದಲಿನಿಂದಲೂ ಗಾಯಕವಾಡರಿಗೆ ಪಾಶ್ಚಾತ್ಯ ಜೀವನ ಹಿಡಿಸಿದಂತೆ ಪೌರ‍್ವಾತ್ಯ ಜೀವನ ರೀತಿ ಹಿಡಿಸಿರಲಿಲ್ಲ. ಹೀಗಾಗಿ ಅವರು ಮೇಲಿಂದ ಮೇಲೆ ವಿದೇಶ ಯಾತ್ರೆ ಕೈಗೊಳ್ಳುತ್ತಿದ್ದರು. ಒಮ್ಮೆ ಆರೋಗ್ಯವನ್ನು ಸುಧಾರಿಸಿಕೊಳ್ಳವ ದೃಷ್ಟಿಯಿಂದಲೂ ಇನ್ನೊಮ್ಮೆ ದೇಶ ವಿದೇಶಗಳ ಜೀವನವನ್ನು ತಿಳಿದುಬರುವ ದೃಷ್ಟಿಯಿಂದಲೂ ಸಯ್ಯಾಜಿರಾಯರು ಅನೇಕ ಬಾರಿ ಪರದೇಶದ ಯಾತ್ರೆ ಕೈಗೊಂಡಿದ್ದರು. ತಮಗಾದ ಲಾಭವನ್ನು ರಾಜ್ಯದ ಪ್ರಜೆಗಳಿಗೆ ಹಂಚುತ್ತಿದ್ದರು.

ಅವರು ತಮ್ಮ ೬೩ ವರ್ಷಗಳ ಆಳ್ವಿಕೆಯಲ್ಲಿ ಯೂರೋಪಿಗೆ ೨೪ ಬಾರಿ ಹೋಗಿದ್ದರು. ತಮ್ಮ ಜೀವಿತದ ಅಮೂಲ್ಯ ಆಯುಸ್ಸಿನಲ್ಲಿ ೨೨ ವರ್ಷಗಳನ್ನು ಹೊರದೇಶಗಳಲ್ಲೇ ಅವರು ಕಳೆದಿದ್ದರು. ಅವರು ಅಮೆರಿಕ ಜಪಾನುಗಳನ್ನು ಸಂದರ್ಶಿಸಿ ಬಂದರು. ಅವರ ವಿದೇಶ ಯಾತ್ರೆಗಳನ್ನು ನೋಡಿ ಅವರನ್ನು ಗೈರುಹಾಜರಿಯಲ್ಲಿರುವ ಪ್ರಭುಗಳೆಂದು ಜನರು ಹಾಸ್ಯಮಾಡುವಂತೆ  ಆಗಿತ್ತು. ಅವರು ಮೇಲಿಂದ ಮೇಲೆ ಪರದೇಶಯಾತ್ರೆಗೆ ಹೋಗುವುದನ್ನು ನೋಡಿ ವೈಸರಾಯಿಯಾಗಿದ್ದ ಲಾರ್ಡ್ ಕರ್ಜನನಿಗೆ ಅವರ ವಿಷಯದಲ್ಲಿ ಅಸಮಾಧಾನ ಉಂಟಾಗಿತ್ತು. ಅದನ್ನು  ಸೂಕ್ಷ್ಮವಾಗಿ ಪ್ರಕಟಿಸಿದ್ದನು.

ಮುಖ್ಯವಾಗಿ ಸಯ್ಯಾಜಿರಾಯರ ಪ್ರಗತಿಪರ ವಿಚಾರಗಳು ಇಂಗ್ಲಿಷ್ ಅಧಿಕಾರಿಗಳಿಗೆ ಅಷ್ಟಾಗಿ ಸೇರುತ್ತಿರಲಿಲ್ಲ. ಲಗಾಮಿಗೆ ಸಿಕ್ಕದ ಕುದುರೆಯಂತಿದ್ದ ಅವರನ್ನು ಹೇಗೆ ನಿಗ್ರಹಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ. ಗಾಯಕವಾಡರ ವಿದೇಶ ಯಾತ್ರೆಗಳು ಅವರಿಗೆ ಹೊಸ ಕಣ್ಣನ್ನು ತೆರೆಸಿದ್ದವು. ಆ ನಾಡುಗಳಲ್ಲಿ ಬೀಸುತ್ತಿದ್ದ ಸ್ವಾತಂತ್ರ್ಯದ ಗಾಳಿಯನ್ನೂ, ಅಲ್ಲಿನ ವೈಜ್ಞಾನಿಕ ಪ್ರಗತಿಯನ್ನೂ ಸಂಪದ್ಭರಿತ ಕಾರ‍್ಯಕ್ರಮಗಳನ್ನೂ ನೋಡಿದ ಮೇಲೆ ಸಯ್ಯಾಜಿರಾಯರಿಗೆ ತಮ್ಮ ನಾಡೂ ಈ ರೀತಿ ಪ್ರಗತಿ ಹೊಂದಬೇಕೆಂಬ ಆಸೆಯುಂಟಾಗಿತ್ತು.

ಸಯ್ಯಾಜಿರಾಯರು ದಾರ್ಶನಿಕ ರಾಷ್ಟ್ರಶಿಲ್ಪಿಯಾಗಿದ್ದರು. ಅವರು ಸಂಕುಚಿತದೃಷ್ಟಿಯುಳ್ಳವರಾಗಿರಲಿಲ್ಲ. ಬರೋಡೆ ಯನ್ನು ಮಾತ್ರವೇ ಕುರಿತು ಅವರು ಯೋಚಿಸುತ್ತಿರಲಿಲ್ಲ. ಇಡೀ ಭಾರತವನ್ನು ಕುರಿತು ಅಲೋಚಿಸುತ್ತಿದ್ದರು.

ಅವರ ಕಲ್ಪನೆಯ ಭಾರತ

ಅವರ ಪಾಲಿಗೆ ಭಾರತವು ಅಖಂಡವೂ ಅವಿಭಾಜ್ಯವೂ ಆದ ಒಂದು ರಾಷ್ಟ್ರ. ಇದು ಋಷಿ ಮುನಿಗಳ ಸನಾತನ ನಾಡು. ಯಾರದೋ ಶಾಪದ ಫಲವಾಗಿ ಇಂದು ಇಂಗ್ಲಿಷರ ಅಧೀನ ರಾಷ್ಟ್ರವಾಗಿದೆ. ಇಂದಲ್ಲ ನಾಳೆ ಭಾರತವು ಸ್ವಾತಂತ್ರ್ಯ ಪಡೆಯಲೇಬೇಕು-ಪಡೆಯುತ್ತದೆ. ಆಗ ದೇಶದ ದುಃಖ, ದಾರಿದ್ರ್ಯ, ಅನೈಕಮತ್ಯಗಳು ತೊಲಗುತ್ತವೆ. ಭಾರತವು ಮತ್ತೆ ಇಡೀ ಮಾನವಲೋಕಕ್ಕೆ ಮಾರ್ಗದರ್ಶನ ಮಾಡುತ್ತದೆ ಎಂದು ತಿಳಿದಿದ್ದರು. ಇಂಥ ರಾಷ್ಟ್ರಪ್ರಜ್ಞೆ ಇಂಗ್ಲಿಷರ ಪಾಲಿಗೆ ಅಪ್ರಿಯವಾದದ್ದು ಆಶ್ಚರ್ಯವಲ್ಲ.

ಸಯ್ಯಾಜಿರಾವ್ ಗಾಯಕವಾಡರು ನೂರಕ್ಕೆ ನೂರರಷ್ಟು ಸ್ವದೇಶಿ ವಿಚಾರದ ಭಕ್ತರು. ಜನತೆಯು ಜಾತಿ, ಮತಗಳನ್ನು ಮರೆತು ದೇಶದ ಏಳಿಗೆಗಾಗಿ ಶ್ರಮಿಸಬೇಕೆಂದು ಮೇಲಿಂದ ಮೇಲೆ ಅವರು ಹೇಳುತ್ತಿದ್ದರು.

ಅವರು ದೇಶದ ಪ್ರಗತಿಗೆ ಔದ್ಯೋಗೀಕರಣವೇ ಮದ್ದು ಎಂದು ತಿಳಿದಿದ್ದರು. ದೇಶದ ಅನೇಕ ಪ್ರಮುಖ ಉದ್ದಿಮೆಗಳು ವಿದೇಶಿಯರ ಕೈಲಿದ್ದುದನ್ನು ನೋಡಿ ಅವರು ಬಹಳವಾಗಿ ವ್ಯಥೆಪಟ್ಟರು.

ಬ್ರಿಟಿಷರಿಗೆ ಕಸಿವಿಸಿ

೧೯೦೨ ರಲ್ಲಿ ಅಹಮದಾಬಾದಿನಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಅಧಿವೇಶನದಲ್ಲಿ ಕೈಗಾರಿಕಾ ವಸ್ತುಪ್ರದರ್ಶನವನ್ನು ಅವರು ಉದ್ಘಾಟಿಸಿದರು. ಇದು ಆಳರಸರ ಕಣ್ಣು ಕುಕ್ಕಿತು. ಅವರು ಅಂದಿನ ತಮ್ಮ ಭಾಷಣದಲ್ಲಿ ರಮೇಶಚಂದ್ರದತ್ತರ ಅಭಿಪ್ರಾಯಗಳನ್ನು ಉದ್ಧರಿಸುತ್ತಾ ದಾರಿದ್ರ್ಯಕ್ಕೆ ಇಂಗ್ಲಿಷರ ಆಳ್ವಿಕೆಯೇ ಮುಖ್ಯ ಕಾರಣವೆಂದು ಘಂಟಾಘೋಷವಾಗಿ ಸಾರಿದರು. ಅವರು ಜಪಾನಿನ ಮಾದರಿಯನ್ನು ಕೊಟ್ಟರು. ಅದು ಏಷ್ಯಾಖಂಡದಲ್ಲಿದ್ದರೂ ಔದ್ಯೋಗಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಕೊಂಡಾಡಿದರು. ದೇಶದ ಅಭ್ಯುದಯ ತಾಂತ್ರಿಕ ಶಿಕ್ಷಣದ ಮೇಲೆ ನಿಂತಿದೆ ಎಂದು ತಿಳಿಸಿದರು. ಚಿನ್ನವನ್ನು ಒಡವೆಗಳ ಸಲುವಾಗಿ ಬಳಸುವ ಬದಲು ಬಂಡವಾಳವಾಗಿ ಹೂಡಿ, ರಾಷ್ಟ್ರದ ಸಂಪತ್ತನ್ನು ರೂಢಿಸಬೇಕೆಂದು ಕರೆಯಿತ್ತರು.

ಇವೆಲ್ಲ ವಿಚಾರಗಳನ್ನು ಕೇಳಿದ ಆಳರಸರು ಗಾಯಕವಾಡರ ನಡೆನುಡಿಗಳ ಮೇಲೆ ಸದಾ ಕಣ್ಣಿಟ್ಟಿರುವಂತೆ ಆಯಿತು. ರಾಜರುಗಳು ನವಾಬರುಗಳು ಬ್ರಿಟಿಷರನ್ನು ಮೆಚ್ಚಿಸಲು ಒಬ್ಬರೊಡನೆ ಒಬ್ಬರು ಸ್ಪರ್ಧಿಸುತ್ತಿದ್ದ ಕಾಲ ಅದು. ವೈಸ್‌ರಾಯನಿಗೆ, ಅವನ ಹೆಂಡತಿಗೆ ವಜ್ರ ವೈಢೂರ್ಯಗಳ ಒಡವೆಗಳನ್ನು ಕೊಟ್ಟು ಅವನ ಮುಂದೆ ತಲೆಬಾಗುತ್ತಿದ್ದ ಕಾಲ. ಇಂತಹ ದಿನದಲ್ಲಿ ಗಾಯಕವಾಡರ ನಿರ್ಭಯ ಟೀಕೆ ಬ್ರಿಟಿಷರ ಮನಸ್ಸನ್ನು ಎಷ್ಟು ಕುದಿಸಿರಬೇಕು!

ಬ್ರಿಟಿಷರ ಆರೋಪಗಳು

ಹೀಗಾಗಿ ೧೯೦೮ರಲ್ಲಿ ವೈಸ್‌ರಾಯ್ ಆಗಿದ್ದ ಲಾರ್ಡ್ ಮಿಂಟೋ ಸಾಹೇಬನು ಸಯ್ಯಾಜಿರಾಯರಿಗೆ ಪತ್ರ ಬರೆದು ದೇಶದ್ರೋಹಿಗಳು ಅವರ ಸಂಸ್ಥಾನದ ಆಡಳಿತದಲ್ಲಿ ಪ್ರವೇಶಿಸಿ ಪರಿಸ್ಥಿತಿಯನ್ನು ಹದಗೆಡಿಸುತ್ತಿರುವರೆಂದೂ ಇಂಥವರ ವಿರುದ್ಧ  ಕ್ರಮಕೈಗೊಳ್ಳಬೇಕೆಂದೂ ಎಚ್ಚರಿಕೆ ನೀಡಿದನು. ಒಂದು ಅರ್ಥದಲ್ಲಿ ಈ ಮಾತು ಸತ್ಯವಾಗಿತ್ತು.

ಅವರ ರಾಜ್ಯದಲ್ಲಿ ಸ್ವಾತಂತ್ರ್ಯದ ಗಾಳಿ ಬೀಸಲಾರಂಭಿ ಸಿತ್ತು. ಆದರೂ ಗಾಯಕವಾಡರರು ಬರೋಡೆಯಲ್ಲಿ ಗೋರಕ್ಷಣೆ, ಸ್ವದೇಶಿ ಚಳುವಳಿ, ರಾಷ್ಟ್ರೀಯ ಶಿಕ್ಷಣ ಇವುಗಳ ಮಾತು ಬಿಟ್ಟರೆ ಬೇರೆ ಯಾವುದೇ ರಾಷ್ಟ್ರದ್ರೋಹಕರ ಚಟುವಟಿಕೆಗಳು ನಡೆಯುತ್ತಿಲ್ಲವೆಂದು ಸ್ಪಷ್ಟವಾಗಿ ಇಂಗ್ಲಿಷ್ ಅಧಿಕಾರಿಗಳಿಗೆ ತಿಳಿಸಿದರು.

ಇಂಗ್ಲಿಷರಿಗೆ, ಅರವಿಂದರಂತಹ ಕ್ರಾಂತಿಕಾರಿ ದೇಶಭಕ್ತರು ಗಾಯಕವಾಡರ ಆಪ್ತ ಕಾರ್ಯದರ್ಶಿಗಳಾಗಿದ್ದುದು ಸರಿ ಕಂಡಿರಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಮುಖಂಡರೊಡನೆ ಅವರಿಗೆ ಇದ್ದ ಸಂಬಂಧ ಹಿತವೆನಿಸಲಿಲ್ಲ. ಅವರು ಸಿಡಿಗುಟ್ಟುತ್ತಲೇ ಇದ್ದರು. ಗಾಯಕವಾಡರು ಸ್ಥಾಪಿಸಿದ ಗಂಗಾನಾಥ್ ಶಾಲೆಯಲ್ಲಿ ಮಾಮಾ ಸಾಹೇಬ ಫಡಕೆ, ಕಾಕಾ ಕಾಲೇಲ್ಕರರಂತಹ ಪ್ರತಿಭಾವಂತ ಲೇಖಕರು ಇದ್ದುದೇ ಒಂದು ಅಪರಾಧವಾಗಿತ್ತು. ನಾಸಿಕ ಪಿತೂರಿ ಮೊಕದ್ದಮೆಗೆ ಬೇಕಾದ ವಿಠಲಜೋಶಿ ಮತ್ತು ವಾಮನ ದಾತಾರರು ಬ್ರಿಟಿಷರ ಪಾಲಿಗೆ ದೇಶದ್ರೋಹಿಗಳೇ ಆಗಿದ್ದರು. ಮುಂದೆ ರೆಸಿಡೆಂಟ ಸಾಹೇಬನು ಗಾಯಕವಾಡರ ಇಷ್ಟದ ವಿರುದ್ಧ ೧೯೧೧ ರಲ್ಲಿ ಈ ಸಂಸ್ಥೆಯನ್ನು ರದ್ದುಪಡಿಸಿದನು. ಆಗ ಗಾಯಕವಾಡರು ಕೋಪದಿಂದ ಕೆಂಡವಾದರು.

ಇದೇ ಸಮಯದಲ್ಲಿ ಅಂದರೆ ೧೯೧೧ರಲ್ಲಿ ಭಾರತಕ್ಕೆ ಬಂದ ಚಕ್ರವರ್ತಿ ಪಂಚಮ ಜಾರ್ಜ್ ಮತ್ತು ರಾಣಿಯನ್ನು ಅಪಮಾನ ಮಾಡಿದರೆಂಬ ಆರೋಪ ಸಯ್ಯಾಜಿರಾಯರ ಮೇಲೆ ಹೊರಿಸಲ್ಪಟ್ಟಿತು.

ಈ ಘಟನೆ ನಡೆದದ್ದು ಹೀಗೆ.

ಐದನೆಯ ಜಾರ್ಜ್ ಚಕ್ರವರ್ತಿಯು ಸಾಮ್ರಾಜ್ಞಿಯೊಡನೆ ಭಾರತಕ್ಕೆ ೧೯೧೧ ನೆ ವರ್ಷದ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡುವ ಕಾರ್ಯಕ್ರಮವಿತ್ತು. ಈ ಸಮಯದಲ್ಲಿ ರಾಜಧಾನಿ ದೆಹಲಿಯಲ್ಲಿ ಒಂದು ವೈಭವದ ದರ್ಬಾರು ವ್ಯವಸ್ಥೆಯಾಗಿತ್ತು. ಈ ಉತ್ಸವದಲ್ಲಿ ಭಾಗವಹಿಸಲು ಭಾರತದ ಎಲ್ಲ ರಾಜ ಮಹಾರಾಜರಿಗೂ, ಸಂಸ್ಥಾನಿಕರಿಗೂ ಆಹ್ವಾನ ಹೋಗಿತ್ತು. ಇದರಲ್ಲಿ ಭಾಗವಹಿಸಲು ಸಯ್ಯಾಜಿರಾವ್ ಗಾಯಕವಾಡರೂ ದೆಹಲಿಗೆ ತೆರಳಿದ್ದರು.

ಉತ್ಸವದ ದಿನ ಸಿಂಹಾಸನದಲ್ಲಿ ಮಂಡಿಸಿದ್ದ ಚಕ್ರವರ್ತಿ ದಂಪತಿಗಳಿಗೆ ನಜರು-ಕಾಣಿಕೆಗಳನ್ನು ಒಪ್ಪಿಸಿ ಹಿಂದಕ್ಕೆ ಬರುತ್ತಿದ್ದಾಗ ಗಾಯಕವಾಡರು ನಡುವೆ ಕಂಬವೊಂದು ಅಡ್ಡ  ಬಂದುದರಿಂದ, ರಾಜ ದಂಪತಿಗಳಿಗೆ ಬೆನ್ನು ತೋರಿಸಿ ನಡೆಯಬೇಕಾಯಿತು. ಇದನ್ನು ಗಾಯಕವಾಡರಿಗೆ ಆಗದವರು ಮಹದಪರಾಧವನ್ನಾಗಿ ಪ್ರಚಾರ ಮಾಡಿದರು. ಬ್ರಿಟಿಷರನ್ನು ಅಂತರಂಗದಲ್ಲಿ ದ್ವೇಷಿಸುತ್ತಾ, ಅವರನ್ನು ಭಾರತದಿಂದ ಓಡಿಸಲು ಚಳುವಳಿ ಮಾಡುತ್ತಿರುವ ಸ್ವಾತಂತ್ರ್ಯ ಯೋಧರ ಹಾಗೂ ಕ್ರಾಂತಿಕಾರಿಗಳ ಪಕ್ಷ ಕಟ್ಟಿ ಅವರು ಹೀಗೆ ತುಂಬಿದ ಸಭೆಯಲ್ಲಿ ಆಳರಸರಿಗೆ ಅಪಮಾನ ಮಾಡಿದರೆಂದು ಕೆಲವು ಆಂಗ್ಲ ವೃತ್ತಪತ್ರಿಕೆಗಳು ಹುಯಿಲೆಬ್ಬಿಸಿದವು. ತಮಗೆ ಅಂಥ ಯಾವುದೇ ದುರುದ್ದೇಶವಿರಲಿಲ್ಲವೆಂದು ಗಾಯಕವಾಡರು ಹೇಳಿಕೆ ಕೊಟ್ಟರೂ ಅವರ ಮೇಲೆ ಬಂದ ಈ ರಾಜದ್ರೋಹದ ಆರೋಪ ನಿವಾರಣೆಯಾಗಲಿಲ್ಲ.

ಒಮ್ಮೆ ಯೂರೋಪಿನಲ್ಲಿ ಇವರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕ್ರಾಂತಿಕಾರಿಗಳಾದ ಮೇಡಂ ಕಾಮಾ ಮತ್ತು ಕೃಷ್ಣವರ್ಮರು ಭೇಟಿಯಾದುದು ಬ್ರಿಟಿಷ್ ಸರಕಾರಕ್ಕೆ ಅವರ ಅಪರಾಧಕ್ಕೆ ಪ್ರಮಾಣ ದೊರಕಿದಂತೆ ಆಯಿತು.

ಇವುಗಳಿಗೆ ಮುಕುಟವಿಟ್ಟಂತೆ ೧೯೧೬ ರಲ್ಲಿ ಬರೋಡೆಯಲ್ಲಿ ಪ್ರಜಾಮಂಡಲವೆಂಬ ಸಂಸ್ಥೆಯು ಆರಂಭವಾಗಿತ್ತು. ಇದಕ್ಕೆ ವಲ್ಲಭಭಾಯಿ ಪಟೇಲರು ಮಾರ್ಗದರ್ಶಿಗಳಾಗಿದ್ದರು. ಇವರು ಜವಾಬ್ದಾರಿ ಸರಕಾರದ ಬೇಡಿಕೆಯನ್ನು ಮುಂದಿಡತೊಡಗಿದ್ದರು. ಅದರ ಚಟುವಟಿಕೆಗಳನ್ನು ನವಗುಜರಾತ್ ಪತ್ರಿಕೆಯು ಪ್ರಚಾರ ಮಾಡತೊಡಗಿತ್ತು.

ಈ ಎಲ್ಲ ಕಾರಣಗಳನ್ನು ಇಂಗ್ಲಿಷರು ಉತ್ಪ್ರೇಕ್ಷಿಸಿದರು. ಬರೋಡೆಯಲ್ಲಿ ಹಿಂದೂ ಮುಸಲ್ಮಾನರ ದಂಗೆ, ಕೋಮು ಘರ್ಷಣೆಗೆ ಅವರು ಪರೋಕ್ಷವಾಗಿ ಪ್ರೋತ್ಸಾಹಿಸಿದರು. ಸಯ್ಯಾಜಿರಾಯರ ನಿರ್ಮಲ ಕೀರ್ತಿಗೆ ಕಳಂಕ ಬಳಿದರು. ಇದಾವುದಕ್ಕೂ ಹೆದರದೆ ಗಾಯಕವಾಡರು ರಾಷ್ಟ್ರಪ್ರಜ್ಞೆಯಿಂದ ದುಡಿದರು.

ಸಾರ್ಥಕ ಬಾಳು

ಬ್ರಿಟಿಷರ ಪ್ರೋತ್ಸಾಹದಿಂದ ಆದ ಗಲಭೆಗಳನ್ನು ಬಿಟ್ಟರೆ ಸಯ್ಯಾಜಿರಾಯರ ಸುದೀರ್ಘವಾದ ಆಳ್ವಿಕೆ ಅತ್ಯಂತ ಜನಪ್ರಿಯವಾಗಿತ್ತು. ಅವರು ತಮ್ಮ ಇಡೀ ಆಯುಸ್ಸನ್ನು ಪ್ರಜಾಕಲ್ಯಾಣಕ್ಕಾಗಿ ವ್ಯಯಿಸಿದ ಮಹಾನುಭಾವರು. ಸಯ್ಯಾಜಿರಾವ್ ಗಾಯಕವಾಡರು ತಮ್ಮ ೭೬ನೆ ವಯಸ್ಸಿನಲ್ಲಿ ಅಂದರೆ ೧೯೩೯ ರಲ್ಲಿ ಫೆಬ್ರುವರಿ ೬ ನೆ ದಿನಾಂಕ ಮುಂಬಯಿಯಲ್ಲಿ ಶಾಂತಿಯಿಂದ ಕಣ್ಮುಚ್ಚಿದರು. ಸಾಯುವಾಗ ಅವರಿಗೆ ದೇಶಕ್ಕಾಗಿ ಯತ್ಕಿಂಚಿತ್ ದುಡಿದೆನೆಂಬ ತೃಪ್ತಿ ಇತ್ತು. ಆಧುನಿಕ ಬರೋಡೆಯ ನಿರ್ಮಾತೃವಾಗಿದ್ದ ಸಯ್ಯಾಜಿರಾವ್ ಗಾಯಕವಾಡರ ಜೀವನ ಅವರ ಸ್ವಾತಂತ್ರ್ಯಾಕಾಂಕ್ಷೆ, ಪ್ರಗತಿಪರ ವಿಚಾರಗಳಿಂದ ಇಂದಿಗೂ ಅವರನ್ನು ನವಭಾರತ ಶಿಲ್ಪಿಗಳಲ್ಲಿ ಒಬ್ಬರೆಂಬ ಅಭಿಮಾನ ಆದರಗಳಿಗೆ ಪಾತ್ರವಾಗುವಂತೆ ಮಾಡಿದೆ.

ದೇಶವು ಇನ್ನೂ ಪಾರತಂತ್ರ್ಯದಲ್ಲಿ ತೊಳಲುತ್ತಿದ್ದಾಗ ರಾಷ್ಟ್ರಶಿಲ್ಪಿಯಾಗಿ ಸಮಗ್ರ ಭಾರತದ ಕಲ್ಪನೆಯನ್ನು ಮುಂದಿಟ್ಟುಕೊಂಡು ದುಡಿದ ಸ್ವಾತಂತ್ರ್ಯ ಪ್ರೇಮಿ ಸಯ್ಯಾಜಿರಾಯರ ಜೀವನ ಒಂದು ಸ್ಫೂರ್ತಿಯ ಚಿಲುಮೆಯಂತಿದೆ.