ಪ್ರಕಾರವಾಚಕ : ವಸ್ತುಗಳ ನಿಜಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳು ಪ್ರಕಾರ ವಾಚಕಗಳು. ಈ ಪ್ರಕಾರವಾಚಕಗಳು ವಿಶೇಷಣ ಪದಗಳಂತೆಯೇ ವರ್ತಿಸುತ್ತವೆ. ಉದಾ. ಅಂತಹ, ಇಂತಹ, ಎಂತಹ

ಪ್ರತ್ಯಯ : ಪ್ರಕೃತಿಯ ಮುಂದೆ ಸೇರುವ ಬದ್ಧ ಆಕೃತಿಮಾಗಳು ಪ್ರತ್ಯಯಗಳೆನಿಸುತ್ತವೆ. ಇದರಲ್ಲಿ ಎರಡು ವಿಧ ೧.ನಾಮವಿಭಕ್ತಿ ಪ್ರತ್ಯಯಗಳು ೨.ಆಖ್ಯಾತ ಪ್ರತ್ಯಯಗಳು.

ಪ್ರಶ್ನಾರ್ಥಕಾವ್ಯಯ : ಪ್ರಶ್ನೆ ಮಾಡುವಾಗ ಉಪಯೋಗಿಸುವ ಅವ್ಯಯಗಳು ಪ್ರಶ್ನಾರ್ಥಕಾವ್ಯಗಳು. ಎ, ಏ, ಓ, ಏನು ಎಂಬ ಪ್ರತ್ಯಯಗಳು ಪ್ರಶ್ನಾರ್ಥವನ್ನು ಸೂಚಿಸುತ್ತವೆ. ಉದಾ.ಅವನು ಬಂದನೇ? ಅವರು ಬಂದರೇ?

ಬಹಿಃಸ್ಸಂಧಿ : ಸಂಧಿಕಾರ್ಯ ಅರ್ಥಾತ್ ಧ್ವನಿವ್ಯತ್ಯಾಸ ಆಕೃತಿಮಾದ ಸೀಮೆಯ ಹೊರಗೆ ಅರ್ಥಾತ್ ಎರಡು ಆಕೃತಿಮಾಗಳ ನಡುವೆ ಸಂಭವಿಸಿದರೆ ಅದು ಬಹಿಸ್ಸಂಧಿ. ಉದಾ. ಗಾಳಿ + ಅನ್ನು = ಗಾಳಿಯನ್ನು, ಮರ + ಇಂದ = ಮರದಿಂದ

ಬಹಿಃಕೇಂದ್ರೀಯ ಸಮಾಸ : ಕ್ರಿಯಾಕೇಂದ್ರವನ್ನೊಳಗೊಳ್ಳದ ಸಮಾಸವೇ ಬಹಿಃ ಕೇಂದ್ರೀಯ ಸಮಾಸ. ಉದಾ. ಮೂರು + ಕಣ್ಣು = ಮಕ್ಕಣ್ಣ, ನಿಡಿದು + ಮೂಗಿ = ನಿಡುಮೂಗಿ

ಬಹುವಚ : ವಸ್ತು, ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆ ಒಂದಕ್ಕಿಂತ ಹೆಚ್ಚು ಅಂದರೆ ಅನೇಕ ಎಂದು ತಿಳಿಸುವ ಶಬ್ದವು ‘ಬಹುವಚನ’ ಎನಿಸುವುದು. ಉದಾ.ಮನೆಗಳು, ಪುಸ್ತಕಗಳು, ಗಿಡಗಳಿಂದ ಇತ್ಯಾದಿ.

ಬಹುವ್ರೀಹಿ ಸಮಾಸ : ೧. ಎರಡು ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ (ಅನ್ಯಪದ) ಅರ್ಥವು ಮುಖ್ಯವಾಗಿದ್ದರೆ ಅದು ಬಹುವ್ರೀಹಿ ಸಮಾಸ. ಉದಾ. ಮೂರು + ಕಣ್ಣು = ಮುಕ್ಕಣ್ಣ (ಶಿವ), ಕಡಿದು + ಚಾಗಿ = ಕಡುಚಾಗಿ (ಕರ್ಣ), ೨.ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಟ್ಟು ಸೇರಿಸಿರುವ ಮತ್ತು ಅದರ ಅಂಗಗಳಲ್ಲಿ ಒಂದೂ ಪ್ರಧಾನ ಪದವಾಗಿಲ್ಲದಿರುವ ಸಮಸ್ತ ಪದ. ಉದಾ.ಪೀತಾಂಬರ, ಚಕ್ರಪಾಣಿ.

ಭವಿಷತ್ಕಾಲ : ಕ್ರಿಯೆಯು ಮುಂದೆ ನಡೆಯುವ  (ಮುಂದಿನ) ಕಾಲವನ್ನು ಸೂಚಿಸುವ ಪದ. ಇದು ‘ಉವ’ ಎಂಬ ಪ್ರತ್ಯಯವನ್ನು ಸೇರಿಸಿಕೊಳ್ಳುತ್ತದೆ. ಉದಾ.ತಿನ್ನುವನು, ತಿನ್ನುವವು.

ಭಾವನಾಮ : ವ್ಯಕ್ತಿಗಳ, ಪ್ರಾಣಿಗಳ, ವಸ್ತುಗಳ ಗುಣ‑ಸ್ವಭಾವ‑ಸ್ಥಿತಿ ಮೊದಲಾದ ಭಾವ, ಭಾವನೆಗಳನ್ನು ಸೂಚಿಸುವ ಶಬ್ಧಗಳು ಭಾವನಾಮಗಳೆನಿಸುವವು. ಉದಾ. ಸಿಟ್ಟು, ಶಾಂತಿ, ಆನಂದ, ನಗು, ಅಳು ಮುಂತಾದುವು.

ಭಾವಸೂಚಕಾವ್ಯಯ : ಹರ್ಷ, ದುಃಖ, ಕೋಪ, ಆಶ್ಚರ್ಯ. ಮಚ್ಚುಗೆ, ಆಕ್ಷೇಪ, ತಿರಸ್ಕಾರ ಇತ್ಯಾದಿ ಮನೋಭಾವಗಳನ್ನು ವ್ಯಕ್ತಪಡಿಸುವ ಶಬ್ಧಗಳು ಭಾವಸೂಚಕಾವ್ಯಯಗಳೆನಿಸುವವು. ಉದಾ.ಅಯ್ಯೋ, ಅಕ್ಕಟಾ, ಓಹೋ, ಹೋ, ಏ, ಚಃ, ಥು ಮುಂತಾದುವು.

ಭೂತಕಾಲ : ಕ್ರಿಯೆಯು ನಡೆದು ಹೋದ (ಹಿಂದಿನ) ಕಾಲವನ್ನು ಸೂಚಿಸುವ ಕ್ರಿಯಾಪದ. ಅದು ‘ದ’ ಪ್ರತ್ಯಯವನ್ನು ಹತ್ತಿಸಿಕೊಳ್ಳುತ್ತದೆ. ಉದಾ.ನೋಡಿದನು, ನೋಡಿದಳು, ನೋಡಿದರು.

ಭಿನ್ನಾರ್ಥಕರೂಪ : ಭಿನ್ನ ಅರ್ಥಕೊಡುವ ಜೋಡಿ ಪದಗಳು. ಉದಾ. ತಿಂಡಿ‑ತೀರ್ಥ, ಅಕ್ಕ‑ತಂಗಿ, ಎಲೆ‑ಅಡಕೆ.

ಮಮಿಂಕೆಯದದೊಳ್ : ಇವು ಹಳಗನ್ನಡದಲ್ಲಿ ಸಲ್ಲುವನಾಮ ವಿಭಕ್ತಿ ಪ್ರತ್ಯಯಗಳು. ಮ್, ಅಮ್, ಇಮ್, ಕೆ, ಅತ್, ಅ, ಒಳ್ ಇವನ್ನು ಕೂಡಿಸಿ ಕೇಶಿರಾಜನು ‘ಮಮಿಂಕೆಯದದೊಳ್’ ಎಂಬ ಸೂತ್ರ ರಚಿಸಿದ್ದಾನೆ. ನಾಮಪದಗಳ ಮೇಲೆ ಇವು ಹತ್ತುತ್ತವೆ. ಉದಾ.ಮರಂ, ಮರನಂ, ಮರದಿಂ, ಮರಕ್ಕೆ, ಮರದತ್ತಣಿಂ, ಮರದ, ಮರದೊಳ್, ಮರನೆ, ಇವುಗಳ ಕಾರಕ ಸಂಬಂಧವನ್ನು ಅವುಗಳ ಕರ್ತೃ, ಕರ್ಮ, ಕ್ರಿಯೆಯ ಮೇಲಿಂದ ಗುರುತಿಸಬೇಕು. ಉದಾ. ಮರನಿರ್ದುದು (ಕರ್ತೃ), ಮರನಂ ಕಡಿ (ಕರ್ಮ), ಮರದಿಂ ಮಾಡು (ಕರಣ), ಮರಕ್ಕೆಱ ನೀರಂ (ಸಂಪ್ರದಾನ), ಮರದತ್ತಣಿಂ ಎಲೆಯುದಿರ್ದುದು (ಅಪಾದಾನ), ಮರದದು ಪಣ್ (ಸಂಬಂಧ), ಮರದೊಳಿರು (ಅಧಿಕರಣ)

ಮಹಾಪ್ರಾಣ : ಉಸಿರನ್ನು ಘಟ್ಟಿಸಿ ಉಚ್ಚರಿಸುವುದರಿಂದ ಹುಟ್ಟುವ ವರ್ಣಗಳು. ವರ್ಗದ ದ್ವಿತೀಯ ಚತುರ್ಥಾಕ್ಷರಗಳು ಮಹಾಪ್ರಾಣಗಳಾಗಿವೆ. ಉದಾ.ಖ, ಛ, ಠ, ಥ, ಫ, ಘ, ಝ, ಢ, ಧ, ಭ.

ಮೂಲಧಾತು (ರೂಪ) : ಪ್ರತ್ಯಯ ಸೇರದ ಸಹಜ ರೂಪಗಳಿಗೆ ಮೂಲಧಾತು (ರೂಪ) ಗಳೆನ್ನುವರು. ಉದಾ. ಓದು, ಓಡು, ಬಾ, ಬರೆ ಮುಂತಾದುವು.

ಮೂಲಶಬ್ದ : ಪ್ರತ್ಯಯಗಳನ್ನು ಪಡೆದುಕೊಳ್ಳದ ರೂಪಗಳಿಗೆ ಮೂಲಶಬ್ಧಗಳೆನ್ನುವರು. ಇವನ್ನು ‘ಸಹಜ ನಾಮಪ್ರಕೃತಿ’ಗಳೆಂದೂ ಹೇಳುವರು. ಈ ಮೂಲಶಬ್ಧಗಳಲ್ಲಿ ನಾಮರೂಪ, ಕ್ರಿಯಾರೂಪ ಮತ್ತು ಅವ್ಯಯಗಳೆಂದು ಮೂರು ಪ್ರಕಾರಗಳಿರುತ್ತವೆ. ಉದಾ.ಮನೆ, ಹೇಳು, ಗಿಡ, ಆದರೆ, ಹಾಗೆ ಮುಂತಾದುವು.

ಯಕಾರಾಗಮ ಸಂಧಿ : ಆ, ಇ, ಈ, ಎ, ಏ, ಐ, ಓ ಸ್ವರಗಳ ಮುಂದೆ ಸ್ವರವು ಪರವಾದರೆ (ಸಂಧಿ ಪದದಲ್ಲಿ) ‘ಯ್’ ವ್ಯಂಜನ ಹೊಸದಾಗಿ ಆಗಮವಾಗುವುದು. ಉದಾ. ಮುದಿ + ಅಪ್ಪ = ಮುದಿಯಪ್ಪ, ಕಾ + ಉತ್ತ = ಕಾಯುತ್ತ, ಕಟ್ಟಿಗೆ + ಅನ್ನು = ಕಟ್ಟಿಗೆಯನ್ನು

ಯಣ್ ಸಂದಿ : ಇ, ಈ, ಉ, ಊ, ಋ ಕಾರಗಳ ಮುಂದೆ ಸವರ್ಣಗಳಲ್ಲದ, ಸ್ವರಗಳು ಬಂದರೆ ಇ ‑ಈ ಕಾರಗಳ ಸ್ಥಳದಲ್ಲಿ ‘ಯ’ ಕಾರವೂ, ಉ ‑ಊ ಕಾರಗಳ ಸ್ಥಳದಲ್ಲಿ ‘ವ’ ಕಾರವೂ ‘ಋ’ ಕಾರದ ಸ್ಥಳದಲ್ಲಿ ‘ರೇಫ’ ವೂ ಆದೇಶವಾಗಿ ಬರುವವು. ಉದಾ. ಅತಿ + ಅಂತ = ಅತ್ಯಂತ, ಮನು + ಅಂತರ = ಮನ್ವಂತರ, ಪಿತೃ + ಆಜ್ಞಾ = ಪಿತ್ರಾಜ್ಞೆ.

ಯೋಗವಾಹಗಳು : ಸ್ವರಗಳ ಸಹಾಯ ಪಡೆದು ಉಚ್ಚರಿಸುವ ವರ್ಣಗಳು ಯೋಗ ವಾಹಗಳಾಗಿವೆ. ಇವು ಎರಡು. ಅನುಸ್ವರ (೦) ಮತ್ತು ವಿಸರ್ಗ (ಃ) ಉದಾ ಅಂ, ಇಂ, ಅಃ, ಇಃ ಮುಂತಾದುವು.

ರೂಢ ನಾಮ : ಬಹುಕಾಲದಿಂದ ರೂಢಿಯಿಂದ ಬಂದ ಒಂದೇ ವರ್ಗದ ಅಥವಾ ಸಮುದಾಯದ ವಸ್ತುಗಳ ಮತ್ತು ಪ್ರಾಣಿಗಳ ಹೆಸರುಗಳಿಗೆ ‘ರೂಢನಾಮ’ ಗಳೆನ್ನುವರು. ಉದಾ.ಮನೆ, ಶಾಲೆ, ನದಿ ಮುಂತಾದುವು.

ಲಿಂಗ : ನಾಮಪದಗಳನ್ನು ಗುರುತಿಸುವ ವ್ಯಾಕರಣ ತತ್ವ. ಇದು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂಬುದಾಗಿ ಅರ್ಥವತ್ತಾಗಿರುವ ವಿಭಜನೆ.

ಲಿಂಗ ಪಲ್ಲಟ : ಲಿಂಗದ ರಚನೆಯಲ್ಲಾಗುವ ಬದಲಾವಣೆ. ಸಂಸ್ಕೃತದ ಪುಂ, ಸ್ತ್ರೀ, ನಪುಂಸಕ ಲಿಂಗಗಳು ಕನ್ನಡಕ್ಕೆ ಬರುವಾಗ ನಪುಂಸಕಲಿಂಗಗಳಾಗಿಯೇ ಉಳಿಯುತ್ತವೆ. ಉದಾ.(ಸ್ತ್ರೀ) ಧರೆಗಿಳಿಯಿತು.

ಲಿಂಗವೊಂಬತ್ತುತೆಱಂ : ಸಂಸ್ಕೃತದಲ್ಲಿ ಒಂಬತ್ತು ಲಿಂಗಗಳಿವೆ. ೧.ಸ್ತ್ರೀ ‑ಅರಸಿ, ೨.ಪು ‑ಅರಸಂ, ೩.ನ.ಲಿಂ ‑ಕನ್ನಡಿ, ೪.ನಪುಂಸಕ ‑ರವಿ ಮೂಡಿದಂ, ೫.ಪು ಸ್ತ್ರೀಲಿಂಗ ‑ಇವರ್ ಪುರುಷರ್, ಇವರ್ ಸ್ತ್ರೀಯರ್, ೬.ಸ್ತ್ರೀ ನಪುಂಸಕ ‑ಆಪೆಣ್‌ಜಣೆ, ಆಪೆಣ್ ಬಂದುದು, ೭.ತ್ರಿಲಿಂಗ‑ ನೀನರಸಂ, ನೀನರಸಿ, ನೀಪಶು, ೮.ವಾಚ್ಯ, ವಿಶೇಷ್ಯಾಧೀನಲಿಂಗ ‑ಅಭಿಮಾನಿ, ದಾನಿ, ೯.ಅವ್ಯಯ ಲಿಂಗ ‑ಭೋಕನೆ ಬಂದಂ, ಭೋಕನೆ ಬಂದಳ್, ಭೋಕನೆ ಬಂದುದು. ಕೇಶಿರಾಜನು ಇವನ್ನು ಹೇಳಿದರೂ ಕನ್ನಡಕ್ಕೆ ಮೂರೇ ಲಿಂಗಗಳೆಂಬುದನ್ನೂ ಸಮರ್ಥಿಸುತ್ತಾನೆ.

ಲೋಪ : ಸಂಧಿಯಾಗುವಾಗ ಸ್ವರ ಇಲ್ಲವೇ ವ್ಯಂಜನಗಳಲ್ಲಿ ಒಂದು ಬಿದ್ದು ಹೋಗುವುದು. ಉದಾ ಮಾಡು + ಇಸು ಎಂಬುದು ಸಂಧಿಯಾಗಿ ಮಾಡಿಸು ಎಂದಾಗುತ್ತದೆ.

ಕಾರಾಗಮ ಸಂಧಿ : ಅ) ಉ, ಊ, ಋ, ಓ, ಔ ಕಾರಗಳ ಮುಂದೆ ಸ್ವರವು ಬಂದರೆ ‘ವ್’ ವ್ಯಂಜನ ಆಗಮವಾಗುವುದು. ಉದಾ‑ ಮಗು + ಅನ್ನು = ಮಗುವನ್ನು, ದಾತೃ + ಅನ್ನು = ದಾತೃವನ್ನು, ಗೋ + ಅನ್ನು = ಗೋವನ್ನು ಆ)ಆ,ಇ, ಶಬ್ದಗಳ ಮುಂದೆ ಉ, ಊ, ಒ, ಓ ಸ್ವರಗಳು ಬಂದರೆ ‘ವ್’ ವ್ಯಂಜನ ಆಗಮವಾಗುವುದು ಉದಾ‑ ಆ + ಊರು = ಆವೂರು, ಈ + ಓಣಿ = ಈವೋಣಿ. ಇ)‘ಆ’ ಸ್ವರದ ಮುಂದೆ ‘ಅ’ ಇಲ್ಲವೆ ‘ಆ’ ಸ್ವರ ಬಂದರೆ ‘ವ್’ ವ್ಯಂಜನ ಆಗಮ ವಾಗುವುದು.  ಉದಾ‑ ಹೊಲ + ಅನ್ನು = ಹೊಲವನ್ನು, ದುಃಖ + ಆಗು = ದುಃಖವಾಗು.

ವಚನ : ನಾಮಪದವೊಂದು ಗುರುತಿಸುವ ವ್ಯಕ್ತಿ ವಸ್ತು ಮೊದಲಾದವುಗಳ ಸಂಖ್ಯೆ. ಕನ್ನಡದಲ್ಲಿ ಇದು ಒಂದು (ಏಕವಚನ) ಮತ್ತು ಒಂದಕ್ಕಿಂತ ಹೆಚ್ಚು (ಬಹುವಚನ) ಎಂಬುದಾಗಿ ಎರಡು ವಿಧ. ಸಂಸ್ಕೃತದಲ್ಲಿ ಈ ಸಂಖ್ಯೆ ಎರಡು ಎಂಬುದನ್ನು ಸೂಚಿಸಲು ‘ದ್ವಿವಚನ’ ಎಂಬ ಬೇರೊಂದು ವಚನವಿದೆ.

ವಚನ ಪಲ್ಲಟ : ಏಕವಚನದ ಸ್ಥಳದಲ್ಲಿ ಬಹುವಚನವನ್ನೂ ಬಹುವಚನದ ಸ್ಥಳದಲ್ಲಿ ಏಕವಚನವನ್ನೂ ಉಪಯೋಗಿಸುವುದೇ ವಚನ ಪಲ್ಲಟ. ವಾಕ್ಯದ ಕರ್ತೃ, ಕರ್ಮ, ಕ್ರಿಯಾಪದ ಮತ್ತು ಇನ್ನಿತರ ಯಾವುದೇ ಪದಗಳಲ್ಲಿ ಈ ಪಲ್ಲಟ ಕ್ರಿಯೆ ನಡೆಯುತ್ತದೆ. ಉದಾ ಅವನು ಹೋಗಿ ನಾಲ್ಕು ಗಂಟೆಯಾಯಿತು – ನಾಲ್ಕು ಗಂಟೆಗಳಾಯಿತು. ಈ ಪಲ್ಲಟ ಕ್ರಿಯೆ ಕ್ವಚಿತ್ತಾಗಿ ನಡೆಯುತ್ತದೆ.

ವರ್ಣ : ಬರೆಯಲಿಕ್ಕೂ ಉಚ್ಚರಿಸಲಿಕ್ಕೂ ಬರುವ ಅಕ್ಷರಗಳಿಗೆ ವರ್ಣಗಳೆನ್ನುವರು. ಉದಾ ಕ,ಗ,ಚ ಮುಂತಾದುವು.

ವರ್ಣಮಾಲೆ : ಒಂದು ಭಾಷೆಯ ಧ್ವನಿಗಳ (ಧ್ವನಿಮಾ) ಕ್ರಮ ಬದ್ಧವಾದ ಸಮೂಹಕ್ಕೆ ವರ್ಣಮಾಲೆ ಎನ್ನುವರು. ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ೧. ಮೂಲಾಕ್ಷರ ೨. ಗುಣಿತಾಕ್ಷರ ಮತ್ತು ೩. ಒತ್ತಕ್ಷರವೆಂದು ಮೂರುವಿಧ.

ವರ್ಣಾವೃತ್ತಿ : ವರ್ಣಗಳ ಆವೃತ್ತಿ. ಒಂದು ಚರಣದಲ್ಲಿ ವರ್ಣಗಳು ಪುನಃ ಪುನಃ ಬಂದರೆ ವರ್ಣಾವೃತ್ತಿ. ಉದಾ ಸರಗಿಱದೊಱಗಿದ ಬಿರುದರ.

ವರ್ತಮಾನ ಕಾಲ : ಕ್ರಿಯೆಯು ಸದ್ಯ ನಡೆಯುತ್ತಿರುವ ಕಾಲವನ್ನು ಸೂಚಿಸುವ ಕ್ರಿಯಾಪದ. ಅದರ ಪ್ರತ್ಯಯ ‘ಉತ್ತ್’. ಉದಾ ಮನುಷ್ಯ ಹಾಗೂ ಪ್ರಾಣಿಗಳ ಹೆಸರುಗಳು. ರಾಮ, ಭೀಮ, ಎತ್ತು ಚೇತನವಿಲ್ಲದ ಹೆಸರುಗಳೆಂದರೆ ಉದಾ ಕಲ್ಲು, ಕಟ್ಟಿಗೆ, ಗಿಡ, ಬಳ್ಳಿ ಮುಂತಾದುವು.

ವಸ್ತುವಾಚಕ : ವಸ್ತುಗಳ ಹೆಸರುಗಳನ್ನು ಹೇಳುವ ಶಬ್ಧಗಳೆಲ್ಲ ವಸ್ತುವಾಚಕ ನಾಮಪದಗಳು. ವಸ್ತುಗಳಲ್ಲಿ ೧.ಚೇತನವುಳ್ಳ ವಸ್ತುಗಳು ಮತ್ತು ೨.ಚೇತನವಿಲ್ಲದ ವಸ್ತುಗಳು ಅಂದರೆ ಜಡವಸ್ತುಗಳು ಬರುತ್ತವೆ. ಚೇತನವುಳ್ಳವಸ್ತುಗಳೆಂದರೆ ಉದಾ. ಮನುಷ್ಯ ಹಾಗೂ ಪ್ರಾಣಿಗಳ ಹೆಸರುಗಳು (ರಾಮ, ಭೀಮ, ಎತ್ತು). ಚೇತನವಿಲ್ಲದ ಹೆಸರುಗಳೆಂದರೆ ಉದಾ. ಕಲ್ಲು, ಕಟ್ಟಿಗೆ, ಗಿಡ, ಬಳ್ಳಿ ಮುಂತಾದುವು.

ವಿಗ್ರಹ ವಾಕ್ಯ : ಸಮಸ್ತ ಪದದ ಆಂತರಿಕ ರಚನೆಯನ್ನು ವಿವರಿಸಿ ಹೇಳುವ ವಾಕ್ಯ ಇಲ್ಲವೇ ವಾಕ್ಯಾಂಶ. ಉದಾ ಕಲ್ಲೆದೆ ಎಂಬುದಕ್ಕೆ ‘ಕಲ್ಲಿನ ಹಾಗೆ ಕಠಿಣವಾಗಿರುವ ಎದೆ’ ಎಂಬುದು ವಿಗ್ರಹವಾಕ್ಯ. ದಾರಿಗೊಬ್ಬ ಎಂಬುದಕ್ಕೆ ದಾರಿಗೆ + ಒಬ್ಬ ಎಂಬುದು ವಿಗ್ರಹ ವಾಕ್ಯ.

ವಿಧ್ಯರ್ಥ : ‘ವಿಧಿ’ ಎಂದರೆ ನಿಯಮ, ಅಪ್ಪಣೆ, ಆಜ್ಞಾ. ವಿಧ್ಯರ್ಥದಲ್ಲಿ ‘ಎ’ ಪ್ರತ್ಯಯ ಬರುವುದೆಂದು ಕೇಶಿರಾಜ ಹೇಳಿದ್ದಾನೆ. ಆತನಯೆ, ಅವನಯೆ ಎಂಬುವುಗಳನ್ನು ಉದಾಹರಿಸುತ್ತಾನೆ. ‘ಗೊರವನಲ್ಲದೆ ಪೊಗಳೆಂ’ ಎಂಬಲ್ಲಿ ಅಲ್ಲದೆ ಎಂಬುದು ವಿಧ್ಯರ್ಥ ಅಥವಾ ಅವಧಾರಣೆ ಸೂಚಕವಾಗಿದೆ.

ವಿಭಕ್ತಿ : ವಾಕ್ಯದಲ್ಲಿ ನಾಮಪದಗಳನ್ನು ಕ್ರಿಯಾಪದದೊಂದಿಗೆ ಸಂಬಂಧಿಸುವ ಪ್ರತ್ಯಯವೇ ವಿಭಕ್ತಿ. ನಾಮಪದವೊಂದನ್ನು ವಾಕ್ಯದಲ್ಲಿ ಬಳಸಿದಾಗ ಅದು ಗುರುತಿಸುವ ವ್ಯಕ್ತಿ, ವಸ್ತು ಮೊದಲಾದವು ಆ ವಾಕ್ಯವು ಸೂಚಿಸುವ ಘಟನೆಯಲ್ಲಿ ಎಂತಹ ಕಾರ್ಯವನ್ನು ನಡೆಸುತ್ತವೆ ಎಂಬುದನ್ನು ಅದರೊಂದಿಗೆ ಬರುವ ವಿಭಕ್ತಿ ತಿಳಿಸುತ್ತದೆ. ಉದಾ‑ ‘ರಾಜು ಮನೆಗೆ ಹೋದ’. ಎಂಬ ವಾಕ್ಯದಲ್ಲಿ ‘ಮನೆ’ ಎಂಬ ಪದದ ಮುಂದೆ ಬಂದಿರುವ ‘ಗೆ’ ಎಂಬ ಚತುರ್ಥೀ ವಿಭಕ್ತಿ ಪ್ರತ್ಯಯ ಹೋಗುವಿಕೆಯೆಂಬ ಘಟನೆಗೆ ಮನೆಯೇ ಗುರಿ ಎಂಬುದನ್ನು ತಿಳಿಸುತ್ತದೆ. ಕನ್ನಡದಲ್ಲಿ ದ್ವಿತೀಯಾ, ತೃತೀಯಾ, ಚತುರ್ಥೀ, ಪಂಚಮೀ, ಷಷ್ಠೀ ಮತ್ತು ಸಪ್ತಮಿ ಎಂಬ ಆರು ವಿಭಕ್ತಿಗಳಿವೆ.

ವಿಭಕ್ತಿ ಪಲ್ಲಟ : ಒಂದು ವಿಭಕ್ತಿಯ ಸ್ಥಳದಲ್ಲಿ ಇನ್ನೊಂದು ವಿಭಕ್ತಿಯನ್ನು ಉಪಯೋಗಿಸಿ ಮಾತನಾಡುತ್ತಿರುತ್ತೇವೆ. ಅಂತಹ ಪ್ರಕ್ರಿಯೆಯನ್ನು ‘ವಿಭಕ್ತಿ ಪಲ್ಲಟ’ ಎನ್ನುತ್ತೇವೆ. ಉದಾ ಮನೆಯ ಯಜಮಾನ – ಮನೆಗೆ ಯಜಮಾನ (ಷಷ್ಠೀ ಸ್ಥಳದಲ್ಲಿ ಚತುರ್ಥೀ ಪಲ್ಲಟ)

ವಿರುದ್ಧಾರ್ಥಕ : ಎರಡು ಶಬ್ಧಗಳಲ್ಲಿ ಒಂದರ ವಿರುದ್ಧ ಅರ್ಥ ಕೊಡುವ ಶಬ್ಧ ಇನ್ನೊಂದಿರುತ್ತದೆ. ಅದಕ್ಕೆ ವಿರುದ್ಧಾರ್ಥಕ ಪದ ಎನ್ನುವರು. ಉದಾ. ಸುಖ + ದುಃಖ, ಏರು + ಇಳಿ ಮುಂತಾದುವು.

ವಿಶೇಷಣ : ವಸ್ತುಗಳ, ಪ್ರಾಣಿಗಳ ಹಾಗೂ ವ್ಯಕ್ತಿಗಳ ಗುಣ ಸ್ವಭಾವಗಳನ್ನು ವರ್ಣಿಸುವ (ತಿಳಿಸುವ) ಶಬ್ಧಗಳನ್ನು ವಿಶೇಷಣಗಳೆನ್ನುವರು. ಈ ಶಬ್ಧಗಳಲ್ಲಿ ‘ವಿಶೇಷಣ’ ಮತ್ತು ‘ವಿಶೇಷ್ಯ’ ಎಂಬ ಎರಡು ಪದಗಳು ಮುಖ್ಯವಾಗಿರುತ್ತವೆ. ‘ವಿಶೇಷಣ’ವು ವಸ್ತು, ಪ್ರಾಣಿ, ವ್ಯಕ್ತಿಗಳ ಗುಣ ಸ್ವಭಾವವನ್ನು ವರ್ಣಿಸುತ್ತಿದ್ದರೆ, ‘ವಿಶೇಷ್ಯ’ವು ವರ್ಣಿಸಿಕೊಳ್ಳುತ್ತದೆ. ಉದಾ ಬಿಳಿಯಬಟ್ಟೆ ‘ಬಿಳಿಯ’ (ವಿಶೇಷಣ), ಬಟ್ಟೆ (ವಿಶೇಷ್ಯ) ಅದರಂತೆ ಕೆಂಪುಕಾಗದ, ಚಿಕ್ಕ ಬಾಲಕ.

ವಿಸಂದಿ : ಸಂಧಿ ಕ್ರಿಯೆ ನಡೆಯದಿರುವುದು ವಿಸಂಧಿ. ಉದಾ‑  ಹಳೆ + ಮನೆ = ಹಳೆಮನೆ.

ವಿಸರ್ಗ ಸಂಧಿ : ೧.‘ಅ’ ಕಾರದ ಮುಂದಿನ ವಿಸರ್ಗಕ್ಕೆ ‘ಅ’ ಕಾರವಾಗಲಿ, ಮೃದು ವ್ಯಂಜನವಾಗಲಿ ಪರವಾದರೆ ವಿಸರ್ಗದ ಸ್ಥಳದಲ್ಲಿ ‘ಉ’ ಕಾರಾದೇಶವಾಗುತ್ತದೆ. ಬಳಿಕ ‘ಉ’ ಕಾರವು ತನ್ನ ಹಿಂದಿನ ‘ಅ’ ಕಾರದೊಳಗೆ ಕೂಡಿ ಗುಣಸಂಧಿಯಂತೆ ‘ಓ’ ಕಾರವಾಗುತ್ತದೆ. ಈ ‘ಓ’ ಕಾರದ ಮುಂದೆ ‘ಅ’ ಕಾರವಿದ್ದರೆ ‘ಅ’ ಲೋಪವಾಗುತ್ತದೆ.

ಉದಾ : ಮನಃ + ಅನುರಾಗ = ಮನ + ಉ + ಅನುರಾಗ = ಮನೋರಾಗ

ಮನಃ + ಗಮನ = ಮನ + ಉ + ಗಮನ = ಮನೋಗಮನ

೨. ಅ,ಆ ಕಾರಗಳ ಹೊರತು ಉಳಿದ ಸ್ವರಗಳ ಮುಂದೆ ಇರುವ ವಿಸರ್ಗಕ್ಕೆ ಸ್ವರವಾಗಲಿ ಇಲ್ಲವೆ ಮೃದು ವ್ಯಂಜನವಾಗಲಿ ಪರವಾದರೆ ‘ರೇಫೆ’ ಆದೇಶವಾಗುವುದು. ಉದಾ‑ ಹವಿಃ + ಗಂಧ = ಹವಿರ‍್ಗಂಧ

ವ್ಯಂಜನ : ಸ್ವತಂತ್ರವಾಗಿ ಉಚ್ಚಾರ ಮಾಡಲು ಬಾರದ ಅಕ್ಷರಗಳು ವ್ಯಂಜನಗಳೆನಿಸಿ ಕೊಳ್ಳುತ್ತವೆ. ಈ ವ್ಯಂಜನಗಳನ್ನು ಉಚ್ಛಾರ ಮಾಡಬೇಕಾದರೆ ಸ್ವರಗಳ ಸಹಾಯ ಬೇಕಾಗುತ್ತದೆ. ವ್ಯಂಜನಗಳನ್ನು ಉಚ್ಛಾರಣೆಯ ಸ್ಥಾನ ಮತ್ತು ಕರಣಗಳಿಗೆ ತಕ್ಕಂತೆ ವರ್ಗ ಮಾಡಲು ಬರುತ್ತಿದ್ದರೆ ಅವು ‘ವರ್ಗೀಯ ವ್ಯಂಜನ’ಗಳು (ಕ, ಚ, ಟ, ತ, ಪ ವರ್ಗಗಳು). ವ್ಯಂಜನಗಳನ್ನು ನಿರ್ದಿಷ್ಟವಾಗಿ ವರ್ಗ ಮಾಡಲು ಬಾರದಿದ್ದರೆ ಅವು ‘ಅವರ್ಗೀಯ ವ್ಯಂಜನಗಳು’ (ಯ್, ರ್, ಲ, ವ, ಶ್, ಷ್, ಸ್, ಹ, ಳ್).

ವೃತ್ತಿ : ವೃತ್ತಿಯೆಂದರೆ ಸೂತ್ರದ ಅರ್ಥವಿವರಣೆ. ಶಬ್ದದ ಅರ್ಥ ರೂಪವನ್ನು ವಿಗ್ರಹಿಸುವ ಕ್ರಮ.

ವೃದ್ದಿ ಸಂಧಿ : ಅ, ಆ ಕಾರಗಳ ಮುಂದೆ ಏ,ಐ ಕಾರಗಳು ಬಂದರೆ ‘ಐ’ ಕಾರವೂ ಒ,ಓ, ಕಾರಗಳು ಬಂದರೆ ಔ ಕಾರವೂ ಆ ಎರಡೂ ಸ್ವರಗಳ ಸ್ಥಳಗಳಲ್ಲಿ ಆದೇಶವಾಗಿ ಬರುವುದು. ಉದಾ‑ ಲೋಕ + ಏಕ = ಲೋಕೈಕ, ದಿವ್ಯ + ಔಷಧ = ದಿವ್ಯೌಷಧ.

ವ್ಯಾಕರಣ : ಭಾಷೆಯ ರಚನೆಯನ್ನು ತಿಳಿಸುವ ಶಾಸ್ತ್ರ ವ್ಯಾಕರಣವಾಗಿದೆ.

ಷಷ್ಠೀ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿ ಪ್ರತ್ಯಯ ‘ಅ’. ಸಂಬಂಧಾರ್ಥ ಸೂಚಿಸುವ ಕಡೆ ಷಷ್ಠೀ ಬರುತ್ತದೆ. ಉದಾ ರಾಜ್ಯದ ಅರಸ, ಗಿಳಿಯ ಹಿಂಡು

ಷ್ಟುತ್ವ ಸಂದಿ : ‘ಸ’ ಕಾರ ಹಾಗೂ ‘ತ’ ವರ್ಗ ವ್ಯಂಜನಗಳ ಮುಂದೆ ‘ಷ’ ಕಾರ ಹಾಗೂ ‘ಟ’ ವರ್ಗದ ವ್ಯಂಜನಗಳು ಬಂದರೆ ಕ್ರಮವಾಗಿ ‘ಷ’ ಕಾರ ‘ಟ’ ವರ್ಗ ವ್ಯಂಜನಗಳು ಆದೇಶವಾಗುವವು. ಉದಾ : ತಪಸ್ + ಷಡ್ಬಾಗ = ತಪಷಡ್ಬಾಗ, ಧನುಸ್ + ಟಂಕಾರ = ಧನುಷ್ಟಂಕಾರ ಮುಂತಾದುವು.

ಶಬ್ದ : ಅರ್ಥವುಳ್ಳ ಅಕ್ಷರವಾಗಲಿ, ಅಕ್ಷರಗಳ ಸಮುದಾಯವಾಗಲಿ ‘ಶಬ್ದ’ ಎನಿಸುವುದು. ಶಬ್ದಕ್ಕೆ ಪ್ರತ್ಯಯಗಳು ಸೇರಿರುವುದಿಲ್ಲ ಉದಾ‑ ಮನೆ, ಶಾಲೆ, ಆ, ಬಾ ಮುಂತಾದುವು.

ಶುದ್ದಗೆ : ವರ್ಣ ಮಾಲೆಯಲ್ಲಿ ಅಂಗೀಕೃತವಾದ ಸಿದ್ದ ವರ್ಣಗಳು ಶುದ್ದಗೆಗಳು. ಇದು ಸ್ವರ, ವರ್ಗ, ಅವರ್ಗ, ಯೋಗವಾಹ, ದೇಶಿಯವೆಂದು ಪಂಚವಿಧವಾದ ವರ್ಣಗಳಿಂದ ಕೂಡಿರುತ್ತವೆ. ಕೇಶಿರಾಜನು ಅಚ್ಚಕನ್ನಡಕ್ಕೆ ‘ನಾಲ್ವತೇೞಾಯ್ತಳೆ ಶುದ್ಧಗೆ’ ಎಂದು ನಿರ್ಣಯಿಸಿದ್ದಾನೆ.

ಶುದ್ದಾಕ್ಷರ : ಬರೆಯಲೂ ಉಚ್ಚರಿಸಲೂ ಬರುವ ಸಂಜ್ಞೆಯೇ ಶುದ್ದಾಕ್ಷರ. ಇವಕ್ಕೆ ಹೊರತಾದವು ಅಕ್ಷರಗಳಲ್ಲ ಅವು ಮೊಳಗುವ ಧ್ವನಿಗಳೆಂದು ಕೇಶಿರಾಜ ಹೇಳಿದ್ದಾನೆ.

ಶಿಥಿಲದ್ವಿತ್ವ : ಶಿಥಿಲೋಚ್ಛಾರಣೆಗೊಳಗಾದ ದ್ವಿತ್ವ ಪದಗಳು. ಉದಾ. ನೆಗೞಂ, ನುಸುೞಂ, ಶಿಥಿಲದ್ವಿತ್ವವು ಹ್ರಸ್ವಾರಂಭದ ಱ, ೞ, ಕುಳ, ರೇಫಾಂತಗಳು ಮುಂದೆ ‘ಗಳ್’ ಪ್ರತ್ಯಯವನ್ನು ಪಡೆದಿದ್ದರೆ ಬರುತ್ತದೆ. ಆದಿ ದೀರ್ಘವಾದ ಪದಗಳು ಶಿಥಿಲ ವಾಗಲಾರವು ಉದಾ ಬಾಸುಳ್ಗ್‌ಳ್ ಮುಂತಾದುವು.

ಶಿಥಿಲಪ : ಶಿಥಿಲವಾಗಿ ಉಚ್ಚರಿಸುವ ಪದ. ಉದಾ‑ ಅಗೞ್ಗಳ್, ಎಸೞ್ಗಳ್ ಮುಂತಾದುವು.

ಶ್ಚುತ್ವಸಂದಿ : (‘ಶ್ಚು’ ಎಂದರೆ ‘ಶ’ ಕಾರ ಮತ್ತು ‘ಚ’ ಕಾರ ವರ್ಗಾಕ್ಷರಗಳು) ‘ಸ’ ಕಾರ ಮತ್ತು ‘ತ’ ವರ್ಗಾಕ್ಷರಗಳಿಗೆ ‘ಶ’ ಕಾರ ಮತ್ತು ‘ಚ’ ವರ್ಗಾಕ್ಷರಗಳು ಮುಂದೆ ಬಂದರೆ ‘ಸ’ ಕಾರಕ್ಕೆ ‘ಶ’ ಕಾರವೂ ‘ತ’ ವರ್ಗಾಕ್ಷರಗಳಿಗೆ ‘ಚ’ ವರ್ಗಾಕ್ಷರಗಳೂ ಆದೇಶವಾಗಿ ಬರುತ್ತವೆ. ಅಂದರೆ ಪೂರ್ವ ಪದದಲ್ಲಿರುವ ಸ್, ತ್, ಥ್, ದ್, ಧ್, ನ್ ವ್ಯಂಜನಗಳಿಗೆ ಶ್, ಚ್, ಛ್, ಜ್, ಝ್, ಞ ವ್ಯಂಜನಗಳು ಆದೇಶ ಗಳಾಗುವವು ಉದಾ- ಮನಸ್ + ಶಾಂತಿ = ಮನಶ್ಯಾಂತಿ, ಮನಸ್ + ಚಂಚಲ = ಮನಶ್ಚಂಚಲ, ಸತ್ + ಚಿತ್ರ = ಸಚ್ಚಿತ್ರ, ತದ್ + ಜತಿ = ತಜತಿ, ಬೃಹತ್ + ಛತ್ರ = ಬೃಹಚ್ಛತ್ರ

ಸಂಖ್ಯಾ ವಾಚಕ : ಸಂಖ್ಯೆಯನ್ನು ಸೂಚಿಸುವ (ತಿಳಿಸುವ) ಶಬ್ಧ ‘ಸಂಖ್ಯಾವಾಚಕ’ವಾಗಿದೆ. ಈ ಸಂಖ್ಯಾ ವಾಚಕ ಶಬ್ಧಗಳು ವಿಶೇಷಣಗಳಂತೆ ವರ್ಣಿಸುತ್ತವೆ. ಉದಾ ಒಂದು ಊರು, ಎರಡು ದಿನ ಮುಂತಾದವು.

ಸಂದಿ : ಎರಡು ಅಕ್ಷರ (ಸ್ವರ ಇಲ್ಲವೆ ವ್ಯಂಜನ) ಗಳ ನಡುವೆ ಕಾಲ ವಿಲಂಬವಿಲ್ಲದಂತೆ ಮತ್ತು ಅರ್ಥಬಾಧೆಯಾಗದಂತೆ ಸೇರೆಸಿ ಉಚ್ಚರಿಸುವುದು ಸಂಧಿ. ಉದಾ‑  ಮನೆ + ಅನ್ನು = ಮನೆಯನ್ನು ಇದರಲ್ಲಿ ‘ಮನೆ’ ಪೂರ್ವಪದ. ‘ಅನ್ನು’ ಉತ್ತರಪದ. ‘ಮನೆಯನ್ನು’ ಇದು ಸಂಧಿ ಪದ. ಸಂಧಿ ಕಾರ್ಯವು ಪೂರ್ವ ಪದದ ಕೊನೆಯ ‘ಎ’ ಸ್ವರವು ಉತ್ತರ ಪದದ ಆದಿಯ ‘ಅ’ ಸ್ವರ ಸಂಧಿಸುವಲ್ಲಿ ನಡೆಯುತ್ತದೆ. ಕನ್ನಡದಲ್ಲಿ ಬಳಕೆಯಾದ ಸಂಧಿಗಳಲ್ಲಿ ಮುಖ್ಯವಾಗಿ ಎರಡು ವಿಧ, ೧.ಕನ್ನಡ ಸಂಧಿ ೨.ಸಂಸ್ಕೃತ ಸಂಧಿಗಳೆಂದು ಎರಡು ಪ್ರಕಾರಗಳು. ಕನ್ನಡದಲ್ಲಿ ಲೋಪ, ಆಗಮ, ಆದೇಶ ಸಂಧಿಗಳು ಸೇರುತ್ತವೆ. ಸಂಸ್ಕೃತ ಸಂಧಿಯಲ್ಲಿ ಸವರ್ಣದೀರ್ಘ, ಗುಣಸಂಧಿ, ವೃದ್ದಿಸಂಧಿ, ಯಣ್‌ಸಂಧಿ, ಜಶ್ತ್ವಸಂಧಿ, ಶ್ಚುತ್ವ, ಷ್ಟುತ್ವ, ಛತ್ವ, ಅನುನಾಸಿಕ ಮತ್ತು ವಿಸರ್ಗ ಸಂಧಿಗಳು ಸಮಾವೇಶಗೊಳ್ಳುತ್ತವೆ.

ಸಂಧಿದೋಷ : ದೋಷಕ್ಕೊಳಗಾದ ಸಂಧಿ. ಉದಾ‑  ಬರಸಿ ಪ್ರಧಾನಂ (ಶಬ್ಧವೃತ್ತಿದೋಷ), ಹೇಲತಾಕೋಮಲಾಂಗೀ (ಅಶ್ಲೀಲ)

ಸಂಪ್ರದಾನ : ಇದು ಚತುರ್ಥೀ ವಿಭಕ್ತಿ ಕಾರಕ. ಈ ಪದವು ಗೆ,ಕ್ಕೆ ಪ್ರತ್ಯಯಗಳನ್ನು ಹೊಂದಿರುತ್ತದೆ. ಕೊಡಲ್ಪಡುವ ವಸ್ತುವು ಹೊಂದುವ ಪಾತ್ರವು ಸಂಪ್ರದಾನ. ಅಂದರೆ ಕೊಡುವ ವಸ್ತುವು ಯಾರನ್ನು ಸೇರುವದೋ ಅದು ಸಂಪ್ರದಾನ. ಉದಾ ಸ್ವಾಮಿಗಳಿಗೆ ಆಕಳನ್ನು ದಾನವಾಗಿ ಕೊಟ್ಟರು.

ಸಂಬಂಧ : ಇದು ಷಷ್ಠೀ ವಿಭಕ್ತಿ ಕಾರಕ. ಈ ಪದವು ‘ಅ’ ಪ್ರತ್ಯಯ ಹೊಂದಿರುತ್ತದೆ. ವಾಕ್ಯದಲ್ಲಿ ಸಂಬಂಧಾರ್ಥ ತೋರುವಲ್ಲಿ ಇದು ಬಳಕೆಯಾಗುತ್ತದೆ. ಉದಾ. ದೇವರ ಗುಡಿ, ಸೂರ್ಯನ ಕಿರಣ.

ಸಂಬಂಧಕಾವ್ಯಯ : ಎರಡು ಅಥವಾ ಹಲವು ಪದಗಳ /ವಾಕ್ಯಗಳ ಸಂಬಂಧವನ್ನು ಸೂಚಿಸುವ ಶಬ್ಧಗಳು ಸಂಬಂಧಕಾವ್ಯಯ ಎನಿಸುವವು. ಇವು ಪದ ಅಥವಾ ವಾಕ್ಯಗಳ ಸಂಬಂಧ ಕಲ್ಪಿಸುತ್ತವೆ. ಉದಾ. ಮತ್ತು, ಊ, ಸಂಗಡ, ಅಲ್ಲದೆ, ಹೊರತು.

ಸಂಭೋಧಕಾವ್ಯಯ : ಕರೆಯುವಾಗ ಉಪಯೋಗಿಸುವ ಶಬ್ಧಗಳು ಸಂಬೋಧಕಾವ್ಯಯ ಎನಿಸುವವು ಉದಾ. ಎಲೋ, ಎಲಾ, ಎಲೇ, ಓ, ಮುಂತಾದವು.

ಸಂಯುಕ್ತ ಕ್ರಿಯಾಪದ : ಕ್ರಿಯಾಪದದೊಂದಿಗೆ ಇನ್ನೊಂದು ಪದವನ್ನು ವಾಕ್ಯರಚನೆಯ ನಿಯಮದ ಮೂಲಕ ಒಟ್ಟು ಸೇರಿಸಿ ರಚಿಸಿದ ಕ್ರಿಯಾಪದ. ಉದಾ. ಬೀಳ್ಕೋಡು, ಮುಂದಾಗು.

ಸಂಯುಕ್ತಾಕ್ಷg : ಪದ ರಚನೆಯ ನಡುವೆ ಸ್ವರವಿಲ್ಲದೆ ಎರಡು ಅಥವಾ ಮೂರು ವ್ಯಂಜನಗಳಿದ್ದು ಅವುಗಳ ಮುಂದೆ ಸ್ವರವು ಸೇರಿದ ಅಕ್ಷರವು ‘ಸಂಯುಕ್ತಾಕ್ಷರ’ ಎನಿಸುವುದು. ಉದಾ‑  ‘ಪುಸ್ತಕ’ ಇದರಲ್ಲಿ ‘ಸ್ತ’ ಒತ್ತಕ್ಷರ ಇದನ್ನು ಬರೆಯುವ ಕ್ರಮ ಹೀಗೆ ಸ್ + ತ್ + ಅ = ಸ್ತ ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ. ೧.ಸಜತೀಯ ಸಂಯುಕ್ತಾಕ್ಷರ ೨.ವಿಜತಿಯ ಸಂಯುಕ್ತಾಕ್ಷರ. ಒಂದೇ ಜತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜತೀಯ ಸಂಯುಕ್ತಾಕ್ಷರ. ಉದಾ. ಅಪ್ಪ, ಅಕ್ಕ, ಹಗ್ಗ ಇತ್ಯಾದಿ, ಬೇರೆ ಜತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ‘ವಿಜತಿಯ ಸಂಯುಕ್ತಾಕ್ಷರ’ ಎಂದು ಹೆಸರು. ಉದಾ‑ ಪುಸ್ತಕ, ನಾಲ್ಕು, ಕಷ್ಟ ಇತ್ಯಾದಿ.

ಸಂಸ್ಕೃತಲಿಂಗ : ಕನ್ನಡದ ರಚನೆಗೆ ಒಗ್ಗುವ ಸಂಸ್ಕೃತ ನಾಮ ಪ್ರಕೃತಿಗಳು. ಸಮಸಂಸ್ಕೃತ ವಿಧಾನದಿಂದ ಲಿಂಗವಾಗಿ ಕನ್ನಡ ನಾಮವಿಭಕ್ತಿ ಪ್ರತ್ಯಯಗಳನ್ನು ಪಡೆಯುವ ಸಂಸ್ಕೃತ ಪದಗಳು ಉದಾ‑ ಅಂತರ್-ಅಂತರ್ಮುಖ, ಅಂತರ್ಮುಖಂ ಹೀಗೆ ಸಂಸ್ಕೃತ ಪದಗಳು ಕನ್ನಡಕ್ಕೆ ಸಲ್ಲುವಾಗ ಪ್ರಾತಿಪದಿಕ ರೂಪವನ್ನು ‘ಸಂಸ್ಕೃತ ಲಿಂಗ’ವೆಂದು ಕೇಶಿರಾಜ ಕರೆಯುತ್ತಾನೆ.

ಸಕರ್ಮಕರೂಪ : ಕರ್ಮ ಪದದ ಅಪೇಕ್ಷೆಯಿರುವ ರೂಪ, ಸಕರ್ಮಕ ರೂಪವೆನಿಸಿಕೊಳ್ಳುತ್ತದೆ. ಉದಾ‑ ತಿನ್ನು, ಬರೆ, ಹಾಡು ಮುಂತಾದುವು.

ಸತಿಸಪ್ತಮಿ : ‘ಸತ್’ ಎಂದರೆ ಇರುವುದು. ಉಭಯ ಕರ್ತೃವಾದುದು. ಇಲ್ಲಿ ಸಪ್ತಮಿಗೆ ‘ಎ’ ಕಾರ ಬರುತ್ತದೆ. ಉದಾ‑  ‘ಗಾಯಕಂ ಪಾಡೆ ದೇವಂ ಮೆಚ್ಚಿದಂ’ ಸತಿ ಸಪ್ತಮಿಯು ಕೇಶಿರಾಜನ ಪ್ರಕಾರ ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಒಂದು. ಕನ್ನಡದಲ್ಲಿ ಸಮುಚಿತವಾಗಿ ಸತಿ ಸಪ್ತಮಿ ಬರುತ್ತದೆ.

ಸಪ್ತಮಿ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿ ಪ್ರತ್ಯಯ ‘ಅಲ್ಲಿ’. ಅಧಿಕರಣಾರ್ಥದಲ್ಲಿ ‘ಸಪ್ತಮಿ’ ಬರುತ್ತದೆ. ಅಧಿಕರಣ ಎಂದರೆ ಆಧಾರವೆಂದರ್ಥ. ಉದಾ. ಪುಸ್ತಕದಲ್ಲಿ ಕಥನಗಳಿವೆ.

ಸಮಸಂಸ್ಕೃ : ಕನ್ನಡದ ರಚನೆಗೆ ಒಗ್ಗಿದ ಸಂಸ್ಕೃತ ನಾಮಪ್ರಕೃತಿಗಳು. ಸ್ಥೂಲವಾಗಿ ಹೇಳುವುದಾದರೆ ಕನ್ನಡಕ್ಕೂ ಸಂಸ್ಕೃತಕ್ಕೂ ಸಮಾನವಾದ ಪದಗಳು. ಸುಮಾರು ೨೧ ಪದಗಳನ್ನು ಅಪಭ್ರಂಶ ಪ್ರಕರಣದಲ್ಲಿ ಕೇಶಿರಾಜ ಹೇಳಿದ್ದಾನೆ. ಉದಾ. ಮಣಿ, ಮಂಚ, ತೋರಣ ಮುಂತಾದುವು.

ಸಮಸ್ತಪದ : ಎರಡು ಇಲ್ಲವೇ ಹೆಚ್ಚು ಪದಗಳನ್ನು ಪದರಚನೆಯ ನಿಯಮದ ಮೂಲಕ ಒಟ್ಟು ಸೇರಿಸಿ ರಚಿಸಿದ ಆಂತರಿಕ ರಚನೆಯಿರುವ ಪದ. ಉದಾ‑ ಕಗ್ಗಲ್ಲು, ಅರಮನೆ, ಕನ್ನಡದಲ್ಲಿ ಸಮಸ್ತ ಪದಗಳು ನಾಮಪದ ವರ್ಗದಲ್ಲಿ ಮಾತ್ರ ಬರಬಲ್ಲುವು.

ಸಮಾನಾರ್ಥ ರೂಪ : ಅರ್ಥ ಸಮಾನತೆಯಿರುವ ರೂಪಗಳು ಸಮಾನಾರ್ಥಕ ರೂಪಗಳೆನಿಸಿಕೊಳ್ಳುತ್ತವೆ. ಉದಾ‑ ಆನೆ : ಗಜ, ಕರಿ, ದಂತಿ ಮುಂತಾದವು.

ಸಮುಚ್ಚಯದ ಉಮುವಿಧಿ : ‘ಅಮ್’ ಮತ್ತು ‘ಉಮ್’ ಎಂದು ಬರುವ ಸಮುಚ್ಚಯದ ಉಮುವಿಧಿ ದ್ವಿತೀಯೆಯಲ್ಲಿ ಹಾಗೂ ಉಳಿದ ವಿಭಕ್ತಿಯಲ್ಲಿ ಸೇರಿರುತ್ತವೆ. ಉದಾ : ದ್ವಿತೀಯಗೆ ‘ಒಂದೆಡೆಯೊಳ್ ಕಟ್ಟುವುದೆ ಪುಲಿಯುಮಂ ಕವಿಲೆಯುಮಂ’

ಸರ್ವನಾಮ : ನಾಮಪದಗಳು ಸ್ಥಳದಲ್ಲಿದ್ದು, ಅದೇ ಅರ್ಥವನ್ನು ಸೂಚಿಸುವ ಅಥವಾ ಅದೇ ಅರ್ಥದಲ್ಲಿ ಉಪಯೋಗಿಸುವ ಶಬ್ಧಗಳಿಗೆ ಸರ್ವನಾಮ ಎನ್ನುವರು. (ನಾಮಪದಗಳಿಗೆ ಪರ‍್ಯಾಯವಾಗಿ ಬರುವ ರೂಪಗಳು) ಉದಾ : ಅವನು, ಅವಳು, ಅದು, ನಾನು, ನೀನು, ಮುಂತಾದವು. ಸರ್ವನಾಮಗಳಲ್ಲಿ ಪುರುಷಾರ್ಥಕ, ಆತ್ಮಾರ್ಥಕ, ಪ್ರಶ್ನಾರ್ಥಕ ಮತ್ತು ದರ್ಶಕ ಸರ್ವನಾಮಗಳೆಂದು ನಾಲ್ಕು ವಿಧ.

ಸವರ್ಣ : ಹ್ರಸ್ವ‑ದೀರ್ಘ ಸಮ್ಮತವಾದ ಎರಡೆರಡು ಅಕ್ಷರಗಳು. ಅನುಲೋಮ ವಿಲೋಮ ಪದ್ಧತಿಯಿಂದ ಓದಿದರೂ ಸಮಾನವಾಗಿರುವ ವರ್ಣಗಳು. ಉದಾ ಅ,ಆ ‑ ಆ,ಅ ಮುಂತಾದುವು.

ಸವರ್ಣದೀರ್ಘಸಂಧಿ : ಸವರ್ಣ ಸ್ವರಗಳು ಒಂದರ ಮುಂದೆ ಒಂದು ಬಂದಾಗ ಅವೆರಡರ ಸ್ಥಳಗಳಲ್ಲಿ ಅದೇ ಜತಿಯ ದೀರ್ಘ ಸ್ವರ ಆದೇಶವಾಗುವುದು. ಉದಾ‑  ಸುರ + ಅಸುರ = ಸುರಾಸುರ, ಮುನಿ + ಇಂದ್ರ = ಮುನೀಂದ್ರ.

ಸಹಾಯಕ ಕ್ರಿಯಾಪದ : ವಾಕ್ಯದಲ್ಲಿ ಕ್ರಿಯಾಪದದ ಸ್ಥಾನದಲ್ಲಿದ್ದು ಕ್ರಿಯೆಯ ಅರ್ಥವನ್ನು ಪೂರ್ಣಗೊಳ್ಳುವ ಶಬ್ಧಗಳು ಸಹಾಯಕ ಕ್ರಿಯಾಪದ ಎನಿಸಿಕೊಳ್ಳುತ್ತವೆ. ಉದಾ‑ ಸಾಕು, ಬೇಕು, ಬೇಡ ಮುತಾದುವು.

ಸಾಧಿತ ಶಬ್ದ : ಮೂಲ ಶಬ್ದಗಳಿಗೆ ಯಾವುದೇ ಬಗೆಯ ಪ್ರತ್ಯಯಗಳು ಸೇರಿದಾಗ ಆಗುವ ರೂಪಗಳು ಸಾಧಿತ ಶಬ್ದಗಳು. ಉದಾ ಗೌಡಿಕೆ, ಬೇಟೆಗಾರ, ಮಾಲೆಗಾರ ಮುಂತಾದುವು.

ಸಾಮಾನಾವ್ಯಯ : ಯಾವುದೊಂದು ಕ್ರಿಯೆಯು ನಡೆದ ರೀತಿಯನ್ನು ಹೇಳುವಂತಹವು. ಅಂದರೆ ಕ್ರಿಯೆಯ ಸ್ಥಳ, ಕಾಲ, ರೀತಿಗಳನ್ನು ತಿಳಿಸುವಂತಹವು ‘ಸಾಮಾನಾವ್ಯಯ’ ಗಳೆನಿಸುವವು. ಉದಾ‑  ಅಲ್ಲಿ, ಇಲ್ಲಿ, ಆಗ, ಚೆನ್ನಾಗಿ, ಮೆಲ್ಲನೆ ಮುಂತಾದವು.

ಸ್ವರ : ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವ ಅಕ್ಷರಗಳು ಸ್ವರಗಳು. ಇವುಗಳಲ್ಲಿ ೧.ಹ್ರಸ್ವಸ್ವರ ೨.ದೀರ್ಘ ಸ್ವರ ೩.ಪ್ಲುತ ಎಂದು ಮೂರು ವಿಧ. ಹ್ರಸ್ವ ಸ್ವರಗಳು ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು ಉದಾ‑ ಅ,ಇ,ಉ ಮುಂತಾದುವು. ದೀರ್ಘ ಸ್ವರಗಳು ‑ ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರಗಳು. ಉದಾ ಆ, ಈ, ಊ ಮುಂತಾದವು. ಪ್ಲುತ ದೀರ್ಘ ಸ್ವರವನ್ನೆ ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪ್ಲುತ ಎಂದು ಹೆಸರು. ಇದು ಮೂರು ಅಥವಾ ಹೆಚ್ಚು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವವು. ಉದಾ‑ ತಮ್ಮಾ, ಗೆಳೆಯಾ ಮುಂತಾದವು.

ಸ್ವರಲೋ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವ ಪದದ ಕೊನೆಯಲ್ಲಿರುವ ಸ್ವರವು ಸಂಧಿ ಪದದಲ್ಲಿ ಲೋಪವಾಗುವುದು. ಇದರಿಂದ ಮೂಲಾರ್ಥಕ್ಕೆ ಧಕ್ಕೆಯಾಗುವುದಿಲ್ಲ. ಉದಾ‑  ಬೇರೆ + ಒಬ್ಬ = ಬೇರೊಬ್ಬ (‘ಎ’ ಸ್ವರ ಲೋಪ), ಅವನ + ಊರು = ಅವನೂರು (‘ಅ’ ಸ್ವರ ಲೋಪ) ಮುಂತಾದುವು.

ಸ್ಥಾನಪಲ್ಲಟ : ವಾಕ್ಯದಲ್ಲಿಯ ಪದಗಳು ತಮ್ಮ ತಮ್ಮ ಸ್ಥಾನಗಳಲ್ಲಿರದೇ ಬೇರೆ ಸ್ಥಾನಗಳಲ್ಲಿ ಇರುವುದನ್ನು ಸ್ಥಾನಪಲ್ಲಟ ಎನ್ನುತ್ತಾರೆ. ಉದಾ : ಸ್ಥಾನಪಲ್ಲಟ ರೂಪ ‑ ಸರಕಾರಿ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆ. ಸ್ಥಾನದ ಸರಿಯಾದ ರೂಪ‑  ಹೆಣ್ಣು ಮಕ್ಕಳ ಸರಕಾರಿ ಮಾಧ್ಯಮಿಕ ಶಾಲೆ.

ಸ್ತ್ರೀಲಿಂಗ : ಮನುಷ್ಯರಲ್ಲಿ ಹೆಂಗಸರನ್ನು ಸೂಚಿಸುವ ನಾಮಪದಗಳು ‘ಸ್ತ್ರೀಲಿಂಗ’ ಪದಗಳು. ಉದಾ : ಸೀತೆ, ಪಾರ್ವತಿ, ವಿಶಾಲಾಕ್ಷಿ, ಶಾರದೆ ಮುಂತಾದುವು.