ಅಂಕಿತನಾಮ : ಒಂದೇ  ವರ್ಗದ ಹಲವು ವಸ್ತುಗಳಲ್ಲಿ, ಪ್ರಾಣಿಗಳಲ್ಲಿ, ವ್ಯಕ್ತಿಗಳಲ್ಲಿ ಒಂದನ್ನೇ ಬೇರೆ ಮಾಡಿ ತೋರಿಸಲು ಇಟ್ಟ ಹೆಸರುಗಳು, ಅಂಕಿತನಾಮಗಳು. ಉದಾ. ರಮೇಶ, ಕೇಶಿರಾಜ, ವಿಶಾಲಾಕ್ಷಿ ಬೆಳಗಾವಿ.

ಅಂತಸ್ಸಂದಿ : ಸಂಧಿಕಾರ್ಯ ಒಂದು ಆಕೃತಿಯಾದ ಸೀಮೆಯೊಳಗೆಯೇ ಸಂಭವಿಸಿದರೆ ಅದು ಅಂತಸ್ಸಂಧಿ. ಉದಾ. ಕಾಲ + ಅಡಿ= ಕಾಲಡಿ.

ಅಂತಃಕೇಂದ್ರೀಯ ಸಮಾಸ : ಕ್ರಿಯಾ ಕೇಂದ್ರವನ್ನೊಳಗೊಂಡ ಸಮಾಸವೇ ಅಂತಃಕೇಂದ್ರೀಯ ಸಮಾಸ. ಉದಾ. ಅರಸನ + ಮನೆ = ಅರಮನೆ.

ಅಂಶಿ ಸಮಾಸ : ಪೂರ್ವಪದವು ‘ಅಂಶ’ ವಾಚಕವಾಗಿಯೂ ಉತ್ತರ ಪದವು ‘ಅಂಶಿ’ ವಾಚಕವಾಗಿಯೂ ಅವೆರಡೂ ಕೂಡಿ ಆಗುವ ಸಮಾಸವು ‘ಅಂಶಿ ಸಮಾಸ’ ಎನಿಸುವುದು. ಈ ಸಮಾಸದಲ್ಲಿ ಪೂರ್ವಪದದ ಅರ್ಥವು ಪ್ರಧಾನವಾಗಿರುತ್ತದೆ. ಇದಕ್ಕೆ ‘ಅವ್ಯಯಿಭಾವ’ ಸಮಾಸವೆಂದೂ ಕರೆಯುತ್ತಾರೆ. ಉದಾ. ತಲೆ + ಹಿಂದು = ಹಿಂದಲೆ, ಕೈಯ + ಅಡಿ = ಅಂಗೈ.

ಅಕರ್ಮಕ ರೂಪ : ಕರ್ಮ ಪದದ ಅಪೇಕ್ಷೆಯಿಲ್ಲದ ಧಾತುಗಳು ಅಕರ್ಮಕ ರೂಪಗಳೆನಿಸುತ್ತವೆ. ಉದಾ. ಮಲಗು, ಓದು, ಹೋಗು, ಬೀಳು ಮುಂತಾದವು.

ಅಧ್ಯಾರೋಪ : ವಾಕ್ಯದಲ್ಲಿ ಕಾರಕಕ್ಕೂ ಕ್ರಿಯೆಗೂ ನೇಯದ ದೋಷವಿಲ್ಲದಂತೆ ಸಮರ್ಥವಾಗಿ ಅರ್ಥವನ್ನು ಗ್ರಹಿಸುವುದು, ಅಧ್ಯಾರೋಪ.

ಅಧಿಕರಣ : ಇದು ಸಪ್ತಮೀ ವಿಭಕ್ತಿಯ ಕಾರಕ. ಈ ವಿಭಕ್ತಿಯು ‘ಅಲ್ಲಿ’ ಎಂಬ ಪ್ರತ್ಯಯವನ್ನು ಹೊಂದಿರುತ್ತದೆ. ಅಧಿಕರಣ ಎಂದರೆ ಆಧಾರ ಎಂದರ್ಥ. ಈ ಅಧಿಕರಣವು ಕರ್ತೃ ಕರ್ಮ ಪದಕ್ಕೆ ಆಧಾರವಾಗಿರುವುದು. ಉದಾ.ಬಳೆಗಾರನು ನದಿಯಲ್ಲಿ ಮೀನುಗಳನ್ನು ಹಿಡಿದನು.

ಅನ್ಯದೇಶ್ಯ ಪದ : ಕನ್ನಡ ಭಾಷೆಯಲ್ಲಿ ಬಳಕೆಯಾದ ಬೇರೆ ಭಾಷೆಯ ಪದಗಳು ‘ಅನ್ಯದೇಶ್ಯ’ ಪದಗಳೆನಿಸಿಕೊಳ್ಳುತ್ತವೆ. ಕನ್ನಡ ಭಾಷೆಯಲ್ಲಿ ಸಂಸ್ಕೃತ, ಹಿಂದೂಸ್ತಾನಿ, ಪೋರ್ತುಗೀಜ್, ಇಂಗ್ಲಿಶ್ ಶಬ್ಧಗಳು ಹೇರಳವಾಗಿ ಸೇರಿಕೊಂಡಿವೆ. ಉದಾ. ಭೂಮಿ, ರಾತ್ರಿ, ಕಚೇರಿ, ಸಲಾಮು, ಬ್ಯಾಕ್, ಸ್ಕೂಲ್, ಸಾಬೂನು, ಮೇಜು ಮುಂತಾದವು.

ಅನ್ವರ್ಥಕನಾಮ : ಅರ್ಥಕ್ಕೆ ಅನುಗುಣವಾಗಿ ಉದ್ಯೋಗ, ಗುಣ, ಮೊದಲಾದವುಗಳಿಂದ ವಸ್ತುವಿಗೆ ಇಲ್ಲವೆ ವ್ಯಕ್ತಿಗಳಿಗೆ ಬಂದ ಹೆಸರುಗಳು ಅನ್ವರ್ಥಕ ನಾಮಗಳೆನಿಸುವವು. ಉದಾ. ವೈದ್ಯ, ಶಿಕ್ಷಕ, ಕುಂಟ, ವ್ಯಾಪಾರಿ ಮುಂತಾದುವು.

ಅನುಕರಣ ಪದ : ಮಾತಿನ ಭಾವವು ಸ್ಪಷ್ಟವಾಗಿ ಮೂಡುವಂತೆ ನೆರವಾಗುವ ಧ್ವನ್ಯನುಕರಣ ಶಬ್ದಗಳು ಅನುಕರಣ ವಾಚಕಗಳಾಗಿವೆ. ಇದರಿಂದ ಮಾತಿನ ಭಾವದ ಒಳ ಪದರಿನ ಛಾಯೆಯು ಸ್ಪಷ್ಟವಾಗಿ, ನುಡಿಯ ಶಕ್ತಿಯನ್ನು ಹೆಚ್ಚುತ್ತದೆ. ಇವುಗಳಲ್ಲಿ ಕೆಲವು ವಸ್ತುವಿನ ಗುಣವನ್ನು ಸೂಚಿಸಿದರೆ ಉಳಿದವು ಕ್ರಿಯೆಯನ್ನು ವಿಶೇಷಿಸುತ್ತದೆ. ಉದಾ. ಗೊಬ್ಬರವು ‘ಗುಂ’ ಎಂದು ನಾತ ಕೊಡುತ್ತದೆ, ಬಳೆಗಳ ‘ಕಣಿಲ್ ಕಣಿಲ್’ ಎಂದು ದನಿಗೈದುವು.

ಅನುಕರಣಾವ್ಯಯ : ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಕೇಳಿದಂತೆ ಪುನಃ (ಉಚ್ಛಾರಣೆ) ಅನುಕರಣೆ ಮಾಡಿ ಹೇಳುವ ಶಬ್ಧಗಳು ‘ಅನುಕರಣಾವ್ಯಯ’ ಗಳೆನಿಸುವವು. ಉದಾ‑ ಸರಸರ, ಗುಳುಗುಳು, ದಪದಪ

ಅನುನಾಸಿಕ : ಮೂಗಿನಿಂದ ಉಚ್ಚಾರವಾಗುವ ವರ್ಣಗಳು ಅನುನಾಸಿಕವೆನಿಸಿಕೊಳ್ಳುತ್ತವೆ. ಉದಾ. ಙ,ಞ,ಣ್,ನ್,ಮ್

ಅನುನಾಸಿಕ ಸಂಧಿ : ವರ್ಗದ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರವು ಪರವಾದರೂ ಅವುಗಳಿಗೆ ಕ್ರಮವಾಗಿ ಅದೇ ವರ್ಗದ ಅನುನಾಸಿಕ ವರ್ಣಗಳು ಆದೇಶವಾಗುತ್ತವೆ. ಅಂದರೆ ಪೂರ್ವ ಪದದ ಕೊನೆಯಲ್ಲಿ ಕ, ಚ, ಟ, ತ, ಪ ಈ ವರ್ಗೀಯ ವ್ಯಂಜನಗಳ ಮುಂದೆ ಉತ್ತರ ಪದದ ಆದಿಯಲ್ಲಿ ಯಾವುದೇ ಅನುನಾಸಿಕ ವ್ಯಂಜನ ಬಂದರೆ ಅದೇ ವರ್ಗದ ಅನುನಾಸಿಕ ವ್ಯಂಜನಗಳಾದ ಙ, ಞ, ಣ, ನ, ಮ ಗಳು ಆದೇಶವಾಗುತ್ತವೆ. ಉದಾ. ದಿಕ್ + ಮೂಢ = ದಿಙ್ಮೂಢ, ಷಟ್ + ಮಾಸ = ಷಣ್ಮಾಸ, ಚಿತ್ + ಮಯ = ಚಿನ್ಮಯ, ಅಪ್ +ಮಯ = ಅಮ್ಮಯ

ಅಪಾದಾನ : ಇದು ಪಂಚಮೀ ವಿಭಕ್ತಿ ಕಾರಕ. ಈ ಪದವು ‘ಇಂದ’ ಪತ್ಯಯ ಹೊಂದಿರುತ್ತದೆ. ಅಪಾದಾನ ಎಂದರೆ ‘ಅಗಲುವಿಕೆ’ ಎಂದರ್ಥ. ವಸ್ತುವು ಯಾವ ಸ್ಥಾನವನ್ನು ಬಿಟ್ಟು ಅಗಲುವದೋ ಅದು ಅಪಾದಾನ. ಉದಾ.ಮರದಿಂದ ಹಣ್ಣಬಿತ್ತು.

ಅರಿಸಮಾಸ : ಕನ್ನಡದ ಪದದೊಡನೆ ಸಂಸ್ಕೃತ ಪದವನ್ನಾಗಲಿ, ಸಂಸ್ಕೃತ ಪದದೊಡನೆ ಕನ್ನಡ ಪದವನ್ನಾಗಲಿ ಸೇರಿಸಿ ಮಾಡಿದ ಸಮಾಸವು ‘ಅರಿಸಮಾಸ’ ಎನಿಸುವುದು. ಉದಾ. ತುರಗದ + ದಳ = ತುರಗದಳ, ಪಾದಗಳ + ಸಂಕಲೆ = ಪಾದಸಂಕಲೆ.

ಅವಧಾರಣೆ : ನಿಶ್ಚಿತಾರ್ಥವನ್ನು ಕೊಡುವರೂಪ. ಉದಾ.ನಾಳೆ ನೀನು ಶಾಲೆಗೆ ಹೋಗಲೇಬೇಕು.

ಅವಧಾರಣಾರ್ಥಕಾವ್ಯಯ : ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದು ‘ಅವಧಾರಣೆ’ ಎನಿಸುವುದು. ಹೀಗೆ ನಿಶ್ಚಿತಾರ್ಥದಲ್ಲಿ ಬರುವ ಅವ್ಯಯ ಶಬ್ದಗಳು ಅವಧಾರಣಾರ್ಥಕಾವ್ಯಯಗಳಾಗಿವೆ. ಉದಾ. ಎ, ಏ (ಅದೇ ನನ್ನ ಪುಸ್ತಕ)

ಅವ್ಯಯ : ರೂಪಭೇಧವಿಲ್ಲದವು. ಅಂದರೆ ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪದಲ್ಲಿರುವ ಶಬ್ಧಗಳು ‘ಅವ್ಯಯ ಪದ’ ಗಳೆನಿಸುವವು. ಉದಾ‑ ಹಾಗೆ, ಆದರೆ, ಮತ್ತು, ಬಳಿಕ ಮುಂತಾದವು.

ಅವ್ಯಯಿಭಾ ನೋಡಿ ಅಂಶಿಸಮಾಸ

ಅಲ್ಪಪ್ರಾಣ : ಕಡಿಮೆ ಉಸಿರಿನಿಂದ ಉಚ್ಛಾರಗೊಳ್ಳುವ ವರ್ಣಗಳು. ಕನ್ನಡದಲ್ಲಿ ವರ್ಗದ ಪ್ರಥಮ ಮತ್ತು ತೃತೀಯ ವರ್ಣಗಳು ಅಲ್ಪಪ್ರಾಣಗಳಾಗಿವೆ. ಉದಾ ಕ, ಚ, ಟ, ತ, ಪ, ಗ, ಜ, ಡ, ದ, ಬ.

ಅಸಾಧಾರಣ ಲಕ್ಷಣಗಳು : ಕೇಶಿರಾಜನು ಶಬ್ದಮಣಿದರ್ಪಣದ ಸಮಾಪ್ತಿ ವ್ಯಾಕ್ಯಗಳಲ್ಲಿ ಹೇಳಿದ ‘ಅರಿದಲ್ತೆ ಕನ್ನಡಂ’ ಎಂಬುವುದಕ್ಕೆ ಒಳಗಾದ ಕನ್ನಡದ ವೈಶಿಷ್ಟ್ಯಗಳು. ಕನ್ನಡ ಭಾಷೆ ಸಂಸ್ಕೃತಕ್ಕಿಂತ ಭಿನ್ನವಾದುದೆಂಬುದನ್ನು ನಿರ್ಣಯಿಸುವಲ್ಲಿ ಬೇಕಾದ ಆಧಾರಗಳು ಅಸಾಧಾರಣ ಲಕ್ಷಣಗಳಾಗಿವೆ. ಅವು ಇಂತಿವೆ ೧.ಗಮಕ ಸಮಾಸ, ೨.ಱೞ,ಕುಳ,ಕ್ಷಳ, ೩.ಶ್ರುತಿಸಹ್ಯಸಂಧಿ, ೧೪. ಸತಿಸಪ್ತಮಿ, ೫.ಸಮಸಂಸ್ಕೃತ, ೬.ವಿರಹಿತಾವ್ಯಯ ಸಂಸ್ಕೃತ ಲಿಂಗ, ೭.ಪದೋತ್ತಮ ಶಿಥಿಲತ್ವ, ೮.ವಮಹಪಭೇದ, ೯.ಯತಿವಿಲಂಘನ.

ಆಖ್ಯಾತ ಪ್ರತ್ಯಯ : ಕ್ರಿಯಾರೂಪಗಳ ಕೊನೆಯಲ್ಲಿ ಕಾಣಿಸುವ ಪುರುಷ ‘ಲಿಂಗ’ ವಚನಗಳನ್ನು ಸೂಚಿಸುವ ಪ್ರತ್ಯಯ ಆಖ್ಯಾತ ಪ್ರತ್ಯಯ. ಉದಾ.ಹೋದನು ಎಂಬ ಕ್ರಿಯಾಪದದಲ್ಲಿ ಪ್ರಥಮ ಪುರುಷ ಪುಲ್ಲಿಂಗ ಏಕವಚನವನ್ನು ಸೂಚಿಸುವ ‘ಮ’ ಎಂಬ ಆಖ್ಯಾತ ಪ್ರತ್ಯೆಯವಿದೆ.

ಆಗಮ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದ ಮತ್ತು ಉತ್ತರಪದಗಳೆರಡರಲ್ಲಿಯೂ ಎಲ್ಲ ಅಕ್ಷರಗಳು ಸಂಧಿ ಪದದಲ್ಲಿ ಇರುವುದಲ್ಲದೆ ಹೊಸದಾಗಿ ‘ಯ್’ ಮತ್ತು ‘ವ್’ ವ್ಯಂಜನಗಳು ಆಗಮವಾಗುತ್ತದೆ. ಈ ಕ್ರಿಯೆಗೆ ಆಗಮಸಂಧಿ ಎಂದು ಹೆಸರು. ಉದಾ. ಮನೆ + ಅನ್ನು = ಮನೆಯನ್ನು, ಗುರು + ಅನ್ನು = ಗುರುವನ್ನು

ಆತ್ಮನೇಪz : ಸಂಸ್ಕೃತದ ಕ್ರಿಯಾಪದಗಳಲ್ಲಿ ಎರಡು ರೀತಿಯ ಆಖ್ಯಾತ ಪ್ರತ್ಯಯಗಳು ಪ್ರಯುಕ್ತವಾಗುತ್ತವೆ. ಅವುಗಳಲ್ಲಿ ಒಂದು ಪರಸ್ಮೈಪದದ ಪ್ರತ್ಯಯಗಳು ಮತ್ತು ಇನ್ನೊಂದು ಆತ್ಮನೇಪದದ ಪ್ರತ್ಯಯಗಳು. ಕ್ರಿಯಾಪದವು ತಿಳಿಸುವ ಘಟನೆಯ ಫಲ ಅದನ್ನು ನಡೆಸಿದವನಿಗೆ ಲಭಿಸುವುದಾದರೆ ಮಾತ್ರ ಆತ್ಮನೇ ಪದದ ಪ್ರತ್ಯಯವನ್ನು ಬಳಸಬೇಕೆಂಬ ನಿಯಮ ಹಿಂದಿನಕಾಲದಲ್ಲಿದ್ದಿರಬೇಕು. ಆದರೆ ಸಂಸ್ಕೃತದಲ್ಲಿ ಆ ನಿಯಮ ಹೆಚ್ಚಿನೆಡೆಯಲ್ಲೂ ಉಳಿದಿಲ್ಲ.

ಆತ್ಮಾರ್ಥಕ : ಒಂದು ಘಟನೆಯಲ್ಲಿ ಎರಡು ಬೇರೆ ಬೇರೆ ಕಾರ್ಯಗಳನ್ನು ಒಂದೇ ವ್ಯಕ್ತಿ ವಹಿಸುವುದಿದ್ದಲ್ಲಿ ಆ ಘಟನೆಯನ್ನು ಸೂಚಿಸುವ ಕ್ರಿಯಾಪದ ಇಲ್ಲವೆ ವಾಕ್ಯ ಆತ್ಮಾರ್ಥಕವೆನಿಸುತ್ತದೆ. ಕನ್ನಡದಲ್ಲಿ ಇಂತಹ ಆತ್ಮಾರ್ಥಕ ಕ್ರಿಯಾಪದವನ್ನು ರಚಿಸಲು ಅವಕ್ಕೆ ಕೊಳ್ಳು ಎಂಬುದನ್ನು ಸೇರಿಸಬೇಕು. ಉದಾ. ಆವನು ಮಲ್ಲಪ್ಪನ ಕಡೆಯಿಂದ ಹೊಡೆಯಿಸಿಕೊಂಡ. ಇಲ್ಲಿ ಹೊಡೆಯುವ ಕಾರ್ಯವನ್ನು ಮತ್ತು ಹೊಡೆತ ತಿನ್ನುವ ಕಾರ್ಯವನ್ನು ಮಾಡಿದ ವ್ಯಕ್ತಿ ಒಬ್ಬನೇ.

ಆದೇಶ ಸಂದಿ : ಕನ್ನಡ ವ್ಯಂಜನ ಸಂಧಿಗಳಲ್ಲಿ ಉತ್ತರ ಪದದ ಆದಿಯಲ್ಲಿರುವ ವ್ಯಂಜನದ ಸ್ಥಳದಲ್ಲಿ ಬೇರೊಂದು ವ್ಯಂಜನವು ಸಂಧಿ ಪದದಲ್ಲಿ ಆದೇಶವಾಗಿ ಬರುವುದು ಆದೇಶ ಸಂಧಿ. ಈ ಆದೇಶ ಸಂಧಿಯಲ್ಲಿ ಉತ್ತರ ಪದವು ಮುಖ್ಯವಾಗಿರುತ್ತದೆ. ಉದಾ. ಮಳೆ + ಕಾಲ = ಮಳೆಗಾಲ, ಇಲ್ಲಿ ಉತ್ತರ ಪದದ ‘ಕ’ ವ್ಯಂಜನದ ಸ್ಥಳದಲ್ಲಿ ‘ಗ’ ವ್ಯಂಜನ ಆದೇಶವಾಗಿ ಬಂದಿದೆ. (ಹೆಚ್ಚಾಗಿ ಕ, ತ, ಪ ಗಳಿಗೆ ಗ, ದ, ಬ ಗಳು ಆದೇಶವಾಗಿ ಬರುವವು.)

ಉಪಧ್ಮಾನೀಯ : ‘ಧ್ಮಾ’ ಎಂದರೆ ‘ಊದು’ ಎಂದರ್ಥ. ‘ಉಪಧ್ಮಾನ’ಕ್ಕೆ ಊದುವುದಕ್ಕೆ ಸಮೀಪದಲ್ಲಿರುವುದು. ಎಂದರೆ ಕಡಿಮೆ ಜೋರಿನಿಂದ ಊದುವುದು ಎಂದರ್ಥವಾಗುತ್ತದೆ. ಹಾಗೆ ಊದಿದಾಗ ಉಂಟಾಗುವ ಧ್ವನಿಗೆ ಉಪಧ್ಮಾನೀಯ ಎಂಬ ಸಂಜ್ಞೆ.

ಏಕವಚನ : ವಸ್ತು, ಪ್ರಾಣಿ ಅಥವಾ ವ್ಯಕ್ತಿಗಳ ಸಂಖ್ಯೆ ‘ಒಂದು ಎಂದು ತಿಳಿಸುವ ಶಬ್ಧವು ‘ಏಕವಚನ’ ಎನಿಸುವುದು. ಉದಾ. ಮನೆಯು, ಪುಸ್ತಕವನ್ನು, ಹುಡುಗನ.

ಕರಣ : ಇದು ತೃತೀಯಾ ವಿಭಕ್ತಿ ಕಾರಕ. ಈ ಪದವು ಕರಣಾರ್ಥದಲ್ಲಿ ‘ಇಂದ’ ಪ್ರತ್ಯಯ ಹೊಂದಿರುತ್ತದೆ. ಇದು ವಾಕ್ಯದಲ್ಲಿಯ ಕ್ರಿಯೆಯನ್ನುಂಟು ಮಾಡುವುದರಲ್ಲಿ ಮುಖ್ಯ ಸಾಧನವಾಗಿರುತ್ತದೆ. ಉದಾ. ಕೊಡಲಿಯಿಂದ ಮರವನ್ನು ಕಡಿದನು.

ಕರ್ತೃ : ಇದು ಪ್ರಥಮಾ ವಿಭಕ್ತಿಯ ಕಾರಕ. ಆ ಪದದ ಕರ್ತೃರ್ಥದಲ್ಲಿ ‘ಉ’ ಪ್ರತ್ಯಯ ಹೊಂದಿರುತ್ತದೆ. ಅದು ವಾಕ್ಯದಲ್ಲಿಯ ಕ್ರಿಯೆಯನ್ನು ಉಂಟು ಮಾಡುವುದರಲ್ಲಿ ಪ್ರಧಾನವಾಗಿದೆ. ಅಂದರೆ ಕ್ರಿಯೆಗೆ ಆಶ್ರಯವಾಗಿದೆ. ಇದರಲ್ಲಿ ಎರಡು ಬಗೆಗಳಿವೆ. ೧.ಸ್ವಯಂ ಪ್ರೇರಣೆಯಿಂದ ಕ್ರಿಯೆಯನ್ನುಂಟು ಮಾಡುವ ಕರ್ತೃ, ೨.ಪರರ ಪ್ರೇರಣೆಯಿಂದ ಕ್ರಿಯೆಯನ್ನುಂಟು ಮಾಡುವ ಕರ್ತೃ. ಉದಾ.ಕೂಸು ಮಲಗಿತು (ಸ್ವಯಂ ಪ್ರೇರಣೆ), ತಾಯಿಯು ಕೂಸನ್ನು ಮಲಗಿಸಿದಳು (ಪರರ ಪ್ರೇರಣೆ)

ಕರ್ಮ : ಇದು ದ್ವಿತೀಯಾ ವಿಭಕ್ತಿ ಕಾರಕ. ಈ ಪದವು ಕರ್ಮಾರ್ಥದಲ್ಲಿ ‘ಅನ್ನು’ ಪ್ರತ್ಯಯ ಹೊಂದಿರುತ್ತದೆ. ಇದು ವಾಕ್ಯದಲ್ಲಿ ‘ಕ್ರಿಯೆಗೆ ವಿಷಯ’ ವಾಗಿರುತ್ತದೆ. ಉದಾ.ಹುಡುಗನು ಪುಸ್ತಕವನ್ನು ಓದಿದನು.

ಕರ್ಮಧಾg : ೧. ವಿಶೇಷ‑ವಿಶೇಷ್ಯಗಳು, ಉಪಮಾನ‑ಉಪಮೇಯಗಳು ಸೇರಿ ಆಗುವ ಮತ್ತು ಪೂರ್ವಪದದಲ್ಲಿ ಸಂಭಾವನೆ, ಅವಧಾರಣೆ ತೋರಿದ ಸಮಾಸ ಕರ್ಮಧಾರೆ ಎನಿಸಿಕೊಳ್ಳುತ್ತದೆ. ಉದಾ. ಹಿರಿದು + ಜೇನು = ಹೆಜ್ಜೇನು, ಮೆಲ್ಲಿತು + ನುಡಿ = ಮೆಲ್ನುಡಿ, ಇನಿದು + ಸರ = ಇಂಚರ, ೨.ಸಂಸ್ಕೃತದಲ್ಲಿ ಒಂದೇ ವಿಭಕ್ತಿಯಲ್ಲಿರುವ ಎರಡು ನಾಮಪದಗಳನ್ನು ಒಟ್ಟಿಗೆ ಸೇರಿಸಿ ರಚಿಸಿದ ಸಮಸ್ತ ಪದ. ಉದಾ.ಕೃಷ್ಣಸರ್ಪ, ಚಂದ್ರ ಮುಖಂ ಇವುಗಳಲ್ಲಿ ಎರಡನೆಯ ಅಂಗ ಪ್ರಧಾನವಾಗಿರುವ ಕಾರಣ ಇದು ತತ್ಪುರುಷದ ಪ್ರಭೇದವಾಗಿದೆ.

ಕಾಗುಣಿತ : ನೋಡಿ ಗುಣಿತಾಕ್ಷರ

ಕಾರಕ : ೧. ವಾಕ್ಯದಲ್ಲಿಯ ನಾಮವಿಭಕ್ತಿಗಳ ಕ್ರಿಯಾರ್ಥವನ್ನುಂಟು ಮಾಡುವಂತಹುಗಳನ್ನು ‘ಕಾರಕ’ ಗಳೆಂದು ಸ್ಥೂಲವಾಗಿ ಕರೆಯಬಹುದು. ಒಂದೊಂದು ವಿಭಕ್ತಿಯೂ ಒಂದೊಂದು ಕಾರಕ ಸಂಬಂಧ ಸೂಚಿಸುತ್ತದೆ. ಕರ್ತೃ, ಕರ್ಮ, ಕರಣ, ಸಂಪ್ರದಾನ, ಅಪಾದಾನ, ಸಂಬಂಧ, ಅಧಿಕರಣ ಎಂಬ ಏಳು ಕಾರಕಗಳಿವೆ, ೨. ಡಿ.ಎನ್. ಭಟ್‌ರು ಹೇಳುವಂತೆ ಸಂಸ್ಕೃತದಲ್ಲಿ ವಿಭಕ್ತಿಗೂ ಅದರ ಅರ್ಥಕ್ಕೂ ನಡುವೆ ನೇರವಾದ ಸಂಬಂಧವಿಲ್ಲವಾದ ಕಾರಣ, ಅವೆರಡನ್ನು ಸಂಬಂಧಿಸಲು ಮತ್ತು ಬೇರೆ ಕೆಲವು ವ್ಯಾಕರಣ ನಿಯಮಗಳನ್ನು ಸುಲಭವಾಗಿ ಹೇಳಲು ಸಾಧ್ಯವಾಗುವಂತೆ ವೈಯಾಕರಣಿಗಳು ಕಲ್ಪಿಸಿಕೊಂಡಿರುವ ವ್ಯಾಕರಣ ತತ್ವ ಇಲ್ಲವೇ ಪರಿಕಲ್ಪನೆಯೇ ಕಾರಕ (ಡಿ.ಎನ್.ಎಸ್.ಭಟ್.೨೦೦೦).

ಕಾಲಪಲ್ಲಟ : ಭೂತ, ವರ್ತಮಾನ, ಭವಿಷತ್ ಕಾಲಗಳಲ್ಲಿ ಯಾವುದೇ ಒಂದು ಕಾಲದಲ್ಲಿ ಹೇಳಬೇಕಾದ ಕ್ರಿಯೆಯನ್ನು ಬೇರೊಂದು ಕಾಲದ ಕ್ರಿಯಾರೂಪದಿಂದ ಹೇಳುವುದನ್ನು ‘ಕಾಲಪಲ್ಲಟ’ ಎನ್ನುವರು. ಉದಾ. ಹುಡುಗ ಈಗ ಶಾಲೆಗೆ ಹೋಗುತ್ತಾನೆ. ಈಗ ಹೋಗುವನು (ವರ್ತಮಾನ ಕಾಲದ ಬದಲು ಭವಿಷತ್ ಕಾಲದ ಕ್ರಿಯಾಪದ ಪಲ್ಲಟ).

ಕ್ರಿಯಾಪ : ವಾಕ್ಯದಲ್ಲಿಯ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಅಥವಾ ಕ್ರಿಯೆಯು ಪೂರ್ಣವಾಗಿರುವುದನ್ನು ತಿಳಿಸುವ ಶಬ್ಧ ಕ್ರಿಯಾಪದ. ಉದಾ. ನೋಡಿದನು, ಬರೆದಳು, ಹೋದರು, ಮುಂತಾದುವು.

ಕ್ರಿಯಾಪ್ರಕೃತಿ : ಕ್ರಿಯಾ ವಿಭಕ್ತಿ ಪ್ರತ್ಯಯ (ಆಖ್ಯಾತ ಪ್ರತ್ಯಯ) ಸೇರುವ ಪ್ರಕೃತಿಗಳಿಗೆ ಕ್ರಿಯಾ ಪ್ರಕೃತಿ ಎಂದು ಹೆಸರು. ಉದಾ‑ ಬರೆ, ಹೇಳು, ಹಾಡು ಮುಂತಾದುವು.

ಕ್ರಿಯಾವಾಚಕಾವ್ಯಯ : ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲಿದ್ದು, ಕ್ರಿಯೆಯು ಅರ್ಥವನ್ನು ಹೇಳುವ ಅಥವಾ ಪೂರ್ಣಗೊಳಿಸುವ ಶಬ್ದಗಳು ಕ್ರಿಯಾವಾಚಕ ಅವ್ಯಯಗಳೆನಿಸುವವು. ಉದಾ. ಉಂಟು, ಬೇಕು, ಸಾಕು, ಮುಂತಾದುವು.

ಕ್ರಿಯಾಸಮಾಸ : ೧. ಪೂರ್ವಪದದಲ್ಲಿರುವ ನಾಮಪದವು ಉತ್ತರ ಪದದಲ್ಲಿಯ ಕ್ರಿಯಾಪದ ಇಲ್ಲವೆ ಕೃದಂತದೊಡನೆ ಕೂಡಿ ಆಗುವ ಸಮಾಸವು ‘ಕ್ರಿಯಾಸಮಾಸ’ ಎನಿಸುವುದು. ಉದಾ.ಮೈಯನ್ನು + ತಡವಿ = ಮೈದಡವಿ, ಕೈಯನ್ನು + ಕೊಟ್ಟನು= ಕೈಕೊಟ್ಟನು, ೨. ಕ್ರಿಯಾಪದದೊಂದಿಗೆ ಇನ್ನೊಂದು ಪದವನ್ನು ಸೇರಿಸಿ ರಚಿಸಿದ ಸಂಯುಕ್ತ ಕ್ರಿಯಾಪದ. ಉದಾ‑ ಕೈಮುಗಿ, ಮೆರೆವೇರು. ಕನ್ನಡದ ವೈಯಾಕರಣಿಗಳು ಇದನ್ನು ಸಮಾಸ (ಸಮಸ್ತಪದ) ಗಳೆಂದು ತಪ್ಪಾಗಿ ಪರಿಗಣಿಸಿದ್ದಾರೆ (ಡಿ.ಎನ್.ಎಸ್.ಭಟ್, ೨೦೦೦)

ಕೃತ್ ಪ್ರತ್ಯಯ : ಸಂಸ್ಕೃತದಲ್ಲಿ ನೇರವಾಗಿ ಒಂದು ಧಾತುವಿನೊಂದಿಗೆ ಸೇರಿಸಲು ಬಳಸುವ ಪದರಚನೆಯ ಪ್ರತ್ಯಯ. ಉದಾ ಧನ್ ಎಂಬ ಧಾತುವಿನಿಂದ ಧನ ಎಂಬ ಪದವನ್ನು ರಚಿಸಲು ಪ್ರಯುಕ್ತವಾಗಿರುವ ‘ಅ’ ಎಂಬ ಪ್ರತ್ಯಯ.

ಕೃದಂತ : ಧಾತುಗಳಿಗೆ ‘ಕೃತ್’ ಪ್ರತ್ಯಯಗಳು ಸೇರಿದರೆ ಕೃದಂತ ಪದಗಳಾಗುತ್ತವೆ. ಕೃದಂತ ಪದಗಳು ಕ್ರಿಯಾಪದಗಳಂತೆ ಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲ. ಅವು ಅಪೂರ್ಣ ಕ್ರಿಯೆಯನ್ನು ತಿಳಿಸುತ್ತವೆ. ಉದಾ. ಮಗು ಹಾಲನ್ನು ಕುಡಿದು ಸುಖವಾಗಿ ಮಲಗಿತು. ಈ ವಾಕ್ಯದಲ್ಲಿ ‘ಕುಡಿದು’ಎಂಬಲ್ಲಿ ಕುಡಿಯುವ ಕ್ರಿಯೆ ಪೂರ್ಣವಾಗುವುದಿಲ್ಲ. ಆದ್ದರಿಂದ ‘ಕುಡಿದು’ ಎಂಬುದು ಕೃದಂತರೂಪ.

ಗದಬಾದೇಶ ಸಂದಿ : ಸಮಾಸದಲ್ಲಿ ಉತ್ತರ ಪದದ ಆದಿಯಲ್ಲಿರುವ ಕ, ತ, ಪ ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗುವವು. ಇದಕ್ಕೆ ‘ಗದಬಾದೇಶ ಸಂಧಿ’ ಎಂದು ಹೆಸರು. ಉದಾ. ಹಳ + ಕನ್ನಡ = ಹಳಗನ್ನಡ, ಹುಲಿ + ತೊಗಲು = ಹುಲಿದೊಗಲು, ಕಣ್+ ಪನಿ = ಕಂಬನಿ.

ಗಮಕ ಸಮಾ : ೧. ಪೂರ್ವ ಪದವು ಸರ್ವನಾಮ ಇಲ್ಲವೆ ಕೃದಂತವಾಗಿದ್ದು ಅದು ಉತ್ತರ ಪದದಲ್ಲಿಯ ನಾಮಪದದೊಡನೆ ಕೂಡಿ ಆಗುವ ಸಮಾಸವು ‘ಗಮಕ ಸಮಾಸ’ ಎನಿಸುವುದು. ಉದಾ‑ ಅವನು + ಹುಡುಗ = ಆ ಹುಡುಗ, ಉಡುವುದು+ ದಾರ = ಉಡುದಾರ, ೨.ಕೃದಂತಗಳೊಂದಿಗೆ ಅಥವಾ ಆ,ಈ ಮೊದಲಾದ ಸ್ಥಾನ ಸೂಚಕ ಪದಗಳೊಂದಿಗೆ ನಾಮ ಪದಗಳನ್ನು ಸೆರಿಸಿ ರಚಿಸಿರುವ ಪದಗುಚ್ಛಗಳು. ಉದಾ.ತೂಗುವ ತೊಟ್ಟಿಲು, ಆ ಮನೆ, ಕನ್ನಡದ ವೈಯಾಕರಣಿಗಳು ಇವನ್ನು ಸಮಾಸವೆಂದು ತಪ್ಪಾಗಿ ಪರಿಗಣಿಸಿದ್ದಾರೆ. (ಡಿ.ಎನ್.ಎಸ್.ಭಟ್, ೨೦೦೦)

ಗುಣವಾಚಕ : ವಸ್ತು, ಪ್ರಾಣಿ, ವ್ಯಕ್ತಿಗಳ ಗುಣ ಸ್ವಭಾವಗಳನ್ನು, ರೀತಿಗಳನ್ನು ವರ್ಣಿಸುವ ಅಥವಾ ವಿಶ್ಲೇಷಿಸುವ ಶಬ್ಧಗಳನ್ನು, ‘ಗುಣವಾಚಕ’ ಗಳೆಂದು ಹೇಳುವರು. ಉದಾ.ದೊಡ್ಡ, ಚಿಕ್ಕ, ಹಿರಿಯ, ಕಿರಿಯ ಮುಂತಾದುವು. ಇದರಲ್ಲಿ ಎರಡು ವಿಧ. ೧. ನಾಮಪದಗಳನ್ನು ವರ್ಣಿಸುವುದು ನಾಮ ವಿಶೇಷಣ ಉದಾ. ದೊಡ್ಡ ಹುಡುಗ, ಮುಂತಾದುವು. ೨. ಕ್ರಿಯಾಪದಗಳನ್ನು ವರ್ಣಿಸುವುದು ಕ್ರಿಯಾವಿಶೇಷಣ ಉದಾ. ವೇಗವಾಗಿ ಓಡು ಮುಂತಾದುವು.

ಗುಣ ಸಂದಿ : ಅ, ಆ ಕಾರಗಳ ಮುಂದೆ ಇ,ಈ ಕಾರಗಳು ಪರವಾದರೆ ‘ಏ’ ಕಾರವೂ ಉ,ಊ ಕಾರಗಳು ಬಂದರೆ ‘ಓ’ ಕಾರವೂ ‘ಋ’ ಕಾರ ಪರವಾದರೆ ‘ಅರ್’ ಎಂಬುದು ಆ ಎರಡೂ ಸ್ವರಗಳ ಸ್ಥಳಗಳಲ್ಲಿ ಆದೇಶವಾಗಿ ಬರುವುದು. ಉದಾ. ನರ + ಇಂದ್ರ = ನರೇಂದ್ರ, ಸೂರ್ಯ + ಉದಯ = ಸೂರ್ಯೋದಯ, ಮಹಾ + ಋಷಿ = ಮಹರ್ಷಿ.

ಗುಣಿತಾಕ್ಷ : ವ್ಯಂಜನಗಳಿಗೆ ಸ್ವರಗಳನ್ನು ಅಂದರೆ ಸ್ವರಚಿಹ್ನೆಗಳನ್ನು ಸೇರಿಸುವುದರಿಂದ ಉಂಟಾಗುವ ವರ್ಣಗಳಿಗೆ ‘ಗುಣಿತಾಕ್ಷರ’ ಅಥವಾ ಕಾಗುಣಿತಗಳೆನ್ನುವರು. ಉದಾ. ಕ್ + ಅ = ಕ, ಕ್ + ಆ = ಕಾ ಮುಂತಾದುವು.

ಚತುರ್ಥಿ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿ ಪ್ರತ್ಯಯ ಗೆ, ಕ್ಕೆ. ಈ ವಿಭಕ್ತಿಗೆ ಸಂಪ್ರದಾಯ ಕಾರಕದ ಸಂಬಂಧವಿದೆ. ಅಂದರೆ ಕೊಡುವ ವಸ್ತುವು ಯಾರನ್ನು ಸೇರುವದೋ ಅಲ್ಲಿಯ ಮೂಲ ಪದಕ್ಕೆ ಚತುರ್ಥಿ ಬರುತ್ತದೆ. ಉದಾ.ಮಕ್ಕಳಿಗೆ ಪುಸ್ತಕಗಳನ್ನು ಕೊಟ್ಟರು.

ಛತ್ವ ಸಂದಿ : ಇದು ಸಂಸ್ಕೃತದ ವ್ಯಂಜನ ಸಂಧಿ. ಪೂರ್ವ ಪದಾಂತ್ಯದಲ್ಲಿ ಅನುನಾಸಿಕವಲ್ಲದ ವರ್ಗೀಯ ವ್ಯಂಜನಕ್ಕೆ ಪರವಾದ ‘ಶ’ ಕಾರಕ್ಕೆ ‘ಛ’ ಕಾರಾದೇಶ ವಾಗುವುದು. ಉದಾ‑ ವಿದ್ಯುತ್ + ಶಕ್ತಿ = ವಿದ್ಯುಚ್ಛಕ್ತಿ, ಉತ್ > ಉಚ್ + ಶ್ವಾಸ= ಉಚ್ಛಾಸ.

ಜಿಹ್ವಾಮೂಲೀಯ : ಜಿಹ್ವಾಮೂಲದಲ್ಲಿ (ನಾಲಿಗೆಯ ಮೂಲದಲ್ಲಿ) ಹುಟ್ಟುವ ಧ್ವನಿಗೆ ಜಿಹ್ವಾಮೂಲೀಯವೆಂದು ಹೆಸರು.

ಜಶ್ತ್ವಸಂಧಿ : ಇದು ಸಂಸ್ಕೃತ ವ್ಯಂಜನ ಸಂಧಿ. ಪೂರ್ವಪದದ ಕೊನೆಯಲ್ಲಿ ವರ್ಗಗಳ ಪ್ರಥಮ ವರ್ಣಗಳಾದ ಕ, ಚ, ಟ, ತ, ಪ ವ್ಯಂಜನಗಳಿಗೆ ಉತ್ತರ ಪದದ ಮೊದಲಲ್ಲಿ ಯಾವ ವರ್ಣ ಬಂದರೂ ಕ್ರಮವಾಗಿ ಅದೇ ವರ್ಗದ ತೃತೀಯ ವರ್ಣಗಳಾದ ಗ, ಜ, ಡ, ದ, ಬ ವ್ಯಂಜನಗಳು ಆದೇಶವಾಗುವವು. ಇದನ್ನು ‘ಜಶ್ತ್ವಸಂಧಿ’ ಎನ್ನುವರು. ಉದಾ. ವಾಕ್ + ದೇವಿ = ವಾಗ್ದೇವಿ, ಅಚ್ + ಅಂತ= ಅಜಂತ, ಷಟ್+ ಆನನ = ಷಡಾನನ, ಚಿತ್ + ಆನಂದ = ಚಿದಾನಂದ, ಅಪ್ + ಜ = ಅಬ್ಜ

ಜತ್ಯೇಕ ವಚನ : ಜತಿಯಲ್ಲಿ ಏಕತ್ವಕ್ಕೆ ಬಹುತ್ವ ಬರುವುದು. ಇಲ್ಲಿನ ಕ್ರಿಯಾಪದವು ಬಹುವಚನ ಆಗುವುದಿಲ್ಲ. ಉದಾ. ಆನೆನೂಂಕಿದವು – ಆನೆಗಳ್ ನೂಂಕಿದವು.

ತತ್ಸಮ : ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುವರು, ಅಥವಾ ತದ್ಭವ ಶಬ್ಧಗಳ ಸಂಸ್ಕೃತ ರೂಪಗಳನ್ನು ‘ತತ್ಸಮ’ಗಳೆಂದು ಕರೆಯಬಹುದು. ಇವನ್ನು ‘ಸಮಸಂಸ್ಕೃತ’ಗಳೆಂದು ಕರೆಯುವರು. ಸೂರ್ಯ, ಚಂದ್ರ, ರವಿ, ಗಿರಿ, ಪತಿ, ಯತಿ.

ತತ್ಪುರುಷ : ೧. ಪೂರ್ವ ಪದವು ತೃತೀಯಾದಿಂದ ಸಪ್ತಮಿ ವಿಭಕ್ತ್ಯಂತ ಪದಗಳನ್ನು ಹೊದಿ ಉತ್ತರ ಪದದೊಡನೆ ಕೂಡಿ ಆಗುವ ಸಮಾಸವು ‘ತತ್ಪುರುಷ ಸಮಾಸ’ ಎನಿಸುವುದು. ಈ ಸಮಾಸದಲ್ಲಿ ಉತ್ತರ ಪದದ ಅರ್ಥವು ಪ್ರಧಾನವಾಗಿರುತ್ತದೆ. ಉದಾ. ರಾಜನ + ಪುತ್ರಿ = ರಾಜಪುತ್ರಿ, ರಣದಲ್ಲಿ + ಶೂರ = ರಣಶೂರ, ೨. ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಟ್ಟುಸೇರಿಸಿ ರಚಿಸಿದ ಮೊದಲನೇ ಅಂಗ ಪ್ರಧಾನವಾಗಿರುವ, ಸಮಸ್ತಪದ, ಉದಾ. ದೇವಾಲಯ, ರಾಜರ್ಷಿ (ಡಿ.ಎನ್.ಎಸ್.ಭಟ್, ೨೦೦೦)

ತದ್ಭವ : ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪ ಸ್ವಲ್ಪ ವಿಕಾರಹೊಂದಿ ಇಲ್ಲವೆ ಪೂರ್ಣ ವಿಕಾರ ಹೊಂದಿ ಬಂದಿರುವ ಶಬ್ಧಗಳನ್ನು ‘ತದ್ಭವ’ ಗಳೆಂದು ಹೇಳುವರು. ಈ ವಿಕಾರವು ಶಬ್ಧದ ಅಂತ್ಯದಲ್ಲಿಯೂ ಕೆಲವೆಡೆ ಮಧ್ಯದಲ್ಲಿಯೂ ಕೆಲವೆಡೆ ಮಧ್ಯಾಂತರಗಳೆರಡರಲ್ಲಿಯೂ ಕಂಡುಬರುವುದು. ಇದು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರ ಹೊಂದಿದ ಕನ್ನಡ ಶಬ್ದಗಳೆಂದೇ ತಿಳಿಯಬೇಕು. ಉದಾ. ದಯಾ ‑ ದಯೆ, ಶಾಲಾ ‑ ಶಾಲೆ, ವಾಣೀ ‑ ವಾಣಿ ಮುಂತಾದುವು.

ತದ್ದಿತ ಪ್ರತ್ಯಯ : ೧. ನಾಮಪ್ರಕೃತಿಗಳ ಮುಂದೆ ನಾಮ ವಿಭಕ್ತಿ ಪ್ರತ್ಯಯಗಳನ್ನು ಹೊರತು ಪಡಿಸಿ ಬರುವ ಪ್ರತ್ಯಯಗಳನ್ನು ‘ತದ್ದಿತ ಪ್ರತ್ಯಯ’ಗಳೆನ್ನುವರು. ಉದಾ. ಇಗ, ವಂತ, ಕಾರ, ಗಾರ ಮುಂತಾದುವು. ೨.ಸಂಸ್ಕೃತದಲ್ಲಿ ಕೃತ್ ಪ್ರತ್ಯಯವನ್ನೊಳಗೊಂಡಿರುವ ಪದಕ್ಕೆ ಸೇರಿಸಬಹುದಾದ ಬೇರೊಂದು ಪ್ರತ್ಯಯ. ಉದಾ ಧನ ಎಂಬ ಪದದಲ್ಲಿ ‘ಅ’ ಎಂಬ ಕೃತ್ ಪ್ರತ್ಯಯವಿದೆ. ಅದಕ್ಕೆ ‘ಇಕ’ ಎಂಬ ತದ್ದಿತ ಪ್ರತ್ಯಯವನ್ನು ಸೇರಿಸಿ ‘ಧನಿಕ’ ಎಂಬ ಪದವನ್ನು ರಚಿಸಬಹುದು. (ಡಿ.ಎನ್.ಎಸ್.ಭಟ್, ೨೦೦೦)

ತದ್ದಿತ ರೂಪ : ನಾಮರೂಪಗಳಿಗೆ ತದ್ದಿತ ಪ್ರತ್ಯಯ ಸೇರಿದರೆ ತದ್ದಿತ ರೂಪಗಳಾಗುತ್ತವೆ. ಉದಾ ಸಿರಿವಂತ, ಸಾಲಗಾರ ಮುಂತಾದವು.

ತೃತೀಯೆ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿಯ ‘ಇಂದ’. ಕರ್ಮಣಿ ಪ್ರಯೋಗದಲ್ಲಿ ಮಾತ್ರ ಕರ್ತೃ ಪದಕ್ಕೆ ತೃತೀಯೆ ಬರುತ್ತದೆ. ಉದಾ.ಕನ್ನಡಿಗರಿಂದ ನವರಾತ್ರಿಯಲ್ಲಿ ನಾಡಹಬ್ಬವು ಆಚರಿಸಲ್ಪಡುತ್ತದೆ.

ದ್ವಂದ್ವ ಸಮಾಸ : ೧.ಎರಡು ಅಥವಾ ಹೆಚ್ಚು ಪ್ರಥಮಾಂತ ನಾಮಪದಗಳು ಸಮುಚ್ಛಯಾರ್ಥ (ಸಹಯೋಗ) ದಿಂದ ಕೂಡಿ ಆಗುವ ಸಮಾಸವು ‘ದ್ವಂದ್ವ ಸಮಾಸ’ ಎನಿಸುವುದು ಇದರಲ್ಲಿ ಎಲ್ಲ ಪದಗಳ ಅರ್ಥವೂ ಮುಖ್ಯವಾಗಿರುತ್ತದೆ. ಉದಾ. ಗಿಡವೂ + ಮರವೂ+ ಬಳ್ಳಿಯೂ = ಗಿಡಮರ ಬಳ್ಳಿಗಳೂ, ಕೈಗಳೂ + ಕಾಲುಗಳೂ = ಕೈಕಾಲುಗಳು, ೨.ಸಂಸ್ಕೃತದಲ್ಲಿ ಎರಡು ನಾಮಪದಗಳನ್ನು ಒಟ್ಟು ಸೇರಿಸಿರುವ ಮತ್ತು ಎರಡು ಅಂಗಗಳೂ ಪ್ರಧಾನವಾಗಿರುವ ಸಮಸ್ತಪದ, ಉದಾ. ಪಿತ್ರಾಪುತ್ರೌ ‑ತಂದೆ ಮಕ್ಕಳು ಮುಂತಾದುವು (ಡಿ.ಎನ್.ಎಸ್.ಭಟ್ – ೨೦೦೦)

ದ್ವಂದ್ವಾರ್ಥಕ : ಒಂದು ರೂಪ ನಾಮಪದದ ಅರ್ಥವನ್ನೂ ಕ್ರಿಯಾಪದದ ಅರ್ಥವನ್ನೂ ಹೀಗೆ ಎರಡು ಅರ್ಥವನ್ನು ಕೊಡುತ್ತಿದ್ದರೆ ಅದು ದ್ವಂದ್ವಾಂರ್ಥಕ ರೂಪ ಎನಿಸಿಕೊಳ್ಳುತ್ತದೆ ಉದಾ. ಅರಸು‑ರಾಜ, ಹುಡುಕು, ಜಡೆ-ಹೆರಳು ಮುಂತಾದುವು.

ದಡ್ಡಕ್ಕರ : ಒತ್ತಕ್ಷರ, ದ್ವಿತ್ತಾಕ್ಷರ

ದಿಗ್ವಾಚಕ : ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ದಿಗ್ವಾಚಕಗಳೆನ್ನುವರು. ಉದಾ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮುಂತಾದುವು.

ದ್ವಿಗು ಸಮಾಸ : ೧. ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರ ಪದ ನಾಮಪದ ಇಲ್ಲವೆ ಸಂಖ್ಯಾವಾಚಕ ಪದದೊಡನೆ ಕೂಡಿ ಆಗುವ ಸಮಾಸವು ‘ದ್ವಿಗುಸಮಾಸ’ ಎನಿಸುತ್ತದೆ. ಉದಾ. ಎರಡು + ಮಡಿ = ಇರ‍್ಮಡಿ /ಇಮ್ಮಡಿ, ದಶ+ ದಿಕ್ಕು = ದಶದಿಕ್ಕು. ೨.ಸಂಸ್ಕೃತದಲ್ಲಿ ಸಂಖ್ಯಾವಾಚಕ ಪದದೊಂದಿಗೆ ನಾಮಪದವೊಂದನ್ನು ಸೇರಿಸಿ ರಚಿಸಿರುವ ಸಮಸ್ತ ಪದ. ಉದಾ‑ ಸಪ್ತರ್ಷಿ, ತ್ರಿಲೋಕ (ಡಿ.ಎನ್.ಎಸ್.ಭಟ್, ೨೦೦೦)

ದ್ವಿತೀಯೆ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿ ಪ್ರತ್ಯಯ ‘ಅನ್ನು’. ಸಕರ್ಮಕ ಕರ್ತರೀ ಪ್ರಯೋಗದ ವಾಕ್ಯದಲ್ಲಿಯ ಕರ್ಮ ಪದಕ್ಕೆ ದ್ವಿತೀಯೆ ಬರುತ್ತದೆ. ಉದಾ.ಕನ್ನಡಿಗರು ನಾಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ದ್ವಿತ್ವ : ಒತ್ತಕ್ಷರ

ದ್ವಿವಚ : ಎರಡು ವಸ್ತುಗಳನ್ನು ಎಣಿಸುವಲ್ಲಿ ದ್ವಿವಚನ ಪ್ರಯೋಗವಾಗುತ್ತದೆ. ಇದು ಸಂಸ್ಕೃತದಲ್ಲಿ ನಿತ್ಯ. ಉದಾ. ಕಣ್ಗಳ್, ಕಾಲ್ಗಳ್ ಮುಂತಾದುವು.

ದ್ವಿರುಕ್ತಿ : ಒಂದು ವಿಶೇಷ ಅರ್ಥವನ್ನು ವ್ಯಕ್ತ ಪಡಿಸುವುದಕ್ಕಾಗಿ ಒಂದು ಪದವನ್ನು ಅಥವಾ ಒಂದು ವಾಕ್ಯವನ್ನು ಅವಕಾಶವಿಲ್ಲದೆ ಎರಡು ಸಲ ಪ್ರಯೋಗಿಸುವುದನ್ನು ದ್ವಿರುಕ್ತಿ ಎನ್ನುವರು. ಉದಾ. ಬೇಗ ಬೇಗ ಬಾ, ದೊಡ್ಡ ದೊಡ್ಡ ಹುಡುಗರು.

ದೇಶ್ಯಪದಗಳು : ಕನ್ನಡ ಭಾಷೆಯಲ್ಲಿಯ ಅಚ್ಚಕನ್ನಡ ಶಬ್ಧಗಳನ್ನು ‘ದೇಶ್ಯ’ ಶಬ್ದಗಳೆನ್ನುತ್ತಾರೆ. ಉದಾ : ಹೊಲ, ಮನೆ, ಅಮ್ಮ, ಮರ ಮುಂತಾದುವು.

ಧಾತು : ಕ್ರಿಯಾರ್ಥವನ್ನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದಿರುವ ಶಬ್ಧವನ್ನು ಧಾತು ಇಲ್ಲವೆ ಕ್ರಿಯಾಪ್ರಕೃತಿ ಎನ್ನುವರು. ಉದಾ.ಮಾಡು, ತಿನ್ನು, ನೋಡು ಮುಂತಾದುವು.

ನಪುಂಸಕಲಿಂಗ : ಮನುಷ್ಯರನ್ನುಳಿದು ಉಳಿದ ಪ್ರಾಣಿವರ್ಗ ಹಾಗೂ ನಿರ್ಜೀವ ವಸ್ತುಗಳನ್ನು ಸೂಚಿಸುವ ನಾಮ ಪದಗಳು ನಪುಂಸಕಲಿಂಗ ರೂಪಗಳಾಗಿವೆ. ಉದಾ.ಆಕಳು, ಎಮ್ಮೆ, ಎತ್ತು, ಚಕ್ಕಡಿ ಮುಂತಾದುವು.

ನಾನಾರ್ಥಕರೂಪ : ಒಂದೇ ಶಬ್ದವು ಎರಡು ಇಲ್ಲವೆ ಹೆಚ್ಚು ಅರ್ಥಗಳನ್ನು ಕೊಡುತ್ತವೆ. ಅಂತಹ ಶಬ್ದಗಳನ್ನು ನಾನಾರ್ಥಕ ರೂಪಗಳೆನ್ನುವರು, ಉದಾ. ಊರು-ನೆಡು, ತೊಡೆ-ವರ್ಣ, ಬಣ್ಣ, ಜತಿ.

ನಾಮಪದ : ನಾಮ ಪ್ರಕೃತಿಗಳ ಮುಂದೆ ವಿಭಕ್ತಿ ಪ್ರತ್ಯಯ ಸೇರಿದಾಗ ನಾಮಪದಗಳಾಗುತ್ತವೆ. ನಾಮಪದಗಳು ಮನುಷ್ಯ, ಪ್ರಾಣಿ, ವಸ್ತು ಮೊದಲಾದವುಗಳ ಹೆಸರು ಹೇಳುವ ಶಬ್ದಗಳಾಗಿವೆ.

ನಾಮಪ್ರಕೃತಿ : ನಾಮವಿಭಕ್ತಿ ಪ್ರತ್ಯಯ ಸೇರುವ ಪ್ರಕೃತಿ (ಮೂಲಶಬ್ದ)ಗಳಿಗೆ ‘ನಾಮಪ್ರಕೃತಿ’ ಎಂದು ಹೆಸರು. ಉದಾ‑  ಪುಸ್ತಕ, ಶಾಲೆ, ಮನೆ ಮುಂತಾದವು.

ನಾಮರೂಡಿ : ನಾಮ ಪ್ರಸಿದ್ದಿ ಎಂದರೆ ಅರ್ಥ ಪ್ರತೀತಿ ನಾಮರೂಢಿಯಳಿಯದಂತೆ ಸಂಧಿ ಮಾಡಬೇಕೆಂದು ಕೇಶಿರಾಜ ಹೇಳುತ್ತಾನೆ. ಉದಾ. ಪಟು + ಏಕ ವಾಕ್ಯಂ = ಪಟುವೇಕ ವಾಕ್ಯಂ ಆಗುವುದಲ್ಲದೆ ಪಟೇಕವಾಕ್ಯ ಆಗದು.

ನಾಮಿಗಳು : ಅ, ಆ ಗಳನ್ನು ಬಿಟ್ಟು ಉಳಿದ ಹನ್ನೆರಡು ಸ್ವರಗಳು ನಾಮಿಗಳಾಗಿವೆ.

ನಾಮವಿಭಕ್ತಿ ಪ್ರತ್ಯಯಗಳು : ನಾಮಪದಗಳಿಗೆ ಸೇರಿದ ಪ್ರತ್ಯಯಗಳಿಗೆ ‘ನಾಮವಿಭಕ್ತಿ ಪ್ರತ್ಯಯ’ಗಳೆನ್ನುವರು, ಈ ಪ್ರತ್ಯಯಗಳಿಗೆ ಸ್ವತಂತ್ರ ಅರ್ಥ ಇರುವುದಿಲ್ಲ. ಸಂಬೋಧನೆಯಲ್ಲಿ ಪ್ರಥಮಾ ಮತ್ತು ಸಂಭೋಧನ ವಿಭಕ್ತಿಗಳು ಸೇರುವುದರಿಂದಲೂ ಅವುಗಳಿಗೆ ಕಾರಕಾರ್ಥ ಇಲ್ಲದಿರುವುದರಿಂದಲೂ ವಿಭಕ್ತಿಗಳು ಆರು ಇರುತ್ತವೆ. ಉದಾ. ದ್ವಿತೀಯಾ ‑ಅನ್ನು, ತೃತೀಯಾ ‑ಇಂದ, ಚತುರ್ಥಿ ‑ಗೆ,ಇಗೆ, ಕ್ಕೆ,ಅಕ್ಕೆ, ಪಂಚಮಿ ‑ಇಂದ, ಷಷ್ಠಿ ‑ಅ, ಸಪ್ತಮಿ ಅಲ್ಲಿ.

ನಿಷೇಧರೂ : ನಿಷೇಧ ಎಂದರೆ ಕ್ರಿಯೆಯು ನಡೆಯುವುದಿಲ್ಲ ಎಂಬರ್ಥವನ್ನು ಕೊಡುವುದು. ಧಾತುವಿಗೆ ನಿಷೇಧಾರ್ಥದ ಆಖ್ಯಾತ ಪ್ರತ್ಯಯಗಳು ಸೇರಿ ನಿಷೇಧ ರೂಪಗಳಾಗುತ್ತವೆ. ಉದಾ. ತಿಳಿ + ಅನು = ತಿಳಿಯನು, ತಿಳಿ + ಅಳು = ತಿಳಿಯಳು, ತಿಳಿ + ಅದು = ತಿಳಿಯದು.

ನುಡಿಗಟ್ಟು : ಮಾತಿನಲ್ಲಿಯ ಪದ ಇಲ್ಲವೆ ಪದ ಸಮುಚ್ಚಯಕ್ಕೆ ಶಬ್ದಾರ್ಥವು ಒಂದಿದ್ದು ಬಳಕೆಯಲ್ಲಿ ಅದು ಬೇರೊಂದು ಅರ್ಥ (ಲಕ್ಷಣಾರ್ಥ) ಕೊಡುತ್ತಿದ್ದರೆ ಅಂತಹ ಶಬ್ಧಗಳನ್ನು ನುಡಿಗಟ್ಟು ಎನ್ನುವರು. ಉದಾ. ಕಿವಿಕಚ್ಚು ‑ಚಾಡಿಹೇಳು, ಟೊಪ್ಪಿಗೆ ಹಾಕು ‑ಮೋಸಮಾಡು, ಹೆಗಲು ಕೊಡು ‑ನೆರವಾಗು

ನ್ಯೂನರೂ : ಕನ್ನಡದಲ್ಲಿ ಎರಡು ವಾಕ್ಯಗಳನ್ನು ಒಟ್ಟು ಸೇರಿಸುವಾಗ ಅವುಗಳಲ್ಲಿ ಮೊದಲನೆಯ ವಾಕ್ಯದ ಕ್ರಿಯಾಪದವನ್ನು ಅಖ್ಯಾತ ಪ್ರತ್ಯಯವಿಲ್ಲದೆ ಬಳಸಲು ಸಾಧ್ಯವಿದೆ. ಇಂತಹ ಕ್ರಿಯಾರೂಪಗಳಿಗೆ (ಉದಾ. ಮಾಡಿ, ಹೇಳುತ್ತಾ, ಬಾರದೆ ಇತ್ಯಾದಿ) ನ್ಯೂನರೂಪಗಳೆಂದು ಹೆಸರು.

ಪಂಚಮೀ ವಿಭಕ್ತಿ : ಇದು ಒಂದು ನಾಮವಿಭಕ್ತಿ. ಇದರ ವಿಭಕ್ತಿ ಪ್ರತ್ಯಯ ‘ಇಂದ’ ಅಪಾದಾನಾರ್ಥ (ಅಗಲುವಿಕೆ) ತೋರುವಲ್ಲಿ ಮೂಲ ಪದಕ್ಕೆ ಪಂಚಮೀ ವಿಭಕ್ತಿ ಬರುತ್ತದೆ. ಉದಾ.ಆಕಾಶದಿಂದ ಸಿಡಿಲು ಬಿದ್ದಿತು.

z : ಪ್ರಕೃತಿ ಮತ್ತು ಪ್ರತ್ಯಯ ಕೂಡಿ ಆದ ರೂಪ ಪದ. ಇದು ಒಂದು ವಾಕ್ಯದ ಅರ್ಥವತ್ತಾದ ಘಟಕ. ಉದಾ.ಮನೆ + ಅನ್ನು =  ಮನೆಯನ್ನು

ಪದಗುಚ್ಛ : ಎರಡು ಇಲ್ಲವೇ ಹೆಚ್ಚು ಪದಗಳನ್ನು ವಾಕ್ಯರಚನೆಯ ನಿಯಮದ ಮೂಲಕ ಒಟ್ಟು ಸೇರಿ ರಚಿಸಿದ ಒಂದು ವಾಕ್ಯಾಂಗ. ಉದಾ. ನಮ್ಮ ಮನೆ, ಕಪ್ಪು ಮಣ್ಣು.

ಪದಪ್ರತ್ಯಯ : ಪದವೊಂದನ್ನು ರಚಿಸಲು ಪ್ರಯುಕ್ತವಾಗಬಲ್ಲ ಪ್ರತ್ಯಯ. ಉದಾ.‘ಅಂಜು’ ಎಂಬ ಪದದಿಂದ ‘ಅಂಜಿಕೆ’ ಎಂಬ ಇನ್ನೊಂದು ಪದವನ್ನು  ರಚಿಸಲು ಬಳಸಿರುವ ‘ಇಕೆ’ ಎಂಬ ಪ್ರತ್ಯಯ.

ಪದಮಧ್ಯಸಂಧಿ : ಪ್ರಕೃತಿಗೆ ಪ್ರತ್ಯಯವನ್ನು ಹಚ್ಚುವಾಗ ಆಗುವ ಸಂಧಿಯನ್ನು ಪದಮಧ್ಯ ಸಂಧಿ ಎನ್ನುವರು. ಉದಾ. ಮನೆ + ಅಲ್ಲಿ = ಮನೆಯಲ್ಲಿ

ಪದಾಂತ್ಯಸಂಧಿ : ಪೂರ್ವಪದ ಪರಪದದೊಡನೆ ಕೂಡುವಲ್ಲಿ ಆಗುವ ಸಂಧಿಯನ್ನು ಪದಾಂತ್ಯ ಸಂಧಿಯೆನ್ನುವರು. ಉದಾ. ಮಕ್ಕಳ + ಆಟ = ಮಕ್ಕಳಾಟ

ಪದರೂಪಪ್ರತ್ಯಯ : ಒಂದು ಪದದಿಂದ ಅದರ ಪದರೂಪವೊಂದನ್ನು ರಚಿಸಲು ಪ್ರಯುಕ್ತವಾಗುವ ಪ್ರತ್ಯಯ. ಉದಾ.ಅಂಜು ಎಂಬ ಪದ ಅಂಜಿ ‘ಹೆದರಿ’ ಎಂಬ ಪದ ರೂಪವನ್ನು ರಚಿಸಲು ಬಳಸಿರುವ ‘ಇ’ ಎಂಬ ಪ್ರತ್ಯಯ.

ಪರಿಮಾಣವಾಚಕ : ವಸ್ತುಗಳ, ಪ್ರಾಣಿಗಳ, ತೂಕ, ಅಳತೆ, ಗಾತ್ರ ಹಾಗೂ ಪರಿಮಾಣಗಳನ್ನು ವರ್ಣಿಸುವ ಶಬ್ಧಗಳು ‘ಪರಿಮಾಣವಾಚಕ’ಗಳಾಗಿವೆ. ಈ ಪರಿಮಾಣವಾಚಕಗಳು ವಿಶೇಷಣಗಳಂತೆ ವರ್ತಿಸುತ್ತವೆ. ಉದಾ.ಅಷ್ಟು, ಇಷ್ಟು, ಎಷ್ಟು, ಕೆಲವು ಮುಂತಾದುವು.

ಪುರು : ಮಾತನಾಡುವವನು (ಉತ್ತಮ ಪುರುಷ), ಮಾತನ್ನು ಕೇಳುವವನು (ಮಧ್ಯಮ ಪುರುಷ), ಮತ್ತು ಇತರ (ಪ್ರಥಮ ಪುರುಷ) ಎಂಬುದಾಗಿ ಭಾಷಾವ್ಯವಹಾರಕ್ಕೆ ಸಂಬಂಧಿಸಿರುವ ವ್ಯಕ್ತಿಗಳನ್ನು ಸೂಚಿಸುವ ವ್ಯಾಕರಣ ತತ್ವ.

ಪುಲ್ಲಿಂಗ : ಮನುಷ್ಯರಲ್ಲಿ ಗಂಡಸರನ್ನು ಸೂಚಿಸುವ ನಾಮಪದಗಳು ಮಾತ್ರ ‘ಪುಲ್ಲಿಂಗ’ ಗಳಾಗುತ್ತವೆ. ಉದಾ.ರಾಮ, ಭೀಮ, ಈಶ್ವರ ಮುಂತಾದುವು.

ಪ್ರಕೃತಿ : ವಿಭಕ್ತಿ ಪ್ರತ್ಯಯಗಳು ಸೇರುವ ಮೂಲ ಶಬ್ಧಗಳಿಗೆ ಪ್ರಕೃತಿ (ಧಾತು) ಎನ್ನುವರು. ಪ್ರಕೃತಿಯಲ್ಲಿ ನಾಮಪ್ರಕೃತಿ (ಉದಾ.ಕಲ್ಲು, ರಾಮ ಮುಂತಾದುವು), ಕ್ರಿಯಾಪ್ರಕೃತಿ (ಮಾಡು, ತಿನ್ನು ಮುಂತಾದುವು) ಎಂದು ಎರಡು ವಿಧ.

ಪ್ರಕೃತಿ ಭಾವ : ಸಂಧಿಯಲ್ಲಿ ಲೋಪ, ಆಗಮ, ಆದೇಶ ಈ ಕ್ರಿಯೆಗಳಾಗದೇ ಪದದ ರೂಪವು ಇದ್ದಂತೆಯೇ ಉಳಿಯುವುದು (ಸಂಧಿಕಾರ್ಯ ನಡೆಯದೆ ಇರುವುದು) ಈ ಕ್ರಿಯೆಗೆ ಪ್ರಕೃತಿಭಾವ ಅಥವಾ ವಿಸಂಧಿ ಎನ್ನುವರು. ಉದಾ. ಅವನೇ + ಇವನು = ಅವನೇ ಇವನು, ಬಾ + ತಾಯಿ = ಬಾತಾಯಿ.