‘ಶಬ್ದಮಣಿದರ್ಪಣ’ವು ಹಳಗನ್ನಡ ಭಾಷೆಯ ಅಧಿಕೃತ ವ್ಯಾಕರಣ ಗ್ರಂಥ. ಅದರ ಸ್ಥಾನಮಾನ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ, ಭಾರತೀಯ ವ್ಯಾಕರಣ ಕ್ಷೇತ್ರದಲ್ಲಿಯೇ ಹಿರಿದಾಗಿದೆ. ಕೇಶಿರಾಜ ಹಳಗನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ, ಸೂಕ್ಷ್ಮವಾಗಿ ಅವಲೋಕಿಸಿ ಶಬ್ದಮಣಿದರ್ಪಣವನ್ನು ರಚಿಸಿರುವನು. ಭಾಷೆಯ ಮೂಲತತ್ವವನ್ನು ಹಾಗೂ ಅದರಲ್ಲಿ ತಲೆದೋರುವ ವ್ಯತ್ಯಾಸಗಳನ್ನು ಗುರುತಿಸಿ, ಅವನ್ನು ಕ್ರೋಡೀಕರಿಸಿ ಸೂತ್ರರೂಪದಲ್ಲಿ ಹಳಗನ್ನಡ ಭಾಷೆಯ ಸ್ವರೂಪವನ್ನು ಹೇಳುವ ಶಕ್ತಿ ಕೇಶಿರಾಜನಿಗೆ ಸಂಪೂರ್ಣವಾಗಿ ಹಸ್ತಗತವಾಗಿದೆ. ಅಂತೆಯೇ ಅವನ ಸೂತ್ರಗಳು ನಮ್ಮ ವ್ಯಾಕರಣ ಸಾಹಿತ್ಯ ಕ್ಷೇತ್ರದಲ್ಲಿಯೇ ಅಪೂರ್ವವೆನ್ನಿಸಿವೆ.

ಭಾಷೆಯ ರಚನೆ ಹಾಗೂ ಅದರ ನೆಲೆ ಬೆಲೆಗಳನ್ನು ಶಾಸ್ತ್ರೀಯವಾದ ತಳಹದಿಯ ಮೇಲೆ ನಿರೂಪಿಸುವುದೇ ವ್ಯಾಕರಣದ ಗುರಿ. ಕಳೆದ ಶತಮಾನದಿಂದೀಚೆಗೆ ವ್ಯಾಕರಣವು ವರ್ಣನಾತ್ಮಕ ಭಾಷಾವಿಜ್ಞಾನದಲ್ಲಿ ಸಮಾವೇಶಗೊಂಡು ಹೊಸ ಆಯಾಮವನ್ನು ಪಡೆದುಕೊಂಡಿದೆ. ಆಧುನಿಕ ಭಾಷಾತಜ್ಞರ ವರ್ಣನಾತ್ಮಕ ವ್ಯಾಕರಣ ತತ್ವಗಳ ನೆಲೆಯನ್ನು ಶಬ್ದಮಣಿದರ್ಪಣದಲ್ಲಿ ಕಾಣಬಹುದು. ದರ್ಪಣದ ಸೂತ್ರಗಳು ಅರ್ಥಪೂರ್ಣವಾಗಿರುವು ದರಿಂದ ಅವುಗಳನ್ನು ಅರ್ಥಾನುಗತವಾಗಿ ಒಡೆದು ನೋಡುವುದು ಹಾಗೂ ಹೊಸಗನ್ನಡದಲ್ಲಿ ಟಿಪ್ಪಣಿಗಳನ್ನು ಬರೆಯುವುದು ಆವಶ್ಯವೆನಿಸಿತು. ಪ್ರಸ್ತುತ ಅಧ್ಯಯನವು ಅಂತಹ ಪ್ರಯತ್ನಗಳಲ್ಲಿ ಒಂದಾಗಿದೆ.

ಕನ್ನಡ ಧ್ವನಿಮಾಗಳು

ಒಂದು ಭಾಷೆಯ ಅಸ್ತಿತ್ವ ನಿಂತಿರುವುದು ಅದರ ಧ್ವನಿವ್ಯವಸ್ಥೆಯ ಮೇಲೆ. ಪ್ರತಿ ಯೊಂದು ಭಾಷೆಯು ತನ್ನ ಜಯಮಾನಕ್ಕನುಗುಣವಾಗಿ ಪರಿಮಿತ ಸಂಖ್ಯೆಯ ಕೆಲವು ವರ್ಣಗಳನ್ನು ಪಡೆದುಕೊಂಡು ಬೆಳೆಯುತ್ತಿರುತ್ತದೆ. ಭಾಷಾವ್ಯಾಪಾರಕ್ಕೆ ಕಾರಣವಾದ ಮುಖ್ಯ ಧ್ವನಿಗಳೇ ಧ್ವನಿಮಾಗಳು. ಇದನ್ನೇ ಕೇಶಿರಾಜ ಉಚ್ಚರಿಸಲು ಮತ್ತು ಬರೆಯಲು ಬರುವ ಅಕ್ಷರಗಳನ್ನು ಶುದ್ದಾಕ್ಷರಗಳೆಂದು ಕರೆದಿದ್ದಾನೆ. ಅವನು ಹೇಳುವ ಶುದ್ದಾಕ್ಷರಗಳೇ ಧ್ವನಿಮಾಗಳು. ಅವು ಉಚ್ಛಾರಣೆಯ ಚಿಕ್ಕ ಘಟಕಗಳಾಗಿವೆ. ಕೇಶಿರಾಜನ ಶುದ್ದಾಕ್ಷರಗಳನ್ನು ಭಾಷಾಶಾಸ್ತ್ರೀಯವಾಗಿ ಪರಿಶೀಲಿಸಬೇಕಾಗಿದೆ.

ಕೇಶಿರಾಜನು ಸಂಸ್ಕೃತದ ನೆಲೆಯಲ್ಲಿ ಕನ್ನಡದ ನೆಲೆಯನ್ನು ಹೇಳಿದ್ದಾನೆ. ಸಂಸ್ಕೃತದಲ್ಲಿ ಏನಿದೆಯೋ ಅದೆಲ್ಲವೂ ಕನ್ನಡದಲ್ಲಿದೆ ಎಂದು ಅವನು ತಿಳಿದುಕೊಂಡಿದ್ದಾನೆ! ಇದಕ್ಕೆ ಅವನ ವರ್ಣಮಾಲೆಯೂ ಹೊರತಲ್ಲ. ಕೇಶಿರಾಜ ಹೇಳುವ ವರ್ಣಗಳನ್ನು ಈ ಕೆಳಗಿನಂತೆ ವಿಭಜಿಸಬಹುದು.

(i) ಸ್ವರಗಳು (೧೪) : ಅ, ಆ, ಇ, ಈ, ಉ, ಊ, ಋ, ೠ, ಲೃ, ಲೂ, ಏ, ಐ, ಓ, ಔ.

(ii) ವರ್ಗೀಯ ವ್ಯಂಜನಗಳು (೨೫); ಕ್, ಖ್, ಗ್, ಘ್, ಙ| ಚ್, ಛ್, ಜ್, ಝ್, ಞ| ಟ್,ಠ್,ಡ್,ಢ್, ಣ್| ತ್, ಥ್, ದ್, ಧ್, ನ್| ಪ್,ಫ್,ಬ್,ಭ್, ಮ್|

(iii) ಅವರ್ಗೀಯ ವ್ಯಂಜನಗಳು (); ಯ್, ರ್, ಲ್, ವ್, ಶ್, ಷ್, ಸ್, ಹ್, ಳ್

(iv) ಯೋಗವಾಹಗಳು (); ಜಿಹ್ವಾಮೂಲೀಯ (x ), ಉಪಾಧ್ಮಾನೀಯ (ೞ), ಅನುಸ್ವಾರ(o), ವಿಸರ್ಗ (ಃ)

ದೇಸಿಯಗಳು () : ಱ, ೞ, ಳ, ಎ, ಒ.

ಒಟ್ಟು ವರ್ಣಗಳು = ೫೭

ಕೇಶಿರಾಜನ ಶುದ್ದಗೆಯ ನಿಷ್ಕರ್ಷೆ ಇನ್ನೂ ಆಗಲಿಲ್ಲ. ದೇಸಿಯ ವರ್ಣಗಳನ್ನು ಹೇಳಿದ ಮೇಲೆ ಕೆಲವು ವರ್ಣಗಳನ್ನು ಕಳೆದು ಕನ್ನಡ ಶುದ್ದಗೆ ಎಷ್ಟೆಂಬುದನ್ನು ನಿರ್ಧರಿಸುತ್ತಾನೆ.

ತಿಳಿದೇಶೀಯಮ ಮೈದಂ
ಕಳೆನೀಂ   ವರ್ಣ ಶಷ ವಿಸರ್ಗ x
ಕ್ಷಳನಂ ನಾಲ್ವತ್ತೇೞಾ
ಯ್ತಳೆಶುದ್ದಗೆ ಯಚ್ಚಗನ್ನಡಕ್ಕೀ ಕ್ರಮದಿಂ

ಕೇಶಿರಾಜ ಕಳೆಯಲು ಹೇಳಿದ ವರ್ಣಗಳು ಒಟ್ಟು ೧೦. ಅವು ಇಂತಿವೆ. ಋ, ೠ, ಲೃ, ಲ್ರೂ, ಶ, ಷ, ವಿಸರ್ಗ, ಜೀಹ್ವಾಮೂಲೀಯ, ಉಪಧ್ಮಾನೀಯ ಮತ್ತು ಕ್ಷಳ. (೫೭ ‑ ೧೦ = ೪೭). ೪೭ ವರ್ಣಗಳ ಮೇಲೆ ಅಚ್ಚಗನ್ನಡ ಶುದ್ದಗೆ ನಿಂತಿದೆ ಎನ್ನುತ್ತಾನೆ.

ಕೇಶಿರಾಜನು ಕನ್ನಡ ವರ್ಣಮಾಲೆಯನ್ನು ಸಂಕೀರ್ಣಗೊಳಿಸಿದ್ದಾನೆ. ಅವನು ಹೇಳಿರುವುದು ಸಂಸ್ಕೃತ ವರ್ಣಮಾಲೆಯೇ ಹೊರತು ಕನ್ನಡದಲ್ಲ. ಅವನು ಹೇಳಿರುವ ಶುದ್ದಗೆಯಿಂದ ಇನ್ನೂ ಕೆಲವು ವರ್ಣಗಳನ್ನು ತೆಗೆದು ಕನ್ನಡ ವರ್ಣಮಾಲೆಯನ್ನು ಇನ್ನಷ್ಟು ಸಂಕ್ಷಿಪ್ತತೆ ಮತ್ತು ಸುಲಭತೆಗೆ ತರಬಹುದು. ತೆಗೆದು ಹಾಕಬಹುದಾದ ವರ್ಣಗಳು ಇಂತಿವೆ. (i) ಮಹಾಪ್ರಾಣಗಳು (೧೦), ವರ್ಗದ ದ್ವಿತೀಯ ಮತ್ತು ಚತುರ್ಥಾಕ್ಷರಗಳಾದ ಮಹಾಪ್ರಾಣ ಗಳು ಕನ್ನಡದಲ್ಲಿ (ದ್ರಾವಿಡ ಭಾಷೆಗಳಲ್ಲಿ) ಮೂಲತಃ ಇಲ್ಲ. ಮಹಾಪ್ರಾಣಾಕ್ಷರಯುಕ್ತ ಪದಗಳು ಅಲ್ಪಪ್ರಾಣಗಳಾಗಿ ಬಳಕೆಯಾಗುತ್ತವೆ. ಸಂಸ್ಕೃತದ ಪ್ರಭಾವದಿಂದ ಅವು ಕನ್ನಡಕ್ಕೆ ಬಂದಿವೆ. (ii) ಸಂಧ್ಯಕ್ಷರಗಳು (), ಕೇಶಿರಾಜನು ಹೇಳಿರುವ ಸಂಧ್ಯಕ್ಷರಗಳು ನಾಲ್ಕು. ಅವು ಇಂತಿವೆ ಏ, ಐ, ಓ, ಔ ಅವುಗಳಲ್ಲಿ ಏ, ಓ ಗಳು ಕನ್ನಡಕ್ಕೆ ಸ್ವಾಭಾವಿಕವಾಗಿವೆ. ಐ, ಔ ಗಳು ಸ್ವರ ಮತ್ತು ವ್ಯಂಜನ ಸಹಿತವಾಗಿರುವು (ಐ ‑ಅಯ್, ಔ ‑ಅವ್) ದರಿಂದ ಅವುಗಳನ್ನು  ಬಿಡಬಹುದು. (iii) ಕಾರಗಳು ಕೇಶಿರಾಜನ ಕಾಲಕ್ಕಾಗಲೇ ಅವುಗಳ ಉಚ್ಚಾರಣೆಯಲ್ಲಿ ಅಸ್ಪಷ್ಟತೆ, ಬರವಣೆಗೆಯಲ್ಲಿ ಸಂದಿಗ್ದತೆ ಕಾಲಿಟ್ಟಿತ್ತೆಂಬುದಕ್ಕೆ ಅವನು ಹೇಳುವ ಸೂತ್ರಗಳೇ ಆಧಾರವಾಗಿವೆ. ಒಂದು ಕಾಲಕ್ಕಿದ್ದ ಱ, ೞ ಗಳು ಈಗ ಕನ್ನಡ ವರ್ಣ ಮಾಲೆಯಿಂದ ಕಣ್ಮರೆಯಾಗಿವೆ ಎಂಬುದು ಸ್ಪಷ್ಟ. (iii) ಅನುಸ್ವರ (o) ವರ್ಗೀಯ ವ್ಯಂಜನಗಳ ಕೊನೆಯ ವರ್ಣಗಳಾದ ಅನುನಾಸಿಕಗಳು ಅನುಸ್ವರದ ಕಾರ್ಯವನ್ನು ನಿರ್ವಹಿಸುತ್ತವೆ. ಉದಾ. ಬಿಂಕು‑ಬಿಙ್ಕು, ತೊಂಡು‑ ತೊಣ್ಡು ಮುಂತಾದವು. ಆದಕಾರಣ ಅನುಸ್ವರವನ್ನು ವರ್ಣಮಾಲೆಯಿಂದ ಕೈಬಿಡಬಹುದು.

ಮೇಲಿನ ವಿವೇಚನೆಯಿಂದ ಕೇಶಿರಾಜನ ಶುದ್ಧಗೆಯಿಂದ ೧೦ ಮಹಾಪ್ರಾಣಗಳನ್ನು, ೨ ಸಂಧ್ಯಕ್ಷರಗಳನ್ನು, ಱೞ ಹಾಗೂ ಅನುಸ್ವರ ಹೀಗೆ ಒಟ್ಟು ೧೫ ವರ್ಣಗಳನ್ನು ಕಳೆಯ ಬೇಕಾಗುತ್ತದೆ. (೪೭ ‑ ೧೫ = ೩೨) ಪ್ರಮಾಣ ಕನ್ನಡದ ವರ್ಣಮಾಲೆ ೩೨ ಆಗುತ್ತದೆ. ಅವುಗಳ ಸಂಖ್ಯೆ ಹೀಗಿದೆ. ಸ್ವರಗಳು ೧೦, ವರ್ಗೀಯ ವ್ಯಂಜನಗಳು ೧೫, ಅವರ್ಗೀಯ ವ್ಯಂಜನಗಳು ೬. ಭಾಷಾಶಾಸ್ತ್ರೀಯವಾಗಿ ಈ ವರ್ಣ ಮಾಲೆಯನ್ನು ಈ ಕೆಳಗಿನಂತೆ ಸೂಚಿಸಬಹುದು.

ಸ್ವರಗಳು

ಇ, ಈ             ಉ, ಊ

ಎ, ಏ             ಅ, ಆ             ಒ, ಓ

ವ್ಯಂಜನಗಳು

ಪ್ ಬ್ ತ್ ದ್ ಟ್ ಡ್ ಚ್ ಜ್ ಕ್ ಗ್

ಮ್  ನ್  ಣ್ ಞ  ಙ

ಸ್

ರ್

ಲ್  ಳ್

ವ್  ಯ್

ಬೆಳವಣಿಗೆ/ಬದಲಾವಣೆ ಭಾಷೆಯ ಲಕ್ಷಣ. ಅನ್ಯಭಾಷೆಯ ಸಂಪರ್ಕದಿಂದ ಕನ್ನಡ ಧ್ವನಿರಚನೆಯಲ್ಲಿ ಬದಲಾವಣೆಯಾಗಿದೆ. ಉದಾ : ಕಾಫಿ, ಪ್ಲಾಜ್, ಮ್ಯಾನ್ ಮುಂತಾದ ಪದಗಳ ಸ್ವೀಕರಣದಿಂದ ಫ್, ಆ ಇಂತಹ ಧ್ವನಿಮಾಗಳು ಕನ್ನಡದಲ್ಲಿ ಬಳಕೆಯಾಗಿವೆ. ಅದರಂತೆ ಉಪಭಾಷೆಗಳ ಧ್ವನಿರಚನೆಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಾಗಿರುತ್ತದೆ. ಭಾಷೆ ತನಗನುಕೂಲವಾದ ಪರಿಸರವನ್ನು ಕಟ್ಟಿಕೊಂಡು ಬೆಳೆಯಬೇಕಾದರೆ ಈ ಕೆಲವೊಂದು ವ್ಯತ್ಯಾಸಗಳನ್ನು ಮಾಡಿಕೊಳ್ಳಲೇಬೇಕು. ಅನ್ಯಭಾಷಾ ಸಂಪರ್ಕವು ಕನ್ನಡ ಧ್ವನಿರಚನೆ ಮೇಲೆ ಪ್ರಭಾವ ಬೀರುತ್ತದೆ.

ಸಂಧಿ ವಿವೇಚನೆ

ಎರಡು ಅಕ್ಷರ (ಸ್ವರ ಇಲ್ಲವೆ ವ್ಯಂಜನ) ಗಳ ನಡುವೆ ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಚರಿಸುವುದು ‘ಸಂಧಿ’ ಎನಿಸುವುದು. ಉದಾ. ಮಳೆ + ಕಾಲ = ಮಳೆಗಾಲ. ಇದರಲ್ಲಿ ಮಳೆ ಪೂರ್ವಪದ; ‘ಕಾಲ’ ಉತ್ತರ ಪದ, ಪೂರ್ವಪದದ ಕೊನೆಯ ‘ಎ’ ಸ್ವರ ಮತ್ತು ಉತ್ತರಪದದ ಆದಿಯ ‘ಕ್’ ವ್ಯಂಜನ ಸಂಧಿಸುವಲ್ಲಿ ಸಂಧಿ ಕ್ರಿಯೆ ನಡೆಯುತ್ತದೆ ವಿನಃ ಕೇಶಿರಾಜ ಹೇಳಿದಂತೆ ಸಂಧಿ ಕ್ರಿಯೆಯಲ್ಲಿ ಹಲವು ವರ್ಣಗಳು ಕೂಡುವುದಿಲ್ಲ ಸಂಧಿಕಾರ್ಯವು ಎರಡು ಸ್ಥಾನಗಳಲ್ಲಿ ಜರುಗುತ್ತದೆ. ಪ್ರಕೃತಿಗೆ ಪ್ರತ್ಯವನ್ನು ಹಚ್ಚುವಾಗ ಆಗುವ ಸಂಧಿ ‘ಪದ ಮಧ್ಯ ಸಂಧಿ’. ಉದಾ. ಶಾಲೆ + ಅನ್ನು = ಶಾಲೆಯನ್ನು. ಪೂರ್ವ ಪದ, ಪರಪದದೊಡನೆ ಕೂಡುವಲ್ಲಿ ಆಗುವ ಸಂಧಿಯನ್ನು ‘ಪದಾಂತ್ಯ ಸಂಧಿ’ ಎನ್ನುವರು. ಉದಾ. ಮಕ್ಕಳ + ಆಟ = ಮಕ್ಕಳಾಟ. ಸಂಧಿಕ್ರಿಯೆ ನಡೆಯುವಾಗ ಅರ್ಥಕ್ಕೆ ಧಕ್ಕೆಯಾಗಬಾರದು, ಪದೋಚ್ಛಾರಣೆ ಸುಲಭವಾಗಿರಬೇಕು, ಪದರಚನೆ ಹೆಚ್ಚು ಶಿಥಿಲವಾಗದೆ ಬಂಧುರ ವೆನಿಸಬೇಕು.

ಸಂಧಿ ಪರಿಕಲ್ಪನೆಯು ಆಧುನಿಕ ಭಾಷಾಶಾಸ್ತ್ರದ ‘ಆಕೃತಿ ಧ್ವನಿಮಾ’ ಕಕ್ಷೆಯಲ್ಲಿ ಬರುತ್ತದೆ. ಇದರಲ್ಲಿ ಧ್ವನಿಲೋಪ, ಆಗಮ, ಆದೇಶ ಹಾಗೂ ಯಥಾಸ್ಥಿತಿಯು ಈ ಕ್ರಿಯೆಗಳು ನಡೆಯುತ್ತವೆ. ಈ ನಾಲ್ಕು ಧ್ವನಿ ಬದಲಾವಣೆಯನ್ನು ಅನುಲಕ್ಷಿಸಿಸಿದರೆ ಅಂತಸ್ಸಂಧಿ ಮತ್ತು ಬಹಿಸ್ಸಂಧಿ ಎಂಬ ಎರಡು ರೀತಿಯ ಸಂಧಿ ಪ್ರಭೇದಗಳು ಕಂಡು ಬರುತ್ತವೆಂದು ಭಾಷಾಶಾಸ್ತ್ರಜ್ಞರು ಗುರುತಿಸಿದ್ದಾರೆ.

[1] ಸಂಧಿಕಾರ್ಯ ಒಂದು ಆಕೃತಿಮಾದ ಸೀಮೆಯೊಳಗೇ ಸಂಭವಿಸಿದರೆ ಅದು ಅಂತಸ್ಸಂಧಿ. ಸಂಧಿಕಾರ್ಯ ಆಕೃತಿಮಾ ಸೀಮೆಯ ಹೊರಗೆ /ಮಧ್ಯ ಸಂಭವಿಸಿದರೆ ಅದು ಬಹಿಸ್ಸಂಧಿ ಎನಿಸುತ್ತದೆ.

ಅಂತಸ್ಸಂಧಿಯಲ್ಲಿ ಲೋಪ ಮತ್ತು ಆದೇಶ ಕ್ರಿಯೆಗಳು ನಡೆಯುತ್ತವೆ. ೧. ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವ ಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬರುವುದಿಲ್ಲ. ಉದಾ. ನೀರು + ಇಲ್ಲ = ನೀರಿಲ್ಲ (‘ಉ’ ಸ್ವರ ಲೋಪ)

ಅವನ + ಊರು = ಅವನೂರು (‘ಅ’ ಸ್ವರ ಲೋಪ)

೨. ಸಂಧಿ ಕ್ರಿಯೆ ನಡೆಯುವಾಗ ಉತ್ತರ ಪದದ ಆದಿಯಲ್ಲಿರುವ ವ್ಯಂಜನದ ಸ್ಥಳದಲ್ಲಿ ಬೇರೊಂದು ವ್ಯಂಜನವು ಸಂಧಿ ಪದದಲ್ಲಿ ಆದೇಶವಾಗಿ ಬರುವುದು.

ಉದಾ. ಹಳ + ಕನ್ನಡ = ಹಳಗನ್ನಡ (ಕ್ ಸ್ಥಳದಲ್ಲಿ ಗ್ ಆದೇಶ)

ಹುಲಿ + ತೊಗಲು = ಹುಲಿದೊಗಲು (ತ್ ಸ್ಥಳದಲ್ಲಿ ದ್ ಆದೇಶ)

ಕಣ್ + ಪನಿ = ಕಂಬನಿ (ಪ್ ಸ್ಥಳದಲ್ಲಿ ಬ್ ಆದೇಶ)

ಕನ್ನಡದಲ್ಲಿ ಈ ಕ್ರಿಯೆ ಎಲ್ಲ ಸಂದರ್ಭದಲ್ಲಿಯೂ ಸಾಧ್ಯವಿಲ್ಲ. (ಆನೆ + ಕಾಲು = ಆನೆಕಾಲು) ಅಂತಸ್ಸಂಧಿಯಲ್ಲಿ ಧ್ವನಿಮಾಗಳು ಲೋಪವಾದರೆ ಲೋಪಸಂಧಿಯೆಂದೂ ರೂಪಾಂತರಗೊಂಡರೆ ಆದೇಶಸಂಧಿಯೆಂದೂ ಕರೆಯುತ್ತಾರೆ.

ಬಹಿಸ್ಸಂಧಿಯಲ್ಲಿ ಆಗಮ ಕ್ರಿಯೆ ಕಂಡುಬರುತ್ತದೆ. ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದ ಮತ್ತು ಉತ್ತರ ಪದಗಳೆರಡರಲ್ಲಿಯ ಎಲ್ಲ ಅಕ್ಷರಗಳು ಸಂಧಿ ಪದದಲ್ಲಿ ಇರುವುದಲ್ಲದೆ ಹೊಸದಾಗಿ ‘ಯ್’, ‘ವ್’ ವ್ಯಂಜನಗಳು ಆಗಮ ವಾಗುತ್ತವೆ. ಧ್ವನಿಮಾಗಳು ಹೊಸದಾಗಿ ಆಗಮಿಸುವುದರಿಂದ ಅದನ್ನು ಆಗಮಸಂಧಿ ಯೆಂತಲೂ ಕರೆಯುತ್ತಾರೆ. ಉದಾ ಮನೆ + ಅನ್ನು = ಮನೆಯನ್ನು (‘ಯ್’ ಆಗಮ), ಗುರು + ಅನ್ನು = ಗುರುವನ್ನು (‘ವ್’ ಆಗಮ) ‘ಯ’ ಕಾರಾಗಮ ಮತ್ತು ‘ವ’ ಕಾರಾಗಮವಾಗಲು ಸ್ವರಕ್ಕೆ ಸ್ವರ ಸೇರುವಾಗ ಮೊದಲನೆಯ ಸ್ವರ ಯಾವುದು ಎಂಬುದರ ಮೇಲೆ ನಿರ್ಣಯಿಸಲ್ಪಡುತ್ತದೆ. ಮೊದಲನೆಯ ಸ್ವರ ‘ಎ’ ಅಥವಾ ‘ಇ’ ಆದರೆ ‘ಯ’ ಕಾರಾಗಮ ‘ಅ’ ಅಥವಾ ‘ಉ’ ಆದರೆ ‘ವ’ ಕಾರಾಗಮ ಎಂದು ನಿರ್ಣಯಿಸಬಹುದು. ಉದಾ. ಗೋಮೂತ್ರ, ಸತ್ಪಂಪ್ರದಾಯ. ಸಂಧಿ ಕ್ರಿಯೆಯಲ್ಲಿ ಧ್ವನಿಗಳು ಬದಲಾವಣೆಗೆ ಒಳಗಾಗಿದಿದ್ದರೆ (ಸಂಧಿ ಕಾರ್ಯ ನಡೆಯದಿದ್ದರೆ) ಅದು ಪ್ರಕೃತಿಭಾವ ಎನಿಸಿಕೊಳ್ಳುತ್ತದೆ.

ಕನ್ನಡದಲ್ಲಿ ಸಂಧಿಕಾರ್ಯ ನಡೆಯಲು ಅ, ಇ, ಎ, ಉ, ಒ, ಸ್ವರಗಳು ಪ್ರಮುಖ ಪಾತ್ರವಹಿಸುತ್ತವೆ. ಉಳಿದ ಸ್ವರಗಳ (ಆ, ಈ, ಏ, ಊ, ಓ) ಪಾತ್ರ ತುಂಬ ಗೌಣ. ಬದಲಾವಣೆ, ಭಾಷೆಯ ಲಕ್ಷಣ. ಆಂಗ್ಲ ಭಾಷೆಯ ರೂಪಗಳು ಕನ್ನಡದಲ್ಲಿ ಹೇರಳವಾಗಿವೆ. ರನ್‌ಗಳು, ಕೋರ್ಟಿಗೆ ಇಂತಹ ರೂಪಗಳು ಬರವಣಿಗೆಯಲ್ಲಿ ವ್ಯಂಜನಾಂತವಾಗಿಯೇ ಕಾಣಿಸುತ್ತಿರುವುದರಿಂದ ಕನ್ನಡ ಸಂಧಿ ನಿಯಮಗಳನ್ನು ಮರುಚರ್ಚೆಗೆ ಒಳಪಡಿಸಬೇಕಾಗಿದೆ.

ನಾಮವಾಚಕಗಳು

ನಾಮಪದಗಳನ್ನುಂಟು ಮಾಡುವ ಮೂಲ ರೂಪವೇ ನಾಮ ಪ್ರಕೃತಿ ಎನಿಸುವುದು. ಅಂತಹ ಪ್ರಕೃತಿಯ ಮುಂದೆ ನಾಮವಿಭಕ್ತಿ ಪ್ರತ್ಯಯಗಳು ಸೇರಿದಾಗ ನಾಮಪದ ಗಳಾಗುತ್ತವೆ. ಕನ್ನಡದಲ್ಲಿ ಮೂಲ ಪ್ರಕೃತಿಗಳಿಗೆ ನೇರವಾಗಿ ವಿಭಕ್ತಿ ಪ್ರತ್ಯಯಗಳು ಹತ್ತುವುದಿಲ್ಲ. ನಾಮ ಪ್ರಕೃತಿ ಮೊದಲು ಪ್ರಾತಿಪದಿಕ ರೂಪವನ್ನು ಹೊಂದಿ ನಂತರ ವಿಭಕ್ತಿ ಪ್ರತ್ಯಗಳನ್ನು ಪಡೆಯಲು ಅರ್ಹವಾಗುತ್ತದೆ. ಉದಾ. ಮರ್ (ಪ್ರಕೃತಿ) + ಅದ್ (ಪ್ರಾತಿಪದಿಕ ರೂಪ) + ಇಂದ (ನಾಮವಿಭಕ್ತಿಯ ಪ್ರತ್ಯಯ) = ಮರದಿಂದ (ನಾಮರೂಪ) ನಾಮಪದಗಳಲ್ಲಿ ವಸ್ತು ವಾಚಕ, ವಿಶೇಷಣ, ಸರ್ವನಾಮ ಮತ್ತು ಭಾವನಾಮಗಳೆಂದು ನಾಲ್ಕು ವಿಧ.

ವಸ್ತುವಾಚಕಗಳು ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳಾಗಿವೆ. ಇದರಲ್ಲಿ ಎರಡು ವಿಧ. ಚೇತನವುಳ್ಳ ವಸ್ತುಗಳು (ಮನುಷ್ಯ, ಪಶು, ಪಕ್ಷಿ, ಕ್ರಿಮಿ, ಕೀಟ), ಅಚೇತನ ವಸ್ತುಗಳು (ಜಡವಸ್ತುಗಳು, ಗಿಡ, ಕಲ್ಲು, ಬಳ್ಳಿ ಮುಂ) ವಸ್ತುವಾಚಕಗಳ ಸ್ವರೂಪವನ್ನು ಅನುಲಕ್ಷಿಸಿ ಮತ್ತೆ ಮೂರು ವಿಧಗಳಾಗಿ ವಿಂಗಡಿಸಬಹುದಾಗಿದೆ. ರೂಢನಾಮ (ರೂಢಿಯಿಂದ ಬಂದ ಹೆಸರುಗಳು) ಮನೆ, ಶಾಲೆ, ಕಲ್ಲು ಮುಂತಾದುವು. ಅಂಕಿತನಾಮ (ಇಟ್ಟ ಹೆಸರುಗಳು) ಉಮೇಶ, ರಮೇಶ, ಬೆಳಗಾವಿ ಮುಂತಾದುವು. ಅನ್ವರ್ಥಕನಾಮ (ಉದ್ಯೋಗ, ಗುಣ, ವೃತ್ತಿಗೆ ಸಂಬಂಧಿಸಿದಂತೆ), ಶಿಕ್ಷಕ, ವೈದ್ಯ, ಚಾಲಕ ಮುಂತಾದುವು.

ನಾಮ ಪ್ರಕರಣದಲ್ಲಿ ಕೇಶಿರಾಜ ‘ಲಿಂಗ’ದ ಸ್ವರೂಪವನ್ನು ಕುರಿತು ಚರ್ಚಿಸಿದ್ದಾನೆ. ‘ಕ್ರಿಯೆಯಂ ನುಡಿಯದುದು ವಿಭಕ್ತಿಯನಿಲ್ಲದುದರ್ಥಮುಳ್ಳುದಂತದು ಲಿಂಗಂ’ ಕೇಶಿರಾಜ ಇಲ್ಲಿ ಕ್ರಿಯಾರಹಿತವಾದ, ವಿಭಕ್ತಿ ಹೀನವಾದ, ಅರ್ಥವತ್ತಾದ ಘಟಕವನ್ನು ‘ಲಿಂಗ’ ವೆಂದು ಹೇಳಿ ನಾಮಪದದ ಮೂಲ ರಹಸ್ಯವನ್ನೇ ಭೇದಿಸಿದ್ದಾನೆ. ಕೇಶಿರಾಜ ಕನ್ನಡದಲ್ಲಿ ಮೂರೇ ಮೂರು ಲಿಂಗಗಳೆಂದು ನಿಷ್ಕರ್ಷಿಸಿದರೂ ತತ್ಪೂರ್ವದಲ್ಲಿ ‘ಲಿಂಗ ಮೊಂಬತ್ತುತೆಱಂ’ ಎನ್ನುತ್ತಾನೆ. ಕನ್ನಡಕ್ಕೆ (ದ್ರಾವಿಡ ಭಾಷೆಗಳಲ್ಲಿ) ಸಹಜವಾದ ಲಿಂಗಗಳು ಮೂರೇ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗ). ಇನ್ನೊಂದು ವಿಷಯ ದ್ರಾವಿಡ ಭಾಷೆಗಳಲ್ಲಿ ಬುದ್ದಿಯ ತಳಹದಿಯ ಮೇಲೆ ಲಿಂಗ ವ್ಯವಸ್ಥೆಯನ್ನು ವಿವರಿಸ ಲಾಗಿದೆ. ಶಬ್ದಮಣಿದರ್ಪಣದಲ್ಲಿಯೇ ಈ ಕುರಿತು ಸುಳುಹುಗಳಿವೆ. ಉದಾ. ‘ಮಗು ಮಲಗಿದೆ’ ಎಂಬಲ್ಲಿ ‘ಮಗು’ ಪುಲ್ಲಿಂಗ, ಸ್ತ್ರೀಲಿಂಗ ಯಾವುದೇ ಇರಲಿ ಅದು ಮಲಗಿದೆ ಎಂಬಲ್ಲಿ ನಪುಂಸಕವೇ. ಲಿಂಗ ವ್ಯವಸ್ಥೆಯಲ್ಲಿ ಬುದ್ದಿಪ್ರಧಾನ ಪಾತ್ರ ವಹಿಸುತ್ತದೆ.

ಒಂದು ವಸ್ತು, ಪ್ರಾಣಿ, ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ಧವನ್ನು ‘ವಚನ’ ಎಂದು ಹೇಳುತ್ತಾರೆ. ಕೇಶಿರಾಜ ವಚನಗಳ ಬಗ್ಗೆ ಪ್ರಸ್ತಾಪಿಸುತ್ತ ‘………ಕನ್ನಡದೊಳ್‌ಗೇಕ ಬಹುತ್ವಂ ದ್ವಿವಚನಮುಚಿತದೆಬರ್ಕುಂ’. ಆತನ ವಚನ ಪ್ರಸ್ತಾಪದಲ್ಲಿ ಸಂಸ್ಕೃತದ ಛಾಯೆಯಿದೆ. ಕನ್ನಡದಲ್ಲಿ (ದ್ರಾವಿಡ ಭಾಷೆಗಳಲ್ಲಿ) ಏಕವಚನ, ಬಹುವಚನಗಳೆಂಬ ಎರಡೇ ವಚನಗಳಿವೆ. ದ್ವಿವಚನ ಸಂಸ್ಕೃತದಲ್ಲಿದೆ. ಗಳು, ಅರು, ಅಂದಿರು ಇವು ಬಹುವಚನ ಪ್ರತ್ಯಯಗಳಾಗಿವೆ. ಪುಸ್ತಕಗಳು, ಅರಸರು, ಅತ್ತೆಯಂದಿರು. ಜತಿಯನ್ನು ಹೇಳುವಲ್ಲಿ ಏಕವಚನಕ್ಕೆ ಬಹುವಚನ ಬರುತ್ತದೆ. ಉದಾ. ಆನೆನೂಂಕಿದವು -ಆನೆಗಳ್ ನೂಂಕಿದವು. ಕನ್ನಡ ಭಾಷೆಯ ಬೆಳವಣಿಗೆಯ ತತ್ವವನ್ನು ಕೇಶಿರಾಜನ ಜತ್ಯೇಕ ವಚನ ಪ್ರತಿಪಾದಿಸುತ್ತದೆ ಎಂದು ಹೇಳಬಹುದು.

ವಸ್ತುಗಳ, ಪ್ರಾಣಿಗಳ ಅಥವಾ ವ್ಯಕ್ತಿಗಳ ಗುಣ, ಸ್ವಭಾವ, ರೀತಿಗಳನ್ನು ವರ್ಣಿಸುವ ಅಥವಾ ವಿಶೇಷಿಸುವ ಶಬ್ದಗಳನ್ನು ವಿಶೇಷಣಗಳೆನ್ನುವರು. ಈ ಶಬ್ದಗಳಲ್ಲಿ ‘ವಿಶೇಷಣ’ ಮತ್ತು ‘ವಿಶೇಷ್ಯ’ ಎಂಬ ಎರಡು ಪದಗಳು ಮುಖ್ಯವಾಗಿ ಬರುತ್ತವೆ. ‘ವಿಶೇಷಣ’ವು ವಸ್ತು, ಪ್ರಾಣಿ, ವ್ಯಕ್ತಿಗಳ ಗುಣ ಸ್ವಭಾವ ರೀತಿಗಳನ್ನು ವರ್ಣಿಸುತ್ತಿದ್ದರೆ. ವಿಶೇಷ್ಯವು ವರ್ಣಿಸಿಕೊಳ್ಳುತ್ತದೆ. ಉದಾ. ಬಿಳಿಯ (ವಿಶೇಷಣ) ಬಟ್ಟೆ (ವಿಶೇಷ್ಯ) ಇದರಂತೆ ಕೆಂಪು ಕಾಗದ, ದೊಡ್ಡ ಗಿಡ ಮುಂತಾದುವು. ವಿಶೇಷಣಗಳಲ್ಲಿ ಐದು ಪ್ರಕಾರಗಳು. ಗುಣ ವಾಚಕಗಳು, (ಗುಣಸ್ವಭಾವಗಳನ್ನು ವರ್ಣಿಸುವ ಪದಗಳು) ಕೆಂಪು, ಒಳ್ಳೆಯ, ಕೆಟ್ಟ ಮುಂತಾದುವು. ಸಂಖ್ಯಾವಾಚಕಗಳು. ಒಂದುಊರು, ಎರಡುದಿನ ಮುಂತಾದುವು. ಪರಿಮಾಣ ವಾಚಕಗಳು. ಇಷ್ಟು, ಅಷ್ಟು, ಅನಿತು, ಇನಿತು, ಸಣ್ಣದು, ದೊಡ್ಡದು, ಮುಂತಾದುವು. ಪ್ರಕಾರ ವಾಚಕಗಳು. (ವಸ್ತುಗಳ ಸ್ಥಿತಿಯನ್ನು ಹೇಳುವ ಪದಗಳು) ಅಂತಹ, ಇಂತಹ ಮುಂ. ದಿಗ್ವಾಚಕಗಳು; ಪೂರ್ವ, ಪಶ್ಚಿಮ, ಉತ್ತರ ಮುಂತಾದುವು.

ಸರ್ವನಾಮಪದಗಳು ಒಂದು ಭಾಷೆಯ ಸ್ಥಿರ ಆಸ್ತಿ. ಅವುಗಳನ್ನು ಅನ್ಯ ಭಾಷೆಗಳಿಂದ ಎರವಲು ತೆಗೆದುಕೊಳ್ಳಲಾಗುವುದಿಲ್ಲ. ಒಂದು ವಾಕ್ಯದಲ್ಲಿ ಪದೇ ಪದೇ ಬರುವ ನಾಮಪದಗಳ ಬಳಕೆಯನ್ನು ತಪ್ಪಿಸಿ ವಾಕ್ಯವು ಅಂದಗೆಡದಂತೆ ಅದರ ಕಾರ್ಯವನ್ನು ನಿರ್ವಹಿಸುವ ಕೆಲವು ರೂಪಗಳಿಗೆ ಸರ್ವನಾಮಗಳೆನ್ನುವರು. ಸರ್ವನಾಮಗಳಲ್ಲಿ ನಾಲ್ಕು ಪ್ರಕಾರಗಳಿವೆ. ಪುರುಷಾರ್ಥಕ ಸರ್ವನಾಮಗಳು ಉತ್ತಮಪುರುಷ (ನಾನು, ನಾವು), ಮಧ್ಯಮ ಪುರುಷ (ನೀನು, ನೀವು) ಪ್ರಥಮ ಪುರುಷ (ಅವನು, ಅವಳು, ಅವರು, ಅದು ಅವು), ಆತ್ಮಾರ್ಥಕ ಸರ್ವನಾಮ (ತಾನು, ತಾವು), ಪ್ರಶ್ನಾರ್ಥಕ ಸರ್ವನಾಮ (ಯಾರು, ಯಾವನು, ಯಾವುದು, ಏನು ಮುಂತಾದವು). ದರ್ಶಕ ಸರ್ವನಾಮ. ಸಮೀಪದರ್ಶಕ ಇವನು, ಈಕೆ ದೂರದರ್ಶಕ (ಅವನು, ಅವಳು, ಮುಂ).

ವ್ಯಕ್ತಿಗಳ, ಪ್ರಾಣಿಗಳ, ವಸ್ತುಗಳ, ಗುಣ, ಸ್ವಭಾವ, ಸ್ಥಿತಿ, ಕ್ರಿಯೆ ಮೊದಲಾದ ಭಾವ ಭಾವನೆಗಳನ್ನು ಬುದ್ದಿಗೆ, ಮನಸ್ಸಿಗೆ ಸೂಚಿಸುವ ಅಥವಾ ತಿಳಿಸುವ ಶಬ್ದಗಳು ಭಾವನಾಮ ಗಳೆನಿಸುವವು. ಉದಾ. ಸಿಟ್ಟು, ಸಂತೋಷ, ಶಾಂತಿ, ಕೋಪ ಮುಂತಾದುವು.

ಪದದ ಅರ್ಥವನ್ನು ವಿಭಜಿಸುವುದೇ ವಿಭಕ್ತಿ. ನಾಮಪದಗಳಿಗೆ ಸೇರಿದ ಪ್ರತ್ಯಯಗಳಿಗೆ ‘ನಾಮ ವಿಭಕ್ತಿ ಪ್ರತ್ಯಯ’ಗಳೆನ್ನುವರು. ಈ ಪ್ರತ್ಯಯಗಳಿಗೆ ಸ್ವತಂತ್ರ ಅರ್ಥ ಇರುವುದಿಲ್ಲ. ಆದರೆ ಇವು ವಾಕ್ಯದಲ್ಲಿಯ ನಾಮಪದ, ಕ್ರಿಯಾಪದ ಮತ್ತು ಇತರ ಎಲ್ಲ ಪದಗಳಿಗೂ ಇರುವ ಸಂಬಂಧಾರ್ಥವನ್ನು ತಿಳಿಸುತ್ತವೆ. ವಾಕ್ಯದಲ್ಲಿಯ ನಾಮ ವಿಭಕ್ತಿಗಳ ಕ್ರಿಯಾರ್ಥವನ್ನುಂಟು ಮಾಡುವಂತಹವು ‘ಕಾರಕ’ಗಳು. ಇವು ವಿಭಕ್ತಿ ಪ್ರತ್ಯಯಗಳಂತೆ ಬೇರೆ ಬೇರೆ ಇದ್ದು ಬೇರೆ ಬೇರೆ ಕ್ರಿಯಾರ್ಥ ಉಂಟು ಮಾಡುತ್ತವೆ.

ಸಂ

ವಿಭಕ್ತಿಗಳು

ಕಾರಕಗಳು

ಹೊಸಗನ್ನಡದ ಪ್ರತ್ಯಯಗಳು

ಹಳಗನ್ನಡದ ಪ್ರತ್ಯಯಗಳು

೧. ಪ್ರಥಮಾ ಕರ್ತೃ ಮ್
೨. ದ್ವಿತೀಯಾ ಕರ್ಮ ಅನ್ನು ಅಮ್
೩. ತೃತೀಯಾ ಕರಣ ಇಂದ ಇಮ್
೪. ಚತುರ್ಥಿ ಸಂಪ್ರದಾನ (ಸಾಧನ) ಗೆ, ಇಗೆ, ಕೆ ಅಕ್ಕೆ ಕ್ಕೆ
೫. ಪಂಚಮೀ ಅಪಾದಾನ (ಅಗಲುವಿಕೆ) ಇಂದ ಅತ್
೬. ಷಷ್ಠೀ ಸಂಬಂಧ
೭. ಸಪ್ತಮಿ ಅಧಿಕರಣ ಅಲ್ಲಿ ಒಳ್
೮. ಸಂಬೋಧನೆ ಆ, ಏ, ಇರಾ

ಚಂಪು ಕೃತಿಗಳ ಭಾಷೆಯನ್ನು ತನ್ನ ವ್ಯಾಕರಣಕ್ಕೆ ಪ್ರಮಾಣವೆಂದಿಟ್ಟುಕೊಂಡ ಕೇಶಿರಾಜ ವಚನಸಾಹಿತ್ಯದ ಭಾಷೆಯನ್ನು ಅನುಸರಿಸಿದ್ದರೆ ಶಬ್ದಮಣಿದರ್ಪಣದ ಸ್ವರೂಪ ಬೇರೆಯಾಗುತ್ತಿತ್ತು.

ಗಮನಿಸಬೇಕಾದ ಅಂಶಗಳು

(i) ಸಹೋದರ ದ್ರಾವಿಡ ಭಾಷೆಗಳಲ್ಲಿ ಪ್ರಥಮೆಗೆ ಪ್ರತ್ಯಯವಿಲ್ಲ. ಅಲ್ಲಿ ಪ್ರಕೃತಿಯೇ ಅದರ ಪ್ರತ್ಯಯವಾಗಿದೆ. ಕೇಶಿರಾಜ ಪ್ರಥಮೆಗೆ ‘ಮ್’ ಪ್ರತ್ಯಯವಿದೆಯೆಂದು ಹೇಳಿದ್ದಾನೆ. ಆದರೆ ಇದು ‘ಅ’ ಕಾರಾಂತ ಶಬ್ದಗಳಲ್ಲಿ ಮಾತ್ರ ಸೇರಿದ್ದು (ರಾಮಂ, ಭೀಮಂ ಮುಂತಾದುವು) ಉಳಿದೆಡೆ ಲೋಪವಾಗುತ್ತದೆ (ಜರಿ, ಕರಿ ಪುಲ್ಲು ಮುಂತಾದುವು) ಎನ್ನುತ್ತಾನೆ. ಆದ್ದರಿಂದ ಪ್ರಕೃತಿಯೇ ಪ್ರಥಮಾರ್ಥದಲ್ಲಿ ಸಲ್ಲುತ್ತದೆ.

(ii) ಸಂಬೋಧನೆಗೆ ಪ್ರತ್ಯಯವಿಲ್ಲ. ಪ್ರಕೃತಿಯನ್ನೇ ದೀರ್ಘಿಕರಣ ಮಾಡಿದರೆ ಸಂಬೋಧನೆಯಾಗುತ್ತದೆ. ಉದಾ. ರಾಮ‑ರಾಮಾ, ರಾಮಗಳಿರಾ

(iii) ಪಂಚಮೀ ವಿಭಕ್ತಿ ಕನ್ನಡದಲ್ಲಿಲ್ಲ. ತೃತೀಯಾ ಮತ್ತು ಪಂಚಮಿ ವಿಭಕ್ತಿಯ ಪ್ರತ್ಯಯಗಳು ಒಂದೇ ವಿಧವಾಗಿವೆ. ಸಾಮಾನ್ಯವಾಗಿ ಪಂಚಮಿ ಕಾರ್ಯವನ್ನು ತೃತೀಯಾವಿಭಕ್ತಿ ಮಾಡುತ್ತದೆ. ಹಳಗನ್ನಡ ಸಾಹಿತ್ಯದಲ್ಲಿ ಪಂಚಮಿಯ ಬಳಕೆ ಬಹಳ ಅಪರೂಪ, ಹೆಚ್ಚಾಗಿ ಪಂಚಮಿ ಬದಲು ತೃತೀಯೆ ಕಾಣಬರುತ್ತದೆ. ಆಡುಗನ್ನಡದಲ್ಲಿ ಪಂಚಮಿಗೆ ವಿಶೇಷ ಪ್ರತ್ಯಯವಿಲ್ಲ; ಅದಕ್ಕೆ ತೃತೀಯವನ್ನೇ ಬಳಸುತ್ತಾರೆ. ಒಟ್ಟಿನಲ್ಲಿ ಕನ್ನಡದಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ ಇಲ್ಲ ಎಂದೇ ಹೇಳಬೇಕಾಗುತ್ತದೆ.[2]

ಭಾಷೆ ಬಳಕೆಯಾಗುವಾಗ ನಾಮಪ್ರಕೃತಿಗೆ ಹಚ್ಚುವ ವಿಭಕ್ತಿ ಪ್ರತ್ಯಯಗಳು ಒಮ್ಮೊಮ್ಮೆ ಪಲ್ಲಟಗೊಳ್ಳುತ್ತವೆ. ಅಂದರೆ ಒಂದು ವಿಭಕ್ತಿಯ ಸ್ಥಳದಲ್ಲಿ ಇನ್ನೊಂದು ವಿಭಕ್ತಿಯನ್ನು ಉಪಯೋಗಿಸಿ ಮಾತಾಡುತ್ತಿರುತ್ತೇವೆ. ಇಂತಹ ಪ್ರಕ್ರಿಯೆಯನ್ನು ವಿಭಕ್ತಿ ಪಲ್ಲಟ ಎನ್ನುತ್ತೇವೆ. ಉದಾ. ದ್ವೀತಿಯೆ ಸ್ಥಳದಲ್ಲಿ ಪ್ರಥಮ ಪಲ್ಲಟ – ಅವನು ಊರನ್ನು ಸೇರಿದನು – ಅವನು ಊರು ಸೇರಿದನು. ದ್ವಿತೀಯೆ ಸ್ಥಳದಲ್ಲಿ ಚತುರ್ಥಿ – ಅವನು ಊರನ್ನು ಸೇರಿದನು – ಅವನು ಊರಿಗೆ ಸೇರಿದನು. ಷಷ್ಠಿಸ್ಥಳದಲ್ಲಿ ಚತುರ್ಥಿ – ಮನೆಯ ಯಜಮಾನ – ಮನೆಗೆ ಯಜಮಾನ. ಸಪ್ತಮಿಯ ಸ್ಥಳದಲ್ಲಿ ಪ್ರಥಮೆ ಹಗಲಿನಲ್ಲಿ ಕೆಲಸ ಮಾಡು – ಹಗಲು ಕೆಲಸ ಮಾಡು. ಸಪ್ತಮಿಯ ಸ್ಥಳದಲ್ಲಿ ಚತುರ್ಥಿ ಹುಡುಗ ಹಳ್ಳದಲ್ಲಿ ಬಿದ್ದನು – ಹುಡುಗ ಹಳ್ಳಕ್ಕೆ ಬಿದ್ದನು. ದ್ವೀತಿಯ ಸ್ಥಳದಲ್ಲಿ ಷಷ್ಠೀ – ವಸತಿಯನ್ನು ಮಾಡಿದರು. ವಸತಿಯ ಮಾಡಿದರು. ಪಂಚಮಿಯ ಸ್ಥಳದಲ್ಲಿ ಚತುರ್ಥಿ – ಅಧರ್ಮದಿಂದ ಹೇಸಿದೆವು. ಅಧರ್ಮಕ್ಕೆ ಹೇಸಿದೆವು. ತೃತೀಯೆ ಸ್ಥಳದಲ್ಲಿ ಸಪ್ತಮಿ -ಕಣ್ಣಿನಿಂದ ನೋಡಿದೆವು – ಕಣ್ಣಲ್ಲಿ ನೋಡಿದೆವು. ತೃತೀಯೆ ಸ್ಥಳದಲ್ಲಿ ದ್ವಿತೀಯೆ -ಹೂವಿನಿಂದ ಅಲಂಕರಿಸು – ಹೂವನ್ನು ಅಲಂಕರಿಸು. ಹಳಗನ್ನಡದ ಸಾಹಿತ್ಯದಲ್ಲಿ ಪಂಚಮಿ ಸ್ಥಳದಲ್ಲಿ ತೃತೀಯೆಯ ಪಲ್ಲಟ ಹೆಚ್ಚಾಗಿ ಕಂಡು ಬರುತ್ತದೆ. ಉದಾ. ಕೊಡಲಿಯತ್ತಣಿಂ ಕಡಿದಂ – ಕೊಡಲಿಯಂ ಕಡಿದಂ. ಹೀಗೆ ಒಂದು ವಿಭಕ್ತಿಯ ಸ್ಥಳದಲ್ಲಿ ಬೇರೊಂದು ವಿಭಕ್ತಿಯನ್ನು ಉಪಯೋಗಿಸುವ ವಿಭಕ್ತಿಪಲ್ಲಟ ಕ್ರಿಯೆಯು ಕಾಣಬರುತ್ತದೆ.

ಕನ್ನಡದ ರಚನೆಗೆ ಅನುಗುಣವಾಗಿ ವ್ಯಾಕರಣವನ್ನು ರಚಿಸಿದ ಡಾ.ಡಿ.ಎನ್. ಶಂಕರ ಭಟ್ಟರು ಕನ್ನಡ ಪದರೂಪಗಳನ್ನು ನಾಮವಾಚಕ, ಕ್ರಿಯಾವಾಚಕ ಮತ್ತು ಗುಣವಾಚಕ ಗಳೆಂದು ಮೂರು ರೀತಿಯಾಗಿ ವಿಂಗಡಿಸಿದ್ದಾರೆ. ಹಳಗನ್ನಡ ವ್ಯಾಕರಣಗಳಲ್ಲಿ ಗುಣ ವಾಚಕವು ನಾಮಪದಗಳ ಕಕ್ಷೆಯಲ್ಲಿ ಬರುತ್ತದೆ. ಶಂಕರಭಟ್‌ರು ಅದನ್ನು ಪ್ರತ್ಯೇಕ ವರ್ಗದಲ್ಲಿಟ್ಟು ಚರ್ಚಿಸುತ್ತಾರೆ. ನಾಮಪದ ವರ್ಗದಲ್ಲಿ ಲಿಂಗ, ವಚನ, ಪುರುಷ, ವಿಭಕ್ತಿ, ವಿಭಕ್ತಿ ಪಲ್ಲಟ ಹಾಗೂ ಸರ್ವನಾಮಗಳನ್ನು ಕುರಿತು ಚರ್ಚಿಸುತ್ತಾರೆ. ಅವರು ಚರ್ಚೆಯ ಫಲಿತಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿದೆ.[3]

‘ಲಿಂಗ’ ಎನ್ನುವುದು ನಾಮಪದಗಳನ್ನು ವಿಭಜಿಸುವಲ್ಲಿ ಪ್ರಯುಕ್ತವಾಗುವ ವ್ಯಾಕರಣ ತತ್ವವಾಗಿದೆ. ಕನ್ನಡದಲ್ಲಿ ಲಿಂಗ ವಿಭಜನೆ ಅರ್ಥಾನುಸಾರಿಯಾಗಿದೆ. ಮನುಷ್ಯರನ್ನು ಕುರಿತು ಹೇಳುವಾಗ ಮಾತ್ರ ಪುಲ್ಲಿಂಗ, ಮತ್ತು ಸ್ತ್ರೀಲಿಂಗಗಳ ವ್ಯತ್ಯಾಸವನ್ನು ಸೂಚಿಸಲಾಗುತ್ತದೆ. ಮನುಷ್ಯೇತರ ಪ್ರಾಣಿಗಳನ್ನು ಕುರಿತು ಹೇಳುವಾಗ ನಪುಂಸಕಲಿಂಗ ಬಳಕೆಯಾಗುತ್ತದೆ. ವಚನವು ವ್ಯಕ್ತಿ ಮತ್ತು ವಸ್ತುಗಳ ಸಂಖ್ಯೆಯನ್ನು ತಿಳಿಸುತ್ತದೆ. ವಚನಗಳು ಎರಡು. ಏಕವಚನ ಮತ್ತು ಬಹುವಚನ. ಪುರುಷವು ಮಾತನಾಡುವ ಭಾಷಿಕ ಯಾರು, ಯಾರೊಡನೆ ಎಂಬುದನ್ನು ತಿಳಿಸುತ್ತದೆ. ಇವು ಕನ್ನಡದಲ್ಲಿ ಮೂರು ಉತ್ತಮ (ನಾನು, ನಾವು), ಮಧ್ಯಮ (ನೀನು ನೀವು) ಮತ್ತು ಪ್ರಥಮ (ಅವನು, ಅವಳು, ಅದು), ಈ ಮೂರು ವ್ಯಾಕರಣ ತತ್ವಗಳು ನಾಮಪದದ ಕಕ್ಷೆಯಲ್ಲಿ ಸಮಾವೇಶಗೊಳ್ಳುತ್ತವೆ. ಅವು ಕ್ರಿಯಾಪದಗಳ ಜೊತೆ ಕಂಡುಬಂದರೂ ಕ್ರಿಯಾಪದದ ಅರ್ಥವನ್ನು ಬದಲಿಸಲಾರವು.

ಕೇಶಿರಾಜ ನಾಮಪದಗಳನ್ನು ವಿಭಕ್ತಿ ಪ್ರತ್ಯಯ ಹತ್ತಬಲ್ಲ ರೂಪಗಳು ಹಾಗೂ ನಾಮಪದವನ್ನು ಸೂಚಿಸುವ ರೂಪಗಳೆಂದು ಎರಡು ರೀತಿಯಾಗಿ ವಿಂಗಡಿಸಿದ್ದಾನೆ. ಆದರೆ ಕನ್ನಡಕ್ಕೆ ಈ ವಿಭಜನೆ ಬೇಡ. ವಿಭಕ್ತಿ ಪ್ರತ್ಯಯವಿಲ್ಲದ ರೂಪ ನಾಮಪದ. ವಿಭಕ್ತಿ ಪ್ರತ್ಯಯ ಸೇರಿದುದು ನಾಮ ಪದರೂಪ ಎಂದು ಎರಡು ವಿಧಗಳು

‘ಕಾರಕ’ ವ್ಯವಸ್ಥೆ (ನಿಯಮ) ಸಂಸ್ಕೃತಕ್ಕೆ ಅವಶ್ಯ. ಏಕೆಂದರೆ ಅಲ್ಲಿ ವಿಭಕ್ತಿಗಳು ವಾಕ್ಯದಲ್ಲಿರುವ ನಾಮರೂಪಗಳ ಮಧ್ಯ ಇರುವ ಸಂಬಂಧವನ್ನು ಹೇಳಲಾರವು ಆ ಅರ್ಥ ಸಂಬಂಧವನ್ನು ಹೇಳಲು ಕಾರಕ ಕಲ್ಪನೆ ಬೇಕು ಆದರೆ ಕನ್ನಡದಲ್ಲಿ ಈ ಸಮಸ್ಯೆ ಇಲ್ಲ. ಕನ್ನಡದಲ್ಲಿ ವಿಭಕ್ತಿಗಳು ನಾಮಪದಗಳ ನಡುವೆ ಇರುವ ಸಂಬಂಧವನ್ನು ಹೇಳುತ್ತವೆ. ನಾಮರೂಪಗಳ ನಡುವೆ ವಾಕ್ಯದಲ್ಲಿರುವ ಸಂಬಂಧವನ್ನು ಸೂಚಿಸಲು ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕು. ಕನ್ನಡದಲ್ಲಿ ಏಳು ವಿಭಕ್ತಿಗಳೆಂದು ಹೇಳುತ್ತಿದ್ದೇವೆ. ಆದರೆ ಆ ಏಳು ವಿಭಕ್ತಿಗಳು ಕನ್ನಡಕ್ಕೆ ಅಗತ್ಯವಿಲ್ಲ. ಡಿ.ಎನ್. ಶಂಕರಭಟ್‌ರು ಸಂಸ್ಕೃತ ಮತ್ತು ಕನ್ನಡ ಭಾಷೆಗಳ ಬಳಕೆಯಲ್ಲಿರುವ ವ್ಯತ್ಯಾಸಗಳನ್ನು ಪರಿಶೀಲಿಸುವುದರ ಮೂಲಕ ಕನ್ನಡ ವಿಭಕ್ತಿಗಳನ್ನು ಹೇಳಿದ್ದಾರೆ. ಸಂಸ್ಕೃತ ವಿಭಕ್ತಿಗಳನ್ನು ಅವುಗಳ ಅರ್ಥದೊಂದಿಗೆ ನೇರವಾಗಿ ಸಂಬಂಧಿಸುವುದು ಕಷ್ಟ. ಕನ್ನಡದ ವಿಭಕ್ತಿ ಪ್ರತ್ಯಯಗಳಿಗೆ ಅವುಗಳ ಅರ್ಥದೊಂದಿಗೆ ನೇರ ಹೊಂದಾಣಿಕೆಯಿದೆ.

ಶಂಕರಭಟ್‌ರು ನಾಲ್ಕು ವಿಭಕ್ತಿಗಳನ್ನು ಹೇಳಿದ್ದಾರೆ ಬಾಧಿತ (ಅನ್ನು) ಮೂಲ (ಇಂದ), ಉದ್ದೇಶ (ಗೆ), ಆಕರ (ಅಲ್ಲಿ) ಕನ್ನದಲ್ಲಿ ಪ್ರಥಮಾ ವಿಭಕ್ತಿಯಿಲ್ಲ. ವಾಕ್ಯದಲ್ಲಿ ನಾಮಪ್ರಕೃತಿಯನ್ನು ಪ್ರಥಮ ವಿಭಕ್ತಿಯಲ್ಲಿ ಬಳಸಬಹುದು. ದ್ವಿತೀಯಾ ವಿಭಕ್ತಿಯನ್ನು ಅವಶ್ಯವಿದ್ದಲ್ಲಿ ಬಳಸಿ ಕೆಲವೆಡೆ ನಾಮ ಪ್ರಕೃತಿ ರೂಪದಲ್ಲಿಯೇ ಬಳಸಬಹುದು. ತೃತೀಯೆಯು ಚಲನೆಯ ಮೂಲವನ್ನು ಹೇಳುವುದು. ಚತುರ್ಥಿಯು ಚಲನೆಯ ಉದ್ದೇಶವನ್ನು ತಿಳಿಸುವುದು. ಪಂಚಮೀ ವಿಭಕ್ತಿ ಕಾರ್ಯವನ್ನು ತೃತೀಯಾ ಮಾಡುವುದರಿಂದ ಪಂಚಮಿ ವಿಭಕ್ತಿಯಿಲ್ಲ. ಕನ್ನಡದಲ್ಲಿ ಷಷ್ಠೀ ವಿಭಕ್ತಿ ಪ್ರತ್ಯಯವಾಗಿ ಬಳಕೆಯಾಗುವುದಿಲ್ಲ. ಸಪ್ತಮಿ ಬಳಕೆಯಲ್ಲಿ ಕನ್ನಡಕ್ಕೆ ಅದು ಚಲನೆಯ ಆಕರವಾಗಿರಬೇಕೆ ಹೊರತು ಕೊನೆಯನ್ನಲ್ಲ. ಶಂಕರಭಟ್‌ರು ಕನ್ನಡದಲ್ಲಿ ಬಳಕೆಯಲ್ಲಿದ್ದ ದ್ವಿತೀಯಾ, ತೃತೀಯಾ, ಚತುರ್ಥೀ ಮತ್ತು ಸಪ್ತಮೀ ವಿಭಕ್ತಿಗಳಿಗೆ ಬಾದಿತ, ಮೂಲ, ಉದ್ದೇಶ ಮತ್ತು ಆಕರವೆಂಬ ಹೆಸರುಗಳನ್ನು ಕೊಟ್ಟಿದ್ದಾರೆ ಸಂಸ್ಕೃತಕ್ಕೂ ಮತ್ತು ಕನ್ನಡಕ್ಕೂ ನಡುವೆ ವಿಭಕ್ತಿ ಪಲ್ಲಟದ ಮಟ್ಟಿಗೆ ವ್ಯತ್ಯಾಸವಿದೆ. ಕನ್ನಡದಲ್ಲಿ ವಿಭಕ್ತಿ ಪಲ್ಲಟ ಪ್ರಕ್ರಿಯೆಯಲ್ಲಿ ಅರ್ಥವ್ಯತ್ಯಾಸವಿದೆ. ಕನ್ನಡದಲ್ಲಿ ವಿಭಕ್ತಿ ಪಲ್ಲಟ ಪ್ರಕ್ರಿಯೆಯಲ್ಲಿ ಅರ್ಥವ್ಯತ್ಯಾಸ ಕಾಣಿಸುತ್ತದೆ.[4]

ಭಟ್‌ರು ಸರ್ವನಾಮಗಳನ್ನು ಎರಡು ರೀತಿಯಾಗಿ ವರ್ಗೀಕರಿಸಿದ್ದಾರೆ. ಉತ್ತಮಪುರುಷ, ಮಧ್ಯಮಪುರುಷ ಸರ್ವನಾಮಗಳಾದ ನಾನು, ನಾವು, ನೀನು, ನೀವು ಇವು ನಾಮಪದಗಳಿಗೆ ಪ್ರತಿಯಾಗಿ ಬರುವುದರಿಂದ ಇವು ಸರ್ವನಾಮಗಳು. ಪ್ರಥಮ ಪುರುಷ ವಾಚಕಗಳಾದ ಅವನು, ಅವರು, ಇವನು, ಮುಂತಾದವು ಹಾಗೂ ಪ್ರಶ್ನಾರ್ಥಕ ಸರ್ವನಾಮಗಳು ಇವು ನಾಮಪದಗಳಲ್ಲದೆ ಗುಣವಾಚಕಗಳಿಗೂ ಪ್ರತಿಯಾಗಿ ಬರುವುದರಿಂದ ಇವುಗಳನ್ನು ಸರ್ವಪದಗಳೆಂದು ಕರೆದಿದ್ದಾರೆ. ಗುಣವಾಚಕ ಪದಗಳ ಅರ್ಥವನ್ನು ನೇರವಾಗಿ ಅವುಗಳ ಅಂಗಗಳಾಗಿ ಬಂದಿರುವ ಪದ ಮತ್ತು ಪ್ರತ್ಯಯಗಳ ಆಧಾರದ ಮೇಲೆ ನಿರ್ಧರಿಸಲು ಸಾಧ್ಯವಿದೆ. ಪದ ರಚನೆಯಲ್ಲಿ ಸಂಸ್ಕೃತಕ್ಕಿಂತ ಕನ್ನಡ ಹಲವು ವಿಷಯಗಳಲ್ಲಿ ಭಿನ್ನವಾಗಿದೆ.[5] ಪ್ರತ್ಯಯಗಳ ಮೂಲಕ ನಾಮಪದ, ಕ್ರಿಯಾಪದ ಮತ್ತು ಗುಣವಾಚಕಗಳನ್ನು ಸಾಧಿಸಲು ಕನ್ನಡದಲ್ಲಿ ಬೇರೆ ಬೇರೆ ರೀತಿಯ ವಿಧಾನಗಳು ಪ್ರಯುಕ್ತವಾಗಿವೆ.

ಕನ್ನಡದ ಹೊಸ ಸಮಾಸಗಳು

ಕನ್ನಡ ಶಬ್ದಶಾಸ್ತ್ರದಲ್ಲಿ ಸಮಾಸ ಪ್ರಕರಣಕ್ಕೆ ಒಂದು ಪ್ರಮುಖ ಸ್ಥಾನವಿದೆಯೆನ್ನುವುದು ಸರ್ವವಿದಿತ. ಕನ್ನಡ ವ್ಯಾಕರಣಕಾರರು ಸಂಸ್ಕೃತದ ಚೌಕಟ್ಟಿನಲ್ಲಿ ಕನ್ನಡದ ಸ್ವರೂಪವನ್ನು ಹೇಳಿದ್ದಾರೆ. ಅದಕ್ಕೆ ಸಮಾಸಗಳು ಹೊರತಲ್ಲ. ಸಂಸ್ಕೃತ ಸಮಾಸ ನಿಯಮಗಳನ್ನು ಮೊದಲು ನಿರೂಪಿಸಿ ನಂತರ ಅವುಗಳಿಗಿಂತ ಭಿನ್ನವಾದ ಸಮಾಸಗಳು ಕನ್ನಡದಲ್ಲಿವೆ ಎಂಬುದನ್ನು ತಿಳಿಸಲೂ ಪ್ರಯತ್ನಿಸುತ್ತಾರೆ. ಆದರೆ ಕನ್ನಡ ಸಮಸ್ತ ಪದಗಳು ಸಂಸ್ಕೃತ ಸಮಸ್ತ ಪದಗಳಿಗಿಂತ ಭಿನ್ನವಾಗಿವೆ. ಕನ್ನಡ ಸಮಸ್ತ ಪದಗಳಿಗೆ ಅದರದ್ದೇ ಆದ ನಿಯಮಗಳಿವೆ. ಕನ್ನಡ ಸಮಸ್ತ ಪದಗಳನ್ನು ಸಮಗ್ರವಾಗಿ, ಕೂಲಂಕುಷವಾಗಿ ಅಭ್ಯಾಸ ಮಾಡುವ ಪ್ರವೃತ್ತಿ ಅಭಿವೃದ್ದಿಗೊಳ್ಳುವುದು ಆಯಾ ಭಾಷಾಧ್ಯಾಪಕರಿಗೆ ಉಚಿತವೂ ಅವಶ್ಯವೂ ಆಗಿದೆ. ಈ ದೃಷ್ಟಿಯಿಂದ ಮಾತ್ರ ಯಥಾವತ್ತಾಗಿ ಕನ್ನಡದ್ದೇ ಸಮಾಸ ಗಳನ್ನು ಕುರಿತು ಬರೆಯಲು ಉಪಕ್ರಮಿಸಲಾಗಿದೆ. ಈ ಭಾಗದಲ್ಲಿ ಮೂರು ಅಂಶಗಳನ್ನು ಕುರಿತು ವಿವೇಚಿಸಲಾಗಿದೆ.

ಅ. ಕೇಶಿರಾಜನ ಸಮಾಸಗಳು : ಪರಿಶೀಲನೆ

ಆ. ಹೊಸ ಸಮಾಸಗಳ ಸ್ವರೂಪ

ಇ. ಸಮಾಸ ಕ್ರಿಯೆಯಲ್ಲಿ ಧ್ವನಿ ಬದಲಾವಣೆಗಳು

. ಕೇಶಿರಾಜನ ಸಮಾಸಗಳು : ಪರಿಶೀಲನೆ

ಕೇಶಿರಾಜನ ಶಬ್ದಮಣಿದರ್ಪಣವನ್ನು ಸಾಂಪ್ರದಾಯಕ ಕನ್ನಡ ವ್ಯಾಕರಣಕ್ಕೆ ಪ್ರತಿನಿಧಿ ಯಾಗಿ ಸ್ವೀಕರಿಸಬಹುದು. ಕೇಶಿರಾಜ ಸಮಾಸದ ಲಕ್ಷಣ ಮತ್ತು ಅದರ ಸ್ವರೂಪವನ್ನು ಹೀಗೆ ಹೇಳಿದ್ದಾನೆ.

ಕಱುತಾಯಬೞಿಯ ನುೞಿಯದ
ತೆಱದಿಂದಂ
ನಾಮಪದ ಮದರ್ಥಾನುಗಮಾ
ಗೆಱಗೆ
ಸಮಾಸಂ ನೆಗೞ್ಗುಂ
ನೆಱಿಪೋಕುಂ
ಮಧ್ಯಗತ ವಿಭಕ್ತಿಗಳವಱೊಳ್[6]

ಕೇಶಿರಾಜ ಅರ್ಥಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದಾನೆ. ನಾಮಪದವು ಅರ್ಥಾನುಗತ ವಾಗುವುದೇ ಸಮಾಸ. ಎರಡು ಅಥವಾ ಹೆಚ್ಚು ಪದಗಳು ಕೂಡಿಕೊಂಡು ಒಂದು ಅರ್ಥವನ್ನು ತಿಳಿಸುವ ಪದವು ಸಮಸ್ತ ಪದವಾಗುತ್ತದೆ. ಕೈಪಿಡಿಕಾರರು ಸಮಾಸದ ವ್ಯಾಖ್ಯೆದಲ್ಲಿ ಅರ್ಥವನ್ನು ತರಲಿಲ್ಲ. ‘ಎರಡು ಅಥವಾ ಹೆಚ್ಚು ಪ್ರಕೃತಿಗಳು ಕೂಡಿ ಒಂದು ಶಬ್ದವಾದಾಗ ಸಮಾಸವಾಗುತ್ತದೆ.’[7] ಈ ಎರಡು ಹೇಳಿಕೆಗಳನ್ನು ವಿಶ್ಲೇಷಿಸಿದಾಗ ಸಮಸ್ತ ಪದಗಳಿಗೆ ಎರಡು ಲಕ್ಷಣಗಳಿವೆಯೆಂದು  ಹೇಳಬಹುದು.

೧. ಕನಿಷ್ಠ ಎರಡು ಪದಗಳಿದ್ದು ಅವು ಪರಸ್ಪರ ಅನೋನ್ಯವಾಗಿರಬೇಕು.

೨. ತತ್ಪರಿಣಾಮವಾಗಿ ಮಧ್ಯದ ವಿಭಕ್ತಿ ಪ್ರತ್ಯಯಗಳು ಲೋಪವಾಗುತ್ತವೆ.

ಪೂರ್ವೋತ್ತರ ಪದಗಳ ಕ್ರಿಯಾರ್ಥದ ಸಂಬಂಧವನ್ನು ಅನುಲಕ್ಷಿಸಿ ಕೇಶಿರಾಜನ ಸಮಾಸಗಳನ್ನು ನಾಲ್ಕು ರೀತಿಯಾಗಿ ವಿಂಗಡಿಸಬಹುದು. ತತ್ಪುರುಷ, ಕರ್ಮಧಾರೆಯ, ದ್ವಿಗು, ಕ್ರಿಯಾ ಹಾಗೂ ಗಮಕಗಳನ್ನು ಉತ್ತರಪದ ಮುಖ್ಯ ಸಮಾಸವೆಂದು, ಅವ್ಯಯೀ ಭಾವ (ಅಂಶಿ)ವನ್ನು ಪೂರ್ವಪದ ಮುಖ್ಯ ಸಮಾಸವೆಂದು, ದ್ವಂದ್ವವನ್ನು ಪೂರ್ವೋತ್ತರ ಪ್ರಧಾನ ಸಮಾಸವೆಂದು ಹಾಗೂ ಬಹುವ್ರೀಹಿಯನ್ನು ಅನ್ಯಪದ ಮುಖ್ಯ ಸಮಾಸವೆಂದು ಕರೆಯಬಹುದು. ಕೇಶಿರಾಜ ಕನ್ನಡದಲ್ಲಿ ಬಳಕೆಯಾದ ಆರು ಸಂಸ್ಕೃತ ಸಮಾಸಗಳನ್ನು ಹೇಳಿದ್ದಾನ್ನಲ್ಲದೆ ಅವನ ದೃಷ್ಟಿಯಲ್ಲಿ ಕನ್ನಡಕ್ಕೆ ವಿಶಿಷ್ಟವಾದ ಕ್ರಿಯಾ ಮತ್ತು ಗಮಕ ಸಮಾಸಗಳ ನಿಯಮಗಳನ್ನು ನಿರೂಪಿಸಿದ್ದಾನೆ.


[1] ವಿವರಣೆಗಾಗಿ ನೋಡಿ : ವಿಲಿಯಂ ಮಾಡ್ತ – ಕನ್ನಡ ವ್ಯಾಕರಣ ಸಂಸ್ಯೆಗಳು (೧೯೯೮) ವಿದ್ಯಾನಿಧಿ ಪ್ರಕಾಶನ, ಗದಗ.

[2] ವಿಲಿಯಂ ಮಾಡ್ತ ‘ಕನ್ನಡ ವ್ಯಾಕರಣ ಸಮಸ್ಯೆಗಳು’ (೧೯೯೮) ಪು.೪೧‑೪೨)

[3] ವಿವರಣೆಗಾಗಿ ನೋಡಿ, ಡಿ.ಎನ್.ಶಂಕರಭಟ್ ‘ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ’ (೨೦೦೦) ಭಾಷಾ ಪ್ರಕಾಶನ, ಮೈಸೂರು.

[4] ವಿವರಣೆಗಾಗಿ ನೋಡಿ, ಡಿ.ಎನ್.ಶಂಕರಭಟ್ ‘ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ’ (೨೦೦೦) ಭಾಷಾ ಪ್ರಕಾಶನ, ಮೈಸೂರು. ಪು.೧೮೫‑೧೯೭.

[5] ಹೆಚ್ಚಿನ ವಿವರಣೆಗಾಗಿ ನೋಡಿ. ಪೂರ್ವೋಕ್ತ ಗ್ರಂಥ, ಪು.೬೮‑೮೯

[6] ಶಬ್ದಮಣಿದರ್ಪಣಂ (ಸಂ). ಡಿ.ಎಲ್.ನರಸಿಂಹಾಚಾರ್.ಪು.೧೭೬.

[7] ಕನ್ನಡ ಕೈಪಿಡಿ ೧೯೭೫, ಹಳಗನ್ನಡ ವ್ಯಾಕರಣ ಪು.೧೯.