ಕೇಶಿರಾಜನಲ್ಲಿಯೇ ಗೊಂದಲ ಕೇಶಿರಾಜನ ಸಮಾಸ ನಿಯಮಗಳನ್ನು ವಿಶ್ಲೇಷಿಸಿದಾಗ ಅವನಲ್ಲಿಯೇ ಗೊಂದಲಗಳಿವೆ ಎಂಬುದು ಸ್ಪಷ್ಟವಾಗುತ್ತದೆ. (ಸೂ. ೧೭೫‑೧೭೯) ಹಳಗನ್ನಡದ ಪದರಚನೆಗಳ ಹಿನ್ನೆಲೆಯಲ್ಲಿಯೇ ಕೇಶಿರಾಜನ ಸಮಾಸಗಳನ್ನು ಪರಿಶೀಲಿಸ ಬಹುದು.

೧. ಕರ್ಮಧಾರೆಯದ ಲಕ್ಷಣವನ್ನು ಹೇಳುವಾಗ “ತತ್ಪುರುಷಂ ಏಕಾಶ್ರಯಮಾಗೆ ಕರ್ಮಧಾರೆಯಮಕ್ಕುಂ”

[1] ಎಂದಿದ್ದಾನೆ. ಅವನ ಈ ಹೇಳಿಕೆಯನ್ನೇ ವಿಶ್ಲೇಷಿಸಿದರೆ ತತ್ಪುರುಷ ಮತ್ತು ಕರ್ಮಧಾರೆಯಕ್ಕೆ ಭೇದವಿಲ್ಲವೆನಿಸುತ್ತದೆ. ತತ್ಪುರುಷದಲ್ಲಿ ಪೂರ್ವೋತ್ತರ ಪದಗಳು ನಾಮರೂಪಗಳು, ಕರ್ಮಧಾರೆಯದಲ್ಲಿ ಪೂರ್ವರೂಪ ವಿಶೇಷಣವಾಗಿರುತ್ತದೆ. ಸಂಸ್ಕೃತದಲ್ಲಿ ವಿಶೇಷಣಗಳು ನಾಮಪದಗಳ ಕಕ್ಷೆಯಲ್ಲಿ ಬರುತ್ತವೆ. ಕನ್ನಡದಲ್ಲಿ ಅವು ಪ್ರತ್ಯೇಕ ವ್ಯಾಕರಣ ವರ್ಗದಲ್ಲಿ ಸೇರುತ್ತವೆ. ಈ ಬಗ್ಗೆ ಮುಂದೆ ಚರ್ಚಿಸಲಾಗಿದೆ ಅವನು ಕೊಡುವ ಉದಾಹರಣೆಗಳಲ್ಲಿಯೇ ಅಸ್ಪಷ್ಟತೆಯಿದೆ.

ಪಿರಿದಂತಪ್ಪನೋಸಲ್ ‑ ಪೆರೆ + ನೋಸಲ್ = ಪೆರ್ನೊಸಲ್
ಪುಲಿಯುತ್ತಣಿಂ ಅಳ್ಕು ‑ ಪುಲಿ + ಅಳ್ಕು = ಪುಲಿಯಳ್ಕುಂ
ಬಿಲ್ಲೊಳ್ ಜಣಂ ‑ ಬಿಲ್ + ಜಣಂ = ಬಿಲ್ಜಾಣಂ

ಇಲ್ಲಿ ಪೂರ್ವಪದಗಳೆಲ್ಲ ನಾಮರೂಪಗಳಾಗಿವೆ. (ಸಂಸ್ಕೃತವನ್ನು ಅನುಕ್ರಮಿಸಿ), “ನೆಲೆಸಿರೆ ಮೊದಲೊಳ್ ಸಂಖ್ಯೆಯದೆವಲಂ ದ್ವಿಗುಮಕ್ಕುಂ”[2] ಪೂರ್ವ ಪದವು ಸಂಖ್ಯಾವಾಚಿಯಾಗಿದ್ದರೆ ದ್ವಿಗುವಾಗುತ್ತದೆನ್ನುತ್ತಾನೆ.

ಎರಡು ಪೆಂಡಿರ್ ­ ‑ ಇರ್ + ಪೆಂಡಿರ್ = ಇರ್ಪೆಂಡಿರ್
ಎರಡು ಬಾಳ್ ‑ ಇರ್ + ಬಾಳ್  = ಇರ್ಬಾಳ್

ಸಂಖ್ಯಾವಾಚಕಗಳು ವಿಶೇಷಣಗಳ ಕಕ್ಷೆಯಲ್ಲಿ ಬರುವುದರಿಂದ ಅದನ್ನು ತತ್ಪುರುಷದಲ್ಲಿ ಅಥವಾ ಕರ್ಮಧಾರೆಯದಲ್ಲಿ ಸೇರಿಸಿ ಬಿಡಬಹುದಿತ್ತು. ದ್ವಿಗುವನ್ನು ಪ್ರತ್ಯೇಕ ಸಮಾಸ ವೆಂದು ಕರೆಯುವುದು ಅಗತ್ಯತೆ ಇಲ್ಲ.

೨. ಬಹುವ್ರೀಹಿಯ ಲಕ್ಷಣವನ್ನು ಹೇಳುವಾಗ, ‘ಪದನೆರಡುಂ ಮೇಣ್ ಪಲವಂ ಪದಾರ್ಥಮಂ ಬಯಸುತಿರೆ ಬಹುವ್ರೀಹಿ’[3] ಕೇಶಿರಾಜ ‘ಮೇಣ್ ಪಲವು ಪದಂ’ ಎಂದಿರುವುದೇಕೆ? ಸಂಸ್ಕೃತದಲ್ಲಿ ದ್ವಿಪದ, ಬಹುಪದ ಮೊದಲಾದ ಬಹುವ್ರೀಹಿಯ ಭೇದಗಳಿವೆ. ಕನ್ನಡದಲ್ಲಿಲ್ಲ. ಇದಕ್ಕೆ ಅವನು ಕೊಡುವ ಉದಾಹರಣೆ ಹೀಗಿದೆ. ಛಲ + ವಾದಿ = ಛಲವಾದಿ ಇವಾವು ಕನ್ನಡ ಸಮಸ್ತ ಪದಗಳಲ್ಲ.

೩. ಕೇಶಿರಾಜ ಹೇಳುವ ‘ಅವ್ಯಯೀಭಾವ’ ಸಮಾಸದ ಹೆಸರಿನಲ್ಲಿಯೇ ಅನಿರ್ದಿಷ್ಟತೆ ಯಿದೆ. “ಸಂಸ್ಕೃತದಲ್ಲಿ ಅವ್ಯಯೀಭಾವ ಸಮಾಸವಾದಾಗ ನಿಷ್ಪನ್ನವಾದ ಸಮಸ್ತ ಪದವು ಅವ್ಯಯವಾಗಿ ನಿಲ್ಲುತ್ತದೆ. ಕನ್ನಡದಲ್ಲಿ ಅವ್ಯಯವಾಗಿ ನಿಲ್ಲುವುದಿಲ್ಲ. ನಾಮಪದವಾಗಿ ಉಳಿಯುತ್ತದೆ. ಈ ಕಾರಣದಿಂದ ಸಂಸ್ಕೃತದ ‘ಅವ್ಯಯೀಭಾವ’ ಎಂಬ ಹೆಸರು ಕನ್ನಡದ ಮಟ್ಟಿಗೆ ಸಮುಚಿತವೆನ್ನಿಸಲಾರದು.”[4] ಪೊಡೆಯ + ಕೆಳಗು = ಕಿೞ್ಪೂಡೆ ಇಲ್ಲಿ ಅಂಶ ಅಂಶಿ ಸಂಬಂಧ ಅಭಿನ್ನವಾಗಿರುವುದರಿಂದ ಭಟ್ಟಾಕಳಂಕನು ‘ಅಂಶಿ’ ಎಂಬ ಹೊಸಸಂಜ್ಞೆಯನ್ನೇ ಇರಿಸಿದ್ದಾನೆ. ಇದೇ ಉಚಿತವಾದ ಕಾರಣ, ಈಗ ಈ ಹೆಸರೇ ರೂಢಿಯಾಗಿದೆಯೆನ್ನಬಹುದು.

೪. ಕೇಶಿರಾಜ ಗಮಕ ಸಮಾಸವನ್ನು ಕನ್ನಡದ ಅಸಾಧಾರಣ ಲಕ್ಷಣಗಳಲ್ಲಿ ಮೊತ್ತಮೊದಲಾಗಿ ಹೆಸರಿಸಿದ್ದಾನೆ.[5] ಆದರೆ ಮೂಲತಃ ಇದು ಸಮಾಸವೇ? ಎಂಬುದರ ಬಗೆಗೆ ಈಗಾಗಲೇ ವಿದ್ವಾಂಸರು ಚರ್ಚಿಸಿದ್ದಾರೆ.[6] ಅದು ಸಮಾಸವಲ್ಲ ಎಂಬ ತೀರ್ಮಾನಕ್ಕೂ ಬಂದಿದ್ದಾರೆ. ಕೇಶಿರಾಜ ಗಮಕಕ್ಕೆ ಕೊಟ್ಟಿರುವ ಉದಾಹರಣೆಗಳನ್ನು ಗಮನಿಸಿದಾಗ (ಪಾಡುವ ತುಂಬಿ, ಅಸಿಯನಡು, ಇರ್ಪತೈದು, ನೂಱುಪತ್ತು, ಆಮನೆ) ಇಲ್ಲೆಲ್ಲ ಸಮಾಸ ಕ್ರಿಯೆ ನಡೆದಿಲ್ಲ. ನಾಮರೂಪ ಅರ್ಥಾನುಗತವಾಗಿಯೂ ಸೇರಿಲ್ಲ. ಅವನೇ ಹೇಳುವ ‘ತನಗತ್ವಂ ಪೆರಗಿತ್ವಂ’, ‘ಸಂಖ್ಯೆಯೊಳ್ ತತ್ಪುರುಷಕ್ಕೆ’ ಇವುಗಳನ್ನು ಗಮನಿಸಿದಾಗ ಅವನು ಕೊಡುವ ಉದಾಹರಣೆಗಳಿಗೂ ಅವನ ಹೇಳಿಕೆಗಳಿಗೂ ತಾಳ ತಪ್ಪುತ್ತದೆ. ಅವನುಕೊಡುವ ಉದಾಹರಣೆಗಳಲ್ಲಿ ಕೆಲವು ಬಿಡಿ ಘಟಕಗಳಾಗಿವೆ (ಆಮನೆ, ಬೀಸುವ ಚಾಮರ ಮುಂ) ಕೆಲವು ದ್ವಿಗುವಿಗೆ ಮತ್ತೆ ಕೆಲವು ದ್ವಂದ್ವಕ್ಕೆ ಉದಾಹರಣೆಗಳಾಗಿವೆ (ನೂಱುಪತ್ತು, ಇರ್ಪತೈದು)

ಕೇಶಿರಾಜನ ಸಮಾಸಗಳು ಮತ್ತೆ ಪರಿಶೀಲನೆ

 

ಕೇಶಿರಾಜದಿ ನಮ್ಮ ಪ್ರಾಚೀನ ವ್ಯಾಕರಣಕಾರರು ಸಂಸ್ಕೃತ ವ್ಯಾಕರಣ ತತ್ವಗಳ ಹಿನ್ನೆಲೆಯಲ್ಲಿ ಕನ್ನಡದ ರಚನೆಯನ್ನು ಹೇಳಿದರು. ಆಗಿನ ಚಾರಿತ್ರಿಕ ಸಂದರ್ಭ, ಅವರಿಗಿರುವ ಒತ್ತಡ ಅದಕ್ಕೆ ಕಾರಣವಾಗಿರಬಹುದು. ನಂತರ ಸಾಂಪ್ರದಾಯಕ ಕನ್ನಡ ವಿದ್ವಾಂಸರು ಕೇಶಿರಾಜನ ನಿಯಮಗಳನ್ನು ಹೊಸಗನ್ನಡಕ್ಕೂ ಅನ್ವಯಿಸಿದರು. ಅದನ್ನು ಹೀಗೂ ಹೇಳಬಹುದು. ಕೇಶಿರಾಜನ ನಿಯಮಗಳಿಗೆ ಹೊಸಗನ್ನಡದಲ್ಲಿ ವಿವರಣೆ ಬರೆದರು. ನಮ್ಮ ಹಿಂದಿನವರಿಗೆ ಕನ್ನಡ ಸಂಸ್ಕೃತ ಜನ್ಯ ಕನ್ನಡ ವ್ಯಾಕರಣ ಪರಿಭಾಷೆ ಗಳು ಸಂಸ್ಕೃತದಿಂದಲೇ ಬಂದಿವೆ ಎಂಬ ಭಾವನೆ ಮೊನ್ನೆ ಮೊನ್ನೆ ವರೆಗೂ ಇತ್ತು. ಕೆಲವು ವಿದ್ವಾಂಸರು ಕನ್ನಡದ ಕೆಲವು ವ್ಯಾಕರಣ ವರ್ಗಗಳಗಳನ್ನು ವಿಶ್ಲೇಷಿಸಿ ಸಂಸ್ಕೃತ ಕ್ಕಿಂತ ಕನ್ನಡದ ರಚನೆ ಭಿನ್ನವಾಗಿದೆ ಎಂದು ತೋರಿಸಿದರು ಸೇಡಿಯಾಪು ಅವರ ‘ಪಂಚಮಿ ವಿಭಕ್ತಿ’, ‘ಗಮಕಸಮಾಸ’ ಚಿದಾನಂದಮೂರ್ತಿ ಅವರ ‘ಕನ್ನಡ ವ್ಯಾಕರಣಕಾರರು ಮತ್ತು ಸ್ವೀಕರಣ ವಿಚಾರ’ ಇಂತಹ ಸಂಪ್ರಬಂಧಗಳು ನೆನಪಿಗೆ ಬರುತ್ತವೆ. ಆದರೂ ಇಂದಿನ ಕಲಿಕೆ ಬೋಧನೆಯ ಪ್ರಕ್ರಿಯೆಯಲ್ಲಿ ಕೇಶಿರಾಜನ ವಿಚಾರಗಳೇ ಚಲಾವಣೆಯಲ್ಲಿವೆ. ವ್ಯಾಕರಣದ ಅಧ್ಯಯನದಲ್ಲಿ ಬದಲಾವಣೆ ತರಬೇಕಾಗಿದೆ.

ಆದರೆ, ಕನ್ನಡದ ರಚನೆಯನ್ನು ಶೋಧಿಸಲು ಹೊರಟ ಇಂದಿ ಭಾಷಾ ಪಂಡಿತರು ಕೇಶಿರಾಜದಿ ವ್ಯಾಕರಣಕಾರರ ವಿಚಾರಗಳನ್ನು ಟೀಕಿಸದೆ ಅವರಲ್ಲಿದ್ದ ಕೊರತೆಗಳನ್ನು ತುಂಬ ಬೇಕಾಗಿದೆ. ಸಾಂಪ್ರದಾಯಕ ವ್ಯಾಕರಣ ನಿಯಮಗಳನ್ನು, ಮಾದರಿಗಳನ್ನು ಪ್ರಶ್ನಿಸುವ, ತುಲನೆ ಮಾಡುವ, ಒಡೆಯುವ ಸಾಧ್ಯತೆ ಎಂದಿಗಿಂತಲೂ ಇಂದು ಅಗತ್ಯ ವಾಗಿದೆ. ಡಾ.ಚಿದಾನಂದಮೂರ್ತಿ ಅವರು ಒಂದು ಸಂದರ್ಭದಲ್ಲಿ ಹೇಳಿದ ಮಾತನ್ನು ಬಳಸಿ ಹೇಳುವುದಾದರೆ ‘ಸಂಶೋಧಕನೊಬ್ಬ ಮಾಡಿರಬಹುದಾದ ತಪ್ಪನ್ನು ಇನ್ನೊಬ್ಬ ಶೋಧಕ ತಿದ್ದಿದಾಗ ಆ ಶೋಧದ ಯಶಸ್ಸಿನ ಭಾಗ ಮೊದಲನೆಯವನಿಗೂ ಸಲ್ಲುತ್ತದೆ. ಅವನ ತಪ್ಪು ಇವನ ಒಪ್ಪಕ್ಕೆ ಪ್ರೇರಣೆಯಾಗುತ್ತದೆ.’ ಇಂದಿನ ಭಾಷಾ ಪಂಡಿತರು ಕನ್ನಡದ್ದೇ ರಚನೆಯನ್ನು ಶೋಧಿಸಿದಾಗ ಅದರ ಯಶಸ್ಸು ಕೇಶಿರಾಜನಿಗೂ ಆ ಕ್ಷೆತ್ರದಲ್ಲಿ ಕೆಲಸ ಮಾಡಿದ ಪೂರ್ವ ಸೂರಿಗಳಿಗೂ ಹೋಗಬೇಕು ತಾನೆ!

ಇನ್ನು ಕನ್ನಡ ಸಮಸ್ತ ಪದಗಳಿಗೆ ಬರೋಣ, ಕೇಶಿರಾಜ ಪೂರ್ವೋತ್ತರ ಪದಗಳ ಅರ್ಥಸಂಬಂಧ, ಕೇಂದ್ರಸ್ಥಾನ, ಪದಪುಂಜ ಹಾಗೂ ಸಮಸ್ತ ಪದಗಳ ವೈಷಮ್ಯತೆ ಇವುಗಳ ಸ್ವರೂಪವನ್ನು ಸರಿಯಾಗಿ ಗ್ರಹಿಸಿದ ಕಾರಣ ಅವನ ಸಮಾಸ ವಿಭಜನೆ ಗೋಜಲುವಾಗಿದೆ. ಕನ್ನಡ ಸಮಸ್ತ ಪದಗಳ ಸ್ವರೂಪವನ್ನು ಅರಿಯಬೇಕಾದರೆ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

೧. ಭಾಷಾ ರಚನೆಯಲ್ಲಿ ಸಂಸ್ಕೃತಕ್ಕೂ ಕನ್ನಡಕ್ಕೂ ಸಾಮ್ಯಕ್ಕಿಂತ ವೈಷಮ್ಯಗಳೇ ಹೆಚ್ಚು. ಸಂಸ್ಕೃತದಲ್ಲಿ ವಿಶೇಷಣಗಳು ನಾಮಪದಗಳಂತೆ ವಿಭಕ್ತಿ ಪ್ರತ್ಯಯಗಳನ್ನು ಪಡೆದುಕೊಳ್ಳುವುದರಿಂದ ಅವು ನಾಮಪದಗಳ ಕಕ್ಷೆಯಲ್ಲಿ ಬರುತ್ತವೆ. ಆದರೆ ಕನ್ನಡದ ವಿಶೇಷಣಗಳು ವಿಭಕ್ತಿ ಪ್ರತ್ಯಯಗಳನ್ನು ಪಡೆದುಕೊಳ್ಳುವುದರಿಂದ ಅವು ಪ್ರತ್ಯೇಕ ವ್ಯಾಕರಣ ವರ್ಗಕ್ಕೆ ಸೇರುತ್ತವೆ. ಹೀಗಾಗಿ ‘ಕನ್ನಡದಲ್ಲಿ ನಾಮಪದ, ಕ್ರಿಯಾಪದ ಮತ್ತು ವಿಶೇಷಣಪದ ಎಂಬ ಮೂರು ರೀತಿಯ ಪದವರ್ಗಗಳಿವೆ’[7] ಈ ಮೂರು ಪದವರ್ಗಗಳ ಸ್ವರೂಪವನ್ನು ಡಿ.ಎನ್.ಶಂಕರಭಟ್‌ರು ಗುರುತಿಸಿದ್ದಾರೆ.

೨. ಕನ್ನಡದಲ್ಲಿ ಮುಖ್ಯವಾಗಿ ಪದಪುಂಜ ಮತ್ತು ಸಮಸ್ತಪದ ಎಂಬ ಎರಡು ವಾಕ್ಯಬದ್ಧ ಅಸಾಂದ್ರರಚನೆಗಳಿವೆ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಸೇರಿದಾಗ ಉಚ್ಚಾರಣೆಯಲ್ಲಿ ವಿರಾಮ ಇದ್ದರೆ ಹಾಗೂ ಅವುಗಳಿಗೆ ಪ್ರತ್ಯಯಗಳನ್ನು ಸೇರಿಸಲು ಸಾಧ್ಯವಿದ್ದರೆ ಅದು ಪದಪುಂಜ. ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಸೇರಿದಾಗ ಉಚ್ಛಾರಣೆಯಲ್ಲಿ ವಿರಾಮ ಇರದಿದ್ದರೆ ಅಂತಹ ಪದ ಸಮಸ್ತಪದ. ಇಲ್ಲಿ ಪದ ಮಧ್ಯದಲ್ಲಿ ಏನನ್ನು ಸೇರಿಸಲು ಸಾಧ್ಯವಿಲ್ಲ.

ಈ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಶಿರಾಜನ ಸಮಾಸಗಳನ್ನು ಪರಿಶೀಲಿಸಿದಾಗ ಆ ನಿಯಮಗಳನ್ನು ಕನ್ನಡಕ್ಕೆ ಅಳವಡಿಸಿಕೊಳ್ಳುವಲ್ಲಿ ತೊಂದರೆ ಗಳಾಗುತ್ತವೆ. ಆ ಎರಡು ಅಂಶಗಳನ್ವಯ ಕೇಶಿರಾಜನ ಸಮಾಸಗಳಿಗೆ ಮುಖಾಮುಖಿ ಯಾದಾಗ ಕೆಲವು ಸಂಗತಿಗಳು ಕಂಡುಬರುತ್ತವೆ.

೧. ಸಂಸ್ಕೃತದ ಸಮಸ್ತ ಪದಗಳಲ್ಲಿ ಉತ್ತರಪದ ಪ್ರಧಾನವಾಗಿದ್ದರೆ ತತ್ಪುರುಷ. ಕನ್ನಡದ ಸಮಸ್ತ ಪದಗಳಲ್ಲಿ ಉತ್ತರ ಪದವೇ ಪ್ರಧಾನವಾಗಿರುವುದರಿಂದ ಎಲ್ಲ ಸಮಸ್ತ ಪದಗಳನ್ನು ತತ್ಪುರುಷ ಎಂದೇ ಕರೆಯಬೇಕಾಗುತ್ತದೆ! ಕರ್ಮಧಾರೆಯದ ಕನ್ನಡದ ಉದಾಹರಣೆಗಳಲ್ಲಿ ಪೂರ್ವ ಪದ ವಿಶೇಷಣವಾಗಿರುತ್ತದೆ. (ಉದಾ. ಹೆಜ್ಜೇನು, ಹೆಮ್ಮರ, ಮೆಲ್ನುಡಿ ಮುಂ) ಕನ್ನಡದಲ್ಲಿ ವಿಶೇಷಣಗಳು ಪ್ರತ್ಯೇಕ ಪದವರ್ಗಕ್ಕೆ ಸೇರಿರುವುದರಿಂದ ಸಂಸ್ಕೃತದ ಹಾಗೆ ತತ್ಪುರುಷದ ಪ್ರಭೇದವಾಗುವುದಿಲ್ಲ ಸಂಸ್ಕೃತದಲ್ಲಿ ಸಂಖ್ಯಾವಾಚಕಗಳು ನಾಮಪದದಲ್ಲಿಯೇ ಸಮಾವೇಶವಾಗುತ್ತವೆ. ಕನ್ನಡದಲ್ಲಿ ಅವು ವಿಶೇಷಣ ವರ್ಗದಲ್ಲಿ ಸೇರುತ್ತವೆ. (ಇರ‍್ಮಡಿ, ಎಪ್ಪತ್ತು ಮುಂ) ಹೀಗಾಗಿ ದ್ವಿಗುವನ್ನು ತತ್ಪುರುಷದಲ್ಲಿ ಸೇರಿಸಲು ಸಾಧ್ಯವಾಗದು.

೨. ಕನ್ನಡದಲ್ಲಿ ದ್ವಂದ್ವ ಸಮಾಸಕ್ಕೆ ಕೊಟ್ಟಿರುವ ಉದಾಹರಣೆಗಳು ಪದಪುಂಜಗಳೇ ವಿನಃ ಸಮಸ್ತ ಪದಗಳಲ್ಲ. ನಾಮಪದಗಳನ್ನು ಒಟ್ಟು ಸೇರಿಸಿ ಬಹುವಚನಗಳೊಂದಿಗೆ ಹೇಳಲಾಗುತ್ತಿದೆ (ಗಿಡ ಮರ ಬಳ್ಳಿಗಳು). ಸಂಸ್ಕೃತದ ಅವ್ಯಯೀ ಭಾವದ ಕ್ರಿಯೆಯಲ್ಲಿ ನಿಷ್ಪನ್ನ ರೂಪ ವ್ಯಯವಾಗುತ್ತದೆ. ಕನ್ನಡದಲ್ಲಿ ವ್ಯಯವಾಗುವುದಿಲ್ಲ (ಮುಂಗೈ, ಹಿಂಗಾಲ ಮುಂತಾದವುಗಳು) ಇಲ್ಲಿ ಕೇಂದ್ರ ಬಿಂದು ಸಮಸ್ತ ಪದದ ಹೊರಗಿರುತ್ತದೆ. ಇದರಿಂದ ಇದು ಬಹುವ್ರೀಹಿ ಅಥವಾ ಕರ್ಮಧಾರೆಯಕ್ಕೆ ಉದಾಹರಣೆಗಳಾಗುತ್ತದೆ. ಸಂಸ್ಕೃತದಲ್ಲಿ ಅನ್ಯಪದ ಪ್ರಧಾನವಾಗಿದ್ದರೆ ಬಹುವ್ರೀಹಿ. ಕನ್ನಡದಲ್ಲಿ ಇದಕ್ಕೆ ಉದಾಹರಣೆ ಗಳಿಲ್ಲ ಚಲವಾದಿ ಎಂಬಲ್ಲಿ ‘ವಾದಿ’ ಪದ ಪ್ರಧಾನವಾಗಿದೆ. ಅರ್ಥವು ಸಮಸ್ತಪದದ ಒಳಗೇ ಇದೆ. ಆದ್ದರಿಂದ ಇದು ಕರ್ಮಧಾರೆಯಕ್ಕೆ ಉದಾಹರಣೆಯಾಗುತ್ತದೆಯೇ ವಿನಃ ಬಹುವ್ರೀಹಿಗಲ್ಲ.

೩. ಕನ್ನಡ ವೈಯಾಕರಣಿಗಳು ಹೇಳುವ ಕ್ರಿಯಾಸಮಾಸದ ಉದಾಹರಣೆಗಳನ್ನು ಗಮನಿಸಿದಾಗ ಕೈಮುಗಿ, ತಲೆದೂಗು, ಕೈಕೊಡು ಇಂತಹುಗಳಲ್ಲಿ ವಿಭಕ್ತಿ ಪ್ರತ್ಯಯ ಲೋಪ ಗೊಂಡಿರುವುದು ಕನ್ನಡದ ವಾಕ್ಯರಚನೆಯ ಆಧಾರದ ಮೇಲೆ ವಿನಃ ಪದರಚನೆಯ ಆಧಾರದ ಮೇಲೆ ಅಲ್ಲ (ಕೈಯನ್ನು ಮುಗಿ, ತಲೆಯನ್ನು ತೂಗು, ಕೈಯನ್ನು ಕೊಡು) ಎಂಬುದನ್ನು ಗಮನಿಸಬೇಕು. ಕೇಶಿರಾಜ ಕನ್ನಡಕ್ಕೆ ವಿಶಿಷ್ಟವೆಂದು ಹೇಳುವ ಗಮಕ ಸಮಾಸ ನಿಜಕ್ಕೂ ಸಮಾಸವಲ್ಲ. ತೂಗುವ ತೊಟ್ಟಿಲು, ಕಿರಿಯಮಗ, ಆ ಹುಡುಗ ಇವು ಪದ ಪುಂಜಗಳೇ ವಿನಃ ಸಮಸ್ತ ಪದಗಳಲ್ಲ.

ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ ಕೇಶಿರಾಜನ ಸಮಾಸ ನಿಯಮಗಳು ಕನ್ನಡದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳಿಗೆ ಅನ್ವಯವಾಗುತ್ತವೆ ವಿನಃ ಪೂರ್ವೋತ್ತರ ಕನ್ನಡ ಪದಗಳೇ ಆಗಿರುವ ಕನ್ನಡ ಸಮಸ್ತ ಪದಗಳಿಗೆ ಅನ್ವಯವಾಗುವುದಿಲ್ಲ ಎಂಬ ಸಂಗತಿ ಮನದಟ್ಟಾಯಿತು. ಕನ್ನಡದ ಹೊಸ ಸಮಾಸಗಳು ಕನ್ನಡ ಸಮಸ್ತ ಪದಗಳಲ್ಲಿ (ಹೆಚ್ಚಾಗಿ) ಉತ್ತರ ಪದ ನಾಮಪದವಾಗಿದ್ದು ಅದುವೇ ಪ್ರಧಾನವಾಗಿರುತ್ತದೆ. ಪೂರ್ವ ರೂಪ ನಾಮಪದ, ಕ್ರಿಯಾಪದ ಹಾಗೂ ವಿಶೇಷಣಪದ ಆಗಿರಬಹುದು. ಪೂರ್ವ ಪದವನ್ನು ಹಾಗೂ ಸಮಸ್ತ ಪದಗಳ ಕೇಂದ್ರ ಅನ್ಯತ್ರವಾಗಿದ್ದರೆ ಅವುಗಳನ್ನು ಅನುಲಕ್ಷಿಸಿ ಕನ್ನಡದ ಸಮಾಸಗಳನ್ನು ನಾಲ್ಕು ರೀತಿಯಾಗಿ ವಿಭಜಿಸಬಹುದು.

೧. ತತ್ಪುರುಷ ಸಮಾಸ, ೩. ಕರ್ಮಧಾರೆಯ ಸಮಾಸ, ೨. ಕ್ರಿಯಾ ಸಮಾಸ, ೪. ಬಹುವ್ರೀಹಿ ಸಮಾಸ

ಒಂದು ಮಾತು ಈ ಸಮಾಸಗಳ ಹೆಸರುಗಳು ಮಾತ್ರ ಪ್ರಾಚೀನ ವ್ಯಾಕರಣಕಾರರು ಕೊಟ್ಟ ಪಾರಿಭಾಷಿಕಗಳಾಗಿವೆ. ಅವರು ಕೊಟ್ಟಿರುವ ಅರ್ಥ ಈ ಸಮಾಸಗಳಿಗೆ ಲಭಿಸುವುದಿಲ್ಲ ಎಂಬುದನ್ನು ಗಮನಿಸಬೇಕು.[8] ಸಾಂಪ್ರದಾಯಕ ವ್ಯಾಕರಣ ನಿಯಮಗಳು ಈ ಸಮಾಸಗಳಿಗೆ ಅನ್ವಯವಾಗುವುದಿಲ್ಲವೆಂದು ಒತ್ತಿ ಹೇಳುತ್ತೇನೆ.

. ತತ್ಪುರುಷ ಸಮಾಸ : ಎರಡು ನಾಮರೂಪಗಳು ಸೇರಿ ಸಿದ್ದವಾಗುವ ಸಮಸ್ತ ರೂಪವು ತತ್ಪುರುಷ ಸಮಾಸವಾಗುವುದು. ಪೂರ್ವಪದವು ಷಷ್ಠೀ ಅಥವಾ ಸಪ್ತಮಿ ವಿಭಕ್ತ್ಯಂತ ಪದಗಳನ್ನು ಹೊಂದಿರುವುದರಿಂದ ಆ ವಿಭಕ್ತಿಗಳ ಹೆಸರಿನಲ್ಲಿ ಆ ಸಮಾಸದ ಹೆಸರು ಹೇಳುವುದುಂಟು

ಸಂಜೆಯ + ಕೆಂಪು = ಸಂಜೆಗೆಂಪು (ಷಷ್ಠಿ ತತ್ಪುರುಷ)
ಬೆಟ್ಟದ + ತಾವರೆ = ಬೆಟ್ಟದಾವರೆ (ಷಷ್ಠಿ ತತ್ಪುರುಷ)
ಬೆಂಕಿಯ + ಪೆಟ್ಟಿಗೆ  = ಬೆಂಕಿಪೆಟ್ಟಿಗೆ (ಷಷ್ಠಿ ತತ್ಪುರುಷ)
ಹಗಲಿನಲ್ಲಿ + ಕನಸು = ಹಗಲುಗನಸು (ಸಪ್ತಮೀ ತತ್ಪುರುಷ)
ಹೊಟ್ಟೆಯಲ್ಲಿ + ನೋವು = ಹೊಟ್ಟೆನೋವು (ಸಪ್ತಮೀ ತತ್ಪುರುಷ)

. ಕ್ರಿಯಾ ಸಮಾಸ : ಪೂರ್ವ ಪದವು ಕ್ರಿಯಾರೂಪವಾಗಿಯೂ ಉತ್ತರ ಪದವು ನಾಮಪದವಾಗಿಯೂ ಇವು ಸಮಸ್ತ ರೂಪಗಳು ಕ್ರಿಯಾಸಮಾಸಗಳಾಗುತ್ತವೆ.

ಸುಳಿಯುವ + ಗಾಳಿ = ಸುಳಿಗಾಳಿ
ಸಿಡಿಯುವ + ಮದ್ದು = ಸಿಡಿಮದ್ದು
ಬಿಚ್ಚಿದ + ಕತ್ತಿ = ಬಿಚ್ಚುಗತ್ತಿ
ಹುರಿದ + ಕಡಲೆ = ಹುರಿಗಡಲೆ
ಅರಳುವ + ಮೊಗ್ಗು = ಅರಳುಮೊಗ್ಗು
ಕಡೆಯುವ + ಕೋಲು = ಕಡೆಗೋಲು

ಇಲ್ಲಿ ಬರುವ ಕ್ರಿಯಾರೂಪಗಳು ಒಂದು ಘಟನೆಯನ್ನು ತಿಳಿಸುತ್ತಿದ್ದು ಆ ಘಟನೆ ಒಂದು ಬಾರಿ ಮಾತ್ರ ನಡೆಯುವುದನ್ನು ಸೂಚಿಸುತ್ತದೆ. ನಾಮಪದವು ಗುರುತಿಸುವ ವ್ಯಕ್ತಿ ಇಲ್ಲವೆ ವಸ್ತು ತೊಡಗಿಸಿಕೊಂಡಿರುವುದನ್ನು ಸೂಚಿಸುತ್ತದೆ.

. ಕರ್ಮಧಾರೆಯ ಸಮಾಸ : ಪೂರ್ವ ಪದವು ಗುಣವಚನ ವಿಶೇಷಣ ವಾಗಿದ್ದು ಉತ್ತರ ಪದವು ನಾಮಪದ ವಿಶೇಷ್ಯ ವಾಗಿರುವ ಸಮಸ್ತರೂಪಗಳು ಕರ್ಮಧಾರೆಯ ಸಮಾಸಗಳೆನಿಸಿಕೊಳ್ಳುತ್ತವೆ. ವಿಶೇಷಣ – ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಸ್ತ ರೂಪಗಳಿವು. ಕನ್ನಡದಲ್ಲಿ ವಿಶೇಷಣದೊಂದಿಗೆ ನಾಮಪದವನ್ನು ಸೇರಿಸಿ, ಸಿದ್ಧವಾದ ಸಮಸ್ತ ರೂಪಗಳೇ ಹೆಚ್ಚು. ಇಲ್ಲಿ ಬರುವ ಉತ್ತರ ಪದಗಳು ವಸ್ತು, ವಿಷಯ, ವ್ಯಕ್ತಿಗಳನ್ನು ಗುರುತಿಸುತ್ತಿದ್ದು ಪೂರ್ವ ಪದಗಳು ನಾಮರೂಪಗಳ ಗುಣ ಧರ್ಮವನ್ನು ಸೂಚಿಸುತ್ತವೆ.

ಕಿರಿಯ > ಕಿರು + ಗೆಜ್ಜೆ = ಕಿರುಗೆಜ್ಜೆ
ಹಿರಿದು > ಹೆಬ್ + ಬೆರಳು = ಹೆಬ್ಬೆರಳು
ಕೆಂಪು > ಕೆಂ + ತಾಳ್ = ಕೆಂದಾಳ
ಹಳೆಯ > ಹಳೆ + ಕನ್ನಡ = ಹಳೆಗನ್ನಡ
ಎರಡು > ಇಮ್ + ಮಡಿ = ಇಮ್ಮಡಿ
ನಡುವಿನ > ನಡು + ಬೆರಳು = ನಡುಬೆರಳು

. ಬಹುವ್ರೀಹಿ ಸಮಾಸ : ಎರಡು ಅಥವಾ ಹೆಚ್ಚು ಪದರೂಪಗಳು ಸೇರಿ ಸಮಸ್ತ ರೂಪ ಸಿದ್ಧವಾದಾಗ ಕ್ರಿಯಾರ್ಥದ ಕೇಂದ್ರ ಬಿಂದು ಸಮಸ್ತ ಪದದ ಹೊರಗಿರುತ್ತದೆ. ಅಂತಹ ಸಮಾಸ ಬಹುವ್ರೀಹಿ ಸಮಾಸವಾಗುತ್ತದೆ.

ನಾಲಿಗೆಯ + ತುದಿ = ತುದಿನಾಲಿಗೆ
ಕಾಲ + ಮುಂದು = ಮುಂಗಾಲ
ಕೈ + ಮುಂದು = ಮುಂಗೈ
ತಲೆಯ + ಮುಂದು = ಮುಂದಲೆ
ಕೆಳಗಿನ + ತುಟಿ = ಕೆಳದುಟಿ
ಒಳಗಿನ + ದವಡೆ = ಒಳದವಡೆ

ಇಲ್ಲಿಯ ಸಮಸ್ತ ಪದಗಳಲ್ಲಿ ವಿಗ್ರಹ ವಾಕ್ಯದ ಪದಗಳು ಸ್ಥಾನಪಲ್ಲಟಗಳಾಗಿವೆ. ಆಗ ಪೂರ್ವಪದದ ಕೊನೆಯ ವರ್ಣ ಲೋಪವಾಗುತ್ತದೆ. ಇಲ್ಲಿ ತುದಿ, ಮುಂದು, ತುಟಿ, ದವಡೆ ಈ ಪದಗಳು ಮುಖ್ಯವಾಗಿವೆ. ಇವುಗಳ ಕೇಂದ್ರಬಿಂದು ಸಮಸ್ತ ಪದದ ಹೊರಗಿರುತ್ತದೆ. ಅದು ‘ಭಾಗ’ ಎಂಬರ್ಥ ಕೊಡುತ್ತದೆ.

ಮೇಲಿನ ನಿಯಮಗಳಿಗೆ ಅಪವಾದಗಳಾಗುವ ಉದಾಹರಣೆಗಳು ಇವೆ. ಉತ್ತರ ಪದದ ನಾಮರೂಪಕ್ಕೆ ಬದಲು ಕ್ರಿಯಾರೂಪ ಬರುವುದುಂಟು ಉದಾ. ಕೈಪಿಡಿ, ಇಳಿಜರು ಮುಂತಾದುವು. ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ ಇಂತಹ ಸಮಸ್ತ ರೂಪಗಳನ್ನು ವಿಗ್ರಹಿಸಿದಾಗ (ದೊಡ್ಡ + ಅಪ್ಪ) ಕರ್ಮಧಾರೆಯಗಳಾಗುತ್ತವೆ. ಅಪ್ಪನಿಗಿಂತ ದೊಡ್ಡ ಗಂಡಸು ಎಂದಾಗ ಬಹುವ್ರೀಹಿಯಾಗುತ್ತದೆ. ಬಳಕೆಯ ಸಂದರ್ಭಕ್ಕೆ ತಕ್ಕಂತೆ ಇವುಗಳನ್ನು ನಿರ್ಣಯಿಸಬೇಕಾಗುತ್ತದೆ.

ಆಧುನಿಕ ಭಾಷಾವಿಜ್ಞಾನಿಗಳು ಸಮಸ್ತಪದಗಳ ವ್ಯಾಕರಣಾರ್ಥವನ್ನು ಗಮನಿಸಿ ಸಮಾಸ ಗಳನ್ನು ಅಂತಕೇಂದ್ರಿಯ (Endocentric), ಬಹಿಃಕೇದ್ರಿಯ(Exocentric)ಗಳೆಂದು ಎರಡು ಬಗೆಯಾಗಿ ವಿಂಗಡಿಸುತ್ತಾರೆ.[9]

ಆದರೆ ಆಧುನಿಕರು ಸಾಂಪ್ರದಾಯಕ ಸಮಾಸಗಳನ್ನೇ ಅವುಗಳ ಕಕ್ಷೆಯಲ್ಲಿ ಸೇರಿಸಿರುವುದು ಸಾಧುವಲ್ಲ. ತತ್ಪುರುಷ, ಕರ್ಮಧಾರೆಯ, ದ್ವಿಗು, ದ್ವಂದ್ವ, ಅಂಶಿ, ಗಮಕ, ಕ್ರಿಯಾ ಇವುಗಳನ್ನು ಅಂತಃಕೇಂದ್ರಿಯದಲ್ಲಿ ಬಹುವ್ರೀಹಿಯನ್ನು ಬಹಿಃಕೇಂದ್ರಿಯದಲ್ಲಿ ಸೇರಿಸಿ ವಿವರಿಸಿದ್ದಾರೆ.

ಕ್ರಿಯಾರ್ಥದ ಕೇಂದ್ರ ಸಮಸ್ತ ಪದದಲ್ಲಿಯೇ ಕೇಂದ್ರಿಕೃತಗೊಂಡಿದ್ದರೆ ಅದು ಅಂತಃಕೇಂದ್ರಿಯ ಸಮಾಸವೆನಿಸುವುದು. ಕನ್ನಡದ ಮಟ್ಟಿಗೆ ಹೇಳುವುದಾದರೆ ಪೂರ್ವಪದದ ಕೊನೆ, ಉತ್ತರ ಪದದ ಆದಿಯ ವರ್ಣಗಳಲ್ಲಿ ಭಾಷಾ ಕ್ರಿಯೆ ನಡೆಯುತ್ತದೆ. ಅರ್ಥ ಮಾತ್ರ ಉತ್ತರ ಪದದಲ್ಲಿರುತ್ತದೆ. ಮೇಲೆ ಹೇಳಿದ ಕನ್ನಡದ ಹೊಸ ಸಮಾಸಗಳಲ್ಲಿ ತತ್ಪುರುಷ, ಕರ್ಮಧಾರೆಯ ಮತ್ತು ಕ್ರಿಯಾ ಸಮಾಸಗಳು ಅಂತಕೇಂದ್ರಿಯ ಸಮಾಸಗಳಾಗುತ್ತವೆ. ಕ್ರಿಯಾರ್ಥದ ಕೇಂದ್ರ ಸಮಸ್ತ ಪದದ ಹೊರಗಡೆಗೆ ಕೇಂದ್ರಿಕೃತವಾಗಿದ್ದರೆ ಅದು ಬಹುಃಕೇಂದ್ರಿಯ ಸಮಾಸವೆನಿಸುವುದು. ಮೇಲೆ ಹೇಳಿದ ಬಹುವ್ರೀಹೀ ಸಮಾಸ ಬಹಿಃಕೇಂದ್ರಿಯ ಸಮಾಸವೆನಿಸಿಕೊಳ್ಳುತ್ತದೆ.

 


[1] ಶ.ಮ.ದ.ಸೂ.೧೭೫

[2] ಶ.ಮ.ದ.ಸೂ, ಪು.೧೭೫

[3] ಶ.ಮ.ದ.ಸೂ, ಪು.೧೭೬

[4] ತೆಕ್ಕುಂಜ ಗೋಪಾಲ ಕೃಷ್ಣ ಭಟ್ಟ ‘ಕನ್ನಡ ಸಮಾಸಗಳು’ (೧೯೭೦), ಪು.೪೦, ಅವ್ಯಯಭಾವ ಸಮಾಸದ ಅಸ್ತಿತ್ವದ ಬಗ್ಗೆ ಮೊದಲು ಪ್ರಶ್ನೆ ಮಾಡಿದವರು ತೆಕ್ಕುಂಜರು. ವಿನಃ ಡಿ.ಎನ್.ಶಂಕರಭಟ್‌ರಲ್ಲ. ಆದರೆ ಶಂಕರಭಟ್ ತಾವೇ ಮೊದಲಿಗರು ಎಂಬರ್ಥ ಬರುವಂತೆ ಬರೆಯುತ್ತಾರೆ. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (೨೦೦೦), ಪು.೧೧೯

[5] ಶಬ್ದಮಣಿದರ್ಪಣದ ಕೊನೆಯ ಪದ್ಯ ‘ಗಮಕ ಸಮಾಸದಿಂ…ಅರಿದಲ್ತೆ ಕನ್ನಡಂ’

[6] ವಿವರಣೆಗಾಗಿ ನೋಡಿ ಸೇಡಿಯಾಪು, ‘ಗಮಕ ಸಮಾಸ’ (ವಿಚಾರ ಪ್ರಪಂಚ) ಬಿಳಿಗಿರಿ ‘ಗಮಕ ಸಮಾಸವು ಸಮಾಸವೇ’ (ವರಸೆಗಳು)

[7] ನೋಡಿ ‘ಕನ್ನಡಕ್ಕೇ ಬೇಕು ಕನ್ನಡದ್ದೇ ವ್ಯಾಕರಣ’ ಪು.೪೫-೪೭.

[8] ಸಾಂಪ್ರದಾಯಕ ಪಾರಿಭಾಷಿಕಗಳನ್ನು ಅಧ್ಯಯನ ಮಾಡಿ ರೂಢಿಯಾಗಿರುವುದರಿಂದ ಕನ್ನಡದ ಹೊಸ ಸಮಾಸಗಳಿಗೆ ಅದೇ ಹೆಸರನ್ನು ಕೊಟ್ಟರೆ (ಅರ್ಥದಲ್ಲಿ ಸಂಪೂರ್ಣ ಭಿನ್ನ) ನೆನಪಿಟ್ಟುಕೊಳ್ಳಲು ಅಧ್ಯಯನಕಾರರಿಗೆ ಅನುಕೂಲವಾಗುತ್ತದೆಂದು ಪ್ರಕೃತ ಲೇಖಕನ ಆಶಯವಾಗಿದೆ.

[9] ವಿಲಿಯಂ ಮಾಡ್ತ ಕನ್ನಡಸಮಾಸ (ಕನ್ನಡ ವ್ಯಾಕರಣ ಸಮಸ್ಯೆಗಳು) ೧೯೯೮, ಪು.೭೦.