ವಿಧಗಳು

ಧಾತುಗಳಲ್ಲಿ ಎರಡು ವಿಧ. ಏಕಾಕ್ಷರ, ದ್ವ್ಯಕ್ಷರ ಧಾತು (ಮೂಲಧಾತು) ಮತ್ತು ತ್ರ್ಯಕ್ಷರ, ಚತಃಕ್ಷರ ಧಾತು (ಸಾಧಿತ ಧಾತು)

[1] ಮೂಲ ಧಾತುಗಳಿಗೆ ಪ್ರತ್ಯಯ ಸೇರುವುದಿಲ್ಲ. ಅವು ಅರ್ಥವತ್ತಾದ ಚಿಕ್ಕ ಘಟಕಗಳಾಗಿರುತ್ತವೆ.

ಏಕಾಕ್ಷರ ಧಾತುಗಳು

ಧಾತುಗಳು ಮೂಲತಃ ಏಕಾಕ್ಷರಗಳಾಗಿರುವುದನ್ನು ನಾವು ಕನ್ನಡದಲ್ಲಿ ಮಾತ್ರವಲ್ಲದೆ ಪ್ರಪಂಚದ ಇನ್ನಿತರ ಭಾಷೆಗಳಲ್ಲಿಯೂ ಕಾಣುತ್ತೇವೆ. ಇಂಗ್ಲಿಷಿನಲ್ಲಿ man, cut ಮುಂ. ಏಕಾಕ್ಷರಗಳಾಗಿದ್ದು ಮುಕ್ತ ಆಕೃತಿಮಾಗಳಾಗಿವೆ.[2] ಅಚ್ಚಗನ್ನಡದಲ್ಲಿ ಏಕಾಕ್ಷರ ಘಟಿತವಾದ ಸ್ವರಾಂತಧಾತುಗಳ ಸಂಖ್ಯೆ ೭೦ ಎಂಬುದಾಗಿ ಪ್ರ.ಗೋ.ಕುಲಕರ್ಣಿಯವರು ಅಭಿಪ್ರಾಯಿಸಿದ್ದಾರೆ.[3]

ಸ್ವರಾಂತ ಧಾತುಗಳು

ಕಾ ಚಾ ತಾ ನೀ ಬಾ
ಕೂ ಚೀ ತೂ ನೂ ಬೇ
ಕೋ ಚೂ ತೇ ನೋ ಮಿ
ಗೀ ಚೀ ದಾ ಪಾ ಮೇ
ಗೂ ಜೂ ನಾ ಪೀ ಸೋ ಮುಂತಾದುವು

ವ್ಯಂಜನಾಂತ ಹ್ರಸ್ವ ದೀರ್ಘಾದಿ ಏಕಾಕ್ಷರ ಧಾತುಗಳು

ಉಣ್ ಪೇನ್ ಕೊಳ್ ಸೇರ್ ಸೋಲ್
ಕಾಣ್ ಈನ್ ಸೂಯ್ ಬಾರ್ ನೂಲ್
ಪಣ್ ತಿನ್ ತೂಯ್ ಕಾರ್ ಪೇಲ್
ನಾನ್ ಪೊಯ್ ಕಾಯ್ ಹೀರ್ ಊೞ್
ಆನ್ ಬಯ್ ಆಯ್ ಆರ್ ಬಾೞ್
ಕೂನ್ ಗೆಯ್ ಪಾಯ್ ಜೋಲ್ ಪೂೞ್
ಕಳ್ ಕೊಯ್ ನೇರ್ ನಿಲ್ ಸೀಳ್ ಮುಂತಾದುವು

ದ್ವ್ಯಕ್ಷರಧಾತುಗಳು

ದ್ವ್ಯಕ್ಷರಧಾತುವೆಂದರೆ ಎರಡು ಅಕ್ಷರಗಳು ಅರ್ಥವತ್ತಾದ ಘಟಕವಾಗಿದ್ದು ಉಚ್ಚಾರಣಾದೃಷ್ಟಿಯಿಂದ ಸ್ವತಂತ್ರವೂ ಪ್ರತ್ಯಯರಹಿತವೂ ಆಗಿರುವ ಪದಗಳು.

ಉದಾ

ಮುಡಿ ಕಟ್ಟು ನೆಡು ಅರೆ ಬೆಳೆ
ಪಿಡಿ ನೋಡು ಪತ್ತು ಒರೆ ಕೊಱ
ಮೆಟ್ಟು ಮಾಡು ಅಪ್ಪು ಸುರಿ ತಡೆ ಮುಂತಾದುವು

ಸಾಧಿತ ಧಾತುಗಳು : ಮೂಲಧಾತುಗಳಿಗೆ ಆಖ್ಯಾತ ಪ್ರತ್ಯಯಗಳು ಹಾಗೂ ಪ್ರೇರಣಾರ್ಥಕ ‘ಇಸು’ ಪ್ರತ್ಯಯ ಸೇರಿದಾಗ ಸಾಧಿತ ಕ್ರಿಯಾರೂಪಗಳಾಗುವವು.[4] ಕ್ರಿಯಾಪದಗಳಾಗುವಾಗ ಧಾತು ಮತ್ತು ಆಖ್ಯಾತ ಪ್ರತ್ಯಯಗಳ ನಡುವೆ ಕಾಲಸೂಚಕಗಳು ಬರುವವು. ಹೀಗೆ ಧಾತುಗಳಿಗೆ ಕಾಲಸೂಚಕಗಳು ಹಾಗೂ ಆಖ್ಯಾತ ಪ್ರತ್ಯಯಗಳು ಸೇರಿ ಮೂರು ಕಾಲಗಳನ್ನೂ ಮೂರು ಅರ್ಥಗಳನ್ನೂ ತಿಳಿಸುತ್ತವೆ. ಅವು ಮೂರು ಪುರುಷ, ಲಿಂಗ ಹಾಗೂ ಎರಡು ವಚನಗಳ ಲಕ್ಷಣಗಳನ್ನು ತಿಳಿಸುತ್ತವೆ.

ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ನಡುವೆ ಕಾಲಸೂಚಕ ‘ಉತ್’ ಆಗಮ ಬಂದು ವರ್ತಮಾನಕಾಲದ ಕ್ರಿಯಾಪದವಾದರೆ ವ, ‘ಉವ’ ಆಗಮಗಳಾಗಿ ಭವಿಷತ್ ಕಾಲದ ಕ್ರಿಯಾಪದಗಳಾಗುತ್ತವೆ. ‘ದ’ ಆಗಮವಾಗಿ ಭೂತಕಾಲದ ಕ್ರಿಯಾಪದಗಳಾಗುತ್ತವೆ. ಭೂತಕಾಲದ ಕ್ರಿಯಾಪದಗಳು ಎರಡು ಲಕ್ಷಣಗಳನ್ನು ಹೊಂದಿವೆ. . ಭೂತಕಾಲದಲ್ಲಿ ಬರುವ ಆಗಮವು ವಿಕಾರ ಹೊಂದದ ಕ್ರಿಯಾಪದರೂಪ . ಆಗಮವು ವಿಕಾರ ಹೊಂದುವ ಕ್ರಿಯಾಪದರೂಪ. ವಿಕಾರ ಹೊಂದದ ಕ್ರಿಯಾಪದ ರೂಪ ಭೂತಕಾಲದಲ್ಲಿ ಧಾತುವಿಗೂ ಆಖ್ಯಾತ ಪ್ರತ್ಯಯಕ್ಕೂ ನಡುವೆ ಕಾಲಸೂಚಕ ದ ಆಗಮ ಬಂದು ಭೂತಕಾಲದ ರೂಪ ಹೊಂದುವದು (‘ದ’ ಆಗಮ ಇವುಗಳಲ್ಲಿ ವಿಕಾರ ಹೊಂದುವುದಿಲ್ಲ). ಉದಾ. ನೋಡು + ದ + ಅನು = ನೋಡಿದನು. ಕೆಲವು ಧಾತುಗಳು ಕ್ರಿಯಾಪದ ಗಳಾಗುವಾಗ ಭೂತ ಕಾಲದಲ್ಲಿರುವ ‘ದ’ ಆಗಮವು ಲೋಪವಾಗಿ ಕ್ರಿಯಾಪದವು ವಿಕಾರ ಹೊಂದುವುದು (‘ದ’ ಸ್ಥಳದಲ್ಲಿ ಹೊಸದೊಂದು ಅಕ್ಷರ ಬರುತ್ತದೆ). ಉದಾ. ಕಲಿ + ದ + ಅನು = ಕಲಿತನು.

ಕ್ರಿಯಾಪದ ವಿಕಾರ ಹೊಂದದ ಭೂತಕಾಲದ ಕೆಲವು ಧಾತುಗಳು : ನೋಡು ನೋಡಿದ ಹಾಗೆಯೇ ಮಾಡು, ಬೇಡು, ಕಾಡು, ಓಡು, ಹಾಡು, ಬಾಡು, ಕೇಳು, ಹೇಳು, ಏರು, ಸಾಗು, ರೇಗು, ಕೂಗು, ಮಾಗು, ತೂಗು, ಬೀಗು, ಓದು, ತೆರೆ, ತೆಗೆ, ಒಗೆ, ನಡೆ, ಕೊರೆ, ಎಳೆ, ಹಿಡಿ, ಕುಡಿ, ಬಡಿ, ಕಡಿ, ಮಡಿ, ಸುಳಿ, ಬಳಿ, ಇಳಿ, ತಿಳಿ, ನುಡಿ, ಬರೆ, ಬಾಗು, ಬಿಗಿ, ಅಗಿ, ಹುಗಿ, ಮಿಂಚು, ಹಿಂಡು, ನುಂಗು, ತಂಗು, ಕರಿ, ಹರಿ, ಸುರಿ, ಮುರಿ, ಮಲಗು, ಹಚ್ಚು, ಹೇರು ಬೀಸು ಮುಂತಾದುವು.

ಕ್ರಿಯಾಪದ ವಿಕಾರ ಹೊಂದುವ ಭೂತಕಾಲದ ಕೆಲವು ಧಾತುಗಳು : ನಗು-ನಕ್ಕ ಹಾಗೆಯೇ ಹೋಗು, ಸಿಗು, ಇರು, ಆಗು, ಕೊಡು, ಬಿಡು, ಇಡು, ನಡು, ಕೆಡು, ತೆರು, ಹೊರು, ಸಾಯು, ಕೀಳು, ಮರೆ, ಬೀಳು, ಕರೆ, ಹೆರೆ, ಒರೆ, ಏಳು, ಕೊಲ್ಲು, ಸೋಲು, ನಿಲ್ಲು, ತಿನ್ನು, ತರು, ಬರು, ಮೀ, ಬೇ, ನೋ, ಕಲಿ, ಬಲಿ ಮುಂತಾದುವು.

ಒಂದೇ ಧಾತುವಿನ ವರ್ತಮಾನ, ಭೂತ, ಭವಿಷ್ಯತ್ ಕಾಲಗಳ ಕ್ರಿಯಾಪದದ ಸಿದ್ದರೂಪಗಳನ್ನು ಮೂರು ಪುರುಷ, ಎರಡೂ ವಚನಗಳಲ್ಲಿ ಕೊಟ್ಟಿದೆ. ಉದಾ. ಬರು

ವರ್ತಮಾನಕಾಲ

ಭೂತಕಾಲ

ಭವಿಷ್ಯತ್ ಕಾಲ

.

.

.

.

.

.

ಬರುತ್ತಾನೆ ಬರುತ್ತಾರೆ ಬಂದನು ಬಂದರು ಬರುವನು ಬರುವರು
ಬರುತ್ತಾಳೆ ಬರುತ್ತಾರೆ ಬಂದಳು ಬಂದರು ಬರುವಳು ಬರುವರು
ಬರುತ್ತದೆ ಬರುತ್ತವೆ ಬಂದಿತು ಬಂದವು (ಬಂದುವು) ಬರುವದು (ಬರುವುದು) ಬರುವವು (ಬರುವುವು)
ಬರತ್ತೀಯೆ ಬರುತ್ತೀರಿ ಬಂದೆ ಬಂದಿರಿ ಬರುವೆ ಬರುವಿರಿ
ಬರುತ್ತೇನೆ ಬರುತ್ತೇವೆ ಬಂದೆನು ಬಂದೆವು ಬರುವೆನು ಬರುವೆವು

ಧಾತುಗಳಿಗೆ ಕಾಲಸೂಚಕಗಳೂ ಆಖ್ಯಾತ ಪ್ರತ್ಯಯಗಳೂ ಸೇರಿ ಮೂರು ಕಾಲಗಳನ್ನು ತಿಳಿಸಿದಂತೆ ಮೂರು ಅರ್ಥಗಳನ್ನು ತಿಳಿಸುತ್ತವೆ. ಧಾತುವಿಗೆ ‘ಅಲಿ’, ‘ಉವದು’, ‘ಉವೆ’ ಈ ವಿಧ್ಯರ್ಥದ ಆಖ್ಯಾತ ಪ್ರತ್ಯಯಗಳು ಸೇರಿ ವಿಧ್ಯರ್ಥಕ ಕ್ರಿಯಾಪದ ರೂಪಗಳಾಗುವವು (ಅವುಗಳಿಗೆ ಕಾಲಸೂಚಕಗಳು ಬರುವುದಿಲ್ಲ). ಧಾತುವಿಗೆ ಆನು, ಆಳು, ಆರು, ಆವು, ಈ, ಈರಿ, ಏನು, ಏವು, ಇಂತಹ ಸಂಭಾವನಾರ್ಥಕ ಆಖ್ಯಾತಗಳು ಸೇರಿ ಸಂಭಾವನಾರ್ಥಕ ಕ್ರಿಯಾರೂಪಗಳಾಗುತ್ತವೆ. ಧಾತುವಿಗೆ ಅನು, ಅಳು, ಅರು, ಅದು, ಅವು, ಎ, ಅರಿ, ಎನು, ಎವು ಇಂತಹ ನಿಷೇದಾರ್ಥಕ ಆಖ್ಯಾತಗಳು ಸೇರಿ ನಿಷೇದಾರ್ಥಕ ಕ್ರಿಯಾಪದಗಳಾಗುತ್ತವೆ. ಧಾತುಗಳು ಸೇರಿ ನಿಷೇದಾರ್ಥಕ ಕ್ರಿಯಾಪದಗಳಾಗುತ್ತವೆ. ರೂಢಿಗಾಗಿ ‘ಬರೆ’ ಎಂಬ ಧಾತುವಿನ ವಿಧ್ಯರ್ಥ, ಸಂಭಾವನಾರ್ಥ ಹಾಗೂ ನಿಷೇಧಾರ್ಥಗಳ ಕ್ರಿಯಾಪದರೂಪಗಳನ್ನು ಮಾದರಿಗಾಗಿ ಕೊಟ್ಟಿದೆ.

ವಿಧ್ಯರ್ಥ

ಸಂಭಾವನಾರ್ಥ

ನಿಷೇಧಾರ್ಥ

.

.

.

.

.

.

ಬರೆಯಲಿ ಬರೆಯಲಿ ಬರೆದಾನು ಬರೆದಾರು ಬರೆಯನು ಬರೆಯರು
ಬರೆಯಲಿ ಬರೆಯಲಿ ಬರೆದಾಳು ಬರೆದಾರು ಬರೆಯಳು ಬರೆಯರು
ಬರೆಯಲಿ ಬರೆಯಲಿ ಬರೆದೀತು ಬರೆದಾವು ಬರೆಯದು ಬರೆಯವು
ಬರೆ ಬರೆಯಿರಿ ಬರೆದೀಯೆ ಬರೆದೀರಿ ಬರೆಯೆ ಬರೆಯರಿ
ಬರೆವೆ ಬರೆಯುವ ಬರೆಯುವಾ ಬರೆಯೋಣ ಬರೆದೇನು ಬರೆದೇವು ಬರೆಯೆಯ ಬರೆಯೆವು

ಕ್ರಿಯಾಪದ ರೂಪ ಹೊಂದುವಾಗ ವಿಧ್ಯರ್ಥ, ಸಂಭಾವನಾರ್ಥ, ಸಂಭಾವನಾರ್ಥ, ನಿಷೇದಾರ್ಥಗಳಲ್ಲಿ ಮತ್ತು ಎಲ್ಲ ಪುರುಷ, ಲಿಂಗ, ವಚನಗಳಲ್ಲಿ ಧಾತುಗಳಿಗೆ ಸೇರುವ ಆಖ್ಯಾತ ಪ್ರತ್ಯಯಗಳ ಪಟ್ಟಿಯನ್ನು ಮುಂದಿನ ಪುಟದಲ್ಲಿ ಕೊಡಲಾಗಿದೆ.

ಇಸುಪ್ರತ್ಯಯ ಕುರಿತು : ಕನ್ನಡದಲ್ಲಿ ಹೆಚ್ಚು ಕಡಿಮೆ ಎಲ್ಲ ಕ್ರಿಯಾ ಧಾತುಗಳಿಗೆ ಕೂಡ ಇಸು ಪ್ರತ್ಯಯ ಸೇರಿಸಿ ಸಾಧಿತ ಕ್ರಿಯಾರೂಪಗಳನ್ನು ರಚಿಸಲು ಸಾಧ್ಯವಿದೆ. ಈ ನಿಯಮಕ್ಕೆ ಅಪವಾದಗಳಾಗಿ ಕೆಲವು ಕ್ರಿಯಾಧಾತುಗಳನ್ನು ಮಾತ್ರವೇ ಉದಾಹರಿಸಲು ಸಾಧ್ಯವಿದೆ. ಇಂತಹ ಅಪವಾದಗಳಾಗಿ ಬರುವ ಧಾತುಗಳು ಮುಖ್ಯವಾಗಿ ಮೂರು ರೀತಿಯುವುಗಳೆಂದು ಡಿ.ಎನ್.ಶಂಕರಭಟ್ ಅವರು ಅಭಿಪ್ರಾಯಪಟ್ಟಿದ್ದಾರೆ.[5] ಅವು ಇಂತಿವೆ.

೧. ನೈಸರ್ಗಿಕ ಘಟನೆಗಳು : ಮಿಂಚು, ಗುಡುಗು, ಜಿನುಗು, ಕಂದು ಇತ್ಯಾದಿ
೨. ಅನೈಚ್ಛಿಕ ಕ್ರಿಯೆಗಳು : ಉಳುಕು, ಕೆಮ್ಮು, ಸೀನು, ತೇಗು ಇತ್ಯಾದಿ
೩. ಮಾನಸಿಕ ಅವಸ್ಥೆಗಳು : ರೋಸು, ಮರುಗು, ಒಗ್ಗು ಇತ್ಯಾದಿ

ಸಾಮಾನ್ಯವಾಗಿ ಒಬ್ಬ ನಿಯೋಗಿಯ ಇಲ್ಲವೇ ಪ್ರೇರಕನ ಹತೋಟಿಯಲ್ಲಿ ಉಳಿಯಲಾರದಂತಹ ಕ್ರಿಯೆಗಳನ್ನು ಇಲ್ಲವೇ ಘಟನೆಗಳನ್ನು ಸೂಚಿಸುವ ಕ್ರಿಯಾಧಾತುಗಳು ಮಾತ್ರವೇ ಹೀಗೆ ಇಸು, ಪ್ರತ್ಯಯದೊಂದಿಗೆ ಸೇರಿಕೊಳ್ಳುವಲ್ಲಿ ಅಪವಾದಗಳಾಗಿ ಉಳಿಯುತ್ತವೆ. ಉದಾ. ಅ.ಉಮೇಶನ ಕಾಲ ಉಳುಕಿತು ಆ. ಆಕೆ ಉಮೇಶನ ಕಾಲನ್ನು ಉಳುಕಿಸಿದಳು ಈ ಘಟನೆ ಇಲ್ಲವೇ ಕ್ರಿಯೆಗಳಲ್ಲಿ ಯಾವುದನ್ನಾದರೂ ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲ ವ್ಯಕ್ತಿ ಇಲ್ಲವೇ ಶಕ್ತಿಯನ್ನು (ಉದಾ. ದೇವರು) ಊಹಿಸಿಕೊಳ್ಳಲು ಸಾಧ್ಯವಿದೆಯಾದಲ್ಲಿ ಅಂತಹ ಪ್ರಯೋಗಗಳು ಸಮ್ಮತವಾಗಬಲ್ಲವು. ಉದಾ. ಮಂತ್ರವಾದಿಯು ಆಕೆಯನ್ನು ನಾಲ್ಕು ದಿವಸ ಕೆಮ್ಮಿಸಿದನು. ಅಂದರೆ ಯಾವುದೇ ಒಂದು ಕ್ರಿಯಾಧಾತುವನ್ನು ‘ಇಸು’ ಪ್ರತ್ಯಯದೊಂದಿಗೆ ಬಳಸಲು ಸಾಧ್ಯವಿದೆಯೇ ಅಥವಾ ಇಲ್ಲವೇ ಎಂಬ ವಿಷಯವು ವ್ಯಾವಹಾರಿಕ ಕಾರಣಗಳ ಮೇಲೆ ಅವಲಂಬಿಸಿದೆಯಲ್ಲದೆ ವೈಯಾಕರಣಿಗಳ ಕಾರಣ ಮೇಲಲ್ಲ. ಕ್ರಿಯಾಧಾತುಗಳಿಗೆ ‘ಇಸು’ ಪ್ರತ್ಯಯ ಸೇರಿದಾಗ (ಹೆಚ್ಚಾಗಿ) ಪ್ರೇರಣಾರ್ಥಕ ಕ್ರಿಯಾರೂಪ ಸಿದ್ಧವಾಗುತ್ತದೆ (ಮಲಗಿಸು, ಓಡಿಸು, ಮುಂ).[6]

ಕನ್ನಡ ಧಾತುಗಳಿಂದ ಕ್ರಿಯಾಪದಗಳ ರೂಪಸಿದ್ದಿಯನ್ನು ಮಾಡಿಕೊಳ್ಳುವಾಗ ಆಗುವ ಕೆಲವು ಲೋಪಾಗಮಾದೇಶ ಕ್ರಿಯೆಗಳನ್ನು ಗಮನಿಸಬಹುದು. ಭಾಷಾಶಾಸ್ತ್ರಜ್ಞರು ಅಭಿಪ್ರಾಯ ಪಡುವಂತೆ ಕೆಲವು ಧಾತುಗಳ ಸ್ವರೂಪಗಳು ಕೇಶಿರಾಜನು ಹೇಳಿದಂತಿರದೆ ಭಿನ್ನವಾಗಿವೆ. ‘ಬೇ’, ‘ಮೀ’ ಮುಂತಾದುವುಗಳು. ‘ಬೆಯ್’, ‘ಮಿಯ್’ ಎಂಬಂತಿದ್ದಿರ ಬೇಕೆಂದೂ ಇಲ್ಲಿರುವ ‘ಯ’ ಕಾರವು ಅನುನಾಸಿಕವಾಗಿದ್ದಿರಬೇಕೆಂದೂ ಆದುದರಿಂದ ‘ಬೆಂದಂ’, ‘ಮಿಂದಂ’ ಎಂಬ ಕ್ರಿಯಾ ಪದರೂಪಗಳುಂಟಾಗುವುವೆಂದೂ ಭಾವಿಸ ಬೇಕಾಗುತ್ತದೆ. ನಿಷೇಧ ರೂಪದಿಂದ ಧಾತುಗಳನ್ನು ನಿಶ್ಚಯಿಸಬೇಕೆಂಬ ಲಕ್ಷಣದಂತೆ ‘ಬೇಯಂ’, ‘ಮೀಯಂ’, ಎಂಬವುಗಳ ‘ಧಾತು’, ‘ಬೇ’, ‘ಮೀ’, ಎಂದೇ ಆಗುತ್ತದೆ.

ಕೇಶಿರಾಜ ಹೇಳಿದ ತ್ರ್ಯಚತುಃಪಂಚಕ್ಷರ ಧಾತುಗಳ ಬಗೆಗೆ ಸಂದೇಹ ಮೂಡುತ್ತದೆ. ಅವಕ್ಕೆಲ್ಲ ಏಕಾಕ್ಷರ ಧಾತುಗಳೇ ಮೂಲವಾಗಿರಬೇಕು. ಉದಾ.ಒಡಂ + ಪಡು = ಒಡಂಬಡು, ಅಳ್ಕ + ಜಂ + ಪಡು = ಅಳ್ಕಜಂಬಡು. ಕನ್ನಡ ಧಾತುಗಳಲ್ಲಿ ದೀರ್ಘಾ ವೃತ್ತಿ ಸಹಜವಾಗಿದ್ದರೂ ಬಿಂದು ವೃತ್ತಿ ವಿಕಲ್ಪವಾಗಿದೆ. ಬರ್ದುಂಕು > ಬರ್ದುಕು > ಬದುಕು. ಮುಂತಾದುವು ಕದಕದಿಸು,ಅಳ್ಕಜಂಬಡು ಮೊದಲಾದ ಪಂಚಾಕ್ಷರ ಧಾತುಗಳನ್ನು ಕೇಶಿರಾಜ ಹೇಳಿದರೂ ಅವು ಅನುಕರಣ ಇಲ್ಲವೆ ಸಮಾಸರೂಪದ ಪದಗಳಾಗಿವೆ. ಸಂಸ್ಕೃತದಲ್ಲಿ ದೀರ್ಘ ಹಾಗೂ ಸಮಾಸ್ತೋಕ್ತ ಧಾತು ನಿರ್ಮಾಣ ಹೆಚ್ಚಿರುವುದರ ಪ್ರಭಾವ ಕೇಶಿರಾಜನ ಮೇಲಾಗಿದೆ.

ಧಾತುಪಾಠದಲ್ಲಿ ‘ಇರು’ ಎಂದು ‘ಉ’ ಕಾರಾಂತವಾಗಿ ಧಾತು ಸ್ವರೂಪವನ್ನು ಕೊಟ್ಟಿದ್ದರೂ ಆಖ್ಯಾತ ಪ್ರಕರಣದಲ್ಲಿ ‘ಇರ್’ ಎಂಬ ಧಾತು “ವೊಂದರ್ಕ ಮುತ್ವಮಕ್ಕುಂ” ಎಂದು ೨೪೧ನೆಯ ಸೂತ್ರದ ವೃತ್ತಿಯಲ್ಲಿ ಹೇಳಲಾಗಿದೆ. ಇದನ್ನು ಗಮನಿಸಿದಾಗ ಕೇಶಿರಾಜನ ಧಾತುಪಾಠವನ್ನು ಪ್ರತಿ ತೆಗೆಯುವವರು ಕೆಲವನ್ನು ಪ್ರಮಾದದಿಂದ ಬಿಟ್ಟಿರಲೂಬಹುದು. ಕೆಲವು ಧಾತುಗಳು ಕೇಶಿರಾಜನ ಕಣ್ಣು ತಪ್ಪಿಸಿ ಉಳಿದು ಹೋಗಿದ್ದಿರಬಹುದು ಎಂಬುದಕ್ಕೆ ಧಾತುಪಾಠದಲ್ಲಿ ಪೇೞ್, ಉಳ್ (=ಇರು) ಕುಳ್, ಅಗಲ್ ಎಂಬವುಗಳಿಲ್ಲದಿರುವುದೂ ಒಂದು ಪ್ರಮಾಣವಾಗುತ್ತದೆ. ಅವನ ಕಾಲಕ್ಕಿಂತ ಹಿಂದನ ಗ್ರಂಥಗಳನ್ನು ಪರಿಶೀಲಿಸಿದರೆ ಅವನ ಗಮನಕ್ಕೆ ಬಾರದ ಇನ್ನೂ ಕೆಲವು ಧಾತುಗಳು ಇರಬಹುದು ಎಂದು ತೋರುತ್ತದೆ. ಹಾಗೆಯೇ ಅವನ ಕಾಲದಲ್ಲಿದ್ದ ಧಾತ್ವರ್ಥವು ಕಾಲಾಂತರದಲ್ಲಿ ಬದಲಾಗಿಯೂ ಇದ್ದಿರಬಹುದು. ಕೆಲವು ಧಾತುಗಳಿಗೆ ಮೂಲಾರ್ಥವೊಂದಿದ್ದು ಅದರ ಲಕ್ಷಣಾರ್ಥವು ಮುಂದೆ ಅದಕ್ಕೊದಗಿ ಕೆಲವು ಸಲ ಎರಡೂ ಅರ್ಥಗಳು ಆ ಧಾತುವಿಗಿರುವಂತೆ ಕಾಣಬಹುದು. ಉದಾ. ‘ಸಾ’ ಎಂಬ ಧಾತುವಿಗೆ ಮೃತ್ಯರ್ಥವಿದೆ ಎಂದು ಕೇಶಿರಾಜ ಹೇಳುತ್ತಾನೆ. ಇಂದು ಕೆಲವರು ದೂರಹೋಗು ಎಂಬರ್ಥದಲ್ಲಿಯೂ ಪ್ರಯೋಗಿಸುತ್ತಾರೆ. ಹೀಗೆ ಧಾತುಗಳ ಅರ್ಥನಿರ್ಣಯದಲ್ಲಿ ಭಿನ್ನತೆಯಿದೆ.

ಹಳಗನ್ನಡದ ವ್ಯಂಜನಾಂತ ಧಾತುಗಳಾದ ‘ಪೇೞ್’, ‘ಊಳ್’, ‘ಕೊಳ್’, ‘ಪೊಗೞ್’, ಎಂಬುವು ನಡುಗನ್ನಡ, ಹೊಸಗನ್ನಡದಲ್ಲಿ ಸ್ವರಾಂತ್ಯಗಳಾಗುತ್ತವೆ. ಕೇಶಿರಾಜನು ಹೇಳುವ ಧಾತುಗಳು ಹೆಚ್ಚಾಗಿ, ‘ಉ’ ಕಾರಾಂತವಾಗಿರುವುದು ಕಂಡು ಬರುತ್ತದೆ. ಇ‑ಎ, ಉ‑ಒ ಗಳಲ್ಲುಂಟಾದ ಪರಿವರ್ತನೆ ದ್ರಾವಿಡ ಭಾಷೆಗಳಲ್ಲಿ ಸಾಮಾನ್ಯ ನಿಯಮವಾಗಿರುವಂತೆ ಕನ್ನಡದಲ್ಲೂ ಆಗಿದೆ. ಧಾತುಗಳು ಎಷ್ಟೋ ತಮ್ಮ ರೂಪ ವ್ಯತ್ಯಾಸವನ್ನು ಪಡೆದುಕೊಳ್ಳುವ ಬಗೆಯನ್ನು ಕೂಡ ಕೇಶಿರಾಜ ಗಮನಿಸಿದ್ದಾನೆ. ಸುಡು-ಸೂಡು, ಕುಡು‑ಕೂಡು, ಬಳೆ ‑ಬೆಳೆ ಎಂಬಂತಹ ರೂಪಗಳು ಕೇವಲ ಧ್ವನಿವ್ಯತ್ಯಾಸಕ್ಕೆ ಮಾತ್ರವಲ್ಲದೆ ಅರ್ಥ ವ್ಯತ್ಯಾಸಕ್ಕೂ ಕಾರಣವಾಗಿವೆ. ‘ಒಲ್’ ಧಾತು ಇದರರ್ಥ ಪ್ರೀತಿಸು ಎಂದಾಗುತ್ತದೆ. ಇದರ ನಿಷೇಧಾರ್ಥಕ ರೂಪಗಳು ಬಳಕೆಯಲ್ಲಿವೆ. ಉದಾ. ಒಲ್ಲನು, ಒಲ್ಲಳು. ‘ಉಳ್’ ಧಾತು ಇದರರ್ಥ ‘ಇರು’ ಎಂದಾಗುತ್ತದೆ. ಇದರ ಪ್ರಥಮ ಪುರುಷ ನಪುಂಸಕಲಿಂಗ ಏಕವಚನ ರೂಪ ‘ಉಂಟು’ ಎಂದು ಬಳಕೆಯಲ್ಲಿದೆ. ಅದನ್ನು ವರ್ತಮಾನ ಮತ್ತು ಭೂತಕಾಲಗಳಲ್ಲಿ ಮತ್ತು ಎಲ್ಲ ಲಿಂಗ, ವಚನಗಳಲ್ಲಿಯೂ ಪ್ರಯೋಗಿಸಲಾಗುತ್ತದೆ. ಉದಾ. ಮನೆಯಲ್ಲಿ ಅಪ್ಪನು ಉಂಟು; ಗುರುಗಳು ಉಂಟು; ಗೆಳೆಯರು ಉಂಟು. ಕೇಶಿರಾಜನು “ಬೆಳೆಯೆಂಬ ಧಾತು ಸಸ್ಯಾವಳಿಯೊಳ್ ಬಳೆಯೆಂಬ ಧಾತು ವಿಕ್ಕೆಡೆಯೊಳ್ ಸಂಗಳಿಕುಂ” ಎಂದು ಹೇಳಿದ್ದಾನೆ.

ಈ ಎರಡು ಶಬ್ಧಗಳ ನಡುವೆ ಇದ್ದಿರಬಹುದಾದ ವ್ಯತ್ಯಾಸವು ಬಹುಕಾಲದ ಹಿಂದೆಯೇ, ಅಂದರೆ ವಡ್ಡಾರಾಧನೆ, ಪಂಪಭಾರತಗಳ ಕಾಲದಿಂದಲೂ ಮರೆಯಾಗಿರಬೇಕು ಆದರೆ ಕೇಶಿರಾಜನ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಬೆಲೆ ಸಸ್ಯಸಮೃದ್ದಿಗಾಗಿ ಬಳೆ ಉಳಿದೆಡೆಯಲ್ಲಿ ಪ್ರಯೋಗವಾಗುತ್ತವೆ.

ಕೆಲವು ಧಾತುಗಳ ಸ್ವರೂಪವನ್ನು ಗಮನಿಸಿದಾಗ ಅವುಗಳು ಕೇವಲ ಧಾತುಗಳಾಗಿರದೆ ನಾಮಗಳಾಗಿರಬಹುದೇ ಎಂದು ಸಂದೇಹಿಸುವಂತಿದೆ. ಮುಳ್-ಕಂಟಕೇ, ಔಡು (ಅವುಡು)‑ ದಂತಚರ್ವಣೆ ಎಂಬವುಗಳನ್ನು ಮುಳಂ, ಜಡಿದಂ ಎಂದು ಮುಂತಾಗಿ ಪ್ರಯೋಗಿಸಿದುದು ಇದೆಯೆ? ಪ್ರಾಯಶಃ ಇಲ್ಲ. ಹಾಗಿದ್ದ ಮೇಲೆ ಇವುಗಳನ್ನು ಧಾತುವೆನ್ನಬಹುದೆ? ಕೆಲವು ಧಾತುಗಳು ನಾಮಗಳೂ ಆಗಿದ್ದು ಆ ಎರಡೂ ಅರ್ಥಗಳನ್ನು ಧಾತುಪಾಠದಲ್ಲಿ ಕೊಡಲಾಗಿದೆ. ಒಱ ‑ ಶ್ರವಣೀ, ಶಸ್ತ್ರಕೋಶೆ ಚಃ. ತೊಱ ‑ ವಿಸರ್ಜನೆ, ನದ್ಯಾಂ ಚ. ಸೆಳೆ ‑ ಆಕರ್ಷಣೇ, ಬಾಲಶಿಕ್ಷಾದಂಡೇ ಚ ಇತ್ಯಾದಿ. ಧಾತ್ವರ್ಥ ನಿರೂಪಣೆಯ ಸಂದರ್ಭ ದಲ್ಲಿಯೂ ಱೞ ಕುಳ ಗಳ ಬಗೆಗೆ ಕೇಶಿರಾಜನು ವಿಶೇಷ ಗಮನ ಹರಿಸಿದ್ದಾನೆ. ಅೞ್‑ಜಲ ನಿಮಜ್ಜನೇ, ಸೇವಕೇ ಕುಳಂ. ಬಾಱ‑ಜೀವನೇ, ಖಡ್ಗೇ ಕುಳಂ ಇತ್ಯಾದಿ. ಧಾತುಪಾಠವು ಆದ್ಯಕ್ಷರಾನುಕ್ರಮದಿಂದಿರದೆ ನಮ್ಮ ಶಾಸ್ತ್ರ ಪರಂಪರೆಯಲ್ಲಿ ಕಂಡು ಬರುವಂತೆ ಅಂತ್ಯವರ್ಣಕ್ಕನುಗುಣವಾಗಿ ನಿರೂಪಿತವಾಗಿದೆ.

ಹೊಸಗನ್ನಡದಲ್ಲಿಯೂ ಒಂದು ಪದ ನಾಮಪದವಾಗಿರುವಂತೆ ಕ್ರಿಯಾಪದವು ಆಗುತ್ತದೆ. ಉದಾ. ಒಲೆ‑ಒಪ್ಪು, ಶೋಭಿಸು (ಕ್ರಿ), ಬೆಂಕಿ ಉರಿಸುವ ಸ್ಥಳ (ನಾ) ಕಟ್ಟು ಹಿಡಿದಿಡು (ಕ್ರಿ), ಸಂಕೋಲೆ (ನಾ) ಇತ್ಯಾದಿ.

ಪ್ರಾದೇಶಿಕ ಪ್ರಭೇದಗಳಲ್ಲಿ ಕಂಡುಬರುವ ಉಚ್ಚಾರಣೆ ಮತ್ತು ವರ್ಣವ್ಯತ್ಯಾಸಗಳು ಕ್ರಿಯಾರೂಪಗಳಲ್ಲೂ ಕಂಡುಬರುತ್ತವೆ. ಉದಾ. ‘ಬಾ’ ಎಂಬುದು ಬಾರೋ, ಬರಬೇಕು, ಬಾರಾಕೋ, ಬಾರಲೋ. ‘ಹೋಗು’ ಎಂಬುದು ಹೋಗುನು (ಕಿತ್ತೂರು ಕರ್ನಾಟಕ), ಹೋಗೋಣ (ಹಳೆಮೈಸೂರು). ಸ್ವರಾಂತವಾದ ಧಾತುಗಳು ಉಚ್ಚಾರಣೆಯಲ್ಲಿ ವ್ಯಂಜನಾಂತಗಳಾಗುವ ಸಂಭವ ಹೆಚ್ಚು ಉದಾ. ಬೀಸು ‑ ಬೀಸ್, ಮುಕ್ಕು ‑ ಮುಕ್ ಇತ್ಯಾದಿ.

ಹಲವು ಧಾತುಗಳು ನಾಮಪದಗಳ ಜೊತೆಗೆ ಸೇರಿ ವಿಶಿಷ್ಟವಾದ ಧಾತುಗಳಾಗಿ ವಿವಿಧ ಅರ್ಥಗಳಲ್ಲಿ ಬಳಕೆಯಾಗುತ್ತವೆ. ಉದಾ : ‘ಬಡಿ’‑ಕಾಲ್ಬಡಿ, ಬಾಯ್ಬಡಿ, ಸಿಡಿಲ್ಬಡಿ ಇತ್ಯಾದಿ. ‘ಬಿಗಿ’‑ಏಟುಬಿಗಿ, ಭಾಷಣ ಬಿಗಿ ಇತ್ಯಾದಿ. ಕೆಲವು ವೃತ್ತಿ ಸಮುದಾಯದಲ್ಲಿ ಬಳಕೆಯಾಗುವ ಕ್ರಿಯಾರೂಪಗಳು ಆ ವೃತ್ತಿಯ ಕ್ರಿಯೆಯನ್ನು ತಿಳಿಸಿಕೊಡುತ್ತವೆ. ಉದಾ. ‘ತುಂಬ್ಸು’ ಈ ಕ್ರಿಯಾರೂಪ ಸಾಮಾನ್ಯಾರ್ಥದಲ್ಲಿ ‘ಭರ್ತಿ ಮಾಡು’ ಎಂಬರ್ಥ ದಲ್ಲಿ ಬಳಕೆಯಾಗುತ್ತದೆ. ಬಡಿಗವೃತ್ತಿ ಸಮುದಾಯದಲ್ಲಿ ಆ ರೂಪ ‘ಸಜ್ಜುಗೊಳಿಸು’ ಎಂಬರ್ಥ ಪಡೆದುಕೊಳ್ಳುತ್ತದೆ. ಮೇಳಿತುಂಬ್ಸು, ಈಸ್ ತುಂಬ್ಸು ಈಸು, ಮೇಳಿ ಮುಂತಾದವುಗಳನ್ನು ಹಾಕಿ ಗಳೆಯನ್ನು ಸಜ್ಜುಗೊಳಿಸುವುದು ಅಂತಹ ಕ್ರಿಯಾರೂಪಗಳು ವೃತ್ತಿಯ ವಿವಿಧ ಮಜಲುಗಳನ್ನು ವಿವರಿಸುತ್ತವೆ.

ವಿಭಜನೆ/ವರ್ಗೀಕರಣ

ಪ್ರತಿಯೊಂದು ಭಾಷೆಯಲ್ಲೂ ಕ್ರಿಯಾಪದಗಳ ಸಂಖ್ಯೆ ಸೀಮಿತ. ಆದರೆ ಸಾಧಿತ ರೂಪಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ (ಅಪರಿಮಿತ?). ಪ್ರತಿ ಕ್ರಿಯಾಪದದ ಬಳಕೆಯಲ್ಲೂ ಉದ್ದೇಶಗಳು ಎಲ್ಲ ಸಂದರ್ಭದಲ್ಲೂ ಒಂದೇ ಆಗಿರುವುದಿಲ್ಲ ಆದ್ದರಿಂದ ಕ್ರಿಯಾಪದಗಳ ಬಳಕೆಯ ಉದ್ದೇಶಗಳು ಅಸಂಖ್ಯ. ಅವುಗಳ ಉದ್ದೇಶಗಳನ್ನು ಗಮನಿಸಿ ಭಾಷಾಶಾಸ್ತ್ರಜ್ಞರು ಕ್ರಿಯಾಪದಗಳನ್ನು ವರ್ಗೀಕರಿಸಲು ಪ್ರಯತ್ನಿಸಿದ್ದಾರೆ. ಇದೊಂದು ಕಷ್ಟಸಾಧ್ಯದ ಕೆಲಸ. ಏಕೆಂದರೆ ಕ್ರಿಯಾಪದಗಳ ಉದ್ದೇಶಗಳಾಗಲೀ ಅವು ಬಳಕೆಯಾಗುವ ಕ್ರಿಯಾರ್ಥಗಳ ಸ್ವರೂಪಗಳಾಗಲೀ ಯಾವಾ ಗಲೂ ಸ್ಪಷ್ಟವಾಗಿರುವುದಿಲ್ಲ. ಹೀಗಿದ್ದರೂ ಕ್ರಿಯಾಪದಗಳ ಉದ್ದೇಶ ಮತ್ತು ಕ್ರಿಯಾರ್ಥ ಕಗಳ ಸ್ವರೂಪಗಳನ್ನಾಧರಿಸಿ ವರ್ಗೀಕರಿಸುವ ಪ್ರಯತ್ನಗಳು ನಡೆದೇ ಇವೆ. ಈ ಕುರಿತು ಡಿ.ಎನ್.ಶಂಕರಭಟ್‌ರು ಮಾಡಿರುವ ವಿಭಜನೆ ಹೀಗಿದೆ.[7]

ವಾಕ್ಯವೊಂದರಲ್ಲಿ ಬರುವ ಪದಪುಂಜಗಳು ಅದರಲ್ಲಿ ಬರುವ ಕ್ರಿಯಾಪದ ಗಳನ್ನಾಧರಿಸಿವೆ. ಉದಾ. ‘ಬೀಳು’ ಎಂಬ ಕ್ರಿಯಾಪದವಿರುವ ವಾಕ್ಯದಲ್ಲಿ ಒಬ್ಬ ವ್ಯಕ್ತಿ /ವಸ್ತುವನ್ನು ಸೂಚಿಸುವಂತಹ ಒಂದೇ ಒಂದು ಪದಪುಂಜವಿದ್ದರೆ ಸಾಕಾಗುತ್ತದೆ. ಏಕೆಂದರೆ ಬೀಳುವ ಕ್ರಿಯೆಯಲ್ಲಿ ಒಬ್ಬ ವ್ಯಕ್ತಿ, ವಸ್ತು/ಕಾರ್ಯಪ್ರವೃತ್ತವಾಗಿರುತ್ತದೆ. ಉದಾ.ಭೀಮಬಿದ್ದ, ಮಳೆ ಬಿತ್ತು ಆದರೆ ‘ಬೀಳಿಸು’ ಎಂಬ ಕ್ರಿಯಾಪದವಿರುವ ವಾಕ್ಯದಲ್ಲಿ ಎರಡು ಬೇರೆ ಬೇರೆ ವ್ಯಕ್ತಿ, ವಸ್ತುಗಳನ್ನು ಹೆಸರಿಸುವಂತಹ ಎರಡು ಬೇರೆ ಬೇರೆ ಪದಗುಚ್ಛಗಳನ್ನು ಬಳಸುವ ಅವಶ್ಯಕತೆ ಇದೆ. ಏಕೆಂದರೆ, ‘ಬೀಳಿಸುವ’ ಕ್ರಿಯೆಯಲ್ಲಿ ‘ಬೀಳುವ’ ವ್ಯಕ್ತಿ /ವಸ್ತು ಹಾಗೂ ಬೀಳಿಸುವಂತಹ ಇನ್ನೊಂದು ವ್ಯಕ್ತಿ ಕಾರ್ಯ ಪ್ರವೃತ್ತವಾಗುತ್ತದೆ. ಉದಾ.‘ಪರಪ್ಪ ಮಲ್ಲಪ್ಪನನ್ನು ಬೀಳಿಸಿದನು’ ‘ಚೆನ್ನಮ್ಮ ಆ ಕೊಡವನ್ನು ಬೀಳಿಸಿದಳು’ ಇಲ್ಲಿ ‘ಮಲ್ಲಪ್ಪ’ ಮತ್ತು ‘ಕೊಡ’ ಬೀಳುವ ವ್ಯಕ್ತಿ/ವಸ್ತು. ‘ಪರಪ್ಪ’ ‘ಚೆನ್ನಮ್ಮ’ ಬೀಳಿಸುವ ವ್ಯಕ್ತಿ. ಈ ರೀತಿಯಾಗಿ ವಾಕ್ಯದಲ್ಲಿ ಕ್ರಿಯಾಪದದೊಂದಿಗೆ ಪ್ರಯುಕ್ತವಾಗಿರುವಂತಹ ಪದಪುಂಜಗಳೆಲ್ಲ ಆ ವಾಕ್ಯವು ತಿಳಿಸುವ ಕ್ರಿಯೆಯ ಬೇರೆ ಬೇರೆ ಘಟಕಗಳು ಯಾವುವು ಎಂಬುದನ್ನು ನಿರ್ದೇಶಿಸುತ್ತವೆ. (ಕ್ರಿಯಾರ್ಥಕ) ವಾಕ್ಯದಲ್ಲಿ ಬರುವ ಪದಪುಂಜಗಳನ್ನು . ವಿಷಯ . ನಿಯೋಗಿ . ಅನುಭೋಗಿ . ಆಕರ . ಪ್ರೇರಕಗಳೆಂಬ ಐದು ಮುಖ್ಯ ಘಟಕಗಳಾಗಿ ವಿಂಗಡಿಸಬಹುದು. ಕೆಳಗಿನ ಉದಾಹರಣೆಗಳ ಮೂಲಕ ಅವುಗಳ ಸ್ವರೂಪವನ್ನು ಗಮನಿಸಬಹುದು.

೧. ಕಿಟಕಿ ತೆರೆಯಿತು

೨. ರಾಮನು ಕಿಟಕಿಯನ್ನು ತೆರೆದನು

೩. ರಾಮನಿಗೆ ಪೆನ್ನು ಸಿಕ್ಕಿತು

೪. ಈರಪ್ಪನು ಹೊಲಕ್ಕೆ ನೀರು ಹಾಯಿಸುತ್ತಿದ್ದಾನೆ

೫. ಬಸಪ್ಪನು ತನ್ನ ಎತ್ತುಗಳನ್ನು ಮಾಂತಪ್ಪನಿಗೆ ಕೊಟ್ಟಿದ್ದಾನೆ

೬. ಕೂಸು ಆಡುತ್ತಿದೆ

೭. ಮಲ್ಲವ್ವಳು ಕೂಸನ್ನು ಅಳಿಸುತ್ತಿದ್ದಾಳೆ

೮. ರಮೇಶನು ಎರಡನೆಯ ಮಹಡಿಯಿಂದ ಬಿದ್ದ

. ವಿಷಯ

ಮೊದಲನೆಯ ವಾಕ್ಯದಲ್ಲಿ ‘ತೆರೆ’ ಎಂಬ ಕ್ರಿಯಾಪದದೊಂದಿಗೆ ‘ಕಿಟಕಿ’ ಎಂಬ ಒಂದೇ ಒಂದು ಪದ ಬಂದಿದೆ. ಈ ಪದವನ್ನು ಸೂಚಿಸುವ ಘಟಕ ‘ವಿಷಯ’ ಎಂಬುದಾಗಿ ನಿರ್ದೇಶಿಸಬಹುದು. ಕನ್ನಡದ ಕ್ರಿಯಾರ್ಥಕ ವಾಕ್ಯಗಳಲ್ಲಿ ವಿಷಯ ಸೂಚಕ ಪದಪುಂಜ ಇರುತ್ತದೆಂದು ಸಾಧಾರಣವಾಗಿ ಹೇಳಬಹುದು.

ಎರಡನೆಯ ವಾಕ್ಯದಲ್ಲಿ ‘ಕಿಟಕಿ’, ಮೂರನೆಯದರಲ್ಲಿ ‘ಪೆನ್ನು’, ನಾಲ್ಕನೆಯದರಲ್ಲಿ ‘ನೀರು’, ಐದನೆಯದರಲ್ಲಿ ‘ತನ್ನ ಎತ್ತುಗಳು’, ಆರು ಮತ್ತು ಏಳನೆಯ ವಾಕ್ಯಗಳಲ್ಲಿ ‘ಕೂಸು’ ಎಂಟನೆಯದರಲ್ಲಿ ರಮೇಶ ಈ ಪದಪುಂಜಗಳು ಮೇಲಿನ ವಾಕ್ಯಗಳಲ್ಲಿ ವಿಷಯವೆಂಬ ಘಟಕವನ್ನು ಸೂಚಿಸುತ್ತವೆ.

. ನಿಯೋಗಿ

ಸ್ವಪ್ರೇರಣೆಯಿಂದ ಕ್ರಿಯೆಯೊಂದನ್ನು ನಡೆಸಬಲ್ಲ ವ್ಯಕ್ತಿ, ಪ್ರಾಣಿ ಮೊದಲಾದುವನ್ನು ನಿರ್ದೇಶಿಸುವ ಪದಪುಂಜಗಳು ವಾಕ್ಯಗಳಲ್ಲಿ ನಿಯೋಗಿ ಘಟಕವನ್ನು ಸೂಚಿಸುತ್ತವೆ. ಈ ಘಟಕದ ಕ್ರಿಯೆಯ ಮೂಲಕ ಒಂದು ವಿಷಯದ ಮೇಲೆ ಪರಿಣಾಮ ಬೀರುವ ಶಕ್ತಿಯಿರುತ್ತದೆಂಬುದನ್ನು ಗಮನಿಸಬೇಕು. ಉದಾ. ಎರಡನೆಯ ವಾಕ್ಯದಲ್ಲಿ ತೆರೆಯುವ ಕ್ರಿಯೆಯ ಮೂಲಕ ರಾಮನು ಕಿಟಕಿಯನ್ನು ತೆರೆಯುವಂತೆ ಮಾಡಿದನು. ನಾಲ್ಕನೆಯ ವಾಕ್ಯದಲ್ಲಿ ‘ಈರಪ್ಪ’, ಐದನೆಯ ವಾಕ್ಯದಲ್ಲಿ ‘ಬಸಪ್ಪ’, ಏಳನೆಯ ವಾಕ್ಯದಲ್ಲಿ ‘ಮಲ್ಲವ್ವ’ ಈ ಪದಪುಂಜಗಳು ಕೂಡ ನಿಯೋಗಿಯನ್ನು ನಿರ್ದೇಶಿಸುತ್ತವೆ.

. ಅನುಭೋಗಿ

ಮೂರನೆಯ ವಾಕ್ಯದ ‘ರಾಮ’ ಎಂಬ ಪದವು ‘ಅನುಭೋಗಿ’ ಎಂಬ ಘಟಕವನ್ನು ಸೂಚಿಸುತ್ತದೆ. ನಿಯೋಗಿ ಅನುಭೋಗಿಗಳಲ್ಲಿರುವ ವ್ಯತ್ಯಾಸವೆಂದರೆ ‘ನಿಯೋಗಿಯ ಸ್ವಪ್ರಯತ್ನದಿಂದ ಮತ್ತು ಸ್ವಪ್ರೇರಣೆಯಿಂದ ಒಂದು ಕಾರ್ಯದಲ್ಲಿ ಭಾಗವಹಿಸುತ್ತಿದೆಯಾದರೆ, ಅನುಭೋಗಿಯು ಬೇರಾವುದೋ ಕಾರಣಕ್ಕಾಗಿ ಒಂದು ಕಾರ್ಯದಲ್ಲಿ ಸೇರಿಕೊಂಡಿರುತ್ತದೆ’. ಉದಾ. ರಾಮ ಎಷ್ಟು ಪ್ರಯತ್ನ ಬೇಕಿದ್ದರೂ ಮಾಡಲಿ ಪೆನ್ನು ಅವನಿಗೆ ಸಿಗುವುದೇ ಅಥವಾ ಇಲ್ಲವೇ ಎಂಬುದು ಅವನ ಅಧೀನದಲ್ಲಿರುವುದಿಲ್ಲ. ಆ ಪೆನ್ನು ಎಲ್ಲಿತ್ತು ಎಂಬುದರ ಮೇಲೆ ಅದು ಅವಲಂಬಿಸಿರುತ್ತದೆ. ಹೀಗೆಯೇ ಐದನೆಯ ವಾಕ್ಯದಲ್ಲಿ ‘ಮಾಂತಪ್ಪ’ ಎಂಬ ಪದವೂ ಕೂಡ ಅನುಭೋಗಿಯನ್ನು ನಿರ್ದೇಶಿಸುತ್ತದೆ. ಕೊಡುವ ಕ್ರಿಯೆಯಲ್ಲಿ ಮಾಂತಪ್ಪನ ಸ್ಥಾನ ತಟಸ್ಥವಾದುದು. ಅದು ಕೋಡುವ ಕ್ರಿಯೆಯೊಂದಿಗೆ ಸೇರಿಕೊಂಡಿರುತ್ತದೆ.

. ಆಕರ

ನಾಲ್ಕನೆಯ ವಾಕ್ಯದಲ್ಲಿ ‘ಹೊಲ’ ಎಂಬ ಪದವೂ ಮತ್ತು ಎಂಟನೆಯ ವಾಕ್ಯದಲ್ಲಿ ‘ಅಟ್ಟದ ಮೇಲಿಂದ’ ಎಂಬ ಪದಪುಂಜವು ‘ಆಕರ’ ಎಂಬ ಘಟಕವನ್ನು ನಿರ್ದೇಶಿಸುತ್ತವೆ. ಕ್ರಿಯೆ ರೂಪಗೊಳ್ಳಲಿಕ್ಕೆ ಯಾವುದು ಕಾರಣವಾಗಿರುತ್ತದೆಯೊ ಅದು ಆಕರ.

. ಪ್ರೇರಕ

ಕನ್ನಡ ಕ್ರಿಯಾಪ್ರಕೃತಿಗಳಿಗೆ ‘ಇಸು’ ಪ್ರತ್ಯಯ ಸೇರಿಸಿ ಸಾಧಿತ ರೂಪಗಳನ್ನು ನಿರ‍್ಮಿಸಲು ಸಾಧ್ಯವಿದೆ. ಅಂತಹ ಸಾಧಿತರೂಪಗಳಲ್ಲಿ ಕೆಲವನ್ನು ಬಳಸಿದಾಗ ಅವುಗಳೊಂದಿಗೆ ಮೇಲೆ ಸೂಚಿಸಿದ ಮುಖ್ಯ ಘಟಕಗಳು ಮಾತ್ರವಲ್ಲದೆ ‘ಪ್ರೇರಕ’ವೆಂಬ ಇನ್ನೊಂದು ಘಟಕವೂ ಕೂಡ ಪ್ರಯುಕ್ತವಾಗುತ್ತದೆ. ೧.ಅವನೊಂದು ಹಣ್ಣು ತಿಂದನು, ೨.ರಮೇಶನು ಅವನ ಕೈಯಿಂದ ಒಂದು ಹಣ್ಣು ತರಿಸಿದ. ಎರಡನೆಯ ವಾಕ್ಯದಲ್ಲಿ ‘ತರಿಸು’ ಎಂಬ ‘ಸಾಧಿತ’ ರೂಪ ಹಾಗೂ ಅದರೊಂದಿಗೆ ಬಂದಿರುವ ‘ರಮೇಶ’ ಎಂಬ ಪದವು ಪ್ರೇರಕ ಘಟಕವನ್ನು ನಿರ್ದೇಶಿಸುತ್ತದೆ. ಇಂತಹ ಪ್ರೇರಕಯುಕ್ತ ವಾಕ್ಯಗಳನ್ನು ಸರಳವಾಕ್ಯಗಳೆಂದು ಪರಿಗಣಿಸುವ ಬದಲು ಸಾಧಿತವಾಕ್ಯಗಳೆಂದು ಪರಿಗಣಿಸಬೇಕು. ಕ್ರಿಯಾರ್ಥಕ ವಾಕ್ಯಗಳಲ್ಲಿ ಮೇಲಿನ ಐದು ಮುಖ್ಯ ಘಟಕಗಳಲ್ಲದೆ ಕರಣ, ಹೇತು, ಕಾರಣ, ಉದ್ದೇಶ, ಸ್ಥಾನ, ಕಾಲ, ಅನುನಯಿ, ಸದೃಶ್ಯವೆಂಬ ಅಮುಖ್ಯ ಘಟಕಗಳು ಪ್ರಭಾವ ಬೀರುತ್ತವೆ.[8]

ಕ್ರಿಯಾರ್ಥಕ ವಾಕ್ಯಗಳಲ್ಲಿಯ ಮುಖ್ಯ ಘಟಕಗಳಾದ ‘ನಿಯೋಗಿ’, ‘ಅನುಭೋಗಿ’ ಮತ್ತು ‘ಆಕರ’ಗಳ ಆಧಾರದ ಮೇಲೆ ಕ್ರಿಯಾಪದಗಳನ್ನು ವಿಂಗಡಿಸಬಹುದು.[9] ಒಂದು ಕ್ರಿಯಾಪದದೊಂದಿಗೆ ನಿಯೋಗಿಯನ್ನು ಸೂಚಿಸುವ ಪದಪುಂಜ ಬರಬಲ್ಲುದೆ ಅಥವಾ ಬರಲಾರದೇ ಎಂಬುದರ ಮೇಲೆ ನಿಯೋಗಿಯುಕ್ತ, ನಿಯೋಗಿವಿರಹಿತಗಳೆಂದು ಕ್ರಿಯಾಪದಗಳನ್ನು ಎರಡು ರೀತಿಯಾಗಿ ವಿಂಗಡಿಸಲು ಸಾಧ್ಯವಿದೆ. ೧. ಆ ಬೆಕ್ಕು ಒಂದು ಇಲಿಯನ್ನು ಕೊಲ್ಲುತ್ತಿದೆ. ೨. ಅಲ್ಲೊಂದು ಬೆಕ್ಕು ಸಾಯುತ್ತಿದೆ. ಮೊದಲನೆಯ ವಾಕ್ಯದಲ್ಲಿ ‘ಆ ಬೆಕ್ಕು’ ಎಂಬ ಪದಪುಂಜ ನಿಯೋಗಿಯಾಗಿಯೂ ಮತ್ತು ‘ಒಂದು ಇಲಿ’ ಎಂಬ ಪದಪುಂಜ ವಿಷಯವಾಗಿ ಕಾರ್ಯನಿರ್ವಹಿಸಿದೆ. ‘ಬೆಕ್ಕು’ ಕೊಲ್ಲುವ ಕಾರ್ಯವನ್ನು ನಡೆಸುತ್ತಿದ್ದು ಅದರ ಪರಿಣಾಮವಾಗಿ ‘ಇಲಿ’ ಸಾಯುತ್ತಿದೆ ಎಂಬ ಅರ್ಥವನ್ನು ಈ ವಾಕ್ಯ ಕೊಡುತ್ತಿದೆ. ಇದರಲ್ಲಿ ಹೀಗೆ ‘ಬೆಕ್ಕು’ ಎಂಬುದು ನಿಯೋಗಿಯಾಗಿಯೂ ‘ಇಲಿ’ ಎಂಬುದು ವಿಷಯವಾಗಿಯೂ ಬಂದಿದೆ. ಎರಡನೆಯ ವಾಕ್ಯದಲ್ಲಿ ‘ಒಂದು ಇಲಿ’ ಎಂಬ ಪದಪುಂಜ ವಿಷಯವಾಗಿ ಬಂದಿದೆ. ಸಾಯುವ ಕ್ರಿಯೆಯಲ್ಲಿ ಅದು ಸ್ವತಃ ನಿರತವಾಗಿದ್ದ ರಿಂದ ಇಲ್ಲಿ ನಿಯೋಗಿ ಇಲ್ಲ. ೧. (ಹೀಗೆ) ‘ಕೊಲ್ಲು’ ಎಂಬ ಕ್ರಿಯಾಪದದೊಂದಿಗೆ ನಿಯೋಗಿ ಬರಬಲ್ಲುದಾದ್ದರಿಂದ ಅದು ನಿಯೋಗಿಯುಕ್ತವಾಗಿದೆ. ೨. ‘ಸಾಯು’ ಎಂಬ ಕ್ರಿಯಾಪದದೊಂದಿಗೆ ನಿಯೋಗಿ ಬರಲಾರದಾದ್ದರಿಂದ ಅದು ನಿಯೋಗಿವಿರಹಿತವಾಗಿದೆ.

ಕನ್ನಡದಲ್ಲಿ ಮಾಡು, ಕಚ್ಚು, ಒಗೆ, ಕುಡಿ, ಹಿಂಡು, ಹಾಸು, ತಿನ್ನು, ಹಂಚು ಮೊದಲಾದ ಕ್ರಿಯಾಪದಗಳು ನಿಯೋಗಿಯುಕ್ತಗಳಾಗಿ ಕಾರ್ಯನಿರ್ವಹಿಸುತ್ತವೆ. ಎಂದರೆ ಅವು ಬರುವ ವಾಕ್ಯಗಳಲ್ಲೆಲ್ಲ ಒಂದಲ್ಲ ಒಂದು ಪದಪುಂಜ ನಿಯೋಗಿಯಾಗಿ ಬಂದಿರಲು ಸಾಧ್ಯವಿದೆ. ೧ ಅವ್ವ ರೊಟ್ಟಿಯನ್ನು ಚೆನ್ನಾಗಿ ಮಾಡುತ್ತಾಳೆ. ೨ ಶಾಲೆಯಲ್ಲಿ ಹುಡುಗಿಯರಿಗೆ ಮಾತ್ರ ತಿಂಡಿ ಹಂಚುತ್ತಿದ್ದಾರೆ. ೩ ಮಲ್ಲಪ್ಪನು ಒಂದು ಲೋಟ ಹಾಲು ಕುಡಿದ. ಈ ವಾಕ್ಯಗಳಲ್ಲಿ ಅವ್ವ, ಶಾಲೆಯಲ್ಲಿ, ಮಲ್ಲಪ್ಪ ಈ ಪದಗಳು ನಿಯೋಗಿಗಳಾಗಿ ಬಂದಿವೆ. ‘ರೊಟ್ಟಿಯನ್ನು ಹುಡುಗಿಯರಿಗೆ’, ‘ಒಂದು ಲೋಟ’ ಇವು ವಿಷಯಗಳಾಗಿ ಬಂದಿವೆ. ಅಡಗು, ನಗು, ಬರು, ಅಳು ಮಾಡು, ಒಣಗು, ಓಡು ಮೊದಲಾದ ಕ್ರಿಯಾಪದಗಳು ನಿಯೋಗಿವಿರಹಿತಗಳಾಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಅವು ಬರುವ ವಾಕ್ಯಗಳಲ್ಲಿ ನಿಯೋಗಿಯನ್ನು ನಿರ್ದೇಶಿಸುವ ಪದಪುಂಜವನ್ನು ಬಳಸುವುದಿಲ್ಲ. ೪ ಆ ಕರಡಿ ಗುಹೆಯಲ್ಲಿ ಅಡಗಿತು. ೫ ಈ ಬಾರಿ ಮಹಾನವಮಿಗೆ ಎಲ್ಲ ಮಕ್ಕಳು ಬಂದಿದ್ದಾರೆ. ೬ ಹಿತ್ತಲದಲ್ಲಿ ಬಟ್ಟೆಗಳು ಒಣಗುತ್ತಿವೆ. ಈ ವಾಕ್ಯಗಳಲ್ಲಿ ‘ಆ ಕರಡಿ’, ‘ಎಲ್ಲ ಮಕ್ಕಳು’ ಮತ್ತು ‘ಬಟ್ಟೆಗಳು’ ಇವು ವಿಷಯಗಳಾಗಿ ಬಂದಿದ್ದು ಇಲ್ಲಿ ನಿಯೋಗಿಯನ್ನು ಸೂಚಿಸುವ ಪದಪುಂಜವಿಲ್ಲ ಎಂಬುದನ್ನು ಗಮನಿಸಬಹುದು.

ವಿಷಯಗಳಲ್ಲಿ ಸ್ವಯಂಪ್ರೇರಿತ ಮತ್ತು ಪರಪ್ರೇರಿತಗಳೆಂಬ ಎರಡು ಮುಖ್ಯ ವಿಭಾಗಗಳನ್ನು ಮಾಡಲಾಗಿದೆ. . ಓಡು, ಅಡಗು, ನಗು ಮೊದಲಾದ ಕ್ರಿಯಾಪದ ಗಳೊಂದಿಗೆ ಸ್ವಪ್ರೇರಿತ ವಿಷಯಗಳು ಬರುತ್ತವೆ. . ಒಡೆ, ಒಣಗು, ಅರಳು, ಸಾಯು ಕ್ರಿಯಾಪದಗಳೊಂದಿಗೆ ಸ್ವಪ್ರೇರಿತ ಮತ್ತು ಪರಪ್ರೇರಿತ ಎರಡು ರೀತಿಯ ವಿಷಯಗಳು ಬರಬಲ್ಲವು. ೧ ಮೊಲ ಕಾಡಿನಲ್ಲಿ ಅಡಗಿತು. ೨ ಬಿಸಿಲಿಗೆ ಬಟ್ಟೆ ಒಣಗಿದೆ. ೩ ಸಂಗಪ್ಪ ಬಾವಿಯಲ್ಲಿ ಮುಳುಗಿದ. ೪ ಬಾವಿಯಲ್ಲಿಯ ತಿರುವಿಗೆ ಸಿಕ್ಕು ಸಂಗಪ್ಪ ಮುಳುಗಿದ. ಈ ವಾಕ್ಯಗಳಲ್ಲಿ ಯಾವುದರಲ್ಲಿಯೂ ಒಬ್ಬ ವ್ಯಕ್ತಿ /ಪ್ರಾಣಿ ಇನ್ನೊಬ್ಬ ವ್ಯಕ್ತಿ/ಪ್ರಾಣಿಯ ಮೇಲೆ ಪರಿಣಾಮವನ್ನು ಬೀರುವಂತಹ ಕಾರ್ಯ ಮಾಡಿರುವುದಿಲ್ಲವಾದ್ದರಿಂದ ಅವೆಲ್ಲವೂ ನಿಯೋಗಿವಿರಹಿತಗಳೇ.

ಒಂದನೆಯ ವಾಕ್ಯದಲ್ಲಿ ‘ಮೊಲ’ ಸ್ವಪ್ರೇರಣೆಯಿಂದ ಎರಡನೆಯ ವಾಕ್ಯದಲ್ಲಿ ‘ಬಟ್ಟೆ’ ಪರಪ್ರೇರಣೆಯಿಂದ ಕಾರ್ಯ ಪ್ರವೃತ್ತವಾಗಿರುವುದನ್ನು ಸೂಚಿಸುತ್ತದೆ. ಮೂರನೆಯ ವಾಕ್ಯದಲ್ಲಿ ‘ಮುಳುಗು’ ಎಂಬ ಕ್ರಿಯಾರೂಪದಲ್ಲಿ ‘ಸಂಗಪ್ಪ’ ಸ್ವಪ್ರೇರಣೆಯಿಂದಲೂ ನಾಲ್ಕನೆಯ ವಾಕ್ಯದಲ್ಲಿ ಸಂಗಪ್ಪ ಪರ ಪ್ರೇರಣೆಯಿಂದಲೂ ತೊಡಗಿರುವುದನ್ನು ಸೂಚಿತವಾಗಿವೆ.

ಸಾಮಾನ್ಯವಾಗಿ ನಿಯೋಗಿಯುಕ್ತ ಮತ್ತು ನಿಯೋಗಿವಿರಹಿತ ಕ್ರಿಯಾಪದಗಳಿಗಿರುವ ವ್ಯತ್ಯಾಸವನ್ನು ಅವು ಸೇರಿರುವ ವಾಕ್ಯಗಳಿಗೆ ಪ್ರೇರಕ ಪದವನ್ನು ನೇರವಾಗಿ ಸೇರಿಸಲು ಸಾಧ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ. ೧ ಯಜಮಾನರು ಆಳುಗಳನ್ನು ಗೋಡಾವನದೋಳಗೆ ತಳ್ಳಿದರು. ೨ ಮಲ್ಲಪ್ಪನು ಯಜಮಾನರ ಮೂಲಕ ಆಳುಗಳನ್ನು ಗೋಡಾವನದೊಳಗೆ ತಳ್ಳಿಸಿದ. ‘ತಳ್ಳು’ ಎಂಬದು ನಿಯೋಗಿಯುಕ್ತ ಕ್ರಿಯಾಪದವಾಗಿದೆ. ಆದ್ದರಿಂದ ಒಂದನೆಯ ವಾಕ್ಯಕ್ಕೆ ನೇರವಾಗಿ ‘ಮಲ್ಲಪ್ಪ’ ಎಂಬ ಪ್ರೇರಕ ಪದವನ್ನು ಸೇರಿಸಿ ಎರಡನೆಯ ವಾಕ್ಯವನ್ನು ರಚಿಸಲು ಸಾಧ್ಯವಾಗಿದೆ. ಆದರೆ ‘ನಗು’ ಎಂಬುದು ನಿಯೋಗಿ ವಿರಹಿತ ಕ್ರಿಯಾಪದವಾಗಿದೆಯಾದ್ದರಿಂದ ಅದು ಬರುವ ವಾಕ್ಯಕ್ಕೆ ಹೀಗೆ ನೇರವಾಗಿ ಪ್ರೇರಕ ಪದಗುಚ್ಛವನ್ನು ಸೇರಿಸಲು ಸಾಧ್ಯವಾಗದೆಂಬುದನ್ನು ಕೆಳಗಿನ ವಾಕ್ಯಗಳಿಂದ ತಿಳಿಯಬಹುದು. ೧ ಕೂಸು ಆಡುತ್ತಿದೆ. ೨ ಅಮ್ಮ ಕೂಸನ್ನು ಆಡಿಸುತ್ತಿದ್ದಾಳೆ. ೩ ಪಾರಮ್ಮ ಚೆನ್ನಮ್ಮನ ಮೂಲಕ ಮಗುವನ್ನು ನಗಿಸುತ್ತಿದ್ದಾಳೆ. ಇಲ್ಲಿ ಒಂದನೇ ವಾಕ್ಯಕ್ಕೆ ನೇರವಾಗಿ ಪ್ರೇರಕ ಪದವನ್ನು ಸೇರಿಸಲು ಸಾದ್ಯವಾಗಿಲ್ಲ ವೆಂಬುದನ್ನು ಗಮನಿಸಬೆಕು. ‘ಅಮ್ಮ’ ಎಂಬ ನಿಯೋಗಿ ಸೂಚಕ ಪದವನ್ನು ಒಂದನೇ ವಾಕ್ಯಕ್ಕೆ ಸೇರಿಸಿ ಎರಡನೇ ವಾಕ್ಯವನ್ನು ಮತ್ತು ಆ ವಾಕ್ಯಕ್ಕೆ ‘ಪಾರಮ್ಮ’ ಎಂಬ ಪ್ರೇರಕ ಸೂಚಕ ಪದಗವನ್ನು ಸೇರಿಸಿ ಮೂರನೆಯ ವಾಕ್ಯವನ್ನು ರಚಿಸಲಾಗಿದೆ.

ಈ ರೀತಿ ನಿಯೋಗಿಯ ಪ್ರಯೋಗವನ್ನಾಧರಿಸಿ ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಿರುವ ಕ್ರಿಯಾಪದಗಳನ್ನು ಅನುಭೋಗಿ ಮತ್ತು ಆಕರಗಳ ಪ್ರಯೋಗವನ್ನಾಧರಿಸಿ ಮೂರು ಬೇರೆ ಬೇರೆ ಉಪವಿಭಾಗಳನ್ನಾಗಿ ವಿಂಗಡಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಆಕರ ಮತ್ತು ಅನುಭೋಗಿಗಳಲ್ಲಿ ಯಾವುದಾದರೂ ಒಂದು ಮಾತ್ರ ಒಂದು ಕ್ರಿಯಾಪದ ದೊಂದಿಗೆ ಪ್ರಯುಕ್ತವಾಗಲು ಸಾಧ್ಯವಿದೆ. ಅವೆರಡು ಒಟ್ಟಾಗಿ ಒಂದೇ ಸರಳ ವಾಕ್ಯಗಳಲ್ಲಿ ಬರಲಾರವು. ಅಲ್ಲದೆ ಎಲ್ಲ ಕ್ರಿಯಾರ್ಥಕ ವಾಕ್ಯಗಳಲ್ಲೂ ಅನುಭೋಗಿ ಮತ್ತು ಆಕರ ಈ ಎರಡು ಘಟಕಗಳಲ್ಲಿ ಒಂದಾದರೂ ಬಂದೇ ತೀರಬೇಕೆಂಬ ನಿಯಮ ವೇನೂ ಇಲ್ಲ. ಉದಾ. ೧. ಅವನ್ನೊಂದು ಉಂಡಿಯನ್ನು ತಿನ್ನುತ್ತಿದ್ದಾನೆ. ೨. ಅವನು ಮಣ್ಣಿನ ಮುದ್ದೆಯಿಂದ ಬಸವಣ್ಣನನ್ನು ಮಾಡುತ್ತಿದ್ದಾನೆ. ‘ಸ್ಥಾನ’ ಮತ್ತು ‘ಆಕರ’ ಗಳೊಳಗೆ ವ್ಯತ್ಯಾಸವಿದ್ದು ಈ ವಾಕ್ಯಗಳಲ್ಲಿ ಅಮುಖ್ಯವಾದ ಸ್ಥಾನ ಸೂಚಕಪದ ಬರಬಲ್ಲುದು ಆದರೆ ಮುಖ್ಯ ಘಟಕವಾದ ಆಕರ ಬರಲಾರದೆಂಬುದನ್ನು ಗಮನಿಸಬೇಕು. ೧ ಅವನು ಮನೆಯಲ್ಲಿ ಒಂದು ಉಂಡಿಯನ್ನು ತಿಂದನು. ೨. ಅವನು ಪಡಶಾಲೆಯಲ್ಲಿ ಮಣ್ಣಿನ ಮುದ್ದೆಯಿಂದ ಬಸವಣ್ಣನನ್ನು ಮಾಡುತ್ತಿದ್ದಾನೆ.

ಹೀಗೆಯೇ ‘ಅನುಭೋಗಿ’ ಮತ್ತು ‘ಫಲಾನುಭವಿ’ಗಳೊಳಗೆ ವ್ಯತ್ಯಾಸವಿದ್ದು ಈ ವಾಕ್ಯಗಳಲ್ಲಿ ಅಮುಖ್ಯವಾದ ಫಲಾನುಭವಿ ಬರಬಲ್ಲುದಾದರೂ ಮುಖ್ಯ ಘಟಕವಾದ ಅನುಭೋಗಿ ಬರಲಾರದೆಂಬುದನ್ನು ಗಮನಿಸಬೇಕು. ಉದಾ. ‘ಅವನು ಹಬ್ಬಕ್ಕಾಗಿ ಮಣ್ಣಿನ ಮುದ್ದೆಯಿಂದ ಬಸವಣ್ಣನನ್ನು ಮಾಡುತ್ತಿದ್ದಾನೆ’. ಇತ್ಯಾದಿ.

ಆಕರ ಮತ್ತು ಅನುಭೋಗಿಗಳ ಕುರಿತಾಗಿ ಮೇಲೆ ಕೊಟ್ಟಿರುವ ಸಂಗತಿಗಳನ್ನಾಧರಿಸಿ ಕ್ರಿಯಾಪದಗಳನ್ನು ಆಕರಯುಕ್ತ, ಅನುಭೋಗಿಯುಕ್ತ ಮತ್ತು ಇತರ (ಎಂದರೆ ಆಕರ ಮತ್ತು ಅನುಭೋಗಿ ವಿರಹಿತ) ಎಂದು ಮೂರು ಉಪವಿಭಾಗಗಳನ್ನಾಗಿ ವಿಂಗಡಿಸಲು ಸಾಧ್ಯವಿದೆ. ಈ ಮೂರು ಉಪವಿಭಾಗಗಳು ಮೇಲೆ ಕೊಟ್ಟಿರುವ ನಿಯೋಗಿಯುಕ್ತ ಮತ್ತು ನಿಯೋಗಿವಿರಹಿತಗಳೆಂಬ ವಿಭಜನೆಗೆ ಅಡ್ಡಲಾಗಿ ಬರುವುದರಿಂದ ಒಟ್ಟು ಕ್ರಿಯಾಪದಗಳನ್ನು ಆರು ಮುಖ್ಯ ವಿಭಾಗಗಳನ್ನಾಗಿ ವಿಂಗಡಿಸಬಹುದು.

ನಿಯೋಗಿಯುಕ್ತಅನುಭೋಗಿಯುಕ್ತ

ಉದಾ. ಕೊಡು, ಹಂಚು ಇತ್ಯಾದಿ

೧. ರಾಣಿ ತನ್ನ ಸೇವಕರಿಗೆ ಒಂದು ಚಿನ್ನದ ಸರವನ್ನು ಕೊಟ್ಟಳು

೨. ಸುಲ್ತಾನನು ಭಿಕ್ಷುಕರಿಗೆ ಕೊಳೆತ ಬಟಾಟೆಯನ್ನು ಹಂಚುತ್ತಿದ್ದಾನೆ

ನಿಯೋಗಿಯುಕ್ತಆಕರಯುಕ್ತ

ಉದಾ. ಹಿಂಡು, ಅದ್ದು, ಹಾಕು ಇತ್ಯಾದಿ

೧. ಆತ ಎಳ್ಳಿನಿಂದ ಎಣ್ಣೆ ಹಿಂಡುತ್ತಿದ್ದಾನೆ

೨. ಆಕೆ ಕೈಯನ್ನು ಮಜ್ಜಿಗೆಯಲ್ಲಿ ಅದ್ದಿದಳು

೩. ವಿಶಾಲಾಕ್ಷಿ ಹೋಳಿಗೆಯನ್ನು ಬುಟ್ಟಿಯೊಳಗೆ ಹಾಕಿದಳು

ನಿಯೋಗಿಯುಕ್ತಇತರ

ಉದಾ. ಕಚ್ಚು, ಹೇಳು ಇತ್ಯಾದಿ

೧. ನೆರಮನೆಯ ನಾಯಿ ಮಗುವಿನ ಕಾಲನ್ನು ಕಚ್ಚಿತು

೨. ಮೇಘನಾ ಹಾಡು ಹೇಳುತ್ತಿದ್ದಳು

ನಿಯೋಗಿವಿರಹಿತ­‑ಅನುಭೋಗಿಯುಕ್ತ

ಉದಾ. ಎಟಕು, ತೋರು

೧. ನರಿಗೆ ದ್ರಾಕ್ಷಿ ಹಣ್ಣು ಎಟುಕಿತು

೨. ರಾಮನು ಹೊಸ ಚಿತ್ರವನ್ನು ತೋರಿಸಿದನು

ನಿಯೋಗಿವಿರಹಿತಆಕರಯುಕ್ತ

ಉದಾ. ತಲಪು, ಹಬ್ಬು ಇತ್ಯಾದಿ

೧. ರಾಯರು ಊರಿಗೆ ತಲುಪಿದ್ದಾರೆ

೨. ಮಾವಿನ ಕಾಯಿ ಪಾಡಿಗೆ ಬಂದಿದೆ

ನಿಯೋಗಿವಿರಹಿತಇತರ

ಉದಾ. ನಗು, ಒಣಗು ಇತ್ಯಾದಿ

೧. ಪುಟ್ಟ ಮಗು ನಗುತ್ತಿದೆ.

೨. ಬಟ್ಟೆ ಒಣಗಿದೆ.

ಕ್ರಿಯಾಪದಗಳು ಇನ್ನೊಂದು ಬಗೆಯ ವರ್ಗೀಕರಣವಿದೆ. ೧.ಒಪ್ಪಿತಗಳು ೨.ಸೂಚಕಗಳು ೩.ಆಣೆಗಳು ೪.ಭಾವವಾಚಿಗಳು ಮತ್ತು ೫.ಘೋಷಣೆಗಳು ಎಂಬ ಐದು ವರ್ಗಗಳನ್ನು ಗುರುತಿಸಬಹುದು.[10] ಮಾತನಾಡುವ ವ್ಯಕ್ತಿ ಕ್ರಿಯಾಪದ ಸೂಚಿಸುವ ಸಂಗತಿಯನ್ನು ಒಪ್ಪುವಂತಿದ್ದರೆ ಆ ಬಗೆಯ ಕ್ರಿಯಾಪದಗಳು ಒಪ್ಪಿತಗಳು. ಉದಾ.ನಂಬು, ನಿರಾಕರಿಸು. ಸೂಚಕಗಳೆಂದರೆ ಯಾವುದಾದರೊಂದು ಕ್ರಿಯೆಯನ್ನು ಮಾಡಲು ಕೇಳುವ ವ್ಯಕ್ತಿಯನ್ನು ಪ್ರೇರೇಪಿಸುವ ಕ್ರಿಯಾಪದಗಳು. ಉದಾ. ಕೇಳು, ಬೇಡು, ಆಣೆಗಳಂತೂ ಹೇಳುವ ವ್ಯಕ್ತಿಯೇ ತಾವೊಂದು ಕ್ರಿಯೆಯನ್ನು ಮಾಡುವುದಾಗಿ ಒಪ್ಪುವ ಬದ್ಧವಾಗುವ ಕ್ರಿಯಾಪದಗಳಾಗಿರುತ್ತವೆ. ಉದಾ.ಶಪಥ ಮಾಡು, ಒಪ್ಪು. ಯಾವುದಾದರೊಂದು ಘಟನೆಯ ಬಗ್ಗೆ ಹೇಳುವ ವ್ಯಕ್ತಿಯ ದೃಷ್ಟಿಕೋನವನ್ನು ಸೂಚಿಸುವ ಕ್ರಿಯಾಪದಗಳೇ ಭಾವನಾಚಿಗಳು. ಉದಾ. ಕ್ಷಮೆಕೋರು, ವಂದಿಸು ಇತ್ಯಾದಿ. ಹೇಳುವ ವ್ಯಕ್ತಿ ಕೆಲವು ಕ್ರಿಯಾಪದಗಳನ್ನು ಬಳಸುವ ಮೂಲಕವೇ ವಸ್ತು ಜಗತ್ತಿನಲ್ಲಿ ಕೆಲವು ಪರಿವರ್ತನೆಗಳನ್ನು ತರುವುದು ಸಾಧ್ಯವಿದ್ದರೆ ಆಗ ಅಂತಹ ಕ್ರಿಯಾಪದಗಳನ್ನು ಘೋಷಣೆಗಳು ಎನ್ನುತ್ತೇವೆ. ಉದಾ. ಹೆಸರಿಸು, ರಾಜೀನಾಮೆ ನೀಡು. ಈ ಬಗೆಯ ವಿಂಗಡನೆ ನಾಮಪ್ರಕೃತಿ, ಕ್ರಿಯಾ ಪ್ರಕೃತಿಗಳಿಗೆ ಪ್ರತ್ಯಯಗಳು ಹತ್ತುವುದನ್ನು ಒಳಗೊಂಡಿದೆ. ಕ್ರಿಯಾಪದಗಳ ಸಾಂಪ್ರದಾಯಕ ವಿಂಗಡಣೆಯೊಂದಿದೆ.[11]

ಎರವಲು ಪದರಚನೆ

ಭಾಷಿಕ ಬದಲಾವಣೆಯ ಮಹತ್ವದ ತಂತ್ರಗಳಲ್ಲಿ ಸ್ವೀಕರಣವೂ ಒಂದು. ಎರಡು ಭಾಷೆಗಳು ಒಂದರೊಡನ್ನೊಂದು ಸಂಪರ್ಕಹೊಂದಿದಾಗ ಎರಡರ ನಡುವೆ ಕೊಡು ಕೊಳ್ಳುವಿಕೆ ನಡೆಯುವುದು ಭಾಷೆಯಲ್ಲಿ ಸಹಜ ಕ್ರಿಯೆ ಅದು ಭಾಷೆಯ ಆರೋಗ್ಯದ ಲಕ್ಷಣವಾಗಿದೆ. ಅಂತಹ ಸಂದರ್ಭದಲ್ಲಿ ಒಂದು ಭಾಷೆಯ ವಿಚಾರಗಳನ್ನು, ವಸ್ತುಗಳನ್ನು ನಿರ್ದೇಶಿಸುವ ಶಬ್ದಗಳನ್ನು ಇನ್ನೊಂದು ಭಾಷೆ ಸ್ವೀಕರಿಸುವುದು ಸಹಜವಾಗಿದೆ. ಕನ್ನಡದಲ್ಲಿ ಸಂಸ್ಕೃತ, ಇಂಗ್ಲಿಶ್, ಹಿಂದಿ, ಮರಾಠಿ ಮೊದಲಾದ ಅನ್ಯಭಾಷೆಗಳಿಂದೆ ಎರವಲಾಗಿ ಬಂದ ಶಬ್ದಗಳು ಹಲವಿವೆ. ಅವುಗಳ ಆಂತರಿಕ ರಚನೆ ಕನ್ನಡದ ಆಂತರಿಕ ರಚನೆಗಿಂತ ಭಿನ್ನವಾಗಿದೆ. ಒಂದು ಮಾತು ಅನ್ಯಭಾಷಾ ಶಬ್ದಗಳ ರಚನೆಯನ್ನು ವರ್ಣಿಸುವಾಗ ಕನ್ನಡದ ಪದರಚನೆಯ ನಿಯಮಗಳನ್ನು ಬಳಸಬೇಕು.

ಕೇಶಿರಾಜ ಅಪಭ್ರಂಶ* ಪ್ರಕರಣದಲ್ಲಿ ಕನ್ನಡ ಶಬ್ದಕೋಶವನ್ನು ನಾಲ್ಕು ರೀತಿಯಾಗಿ ವರ್ಗೀಕರಿಸಿದ್ದಾನೆ. ೧.ಸಮಸಂಸ್ಕೃತ ೨.ಅಪಭ್ರಂಶ ಅಥವಾ ತದ್ಭವ ೩.ತತ್ಸಮ ೪.ದೇಶ್ಯ

ಸಮಸಂಸ್ಕೃತಗಳೆಂದರೆ ಯಾವ ವ್ಯತ್ಯಾಸವನ್ನು ಪಡೆಯದ ಸಂಸ್ಕೃತ ರೂಪಗಳು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ ಕೊನೆಯಲ್ಲಿ ಮಾತ್ರ ಅತ್ಯಲ್ಪ ವ್ಯತ್ಯಾಸವನ್ನು ಪಡೆಯುವ ಸಂಸ್ಕೃತ ಪದಗಳು ಉದಾ. ಮಾಲಾ-ಮಾಲೆ, ಶಾಲಾ-ಶಾಲೆ, ಪ್ರಶ್ನಾ-ಪ್ರಶ್ನೆ ಮುಂತಾದುವು. ಸಂಸ್ಕೃತದ ಸಂಖ್ಯಾವಾಚಕ ಮತ್ತು ಅವ್ಯಯಗಳನ್ನು ಬಿಟ್ಟರೆ ಉಳಿದೆಲ್ಲವೂ ಕನ್ನಡದಲ್ಲಿ ಸಮಸಂಸ್ಕೃತಗಳಾಗುತ್ತವೆ. ಅಪಭ್ರಂಶ (ತದ್ಭವ) ಎಂದರೆ ಗಮನಾರ್ಹ ವ್ಯತ್ಯಾಸ ಹೊಂದಿದ ಸಂಸ್ಕೃತ ರೂಪಗಳು. (ಸಂಸ್ಕೃತಜನ್ಯ ಕನ್ನಡ ಪದಗಳು). ಉದಾ.ಕಷಾಯ‑ಕಸಾಯ, ಸಂಧ್ಯಾ‑ಸಂಜೆ, ವ್ಯಾಧ‑ಬಯದ ಮುಂತಾದುವು. ತತ್ಸಮವೆಂದರೆ ಸಂಸ್ಕೃತ ಮತ್ತು ಕನ್ನಡಗಳೆರಡಕ್ಕೂ ಸಮಾನವಾದ ಶಬ್ದಗಳು. ಕೇಶಿರಾಜ ಅಂತಹ ೨೧ ಶಬ್ದಗಳ ಪಟ್ಟಿ ಕೊಟ್ಟಿದ್ದಾನೆ. ಉದಾ.ಮಣಿ, ಮಂಚ, ತೋರಣ, ಪಟ್ಟಿ ಮುಂತಾದುವು. ಅವು ಸಂಸ್ಕೃತ ಇಲ್ಲವೆ ಕನ್ನಡ ಪದಗಳ ಜೊತೆಗೆ ಸಮಾಸ ಹೊಂದಿರಬಹುದು. ಉದಾ.ದಿನಮಣಿ, ಉಡೆಮಣಿ, ರತ್ನಮಂಚ, ತೂಗುಮಂಚ ಮುಂತಾದುವು. ಈ ೨೧ ಪದಗಳಲ್ಲಿ ಅಂಕ, ಕೋಂಟೆ, ಬಲ ಇಂತಹ ೯ ಪದಗಳು ದ್ರಾವಿಡದಿಂದ ಸಂಸ್ಕೃತ ಸ್ವೀಕರಿಸಿರುವ ಪದಗಳೆಂದು ದ್ರಾವಿಡ ಭಾಷಾವಿಜ್ಞಾನಿಗಳು ಗುರುತಿಸಿದ್ದಾರೆ.[12] ಈ ಕಲ್ಪನೆ ಕೇಶಿರಾಜನಿಗಿಲ್ಲ. ಕನ್ನಡ ಭಾಷೆಯಲ್ಲಿರುವ ಅಚ್ಚಗನ್ನಡ ಶಬ್ದಗಳನ್ನು ದೇಶ್ಯ ಶಬ್ದಗಳೆನ್ನು ತ್ತಾರೆ.

ಅಪಭ್ರಂಶ ಪ್ರಕರಣದಲ್ಲಿ ಕಂಡುಬರುವ ತದ್ಭವದ ನಿಯಮಗಳನ್ನು ಭಾಷಾಶಾಸ್ತ್ರದ ಬೆಳಕಿನಲ್ಲಿ ಪರಿಶೀಲಿಸಬೇಕಾಗಿದೆ. ಉಚ್ಚಾರಣೆಯಲ್ಲಿ ಸೌಲಭ್ಯಾಕಾಂಕ್ಷೆಯಿಂದ ಕೆಲವು ಪದಗಳನ್ನು ಬಳಸುವಾಗ ಪದದ ಪರಿಸರದಲ್ಲಿ ಕೆಲವು ವರ್ಣಗಳು ಇಲ್ಲವಾಗುತ್ತವೆ (ಲೋಪ ಕ್ರಿಯೆ ನಡೆಯುತ್ತದೆ). ಉದಾ. ಪ್ರಗ್ಗ-ಹಗ್ಗ, ಕೂಷ್ಮಾಂಡ-ಕುಂಬಳ, ವಿನಾಯಕಂ -ಬೆನಕಂ ಮುಂತಾದುವು. ಆಕೃತಿಮಾದಲ್ಲಿಯ ಧ್ವನಿಮಾಗಳ ಸ್ಥಾನಾಂತರ ಅಥವಾ ಅಲ್ಪಸ್ವಲ್ಪ ವ್ಯತ್ಯಾಸ ಹೊಂದುವ ವರ್ಣಪಲ್ಲಟ ಕ್ರಿಯೆಯೂ ನಡೆಯುತ್ತದೆ. ಉದಾ. ಅಂಗುಷ್ಟ-ಉಂಗುಟ, ಕುಸ್ತುಂಬರು-ಕೊತ್ತುಂಬರಿ, ಉಚ್ಚ-ಉದ್ದ, ಪತ್ತನ-ಪಟ್ಟಣ ಅಪಭ್ರಂಶ ಪದಗಳ ಇನ್ನೊಂದು ಪ್ರವೃತ್ತಿಯೆಂದರೆ ಆಯಾಪದಗಳ ಪರಿಸರದ ಪ್ರಭಾವದಿಂದ ಸಮರೂಪಧಾರಣೆ ಮಾಡಿಕೊಳ್ಳುವುದು. ಉದಾ. ನಿಶ್ಚಲ-ನಿಚ್ಚಲ, ಅಗ್ನಿ -ಅಗ್ಗಿ. ಸಂಸ್ಕೃತದ ಮಹಾಪ್ರಾಣಯುಕ್ತ ಶಬ್ದಗಳು ಅಪಭ್ರಂಶದ ಸಂದರ್ಭದಲ್ಲಿ ಅಲ್ಪಪ್ರಾಣಯುಕ್ತವಾಗುತ್ತವೆ. ಉದಾ. ವೀಧಿ-ಬೀದಿ, ಸಂಸ್ಥೆ-ಸಂತೆ ಮುಂ. ಕನ್ನಡದಲ್ಲಿ ಮಹಾಪ್ರಾಣಗಳಿಲ್ಲ ಎಂಬುದಕ್ಕೆ ಇವು ಉತ್ತಮ ನಿದರ್ಶನಗಳಾಗಿವೆ. ಇನ್ನೊಂದು ಭಾಷೆಯಿಂದ ತೆಗೆದುಕೊಳ್ಳುವ ಭಾಷೆಗೆ ಒಂದು ಶಬ್ದ ಬಂದಿತೆಂದರೆ ಅದು ಶಬ್ದಕೋಶ ಬದಲಾವಣೆಗೆ ಕಾರಣವಾಗುತ್ತದೆ ಹಾಗೂ ಆ ಭಾಷೆಯ ರಚನೆಗೆ ಹೊಂದಿಕೊಳ್ಳುವಂತೆ ರೂಪಾಂತರಗೊಳ್ಳುತ್ತದೆ.

ಅಪಭ್ರಂಶ ರೂಪಗಳಲ್ಲಿ ಇನ್ನೊಂದು ಮುಖ್ಯ ಸಂಗತಿಯ ಎಂದರೆ ಅನ್ಯಭಾಷೆಯ ಪದವು ಕನ್ನಡಕ್ಕೆ ಬಂದಾಗ ಕೆಲವು ಸಂದರ್ಭದಲ್ಲಿ ಅರ್ಥದಲ್ಲಿ ವ್ಯತ್ಯಾಸವಾಗುತ್ತವೆ. ಉದಾ.ಅವಸ್ಥಾ (ಸಂಸ್ಕೃತದಲ್ಲಿ) ಸ್ಥಿತಿ, ಸನ್ನಿವೇಶ ಎಂಬರ್ಥಕೊಟ್ಟರೆ ಅದರ ತದ್ಭವರೂಪ ಅವಸ್ಥೆ ಎಂಬುದು ಕನ್ನಡದಲ್ಲಿ ಕೆಟ್ಟಸ್ಥಿತಿ ಎಂಬರ್ಥ ಕೊಡುತ್ತದೆ. ಅದರಂತೆ ಶಿಕ್ಷಾ (ಸಂ) ಬೋಧನೆ, ಶಿಕ್ಷೆ (ಕನ್ನಡ) ಶಿಕ್ಷೆ punishment ಎಂಬರ್ಥಕೊಡುತ್ತದೆ. ಹೀಗೆ ಭಾಷಾ ಬಳಕೆಯಲ್ಲಿ ಎರಡು ವಿಧದ ಪರಿವರ್ತನೆ (ಅರ್ಥವಿಸ್ತಾರ, ಅರ್ಥಸಂಕೋಚ) ನಡೆಯುತ್ತದೆ. ಕೇಶಿರಾಜನ ಅಪಭ್ರಂಶ ಪ್ರಕರಣವು ಕನ್ನಡತ್ವದ ಶೋಧನೆಯನ್ನು ಪ್ರತಿಪಾದಿಸುತ್ತದೆ.

ಈಕ್ಷಿಸಿ ಶಿಕ್ಷಾಸೂತ್ರದ
ಲಕ್ಷಣ ಮಂ ಲೋಕ ರೂಢಿ ಕೆಡದ ಮೊಲಱವರ್
ಲಕ್ಷಿಪುದು ನುಡಿಗಳೊಳ್ ಬಹು
ಳಾಕ್ಷೇಪಣ ಮಿಲ್ಲದಿರೆಯುವಱಯದ ಕೆಲವಂ

ಲೋಕರೂಢಿ ಕೆಡದಂತೆ ಕನ್ನಡ ನುಡಿಯಲ್ಲಿ ಅನ್ಯಭಾಷಾ ಸ್ವೀಕರಣವನ್ನು ಕೇಶಿರಾಜ ಪುರಸ್ಕರಿಸಿದ್ದಾನೆ. ಅವನ ಈ ವಿಚಾರ ಆಧುನಿಕ ಭಾಷಾವಿಜ್ಞಾನದ ಬೆಳವಣಿಗೆಯ ಇತಿಹಾದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಕನ್ನಡ ಭಾಷೆಯ ರಚನೆಯನ್ನು ಅರಿಯುವುದಕ್ಕೆ ಅಪಭ್ರಂಶ ತತ್ವಗಳು ಹೆಚ್ಚು ಸಹಾಯಕವಾಗುತ್ತವೆ.

ಅವ್ಯಯಗಳ ಪ್ರಯೋಗ

ವ್ಯಾಕರಣ ವರ್ಗದ ಹಲವು ವರ್ಗಗಳಲ್ಲಿ ಅವ್ಯಯಗಳ ವರ್ಗವೂ ಒಂದು. ರೂಪಭೇದವಿಲ್ಲವು ಅಂದರೆ ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪ ದಲ್ಲಿರುವ ಶಬ್ದಗಳು ಅವ್ಯಯಗಳೆನಿಸಿಕೊಳ್ಳುತ್ತವೆ. ಈ ಅವ್ಯಯಗಳು ನಾಮವಾಚಕಗಳಂತೆ ವಿಭಕ್ತಿ ಪ್ರತ್ಯಯಗಳನ್ನು, ಧಾತುಗಳಂತೆ ಕಾಲವಾಚಕ ಮತ್ತು ಆಖ್ಯಾತ ಪ್ರತ್ಯಯಗಳನ್ನು ಹೊಂದಿರುವುದಿಲ್ಲ. ಕೇಶಿರಾಜನು (ಪ್ರಾಚೀನ ವೈಯಾಕರಣಿಗಳು) ಅವ್ಯಯಗಳನ್ನು ಅವುಗಳ ಅರ್ಥಾನುಸಾರಿಯಾಗಿ ಗುಂಪು ಮಾಡುತ್ತಾನೆ. (ಈ ಬಗ್ಗೆ ಅವ್ಯಯ ಪ್ರಕರಣದಲ್ಲಿ ಗಮನಿಸಬಹುದು) ಆಧುನಿಕ ವಿದ್ವಾಂಸರು ಅವ್ಯಯಗಳ ಕಾರ್ಯಾನುಸಾರವಾಗಿ ಗುಂಪು ಮಾಡುತ್ತಾರೆ. ಇಲ್ಲಿ ಎರಡನೆಯ ವಿಧಾನವನ್ನು ಅನುಲಕ್ಷಿಸಿ ಅವ್ಯಯಗಳ ಬಗೆಗಳನ್ನು ಹಾಗೂ ಅವುಗಳ ಪ್ರಯೋಗಗಳನ್ನು ಗಮನಿಸಲಾಗಿದೆ.

ಸಾಮಾನ್ಯಾವ್ಯಯ

ಯಾವುದೊಂದು ಕ್ರಿಯೆಯು ನಡೆದ ರೀತಿಯನ್ನು ಹೇಳುವಂತಹವು. ಅಂದರೆ ಕ್ರಿಯೆಯ ಸ್ಥಳ, ಕಾಲ, ರೀತಿ, ಸ್ಥಿತಿಯನ್ನು ತಿಳಿಸುವಂತಹವು  ‘ಸಾಮಾನ್ಯಾವ್ಯಯ’. ಇವು ಕ್ರಿಯೆಗೆ ವಿಶೇಷಣಗಳಾಗಿರುವುದರಿಂದ ಇವನ್ನು ‘ಕ್ರಿಯಾ ವಿಶೇಷಣಾವ್ಯಯ’ ಗಳೆಂದೂ ಹೇಳುವರು. ಉದಾ.ಸ್ಥಳಕ್ಕೆ – ಅಲ್ಲಿ, ಇಲ್ಲಿ, ಎಲ್ಲಿ, ಮೇಲು, ಕೆಳಗು ಮುಂತಾದುವು. ಕಾಲಕ್ಕೆ – ಆಗ, ಈಗ, ನಿನ್ನೆ, ಅಂದು ಇಂದು, ಎಂದು, ಬಳಿಕ, ಬೇಗ, ತರುವಾಯ, ಕೂಡಲೆ, ಒಡನೆ, ಬೇಗನೆ, ಮುಂತಾದುವು. ರೀತಿಗೆ – ಹಾಗೆ, ಹೀಗೆ, ಹೇಗೆ, ಅಂತು, ಇಂತು, ಎಂತು ಸ್ಥಿತಿಗೆ – ಮೆಲ್ಲನೆ, ಚೆನ್ನಾಗಿ, ತೆಳ್ಳಗೆ, ತಣ್ಣಗೆ, ಮೆಲ್ಲಗೆ, ಸುಮ್ಮನೆ, ಮೆತ್ತಗೆ, ಬೆಳ್ಳಗೆ ಮುಂತಾದುವು ಅನುಕರಣಾವ್ಯಯಗಳು.

ಅರ್ಥವಿಲ್ಲದ ಶಬ್ದಗಳು ಯಾವುದದಾದರೂ ವ್ಯಕ್ತಿ, ವಸ್ತು, ಕಾರ್ಯ ಮೊದಲಾದವುಗಳ ಧ್ವನಿಯ ಅನುಕರಣೆಯನ್ನು ಹೇಳುವಂತಹುಗಳಾಗಿವೆ. ಸಾಮಾನ್ಯವಾಗಿ ಈ ಶಬ್ದಗಳ ಮುಂದೆ ಅನೆ, ಅಂತ, ಎಂದು ಎಂಬ ಕ್ರಿಯಾರ್ಥಕ ಅನುಕೃತಿ ಪದಗಳು ಸೇರುತ್ತವೆ. ಉದಾ. ಪಟ್ಟನೆ, ಥಟ್ಟನೆ, ಭಗ್ಗನೆ, ಸರಸರನೆ, ಥಟ್ಟಂತ, ಪಟ್ಟಂತ, ಸರ್ರೆಂದು, ಭರ್ರೆಂದು ಮುಂತಾದುವು. ಆಡುನುಡಿಯಲ್ಲಿ ಅ ಕಾರಾಂತವಾಗುವುದುಂಟು ಪಟ್ಟನ್, ಭರನ್, ಸರಸರನ, ಸರ್ರೆಂದು ಮುಂತಾದುವು.

ಅನುಸರ್ಗಾವ್ಯಯಗಳು (ತದ್ದಿತಾಂತಾವ್ಯಯಗಳು)

ಇವು ಪ್ರಯೋಜನ, ಹೋಲಿಕೆ, ಅವಧಿ ಮೊದಲಾದುವನ್ನು ಸೂಚಿಸುವಂತಹವು. ಇವು ಸಾಮಾನ್ಯವಾಗಿ ವಿಭಕ್ತ್ಯಂತ ನಾಮ ಪದಗಳ ಮೇಲೆ ಹತ್ತುತ್ತವೆ. ಅಂತೆ, ಹಾಗೆ, ವೊಲ್, ವೊಲು, ವೋಲು, ವರೆಗೆ, ತನಕ, ಮಟ್ಟಿಗೆ, ಓಸುಗ, ಓಸ್ಕರ, ಇಂತ, ಆಗಿ, ಸಲುವಾಗಿ, ಕೂಡ, ಹೊರತು, ಸಂಗಡ, ಅಲ್ಲದೆ ಮುಂತಾದುವು. ಕಿತ್ತೂರು ಕರ್ನಾಟಕದ ಆಡುನುಡಿಯಲ್ಲಿ ಮಟಾ (ತನಕ), ಅಂಗಾರ್ (ಹಾಗಾದರೆ), ಸಮಂದ್ /ಸಲಮಂದ್ (ಸಲುವಾಗಿ), ಈಸೆ (ಹೊರತು, ಆಗಿ), ಪೂರ್ತೆಕ್ (ಆಗಿ ಮಾತ್ರ), ಅಷ್ಟಕ್ (ಮಟ್ಟಿಗೆ), ಶಿವಾ (ಹೊರತು), ಹಂಗ (ಅಂತೆ, ಹಾಗೆ) ಮುಂತಾದ ಅನುಸರ್ಗಾವ್ಯಯಗಳು ಬಳಕೆಯಾಗುತ್ತವೆ.

ಸಂಬಂಧಕಾವ್ಯಯಗಳು

ಈ ಅವ್ಯಯಗಳು ಎರಡು ಅಥವಾ ಹಲವು ಪದಗಳ, ಪದಪುಂಜಗಳ ಅಥವಾ ವಾಕ್ಯಗಳ ಸಂಬಂಧವನ್ನು ಕಲ್ಪಿಸುತ್ತವೆ. ಉದಾ. ಊ, ಸಂಗಡ, ಅಲ್ಲದೆ, ಆದ್ದರಿಂದ, ಆದುದರಿಂದ, ಇಲ್ಲವೆ, ಇಲ್ಲದೆ, ಮತ್ತು, ಮತ್ತೆ, ಆದರೆ ಬರೆಹದ ಕನ್ನಡದ ‘ಎ’ ಕಾರಾಂತ ಈ ಅವ್ಯಯಗಳು ಕಿತ್ತೂರು ಕರ್ನಾಟಕದ ಕಡೆಗೆ ಅ ಕಾರಾಂತಗಳಾಗಿವೆ. ಅಲ್ಲದ, ಇಲ್ಲದ, ಮತ್, ಆದರ ಮುಂತಾದುವು.

ಭಾವಸೂಚಕಾವ್ಯಯಗಳು

ಇವು ಹರ್ಷ, ದುಃಖ, ಕೋಪ, ಆಶ್ಚರ್ಯ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ, ಸಂಭ್ರಮ, ಸಂಶಯ, ಮೆಚ್ಚುಗೆ ಮುಂತಾದ ಮನೋಭಾವಗಳನ್ನು ವ್ಯಕ್ತಪಡಿಸುವಾಗ ಬಳಕೆಯಾಗುವ ಅರ್ಥವಿಲ್ಲದ ಶಬ್ದಗಳು. ಇವನ್ನು ಹಳೆಯ ವ್ಯಾಕರಣಗಳಲ್ಲಿ ನಿಪಾತಗಳೆಂದೂ, ನಿಪಾತಾವ್ಯಯಗಳೆಂದೂ ಕರೆದಿದ್ದಾರೆ. ಇವು ಬಹುಮಟ್ಟಿಗೆ ಉದ್ಗಾರವಾಚಕಗಳು. ಉದಾ. ಎಲಾ, ಎಲೇ, ಅಯ್ಯೋ, ಅಕ್ಕಟಾ, ಅಕಟಕಟಾ, ಆಹಾ, ಭಲೆ, ಭಲಾ, ಛೆ, ಥೂ, ಅಬ್ಬಾ, ಅಹಹಾ, ಆಹಾ, ಓಹೋ, ಹೋ, ಹೋಹೋ, ಅಃ ಆಃ, ಓ, ಏ, ಚಿ, ಅರೆ, ಅರರೆ, ವಾ, ಹೇ, ವಾರೆವಾ, ಶಭಾಷ್ ಮುಂತಾದುವು. ಹಳಗನ್ನಡದ ಕಾವ್ಯ ಗಳಲ್ಲಿರುವ ಹಳಗನ್ನಡ ವ್ಯಾಕರಣಕಾರರು ಗುರುತಿಸದ ಚೀ ಎಂಬರ್ಥ ಕೊಡುವ ‘ತೆ’ ಎಂಬ ನಿಪಾತಾವ್ಯಯವನ್ನು ಟಿ.ವಿ.ವೆಂಕಟಾಚಲಶಾಸ್ತ್ರೀ ಅವರು ಗುರುತಿಸಿದ್ದಾರೆ.[13]

ಕ್ರಿಯಾರ್ಥಕಾವ್ಯಯಗಳು

ಇವು ವಾಕ್ಯದಲ್ಲಿ ಕ್ರಿಯಾಪದದ ಸ್ಥಾನದಲ್ಲಿದ್ದು, ಕ್ರಿಯೆಯ ಅರ್ಥವನ್ನು ಹೇಳುವ ಅಥವಾ ಪೂರ್ಣಗೊಳಿಸುವ ಶಬ್ದಗಳಾಗಿವೆ. ಉದಾ.ಬೇಕು, ಸಾಕು, ಉಂಟು, ಅಲ್ಲ, ಇಲ್ಲ, ಹೌದು, ಬೇಡ, ಬಹುದು, ಇದೆ, ಐತಿ ಮುಂತಾದುವು.

ಸಂಬೋಧಕಾವ್ಯಯಗಳು

ಕರೆಯುವಾಗ ಉಪಯೋಗಿಸುವ ಶಬ್ಧಗಳು. ಸಂಬೋಧಕಾವ್ಯಯಗಳೆನಿಸುವವು. ಲೇ, ಎಲೋ, ಎಲಾ, ಎಲೇ, ಓ, ಬೇ, ಪೋ, ಮೀ, ಓ ಮುಂತಾದುವು. ಪ್ರಶ್ನಾರ್ಥಕಾ ವ್ಯಯಗಳು ಪ್ರಶ್ನೆ ಮಾಡುವಾಗ ಇವು ಉಪಯೋಗವಾಗುತ್ತವೆ. ಈ ಪದಗಳಲ್ಲಿಯೂ ಎ, ಏ, ಓ, ಆ, ಏನು, ಎಂಬ ಪ್ರತ್ಯಯಗಳು ಪ್ರಶ್ನಾರ್ಥವನ್ನು ಸೂಚಿಸುತ್ತವೆ. ಬಂದನೇ ಮುಂ. ಈ ವಿವಿಧ ಅವ್ಯಯಗಳು ವಾಕ್ಯದಲ್ಲಿ ಉದ್ದೇಶಿತ ಕಾರ‍್ಯಾನುಸಾರವಾಗಿ, ಕೆಲವು ಬದ್ಧವಾಗಿ, ಕೆಲವು ಸ್ವತಂತ್ರವಾಗಿ ಬಳಕೆಯಾಗುತ್ತವೆ.

ರೂಪಭೇದವಿಲ್ಲದ ಕೆಲವು ಅವ್ಯಯಗಳು ಸಂದರ್ಭಾನುಸಾರವಾಗಿ ನಾಮಪದ ಗಳಾಗಿಯೂ ವರ್ತಿಸುತ್ತವೆ. ಉದಾ.‘ತರುವಾಯ’ ಎಂಬ ಸಾಮಾನ್ಯವ್ಯಯ ತರುವಾಯ ದಲ್ಲಿ, ತರುವಾಯದ ಅದರಂತೆ ಇಲ್ಲಿ, ಅಲ್ಲಿ, ಎಲ್ಲಿ, ಸಹ ಹೀಗೆಯೇ. ಅಲ್ಲಿಂದ, ಇಲ್ಲಿಂದ, ಎಲ್ಲಿಯ ಹೀಗೆ ಇರುವ ವಿಭಕ್ತಿ ಸಹಿತ ರೂಪಗಳಲ್ಲಿ ಅದು ವಿದಿತ. ಷಷ್ಠಿಯ ಅ ಕಾರ ಸೇರಿದಾಗ ಈ ರೂಪಗಳು ಗ್ರಾಹ್ಯವಾದುವು. ಹಾಗೆ, ಹೀಗೆ, ಹೇಗೆ, ಆನೆ ಇಂತಹ ಅವ್ಯಯಗಳು ನಾಮಪದಗಳಾಗುವುದಿಲ್ಲ. ನಾಮಪದಗಳಾಗುವ ಅವ್ಯಯಗಳಿಗೆ ಲಿಂಗ ವಚನ ಪ್ರತ್ಯಯಗಳು ಸೇರುವುದಿಲ್ಲವೆಂಬುದು ಗಮನಿಸಬೇಕಾದ ಸಂಗತಿ. ಸಂದರ್ಭಾನುಸಾರವಾಗಿ ಕೆಲವು ಅವ್ಯಯಗಳು ಬೇರೆ ಬೇರೆ ಗುಂಪುಗಳಿಗೆ ಸೇರಬಹುದು. ‘ನೀವು ಹಾಗೆ ನೋಡಬಾರದು’ (ಸಾಮಾನ್ಯವ್ಯಯ) ನೀವು ತಂದೆಯ ಹಾಗೆ ಬಂದೀರಿ. ಇದು ಅನುಸಾಗಾವ್ಯಯ.

ಅನುಸರ್ಗ ಮತ್ತು ಸಂಬಂಧ ಸೂಚಕ ಅವ್ಯಯಗಳು ಯಾವುದಾದರೂ ಪದ ಅಥವಾ ವಾಕ್ಯಕ್ಕೆ ಹೊಂದಿಯೇ ಬರುತ್ತವೆ. ಕೆಲವು ಅನುಸರ್ಗಾವ್ಯಯಗಳು ಚತುರ್ಥೀ ವಿಭಕ್ತಿಯ ಮೇಲೆ (ಇಂತ, ಓಸ್ಕರ, ಆಗಿ) ಇನ್ನು ಕೆಲವು ಷಷ್ಠೀ ವಿಭಕ್ತಿಯ ಮೇಲೆ (ಅಂತೆ, ತನಕ, ಮಟ್ಟಿಗೆ, ವರೆಗೆ, ಹಾಗೆ), ಷಷ್ಠೀ ವಿಭಕ್ತಿಯೊಂದು ಬಿಟ್ಟು ಬೇರೆ ಬೇರೆ ವಿಭಕ್ತಿಗಳ ಮೇಲೆ (ಅಲ್ಲದೆ, ಕೂಡ, ಹೊರತು) ಕೃದಂತಗಳ ಮೇಲೆ (ವರೆಗೆ, ಹಾಗೆ) ಬರುತ್ತವೆ. ‘ಊ’ ಎಂಬ ಸಂಬಂಧ ಸೂಚಕಾವ್ಯಯ ಷಷ್ಠೀ ವಿಭಕ್ತಿ ಮತ್ತು ಕೃದಂತಗಳಿಗೆ ಸೇರುವುದಿಲ್ಲ. ಸಹಾರ್ಥವನ್ನು ಕೊಡುವ ‘ಊ’ (ಕೂಡ, ಸಹ) ಸ್ಥಾನ ಪ್ರಕಾರಾದಿ ಸಾಮಾನ್ಯವ್ಯಯಗಳೇ ನಾಮವಾಚಕಗಳಾಗಿ ಗ್ರಾಹ್ಯವಾದಾಗ ಅವಕ್ಕೆ ಸೇರಬಹು ದಾಗಿದೆ. (ಅತ್ತಲೂ, ಇತ್ತಲೂ, ಹಾಗೂ, ಹೀಗೂ), ಆದರೆ ಊ < ಉ ಆಗಿ ಸೇರುವುದು ಸರಿಯಲ್ಲ. ಅತ್ತಲು, ಇತ್ತಲು, ಹಾಗೂ, ಹೀಗು ಊ < ಉಂ ಎಂದು ಇದಲ್ಲದೆ ಸಹಾರ್ಥ ಶಕ್ಯವಿಲ್ಲ. ಆಗಲಿ, ಇಲ್ಲವೆ ಅಥವಾ ಓ, ಹೋ, ಇವು ‘ಒಂದಲ್ಲದಿದ್ದರೆ ಇನ್ನೊಂದು’ ಎಂಬ ಅರ್ಥದ ಸಲುವಾಗಿ ಬಳಸುವ ಅವ್ಯಯಗಳು. ಆದರೆ, ಆದರೂ ಆ ಮೊದಲು ಹೇಳಿದ ವಿಷಯಕ್ಕೆ ಸಂಶಯವನ್ನೋ, ನಿರಾಕರಣೆಯನ್ನೋ ನಿಷೇಧವನ್ನೋ ಹೇಳುತ್ತವೆ. ಆದ್ದರಿಂದ, ಆದಕಾರಣ ಇವು ಮುಖ್ಯವಾಗಿ ವಾಕ್ಯಗಳಿಗೆ ಸಂಬಂಧವನ್ನು ಕಲ್ಪಿಸುತ್ತವೆ.

ಎರಡು ಪದ, ಪದಪುಂಜ ಅಥವಾ ವಾಕ್ಯಗಳನ್ನು ಕೂಡಿಸಲಿಕ್ಕೆ ‘ಮತ್ತು’ ವಿನ ಬಳಕೆ ಹೊಸಗನ್ನಡದಲ್ಲಿ ಹೆಚ್ಚು. ಆದಷ್ಟು ಅದನ್ನು ಬಳಸದೆ ವಾಕ್ಯ ರಚಿಸುವುದು ಸಾಧುವಾದುದು. ‘ಸಂಗ್ಯಾ ಮತ್ತು ಬಾಳ್ಯಾ’ ಬಂದರು ಸಂಗ್ಯಾ ಬಾಳ್ಯಾ ಬಂದರು. ಒಂದು ವೇಳೆ ‘ಮತ್ತು’ ಎಂಬುದು ಸೇರಿದರೆ ‘ಊ’ ಎಂಬುದನ್ನು ಸೇರಿಸುವುದು ಅನಗತ್ಯವಾಗಿದೆ. ಶಾಲೆಯ ಒಳಗೂ ಮತ್ತು ಹೊರಗೂ ಕಸಬಿದ್ದಿದೆ. ಶಾಲೆಯ ಒಳಗೆ ಮತ್ತು ಹೊರಗೆ ಕಸಬಿದ್ದಿದೆ.

ಕೇಶಿರಾಜನ ಶಾಸ್ತ್ರತ್ವ

‘ಶಬ್ದಮಣಿದರ್ಪಣ’ವು ಕೇಶಿರಾಜನ ಪ್ರತಿಭೆ, ಪಾಂಡಿತ್ಯ, ಪೂರ್ವ ಕಾವ್ಯಗಳ ಅಧ್ಯಯನ ಹಾಗೂ ಸುದೀರ್ಘ ಚಿಂತನೆಯ ಫಲವಾಗಿದೆ. ಇದು ಹಳಗನ್ನಡ ಭಾಷೆಯ ಅವಸ್ಥೆಯನ್ನು ಪ್ರತಿನಿಧಿಸುವ ಕನ್ನಡ ವ್ಯಾಕರಣಗಳಲ್ಲಿ ಅಪೂರ್ವವಾದುದು. ವಿಸ್ತಾರವಾದುದು, ಅಧಿಕೃತವಾದುದು. ಅದರ ಅಗ್ಗಳಿಕೆಯನ್ನು ಸ್ವತಃ ಕೇಶಿರಾಜನೇ ಹೇಳಿಕೊಂಡಿದ್ದಾನೆ. ‘ಸಿರಿಗೀಕ್ಷಿಪ ರಸಚಿತ್ರಂ’, ‘ಸರಸತಿ ಗೆರಡನೆಯ ಬೀಣೆ’ ಇತ್ಯಾದಿ ಕೇಶಿರಾಜನ ಈ ಆತ್ಮಪ್ರತ್ಯಯದ ಮಾತುಗಳೇ ತನ್ನ ಕೃತಿ ‘ಸೂರ್ಯೇಂದ್ರ ಮೇರು ವಾರಿಧಿ ಪರ್ಯಂತಂ ಪರೆದುನಿಲ್ಕೆ ಅನಾಕುಳಂ’ ಎಂದು ಹಾರೈಸಿವೆ. ‘ಶಬ್ದಮಣಿದರ್ಪಣ’ ಹಳಗನ್ನಡದ ರಚನೆಯನ್ನು ಬಿಂಬಿಸುತ್ತಿದ್ದರು ಅವನ ವ್ಯಾಕರಣ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅದು ಹಳಗನ್ನಡ ಮತ್ತು ನಡುಗನ್ನಡ ಸಂಧಿಕಾಲದಲ್ಲಿ ಮೂಡಿಬಂದುದ ರಿಂದ ಆ ಕಾಲದ ಭಾಷೆಯ ಸಂಕ್ರಮಣಾವಸ್ಥೆಯನ್ನು ತೆರೆದು ತೋರಿಸಿದೆ.

ಶಬ್ದಮಣಿದರ್ಪಣದ ೞಱ ಕುಳ ಕ್ಷಳದ ನಿಯಮಗಳು ಹಳಗನ್ನಡಕ್ಕೇ ನಿಂತಿದ್ದರೂ ಅವನ ಶುದ್ದಾಕ್ಷರದ ಕಲ್ಪನೆ, ಪ್ರಾತಿಪದಿಕ ಲಿಂಗ ವಿವೇಚನೆ, ವಿಭಕ್ತಿ ಪಲ್ಲಟ, ವಚನ ಪಲ್ಲಟ, ಧಾತುಕೋಶ ನಿರ್ಮಾಣ, ಅನ್ಯಭಾಷೆಯ ಪದಗಳ ಸ್ವೀಕರಣ ತತ್ವಗಳನ್ನು ತಿಳಿಸುವ ಅಪಭ್ರಂಶ ಪ್ರಕರಣ ಇವು ಯಾವುದೇ ಭಾಷೆಯ ವ್ಯಾಕರಣ ಬೆಳವಣಿಗೆಯನ್ನು ನಿರ್ದೇಶಿಸುವ ತತ್ವಗಳಾಗಿವೆ. ದರ್ಪಣವು ಇತರ ವ್ಯಾಕರಣಗಳಿಗಿಂತ ರಚನೆ, ವಿಷಯ ವಿಭಜನೆ, ವ್ಯಾಕರಣ ಪ್ರಕ್ರಿಯೆ ಹಾಗೂ ಶಬ್ದಕೋಶ ವಿಚಾರದಲ್ಲಿ ಸುಸಂಬದ್ಧವಾಗಿದೆ. ಶಬ್ದ ಪ್ರಾಮಾಣ್ಯದಲ್ಲಿ, ವ್ಯಾಖ್ಯಾನ ಪರಂಪರೆಯಲ್ಲಿ ಇದಕ್ಕೊಂದು ಐತಿಹಾಸಿಕ ಮಹತ್ವ ವಿದೆ. ಅಲ್ಲದೆ ಉಳಿದ ವ್ಯಾಕರಣಗಳಿಗಿಂತ ಹೆಚ್ಚಾಗಿ ಕನ್ನಡ ಜಯಮಾನವನ್ನು ಕಾಣುವಲ್ಲಿ ಯಶಸ್ವಿಯಾಗಿದೆ.

ಕೇಶಿರಾಜನ ಚಾಕ್ಷುಷ ಮತ್ತು ಶ್ರಾವಣ ರೂಪದಿಂದ ಅಕ್ಷರಗಳು ಪ್ರವರ್ತಿಸುವವೆಂಬ ಮಾತಿನಲ್ಲಿ ಗ್ರಂಥಸ್ಥ ಮತ್ತು ವ್ಯಾವಹಾರಿಕ ಭಾಷೆಗಳೆರಡೂ ಅಷ್ಟೇ ಮಹತ್ವವೆಂಬುದನ್ನು ಹೇಳಿದಂತಿದೆ. ಕೇಶಿರಾಜ ಶುಷ್ಕ ವೈಯಾಕರಣಿಯಲ್ಲ. ವ್ಯಾಕರಣ ನಿಯಮಗಳನ್ನು ಹೇಳುವಾಗ ಸಂದರ್ಭಕ್ಕೆ ತಕ್ಕಂತೆ ಸುಂದರವಾದ ಉಪಮೇಯಗಳನ್ನು ಹೇಳಿದ್ದಾನೆ. ‘ಕರು ತಾಯಬಳಿಯನುೞಯದ ತೆರದಂತಿರುವುದು ಸಮಾಸ’, ‘ಮುತ್ತಿನಂತಿರುವುದು ಬಿಂದು’ ಇತ್ಯಾದಿ. ಅವನ ಪ್ರಯೋಗ ಸಂಪತ್ತು ಕನ್ನಡ ವ್ಯಾಕರಣರಲ್ಲೇ ಅತ್ಯಧಿಕವಾದುದು. ಅವನು ಕೊಡುವ ಪ್ರಯೋಗಗಳು ಕೇವಲ ಕಾವ್ಯಾಂಶದ ದೃಷ್ಟಿಯಿಂದ ಮಾತ್ರವಲ್ಲದೆ ಅಂದಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಒಳಗೊಂಡಿವೆ.

ಒಟ್ಟಿನಲ್ಲಿ, ಶಬ್ದಮಣಿದರ್ಪಣದ ಪ್ರಭಾವ ಕನ್ನಡ ವ್ಯಾಕರಣಗಳಲ್ಲೇ ಹಿರಿದು.  ಕೇಶಿರಾಜನ ನಂತರದ ಕೋಶಕಾರರಾದ ಲಿಂಗಮಂತ್ರಿ, ವಿರಕ್ತ ತೋಂಟದಾರ್ಯರ ಶಬ್ದಮಂಜರಿ(ಕೋಶ), ಸೂರ್ಯಕವಿಯ ಕವಿ ಕಂಠಹಾರ ಮುಂತಾದ ಆಧುನಿಕ ಪೂರ್ವ ನಿಘಂಟುಕಾರರಿಗೆ ದರ್ಪಣದ ೞಱ ಕುಳ ಪಟ್ಟಿ ಹಾಗೂ ಧಾತುಕೋಶಗಳು ಆಕರವಾಗಿವೆ. ಭಟ್ಟಾಕಳಂಕ ಹಾಗೂ ಅವನ ನಂತರ ರಚನೆ ಯಾದ ಮಿಶನರಿ ವ್ಯಾಕರಣಗಳಿಗೆ ಮೂಲ ಪ್ರೇರಣೆ ಶಬ್ಧಮಣಿದರ್ಪಣವಾಗಿದೆ. ಆಧುನಿಕ ಪೂರ್ವ ಕನ್ನಡದ ರಚನೆಯನ್ನರಿಯಲು ಹಾಗೂ ಸೂಕ್ಷ್ಮ ಸಂವೇದನೆಯನ್ನು ತಿಳಿದುಕೊಳ್ಳಲು ಶಬ್ದಮಣಿದರ್ಪಣ ಪ್ರಮುಖ ಆಕರವಾಗಿದೆ.

 

 


[1] Bh.Krishnamurthi ‘Telugu Verbal Bases’ (1961) p.58

[2] L.Bloomfield‑Language (1933)p.243

[3] ಪ್ರ.ಗೋ.ಕುಲಕರ್ಣಿ ಕನ್ನಡ ಭಾಷೆಯ ಚರಿತ್ರೆ ೧೯೬೭ ಪು.೨೩೦

[4] ವಾಕ್ಯದಲ್ಲಿ ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಅಥವಾ ಕ್ರಿಯೆಯು ಪೂರ್ಣವಾಗಿರುವುದನ್ನು ತಿಳಿಸುವ ಶಬ್ದವು ಕ್ರಿಯಾಪದ.

[5] ಡಿ.ಎನ್.ಶಂಕರಭಟ್ ‘ಕನ್ನಡ ವಾಕ್ಯಗಳು’ (೧೯೭೮) ಪು.೧೧೨‑೩.

[6] ನಾಮಪ್ರಕೃತಿಗಳಿಗೆ, ಅನುಕರಣವಾಚಕಗಳಿಗೆ ಸಂಸ್ಕೃತದ ಭಾವನಾಮಗಳಿಗೆ ಇಸು, ಪ್ರತ್ಯಯ ಸೇರಿ ಕ್ರಿಯಾ ರೂಪಗಳಾಗುತ್ತವೆ. ಉದಾ. ಸಿಂಗರಿಸು, ಕನ್ನಡಿಸು, ಥಳಥಳಿಸು, ಧಗಧಗಿಸು, ಯತ್ನಿಸು, ಭಾವಿಸು ಮುಂ. ನಾಮಪ್ರಕೃತಿಗಳಿಗೆ ‘ಇಸು’ ಪ್ರತ್ಯಯ ಸೇರಿ ನವೀನಕ್ರಿಯಾ ರೂಪಗಳು ಸೃಷ್ಟಿಯಾಗುತ್ತವೆ.

[7] ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ದಿ ವಿಭಾಗದಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಚರ್ಚೆಯಲ್ಲಿ ೧೯೯೯ ಸೆಪ್ಟೆಂಬರ್ ೧೫, ೨೨, ೨೯ ರಂದು ಡಿ.ಎನ್.ಶಂಕರಭಟ್‌ರ ‘ಕನ್ನಡ ವಾಕ್ಯಗಳು’ ಪುಸ್ತಕದಲ್ಲಿಯ ಕ್ರಿಯಾರ್ಥಕ ವಾಕ್ಯದ ಸ್ವರೂಪದ ಬಗೆಗೆ ಮಾತನಾಡಿದ್ದೆ. ಚರ್ಚೆಯ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ.ಕೆ.ವಿ.ನಾರಾಯಣರು ನನ್ನ ಸಂದೇಹಗಳನ್ನು ನಿವಾರಿಸಿದರು. ಸಹೋದ್ಯೋಗಿ ಮಿತ್ರರು ಚರ್ಚೆಯಲ್ಲಿ ಪಾಲ್ಗೊಂಡು ಭಟ್‌ರ ವಿಚಾರಗಳನ್ನು ಹಂಚಿಕೊಂಡರು. ಭಟ್‌ರು ವರ್ಗೀಕರಿಸಿದ ಕ್ರಿಯಾಪದಗಳ ವಿಭಜನೆಯನ್ನು ವಿಚಾರಮಾಡಿ ಒಪ್ಪಿಕೊಂಡೆ (ಒಪ್ಪಿಕೊಂಡೆವು). ಆ ಮೂರು ದಿನಗಳ ಕಾಲ ನಡೆದ ಚರ್ಚೆಯ ಸಾರವನ್ನು ಇಲ್ಲಿ ಕೊಡಲಾಗಿದೆ.

[8] ಅಮುಖ್ಯ ಘಟಕಗಳ ಬಗೆಗೆ ಹೆಚ್ಚಿನ ವಿವರಣೆಗಾಗಿ ನೋಡಿ. ಡಿ.ಎನ್.ಶಂಕರಭಟ್ ‘ಕನ್ನಡ ವಾಕ್ಯಗಳು’ (೧೯೭೮) ಪು.೪೬ ‑೭.

[9] ಕ್ರಿಯಾರ್ಥಕ ವಾಕ್ಯಗಳಲ್ಲಿಯ ಪ್ರೇರಕ ಘಟಕಗಳು ‘ಇಸು’, ಪ್ರತ್ಯಯ ಯುಕ್ತವಾಗಿರುವಂತಹ ಕ್ರಿಯಾಪದಗಳೊಂದಿಗೆ ಮಾತ್ರ ಅದನ್ನು ಸಾಧಿತ ಕ್ರಿಯಾರೂಪವೆಂದು ಪರಿಗಣಿಸಲಾಗಿದೆ. ಈ ಭಾಗದ ‘ಇಸು ಪ್ರತ್ಯಯ ಕುರಿತು’ ಎಂಬಲ್ಲಿ ಈ ಬಗೆಗೆ ಚರ್ಚಿಸಲಾಗಿದೆ. ಕ್ರಿಯಾರ್ಥಕ ವಾಕ್ಯಗಳಲೆಲ್ಲ ವಿಷಯಸೂಚಕ ಪದ ಇದ್ದೇ ಇರುತ್ತದೆ. ಆದ್ದರಿಂದ ಅದನ್ನಾಧರಿಸಿ ಕ್ರಿಯಾಪದಗಳನ್ನು ವಿಭಜಿಸಲು ಸಾಧ್ಯವಾಗದು.

[10] ಈ ವರ್ಗೀಕರಣದ ಕಡೆಗೆ ನನ್ನ ಗಮನ ಸೆಳೆದವರು ಡಾ.ಕೆ.ವಿ.ನಾರಾಯಣ ಅವರು.

[11] ಕ್ರಿಯಾಪದಗಳು ವಾಕ್ಯಗಳಲ್ಲಿ ಕೆಲಸಕ್ಕೆ ಅನುಗುಣವಾಗಿ ಹಾಗೂ ರೂಪಕ್ಕೆ ಅನುಗುಣವಾಗಿ ಬಳಕೆಯಾಗುತ್ತವೆ. ಈ ಆಧಾರದ ಮೇಲೆ ಕ್ರಿಯಾಪದಗಳನ್ನು ಮೂರು ವಿಭಾಗಗಳನ್ನಾಗಿಸಿ ವಿಂಗಡಿಸಬಹುದು. ಮೂರು ಕಾಲರೂಪಗಳನ್ನೂ ಮತ್ತು ಮೂರು ಅರ್ಥರೂಪಗಳನ್ನೂ ಹೊಂದಿರುವ ಸಂಪೂರ್ಣ ಕ್ರಿಯಾಪದಗಳು ವಾಕ್ಯಗಳ ಅರ್ಥವನ್ನು ಪೂರ್ಣಗೊಳಿಸುತ್ತವೆ. ಆದ್ದರಿಂದಲೇ ಅಂತಹ ಕ್ರಿಯಪದಗಳಿಗೆ (ಸಂಪೂರ್ಣ ಕ್ರಿಯಾಪದಗಳು) ಎಂದು ಹೆಸರು. ಉದಾ. ‘ಪಾರಮ್ಮಳು ಹಾಲನ್ನು ಕುಡಿದಳು’. ಇಲ್ಲಿ ಕುಡಿದಳು ಎಂಬ ಕ್ರಿಯಾಪದ ಭೂತಕಾಲದಲ್ಲಿದೆ. ಮೇಲಿನ ವಾಕ್ಯದ ಅರ್ಥವನ್ನು ಇದು ಪೂರ್ಣಗೊಳಿಸುತ್ತದೆ. ಇದೇ ರೀತಿ ವರ್ತಮಾನ ಹಾಗೂ ಭವಿಷ್ಯತ್ ಕಾಲದಲ್ಲಿ ಬರುವ ಕ್ರಿಯಾಪದಗಳು ವಾಕ್ಯದ ಅರ್ಥವನ್ನು ಪೂರ್ಣಗೊಳಿಸಲು ಬೇರೊಂದು ಪೂರ್ಣ ಕ್ರಿಯಾಪದದ ಸಹಾಯವನ್ನು ಅಪೇಕ್ಷಿಸುತ್ತವೆ. ಅಂತಹ ಕ್ರಿಯಾಪದಗಳಿಗೆ ‘ಸಹಾಯಕ ಕ್ರಿಯಾಪದ’ ಗಳೆಂದು ಹೆಸರು ಉದಾ. ಪಾರಮ್ಮಳು ‘ಕುಣಿಯುತ್ತಾ’ ತವರಿಗೆ ಹೋದಳು ಇಲ್ಲಿ ಕುಣಿಯುತ್ತಾ ಎಂಬುದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸಲು ‘ಹೋದಳು’ ಎಂಬ ಪೂರ್ಣ ಕ್ರಿಯಾಪದದ ನೆರವನ್ನು ಅಪೇಕ್ಷಿಸುತ್ತದೆ. ಇಲ್ಲಿ ‘ಕುಣಿಯುತ್ತಾ’ ಎಂಬುದು ಸಹಾಯಕ ಕ್ರಿಯಾಪದ, ಎರಡು ಅಥವಾ ಹಲವು ಧಾತುಗಳು ಒಟ್ಟು ಸೇರಿ ಆಗುವ ಕ್ರಿಯಾರೂಪಕ್ಕೆ ‘ಸಂಯುಕ್ತ ಕ್ರಿಯಾಪದ’ ಎನ್ನುವರು. ಉದಾ. ಹೋಗುತ್ತಿದ್ದಾನೆ. ನೋಡಬಹುದು, ಕುಡಿಯುತ್ತಿದ್ದೇನೆ, ಬರುತ್ತಿದ್ದಾನೆ. ಮುಂತಾದವುಗಳಲ್ಲಿ ಎರಡು ಬೇರೆ ಬೇರೆ ಕ್ರಿಯಾರೂಪಗಳು ಸಂಯುಕ್ತವಾಗಿರುವದನ್ನು ಗುರುತಿಸಬಹುದು.

* ಅಪಭ್ರಂಶ ಎಂದರೆ ಒಂದು ಶಬ್ದದ ವಿಕೃತ ರೂಪ.

[12] ವಿವರಣೆಗಾಗಿ ನೋಡಿ. ಎಂ.ಚಿದಾನಂದಮೂರ್ತಿ ಕನ್ನಡ ವ್ಯಾಕರಣಕಾರರು ಮತ್ತು ಸ್ವೀಕರಣ ವಿಚಾರ, ವಾಗರ್ಥ ೧೯೮೧ ಪು.೨೩೦

[13] ವಿವರಣೆಗಾಗಿ ನೋಡಿ ಟಿ.ವಿ.ವೆಂಕಟಾಚಲಶಾಸ್ತ್ರೀ ‘ತೆ’ ಎಂಬ ಅವ್ಯಯದ ಕುರಿತು ಶಾಸ್ತ್ರೀಯ ಸಂಪುಟ ೧, ಪು.೪೭ ೪೮