ಸಮಾಸ ಕ್ರಿಯೆಯಲ್ಲಿ ಧ್ವನಿ ಬದಲಾವಣೆ

ಸಮಸ್ತ ಪದಗಳು ನಿರ್ಮಾಣವಾಗುವಾಗ ಪೂರ್ವ ಪದದ ಕೊನೆ, ಉತ್ತರ ಪದದ ಆದಿಯಲ್ಲಿ ಲೋಪ, ಆಗಮ, ಆದೇಶ ಕ್ರಿಯೆಗಳು ನಡೆಯುತ್ತವೆ. ಮೇಲೆ ಹೇಳಿದ ಸಮಾಸ ಕ್ರಿಯೆಯಲ್ಲಿ ನಡೆಯುವ ಧ್ವನಿಬದಲಾವಣೆಗಳನ್ನು ಸೂತ್ರರೂಪದಲ್ಲಿ ಹೇಳಬಹುದು.

೧. ಉತ್ತರ ಪದದ ಆದಿಗೆ ಅಘೋಷ ಸ್ಪರ್ಶ ಬಂದರೆ ಅದು ಸಮಸ್ತ ಪದದಲ್ಲಿ ಘೋಷವರ್ಣವಾಗಿ ಪರಿವರ್ತಿತವಾಗುತ್ತದೆ. (ಕ,ತ,ಪ  > ಗ,ದ,ಬ)

ಕಿರು + ಕೂಸು = ಕಿರುಗೂಸು
ಕೈ + ಕನ್ನಡಿ = ಕೈಗನ್ನಡಿ
ಹುಲಿ + ತೊಗಲು = ಹುಲಿದೊಗಲು
ಹಳ + ಕನ್ನಡ = ಹಳಗನ್ನಡ
ಬಿಡು + ಕಣ್ = ಬಿಡುಗಣ್
ಸುಡು + ಕಾಡು = ಸುಡುಗಾಡು
ಕಣ್ + ಪನಿ = ಕಂಬನಿ

ಈ ನಿಯಮಕ್ಕೆ ಅಪವಾದದ ಸಮಸ್ತ ಪದಗಳು ಕನ್ನಡದಲ್ಲಿವೆ (ಕಿರುಗೆಜ್ಜೆ, ಮುಕ್ಕಣ್ಣ ಮುಂ)

೨. ಪೂರ್ವ ಪದದ ಕೊನೆಯಲ್ಲಿ ‘ಅ’ ಅಥವಾ ‘ಉ’ ಸ್ವರಾಂತ್ಯ ಪದಗಳಿದ್ದು ಉತ್ತರ ಪದದಲ್ಲಿ ಯಾವುದೇ ಸ್ವರವಿದ್ದರೆ ಪೂರ್ವಪದದ ಕೊನೆಯ ಸ್ವರ (ಅ /ಉ) ಲೋಪವಾಗುತ್ತದೆ

ಅವನ + ಊರು = ಅವನೂರು
ಎಲೆಯ + ಮನೆ = ಎಲೆಮನೆ
ಬಯಲು + ಆಟ = ಬಯಲಾಟ
ಬಿಳಿದು + ಕೊಡೆ = ಬೆಳ್ಗೊಡೆ

ಪೂರ್ವ ಪದದ ಕೊನೆಯ ಎ, ಇ ಸ್ವರಗಳ ಮುಂದೆ ಸ್ವರಾದಿ ಪದ ಪರವಾದರೆ ಸಮಸ್ತ ಪದದಲ್ಲಿ ‘ಯ’ ಆಗಮ ವಾಗುತ್ತದೆ (ಮನೆಯಾಳು) ಇಂತಹ ಉದಾಹರಣೆಗಳು ಕನ್ನಡದಲ್ಲಿ ತೀರ ಕಡಿಮೆ.

೩. ಕಡಿದು (>ಕಡು), ನಿಡಿದು (>ನಿಡು) ಮತ್ತು ನಡು ಇವು ಪೂರ್ವ ಪದಗಳಾಗಿದ್ದು ಪರಪದದಲ್ಲಿ ಸ್ವರಾದಿ ಪದಗಳಿದ್ದರೆ ಪೂರ್ವ ಪದಗಳ ‘ಡ’ ಕಾರಕ್ಕೆ ‘ಟ’ ಕಾರಾದೇಶವಾಗುತ್ತದೆ. (ಘೋಷ ‘ಡ’ ಅಘೋಷ ‘ಟ’ ಆಗುತ್ತದೆ). ಕೇಶಿರಾಜನು ಈ ನಿಯಮವನ್ನು ಹೇಳಿದ್ದಾನೆ (ಸೂ.೧೯೨).

ಕಡಿದು > ಕಡು > ಕಟ್ + ಆಳ್ = ಕಟ್ಟಾಳ್
ಕಡಿದು > ಕಡು > ಕಟ್ + ಇರುವೆ = ಕಟ್ಟಿರುವೆ
ನಿಡಿದು > ನಿಡು > ನಿಟ್ + ಉಸಿರು =ನಿಟ್ಟುಸಿರು
ನಿಡಿದು > ನಿಡು > ನಿಟ್ + ಇರ್ಕೆ = ನಿಟ್ಟಿರ್ಕೆ (ಹ.ಗ.ಪ್ರಯೋಗ)
ನಡು > ನಟ್ + ಅಡವಿ = ನಟ್ಟಡವಿ

ಇವುಗಳಿಗೆ ವ್ಯಂಜನಾದಿ ಪದಗಳು ಪರವಾದರೆ ‘ಟ’ ಕಾರಾದೇಶ ವಾಗುವುದಿಲ್ಲ. (ನಡುರಾತ್ರಿ, ನಿಡುದನಿ ಮುಂತಾದುವು).

೪. ‘ಮುಂದೆ’, ‘ಹಿಂದೆ’ ಪದಗಳು ಸಮಸ್ತ ಪದಗಳಾಗುವಾಗ ‘ಮುಂ’ ‘ಹಿಂ’ ಎಂಬ ಆದೇಶ ರೂಪವನ್ನು ಪಡೆಯುತ್ತವೆ.

[1] (ಹೆಚ್ಚಾಗಿ) ಬಹುವ್ರೀಹಿ ಸಮಾಸದಲ್ಲಿ ಈ ಕ್ರಿಯೆ ನಡೆಯುತ್ತದೆ. ಆ ಸಂದರ್ಭದಲ್ಲಿ ಉತ್ತರ ಪದದ ಕೊನೆಯ ವರ್ಣ ಲೋಪವಾಗುತ್ತದೆ.

ಕಾಲ + ಮುಂದು = ಮುಂಗಾಲ
ಕಾಲ + ಹಿಂದು = ಹಿಂಗಾಲ
ತಲೆಯ + ಮುಂದು = ಮುಂದಲೆ
ಮುಂದೆ + ನುಡಿ = ಮುನ್ನುಡಿ

೫. ಪೂರ್ವ ಪದದಲ್ಲಿಯ ತಂಪು, ಕೆಂಪು ಇವು ಕ್ರಮವಾಗಿ ತಂ, ಕಂ ಗಳಾಗಿ, ಬೆನ್ನು -ಬೆನ್, ಕಣ್ಣು-ಕಣ್ ಹಾಗೂ ಬಿಳಿ ಎಂಬುದು ಬೆಳ್, ಬೆಣ್ ಎಂದಾಗಿ ಆದೇಶಗಳಾಗುತ್ತವೆ ಇವುಗಳಿಂದ ನಿಷ್ಪನ್ನವಾದ ಸಮಸ್ತ ಪದಗಳಲ್ಲಿ ಅನುಸ್ವರವು ಆದೇಶವಾಗುತ್ತದೆ.

ತಂಪು > ತಂ + ಗಾಳಿ = ತಂಗಾಳಿ
ಕೆಂಪು > ಕೆಂ + ತಾವರೆ = ಕೆಂದಾವರೆ
ಬೆನ್ನು > ಬೆನ್ + ಪತ್ತು = ಬೆಂಬತ್ತು
ಕಣ್ಣು > ಕಣ್ + ಪನಿ = ಕಂಬನಿ
ಬಿಳಿ > ಬೆಳ್ + ತಿಂಗಳು = ಬೆಳ್ದಿಂಗಳು

ಬೆನ್, ಕಣ್, ಬೆಳ್ ಇವು ಹಳಗನ್ನಡದಲ್ಲಿ ವ್ಯಂಜನಾಂತಗಳಾಗಿದ್ದವು.

೬. ಪೂರ್ವದ ಹಳಗನ್ನಡದ ‘ಪೆರಿ’ ಎಂಬ ರೂಪವು ‘ಪಿರಿ’ ಎಂದಾಗಿ ಹೊಸಗನ್ನಡದಲ್ಲಿ ‘ಹಿರಿ’ ಎಂದಾಯಿತು. ಅದು ಸಮಾಸಕ್ರಿಯೆಯಲ್ಲಿ ಉತ್ತರ ಪದದ  ವ್ಯಂಜನವನ್ನಾಧರಿಸಿ ಹೆಗ್, ಹೆಜ್, ಹೆದ್, ಹೆಬ್ ಎಂದಾದವು  (ಅಘೋಷ ಘೋಷಗಳಾಗುತ್ತವೆ).

ಹಿರಿದು > ಹಿರಿ + ಕಡೆ = ಹೆಗ್ಗಡೆ
ಹಿರಿದು > ಹಿರಿ + ಜೇನು = ಹೆಜ್ಜೇನು
ಹಿರಿದು > ಹಿರಿ + ದಾರಿ = ಹೆದ್ದಾರಿ
ಹಿರಿದು > ಹಿರಿ + ಹಾವು = ಹೆಬ್ಬಾವು

‘ಕರಿ’ ಎಂಬ ಪದವು ಕ,ಗ ಕಾರದ ಮುಂದೆ ‘ಕಗ್’ ಆಗುತ್ತದೆ. ಕರಿ + ಕಲ್ಲು = ಕಗ್ಗಲ್ಲು ಇಂತಹ ಉದಾಹರಣೆಗಳು ಕಡಿಮೆ.

೭. ಕರ್ಮಧಾರೆಯದಲ್ಲಿ ಪೂರ್ವ ಪದವು ಸಂಖ್ಯಾವಾಚಕವಾಗಿದ್ದರೆ ಸಮಸ್ತ ಪದವಾಗುವಾಗ ‘ಒಂದಕ್ಕೆ’ ಒರ್, ‘ಎರಡಕ್ಕೆ’ ಇರ್ ‘ಮೂರ’ ಕ್ಕೆ ಮೂ ಆದೇಶಗಳಾಗುತ್ತವೆ. ಆಗ ಪೂರ್ವಪದದ ಅಂತ್ಯ ‘ಉ’ ಕಾರ ಲೋಪವಾಗುತ್ತದೆ.

ಒಂದು > ಒರ್ + ನುಡಿ = ಒರ್ನುಡಿ
ಎರಡು > ಇರ್ + ಪೆಂಡಿರ್ = ಇರ್ಪೆಂಡಿರ್
ಮೂರು > ಮೂ + ನೂರು = ಮೂನ್ನೂರು

‘ಮೂ’ ಎಂಬ ಆದೇಶ ಬಂದ ಕಡೆಗಳಲ್ಲಿ ಉತ್ತರ ಪದಾದಿ ವ್ಯಂಜನಗಳು ಕ್, ಗ್, ಮ್‌ಗಳಿದ್ದರೆ ಮಧ್ಯದಲ್ಲಿ ದ್ವಿತ್ವಬರುತ್ತದೆ.

ಮೂರು > ಮೂ + ಕುಪ್ಪೆ = ಮುಕ್ಕುಪ್ಪೆ
ಮೂರು > ಮೂ + ಗುಡ್ಡೆ = ಮುಗ್ಗುಡ್ಡೆ
ಮೂರು > ಮೂ + ಮೂರು = ಮುಮ್ಮಾರು

ಪೂರ್ವ ಪದದಲ್ಲಿ ‘ಒಂಬತ್ತು’ ಇದ್ದರೆ ಉತ್ತರ ಪದದಲ್ಲಿ ಪತ್ತು /ಹತ್ತು ಬಂದರೆ ‘ತೊಮ್’ ಆದೇಶವಾಗುತ್ತದೆ. ಒಂಬತ್ತು > ತೊಮ್ + ಹತ್ತು = ತೊಂಬತ್ತು ‘ಹತ್ತಕ್ಕೆ’ ಹನ್, ಹದಿ ಆದೇಶಗಳಾಗಿ ಬರುತ್ತವೆ

ಹತ್ತು > ಹನ್ + ಒಂದು = ಹನ್ನೊಂದು
ಹತ್ತು > ಹದಿ + ಮೂರು = ಹದಿಮೂರು

೮, ಉತ್ತರ ಪದಾದಿ ‘ಸ’ ಕಾರವಿದ್ದರೆ ಸಮಸ್ತಪದ ವಾಗುವಾಗ ‘ಚ’ ಬರುವುದುಂಟು. ಮೂರು > ಮೂ + ಸಂಜೆ = ಮುಚ್ಚಂಜೆ ಪೂರ್ವ ಪದದ ಅಂತ್ಯದಲ್ಲಿ ‘ಳ’ ಕಾರವಿದ್ದು ಸಮಾಸ ಕ್ರಿಯೆಯಲ್ಲಿ ಆ ವ್ಯಂಜನಕ್ಕೆ ದ್ವಿತ್ವ ಉಂಟಾಗುತ್ತದೆ. ಬೆಳ್ಳಿತ್ತು> ಬೆಳ್ + ಆನೆ = ಬೆಳ್ಳಾನೆ.

೯. ‘ಮಹತ್’ ಶಬ್ದ ಪೂರ್ವ ಪದವಾದಾಗ ‘ಮಾ’ ಆದೇಶವಾಗುತ್ತದೆ. ಮಹತ್ > ಮಹಾ (ಮಾ)  + ನವಮಿ = ಮಹಾನವಮಿ. ‘ಒಳ್ಳಿತ್ತು’ಗೆ ‘ಒಳ್’ ಆದೇಶವಾಗುತ್ತದೆ ಒಳ್ಳಿತ್ತು > ಒಳ್ + ನುಡಿ = ಒಳ್ನುಡಿ. ಇಂತಹ ಕ್ರಿಯೆಯಲ್ಲಿ ಪೂರ್ವಪದದ ಉಪಾಂತ್ಯಕ್ಕೆ ಲೋಪ ಉಂಟಾಗುತ್ತದೆ.

೧೦. ಪೂರ್ವಪದದಲ್ಲಿ ‘ಕೆಚ್ಚನೆ’ ಪದವಿದ್ದು ಅದರ ಮುಂದೆ ವ್ಯಂಜನ ಪರವಾದಾಗ ಪೂರ್ವ ಪದಾದಿಯ ‘ಕ’ ಕಾರಕ್ಕೆ ‘ಚ’ ಕಾರಾದೇಶವಾಗುತ್ತದೆ. ಕೆಚ್ಚನೆ > ಚೆಮ್ + ತುಟಿ = ಚೆಂದುಟಿ ಪೂರ್ವಪದದಲ್ಲಿ ‘ಬೆಟ್ಟಿತು’ ‘ಕೊಂಕು’ ಪದಗಳಿದ್ದು ಸಮಾಸವಾಗುವಾಗ ‘ಬಿರು’, ‘ಕುಡು’ ಆದೇಶಗಳಾಗುತ್ತವೆ. ಬೆಟ್ಟಿತು > ಬಿರು + ಗಾಳಿ = ಬಿರುಗಾಳಿ, ಕೊಂಕು > ಕುಡು + ಕೊಲ್ = ಕುಡುಗೋಲ್

೧೧. ವಿಶೇಷಣವನ್ನು ಹೇಳುವಲ್ಲಿ ‘ತುದಿ’, ‘ಮೊದಲ್’ ಗಳ ‘ದ’ ಕಾರಕ್ಕೆ ದ್ವಿತ್ವರೂಪದ ‘ತ’ ಕಾರ ಬರುತ್ತದೆ. ಮೊದಲ್ ಎಂಬುದರ ‘ಲ’ ಕಾರಕ್ಕೆ ಲೋಪ ಉಂಟಾಗುತ್ತದೆ. ತುದಿ + ತುದಿ = ತುತ್ತತುದಿ, ಮೊದಲ್ + ಮೊದಲ್ = ಮೊತ್ತಮೊದಲ.

ಸಾಂಪ್ರದಾಯಕ ವ್ಯಾಕರಣ ಬಲ್ಲವರಿಗೆ  ಇಲ್ಲಿಯ ಸಮಾಸ ವಿಚಾರಗಳು ಬೇರೆಯಾಗಿ ತೋರುವುದು ಸಹಜ. ಕನ್ನಡ ಸಮಸ್ತ ಪದಗಳ ಸ್ವರೂಪವನ್ನು ತಿಳಿಯಬಯಸುವ ಭಾಷಾಭ್ಯಾಸಿಗಳಿಗೆ ಇಲ್ಲಿಯ ಹೊಸ ಅಂಶಗಳು ಸಹಾಯ ಮಾಡುತ್ತವೆ.

ತದ್ದಿತ ರೂಪಗಳು ಮತ್ತು ಶಬ್ದಸೃಷ್ಟಿ

ನಾಮಪದಗಳಿಗೆ ಎರಡು ತರಹದ ಪ್ರತ್ಯಯಗಳು ಸೇರುತ್ತವೆ. ನಾಮವಿಭಕ್ತಿ ಪ್ರತ್ಯಯ ಗಳು ಮತ್ತು ತದ್ದಿತ ಪ್ರತ್ಯಯಗಳು. ನಾಮವಿಭಕ್ತಿ ಪ್ರತ್ಯಯಗಳು ಸೇರಿದವು ‘ನಾಮಪದ’ ಗಳಾಗುವವು. ತದ್ದಿತ ಪ್ರತ್ಯಯಗಳು ಸೇರಿದವುಗಳಿಗೆ ‘ತದ್ದಿತರೂಪ’ಗಳು ಎಂದು ಹೆಸರು. ತದ್ದಿತ ಪ್ರತ್ಯಯಗಳೆಂದರೆ ನಾಮಪ್ರಕೃತಿಗಳ ಮುಂದೆ ನಾಮವಿಭಕ್ತಿ ಪ್ರತ್ಯಯಗಳನ್ನು ಹೊರತುಪಡಿಸಿ ಬರುವ ಪ್ರತ್ಯಯಗಳು. ಕೇಶಿರಾಜ ತದ್ದಿತ ಪ್ರಕರಣದಲ್ಲಿ ಹೇಳಿರುವ ಒಟ್ಟು ತದ್ದಿತ ಪ್ರತ್ಯಯಗಳು ಸಂಖ್ಯೆ ೪೦ಕ್ಕೂ ಮೀರಿವೆ. ಅಂತಹ ಪ್ರತ್ಯಯಗಳನ್ನು ಹತ್ತಿಸಿ ಕೊಂಡ ತದ್ದಿತ ರೂಪಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.

೧. ತದ್ದಿತನಾಮ
೨. ತದ್ದಿತ ವಿಶೇಷಣ
೩. ತದ್ದಿತ ಭಾವನಾಮ
೪. ತದ್ದಿತ ಅವ್ಯಯ

. ತದ್ದಿತ ನಾಮ : ಉದ್ಯೋಗ, ಗುಣ ಶೀಲ, ಸ್ವಭಾವಾದಿ ನಿರ್ದೇಶನವುಳ್ಳ ನಾಮ ಪ್ರಕೃತಿಗಳ ಮುಂದೆ ‘ಗಾರ’ (ಸಾಲಗಾರ, ಬೇಟೆಗಾರ), ‘ಕಾರ’ (ಓಲೆಕಾರ, ಕೂಲಿಕಾರ), ‘ವಂತ’ (ಸಿರಿವಂತ, ಮಡಿವಂತ), ‘ಇಗ’ (ಗಾಣಿಗ, ಲೆಕ್ಕಿಗ), ‘ವಳ’ (ಮಡಿವಳ, ಗೋವಳ), ‘ಆಳಿ’ (ವಾಚಾಳಿ, ಓದಾಳಿ), ‘ಅಡಿಗ’ (ಹೂವಾಡಿಗ/ ಹೂವಡಿಗ ಮುಂತಾದುವು) ಮುಂತಾದ ತದ್ದಿತ ಪ್ರತ್ಯಯಗಳು ನಾಮರೂಪಗಳಿಗೆ ಸೇರಿದರೆ ತದ್ದಿತ ನಾಮ ಗಳೆನಿಸುವವು.

. ತದ್ದಿತ ವಿಶೇಷಣ : ೧. ತದ್ದಿತನಾಮಗಳೇ ವಿಶೇಷಣ ಸ್ಥಾನಾರ್ಥದಲ್ಲಿ ಬಂದಾಗ ಅವು ‘ತದ್ದಿತ ವಿಶೇಷಣ’ ಗಳೆನಿಸುವವು ಉದಾ. ಸಿರಿವಂತ ಈರಪ್ಪ. ೨. ನಾಮ ಪ್ರಕೃತಿಗಳ ಮುಂದೆ ‘ಇತಿ’ (ಕನ್ನಡಿತಿ, ಬೀಗಿತಿ ಮುಂತಾದುವು), ‘ಇತ್ತಿ’ / ಗಿತ್ತಿ (ಒಕ್ಕಲಗಿತ್ತಿ, ಗಾಣಗಿತ್ತಿ ಮುಂತಾದುವು) ‘ಆನೆಯ’ (ಒಂದನೆಯ, ಎರಡನೆಯ) ಮುಂತಾದ ತದ್ದಿತ ಪ್ರತ್ಯಯಗಳು ಸೇರಿದರೆ ತದ್ದಿತ ವಿಶೇಷಣಗಳೆನಿಸುವವು.

. ತದ್ದಿತ ಭಾವನಾಮ : ಜಡ, ಚೇತನಾದಿ ನಾಮ ಪ್ರಕೃತಿಗಳ ಮುಂದೆ ಭಾವವಾಚಕ ತದ್ದಿತ ಪ್ರತ್ಯಯಗಳಾದ ‘ತನ’ (ಜಣತನ, ಬಡಿಗತನ ಮುಂತಾದುವು), ‘ಇಕೆ’ (ಗೌಡಿಕೆ, ಮಡಿವಂತಿಕೆ), ‘ಮೆ’ (ಜಣ್ಮೆ, ಪೆಮ್ಮೆ), ‘ಪು’ (ತಂಪು, ಬಿಳುಪು ಮುಂತಾದ) ಇಂತಹ ತದ್ದಿತ ಪ್ರತ್ಯಯಗಳು ಸೇರಿದರೆ ತದ್ದಿತ ಭಾವನಾಮಗಳಾಗುತ್ತವೆ.

. ತದ್ದಿತ ಅವ್ಯಯ : ಅಲಂಕಾರಾದಿ ನಾಮಪ್ರಕೃತಿಗಳ ಮುಂದೆ ‘ಅಂತೆ’ (ರಾಮನಂತೆ, ಕುದುರೆಯಂತೆ) ‘ಹಾಗೆ’ (ಬರುವಹಾಗೆ, ಹಕ್ಕಿಯ ಹಾಗೆ), ‘ವೋಲ್’ (ರಾಮನವೊಲ್, ಮನೆವೊಲ್) ‘ವರೆಗೆ’ (ಶಾಲೆಯವರೆಗೆ, ಸಂಜೆಯವರೆಗೆ), ‘ತನಕ’ (ಮನೆಯತನಕ, ಸಂಜೆತನಕ) ಮುಂತಾದ ತದ್ದಿತ ಪ್ರತ್ಯಯಗಳು ಸೇರಿದರೆ ತದ್ದಿತ ಅವ್ಯಯಗಳಾಗುತ್ತವೆ.

ಭಾಷೆಯ ಬೆಳವಣಿಗೆಯಲ್ಲಿ ಪ್ರತ್ಯಯಗಳು ವಹಿಸುವ ಪಾತ್ರವನ್ನು ಗಮನಿಸಿದರೆ ಪ್ರತ್ಯಯಗಳಿಂದಲೇ ಭಾಷೆ ಬೆಳೆಯುತ್ತದೆ ಎಂದು ಸಾಮಾನ್ಯವಾಗಿ ಹೇಳಬಹುದು. ಈ ದೃಷ್ಟಿಯಿಂದ ತದ್ದಿತ ಪ್ರತ್ಯಯಗಳಿಗೆ ವಿಶಿಷ್ಟಸ್ಥಾನವಿದೆ. ಕೇಶಿರಾಜ ಹೇಳಿರುವ ನಿಯಮಗಳನ್ನು ಸ್ವಲ್ಪ ಶಿಥಿಲಿಸಿ ನಾವು ಕನ್ನಡಕ್ಕೆ ಅದೆಷ್ಟೋ ಪದಗಳನ್ನು ಅನ್ಯ ಭಾಷೆಗಳಿಂದ ಸ್ವೀಕರಿಸಿ ನಮ್ಮದಾಗಿಸಿಕೊಂಡಿದ್ದೇವೆ. ಅನ್ಯಭಾಷಾ ಸ್ವೀಕರಣ ಪದಗಳಿಗೆ ‘ತನ’, ‘ಗಾರ’ ಪ್ರತ್ಯಯಗಳನ್ನು ಹತ್ತಿಸಿ ಅನೇಕ ಹೊಸಪದಗಳು ಕನ್ನಡದಲ್ಲಿ ಬಳಕೆ ಯಾಗುತ್ತಿವೆ. ಉದಾ. ಕಳಪೆತನ, ದಿಲ್ದಾರತನ, ಉಡಾಫೆತನ, ಜವಾಬ್ದಾರಿತನ, ಬಾಲುಗಾರ, ಡಿಸ್ಕವರಿಗಾರ, ಎಸೆತಗಾರ ಮುಂತಾದುವು. ಗಾರ ಪ್ರತ್ಯಯ ಹತ್ತಿದ ನಂತರ ‘ಇಕೆ’ ಪ್ರತ್ಯಯ ಸೇರಿಸುವ ವಾಡಿಕೆಯೂ ಕಂಡುಬರುತ್ತದೆ. ಉದಾ ಬಾಲುಗಾರಿಕೆ, ಬ್ಯಾಟುಗಾರಿಕೆ ಇಂತಹ ಹೊಸರೂಪಗಳ ಸೃಷ್ಟಿಗೆ ಸಾದೃಶ್ಯ ಸೃಷ್ಟಿ ಕಾರಣವಾಗಿದೆ. ಕೇಶಿರಾಜ ತನ್ನ ಕಾಲದಲ್ಲಿ ಪ್ರಚುರವಾಗಿದ್ದ ತದ್ದಿತ ರೂಪಗಳ ಸ್ವರೂಪವನ್ನು ಹೇಳಿದ್ದಾನೆ. ಆದರೆ ಇಂದು ಆಧುನೀಕರಣದ ಪ್ರಭಾವದಿಂದ ಅವುಗಳ ಪ್ರಕ್ರಿಯೆಯಲ್ಲಿ ಪರಿವರ್ತನೆಗಳಾಗಿವೆ. ಈ ಕುರಿತು ಅಧ್ಯಯನ ನಡೆಯಬೇಕಾಗಿದೆ.

ಕ್ರಿಯಾರ್ಥೋಧಾತು

ಯಾವುದೇ ಭಾಷೆಯ ಸ್ತಿರ ಆಸ್ತಿಯೆಂದರೆ ಅದರ ಕ್ರಿಯಾಪದಗಳು. ಕಾಲ, ದೇಶ, ಪರಿಸರಗಳಲ್ಲಿ ಭಾಷೆ ಎಷ್ಟೇ ವ್ಯತ್ಯಾಸವಾದರೂ ಕೆಲವು ದೇಶೀ ಶಬ್ಧಗಳು ಅದರಲ್ಲಿ ಸ್ಥಿರವಾಗಿರುತ್ತವೆ. ಅವುಗಳನ್ನು ‘ಬೀಜಶಬ್ಧ’ಗಳೆಂದೂ ‘ಬೇರುಶಬ್ದ’ಗಳೆಂದೂ ಕರೆಯುತ್ತಾರೆ. ಇವೇ ಧಾತು ಪದಗಳು. ಧಾತುವಿನ ಲಕ್ಷಣವನ್ನು ಕೇಶಿರಾಜ ಒಂದು ಸೂತ್ರದಲ್ಲಿ ಹೀಗೆ ಹೇಳಿದ್ದಾನೆ.

ಕ್ರಿಯೆಯರ್ಥದ ಮೂಲಂ ಪ್ರ
ತ್ಯಯರಹಿತಂ ಧಾತುವದನಭಾವಕ್ರಿಯೆಯೊ |
ಳ್ನಿಯುತಂ ನಿಶ್ಚಯಿಪುದು ಬುಧ
ಚಯಮಾ ಧಾತುವಿಗೆ ವಿಭಕ್ತಿಯಾಱೌಗಿರ್ಕುಂ ||ಸೂ.೨೨೭||

೧. ಧಾತು ಕ್ರಿಯಾರ್ಥದ ಮೂಲಘಟಕ ೨. ಇದು ಪ್ರತ್ಯಯ ರಹಿತವಾದುದು. ೩.ಅಭಾವಕ್ರಿಯೆ ಎಂದರೆ ನಿಷೇಧಾರ್ಥದಲ್ಲಿ ಇದನ್ನು ಕಂಡುಕೊಳ್ಳಬಹುದು. ೪.ಧಾತುವಿನ ಮೇಲೆ ಹತ್ತುವ (ಆಖ್ಯಾತ) ಪ್ರತ್ಯಯಗಳು ಆರು. ಎಂಬುದು ಈ ಸೂತ್ರದ ಅರ್ಥ.

ಹಳಗನ್ನಡ ಕಾವ್ಯಗಳಲ್ಲಿ ಬಳಕೆಯಾದ ನೂರಾರು ಧಾತುಗಳನ್ನು ಕೇಶಿರಾಜ ಧಾತು ಪ್ರಕರಣದಲ್ಲಿ ಕಲೆಹಾಕಿದ್ದಾನೆ.[2]  ಅವನು ಬಹುಶಃ ಪಾಣಿನಿಯ ಪದ್ಧತಿಯನ್ನು ಅನುಸರಿಸಿ ತನ್ನ ವ್ಯಾಕರಣದಲ್ಲಿ ಧಾತುಪಾಠವನ್ನು ಪ್ರತ್ಯೇಕ ಪ್ರಕರಣವಾಗಿ ಸೇರಿಸಿದಂತೆ ಕಾಣುತ್ತದೆ. ಕೇಶಿರಾಜನು ಕನ್ನಡ ಧಾತುಗಳ ಅರ್ಥವನ್ನು ಸಂಸ್ಕೃತದಲ್ಲಿ ಕೊಟ್ಟಿರುವುದು ಏಕೆ ಎಂಬ ಪ್ರಶ್ನೆ ಏಳುತ್ತದೆ. ಬಹುಶಃ ಸಂಸ್ಕೃತ ಬಲ್ಲ ಕನ್ನಡದ ವಿದ್ವಾಂಸರಿಗೆ, ಕವಿಗಳಿಗೆ ಕನ್ನಡ ಧಾತುಗಳ ಅರ್ಥವನ್ನು ತಿಳಿಸಿಕೊಡಬೇಕೆಂಬುದು ಅವನ ಉದ್ದೇಶ ವಾಗಿದ್ದಂತೆ ಕಾಣುತ್ತದೆ. ಅಲ್ಲದೆ, ಎಷ್ಟೋ ಸಂದರ್ಭಗಳಲ್ಲಿ ಕನ್ನಡ ಶಬ್ಧಗಳಿಗೆ ಸಂಕ್ಷೇಪವಾಗಿ ಕನ್ನಡದಲ್ಲಿಯೇ ಅರ್ಥವಿವರಣೆ ನೀಡುವ ಕಷ್ಟವೂ ಅವನನ್ನು ಬಾಧಿಸಿರಬೇಕು.[3]

ಕೇಶಿರಾಜನ ಧಾತುಪಾಠ ಕನ್ನಡ ಕೋಶದ ಅಧ್ಯಯನ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾಗಿದೆ. ಅವನು ಕೊಟ್ಟ ಧಾತುಗಳ ಪಟ್ಟಿ ಪ್ರಮಾಣಪೂರ್ವಕವಾದುದು. ಈ ಬಗೆಗೆ ಅವನು ಅಧಿಕಾರವಾಣಿಯಿಂದ ಹೀಗೆ ಹೇಳಿದ್ದಾನೆ.

ವೇದಸಮನಾಗಿ ಭೀಮನಿ
ನಾದುದು ಸಂಸ್ಕೃತದ ಧಾತುವಾತೆಱದಿಂದಂ |
ಯಾದವ ಕಟಕಾಚಾರ್ಯನಿಂ
ದಾದುದು ಕರ್ಣಾಟ ಧಾತು ಕವಿಕೇಶವನಿಂ ||ಸೂ.೨೬೪||

ಸಂಸ್ಕೃತದಲ್ಲಿ ಧಾತು ಸಂಗ್ರಹಕಾರ್ಯವನ್ನು ವೇದ ಪ್ರಮಾಣವಾಗಿ ಭೀಮನು ಮಾಡಿದಂತೆ ಕನ್ನಡ ಧಾತುಗಳನ್ನು ತಾನು ಸಂಗ್ರಹಿಸಿದೆನೆಂದು ಅವನ ಅಭಿಪ್ರಾಯ.[4] ಪ್ರಾಚೀನ ಕಾವ್ಯ ಸಾಹಿತ್ಯದಿಂದ ಧಾತುಗಳನ್ನು ಆಯ್ಕೆಮಾಡುವಲ್ಲಿ, ಧಾತುಗಳ ಅರ್ಥ ನಿರ್ಣಯಿಸುವಲ್ಲಿ ಅವನ ಪಾಂಡಿತ್ಯ, ಪರಿಶ್ರಮಗಳನ್ನು ಯಾರೂ ಮೆಚ್ಚಿಕೊಳ್ಳಬೇಕು. ಕನ್ನಡ ಧಾತುಗಳ ವೈಲಕ್ಷಣ್ಯಗಳನ್ನು ಕೇಶಿರಾಜ ಹೀಗೆ ಗುರುತಿಸಿದ್ದಾನೆ.

ದೊರೆವಡೆದ ಮಹಾಪ್ರಾಣಾ
ಕ್ಷರಾಂತದಿಂ ಙಞಶಷಾಂತ ಹಾಂತಕ್ಷಾಂತೋ |
ದ್ಧರಣದಿನುದ್ಭವಿಸವು ಬ
ಲ್ಲರ ಮತದಿಂ ಧಾತು ತಿಳಿವುದವನೀ ಕ್ರಮದಿಂ ||ಸೂ.೨೬೫||

ಧಾತುಪಾಠದ ಪರಿಶೀಲನೆ ಹಾಗೂ ಈ ಸೂತ್ರದ ವಿಶ್ಲೇಷಣೆಯಿಂದ ಕನ್ನಡ ಧಾತುಗಳ ಕೆಲವು ವೈಲಕ್ಷಣಗಳನ್ನು ಹೀಗೆ ಗಮನಿಸಬಹುದು.

೧ ಈ, ಓ ಎಂಬಿವು ಎರಡನೇ ಸ್ವರಧಾತುಗಳು

೨ ಮಹಾಪ್ರಾಣಾಕ್ಷರಗಳು, ಙ, ಞ, ಶ, ಷ, ಹ, ಕ್ಷಗಳು ಅಂತ್ಯದಲ್ಲಿರುವ ಧಾತುಗಳು ಕನ್ನಡದಲ್ಲಿ ಇಲ್ಲ. ಅವನ ಕಾಲದಲ್ಲಿಯೇ ಮಹಾಪ್ರಾಣಗಳು ಕನ್ನಡ ವರ್ಣಮಾಲೆಯಲ್ಲಿ ದ್ದವು. ಒಂದು ಸೂತ್ರದಲ್ಲಿ “ಒಳವು ಮಹಾಪ್ರಾಣಂಗಳ್….” (ಸೂ,೨೫) ಎಂದಿದ್ದಾನೆ. ಕನ್ನಡ ವರ್ಣಮಾಲೆಯಲ್ಲಿ ಮಹಾಪ್ರಾಣಗಳಿರುವುದು ಮಹಾಪ್ರಾಣಯುಕ್ತ ಕನ್ನಡವೆನಿಸಿದ ಪದಗಳಿರುವುದು ಇದು ಕೇಶಿರಾಜನ ಗಮನಕ್ಕೆ ಬಂದುದರಿಂದ. ಈ ಕಾರಣಕ್ಕಾಗಿಯೇ ವರ್ಣಮಾಲೆಯಲ್ಲಿ ಅವು ಇದ್ದರೂ ಧಾತ್ವಂತ್ಯದಲ್ಲಿಲ್ಲ. ಹಾಗೆಯೇ ಭಾಷಾಶಾಸ್ತ್ರಜ್ಞರು ಅನುನಾಸಿಕಗಳಲ್ಲಿ ಙ, ಞ ಗಳನ್ನು ತೆಗೆದುಹಾಕಿದ್ದಾರೆ. ಕೇಶಿರಾಜನೂ ಒಂದು ಬಗೆಯಲ್ಲಿ ಅವು ಕನ್ನಡಕ್ಕೆ ಸೇರದಿದ್ದರೂ ಅನುಸ್ವರವು ಅದನ್ನು ಪೂರೈಸುವುದೆಂದು ಸೂಚಿಸುತ್ತಾನೆ. ‘ಶ’, ‘ಷ’ಗಳೆಂಬ ಉಷ್ಮಗಳು ಕನ್ನಡಕ್ಕೆ ಸಹಜವಾದವುಗಳಲ್ಲ, ಕನ್ನಡದ ಯಾವ ಶಬ್ದಗಳಲ್ಲಿಯೂ ಅವುಗಳಿಗೆ ಅಸ್ತಿತ್ವವಿಲ್ಲ. ‘ಹ’ ಕಾರವು ಕನ್ನಡದಲ್ಲಿ ಕಾಲಾಂತರದಲ್ಲಿ ಸೇರಿದುದೆಂದು ಕೇಶಿರಾಜನಿಗೂ ಗೊತ್ತಿದೆ. ಹಾಗೆಂದು ಅದನ್ನು ಕಳೆಯುವುದಕ್ಕೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ಅವನ ಕಾಲಕ್ಕೆ ಬಂದಿತು. ವರ್ಣಮಾಲೆಯಲ್ಲಿ ಅದು ಇತ್ತು. ಧಾತುಗಳಲ್ಲಿ ‘ಹ’ ಕಾರಾಂತವಾದ ಧಾತುವಿಲ್ಲ. ಕ್ಷಾಂತವಾದ ಧಾತುಗಳೂ ಇಲ್ಲವೆಂದು ಹೇಳುವುದರಿಂದ ವರ್ಣಮಾಲೆಯಲ್ಲಿ ‘ಕ್ಷ’ ಎಂಬ ಸಂಯುಕ್ತ ವರ್ಣವನ್ನು ಆ ಕಾಲದಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತೆಂದು ನಿರ್ಧರಿಸಬಹುದು. ಇದನ್ನು ಗಮನಿಸಿದಾಗ ಕೇಶಿರಾಜನಿಗೆ ಕನ್ನಡ ಭಾಷೆಯ ಜಯಮಾನ ಚೆನ್ನಾಗಿ ಗೊತ್ತಿತ್ತು.

೩. ಸಾಂತಯುಕ್ತ ಧಾತುಗಳು, ಅಚ್ಚಕನ್ನಡದಲ್ಲಿದೆ, ಸಂಸ್ಕೃತ ಕೃದಂತಗಳು ಸ್ವಯಂಕರ್ತೃಕಾರ್ಥದಲ್ಲಿ ‘ಇಸು’ ಪ್ರತ್ಯಯವನ್ನು ಹೊಂದಿ ಧಾತುವಾದ ಶಬ್ದಗಳು (ಪೂಜಿಸು, ರಕ್ಷಿಸು ಇತ್ಯಾದಿ) ಸ್ವಯಂ ಕರ್ತೃಕಾರ್ಥ ಮತ್ತು ಹೇತು ಕರ್ತೃಕಾರ್ಥಗಳಲ್ಲಿ ‘ಇಸು’  ಪ್ರತ್ಯಯವನ್ನು ಹೊಂದಿ ಪ್ರಯೋಗವಾಗುವ ಕನ್ನಡ ಧಾತುಗಳು (ಅಕ್ಕುಳಿಸು, ಕಿನಿಸು, ಹನಿಸು ಇತ್ಯಾದಿ) ‘ಇಸು’ ಪ್ರತ್ಯಯವನ್ನು ಹೊಂದಿ ಭಿನ್ನ ಕರ್ತೃಕಾರ್ಥದಲ್ಲಿ ಪ್ರಯೋಗವಾಗುವ ಕನ್ನಡ ಧಾತುಗಳು (ಆಡಿಸು, ಪಾಡಿಸು, ಮಾಡಿಸು ಇತ್ಯಾದಿ) ಇವುಗಳನ್ನು ಬೇರೆ ಬೇರೆಯಾಗಿ ಕೊಟ್ಟಿರುವುದು ಒಂದು ವಿಶೇಷ (ಇಸು ಪ್ರತ್ಯಯದ ಬಗೆಗೆ ಇದೇ ಬಾಗದಲ್ಲಿ ಮುಂದೆ ಚರ್ಚಿಸಲಾಗಿದೆ).

 


[1] ಡಿ.ಎನ್.ಶಂಕರಭಟ್‌ರು ‘ಮುಂದಲೆ’, ‘ಹಿಂಗಾಲು’ ಇವುಗಳಲ್ಲಿಯ ‘ಮುಂ’, ‘ಹಿಂ’ ಇವು ಪೂರ್ವ ಪ್ರತ್ಯಯಗಳೆಂದು ‘ಮುಂದಲೆ’ ‘ಹಿಂಗಾಲು’ ಇವು ಪ್ರತ್ಯಯುಕ್ತ ಪದಗಳಲ್ಲದೆ ಸಮಸ್ತ ಪದಗಳಲ್ಲವೆಂದು ಬರೆಯುತ್ತಾರೆ (ಕನ್ನಡ ಶಬ್ದರಚನೆ ೧೯೯೯, ಪು.೯೩). ಅದೇ ಕೃತಿಯಲ್ಲಿ ‘ಮುಂದೆ’, ‘ಹಿಂದೆ’ ಇವು ಸಮಸ್ತ ಪದಗಳಾಗುವಾಗ ‘ಮುಂ’, ‘ಹಿಂ’ ಎಂಬ ಸಂಕ್ಷಿಪ್ತ ರೂಪ ಪಡೆಯುತ್ತವೆಂದು ಹೇಳುತ್ತಾರೆ (ಪು.೧೩೨). ಇದನ್ನು ಗಮನಿಸಿದರೆ ಭಟ್‌ರಲ್ಲಿಯೇ ದ್ವಂದ್ವಗಳಿವೆಂಬುದು ಸ್ಪಷ್ಟವಾಗುತ್ತದೆ. ವಾಸ್ತವವಾಗಿ ಕನ್ನಡದಲ್ಲಿ ಪೂರ್ವ ಪ್ರತ್ಯಯಗಳಿಲ್ಲ. ‘ಮುಂದು’, ‘ಹಿಂದು’ ಇವು ಸಮಾಸವಾಗುವಾಗ ‘ಮುಂ’, ‘ಹಿಂ’ ಎಂಬ ಆದೇಶ ರೂಪ ತಾಳುತ್ತವೆಯೇ ವಿನಃ ಭಟ್‌ರು ಹೇಳಿದ ಹಾಗೆ ಅವು ಪೂರ್ವ ಪ್ರತ್ಯಯಗಳೂ ಅಲ್ಲ ಸಂಕ್ಷಿಪ್ತ ರೂಪಗಳೂ ಅಲ್ಲ. ಶಂಕರಭಟ್‌ರು ಹೆಚ್ಚಾಗಿ ಊಹೆ ಮಾಡುತ್ತಾರೆ. ವಿನಃ ನಿರ್ಣಯಕ್ಕೆ ಬರುವುದಿಲ್ಲ ಆಧುನಿಕ ಪೂರ್ವ ಕನ್ನಡದ ರಚನೆ, ಅಲ್ಲಿಯ ಧ್ವನಿಬದಲಾವಣೆ, ವಿಭಿನ್ನ ಭಾಷಾಪ್ರಭೇದಗಳ ರಚನೆ ಇವುಗಳ ಬಗ್ಗೆ ಸಂದೇಹ ಮೂಡಿಸುತ್ತ ಪರಿಶೀಲಿಸಿದ್ದರೆ ಕನ್ನಡದ ನಿಯಮಗಳನ್ನು ಖಚಿತವಾಗಿ ನಿರೂಪಿಸಿಬಹುದಿತ್ತು. ಭಟ್‌ರ ಊಹೆಗಳು ಹೆಚ್ಚೆಂದರೆ ಕನ್ನಡದ ರಚನೆಯ ಶೋಧದಲ್ಲಿ ಒಂದು ಪ್ರಮೇಯದ (Hypothesis) ಮಟ್ಟಕ್ಕೆ ನಿಲ್ಲುತ್ತವೆ. ಈ ರೀತಿ ‘ಕಂಡುಬರಬಹುದು /ಗುರುತಿಸಬಹುದು’ ಎಂಬ ಸಂದೇಹದ ಮಾತುಗಳು ಅವರ ಬರಹಗಳ ಉದ್ದಕ್ಕೂ ಕಂಡುಬರುತ್ತವೆ. ಅವರ ವಿಗ್ರಹದ ವಾಕ್ಯಗಳು ತೃಪ್ತಿಕರವಾಗಿಲ್ಲ (ಹಿರಿ + ಜೇನು = ಹೆಜ್ಜೇನು). ಹಿರಿದು > ಹಿರಿ + ಜೇನು = ಹೆಜ್ಜೇನು. ‘ಹಿರಿದು’ ಎಂಬುದರ ಆದೇಶ ರೂಪವಾಗಿ ‘ಹಿರಿ’ ಬಂದಿದೆ. ವ್ಯಾಕರಣದಲ್ಲಿ ನಿಯಮಗಳ ಮೂಲಕ ಉದಾಹರಣೆಗಳು ಉದಾಹರಣೆಗಳ ಮೂಲಕ ನಿಯಮಗಳು ಪೋಷಿತವಾದಾಗ ನಿರ್ಣಯವೆನಿಸಿಕೊಳ್ಳುತ್ತವೆ ಅಪವಾದಗಳಿದ್ದರೆ ಅದಕ್ಕೆ ಕಾರಣವೆನಿರಬಹುದು ಎಂಬ ಪ್ರಶ್ನೆ ಹಾಕಿಕೊಂಡರೆ ಅವುಗಳಿಗೂ ನಿಯಮ ಇದ್ದೇ ಇರುತ್ತದೆಂಬುದನ್ನು ಆ ಕ್ಷೇತ್ರದ ಸಂಶೋಧಕರು ಬಲ್ಲರು. ಭಟ್‌ರ ನಿರೂಪಣೆಯ ಶೈಲಿ ತುಂಬ ಗೋಜಲಾಗಿದೆ. ವ್ಯಾಕರಣಾದಿ ಶಾಸ್ತ್ರ ವಿಷಯಗಳ ನಿರೂಪಣೆ ಸರಳ, ನೇರ ಮತ್ತು ಸ್ಪಷ್ಟವಾಗಿರಬೇಕು.

[2] ಕಿಟ್ಟೆಲ್ ಆವೃತ್ತಿಯಲ್ಲಿ ಧಾತುಗಳ ಸಂಖ್ಯೆ ೯೬೮, ಡಿ.ಎಲ್.ಎನ್. ಆವೃತ್ತಿಯಲ್ಲಿ ೯೮೫, ಲಿಂಗಣಾರಾಧ್ಯನ ವೃತ್ತಿಸಹಿತವಾದ ಮದರಾಸು ಆವತ್ತಿಯಲ್ಲಿ ೯೯೨, ಡಿ.ಕೆ.ಭೀಮಸೇನರಾವ ಆವೃತ್ತಿಯಲ್ಲಿ ೯೮೮.

[3] ಎಂ.ವಿ.ಸೀತಾರಾಮಯ್ಯ. ಪ್ರಾಚೀನ ಕನ್ನಡ ವ್ಯಾಕರಣಗಳು (೧೯೮೮) (ಪು.೨೨೯).

[4] (ಸಂಸ್ಕೃತ ಲಾಕ್ಷಣಿಕ) ಭೀಮ ಯಾರು? ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗೆಗೆ ವಿದ್ವಾಂಸರಲ್ಲಿ ಅಭಿಪ್ರಾಯಭೇದಗಳಿವೆ.