ಶಬ್ದಮಣಿದರ್ಪಣವು ಹೆಚ್ಚಿನ ಪರಿಷ್ಕರಣೆಗೆ ಮತ್ತು ವಿಮರ್ಶೆಗೆ ಗುರಿಯಾಗಿರುವುದು ಅದರ ವಿದ್ವಜ್ಜನ  ಪ್ರೀತಿಗೆ  ಸಾಕ್ಷಿ.  ಜೆ.ಗ್ಯಾರೆಟ್  ಮೊದಲುಗೊಂಡು  (೧೮೬೮) ಟಿ.ವಿ. ವೆಂಕಟಾಚಲಶಾಸ್ತ್ರೀ ಅವರವರೆಗೆ (೧೯೯೪) ಹಲವು ವಿದ್ವಾಂಸರು ಟೀಕು, ವೃತ್ತಿ, ಪ್ರಯೋಗ ಗಳಿಗೆ ಅನುಗುಣವಾಗಿ ಸಂಪಾದಿಸಿ ಪ್ರಕಟಿಸಿದ್ದಾರೆ. ದರ್ಪಣದ ಸೂತ್ರಗಳನ್ನು ಅರ್ಥಾನು ಗತವಾಗಿ ವಿಂಗಡಿಸಿ, ಹೊಸಗನ್ನಡದಲ್ಲಿ ವೃತ್ತಿಯನ್ನು ಬರೆಯಬೇಕೆಂದು ನನ್ನನ್ನು ಒತ್ತಾಯ ಪಡಿಸಿ ಪ್ರೋನನ್ನ ಪ್ರಾಧ್ಯಾಪಕರಾದ ಡಾ.ಕೆ.ವಿ.ನಾರಾಯಣ  ಮತ್ತು ಪ್ರೊ.ಎ.ವಿ.ನಾವಡ ಅವರು. ಸಂಪಾದನೆಯ ಸಮಯದಲ್ಲಿ ಬೆಲೆಯುಳ್ಳ ಸಲಹೆಗಳು ಅವರಿಂದ ನನಗೆ ಬಂದಿವೆ. ಸೂತ್ರಗಳ ಅರ್ಥಾನುಗತ ವಿಂಗಡಣೆಯಲ್ಲಿ ಗೆಳೆಯರಾದ ಡಾ.ಮಾಧವ ಪೆರಾಜೆ ಅವರು ನೆರವಾಗಿದ್ದಾರೆ. ಅವರಿಗೆ ನನ್ನ ಹಾರ್ದಿಕವಾದ ಕೃತಜ್ಞತೆಗಳು. ಹಸ್ತಪ್ರತಿ ಯನ್ನು  ಪರಿಶೀಲಿಸಿ  ಉಪಯುಕ್ತ  ಸಲಹೆ  ಸೂಚನೆಗಳನ್ನು  ನೀಡಿದ  ಹಿರಿಯರಾದ ಡಾ.ಸಂಗಮೇಶ ಸವದತ್ತಿಮಠ ಅವರನ್ನು ಸಂತೋಷದಿಂದ ಸ್ಮರಿಸುತ್ತೇನೆ.

ಶಬ್ದಮಣಿದರ್ಪಣದ ವ್ಯಾಸಂಗದಲ್ಲಿ ವ್ಯಾಕರಣದ ವಿದ್ಯಾರ್ಥಿ ಎದುರಿಸಬೇಕಾದ ಮೊದಲ ತೊಂದರೆ ಎಂದರೆ ಸೂತ್ರಗಳ ಜಟಿಲತೆ, ಪ್ರಯೋಗಗಳ ಗೊಂದಲ. ಸೂತ್ರದ ಅರ್ಥವನ್ನು ಕೇಶಿರಾಜ ವೃತ್ತಿಯಲ್ಲಿ ಹೇಳಿದ್ದಾನೆ. ಅದು ಸಹಿತ ಹಳಗನ್ನಡ. ಹೀಗೆ ಸೂತ್ರ, ವೃತ್ತಿಗಳಲ್ಲಿಯ ಗೊಂದಲಗಳನ್ನು ನಿವಾರಿಸುವ ರೀತಿಯಲ್ಲಿ ಸೂತ್ರವನ್ನು ಅರ್ಥಾನುಸಾರಿ ಯಾಗಿ ಒಡೆದು ಸೂತ್ರಕ್ಕೆ ತಕ್ಕಷ್ಟು ವೃತ್ತಿಯನ್ನು ಹೊಸಗನ್ನಡದಲ್ಲಿ ಕೊಡಲಾಗಿದೆ, ಈ ಆವೃತ್ತಿಯಲ್ಲಿ. ಇದರಿಂದ ಅಧ್ಯಯನಕಾರರಿಗೆ ಹಳಗನ್ನಡದ ಭಾಷೆಯ ಸ್ವರೂಪ ಸ್ಪಷ್ಟ ವಾಗುತ್ತದೆ. ಇದು ಈ ಆವೃತ್ತಿಯ ಹೊಸತನವೆಂದೇ ಹೇಳಬಹುದು. ಮಹತ್ವದ ವ್ಯಾಕರಣ ಸಮಸ್ಯೆಗಳನ್ನು ಆಧುನಿಕ ಭಾಷಾ ಶಾಸ್ತ್ರದ ಬೆಳಕಿನಲ್ಲಿ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ. ‘ವ್ಯಾಕರಣ ಪರಿಭಾಷೆ’ಯನ್ನು ಅನುಬಂಧದಲ್ಲಿ ಕೊಡಲಾಗಿದೆ.

ಪ್ರಸ್ತುತ ಸಂಪಾದನೆಯಲ್ಲಿ ಸಾಂಪ್ರದಾಯಕ ಛಂದೋವಿನ್ಯಾಸವನ್ನು ಕೈಬಿಟ್ಟು ಅರ್ಥ ಪಂಕ್ತಿ ಬದ್ದವಾಗಿ ವಿನ್ಯಾಸ ಕೊಡಲಾಗಿದೆ. ಹೀಗೆ ಮಾಡುವಲ್ಲಿ ಅರ್ಥದ ಅಭಿವ್ಯಕ್ತಿಗೂ ಸಂಧಿಯನ್ನು ಬಿಡಿಸಿಯಾದರೂ ಮಿಕ್ಕಂತೆ ಮೂಲ ಪಾಠವನ್ನು ಅದೇ ಅನುಪೂರ್ವಿಯಲ್ಲಿ ಚಾಚೂ ತಪ್ಪದೆ ಕೊಟ್ಟಿದೆ.

ಪಾದ ಛಂದೋಬದ್ಧ :
ಗುಣಮಮರೆ ಶಬ್ದಮಣಿದ
ರ್ಪಣನಾಮಮ ನಿಟ್ಟುನೆಱೆಯೆ ಕರ್ಣಾಟಕಲ
ಕ್ಷಣ ಶಬ್ದಶಾಸ್ತ್ರ ಮಂಲಾ
ಕ್ಷಣಿಕರ್ ಪೇೞೆಂದು ಬೆಸೆಸೆ ಬಗೆವುಗೆ ಪೇೞ್ವೆಂ

ಅನಿಬದ್ಧ :
ಗುಣಂ ಅಮರೆ
ಶಬ್ದಮಣಿದರ್ಪಣ ನಾಮಮಂ
ಇಟ್ಟುನೆಱೆಯ ಕರ್ಣಾಟಕ ಲಕ್ಷಣ
ಶಬ್ದಶಾಸ್ತ್ರಮಂ
ಲಾಕ್ಷಣಿಕರ್ ಪೇೞ್ ಎಂದು
ಬೆಸೆಸೆ ಬಗೆವುಗೆ ಪೇೞ್ವೆಂ

(ಶಬ್ದಶಾಸ್ತ್ರವೆಂಬ) ಗುಣವು ಹೊಂದಿಕೊಳ್ಳುವಂತೆ ಶಬ್ದಮಣಿದರ್ಪಣವೆಂಬ ಹೆಸರನ್ನಿಟ್ಟು ಕನ್ನಡ ಶಬ್ದಶಾಸ್ತ್ರವನ್ನು ಪರಿಪೂರ್ಣವಾಗಿ ನಿರೂಪಿಸು ಎಂದು ಲಾಕ್ಷಣಿಕರು ಆಜ್ಞಾಪಿಸಲಾಗಿ ಮನಂಬುಗುಬುವಂತೆ ಹೇಳುತ್ತೇನೆ. ಹೀಗೆ ಪಾದಬದ್ದವಾದ ಗ್ರಂಥವನ್ನು ಅರ್ಥ ಪಂಕ್ತಿಬದ್ಧ ವಾಗಿ ಕೊಟ್ಟಿರುವುದರಿಂದ ಹಳಗನ್ನಡದ ಈ ವ್ಯಾಕರಣವು ವಿದ್ವಾಂಸರಿ ಗಲ್ಲದೆ ವಿದ್ಯಾರ್ಥಿಗಳು, ಆಸಕ್ತರು ಸುಲಭವಾಗಿ ಓದಿ ಕನ್ನಡ ಭಾಷೆಯ ರಚನೆಯನ್ನು ತಿಳಿದುಕೊಳ್ಳಲು ಈ ಆವೃತ್ತಿಯ ನೆರವಾಗುತ್ತದೆಯೆಂದು ಭಾವಿಸುತ್ತೇನೆ.

ನನ್ನ  ಅಧ್ಯಯನಕ್ಕೆ  ಸ್ಫೂರ್ತಿ, ಪ್ರೇರಣೆಯಾಗಿರುವ  ಶ್ರೇಷ್ಠ  ವಿದ್ವಾಂಸ ಡಾ.ಎಂ.ಚಿದಾನಂದಮೂರ್ತಿ ಅವರನ್ನು ಸ್ಮರಿಸುವುದು ನನಗೆ ಪ್ರೀತಿಯೂ ಗೌರವದ ವಿಷಯವೂ ಆಗಿದೆ. ನನ್ನ ಅಧ್ಯಯನಕ್ಕೆ ಬಹುದೊಡ್ಡ ಶಕ್ತಿಯಾಗಿರುವ ಸಂಶೋಧನೆಯ ಆ ಕುಲಗುರುವಿನ ನೆನೆಪಾದಾಗಲೆಲ್ಲ ಕೃತಜ್ಞತೆಯಿಂದ ಕರಗಿ ಹೋಗುತ್ತೇವೆ. ಆ ಶ್ರೇಷ್ಠ ವಿದ್ವಾಂಸನ ಪಾದ ನನ್ನ ತಲೆಯ ಮೇಲಿರಲೆಂದು ಹೇಳಿ ತೃಪ್ತಿ ಪಟ್ಟುಕೊಳ್ಳುತ್ತೇನೆ.

ಕೃತಿಯನ್ನು ಪ್ರಕಟಿಸಲು ಒಪ್ಪಿಗೆಯಿತ್ತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರಿಗೆ, ಕುಲಸಚಿವರಾದ ಡಾ.ಕರೀಗೌಡ ಬೀಚನಹಳ್ಳಿ ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಪ್ರಸಾರಾಂಗದ ನಿರ್ದೇಶಕರಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರಿಗೆ, ವಿಭಾಗದ ಮುಖ್ಯಸ್ಥರಾದ ಡಾ.ಎಫ್.ಟಿ.ಹಳ್ಳಿಕೇರಿ  ಅವರಿಗೆ,  ಪುಸ್ತಕವಿನ್ಯಾಸದಲ್ಲಿ  ನೆರವು  ನೀಡಿದ  ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಹೊದಿಕೆ ಚಿತ್ರವನ್ನು ಬರೆದುಕೊಟ್ಟ ಶ್ರೀ ಕೆ.ಕೆ.ಮಕಾಳಿ ಅವರಿಗೆ ಸುಂದರವಾಗಿ ಅಕ್ಷರ ಸಂಯೋಜನೆ ಮಾಡಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀ ವೈ.ಎಂ.ಶರಣಬಸವ ಅವರಿಗೆ ನಾನು ತುಂಬು ಹೃದಯದಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ಡಾ. ಎಸ್.ಎಸ್. ಅಂಗಡಿ