೫೩
ಕಾರಂ ಇರಿರೆ
ಪದಮಧ್ಯಂ ವಿಷಯಂ ಆಗೆ
ಅನೇಕಾಕ್ಷರದೊಳ್
ಪುದಿಯೆ ಲಘು ಉಪಧೆ,
ಕೆಲಕೆಲವು ಒದವಿರ್ಕುಂ
ರಾಂತ ಳಾಂತಂ ಅವು ಶಿಥಿಲತೆಯಂ

ಅನೇಕಾಕ್ಷರಗಳಿಂದ ಕೂಡಿದ್ದು, ಲಘು ಉಪಧೆಯಾದ ರ ಕಾರ ಅಥವಾ ಳ ಕಾರಾಂತವಾದ ಪದಗಳಿಗೆ ಗ, ದ, ವ, ಜ ಕಾರಗಳಿಂದ ಆದಿಯಾದ ಪದಗಳು ಪದವಾದಾಗ ಸಮಾಸಮಧ್ಯದಲ್ಲಿ ಶಿಥಿಲದ್ವಿತ್ವವುಂಟಾಗುತ್ತದೆ.

ರಾಂತಕ್ಕೆ :
ಕುಳಿರ್ + ಗಾಳಿ = ಕುಳಿರ್ಗಾಳಿ
ಬೆಮರ್ + ಪನಿ = ಬೆಮರ್ವನಿ
ಕದಿರ್ + ಜೊನ್ನಂ = ಕದಿರ್ಜೊನ್ನಂ

ಳಾಂತಕ್ಕೆ :
ಮುಗಳ್ + ಕಾಯ್ = ಮುಗುಳ್ಗಾಯ್
ಅಮಳ್ + ತೊಂಗಲ್ = ಅಮಳ್ದೊಂಗಲ್
ಎಸಳ್ + ಪದೆ = ಎಸಳ್ವಸೆ
ಅಮಳ್ + ಜಂತ್ರಂ = ಅಮಳ್ಜಂತ್ರಂ

೫೪
ಪುಗೆ , ದಪ, ಕಾರಂ,
ವಿಧಿಯ ಗೆ ಕಾರಂ,
ವರ್ತಮಾನಕಾಲದ ಗುಂ,
ಧಾತುವಿಗೆ ಱೞಕುಳ ರೇಫಾಂತ
ಒಗೆ ಗುಂ, ಶಿಥಿಲತ್ವಂ
ಅಗುರುಪೂರ್ವಸ್ಥಿತಿಯಿಂ

ಹ್ರಸ್ವಾದಿಗಳಾದ ಱೞ, ಕುಳ ರೇಫಾಂತ ಧಾತುಗಳಿಗೆ ಭೂತಕಾಲದ ‘ದ’ ಪ್ರತ್ಯಯ ವರ್ತಮಾನ ಕಾಲದ ‘ದಪ’ ಪ್ರತ್ಯಯ, ಭವಿಷ್ಯತ್ತಿನ ‘ವ’ ಪ್ರತ್ಯಯ ಪ್ರಥಮ ಪುರುಷ ವಿದ್ಯರ್ಥ ಪ್ರತ್ಯಯ ‘ಗೆ’ ಹಾಗೂ ಪ್ರಥಮ ಪುರುಷ ವರ್ತಮಾನ ಭವಿಷ್ಯತ್ತಿನ ಪ್ರತ್ಯಯವಾದ ‘ಗುಂ’ ಎಂಬುದು ಪರವಾದರೂ ಶಿಥಿಲದ್ವಿತ್ವ ಉಂಟಾಗುತ್ತದೆ.

ಱೞಾಂತಕ್ಕೆ :
ತೆಗೆೞ್ + ದ + ಅಂ = ತೆಗೆೞ್ದಂ,
ತೆಗೆೞ್ದಪಂ, ತೆಗೆೞ್ವಂ, ತೆಗೆೞ, ತೆಗೞ್ಗುಂ

ಕುಳಾಂತಕ್ಕೆ :
ಮುಗುಳ್ + ದ + ಅಂ = ಮುಗುಳ್ದಂ,
ಮುಗುಳ್ದಪಂ, ಮುಗುಳ್ವಂ, ಮುಗುಳ್ಗೆ, ಮುಗಳ್ಗುಂ

ರೇಫಾಂತಕ್ಕೆ :
ತೊಡರ್ + ದ + ಅಂ = ತೊಡರ್ದಂ,
ತೊಡರ್ದಪಂ, ತೊಡರ್ವಂ, ತೊಡರ್ಗೆ, ತೊಡರ್ಗುಂ, ತಳರ್ದುಂ
ತಳರ್ + ದ + ಅಂ = ತಳರ್ದುಂ,
ತಳದರ್ಪಂ, ತಳರ್ವಂ, ತಳರ್ಗೆ, ತಳರ್ಗುಂ

೫೫
ಬರ್ದಿಲಂ ಸಗ್ಗಕ್ಕೆ ಪೆಸರ್,
ಗರ್ದುಗೆ ಎಸೆವ ಅಮರ್ದಂ ಅರ್ದುವಳ್ಳಿ
ಕಂಪು ಅಲರ್ದುದು ಎನಲ್ಕೆ
ಎರ್ದೆವಾಯ್, ಅದಿರ್ಮುತ್ತೆ
ಪೊದಳ್ದ ಎರ್ದೆ ಎಂಬಿವು
ಸಹಜ ಶಿಥಿಲವೃತ್ತಿಯಂ ಆಳ್ಗುಂ

ಬರ್ದಿಲ (ಸ್ವರ್ಗ) ಗರ್ದುಗೆ, ಅಮರ್ದು, ಅಮರ್ದುವಳ್ಳಿ, ಅಲರ್ದುದು, ಎರ್ದೆಯಾಯ್, ಅದಿರ್ಮುತ್ತೆ, ಎರ್ದೆ ಎಂಬಿವು ಸಹಜ ಶಿಥಿಲದ್ವಿತ್ವಗಳಾಗಿವೆ.

೫೬
ನರವುಂ, ನೆರವುಂ ದೇವರ ಬರವುಂ
ತೆರವುಂ ನೆಗೞಯ ಎೞ್ತರವುಂ;
ಸಂಚರಿಸುವ ನೊಳವುಂ
ತಾಂ ಅರೆಬರ್,
ಮತದಿಂದೆ ಅಂತ್ಯ ವರ್ಣ
ಲೋಪಮುಂ ಆಳ್ಗುಂ

ನರವು, ನೆರವು, ಬರವು, ತೆರವು, ಎೞ್ತರವು, ನೊಳವು ಎಂಬಿವುಗಳ ಅಂತ್ಯವರ್ಣಕ್ಕೆ ಲೋಪವು ಬಂದು ಅವು ನರ, ನೆರ, ಬರ, ತೆರ, ಎೞ್ತರ, ನೊಳ ಎಂಬ ರೂಪಗಳಾಗುತ್ತವೆ.

ನರವು > ನರ
ನೆರವು > ನೆರ
ಬರವು > ಬರ
ತೆರವು > ತೆರ
ಎೞ್ತರವು > ಎೞ್ತರ
ನೊಳವು > ನೊಳ

೫೭
ಪುದಿಗುಂ ನಿರ್ಧಾರಣದ
ಅಲ್ಲದೆ ಎಂಬದೆಕಾರದ ಎಡೆಗೆ
ಪಿರಿದುಂ ಲೋಪಂ, ಪುದಿಯದು
ಲೋಪಂ ಪ್ರತಿಷೇಧ ದೊಳ್
ಅಲ್ಲದು ಎಂಬ ಪದಂ
ಅಲ್ತೆ ಎನಲ್ ಅಕ್ಕುಂ

ನಿರ್ಧಾರಣಾರ್ಥವನ್ನು ಸೂಚಿಸುವ ‘ಅಲ್ಲದೆ’ ಎಂಬ ಶಬ್ದದ ‘ದೆ’ ಕಾರಕ್ಕೆ ವಿಕಲ್ಪವಾಗಿ ಲೋಪ ಉಂಟಾಗುತ್ತದೆ. ಪ್ರತಿನಿಷೇದಾರ್ಥವನ್ನು ಸೂಚಿಸುವ ‘ಅಲ್ಲದು’ ಎಂಬ ಶಬ್ದದ ‘ದು’ ಕಾರಕ್ಕೆ ಲೋಪ ಮಾಡಿ ‘ಅಲ್ಲ’ ಎಂದು ಹೇಳಬಾರದು ‘ಅಲ್ಲದು’ ಎಂಬುದರ ‘ದು’ ಕಾರಕ್ಕೆ ಲೋಪವಿಲ್ಲ. ಆದರೆ ಅಲ್ಲದು ಎಂಬುದನ್ನು ‘ಅಲ್ತು’ ಎಂದು ವಿಕಲ್ಪವಾಗಿ ಹೇಳಬಹುದು. ಇದಕ್ಕೆ ಲಿಂಗ ವ್ಯವಸ್ಥೆಯಿಲ್ಲ. ಅಂದರೆ ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಮೂರರಲ್ಲಿಯೂ ‘ಅಲ್ತು’ ಎಂದೇ ಪ್ರಯೋಗಿಸಲ್ಪಡುತ್ತದೆ.

ದೆ ಕಾರ ಲೋಪಕ್ಕೆ : ಗೊರವನಲ್ಲದೆ ಪೊಗೞಂ > ಗೊರವನಲ್ಲ ಪೊಗೞಂ
ಅಲ್ತು ಎಂಬುದಕ್ಕೆ (ಲಿಂಗತ್ರಯ) : ಅವನಲ್ತು, ಅವಳಲ್ತು, ಅದಲ್ತು
(ವಚನತ್ರಯ) : ಒರ್ವನೆಗಂಡನಲ್ತೆ ಜಗತೀತಳದೊಳ್
ಆ ಇರ್ವರೆ ತೋಳ್ಗಳಲ್ತೆ ನೃಪತಿಗೆ ರಣದೊಳ್
ತೇಜೋ ನಿಧಿ ಕವಿನಿಳಯದೊಳೀಷತ್ಪ್ರಭರ್ ಮಹಾಪ್ರಭಲ್ತೇ

೫೮
, , , , , , ,
ವರ್ಣ ಉತ್ಕರಮೆ ವಲಂ;
ಪದದ ಕಡೆಯೊಳ್ ಅಸ್ವರವಿಧಿಯಂ
ಪಿರಿದುಂ ತಾಳ್ದುಗುಂ;
ಇವಂ ಅಱೆವರೆ ಕನ್ನಡ ಕಬ್ಬದೊಳ್
ತೊಡಂಕದೆ ಸಲ್ವರ್

ಯ, ರ, ಲ, ನ, ಳ, ಱ ಮತ್ತು ೞ ವರ್ಣಗಳು ಪಾದಾಂತ್ಯದಲ್ಲಿ ಬಂದಾಗ ಸಹಜ ವ್ಯಂಜನ ರೂಪದಲ್ಲಿಯೇ ಬರುತ್ತವೆ. ಇದನ್ನು ಗಮನಿಸಿದಾಗ ಕೇಶಿರಾಜನ ಕಾಲಕ್ಕಾಗಲೇ ವ್ಯಂಜನಾಂತ ಶಬ್ದಗಳು ಸ್ವರಾಂತಗಳಾಗುತ್ತಿದ್ದುದು ಕಂಡುಬರುತ್ತದೆ.

ಯ ಕಾರಕ್ಕೆ : ಕೆಯ್, ಮೆಯ್, ಬಯ್, ಕೊಯ್, ಪಾಯ್
ರೇಫೆಗೆ : ನಾರ್, ಬೇರ್, ತೇರ್, ಬೆಮರ್, ಉಸಿರ್
ಲ ಕಾರಕ್ಕೆ : ಪಾಲ್, ಕೇಲ್, ನೂಲ್, ಬಿಲ್, ಕವಲ್
ಣ ಕಾರಕ್ಕೆ : ಪವಣ್, ನಾಣ್, ಜಣ್, ಮಾಣ್, ಕಣ್
ನ ಕಾರಕ್ಕೆ : ಪೊನ್, ಬೆನ್, ಸೀನ್, ಈನ್, ಮಿನ್
ಳ ಕಾರಕ್ಕೆ : ಮಿದುಳ್, ಕುರುಳ್, ತಿರುಳ್, ಕರುಳ್
ಱ ಕಾರಕ್ಕೆ : ಏಱ, ಬಸಿಱ, ಪೆಸಱ, ಕೆಸಱ
ೞ ಕಾರಕ್ಕೆ : ಬೀೞ್, ಬಾೞ್, ತೇೞ್, ಆಗುೞ್

೫೯
ಎರಡು ಪಲವುಂ ವರ್ಣಂ
ಪರಸ್ಪರಂ ಕೂಡುವಂದಂ ಅದು
ಸಂಧಿವಲಂ;
ಸ್ವರರಹಿತ ವ್ಯಂಜನಂ
ಅವು ಪರವರ್ಣಮಂ, ಎಯ್ದುತಿರ್ಪವು
ಸಂಹಿತೆಯೊಳ್

ಎರಡು ಇಲ್ಲವೆ ಹಲವು ಅಕ್ಷರಗಳು ಅನ್ಯೋನ್ಯವಾಗಿ ಕೂಡುವುದು ಸಂಧಿ ಎನಿಸುತ್ತದೆ. ಸಂಧಿ ಎಂದರೆ ಕೂಡುವಿಕೆ. ಎರಡು ವರ್ಣಗಳು ಕಾಲ ವಿಳಂಬನವಿಲ್ಲದೆ ಒಂದಾದ ಮೇಲೊಂದು ಉಚ್ಚರಿಸುವುದಕ್ಕೆ ಸಂಧಿ ಎಂದು ಹೆಸರು. ಸಂಧಿ ಕ್ರಿಯೆಯಲ್ಲಿ ಸ್ವರರಹಿತ ವ್ಯಂಜನಗಳು ಮುಂದಿನ ಅಕ್ಷರದೊಂದಿಗೆ ಸೇರಿಕೊಳ್ಳುತ್ತವೆ.

ಸ್ವರಯುಕ್ತ ವ್ಯಂಜನಕ್ಕೆ :
ಕೂರ್ತು + ಈವಂ = ಕೂರ್ತೀವಂ
ಎನ್ನ + ಅರಸಂ = ಎನ್ನರಸಂ

ಸ್ವರರಹಿತ ವ್ಯಂಜನಕ್ಕೆ :
ಜಣ್ + ಉಂಟು = ಜಣುಂಟು
ಕುರುಳ್ + ಕೊಂಕಾಯ್ತು = ಕುರುಳ್ಕೊಂಕಾಯ್ತು

ಸಂಧಿ ಕ್ರಿಯೆಯಲ್ಲಿ ಪರಸ್ಪರ ವರ್ಣಗಳು ಕೊಡುವಾಗ ಯಾವುದಾದರೊಂದು ಸಂಧಿಕಾರ್ಯ ನಡೆಯುವುದು, ಅಂದರೆ ಒಂದು ವರ್ಣ ಬಿಟ್ಟು ಹೋಗಬಹುದು ಇಲ್ಲವೇ ಒಂದು ವರ್ಣ ಹೊಸದಾಗಿ ಬರಬಹುದು ಇಲ್ಲವೆ ಒಂದು ವರ್ಣಕ್ಕೆ ಬದಲಾಗಿ ಮತ್ತೊಂದು ವರ್ಣಬರಬಹುದು. ಇದನ್ನು ಕ್ರಮವಾಗಿ ಲೋಪ, ಆಗಮ, ಆದೇಶಗಳೆಂದು ಕರೆಯುತ್ತಾರೆ.

೬೦
ಪದಮಧ್ಯಂ, ಪದದ ಅಂತ್ಯಂ
ವಿದಗ್ದರಿಂ ಸಂಧಿ ವಿಷಯಂ
ಎರಡು ಅಕ್ಕುಂ ಇಳಾ ವಿದಿತಂ;
ಪ್ರಕೃತಿ ಪ್ರತ್ಯಯಂ
ಒದವಿದ ಪದಯುಗದ, ಬೆರಕೆ ಬೇಡಿ ಇರ್ದುದಱಂ

ಪಂಡಿತರ ಮತದಂತೆ ಪ್ರಕೃತಿ ಮತ್ತು ಪ್ರತ್ಯಯಗಳು ಸೇರಿ ಆಗುವ ಸಂಧಿಯು ಪದಮಧ್ಯಸಂಧಿ ಎನಿಸುವುದು. ಪೂರ್ವಪದದ ಅಂತ್ಯ ಅಕ್ಷರ ಹಾಗೂ ಉತ್ತರ ಪದದ ಆದಿಯ ಅಕ್ಷರ ಸೇರಿ ಆಗುವ ಸಂಧಿ ಪದಾಂತ್ಯಸಂಧಿ ಎನಿಸುವುದು.

ಪದಮಧ್ಯಸಂಧಿ (ನಾಮವಿಭಕ್ತಿ) :
ಮಾತು +  ಇಮ್ = ಮಾತಿಂ
ಮಾತು +  ಇಂಗೆ = ಮಾತಿಂಗೆ
ಮಾತು +  ಇನ = ಮಾತಿನ
ಮಾತಿನ +  ಒಳ್ = ಮಾತಿನೊಳ್

ಅಖ್ಯಾತ ವಿಭಕ್ತಿ :
ನುಡಿದ +  ಅಮ್ = ನುಡಿದಂ
ನುಡಿದ +  ಅರ್ = ನುಡಿದರ್
ನುಡಿದ +  ಇರ್ = ಮಡಿದಿರ್

ಪದಾಂತ್ಯ ಸಂಧಿಗೆ  (ನಾಮರೂಪ) :
ಅವನ + ಆಳ್ತನಂ = ಅವನಾಳ್ತನಂ
ಕಾಮನ + ಅಂಡಲೆ = ಕಾಮನಂಡಲೆ

ಕ್ರಿಯಾಪದ :
ನುಡಿದರ್ + ಅವರ್ = ನುಡಿದರವರ್
ಬೆಸಸಿದೆವು + ಒಳ್ಪಂ = ಬೆಸಸಿದೆವೊಳ್ಪಂ

ಪದಮಧ್ಯ ಸಂಧಿಯಲ್ಲಿ ಪ್ರಕೃತಿ, ಪ್ರತ್ಯಯಗಳಿದ್ದರೆ, ಪದಾಂತ್ಯ ಸಂಧಿಯಲ್ಲಿ ಪೂರ್ವೋತ್ತರ ಪದಗಳು ಸ್ವತಂತ್ರ ಪದರೂಪಗಳಾಗಿರುತ್ತವೆ.

೬೧
ಇದು ಪೂರ್ವ ಪ್ರಕರಣಂ
ಇಂತು ಇದಱೊಳ್
ಸಾಕಲ್ಯಸಂಜ್ಞೆ
ಪೇೞ್ದುವು ಎನಲ್ ಬೇಡ ;
ಉದಿತ ಪ್ರಕರಣ ಗಣ
ಸೂತ್ರದ ಇಷ್ಟದಿಂ
ಸಂಜ್ಞೆಯೊಡನೆ ಪೇೞಲ್ಪಡೆಗುಂ

ಇದು ಪೂರ್ವ ಪ್ರಕರಣ. ಇದರಲ್ಲಿ ಎಲ್ಲ ಸಂಜ್ಞೆಗಳನ್ನು ಹೇಳಿರುವುದಾಗಿ  ತಿಳಿಯ ಬಾರದು. ಮುಂಬರುವ ಪ್ರಕರಣಗಳಲ್ಲಿ ಆಯಾಸೂತ್ರಕ್ಕೆ ಅನುಗುಣವಾಗಿ ಅವುಗಳನ್ನು ಸೂಚ್ಯವಾಗಿ ಹೇಳಲಾಗುತ್ತದೆ.

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ
ಕೇಶಿರಾಜನಿಂದ ವಿರಚಿತವಾದ ಶಬ್ದಮಣಿದರ್ಪಣದ ಒಂದನೆಯ
ಪ್ರಕರಣವಾದಸಂಜ್ಞೆ ಪ್ರಕರಣಮುಗಿಯಿತು.