ನಾಲ್ಕರ್ಥಕ್ಕೆ

೧೭೭. ಉೞುದುದೆಂದು, ಬಿಟ್ಟುದುಂ ಜೀವಿಸಿದುದಂ ಲಾಭಮಾದುದು ಮಕ್ಕುಂ ಇವಱೊಳ್ ಱೞಂ, ಅಡಂಗಿದುದಱೊಳಂ ಬಡಿಗಿಯ ಕಳ್ಳನ ಬೇಂಟೆಯ ಉಳಿಯೊಳಂ ಕುಳಂ. ಸ್ಥಾನವ್ಯಕ್ತಿಯಂ ಪೇಡೆ ಉೞಿ, ಪೆಱವುೞಿಯೆಂಬ ವ್ಯಯಂ ಱೞಂ.

೧೭೮. ಕೀೞೆಂದು, ದೊರೆಯಿಲ್ಲದ ಭಂಗಾ ರಮಂ ತುರುಗ ಮುಖದ ಲೋಹಮಂ ಕ್ಷೀಣಕುಲನಂ ಕೆಳಗುಮಕ್ಕುಂ

೧೭೯. ಪೞಿಯೆಂದು, ವಸ್ತ್ರ ವಿಶೇಷಮಂ ದೂಷಣಮುಂ, ನಾಯಂ ಸೋವುವುದುಂ ಲೋಹದ ಘಟ್ಟಿಯಮಕ್ಕುಂ

೧೮೦. ಸುಱಯೆಂದು ಕೆಲಸಗಳ್ಳಂ ಮೊದಲಾದುದಲ್ಲದೆ (ಸಂ. ೧೭೬) ಜಲಾವರ್ತಮು ಮಕ್ಕುಂ

ಐದರ್ಥಕ್ಕೆ

೧೮೧. ಬಱ್ಱಯೆಂದು, ಬಟ್ಟೆಯಂ ವಂಶಮುಂ ಕರೆವನುಂ ಲೇಪಿಸುವುದು ಪಿಂಗಲಿಯ ಬೞಿಗೊರಲುಮುಕ್ಕಂ ಮತ್ತೆಂಬ  ಪೂರಕಬದೞಿ ಅವ್ಯಯಮಾಗಿ ಱೞಂ. ಇವು ಪ್ರಯೋಗದೃಷ್ಠಂಗಳಿವಱೊಳ್ ಸಂಶಯವಿಲ್ಲ.

ಈ ಸೂತ್ರದಲ್ಲಿ ಕೇಶಿರಾಜನು ಮಹಾಕವಿಗಳ ಕಾವ್ಯಗಳಿಂದ ಱೞಯುಕ್ತವಾದ ೧೮೧ ಶಬ್ದಗಳನ್ನು ಸಂಗ್ರಹಿಸಿದ್ದಾನೆ. ಹೀಗೆ ಪಟ್ಟಿ ಮಾಡಿರುವುದರಲ್ಲಿ ಅವನ ಉದ್ದೇಶವು ಕನ್ನಡದಲ್ಲಿ ಹೇಗಾದರೂ ಮಾಡಿ ಱೞವನ್ನು ಉಳಿಸಿಕೊಳ್ಳಬೇಕೆಂಬುದೇ ಆಗಿದೆ. ಕೇಶಿರಾಜನು ಮಹಾ ಪಂಡಿತನೆಂಬುದಕ್ಕೆ ಕೆಲವು ನಿದರ್ಶನಗಳನ್ನಿಲ್ಲಿ ಕೊಡಬಹುದು. ೧೫೨ರಲ್ಲಿ ‘ನೆಱಲ್’ ಎಂಬ ಪದವನ್ನು ಕೊಟ್ಟು ಅದಕ್ಕೆ ‘ಅತಪತ್ರಾದಿ ಛಾಯೆ’ ಮತ್ತು ‘ಜಳದರ್ಪಣ ಪ್ರತಿಬಿಂಬ’ ಎಂಬ ಎರಡರ್ಥವನ್ನು ಕೊಟ್ಟಿದ್ದಾನೆ. ಮತ್ತೆ ೧೭೧ರಲ್ಲಿ ಅದೇ ಪದವನ್ನು ಕೊಟ್ಟು ಹಿಂದೆ ಪೇೞ್ದುದಲ್ಲದೆ ಒಂದು ಮರಮನುಕ್ಕುಂ ಎಂದೂ ಕೊಟ್ಟಿದ್ದಾನೆ. ಇಲ್ಲಿ ಈತನ ಸ್ಮರಣಶಕ್ತಿಯನ್ನು ಗಮನಿಸಬಹುದಾದರೂ ಆತ ೧೭೧ನ್ನು ಉಳಿಸಿಕೊಂಡು ೧೫೨ನ್ನು ಕೈಬಿಡಬಹುದಿತ್ತು. ಹೀಗೆಯೇ ಸುೞು ಎಂಬುವನ್ನು (೧೬೨, ೧೭೬, ೧೮೦) ಎರಡರ್ಥ, ಮೂರರ್ಥ, ನಾಲ್ಕರ್ಥಕ್ಕೆ ಉದಾಹರಣೆಯಾಗಿ ಮೂರು ಕಡೆ ಕೊಟ್ಟಿದ್ದಾನೆ.

ಕೆಲವೆಡೆ ಉಪಯುಕ್ತವಾದ ವಿಷಯಗಳನ್ನು ಸೂಚಿಸಿದ್ದಾನೆ. ಉದಾಹರಣೆಗೆ ಕೊೞಲ್ (೪೦) ಇಲ್ಲಿ ಱೞ. ಇದರ ಅರ್ಥ ‘ವೇಣು’ (ಒಂದು ವಾದ್ಯ ವಿಶೇಷ) ‘ಕೊಳಲ್’ ಇಲ್ಲಿ ಕುಳ. ‘ಕೊಂಡುಕೊಳ್ಳಲು’ ಇಂದು ಕ್ರಿಯಾಪದ. ಎೞ (೧೩೫) ಎಂಬುದಕ್ಕೆ ನೂಲಿನ ಎೞ, ಬರಸೆಳೆ, ಭೂಮಿ ಎಂದು ಮೂರು ಅರ್ಥಗಳಿವೆ. ಭೂಮಿ ಎಂಬರ್ಥದಲ್ಲಿ ‘ಎಳೆ’ ಎಂದು ಕುಳವಾಗುತ್ತದೆ ಎಂದಿದ್ದಾನೆ. ಆದರೆ ಧಾತು ಪಾಠದಲ್ಲಿ ಇದೇ ಶಬ್ಧವನ್ನು ಕೊಟ್ಟು ಭೂವಾಚಕದಲ್ಲಿ ‘ಕ್ಷಳ’ ಎಂದು ಹೇಳಿದ್ದಾನೆ. ಹೀಗೆ ತನ್ನ ಕಣ್ಣಿಗೆ ಬಿದ್ದ ಪ್ರಯೋಗಗಳನ್ನೆಲ್ಲ ಆತ ಸಂಗ್ರಹಿಸಿದ್ದಾನೆ.

೩೪
ಪಿರಿಯರ್ ಸಲಿಪರ್
ದಡ್ಡಕ್ಕರದ ಱೞಕ್ಕೆ
ಐದೆ ರೇಫೆ ವೆರೆಸಿದ ದಡಕ್ಕರಮಂ;
ಱೞಂ ಆಗಿ ಅದಂ
ಉಚ್ಚರಿಸಲ್ ಅಗಿ ಇರ್ದ ತೆಱದಿಂ
ಅಂತದು ಶುದ್ದಂ

ಪ್ರಾಸಸ್ಥಾನದಲ್ಲಿ ಒತ್ತಕ್ಷರದ ಱೞಕ್ಕೆ ರೇಫೆಯಿಂದ ಕೂಡಿದ ಒತ್ತಕ್ಷರವನ್ನು ಪೂರ್ವ ಕವಿಗಳು ಪ್ರಯೋಗಿಸಿದ್ದಾರೆ. ರೇಫ ಮತ್ತು ೞ ಕಾರಗಳು ಪ್ರಾಸಸ್ಥಾನದಲ್ಲಿ ಪ್ರಯೋಗವಾಗ ಬಹುದು. ಆದರೆ ರೇಫೆಯಿಂದ ಕೂಡಿದ ಒತ್ತಕ್ಷರವನ್ನು ಱೞದಿಂದ ಕೂಡಿದ ಒತ್ತಕ್ಷರದಂತೆ ಉಚ್ಚರಿಸಬಾರದು. ಅದು ಸಹಜವಾಗಿಯೇ (ಇದ್ದ ಸ್ಥಿತಿಯಲ್ಲಿಯೇ) ರೇಫೆಯಿಂದ ಕೂಡಿದ ಒತ್ತಕ್ಷರವಾಗಿದೆ.

ಪ್ರಯೋಗ : ಬೞ್ದುದು ಬಳ್ಳವಾಡಿ … ನೆಱ ನಂಬಿರ್ದು ದಾರುಹುತರ ಜೀನೇಂದ್ರನಂ ತಿರ್ದ್ದ ಮಹಾಪುರಾಣ …

ಎಂಬಲ್ಲಿ ಮೊದಲಸಾಲಿನ ಪ್ರಾಸಸ್ಥಾನದಲ್ಲಿ ‘ೞ್’ ಎಂಬುದರ (ಱೞ ವೆರಸಿದ ದಡ್ಡಕ್ಕರ) ಎರಡನೆಯ ಸಾಲಿನ ಪ್ರಾಸಸ್ಥಾನದಲ್ಲಿ ರ್ದ್ ಎಂಬುದೂ (ರೇಫೆ ವೆರಸಿದ ದಡ್ಡಕ್ಕರ) ಇದೆ.

೩೫
ಝಳಕಂ, ಝಳಪಿಸಿದಂ,
ಜಂಗುಳಿ, ಬೊಂಬುಳಿ, ಆಳಮಾಳಂ
ಅಂತೆ ಠಮಾಳಂ, ವಳಿಗೆ ನೆಗೞ್ದ
ಒಂದುಳಿ ಜಂಗುಳಿ, ಪುತ್ತಳಿ, ಗೋಳಿ,
ಪೇಳಿ, ಱೞ ಸಂದೇಹಂ

ಝುಳಕಂ, ಝುಳಪಿಸಿದಂ, ಜಂಗುಳಿ, ಬೊಂಬುಳಿ, ಆಳಮಾಳಂ, ಠಮಾಳಂ, ವಳಿಗೆ, ಒಂದುಳಿ, ಜಂಗುಳಿ, ಪುತ್ತಳಿ, ಗೋಳಿ, ಪೇಳಿ ಇವು ಱೞಕ್ಕೆ ಸಂದೇಹ ಇವು ಮೂಲತಃ ಱೞ ವಾಗಿರಬಹುದೇ ಎಂದು ಸಂದೇಹ.

೩೬
ಇಳಿದು ಅಳಿಯನ್ ಏಳಿದಂ,
ಸೂಕುಳಿ, ಓಕುಳಿ, ಕಳಱು, ಪೆಳಱು,
ಮಱಕುಳಿ ಅಳಿಯಂ,
ಕುಳಿಯಂ, ಮಾಳಿಗೆ, ಜಳಿಗೆ,
ತಳಿಗೆಯೊಳಿರ್ ಬಳಸು,
ಬಳಸಿಗಂ, ಮೊಳೆ, ತಾಳಂ

ಇಳಿದಿಳಿಯಂ, ಏಳಿದಂ, ಸೂಕುಳಿ, ಓಕುಳಿ, ಕಳಱು, ಪೆಳಱು, ಮಱುಕುಳಿ, ಅಳಿಯಂ, ಕುಳಿಯಂ, ಮೋಳಿಗೆ, ಜಳಿಗೆ, ತಳಿಗೆಯಳಿರ್, ಬಳಸು, ಬಳಸಿಗಂ, ಮೊಳೆ, ತಾಳಂ ಇವು ಮೊದಲಾದವುಗಳನ್ನು ‘ಕುಳ’ವೆಂದು ತಿಳಿಯಬೇಕು.

೩೭
ಆಳಿಸಿದಂ, ಪೇಳಿಸಿದಂ, ಕೇಳಂ
ಜೂದಾಳಿ ಅಳಿಲೆ ಕಳವಳಂ
ಆಮೆಯ್ಮೇಳಂ ಮಾಳಂ
ತಾಳಿಗೆ ಈಳಿಗೆ, ಇಱುಕುಳಿ
ಇವು ಆದಿಯಾಗಿ
ಅಱೆಕುಳನಂ

ಆಳಿಸಿದಂ, ಪೇಳಿಸಿದಂ, ಕೇಳಂ, ಜೂದಾಳಿ, ಇಳಿಲೆ, ಕಳವಳಂ, ಮಯ್ಮೇಳಂ, ಮಾಳಂ, ತಾಳಿಗೆ, ಈಳಿಗೆ, ಇಱುಕುಳಿ ಇವು ಮೊದಲಾದವು ‘ಕುಳ’ವೆಂದು ತಿಳಿಯಬೇಕು.

೩೮
ಬೆರಲ್, ಒರಲ್, ಎರಲ್
ಕೊರಲ್, ಸುರಲ್, ಅರಲ್
ಪರಲ್, ಮರಲುಂ, ಅಂತೆ ನರಲುಂ
ಮುಗೈ ಸರಲುಂ, ಲಾಂತಂ
ಇವಂ ಗ್ರಾಮ್ಯರ್ ಅಱೆಯದೆ
ಉಚ್ಚರಿಸುವರ್
ಕುಳಾಂತ ಭ್ರಮೆಯಿಂ

ಬೆರಲ್, ಒರಲ್, ಎರಲ್, ಕೊರಲ್, ಸರಳ್, ಅರಲ್, ಪರಲ್, ಮರಲ್, ನರಲ್, ಮುಂಗೈಸರಲ್ ಇವು ಲಾಂತ ಪದಗಳು. ಗ್ರಾಮ್ಯರು ತಿಳಿಯದೆ ಭ್ರಾಂತಿಯಿಂದ ಇವುಗಳನ್ನು ‘ಕುಳಾ’ಂತವಾಗಿ ಉಚ್ಛರಿಸುತ್ತಾರೆ. ಹಾಗಿ ಉಚ್ಚರಿಸುವವರನ್ನು ಗ್ರಾಮ್ಯರು, ಎಗ್ಗರು ಎನ್ನುತ್ತಾ ಅಸಮಾಧಾನಗೊಂಡಿರುವನು, ಕೇಶಿರಾಜ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಗ್ರಂಥಸ್ಥವಾಗಿ ಬೆರಲ್ ಮುಂತಾದ ಪದಗಳು ಪ್ರಚುರವಾಗಿರುವಾಗ ಅವನ್ನು ಳಾಂತವಾಗಿ ಉಚ್ಚರಿಸುವುದು ಜನರು ಗ್ರಾಮ್ಯರಿರಲಿ, ನಾಗರಿಕರಿರಲಿ ಅವರಲ್ಲಿ ರೂಢಿಯಲ್ಲಿತ್ತು. ವಿದ್ವಾಂಸರು ಮಾತ್ರ ಅವನ್ನು ಲಾಂತವನ್ನು ಉಚ್ಚರಿಸಿದರೆ ಮಿಕ್ಕವರೆಲ್ಲಾ ಳಾಂತವಾಗಿ ಉಚ್ಚರಿಸುತ್ತಿದ್ದಿರಬಹುದು. ಕೇಶಿರಾಜ ಜರಿದಿರುವುದು ಅಂಥವರನ್ನೇ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ ಕೇಶಿರಾಜನ ಕಾಲಕ್ಕೆ ಗ್ರಾಮ್ಯ ರೆಂಬುವರು ಕೂಡ, ಬೆರಲ್ ಮುಂತಾದ ಪದಗಳನ್ನು ನಾವೀಗ ಉಚ್ಚರಿಸುತ್ತಿರುವಂತೆ ಬೆರಳು, ಎರಳು,  ಕೊರಳು ಎಂದು ಮುಂತಾಗಿ ಸ್ವರಾಂತವಾಗಿ ಉಚ್ಚರಿಸುತ್ತಿರಲಿಲ್ಲ. ಆ ಕಾಲಕ್ಕೆ ಅವಿನ್ನೂ ಬೆರಳ್ ಎಂದು ಮುಂತಾಗಿ ವ್ಯಂಜನಾಂತವಾಗಿಯೇ ಉಚ್ಚಾರಣೆಗೊಳ್ಳುತ್ತಿದ್ದರು. ಇದು ಕನ್ನಡ ಭಾಷಾಚರಿತ್ರೆಯಲ್ಲಿ ದಾಖಲೆಗೊಳ್ಳಬೇಕಾದ ಅಂಶವಾಗಿದೆ.

೩೯
ಮರಲ್, ಅರಲ್, ಎರಲ್,
ಎಂಬಿವಱಂ ಅಂತರಾಳ ರೇಫಕ್ಕೆ
ಲತ್ವಮುಂ
ದೊರೆಕೊಳ್ಗುಂ, ಪಿರಿದುಂ
ಮಲರ್, ಅಲರ್, ಎಲರ್
ಒರೆವುದು ಕೃತಿಯೊಳ್ ವಿಕಲ್ಪ
ವಿಧಿಯಿಂದಂ ಇವಂ

ಮರಲ್, ಅರಲ್, ಎರಲ್ ಇವುಗಳ ಮಧ್ಯ ರೇಫೆಗೆ ‘ಲ’ ಕಾರವೂ ಅಂತ್ಯ ‘ಲ’ ಕಾರಕ್ಕೆ ರೇಫೆಯೂ ಉಂಟಾಗುತ್ತದೆ. ಇವು ವಿಕಲ್ಪವಾಗಿ ಕಾವ್ಯದಲ್ಲಿ ಮಲರ್, ಅಲರ್, ಎಲರ್ ಎಂದು ಬಳಕೆಯಾಗುತ್ತವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮರಲ್, ಅರಲ್, ಎರಲ್ ಎಂಬುವೇ ಮೂಲ ಪದ ರೂಪಗಳು. ಅವುಗಳ ವಿಕಲ್ಪರೂಪಗಳು ಮಲರ್, ಅಲರ್, ಎಲರ್, ಮಲರ್ ಎಂಬುದರ ಉತ್ತರೋತ್ತರ ಪರಿವರ್ತಿತ ರೂಪವೆಂಬುದು ಕೇಶಿರಾಜನ ನಿರ್ಣಯ.

೩೯
ಕೊರಲುಂ, ಜಿಹ್ವಾ ಮೂಲಮುಂ,
ಉರಮುಂ,
ತಾಳುಗೆಯುಂ ಓಷ್ಠಮುಂ,
ನಾಸಿಕೆಯುಂ, ಶಿರಮುಂ,
ದಂತಮುಂ, ಎಂದು ಅಕ್ಕರಂ;
ಉದಯಿಪ ತಾಣಂ
ಆದುವುಂ ಪೇೞ್ದೆಂಟುಂ

ಕೇಶಿರಾಜ ಈ ಸೂತ್ರದಲ್ಲಿ ಅಕ್ಷರೋತ್ಪತ್ತಿ ಸ್ಥಾನಗಳನ್ನು ಹೇಳಿದ್ದಾನೆ. ಗಂಟಲು, ನಾಲಗೆ, ಎದೆ, ತಾಳು, ತುಟಿ, ಮೂಗು, ತಲೆ ಹಾಗೂ ದಂತ ಈ ಎಂಟು ಸ್ಥಾನಗಳಲ್ಲಿ ಶುದ್ದಾಕ್ಷರಗಳು ಹುಟ್ಟುತ್ತವೆ. ಈ ಸ್ಥಾನಗಳಲ್ಲಿ ಹುಟ್ಟುವ ಅಕ್ಷರಗಳನ್ನು ತಿಳಿದು ವರ್ಣಾವೃತ್ತಿಯನ್ನು ಮಾಡಿಕೊಳ್ಳಬೇಕು. ಇವನ್ನು ಗಮನಿಸಿದಾಗ ಕೇಶಿರಾಜನಿಗೆ ಆಧುನಿಕ ಭಾಷಾಶಾಸ್ತ್ರದ ಧ್ವನಿ ರಚನೆಯ ತತ್ವಗಳು ತಿಳಿದಿರಬೇಕು. ಧ್ವನ್ಯುತ್ಪಾದನೆಯಲ್ಲಿ ಪಾಲ್ಗೊಳ್ಳುವ ಹಾಗೂ ಸುಲಭವಾಗಿ ಚಲಿಸಬಹುದಾದಂಥ ಅಂಗಗಳು ಮುಖ ವಿವರದ ಕೆಳಭಾಗದಲ್ಲಿರುತ್ತವೆ. ಅವುಗಳನ್ನು ‘ಕರಣ’ಗಳೆನ್ನುತ್ತಾರೆ. ಅವು ಸ್ಥಾನಗಳೊಡನೆ ಸಂಪರ್ಕಹೊಂದಿ ವಿವಿಧ ತೆರನಾದ ಭಾಷಾಧ್ವನಿಗಳನ್ನುಂಟುಮಾಡುತ್ತವೆ. ಉದಾಹರಣೆಗೆ ಕೆಳದುಟಿ, ನಾಲಿಗೆ ಮುಂತಾದುವು. ಮುಖವಿವರದ ಮೇಲ್ಭಾಗದಲ್ಲಿರುವ ಧ್ವನ್ಯುತ್ಪಾದನೆಯಲ್ಲಿ ಸಹಾಯವಾಗುವ ಚಲಿಸಲಾರದಂತಹ ಅಂಗಗಳೇ ‘ಸ್ಥಾನ’ಗಳು. ಇವು ಸ್ಥಿರ ಅಂಗಗಳು. ಉದಾಹರಣೆ ಮೇಲ್ದುಟಿ, ಮೇಲ್ದಂತ, ತಾಲು ಮುಂತಾದುವು. ಕರಣಗಳು ಸ್ಥಾನಗಳನ್ನು ಸ್ಪರ್ಶಿಸಿಯೋ ಅವುಗಳ ಸನಿಹಕ್ಕೆ ಬಂದೋ ಸಾಗುತ್ತಿರುವ ಶ್ವಾಸಪ್ರವಾಹಕ್ಕೆ ತಡೆಯುಂಟುಮಾಡಿ ಧ್ವನಿಗಳನ್ನು ನಿರ್ಮಿಸುತ್ತವೆ.

೪೧
ಕವಿಗಳ್, ಸ್ವರದಿಂ, ವರ್ಗದಿಂ
ಅವರ್ಗದಿಂ, ಯೋಗವಾಹದಿಂ,
ದೇಶಿಯೊಳ್, ಉದ್ಭವಪ್ಪ
ವರ್ಣದಿಂ ಪಂಚವಿಧಂ
ತಾ ಎಂದು
ತಿಳಿಪುವರ್ ಶುದ್ಧಗೆಯಂ

ವಿದ್ವಾಂಸರು ಕನ್ನಡ ಶುದ್ಧಾಕ್ಷರಗಳನ್ನು ೧. ಸ್ವರಗಳು, ೨. ವರ್ಗಗಳು, ೩. ಅವರ್ಗಗಳು, ೪. ಯೋಗವಾಹಗಳು, ೫. ದೇಶೀಯಗಳು ಎಂದು ಐದು ವಿಭಾಗಗಳಾಗಿ ವಿಂಗಡಿಸಿದ್ದಾರೆ.

೪೨
ತರದಿಂದಂ, ಪದಿನಾಲ್ಕು ಸ್ವರಂ;
ಇರ್ಪತ್ತೈದು ವರ್ಣ
ಅವು ವರ್ಗಂ;
ತತ್ಪರದ ಒಂಬತ್ತು ಅವರ್ಗಂ;
ಪರಿಭಾವಿಸೆ ಯೋಗವಾಹಂ
ಅವು ನಾಲ್ಕೆವಲಂ.

ಕೇಶಿರಾಜ ಈ ಸೂತ್ರದಲ್ಲಿ ಸಂಸ್ಕೃತದ ಚೌಕಟ್ಟಿನಲ್ಲಿ ಕನ್ನಡ ವರ್ಣಮಾಲೆಯನ್ನು  ಹೇಳಿದ್ದಾನೆ. ಅವುಗಳಲ್ಲಿ ಸ್ವರ ೧೪, ವರ್ಗೀಯಗಳು ೨೫, ಅವರ್ಗೀಯ ೯, ಯೋಗವಾಹಕಗಳು ೪ ಒಟ್ಟು ೫೨ ಅಕ್ಷರಗಳು ಸಂಸ್ಕೃತದಲ್ಲಿವೆ.

೪೩
ತಿಳಿದೇಶಿಯಮುಂ ಐದಂ,
ಕಳೆನೀಂ, , ,  ವರ್ಣ
, , ವಿಸರ್ಗ; x,   ಕ್ಷಳನಂ
ನಾಲ್ವತ್ತೇೞಾಯ್ತುಳೆ
ಶುದ್ದಗೆ
ಅಚ್ಚಕನ್ನಡಕ್ಕೆ ಕ್ರಮದಿಂ

ಸಂಸ್ಕೃತದ ೫೨ ಅಕ್ಷರಗಳಿಗೆ ಕನ್ನಡಕ್ಕೆ ವಿಶಿಷ್ಟವಾದ ಎ-ಒ-ಱ-ಱೞ-ಕುಳ ಎಂಬ ೫ ಅಕ್ಷರಗಳನ್ನು ಸೇರಿ ನಂತರ ೫೭ ಅಕ್ಷರಗಳಲ್ಲಿ ಕನ್ನಡದಲ್ಲಿ ಬಳಕೆಯಾಗದ ಋ, ೠ, , , ಶ, ಷ, ವಿಸರ್ಗ, x, ೞ ಹಾಗೂ ಕ್ಷಳ ಎಂಬ ಹತ್ತು ಅಕ್ಷರಗಳನ್ನು ಕಳೆದು ಉಳಿಯುವ ೪೭ ಅಕ್ಷರಗಳೇ ಅಚ್ಚಗನ್ನಡದ ಶುದ್ದಾಕ್ಷರಗಳೆಂದು ಹೇಳಿದ್ದಾನೆ.

೪೪
ತನು ವಾದ್ಯಂ,
ನಾಲಗೆ ವಾದನ ದಂಡಂ,
ಕರ್ತೃ ಆತ್ಮಂ
ಅವನ ಮನೋವೃತ್ತಿ ನಿಮಿತ್ತಂ
ಆಗಿ ಶಬ್ದಂ ಜನಿಯಿಸುಗುಂ;
ಧವಳವರ್ಣಂ ಅಕ್ಷರರೂಪಂ

ಧ್ವನಿ ಉಚ್ಛಾರಣೆಯ ರೀತಿಯನ್ನು ಸಾದೃಶ್ಯ ಕೊಡುವುದರ ಮೂಲಕ ಈ ಸೂತ್ರದಲ್ಲಿ ಹೇಳಿದಾನೆ. ತನು ವಾದ್ಯ, ನಾಲಿಗೆ ವಾದನದಂಡ, ಆತ್ಮವಾದಕ ಆತನ ಮನಸ್ಸಿನ ಇಚ್ಛೆಯಂತೆ ಧವಲ ವರ್ಣದ ಅಕ್ಷರ ರೂಪವಾದ ಶಬ್ದ (ಭಾಷಾಧ್ವನಿ) ಹುಟ್ಟುತ್ತದೆ. ಪುಪ್ಪುಸದಿಂದ ಹೊರಟಂಥ ಶ್ವಾಸ ಪ್ರವಾಹಕ್ಕೆ ಧ್ವನ್ಯಂಗಗಳು ತಡೆ ಉಂಟುಮಾಡದಿದ್ದರೆ ಸ್ವರಗಳು, ತಡೆಉಂಟು ಮಾಡಿದರೆ ವ್ಯಂಜನ ಧ್ವನಿಗಳು ಹುಟ್ಟುತ್ತವೆ.

೪೫
ಪದದ ಅರ್ಥಮಂ
ವಿಭಾಗಿಸುವುದಱಂದೆ ವಿಭಕ್ತಿ
ಅಂತು ಅದಂ ಪ್ರತ್ಯಯಂ ಎಂಬುದು;
ತತ್ ಪ್ರತ್ಯಯದಿಂ
ಪೂರ್ವದೊಳ್ ಇರ್ಕುಂ
ಪ್ರಕೃತಿ; ಎರಡುಂ
ಆಮರ್ದು ಒದವೆ ಪದಂ

ಪದದ ಅರ್ಥವನ್ನು ವಿಭಾಗಿಸುವುದರಿಂದ ವಿಭಕ್ತಿ ಎನಿಸುತ್ತದೆ ಆ ವಿಭಕ್ತಿಯನ್ನು ಪ್ರತ್ಯಯವೆಂದೂ ಕರೆಯುತ್ತಾರೆ. ಆ ಪ್ರತ್ಯಯದ ಹಿಂದೆ ಪ್ರಕೃತಿ ಇರುತ್ತದೆ. ಪ್ರಕೃತಿ ಮತ್ತು ಪ್ರತ್ಯಯ ಸೇರಿಸಿದರೆ ‘ಪದ’ ಎನಿಸುತ್ತದೆ. ಈ ಹಿನ್ನೆಲೆಯಲ್ಲಿ ನಾಮಪ್ರಕೃತಿ, ನಾಮಲಿಂಗ, ನಾಮವಿಭಕ್ತಿ ಪ್ರತ್ಯಯ ಧಾತುಲಿಂಗ, ಕ್ರಿಯಾಲಿಂಗ, ಅಖ್ಯಾತ ವಿಭಕ್ತಿಪ್ರತ್ಯಯ ನಾಮಪದ, ಕ್ರಿಯಾಪದಗಳನ್ನು ಗ್ರಹಿಸಬೇಕು.

ಮರ (ಪ್ರಕೃತಿ) ಅಂ (ವಿಭಕ್ತಿ ಪ್ರತ್ಯಯ) ಮರ + ಅಂ = ಮರಂ (ಪದ)
ಕೇಳು (ಪ್ರಕೃತಿ) ಅಂ (ಅಖ್ಯಾತ ಪ್ರತ್ಯಯ) ಕೇಳು + ಅಂ = ಕೇಳುವಂ (ಪದ)

೪೬
ಕೆಲವು ನಿಜಬಿಂದುಗಳ್,
ಕೆಲಕೆಲವು ವಿಕಾಲ್ಪರ್ಥ ಬಿಂದುಗಳ್,
ದ್ವಿತ್ವಂ ಗಳ್
ಕೆಲವು, ಶಿಥಿಲದ್ವಿತ್ವಂ
ಕೆಲವು, ಉಭಯಮುಂ
ಆಗಿ ಕೆಲವು ಪದಂ
ಅಱೆವುದು ಇದಂ

ಪದಗಳಲ್ಲಿ ಕೆಲವು ನಿಜ ಬಿಂದುಗಳು, ಕೆಲವು ವಿಕಲ್ಪ ಬಿಂದುಗಳು, ಕೆಲವು ದ್ವಿತ್ವಗಳು, ಕೆಲವು ಶಿಥಿಲದ್ವಿತ್ವಗಳು, ಕೆಲವು ದ್ವಿತ್ವ ಶಿಥಿಲದ್ವಿತ್ವಗಳಿಂದ ಕೂಡಿರುತ್ತದೆ. ಆ ಪದಗಳನ್ನು ಇಲ್ಲಿ ಕೊಡಲಾಗಿದೆ.

ನಿತ್ಯ ಬಿಂದುವಿಗೆ : ಅಡಂಗು, ಅವುಂಕಿದಂ, ಈಂಟು, ಎಱಂಕೆ, ಒರಂಟು
ವಿಕಲ್ಪ ಬಿಂದುವಿಗೆ : ಕೊಡಂಕೆ – ಕೊಡಕೆ, ನೊರಂಜು – ನೊರಜು ಮುಂತಾದುವು
ದ್ವಿತ್ವ ಪದಕ್ಕೆ : ಅಗ್ಗಳಂ, ಕಪ್ಪಡಿ ತೆಪ್ಪಂ ಮುಂತಾದುವು.
ಶಿಥಿಲ ದ್ವಿತ್ವ ಪದ : ಅಗುೞ್ದಂ, ತೆಗುೞ್ದಂ, ಮುಗುೞ್ದಂ ಮುಂತಾದುವು
ದ್ವಿತ್ವ-ಶಿಥಿಲದ್ವಿತ್ವ ಪದ : ಪೊರಳ್ಪಂ, ತಗಳ್ದುಂ ಮುಂತಾದುವು

ಕೇಶಿರಾಜನ ಕಾಲಕ್ಕೆ ಶಬ್ದಗಳ ಮಧ್ಯದ ಬಿಂದುಗಳು ಲೋಪವಾಗುತ್ತಿದ್ದುದರ ಸೂಚನೆ ಕಂಡುಬರುತ್ತದೆ. ಆದುದರಿಂದಲೇ ಆತ ತನ್ನ ಕಾಲದಲ್ಲಿ ಬಿಂದುಗಳಿಂದ ಕೂಡಿದ ಶಬ್ದಗಳು ಬಿಂದು ವಿಕಲ್ಪವಾಗಿ ಬರುತ್ತಿದ್ದ ಶಬ್ದಗಳು, ನಿಯತವಾಗಿ ದ್ವಿತ್ವವಾಗಿದ್ದ ಶಬ್ದಗಳು, ಶಿಥಿಲದ್ವಿತ್ವವಾಗಿ ಬಳಕೆಯಾಗುತ್ತಿದ್ದ ಶಬ್ದಗಳು ಮತ್ತು ಶಿಥಿಲದ್ವಿತ್ವ ಮತ್ತು ದ್ವಿತ್ವವಾಗಿ ಪ್ರಯೋಗವಾಗುತ್ತಿದ್ದ ಶಬ್ದಗಳನ್ನೆಲ್ಲ ಪಟ್ಟಿ ಮಾಡಿದ್ದಾನೆ.

೪೭
ಉರ್ದುಂ ಬಿರ್ದುಂ ತರ್ದುಂ
ಮರ್ದುಂ ಗುರ್ದುಂ
ಸಮಂತು ತಿರ್ದುಂ ಪರ್ದುಂ
ಗರ್ದುಂಱು
ಉರ್ದಿದುದೆನೆಯುಂ
ಗರ್ದೆಯುಂ
ಗುರ್ದೆಯುಂ ಸರೇಫ ಪದಂಗಳ್

೪೮
ನುರ್ಗಿದುದು ಎನೆ ನೆರ್ಗಿದು ಎನೆ
ಕಿರ್ಗಿದುದು ಎನೆ ಜರ್ಗವಿೞ್ದುದು ಎನೆ
ಪೆರ್ಗರ್ ತಾವ್ ಒರ್ಗಾದರ್
ಪೆರ್ಗಳಂ ಎನೆ ಕುರ್ಗಿದುದು ಎನೆ
ಮಾರ್ಗದೊಳ್ ಸರೇಫ ಪದಂಗಳ್

೪೯
ಇರ್ಪುಂ ತೋರ್ಪುಂ ಕೆರ್ಪುಂ
ನೇರ್ಪುಂ ಸಿರ್ಪೆಯುಂ
ಅಡುರ್ಪುಂ ಆರ್ಪುಂ ಕೂರ್ಪುಂ
ಪರ್ಪರಿಕೆಯಂ ಎರ್ಪುಂ ಮೆಯ್ಗರ್ಪುಂ
ಮೊದಲಾಗಿ ರೇಫ ಸಂಯೋಗಂಗಳ್

ಉರ್ದು, ಬಿರ್ದು, ತರ್ದು, ಮರ್ದು, ಗುರ್ದು, ತಿರ್ದು, ಪರ್ದು, ಗರ್ದುಱು, ಉರ್ದಿದುದು, ಗರ್ದೆ, ಗುರ್ದೆ, ನುರ್ಗಿದುದು, ನೆರ್ಗಿದುದು, ಕಿರ್ಗಿದುದು, ಜರ್ಗುವಿೞ್ದುದು, ಪೆರ್ಗೆರ್ತಾ ವೊರ್ಗಾದರ್, ಪೆರ್ಗಳಂ, ಕುರ್ಗಿದುದು, ಇರ್ಪು, ತೋರ್ಪು, ಕೆರ್ಪು, ನೇರ್ಪು, ಸಿರ್ಪೆ, ಅಡರ್ಪು, ಆರ್ಪು, ಕೂರ್ಪು, ಪರ್ಪರಿತೆ, ಎರ್ಪು, ಮೆಯ್ಗರ್ಪು ಈ ಮುಂತಾದುವು ಸರೇಫ ಪದಗಳು.

ರೇಫದಿಂದ ಕೂಡಿದ ಈ ಪದಗಳನ್ನು ಪರಿಚಯ ಮಾಡುಕೊಡುವ ಉದ್ದೇಶವೇನು ಎಂಬುದರ ಬಗೆಗೆ ಸಂದೇಹ ಮೂಡತ್ತದೆ. ಬಹುಶಃ ಅವನ ಕಾಲಕ್ಕೆ ಈ ಶಬ್ದಗಳು ರೂಪಾಂತರ ಹೊಂದುತ್ತಿದ್ದಿರಬೇಕು. ಉರ್ದು, ಬಿರ್ದು, ಮರ್ಗು, ತಿರ್ಗು, ಸಿರ್ಪೆ, ಇವು  ಕ್ರಮೇಣ ರೇಫವನ್ನು ಕಳೆದುಕೊಂಡು ಸಜತಿಯ ದ್ವಿತ್ವವನ್ನು ಹೊಂದಿ ಕ್ರಮವಾಗಿ ಉದ್ದು, ಬಿದ್ದು, ಮಗ್ಗು, ನೆಗ್ಗು, ಸಿಪ್ಪೆ, ಇಪ್ಪ ಮೊದಲಾದ ರೂಪಗಳು ಹೊಂದಿವೆ. ಇವುಗಳಲ್ಲಿ ಎಷ್ಟೋ ಶಬ್ದಗಳು ರೂಪಾಂತರವನ್ನು ಅವನ ಕಾಲಕ್ಕೆ ಹೊಂದಿವುದರಿಂದಲೇ ಇಲ್ಲಿ ಕೇಶಿರಾಜ ಹಳಗನ್ನಡದ ರೇಫಯುಕ್ತವಾದ ಪದಗಳನ್ನು ಪರಿಚಯ ಮಾಡಿಕೊಟ್ಟಿದ್ದಾನೆ.

೫೦
ಆರ್ದಂ ಸಾರ್ದಂ ಪಾರ್ದಂ
ತೀರ್ದಂ ಪೋರ್ದಂ ಸಮಂತು
ಪೀರ್ದಂ ಕಾರ್ದಂ
ನೋರ್ದಂ ಬಾರ್ದಂ ಗೋರ್ದಂ ಸೋರ್ದಂ
ತಾಂ ಎಂದೊಡಂ
ಗುರು ಉಪಧೆ ಎನಿಕುಂ

೫೧
ಊರ್ಗಳ್, ಕೇರ್ಗಳ್ ಬೇರ್ಗಳ್
ನಾರ್ಗಳ್ ತೇರ್ಗಳ್
ನೆಗೞ ಆರ್ಗಳ್ ಕೂರ್ಗಳ್ ನೀರ್ಗಳ್
ಸೀರ್ಗಳ್ ತಾರ್ಗಳ್
ಸೂರ್ಗಳ್ ಕಾರ್ಗಳ್
ಗುರು ಉಪಧಂ ತಾನಕ್ಕುಂ

ಆರ್ದಂ, ಸಾರ್ದಂ, ಪಾರ್ದಂ, ತೀರ್ದಂ, ಪೋರ್ದಂ, ಪೀರ್ದಂ, ಕಾರ್ದಂ, ನೋರ್ದಂ, ಬಾರ್ದಂ, ಗೋರ್ದಂ, ಸೋರ್ದಂ, ಊರ್ಗಳ್, ಕೇರ್ಗಳ್, ಬೇರ್ಗಳ್, ವಾರ್ಗಳ್, ತೇರ್ಗಳ್, ಆರ್ಗಳ್, ಕೂರ್ಗಳ್, ನೀರ್ಗಳ್, ತೇರ್ಗಳ್, ತಾರ್ಗಳ್, ಸೂರ್ಗಳ್, ಕಾರ್ಗಳ್ ಈ ಪದಗಳು ಗುರೂಪದೆಯೆನಿಸುತ್ತವೆ.

‘ಉಪಧಾ’ ಎಂದರೆ ಪದದ ಕೊನೆಯ ಅಕ್ಷರದ ಹಿಂದಿನ ವರ್ಣ. ಆ ವರ್ಣವು ಲಘುವಾಗಿದ್ದರೆ ‘ಲಘೂಪದೆ’ಯೆಂದೂ ಗುರುವಾಗಿದ್ದರೆ ಗುರೂಪಧೆಯೆಂದೂ ಕರೆಯುತ್ತಾರೆ. ಆದರೆ ಉಪಧೆಯನ್ನು ನಿರ್ಧರಿಸುವಲ್ಲಿ ಪದವನ್ನು ತೆಗೆದುಕೊಳ್ಳಬಾರದು. ಕೇವಲ ಪ್ರಕೃತಿಯನ್ನು ಗಮನಿಸಿಯೇ ನಿಯಮ ಹೇಳಬೇಕು. ವ್ಯಾಕರಣವು ಬಹುಮಟ್ಟಿಗೆ ಪ್ರಕೃತಿ ಪ್ರತ್ಯಯಗಳ ವಿಷಯವನ್ನು ಬೋಧಿಸುತ್ತದೆಯೇ ಹೊರತು ಪದದ ವಿಷಯವನ್ನಲ್ಲ ಎಂಬುದನ್ನು ಗಮನಿಸಬೇಕು. ಆದುದರಿಂದ ಇಲ್ಲಿ ‘ಆರ್’, ‘ಊರ್’ ಮೊದಲಾದ ಪ್ರಕೃತರೂಪಗಳಿಗೆ ನಿಯಮವನ್ನು ಅನ್ವಯಿಸಬೇಕು. ಆಗ ಈ ಶಬ್ದಗಳನ್ನು ಬಿಡಿಸಿದರೆ ಆ ರ್ + ಊ = ರು ಎಂದಾಗುತ್ತದೆ. ಈ ಎರಡು ಶಬ್ದಗಳ ಅಂತ್ಯದಲ್ಲಿಯೂ ರೇಫವಿದೆ. ಅದರ ಪೂರ್ಣವರ್ಣಗಳು ಕ್ರಮವಾಗಿ ‘ಆ’ ಮತ್ತು ‘ಊ’ ಆಗಿದೆ. ಇವೆರಡು ವರ್ಣಗಳು ಸಹಜವಾಗಿಯೇ ಗುರೂಪಧೆಯಾಗಿವೆ. ಈ ಶಬ್ದಗಳು ಕ್ರಮೇಣ ಆರು, ಸಾರು, ಪಾರು ಊರು, ಕೇರು, ಬೇರು ಮುಂತಾಗಿ ಸ್ವರಾಂತವಾಗಿ ಪರಿವರ್ತಿತವಾಗಿವೆ. ಈ ಶಬ್ದಗಳ ಹಳಗನ್ನಡ ರೂಪವನ್ನು ಪರಿಚಯಿಸುವುದೇ ಕೇಶಿರಾಜನ ಉದ್ದೇಶವಾಗಿರುವುದರಿಂದ ಅವುಗಳು ಗುರೂಪಧೆಯಾಗಿವೆ ಎಂದು ಇಲ್ಲಿ ತಿಳಿಸಿದ್ದಾನೆ. ‘ಆರ್ದಂಸಾರ್ದಂ’ ಎಂಬ ಸೂತ್ರದಲ್ಲಿ ಕ್ರಿಯಾಪದಗಳನ್ನೂ ಊರ್ಗಳ್ ಕೇರ್ಗಳ್ ಸೂತ್ರದಲ್ಲಿ ನಾಮಪದಗಳನ್ನೂ ಹೇಳಿದ್ದಾನೆ.

೫೨
ಪಿಂತೆ ಅಮರ್ದಿರೆ
ಕುಳ ರೇಫಾಂತಂ;
ಹ್ರಸ್ವಾದಿಲಿಂಗಂ,
ಆಗಳ್ ಮೇಣ್ ಅಂತು
ಚತುರ್ಥಿಯ ಗೆ ಯೆ
ಮೇಣ್ ಮುಂತೆ ಅಮರ್ದಿರೆ
ಪಿರಿದುಂ ಒದವುಗುಂ ಶಿಥಿಲತ್ವಂ

ನಾಮ ಪ್ರಕೃತಿ ಆದಿಯ ಅಕ್ಷರವು ಲಘುವಾಗಿದ್ದು, ಱೞಕುಳ ರೇಫಗಳು ಅದರ ಅಂತ್ಯದಲ್ಲಿದ್ದು ಅವುಗಳಿಗೆ ಬಹುವಚನದ ‘ಗಳ್’ ಪ್ರತ್ಯಯ ಅಥವಾ ಚತುರ್ಥಿಯ ‘ಗೆ’ ಪ್ರತ್ಯಯ ಪರವಾದರೆ ಬಹುಳವಾಗಿ ಶಿಥಿಲದ್ವಿತ್ವವಾಗುತ್ತದೆ. ಇದನ್ನು ಹೀಗೂ ಹೇಳಬಹುದು. ಹ್ರಸ್ವಾದಿಯಾದ ಱೞಕುಳ ರೇಫಾಂತವಾದ ನಾಮ ಪ್ರಕೃತಿ (ಲಿಂಗ) ಹಿಂದೆ, (ಬಹುವಚನ) ‘ಗಳ್’ ಮತ್ತು ಚತುರ್ಥಿಗೆ ಮುಂದೆ ಹೊಂದಿಕೊಂಡಿರಲು ಹೆಚ್ಚಾಗಿ ಶಿಥಿಲದ್ವಿತ್ವವುಂಟಾಗುತ್ತದೆ.

ಱೞಾಂತಕ್ಕೆ :
ಅಗೞ್ + ಗಳ್ = ಅಗೞ್ಗಳ್
ಅಸೞ್ + ಗಳ್ = ಅಸೞ್ಗಳ್
ನೆಗೞ್ + ಗಳ್ = ನೆಗೞ್ಗಳ್
ಎಸೞ್ + ಗಳ್ = ಎಸೞ್ಗ್‌ಳ್

ಕುಳಾಂತಕ್ಕೆ :
ಅಮಳ್ + ಗಳ್ = ಅಮಳ್ಗಳ್
ಅಮಳ್ಗಳ್ ನಯಗುಣ ವಿಕ್ರಮ ದಗಮಳ್ಗಳ್….
ಪುಗುಳ್ + ಗಳ್ = ಪುಗುಳ್ಗಳ್
ಅವಳ್ + ಗೆ = ಅವಳ್ಗೆ
ಪುಗುಳ್ + ಗೆ = ಪುಗುಳ್ಗೆ

ರೇಫಾಂತಕ್ಕೆ :
ಬೆಮರ್ + ಗಳ್ = ಬೆಮರ್ಗಳ್
ಬೆಮರ್ಗಳನೂದಿನುಣ್ದೊಡೆಗಳಂ ಪಿಡಿಕೆಯ್ಸಿ…
ಕನರ್ + ಗಳ್ = ಕನರ್ಗಳ್
ಉಸಿರ್ + ಗೆ = ಉಸಿರ್ಗೆ
ಒಸರ್ + ಗೆ = ಒಸಿರ್ಗೆ
ಬೆಮರ್ + ಗೆ = ಬೆಮರ್ಗೆ