೧೧

ಆರಯೆ ತತ್ಶಾಸ್ತ್ರ ವ್ಯವಹಾರ
ಜ್ಞಾ
ನಾರ್ಥಮಂ ಆಗಿ;
ಪೇೞಲ್ ಪಡೆಗುಂ
ಧೀರರಿಂ ಅಕ್ಷರ ಸಂಜ್ಞಾಕಾರಂ;
ವ್ಯಾಕರಣದ ಆದಿಯೊಳ್
ಪರಿವಿಡಿಯಂ

ಭಾಷೆಯ ಅಧ್ಯಯನ ಆರಂಭವಾಗುವುದು ಆ ಭಾಷೆಯ ಮೂಲಾಂಶವಾದ ಅಕ್ಷರಗಳಿಂದ ಹಾಗೂ ಅವುಗಳಿರುವ ಸಂಜ್ಞೆಗಳಿಂದ. ವ್ಯಾಕರಣ ಪಂಡಿತರೆಲ್ಲರೂ ತಮ್ಮ ಶಬ್ದಶಾಸ್ತ್ರದ ಆರಂಭದಲ್ಲಿ ವರ್ಣವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಕೇಶಿರಾಜದಿಯಾಗಿ ಕನ್ನಡ ವ್ಯಾಕರಣಕಾರರು ಇದಕ್ಕೆ ಹೊರತಲ್ಲ.

೧೨
ಅಕ್ಕರಮುಂ, ವರ್ಣಮುಂ
ಎಂದು ಅಕ್ಕುಂ, ಶುದ್ಧಾಕ್ಷರಕ್ಕೆ
ನಾಮಂ ಬರೆಪಂ
ಬೊಕ್ಕು ಉಚ್ಚರಿಸಲ್
ಬಾರದವು,
ಅಕ್ಕರಂ ಅಲ್ತು
ಅವು ಘನ ಸ್ವನಾದಿ ಧ್ವನಿಗಳ್

ಶುದ್ದಾಕ್ಷರಗಳಿಗೆ ಸ್ವರ ಮತ್ತು ವ್ಯಂಜನಗಳೆಂದು ಹೆಸರು (ಭಾಷಾವಿಜ್ಞಾನದ ಪರಿಭಾಷೆಯಲ್ಲಿ ಶುದ್ದಾಕ್ಷರಗಳಿಗೆ ಧ್ವನಿಮಾ ಎನ್ನುವರು. ಅದು ಉಚ್ಚಾರಣೆಯ ಅತಿ ಚಿಕ್ಕ ಘಟಕ. ಸ್ಥೂಲವಾಗಿ ಹೇಳುವುದಾದರೆ ಒಂದು ಭಾಷೆಯ ಮಹತ್ವದ ಧ್ವನಿಗಳು ಧ್ವನಿಮಾಗಳು. ಧ್ವನಿಮಾಗಳು ಯಾವಾಗಲು ಪರಿಮಿತವಾಗಿರುತ್ತವೆ). ಒಂದು ಶಬ್ದವು ಅಕ್ಷರ ಎನಿಸಿಕೊಳ್ಳಬೇಕಾದರೆ ಅದು ಬರವಣಿಗೆಗೆ ಒಗ್ಗುವಂತಿರಬೇಕು ಹಾಗೂ ಉಚ್ಚಾರಣೆಗೂ ಅನುಕೂಲವಾಗುವಂತಿರಬೇಕು. ಬರೆದು ಖಚಿತವಾಗಿ ಉಚ್ಚರಿಸಲು ಬಾರದವುಗಳು ಗುಡುಗು ಸಿಡಿಲಿನ ಶಬ್ದಗಳು ಅಕ್ಷರವಾಗುವುದಿಲ್ಲ ಅವು ಕೇವಲ ಧ್ವನಿಗಳಷ್ಟೆ.

೧೩
ವ್ಯವಹರಿಪುವು ಎರಡು ರೂಪಿಂ
ಅವು ಅಕ್ಕರಂ
ಶ್ರಾವಣಂ ಸ್ವನ ಏಕಾಕಾರಂ;
ವಿವಿಧ ಆಕಾರಂ, ಲಿಪಿಭೇದ ವೃತ್ತಿಯಿಂ
ಚಾಕ್ಷುಷಂ,
ಪುರಾತನ ಮತದಿಂ

ವಿದ್ವಾಂಸರ ಮತದಂತೆ ಅಕ್ಷರವು ಶ್ರಾವಣವೆಂದೂ ಚಾಕ್ಷುಷವೆಂದೂ ಎರಡು ರೂಪಗಳಲ್ಲಿ ಬಳಕೆಯಾಗುವುದು. ಧ್ವನಿರೂಪದಲ್ಲಿ ಕಿವಿಗೆ ಕೇಳಿದುವಂತಹದು ಶ್ರಾವಣ. ಬರೆಹದ ಮೂಲಕ ಬೇರೆ ಬೇರೆ ಲಿಪಿ ರೂಪದಲ್ಲಿ ಕಣ್ಣಿಗೆ ಕಾಣಿಸುವಂತಹದು ಚಾಕ್ಷುಷ. ಶ್ರಾವಣನು ಶಬ್ದರೂಪದಲ್ಲಿ ಏಕಾಕಾರವಾಗಿದ್ದರೆ, ಚಾಕ್ಷುಷವು ಭಾಷೆಯಿಂದ ಭಾಷೆಗೆ ಲಿಪಿಭೇದದಿಂದ ಬೇರೆ ಬೇರೆ ರೂಪದಲ್ಲಿರುವುದು, ಉದಾ : ‘ಕ’ ಧ್ವನಿಯನ್ನು ಉಚ್ಚರಿಸಿದಾಗ ಎಲ್ಲ ಭಾಷೆಗಳಲ್ಲಿಯೂ ಒಂದೇ ತೆರವಾಗಿ ಕೇಳಿಸುತ್ತದೆ. ಅದನ್ನೇ ಕನ್ನಡ, ಹಿಂದಿ, ಇಂಗ್ಲಿಷ್ ಲಿಪಿ ರೂಪದಲ್ಲಿ ಬರೆದಾಗ ಅದು ಚಾಕ್ಷುಷ

೧೪
ವರ್ಣಂಗಳ ಪಾಠಕ್ರಮಂ
ಅರ್ಣವ ಆವೃತಧಾತ್ರಿಯೊಳ್;
ಪ್ರಸಿದ್ಧಂ, ನಿಜದಿಂ
ವರ್ಣಂಗಳ್ ಅಕಾರಾಧ್ಯ
ಪೂರ್ಣತೆಯಂ ಪಡೆವುವು
ಳಕಾರಂ ಬರೆಗಂ

ಅಕ್ಷರಗಳ ಪಾಠಕ್ರಮವು ಲೋಕದಲ್ಲಿ ಪ್ರಸಿದ್ಧವಾಗಿದೆ. ಆ ಅಕ್ಷರಗಳು ‘ಅ’ ಕಾರದಿಂದ ‘ಳ’ ಕಾರದವರೆಗೆ ಪರಿಪೂರ್ಣತೆಯನ್ನು ಪಡೆಯುತ್ತವೆ. ಕೇಶಿರಾಜ ಸಂಸ್ಕೃತ ಪಾಠಕ್ರಮವನ್ನು ಇಲ್ಲಿ ಹೇಳಿದ್ದಾನೆ.

ಅ, ಆ, ಇ, ಈ, ಉ, ಊ, ಋ, ೠ, ಏ, ಐ, ಓ, ಔ
ಕ್, ಖ್, ಗ್, ಘ, ಙ
ಚ್, ಛ್, ಜ್, ಝ್, ಞ
ಟ್, ಠ್, ಡ್, ಢ್, ಣ್
ತ್, ಥ್, ದ್, ಧ್, ನ್
ಪ್, ಫ್, ಬ್, ಭ್, ಮ್
ಯ್, ರ್, ಲ್, ವ್, ಶ್, ಷ್, ಸ್, ಹ್, ಳ್ (ಕ್ಷಳ)

೧೫
ಕುಳದ ನಿಯಮದೊಳ್, ಎಂದುಂ
ಕ್ಷಳಕ್ಕೆ ಲಾಕ್ಷರ ವಿಕಲ್ಪಂ
ಇಲ್ಲ, ವಿಕಲ್ಪಂ ಕ್ಷಳಂ
ಅಲ್ಲದೆ ಇಲ್ಲ;
ಸಂಸ್ಕೃತದೊಳ್ ಕಾರಕ್ಕೆ
ಪೇೞ್ದೆಂ ಅದಱೆಂ ಕ್ಷಳನಂ

ಕನ್ನಡ ಪದ್ಯಕ್ಕೇ ವಿಶಿಷ್ಟವಾದ ದ್ವಿತೀಯಾಕ್ಷರ ಪ್ರಾಸವನ್ನು ಇಲ್ಲಿ ನೆನೆಯಬೇಕು. ಒಂದು ಪದ್ಯದ ಪ್ರತಿಪಾದದ ಮೊದಲಿಗೆ ಬರುವ ಎರಡು ಸ್ವರಗಳ ನಡುವಣ ವ್ಯಂಜನ ಒಂದೇ ಆಗಿರಬೇಕೆಂಬುದು ಪ್ರಾಸದ ನಿಯಮ. ಕುಳವೆಂದರೆ ‘ಳ’ ಕಾರ ಕನ್ನಡದಲ್ಲಿ ಸಹಜವಾಗಿ ಬಳಕೆಯಲ್ಲಿರುವ ‘ಳ’ ವರ್ಣ (ಚಳಿ, ತಿಳಿ). ಕ್ಷಳವೆಂದರೆ ‘ಳ’ ಕಾರ ಸಂಸ್ಕೃತದ ‘ಲ’ ಕಾರಕ್ಕೆ ಪ್ರತಿಯಾಗಿ ಕನ್ನಡದಲ್ಲಿ ಬಳಸ್ಪಡುವ ‘ಳ’ ವರ್ಣ. ಈ ಕ್ಷಳವು ಲ ಕಾರಕ್ಕೆ ಪ್ರಾಸವಾಗಿ ಹೊಂದದು. ಅದು ಹಾಗೆ ಹೊಂದಿರುದಾದರೆ ‘ಕುಳ’ಕ್ಕೆ ಮಾತ್ರವೇ, ಆದ್ದರಿಂದ ಆ ಕುಳಕ್ಕೆ ಸಂಸ್ಕೃತ ‘ಲ’ ಕಾರದಿಂದ ಕೂಡಿದ ಪದವೊಂದನ್ನು ಪ್ರಾಸವಾಗಿ ಜೋಡಿಸಬೇಕಾದ ಸಂದರ್ಭ ಬಂದಾಗ ಆ ಸಂಸ್ಕೃತ ‘ಲ’ ಕಾರವನ್ನು ಕ್ಷಳವಾಗಿ ಪರಿವರ್ತಿಸಿಕೊಳ್ಳಬೇಕು. ಇಂತಹ ಪರಿವರ್ತನೆ ಅನಿವಾರ್ಯವಾದುದಾಗಿ ‘ಕ್ಷಳ’ವನ್ನು ಕೇಶಿರಾಜ ವರ್ಣಮಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ಸೇರಿಸಿಕೊಂಡಿರುವನು. ಈ ಸೂತ್ರದಲ್ಲಿ ‘ಕುಳ’, ‘ಕ್ಷಳ’ ಹಾಗೂ ‘ಳ’ ಕಾರಗಳ ಪ್ರಾಸ ವಿಷಯ ನಿರೂಪಿಸಲಾಗಿದೆ.

ಉದಾ. ಕುಳಕ್ಷಳ ಪ್ರಾಸಕ್ಕೆ :
ಕಿಳಿಱೆಹಯಂಗಳ್ ಗರ್ಜಿಸೆ
ಜಳದನಿಭಂಗಳ್

೧೬
ತರದಿಂ ಅಕಾರಂ, ಮೊದಲಾಗಿ
ಇರೆ, ಪದಿನಾಲ್ಕುಂ ಸ್ವರಂಗಳ್
ಆದಿಯಪತ್ತು ಅಕ್ಕರಮುಂ;
ಸಮಾನಂ ಎನಿಸುಗುಂ
ಎರಡೆರಡು ಅವಱೊಳ್;
ಸವರ್ಣಂ ಎಂತು ಓದಿದೊಡಂ

ವರ್ಣಗಳಲ್ಲಿ ‘ಅ’ ಕಾರದಿಂದ ಮೊದಲುಗೊಂಡು ‘ಔ’ ಕಾರದವರೆಗಿನ ಹದಿನಾಲ್ಕು ಅಕ್ಷರಗಳು ಸ್ವರಗಳು (ಭಾಷಾವಿಜ್ಞಾನದ ದೃಷ್ಟಿಯಲ್ಲಿ ಸ್ವರವೆಂದರೆ ಶ್ವಾಸಕೋಶದಿಂದ ಹೊರಟ ಶ್ವಾಸ ಪ್ರವಾಹಕ್ಕೆ ಯಾವುದೇ ತೆರನಾದ ಅಡ್ಡಿ ಆತಂಕವಿಲ್ಲದೆ ಉಂಟಾಗುವ ಧ್ವನಿಗಳು, ಸ್ವರಗಳ ಉಚ್ಚಾರಣೆಯಲ್ಲಿ ಶ್ವಾಸಪ್ರವಾಹ ಅಖಂಡ ಪ್ರವಾಹವಾಗಿ ಘರ್ಷಣೆಗೆ ಒಳಗಾಗದೇ ಸಂಚರಿಸುವುದು). ಆ ಹದಿನಾಲ್ಕು ಸ್ವರಗಳಲ್ಲಿ ಮೊದಲಿನ ಹತ್ತು ಅಕ್ಷರಗಳು ಸಮಾನಾಕ್ಷರಗಳು. ಈ ಸಮಾನಾಕ್ಷರಗಳಲ್ಲಿ ಎರಡೆರಡು ಅಕ್ಷರಗಳು ಹಿಂದು ಮುಂದಾಗಿದ್ದರೆ ಅಥವಾ ಒಂದೇ ಸ್ಥಾನದಲ್ಲಿ ಹುಟ್ಟುವ ವರ್ಣಗಳು ಸವರ್ಣಗಳು.

ಉದಾ. ಸ್ವರಗಳು : ಅ, ಆ, ಇ, ಈ, ಉ, ಊ, ಋ, ೠ, ಏ, ಐ, ಓ, ಔ=೧೪

ಸಮಾನ ಸ್ವರಗಳು : ಅ, ಆ, ಇ, ಈ, ಉ, ಊ ಋ, ೠ , = ೧೦

ಸವರ್ಣ ಸ್ವರಗಳು : ಅಆ, ಇಈ, ಉಊ, ಋೠ,

ಆಅ, ಈಇ, ಊಉ, ೠಋ,

ಸಮಾನಾಕ್ಷರಗಳಲ್ಲಿ ಹ್ರಸ್ವಕ್ಕೆ ಹ್ರಸ್ವ ಪರವಾದರೂ ದೀರ್ಘಕ್ಕೆ ದೀರ್ಘ ಪರವಾದರೂ ಅವು ಸಮಾನಾಕ್ಷರಗಳೇ.

೧೭
ಕ್ರಮದಿಂ, ಹ್ರಸ್ವಕ್ಕಂ ಹ್ರಸ್ವಂ
ಒದವೆ, ದೀರ್ಘಕ್ಕೆ ದೀರ್ಘಂ ಒದವೆ
ತಗುಳ್ಗುಂ
ಯುಗಳಂಗಳೊಳ್;
ಅಮಳಿನಮಾಗಿ
ಎಲ್ಲಿಯೂ ಸವರ್ಣ ವಿಧಾನಂ

ಸವರ್ಣ ಅಕ್ಷರಗಳು ಎರಡು ಹ್ರಸ್ವವಾಗಿ (ಅಅ, ಇಇ) ಎರಡು ದೀರ್ಘವಾಗಿ (ಆಆ, ಈಈ) ಬಂದರೂ ಅವು ಸವರ್ಣ ಎನಿಸಿಕೊಳ್ಳುತ್ತವೆ.

ಉದಾ. ಹ್ರಸ್ವಕ್ಕೆ ಹ್ರಸ್ವ : ಅ ಅ…..
ದೀರ್ಘಕ್ಕೆ ದೀರ್ಘ : ಆ ಆ….

೧೮
ಸವನಿಸಿದ ,
ಎಂಬಿವು, ಕನ್ನಡದೊಳ್
ಸ್ವಭಾವದಿಂದೆ ಒಳವು;
ಸವರ್ಣಮುಂ ಅಪ್ಪುವು;
ವರ್ಣಾಂಕಂ
ಸವರ್ಣ ಪ್ರಜ್ಞೆಯೊಳಂ
ಒದವುಗುಂ ವ್ಯಾಕೃತಿಯೊಳ್

ಕನ್ನಡದಲ್ಲಿ ಎ, ಏ, ಒ, ಓ ಇವು ಅವಧಾರಣೆ, ವಿಶಂಕೆಗಳಲ್ಲಿ ಮಾತ್ರವಲ್ಲದೆ ಸ್ವತಂತ್ರ ಅಕ್ಷರ ರೂಪದಲ್ಲಿಯೂ ಸಹಜವಾಗಿ ಬಳಕೆಯಲ್ಲಿವೆ (ಎಲೆ, ಏತ, ಒಕ್ಕು, ಓರಗೆ). ಸಂಸ್ಕೃತದಲ್ಲಿಲ್ಲದ ಎ, ಒ ಗಳು ಕನ್ನಡದಲ್ಲಿರುವುದರಿಂದ ಎ ವರ್ಣ ಎಂದರೆ ಎಏ ಎಂದೂ ‘ಒ’ ವರ್ಣ ಎಂದರೆ ಒಓ ಎಂದೂ ಸವರ್ಣ ಸಂಜ್ಞೆ ಉಂಟಾಗುವುದು.

ಉದಾ.

ಕನ್ನಡದ ಎ ಕಾರಕ್ಕೆ :
ಎತ್ತುಂಗೋಲುಂ ವಿರಹಿಗೆ
ಚಿತ್ತಭವಂ

ಕನ್ನಡದ ಏ ಕಾರಕ್ಕೆ :
ಏೞುಂಬೆಸನಮುಮಂ
ನರಪಾಲಕರುೞಿಗೆ…

ಕನ್ನಡದ ಒ ಕಾರಕ್ಕೆ :
ಒತ್ತರ ಮೊತ್ತಿದಂತೆ
ಬೆಱಗಾಗಿ ಕೃಪಾದಿಗಳ್

ಕನ್ನಡದ ಓ ಕಾರಕ್ಕೆ :
ಓಸರಿಸಿದ ಜವನಿಕೆಯೊಡ
ನೋಸರಿಸಿದನಿಸಲೆ ಕಂತು….

೧೯
ವಿದಿತ ಸಮಾನಂಗಳ್
ಪೂರ್ವದ ಅಕ್ಕರಂ ಹ್ರಸ್ವಂ;
ಅದಱ ಪರದ ಅಕ್ಕರಂ
ಅಂತು ಅದು ದೀರ್ಘಂ;
ಅವರ್ಣಂ ಪಿಂಗಿದ ಸ್ವರಂ
ನಾಮಿ ಎಂದು ಪೇೞಲ್ ಪಡೆಗುಂ

ಸವರ್ಣ ಅಕ್ಷರಗಳಲ್ಲಿ ಮೊದಲನೆಯ ಅಕ್ಷರ ಹ್ರಸ್ವ (ಅ, ಇ, ಉ, ಮುಂ) ಎರಡನೆಯ ಅಕ್ಷರ ದೀರ್ಘ (ಆ, ಈ, ಊ, ಮುಂ) ಒಟ್ಟು ಹದಿನಾಲ್ಕು ಸ್ವರಗಳಲ್ಲಿ ಅಆ ಎಂಬ ಎರಡನ್ನು ಬಿಟ್ಟು ಉಳಿದ ಹನ್ನೆರಡು ವರ್ಣಗಳು ನಾಮಿಗಳೆಂದು ಕರೆಯುತ್ತಾರೆ.

ನಾಮಿಗಳು : ಇಈ, ಉಊ, ಋೠ, ಎಏ, ಐ, ಒ, ಔ

೨೦
ಕ್ರಮದೆ, ಗುರು ದೀರ್ಘಂ
ಏಕಾರ ಮುಖ್ಯ ಸಂಧ್ಯ ಕ್ಷರಂಗಳ್;
ಅವು ನಿಜದಿಂ ಹ್ರಸ್ವಂ
ಅದು ಏಕಮಾತ್ರಕಂ;
ದೀರ್ಘಂ ಉಭಯ ಮಾತ್ರಕಂ;
ತ್ರಿಮಾತ್ರಕಂಪ್ಲುತಂ ಅಕ್ಕುಂ

‘ಏ’ ಕಾರ ಮಖ್ಯವಾದ ನಾಲ್ಕು ವರ್ಣಗಳು (ಏ, ಐ, ಓ ಮತ್ತು ಔ) ಸಂಧ್ಯಕ್ಷರಗಳು, ಇವು ಗುರುವೂ ದೀರ್ಘವೂ ಆಗಿವೆ. ಅವು ಕ್ರಮವಾಗಿ ಅ + ಇ, ಅ + ಎ, ಅ + ಉ, ಅ + ಒ ಸೇರಿ ಆದ ಸಂಧ್ಯಕ್ಷರಗಳಾಗಿವೆ. ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರ ಹ್ರಸ್ವ ಎಂದೂ, ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರ ದೀರ್ಘ ಎಂದೂ ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸುವ ಅಕ್ಷರ ಪ್ಲುತವೆಂದೂ ಕರೆಯುವುದುಂಟು.

ಸಂಧ್ಯಕ್ಷರಗಳು :
ಏ = ಅ + ಇ, ಐ = ಅ + ಎ
ಓ = ಅ + ಉ, ಔ = ಅ + ಒ

ಹ್ರಸ್ವ ದೀರ್ಘ ಪ್ಲುತ ಪ್ರಯೋಗ :
ಕುಕ್ಕುಕೂss ಎಂದು ಕೋೞಿಕೂಗಿದುವಾಗಳ್

೨೧
ಬಿಂದುಂ, ಅನುಸ್ವಾರಂ
ತಾಂ ಎಂದು ಅಕ್ಕುಂ
ಸೊನ್ನೆ ಮುತ್ತುವೋಲ್
ವೃತ್ತತೆಯೊಳ್, ಸಂದಿರ್ಪುದು
ಅಡಕಿಲ್ವೊಂದಿರೆ
ಮಣಿಗೊಪ್ಪುವೋಲ್
ವಿಸರ್ಗಂ ಎನಿಕ್ಕುಂ

ಕೇಶಿರಾಜ ಈ ಸೂತ್ರದಲ್ಲಿ ಯೋಗವಾಹಗಳನ್ನು ಕುರಿತು ಚರ್ಚಿಸಿದ್ದಾನೆ. ಬಿಂದು ಅಥವಾ ಅನುಸ್ವರವು ಮುತ್ತಿನಂತೆಯೂ ವಿಸರ್ಗವು ಅಡಕಿಲು ಗಡಿಗೆಯಂತೆ ಮಣಿಗೊಪ್ಪು ಎಂಬ ಆಭರಣದಂತೆಯೂ ಸುಂದರವಾಗಿರುತ್ತದೆ.

ಬಿಂದು :
ಬಿಂದು ಪಾಲ್ಗುಣನಿಲ್ಲಿಸಂದೆ
ಯಮಣಂ ತಾನಿಲ್ಲ

ವಿಸರ್ಗ
ಅಃ ಸಂದೆಯಮಿಲ್ಲ ಮೆಚ್ಚಿದೆಂ

೨೨
ಸ್ವರ ಪರದೊಳ್
ಇರ್ಪತೆಱದಿಂದೆ;
ಉರು ಮುಖ್ಯೋಚ್ಚಾರಣಕ್ಕೆ
ಬಾರದ ಕತದಿಂ, ಪರಿಕಿಸೆ
ಬಿಂದು ವಿಸರ್ಗಂ
ಸ್ವರಾಂಗಮುಂ; ವ್ಯಂಜನಾಂಗಮುಂ
ತಾಂ ಎಂಬರ್

ಕೇಶಿರಾಜ ಈ ಸೂತ್ರದಲ್ಲಿ ಬಿಂದು, ವಿಸರ್ಗಗಳ ಸ್ವರೂಪವನ್ನು ಹೇಳಿದ್ದಾನೆ. ಬಿಂದು ಮತ್ತು ವಿಸರ್ಗಗಳಿಗೆ ಸ್ವತಂತ್ರ ಉಚ್ಚಾರಣೆ ಇರುವುದಿಲ್ಲ. ಅವು ಸ್ವರ ಮತ್ತು ವ್ಯಂಜನಗಳ ಜೊತೆಗೆ ಬರುವುದರಿಂದ ಅವುಗಳಿಗೆ ಸ್ವರಾಂಗ ಮತ್ತು ವ್ಯಂಜನಾಂಗ ಎಂದು ಕರೆಯುತ್ತಾರೆ. ಅಕ್ಷರಮಾಲೆಯಲ್ಲಿ ಅವುಗಳನ್ನು ಸ್ವರ ಮತ್ತು ವ್ಯಂಜನಗಳ ಮಧ್ಯದಲ್ಲಿ ಸೇರಿಸುವುದುಂಟು.

ಬಿಂದು ಸ್ವರಾಂಗವಾದುದಕ್ಕೆ : ಅಂ, ಆಂ
ವಿಸರ್ಗ ಸ್ವರಾಂಗವಾದುದಕ್ಕೆ : ಅಃ, ಆಃ
ಬಿಂದು ವ್ಯಂಜನಾಂಗವಾದುದಕ್ಕೆ : ಕಂಕಣ > ಕಙ್ಕಣ, ಮಂಟಪ > ಮಣ್ಟಪ

೨೩
ಪ್ರಕಟಿತರ ವ್ಯಂಜನ ಸಂಜ್ಞೆ
ಕಾರದಿಂ
ಕಾರ ಪರ್ಯಂತಂ;
ಪಂಚಕ ಪಂಚಕಂಗಳಿಂ
ಪಂಚಕಂ ಅಕ್ಕುಂ; ವರ್ಗಂ
ಅಂತ್ಯ ವರ್ಣಂ ಅವರ್ಗಂ

‘ಕ’ ಕಾರದಿಂದ ‘ಳ’ ಕಾರದವರೆಗಿನ ವರ್ಣಗಳು ವ್ಯಂಜನಗಳು, ಅವುಗಳಲ್ಲಿಯ ಐದೈದು ವರ್ಣಗಳ ಐದು ಗುಂಪುಗಳಿಗೆ ವರ್ಗೀಯ ವ್ಯಂಜನಗಳೆಂದು ಹೆಸರು (ಕ್ ದಿಂದ ಮ್.) ವರ್ಗೀಯ ವ್ಯಂಜನಗಳ ನಂತರ ಬರುವ ವರ್ಣಗಳು (ಯ ದಿಂದ ಳ) ಅವರ್ಗೀಯ ವ್ಯಂಜನಗಳೆಂದು ಹೆಸರು. ‘ಕ’ ವರ್ಗವು ಕಂಠ್ಯದಲ್ಲಿ, ‘ಚ’ ವರ್ಗವು ತಾಲವ್ಯದಲ್ಲಿ, ಟ ವರ್ಗವು ಮೂರ್ಧನ್ಯದಲ್ಲಿ, ‘ತ’ ವರ್ಗವು ದಂತ್ಯದಲ್ಲಿ ‘ಪ’ ವರ್ಗವು ಓಷ್ಠ್ಯದಲ್ಲಿ ಹುಟ್ಟುವವು. ಅವರ್ಗೀಯ ವ್ಯಂಜನಗಳು ಉತ್ಪತ್ತಿ ಸ್ಥಾನದ ದೃಷ್ಟಿಯಿಂದ ಮೇಲೆ ಹೇಳಿರುವಂತೆ ನಿರುಗೆಗೊಂಡಿಲ್ಲ. ಅವು ಭಿನ್ನ ಸ್ಥಾನಗಳಲ್ಲಿ ಉತ್ಪತ್ತಿಯಾಗುತ್ತವೆ.

ವರ್ಗೀಯ ವ್ಯಂಜಗಳು :
ಕ್, ಖ್, ಗ್, ಘ್, ಙ – ಕ್ ವರ್ಗ
ಚ್, ಛ್, ಜ್, ಝ್, ಞ – ಚ್ ವರ್ಗ
ಟ್, ಠ್, ಡ್, ಢ್, ಣ್ – ಟ್ ವರ್ಗ
ತ್, ಥ್, ದ್, ಧ್, ನ್ – ತ್ ವರ್ಗ
ಪ್, ಫ್, ಬ್, ಭ್, ಮ್ – ಪ್ ವರ್ಗ

ಅವರ್ಗೀಯ ವ್ಯಂಜನಗಳು :
ಯ್, ರ್, ಲ್, ವ್, ಶ್, ಷ್, ಸ್, ಹ್, ಳ್(=ಕ್ಷಳ)

೨೪
ವರ್ಗ ದ್ವಿತೀಯ ವರ್ಣಂ
ವರ್ಗ ಚತುರ್ಥಾಕ್ಷರಂ,
ಮಹಾಪ್ರಾಣಂ;
ಅವಂ ಮಾರ್ಗವಿದರ್
ಸಂಖ್ಯೆಯೊಳಂ
ಭೋರ್ಗರೆವ ಅನುಕೃತಿಯೊಳಂ
ಪ್ರಯೋಗಿಸುತಿರ್ಪರ್

ಕೇಶಿರಾಜ ಈ ಸೂತ್ರದಲ್ಲಿ ಮಹಾಪ್ರಾಣದ ವಿಷಯವಾಗಿ ಹೇಳಿದ್ದಾನೆ. ವರ್ಗೀಯ ವ್ಯಂಜನಗಳ ಎರಡನೆಯ ಮತ್ತು ನಾಲ್ಕನೆಯ ಅಕ್ಷರಗಳೇ ಮಹಾಪ್ರಾಣಗಳು. ವಿದ್ವಾಂಸರು ಅವುಗಳನ್ನು ಸಂಖ್ಯಾವಾಚಕಗಳಲ್ಲಿಯೂ ಅನುಕರಣ ವಾಚಕಗಳಲ್ಲಿಯೂ ಪ್ರಯೋಗಿಸುತ್ತಾರೆ.

ವರ್ಗ ದ್ವಿತಿಯಾಕ್ಷರಗಳು ಮಹಾಪ್ರಾಣಗಳು : ಖ್, ಛ್, ಠ್, ಥ್, ಫ್
ವರ್ಗ ಚತುರ್ಥಾ ಕ್ಷರಗಳು ಮಹಾಪ್ರಾಣಗಳು : ಘ್, ಝ್, ಢ್, ಧ್, ಭ್
ಸಂಖ್ಯಾವಾಚಕಗಳಿಗೆ : ಇರ್ಛಾಸಿರಂ, ನೂರ್ಛಾಸಿರಂ
ಅನುಕರಣೆಗೆ : ಖಣಿಲೆನೆ, ಛುಮ್ಮೆನೆ, ಪಠಿಲೆನೆ, ದೊಪ್ಪಣೆ