೬೨
ಸ್ವರಂ ಇದಿರೊಳ್ ಇರೆ
ವಿಭಕ್ತಿ ಸ್ವರಕಂ
ಪ್ರಕೃತಿ ಸ್ವರಕಂ
ಅಕ್ಕುಂ ಲೋಪಂ;
ವರ ಸಂಸ್ಕೃತ ಕರ್ಣಾಟಕಂ
ಎರಡಱೊಳಂ
ನಾಮರೂಢಿ ಅಳಿಯದಪಕ್ಷಂ

ಸಂಸ್ಕೃತ ಅಥವಾ ಕನ್ನಡದ ಪ್ರಕೃತಿ ಪೂರ್ವಪದವಾಗಿದ್ದು ಅದರ ಮುಂದೆ ಸ್ವರ ಪರವಾಗಿ ಸಂಧಿಯಾಗುವಾಗ, ಪೂರ್ವಪದದ ಅಂತ್ಯಸ್ವರ ಲೋಪವಾಗುತ್ತದೆ. ಅದರಂತೆ ಕನ್ನಡ ವಿಭಕ್ತಿ ಪ್ರತ್ಯಯವನ್ನೊಳಗೊಂಡ ಕನ್ನಡ ಅಥವಾ ಸಂಸ್ಕೃತ ಪದ ಪೂರ್ವ ಪದವಾಗಿದ್ದು ಅದರ ಮುಂದೆ ಸ್ವರ ಪರವಾಗಿ ಸಂಧಿಯಾಗುವಾಗ ಪೂರ್ವಪದದ ಕೊನೆಯ ಸ್ವರ ಲೋಪ ಹೊಂದುತ್ತದೆ. ಅರ್ಥಕ್ಕೆ ಬಾಧೆ ಬರದೆ ಇರುವ ಸಂದರ್ಭಗಳಲ್ಲಿ ಮಾತ್ರ ಸ್ವರಲೋಪಸಂಧಿ ಉಂಟಾಗುತ್ತದೆ.

ಸಂಸ್ಕೃತ ಪ್ರಕೃತಿ ಸ್ವರಲೋಪಕ್ಕೆ :
ಭಂಗ +  ಇಸು = ಭಂಗಿಸು
ರಾಗ +  ಇಸು = ರಾಗಿಸು
ಭಾವ +  ಇಸು = ಭಾವಿಸು

ಸಂಸ್ಕೃತ ವಿಭಕ್ತಿ ಸ್ವರಲೋಪಕ್ಕೆ :
ಗೃಹದಲ್ಲಿ + ಇರ್ದಂ = ಗೃಹದಲ್ಲಿರ್ದಂ
ಈಶ್ವರನ + ಒಲವು = ಈಶ್ವರನೊಲವು

ಕನ್ನಡ ಪ್ರಕೃತಿ ಸ್ವರಲೋಪಕ್ಕೆ :
ಸುತ್ತು + ಓಲೆ = ಸುತ್ತೋಲೆ
ಅಚ್ಚ + ಆನೆ = ಅಚ್ಚಾನೆ
ಅರಸನ + ಆಳ್ = ಅರಸನಾಳ್

ಕನ್ನಡ ವಿಭಕ್ತಿ ಸ್ವರಲೋಪಕ್ಕೆ :
ನೆಲದಿಂದೆ + ಉಣ್ಬಂ = ನೆಲದಿಂದುಣ್ಬಂ
ಮಾಡಿದೆವು + ಒಳ್ಪಂ = ಮಾಡಿದೆವೊಳ್ಪಂ

ಸಂಸ್ಕೃತ ಅರ್ಥ ಕೆಡುವುದಕ್ಕೆ :
ವಿಧು + ಇದು = ವಿಧಿದು
ಪಟು + ಏಕವಾಕ್ಯಂ = ಪಟುವೇಕವಾಕ್ಯಂ

ಕನ್ನಡ ಅರ್ಥ ಕೆಡುವುದಕ್ಕೆ :
ಮಡು + ಇದು = ಮಡಿದು
ಕುಡು + ಇಲ್ಲ = ಕುಡುವಿಲ್ಲ

೬೩
ಆತ್ವದಿಂ, ವರ್ಣದಿಂ,
ಮತ್ತೆ ಓತ್ವದಿಂ ಐತ್ವದಿಂ
ಎವರ್ಣದಿಂ;
ಮುಂದೆ ಅಕ್ಕುಂ ಯತ್ವಂ
ಅದು ಅವಧಾರಣೆಎ ಪರಂ
ಅತ್ವಂ ಪಿಂತು ಆಗೆ
ಷಷ್ಠಿ ನಿಯಮದೆಯತ್ವಂ

ಕೇಶಿರಾಜ ಈ ಸೂತ್ರದಲ್ಲಿ ‘ಯ’ ಕಾರಾಗಮ ಸಂಧಿ ನಿಯಮವನ್ನು ಹೇಳಿದ್ದಾನೆ. ಆ, ಇ, ಈ, ಎ, ಐ, ಓ ಕಾರಾಂತ ಪದಗಳು ಪೂರ್ವ ಪದಗಳಾಗಿದ್ದು ಅವುಗಳ ಮುಂದೆ ಸ್ವರ ಪರವಾದಾಗ, ಪೂರ್ವೋತ್ತರ ಪದಗಳ ನಡುವೆ ‘ಯ’ ಕಾರಾಗಮವಾಗುತ್ತದೆ. ಅದರಂತೆ ಷಷ್ಠಿ ವಿಭಕ್ತಿ ಪ್ರತ್ಯಯವನ್ನೊಳಗೊಂಡ ಪದ ಪೂರ್ವಪದವಾಗಿದ್ದು ಅದರ ಮುಂದೆ ಅವಧಾರಣೆಯ ‘ಎ’ ಕಾರ ಪರವಾಗಲು ‘ಯ’ ಕಾರಾಗಮ ಸಂಧಿಯಾಗುತ್ತದೆ.

ಆ ಕಾರಕ್ಕೆ :
ಆ + ಇರ್ದ = ಆಯಿರ್ದ
ಆಯಿರ್ದ ಮಾೞ್ಕಿಯಿಂ ಪರ
ಮಾಯುಷ್ಯಾಂತಂಬರಂ…..

ಇ ಕಾರಕ್ಕೆ :
ಪಿಡಿ + ಎಂದು = ಪಿಡಿಯೆಂದು
ಪಿಡಿಯೆಂದಸಿತಾಳ ಪತ್ರಮಂ
ಯತಿಕೊಟ್ಟಂ

ಈ ಕಾರಕ್ಕೆ :
ಈ + ಅಲ್ = ಈಯಲ್
ಈಯಲ್ಪಂದತ್ತು ಕಲ್ಪಾಂಘ್ರಿಪಮಭಿಮತಂ….

ಎ ಕಾರಕ್ಕೆ :
ಪಸೆ + ಇರ್ದಂ = ಪಸೆಯಿರ್ದಂ
ಪಸೆಯಿರ್ದಂ ಗರುಡವೇಗನೃಪನಂದನೆಯೊಳ್

ಏ ಕಾರಕ್ಕೆ :
ಉಘೇ + ಎಂದು = ಉಘೇಯೆಂದು
….ಭೋಂ
ಕನೆ ದೇವಸ್ತ್ರೀಯರಾರಾತ್ರಿ ಕಮನು
ಘೆಯುಘೆಯೆಂದು ತಂದೆತ್ತುತಿರ್ದರ್

ಐ ಕಾರಕ್ಕೆ :
ಭೈ + ಎಂಬಿನಂ = ಭೈಯೆಂಬಿನಂ
ಒಡೆದದ್ರಿಕ್ಷಿತಿ ಸಂಧಿ ಪತ್ತುನಿಡೆ ಭೈ ಭೈ ಯೆಂಬಿನಂ ಕಿೞ್ತು….

ಓ ಕಾರಕ್ಕೆ :
ಜೋ + ಎಂದು = ಜೋಯೆಂದು
…ಆಮರಾಂ
ಗನೆಯರ್ ಜೋಯೆಂದು ಪಾಡಿದರ್ ಜೋಗುಳಮಂ

ಅವಧಾರಣೆಗೆ :
ಆತನ + ಎ = ಆತನಯೆ
ಆತನೆಯ ತೋರದೊಡೆಗಳಿ |
ವಾತನ ನಿಡುದೋಳೆ ನಡೆಯುವಾತನ ನುಡಿದಲ್ ||

೬೪
ಸತ್, ಅಮಲ ಸಂಸ್ಕೃತ
ಕರ್ಣಾಟಕದ
ಅದಂತಹ ಪ್ರಕೃತಿಗಳ್ಗೆ
ಇಸು ಪ್ರತ್ಯಯಂ, ಇಂತು ಇದಿರಾಗೆ
ಯತ್ವಂ
ಅನುಕೃತಿ ಪದಕಂ;
ಮುಂದೆ ಅನುಕೃತಿ ಸ್ವರಂ ನಿಲೆ
ಯತ್ವಂ

‘ಅ’ ಕಾರಾಂತ ಸಂಸ್ಕೃತ, ಕನ್ನಡ ಪ್ರಕೃತಿಗಳ ಮುಂದೆ ಪ್ರೇರಣಾರ್ಥಕ ಪ್ರತ್ಯಯ ‘ಇಸು’ ಪರವಾಗಲು ‘ಯ’ಕಾರವಾಗುತ್ತದೆ. ಹಾಗೆಯೇ ‘ಅ’ ಕಾರಾಂತ ಅನುಕರಣವಾಚಕ ಪದಗಳ ಮುಂದೆ ಅನುಕರಣ ಸೂಚಕ ಧ್ವನಿಗಳು ಬಂದಾಗಲೂ ‘ಯತ್ವ’ ವಿಧಿ ಉಂಟಾಗುತ್ತದೆ.

ಸಂಸ್ಕೃತಕ್ಕೆ :
ಶುದ್ಧ + ಇಸಿದಂ = ಶುದ್ಧಯಿಸಿದಂ
ನಿರ್ಣಯ + ಇಸಿದಂ = ನಿರ್ಣಯಿಸಿದಂ
ಪೂರ + ಇಸಿದಂ = ಪೂರಯಿಸಿದಂ

ಕನ್ನಡಕ್ಕೆ :
ಕೋರ + ಇಸಿದಂ = ಕೋರಯಿಸಿದಂ
ತೇರ + ಇಸಿದಂ = ತೇರಯಿಸಿದಂ

ಅನುಕರಣೆಗೆ :
ಪೞಪೞ + ಎಂದು = ಪೞಪೞಯೆಂದು
ಪೞಪೞಯೆಂದಾಲಿಕಲ್ಗಳುದಿರ್ದುವು ನಭದಿಂ

೬೫
ಅವತರಿಸಿರ್ಕುಂ
ಉವರ್ಣದ,
ಋವರ್ಣದ,
ಓತ್ವ, ಔತ್ವದ ಅಗ್ರದೊಳ್
ಸ್ವರಂ ಇರೆ
ವತ್ವಂ ವಿಧಾನಂ;
ಬಹುಳತೆ ಯತ್ವವತ್ವದೊಳ್
ಸಂಸ್ಕೃತಕ್ಕೆ ತಾಂ ಇಲ್ಲಂ ಎಂದುಂ

ಕೇಶಿರಾಜ ಈ ಸೂತ್ರದಲ್ಲಿ ವ ಕಾರಾಗಮ ಸಂಧಿ ನಿಯಮವನ್ನು ಹೇಳಿದ್ದಾನೆ. ಉ, ಊ, ಋ, ೠ, ಓ ಮತ್ತು ಔ ಕಾರಾಂತ ಪದಗಳು ಪೂರ್ವಪದವಾಗಿದ್ದು ಅದರ ಮುಂದೆ ಸ್ವರಾದಿಯಾದ ಪದ ಬರಲು ಅವೆರಡರ ಮಧ್ಯದಲ್ಲಿ ವ ಕಾರಾಗಮವಾಗುತ್ತದೆ. ಸಂಸ್ಕೃತ ಶಬ್ದಗಳಲ್ಲಿ ಯ ಕಾರ ಮತ್ತು ವ ಕಾರ ಆಗಮಗಳಿಗೆ ವಿಕಲ್ಪವಿಲ್ಲ.

ಉ ಕಾರಕ್ಕೆ :
ಮನು + ಇನ = ಮನವಿನ
ಮನುವಿನ ಮಾರ್ಗಂ ಸುರುಗುರು
ವಿನಱವು…..

ಊ ಕಾರಕ್ಕೆ :
ಪೂ + ಇನ = ಪೂವಿನ
ಪೂವಿನ ಬಿಲ್ಲ ಕೊಪ್ಪನೊದೆದೇಱಸಿ ತಾವರೆನೂಲ ನಾರಿಯಂ
ಜೇವೊಡೆಗೆಯ್ದು…..

ಋ ಕಾರಕ್ಕೆ :
ಹೋತೃ + ಎ = ಹೋತೃವೆ
ಹೋತೃವೆಯಾನ ಧ್ವರಿಯೈ
ಭ್ರಾತೃವೆ ನೀನುೞದ ಋತ್ವಿಜರ್…..

ೠ ಕಾರಕ್ಕೆ :
ೠ + ಎಂದು = ೠವೆಂದು
ೠ + ಇತ್ತಂ = ೠವಿತ್ತಂ

ಓ ಕಾರಕ್ಕೆ :
ಗೋ + ಇನ = ಗೋವಿನ

ಔ ಕಾರಕ್ಕೆ :
ನೌ + ಅಂ = ನೌವಂ

ಕನ್ನಡದಲ್ಲಿ ಯತ್ವ, ವತ್ವಗಳಿಗೆ ಬಹುಳತೆಯಂ ಲೋಪವುಂಟು. :

ಒತ್ತೆ + ಇಟ್ಟಂ = ಒತ್ತಿಟ್ಟಂ, ಒತ್ತೆಯಿಟ್ಟಂ
ಮಾತು + ಎಲ್ಲಂ = ಮಾತೆಲ್ಲಂ, ಮಾತುವೆಲ್ಲಂ

ಸಂಸ್ಕೃತ ಶಬ್ದದಲ್ಲಿನ ಯತ್ವ ವತ್ವಗಳಿಗೆ ವಿಕಲ್ಪವಿಲ್ಲ :

ನದಿ + ಎಲ್ಲಂ = ನದಿಯೆಲ್ಲಂ
ನದಿಯೆಲ್ಲಂ ಸುರಸಿಂಧುವೆ…
ವಿಧು + ಇಲ್ಲಂ = ವಿಧುವಿಲ್ಲ
ವಿಧುವಿಲ್ಲದಿರುಳ್….

೬೬
ಅವಿಕೃತಿಗಳ್ , ವರ್ಣಂ
, ವರ್ಣಂ ಅಂತ್ಯ
ಎನಿಸಿದ ನಿಪಾತಂ
ಅವಧಾರಣೆ
ತಳ್ತ ವಿಶಂಕೆಗಳ್
ಎಂಬಿವಱೊಳ್ ವ್ಯವಹರಿಸದು
ಸಂಧಿ ಪ್ಲುತಕ್ಕಂ ಅಭಾವಂ

ಈ ಸೂತ್ರದಲ್ಲಿ ಕೇಶಿರಾಜ ವಿಸಂಧಿಯ ನಿಯಮವನ್ನು ಹೇಳಿದ್ದಾನೆ. ಎ, ಏ, ಒ, ಓ ಕಾರಗಳು ಅಂತ್ಯವಾದ ನಿರ್ವಿಕಾರಿಗಳೆನಿಸುವ ನಿಪಾತ, ಅವಧಾರಣೆ ಹಾಗೂ ವಿಶಂಕೆಯ ಪದಗಳು ಪೂರ್ವ ಪದಗಳಾಗಿದ್ದು ಅವುಗಳ ಮುಂದೆ ಸ್ವರ ಪರವಾದರೆ ಅದರಂತೆ ಪ್ಲುತಾಕ್ಷರಗಳ ಮುಂದೆ ಸ್ವರ ಪರವಾದರೆ ಸಂಧಿಕಾರ್ಯ ಘಟಿಸುವುದಿಲ್ಲ.

ನಿಪಾತಕ್ಕೆ :
ಅರೆ + ಎಡೆ = ಅರೆಎಡೆ
ಅರೆಎಡೆ ಹಸ್ತಿ ಶಿಕ್ಷಣ ವಿಚಕ್ಷಣರಿಂದರೆ
ಅಶ್ವ ಶಿಕ್ಷೆಯಿಂ….
ಎಲೇ + ಇದಲ್ತೆ = ಎಲೇಇದಲ್ತೆ
ಎಲೇಇದಲ್ತೆತುಹಿನಕ್ಷೋಣೀಧ್ರದುತ್ತುಂಗಸಾ
ನುಗುಳೊಳ್…
ಓಹೋ + ಇರಲಿಂ = ಓಹೋಇರಲಿಂ
ಓಹೋಇರಲಿಂ ಪೆಱವರ
ಮಹಾತ್ಮ್ಯಮುಂ…

ಅವಧಾರಣೆಗೆ :
ಆತನೆ + ಇಂದ್ರಂ = ಆತನೆ ಇಂದ್ರಂ
…ಧನಮುಳ್ಳನಾವೊನಂ
ತಾತನೆ ಇಂದ್ರನಾತನೆ ಗುರ್ಣೋನ್ನತನಾತನೆ ಅಂಬುಜೋದರಂ

ವಿಶಂಕೆಗೆ :
ಈವನೆ + ಅಃ ಪಿರಿದೀವಂ = ಈವನೆ ಅಃ ಪಿರಿದೀವಂ
ಇನಿಯನೆ ಬೆಲ್ಲ ದಿಂದಿನಿಯನೀ ವನೆ ಅಃ ಪಿರಿದೀವನಿತ್ತುದಂ
ನೆನೆವನೆ ಚಿಃ ಅದಂ ನೆನೆಯಂ
ಆನೆಯೊ + ಅದ್ರಿಯೊ = ಆನೆಯೊ ಅದ್ರಿಯೊ

ಪ್ಲುತಕ್ಕೆ :
ಹಾರಾಮಾ + ಎಂದು = ಹಾರಾಮಾಎಂದು
ಕುಕ್ಕೂಕ್ಕೂ+ ಎಂದು = ಕುಕ್ಕೂಕ್ಕೂಎಂದು
ಕುಕ್ಕೂಕ್ಕೂ ಎಂದು ಕೋೞ ಕೂಗಿದುವಾಗಳ್

೬೭
ಮೆಚ್ಚಿನೊಳ್,
ಆಕ್ಷೇಪಕದೊಳ್,
ಬೆಚ್ಚ ಅಭ್ಯುಪಗಮಂ ಅರ್ಥದ
ಎಮ ಶಬ್ದಂ,
ಕಟ್ಟಚ್ಚರಿಯ ಗಡಾರ್ಥಂ
ಬಿಚ್ಚಿರ್ಕುಂ ಸ್ವರಂ ಇದಿರೊಳ್
ಇರೆ ಖೇದದೊಳಂ

ಕೇಶಿರಾಜ ಈ ಸೂತ್ರದಲ್ಲಿಯೂ ವಿಸಂಧಿಯ ಪ್ರಕ್ರಿಯೆಯನ್ನು ಕುರಿತು ಹೇಳಿದ್ದಾನೆ. ಮೆಚ್ಚುಗೆಯನ್ನು ಸೂಚಿಸುವ, ಆಕ್ಷೇಪಾರ್ಥವನ್ನು ಕೊಡುವ ‘ಓ’ ಕಾರಾಂತ ಪದಗಳ ಮುಂದೆ ಸ್ವರ ಪರವಾದಲ್ಲಿ ಸಂಧಿ ಮಾಡಲಾಗದು. ‘ಎಮ’ ಅಂತ್ಯವಾದ ಅಂಗೀಕಾರಾರ್ಥದ ಪದ ಪೂರ್ವ ಪದವಾಗಿದ್ದು ಅದಕ್ಕೆ ಸ್ವರ ಪದವಾದಲ್ಲಿಯೂ ಸಂಧಿಯಿಲ್ಲ, ಆಶ್ಚರ್ಯಾರ್ಥದ ‘ಗಡ’ ಎಂಬುದಕ್ಕೆ ಆದೇಶವಾಗಿ ಬರುವ ‘ಆ’ ಕಾರದ ಮುಂದೆ ಸ್ವರ ಪರವಾದಾಗಲೂ ಸಂಧಿಯಿಲ್ಲ. ಖೇದವನ್ನು ಸೂಚಿಸುವ ಪದದ ಮುಂದೆ ಸ್ವರ ಬಂದಾಗಲೂ ಸಂಧಿಯಿಲ್ಲ.  ಅಲ್ಲಿ ವಿಸಂಧಿಯಾಗುತ್ತದೆ.

ಮೆಚ್ಚಿಗೆ : ಏನೇನೋ + ಓದಿನ = ಏನೇನೋ ಓದಿನ
ಆಕ್ಷೇಪಕ್ಕೆ : ಎಡಱದನೋ + ಅವನ = ಎಡಱದನೋ ಅವನ
ಎಮ ಶಬ್ದಕ್ಕೆ : ಸಿಂಗಮಕ್ಕೆಮ + ಅಂಜೆಂ = ಸಿಂಗಮಕ್ಕೆಮಅಂಜೆಂ
ಗಡಾರ್ಥದ ಆ ಕಾರಕ್ಕೆ : (ಪಾಲ್ + ಗಡ > ಆ = ಪಾಲಾ)+ ಅಮರ್ದಾ = ಪಾಲಾ ಅಮರ್ದಾ
ಖೇದಕ್ಕೆ : ಅಕ್ಕಟಾ + ಇಂದ್ರಂಗೆ = ಅಕ್ಕಟಾ ಇಂದ್ರಂಗೆ

೬೮
ಪೊಱಗು, ಒಳಗು ಪೊಸತು,
ಪೞದು, ಎಳದು ಅಱಕೆಯ
ಅದಂತತೆಯಂ
ಸಮಾಸಾಂತರದೊಳ್
ನೆಱಿತಾಳ್ದು ಸಂಧಿ ಆಗದು.
ತಱಿಸಂದು ಇದಿರೊಳ್
ಆವುವು ನಿಲೆಯುಂ

ಪೊಱಗು, ಒಳಗು, ಪೊಸತು, ಪೞದು, ಎಳದು ಎಂಬ ಪದಗಳು ಪೂರ್ವ ಪದಗಳಾಗಿದ್ದು ಸಂಧಿಯಾಗುವಾಗ ಅವು ಅಕಾರಾಂತವಾಗುವುದರಿಂದ ಅವುಗಳ ಮುಂದೆ ಯಾವುದೆ ಸ್ವರ ಪರವಾದಾಗಲೂ ಸಂಧಿಕಾರ್ಯ ಘಟಿಸುವುದಿಲ್ಲ.

ಪೊಱಗು > ಪೊಱ + ಅಡಿ = ಪೊಱಅಡಿ
ಒಳಗು > ಒಳ + ಅಟ್ಟಂ = ಒಳಅಟ್ಟಂ
ಪೊಸತು > ಪೊಸ + ಅಡಕೆ = ಪೊಸಅಡಕೆ
ಪೞದು > ಪೞ + ಅಲುಗು = ಪೞಅಲುಗು
ಎಳದು > ಎಳ + ಅಂಚೆ = ಎಳಅಂಚೆ

೬೯
ಪರಪದದ ಪೂರ್ವಂ,
ದ್ವಿತ್ವಾಕ್ಷರಂ ಆಗಿರೆ,
ಪೂರ್ವಪದದ ಚರಮಂ
ಹ್ರಸ್ವಾಕ್ಷರಂ ಆಗೆ
ಸಂಧಿದೋಷಂ;
ಸರೇಫ ಇದಿರಾಗೆ
ಶಿಥಿಲವೆಂದು ಅನುಕರಿಪರ್

ಕೇಶಿರಾಜ ಈ ಸೂತ್ರದಲ್ಲಿ ಸಂಧಿದೋಷ ಕುರಿತು ಹೇಳಿದ್ದಾನೆ. ಪೂರ್ವಪದದ ಅಂತ್ಯಾಕ್ಷರ ಹ್ರಸ್ವವಾದ್ದು, ಪರಪದದ ಆದಿಯಲ್ಲಿ ದ್ವಿತ್ವಾಕ್ಷರ ಇರುವಲ್ಲಿ ಸಂಧಿ ಮಾಡಿದರೆ ಅದು ಸಂಧಿದೋಷವೆನಿಸುವುದು ಆದರೆ ಉತ್ತರ ಪದದ ಆದಿಯಲ್ಲಿ ಸರೇಫ ದ್ವಿತ್ವವಿದ್ದರೆ ಆ ದ್ವಿತ್ವ ಶಿಥಿಲವೆಂದು ಪರಿಗಣಿಸಿ ಸಂಧಿ ಮಾಡಬಹುದು. ಕೇಶಿರಾಜ ಈ ಸೂತ್ರದಲ್ಲಿ ಛಂದಸ್ಸಿನ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಆತನ ಅಭಿಪ್ರಾಯದಂತೆ ಛಂದೋರಚನೆಯಲ್ಲಿ ಪೂರ್ವಪದದ ಅಂತ್ಯಾಕ್ಷರವು ಲಘುವಾಗಿದ್ದರೆ ಉತ್ತರಪದವು ದ್ವಿತ್ವಾಕ್ಷರದಿಂದ ಪ್ರಾರಂಭವಾಗಬಾರದು ಎಂಬುದೇ ಆಗಿದೆ. ಒಂದು ವೇಳೆ ಹಾಗಿದ್ದರೆ ಸಂಧಿದೋಷವಾಗುತ್ತದೆ. ಒಂದು ವೇಳೆ ಉತ್ತರಪದದ ಆದಿಯು ರೇಫಯುಕ್ತವಾಗಿದ್ದರೆ ಪೂರ್ವಪದದ ಅಂತ್ಯವು ಲಘುವಾಗಿಯೇ ಉಳಿಯಬೇಕು. ಆದುದರಿಂದಲೇ ರೇಫಯುಕ್ತ ವಾದ ಅಕ್ಷರವನ್ನು ಶಿಥಿಲವೆಂದು ಅಂಗೀಕರಿಸುವುದು.

ಸಂಧಿ ದೋಷಕ್ಕೆ : ಕೇಳ್ದು + ಸ್ಥಿರಮಿರ್ದು = ಕೇಳ್ದುಸ್ಥಿರಮಿರ್ದು
ಸರೇಫ ಸಂಧಿಗೆ : ಪ್ರಣಮದೆ + ತ್ರಿಪಥೆಗೆ = ಪ್ರಣಯದೆ ತ್ರಿಪಥೆಗೆ ಪ್ರಣಯದೆ ತ್ರಿಪಥೆಗೆ ನಡೆತರೆ ತ್ರಿಣೇತ್ರನೊಲವಿಂದೆ ತಾಳ್ದಿದಂ ಮಸ್ತಕದೊಳ್

೭೦
ಬಗೆಯದೆ ಸತೃಣ, ಅಭ್ಯವಹಾರಿಗಳ್
ಉಸಿರ್ವರ್,
ಗದ್ಯಕಾವ್ಯದೊಳ್ ನಿರ್ಬಂಧಂ
ಪುಗದೆಂದು,
ಅರೋಚಿಗಳ್ ಆದಂ ತೆಗೞೆಂದು
ಗದ್ಯಪದ್ಯ ಕಾವ್ಯದೊಳ್ ಇಕ್ಕರ್

ಹಿಂದಿನ ಸೂತ್ರದಲ್ಲಿ ಹೇಳಿದ ನಿಯಮವು ಗದ್ಯಕಾವ್ಯಗಳಿಗೆ ಅನ್ವಯವಾಗುವುದಿಲ್ಲ ವೆಂದು ತಿಳಿವಳಿಕೆಯಿಲ್ಲದವರು (ಸತೃಣಾಭ್ಯವಹಾರಿಗಳು) ವಿಚಾರಿಸದೆ ಸರೇಫ ದ್ವಿತ್ವಸಂಧಿ ಯನ್ನು ಮಾಡುತ್ತಾರೆ. ವಿವೇಕಿಗಳು ದೋಷವೆಂದು ತಿಳಿದು ಅದನ್ನು ಗದ್ಯಪದ್ಯ ಕಾವ್ಯ ಗಳಲ್ಲಿಯೂ ಅಂತಹ ಸಂಧಿಯನ್ನು ಮಾಡುವುದಿಲ್ಲ.

೭೧
ಕರೆಗೆ, ಅತ್ವದ ಇರ್ಗೆ ಅಲ್
ಅದೆ ಪರಮಿರೆ
ಪದ್ಯಅರ್ಧ
ವಾಕ್ಯವೇಷ್ಟನದ ಎಡೆಗಂ
ಸ್ಫುರತ್ ಅನುಕೃತಿಗಂ
ಸ್ವರಂ ಅವು ಪರಂಇರೆ ಋತ್ವಕ್ಕಂ
ಅಂತೆ ಸಂಧಿ ವಿಕಲ್ಪಂ

‘ಕರೆ’ ಎಂಬುದಕ್ಕೆ ‘ಅಲ್’ ಎಂಬುದು ಪರವಾದರೂ ‘ಇರ್’ ಎಂಬುದಕ್ಕೆ ‘ಅದೆ’ ಎಂಬುದು ಪರವಾದರೂ ಪದ್ಯಾರ್ಧದ ಕಡೆಯ ಅಕ್ಷರ, ಉದ್ದರಣ ವಾಕ್ಯದ ಕಡೆಯ ಅಕ್ಷರ ಮತ್ತು ಅನುಕರಣ ಶಬ್ದಗಳಿಗೆ ಸ್ವರವು ಪರವಾದಾಗಲೂ ಸಂಧಿ ವಿಕಲ್ಪವಾಗಿ ಬರುತ್ತದೆ.

ಅಲ್ ಅದೆಗಳ ವಿಸಂಧಿಗೆ :
ಕರೆ + ಅಲ್ = ಕರೆಅಲ್
ಇರ + ಅದೆ = ಇರಅದೆ

ಅಲ್ ಆದೆಗಳ ಸಂಧಿಗೆ :
ಕರೆ + ಅಲ್ = ಕರೆಯಲ್
ಮೆಯ್ಗರೆಯಲ್ ಪಾಂಡವರ್ಗೆ ನೆಱದುವುಬರಿಸಂ
ಇರ + ಅದೆ = ಇರದೆ
ಇರದೆ
ಗರ್ಜಿಸಿಬೊಪ್ಪಲಂ ತಳರ್ದಂ ಜವಂ
ತಳರ್ವಂದದಿಂ

ಪದ್ಯಾರ್ಧ ವಿಸಂಧಿಗೆ :
ಅಲ್ಲಿಯಿದುಂಟೆಎಂಬರ್ಥದೊ
ಳೆಲ್ಲಿಯಮಳ್ಳೊಡೆಯ ವಂತ ಶಬ್ದಮವಕ್ಕುಂ
ಎಲ್ಲಂದದೊಳಂ ಪೋಲಿಸು
ವಲ್ಲಿ ಗುಣಾಧಿಕರೊಳಂತೆ ವೋಲ್ತಾನಕ್ಕು
(ಕಾ.ಲೋ. ೩೩೬)

ಪದ್ಯಾರ್ಧಸಂಧಿಗೆ :
ಬನದೊಳಗೆ ಪೋಗಿ ಪೂಸ ಪೂ
ವಿನಗೊಂಚಲನಕ್ಕ ನಿನಗೆ ತಂದಪ್ಪೆಂ ನೀ
ನಿನಿತೊಂದು ಬೇಗ ಮಂ ಮಾ
ಣ್ದಿನಿಯನ ಪಕ್ಕದೊಳಿರೆಂದು ಸಖಿತೊಲಗುವುದುಂ   (ಕಾ.ಲೋ. ೬೨೨)

ವಾಕ್ಯವೇಷ್ಟನ ವಿಸಂಧಿಗೆ …… : ಕಃ
ಕೇನಾರ್ಥೀ ಕೋ ದರಿದ್ರಃ + ಎನುತುಮನಿತುಮಂ
ಧರ್ಮಜಂ
ಸೊೞಗೊಟ್ಟಂ;
ನ ದೇವಚರಿತಂ ಚರೇತೆನಿಸಿದೈ ತ್ರಿಲೋಕೇಶ್ವರಾ
ಅನುಕರಣ ವಿಸಂಧಿಗೆ : ಕವಕ್ಕವ + ಎಲೆ + ಊಊ = ಕವಕ್ಕವ
ಎಲೆಉಊ
ಕವಕ್ಕವ ಎಲೆಉಊ ಪೋ ಪುಗಲ್ ಪುಗಲೆಂದೊಚ್ಚ
ತಮಾಳ್ವ ಕೋಗಿಲೆಯುಂ
ಅನುಕರಣ ಸಂಧಿಗೆ : ಛುಮ್ + ಎಂಬ = ಛುಮ್ಮೆಂಬ
ಛುಮ್ಮೆಂಬ ಛಟಚ್ಛಟೆಂಬ…

ಋ ಕಾರ ವಿಸಂಧಿಗೆ :
ಎಸೆಗುಂ + ಋಜಗತಂ = ಎಸೆಗುಂಋಜಗತಂ
ಎಸೆಗುಂ ಋಜಗತಂ ಕಣ್ಗೊಸುಗುಮಳ
ವಟ್ಟರ್ಧ ಋಜಗತಂ

ಋ ಕಾರ ಸಂಧಿಗೆ :
ಸರಸಂ + ಋಜು = ಸರಸಮೃಜು
ಸರಸಮೃಜು ವೀರನೆಂದಾ
ತರುಣಿಯನೊಸೆದಿತ್ತಂ…