೭೨
ಪದಯುಗದ ಸಂಧಿಯಂ
ಬೇಱಿ ಒಂದು ಅಸಹ್ಯೋಕ್ತಿ
ಪುಟ್ಟೆ ಮಾಡುವುದುಂ
ಮಾರ್ಗದೊಳ್;
ಉಳ್ಳಸಂಧಿಯಂ ಕಿಡಿಪುದುಂ
ಆಗದು ತಾಂ ಯಥೇಷ್ಟಮೆಂದು
ಅಱೆವುಳ್ಳರ್

ಕೇಶಿರಾಜ ಈ ಸೂತ್ರದಲ್ಲಿ ಶ್ರುತಿಸಹ್ಯಸಂಧಿ ಕುರಿತು ಹೇಳಿದ್ದಾನೆ. ಎರಡು ಪದಗಳನ್ನು ಸೇರಿಸಿ ಸಂಧಿ ಮಾಡುವುದರಿಂದ ಆ ಎರಡೂ ಪದಗಳಿಗಿಂತ ಭಿನ್ನವಾದ ಬೇರೊಂದು ಅಸಹ್ಯ ಅರ್ಥ ಬರುವ ಪದ ಉಂಟಾಗುತ್ತಿದ್ದರೆ ಅಂತಹ ಕಡೆಗಳಲ್ಲಿ ಸಂಧಿ ಮಾಡಕೂಡದು. ಅದೇ ರೀತಿ ಸಂಧಿ ಮಾಡುವುದು ಯಥೇಷ್ಟವೆಂದು ಭಾವಿಸಿ, ರೂಢಿಯಲ್ಲಿರುವ ಸಂಧಿಗಳನ್ನು ಕೆಡಿಸಲೂಬಾರದು (ವಿಸಂಧಿ ಮಾಡಲಾಗದು).

ಸಂಧಿದೋಷಕ್ಕೆ :
ಬನ್ನಿಯತರು + ಡಕ್ಕೆಗೆ = ಬನ್ನಿಯತರುಡಕ್ಕೆಗೆ
ಬನ್ನಿಯ ತರುಡಕ್ಕೆಗೆ ಸುರ
ಹೊನ್ನೆಯತರು ಡಮರುಗಕ್ಕೆ ಕಡುನಿದಪ್ಪಾ
ಚೆನ್ನಂಗಿಯತರುಡಾನೆಗೆ
ಪೊನ್ನಂ ಕುಡುವೆಡೆಗೆ ಕಲ್ಪತರುಡಾಕರಸಾ

ಸಂಧಿದೋಷದ ಅಸಹ್ಯೋಕ್ತಿಗೆ :
ಆಸೆಗಣಿತಾ

ವಿಸಂಧಿ ದೋಷಕ್ಕೆ :
ಅಸಿಯೊಱೆ < ಅಸಿಯ ಒಱ
ಅಸಿಯಒಱೆಬೆಸೆದಪೆಟ್ಟಿಗೆ…

೭೩
ಎರಡುಂ ರೇಫೆಗಳಂ
ತಂದು,
ಉರವಣೆಯಿಂ ಕುಡಿದಂತೆ ವೋಲ್
ಶ್ರುತಿಕಷ್ಟಂ;
ಬರೆಸಂಧಿಮಾಡಲ್ ಆಗದು
ಕರಡೆಯ ಗಿರ್ಗಟದ ದನಿವೊಲ್
ಅಮರವು ಎಂದುಂ;

ಪೂರ್ವಪದದ ಅಂತ್ಯಾಕ್ಷರ ಹಾಗೂ ಪರಪದದ ಆದಿ ಅಕ್ಷರ ಇವೆರಡು ರೇಫೆಗಳಾಗಿರುವಲ್ಲಿ ಅವೆರಡನ್ನು ಒತ್ತಾಯದಿಂದ ಸೇರಿಸಿ ಸಂಧಿಮಾಡಲಾಗದು. ಹಾಗೆ ಮಾಡಿದರೆ ಅದು ಶ್ರುತಿ(ಕಿವಿ)ಗೆ ಕರ್ಕಶವೆನಿಸುವುದು ಆ ಎರಡು ರೇಫೆಗಳು ಕರಡೆಯ  ಗಿರ್ಗಟದ ಧ್ವನಿಯಂತೆ ಒಂದಕ್ಕೊಂದು ಹೊಂದಿಕೊಳ್ಳಲಾರವು.

ಎರಡು ರೇಫೆಗಳ ಸಂಧಿದೋಷಕ್ಕೆ :
ಮೂವರ್ + ರಾಯರ್ = ಮೂವರ್ರಾಯರ್
ಮೂವರ್ರಾಯರನೆ ಮಾಱುವಂತೆಸೆ ದಿರ್ಕುಂ

೭೪
ಅವಧಾರಣೆಎ
ಅನಿಯೋಗ ವ್ಯವಹೃತಿಯಿಂದ
ಇರೆ,
ನಿಪಾತ ವಿಷಯದೊಳ್
ಅಲ್ಪಾರ್ಥವಂ ಆಳ್ದಅರೆ,
ವಸ್ತುವಿನ ಅರ್ಧವಂ ಉಸಿರುತ್ತಿರೆ
ತಗಳ್ಚುವುದು ಸಂಹಿತೆಯಂ

ಅವಧರಣೆಯ ‘ಎ’ ತನ್ನ ನಿಯತಾರ್ಥವನ್ನು ಬಿಟ್ಟು ಅನಿಯೋಗವಾದಾಗಲೂ ನಿಪಾತ ವಾಗಿದ್ದಾಗ ಅಲ್ಫಾರ್ಥವನ್ನು ಪಡೆದಿರುವ ‘ಅರೆ’ ಎಂಬುದು ಯಾವುದಾದರೂ ಒಂದು ವಸ್ತುವಿನ ಅರ್ಧಭಾಗವನ್ನು ಸೂಚಿಸುವಾಗಲೂ ಸಂಧಿಯಾಗುತ್ತದೆ.

ಅವಧಾರಣೆಯ ಅನಿಯೋಗ ಸಂಧಿಗೆ :
ಮಾಮರನಲ್ಲದೆ + ಇಲ್ಲ = ಮಾಮರನಲ್ಲದಿಲ್ಲ
ಮಾಮರನಲ್ಲದಿಲ್ಲ ತನಿಗಂಪಿನ
ಮಲ್ಲಿಗೆ ಯಲ್ಲದಿಲ್ಲ….

ನಿಯೋಗ ವಿಸಂಧಿಗೆ :
ಮಾಮರನದೆ ಇನಿದಪ್ಪ ತನಿವಣ್ಣನೀಗುಂ.

ಅರ್ಧವೆಂಬರ್ಥದ ಅರೆಯ ಸಂಧಿಗೆ :
ಅರೆ + ಅಂ = ಅರೆಯಂ
ಕುರುಪತಿಯಂ ವಿಷ್ಣು ಬೇಡಿದಂ
ಧರೆಯರೆಯಂ

೭೫
ಇರೆವರ್ಗಪ್ರಥಮಂಗಳ್
ಪರದೊಳ್, ವರ್ಗಂ
ಉೞಿಯೆ,
ತಮ್ಮ ತೃತೀಯಾಕ್ಷರಂ ಅಕ್ಕುಂ
ಪದವಿಧಿಯೊಳ್
ಪರಿಹರಿಸಲ್ಪಾರದು
ಅಲ್ಲಿ ಬಹುಳಸ್ಥಿತಿಯಂ

ಸಮಾಸವಾಗುವಾಗ ಚ, ಟ ವರ್ಗಗಳನ್ನುಳಿದು ಕ, ತ, ಪ ವರ್ಗಗಳ ವರ್ಗ ಪ್ರಥಮಾಕ್ಷರಗಳಾದ ಕ, ತ, ಪ ಗಳು ಉತ್ತರ ಪದದ ಆದಿಯಲ್ಲಿದ್ದು ಸಮಾಸ ಕ್ರಿಯೆಯಲ್ಲಿ ಅವುಗಳಿಗೆ ಕ್ರಮವಾಗಿ ಅವುಗಳ ತೃತೀಯಾಕ್ಷರಗಳಾದ ಗ, ದ, ಬ ಗಳು ಆದೇಶವಾಗುತ್ತವೆ. ಇದಕ್ಕೆ ವಿಕಲ್ಪವೂ ಉಂಟು.

ಕ ಕಾರದ ತೃತೀಯಾಕ್ಷರಕ್ಕೆ :
ಪೞ + ಕನ್ನಡ = ಪೞಗನ್ನಡ
ಪೞಗನ್ನಡದೆ ಪುದುಂಗೊಳೆ
ಕೊೞಿ ಸಕ್ಕದಮಂ ತಗುಳ್ಚಿಜಣ್ಕೆಡೆ….

ತ ಕಾರದ ತೃತೀಯಾಕ್ಷರಕ್ಕೆ :
ಕಣ್ + ತೆರವು = ಕಣ್ದೆರವು
ಕಣ್ದೆಱವಿನ ಮೇಲ್ದುಟಿ…..

ಪ ಕಾರದ ತೃತೀಯಾಕ್ಷರಕ್ಕೆ :
ತಣ್ + ಪುೞಲ್ = ತಣ್ಬುೞಲ್
…ತಣ್ಬುೞ್‌ಲ್ ತಳದೊಳ್ ರುದ್ರಂ ಕಂಡಲ್ಲಿ
ಕಣ್ಬೊಲನಾಗೆ….

ವಿಕಲ್ಪತೆಗೆ :
ತಲೆ + ಕಟ್ಟು = ತಲೆಕಟ್ಟು
ಏದು + ಪಂದಿ = ಏದುಪಂದಿ
ಬೆಸೆ + ಕೋಲ್ = ಬೆಸೆಕೋಲ್

೭೬
ಒಂದು ಎರಡರ್ಕೆ ಕಾರಕ್ಕೆ
ಅಂದಾ
ಆದೇಶ ರೇಫೆಗಂ,
ಡತ್ವಕ್ಕಂ ಬಂದ ಆದೇಶ ಱೞಕ್ಕಂ
ಸಂಧಿಸದು
ತೃತೀಯವೃತ್ತಿ
ಕ್ಕೆ ಎಂದುಂ

ಸಮಾಸವಾಗುವಾಗ ಒಂದು, ಎರಡು ಎಂಬ ಶಬ್ದಗಳು ಪೂರ್ವಪದಗಳಾಗಿದ್ದು ಸಮಾಸ ಕ್ರಿಯೆಯಲ್ಲಿ ಅವುಗಳಿಗೆ ಕ್ರಮವಾಗಿ ‘ಒರ್’, ‘ಇರ್’ ಎಂದು ಆದೇಶವಾಗುತ್ತವೆ. ಹೀಗೆ ಆದೇಶವಾಗಿ ಬಂದ ಪದಗಳ ಮುಂದೆ ‘ಱ’ ಕಾರಕ್ಕೆ ಆದೇಶವಾಗಿ ಬಂದ ರೇಫೆಯ ಮುಂದೆ ‘ಡ’ ಕಾರಕ್ಕೆ ಆದೇಶವಾಗಿ ಬಂದ ‘ಱೞ’ಕಾರದ ಮುಂದೆ ವರ್ಗ ಪ್ರಥಮಾಕ್ಷರಗಳಿಗೆ (ಕ.ತ.ಪ) ವರ್ಗ ತೃತೀಯಾಕ್ಷರಗಳು (ಗ,ದ,ಬ) ಆದೇಶವಾಗುವುದಿಲ್ಲ.

ಒಂದಕ್ಕೆ ಆದೇಶವಾದ ರೇಫೆಗೆ :
ಒಂದು + ಕೈಸು > ಒರ್ + ಕೈಸು = ಒರ್ಕೈಸು (ಕ > ಕ)
ಒರ್ಕೈಸಿಬಿಲ್ಲಮಂಬುಮ
ನುರ್ಕಾಳ್ಗಳ್…
ಒಂದು + ತುತ್ತು > ಒರ್ + ತುತು = ಒರ್ತ್ತುತ್ತು
(ತ > ತ)
ಒಂದು + ಪಿಡಿ > ಒರ್ + ಪಿಡಿ = ಒರ್ಪಿಡಿ (ಪ > ಪ)

ಎರಡಕ್ಕೆ ಆದೇಶವಾದ ರೇಫೆಗೆ :
ಎರಡು + ಕೋಡಿ > ಇರ್ + ಕೋಡಿ = ಇರ್ಕೋಡಿ
(ಕ > ಕ)
ಇರ್ಕೋಡಿಯುಂ ತೀವಿನಾಲ್
ದೆಸೆಗಂಸೂಸಿ…
ಎರಡು + ತಲೆ > ಇರ್ + ತಲೆ = ಇರ್ತಲೆ (ತ > ತ)
ಎರಡು + ಪತ್ತು > ಇರ್ + ಪತ್ತು = ಇರ್ಪತ್ತು
(ಪ > ಪ)

ಱ ಕಾರಕ್ಕಾದೇಶವಾದ ರೇಫೆಗೆ :
ಮಾಱ್ + ಕೊರಲ್ > ಮಾರ್ +
ಕೊರಳ್ = ಮಾರ್ಕೊರಲ (ಕ > ಕ)
ಮಾರ್ಕೊರಲ ಭೈರವಂ
ಆಱ್ + ತು > ಆರ್ + ತು = ಆರ್ತು (ತ > ತ)
ಏಱ್ + ಪೆತ್ತರ್ > ಏರ್ + ಪೆತ್ತರ್ = ಏರ್ಪೆತ್ತರ್
(ಪ > ಪ)

ಡ ಕಾರಕ್ಕಾದೇಶವಾದ ರೇಫೆಗೆ :
ಕಾಡು + ಕಿಚ್ಚು > ಕಾೞ್ + ಕಿಚ್ಚು = ಕಾೞಚ್ಚು
(ಕ > ಕ)
ಕಾೞ್ಕಿಚ್ಚು ತಗುಳೆ ತನ್ನೊಳ್
ಕೋೞ್ಕುಟ್ಟಿವನದ್ವಿಪೇಂದ್ರ ವತಿಭಯವಶದಿಂ
ಕಾಡು + ತುಱು > ಕಾೞ್ + ತುಱು = ಕಾೞ್ತುಱು
(ತ > ತ)
ಕಾಡು + ಪುರ > ಕಾೞ್ + ಪುರ = ಕಾೞ್ಪುರ (ಪ > ಪ)

೭೭
ವಿದಿತ ಸ್ವರದಿಂ
ಅನಾದೇಶದ
ಸಹಜ ವ್ಯಂಜನಂಗಳಿಂ
ಪರದ ಪವರ್ಗದ ನೆಲೆಗೆ
ಅಕ್ಕುಂ ವತ್ವಂ;
ಪದವಿಧಿಯೊಳ್
ಬಹುಳ ವೃತ್ತಿಯಿಂ ವಾಕ್ಯದೊಳಂ

ಸಮಾಸವಾಗುವಲ್ಲಿ ಪೂರ್ವಪದದ ಅಂತ್ಯದಲ್ಲಿ ಸ್ವರವಿದ್ದು ಅದರ ಮುಂದೆ ಪ ವರ್ಗ (‘ಪ.ಬ.ಮ’) ಪರವಾದಾಗ, ಆ ಪವರ್ಗಕ್ಕೆ ವಿಕಲ್ಪವಾಗಿ ‘ವ’ ಕಾರಾದೇಶವಾಗುತ್ತದೆ. ಆದೇಶರಹಿತ ಸಹಜ ವ್ಯಂಜನಗಳ ಮುಂದೆ ಪರವಾದ ‘ಪ’, ‘ಬ’, ‘ಮ’ಗಳಿಗೂ ವಿಕಲ್ಪವಾಗಿ ‘ವ’ ಕಾರಾದೇಶವಾಗುತ್ತದೆ. ಸಮಾಸವಿಲ್ಲದೆ ಕೆಲವು ಸಲ ವಾಕ್ಯ ಮಧ್ಯದಲ್ಲೂ ವಿಕಲ್ಪವಾಗಿ ‘ವತ್ವ’ ಉಂಟಾಗುತ್ತದೆ.

ಸ್ವರಕ್ಕೆ :
ಬಳೆ + ಪೊಲಂ = ಬೆಳೆವೊಲಂ
ಎಳದು + ಪೆಱ = ಎಳವೆಱ
ಕಡು + ಬೆಳ್ಪು = ಕಡುವೆಳ್ಪು
ಪೆರ್ + ಬೆಳೆ = ಪೆರ್ವಳೆ
ಮರ + ಮಣಿ = ಮರವಣಿ
ಪೞ + ಮಾನಸ = ಪೞವಾನಸ

ಸಹ ವ್ಯಂಜನಕ್ಕೆ :
ಬಾಯ್ + ಪಱ = ಬಾಯ್ವಱ
ಪಲ್ + ಪಱ = ಪಲ್ವಱ
ಬೇರ್ + ಬೆರಸಿ = ಬೇರ್ವರಸಿ
ಮೆಲ್ + ಮಾತು = ಮೆಲ್ವಾತು

ವಾಕ್ಯದಲ್ಲಿಯ ವತ್ವಕ್ಕೆ :
ತಮರೂರ್ಗೆ + ಪೋಪ = ತಮರೂರ್ಗೆವೋಪ
ತಮರೂರ್ಗೆವೋಪ ಕುಲಜಂಗನೆಯರ್…….
ಗರಟಿಗೆ + ಬರ್ಪಂತೆ = ಗರಟಿಗೆವರ್ಪಂತೆ
…….ಕಾಮನ
ಗರಟಿಗೆವರ್ಪಂತೆ ಸುತ್ತಿವರ್ಪವು ಗಿಳಿಗಳ್

೭೮
ಇರೆ ರಹಿತ ವ್ಯಂಜನ
ಪರಂ ಆಗಿ ಕಾರಂ,
ಅಲ್ಲಿ ಬಹುಳಂ ಚತ್ವಂ,
ಅರೆಎಡೆಯೊಳ್ ಜತ್ವಂ,
ಮೇಣ್ ಅರೆಎಡೆಯೊಳ್
ಸಂಖ್ಯೆ ಆಗೆ ನಿಯತಂಛತ್ವಂ

ಸಮಾಸವಾಗುವಾಗ ಪೂರ್ವಪದದ ಅಂತ್ಯದಲ್ಲಿ ‘ಯ’ ಕಾರ ಮತ್ತು ‘ಲ’ ಕಾರಗಳನ್ನು ಬಿಟ್ಟು ಉಳಿದ ವ್ಯಂಜನಗಳಿಗೆ ಪರವಾದ ಸಕಾರಕ್ಕೆ ಹೆಚ್ಚಾಗಿ ಚ ಕಾರದೇಶವಾಗುತ್ತದೆ. ‘ಸ’ ಕಾರಕ್ಕೆ ಕೆಲವು ಕಡೆ ‘ಜ’ ಕಾರಾದೇಶವಾಗುವುದೂ ಉಂಟು. ಮತ್ತೆ ಕೆಲವು ಕಡೆಗಳಲ್ಲಿ ಉತ್ತರ ಪದವು ಸಂಖ್ಯಾವಾಚಕವಾಗಿದ್ದರೆ ‘ಛ’ ಕಾರಾದೇಶವಾಗುತ್ತದೆ.

ಸ ಕಾರಕ್ಕೆ ಚ ಕಾರ :
ನುಣ್ + ಸರ = ನುಣ್ಚರ
ನುಣ್ಚರದ ತಿಣ್ಪುಂ ಘನಘೋಷ ಗಭೀರಂ….

ಸ ಕಾರಕ್ಕೆ ಜ ಕಾರ :
ಪೊನ್ + ಸುರಿಗೆ = ಪೊಂಜುರಿಗೆ
…ಕಟ್ಟಿದ ಪೊಂ
ಜುರಿಗೆಯೊಳಂ ಜನಮನೇಂ
ಮನಂಗೊಳಿಸಿದನೋ

ಸ ಕಾರಕ್ಕೆ ಛ ಕಾರ :
ನೂರ್ + ಸಾಸಿರ = ನೂರ್ಛಾಸಿರ
ನೂರ್ಛಾಸಿರಂಗಳವೊಲಾಯ್ತು ರಥಂ
ಕಡು ವೇಗದಂ

ಬಹುಳಕ್ಕೆ :
ಕಳ್ + ಸವಿ = ಕಳ್ಸವಿ
ಕಳ್ಸವಿಗೆ ಕುಡಿದುಂ ಧನಮಂ…

೭೯
ಮೊದಲೊಳ್ ಹ್ರಸ್ವ
ಏಕ ಸ್ವರಂ ಒದವೆ
ಪರಂ ಸ್ವರಂ ಆಗೆ;
ಳಂಗಳ್ಗೆ
ಉದಯಿಸುಗುಂ ದ್ವಿತ್ವಂ
ಪೂರ್ವದೀರ್ಘಕ್ಕೆ ಅವ್ಯಯಕ್ಕೆ
ವರ್ಣತತಿಗೆ ಅದ್ವಿತ್ವಂ

ಕೇಶಿರಾಜ ಈ ಸೂತ್ರದಲ್ಲಿ ದ್ವಿತ್ವ ಸಂಧಿಯ ನಿಯಮವನ್ನು ಹೇಳಿದ್ದಾನೆ. ಸಮಾಸ ಕ್ರಿಯೆಯಲ್ಲಿ ಪೂರ್ವ ಪದಗಳ ಅಂತ್ಯದಲ್ಲಿ ನ, ಣ, ಲ, ಯ, ಳ ಕಾರಗಳಿದ್ದು ಅವುಗಳ ಹಿಂದೆ ಒಂದೇ ಹ್ರಸ್ವಾಕ್ಷರವಿರುವ ಪದವಿರಬೇಕು ಉತ್ತರ ಪದದಲ್ಲಿ ಸ್ವರ ಪರವಾದಲ್ಲಿ ಪೂರ್ವ ಪದಾಂತ್ಯ ನ, ಣ, ಲ, ಯ, ಳ ಕಾರಗಳಿಗೆ ದ್ವಿತ್ವ ಉಂಟಾಗುತ್ತದೆ. ಪೂರ್ವ ಪದದ ಆದಿಯಲ್ಲಿ (ನ, ಣ, ಲ, ಯ, ಳ ವ್ಯಂಜನಗಳ ಹಿಂದಿನ ಅಕ್ಷರ) ದೀರ್ಘವಿದ್ದರೆ, ಪೂರ್ವಪದ ಅವ್ಯಯವಾಗಿದ್ದರೆ ಅಥವಾ ಅದು ಅನೇಕಾಕ್ಷರಗಳಿಂದ ಕೂಡಿದ ಪದವಾಗಿದ್ದರೆ ಪೂರ್ವಪದಗಳ ಅಂತ್ಯದಲ್ಲಿರುವ ನ, ಣ, ಲ, ಯ, ಳ ಗಳಿಗೆ ದ್ವಿತ್ವವಿಲ್ಲ.

ನ ಕಾರ ದ್ವಿತ್ವಕ್ಕೆ :
ಬೆನ್ + ಅಂ = ಬೆನ್ನಂ
ಬಿಡುಮುಡಿ ಬೆನ್ನನಪ್ಪಳಿಸ…..

ಣ ಕಾರ ದ್ವಿತ್ವಕ್ಕೆ :
ಕಣ್ + ಏಂ = ಕಣ್ಣೇಂ
ಮನದೊಳ್ ದಯೆಯಿಲ್ಲದವನ ಕಣ್ಣೇಂ ಪುಣ್ಣೇಂ

ಲ ಕಾರ ದ್ವಿತ್ವಕ್ಕೆ :
ನೆಲ್ + ಉಂ = ನೆಲ್ಲುಂ
ನೆಲ್ಲುಂ ಕೌಂಗು ಮಾವುಂ
ಮಲ್ಲಿಗೆಯುಂ ಬೆಳವುವಲ್ಲಿ ಕರ್ವಿನ
ರಸದಿಂ…

ಯ ಕಾರ ದ್ವಿತ್ವಕ್ಕೆ :
ಮೆಯ್ + ಅ = ಮೆಯ್ಯ
ಮೆಯ್ಯ ಮಸಿ ಕೊರಲ ಬಕ್ಕಳೆ
ಪೊಯ್ಯೆ ಫಲಿಲ್ಗೆರೆವ ಕೈಯ ಕಂಕರಿಕೆ…

ಳ ಕಾರಕ್ಕೆ :
ಒಳ್ + ಅಳ್ = ಒಳ್ಳಾಳ್
ಒಳ್ಳಾಳಡೆಗೋದನೊದಱಚಟ್ಟನೊಳೊವಜಂ

ಆದಿ ದೀರ್ಘದ ಅದ್ವಿತ್ವಕ್ಕೆ :
ನ ಕಾರ :
ತಾನ್ + ಎ = ತಾನೆ
ತಾನೆ ಗಡಳಿಪಂ ಮೂರ್ಖಂ……

ಣ ಕಾರ :
ನಾಣ್ + ಅಂ = ನಾಣಂ
ನಾಣಂ ಪಿಂಗಿಸಿ ಮುಗ್ಧೆಗೆ
ಜಣಂ ಕೈಕೊಳಿಸುವಂತೆ…..

ಲ ಕಾರ :
ಕೀಲ್ + ಅಂ = ಕೀಲಂ
ಜಂತ್ರದ ಕೀಲಂ ಕಳೆದಂತಿರಾಯ್ತು…

ಯ ಕಾರ :
ಬಾಯ್ + ಒಳ್ = ಬಾಯೊಳ್
ಬಾಯೊಳ್ ಪದಿನಾಲ್ಕು ಲೋಕಮಿರ್ದುದ ಕಂಡೆಂ

ಳ ಕಾರ :
ಆಳ್ + ಆಳ್ = ಆಳಾಳ್
ಆಳಾಳೋಳಿಯ ಮಾನಸಂಗೆ ಬಡವಂಗೆ…

ಅವ್ಯಯದ ಅದ್ವಿತ್ವಕ್ಕೆ :
ದಲ್ + ಇವಂ = ದಲಿವಂ
ಕಲಿ ದಲಿವಂ ಜವನಲ್ಲಿಯುಂಡಿಗೆದಂದನೋ

ಅನೇಕಾಕ್ಷರದ ಅದ್ವಿತ್ವಕ್ಕೆ :
ಪರಲ್ + ಎಲ್ಲಂ = ಪರಲೆಲ್ಲಂ
ಪರಲೆಲ್ಲಂ ಮುತ್ತು ಮಾಣಿಕಂ ಪಾಸಱಗಳ್
ಪರುಸಂಗಳ್…

೮೦
ಧಾತುಗೆ ಅಲ್, ಉಂ ಪರಂ ಆದೊಡೆ,
ಅಜತಂ ದ್ವಿತ್ವಂ,
ಯಕಾರದಲ್ಲಿ ವಿಕಲ್ಪಂ;
ಮಾತೇಂ ಉಯ್, ನೆಯ್
ಸುಯ್, ಬಯ್
ಧಾತುಗಳೊಳ್
ದ್ವಿತ್ವ ಅಲ್ಲದೆ ಇಲ್ಲ ವಿಕಲ್ಪಂ

ಸಮಾಸ ಕ್ರಿಯೆಯಲ್ಲಿ ನ, ಣ, ಲ, ಳ ಕಾರಗಳು ಅಂತ್ಯದಲ್ಲಿ ಧಾತುಗಳು ಪೂರ್ವಪದಗಳಾಗಿದ್ದು ಪರದಲ್ಲಿ ಅಲ್ ಬಂದಾಗ ಪೂವಪದದ ಅಂತ್ಯವ್ಯಂಜನಗಳು ದ್ವಿತ್ವ ಹೊಂದುವುದಿಲ್ಲ. ಪೂರ್ವಪದದ ಅಂತ್ಯದಲ್ಲಿ ಯ್ ಕಾರವಿದ್ದು ಮುಂದೆ ಅಲ್ ಪರವಾದಾಗ ಯ ಕಾರ ದ್ವಿತ್ವವಿಕಲ್ಪ. ಉಯ್, ನೆಯ್, ಸುಯ್, ಬಯ್ ಧಾತುಗಳ ಮುಂದೆ ಅಲ್ ಪರವಾದಾಗ ಪೂರ್ವಪದಾಂತ್ಯ ಯ್ ವ್ಯಂಜನಕ್ಕೆ ನಿತ್ಯದ್ವಿತ್ವ ಉಂಟಾಗುತ್ತದೆ.

ಅದ್ವಿತ್ವಕ್ಕೆ :
ಎನ್ + ಅಲ್ = ಎನಲ್, ಎನಲ್ತಕ್ಕಂ
ಉಣ್ + ಅಲ್ = ಉಣಲ್, ಉಣಲ್ಬಗೆದಂ
ಕಳ್ + ಅಲ್ = ಕಳಲ್, ಕಳಲ್ನೋಡಿದಂ

ಯ ಕಾರ ವಿಕಲ್ಪಕ್ಕೆ :
ಪೊಯ್ + ಅಲ್ = ಪೊಯಲ್, ಪೊಯ್ಯಲ್
ಕೊಯ್ + ಅಲ್ = ಕೊಯಲ್, ಕೊಯ್ಯಲ್

ಉಯ್, ನೆಯ್, ಸುಯ್, ಬಯ್‌ಗಳ ದ್ವಿತ್ವಕ್ಕೆ :
ಉಯ್ + ಅಲ್ = ಉಯ್ಯಲ್
ನೆಯ್ + ಅಲ್ = ನೆಯ್ಯಲ್
ಸುಯ್ + ಅಲ್ = ಸುಯ್ಯಲ್
ಬಯ್ + ಅಲ್ = ಬಯ್ಯಲ್

೮೧
ಪ್ರತಿಷೇಧದ
ಧಾತುಗೆ ಮುಂದೆ
ತಱುಂಬೆ,
ವಿಭಕ್ತಿ ಪೂರ್ವಕಾಲ ಕ್ರಿಯೆಯೊಳ್
ಪ್ರತಿಷೇಧದ ಅದೆ ಎಂಬುದು
ಮುಂದೆ ತೋಱ ಮೇಣ್,
ದ್ವಿತ್ವ ವೃತ್ತಿ ನಿತ್ಯಂ ಎನಿಕ್ಕುಂ

ಪೂರ್ವ ಪದಗಳೆನಿಸುವ ಧಾತುಗಳ ಅಂತ್ಯದಲ್ಲಿ ನ್, ಣ್, ಲ್, ಯ್, ಳ್ ಕಾರಗಳಿದ್ದು ಅವುಗಳ ಮುಂದೆ ಪ್ರತಿಷೇಧಾರ್ಥದಲ್ಲಿ ಆಖ್ಯಾತ ಪ್ರತ್ಯಯಗಳು ಪರವಾಗಲು ಪೂರ್ವ ಪದಾಂತ್ಯ ವ್ಯಂಜನಗಳಿಗೆ ನಿತ್ಯ ದ್ವಿತ್ವ ಉಂಟಾಗುತ್ತದೆ. ಅದೇ ರೀತಿ ಭೂತಕಾಲದ  ಪ್ರತಿಷೇಧ ಪ್ರತ್ಯಯ ಅದೆ ಪರವಾದಾಗಲೂ ಪೂರ್ವಪದದ ಅಂತ್ಯದಲ್ಲಿರುವ ವ್ಯಂಜನಗಳಿಗೆ ದ್ವಿತ್ವ ಉಂಟಾಗುತ್ತದೆ.

ವಿಭಕ್ತಿ ಪರವಾಗಲು :
ಎನ್ + ಅಂ = ಎನ್ನಂ
ಉಣ್ + ಅಲ್ = ಉಣ್ಣಲ್
ಬಯ್ + ಎನ್ = ಬಯ್ಯೆನ್
ಕೊಳ್ + ಎನ್ = ಕೊಳ್ಳೆನ್

ಅದೆ ಪರವಾಗಲು :
ಎನ್ + ಅದೆ = ಎನ್ನದೆ
ಉಣ್ + ಅದೆ = ಉಣ್ಣದೆ
ಒಲ್ + ಅದೆ = ಒಲ್ಲದೆ
ಬಯ್ + ಅದೆ = ಬಯ್ಯದೆ
ಕೊಳ್ + ಅದೆ = ಕೊಳ್ಳದೆ

ಇದು ಶಬ್ದಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿ ದರ್ಪಣದ ಎರಡನೆಯ ಪ್ರಕರಣವಾದಸಂಧಿ ಪ್ರಕರಣಮುಗಿಯಿತು.