೧೦೬
ಸಂಗಡಿಸಿ ಸರ್ವನಾಮದ
ಲಿಂಗ ಅಂತ್ಯ ಅಕ್ಷರಕಂ;
ಅವುವಿನ ಆದಿ ಅಕ್ಷರಕಂ
ಪಿಂಗದೆ ಲೋಪಂ
ಗುಣವಚನಂಗಳೊಳ್ ಅಂತ್ಯಂ
ದುಕಾರಂ ಆದೊಡೆ ಲೋಪಂ;

ಸರ್ವನಾಮದ ಅಂತ್ಯಾಕ್ಷರಕ್ಕೆ ಮತ್ತು ಉತ್ತರ ಪದದಲ್ಲಿರುವ ಅವು ಎಂಬುದರ ಮೊದಲ ಅಕ್ಷರಕ್ಕೂ ಲೋಪ ಬರುತ್ತದೆ. ಗುಣವಚನಗಳಲ್ಲಿ ಅಂತ್ಯ ದು ಕಾರವಿದ್ದರೆ ಅದು ಲೋಪವಾಗುತ್ತದೆ.

ಸರ್ವನಾಮಕ್ಕೆ :
ಎಲ್ಲದು + ಅವು = ಎಲ್ಲವು
ಮಾಲೆವೂಗಳೆಲ್ಲವಱ ಕದಂಬಗಂಪನಣ ಮೊಲ್ಲದೆ…
ಇದೇ ರೀತಿ, ಪೆಱವಱ, ಪೆಱವಱೂಳ್

ಗುಣವಚನಕ್ಕೆ :
ಪಿರಿದು + ಅವು = ಪಿರಿಯವು
ಬಿರಯಿಗಳ ಸುಯ್ಗಳೊಡನೆಯೆ
ಪಿರಿಯವು ದಿವಸಂಗಳಾದುವು…

೧೦೭
ಅಕ್ಕುಂ ಕೂಡೆ ತುಕಾರಾಂತಕ್ಕೆ
ತೃತೀಯತ್ವಂ,
ಅವುವಿನ ಆದಿಗೆ ಲೋಪಂ
ಮಿಕ್ಕ ಸ್ತ್ರೀ ಪುಲ್ಲಿಂಗದೊಳ್ ಅಕ್ಕುಂ
ಇರ್, ಅರ್, ದಿರ್, ವಿರ್
ಎಂದು ಲೋಕೋಕ್ತಿಗಳೊಳ್

ತು ಕಾರಾಂತ ಗುಣವಚನಗಳ ಮುಂದೆ ಬಹುವಚನ ಪ್ರತ್ಯಯ ‘ಅವು’ ಸೇರುವಾಗ ಗುಣವಚನದ ಅಂತ್ಯ ತು ಕಾರಕ್ಕೆ ವರ್ಗ ತೃತೀಯಾಕ್ಷರದ ‘ದು’ ಕಾರ ಆದೇಶವಾಗಿ ಅವು ಪ್ರತ್ಯಯದ ಆದಿಯ ಅ ಕಾರ ಲೋಪ ಹೊಂದುತ್ತದೆ. ಉಳಿದ ಸ್ತ್ರೀಲಿಂಗ, ಪುಲ್ಲಿಂಗಗಳಿಗೆ ಬಹುವಚನದಲ್ಲಿ ಗಳ್‌ಗೆ ಪ್ರತಿಯಾಗಿ ಇರ್, ಅರ್, ದಿರ್, ವಿರ್ ಎಂಬ ಪ್ರತ್ಯಯಗಳು ಸೇರಿಕೊಳ್ಳುತ್ತವೆ.

ಗುಣವಚನಕ್ಕೆ :
ಬೆಟ್ಟಿತು > ದು + ಅವು = ಬೆಟ್ಟಿದುವು
ಬೆಟ್ಟಿದುವೆನಿಪ್ಪ ಲೋಹಖುರ ವಳಯಂಗಳ್….

ಇರ್‌ಗೆ :
ತೊೞ್ತು + ಇರ್ = ತೊೞರ್
… ತದ್ಧಾರಾಪುರ ಸ್ತ್ರೀಯರಂ |
ತೊೞರ್ ಮಾಡಿದ…

ಅರ್‌ಗೆ :
ನಂಟ + ಅರ್ = ನಂಟರ್
ನಂಟರ ನಲ್ಲರ ಮಾತುಗೇಳದೋತನೆ
ಪರಮಾತ್ಮಂ….
ಇದೇ ರೀತಿ ದೇವರ್, ನಲ್ಲರ್

ದಿರ್‌ಗೆ :
ಇವಳ್ + ದಿರ್ = ಇವಳ್ದಿರ್
ಇವನ್ + ದಿರ್ = ಇವಂದಿರ್
ಇವಳ್ದಿರೊಳಿವಂದಿರಂ ವಿಕೃತರೂಪರಂ

ವಿರ್‌ಗೆ :
ತಾಯ್ + ವಿರ್ = ತಾಯ್ವಿರ್
ತಂದೆ + ವಿರ್ = ತಂದೆವಿರ್
ಅವನತವಾಗಿ ತಂದೆವಿರ ತಾಯ್ವಿರ ಕಲ್ಪಿಸಿದುಕ್ತಿ ಕೇಳ್ದು

೧೦೮
ಬರೆ ಪುಂ ಸ್ತ್ರೀಲಿಂಗಮುಂ
ಅಮರ್ದಿರೆ
ಸಂಖ್ಯೆ, ಸರ್ವನಾಮ,
ಕೃತ್, ಗುಣವಚನ,
ಸ್ಫುರತ್ ಉರು
ತದ್ದಿತ ಮುಂ ಅರು (ಅರ್) ಅಕ್ಕುಂ
ಅದಂತ ಲಿಂಗದೊಳ್ ವಿಧಿಲೋಪಂ

ಸ್ತ್ರೀಲಿಂಗ, ಪುಲ್ಲಿಂಗ ಪದಗಳಿಗೆ ಬಹುವಚನದಲ್ಲಿ ಅರ್ ಪ್ರತ್ಯಯ ಬರುತ್ತದೆ. ಸಂಖ್ಯಾವಾಚಕ, ಸರ್ವನಾಮ, ಕೃತ್, ಗುಣವಚನ, ತದ್ದಿತಗಳು, ಪುಂಸ್ತ್ರೀಲಿಂಗ ವಾಚಕವಾಗಿದ್ದರೆ, ಬಹುವಚನದಲ್ಲಿ ಅರ್ ಪ್ರತ್ಯಯ ಬರುತ್ತದೆ. ಅ ಕಾರಾಂತ ಪುಲ್ಲಿಂಗ ಪದಗಳು ಬಹುವಚನವಾಗುವಾಗ ಅರ್ ಪ್ರತ್ಯಯ ಸೇರುತ್ತದೆ. (ಇರ್, ವಿರ್, ದಿರ್ ಪ್ರತ್ಯಯಗಳಿಗೆ ಲೋಪ).

ಪುಲ್ಲಿಂಗಕ್ಕೆ :
ಕೋವಿದ + ಅರ್ = ಕೋವಿದರ್
…ಕಾರ್ಯವಿಚಾರ
ಕೋವಿದರಿರ್ದು
ಪೇ (ಡದು) ಬೇಸಱವಾಗದು ನೀತಿಮಾರ್ಗದೊಳ್
ಇದೇ ರೀತಿ, ಅರಸರ್, ಸಾಮಂತರ್, ನಂದವರ್

ಸ್ತ್ರೀ ಲಿಂಗಕ್ಕೆ :
ದೇವಿ + ಅರ್ = ದೇವಿಯರ್ ಇದೇ ರೀತಿ ಕಾಂತೆಯರ್

ಸಂಖ್ಯೆಗೆ :
ಎರಡು > ಇರ್ + ಅರ್ = ಇರ್ವರ್
ತಮ್ಮಿಂದಿರ್ವರುಂ ಕೈದುವಂ ಬಿಸುಟರ್

ಸರ್ವನಾಮಕ್ಕೆ :
ಅವನ್ (ಳ್) + ಅರ್ = ಅವರ್
ಅವರಿವರುವರಳವೇ ಕಾವ್ಯವಿದ್ಯೆಗಳ್…

ಕೃತ್ತಿಂಗೆ :
ಮಾಡಿದ + ಅರ್ = ಮಾಡಿದರ್
…ಕಬ್ಬದೊ
ಳೊಡಂಬಡಂ ಮಾಡಿದರ್ ಪುರಾತನ ಕವಿಗಳ್
ಇದೇ ರೀತಿ ಬೇಡಿದರ್, ಪೇಳಿದರ್

ಗುಣವಚನಕ್ಕೆ :
ಬಲ್ಲಿತು > ದು + ಅರ್ = ಬಲ್ಲಿದರ್
ಎನಗೆ ಬಲ್ಲಿದರಾಗಲಾರ್ಪರೆ ಗಾವಿಲರ್…
ಇದೇ ರೀತಿ ಒಳ್ಳಿದರ್

ತದ್ದಿತಕ್ಕೆ :
ಮಣಿಗಾಱ + ಅರ್ = ಮಣಿಗಾಱರ್
ಮಣಿಗಾಱರ ಕಂಚಗಾಱರೂಱಗಾಱರ…..
ಇದೇ ರೀತಿ ಕಂಚುಗಾಱರ್

ವಿಧಿಲೋಪಕ್ಕೆ :
ಸುರ + ಅರ್ = ಸುರರ್

೧೦೯
ಪವಣೊಳಂ, ಸಂಖ್ಯೆಯೊಳಂ
ವ್ಯವಹರಿಕುಂ, ವತ್ವಂ
ಅಲ್ಲಿ ಬತ್ವದಲ್ಶ್ರುತಿಯುಂ ಸಂಭವಿಕುಂ
ಅದಂತಂ
ನಿಲೆ ಬಿಂದು ವಿಕಲ್ಪಂ
ಬತ್ವಂ ಒಮ್ಮೆ ಲೋಪಮಂ ಆಳ್ಗುಂ

ಪುಲ್ಲಿಂಗ, ಸ್ತ್ರೀಲಿಂಗ ರೂಪದ ಪ್ರಮಾಣವಾಚಕ, ಸಂಖ್ಯಾವಾಚಕಗಳ ಮುಂದೆ ಬಹುವಚನದ ಅರ್ ಪ್ರತ್ಯಯ ಸೇರುವಾಗ ಕೆಲವೆಡೆ ಅರ್ ಪ್ರತ್ಯಯದ ಅ ಕಾರಕ್ಕೆ ವ ಕಾರವೂ ಮತ್ತೆ ಕೆಲವೆಡೆ ಅ ಕಾರಕ್ಕೆ ಬ ಕಾರವೂ ಉಂಟಾಗುತ್ತದೆ. ಅ ಕಾರಾಂತ ಪದಗಳ ಮುಂದೆ ಅರ್ ಬಂದಾಗ ಅ > ಬ ಆಗುವುದು ಹಾಗೂ ಅದರ ಆದಿಯಲ್ಲಿ ವಿಕಲ್ಪವಾಗಿ ಬಿಂದು ಬರುತ್ತದೆ.

ಪ್ರಮಾಣದ ವ ಕಾರಕ್ಕೆ :
ಎಲ್ಲರು + ಅರ್ = ಎಲ್ಲವರ್
ಎಲ್ಲವರಂತೆ ವೊಲ್ ನುಡಿವರಲ್ಲರವರ್…

ಸಂಖ್ಯೆಯ ವ ಕಾರಕ್ಕೆ :
ಮೂವತ್ತು ಮೂ (>ಮೂರು) + ಅರ್ =
ಮೂವತ್ತುಮೂವರ್
ಮೂವತ್ತು ಮೂವರಾದರ್ ದೇವರ್…

ವ ಕಾರಕ್ಕೆ ಪರವಾದ ಬ ಕಾರಕ್ಕೆ :
(ಪ್ರಮಾಣ) ಅನಿತು + ಅರ್ = ಅನಿಬರ್
(ಸಂಖ್ಯೆ) ಎರಡು > ಇರ್ + ಅರ್ = ಇರ್ಬರ್
ನೆರೆದರಸುಗಳ
ನಿಬರುಮಂ ಕಾದಿ ಗೆಲ್ದ ನೊರ್ಬನೆ ಪಾರ್ಥಂ

ಅ ಕಾರಾಂತ ಬಿಂದುವಿಗೆ :
ಪಲವು > ಪಲ + ಅರ್ = ಪಲಂಬರ್

ಅ ಕಾರಾಂತ ಬಿಂದು ವಿಕಲ್ಪಕ್ಕೆ :
ಪಲವು > ಪಲ + ಅರ್ = ಪಲಬರ್

ಬ ಕಾರ ಲೋಪಕ್ಕೆ :
ಪಲವು > ಪಲ + ಅರ್ = ಪಲರ್

೧೧೦
ಪವಣಂ ಸೂಚಿಪ, ಸಂಖ್ಯೆಯ
ಅವಿಶೇಷದಿಂ ಉಸಿರ್ವ
ರೂಢಿಯ ಅನಿತು, ಇನಿತು, ಎನಿತು,
ಎಲ್ಲವು ಕೆಲವು ಪಲವು ತಾಂ
ಅಂತ್ಯವರ್ಣ ಲೋಪಮನೆ
ವತ್ವಂ ಒಡವಿರೆ ಪಡೆಗುಂ

ಅನಿತು, ಇನಿತು, ಎನಿತು ಎಂಬ ಪ್ರಮಾಣವಾಚಕಗಳ ಮುಂದೆ ಎಲ್ಲವು ಕೆಲವು, ಪಲವು ಎಂಬ ಅನಿರ್ದಿಷ್ಟ ಸಂಖ್ಯಾವಾಚಕಗಳ ಮುಂದೆ ಅರ್ ಪ್ರತ್ಯಯ ಪರವಾದಾಗ ಪೂರ್ವ ಪದಗಳಾದ ಪ್ರಮಾಣವಾಚಕ, ಸಂಖ್ಯಾವಾಚಕಗಳ ಅಂತ್ಯಾಕ್ಷರ ಲೋಪವಾಗುತ್ತದೆ.

ಪ್ರಮಾಣಕ್ಕೆ :
ಅನಿತು > ಅನಿ + ಅರ್ = ಅನಿಬರ್
ಇದರಂತೆ ಇನಿಬರ್, ಎನಿಬರ್

ಸಂಖ್ಯೆಗೆ :
ಎಲ್ಲವು > ಎಲ್ಲ + ಅರ್ = ಎಲ್ಲವರ್
ಇದರಂತೆ ಕೆಲವರ್, ಪಲವರ್

೧೧೧
ವಿಕಲ್ಪಂ, ಪೆಱವಱೊಳ್
ಅರ್, ವಿರ್, ಗೆ ಕಳ್, ಆಗಮಂ
ಅಂತೆ ಸರ್ವನಾಮದೊಳಂ
ತಾಂ ಪ್ರಕಟಂ
ಗಳ್ ಆಗಮಂ ತಿಳಿ ವಿಕಲ್ಪದಿಂದೆ
ಅಪ್ಪುದು
ಅಲ್ತೆಗಳ್ ದಿರ್, ವಿರ್ಗಂ

ಕೆಲವು ಕಡೆ ಅರ್, ವಿರ್ ಬಹುವಚನ ಪ್ರತ್ಯಯಗಳು ಸೇರಿ ಮುಂದೆ ಕಳ್ ಎಂಬ ಇನ್ನೊಂದು ಪ್ರತ್ಯಯ ಆಗಮವಾಗುವುದು. ಸರ್ವನಾಮಗಳ ಮುಂದೆ ಬಹುವಚನದ ಅರ್ ಪ್ರತ್ಯಯ ಸೇರಿ ಮುಂದೆ ಗಳ್ ಪ್ರತ್ಯಯ ಸೇರುತ್ತದೆ. ಕೆಲವೆಡೆ ಬಹುವಚನ ದಿರ್, ವಿರ್ ಪ್ರತ್ಯಯಗಳಿಗೆ ಬದಲಾಗಿ ವಿಕಲ್ಪದಿಂದ ಗಳ್ ಪ್ರತ್ಯಯಬರುತ್ತದೆ.

ಅರ್‌ಪರದ ಕಳಾಗಮಕ್ಕೆ :
ಬುಧರ್ + ಕಳ್ = ಬುಧರ್ಕಳ್
ಸದಭಿಮತ ಕಾವ್ಯಪದವಿ (ಧಿ)
ವಿದೂರಗತ ಮಾ(ಗೆ)ಪರಿಹಾರಕ್ಕೆ ಬುಧರ್ಕಳ್

ವಿರ್ ಪರದ ಕಳಾಗಮಕ್ಕೆ :
ತಾಯ್ವಿರ್ + ಕಳ್ = ತಾಯ್ವಿರ್ಕಳ್

ಅರ್ವಿರ್ಗಳಿಲ್ಲದ ಕಳಾಗಮಕ್ಕೆ :
ಮಗು + ಕಳ್ = ಮಕ್ಕಳ್

ಸರ್ವನಾಮಪರದ ಗಳಾಗಮಕ್ಕೆ :
ಅವರ್ + ಗಳ್ = ಅವರ್ಗಳ್

ವಿಕಲ್ಪದಿಂದ ದಿರ್‌ಗೆ ಗಳ್ :
ಅಣ್ಣಂದಿರ್ > ಅಣ್ಣಂಗಳ್

ವಿಕಲ್ಪದಿಂದ ವಿರ್‌ಗೆ ಗಳ್ :
ಅತ್ತೆವಿರ್ > ಅತ್ತೆಗಳ, ತಂದೆವಿರ್ > ತಂದೆಗಳ್

೧೧೨
ಸವನಿಪುದು ಅಯತ್ನ
ಕೃತ ಗೌರವ ಮುಖದೊಳ್,
ಗುರು ಮುನೀಶ್ವರ
ಆದಿ ವಿಶಿಷ್ಟ
ಉದ್ಭವ ವಿನಿಯದೊಳ್,
ಒಂದಿದ
ಅಸಹ್ಯ ವೃತ್ತಿಯೊಳ್,
ತಾಂ
ಬಹುತ್ವ ಏಕತ್ವದೊಳಂ

ಪ್ರಯತ್ನವಿಲ್ಲದೆ ಹಿರಿಯರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ, ಗುರು ಮುನೀಶ್ವರರನ್ನು ವಿನಯ ಪೂರ್ವಕವಾಗಿ ಸಂಬೋಧಿಸುವಲ್ಲಿ, ತಿರಸ್ಕಾರ ಅಥವಾ ಅಸಹ್ಯ ವೃತ್ತಿಯಿಂದ ನುಡಿಯುವಲ್ಲಿ ಏಕವಚನಕ್ಕೆ ಪ್ರತಿಯಾಗಿ ಬಹುವಚನವೇ ಪ್ರಯೋಗವಾಗುತ್ತದೆ.

ಪ್ರಯತ್ನರಹಿತ ಗೌರವಕ್ಕೆ :
ಎಮ್ಮತಂದೆ > ಎಮ್ಮತಂದೆಗಳ್
ಎಮ್ಮತಾಯಿ > ಎಮ್ಮತಾಯ್ಗಳ್

ವಿಶಿಷ್ಟರ ವಿಷಯಕ್ಕೆ :
ಸ್ವಾಮಿ > ಸ್ವಾಮಿಗಳ್
ಶ್ರೀಮತ್ಸಮಂತ ಭದ್ರ
ಸ್ವಾಮಿಗಳ…..

ಅಸಹ್ಯವೃತ್ತಿಗೆ :
ಬಡಾದಿದರರಸ ಕಾಲೊಳ್
ನಡೆದಪಿರೊಡನಾರುಮಿಲ್ಲ ಕವಿಲೆಗಳೇಂನಿ |
ಮ್ಮುಡಿಯೊಳಗೆ ಪಡುವದೇಗುಲ
ದೆಡೆ ಯಾವುದು ಕುಡುದ ನಿಮಗಮೀಯೆಡರಾಯ್ತೆ ||

೧೧೩
ಉದಯಿಸುಗುಂ
ಗಳ್, ದಿರ್ಗಳ
ಮೊದಲೊಳ್ ಅದಂತಕ್ಕೆ ಬಿಂದು
ಪುಂಸ್ತ್ರೀಲಿಂಗಕ್ಕೆ
ಅದು ನಪ್ಪಿಯೊಳ್ ವಿಕಲ್ಪಂ
ಪುದಿದು ಇರೆಗಳ್, ಬಿಂದು
ನಿಯತಂ
ಅದು ಸಂಸ್ಕೃತದೊಳ್

ಅ ಕಾರಾಂತ ಪುಲ್ಲಿಂಗ, ಸ್ತ್ರೀಲಿಂಗಗಳ ಮುಂದೆ ಗಳ್, ದಿರ್ ಬಹುವಚನ ಪ್ರತ್ಯಯಗಳು ಸೇರುವಾಗ ಆ ಪ್ರತ್ಯಯಗಳ ಆದಿಯಲ್ಲಿ ಬಿಂದು ಬರುತ್ತದೆ. ನಪುಂಸಕ ಲಿಂಗಗಳಲ್ಲಿ ಗಳ್ ಪ್ರತ್ಯಯ ಸೇರುವಾಗ ಬಿಂದು ವಿಕಲ್ಪವಾಗಿರುತ್ತದೆ. ಅ ಕಾರಾಂತ ಸಂಸ್ಕೃತ ಪದಗಳಲ್ಲಿ ಬಿಂದು ನಿತ್ಯ.

ಪುಲ್ಲಿಂಗಕ್ಕೆ :
ಅಣ್ಣ + ಗಳ್ = ಅಣ್ಣಂಗಳ್
ಅಣ್ಣ + ದಿರ್ = ಅಣ್ಣಂದಿರ್
ಇದೇ ರೀತಿ, ಭಾವಂಗಳ್, ಭಾವಂದಿರ್,
ಮಾವಂಗಳ್, ಮಾವಂದಿರ್

ಸ್ತ್ರೀಲಿಂಗಕ್ಕೆ :
ಅಕ್ಕ + ಗಳ್ = ಅಕ್ಕಂಗಳ್
ಅಕ್ಕ + ದಿರ್ = ಅಕ್ಕಂದಿರ್

ನಪುಂಸಕಲಿಂಗ ವಿಕಲ್ಪ ಬಿಂದುವಿಗೆ :
ಮರ + ಗಳ್ = ಮರಗಳ್

ಸಂಸ್ಕೃತದ ನಿತ್ಯ ಬಿಂದುವಿಗೆ :
ಗುಣ + ಗಳ್ = ಗುಣಂಗಳ್

೧೧೪
ಪರದೊಳ್ ಸ್ವರಂ ಇರೆ
ಬಿಂದುಗೆ ದೊರೆಕೊಳ್ಗುಂ
ನತ್ವಂ ಮತ್ವಂ;
ಮತ್ವಕ್ಕೆ ಉಚ್ಚರಿಪರ್ ವತ್ವಂ
ಅರೆಬರ್ ನಿರವದ್ಯಂ
ನಿಜ ಮಕಾರದ ಎಡೆಗಂ ವತ್ವಂ

ಉತ್ತರ ಪದದಲ್ಲಿ ಸ್ವರವಿದ್ದರೆ ಬಿಂದುವಿಗೆ ನ ಕಾರ ಮ ಕಾರಗಳು ಪ್ರಾಪ್ತವಾಗುತ್ತವೆ. ಕೆಲವರು ಆ, ಮ ಕಾರಕ್ಕೆ ಪ್ರತಿಯಾಗಿ ವ ಕಾರವನ್ನು ಉಚ್ಚರಿಸುತ್ತಾರೆ. ಸಹಜ ಮ ಕಾರಕ್ಕೂ ವ ಕಾರ ಉಂಟಾದರೆ ದೋಷವಿಲ್ಲ.

ನ ಕಾರಕ್ಕೆ :
ಪೊಲಂ + ಅಱಯದ = ಪೊಲನಱಯದ
ಪೊಲನಱಯದ ನೆಲನಱಯದ
ಕೆಲನಱಯದ ಮಿಗದ ಮೂಱು ವಿಧಮಱಯದ….

ಮ ಕಾರಕ್ಕೆ :
ನಿರಾಕುಳಂ + ಆಗಿ = ನಿರಾಕುಳವಾಗಿ
ಆಯಿರ್ದು ಮಾೞಯೊಳೆ ಪರ
ಮಾಯುಷ್ಯಾಂತಂಬರಂ ನಿರಾಕುಳಮಾಗಿ
ರ್ಪಾಯಿರವಿನ….

ವ ಕಾರಕ್ಕೆ :
ನಾಸಿಕಂ + ಅಡ್ಡಂ = ನಾಸಿಕಮಡ್ಡಂ > ನಾಸಿಕವಡ್ಡಂ
ನಾಸಿಕವಡ್ಡಂ ಬಂದಂದ ಮನೀಕ್ಷಿಸಿ…
ನಿಜ ಮಕಾರದ

ವ ಕಾರಕ್ಕೆ :
ತಿಮಿರ್ > ತಿವಿರ್, ತೆಮರ್ > ತೆವರ್
ತಾಮರೆ > ತಾವರೆ

೧೧೫
ಬಿಂದು ಅದಂತಕ್ಕೆ, ಉೞದೆಡೆಗೆ
ಎಂದುಂ ಪ್ರಥಮ
ಏಕವಚನದೊಳ್ ಲೋಪಂ;
ಅದಂತಂ ದೊರೆವಡೆದು ಇದಿರೊಳ್
ಸ್ವರಂ ಒಂದಿರೆ
ಪುಲ್ಲಿಂಗದಲ್ಲಿಆಗಮಂ ಅಕ್ಕುಂ

ಅ ಕಾರಾಂತ ಶಬ್ದಗಳಿಗೆ ಪ್ರಥಮಾವಿಭಕ್ತಿ ಏಕವಚನದಲ್ಲಿ ಬಿಂದು ಬರುತ್ತದೆ. ಅ ಕಾರಾಂತವಲ್ಲದ ಶಬ್ದಗಳಿಗೆ ಪ್ರಥಮ ವಿಭಕ್ತಿ ಪ್ರತ್ಯಯ ಬಿಂದು ಲೋಪವಾಗುತ್ತದೆ. ಅ ಕಾರಾಂತ ಪುಲ್ಲಿಂಗ ಶಬ್ದಗಳಿಗೆ ಸ್ವರ ಬಂದರೆ ‘ನ’ ಕಾರಾಗ ಬರುತ್ತದೆ.

ಬಿಂದುವಿಗೆ :
ವೇದವಿದ + ೦ + ವೇದವಿದಂ
ವೇದವಿದಂ ಕಾಲತ್ರಯ
ವೇದಿ….

ಬಿಂದುಲೋಪಕ್ಕೆ :
ಗಿಡ, ಬಳ್ಳಿ, ಪುಲಿ, ಕರಡಿ, ಎಲೆ

ನ ಕಾರಾಗಮಕ್ಕೆ :
ಅವ + ಅಂ = ಅವನಂ, ಅವ+ಒಳ್ಳಿದಂ = ಅವನ್ನೊಳಿದಂ