೯೫
ಪಿತೃ, ಶಬ್ದದ ಎಡೆಗೆ
ಅರ್ ಆದೇಶತೆ
ಸಖಿ ಶಬ್ದಕ್ಕೆ
ನೆಟ್ಟನೆ ಅತ್ವಾದೇಶ ಸ್ಥಿತಿ
ಆಗೆ ಲಿಂಗಂ ಅಕ್ಕುಂ,
ವಿತರ್ಕ ಮೇಂ ಪೇೞ್ ಸ್ವರಾಂತಂ;
ಲಿಂಗಂಗಳ್

ಪಿತೃ ಮತ್ತು ಸಖಿ ಶಬ್ದದ ವಿಶೇಷತೆಯನ್ನು ಕುರಿತು ಈ ಸೂತ್ರದಲ್ಲಿ ಹೇಳಲಾಗಿದೆ. ಋ ಕಾರಾಂತವಾದ ಪಿತೃ ಶಬ್ದ ಅರಾದೇಶ ಹೊಂದಿ ಕನ್ನಡದಲ್ಲಿ ಲಿಂಗವಾಗುತ್ತದೆ. ಸಖಿ ಎಂಬ ಇ ಕಾರಾಂತ ಶಬ್ದ ಅ ಕಾರಾಂತ ಹೊಂದಿ ಸಮಸಂಸ್ಕೃತಲಿಂಗವಾಗುತ್ತದೆ. ಈವರೆಗೆ ವಿವರಿಸಿದ ಪದಗಳು ಸ್ವರಾಂತ ಪದಗಳು.

ಪಿತೃ ಶಬ್ದಕ್ಕೆ :
ಪಿತೃ. ಸಂ. ಪಿತರ
…. ಬಡವರ ಪಿತರರಂತೆ ಮಱುಗುತಿರ್ಕುಂ….

ಸಖಿ ಶಬ್ದಕ್ಕೆ :
ಸಖಿ (ಸಂ.) ಸಖ (ಸಮ.ಸಂ.)
ನಿಮಗೆ ಸಖಂ ಕಮಲಸಖಂ

೯೬
ಜನಂ ಉಲಿವ
ಸಂಸ್ಕೃತ ವ್ಯಂಜನಾಂತ
ಲಿಂಗಂಗಳ್ ಅತ್ವಮಂ, ದ್ವಿತ್ವದಿಂ
ಉತ್ವ, ನಿಯೋಗಮಂ
ಅಂತ್ಯ ಆದರ್ಶನಮಂ
ಮೇಣ್ ತಾಳ್ದು
ಕನ್ನಡಕ್ಕೆ ಅವು ಲಿಂಗಂ

ಸಂಸ್ಕೃತದ ವ್ಯಂಜನಾಂತ ಪದಗಳಲ್ಲಿ ಕೆಲವು ಅ ಕಾರಾಂತ ಹೊಂದಿ, ದ್ವಿತ್ವದಿಂದ ಕೂಡಿದ ಉ ಕಾರಾಂತವನ್ನು ಹೊಂದಿ ಮತ್ತು ವಿಕಲ್ಪವಾಗಿ ಅಂತ್ಯ ವ್ಯಂಜನ ಲೋಪ ಹೊಂದಿ ಕನ್ನಡದಲ್ಲಿ ಸಮಸಂಸ್ಕೃತ ಲಿಂಗಗಳಾಗುತ್ತವೆ.

ಅ ಕಾರಾಂತಕ್ಕೆ :
ದಿವ್ – ದಿವ, ಸ್ರಜ್ – ಸ್ರಜ, ಚತುರ್ – ಚತುರ

ದ್ವಿತ್ವಯುಕ್ತ ಉ ಕಾರಾಂತಕ್ಕೆ :
ರಜ್ – ರಜ್ಜು, ಅಪ್ – ಅಪ್ಪು

ಅಂತ್ಯಾಕ್ಷರ ಲೋಪಕ್ಕೆ :
ರಾಜನ್ – ರಾಜ, ಮೂರ್ಧನ್ – ಮೂರ್ಧ

ವಿಕಲ್ಪಕ್ಕೆ :
೧. ಯಶಸ್ – ಯಶಸ್ಸು, ಯಶ,
ತೇಜಸ್ – ತೇಜಸ್ಸು, ತೇಜ
೨. ವಾಕ್ – ವಾಕ್
೩. ಗೀರ್ – ಗೀರ್
ಶ್ರುತಿದೇವಿವಾಣಿ ವಾಕ್ ಬಾ
ರತಿವಚನಂ ಭಾಷೆ ವಾಚಿ ಗ್ರೀರ್ಬ್ರಾಹ್ಮಿ

೯೭
ಪ್ರಚುರತೆಯಿಂ ಪ್ರಥಮ
ಬಹುವಚನಂಗಳ್,
ಏಕವಚನ ಕೃತಲಿಂಗಂಗಳ್,
ನಿಚಿತ ವಿಸರ್ಗಮಂ ಉೞಿದಂದು
ಉಚಿತ ತಜ್ಞರ್ ತಿಳಿವುದು
ಉದಾಹೃತಿ ಮುಖದಿಂ

ಸಂಸ್ಕೃತದ ಪ್ರಥಮ ಬಹುವಚನಗಳಲ್ಲಿ ಬರುವ ಅಂತ್ಯ ವಿಸರ್ಗವು ಲೋಪವಾಗಿ ಕನ್ನಡಕ್ಕೆ ಏಕವಚನ ಲಿಂಗವೆನಿಸಿಕೊಳ್ಳುತ್ತದೆ. ಇವುಗಳನ್ನು ವಿದ್ವಾಂಸರು ಉದಾಹರಣೆಗಳ ಮೂಲಕ ತಿಳಿದುಕೊಳ್ಳಬೇಕು.

ವಿದ್ವಾಂಸಃ : ವಿದ್ವಾಂಸ
ಶ್ರೀಮಂತಃ : ಶ್ರೀಮಂತ

೯೮
ನೀಂ, ಅಱ ಕರ್ಣಟಕದೊಳ್
ಪೀನಂ ಸ್ತ್ರೀ, ಪುಂ, ನಪುಂಸಕ
ಉಭಯಪುಂಸ್ತ್ರೀ,
ಸ್ತ್ರೀನಪ್,
ಸಮಸ್ತ, ವಾಚ್ಯ ಅನೂನ
ಅವ್ಯಯ, ಎಂದು
ಲಿಂಗಂ ಒಂಬತ್ತುತೆಱಂ

ಸಂಸ್ಕೃತ ಭಾಷೆಯನ್ನಾಧರಿಸಿಯೆ ಕನ್ನಡ ವ್ಯಾಕರಣ ಸ್ವರೂಪವನ್ನು ಹೇಳ ಹೊರಟ ಕೇಶಿರಾಜ, ಸಂಸ್ಕೃತದಲ್ಲಿ ಪ್ರಚುರವಾದ ಹಲವು ಲಿಂಗಗಳನ್ನು ಕನ್ನಡದಲ್ಲಿ ಉಳಿಸಿಕೊಳ್ಳಲು ಯತ್ನಿಸಿ ಸ್ವಲ್ಪಮಟ್ಟಿಗೆ ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿದ್ದಾನೆ. ಕೇಶಿರಾಜ ಪ್ರಸ್ತಾಪಿಸಿದ ಒಂಬತ್ತು ಲಿಂಗಗಳು ಈ ತೆರನಾಗಿವೆ – ಕನ್ನಡದಲ್ಲಿ ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗ, ಪುಂನಪುಂಸಕಲಿಂಗ, ಪುಂಸ್ತ್ರೀಲಿಂಗ, ಸ್ತ್ರೀನಪುಂಸಕಲಿಂಗ, ತ್ರಿವಿಧ ಲಿಂಗ, ವಾಚ್ಯಲಿಂಗ, ಅವ್ಯಯಲಿಂಗ ಎಂದು ಲಿಂಗಗಳು ಒಂಬತ್ತು ತೆರನಾಗಿವೆ.

ಸ್ತ್ರೀಲಿಂಗಕ್ಕೆ :
ಅರಸಿ, ದೇವಿ

ಪುಲ್ಲಿಂಗಕ್ಕೆ :
ಅರಸಂ, ದೇವಂ, ನರಂ, ಸುರಂ

ನಪುಂಸಕ ಲಿಂಗಕ್ಕೆ :
ಕನ್ನಡಿ, ಕಳಶಂ, ಜೆಡೆ, ಕೊಡೆ

ಪುಂನಪುಂಸಕ ಲಿಂಗಕ್ಕೆ :
ರವಿ, ಬಸಂತಂ, ರವಿ ಮೂಡಿದಂ,
ರವಿ ಮೂದಂ, ರವಿ ಮೂಡಿದುದು

ಪುಂ ಸ್ತ್ರೀ ಲಿಂಗಕ್ಕೆ :
ಇವರ್ ಪುರುಷರ್, ಇವರ್ ಸ್ತ್ರೀಯರ್, ಅವರ್ ಗಂಡರ್,
ಅವರ್ ಪೆಂಡಿರ್, ಉವರ್‌ದೇವರ್, ಉವರ್ ದೇವಿಯರ್

ಸ್ತ್ರೀ ನಪುಂಸಕಲಿಂಗಕ್ಕೆ :
ಪೆಣ್, ಸರಸ್ವತಿ, ಆಪೆಣ್‌ಜಣೆ, ಆಪೇಣ್‌ಬಂದುದು
ಸರಸ್ವತಿ ಕೈ ನೆರವಿಗೆ ಪೇೞ್ದಪಳ್…
ಪರಮಜೀನೇಂದ್ರ ವಾಣಿಯೆಸರಸ್ವತಿ….

ತ್ರೀಲಿಂಗಕ್ಕೆ :
ನೀನ್, ಶಿಶು. ನೀನ್ ಅರಸಂ. ನೀನ್ ಅರಸಿ. ನೀನ್ ಪಶು.
(ಶಿಶು ಅವನ್, ಶಿಶು ಅವಳ್, ಶಿಶು ಅದು)

ವಾಚ್ಯ (ವಿಶೇಷ್ಯಾಧೀನ) :
ಅಭಿಮಾನಿ, ದಾನಿ. (ಅಭಿಮಾನಿ ಅವನ್, ಅಭಿಮಾನಿ
ಅವಳ್, ಅಭಿಮಾನಿ ಅದು, ದಾನಿ ಅವನ್ ದಾನಿ
ಅವಳ್ ದಾನಿ ಅದು)

ಅವ್ಯಯಲಿಂಗಕ್ಕೆ :
ಭೋಂಕನೆ, ಮೆಲ್ಲನೆ,
ಭೋಂಕನೆ ಬಂದಂ, ಭೋಂಕನೆ ಬಂದಳ್,
ಭೋಂಕನೆ ಬಂದುದು
(ಮೆಲ್ಲನೆ ಬಂದಂ, ಮೆಲ್ಲನೆ ಬಂದಳ್, ಮೆಲ್ಲಗೆ ಬಂದುದು)

೯೯
ಬಗೆ ನೀಂ, ಆಂ, ತಾಂ,
ಎಂಬಉಕ್ತಿಗಳುಂ
ಗುಣವಚನ ಸರ್ವನಾಮ
ಬಹುವ್ರೀಹಿಗಳುಂ
ಕೃತ್, ತದ್ದಿತ್, ಸಂಖ್ಯೆಗಳುಂ
ಸಲೆ, ವಾಚ್ಯಲಿಂಗಂ
ಎಂದು ಕ್ರಮದಿಂ

ಕೇಶಿರಾಜ ಈ ಸೂತ್ರದಲ್ಲಿ ವಾಚ್ಯಲಿಂಗಗಳನ್ನು ಕುರಿತು ಹೇಳಿದ್ದಾನೆ. ನೀಂ, ಆಂ, ತಾಂ ಎಂಬಿವುಗಳು ಗುಣವಚನಗಳು, ಸರ್ವನಾಮಗಳು, ಬಹುವ್ರೀಹಿಗಳು ಕೃತ್ತು, ತದ್ದಿತ ಮತ್ತು ಸಂಖ್ಯಾವಾಚಕಗಳು ಇವು ಮೂರು ಲಿಂಗಗಳಲ್ಲಿ ಏಕಪ್ರಕಾರವಾಗಿ ಬಳಕೆಯಾಗುತ್ತಿದ್ದು ಅವು ವಾಚ್ಯಲಿಂಗಗಳು ಆಗಿವೆ.

ನೀಂ, ಆಂ, ತಾಂ ಎಂಬಿವಕ್ಕೆ :
ನೀಂ ಕಾಮಂ, ನೀಂ ರತಿ, ನೀಂ ಗಿಳಿ, ಆಂ, ಶಿವಂ, ಆಂ
ಗೌರಿ, ಆಂ ನಂದಿ, ತಾನವಂ, ತಾನವಳ್, ತಾನದು

ಗುಣವಾಚನಕ್ಕೆ :
ಇನಿಯಂ, ಇನಿಯಳ್, ಇನಿಯದು, ಇನಿದು

ಸರ್ವನಾಮಕ್ಕೆ :
ಪೆಱಂ, ಪೆಱಳ್, ಪೆಱತು

ಬಹುವ್ರೀಹಿಗೆ :
ಅವಂ ವಿಮಲವತಿ, ಅವಳ್
ವಿಮಲಮತಿ ಅದು ವಿಮಲಮತಿ

ಕೃತ್ತಿಂಗೆ :
ಪಾಡಿದಂ, ಪಾಡಿದಳ್, ಪಾಡಿದುದು

ತದ್ದಿತಕ್ಕೆ :
ಓದಾಳಿ ಇವಂ, ಓದಾಳಿ ಇವಳ್, ಓದಾಳಿ ಇದು

ಸಂಖ್ಯೆಗೆ :
ಸಾಯಿರಗಂಡರ್, ಸಾಯಿರ್‌ಪೆಂಡಿರ್,
ಸಾಯಿರ್ ಮನೆಗಳ್

೧೦೦
ದೊರೆ ವಡೆದ
ಅವ್ಯಯಲಿಂಗಂ
ಸರಿಸರ್ವವಿಭಕ್ತಿಗಂ,
ತ್ರಿ ಲಿಂಗಕ್ಕಂ
ತಾಂ ಸರಿ, ವಚನ ತ್ರಿತಯಕ್ಕಂ
ಸರಿಯೆನಿಸಿ
ವಿಕಾರಂ ಇಲ್ಲದೆ
ಅರ್ಥಂ ಈಗುಂ

ಅವ್ಯಯಲಿಂಗವು ಸಪ್ತವಿಭಕ್ತಿ ಪ್ರತ್ಯಯ ಹೊಂದಿದಾಗಲೂ ಮೂರು ಲಿಂಗಗಳಲ್ಲಿಯೂ ವಚನತ್ರಯಗಳಲ್ಲೂ ಯಾವುದೇ ರೂಪಾಂತರ ಹೊಂದದೆ ಸಮಾನ ಅರ್ಥ ನೀಡುತ್ತದೆ.

ಸಪ್ತ ವಿಭಕ್ತಿಗಳಿಗೆ :
ಪ್ರಥಮೆ – ನಿರ್ನೆರಂ
ದ್ವಿತೀಯೆ – ಬೆಚ್ಚರಂ
ತೃತೀಯೆ – ಅವರ್ಕೆ, ಅಂತಱಂದೆ
ಚತುರ್ಥಿ – ಪಚ್ಚನೆ, ಕೆಚ್ಚನೆ
ಷಷ್ಠಿ – ಮುತ್ತಿನ

ಲಿಂಗತ್ರಯಕ್ಕೆ :
ಮತ್ತೆ ನೋಡಿದಂ, ಮತ್ತೆ ನೋಡಿದಳ್,
ಮತ್ತೆ ನೋಡಿದುದು

ವಚನತ್ರಯಕ್ಕೆ :
ಭೋಂಕನೋರ್ವಂ ಬಂದು
ಮೆಲ್ಲನಿರ್ವರ್ ನುಡಿದರ್
ನೆಟ್ಟನೆಲ್ಲರುಂ ಪೋದರ್

೧೦೧
ಪುರುಷರೆ ಪುಲ್ಲಿಂಗಂ,
ಸ್ತ್ರೀಯರೆ ತಾಂ ಸ್ತ್ರೀಲಿಂಗಂ,
ಉೞಿದುವು ಎಲ್ಲಂ
ನಪ್ಪಾಗಿರೆ ಸಲ್ಗುಂ ಕನ್ನಡದೊಳ್
ಪರಿವರ್ತಿಸವು
ಉೞದ ಲಿಂಗಂ ಒಳವು ಆಗಿರ್ದುಂ;

ಕೇಶಿರಾಜ ಕನ್ನಡದಲ್ಲಿ ಇಲ್ಲದೆ ಇರುವ ಲಿಂಗಗಳನ್ನು ಕಲೆಹಾಕಿ ‘ಲಿಂಗಂ ಒಂಭತ್ತು ತೆರಂ’ ಎಂದು ಹೇಳಿ ನಂತರ ಅವೆಲ್ಲವುಗಳನ್ನು ಬದಿಗಿರಿಸಿ ಕನ್ನಡದಲ್ಲಿ ಪ್ರಸಿದ್ಧವಾದ ತ್ರಿಲಿಂಗಗಳ ವಿಚಾರಕ್ಕೆ ಬಂದು ತಲುಪಿದ್ದಾನೆ. ಅದು ಕೇಶಿರಾಜ ದ್ರಾವಿಡ ಭಾಷೆಗಳ ಶಾಸ್ತ್ರೀಯವಾದ ಲಿಂಗ ವಿವಕ್ಷೆಯನ್ನು ಗಮನಿಸಿದ್ದನೆಂಬುದಕ್ಕೆ ಸಾಕ್ಷಿಯಾಗಿದೆ. ಪುರುಷವಾಚಕ ಪದಗಳು ಪುಲ್ಲಿಂಗಗಳು. ಸ್ತ್ರೀಯರನ್ನು ಉಲ್ಲೇಖಿಸುವ ಪದಗಳು ಸ್ತ್ರೀಲಿಂಗಗಳು ಉಳಿದವುಗಳೆಲ್ಲ ನಪುಂಸಕಲಿಂಗಗಳು. ಕನ್ನಡದಲ್ಲಿ ಈ ಮೂರು ಲಿಂಗಗಳು ಪ್ರಮುಖವಾಗಿದ್ದು ಉಳಿದವು ವಿಶೇಷವಾಗಿ ಬಳಕೆಯಲ್ಲಿಲ್ಲ.

ಪುಲ್ಲಿಂಗಕ್ಕೆ :
ಅರಸಂ, ಕಾಮಂ, ಶಿವಂ, ಶಂಕರಂ, ರಾಮಂ

ಸ್ತ್ರೀ ಲಿಂಗಕ್ಕೆ :
ಲಕ್ಷ್ಮಿ, ಗೌರಿ, ಪಾರ್ವತಿ, ಸರಸ್ವತಿ, ಭಾಮಿನಿ

ನಪುಂಸಕ ಲಿಂಗಕ್ಕೆ :
ಮರಂ, ಬಳ್ಳಿ, ಗಿಡ, ಬೆಟ್ಟಂ, ಕೊಡೆ

೧೦೨
ಜನ ಶಬ್ದಂ ಅದು ನಪುಂಸಕ
ಎನಿಕುಂ;
ದುಸ್, ಸತ್, ಸುಕಾರಂ
ಅವು ಪೆಱಗೆ ಇರೆ
ನೆಟ್ಟನೆ ಪುಲ್ಲಿಂಗಂ
ಮತ್ತೆ ಜನಂ
ಮಹತ್ ಶಬ್ದ
ಇರೆ ನಪುಂಸಕಂ ಅಕ್ಕುಂ

‘ಜನ’ ಎಂಬ ಶಬ್ದವು (ಕನ್ನಡದಲ್ಲಿ) ನಪುಂಸಕಲಿಂಗ. ಜನ ಶಬ್ದದ ಹಿಂದೆ ದುಸ್, ಸತ್, ಸು ಎಂಬಿವು ಸೇರಿದರೆ ಪುಲ್ಲಿಂಗವೆನಿಸುತ್ತದೆ. ‘ಮಹತ್’ ಶಬ್ದವು ಸೇರಿ ಮಹಾಜನ ಎಂದಾಗಿ ನಪುಂಸಕ ಲಿಂಗವೆನಿಸುತ್ತದೆ.

ನಪುಂಸಕ ಲಿಂಗಕ್ಕೆ :
ಜನಂ

ಪುಲ್ಲಿಂಗಕ್ಕೆ :
ದುರ್ಜನಂ, ಸಜ್ಜನಂ, ಸುಜನಂ

ನಪುಂಸಕ ಲಿಂಗಕ್ಕೆ :
ಮಹಾ (<ಮಹತ್) ಜನಂ

೧೦೩
ಸಂಧಿಸಿ ಮ್, ಅಮ್, ಇಮ್,
ಕೆ, ಅತ್, ಅದ್, ಒಳ್
ಇರ್ಪುವು ಸಪ್ತ ವಿಧ ವಿಭಕ್ತಿಗಳ್
ಅವು ಮಾರ್ಗಂ ಅಪ್ಪದೆ
ಅರ್ಥವಶದಂ
ಪಿಂದೆ ಎಣಿಸಿದ ವಿವಿಧ ವಿಧದ
ಲಿಂಗಕ್ಕೆ ಎಲ್ಲಂ

ಈವರೆಗೆ ಹೇಳಿದ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಇತ್ಯಾದಿ) ನಾನಾ ವಿಧವಾದ ಲಿಂಗಗಳಿಗೆ ಪ್ರಥಮೆಯಲ್ಲಿ ‘ಮ್’ ಪ್ರತ್ಯಯವೂ ದ್ವಿತೀಯಯಲ್ಲಿ ‘ಅಮ್’ ಪ್ರತ್ಯಯವೂ ತೃತೀಯೆಯಲ್ಲಿ ‘ಇಮ್’ ಎಂಬ ಪ್ರತ್ಯಯವೂ ಚತುರ್ಥಿಯಲ್ಲಿ ‘ಕೆ’ ಎಂಬ ಪ್ರತ್ಯಯವೂ ಪಂಚಮಿಯಲ್ಲಿ ‘ಅತ್’ ಎಂಬ ಪ್ರತ್ಯಯವೂ ಷಷ್ಠಿಯಲ್ಲಿ ‘ಅದ್’ ಎಂಬ ಪ್ರತ್ಯಯವೂ ಮತ್ತು ಸಪ್ತಮಿಯಲ್ಲಿ ‘ಒಳ್’ ಎಂಬ ಪ್ರತ್ಯಯವೂ ಸೇರುತ್ತವೆ. ಈ ಏಳು ವಿಭಕ್ತಿ ಪ್ರತ್ಯಯಗಳು ಕಾರಕ ವಶದಿಂದ ಹತ್ತುತ್ತವೆ. ಈ ಕಾರಕಗಳು ಕ್ರಮವಾಗಿ ಕರ್ತೃಕಾರಕ, ಕರ್ಮಕಾರಕ, ಕರಣಕಾರಕ, ಸಂಪ್ರದಾನಕಾರಕ, ಅಪಾದಾನಕಾರಕ ಮತ್ತು ಅಧಿಕರಣಕಾರಕ ಎಂದು ಆರು ವಿಧ. ಷಷ್ಠಿ ಎಂಬುದು ಸಂಬಂಧಾರ್ಥವೆನಿಸುತ್ತದೆ.

ಮರಂ, ಮರನಂ, ಮರದಿಂ, ಮರಕ್ಕೆ, ಮರದತ್ತಣಿಂ, ಮರದ, ಮರದೊಳ್, ಮರನೇ (ಸಂಬೋಧನೆ)

ವಿಭಕ್ತಿ ಕಾರಕ ಪ್ರತ್ಯಯ ಉದಾಹರಣೆ
ಪ್ರಥಮಾ ಕೃತಕಾರಕ ಮ್ ಮರ + ಮ್ = ಮರಂ
ದ್ವಿತೀಯಾ ಕರ್ಮ ಕಾರಕ ಅಮ್ ಮರ್ + ಅಮ್ = ಮರನಮ್ (ಮರನಂ)
ತೃತೀಯಾ ಕರಣ ಕಾರಕ ಇಮ್ ಮರ + ಇಮ್ = ಮರದಿಂ
ಚತುರ್ಥೀ ಸಂಪ್ರದಾನ ಕಾರಕ ಕೆ ಮರ + ಕೆ = ಮರಕ್ಕೆ
ಪಂಚಮೀ ಅಪಾದಾನ ಕಾರಕ ಅತ್ ಮರ + ಅತ್(ಅತ್ತಣಿಂ) = ಮರದತ್ತಣಿಂ
ಷಷ್ಠಿ ಸಂಬಂಧಾರ್ಥ ಕಾರಕ ಅದ್ ಮರ + ದ = ಮರದ
ಸಪ್ತಮೀ ಅಧಿಕರಣ ಕಾರಕ ಒಳ್ ಮರ + ಒಳ್ = ಮರದೊಳ್

೧೦೪
ಏಕ, ದ್ವಿತ್ವ, ಬಹುತ್ವಮಂ
ಏಕ, ದ್ವಿ, ಬಹುತ್ವಂ
ವಸ್ತುಗಳೊಳ್
ಆಚರಿಪರ್ ಸ್ವೀಕಾರಂ
ಕನ್ನಡದೊಳಗೆ ಏಕ ಬಹುತ್ವಂ
ದ್ವಿವಚನ ಉಚಿತದೆ ಬರ್ಕುಂ

ಒಂದು, ಎರಡು, ಮೂರು ಎಂದು ಪದಾರ್ಥವನ್ನು ಎಣಿಸುವಲ್ಲಿ ಕ್ರಮವಾಗಿ ಏಕವಚನ, ದ್ವಿವಚನ ಮತ್ತು ಬಹುವಚನಗಳನ್ನು ಹೇಳುತ್ತಾರೆ. ಕನ್ನಡದಲ್ಲಿ ಏಕವಚನ ಮತ್ತು ಬಹುವಚನ ಮಾತ್ರ ರೂಢಿಯಲ್ಲಿವೆ. ದ್ವಿವಚನವು ಔಚಿತ್ಯವನ್ನು ಅನುಸರಿಸಿಬರುತ್ತದೆ.

ಏಕವಚನಕ್ಕೆ : ಮೇರುವಿದು
ದ್ವಿವಚನಕ್ಕೆ : ಕಣ್ಗಳಿವು
ಬಹುವಚನಕ್ಕೆ : ಕುರುಳ್ಗಳಿವು
ಔಚಿತ್ಯದ ದ್ವಿವಚನಕ್ಕೆ : ನಕುಲಸಹದೇವರ್, ಭೀಮಾರ್ಜುನರ್

೧೦೫
ಸಮನಿಸುಗುಂ ಆವಿಭಕ್ತಿಗಳ್
ಮೊದಲೊಳ್ ಆದಂ
ಗಳ್ ಆಗಮಂ;
ದ್ವಿತ್ವ ಬಹುತ್ವಂ ಅದು ಆಗೆ
ಗಳ್ ಆಗಮಂ
ಅವು ಸಮನಿಸುಗುಂ
ಸರ್ವನಾಮ, ಗುಣವಚನದೊಳಂ

ದ್ವಿವಚನ ಮತ್ತು ಬಹುವಚನಗಳಲ್ಲಿ ವಿಭಕ್ತಿಗಳ ಮೊದಲು ವಿಶೇಷವಾಗಿ ಗಳ್ ಆಗಮವುಂಟಾಗುತ್ತದೆ. ಸರ್ವನಾಮ ಮತ್ತು ಗುಣವಚನಗಳಲ್ಲಿ ‘ಗಳ್’ಗೆ ಪ್ರತಿಯಾಗಿ ಅವು ಆದೇಶವಾಗಿ ಬರುತ್ತವೆ.

ದ್ವಿವಚನಕ್ಕೆ :
ತೊಡೆ + ಗಳ್ = ತೊಡೆಗಳ್
ತೊಡೆಗಳ್ ರಂಭಾಸ್ತಂಭದ
ಗೆಡೆಗಳ್ ಕಣ್ಗಳ್ ಮನೋಜವೀರನ ಗೇಣ್ಗಳ್

ಬಹುವಚನಕ್ಕೆ :
ಕೊಳ + ಗಳ್ = ಕೊಳಗಳ್
ಕೊಳಗಳ್ ದಳಿತಾಬ್ಜಂಗಳ್
ದಳಿತಾಬ್ಜಂಗಳ್ ಸಮ್ಮದ್ಧಮಧುಗಳ್ …

ಸರ್ವನಾಮಕ್ಕೆ :
ಅದು + ಗಳ್ > ಅವು = ಅವು
ಪಿರಿದು + ಗಳ್ > ಅವು = ಪಿರಿಯವು
ಅವು ಪಿರಿಯವು ಭಾವಿಪೊಡಿಂ
ತಿವು ಕಿಱಯವೆನಿಪ್ಪುದಿದುವೆ ಭೇದಂ…

ಗುಣವಚನಕ್ಕೆ :
ಇನಿದು + ಗಳ್ > ಅವು = ಇನಿಯವು
ಇನಿಯವು ವಿಷಯಸುಖಂ ನಂ
ಜಿನಸವಿವೊಲ್….