೮೨
ಕ್ರಿಯೆಯಂ ನುಡಿಯದುದು,
ವಿಭಕ್ತಿಯಂ ಇಲ್ಲದುದು,
ಅರ್ಥ ಉಳ್ಳದು
ಅಂತದು ಲಿಂಗಂ;
ನಿಯತ ಚತುರ್ಭೇದಂ ಅದು
ಅರಯೆ ಕೃತ್, ತದ್ದಿತ, ಸಮಾಸ,
ನಾಮಸ್ಥಿತಿಯಂ

ಕೇಶಿರಾಜ ಈ ಸೂತ್ರದಲ್ಲಿ ಲಿಂಗದ ಸ್ವರೂಪವನ್ನು ಹೇಳಿದ್ದಾನೆ. ಕ್ರಿಯಾವಾಚಕ ವಲ್ಲದುದು, ನಾಮವಿಭಕ್ತಿ ಪ್ರತ್ಯಯ(ಸಪ್ತವಿಭಕ್ತಿಗಳನ್ನು)ಗಳಿಲ್ಲದುದು ಮತ್ತು ಅರ್ಥವತ್ತಾದ ಪದವು ಲಿಂಗವೆನಿಸುತ್ತದೆ. ಆ ಲಿಂಗವು ಕೃದಂತ, ತದ್ದಿತ, ಸಮಾಸ ಮತ್ತು ನಾಮವೆಂದು ನಾಲ್ಕು ವಿಧವಾಗಿರುವುದು.

ಕೃಲ್ಲಿಂಗ :
ಮಾಡಿದ.
ಇದಕ್ಕೆ ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ಮಾಡಿದಂ, ಮಾಡಿದನಂ, ಮಾಡಿದನಿಂ, ಮಾಡಿದಂಗೆ, ಮಾಡಿದತ್ತಣಿಂ, ಮಾಡಿದನ, ಮಾಡಿದನೊಳ್ ಎಂಬ ಪದಗಳನ್ನು ರೂಪಿಸಿಕೊಳ್ಳಬಹುದು. ತನ್ನ ನೀಳ್ದ ಜಸದಿಂ ಬೆಳ್ದಿಂಗಳಿಂ ಮಾಡಿದಂ ಇದೇ ರೀತಿ ಬೇಡಿದ, ಕೂಡಿದ, ನೋಡಿದ ಮುಂತಾದುವು.

ತದ್ದಿತ ಲಿಂಗ :
ಅಡಪವಳ.
ಇದಕ್ಕೆ ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ಅಡಪವಳಂ, ಅಡಪವಳನಂ, ಅಡಪವಳನಿಂ, ಅಡಪವಳಂಗೆ, ಅಡಪವಳನತ್ತಣಿಂ, ಅಡಪವಳನ, ಅಡಪವಳನೊಳ್ ಎಂಬ ಪದಗಳನ್ನು ರೂಪಿಸಿಕೊಳ್ಳಬಹುದು. ಅದರಂತೆ ಅಡಪವಳಂ ಪಡೆವಳ್ಳಂ ಮಡಿವಳ್ಳಂ, ಸೆಜ್ಜೆವಳ್ಳವಜ್ಜಂ ಬೆಜ್ಜಂ. ಇದೇ ರೀತಿ ಪಡವಳ್ಳ, ಮಡವಳ್ಳ.

ಸಮಾಸ ಲಿಂಗ :
ಕುಡವಿಲ್ಲ.
ಇದಕ್ಕೆ, ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ಕುಡುವಿಲ್ಲಂ, ಕುಡುವಿಲ್ಲನಂ, ಕುಡುವಿಲ್ಲನಿಂ, ಕುಡುವಿಲ್ಲಂಗೆ, ಕುಡುವಿಲ್ಲನತ್ತಣಿಂ, ಕುಡುವಿಲ್ಲನ, ಕುಡುವಿಲ್ಲನೊಳ್ ಎಂಬ ಪದಗಳನ್ನು ರೂಪಿಸಿಕೊಳ್ಳಬಹುದು.
ಕುಡುವಿಲ್ಲನೆಚ್ಚಕೋಲುಂ ನಡದುದಲಂದೊರ್ವನೆರ್ದೆಯಂ…. ಇದೇ ರೀತಿ ತಂಗಾಳಿ, ಮುಂಗಯ್ ಇಮ್ಮಾವು

ನಾಮ ಲಿಂಗ :
ಅರಸ.
ಇದಕ್ಕೆ, ನಾಮವಿಭಕ್ತಿ ಪ್ರತ್ಯಯಗಳನ್ನು ಹಚ್ಚಿ ಅರಸಂ, ಅರಸನಂ, ಅರಸನಿಂ, ಅರಸಂಗೆ, ಅರಸನತ್ತಣಿಂ ಅರಸನ, ಅರಸನೊಳ್ ಎಂದು ಪದಗಳನ್ನು ರೂಪಿಸಿಕೊಳ್ಳಬಹುದು.
‘ಅರಸಂ ಮೂರ್ಖಂ, ಸಚಿವರ್ ಸರಸ್ವತೀ ದ್ರೋಹರ್…’
ಇದೇ ರೀತಿ ಇಂದ್ರ, ವರಾಹ, ಹರಿಣ ಮಾಪಕ.

೮೩
ಭೂತ ಭವಿಷ್ಯತ್ ಕ್ರಿಯೆಗಳ್
ಉಪೇತ ವಿಭಕ್ತಿಗಳಂ
ಉೞಿಯೆ
ಕೃತ್ತು ಅಪ್ಪುವು; ಅಸಂಭೂತಂ
ಸಂಪ್ರತಿವಿದಿಗಳೊಳ್
ತೆಱದಿಂ
ಮಧ್ಯಮ ಉತ್ತಮ ಕ್ರಿಯೆಗಳೊಳಂ

ಭೂತಕಾಲದ ಮತ್ತು ಭವಿಷ್ಯತ್ ಕಾಲದ ಕ್ರಿಯಾಪದಗಳು ತಮಗೆ ಸೇರಿರುವ ಪ್ರತ್ಯಯಗಳನ್ನು ಕಳೆದರೆ ಕೃಲ್ಲಿಂಗಗಳಾಗುತ್ತವೆ. ಆದರೆ ವರ್ತಮಾನ ಕ್ರಿಯಾಪದ, ವಿದ್ಯರ್ಥ ಕ್ರಿಯಾಪದ, ಮಧ್ಯಮ ಪುರುಷ ಕ್ರಿಯಾಪದ ಹಾಗೂ ಉತ್ತಮ ಪುರುಷ ಕ್ರಿಯಾಪದಗಳಲ್ಲಿ ಕೃಲ್ಲಿಂಗ ಸಂಭವಿಸುವುದಿಲ್ಲ. ಅವುಗಳಿಗೆ ನಾಮವಿಭಕ್ತಿ ಪ್ರತ್ಯಯಗಳನ್ನು ಹತ್ತಿಸಬಾರದು.

ಭೂತಕಾಲದ ಕೃಲ್ಲಿಂಗ : ನಲಿದ

ನಲಿದಂ ಎಂಬುದು ಭೂತಕಾಲ ಕ್ರಿಯಾಪದ. ಇದು ತನ್ನ ಅಂ ಎಂಬ ಅಖ್ಯಾತ ವಿಭಕ್ತಿ ಪ್ರತ್ಯಯವನ್ನು ಕಳೆದುಕೊಳ್ಳಲು ಉಳಿಯುವ ನಲಿದ ಎಂಬುದು ಕೃಲ್ಲಿಂಗ

…. ಬಾೞನೆಂದು ಮದನಂ
ನಲಿದಂ ನಡೆನೋಡಿ ಚೂತಮಂ.

ಇದೇ ರೀತಿ ಮಾಡಿದಂ ಮಾಡಿದ; ನೋಡಿದಂ, ನೋಡಿದ

ಭವಿಷ್ಯತ್ಕಾಲದ ಕೃಲ್ಲಿಂಗ : ಪೊಯ್ವ

ಪೊಯ್ವಂ ಎಂಬುದು ಭವಿಷ್ಯತ್ಕಾಲ ಕ್ರಿಯಾಪದ. ಇದು ತನ್ನ ಅಂ ಎಂಬ ಅಖ್ಯಾತ ಪ್ರತ್ಯಯವನ್ನು ಕಳೆದುಕೊಳ್ಳಲು ಪೊಯ್ವ ಎಂಬುದು ಕೃಲ್ಲಿಂಗ. ಆ ವೇಶ್ಯಾವಾಟದೊಳ್ ಧೂರ್ಜಟಿಯ ನೊಸಲ ಕಣ್ಣಂ ಸ್ಮರಂ ನಂದೆ ಪೊಯ್ವಂ.

ಕೃಲಿಂಗವಾಗದ ವರ್ತಮಾನ ಕ್ರಿಯಾಪದ : ಮಾಡಿದಪಂ (ಮಾಡಿದಪರ್)
ಕೃಲಿಂಗವಾಗದ ವಿಧ್ಯರ್ಥ ಕ್ರಿಯಾಪದ : ಕುಡು (ಕುಡಿಂ)
ಕೃಲಿಂಗವಾಗದ ಮಧ್ಯಮಪುರುಷ ಕ್ರಿಯಾಪದ : ಬೇಡಿದಯ್ (ಬೇಡಿದಿರ್)
ಕೃಲಿಂಗವಾಗದ ಉತ್ತಮಪುರುಷ ಕ್ರಿಯಾಪದ : ಪಾಡುವೆನ್ (ಪಾಡುವೆವ್ರು)

೮೪
ವಿನುತ ಕ್ರಿಯಾತ್ಮಕಂಗಳುಂ
ಎನಿಸುವ
ಸಂಸ್ಕೃತದ ಭಾವವಚನಗಳಂ
ಆಯ್ದು
ಅನಿತರ್ಕಂ ಇಸು
ಪ್ರತ್ಯಯವನೆ, ಪತ್ತಿಸಿ
ನಿಱೆಸೆ ಬರ್ಕುಂ ಕೃಲ್ಲಿಂಗಂ

ಕೃಲ್ಲಿಂಗ ಮಾಡಿಕೊಳ್ಳುವ ಇನ್ನೊಂದು ವಿಚಾರವನ್ನು ಈ ಸೂತ್ರದಲ್ಲಿ ಹೇಳಿದ್ದಾನೆ. ಕನ್ನಡಕ್ಕೆ ಕ್ರಿಯಾತ್ಮಕಗಳೆನಿಸುವ ಸಂಸ್ಕೃತದ ಭಾವವಚನಗಳನ್ನು ಆಯ್ದುಕೊಂಡು ಅವುಗಳಿಗೆ ‘ಇಸು’ ಎಂಬ ಪ್ರೇರಣಾರ್ಥಕ ಪ್ರತ್ಯಯ ಸೇರಿಸಿದಾಗ ಕೃಲ್ಲಿಂಗಗಳುಂಟಾಗುತ್ತವೆ.

ಧರ – ಇದು ಸಂಸ್ಕೃತದ ಭಾವವಚನ
ಧರ + ಇಸು = ಧರಿಸು – ಇದು ಕೃಲಿಂಗ

ಈಗ ಧರಿಸುವಂ, ಧರಿಸುವನಂ, ಧರಿಸುವನಿಂ ಎಂಬಂತೆ ಸಪ್ತವಿಭಕ್ತಿಗಳನ್ನು ಹಚ್ಚಬಹುದು.

… ಜಳನಿಧಿ ಜಳ
ಚರಚಯಮಂ ರತ್ನಚಯ ಮುಮಂ ಧರಿಸುವವೊಲ್
ಇದೇ ರೀತಿ, ಭಾವಿಸಿದಂ, ಭಂಗಿಸಿದಂ, ರಂಗಿಸಿದಂ

೮೫
ಸಮುಪಾತ್ತ ಕ್ರಿಯೆಯುಂ
ವಾಕ್ಯಮಾಲೆಯುಂ,
ಸುಕವಿ ವಿರಚಿತ ನಾಮಂ
ಅದು ಆದಂದು
ಅಮರ್ಗುಂ ಲಿಂಗಂ,
ಮಾರ್ಗ ಕ್ರಮಮಂ ಕಾಣಲ್ಕೆ
ಬರ್ಪುದು ಆದ್ಯರ ಕೃತಿಯೊಳ್

ಪೂರ್ವ ಕವಿಗಳಿಂದ ರಚಿತವಾದ ಸಮುಪಾತ್ತ ಕ್ರಿಯೆಯ ವಾಕ್ಯಮಾಲೆಯನ್ನು ಕವಿಗಳು ಲಿಂಗವಾಗಿ ಪ್ರಯೋಗಿಸಿದ್ದರೆ ಅವು ಕನ್ನಡಕ್ಕೆ ಲಿಂಗಗಳಾಗುತ್ತವೆ. ಪ್ರಾಚೀನ ಕವಿಗಳ ಕಾವ್ಯಗಳಲ್ಲಿ ಪ್ರಯೋಗವಾದ ಉದಾಹರಣೆಗಳಿಂದ ಇವನ್ನು ಗಮನಿಸಬಹುದು.

ಸಮುಪಾತ ಕ್ರಿಯಾಲಿಂಗ :
ನಮೋಸ್ತು
ನಮೋಸ್ತುಗಳಿರ್ಪಂದದೊಳಿರ್ದಂ

ವಾಕ್ಯಮಾಲಾಲಿಂಗ :
ಕೈದುವೊತ್ತರದೇವಂ
… ತೋಳ್ಗೊ
ಪ್ಪುವ ನಾಳ್ದನ ಕೈದು ಕೈದು ವೊತ್ತರ ದೇವಂ
ಇದೇ ರೀತಿ, ಗುಣಕ್ಕೆ, ನಲ್ಲಗಣೇಶಂ

೮೬
ಕ್ಷಿತಿಯೊಳೆ ರೂಢ, ಅನ್ವರ್ಥ,
ಅಂಕಿತಂ, ಎಂದು ನಾಮಂ
ಅಱಗೆ ಮೂದೆಱಂ,
ಅಸಮಾಸತೆಯೊಳ್ ನೆಲಸಿರ್ಪುದು
ನಿಶ್ಚಿತನಾಮಂ
ಪಂಚವರ್ಣಕೃತ ಪರಿಮಾಣಂ

ನಾಮಪದವು ರೂಢಿನಾಮ, ಅನ್ವರ್ಥನಾಮ ಮತ್ತು ಅಂಕಿತನಾಮವೆಂದು ಮೂರು ರೀತಿಯಾಗಿರುವುದು. ಅದರಲ್ಲಿ ಪ್ರಸಿದ್ಧವಾದುದು ರೂಢನಾಮವೆನಿಸುತ್ತದೆ. ಗುಣ ಮತ್ತು ಅರ್ಥಕ್ಕೆ ಅನುಗುಣವಾಗಿರುವುದು ಅನ್ವರ್ಥನಾಮವೆನಿಸುವುದು. ಅಂಕಿತ ನಾಮವು ಅವರವರ ಇಷ್ಟಾನುಸಾರ ಇಟ್ಟುಕೊಂಡ ಹೆಸರನ್ನು ತಿಳಿಸುತ್ತದೆ. ನಾಮಪದವು ಸಮಾಸ ಪದವಲ್ಲದ ಮತ್ತು ಒಂದರಿಂದ ಐದು ಅಕ್ಷರಗಳವರೆಗೂ ಕೂಡಿರುವ ಪದವಾಗಿರುತ್ತದೆ.

ರೂಢನಾಮ :
ನೆಲಂ, ಪೊಲಂ, ಚಲಂ, ಜಲಂ ಮೊದಲಾದುವು
ಗುಣಾನುರೂಪಾನ್ವರ್ಥನಾಮ : ದಾನಿ, ಪರಾಕ್ರಮಿ ಇತ್ಯಾದಿ
ದಾನಿದಯಾಪರನತ್ಯಭಿ
ಮಾನಿ ಪರಾಕ್ರಮಿ ಯಶೋರ್ಥಿ ನೀತಿಜ್ಞಂ ವಿ
ದ್ಯಾನಿಲಯ ನೆನಿಪ ನೃಪಂ
ಅರ್ಥಾಮರೂಪಾನ್ವರ್ಥನಾಮ : ಹಿಳ್ಳೆಗಾಲಂ, ನಿಡುಮೂಗಂ
ಕುಸಿಗೊರಲಂ, ಸವಟೆವಾಯಂ ಇತ್ಯಾದಿ

ಅಂಕಿತನಾಮ :
ದೂಳಿಗಂ, ಕಾಟಂ, ತಿಪ್ಪಂ,
ಮಾರಂ, ಕಸವಂ ಇತ್ಯಾದಿ
ಒಂದರಿಂದ ಐದು ವರ್ಣ

ಪ್ರಮಾಣದ ರೂಢನಾಮ :
ಪೂ, ಮರಂ, ಪೊತ್ತಗೆ, ಕವಳಿಗೆ, ಕಟ್ಟವತ್ತಿಗೆ

೮೭
ಒಳ್ಳಿತು, ಮೆಲ್ಲಿತು, ಬೆಟ್ಟಿತು,
ತೆಳ್ಳಿತು, ಬಿಸಿದು, ಅಸಿದು,
ಕಡಿದು, ನಿಡಿದು, ಇನಿದು,
ಎಂಬಂತೆ ಉಳ್ಳುವು
ತು ದು ಕಡೆಯೆನೆ ಕೈಕೊಳ್ಳಿಂ
ಗುಣವಾಚಿ ಮೆಣ್
ತುಕಾರಂ ದ್ವಿತ್ವಂ

ಕೇಶಿರಾಜ ಈ ಸೂತ್ರದಲ್ಲಿ ಗುಣವಚನಗಳ ಸ್ವರೂಪದ ಬಗ್ಗೆ ಹೇಳಿದ್ದಾನೆ. ಒಳ್ಳಿತು, ಮೆಲ್ಲಿತು, ಬೆಟ್ಟಿತು, ತೆಳ್ಳಿತು, ಬಿಸಿದು, ಅಸಿದು, ಕಡಿದು, ನಿಡಿದು, ಇನಿದು ಎಂಬ ‘ತು’ ಕಾರಾಂತವಾದ, ‘ದು’ ಕಾರಾಂತವಾದ ಗುಣವಚನಗಳು ವಿಶೇಷಣ ಪ್ರಚುರವಾಗಿವೆ. ಇವುಗಳಲ್ಲಿ ತುಕಾರಾಂತ ಗುಣವಚನಗಳ ಅಂತ್ಯ ತುಕಾರಕ್ಕೆ ವಿಕಲ್ಪವಾಗಿ ದ್ವಿತ್ವ ಬರುತ್ತದೆ.

ತು ಕಾರಾಂತಕ್ಕೆ :
ಬೆಟ್ಟಿತು, ದಟ್ಟಿತು, ತೆಳ್ಳಿತು, ಒಳ್ಳಿತು, ಮೆಲ್ಲಿತು

ದು ಕಾರಾಂತಕ್ಕೆ :
ಬಸಿದು, ಅಸಿದು, ನಿಡಿದು, ಕರಿದು, ಬಿಳಿದು

ತು ಕಾರಾಂತ ದ್ವಿತ್ವ ವಿಕಲ್ಪಕ್ಕೆ :
ಬೆಟ್ಟಿತು – ಬೆಟ್ಟಿತ್ತು, ಒಳ್ಳಿತು – ಒಳ್ಳಿತ್ತು,
ದಟ್ಟಿತು – ದಟ್ಟಿತ್ತು, ಮೆಲ್ಲಿತು – ಮೆಲ್ಲಿತ್ತು,
ತೆಳ್ಳಿತು – ತೆಳ್ಳಿತ್ತು.

೮೮
ಅದು, ಇದು, ಉದು, ಆವುದು,
ಎಲ್ಲದು, ಪೆಱತು, ಏನ್, ಪೆಱದು,
ಎನಿಪ್ಪ ಶಬ್ದಂಗಳ್
ತಪ್ಪದೆ ಸರ್ವನಾಮಂ ಅಕ್ಕುಂ
ವಿದಗ್ದರ್ ಇವಂ
ಅಱದು ನಿಱಕೆ ಲಿಂಗಸ್ಥಿತಿಯೊಳ್

ನಾಮಪದಗಳಿಗೆ ಬದಲಾಗಿ ಬಳಸಲಾಗುವ ಕೆಲವು ಶಬ್ದಗಳಿಗೆ ಸರ್ವನಾಮಗಳೆಂದು ಹೆಸರು. ಕೇಶಿರಾಜ ಸರ್ವನಾಮಗಳ ಸ್ವರೂಪವನ್ನು ಈ ಸೂತ್ರದಲ್ಲಿ ಹೇಳಿದ್ದಾನೆ. ಅದು, ಇದು, ಉದು, ಆವುದು, ಎಲ್ಲದು, ಪೆಱತು, ಏನ್, ಪೆಱದು ಎಂಬ ಶಬ್ದಗಳು ಸರ್ವನಾಮಗಳು. ಪಂಡಿತರು ಇವುಗಳನ್ನು ಅರಿತು ತ್ರಿವಿಧ ಲಿಂಗ ಸ್ಥಿತಿಯಲ್ಲಿ ನೆಲೆಗೊಳಿಸಬೇಕು.

೮೯
ಏನ್, ಎಂಬ ಸರ್ವನಾಮಂ
ತಾನದು ದಲ್ ಲಿಂಗ ಏಕವಚನಂ
ನಿಜದಿಂ
ಪೀನಂ ಬಹುವಚನಾರ್ಥಂ;
ಆನಲ್ ಸಾಲ್ದತ್ತು
ಮತ್ತೆ ಕೃತಿ ಪದ್ಧತಿಯೊಳ್

ಕೇಶಿರಾಜ ಈ ಸೂತ್ರದಲ್ಲಿ ‘ಏನ್’ ಎಂಬ ಪ್ರಶ್ನಾರ್ಥಕ ಸರ್ವನಾಮವನ್ನು ಕುರಿತು ಹೇಳಿದ್ದಾನೆ. ‘ಏನ್’ ಎಂಬ ಸರ್ವನಾಮ ಸಾಮಾನ್ಯವಾಗಿ ಮೂರುಲಿಂಗಗಳಲ್ಲಿ ಏಕವಚನದಲ್ಲಿಯೆ ಪ್ರಯೋಗವಾಗುತ್ತದೆ. ಮೂರು ಲಿಂಗಗಳಲ್ಲಿ ವ್ಯತ್ಯಾಸವಿಲ್ಲದೆ ಬಳಕೆಯಾಗುವ ‘ಏನ್’ ಎಂಬ ಸರ್ವನಾಮ ಪ್ರಾಚೀನ ಕಾವ್ಯಗಳಲ್ಲಿ ಬಹುವಚನಾರ್ಥದಲ್ಲಿಯೂ ವ್ಯತ್ಯಾಸವಿಲ್ಲದೆ ಬಳಕೆಯಾಗಿದೆ.

ಏಕವಚನ ರೂಪಕ್ಕೆ :
ಅವನೇನ್, ಅವಳೇಳ್, ಅದೇನ್

ಬಹುವಚನ ರೂಪಕ್ಕ :
ಅಲಾಪಂಗಳೇನ್
…… ತತ್ಪರಿಜನಾಲಾಪಂಗಳೇನ್

೯೦
ಸಮುದಿತ ಸಂಖ್ಯೆ, ಅವ್ಯಯ
ರಹಿತಂ ಎನಿಸಿ ವರ್ತಿಪ
ನಿಘಂಟುವಿನ ನಾಮಪದ
ಉತ್ತಮ
ವರ್ಣ ಪ್ರಕೃತಿಗಳಂ
ಸಮಸಂಸ್ಕೃತ ವೆಸರನಿಟ್ಟು
ಲಿಂಗಂ ಮಾೞ್ವರ್

ಸಂಸ್ಕೃತ ಪದಗಳು ಕನ್ನಡಕ್ಕೆ ಸಲ್ಲುವಾಗ ಕೆಲವು ಇದ್ದ ರೂಪದಲ್ಲಿಯೆ ಉಳಿದುಕೊಂಡರೆ, ಹಲವು ಪದಗಳು ಅಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಸಮವಾಗುತ್ತವೆ. ಇಂತಹ ಹಲವು ನಿಯಮಗಳನ್ನು ಕೇಶಿರಾಜ ಸೂತ್ರೀಕರಿಸಿದ್ದಾನೆ. ಈ ಸೂತ್ರದಲ್ಲಿ ಸ್ವರಾಂತ ಸಂಸ್ಕೃತ ಪದಗಳು ಸಮಸಂಸ್ಕೃತವಾಗುವ ರೀತಿಯನ್ನು ಹೇಳಿದ್ದಾನೆ. ಸಂಸ್ಕೃತದ ನಿಘಂಟುವಿನಲ್ಲಿರುವ ಸಂಖ್ಯಾವಾಚಕ, ಅವ್ಯಯಗಳನ್ನು ಹೊರತುಪಡಿಸಿ ಉತ್ತಮವಾದ ನಾಮಪ್ರಕೃತಿಗಳನ್ನು ಕನ್ನಡದಲ್ಲಿ ಸಮಸಂಸ್ಕೃತ ಲಿಂಗವಾಗಿ ಸ್ವೀಕರಿಸಬಹುದು.

ರಾಮ (ಸಂಸ್ಕೃತ) > ರಾಮ (ಸಮಸಂಸ್ಕೃತ) ಇತ್ಯಾದಿ
ಭೀಮ (ಸಂಸ್ಕೃತ) > ಭೀಮ (ಸಮಸಂಸ್ಕೃತ) ಇತ್ಯಾದಿ
ಸೀತಾ (ಸಂಸ್ಕೃತ) > ಸೀತೆ (ಸಮಸಂಸ್ಕೃತ) ಇತ್ಯಾದಿ

೯೧
ವಿದಿತಂ ಎನಿಪ್ಪ ಅವ್ಯಯಮುಂ
ತ್ಯತ್ ಆದಿಯುಂ
ಶತ್ತೃಞಂತಮುಂ
ಸಂಸ್ಕೃತದೊಳ್, ಪದವಿಧಿಯುಂ
ನೆಱೆ ತಳೆದಲ್ಲದೆ
ಕನ್ನಡದಲ್ಲಿ ಲಿಂಗಂ ಆಗವು ನಿಜದಿಂ

ಪ್ರಸಿದ್ಧವಾಗಿರುವ ಸಂಸ್ಕೃತದ ಅವ್ಯಯಗಳು, ತ್ಯದ್, ತದ್ ಮುಂತಾದ ತ್ಯದಾದಿ ರೂಪಗಳು, ಶತ್ತೃಞಂತಗಳು (ತ್ ಅಂತ್ಯವಾದ ಪದಗಳು) ಮೊದಲು ಸಂಸ್ಕೃತದಲ್ಲಿ ಸಮಾಸವಾಗಿ ನಂತರ ಸಮಸಂಸ್ಕೃತ ಲಿಂಗಗಳಾಗುತ್ತವೆ.

ಅವ್ಯಯಕ್ಕೆ : ಅಂತರ್, ಮೊದಲಾದ ಸಂಸ್ಕೃತ ಅವ್ಯಯಗಳಿಗೆ ನೇರವಾಗಿ ಕನ್ನಡದ ಸಪ್ತವಿಭಕ್ತಿಗಳು ಹಚ್ಚದೆ ಅಂತರ್ಮುಖ ಎಂದು ಸಂಸ್ಕೃತ ಸಮಾಸ ಮಾಡಿಕೊಂಡು, ಕನ್ನಡಕ್ಕೆ ಲಿಂಗವಾಗಿ ಸ್ವೀಕರಿಸಿ ಅಂತರ್ಮುಖಂ, ಅಂತರ್ಮುಖನಂ, ಎಂದು ಮುಂತಾಗಿ ವಿಭಕ್ತಿಗಳನ್ನು ಹಚ್ಚಬೇಕು. ಇದೇ ರೀತಿ ಬಹಿರ್, ಪುನರ್, ಅಹಸ್, ಈಷತ್ ಮುಂತಾದುವು.

ತ್ಯದಾದಿಗೆ : ಸಂಸ್ಕೃತದ ತತ್ ಮೊದಲಾದುದಕ್ಕೆ ನೇರವಾಗಿ ಕನ್ನಡದ ಸಪ್ತವಿಭಕ್ತಿಗಳನ್ನು ಹಚ್ಚದೆ, ತ್ಯತ್ಕಥನ ಎಂದು ಸಂಸ್ಕೃತ ಸಮಾಸ ಮಾಡಿಕೊಂಡು ಕನ್ನಡಕ್ಕೆ ಲಿಂಗವಾಗಿ ಸ್ವೀಕರಿಸಿ ತ್ಯತ್ಕಥನಂ, ತ್ಯತ್ಕಥನಮಂ ಎಂದು ಮುಂತಾಗಿ ವಿಭಕ್ತಿಗಳನ್ನು ಹಚ್ಚಬೇಕು. ಇದೇ ರೀತಿ ತದ್, ಯದ್, ಆದಸ್, ಇದಮ್ ಇತ್ಯಾದಿ.

ಶತ್ತೃಞಂತಕ್ಕೆ : ಸಂಸ್ಕೃತದ ಝಣತ್ ಮೊದಲಾದ ಶತ್ತೃಞಂತಗಳಿಗೆ ನೇರವಾಗಿ ಕನ್ನಡದ ಸಪ್ತವಿಭಕ್ತಿಗಳನ್ನು ಹಚ್ಚದೆ ಝಣತ್ಕಂಕಣ ಎಂದು ಸಂಸ್ಕೃತ ಸಮಾಸ ಮಾಡಿಕೊಂಡು ಕನ್ನಡಕ್ಕೆ ಲಿಂಗವಾಗಿ ಸ್ವೀಕರಿಸಿ ಝಣತ್ಕಂಕಣಂ, ಝಣತ್ಕಂಕಣಮಂ ಎಂದು ಮುಂತಾಗಿ ವಿಭಕ್ತಿಗಳನ್ನು ಹಚ್ಚಬೇಕು. ಇದೇ ರೀತಿ ಕ್ಷಣತ್, ಭ್ರಮತ್, ರಟತ್, ಚಲತ್, ದಲತ್, ಮಿಲತ್, ಲಸತ್, ಮುಂಚತ್ ಇತ್ಯಾದಿ.

೯೨
ಏಕ, ದ್ವಿ, ತ್ರಿ ಆದಿ
ಸಮಾಸಕೃತಿಯಿಂ
ಪ್ರತ್ಯಯಾಂತರದಿಂದ ಇರೆ
ಲಘುವಂ, ಏಕಾರಂ ಅತ್ವಮಂ
ಇರದೆ ಆಕಾರಂ ಬಹುಳದಿಂದೆ
ತಳೆದು ಇರೆ ಲಿಂಗಂ

ಸಂಖ್ಯಾವಾಚಿಗಳು, ಸಂಸ್ಕೃತದ ಅ ಕಾರಾಂತಗಳು ಸಮಸಂಸ್ಕೃತವಾಗುವ ಬಗೆಯನ್ನು ಕೇಶಿರಾಜ ಈ ಸೂತ್ರದಲ್ಲಿ ಹೇಳಿದ್ದಾನೆ. ಸಂಸ್ಕೃತದ ಏಕ, ದ್ವಿ, ತ್ರಿ ಮುಂತಾದ ಸಂಖ್ಯಾವಾಚಿಗಳು ನೇರವಾಗಿ ಕನ್ನಡಕ್ಕೆ ಲಿಂಗಗಳಾಗದೆ ಮೊದಲು ಸಂಸ್ಕೃತದಲ್ಲಿ ಸಮಾಸ ಹೊಂದಿ ಪ್ರತ್ಯಯಾಂತರಗಳಾಗಿ ಸಮಸಂಸ್ಕೃತ ಲಿಂಗಗಳಾಗುತ್ತವೆ. ಸಂಸ್ಕೃತದ ಆ ಕಾರಾಂತ ಶಬ್ದಗಳು ವಿಕಲ್ಪವಾಗಿ ಎ ಕಾರಾಂತ ಹೊಂದಿ, ಕೆಲಸಲ ಅ ಕಾರಾಂತಹೊಂದಿ ಕನ್ನಡದಲ್ಲಿ ಲಿಂಗಗಳಾಗಿ ಸಲ್ಲುತ್ತವೆ.

ಸಂಖ್ಯಾವಾಚಿ ಸಮಾಸಕ್ಕೆ :
ಏಕಾಂಗ, ದ್ವಿಮುಖ, ತ್ರಿಲೋಕ,
ಚತುರ್ವೇದ, ಇತ್ಯಾದಿ

ಸಂಖ್ಯಾವಾಚಿ ಪ್ರತ್ಯಯಾಂತಕ್ಕೆ :
ದ್ವಿತಯ, ತ್ರಿತಯ, ಚತುಷ್ಕ ಇತ್ಯಾದಿ

ಆ ಕಾರಾಂತ ಎ ಕಾರಾಂತವಾದುದಕ್ಕೆ :
ಮಾಲಾ – ಮಾಲೆ, ಶಾಲಾ – ಶಾಲೆ,
ರೇಖಾ – ರೇಖೆ, ಮಾತ್ರಾ – ಮಾತ್ರೆ

ಆ ಕಾರಾಂತ ಅ ಕಾರಾಂತವಾದುದಕ್ಕೆ :
ಕಂಧರಾ – ಕಂಧರ, ಉಪತ್ಯಕಾ- ಉಪತ್ಯಕ

ವಿಕಲ್ಪಕ್ಕೆ :
ಗ್ರೀವಾ – ಗ್ರೀವೆ, ಗ್ರೀವ; ಭಿಕ್ಷಾ – ಭಿಕ್ಷೆ, ಭಿಕ್ಷ

೯೩
ಆದಂ ಹ್ರಸ್ವ ಏದಂತಂ
ಅದತ್ವಂ ಹ್ರಸ್ವಂ ಎನಿಸಿದ
ಉದಂತಂ ಆದಿ ಸಮಸ್ತ
ಏಕಾಕ್ಷರವಾದ
ಅವಿಕೃತಿಶಬ್ದಂ;
ಉಕ್ತಿ ವಿದರಿಂ ಲಿಂಗಂ

ಸಂಸ್ಕೃತದ ಅಕಾರಾಂತ ಪದಗಳು ಎಕಾರಾಂತಗಳಾಗಿ ಈ ಕಾರಾಂತ ಪದಗಳು ಇ ಕಾರಾಂತ ಹ್ರಸ್ವವಾಗಿ ಊಕಾರಾಂತ ಪದಗಳು ಉಕಾರಾಂತವಾಗಿ ಹೃಸ್ವ ಜ ಮುಂತಾದ ಏಕಾಕ್ಷರ ಪದಗಳು ಇದ್ದ ರೂಪದಲ್ಲಿಯೆ (ವಿಕಾರ ಹೊಂದದೆ) ಕನ್ನಡಕ್ಕೆ ಸಮಸಂಸ್ಕೃತ ಲಿಂಗಗಳಾಗಿ ಸಲ್ಲುತ್ತವೆ.

ಅ ಕಾರಾಂತ ಎ ಕಾರಾಂತವಾದುದಕ್ಕೆ :
ವಧ – ವಧೆ, ಅಭಿಲಾಷ – ಅಭಿಲಾಷೆ,
ಉದಾಹರಣ – ಉದಾಹರಣೆ

ಈ ಕಾರಾಂತ ಹ್ರಸ್ವವಾದುದಕ್ಕೆ :
ಲಕ್ಷ್ಮೀ – ಲಕ್ಷ್ಮಿ, ಗೌರೀ – ಗೌರಿ,
ಸರಸ್ವತೀ – ಸರಸ್ವತಿ

ಊ ಕಾರಾಂತ ಹ್ರಸ್ವವಾದುದಕ್ಕೆ :
ಸರಯೂ – ಸರಯು, ಕಂಡೂ – ಕಂಡು,
ಖಜೂ – ಖಜ್ಜು, ಜಂಬೂ – ಜಂಬು

ಏ ಕಾಕ್ಷರಕ್ಕೆ :
ಜ – ಜ, ಶ್ರೀ – ಶ್ರೀ, ಸ್ತ್ರೀ – ಸ್ತ್ರೀ,
ಭ್ರೂ – ಭ್ರು, ಕು – ಕೂ

೯೪
ಅತ್ವ ಆಂತಮುಂ, ಇತ್ವ ಆಂತಮುಂ
ಉತ್ವ ಆಂತಮುಂ,
ಋದಂತಮುಂ,
ನಿಜಲಿಂಗಂ
ಋತ್ವಕ್ಕೆ ಆರಾ ಆದೇಶಂ
ತತ್ವಂ ಪೀನಂ ವಿಧಾತೃಶಬ್ದಂ ರಾಂತಂ

ಕೇಶಿರಾಜ ಈ ಸೂತ್ರದಲ್ಲಿ ಅ, ಇ, ಉ, ಋ ಕಾರಾಂತ ಪದಗಳು ಸಮಸಂಸ್ಕೃತವಾಗುವ ಬಗೆಯನ್ನು ಹೇಳಿದ್ದಾನೆ. ಅ ಕಾರಾಂತ, ಇ ಕಾರಾಂತ, ಉ ಕಾರಾಂತ, ಋ ಕಾರಾಂತ ಸಂಸ್ಕೃತ ಪದಗಳು ಯಾವುದೇ ವ್ಯತ್ಯಾಸ ಹೊಂದದೆ ಇದ್ದ ರೂಪದಲ್ಲಿಯೆ ಕನ್ನಡಕ್ಕೆ ಲಿಂಗಗಳಾಗುತ್ತವೆ. ಋ ಕಾರಾಂತ ಸಂಸ್ಕೃತ ಪದಗಳು ಆರ ಆದೇಶ ಹೊಂದಿ ಕೆಲಸಲ ತ ಕಾರಾಂತ ಹೊಂದಿ ಸಮಸಂಸ್ಕೃತಗಳಾಗುತ್ತವೆ. ವಿಧಾತೃ ಶಬ್ದ ರಾಂತವಾಗಿ ಕನ್ನಡಕ್ಕೆ ಸಲ್ಲುತ್ತದೆ.

ಅ ಕಾರಾಂತಕ್ಕೆ : ಭುವನ – ಭುವನ, ನಳಿನ – ನಳಿನ, ಕಲಶ – ಕಲಶ
ಇ ಕಾರಾಂತಕ್ಕೆ : ಶ್ರುತಿ – ಶ್ರುತಿ, ಸ್ಮೃತಿ – ಸ್ಮೃತಿ, ರತಿ – ರತಿ
ಉ ಕಾರಾಂತಕ್ಕೆ : ಪಶು – ಪಶು, ಶಿಶು – ಶಿಶು, ಭಾನು – ಭಾನು
ಋ ಕಾರಾಂತಕ್ಕೆ : ಪಿತೃ – ಪಿತೃ, ಸವಿತೃ – ಸವಿತೃ, ಕರ್ತೃ – ಕರ್ತೃ
ಆರಾ ದೇಶಕ್ಕೆ : ಸವಿತೃ – ಸವಿತಾರ, ನೇತೃ – ನೇತಾರ, ಕರ್ತೃ – ಕರ್ತಾರ
ತಕಾರಾದೇಶಕ್ಕೆ : ದಾತೃ – ದಾತ, ಮಾಂಧಾತೃ – ಮಾಂಧಾತ
ವಿಧಾತೃ : ವಿಧಾತೃ – ವಿಧಾತ್ರ