೧೨೫
ಪಿರಿದುಂ ಚತುರ್ಥಿ
ಸಂಸ್ಕೃತ ಪುರುಷ ಸ್ತ್ರೀ
ವಿಷಯ ವಿಹಿತ
ಬಹುವಚನದೊಳ್;
ಒಂದಿರೆ ಶಿಥಿಲವೃತ್ತಿಯಂ
ತಾಂ ಉಚ್ಚರಿಪರ್ಗೆ
ಯಥೇಷ್ಟಮೆಂದು;
ತಿಳಿ ಕ್ರಮದಿಂ

ವಿಶೇಷವಾಗಿ ಸಂಸ್ಕೃತದ ಪುಲ್ಲಿಂಗ, ಸ್ತ್ರೀಲಿಂಗ, ಬಹುವಚನಗಳಲ್ಲಿ ಚತುರ್ಥೀ ಪ್ರತ್ಯಯ ಸೇರಿರಲು, ಶಿಥಿಲವೃತ್ತಿ ಉಚ್ಚರಿಸುವವರ ಇಷ್ಟವನ್ನವಲಂಬಿಸಿರುತ್ತದೆಯೆಂದು ತಿಳಿಯಬೇಕು.

ವಿಕಲ್ಪ ಶಿಥಿಲಕ್ಕೆ :
ಬುಧರ್ಗೆ – ಬುಧರ್ಗ್ಗೆ, ಕಾಂತೆಯರ್ಗೆ – ಕಾಂತೆಯರ್ಗ್ಗೆ

೧೨೬
ಅತ್ತಣಿಂ ಎಂದು
ನಿಮಿರ್ಚುವರ್
ಅತ್ತೆಂದು ಆಗಿರ್ದ;
ಪಂಚಮಿಯಂ ಅಲ್ಲಿ ಕೆಲರ್
ಪತ್ತಿಸುವರ್, ಮೂದೆಱನಂ
ಪೆತ್ತ ತೃತೀಯೆಯಂ ಎಕಾರಮಂ,
ಪರಿಹರಿಪರ್

ಪಂಚಮಿಯ ಅತ್ ಎಂಬ ಪ್ರತ್ಯಯಕ್ಕೆ ಅತ್ತಣಿಂ ಎಂಬ ಪ್ರತ್ಯಯವನ್ನು ಹಚ್ಚುತ್ತಾರೆ. ಈ ಅತ್ತಣಂ ಎಂಬುದಕ್ಕೆ ತೃತೀಯಾ ವಿಭಕ್ತಿ ಪ್ರತ್ಯಯಗಳಾದ ಇಂ, ಇಂದಂ, ಇಂದೆ ಎಂಬ ಪ್ರತ್ಯಯಗಳನ್ನು ಪಂಚಮಿಗೆ ಹಚ್ಚುತ್ತಾರೆ. ತೃತೀಯೆಯ ಆ ಮೂರು ರೂಪಗಳಿಗೆ ಆದೇಶವಾಗಿ ಬರುವ ‘ಎ’ ಎಂಬ ಪ್ರತ್ಯಯವನ್ನು ಪಂಚಮಿಗೆ ಹತ್ತಿಸುವುದಿಲ್ಲ.

ಪಂಚಮಿಗೆ :
ಅತ್ > ಅತ್ತಣ್ + ಇಂ = ಅತ್ತಣಿಂ
…. ಆಳ್ದನ ನಂಟರತ್ತಣಿಂ
ದವದಳ್ ಮಾಯ್ತು ಪೋಯ್ತು ರವಣಂ…

ಪಂಚಮಿಯ ಮೇಲಿನ ತೃತೀಯೆಗೆ :
ಕೆಱೆಯತ್ತಣಿಂ, ಕೆಱಿಯತ್ತಣಿಂದೆ
ಕೆಱಿಯತ್ತಣೆ ಎನ್ನಬಾರದು

ಪಂಚಮಿ ಅರ್ಥದ ತೃತೀಯೆಗೆ :
…ತಿಳಿಗೊಳದಿಂದೆ ಪಾಱಿದುವು
ಹಂಸಕುಳಂ ಮತ್ತಹಸ್ತಿಗಳ ವಸ್ತಕದಿಂ
ಬಿದಿರಿಂ ಫಣೀಂ.

೧೨೭
ಆದರಿಪರ್ ಕೆಲಬರ್
ದೀಘಾದೇಶಕಂ ಅಗ್ರದಲ್ಲಿ,
ಷಷ್ಠಿ ಅಕಾರಕ್ಕೆ, ದೀರ್ಘಮಂ ಇರದೆ
ಅರೆಬರ್ ಖೇದದ ಸಂಭ್ರಮದ
ಮೆಯ್ಯೋಳ್ ಉತ್ಪಾದಿಸುವರ್

ಷಷ್ಠಿ ವಿಭಕ್ತಿ ಪ್ರತ್ಯಯ ಕೆಲವೆಡೆ ದೀರ್ಘ ಆದೇಶವನ್ನು ಪಡೆಯುತ್ತದೆ. ಕೇಶಿರಾಜ ಈ ಸೂತ್ರದಲ್ಲಿ ದೀರ್ಘಾದೇಶ ಕುರಿತು ಹೇಳಿದ್ದಾನೆ. ಪದ, ವಾಕ್ಯಗಳ ತುದಿಯಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯ ‘ಅ’ ಪರವಾದಾಗ ಕೆಲವು ಆ ‘ಅ’ ಕಾರಕ್ಕೆ ದೀರ್ಘಾದೇಶ ಮಾಡಿ ಕೊಳ್ಳುತ್ತಾರೆ. (ಅ > ಆ) ಖೇದದ, ಸಂಭ್ರಮದ ಪ್ರಸಂಗಗಳಲ್ಲಿ ಇಂತಹ ದೀರ್ಘಾದೇಶವನ್ನು ಕೆಲವು ಪ್ರಯೋಗಿಸುತ್ತಾರೆ.

ಷಷ್ಠಿಯ ದೀರ್ಘಾದೇಶಕ್ಕೆ :
ಕುವರಂಕರಾಮಂ + ಅ = ಕುವರಂರಾಮನ (ನಾ)
ದೊರೆಯೆನಿಸಿತ್ತು ಭಾರತಕ್ಕೆ ಗೆಲ್ದರಣಂ ಕುವರಂಕ
ರಾಮನಾ

ಖೇದಕ್ಕೆ :
ಅಕ್ಕಟ > ಅಕ್ಕಟಾ
…ಅಕ್ಕಟಾಮರುಳ್ದುಂಬಿಗಳೇಕೆ ಸಂಪಗೆಗಳೊಳ್
ಪಗೆಗೊಂಡುವೊ ನಿರ್ನಿಮಿತ್ತದಿಂ

ಸಂಭ್ರಮಕ್ಕೆ :
ಗಡ > ಗಡಾ
ಬೇಡ ಗಡಾ ಬೇಡ
ಗಡಾ ನಿನಗಾತನೊಳ್ ಚಲಂ

೧೨೮
ಅವಿಶೇಷದಿಂ ದೀರ್ಘ
ವ್ಯವಹೃತಿ
ಶಬ್ದಅಂತರಾಳದೊಳ್,
ಪಕ್ಷದಿಂ ಉದ್ಭವಿಕುಂ
ದ್ವಿತೀಯೆಗಂ; ಮುಂದೆ ಅವತರಿ ಸಲೊಡಂ
ಸ್ವರ ಪ್ರಪೂರ್ವ ಪದಂಗಳ್

ಯಾವುದೇ ಕಾರಣವಿಲ್ಲದೆ ಶಬ್ದದ ಮಧ್ಯದಲ್ಲಿ, ಕೆಲವರ ಅಭಿಪ್ರಾಯದಂತೆ ದೀರ್ಘಾದೇಶ ಉಂಟಾಗುತ್ತದೆ. ದ್ವಿತೀಯಾವಿಭಕ್ತಿ ಪ್ರತ್ಯಯವನ್ನೊಳಗೊಂಡ ಪದ ಪೂರ್ವಪದವಾಗಿದ್ದು ಅದರ ಮುಂದೆ ಸ್ವರಾದಿಯಾದ ಪದಗಳು ಪರವಾದಾಗ ಪೂರ್ವಪದದ ಅಂತ್ಯದಲ್ಲಿ ದೀರ್ಘಿಕರಣ ಉಂಟಾಗುತ್ತದೆ.

ಶಬ್ದಾಂತರಾಳ ದೀರ್ಘಕ್ಕೆ :
ಅರೊಗಿಸಿದಂ, ಆರೋಗಿಸಿದಂ
ಗೆಯಂಗಂ, ಗೆಯಾಂಗಂ
ಗೆ(ಯಾ)ಂಗಕ್ಕೆ ತಾನೆ ಸೋಲ್ವನೆೞ್ತುವೊಜಂಗಂ

ದ್ವಿತೀಯಾ ದೀರ್ಘಕ್ಕೆ :
ಬಿಲ್ಲಂ + ಅದಂ = ಬಿಲ್ಲನದಂ > ಬಿಲ್ಲಾನದಂ
ಎನಿತ್ತೆನಿತ್ತಂಬುಜಪತ್ರನೇತ್ರೆಯಾ
ಘನಸ್ತನಂಗಳ್ ಬಳೆಗುಂ ಕಿರಾತೆಯಾ
ಅನಿತ್ತನಿತ್ತಂ ವನದೊಳ್ ವನೇಚರಂ
ತನತ್ತು ಬಿಲ್ಲಾನದನಂತೆ ಕೀಸುವಂ ||

೧೨೯
ಅಲ್ಲಿ ಒಳ್, ಎಂಬಿವು ಮಿಕ್ಕೆಡೆಗೆ
ಎಲ್ಲಂ ದಿಗ್ವಾಚಿಯಪ್ಪ ಅದಂತಕ್ಕೆ
ಅಲ್, ಅಲ್ಲಿ ಉದಂತಕ್ಕೆ
ಎತ್ವಂ ಬಲ್ಲರ ಮತದಿಂ;
ವಿಕಲ್ಪ ವಿಧಿ
ಸಪ್ತಮಿಯೊಳ್

ಸಾಮಾನ್ಯವಾಗಿ ಸಪ್ತಮೀ ವಿಭಕ್ತಿಯಲ್ಲಿ ‘ಒಳ್’ ಮತ್ತು ‘ಅಲ್ಲಿ’ ಎಂಬ ಪ್ರತ್ಯಯಗಳು ಬರುತ್ತವೆ. ಅ ಕಾರಾಂತವಾಗಿ ದಿಗ್ವಾಚಿಗಳ ಮೇಲೆ ‘ಅಲ್’ ಪ್ರತ್ಯಯವು ವಿಕಲ್ಪವಾಗಿಯೂ ಉ ಕಾರಾಂತವಾದ ದಿಗ್ವಾಚಕಗಳ ಮೇಲೆ ‘ಎ’ ಪ್ರತ್ಯಯವು ಬರುತ್ತದೆ. ಮಿಕ್ಕೆಡೆಗೆ ದಿಗ್ವಾಚಿಗಳಿಲ್ಲದೆಡೆಗೆ ಅಲ್ಲಿ ‘ಒಳ್’ ಪ್ರಯೋಗವಾಗುತ್ತದೆ.

ಅಲ್ಲಿ, ಒಳ್ ಎಂಬುದಕ್ಕೆ :
ಸಭೆಯೊಳ್, ಸಭೆಯಲ್ಲಿ
ಸಭೆಯೊಳ್ ನುಡಿದಂ ನವಮೇಘನಾದ ದಿಂ

ಅ ಕಾರಾಂತದ ಅಲ್‌ಗೆ :
ಪಡುವ, ಪಡುವಲ್
ಪಡುವ ಮೂಡ ತೆಂಕ ಬಡಗ ಪೊಡವಿಪತಿಗಳಿಲ್ಲೆನಲ್
ನಡೆದು ಗೆಲ್ದು….
ಮೂಡಲಿರ್ದ ಪದದೊಳ್ ತಾರಾಮನೋವಲ್ಲಭಂ

ಉ ಕಾರಾಂತದ ವಿತ್ವಕ್ಕೆ :
ಪೊಱಗು – ಪೊಱಗೆ,

೧೩೦
ಸಮನಿಪುದು ಮುಂದು, ಪಿಂದು
ಎಂಬಿವಱ ಅಂತ್ಯಕ್ಕೆ
ಅಱಿ ವಿಕಲ್ಪದಿಂದೆ ತುಕಾರಂ
ವ್ಯವಹರಿಪುದು;
ಎತ್ವವಿಧಿ, ಬಲ್ಲವರಿಂ
ಮೇಲ್ ಎಂದು
ಪೇೞ್ವ ಬೀೞಕ್ಕರಕಂ

ಮುಂದು, ಪಿಂದು ಎಂಬಿವುಗಳು ಅಂತ್ಯಕ್ಕೆ ವಿಕಲ್ಪದಿಂದ ತುಕಾರವುಂಟಾಗುತ್ತದೆ. ಆಗ ಅವುಗಳ ಕೊನೆಗೆ ಎ ಕಾರವೂ ಬರುತ್ತದೆ. ಮೇಲ್ ಎಂಬಲ್ಲಿಯ ವ್ಯಂಜನಾಕ್ಷರಕ್ಕೂ ವಿದ್ವಾಂಸರಿಂದ ಯ ಕಾರ ವ್ಯವಹರಿಸಲ್ಪಡುತ್ತದೆ.

ತು ಕಾರಕ್ಕೆ :
ಮುಂದು – ಮುಂತು, ಪಿಂದು – ಪಿಂತು

ಎ ಕಾರಕ್ಕೆ :
ಮುಂದೆ – ಮುಂತೆ, ಪಿಂದೆ – ಪಿಂತೆ
ಮೇಲ್ ಎಂಬುದಕ್ಕೆ : (ಮೇಲ್ + ಎ = ಮೇಲೆ)
…ಆನೆಯ ಮೇಲೆಯುಮಾಳ ಮೇಲೆಯುಂ
ಕುದುರೆಯ ಮೇಲೆಯುಂ ಪರಿದುದೊಂದೇ ಗಜಂ ಭುವನೈಕರಾಮನಾ

೧೩೧
ಮೊದಲೆರಡುಂ
ವಿಭಕ್ತಿಯೊಳಂ, ಪೊದೞ್ಗುಂ
ಅಲ್, ಕಾಲವಾಚಿಯಂ
ಅಂದು, ಇಂದು, ಉಂದು
ಎಂಬುದುಂ;
ಏಕರೂಪಂ ಆಗಿರ್ಪುದು
ಮೊದಲೆರಡುಂ
ವಿಭಕ್ತಿಗಂ ಸಪ್ತಮಿಗಂ

ಸಪ್ತಮಿ ವಿಭಕ್ತಿಯ ‘ಅಲ್’ ಪ್ರತ್ಯಯವು ಪ್ರಥಮಾ ಮತ್ತು ದ್ವಿತೀಯಾ ವಿಭಕ್ತಿಯಲ್ಲಿ ಬರುತ್ತದೆ. ಕಾಲವಾಚಕ ಶಬ್ದಗಳಾದ ಅಂದು, ಇಂದು, ಉಂದು ಎಂಬಿವುಗಳು ಪ್ರಥಮಾ, ದ್ವಿತಿಯಾ ಮತ್ತು ಸಪ್ತಮಿ ವಿಭಕ್ತಿಗಳಲ್ಲಿ ಏಕರೂಪವನ್ನು ಹೊಂದುತ್ತವೆ.

ಪ್ರಥಮೆ ದ್ವಿತೀಯೆಗಳ ಅಲ್‌ಗೆ :
ಮೂಡಲ್, ಮೂಡಲ್, ಮೂಡಣಿಂ,
ಮೂಡಣ್ಗೆ, ಮೂಡಣತ್ತಣಿಂ,
ಮೂಡಣ ಮೂಡಲ್

ಅಂದು ಮೊದಲಾದವುಗಳಿಗೆ :
ಅಂದು, ಅಂದು, ಅಂದಿಂ, ಅಂದಿಂಗೆ,
ಅಂದಿನತ್ತಣಿಂ, ಅಂದಿನ, ಅಂದು

೧೩೨
ಪುದಿಗುಂ ಅದಂತಕ್ಕೆ
ಪುಲ್ಲಿಂಗದ ವೋಲ್;
ಕಿಱಿದೆಡೆಗಳಲ್ಲಿ ಎಲ್ಲಂ
ಸ್ತ್ರೀಲಿಂಗದೊಳಂ
ಪುಂನಪ್ಪಿನೊಳಂ ಪುದಿಗುಂ ತಿಳಿ
ಬಹುಳಂ ಅದು ಉದಾಹರಣೆಗಳಿಂ

ಕೆಲವು ಅಕಾರಾಂತವಾದ ಸ್ತ್ರೀಲಿಂಗ ಶಬ್ದಗಳೂ ಮತ್ತು ಕೆಲವು ‘ಅ’ ಕಾರಾಂತ ನಪುಂಸಕಲಿಂಗ ಶಬ್ದಗಳೂ ಸಪ್ತವಿಭಕ್ತಿಯಲ್ಲಿಯೂ ಪುಲ್ಲಿಂಗದಂತೆಯೇ ರೂಪಗಳನ್ನು ಹೊಂದುತ್ತವೆ. ಅವುಗಳನ್ನು ಉದಾಹರಣೆಗಳಿಂದ ಅರಿಯಬೇಕು.

ಅ ಕಾರಾಂತ ಸ್ತ್ರೀಲಿಂಗಕ್ಕೆ :
ಅಕ್ಕ, ಅಕ್ಕನಂ, ಅಕ್ಕನಿಂ, ಅಕ್ಕಂಗೆ,
ಅಕ್ಕನತ್ತಣಿಂ, ಅಕ್ಕನ, ಅಕ್ಕನೊಳ್

ಅ ಕಾರಾಂತ ಪುಂನಪುಂಸಕಲಿಂಗಕ್ಕೆ :
ಹರಿಣಂ, ಹರಿಣನಂ, ಹರಿಣನಿಂ, ಹರಿಣಂಗೆ,
ಹರಿಣನತ್ತಣಿಂ, ಹರಿಣನ, ಹರಿಣನೊಳ್

೧೩೩
ಅಂ, ಉಂ, ಎಂದು ಉಸಿರ್ವ
ಮುಚ್ಚಯದ ಉಮು ವಿಧಿ
ನಿರುತಂ ದ್ವಿತೀಯೆಯೊಳ್
ಪೊಕ್ಕು ಇರ್ಕು ಸಮನಿಸವು
ಎಂದು ಷಷ್ಠಿಯೊಳ್
ಅಂ, ಉಮ್, ಅವು
ಮಿಕ್ಕಿನ ವಿಭಕ್ತಿಗಳ
ಮೇಲೆ ಇರ್ಕುಂ

ಎರಡು ಕರ್ತೃ ಇಲ್ಲವೆ ಎರಡು ಕರ್ಮಗಳನ್ನು ಒಟ್ಟಿಗೆ ಸೇರಿಸಿ ಹೇಳುವುದಕ್ಕೆ ಸಮುಚ್ಚಯವೆಂದು ಕರೆಯುತ್ತಾರೆ. ಪ್ರಕೃತಿಗಳಿಗೆ ಪ್ರತ್ಯಯಗಳನ್ನು ಸೇರಿಸಿ ಎರಡು ಪದಗಳನ್ನು ಕೂಡಿಸಿ ಹೇಳುವಲ್ಲಿ ‘ಅಂ’ ಅಥವಾ ‘ಉಂ’ ಎಂಬ ಪ್ರತ್ಯಯಗಳು ಸೇರುತ್ತಿದ್ದು, ಅವುಗಳಿಗೆ ಸಮುಚ್ಚಯವಾಚಕ ಪ್ರತ್ಯಯಗಳೆಂದು ಹೆಸರು. ಈ ಪ್ರತ್ಯಯಗಳು ಸೇರಿಕೊಳ್ಳುವ ವಿಚಾರವನ್ನು ವಿವರಿಸುವ ನಿಯಮವೇ ಸಮುಚ್ಚಯದ ಉಮುವಿಧಿ. ಅದರ ಸ್ವರೂಪವನ್ನು ಕೇಶಿರಾಜ ಹೀಗೆ ಹೇಳಿದ್ದಾನೆ. ಅಂ, ಉಂ ಎಂಬ ಸಮುಚ್ಚಯವಾಚಕ ಪ್ರತ್ಯಯಗಳಲ್ಲಿ ‘ಉಂ’ ಎಂಬ ಪ್ರತ್ಯಯ ಪ್ರಕೃತಿಗೆ ದ್ವಿತೀಯಾ ವಿಭಕ್ತಿ ಸೇರುವಾಗ, ಪ್ರಕೃತಿ ಪ್ರತ್ಯಯಗಳು ಮಧ್ಯದಲ್ಲಿ ಸೇರುತ್ತದೆ. ಪ್ರಕೃತಿಗೆ ಷಷ್ಠಿ ವಿಭಕ್ತಿ ಪ್ರತ್ಯಯ ಸೇರುವಾಗ ಅಂ ಅಥವಾ ಉಂ ಪ್ರತ್ಯಯಗಳು ಸೇರುವುದೇ ಇಲ್ಲ. ಉಳಿದ ವಿಭಕ್ತಿ ಪ್ರತ್ಯಯಗಳು ಸೇರುವಾಗ ಯಥಾನುರೂಪವಾಗಿ ಅಂ ಅಥವಾ ಉಂ ಪ್ರತ್ಯಯಗಳು ಪ್ರಕೃತಿ, ಪ್ರತ್ಯಯದ ನಂತರದಲ್ಲಿ ಸೇರಿಕೊಳ್ಳುತ್ತವೆ.

ದ್ವಿತೀಯೆಯ ಒಳಗಿನ

ಉಮುವಿಗೆ :
ಪುಲಿ + ಉಂ + ಅಂ = ಪುಲಿಯುಮಂ
ಒಂದೆಡೆಯೊಳ್ ಕಟ್ಟುವುದೆ
ಪುಲಿಯುಮಂ ಕವಿಲೆಯುಮಂ

ಮಿಕ್ಕ ವಿಭಕ್ತಿಗಳ ಮುಂದಿನ ಸಮುಚ್ಚಯಕ್ಕೆ :
ನರ + ಉಂ = ನರನುಂ
ನರನುಂ ನರನಂದನನುಂ
ಗುರುವುಂ ಗುರುಸುತನುಂ
ಕಾಲಿಂದೆ + ಉಂ = ಕಾಲಿಂದೆಯುಂ
ಕಾಲಿಂದೆಯುಂ ಕೈಯಿಂದೆಯುಂ ಘಟಿಸಿದಂ
ದ್ರೋಣಂಗೆ + ಅಂ = ದ್ರೋಣಂಗಂ
ಅವಂಗೆ + ಉಂ = ಅವಂಗೆಯುಂ,
ದ್ರೋಣಂಗಂ ನಿನಗಂ ಬಿಲ್
ಜಣಿಕೆಯದು
ಸಕ್ಕಸಮನೆ….
….ವಂ
ಚಿಸುವುದವಂಗೆಯುಂ ನಿನಗೆಯುಂ ಸಹಜಂ
ಬಿಡಿಸಲ್ಕೆ ಬರ್ಕುಮೇ
ಜದಿಯತ್ತಣಿಂದೆ + ಉಂ = ಜದಿಯತ್ತಣಿಂದೆಯುಂ
ಜದಿಯತ್ತಣಿಂದೆಯುಂ ಕೇದಗೆಯತ್ತಣಿಂದೆಯುಂ
ಕಂಪು ಬಂದುದು
ಚಲದೊಳ್ +  ಅಂ = ಚಲದೊಳಂ.
ಅಲ್ಲಿ + ಉಂ = ಅಲ್ಲಿಯುಂ
ಚಲದೊಳಮಾಚಾದದೊಳಂ
ಕಲಿತನದೊಳಂ….
ಅಲ್ಲಿಯು ಮಿಲ್ಲಿಯುದುಲ್ಲಿಯುಂ ನರಂ

೧೩೪
ಎಲ್ಲಿಯುಂ, ಮಂತ್ರಣದೊಳ್
ಬಲ್ಲರ್
ಪ್ರಥಮ ಏಕವಚನಮಂ
ಲೋಪಿಸುವರ್
ನಿಲ್ಲದೆ ವಿಕಲ್ಪಮುಖದಿಂ
ಸೊಲ್ಲಿಸುವರ್
ಹ್ರಸ್ವ, ದೀರ್ಘ ಕಾಕುಗಳೆರಡಂ

ವಿದ್ವಾಂಸರು ಆಮಂತ್ರಣದಲ್ಲಿ, ಸಂಬೋಧನೆಯಲ್ಲಿ ಸ್ವರಾಂತಗಳಿಗೆ ಹತ್ತಿದ ಪ್ರಥಮಾ ಏಕವಚನ ಪ್ರತ್ಯಯವನ್ನು ಲೋಪಿಸುತ್ತಾರೆ. ಹ್ರಸ್ವ-ದೀರ್ಘ ಎಂಬೆರಡು ಕಾಕುಗಳನ್ನೂ ವಿಕಲ್ಪದಿಂದ ಹೇಳುತ್ತಾರೆ.

ಪ್ರಥಮಾ ಏಕವಚನ
ಪ್ರತ್ಯಯ ಲೋಪಕ್ಕೆ :
ಕುಸುಮಾಯುಧಂ > ಕುಸುಮಾಯುಧ
ಬೆಸೆಯದಿರ್ ಕುಸುಮಾಯುಧ ನಿನ್ನಬಲ್ಪು
ಪೆಣ್ಮಕ್ಕಳೊಳಲ್ಲದಿಲ್ಲ
ಇದೇ ರೀತಿ ದೇವ ಬಿನ್ನಪಂ, ಕೇಳಮಾಧವ

ಹ್ರಸ್ವ ಕಾಕುವಿಗೆ : (ಊರ್ವಶಿ) :
ಎಲೆಎಲೆ ರಂಭೆ ಊರ್ವಶಿ ತಿಲೋತ್ತಮೆ
ಮೇನಕೆ ಮಂಜುಘೋಷೆ

ದೀರ್ಘ ಕಾಕುವಿಗೆ :
ಜಿನೇಂದ್ರ > ಜಿನೇಂದ್ರಾ
ಸುಖಸಂಪದಮಂ ಮಾೞುದೆಮಗೆ ಪರಮ ಜೀನೇಂದ್ರಾ