೧೬೨
ಆವುದು, ಎನಿಪ್ಪ ಶಬ್ದಕ್ಕೆ
ಆವಂ ಬಹುವಚನದ
ಎಡೆಯೊಳ್;
ಆರ್ ಎಲ್ಲದು ಎನಿಪ್ಪ
ವಚನಂ ಏಕತ್ವಂ ಆವರಿಸಿದೊಡೆ
ಎಲ್ಲಂ, ಎಂದೆ ಆಯ್ತು ಆದೇಶಂ

‘ಆವುದು’ ಎಂಬ ಶಬ್ದಕ್ಕೆ ಪುಲ್ಲಿಂಗ ಏಕವಚನದಲ್ಲಿ ‘ಆವಂ’ ಎಂದೂ ಪುಲ್ಲಿಂಗ ಬಹುವಚನದಲ್ಲಿ ‘ಆರ್’ ಎಂದು ಆದೇಶವಾಗುತ್ತದೆ. ಎಲ್ಲದು ಎಂಬ ಬಹುವಚನವು ಏಕವಚನವನ್ನು ಪಡೆದರೆ ‘ಎಲ್ಲಂ’ ಎಂದೇ ಆದೇಶವಾಗುತ್ತದೆ.

ಆವಂ ಎಂಬುದಕ್ಕೆ :
ಆವುದು > ಆವಂ
ಆವಂ ಮುರನಂ ಕೊಂದನದಾವಂ
ಬಕಕಂಸ ಕೇಶಿ ಗಳನದಟಲೆದಂ ||

ಆರ್ ಎಂಬುದಕ್ಕೆ :
ಆವಂ > ಆರ್
ಆರ್ಮೆಯ್ದೋರ್ಪರಾರ್ಮ ಲೆವರಾರ್ಪೊಣರ್ವರ್….

ಎಲ್ಲಂ ಎಂಬುದಕ್ಕೆ :
ಎಲ್ಲದು – ಎಲ್ಲಂ
ಪರಲೆಲ್ಲಂ ಮುತ್ತು ಮಾಣಿಕಂ.

೧೬೩
ಪೆಱತು ಎಂಬಿವಱ ಅಂತ್ಯಾಕ್ಷರಂ;
ಅಱಿಗುಂ
ಗುಣವಚನದ
ಅಂತ್ಯದುತ್ವಕ್ಕೆ
ಅತ್ವಂ ನೆಱಿಗುಂ,
ತು ಕಾರಂ ಇರೆ
ಬಂದು ಎಱಗುಗುಂ
ತಾಣದೊಳ್ ಕಾರ ಆದೇಶಂ

ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ ಪೆಱತು, (ಪೆಱದು) ಎಂಬಿವುಗಳ ಅಂತ್ಯಾಕ್ಷರಕ್ಕೆ ಲೋಪವುಂಟಾಗುತ್ತದೆ. ಗುಣವಚನದ ಅಂತ್ಯ ‘ದ’ ಕಾರಕ್ಕೆ ‘ಅ’ ಕಾರಾದೇಶವಾಗುತ್ತದೆ. ಗುಣವಚನದ ಅಂತ್ಯಕ್ಕೆ ತು ಕಾರವಿದ್ದರೆ ಆ ಸ್ಥಾನದಲ್ಲಿ ದ ಕಾರಾದೇಶವುಂಟಾಗುತ್ತದೆ.

ಅಂತ್ಯಾಕ್ಷರ ಲೋಪಕ್ಕೆ :
ಪೆಱತು > ಪೆಱ, ಪೆಱಂ, ಪೆಱಳ್
….ನರನೆಂ |
ಬಾತಂ ಪೆಱನಲ್ಲನೀತನಾಗಲೆ ವೇೞ್ಕುಂ

ಅ ಕಾರಾದೇಶಕ್ಕೆ :
ಇನಿದು > ಇನಿಯ > ಇನಿಯಂ > ಇನಿಯಳ್
ಇನಿಯನೆ ಬೆಲ್ಲದಿಂದಿನಿಯನೀವನೆ ಆಃ ಪಿರಿದೀವ
ನಿತ್ತುದಂ | ನೆನವನೆ ಚಿಃ ಅದಂ ನೆನೆಯಂ……

ದ ಕಾರಾದೇಶಕ್ಕೆ :
ಕೂರಿತು > ಕೂರಿದ > ಕೂರಿದಂ, ಕೂರಿದಳ್
ಕೂರಿದನುಂ ನೇರಿದನುಂ
ಕೂರಿಸಿಯಂತೆನಿಸ ಮಱವನಾ ನರನಾಥಂ

೧೬೪
ಎಳದು, ಪೞದು, ಎಂಬ
ಶಬ್ದಂಗಳ್ ಮಧ್ಯಕ್ಕೆ ಉಂಟು
ಎಕಾರಂ ಉತ್ವಂ, ಬಱಿದು
ಎಂದು ಒಳಱುವಱ ಕಾರದೊಳ್,
ನೀಂ ತಿಳಿ ಪೊಸತಱ ಕಡೆಗೆ
ಬಿಂದು ವೆರಸು ಬಕಾರಂ

ಪುಲ್ಲಿಂಗ, ಸ್ತ್ರೀಲಿಂಗಗಳಲ್ಲಿ, ಎಳದು, ಪೞದು ಎಂಬ ಶಬ್ದಗಳ ಮಧ್ಯಕ್ಕೆ ‘ಎ’ ಕಾರವುಂಟಾಗುತ್ತದೆ. ‘ಬಱದು’ ಎಂಬ ಪದ ‘ಇ’ ಕಾರಕ್ಕೆ ‘ಉ’ ಕಾರವುಂಟಾಗುತ್ತದೆ. ಬಱದು ಎಂಬ ಪದದ ‘ಇ’ ಕಾರಕ್ಕೆ ‘ಉ’ ಕಾರ ಆದೇಶವಾಗುತ್ತದೆ. ಪೊಸತು ಎಂಬುದರ ಕೊನೆಗೆ (ತು ಕಾರಕ್ಕೆ) ಬಿಂದುವಿನಿಂದ ಕೂಡಿದ ‘ಬ’ ಕಾರಾದೇಶವಾಗುತ್ತದೆ.

ಎಳೆದು, ಪೞದೆಂಬಿವಕ್ಕೆ :
ಎಳದು > ಎಳೆಯ > ಎಳೆಯಂ, ಎಳೆಯಳ್

ಬಱದೆಂಬುದಕ್ಕೆ :
ಪೞದು > ಪೞಯ > ಪೞಯಂ, ಪೞಯಳ್
ಬಱದು > ಬಱುವ > ಬಱುವಂ, ಬಱುವಳ್

ಪೊಸತೆಂಬುದಕ್ಕೆ :
ಪೊಸತು > ಪೊಸಂಬ > ಪೊಸಂಬಂ (ಪೊಸಂಬಳ್)
ವಿಚಾರಿಸುದುಂತೆ ಪೊಸಂಬರೊತ್ತೆಯಂ ಕೊಳ್ವುದು
ತಕ್ಕುದಲ್ತು

೧೬೫
ಅದು, ಇದು
ಉದು, ಎಂಬಿವಱ
ಅಂತ್ಯದೊಳ್
ವಳ್ ಆದೇಶವಿಧಿ,
ಕೆ ಕಾರಂ ಮೇಣ್ ಬಂದು
ಒದವಿರೆ ಬರ್ಕುಂ
ಸ್ತ್ರೀಲಿಂಗದೊಳಂ,
ಪುಲ್ಲಿಂಗ ದಂತಿರೆ ಆದಿಗೆ ದೀರ್ಘಂ

ಅದು, ಇದು, ಉದು ಎಂಬಿವುಗಳ ‘ದು’ ಕಾರಕ್ಕೆ ಸ್ತ್ರೀಲಿಂಗದಲ್ಲಿ ‘ವಳ್’ ಆದೇಶವಾಗುತ್ತದೆ. ಅವುಗಳ ಅಂತ್ಯ ‘ದು’ ಕಾರಕ್ಕೆ ‘ಕೆ’ ಕಾರ ಆದೇಶವಾದಾಗ ಆದಿಯ ಹ್ರಸ್ವವು ದೀರ್ಘವಾಗುತ್ತದೆ.

ವಳ್ ಆದೇಶಕ್ಕೆ :
ಅದು > ಅವಳ್, ಇದು > ಇವಳ್, ಉದು > ಉವಳ್

ಕೆ ಕಾರಾದೇಶಕ್ಕೆ :
ಅದು + ಕೆ = ಆಕೆ, ಇದು + ಕೆ = ಈಕೆ, ಉದು + ಕೆ = ಊಕೆ

೧೬೬
ಕೆಲಕೆಲವು ಸಕ್ಕದದ
ಮೂಱುಲಿಂಗಮುಂ;
ರೂಢಿವೆತ್ತ
ಕರ್ಣಾಟಕದೊಳ್;
ನಿಲೆ ನಪ್ಪರಿ ಸಜ್ಜನ ಅದು
ಕುಲವಧು ಎಂಬಲ್ಲಿ
ಕನ್ನಡಂ ನಪ್ಪುಂ ಅದುವುಂ

ಸಂಸ್ಕೃತದ ಕೆಲವು ಶಬ್ದಗಳು ಮೂಱು ಲಿಂಗದಲ್ಲಿದ್ದರೂ ಅವು ಕನ್ನಡಕ್ಕೆ ಲಿಂಗವಾಗುವಲ್ಲಿ ನಪುಂಸಕಲಿಂಗ ವಾಗುತ್ತವೆ. ‘ಸಜ್ಜನ’ ಶಬ್ದವು ಕುಲವಧು ಎಂಬರ್ಥದಲ್ಲಿ ಪ್ರಯೋಗವಾದಾಗ ಅದು ಕನ್ನಡದಲ್ಲಿ ನಪುಂಸಕಲಿಂಗವಾಗುತ್ತದೆ.

ಪುಲ್ಲಿಂಗಕ್ಕೆ : ವೃಕ್ಷಂ ತಳಿರ್ತುದು

ಸ್ತ್ರೀಲಿಂಗಕ್ಕೆ : ಧರೆಬೆಳೆದುದು

ನಪುಂಸಕ ಲಿಂಗಕ್ಕೆ : ಕುಲಂ ಮೇಲೆನಿಸುದುದು

ಸಜ್ಜನಶಬ್ದಕ್ಕೆ : ಆ ಸತಿ ಸಜ್ಜನಂ

 

೧೬೭
ನೆಲಸಿರ್ದ ವಿಶೇಷಣದ
ಇಷ್ಟಲಿಂಗಂ ಎನಿಪುದು
ವಿಶೇಷ್ಯಂ, ಅದಱ ಇಷ್ಟದಿಂ
ಅಗ್ಗಲಿಕುಂ; ವಿಶೇಷಣದ
ಲಿಂಗಂ ಲಕ್ಷಣಂ; ದೋಷರಹಿತಂ
ಇದು ರೂಪಕದೊಳ್

ವಿಶೇಷಣದ ಲಿಂಗವನ್ನು ವಿಶೇಷ್ಯದ ಲಿಂಗವನ್ನಾಗಿ ಯೋಜಿಸಿಕೊಳ್ಳಬೇಕು. ಹಾಗೆಯೇ ವಿಶೇಷ್ಯದ ಲಿಂಗವನ್ನು ವಿಶೇಷಣದ ಲಿಂಗವಾಗಿ ಯೋಜಿಸಿಕೊಳ್ಳಬೇಕು. ಇದು ರೂಪಕದಲ್ಲಿ ದೋಷ ರಹಿತವಾದುದು.

ವಿಶೇಷಣದ ಬಲಕ್ಕೆ :
ಉದಯಾಸ್ತೋನ್ನತ ಶೈಲಸೇತು ಹಿಮವತ್ಕು
ತ್ಕೀಲಪರ್ಯಂತ ಸಂಪದೆಯಂ….
ನೆಲನಂ ಸಾಧಿಸಿ…..

ಇಲ್ಲಿ ವಿಶೇಷ್ಯವಾಗಿರುವ ನೆಲಂ ಎಂಬ ನಪುಂಸಕಲಿಂಗವು ವಿಶೇಷಣವಾಗಿರುವ ಧರಾವನಿತೆ ಎಂಬರ್ಥದ ಸ್ತ್ರೀಲಿಂಗ ಭಾವವನ್ನು ಪಡೆಯುತ್ತದೆಯೆಂದು ಭಾವಿಸಬೇಕು.

ವಿಶೇಷ್ಯದ ಬಲಕ್ಕೆ :
ಆತಂ ಜಗದ್ದರ್ಪಣಂ, ಆ ಪೆಣ್ ಜಗದ್ದರ್ಪಣಂ,
ಅದು ಜಗದ್ದರ್ಪಣಂ

೧೬೮
ಪದಮಧ್ಯ ವತ್ವ ಯತ್ವಕ್ಕೆ
ಒದವುಗುಂ;
ಔತ್ತ್ವ ಐತ್ತ್ವವಿಧಿ
ಅದಂತಕ್ಕೆ ಒತ್ವಂ;
ಪುದಿದಿರ್ಕುಂ,
ಹ್ರಸ್ವತೆಯಿಂ ವಿದಿತ ವಿಕಲ್ಪಂ
ತಗುಳ್ಗುಂ;
ಮೂಱಱೊಳಂ

ಪದ ಮಧ್ಯದಲ್ಲಿರುವ ‘ವ’ ಕಾರ ‘ಯ’ ಕಾರಗಳಿಗೆ ಕ್ರಮವಾಗಿ ‘ಔ’, ‘ಐ’ ಕಾರಗಳು ಉಂಟಾಗುತ್ತವೆ. ಪದಾಂತ್ಯದ ‘ಅ’ ಕಾರಕ್ಕೆ ‘ಒ’ ಕಾರವುಂಟಾಗುತ್ತದೆ. ಈ ಮೂರರಲ್ಲಿಯೂ ವಿಕಲ್ಪತೆಯುಂಟು.

ವ ಕಾರಕ್ಕೆ ಔ ಕಾರ : ಕವುಂಗು – ಕೌಂಗು,  ಅವುಂಕಿದಂ – ಔಂಕಿದಂ

ಯ ಕಾರಕ್ಕೆ ಐ ಕಾರ : ತೇರಯಿಸಿದಂ – ತೇರೈಸಿದಂ, ಕಯಿವಾರಂ – ಕೈವಾರಂ

ಅ ಕಾರಕ್ಕೆ ಒ ಕಾರ : ನುಡಿದಂ – ನುಡಿದಂ, ಪಾಡಿದಂ – ಪಾಡಿದಂ

೧೬೯
ಅಸಮಾಸದೊಳಂ, ದೊರೆವೆತ್ತ
ಸಮಾಸದೊಳಂ
ಕಾರದಿಂ ಪರದೊಳ್;
ಸಂದಿಸಿದ ನಕಾರಂ
ಣತ್ವಂ ಪ್ರಸಿದ್ಧಂ
ಉಚ್ಚರಿಸುವರ್ಗೆ,
ದುಷ್ಕರಂ ಅದುವುಂ

ಅಸಮಾಸದಲ್ಲಿ ಮತ್ತು ಸಮಾಸದಲ್ಲಿ ‘ಣ’ ಕಾರಕ್ಕೆ ಪರವಾದ ‘ನ’ ಕಾರ ‘ಣ’ ಕಾರವಾಗುತ್ತದೆ. ಇದು ಪ್ರಯೋಗದಲ್ಲಿದ್ದರೂ ಉಚ್ಚಾರಣೆಯಲ್ಲಿ ಸುಲಭವಲ್ಲ (ದುಷ್ಕರವಾದುದು.)

 

ಅಸಮಾಸಕ್ಕೆ :
ಕಣ್ + ನೊಂದಪುದು = ಕಣ್ಣೊಂದಪುದು
ಓಣ್ + ನೆಱದುದು = ಓಣ್ಣೆಱದುದು

ಸಮಾಸಕ್ಕೆ :
ತಣ್ + ನೆೞಲ್ = ತಣ್ಣೆೞಲ್
ಕಣ್ + ನೀರ್ = ಕಣ್ಣೀರ್
ಕಣ್ + ನೋಟಂ = ಕಣ್ಣೋಟಂ

೧೭೦
ಸಂದ ಪಕಾರಕ್ಕೆ ಕಾರಂ
ದೊರೆಕೊಳ್ಗುಂ
ವಿಕಲ್ಪದಿಂ;
ಸಂಯೋಗಂ ಸಂದಿಸಿದೊಡಂ
ದುಷ್ಕರಂ (ದುಃಕರಂ) ಅದು ಸುಂದರಂ ಅದು
ದೇಶಿಯಿಂದಂ ಎಂಬರ್ ವಿಬುಧರ್

ಪ್ರತಿಯೊಂದು ಭಾಷೆಯಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ವರ್ಣಪಲ್ಲಟ ಕ್ರಿಯೆ, ಕನ್ನಡದಲ್ಲಿಯೂ ಕಾಣಿಸಿಕೊಂಡಿದೆ. ಒಂದು ವರ್ಣಕ್ಕೆ ಬದಲಾಗಿ ಬೇರೊಂದು ವರ್ಣವು ಪ್ರಯೋಗದಲ್ಲಿ ಬಂದಾಗ ಅದು ‘ವರ್ಣಪಲ್ಲಟ’ ವೆನಿಸಿಕೊಳ್ಳುವುದು. ಕನ್ನಡದಲ್ಲಿ ‘ಪ’ ಕಾರಯುಕ್ತ ಪದಗಳು ‘ಹ’ ಕಾರಯುಕ್ತ ಪದಗಳಾಗಿ ಮಾರ್ಪಾಡು ಹೊಂದಿರುವುದನ್ನು ಕಾಣುತ್ತೇವೆ. ಪಂಡಿತರು ಊಹಿಸಿರುವಂತೆ ಪ್ರಾಕೃತದ ಪ್ರಭಾವದಿಂದ ಪ > ಹ ವ್ಯತ್ಯಾಸ ಕನ್ನಡದಲ್ಲಿ ಕಾಣಿಸಿಕೊಂಡಿರಬಹುದಾದರೂ ಕೇಶಿರಾಜ ಗ್ರಹಿಸಿರುವಂತೆ ‘ಇದು ದೇಸಿಯೊಳ್ ಚೆಲ್ವು’ ಆಗಿ ಪರಿಣಮಿಸಿದೆ. ಪೂರ್ವದ ಹಳಗನ್ನಡದಿಂದ ಹಳಗನ್ನಡ ಘಟ್ಟಕ್ಕೆ ಕಾಲಿಡುವಾಗ ಪ ಕಾರವು ಹ ಕಾರವಾದುದು ಕಂಡುಬರುತ್ತದೆ. ಕೇಶಿರಾಜ ಈ ಸೂತ್ರದಲ್ಲಿ ಪ > ಹ ವ್ಯತ್ಯಾಸ ಕುರಿತು ಹೇಳಿದ್ದಾನೆ.

ಪ ಕಾರಯುಕ್ತ ಕನ್ನಡ ಪದಗಳಲ್ಲಿಯ ‘ಪ’ ಕಾರವು ವಿಕಲ್ಪವಾಗಿ ‘ಹ’ ಕಾರವಾಗುತ್ತದೆ. ದ್ವಿತ್ವ ಪ ಕಾರಕ್ಕೆ ಹ ಕಾರ ಉಂಟಾಗುವುದಿಲ್ಲ. ಈ ಪ > ಹ ವ್ಯತ್ಯಾಸ ದೇಶಿಯಲ್ಲಿ ಸುಂದರವಾದುದೆಂದು ಪಂಡಿತರು ಹೇಳುತ್ತಾರೆ.

ಹ ಕಾರಕ್ಕೆ :
ಪಲಗೆ > ಹಲಗೆ, ಪಂದರ್ > ಹಂದರ್
ಪಾಸು > ಹಾಸು, ಪಂದಿ > ಹಂದಿ

ದ್ವಿತ್ವಕ್ಕಿಲ್ಲದುದಕ್ಕೆ :
ತಪ್ಪು, ಟಿಪ್ಪಣಂ, ಮುಪ್ಪುರಿ

೧೭೧
ಅಂತಹಂ, ಇಂತಹಂ,
ಉಂತಹಂ, ಎಂತಹಂ,
ಇಂತು ದ್ವಿರುಕ್ತಿಗೆ ಹತ್ವಂ;
ಭ್ರಾಂತೇಂ ಗಡಾರ್ಥದೊಳ್
ಮೇಣ್, ಅಂತು ಅವಱ ಎಡೆಗೆ
ಅನ್ನಂ, ಇನ್ನ, ಉನ್ನ, ಎನ್ನಂ

ಅಂತಪ್ಪ, ಇಂತಪ್ಪ, ಉಂತಪ್ಪ, ಎಂತಪ್ಪ ಪದಗಳು ದ್ವಿತ್ವ ಪ ಕಾರಯುಕ್ತ ಪದ ಗಳಾಗಿದ್ದರೂ ಅವುಗಳಲ್ಲಿಯ ಪ > ಹ ಆಗಿ ಅಂತಹ, ಇಂತಹ, ಉಂತಹ, ಎಂತಹ ಎಂಬ ರೂಪ ಪಡೆಯುತ್ತವೆ. ಗಡಾರ್ಥಯುಕ್ತವಾದ ಅಂತಹಂಗಡ, ಇಂತಹಂಗಡ, ಉಂತಹಂಗಡ, ಎಂತಹಂಗಡ ಪದಗಳಿಗೆ ಅನ್ನಂ, ಇನ್ನಂ, ಉನ್ನ, ಎನ್ನಂ, ಎಂದಾದೇಶವಾಗುತ್ತದೆ.

ಹ ಕಾರಕ್ಕೆ :
ಅಂತಪ್ಪಂ > ಅಂತಹಂ, ಇಂತಪ್ಪಂ > ಇಂತಹಂ
ಉಂತಪ್ಪಂ > ಉಂತಹಂ, ಎಂತಪ್ಪಂ > ಎಂತಹಂ

ಅನ್ನಂ ರೂಪಗಳಿಗೆ :
(ಸಿಡಿಲ್ + ಅಂತಹಂ) > ಸಿಡಿಲಂತಹಂ + ಗಡ = ಸಿಡಿಲನ್ನಂ
ಸಿಡಿಲನ್ನಂ ಸಿಂಗದನ್ನಂ ಪುರಹರನುರಿಗಣ್ಣನ್ನ ನೀ ನಾರಸಿಂಹಂ

೧೭೨
, ಕಾರದ ಪರದೊಳ್
ವ್ಯಂಜನ ಇರ್ದೊಡಂ
ಇಲ್ಲದೊಡಂ ಅನುಸ್ವಾರಂ
ಸಂಜನಿಯಿಪುದು, ವರ್ಗಂ
ಇದಿರಿರೆ ತನಗೆ ವಿಕಲ್ಪದೆ
ತದೀಯ ಪಂಚಮಂ ಅಕ್ಕುಂ

‘ಮ’ ಕಾರ ‘ನ’ ಕಾರಗಳಿಗೆ ವ್ಯಂಜನ ಪರವಾದರೂ ಪರವಾಗದಿದ್ದರೂ ಬಿಂದುವು ಆದೇಶವಾಗಿ ಬರುತ್ತದೆ ಹೀಗೆ ಆದೇಶವಾದ ಬಿಂದುವಿಗೆ ವರ್ಗೀಯ ವ್ಯಂಜನಗಳು ಪರವಾದರೆ ಅಲ್ಲಿ ವಿಕಲ್ಪದಿಂದ ಆಯಾ ವರ್ಗದ ಪಂಚಮ ವರ್ಣವು ಬರುತ್ತದೆ.

ಪರದಲ್ಲಿ ವ್ಯಂಜನವುಳ್ಳ ಮ ಕಾರ ಬಿಂದುವಾದುದಕ್ಕೆ :
ನೀಮ್ + ಯೋಗ್ಯರ್ = ನೀಂ ಯೋಗ್ಯರ್
ಆಮ್ + ಸುಖಿಗಳ್ = ಆಂ ಸುಖಿಗಳ್

ಪರದಲ್ಲಿ ವ್ಯಂಜನವುಳ್ಳ ನಕಾರ ಬಿಂದುವಾದುದಕ್ಕೆ :
ಅನ್ + ವಾದಿ = ಆಂ ವಾದಿ
ನೀನ್ + ಶುಚಿ = ನೀಂಶುಚಿ

ಪರದಲ್ಲಿ ವ್ಯಂಜನವಿಲ್ಲದ ಮ ಕಾರ ಬಿಂದುವಾದುದಕ್ಕೆ :
ನೀಮ್ – ನೀಂ, ಆಮ್ – ಆಂ

ಪರದಲ್ಲಿ ವ್ಯಂಜನವಿಲ್ಲದ ನ ಕಾರ ಬಿದುವಾದುದಕ್ಕೆ :
ನೀನ್ – ನೀಂ, ಆನ್ – ಆಂ

ವರ್ಗ ಪಂಚಮಕ್ಕೆ :
ಆವಂ ಕಡುಗಲಿ = ಆವಙ್ಕಡುಗಲಿ
ತಾಂ ಚಲವಾದಿ = ತಾಞ್ಚಲವಾದಿ
ಕರಂ ಟಕ್ಕು = ಕರಣ್ಟಕ್ಕುಂ
ಕೆಂದಳಿರ್ = ಕೆನ್ದಳಿರ್
ಕೆಂಮಣ್ = ಕೆಮ್ಮಣ್

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿ ದರ್ಪಣದ ಮೂರನೆಯ ಪ್ರಕರಣವಾದನಾಮ ಪ್ರಕರಣಮುಗಿಯಿತು.