೧೪೮
ಅಕ್ಕುಂ ಜತಿಯೊಳ್
ಏಕತ್ವಕ್ಕೆ ಬಹುತ್ವಂ;
ಬಹುತ್ವದೆಡೆಗೆ ಏಕತ್ವಂ,
ಪೊಕ್ಕುಂ ವಿಶೇಷಣಂ
ಅಕ್ಕುಂ;
ಮೊಕ್ಕಳಂ ಜತಿ
ಅಲ್ಲದ ಅಲ್ಲಿಯುಂ ಎಂಬರ್

ಸಮೂಹ ಮತ್ತು ಜತಿಯನ್ನು ಕುರಿತು ಹೇಳುವಾಗ ಜತಿವಾಚಕ ಪದ ಏಕವಚನ ದಲ್ಲಿದ್ದರೂ ಅದು ಬಹುವಚನದ ಅರ್ಥವನ್ನು ಕೊಡುತ್ತದೆ. ಬಹುವಚನ ಅರ್ಥವಿರುವ ಜತಿವಾಚಕ ಪದವನ್ನು ಏಕವಚನದಲ್ಲಿಯೆ ಬಳಸಲಾಗುತ್ತದೆ. ಇದಕ್ಕೆ ಜತ್ಯೇಕವಚನ ಎಂದು ಹೆಸರು. ಕೇಶಿರಾಜ ಈ ಸೂತ್ರದಲ್ಲಿ ಜತ್ಯೇಕ ವಚನದ ಸ್ವರೂಪವನ್ನು ಹೇಳಿದ್ದಾನೆ. ಸಮೂಹವನ್ನು (ಜತಿ) ನಿರ್ದೇಶಿಸಿ ಹೇಳುವಲ್ಲಿ ಸಮೂಹವಾಚಕಪದ ಏಕವಚನದಲ್ಲಿದ್ದು, ಕ್ರಿಯಾಪದ ಬಹುವಚನದಲ್ಲಿದ್ದಾಗ ಏಕವಚನದಲ್ಲಿದ್ದ ಸಮೂಹವಾಚಕ ಪದ ಬಹುತ್ವದ ಅರ್ಥವನ್ನು ಬೋಧಿಸುತ್ತದೆ. ಜತಿವಾಚಕವಲ್ಲದಲ್ಲಿಯೂ ವಿಶೇಷಣ ರೂಪದಲ್ಲಿ ಬಂದ ಏಕವಚನ ಬಹುತ್ವದ ಅರ್ಥವನ್ನು ನೀಡುತ್ತದೆ.

ಜತಿವಾಚಕಕ್ಕೆ :
ಆನೆನೂಂಕಿದುವು – ಆನೆಗಳ್‌ನೂಂಕಿದುವು
ಕುದುರೆಯೇಱಿದುವು – ಕುದುರೆಗಳೇಱಿದುವು
ಕಾಲಾಳ್‌ಕವಿದುವು – ಕಾಲಾಳ್ಗಳ್ ಕವಿದುವು

ಜತಿವಾಚಕವಲ್ಲದುದಕ್ಕೆ :
ಮಹೇಂದ್ರ ಮಹೈಶ್ವರ್ಯಮಿವೆಲ್ಲಮ ಧ್ರುವಂ =
ಮಹೇಂದ್ರಮಹೈಶ್ವರ್ಯಮಿವೆಲ್ಲಮಧ್ರುವಂಗಳ್
ಮನಂ ಸಂಚಲಮಾದುವು – ಮನಂಗಳ್ ಸಂಚಲಮಾದುವು

೧೪೯
ಏಕತೆಯೆ ತನಗೆ ಬಹುತೆಯಂ
ಆಕರಿಸದು
ಜತಿ ತಾಂ ವಿಶೇಷಣ
ಮುಖದಿಂ;
ಆಕಾರಕಂ ಏಕತ್ವಮಂ
ಏಕತ್ವಮಂ, ಕ್ರಿಯಾಪದಂ
ಪಡೆಯಲೊಡಂ

ಜತಿವಾಚಕ ಪದ ಏಕವಚನದಲ್ಲಿದ್ದು, ಅದಕ್ಕೆ ವಿಶೇಷಣವಾಗಿರುವ ಕಾರಕ ಏಕವಚನದಲ್ಲಿದ್ದಾಗ ಅಥವಾ ಕ್ರಿಯಾಪದ ಏಕವಚನದಲ್ಲಿದ್ದಾಗ ಏಕವಚನದಲ್ಲಿದ್ದ ಜತಿವಾಚಕ ಪದಕ್ಕೆ ಏಕತ್ವದ ಅರ್ಥವೇ ಇರುತ್ತದೆ. ಇಲ್ಲಿ ಜತಿವಾಚಕ ಪದ ಏಕತ್ವಕ್ಕೆ, ಬಹುತ್ವದ ಅರ್ಥ ಪಡೆಯಲು ಸಮರ್ಥವಾಗುವುದಿಲ್ಲ.

ಕಾರಕಕ್ಕೆ :
ಇಂತುಂಟು ಆನೆ

ಕ್ರಿಯೆಗೆ :
ನಡೆದುದು ಹಂಸೆ, ಕೇಗಿದುದು ಸೋಗೆ
ಉಲಿದುದು ಕೋಗಿಲೆ, ಪಾಡಿದುದು ತುಂಬಿ

೧೫೦
ನೀಂ ಅಱಿ ಸಂಖ್ಯೇಯದ,
ಸಂಖ್ಯಾನದ,
ದೊರೆವತ್ತ ಭಾವದ
ಏಕತೆ ಬಹುತ ಆಧೀನಂ;
ವಿಶೇಷಣಂ ಬಹುತಾನತಮೆ,
ವಿಶೇಷ್ಯಂ ಏಕವಚನಮೆ ಅಕ್ಕುಂ

ಸಂಖ್ಯೆಗೆ ಅನುಗಣವಾಗಿರುವ (ಸಂಖ್ಯಾವಸ್ತು), ಸಂಖ್ಯಾವಾಚಕಗಳು, ಭಾವನಾಮಗಳು ಇವು ಏಕವಚನದಲ್ಲಿದ್ದರೂ ಬಹುವಚನದ ಅರ್ಥ ಸ್ಫುರಿಸುತ್ತದೆ. ವಿಶೇಷಣ ಬಹುವಚನ ವಾಗಿದ್ದು, ಏಕವಚನದಲ್ಲಿ ಇರುವ ವಿಶೇಷ್ಯ ಬಹುತ್ವದ ಅರ್ಥವನ್ನೇ ಕೊಡುತ್ತದೆ.

ಸಂಖ್ಯಾವಸ್ತುವಿಗೆ :
ಪತ್ತುದೆಸೆ – ಪತ್ತುದೆಸೆಗಳ್
ಮೂಱುಲೋಕಂ – ಮೂಱುಲೋಕಂಗಳ್

ಸಂಖ್ಯಾವಾಚಿಗೆ :
ನಾಲ್ಕು – ನಾಲ್ಕುಗಳ್
ಎರಡೈದು – ಎರಡೈದುಗಳ್

ಭಾವಕ್ಕೆ :
ಕುರುಳ್ಗಳ್ ಕರ್ಪು – ಕುರುಳ್ಗಳ್ ಕರ್ಪುಗಳ್
ಕಣ್ಗಳಕೂರ್ಪು – ಕಣ್ಗಳಕೂರ್ಪುಗಳ್

ವಿಶೇಷ್ಯ ಏಕ ವಚನಕ್ಕೆ :
ನೇರಿದುವು ಬೆರಲ್ – ನೇರಿದುವು ಬೆರಲ್ಗಳ್

೧೫೧
ವಿದಿತ ವಿಶೇಷಣ ಪದಂ
ಅವು ಮೊದಲ
ವಿಭಕ್ತಿಗಳ್ ಆಳ್ದು
ವಾಕ್ಯದ ಮೊದಲೊಳ್;
ಪದವೆತ್ತು ಅಗ್ರ ಕಾರಕ ಪದದ
ವಿಭಕ್ತಿಯೆನೆ ತೆಳೆವುವು
ಅನ್ವಯ ಮುಖದೊಳ್

ವಾಕ್ಯದ ಮೊದಲಲ್ಲಿರುವ ಪ್ರಥಮಾ ವಿಭಕ್ತಿ ರೂಪದ ವಿಶೇಷಣ ಪದಗಳು ಅನ್ವಯ ಪ್ರಸಂಗದಲ್ಲಿ ಆ ವಾಕ್ಯದ ಕೊನೆಯ ಕಾರಕ ಪದದ ವಿಭಕ್ತಿಯನ್ನು ಪಡೆಯುತ್ತದೆ.

ವೀರನುದಾರಂ ಶುಚಿಗಂ
ಭೀರಂ ನಯಶಾಲಿ ಕೈದುವೊತ್ತರ ದೇವಂ
ಗಾರೆಱಗರ್ ನೃಪತುಂಗಂಗೆ

ಅನ್ವಯ :
ವೀರಂಗೆ ಉದಾರಂಗೆ ಶುಚಿಗೆ ಗಂಭೀರಂಗೆ ನಯಶಾಲಿಗೆ
ಕೈದುವೊತ್ತರ ದೇವಂಗೆ ನೃಪತುಂಗಂಗೆ ಆರೆಱಗರ್

೧೫೨
ಕೂಡಿನುಡಿ ವೆಡೆಯೊಳ್
ಎಂದುಂ, ಕೂಡದು ಲಿಂಗತ್ರಯಕ್ಕೆ
ತರತಮ ಭಾವಂ,
ನೀಡುಂ ವಾಕ್ಯದ ಕಡೆಯೊಳ್,
ಕೂಡಿರ್ದುದು ಅದು ಆವುದು
ಅದುವೆ ಮುಖ್ಯ ಎನಿಕ್ಕುಂ

ಮೂರುಲಿಂಗಗಳು ಒಟ್ಟಿಗೆ ಪ್ರಯೋಗವಾದಾಗ ಅವುಗಳಲ್ಲಿ ಇದು ಮುಖ್ಯ, ಇದು ಅಮುಖ್ಯ ಎಂಬ ಭೇದ ಇರುವುದಿಲ್ಲ. ವಾಕ್ಯದ ಕಡೆಯಲ್ಲಿರುವ ಪದವು ಯಾವ ಲಿಂಗದಲ್ಲಿರುತ್ತದೆಯೊ ಅದು ಮುಖ್ಯವೆನಿಸುತ್ತದೆ.

ಸೇನೆಯುಮರಸಿಯುಮರಸನುಂ ಬಂದರ್
ಆನೆಯುಮರಸನುಮರಸಿಯುಂ ಬಂದರ್
ಅರಸನು ಮರಸಿಯುಂ ಚತುರಂಗಬಲಮುಂ ಬಂದುವು

೧೫೩
ವ್ಯವಹರಿಸುವಿನಂ ಪ್ರಥಮೆ
ಏಕವಚನಂ, ಪಲವಂ ಓದಿ
ವಾಕ್ಯದ ನಿರ್ವಾಹವಂ,
ಅಳವಡಿಪೆಡೆಯೊಳ್,
ಪುಗಿಸುವರ್ ಕ್ರಿಯಾಏಕವಚನಮಂ
ಮಾರ್ಗವಿದರ್

ವಿದ್ವಾಂಸರು ವಾಕ್ಯದ ಪ್ರಾರಂಭದಲ್ಲಿ ಪ್ರಥಮಾ ಏಕವಚನಗಳನ್ನು ಹೇಳಿ ಆ ವಾಕ್ಯವನ್ನು ಪೂರ್ತಿಗೊಳಿಸುವಲ್ಲಿ ಬಹುವಚನ ಕ್ರಿಯಾಪದವನ್ನಿಡುತ್ತಾರೆ.

ಅವತಂಸೋತ್ಪಲತಾಡನಂ ಕನಕಕಾಂಚೀ ಬಂಧನಂ ನೂಪುರಾ
ರವ ಝುಂಕಾರಿತ ಚಾರುವಾಮಚರಣಾಘಾತಂ ಚಲಧ್ಘ್ರೂಲತಾ
ಗ್ರವಿಭಾಗೋತ್ಕಟ ತರ್ಜನಂ ತರಲತಾ ತಾಮ್ರಾಧರಂ ಚಕ್ರಿಗಿ
ತ್ತುವಲಂಪಂ ಪ್ರಣಯಪ್ರಕೋಪ ಸುರತ ಪ್ರಾರಂಭದೊಳ್ ಕಾಂತೆಯಾ ||

೧೫೪
ಅವನ್, ಅವಳ್, ಅದು,
ಎಂಬಿವು ಇರ್ದಂತೆ ವೋಲ್
ಇರ್ದಪುವು;
ಅವನ್, ಅವಳ್, ಆವುದು, ತಾನ್,
ಎಂಬಿವು ಅವಂ ಪಾರದೆ
ನಿಲಲ್ ಅಱಿಯವು ಅನ್ವಯಂ
ತಾಗುವಲ್ಲಿ ವಾಕ್ಕೋವಿದರಿಂ

ಅವನ್, ಅವಳ್, ಅದು ಎಂಬಿವು ಸ್ವತಂತ್ರ ಪದಗಳು. ಅವನ್, ಅವಳ್, ಆವುದು ಮತ್ತು ತಾನ್ ಎಂಬಿವು ಅನ್ವಯ ಪ್ರಸಂಗದಲ್ಲಿ (ಅವನ್, ಅವಳ್, ಅದು) ಎಂಬಿವುಗಳನ್ನು ಅವಲಂಬಿಸದೆ ನಿಲ್ಲಲಾರವು.

ಸ್ವತಂತ್ರಾನ್ವಯಕ್ಕೆ :
ಪೊನ್ನುಳ್ಳವನೆ ಕುಲೀನಂ, ಸೊಬಗುಳ್ಳುವಳೆ ಪೆಣ್,
ಅದೆ ರೂಢಂ

ಪರತಂತ್ರಾನ್ವಯಕ್ಕೆ :
ಆವನಧಿಕ ಪುಣ್ಯನವನೆ ಸೇವ್ಯಂ
ಆವಳ್ ಪತಿವ್ರತೆಯವಳೆ ಮಾನ್ಯೆ
ಆವುದು ಚೆಲ್ವಾದುದದೆ ದರ್ಶನೀಯಂ
ತಾನವಂ ಚದುರಂ, ತಾನವಳ್ ಚದುರೆ ತಾನದೆ ಪಿರಿದು

೧೫೫
ಯುಗಳಾರ್ಥದ ಬಹುವಚನಕ್ಕೆ
ಒಗೆತಂದ ಆವಿಷ್ಟಲಿಂಗದ
ಎಡಗೆ ಏಕತ್ವಂ ನೆಗೞ್ಗುಂ;
ಕ್ರಿಯಾವಿಶೇಷಣಂ,
ಅಗಲದೆ
ನಿಂದೆಡೆಗಂ ಅಱಿವರಿಂದೆ ಏಕತ್ವಂ

ಎರಡು ವಸ್ತುಗಳನ್ನು ಹೇಳುವ ಬಹುವಚನದಲ್ಲಿಯೂ ಅನಿಷ್ಟ ಲಿಂಗದಲ್ಲಿಯೂ ಮತ್ತು ಕ್ರಿಯಾ ವಿಶೇಷಣದಲ್ಲಿಯೂ ವಿದ್ವಾಂಸರು ಏಕವಚನವನ್ನು ಪ್ರಯೋಗಿಸುವರು.

ಯುಗಳಾರ್ಥದ ಏಕವಚನಕ್ಕೆ :
ಪದಯುಗಂ (ಪದಯುಗಂಗಳ್)

ಆವಿಷ್ಟಲಿಂಗದ ಏಕವಚನಕ್ಕೆ :
ವೇದಂಗಳ್ ಪ್ರಮಾಣಂ (ವೇದಂಗಳ್ ಪ್ರಮಾಣಂಗಳ್)

ಕ್ರಿಯಾವಿಶೇಷಣದ ಏಕವಚನಕ್ಕೆ :
ಏನೆಂಬ ಪೆಂಪೊ (ಎಂತಹ ವರ್ಗಳ್ ಎಂಬ ಪಂಪೊ)

ಇಲ್ಲಿ ‘ಏನ್’ ಎಂಬ ಕಾರಕ, ‘ಎಂಬ’ ಎಂಬ ವಿಶೇಷಣವಾಗಿದೆ.

ಏನೆಂಬ ಪೆಂಪೋ ಮನುವುಂ |
ತಾನುಂ, ಸಚ್ಚರಿತರಮರಕುಜಮುಂ ತಾನುಂ ||
ದಾನಿಗಳಂಭೋನಿಧಿಯುಂ |
ತಾನುಂ, ಗಂಭೀರನೆ (ರೆ?) ನಿಪನುದಯಾದಿತ್ಯಂ ||

೧೫೬
ಸಾರಂ ಅಧ್ಯಾರೋಪಂ,
ಕಾರಕಕಂ ಕ್ರಿಯೆಗಂ
ಆಗಲೆ ನೇಯದ ದೋಷಂ;
ಧೀರರ್ಕಳಿಂ ವಿಶಂಕೆಯ
ಕಾರಕ್ಕಂ ಪೇೞ್ವುದು
ಸಮುಚ್ಚಯದ ಉಮುಗಂ

ಕಾವ್ಯಗಳಲ್ಲಿ ಕವಿಗಳು ಕೆಲವೊಮ್ಮೆ ಕೆಲವೊಂದು ಪದಗಳನ್ನು ಗುಪ್ತವಾಗಿಡುತ್ತಾರೆ. ಹೀಗೆ ಪದಗಳನ್ನು ಗುಪ್ತವಾಗಿ ಇಡುವುದಕ್ಕೆ ‘ಅಧ್ಯಾಹಾರ’ ಎಂದು ಹೆಸರು. ಪದಗಳನ್ನು ಗುಪ್ತವಾಗಿ ಇಟ್ಟರೂ ಅರ್ಥ ಸ್ಪಷ್ಟವಾಗಿ ಸಂದಿಗ್ಧತೆ ಉಂಟಾಗದಂತೆ ಇರಬೇಕು. ಒಂದು ಪದವನ್ನು ಅಧ್ಯಾಹಾರ ಮಾಡುವುದರಿಂದ ಅರ್ಥಕ್ಕೆ ಬಾಧೆ ಉಂಟಾಗುತ್ತಿದ್ದರೆ ಅದು ನೇಯದ ದೋಷಕ್ಕೆ ಒಳಪಡುವುದು. ನೇಯದ ದೋಷ ಉಂಟಾಗದಂತೆ ಅಧ್ಯಾಹರ ಮಾಡಬೇಕೆಂಬುದು ಸ್ಪಷ್ಟ. ಕೇಶಿರಾಜ ಈ ಸೂತ್ರದಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾನೆ. ನೇಯದ ದೋಷ ತಗುಲದಂತೆ ಕಾರಕಕ್ಕೂ ಕ್ರಿಯೆಗೂ ಅಧ್ಯಾರೋಪ ಮಾಡಬಹುದು. ವಿಶಂಕೆಯ ‘ಎ’ ಕಾರವನ್ನೂ ಸಮುಚ್ಚಯದ ಉಮು ವಿಧಿಯನ್ನೂ ಪಂಡಿತರ ಮತದಂತೆ ಅಧ್ಯಾಹಾರ ಮಾಡಬಹುದು. ಈ ಸೂತ್ರದಲ್ಲಿ ಅಧ್ಯಾರೋಪ ಎಲ್ಲಿ ಮಾಡಬಹುದೆಂಬುದನ್ನು ವಿವರಿಸಿದ ಕೇಶಿರಾಜ ವೃತ್ತಿಯಲ್ಲಿ ‘ತಾಂ ಮಾಡಿದಧ್ಯಾರೋಪ ಅಮರ್ಥವಾಗಿ ಮತ್ತೆ ಕೆಲವರ್ಕೆ ಪತ್ತುವೊಡೆ ಅದು ನೇಯದ ದೋಷಂ’ ಎಂದು ಸ್ಪಷ್ಟಪಡಿಸಿದ್ದಾನೆ. ಅಂದರೆ ಅಧ್ಯಾರೋಪ ಮಾಡಿದ ಅರ್ಥ ಸಂದಿಗ್ಧತೆಗೆ ಆಸ್ಪದ ಮಾಡಿಕೊಟ್ಟರೆ ಅದು ನೇಯದ ದೋಷವಾಗುತ್ತದೆ.

ಕಾರ ಕ್ಕೆ :
ಕರ್ಣನುಂ ದಾನಿ ಮೇಣೀತನುಂ
ಇಲ್ಲಿ ‘ದಾನಿ’ ಎಂಬ ಇನ್ನೊಂದು ಪದ ಅಧ್ಯಾರೋಪವಾಗಿದೆ.

ಕ್ರಿಯೆಗೆ :
ಪುರುಷೋತ್ತಮಂ ಮನುಷ್ಯ ಮಾತ್ರಮೆ?
ಇಲ್ಲಿ ‘ಅಲ್ಲ’ ಎಂಬುದು ಅಧ್ಯಾರೋಪವಾಗಿದೆ.

ವಿಶಂಕೆಯ ಎತ್ವಕ್ಕೆ :
ಉಱಮಂಜೆಮೆ ಬೆರ್ಚೆಮೆ ಬೆಸ
ಕೆಱಗೆಮದೇವ…
ಇಲ್ಲಿ ‘ಉಱಿಮೆ’ ಎಂಬಲ್ಲಿಯ
ವಿಶಂಕೆಯ ಎತ್ವ ಅಧ್ಯಾರೋಪವಾಗಿದೆ.

ಸಮುಚ್ಚಯದುಮುವಿಗೆ :
…. ಆಯುಂ
ಸಿರಿ ತಾಯುಂ ತಂದೆ ಕಣ್ಣುಂ ಗತಿಯೆನಿಸಿದಪಂ
ಸಿಂಹಸೇನಕ್ಷಿತೀಶಂ
ಇಲ್ಲಿಯ ‘ಸಿರಿ’, ‘ತಂದೆ’, ‘ಗತಿ’ ಪದಗಳಲ್ಲಿ ಸಮುಚ್ಚಯದ
ಉಂ ಪ್ರತ್ಯಯ ಅಧ್ಯಾರೋಪವಾಗಿದೆ.

೧೫೭
ಪೀನಂ ಪ್ರಥಮೆಗೆ
ನೀನ್, ಆನ್, ತಾನ್, ಎಂದು
ಅಱಿ
ನಿನಗೆ, ಎನಗೆ, ತನಗೆ,
ಎಂದು ಚತುರ್ಥೀ ನಿರ್ದೇಶನಕ್ಕೆ
ಇತರ ಸ್ಥಾನಕ್ಕೆ ಅಸ್ವರದಿಂ;
ಇರ್ಪ ನಿನ್, ಎನ್, ತನ್, ಗಳ್

ನೀನ್, ಆನ್, ತಾನ್ ಎಂಬಿವು ಪ್ರಥಮೆಯಲ್ಲಿ ರೂಪ ಬದಲಾವಣೆ ಇಲ್ಲದೆಯೇ ವ್ಯವಹರಿಸುತ್ತವೆ. ಅವು ಚತುರ್ಥಿಯಲ್ಲಿ ನಿನಗೆ, ಎನಗೆ, ತನಗೆ ಎಂದಾಗುತ್ತವೆ. ಇತರ ಸ್ಥಾನಗಳಲ್ಲಿ ನಿನ್, ಎನ್, ತನ್ ಎಂದು ವ್ಯಂಜನಾಂತವಾಗಿಯೇ (ಸ್ವರ ರಹಿತ) ವ್ಯವಹರಿಸುತ್ತವೆ.

ಪ್ರಥಮೆಗೆ :
ನೀನಾರ್ಗಾನಾರ್ಗೆ ತಾನಾರ್ಗಿದನೆನಗುಸಿರಲ್ವೇಡ….

ಚತುರ್ಥಿಗೆ :
ನಿನಗೆನಗೆ ತನಗೆ ತೀರ್ಗುಮೆ
ಹನುಮಂತನ ಶಕ್ತಿ ಸಾಹಸಂ ರಿಪುವಿಜಯಂ ||

ಇತರ ಸ್ಥಾನಗಳಿಗೆ :
ನಿನ್ನಂ, ನಿನ್ನಿಂ, ನಿನ್ನತ್ತಣಿಂ, ನಿನ್ನ, ನಿನ್ನೊಳ್
ಇದೇ ರೀತಿ ಎನ್, ತನ್‌ಗಳನ್ನು ಅರಿಯಬೇಕು

೧೫೮
ನಿನತು, ಎನತು, ತನತು,
ಎನಿಪ್ಪ ಉವು ಜನಿಯಿಸುಗುಂ
ನಿನ್ನದು, ಎನ್ನದು, ತನ್ನದು,
ಎನಿಪ್ಪ ಇನಿತಱೊಳಂ
ಮೇಣ್ ದ್ವಿತ್ವದಿಂ
ಅನೇಕದೊಳ್
ನತ್ವದ ಎಡೆಗೆ ಮತ್ವಂ ಬರೆಯುಂ

ನಿನ್ನದು, ಎನ್ನದು, ತನ್ನದು ಎಂಬಿವುಗಳಿಗೆ ಕ್ರಮವಾಗಿ ನಿನತು, ಎನತು, ತನತು ಎಂಬಿವುಗಳು ಆದೇಶವಾಗುತ್ತವೆ ಮತ್ತು ವಿಕಲ್ಪವಾಗಿ ಇವುಗಳ ಅಂತ್ಯಕ್ಕೆ ದ್ವಿತ್ವ ಬಂದು ನಿನತ್ತು, ಎನತ್ತು, ತನತ್ತು ಎಂದಾಗುತ್ತವೆ. ಇವುಗಳ ಮಧ್ಯ ನ ಕಾರಕ್ಕೆ ಬಹುವಚನದಲ್ಲಿ ಮಕಾರಾದೇಶವಾಗಿ ನಿಮತು, ಎಮತು, ತಮತು ಎಂದಾಗಿ ವಿಕಲ್ಪವಾಗಿ ಅಂತ್ಯಕ್ಕೆ ದ್ವಿತ್ವ ಬಂದು ನಿಮತ್ತು, ಎಮತ್ತು, ತಮತ್ತು ಎಂಬ ರೂಪಗಳಾಗುತ್ತವೆ.

ನಿನತಾದಿಗೆ :
ನಿನತು ಚಲಮೆನತು ಶೌರ್ಯಂ
ತನತು ಮಹಾಧೈರ್ಯಮವನಿಪತಿಗೆ…

ದ್ವಿತ್ವಕ್ಕೆ :
ಮುನಿಸು ನಿನತ್ತು ಸೈರಣೆ
ಯೆನತ್ತು ಕೆಳದಿಗೆ ತನತ್ತು ಸಂದಿಸುವೆಸಕಂ |

ಬಹುವಚನಕ್ಕೆ :
ನಿಮತು, ನಿಮತ್ತು; ಎಮತು, ಎಮತ್ತು;
ತಮತು, ತಮತ್ತು

೧೫೯
ಇದಿರೊಳ್ ಸ್ವರಾದಿ
ಸಂಖ್ಯೆಗಳ್, ಒದವಿರೆ
ನಿಮ್ಮ, ಎಮ್ಮ, ತಮ್ಮ, ಎನಿಪ್ಪ
ಇವು ಪಿಂತಣ್ಗೆ ಒದವಿರೆ
ನಡುವಣ್ಗೆ ಉತು ಅಪ್ಪುದು
ಇವಱ ಬಹುವಚನದಲ್ಲಿ
ಪುಗಿಸದಿರ್ ಒಂದಂ

ನಿಮ್ಮ, ಎಮ್ಮ, ತಮ್ಮ ಎಂಬಿವುಗಳಿಗೆ ಸ್ವರಾದಿ ಸಂಖ್ಯಾವಾಚಕಗಳು ಪರವಾದಾಗ ಇವುಗಳ ಮಧ್ಯದಲ್ಲಿ ‘ಉತು’ ಎಂಬುದು ಬರುತ್ತದೆ. ಬಹುವಚನದ ಈ ಪದಗಳಿಗೆ ಏಕವಚನದ ಒಂದು ಎಂಬುದನ್ನು ಸೇರಿಸಬಾರದು. (ಉತ್ತರ ಪದವಾಗಿ)

ಉತು ಆಗಮಕ್ಕೆ :
ನಿಮ್ಮ + ಉತು + ಇರ್ವರ್ = ನಿಮ್ಮುತ್ತಿರ್ವರ್
ಎಮ್ + ಉತು + ಅಯ್‌ವರ್ = ಎಮ್ಮುತ್ತಿರ್ವರ್
ತಮ್ + ಉತು + ಅಱುವರುಂ = ತಱುವರುಂ

೧೬೦
ಎತ್ತಣದು ಎಂಬೀ ಶಬ್ದಮಂ
ಎತ್ತಣ್ತುಂ ಇಂತು ಕೂಡಿನುಡಿಯಲ್ಕೆ
ಅಕ್ಕುಂ ಮತ್ತೆ ಆರ ಎಂಬುದಂ
ವಿಬುದೋತ್ತಮರ್ ಆರ್ತೆಂದು
ಕೂಡಿನುಡಿಯಲ್ಕೆ ಅಕ್ಕುಂ

ಎತ್ತಣದು ಎಂಬ ಶಬ್ದವನ್ನು ಎತ್ತಣ್ತು ಎಂದು ಹೇಳಬಹುದು. ಆರದು ಎಂಬ ಶಬ್ದವನ್ನು ಆರ್ತು ಎಂದು ಹೇಳಬಹುದು.

ಎತ್ತಣ್ತು ಪದಕ್ಕೆ :
ಎತ್ತಣದು > ಎತ್ತಣ್ತು
……ದೆಸೆಯೆತ್ತಣ್ತಾ|
ಗಸಮೆತ್ತಣ್ತುರ್ವಿಯೆನಿಸಿ ಪರ್ಬಿದುದು ತಮಂ||

ಆರ್ತು ಪದಕ್ಕೆ :
ಆರದು > ಆರ್ತು
ಆರ್ತೀತುರಂಗ ಮಿಂತಿದ
ನಾರ್ತಂದರ್ ದಿವ್ಯವಸ್ತುವಂ……

೧೬೧
ಅದು, ಇದು, ಉದು, ಎಂಬಿವಱ
ಅಂತ್ಯ ದು ಕಾರಕ್ಕೆ
ಒದವುಗುಂ ಕಾರಂ
ಪುಲ್ಲಿಂಗದೊಳ್
ಅಲ್ಲಿ ಕಾರಂ ಮೇಣ್
ಒದವಿರೆ ಬೆಚ್ಚರದೆ ಬರ್ಕುಂ
ಆದಿಗೆ ದೀರ್ಘಂ

ಅದು, ಇದು, ಉದು ಈ ಸರ್ವನಾಮಗಳ ಕಡೆಯ ‘ದು’ ಕಾರಕ್ಕೆ ಪುಲ್ಲಿಂಗದಲ್ಲಿ ‘ವ’ ಕಾರಾದೇಶವಾಗುತ್ತದೆ. ಕೆಲವು ಸಾರಿ ಅವುಗಳ ಅಂತ್ಯ ದು ಕಾರಕ್ಕೆ ‘ತ’ಕಾರವೂ ಆದಿಯ ಹ್ರಸ್ವಕ್ಕೆ ದೀರ್ಘವೂ ಆದೇಶವಾಗುತ್ತದೆ.

ವಕಾರಾದೇಶಕ್ಕೆ :
ಅದು > ಅವ, ಇದು > ಇವ, ಉದು > ಉವ

ತ ಕಾರಾದೇಶಕ್ಕೆ :
ಅದು > ಆತ, ಇದು > ಈತ, ಉದು > ಊತ
ಆತಂ ದುರ್ಯೋಧನನಿಂ
ತೀತಂ ರವಿಜತ ನೂತನಶ್ವತ್ಥಾಮಂ||