೧೩೫
ಅವಿಶೇಷದೆ ಲಿಂಗ ಅಂತ್ಯಕ್ಕೆ
ಎವರ್ಣ ಒದವುವು,
ಎವರ್ಣಂ
ಒದವಿದ ಅದಂತಕ್ಕೆ
ಅವತರಿಕುಂ;
ಬಿಂದು, ಅಬಿಂದುವಾಗಿ
ಬಹುವಚನದ ಅರ್ವಂ
ಅಡರ್ವುದು ಎವರ್ಣಂ

ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗವೆಂಬ ಭೇದವಿಲ್ಲದೆ ‘ಏಕ’, ‘ದ್ವಿ’ ಬಹುವಚನವೆಂಬ ಭೇದವಿಲ್ಲದೆ : ಸ್ವರಾಂತ ವ್ಯಂಜನಾಂತವೆಂಬ ಭೇದವಿಲ್ಲದೆ ಸಾಮಾನ್ಯವಾಗಿ ಸಂಭೋಧನಾ ವಿಭಕ್ತಿಯ ಕಡೆಯಲ್ಲಿ ಎ, ಏ ಎಂಬಿವು ವಿಕಲ್ಪವಾಗಿ ಬರುತ್ತವೆ. ಅ ಕಾರಾಂತ ಶಬ್ದಗಳಿಗೆ ಸಂಬೋಧನೆಯ ಎ, ಏ ಗಳು ಪರವಾದಾಗ ಪ್ರಕೃತಿ ಪ್ರತ್ಯಯಗಳ ನಡುವೆ ಬಿಂದು ಬರುತ್ತದೆ. ನ್, ಮ್ ಆದೇಶಗಳು ಮೊದಲಿನಂತೆಯೇ ಉಂಟು. ಬಹುವಚನ ಪ್ರತ್ಯಯ ‘ಅರ್’ ಬಂದಾಗ ಅ ಕಾರಾಂತ ಶಬ್ದವಾಗಿದ್ದರೂ ಪ್ರಕೃತಿ, ಪ್ರತ್ಯಯಗಳ ನಡುವೆ ಬಿಂದು ಬರುವುದಿಲ್ಲ.

ಎವರ್ಣಕ್ಕೆ :
ನೀಳಕುಂತಳೆ + ಎ = ನೀಳಕುಂತಳೆಯೆ
ಅಳಿಕುಳನೀಳ ಕುಂತಳೆಯೆ ಕೋಕಿಲನಾದೆಯೆ
ಹಂಸಯಾನೆಯೇ
ಮಾವು + ಎ = ಮಾವೇ
ಎಳಮಾವೇ ತಳಿರುಯ್ಯಲೇ

ಬಿಂದುಯುಕ್ತ ಎ ವರ್ಣಕ್ಕೆ :
ಚಂದ್ರ + ೦ + ಏ = ಚಂದ್ರನೇ
ಚಂದ್ರನೇ ಕೊಳನೇ ನಂದನಮೇ ಲತಾಭವನಮೇ

ಅರುವಿನ ಮೇಲಿನ ಎ ವರ್ಣಕ್ಕೆ :
ಭಟ್ಟ + ಆರ್ + ಎ = ಭಟ್ಟರೆ
ದೇವ + ಆರ್ + ಎ = ದೇವರೇ
ಭಟ್ಟರೆ ಬಂದಿರೇ ಮನೆಗೆ…
ದೇವರೇ ಕರುಣಿಸಿದಿರೆ…

೧೩೬
ಪಿರಿದುಂ ದ್ವಿತ್ವ, ಬಹುತ್ವಂ
ಬರೆ ಗಳ್, ಕಳ್, ಇರ್ಆಗಮಂ
ಬಹುವಚನ ಸ್ಫುರಿತಂ ಕ್ರಿಯೆಗೆ
ಏಕತೆ ನಿಜಪರಿಣತೆ
ಮೇಣ್ ಧಾತುಗೆ
ಏಕವಚನದೊಳ್ ಅತ್ವಂ

ಸಂಬೋಧನೆಯಲ್ಲಿ (ಆಮಂತ್ರಣದಲ್ಲಿ) ದ್ವಿವಚನ, ಬಹುವಚನ ಪ್ರತ್ಯಯಗಳಾದ ಗಳ್, ಕಳ್ ಬಂದಾಗ ವಿಶೇಷವಾಗಿ ‘ಇರ’ ಎಂಬ ಆಗಮವು ಬರುತ್ತದೆ. ‘ಪಿರಿದು’ ಎಂದು ಹೇಳಿರುವುದರಿಂದ ಬಹುವಚನ ‘ಅರ್’ ಪ್ರತ್ಯಯವು ಬಂದಾಗಲೂ ಇರ ಎಂಬುದು ಆಗಮವಾಗಿ ಬರುತ್ತದೆ. ಬಹುವಚನ ಕ್ರಿಯೆಯಲ್ಲಿ ಏಕವಚನವು ಪ್ರಯೋಗವಾಗುತ್ತದೆ. ಧಾತುವು ಏಕವಚನ ರೂಪದಲ್ಲಿಯೇ ಸಂಬೋಧನಾ ರೂಪವನ್ನು ಹೊಂದುತ್ತದೆ.

ಇರಾಗಮನಕ್ಕೆ :
ನಂದನಂಗಳ್ + ಇರ = ನಂದನಂಗಳಿರ
ಬುಧುರ್ಕಳ್ + ಇರ = ಬುಧರ್ಕಳಿರ
ಸುರತರು ನಂದನಂಗಳಿರ…
ಬುಧರ್ಕಳಿರ ನಿಮ್ಮ ಗುಣಸ್ತುತಿ ಕಾವ್ಯ ಮಾರ್ಗದೊಳ್

ಬಹುವಚನ ಕ್ರಿಯಾಪದದ ಏಕವಚನಾರ್ಥಕ್ಕೆ :
ಅಱಿಯಿರೆ ನೀಮುಮಾಮು ಮೊಡನೋದಿದೆವೆಂಬುದನಣ್ಣ

ನಿಜಧಾತುವಿಗೆ :
ಪಾಡು. ಪಾಡು ಪಾಡೆಲೆ ತುಂಬಿ ಬಗ್ಗಿಸೆಲೆ
ಕೋಗಿಲೆ ತೀಡೆಲೆ ಗಂಧವಾಹ

ಧಾತುವಿನ ಅತ್ವಕ್ಕೆ :
ಬರ್ > ಬಾರ, ನೋಡು > ನೋಡ, ಆರಯ್ > ಆರಯ,
ಕೇಳು > ಕೇಳ, ಕುಡು > ಕುಡ
ಬಾರ ಮರಾಳಿ ಕಾಗಮನೆ ನೋಡ ಚಕೋರ ವಿಲೋಲನೇತ್ರೆನಿಂ
ದಾರಯ ಪೀವರಸ್ತನನಿತಂಬ ಭರಾಲಸೆ ಕೇಳಿ ಕಾಮಕಾ
ಳೋರಗಕೇಶಪಾಶೆ ಎನಗುತ್ತರಮಂ ಕುಡ ಚಾರುವೇಣುವೀ
ಣಾರವೆ ನೀನದಾರ ಮಗಳೆಲ್ಲಿಗೆ ಪೋದಪೆಯಾವುದಾ ಶ್ರಯಂ

೧೩೭
ಅಭಿರೂಪದಿಂ, ಪ್ರಥಮಾ
ವಿಭಕ್ತಿ ಲಿಂಗ, ಅರ್ಥ,
ವಚನ, ಸಂಬೋಧನದೊಳ್,
ಪ್ರಭವಿಪ್ಪುದು
ದ್ವಿತೀಯಾ ವಿಭಕ್ತಿ
ಕರ್ಮದೊಳ್
ಅನಾಕುಲಂ, ವರ್ತಿಸುಗುಂ

ಲಿಂಗ, ಅರ್ಥ, ವಚನ, ಸಂಬೋಧನೆಗಳಲ್ಲಿ ಪ್ರಥಮಾ ವಿಭಕ್ತಿಯು ಪ್ರಯೋಗ ವಾಗುತ್ತದೆ. ಲಿಂಗವು ವಸ್ತುವನ್ನು ಹೇಳುವುದು ಅರ್ಥವು ಭಾವವಿಶೇಷವನ್ನು ಹೇಳುತ್ತದೆ. ವಚನವು ಎಣಿಕೆಯನ್ನು ಸೂಚಿಸುತ್ತದೆ. ಕರ್ಮಾರ್ಥದಲ್ಲಿ ದ್ವಿತೀಯಾವಿಭಕ್ತಿ ಸಂದೇಹವಿಲ್ಲದೆ ವರ್ತಿಸುತ್ತದೆ.

ಲಿಂಗಕ್ಕೆ :
ಇಂದ್ರಂ, ಚಂದ್ರಂ, ಮನುಷ್ಯಂ, ಕಾಮಿನಿ, ಆನೆ

ಅರ್ಥಕ್ಕೆ :
ನಿಡಿಯಂ, ಗುಜ್ಜಂ, ಕೆಂಚಂ

ವಚನಕ್ಕೆ :
ಒಂದು, ಎರಡು, ಮೂಱು

ಸಂಬೋಧನೆಗೆ :
ಎಲೆ ದೇವ ರಕ್ಷಿಸು

ದ್ವಿತೀಯಾ ವಿಭಕ್ತಿಯ ಕರ್ಮಕ್ಕೆ :
ತ್ರಿತಯ+ಅಂ=ತ್ರಿತಯಮಂ
ಪಡೆದಂ ಪದ್ಮಜನೀ ಜಗತ್ತಿತಯಮಂ.

೧೩೮
ಪ್ರವಿದಿತ ತತ್ಕರ್ಮಂ
ಕರ್ತೃವಿನ ಈಪ್ಸಿತತಮ
ಪದಾರ್ಥಂ;
ಅದು ನಾಲ್ಕು ಭೇದಂ
ಆಳ್ದು ಇರ್ಕುಂ ನಿರ್ವತ್ಸ
ವಿಕಾರ್ಯಂ ಪ್ರಾಪ್ಯ
ವೈಷಯಿಕಂ ಎಂದು ಎತ್ತಂ

ಆ ಕರ್ಮವೆಂಬುದು ಕತೃವಿನ ಇಷ್ಟವಸ್ತು. ಅದು ನಿರ್ವರ್ತ್ಯ. ಇಲ್ಲದಿರುವುದನ್ನು ಹೊಸದಾಗಿ ಮಾಡುವುದು, ವಿಕಾರ್ಯ ಇದ್ದುದನ್ನು ಬದಲಾಯಿಸುವುದು, ಪ್ರಾಪ್ಯ ತಾನೆ ಹೊಂದುವುದು, ವೈಷಯಿಕ ಪಂಚೇಂದ್ರಿಗಳಿಗೆ ಸಂಬಂಧಿಸಿದುದು ಎಂದು ನಾಲ್ಕು ತೆರನಾಗಿದೆ.

ಕರ್ಮಕ್ಕೆ :
ತುಡುಗೆಯಂ ತೊಟ್ಟಂ, ಪೂರ್ವಂ ಮುಡಿದಂ

ನಿರ್ವರ್ತ್ಯಕ್ಕೆ :
ಮನೆಯಂ ಮಾಡಿದಂ, ಕಾವ್ಯಮಂ ಪೇೞ್ದಂ

ವಿಕಾರ್ಯಕ್ಕೆ :
ಕಾಯಂ ಪೋೞ್ದಂ, ಪೞುವಂ ಕಡಿದಂ

ಪ್ರಾಪ್ಯಕ್ಕೆ :
ಮನೆಯಂ ಸಾರ್ದಂ, ಊರನೆಯ್ದಿದಂ

ವೈಷಯಿಕಕ್ಕೆ :
ನೆಸಱಂ ನೋಡಿದಂ, ಗೀತಮಂ ಕೇಳ್ದಂ, ನಲ್ಲಳ
ನಪ್ಪಿದಂ, ರಸಮಂಪೀರ್ದಂ, ಪೂವಂ ಮೂಸಿದಂ

೧೩೯
ತೊಡರ್ದು ಇಷ್ಟ
ಅನಿಷ್ಟದೊಳ್, ಎಡೆಯುಡುಗದೆ
ಕಾಲ ಅಧ್ವಯದೊಳ್;
ದ್ವಿತೀಯೆ ಮತ್ತಂ ನುಡಿಗುಂ
ತೃತೀಯೆ ಪೇೞಲ್ ಪಡೆಗುಂ
ಸಲೆ ಕರ್ತೃ ಕರಣ
ಹೇತು ಸ್ಥಿತಿಯೊಳ್

ಇಷ್ಟ, ಅನಿಷ್ಟ, ಕಾಲ ಮತ್ತು ದಾರಿ ಸಾಗುವಿಕೆಯ ಅರ್ಥದಲ್ಲಿ ದ್ವಿತೀಯಾ ವಿಭಕ್ತಿ ವ್ಯವಹರಿಸುತ್ತದೆ. ಕರ್ತೃ, ಕರಣ ಮತ್ತು ಹೇತುಗಳಲ್ಲಿ ತೃತೀಯಾ ವಿಭಕ್ತಿ ಪ್ರಯೋಗ ವಾಗುತ್ತದೆ.

ಇಷ್ಟಕ್ಕೆ : ನೇವಳಮಂ ತೆಗೆದಂ
ಅನಿಷ್ಟಕ್ಕೆ : ಪಾವಂ ದಾಂಟಿದಂ
ಕಾಲಕ್ಕೆ : ಅಱುದಿಂಗಳಂ ತಳ್ವಿದಂ
ಅಧ್ವಕ್ಕೆ : ಅರೆಗಾವುದಮಂ ಪರಿದಂ
ಕರ್ತೃವಿಗೆ : ಪದಕಮಕ್ಕಸಾಲೆಯಿಂ ಮಾಡೆಪಟ್ಟುದು
ಕರಣಕ್ಕೆ : ಕೊಡಲಿಯಿಂ ಕಡಿದಂ
ಹೇತುವಿಗೆ : ಓಲಗದಿಂ, ಪಡೆದಂ

೧೪೦
ನುತ ಸಂಪ್ರದಾನ ರೂಢಂ,
ಚತುರ್ಥಿ
ಅದು ರುಚಿಯೊಳ್,
ಈರ್ಷ್ಯೆಯೊಳ್, ಮಚ್ಚರದೊಳ್,
ಹಿತದೊಳ್, ಸಂಭೀತಿಯೊಳ್,
ಉನ್ನತಿಯೊಳ್, ಸ್ವಸ್ತ್ಯಾದಿಯೊಳ್,
ಸ್ವಭಾವಸ್ಥಿತಿಯೊಳ್

೧೪೧
ಪ್ರವಿದಿತ ಹೇತುವಿನೊಳ್,
ಸಂದವನತಿಯೊಳ್,
ಪ್ರಾಣಿ ಅನಾದರ ಸ್ಮರಣದೊಳ್
ಉದ್ಭವಿಸಿದ ಅನೀಪ್ಸಿತದೊಳ್
ಸದೃಶ ವೃತ್ತಿಯೊಳ್
ಪ್ರತಿನಿಧಾನದೊಳಂ

ಯಾವುದಾದರೊಂದು ವಸ್ತುವನ್ನು ದಾನವಾಗಿ ಪಡೆಯಲು ಯೋಗ್ಯನಾದವನು ಸಂಪ್ರದಾನ. ಆ ಸಂಪ್ರದಾನದಲ್ಲಿ ಚತುರ್ಥಿ ವಿಭಕ್ತಿಯು ಬರುತ್ತದೆ. ಆ ಚತುರ್ಥಿಯು ರುಚಿ, ಕೋಪ, ಮತ್ಸರ, ಹಿತ, ಭೀತಿ, ಉನ್ನತಿ, ಸ್ವಸ್ತಿ, ಕಾರಣ, ನಮಸ್ಕಾರ, ಅನಾದರ, ಅನಿಷ್ಟ, ಸಮಾನತೆ, ಪ್ರತಿನಿಧಿ ಮತ್ತು ಇಷ್ಟಾರ್ಥದಲ್ಲಿ ಪ್ರಯೋಗವಾಗುತ್ತದೆ.

ಸಂಪ್ರದಾನಕ್ಕೆ : ಬ್ರಾಹ್ಮಣಂಗೆ ಗೋವಂ ಕೊಟ್ಟಂ

ರುಚಿಗೆ : ಕೂಸಿಂಗೆ ಲಡ್ಡುಗೆಯೞ

ಈರ್ಷ್ಯೆಗೆ : ಕವಿಗೆ ಕವಿ ಮುನಿವಂ

ಮತ್ಸರಕ್ಕೆ : ಸವತಿಗೆ ಸವತಿ ಪುರುಡಿಪಳ್

ಹಿತಕ್ಕೆ : ಪಶುವಿಂಗೆ ಹಿತಂ ತೃಣಂ

ಭೀತಿಗೆ : ಪಾಪಕ್ಕಂಜುಗುಂ ತಕ್ಕಂ

ಉನ್ನತಿಗೆ : ಲೋಕಕ್ಕಧಿಕ ನೀತಂ

ಸ್ವಸ್ತ್ಯಾದಿಗೆ : ಸಮನಿಸಂಗೆ ಜಗಕ್ಕೆಲ್ಲಿಯುಮಾಯುಂ ಪ್ರಮೋದಮುಂ…

ಸ್ವಭಾವಕ್ಕೆ : ಕಪಿಗೆ ಚಪಲತೆ

ಕಾರಣಕ್ಕೆ : ಮೞಗೆ ಮುಗಿಲ್

ನಮಸ್ಕಾರಕ್ಕೆ : ದೇವರ್ಗೆ ಪೊಡೆಮಟ್ಟಂ

ಅನಾದರಕ್ಕೆ : ಮಾನಸರಂ ಪುಲ್ಗೆ ಕಷ್ಟಮಾಗಿ ನೆನೆವಂ

ಅನಿಷ್ಟಕ್ಕೆ : ಆತಂಗೆ ವಿಷಮನಿಕ್ಕಿದಂ

ಸಾದೃಶ್ಯಕ್ಕೆ : ಐರಾವತಕ್ಕೆ ಸುಪ್ರತೀಕ ಮೋರಗೆ

ಪ್ರತಿನಿಧಿಗೆ : ಜೇನುತುಪ್ಪಕ್ಕೆ ಸಕ್ಕರೆಸಲ್ವುದು

ಇಷ್ಟಕ್ಕೆ : ಭಕ್ತಂಗೆ ವರಮನಿತ್ತಂ

೧೪೨
ಆದಂ ಪಂಚಮಿ ಅಪ್ಪುದು
ಅಪಾದಾನ ಸ್ಥಳದೊಳ್,
ಅದೇ ದಲ್ ಒದವುಗುಂ
ಆತಂಕ, ಅದಾನ ಇಷ್ಟ ಅನಿಷ್ಟ
ಅಪಾದಿತ ಹೇತುವಿನೊಳ್,
ಉದಯದೊಳ್,
ಗೌರವದೊಳ್

ಯಾವುದಾದರೊಂದು ವಸ್ತುವಿನಿಂದ ಬಿಡುಗಡೆ ಹೊಂದುವುದು ಅಪಾದಾನವೆನಿಸುವುದು. ಅಲ್ಲಿ ಪಂಚಮಿ ವಿಭಕ್ತಿ ಬರುತ್ತದೆ. ಅಲ್ಲದೆ ಪಂಚಮಿಯು ಭಯ, ಸ್ವೀಕಾರ, ಇಷ್ಟ, ಅನಿಷ್ಟ, ಹೇತು (ಕಾರಣ), ಉದಯ, ಗುರುತ್ವ ಇವುಗಳಲ್ಲಿ ವರ್ತಿಸುತ್ತದೆ.

ಅಪಾದಾನಕ್ಕೆ : ಮರದತ್ತಣಿಂ ಪಣ್ಣುದಿರ್ದುದು

ಭಯಕ್ಕೆ : ಅರಸನತ್ತಣಿಂ ದಾೞ ಬಂದುದು

ಸ್ವೀಕಾರಕ್ಕೆ : ಸ್ವಾಮಿಯತ್ತಣಿಂ ನಿರ್ವಾಹಮಾದುದು

ಇಷ್ಟಕ್ಕೆ : ರಂಭೆಯತ್ತಣಿಂ ಸುಖಂ ಪ್ರಾಪ್ತಿಸಿದುದು

ಅನಿಷ್ಟಕ್ಕೆ : ಪಗೆಯತ್ತಣಿಂ ಬಂಧನಂ ಸಿರಿಬಂದುದು

ಹೇತುವಿಗೆ : ಉದ್ಯೋಗದತ್ತಣಿಂ ಸಿರಿಬಂದುದು

ಉದಯಕ್ಕೆ : ಸದ್ವಂಶದತ್ತಣಿಂ ಪುಟ್ಟಿದಂ

ಗುರುತ್ವಕ್ಕೆ : ಕೃಷ್ಣನತ್ತಣಿಂ ಪಿರಿಯಂ ಬಲ ಭದ್ರಂ

೧೪೩
ಪತಿ, ಕುಲ, ಜತಿ, ಅವಯವ
ವಿಶ್ರುತ, ಲಕ್ಷಣ, ಸನ್ನಿಧಾನ
ಸಂಸ್ಪರ್ಶ, ಸಮಾಗತ,
ಸಂಬಂಧದೊಳಂ,
ತತ್ಗತ
ಸಂಬಂಧದೊಳಂ,
ಉಂಟು
ಷಷ್ಠಿಗೆ ಯೋಗಂ

ಸಂಬಂಧದಲ್ಲಿ ಷಷ್ಠಿಯು ಪ್ರಯೋಗವಾಗುತ್ತದೆ. ಸಂಬಂಧದಲ್ಲಿ ಸ್ವಾಮಿ ಸಂಬಂಧ, ಕುಲಸಂಬಂಧ, ಜತಿಸಂಬಂಧ, ಅವಯವ ಸಂಬಂಧ, ಲಕ್ಷಣ ಸಂಬಂಧ, ಸನ್ನಿಧಾನ ಸಂಬಂಧ ಮತ್ತು  ಸಂಸ್ಪರ್ಶ ಸಂಬಂಧವೆಂದು ಅನೇಕ ವಿಧಗಳಿವೆ.

ಸ್ವಾಮಿ ಸಂಬಂಧಕ್ಕೆ : ಊರೊಡೆಯಂ

ಕುಲಸಂಬಂಧಕ್ಕೆ : ಎಮ್ಮಳಿಯಂ

ಜತಿ ಸಂಬಂಧಕ್ಕೆ : ಆನೆಯಘಟೆ

ಅವಯವ ಸಂಬಂಧಕ್ಕೆ : ಮರದಕೊಂಬು

ಲಕ್ಷಣ ಸಂಬಂಧಕ್ಕೆ : ಟೊಪ್ಪಿಗೆಯ ಮಾನಸಂ

ಸನ್ನಿಧಾನ ಸಂಬಂಧಕ್ಕೆ : ಕೆಱೆಯಕೋಡಿ

ಸಂಸ್ಪರ್ಶ ಸಂಬಂಧಕ್ಕೆ : ತೋಳಬಂದಿ

ಸಂಬಂಧ ಸಂಬಂಧಕ್ಕೆ : ನೊಸಲ ಕಣ್ಣದೇವಂ

೧೪೪
ಧೀರರಿಂ ಆವುದು ತಾಂ
ಆಧಾರಂ ಅದು ಅಧಿಕರಣಂ,
ಅಲ್ಲಿ ಸಪ್ತಮಿ ತಿಳಿ
ನಿರ್ಧಾರಣ
ವಿಷಯ ವ್ಯಾಪಕ ಸಾರ,
ವ್ಯವಹಾರ ಕಾಲ
ಸತ್ಯರ್ಥಗತಂ

ಆಧಾರವಾಗಿರುವುದೇ ಅಧಿಕರಣ, ಅಲ್ಲಿ ಸಪ್ತಮಿ ಉಂಟು. ಅದು ನಿರ್ಧಾರಣ (ಗುಣ, ಕ್ರಿಯೆ) ವಿಷಯ, ವ್ಯಾಪಕ, ವ್ಯವಹಾರ, ಕಾಲ ಸತ್ಯರ್ಥಗಳನ್ನೊಳಗೊಂಡಿರುತ್ತದೆ.

ಅಧಿಕರಣಕ್ಕೆ : ಪಾಸಿನೊಳ್ ನಿದ್ರೆಗೆಯ್ದು

ನಿರ್ಧಾರಣಕ್ಕೆ (ಗುಣ) : ರತ್ನಗಳೊಳ್‌ಮಾಣಿಕ್ಯ ಮುತ್ತಮಂ

(ಕ್ರಿಯೆಗೆ)  ಕಾದುವರೊಳೀತಂ ಮೆಯ್ಗಲಿ

ವಿಷಯಕ್ಕೆ : ಮೊಗದೊಳ್ಮೆಲ್ದಂ

ವ್ಯಾಪಕಕ್ಕೆ : ಪೂವಿನೊಳ್ಕಂಪು;

ವ್ಯವಹಾರಕ್ಕೆ : ತಪದೊಳ್ ನೆಗೆೞ್ದಂ

ಕಾಲಕ್ಕೆ : ವಸಂತದೊಳ್ ಮಾವು ಕೈವಂದುದು

ಸತ್ಯರ್ಥಕ್ಕೆ : ಬರೆ ಕಂಡಂ ಬರ್ಪೆಡೆಯೊಳ್ಕಂಡಂ

೧೪೫
ಇಂತು ಪೇೞ್ದ
ವಿಭಕ್ತಿಗಳ್ ಎಂತುಂ
ಪಲ್ಲಟಿಸುಗುಂ ಯಥೇಷ್ಟಂ;
ಪ್ರಥಮಾರ್ಥಂ ತೋಱಯುಂ,
ದ್ವಿತೀಯಾರ್ಥ ತೋಱಯುಂ
ಅಲ್ಲಿ
ಷಷ್ಠಿ ದೊರೆಕೊಂಡಿರ್ಕುಂ

ಪ್ರಾಚೀನ ಕವಿಗಳ ಕಾವ್ಯಗಳ ಉದಾಹರಣೆಗಳನ್ನಾಧರಿಸಿ ವಿಭಕ್ತಿ ಪಲ್ಲಟದ ನಿಯಮಗಳನ್ನು ಕೇಶಿರಾಜ ಹೇಳಿದ್ದಾನೆ. ಹೀಗೆ ಹೇಳಿದ ಸಪ್ತವಿಧ ವಿಭಕ್ತಿ ಪ್ರತ್ಯಯಗಳು ನಿರ್ದಿಷ್ಟ ಕ್ರಮವಿಲ್ಲದೆ ಯಥೇಷ್ಟವಾಗಿ ಪಲ್ಲಟಗೊಳ್ಳುವುದು. ಪ್ರಥಮಾ ವಿಭಕ್ತಿ ಪ್ರತ್ಯಯ ಬರಬೇಕಾದಲ್ಲಿ ಹಾಗೂ ದ್ವಿತೀಯಾವಿಭಕ್ತಿ ಪ್ರತ್ಯಯ ಬರಬೇಕಾದಲ್ಲಿ ಕೆಲವು ಸಲ ಷಷ್ಟಿ ವಿಭಕ್ತಿ ಪ್ರತ್ಯಯ ಬರುವುದುಂಟು.

ಪ್ರಥಮಾರ್ಥದ ಷಷ್ಠಿಗೆ :
ನೃಪಂ > ನೃಪನ
ನಿಶ್ಯಂಕೆಯಿಂ ನೃಪನ ಪೇೞ

ದ್ವಿತೀಯಾರ್ಥದ ಷಷ್ಠಿಗೆ :
ನಾಡಂ > ನಾಡಂ
ತೆಂಕನಾಡ ಮಱಯಲ್ಕೆಂದುಂ ಮನಂ ಬರ್ಕುಮೇ

೧೪೬
ಸ್ವಾರ್ಥಂ ಪ್ರಥಮಾರ್ಥ,
ತೃತಿಯಾರ್ಥ, ಚತುರ್ಥ,
ಅರ್ಥದೊಳ್
ದ್ವಿತೀಯೆ, ತೃತೀಯೆ
ಉಕ್ತ ಅರ್ಥದೊಳ್
ಸಪ್ತಮಿಯೆ ಸಮರ್ಥಂ
ಪಂಚಮಿಯೊಳಂ
ತೃತೀಯೆ ಸಮರ್ಥಂ

ಪ್ರಥಮಾರ್ಥ, ತೃತೀಯಾರ್ಥ, ಚತುರ್ಥ್ಯರ್ಥಗಳಲ್ಲಿ ದ್ವಿತೀಯೆ ಬಳಕೆಯಾಗುತ್ತದೆ. ತೃತಿಯಾರ್ಥದಲ್ಲಿ ಸಪ್ತಮಿ, ಪಂಚಮ್ಯರ್ಥದಲ್ಲಿ ತೃತೀಯೇ (ಬರಲು) ಸಮರ್ಥವಾಗುತ್ತದೆ.

ಪ್ರಥಮಾರ್ಥದ ದ್ವಿತೀಯೆಗೆ :
ನುಣ್ಣಳ್ಳಂ – ನುಣ್ಣನುಳ್ಳಂ

ತೃತೀಯಾರ್ಥದ ದ್ವಿತೀಯೆಗೆ :
ದೇವರಂ ಪೂವಿಂದರ್ಚಿಸಿದಂ –
ದೇವರಂ ಪೂರ್ವನರ್ಚಿಸಿದಂ

ಚತುರ್ಥ್ಯರ್ಥದ ದ್ವಿತೀಯೆಗೆ :
ಪೊನ್ನಂ ಬಡ್ಡಿಗೆ ಕೊಟ್ಟಂ –
ಪೊನ್ನಂ ಬಡ್ಡಿಯಂ ಕೊಟ್ಟಂ

ತೃತೀಯಾರ್ಥದ ಸಪ್ತಮಿಗೆ :
ಕೊಡಲಿಯಿಂಕಡಿದಂ – ಕೊಡಲಿಯೊಳ್ ಕಡಿದಂ

ಪಂಚಮ್ಯರ್ಥದ ತೃತೀಯಗೆ :
ತಿಳಿಗೊಳದತ್ತಣಿಂ ಪಾಱದುವು –
ತಿಳಿಗೊಳದಿಂದೆ ಪಾಱದುವು.

೧೪೭
ಕೃತಿಯುಕ್ತಂ, ಷಷ್ಠಿಯೊಳಂ
ದ್ವಿತೀಯೆಯೊಳಂ
ಚತುರ್ಥಿ, ಸಪ್ತಮಿಯೊಳ್
ಸಂಗತಂ;
ಪ್ರಥಮಾ ಷಷ್ಠಿ ಚತುರ್ಥಿಗಳ್,
ಪ್ರಥಮೆಯುಂ
ದ್ವಿತೀಯೆಯೊಳ್ ಅಕ್ಕುಂ

ಷಷ್ಠಿ ವಿಭಕ್ತಿ, ದ್ವಿತೀಯಾ ವಿಭಕ್ತಿ ಪ್ರತ್ಯಯಕ್ಕೆ ಬದಲಾಗಿ ಚತುರ್ಥಿ ವಿಭಕ್ತಿ ಸೇರುತ್ತದೆ. ಸಪ್ತಮಿ ವಿಭಕ್ತಿಗೆ ಬದಲಾಗಿ ಪ್ರಥಮೆ, ಷಷ್ಠಿ ಕೆಲವು ಸಲ ಚತುರ್ಥಿಯೂ ಪ್ರಯೋಗದಲ್ಲಿ ಬರುತ್ತದೆ. ದ್ವಿತೀಯಾ ವಿಭಕ್ತಿಗೆ ಬದಲಾಗಿ ಪ್ರಥಮಾ ಬಳಕೆಯಾಗುವುದೂ ಉಂಟು.

ಷಷ್ಠ್ಯರ್ಥದ ಚತುರ್ಥಿಗೆ :
ಎರ್ದೆಯಾಣ್ಮಂ – ಎರ್ದೆಗಾಣ್ಮಂ
ಕೊಡೆಯೊಡೆಯಂ – ಕೊಡೆಗೊಡೆಯಂ

ದ್ವಿತೀಯಾರ್ಥದ ಚತುರ್ಥಿಗೆ :
ಆಕೆಯಂ ತಿಳಿಪಿದಂ – ಆಕೆಗೆ ತಿಳಿಪಿದಂ
ಶಿಷ್ಯನಂ ಕಲ್ಪಿಸಿದನೆಂಬಲ್ಲಿ – ಶಿಷ್ಯಂಗೆ ಕಲ್ಪಿಸಿದಂ

ಸಪ್ತವ್ಯರ್ಥದ ಪ್ರಥಮೆಗೆ :
ಒಂದು ದಿನದೊಳ್‌ಬಂದಂ – ಒಂದು ದಿನಂ ಬಂದಂ

ಸಪ್ತಮ್ಯರ್ಥದ ಷಷ್ಠಿಗೆ :
ರಸಿಕರೊಳ್ ಚಕ್ರವರ್ತಿ – ರಸಿಕರ ಚಕ್ರವರ್ತಿ

ಸಪ್ತಮ್ಯರ್ಥದ ಚತುರ್ಥಿಗೆ :
ತಾವರೆಯೊಳ್ ಪುಟ್ಟಿದಂ – ತಾವರೆಗೆ ಪುಟ್ಟಿದಂ

ದ್ವಿತೀಯಾರ್ಥದ ಪ್ರಥಮೆಗೆ :
ಒಂದು ವರ್ಷಮನಿರ್ದಂ – ಒಂದು ವರ್ಷವಿರ್ದಂ