೧೧೬
ವಿತತ ನಪುಂಸಕಲಿಂಗ
ದ್ವಿತೀಯೆಯೊಳ್,
ಮತ್ವ, ನತ್ವವಿಧಿ
ಮತ್ವಮೆ ಸಂಗತಿ ವಡೆಗುಂ
ಸಂಸ್ಕೃತದೊಳ್ ತೃತೀಯ
ಮೊದಲಾದುವರ್ಕೆ
ಆಗಮಂ ಅಕ್ಕುಂ

ಕನ್ನಡದಲ್ಲಿ ಅ ಕಾರಾಂತವಾದ ನಪುಂಸಕಲಿಂಗ ಶಬ್ದಗಳಿಗೆ ದ್ವಿತೀಯಾ ವಿಭಕ್ತಿ ಪ್ರತ್ಯಯವು ಪರವಾದಾಗ ಮ ಕಾರ, ನ ಕಾರಗಳು ಆಗಮವಾಗಿ ಬರುತ್ತವೆ. ಸಂಸ್ಕೃತ ಶಬ್ದಗಳಿಗೆ ಮ ಕಾರವೇ ಆಗಮವಾಗುತ್ತದೆ. ತೃತೀಯೆ ಮೊದಲಾದ ವಿಭಕ್ತಿ ಪ್ರತ್ಯಯಗಳು ಪರವಾದಾಗ ದ ಕಾರಾಗಮವಾಗುತ್ತದೆ.

ಮ ಕಾರಾಗಮಕ್ಕೆ :
ಬೆಟ್ಟ + ಅಂ = ಬೆಟ್ಟಮಂ

ನ ಕಾರಾಗಮಕ್ಕೆ :
ಪೊಲ + ಅಂ = ಪೊಲನಂ

ಸಂಸ್ಕೃತದಲ್ಲಿ ಮ ಕಾರಾಗಮಕ್ಕೆ :
ಕುಲ + ಅಂ = ಕುಲಮಂ
ಕುಲಮಂ ಚಲಮಂ ವಿದ್ಯಾ
ಬಲಮಂ ಶೌರ್ಯಾವಲೇಪಮಂ ಪೊಗೞ ನೆಲಂ

ದ ಕಾರಾಗಮಕ್ಕೆ :
ಮನಂ + ಇಂ = ಮನದಿಂ
ಮನದಿಂ ಬೇಗಂ ಮುಟ್ಟಿದಂ….

೧೧೭
ಸಮನಿಸಿ ತೋಱಸುಗುಂ
ಇಂ, ಇಂದಂ, ಇಂದೆ,
ಎಂಬಿವು ತೃತೀಯೆಯೊಳ್
ಮತ್ತಂ ಎಕಾರಂ
ಅದೊಂದೆ ಮೇಣ್ ತೃತೀಯೆಗೆ
ಸಮುಚಿತಂ ಆದೇಶಂ,
ಅಱೆದುಕೋಳ್ಳಿ ಕ್ರಮದಿಂ

ಇಂ, ಇಂದಂ, ಇಂದೆ ಎಂಬ ಮೂರು ಪ್ರತ್ಯಯಗಳು ತೃತೀಯಾ ವಿಭಕ್ತಿಯಲ್ಲಿ ಬರುತ್ತವೆ. ಈ ಮೂರು ಪ್ರತ್ಯಯ ಗಳಿಗೂ ಆದೇಶವಾಗಿ ಎ ಎಂಬ ಪ್ರತ್ಯಯವು ತೃತೀಯಾ ವಿಭಕ್ತಿಯಲ್ಲಿ ಬರುತ್ತದೆ. ಈ ರೀತಿಯನ್ನು ತಿಳಿದುಕೊಳ್ಳಿರಿ.

ಇಂ, ಇಂದಂ, ಇಂದೆಗಳಿಗೆ :
ವಾಹಳಿ + ಇಂ = ವಾಹಳಿಯಿಂ
ತುರಗದ ವಾಹಳಿಯಿಂ…
ಭಯ + ಇಂದಂ = ಭಯದಿಂದಂ
ಭಯದಿಂದಂ ಮುಳಿಸಿಂದಂ…
ಕುಡಿಯಳ್ಳೆಗಳ್ + ಇಂದೆ = ಕುಡಿಯಳ್ಳೆಗಳಿಂದೆ
ತೊಡೆ ಸಂಕವೆಯಿಕ್ಕಿದವೊಲ್
ಕುಡಿಯಳ್ಳೆಗಳಿಂದೆ ಸುರಿದು ವಿರ್ಕೆಲಕೆ ಕರುಳ್ಗಳ್

ಆದೇಶದ ಎ ಕಾರಕ್ಕೆ :
ಕ್ರಮದ + ಎ = ಕ್ರಮದೆ
ಬಗೆದಂತಾಗೆ ಸುರೇಂದ್ರರಿಂ ಕ್ರಮದೆ ಕಲ್ಯಾಣ
ದ್ವಯಂ ಜೈನದೀಕ್ಷೆಗೆ
ಪೂಣ್ದು…

೧೧೭
ವಿದಿತಂ ಉವರ್ಣ, ಋವರ್ಣ
ಔತ್ವದೊಳಂ
ಹ್ರಸ್ವ ಎತ್ವದೊಳಂ
ಇನಾಗಮವಿಧಿ ತಪ್ಪದು
ವತ್ವಸಂಧಿಯೆಡೆಯೊಳ್,
ಉದಿತ ತೃತೀಯೆಯೊಳಂ
ಅಱ ವಿಕಲ್ಪ ಸ್ಥಿತಿಯಿಂ

ಸಪ್ತ ವಿಭಕ್ತಿ ಪ್ರತ್ಯಯಗಳನ್ನು ವಿವರಿಸಿದ ಕೇಶಿರಾಜ, ಪ್ರಕೃತಿಗಳಿಗೆ ನಾಮವಿಭಕ್ತಿ ಪ್ರತ್ಯಯಗಳು ಸೇರುವಾಗ ಉಂಟಾಗುವ ವ್ಯತ್ಯಾಸಗಳನ್ನು ಸಾದ್ಯಂತವಾಗಿ ಚರ್ಚಿಸಿಕೊಂಡು ಬಂದಿದ್ದಾನೆ. ನಾಮಪ್ರಕೃತಿಗಳಿಗೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಪ್ರಕೃತಿ ಪ್ರತ್ಯಯದ ಮಧ್ಯದಲ್ಲಿ ಇನ್ ಆಗಮವಾಗುವುದು. ಇದಕ್ಕೆ ‘ಇನಾಗಮವಿಧಿ’ ಎಂದು ಹೆಸರು. ಅದರ ಸ್ವರೂಪವನ್ನು ಇಲ್ಲಿ ಹೇಳಿದ್ದಾನೆ. ಉ, ಊ, ಋ, ೠ, ಎ, ಓ, ಔ ಕಾರಾಂತವಾದ ನಾಮಪ್ರಕೃತಿಗಳ ಮುಂದೆ ತೃತೀಯ ಮುಂತಾದ ವಿಭಕ್ತಿ ಪ್ರತ್ಯಯಗಳು ಪರವಾದಾಗ ಪ್ರಕೃತಿ ಪ್ರತ್ಯಯಗಳ ಮಧ್ಯದಲ್ಲಿ ತಪ್ಪದೆ ಇನ್ ಆಗಮವಾಗುತ್ತದೆ. ವ ಕಾರಾಗಮ ಸಂಧಿಯಲ್ಲಿ, ತೃತೀಯಾ ವಿಭಕ್ತಿ ಪರವಾದಾಗ ಇನ್ ಆಗಮವು ವಿಕಲ್ಪವಾಗಿರುತ್ತದೆ.

ಉ ಕಾರಕ್ಕೆ :
ತಳಿರ್ವಾಸು + ಇಂದೆ = ತಳಿರ್ವಾಸಿನಿಂದೆ
ತಳಿರ್ವಾಸಿನಿಂದೆ ಸೆಜ್ಜೆಗೆ
ಕೆಳದಿಯರೆಂತಕ್ಕೆ ಕೊಂಡು ಪೋದರ್ ವಿರಹಾ
ಕುಳೆಯಂ…

ಊ ಕಾರಕ್ಕೆ :
ಪೂ + ಅ = ಪೂವಿನ
ಪೂವಿನಬಿಲ್ಲ ಕೊಪ್ಪನೊದೆದೇಱಸಿ ತಾವರೆ
ನೂಲನಾರಿಯಂ ಜೇವೊಡೆಗೆಯ್ದು…

ಋ ಕಾರಕ್ಕೆ :
ಪಿತೃ + ಅ = ಪಿತೃವಿನ

ೠ ಕಾರಕ್ಕೆ :
ೠ + ಅ = ೠವಿನ

ಎ ಕಾರಕ್ಕೆ :
ಮತ್ತೆ + ಅ = ಮತ್ತಿನ
ಮತ್ತಿನ ಮತ್ತಿನ ಬೇರ್ಗಳ
ಬಿತ್ತುಗಳಾನದಿಯಾಳೇನೊ ಸುಜನೋತ್ತಂಸಾ

ಓ ಕಾರಕ್ಕೆ :
ಗೋ + ಅ = ಗೋವಿನ

ಔ ಕಾರಕ್ಕೆ :
ಗ್ಲೌ + ಅ = ಗ್ಲೌವಿನ

ವತ್ವ ಸಂಧಿಯ ಇನಾಗಮಕ್ಕೆ :
ಮನು + ಇಂ = ಮನುವಿಂ, ಮನುವಿನಿಂ
ಮನುವಿನ ಮಾರ್ಗಂ ಸುರಗುರು
ವಿನಱೆವು ಪರಮಾನ ಸೂನು ವೊಂದಾಯತಿ…

ತೃತೀಯೆಯ ವಿಕಲ್ಪ ಇನಾಗಮಕ್ಕೆ :
ಮಾತು + ಇಂ = ಮಾತಿಂ, ಮಾತಿನಿಂ

೧೧೯
ಪಗಲ್, ಇರುಳ್ ಎಂಬಲ್ಲಿ
ವಿಕಲ್ಪಗತಿಯಂ
ವ್ಯಂಜನಾಂತದೊಳ್
ಪೇೞ್ವರ್ ಸೂರಿಗಳ್
ಆಗಳ್, ಈಗಳ್ ಎಂಬೆಡೆಗೆ
ಅಗಲ್ಚರ್; ಉೞಿದೆಡೆಗೆ
ಇನ್, ಆಗಮಂ ದೋಷಕರಂ

ಪಂಡಿತರ ಮತದಂತೆ ವ್ಯಂಜನಾಂತಗಳಾದ ಪಗಲ್, ಇರುಳ್ ಎಂಬ ಪ್ರಕೃತಿಗಳ ಮುಂದೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳು ಸೇರುವಾಗ ಇನ್ ಆಗಮ ವಿಕಲ್ಪವಾಗಿ ಆಗುತ್ತದೆ. ಆಗಳ್, ಈಗಳ್ ಎಂಬ ಪ್ರಕೃತಿಗಳ ಮುಂದೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳು ಪರವಾದಾಗ ನಿತ್ಯವಾಗಿ ಇನಾಗಮವಾಗುತ್ತದೆ. ಉಳಿದೆಡೆ ಇನಾಗಮ ದೋಷಕರವಾದುದು.

ವಿಕಲ್ಪಕ್ಕೆ :
ಪಗಲ್ + ಅ = ಪಗಲ, ಪಗಲಿನ
ಇರುಳ್ + ಅ = ಇರುಳ, ಇರುಳಿನ
ಪಗಲಂತಿರ್ದಿಚ್ಚವೆಳ್ದಿಂಗಳನಿನ ಕಿರಣ ಶ್ರೇಣಿಗೆತ್ತು…
ಪಗಲಿನ ರವಿ ಕಿರಿಣಂಗಳೆ
ಮಗುೞ್ದೇಗಳ್…
ಇರುಳ ಸರೋಜವಾದುದರಿರಾಯರ ಸಂಸಾರಂ…
ಗುಹಾ…… |
ಗಹ್ವರದೊಳ ಗಿರುಳಿನ ಚ
ಕ್ರಾಹ್ವಯದ ವೊಲಿರ್ದವಂ ಸುಖಂ ಬಡೆದಪನೇ ||

ನಿತ್ಯಕ್ಕೆ :
ಆಗಳ್ + ಅ = ಆಗಳಿನ, ಈಗಳ್ + ಅ = ಈಗಳಿನ
ಆಗಳಿನ ಕಜ್ಜಮನೇಗಮೆ ಗೆಯ್ದಪುದೆಂದು…
ಆವ ರೀತಿ ಪೇೞಿಂದೊಡೆ
ಬಯ್ವರೀಗಳಿನ ದೇಸಿಗೆವಿೞ್ದ ಮಹಾಕವೀಶ್ವರರ್

ದೋಷಕ್ಕೆ :
ಬೆರಲಿನ, ಕೊರಲಿನ ಎಂಬಂತೆ ದೋಷಮನಱದು ಕೊಂಬುದು.

೧೨೦
ಜನಿಯಿಪುದು ಉದಂತ
ಕೃತ್, ಸರ್ವನಾಮ, ಗುಣವಚನ,
ಸಂಖ್ಯೆಗಳ್ಗೆ, ಪವಣ್ಗೆ,
ಅಱೆವಿನಂ ಅಱ್‌ಕಾರಂ
ದಿಗ್ವಾಚಿ ನಿಲೆ
ತೃತೀಯಾದಿಗೆ ಅಣ್ ಪ್ರಯೋಗಿಸೆಪಡುಗುಂ

ಉ ಕಾರಾಂತವಾದ ಕೃದಂತ, ಸರ್ವನಾಮ, ಗುಣವಚನ, ಸಂಖ್ಯಾವಾಚಕ, ಪ್ರಮಾಣವಾಚಕಗಳಿಗೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳು ಪರವಾದಾಗ ‘ಅಱ್’ ಎಂಬುದು ಆಗಮವಾಗುತ್ತದೆ. ದಿಗ್ವಾಚಕಗಳಿಗೆ ತೃತೀಯಾದಿ ವಿಭಕ್ತಿ ಪ್ರತ್ಯಯಗಳು ಪರವಾದಾಗ ‘ಅಣ್’ ಎಂಬುದು ಆಗಮವಾಗುತ್ತದೆ.

ಕೃತ್ತಿಂಗೆ :
ಮಾಡಿದುದು + ಇಂ = ಮಾಡಿದುದಱಿಂ ಇದೇ ರೀತಿ
ನೀಡಿದುದಱಿಂ, ನೋಡಿದುದಱಿಂ,

ಸರ್ವನಾಮಕ್ಕೆ :
ಅದು + ಅಲ್ಲಿ = ಅದಱಲ್ಲಿ
ಅದಱಲ್ಲಿ ಮೂಷೆಯಿಟ್ಟೆಱ
ಗಿದತೆಱದಿಂ ಕೋರ್ವಿದೆಕ್ಕಲಂ

ಗುಣವಚನಕ್ಕೆ :
ಕಿಱೆದು + ಒಳ = ಕಿಱಿದಱೊಳ್
ಕಿಱುದಱೊಳ್‌ಪಿರಿದುಮರ್ಥಮ
ನಱಿಪಲ್ ನಱಿವಾತನಾತನಿಂದಂ ಜಣಂ

ಸಂಖ್ಯಾವಾಚಿಗೆ :
ಮೂಱು + ಇಂ = ಮೂಱಱಿಂ
ಇದೇ ರೀತಿ, ನಾಲ್ಕಱಿಂ, ಅಯ್ದಱಿಂ, ಹತ್ತಱಿಂ

ಪ್ರಮಾಣವಾಚಿಗೆ :
ಅನಿತು + ಇಂ = ಅನಿತಱೆಂ ಇದೇ ರೀತಿ
ಇನಿತಱೆಂ

ದ್ವಿಗ್ವಾಚಿಯ ಅಣ್ಗೆ :
ಮೂಡು + ಇಂ = ಮೂಡಣಿಂ
ಮುಂತು + ಇಂ = ಮುಂತಣಿಂ
ಇದೇ ರೀತಿ
ತೆಂಕಣಿಂ, ಪಡುವಣಿಂ

೧೨೧
ಪುರುಷ ಪರಂ ಆದೊಡೆ
ಅತ್ವಂ ದೊರೆಕೊಳ್ಗುಂ,
ಅಣ್ ತಗುಳ್ದ
ದಿಗ್ವಾಚಕದೊಳ್,
ಪರ ದಿಗ್ವಾಚಕದೊಳ್
ಸಂಚರಿಸುವುದು ತೆಱದೆ
ದತ್ವವಿಧಿ ಶಾಬ್ದಿಕರಿಂ

ಶಬ್ದವು ಪುಲ್ಲಿಂಗವಾಗಬೇಕಾದರೆ ‘ಅಣ್’ ಹತ್ತಿದ ದಿಗ್ವಾಚಕಗಳಲ್ಲಿ ವಿದ್ವಾಂಸರಿಂದ ಅ ಕಾರವು ಬರುತ್ತದೆ. ದಿಗ್ವಾಚಕಕ್ಕೆ ಅಣ್ ಪ್ರತ್ಯಯ ಬಾರದಿದ್ದರೆ ‘ದ’ ಕಾರಾಗಮವಾಗುತ್ತದೆ.

ಅ ಕಾರಕ್ಕೆ :
ಅತ್ತಣ್ + ಅ = ಅತ್ತಣ > ಅತ್ತಣಿಂ
ಇದೇ ರೀತಿ ಮೂಡಣಂ, ತೆಂಕಣಂ, ಬಡಗಣಂ ಇತ್ಯಾದಿ

ದ ಕಾರಕ್ಕೆ :
ಕೆಲ + ದ = ಕೆಲದ > ಕೆಲದಂ
ಅತ್ತಣನಿತ್ತಣಂ ಕೆಲದನಲ್ಲಿದ ನಿಲ್ಲಿದನೀಗಳೆಂಬಿನಂ |
ಮುತ್ತಿದನೊಂದೆ ತೇರೊಳಮರೇಂದ್ರ ಸುತಂ
ಕುರುವೃಂದ ಮೆಲ್ಲಮಂ ||

೧೨೨
ಏನ್, ಏತಱ್, ಎನಿಕುಂ
ಆದಿಯೊಳ್
ನೆಗೞ್ದ ಚತುರ್ಥಿಗೆ ಅಕ್ಕುಂ
ಏತರ್ಕೆ ಏಕೆ ಎಂಬೀನುಡಿ
ಏತಱ್ ಪ್ರಕೃತಿಯೆ
ತಾಂ ಅಕ್ಕುಂ;
ತತ್ ತೃತೀಯೆ
ಮೊದಲಾದುವಱೊಳ್

‘ಏನ್’ ಎಂಬ ಸರ್ವನಾಮವು ಪ್ರಥಮ ವಿಭಕ್ತಿಯಲ್ಲಿ ‘ಏನ್’ ಮತ್ತು ‘ಏತಱ್’ ಎಂದೂ ಚತುರ್ಥೀ ವಿಭಕ್ತಿಯಲ್ಲಿ ‘ಏತರ್ಕೆ’, ‘ಏಕೆ’ ಎಂದೂ ತೃತೀಯಾದಿ ವಿಭಕ್ತಿಗಳಲ್ಲಿ ‘ಏತಱ್’ ಎಂಬ ರೂಪವನ್ನು ಪಡೆಯುತ್ತದೆ.

ಪ್ರಥಮಗೆ :
ಏನ್, ಏತಱ
…. ಏ
ನಾಗಿಯೂಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ
ಮೇಣ್….
ಗತಿಯಂ ಪಡೆದೇತ ಱುತನೇ ಗತಿಯೆಂದಳ್…

ಚತುರ್ಥಿಗೆ :
ಏತರ್ಕೆ, ಏಕೆ
ಏತರ್ಕೆ ಮುಳಿಸೆಂದು ನೊಂದು ನುಡಿದಂ
ಏಕೆಂದಱೆಯೆಂ ದಶಧ
ರ್ಮಾಕಳಿತ ಕರಾಗ್ರನಾದನೆನಗಿದು ಚೋದ್ಯಂ ||

ತೃತೀಯಾದಿಗೆ :
ಏತಱೆಂ, ಏತರ್ಕೆ, ಏತಱತ್ತಣಿಂ, ಏತಱೊಳ್
ಏತಱಮಾತೊ ಭೂತಳದೊಳರ್ಥ ವಿಹೀನನ ಶೌಚಮಣ್ಮು….

೧೨೩
ಒದವುವುದು ಅದಂತ
ಪುಲ್ಲಿಂಗದೊಳ್,
ಗೆ ಎಂದು ಆದಿಬಿಂದುವಿಂ,
ದ್ವಿತ್ವಂ ಮೇಣ್ ಒದವುವುದು
ನಪುಂಸಕಲಿಂಗದೊಳ್,
ಚತುರ್ಥಿಗೆ ಅಕ್ಕುಂ
ಉೞಿದೆಡೆಗೆ ಎಲ್ಲಂ

ಚತುರ್ಥಿಗೆ ಅ ಕಾರಾಂತ ಪುಲ್ಲಿಂಗದಲ್ಲಿ (ಕೆ ಪ್ರತ್ಯಯಕ್ಕೆ ಪ್ರತಿಯಾಗಿ) ಆದಿ ಬಿಂದುವಿನೊಡನೆ ಗೆ ಪ್ರಾಪ್ತವಾಗುತ್ತದೆ. (ಅ ಕಾರಾಂತ) ನಪುಂಸಕಲಿಂಗದಲ್ಲಿ ವಿಕಲ್ಪದಿಂದ ದ್ವಿತ್ವ ಒದಗುತ್ತದೆ. ಮಿಕ್ಕೆಡೆಗೆ ಅಂದರೆ ಅ ಕಾರಾಂತವಲ್ಲದ ಸ್ವರ, ವ್ಯಂಜನಾಂತ ಪ್ರಕೃತಿಗಳಿಗೆ ಲಿಂಗ, ವಚನ ವ್ಯವಸ್ಥೆಯಿಲ್ಲದೆ ಗೆ ಪ್ರತ್ಯಯ ಉಂಟಾಗುತ್ತದೆ.

ಪುಲ್ಲಿಂಗಕ್ಕೆ :
ಅರಸಂ + ಗೆ = ಅರಸಂಗೆ
ಅರಸಂಗೆಮರ ಸಿಗಂ ಪುಟಿ ರಾಜಸುತೆನೆನಿಸಿ
ಹಂದೆಯುಂ ಲೋಭಿಯುಂ…

ನಪುಂಸಕಲಿಂಗ ವಿಕಲ್ಪ ದ್ವಿತ್ವಕ್ಕೆ :
ಬನ +  ಕೆ = ಬನಕೆ, ಬನಕ್ಕೆ

ಮಿಕೆಡೆಗೆ ಯ ಕಾರಕ್ಕೆ :
ಕವಿ + ಗೆ = ಕವಿಗೆ (ಪು)
ಆಕೆ + ಗೆ = ಆಕೆಗೆ (ಸ್ತ್ರೀ)
ತುನು + ಗೆ = ತನುಗೆ (ನ)
ಕವಿಗೆ ಕೇಡಿಲ್ಲವೆಂತುಂ
ಆಕೆಗೆ ಕಡಿಲೆಂದಾತಂ ನುಡಿದಂ
ತನುಗೆ ಭೂಷಣಂ ಪೊಱಮಲ್ತೆ
ನೀನ್ + ಗೆ = ನಿನಗೆ (ಏ, ವ)
ಕಿವಿಗಳ್ + ಗೆ = ಕಿವಿಗಳ್ಗೆ (ಬ, ವ)
ಕುರುಳ್ಗಳ್ + ಗೆ = ಕುರುಳ್ಗಳ್ಗೆ (ಬ,ವ)
ಆವುದು ಸಂಕಟಂ ನಿನಗೆ ನಿಲ್ಲಜ ನಿಲ್ಲಜ…
ಸೈತಿರು ಕಿವಿಗಳ್ಗೆ ಕರ್ಣಪೂರಮ ನಿಡುವೆಂ
ಅವಳ ಕುರುಳ್ಗಳ್ಗೆ ಮಾಲೆದುಂಬಿಗಳೆಣೆಯೇ.

೧೨೪
ಅಮರ್ದು, ಇರದು ತೃತೀಯತ್ವಂ
ಸಮಾಸದ ಭಾವಂ
ಆದ ತಾಣದೊಳ್ ಎಲ್ಲಂ
ಸಮಸಂದ ಚತುರ್ಥಿಗೆ
ಕಾವ್ಯಮಾರ್ಗದೊಳ್,
ಲಕ್ಷ್ಯಂಉಂಟು
ತಾಂ ತೆಱದಿಂ

ಸಮಾಸದ ಭಾವವುಳ್ಳ ಸ್ಥಾನಗಳಲ್ಲಿ ಚತುರ್ಥೀ ವಿಭಕ್ತಿಗೆ ತೃತೀಯಾ ವರ್ಣವುಂಟಾ ಗುವುದಿಲ್ಲ. ಕಾವ್ಯಮಾರ್ಗದಲ್ಲಿ ಈ ರೀತಿಯ ಪ್ರಯೋಗಗಳುಂಟು.

ಸಮಾಸವದ್ಬಾವಕ್ಕೆ :
ಅದಕ್ಕೆ (=ಅದಱ್ > ರ್+ಕೆ)
….ಶರೀರ ಭೋಗಮಂ
ತೊಱಿದನದರ್ಕವಂಗೆ ಕುಡಲಾಗದ
ನಲ್ಪನಿತಂಬಬಿಂಬೆಯಂ