೧೮೨
ಸುಡುಗಾಡು, ಇಡುಗಿರ್ಚು,
ಅಡುಗೂೞುಂ, ಉಡುಗೊಱೆಯುಂ,
ಮಾಱುದಾಂಟು, ಬಿಡುಗಣ್,
ಬಿಡುವಾಯ್, ತುಡುಜೊಡರ್,
ಅಱುಗೆಱೆ, ಎಂಬಿವು ಪಡೆಯವು
ಬಿಂದುವಂ
ದಂತ ವೃತ್ತಿಯಂ ಆಳ್ದುಂ

ಸುಡುಗಾಡು, ಇಡುಗಿರ್ಚು, ಆಡುಗೂೞ್, ಉಡುಗೊಱೆ, ಮಾಱುದಾಂಟು, ಬಿಡುಗಣ್, ಬಿಡುವಾಯ್, ತುಡುಜೊಡರ್, ಅಱುಗೆಱ ‑ಇವು ‘ಉ’ ಕಾರಾಂತ ವಾಗಿದ್ದರೂ ಬಿಂದುವನ್ನು ಪಡೆಯಲಾರವು.

೧೮೩
ಕೃತ್ತು ಇರದೆಯುಂ
ತ್ವ, ‘ತ್ವ, ಆಯತ್ತಂ
ಅನುಸ್ವಾರಂಸ್ವರದ
ಅತ್ವಂ
ಮತ್ತೆಕಾರಕ್ಕೆತ್ವಂ
ಪತ್ತ ಲೋಡಂ ಬಿಂದು ಬಂದು
ನೆಲೆ ಗೊಂಡು ಇರ್ಕುಂ

ಪೂರ್ವ ಪದಗಳು ಕೃತ್ತಾಗಿರದಿದ್ದರೂ ‘ಉ’ ಕಾರಾಂತ ‘ಅ’ ಕಾರಾಂತಗಳಿಗೆ ಬಿಂದು ಬರುತ್ತದೆ. ಪೂರ್ವ ಪದಗಳ ಅಂತ್ಯದಲ್ಲಿ ‘ನ’ ‘ಣ’ ವ್ಯಂಜನಗಳಿದ್ದಲ್ಲಿ ಅವುಗಳ ಮುಂದೆ ‘ಅ’ ಕಾರ ಸೇರಿ ನಂತರ ಬಿಂದು ಬರುತ್ತದೆ. ಪೂರ್ವ ಪದದ ಅಂತ್ಯದಲ್ಲಿ ‘ಳ’ ವ್ಯಂಜನವಿದ್ದರೆ ಅದರ ಮುಂದೆ ‘ಉ’ ಕಾರ ಬಂದು ನಂತರ ಬಿಂದು ನೆಲೆಗೊಳ್ಳುತ್ತದೆ.

‘ಉ’ ಕಾರಾಂತಕ್ಕೆ :
ತಾಱು + ಬಳೆ = ತಾಱುಂಬಳೆ
ತಾಱುಂಬಳೆ ಬಿೞ್ದಚಂಚುಬೆಮರಿಂ
ಕಡೆಗೆನ್ನೆಗೆ ಬಾನಲಾದ ಬೊಟ್ಟುಂ

‘ಅ’ ಕಾರಾಂತಕ್ಕೆ :
ಜಕ್ಕ + ತೊೞಲಿ = ಜಕ್ಕಂದೊೞಲಿ
….ಜವನೇಱಿದೊಂದು ಜ
ಕ್ಕಂದೊೞಲಂತೆ ಕಣ್ಗೆಸೆದುದೇಱಿ
ದಿಭಂ ಭುವನೈಕರಾಮನಾ ||

‘ನ’ ಕಾರಕ್ಕೆ :
ಮೀನ್ > ಮೀನ + ಪುಳ್ = ಮೀನಂಬುಳು
ಬಾಳ್ > ಬಾನ + ಕುಳಿಗೆ = ಬಾನಂಗುಳಿಗೆ

‘ಣ’ ಕಾರಕ್ಕೆ :
ಕಣ್ > ಕಣ್ಣ + ತೊೞಲಿ = ಕಣ್ಣಂದೊೞಲಿ

‘ಳ’ ಕಾರಕ್ಕೆ :
ಬೆಳ್ > ಬೆಳ್ಳು + ಬಟ್ಟೆ = ಬೆಳುಬಟ್ಟೆ

೧೮೪
ಪೆಡಂ ಎಂಬಾದೇಶಂ
ಬಂದು ಎಡೆಗೊಳ್ಗುಂ
ಪೆಱಗು ಎನಿಪ್ಪ
ಶಬ್ದದೊಳ್,
ಅದು ತಾಂ ಪಡೆಗುಂ ಬಿಂದುವಂ,
ಅರೆಬರ್ ತಡಗಾಲ್ ಎಂಬಂತೆ
ಬಿಂದುವುಮಂ ಆಚರಿಪರ್

ಪೂರ್ವಪದಲ್ಲಿರುವ ‘ಪೆಱಗು’ ಎಂಬ ಶಬ್ಧ ಸಮಾಸವಾಗುವಾಗ ‘ಪೆಡ’ ಆದೇಶವಾಗುತ್ತದೆ. ಆಗ ಅದರ ಮುಂದೆ ಬಿಂದು ನೆಲೆಗೊಳ್ಳುತ್ತದೆ. ‘ತಡಗಾಲ್’ ಎಂಬ ಪದದಂತೆ ಇದನ್ನು ಕೂಡ ಕೆಲವರು ಬಿಂದು ರಹಿತವಾಗಿ ಪ್ರಯೋಗಿಸುವರು.

ಪೆಡಮಾದೇಶಕ್ಕೆ :
ಪೆಱಗು > ಪೆಡ + ಮೆಟ್ಟು = ಪೆಡಂಮೆಟ್ಟು
ಪೆಡಂಮೆಟ್ಟದೆ ಸೂೞಿಱೆದುದೇಱಿದಿಭಂ
ಭುವನೈಕ ರಾಮನಾ
ಪೆಱಗು > ಪೆಡ + ಕೈ = ಪೆಡಂಗಯ್
ಪೆಱಗು > ಪೆಡ + ತಲೆ = ಪೆಡಂದಲೆ

ಅಬಿಂದುವಿಗೆ (ಬಿಂದು ರಹಿತ) :
ಪೆಱಗು > ಪೆಡ + ಮೆಟ್ಟು = ಪೆಡಮೆಟ್ಟು
ಪೆಡಮೆಟ್ಟಿಂ ಬರ್ಪ ದುರ‍್ಯೋಧನನಿಭಘಟೆ
ಯಂ….
ಪೆಱಗು > ಪೆಡ + ಕೈ = ಪೆಡಗಯ್
ಪೆಱಗು > ಪೆಡ + ತಲೆ = ಪೆಡದಲೆ

೧೮೫
ಪದವಿಧಿ ಕನ್ನಡಕಂ
ಸಕ್ಕದಕ್ಕಂ ಇಲ್ಲ
ಆದ್ಯರಿಂದೆ ಸಂದುವಂ
ಅಱೆದು ಇರ್ಪುದು,
ಬಿರುದಾವಳಿಯೊಳ್ ಪೇೞ್ವುದು
ಪೆಱವಱೊಳ್ ಆಗದು
ಇದು ವಿರುದ್ಧ ಸಮಾಸಂ

ಕನ್ನಡ ಪದಗಳು ಹಾಗೂ ಸಂಸ್ಕೃತ ಪದಗಳು ಸೇರಿ ಸಮಾಸವಾಗುವುದಿಲ್ಲ. ಪೂರ್ವ ಕವಿಗಳು ಪ್ರಯೋಗಿಸಿರುವ ಇಂತಹ ಸಮಾಸಗಳನ್ನು ಒಪ್ಪಿಕೊಳ್ಳಬೇಕು. ಬಿರುದಾವಳಿಗಳಲ್ಲಿ ಅರಿಸಮಾಸ ದೋಷವಿಲ್ಲ. ಉಳಿದೆಡೆಗಳಲ್ಲಿ ಇಂತಹ ಸಮಾಸ ಮಾಡಕೂಡದು. ಅದು ಅರಿ ಸಮಾಸವೆನಿಸುವುದು.

ಅರಿಸಮಾಸಕ್ಕೆ :
ಅರಸು + ಕುಮಾರಂ = ಅರಸುಕುಮಾರಂ
ಕೆಳದಿ + ಸಮೇತಂ = ಕೆಳದಿಸಮೇತಂ

ಶಿಷ್ಟ ಪ್ರಯೋಗಕ್ಕೆ :
ಕೂರ್ + ಅಸಿ = ಕೂರಸಿ
ಕಡು + ರಾಗಂ = ಕಡುರಾಗಂ

ಬಿರುದಿಗೆ :
ಅಂಕ + ತ್ರಿಣೇತ್ರಂ = ಅಂಕತ್ರಿಣೇತ್ರಂ

೧೮೬
ಸವನಿಸುವುದು ಎಲ್ಲಶಬ್ಧಕ್ಕೆ
ವಿಕಲ್ಪದೆ ದೀರ್ಘವಿಧಿ,
ಮಹತ್ ಶಬ್ಧಕ್ಕೆ ಉದ್ಭವಿಕುಂ
ಮಾ ಆದೇಶಂ,
ದೋಷ ಇಲ್ಲ ಸಂಸ್ಕೃತ ಪದಂ
ಪರಕ್ಕೆ ಒದವಲೊಡಂ

ಪೂರ್ವ ಪದದಲ್ಲಿ ‘ಎಲ್ಲ’ಶಬ್ದವಿದ್ದು, ಸಮಾಸವಾಗುವಾಗ ಅದಕ್ಕೆ ವಿಕಲ್ಪವಾಗಿ ದೀರ್ಘ ಉಂಟಾಗುತ್ತದೆ. ‘ಮಹತ್’  ಶಬ್ದ ಪೂರ್ವಪದವಾದಗ ‘ಮಾ’ ಆದೇಶವಾಗುತ್ತದೆ ಅವುಗಳ ಮುಂದೆ ಸಂಸ್ಕೃತ ಪದ ಬಂದರೂ ಅರಿಸಮಾಸ ದೋಷವಿಲ್ಲ.

 

ದೀರ್ಘ ವಿಕಲ್ಪಕ್ಕೆ :
ಎಲ್ಲ ಕಾರ್ಯಂ ‑ ಎಲ್ಲಾ ಕಾರ್ಯಂ
ಎಲ್ಲರತ್ನಂ ‑ ಎಲ್ಲಾರತ್ನಂ
ಎಲ್ಲ ಪುರುಷರ್ ‑ ಎಲ್ಲಾಪುರುಷರ್

ಮಹತ್ ಶಬ್ಧಕ್ಕೆ :
ಮಹತ್ > ಮಹಾ > ಮಾ + ದಾನಿ = ಮಾದಾನಿ
ಮಾದಾನಿ ಶೌರ್ಯಧನನುದಿ
ತೋದಿತಪುಣ್ಯ…
ಮಹತ್ > ಮಹಾ > ಮಾ + ದೇವ = ಮಾದೇವ

ಕನ್ನಡಕ್ಕೆ :
ಮಹತ್ > ಮಹಾ > ಮಾ + ನಾಮಿ = ಮಾನಾಮಿ
ಮಾನಾಮಿಯ ಸಾಣೆಯಾಯ್ತು ತನು ಧವಳುಕವಾ
ಮಹತ್ > ಮಹಾ > ಮಾ + ಲಕುಮಿ = ಮಾಲಕುಮಿ

೧೮೭
ನೆಲೆಗೊಳ್ಗುಂ ಪೂರ್ವಪದಂ
ಅಂತ್ಯ ಲೋಪಂ;
ಅದು ಬಹುಳದಿಂದೆ
ತತ್ಪುರುಷಕ್ಕೆ ಅಗ್ಗಲಿಪ್ಪುದು
ಉಚಿತ ಅಕ್ಷರ ಆಗಮಂ,
ಒಲೆಗುಂ ಕೆಳಗಣ್ಗೆ
ಕಿೞು, ಕಿನ್, ಎಂಬಾದೇಶಂ

ತತ್ಪುರುಷ ಸಮಾಸದಲ್ಲಿ ಪೂರ್ವಪದದ ಅಂತ್ಯಾಕ್ಷರಕ್ಕೆ ಲೋಪವಾಗುವುದು. ಕೆಲವು ಸಲ ಅಂತ್ಯಾಕ್ಷರ ಲೋಪದೊಂದಿಗೆ ಉಚಿತಾಕ್ಷರ ಆಗಮವೂ ಆಗುತ್ತದೆ. ‘ಕೆಳಗು’ ಎಂಬುದಕ್ಕೆ ‘ಕಿೞ್’ ಎಂದು ‘ಕಿನ್’ ಎಂದು ಆದೇಶವಾಗುತ್ತದೆ.

ಪದಾಂತ್ಯ ಲೋಪಕ್ಕೆ :
ತೆಂಕಣ > ತೆಂಕ + ಗಾಳಿ = ತೆಂಗಾಳಿ
ತೆಂಗಾಳಿ ಭೃಂಗಾಳಿ
ಪುಂ ಸ್ಕೋಕಿಲನಾದಂ ವೇದನಾದಂ
ಅರಸನ + ಮನೆ = ಅರಮನೆ

ಉಚಿತಾಕ್ಷರ ಆಗಮನಕ್ಕೆ :
ಕಂಪಿನ > ಕಮ್ಮಂ + ಕಣೆ = ಕಮ್ಮಂಗಣೆ
ಕಮ್ಮಂಗಣೆಯಿಂದೆಚ್ಚಪ |
ನಿಮ್ಮಾವಿನ ಪೊದಱೊಳಿರ್ದುವಿರಹಿವ್ರಜಮಂ ||

ಕಿೞಾಆದೇಶಕ್ಕೆ :
ಕೆಳಗು > ಕಿೞ್ + ಕೊಂಬು = ಕಿೞ್ಕೊಂಬು

ಕಿನ್ ಆದೇಶಕ್ಕೆ :
ಕೆಳಗು > ಕಿನ್ + ನೆಲ = ಕಿನ್ನೆಲಂ
ಕೆಳಗು > ಕಿನ್ + ನೀರ್ = ಕಿನ್ನೀರ್

೧೮೮
ಅಕ್ಕುಂ ಪದಾಂತ್ಯ ಲೋಪಂ,
ತಕ್ಕಂತಿರೆ ಕರ್ಮಧಾರೆಯಕ್ಕಂ,
ದ್ವಿಗುಗಂ,
ಮಿಕ್ ದ್ವಂದಕ್ಕಂ,
ಮೇಲ್ ಅಕ್ಕರಿಗರಿಂ
ಕ್ರಿಯಾಸಮಾಸೋಪೇತಂ

ಕರ್ಮಧಾರೆ, ದ್ವಿಗು, ದ್ವಂದ್ವ ಹಾಗೂ ಕ್ರಿಯಾಸಮಾಸದಲ್ಲಿ ಕೆಲವು ಸಾರಿ ಪೂರ್ವ ಪದಗಳ ಅಂತ್ಯಾಕ್ಷರಕ್ಕೆ ಲೋಪವಾಗುವುದುಂಟು.

ಕರ್ಮಧಾರೆಯಕ್ಕೆ :
ಬಡವು + ನಡು = ಬಡನಡು
ಅರಸು + ನೇಱಲ್ = ಅರನೇಱಲ್

ದ್ವಿಗುವಿಗೆ : ಪಲವು + ಕಣ್ = ಪಲಗಣ್
ಪಾದರಿಗಂ ಪಲಗಣ್ಣನ ದೇವನೀವಂ
ಪಲವು + ದೆವಸಂ = ಪಲದೇವಸಂ

ದ್ವಂದ್ವಕ್ಕೆ :
ತಮ್ಮ + ತಮ್ಮ ರಾಜ್ಯಂ > ತಂತಮ್ಮರಾಜ್ಯಂ
ತಂತಮ್ಮ ರಾಜ ಚಿಹ್ನಂ
ತಂತಮ್ಮ ಮಹಾವಿಭೂತಿ ತಂತಮ್ಮ ಬಲಂ

ಕ್ರಿಯಾಸಮಾಸಕ್ಕೆ :
ಪೋಗು + ತಂದಂ =ಪೋತಂದಂ
ಎಯ್ತು + ತಂದಂ = ಎಯ್ತಂದಂ

೧೮೯
ದೊರೆ ಕೊಳ್ಳುದು
ಅತ್ವ ವಿಧಿಯಂ
ಅಂತರಾಳದೊಳ್
ಬಹುಳವಾಗಿ, ಮಧ್ಯ ಪದಕ್ಕುಂ
ದೊರೆಕೊಳ್ವುದು ಅದರ್ಶನವಿಧಿ
ವಿರಳತೆಯಿಂ
ಕರ್ಮಧಾರೆಯಕ್ಕೆ ಅಱೆವವರಿಂ

ಕರ್ಮಧಾರೆಯ ಸಮಾಸದಲ್ಲಿ ಪೂರ್ವ ಪದದ ಮಧ್ಯದಲ್ಲಿ ವಿಕಲ್ಪವಾಗಿ ಅತ್ವವಿಧಿ ಉಂಟಾಗುತ್ತದೆ. ವಿಕಲ್ಪವಾಗಿ ಪದ ಮಧ್ಯವು ಲೋಪವಾಗುತ್ತದೆ.

ಅತ್ವಕ್ಕೆ :
ಬೆಟ್ಟಿತ್ತು > ಬೆಟ್ಟ + ಬೇಸಗೆ = ಬೆಟ್ಟವೇಸಗೆ
…ಬೆಟ್ಟವೇ ಸಗೆಯ ಬಿಸಿಲ್ಗೆ ತೀಡಿದುದು
ತಣ್ಣನೆ ಪಣ್ಣನೆ ಪಶ್ಚಿಮಾ ನಿಲಂ |

ಮಧ್ಯಪದ ಲೋಪಕ್ಕೆ :
ಅಲರ್ + ಅಂತಪ್ಪ + ಕಣ್ = ಅಲರ್ಗಣ್

೧೯೦
ಮುಂದಣ ಪದಂ
ವಿಶೇಷ್ಯದೊಳ್ ಒಂದಿರೆ,
ಪಿಂದೆ ಇರ್ದ ಪದದ
ಉಪಾಂತ್ಯ ಸ್ವರದಿಂ
ಸಂಧಿಪುದು ಲೋಪಂ,
ಆದಿಯೊಳ್ ಒಂದ ಕಾರಕ್ಕೆ
ಕಾರ ವಿಧಿ ಬಹುಳತೆಯಿಂ

ಕರ್ಮಧಾರೆಯದಲ್ಲಿ ಉತ್ತರ ಪದವು ವಿಶೇಷ್ಯವಾಗಿದ್ದರೆ ಪೂರ್ವ ಪದದ ಉಪಾಂತ್ಯ ಸ್ವರವು ಲೋಪವಾಗುತ್ತದೆ. ಆಗ ಪೂರ್ವಪದದ ಆದಿಯ ‘ಇ’ ಕಾರಕ್ಕೆ ವಿಕಲ್ಪವಾಗಿ ‘ಎ’ ಕಾರಾದೇಶವಾಗುತ್ತದೆ.

ಉ ಪಾಂತ್ಯಸ್ವರ ಲೋಪಕ್ಕೆ :
ತೆಳ್ಳಿತ್ತು + ಬಸಿಱ್ = ತೆಳ್ವಸಿಱ್
ಒಳ್ಳಿತ್ತು + ನುಡಿ = ಒಳ್ನುಡಿ
ಮೆಲ್ಲಿತ್ತು + ಅಡಿ = ಮೆಲ್ಲಡಿ

ಆದಿಯ ಎತ್ವಕ್ಕೆ :
ಪಿರಿದು + ಮೊಲೆ = ಪೆರ್ಮೊಲೆ
ಪಿರಿದು + ಮರಂ = ಪೆರ್ಮರಂ
ಪಿರಿದು + ಮಾತು = ಪೆರ್ಮಾತು

ವಿಕಲ್ಪಕ್ಕೆ :
ಬಿಣ್ಣಿತು + ಕೊನೆ = ಬಿಣ್ಗೊನೆ
ಇನಿದು + ಮಾವು = ಇಮ್ಮಾವು

೧೯೧
ಅಗುರು ಪದಾದಿಗೆ
ದೀರ್ಘಂ ನೆಗೞ್ಗುಂ,
ಮತ್ತೆ ಅಲ್ಲಿ ಬಂದು
, , , , ತಂಗಳ್
ಪುಗೆ ಪೆಱತೇಂ
ದ್ವಿರ್ಭಾವಂ ನೆಗೞ್ಗುಂ,
ಸ್ವರಂ ಇದಿರೊಳ್
ಒದವೆ ಬಹುಳತೆಯಿಂದಂ

ಪರಪದದ ಆದಿಯಲ್ಲಿ ಸ್ವರವಿದ್ದರೆ, ಪೂರ್ವಪದದ ಆದಿಯ ಹ್ರಸ್ವಕ್ಕೆ ವಿಕಲ್ಪದಿಂದ ದೀರ್ಘ ಉಂಟಾಗುತ್ತದೆ. ಪೂರ್ವ ಪದದ ಅಂತ್ಯದಲ್ಲಿ ಣ,ಟ,ಳ,ನ,ತ ಕಾರಗಳಿದ್ದು ಸಮಾಸವಾಗುವಲ್ಲಿ ಪೂರ್ವ ಪದಾಂತ್ಯಗಳಾದ ಈ ವ್ಯಂಜನಗಳಿಗೆ ದ್ವಿತ್ವ ಉಂಟಾಗುತ್ತದೆ.

ಆದಿ ದೀರ್ಘಕ್ಕೆ :
ಪಿರಿದು > ಪೇರ್ + ಆನೆ = ಪೇರಾನೆ
ಪಿರಿದು > ಪೆಲ್ + ಅಡವಿ = ಪೇರಡವಿ
ಎರಡು > ಇರ್ + ಐದು = ಈರೈದು

ವಿಕಲ್ಪಕ್ಕೆ :
ಇನಿದು + ಈಂ + ಕಡಲ್ = ಈಂಗಡಲ್
ಈಂಗಡಲೊಳ್ಪುವೆತ್ತ ಪಸೆ ಕನ್ನಡಿ ಚಂದ್ರಮಂ…

ದ್ವಿತ್ವಕ್ಕೆ ಣಕಾರ :
ಪೆಣ್ + ಉಡೆ = ಪೆಣ್ಣುಡೆ
ತಣಿತ್ತು > ತಣ್ + ಎಲರ್ = ತಣ್ಣೆಲರ್

ಟ ಕಾರ ದ್ವಿತ್ವಕ್ಕೆ :
ಕಡಿದು > ಕಟ್ + ಆಯಂ = ಕಟ್ಟಾಯಂ
ನಿಡಿದು > ನಿಟ್ + ಎಸಳ್ = ನಿಟ್ಟೆಸಳ್

ಳ ಕಾರ ದ್ವಿತ್ವಕ್ಕೆ :
ಬೆಳ್ಳಿತ್ತು > ಬೆಳ್ + ಆನೆ = ಬೆಳ್ಳಾನೆ
ಅಳ್ಳಿತು > ಅಳ್ + ಏಱು = ಅಳ್ಳೇಱು
ಒಳ್ಳಿತ್ತು > ಒಳ್ + ಆಳ್ = ಒಳ್ಳಾಳ್

ತ ಕಾರ ದ್ವಿತ್ವಕ್ಕೆ :
ಕಿಱಿದು > ಕಿತ್ + ಅಡಿ = ಕಿತ್ತಡಿ
ಕಿಱಿದು > ಕಿತ್ + ಈಳೆ = ಕಿತ್ತೀಳೆ

ನ ಕಾರ ದ್ವಿತ್ವಕ್ಕೆ :
ಇನಿದು > ಇನ್ + ಉಣಿಸು = ಇನ್ನುಣಿಸು

ಬಹುಳದಿಂ ವ್ಯಂಜನ ಪರಮಾಗಲ್ಲಿ ದೀರ್ಘಕ್ಕೆ :
ಇನಿದು + ಸರಂ = ಈಂಚರಂ
ಇನಿದು + ಪುಳಿ = ಈಂಬುಳಿ

೧೯೨
ಕಡಿದು, ನಿಡಿದು, ನಡು, ಎಂಬ
ಡಕಾರಂ, ಟತ್ವಂ ಆಯ್ತು;
ಕಿಱಿದು ಎಂದರ್ಕೆ
ಕುಱು, ಎಂಬೆಡೆಯಲ್ಲಿ
ತಕಾರಂ ಸ್ವರಂ ಅಡಸೆ
ಪರಕ್ಕೆತ್ವಂ,
ಸ್ವರಂ ನಿಲೆ ಪರದೊಳ್

ಕಡಿದು, ನಿಡಿದು, ನಡು ಎಂಬಿವು ಪೂರ್ವ ಪದಗಳಾಗಿದ್ದು ಪರಪದದ ಆದಿಯಲ್ಲಿ ಸ್ವರ ವಿದ್ದಾಗ, ಪೂರ್ವ ಪದಗಳ ‘ಡ’ ಕಾರಕ್ಕೆ ‘ಟ’ ಕಾರಾದೇಶವಾಗುತ್ತದೆ. ‘ಕಿಱದು’ ಪದ ಪೂರ್ವ ಪದವಾಗಿದ್ದಾಗ ಅದಕ್ಕೆ ಆದೇಶವಾಗಿ ಬರುವ ‘ಕುಱ’ ಎಂಬುದರ ಅಂತ್ಯಾಕ್ಷರಕ್ಕೆ ‘ತ್’ ವ್ಯಂಜನ ಆದೇಶವಾಗುತ್ತದೆ. (ಕಿಱಿದು>ಕುಱ್>ಕುತ್) ಮೇಲ್ಕಾಣಿಸಿದ ಪದಗಳ ಮುಂದೆ ವ್ಯಂಜನ ಪರವಾದಾಗ ಪೂರ್ವಪದದ ಅಂತ್ಯದಲ್ಲಿ ‘ಉ’ ಕಾರ ಬರುತ್ತದೆ.

ಟ ಕಾರಕ್ಕೆ :
ಕಡಿದು > ಕಟ್ + ಆಳ್ = ಕಟ್ಟಾಳ್
ನಿಡಿದು > ನಿಟ್ + ಇರ್ಕೆ = ನಿಟ್ಟೆರ್ಕೆ
ನಡು > ನಟ್ + ಅಡವಿ = ನಟ್ಟಡವಿ

ತ ಕಾರಕ್ಕೆ :
ಕಿಱಿದು > ಕಿತ್ + ಅಡಿ = ಕಿತ್ತಡಿ
ಕುಱು > ಕುತ್ + ಅಡಿ = ಕುತ್ತಡಿ

ಉ ಕಾರಕ್ಕೆ :
ಕಡಿದು > ಕಡ್ + ಉ + ಗಾಳಿ = ಕಡುಗಾಳಿ
ನಿಡಿದು > ನಿಡ್ + ಉ + ತೋಳ್ = ನಿಡುದೋಳ್
ಕಿಱಿದು > ಕಿಱು + ಕೂಸು = ಕಿಱುಗೂಸು
ಕಿಱಿದು > ಕುಱು + ಗಿಡು = ಕುಱುಗಿಡು