೧೯೩
ಜನಿಯಿಸುಗುಂ ಪಚ್ಚನೆ, ಕೆಚ್ಚನೆ,
ಬೆಚ್ಚನೆಗಳ,
ಚಕಾರದೊಳ್ ಮತ್ವಂ,
ಕೆಚ್ಚನೆ ಆದಿಗೆ ಚತ್ವಂ
ಮೇಣ್ ಅನಿತಱ ಮತ್ವಂ,
ಸುಕಾರಂ ಎತ್ವಕ್ಕೆ ಇತ್ವಂ

ಪಚ್ಚನೆ, ಕೆಚ್ಚನೆ, ಬೆಚ್ಚನೆ ಎಂಬ ಪದಗಳು ಪೂರ್ವಪದಗಳಾಗಿದ್ದು ಅವುಗಳ ಮುಂದೆ ವ್ಯಂಜನ ಪರವಾಗಲು ಪೂರ್ವ ಪದದ ‘ಚ’ ಕಾರಕ್ಕೆ ‘ಮ’ ಕಾರಾದೇಶ ವಾಗುತ್ತದೆ. ಕೆಚ್ಚನೆ ಪದದ ಆದಿ ‘ಕೆ’ ಕಾರಕ್ಕೆ ‘ಚೆ’ ಕಾರ ಆದೇಶ ವಾಗುತ್ತದೆ. ಈ ಎಲ್ಲ ಪದಗಳ ಅಂತ್ಯ ‘ಮ’ ಕಾರಕ್ಕೆ ‘ಸು’ ಕಾರಾದೇಶವಾಗಿ ಆದಿಯ ‘ಎ’ ಕಾರಕ್ಕೆ ‘ಇ’ ಕಾರ ಉಂಟಾಗುತ್ತದೆ.

ಮ ಕಾರಕ್ಕೆ :
ಪಚ್ಚನೆ > ಪಮ್ + ತಳಿರ್ = ಪಂದಳಿರ್
ಪಂದಳಿರ ತೋರಣಂ ತ
ಳ್ತೊಂದಿದ ಕೆಂಗುಡಿಯ
ಕೆಚ್ಚನೆ > ಕೆಮ್ + ಬಟ್ಟೆ = ಕೆಂಬಟ್ಟೆ
…ಕೆಂ
ಬಟ್ಟೆಯ ತಲೆಕಟ್ಟು ಪಾಱುವು
ರುವುರುಳಿಗಳಂ
ಬೆಚ್ಚನೆ > ಬೆಮ್ + ನೀರ್ = ಬೆನ್ನೀರ್
ಎನಿತುಂ ಕಾಯ್ದುಂ ಬೆನ್ನೀರ್ ಮನೆಸುಡು
ದೆಂಬಂತೆ ನಿನಗವರ್
ನಿಲೆ ಕಾಯ್ದುಂ

ಚ ಕಾರಕ್ಕೆ :
ಕೆಚ್ಚನೆ > ಚೆಮ್ + ನೆಯ್ದಿಲ್ = ಚೆನ್ನೆಯ್ದಿಲ್
ಅಲರ್ದಬೋರುಹಷಂ ಡಮುಳ್ಳಲರ್ದ
ಬೆನ್ನೆಯ್ದಿಲ್ಗೊಳಂ…
ಕೆಚ್ಚನೆ > ಚೆಮ್ + ತೆಂಗು = ಚೆಂದೆಂಗು
ಕೆಚ್ಚನೆ > ಚೆಮ್ + ದುಟಿ = ಚೆಂದುಟಿ

ಆದಿಮ ಇ ಕಾರ, ಅಂತ್ಯ ಸು ಕಾರಕ್ಕೆ :
ಕೆಚ್ಚನೆ > ಕಿಸು + ಸಂಜೆ = ಕಿಸುಸಂಜೆ
ಪೋಲ್ತಂ ಕಿಸುಸಂಜೆ ಕವಿದ ನೀಲಾಚಲಮಂ
ಬೆಚ್ಚನೆ > ಬಿಸು + ನೆತ್ತರ್ = ಬಿಸುನೆತ್ತರ್
ಬಿಸುನೆತ್ತರ್ ಧಾರೆಗೆ ಬಾಯನೊಡಿ ಮೆಯ್ನೆಣದೆ
ಪಚ್ಚನೆ > ಪಸು + ಗಱ = ಪಸುಂಗಱ

ಇಲ್ಲಿ ಸುಕಾರವುಂಟಾಗಿಯೂ ಆದಿಯಲ್ಲಿ ಅಕಾರವಿರುವುದರಿಂದ ಇಕಾರವಾಗಿಲ್ಲ.

೧೯೪
ಪದದ ಕಡೆಯಣ ಡಕಾರಕ್ಕೆ
ಉದಯಿಪುದು ಕಾರಂ
ಱಕಾರಕ್ಕೆ ಒದವಿರ್ಪುದು
ರೇಫಂ;
ವ್ಯಂಜನ ಪದ ಇದಿರೊಳ್
ಸಂಧಿಸೆ ಸಮಾಸದೊಳ್
ಬಹುಳತೆಯಿಂ

ಈ ಸೂತ್ರದಲ್ಲಿ ಪೂರ್ವ ಪದದಲ್ಲಿ ಯಾವ ಯಾವ ಬದಲಾವಣೆಗಳಾಗುತ್ತವೆ ಎಂಬುದನ್ನು ಹೇಳವಾಗಿದೆ. ಸಮಾಸದಲ್ಲಿ ವಿಕಲ್ಪವಾಗಿ (ಅ ಸಮಾಸದಲ್ಲಿ) ಪೂರ್ವ ಪದದ ಅಂತ್ಯದ ‘ಡ’ ಕಾರಕ್ಕೆ ಸಮಾಸದಲ್ಲಿ ‘ೞ’ ಕಾರವಾಗುತ್ತದೆ. ‘ಱ’ ಕಾರಕ್ಕೆ ರೇಫೆ ಉಂಟಾಗುತ್ತದೆ.

ಸಮಾಸದಲ್ಲಿ ೞ ಕಾರಕ್ಕೆ :
ಎರಡು > ಎರೞ್ + ಮಾತು = ಎರೞ್ಮಾತು
ಎರೞ್ಮಾತಾಡಿ ಬೞ್ದುಂ ಜಗ
ದ್ವಳಯಕ್ಕೊರ್ನುಡಿಕಾಱನಾದನ್…
ಎರಡು > ಎರೞ್ + ಮಾರು = ಎರೞ್ಮಾಱು
ಕಾಡು > ಕಾೞ್ + ಕಿರ್ಚು = ಕಾೞರ್ಚು

ಸಮಾಸದಲ್ಲಿ ರೇಫಕ್ಕೆ :
ಏಱ್ > ಎರ್ + ಪೆತ್ತರ್ = ಏರ್ಪೆತ್ತರ್
…ಏರ್ಪೆತ್ತರೇರ್ಪೆತ್ತರ್
ಪದುಳಂಮಾೞ್ಪುದು ಚಿತ್ರಮೆಂದು…
ಕೆಸಱು + ಮಲ್ಲಿಗೆ = ಕೆಸರ್‌ಮಲ್ಲಿಗೆ

ಅಸಮಾಸದಲ್ಲಿ ೞಕಾರಕ್ಕೆ :
ಬೆಡಗು > ಬೆಗೞು + ಪ = ಬೆಗೞ್ಪ
ನಿನ್ನ ಬೆಗೞ್ೞ ಭಂಗಿಕರಮುಕ್ಕೆ ವಮಾಗಿ ಮನಕ್ಕೆ ತೋಱುಗುಂ

ಅಸಮಾಸದಲ್ಲಿ ರೇಫ ಕಾರಕ್ಕೆ :
ನೇಸಱ್ + ಮೂಡಿದುದು = ನೇಸರ್ಮೂಡಿದುದು
…ನೇಸಱು
ಮೂಡಿದುದು ಬಕಂಗೆ ಮಿೞ್ತು ಮೂಡುವ ತೆಱದಿಂ

೧೯೫
ಕಿಱಿದು ಅರ್ಕೆ, ಆದೇಶಂ ಕುಱು,
ಬಿಱು, ಎಂಬಿದು ಬೆಟ್ಟಿತರ್ಕೆ,
ಕೊಂಕಿಂಗೆ, ಕುಡೆಂ,
ದಱಿ; ರೇಫೆ ತಳ್ತವರ್ಣಕ್ಕೆ
ಎಱಗಿರ್ಕುಂ
ದ್ವಿತ್ವ ವೃತ್ತಿ
ಅಸಮಾಸದೊಳಂ

ಕಿಱಿದು, ಬೆಟ್ಟಿತು, ಕೊಂಕು ಎಂಬ ಪದಗಳು ಪೂರ್ವ ಪದಗಳಾಗಿದ್ದು ಸಮಾಸವಾಗುವಾಗ ಅವುಗಳಿಗೆ ಕ್ರಮವಾಗಿ ಕುಱು, ಬಿಱು, ಕುಡು ಎಂಬಿವುಗಳು  ಆದೇಶಗಳಾಗುತ್ತವೆ. ರೇಫಯುಕ್ತವಾದ ಅಕ್ಷರಕ್ಕೆ ಸಮಾಸ ಮತ್ತು ಅಸಮಾಸದಲ್ಲಿ ದ್ವಿತ್ವವುಂಟಾಗುತ್ತದೆ.

ಕುಱು ಎಂಬುದಕ್ಕೆ :
ಕಿಱಿದು > ಕುಱು + ಕಯ್ = ಕುಱುಗಯ್
ಅಚ್ಚಡಕಿಲ್ ಕುಱುಗಯ್ ಮಡಂ ಮೊಗಂ
ಕಿಱದು > ಕುಱು + ತಱ = ಕುಱುದಱ

ಬಿಱು ಎಂಬುದಕ್ಕೆ :
ಬೆಟ್ಟಿತು > ಬಿಱು + ಗಾಳಿ = ಬೀಱುಗಾಳಿ
ಸುವಬಿಱುಗಾಳಿ ಕೊಳ್ವ ಮೞಿ ಪೊಯ್ವ
ಸಿಡಿಲ್ ಛಿಳಿಯೆಂಬ ಮಿಂಚು
ಬೆಟ್ಟಿತು > ಬಿಱು + ವಡಿ = ಬಿಱುವಡಿ

ಕುಡು ಎಂಬುದಕ್ಕೆ :
ಕೊಂಕು > ಕುಡು + ಮಿಂಚು = ಕುಡುಮಿಂಚು
ಕುಡುಮಿಂಚಂ ಮಸೆದನ್ನರಪ್ಪ ಪಲರೊಳ್ವೆಂಡಿರ್
ಕೊಂಕು > ಕುಡು + ಕೋಲ್ = ಕುಡುಗೋಲ್

ಸಮಾಸದಲ್ಲಿ ರೇಫೆಗೆ ದ್ವಿತ್ವ :
ಕಾರ್ಗ್ಗಾಲ್
ಕಾರ್ಗ್ಗಾಲದ ಮಿಂಚಿನಂತೆ ಪೊಳೆದುವು ಬಾಳ್ಗಳ್

ಅ ಸಮಾಸದಲ್ಲಿ ರೇಫಯುಕ್ತಾಕ್ಷರ ದ್ವಿತ್ವಕ್ಕೆ :
ನೀರ್ತ್ತೀಳಿದುದು
ಬೆಳಗಿದುವೆಂಟುಂದೆಸೆನೀರ್ತ್ತಿಳಿದುದು

೧೯೬
ಇತರೇತಱ ಕ್ರಿಯಾ ಸಂಹತಂ
ಅದು ತಾಂ, ಆವುದು ಅಲ್ಲಿ
ಮತ್ತೆ ಬಹುವ್ರೀಹಿ ತಗುಳ್ಗುಂ,
ಆತ್ವ ವಿಧಿ ಸಂಗಂತಂ
ಆದಿ ಪದಾಂತ್ಯದಲ್ಲಿ,
ಚರಮಕ್ಕೆ ಇತ್ವಂ

ಪರಸ್ಪರ ಕ್ರಿಯೆಗಳಿಂದ ಮಾಡುವ ಯುದ್ಧದ ವಿಷಯದಲ್ಲಿ ಬಹುವ್ರೀಹಿ ಬರುತ್ತದೆ. ಇಲ್ಲಿ ಒಂದೇ ಪದವು ಎರಡು ಸಲ ಬರುತ್ತಿದ್ದು, ಆಗ ಪೂರ್ವ ಪದದ ಕೊನೆಯ ಅಕ್ಷರಕ್ಕೆ ‘ಅ’ ಕಾರವೂ ಉತ್ತರ ಪದದ ಕೊನೆಯ ಅಕ್ಷರಕ್ಕೆ ‘ಇ’ ಕಾರವು ಉಂಟಾಗುತ್ತದೆ.

ಖಡ್ಗದಿಂ ಖಡ್ಗದಿಂ ಮಾಡುವ ಯುದ್ಧಂ = ಖಡ್ಗಾಖಡ್ಗಿ
ಮುಷ್ಟಿಯಿಂ ಮುಷ್ಟಿಯಿಂ ಮಾಡುವ ಯುದ್ಧಂ = ಮುಷ್ಟಾಮುಷ್ಟಿ

೧೯೭
ಅಡಸುವುದು
ಬಹುವ್ರೀಹಿಯ ಕಡೆಗೆ
ಅತ್ವಂ ಬಹುಳಂ ಅಗ್ರಂ,
ಇಲ್ ಎಂದು ಇರೆ ತಾಂ
ಕಡೆಗೆ ಅಕ್ಕುಂ ಲಿತ್ವಂ,
ಕೊಲ್ ಎಂಬೆಡೆಯೊಳ್
ಕುಲಿ ಎಂಬುದು ಅಕ್ಕುಂ
ಅಂತ್ಯಾದೇಶಂ

ಬಹುವ್ರೀಹಿ ಸಮಾಸದಲ್ಲಿ ಸಮಸ್ತ ಪದದ ಅಂತ್ಯದಲ್ಲಿ ‘ಅ’ ಕಾರ ಬರುತ್ತದೆ. ಉತ್ತರ ಪದದಲ್ಲಿ ‘ಇಲ್’ ಇದ್ದರೆ ‘ಇಲಿ’ (ಲಿತ್ವ) ಉಂಟಾಗುತ್ತದೆ. ‘ಕೊಲ್’ ಇದ್ದರೆ ‘ಕುಲಿ’ ಎಂದೂ ಆದೇಶವಾಗುತ್ತದೆ.

ಅ ಕಾರಕ್ಕೆ :
ಕುಡುವಿಲ್ + ಅ + ಂ = ಕುಡುವಿಲ್ಲಂ
ಕುಡಿವಿಲ್ಲನೆಚಕೋಲುಂ |
ನಡದುಲಂದೊರ್ವನೆರ್ದೆಯನೊಳ್ಗಬ್ಬಮುಮೊ ||
ಬಿಟ್ಟಿತು + ತೊಡೆ (ಆವಂಗೆ ಆವಂ) = ಬಿಟ್ಟಿದೊಡೆಯಂ

ವಿಕಲ್ಪಕ್ಕೆ :
ನಿಡಿದು + ಮೂಗು (ನಿಡುಮೂಗು + ಇ) = ನಿಡುಮೂಗಿ

ಇಲಿ (ಲಿ) ಕಾರಕ್ಕೆ :
ಪಲ್ + ಇಲಿ = ಪಲ್ಲಿಲ್ಲ
ಸೊಗಯಿಸುಗುಮೆ ಪಲ್ಲಲಿವಾ |
ಯುಗಿಲಿಲಿಗಂಧಂಸ ಮಂತು ಕೂರಿಲಿ ಕುಡುಗೋಲ್ ||

ಕುಲಿ ಎಂಬುದಕ್ಕೆ :
ಮೀನ್ + ಕೊಲ್ > ಕುಲಿ = ಮೀಂಗುಲಿ
ಅಱು + ಕೊಲ್ > ಕುಲಿ = ಅಱಂಗುಲಿ

೧೯೮
ದೊರೆಕೊಳ್ವುದು
ಅಖಿಲ ವೈಯಾಕರಣರಿಂ,
ಒಂದ್ ಎಂಬುದರ್ಕೆ
ಒರ್ ಎಂಬಾದೇಶಂ,
ಎರಡರ್ಕೆ ಇರ್ ಆದೇಶಂ,
ದೊರೆಕೊಳ್ಗುಂ ಅದಲ್ಲದಂದು
ಕಾರ ಅಭಾವಂ

ದ್ವಿಗು ಸಮಾಸದಲ್ಲಿ ‘ಒಂದು’ ಎಂಬುದು ಪೂರ್ವಪದವಾಗಿದ್ದು, ಸಮಾಸವಾಗುವಾಗ ಅದಕ್ಕೆ ‘ಒರ್’ ಆದೇಶವಾಗುತ್ತದೆ. ‘ಎರಡು’ ಎಂಬುದಕ್ಕೆ ‘ಇರ್’ ಆದೇಶವಾಗುತ್ತದೆ ಇಲ್ಲವೆ ಅಂತ್ಯ ‘ಉ’ ಕಾರ ಲೋಪವಾಗುತ್ತದೆ.

ಒರ್ ಆದೇಶಕ್ಕೆ :
ಒಂದು > ಒರ್ + ಪಿಡಿ = ಒರ್ಪಿಡಿ
ಒರ್ಪಿಡಿಗೂೞುಂ ಸಿತಗನ
ಕರ್ಪಡಮುಂ ರಾಜಸೇವೆಯಿಲ್ಲದೆ ಬಾರಂ
ಒಂದು > ಒರ್ + ಮಡಿ = ಒರ್ಮಡಿ
ಒಂದು > ಒರ್ + ಪೆಸರ್ = ಒರ್ಪೆಸರ್

ಇರ್ ಆದೇಶಕ್ಕೆ :
ಎರಡು > ಇರ್ + ತಡಿ = ಇರ್ತಡಿ
ಇರ್ತಡಿಯ ಪೂರ್ರ‍ಂಗಳ ಪೋರ್ತಂ…
ಎರಡು > ಇರ್ + ಕೆಱೆ = ಇರ್ಕೆಱೆ

ಉ ಕಾರ ಲೋಪಕ್ಕೆ :
ಎರಡು > ಎರೞ್ + ಮಾತು = ಎರೞ್ಮಾತು
ಎರೞ್ಮಾತಾಗಿ ಬೞ್ದುಂ ಜಗ
ದವಳಯಕ್ಕೊರ್ನುಡಿ ಕಾಱನಾದನೆಯ ಶಕ್ಕಂಜಿ…
ಎರಡು > ಎರೞ್ + ಕುದುರೆ = ಎರೞ್ಕುದುರೆ

೧೯೯
ಚರಮಕ್ಕೆ ಅದರ್ಶನಂ
ಮೂಱು ಇರೆ ಬರೆ
ಕವರ್ಗ ಪವರ್ಗ ಅಗ್ರದೊಳ್;
ದ್ವಿರ್ಭಾವಂ ಪಿರಿದುಂ
ಹ್ರಸ್ವಂ ಮೊದಲೊಳ್,
ಸ್ವರಂ ಇದಿರಿರೆ
ಮೂಱಱಲ್ಲಿ ಮುಯ್ ಆದೇಶಂ

ದ್ವಿಗು ಸಮಾಸದಲ್ಲಿ ‘ಮೂಱು’ ಎಂಬ ಪದ ಪೂರ್ವಪದವಾಗಿದ್ದು ಅದಕ್ಕೆ ವ್ಯಂಜನ ಪರವಾದಾಗ, ‘ಮೂಱು’ ಪದದ ಅಂತ್ಯಾಕ್ಷರಕ್ಕೆ ಲೋಪ ಬರುತ್ತದೆ. ಕ ವರ್ಗ, ಪ ವರ್ಗಗಳು ಪರವಾದರೆ ಅವುಗಳಿಗೆ ದ್ವಿತ್ವ ಉಂಟಾಗಿ ಮೂಱರ ಆದಿಗೆ ಹ್ರಸ್ವ (ಅಂತ್ಯಾಕ್ಷರ ಲೋಪವಾಗಿ) ಬರುತ್ತದೆ. ‘ಮೂಱ’ ರ ಮುಂದೆ ಸ್ವರ ಪರವಾದರೆ ಅದಕ್ಕೆ ‘ಮುಯ್’ ಆದೇಶವಾಗುತ್ತದೆ.

ಅಂತ್ಯ ಲೋಪಕ್ಕೆ :
ಮೂಱು > ಮೂ + ತಲೆ = ಮೂದಲೆ
ಚೋವಿನ
ವಿನಿತಲೆ ನಾಳೆ ಮೂದಲೆಗೆ ಬಾರದೆ ಮಾಣ್ಬುದೆ ದೇವ
ಮೂಱು > ಮೂ + ಲೋಕ = ಮೂಲೋಕ
ಮೂಱು > ಮೂ + ಮೂಱು = ಮೂನೂಱು

ಹ್ರಸ್ವ ದ್ವಿತ್ವಗಳಿಗೆ :
ಮೂಱು > ಮೂ + ಕೊಡೆ = ಮುಕ್ಕೊಡೆ
ಮುಕ್ಕೊಡೆ ಪುಷ್ಟವೃಷ್ಟಿ ಸುರದುಂದುಭಿ…
ಮೂಱು > ಮು + ಕುಪ್ಪೆ = ಮುಕ್ಕುಪ್ಪೆ
ಮೂಱು > ಮೂ + ಪುರಿ = ಮೂಪ್ಪುರಿ > ಮುಪ್ಪುರಿ
ಮೂಱು > ಮೂ + ಗಿಡ್ಡೆ = ಮೂಱುಗುಡ್ಡೆ > ಮೂಗ್ಗುಡ್ಡೆ

ಮುಯ್ ಎಂಬುದಕ್ಕೆ :
ಮೂಱು > ಮು + ಏೞ್ = ಮುಯ್ಯೇೞು
ಚಲದಿಂ ಮುಯ್ಯೇೞು ಸೂೞು ಕ್ಷತ್ರಿಯರ ನಱಸಿ ಕೊಂದಿ
ಕ್ಕಿದಾ ಜಮದಗ್ನ್ಯಂ
ಮೂಱು > ಮು + ಅಡಿ = ಮುಯ್ಯಡಿ

೨೦೦
ಅಕ್ಕುಂ ಲೋಪಂ,
ನಾಲ್ಕು ಐದು ಅಂತ್ಯಕ್ಕೆ,
ಆಱಱ ಆದಿಯೊಳ್ ಹ್ರಸ್ವಂ
ತಾಂ ಅಕ್ಕುಂ;
ಏೞರ್ಕೆ ಏೞ್ ಎಂದು
ಅಕ್ಕುಂ, ಚರಮಕ್ಕೆ ಲೋಪಂ
ಎಂಟರ್ಕೆ ಅಕ್ಕುಂ

ದ್ವಿಗು ಸಮಾಸದಲ್ಲಿ ನಾಲ್ಕು, ಐದು, ಸಂಖ್ಯಾವಾಚಕಗಳು ಪೂರ್ವ ಪದಗಳಾಗಿರುವಾಗ ಅವುಗಳ ಅಂತ್ಯಾಕ್ಷರ ಸ್ವರಸಹಿತವಾಗಿ ಲೋಪವಾಗುತ್ತದೆ. ‘ಆಱರ’ ಆದಿಗೆ ಹ್ರಸ್ವ ಉಂಟಾಗುತ್ತದೆ. ‘ಏೞ’ (ಅಂತ್ಯಸ್ವರ ಲೋಪವಾಗಿ) ಕ್ಕೆ ಏೞು ಎಂದಾಗುತ್ತದೆ. ‘ಎಂಟು’ ಎಂಬುದಕ್ಕೆ ‘ಎಣ್’ ಎಂದೂ ಆದೇಶವಾಗುತ್ತದೆ.

ನಾಲ್ಕಕ್ಕೆ :
ನಾಲ್ಕು > ನಾಲ್ + ಬೆರಲ್ = ನಾಲ್ವೆರಲ್
ಉರಗಂ ಕೊಂಡಲ್ಲಿಗೆನಾ
ಲ್ವೆರಲನಿತಂಕಳೆದುಕಟ್ಟಿ…
ನಾಲ್ಕು > ನಾಲ್ + ಪತ್ತು = ನಾಲ್ವತ್ತು

ಅಯ್ದಕ್ಕೆ :
ಅಯ್ದ > ಅಯ್ + ಬಾಯ್ = ಅಯ್ವಾಯ್
…ಉರಗಶಯ್ಯೆಯ
ನೇಱಿದನಯ್ಯಾಯಶಂಖ ಮಂ ಪೂರಿಸಿದಂ

ಆಱಕ್ಕೆ :
ಆಱು > ಅಱು + ತಿಂಗಳ್ = ಅಱುದಿಂಗಳ್
ಅಱುಂದಿಂಗಳಾಯುವುಂಟೆನೆ
ಮಱುದುವುದಂ ನಲ್ಲರಲ್ಲಿ…
ಆಱು > ಅಱು + ಪತ್ತು = ಅಱುವತ್ತು

ಏೞಕ್ಕೆ :
ಏೞು > ಏೞ್ + ಪೊರೆ = ಏರೆ
ಕರಗುಗುಮೇೞ್ೞೊರೆಯೆನಿಪ್ಪ ಕುರುವು ಬೇಗಂ
ಏೞು > ಏೞ್ + ಪತ್ತು = ಏೞ್ಪತ್ತು

ಎಂಟಕ್ಕೆ :
ಎಂಟು > ಎಣ್ + ದೆಸೆ = ಎಣ್ದೆಸೆ
ನಿಜಸೈನ್ಯ ಬಾರದಿಂದೆಣ್ದೆಸೆಯಾನೆಗಳ್ ಕುಸಿದು ಕುರ್ಗಿದುವು
ಎಂಟು > ಎಣ್ + ಪತ್ತು = ಎಣ್ಬತ್ತು
ಎಂಟು > ಎಣ್ + ಸಾಸಿರಂ = ಎಣ್ಛಾಸಿರಂ

೨೦೧
ಪತ್ತು ಪರಂ, ಆಗಲೋಡಂ
ಒಂಬತ್ತು ತೊಮ್ ಎಂದು,
ಅಕ್ಕುಂ ಅಗ್ರದೊಳ್
ನೂಱು ಇರೆ
ಮೇಣ್ ಮತ್ತಂ
ಸಾಸಿರಂ ಇರೆ
ನೆಲೆಸಿತ್ತು ಒಂಬಯ್ ಎಂದು,
ವಿಬುಧರಿಂದ ಆದೇಶಂ

ದ್ವಿಗು ಸಮಾಸದಲ್ಲಿ ‘ಒಂಬತ್ತು’ ಪೂರ್ವಪದವಾಗಿದ್ದು ಮುಂದೆ ‘ಪತ್ತು’ ಪರವಾಗಿರುವಾಗ ಒಂಬತ್ತು ಎಂಬುದಕ್ಕೆ ‘ತೊಮ್’ ಆದೇಶವಾಗುತ್ತದೆ. ಒಂಬತ್ತರ ಮುಂದೆ ನೂಱು, ಸಾಸಿರ ಪರವಾಗಿರಲು ‘ಒಂಬಯ್’ ಎಂಬುದು ಆದೇಶವಾಗುತ್ತದೆ.

‘ತೊಮ್’ ಆದೇಶಕ್ಕೆ :
ಒಂಬತ್ತು > ತೊಮ್ + ಪತ್ತು = ತೊಂಬತ್ತು

ಒಂಬಯ್ ಆದೇಶಕ್ಕೆ :
ಒಂಬತ್ತು > ಒಂಬಯ್ + ನೂರು = ಒಂಬಯ್ನೂರು
ಒಂಬತ್ತು > ಒಂಬಯ್ + ಸಾಸಿರಂ = ಒಂಬಯ್ಸಾಸಿರಂ
…ತೊಂಬತ್ತೊಂಬ
ಯ್ಸಾಸಿರಯೋಜನ ಮಂ ನೆಗೆದೀ ಸುರಗಿರಿ…

೨೦೨
ಪತ್ತರ್ಕೆ ಪಯಿನ್
ಎಂದು  ಆದೇಶಂ,
ಸಮಂತು ಸಾಸಿರಂ
ಇದಿರೊಳ್ ಪತ್ತುಗೆಗೊಳೆ,
ನೂಱರ್ಕಂ ಮತ್ತಂ
ಸಾಸಿರಕಂ
ಅಂತ್ಯ ಲೋಪಂ ವಿರಳಂ

ಪತ್ತು ಪೂರ್ವ ಪದವಾಗಿದ್ದು, ಉತ್ತರಪದದಲ್ಲಿ ಸಾಸಿರವಾಗಿರಲು ‘ಪತ್ತ’ಕ್ಕೆ ‘ಪಯಿನ್’ ಎಂಬುದು ಆದೇಶವಾಗುತ್ತದೆ. ನೂಱು, ಸಾಸಿರ ಪದಗಳ ಮುಂದೆ ಸ್ವರ ಅಥವಾ ವ್ಯಂಜನ ಪರವಾಗಲು ಪೂರ್ವ ಪದಗಳ ಅಂತ್ಯ ವರ್ಣ ಲೋಪವಾಗುತ್ತದೆ.

ಪಯಿನ್ ಆದೇಶಕ್ಕೆ :
ಪತ್ತು > ಪಯಿನ್ + ಸಾಸಿರಂ = ಪಯಿಂಛಾಸಿರ
ಪಡಲಿಟ್ಟಂತಿರೆ ಮಾೞ್ಪಿನೋವದೆ ಪಯಿಂಛಾಸಿರಂ
ಯುದ್ಧದೊಳ್

ಅಂತ್ಯ ಸ್ವರಲೋಪಕ್ಕೆ :
ನೂಱು > ನೂಱ್ + ಮಡಿ = ಮೂರ್ಮಡಿ
ಸಾಸಿರ > ಸಾಸಿರ್ + ಅರ್ = ಸಾಸಿರ್ವರ್
ಸಾಸಿರ್ವರ್ ವನಿತೆಯರ
ಯಾಸಿರ್ವರ್ ಪ್ರಿಯತನೂಜರಱಿಕೆಯಪದಿನೆ
ಣ್ಛಾಸಿರ್ವರರಸುಗಳ್….
ಸಾಸಿರ > ಸಾಸಿರ್ + ಮಡಿ = ಸಾಸಿರ್ಮಡಿ

೨೦೩
ಪತ್ತರ್ಕೆ ಪನ್ ಎನಿಕ್ಕುಂ,
ಉತ್ತರಕ್ಕೆ ಒಂದು ಎರಡು
ನೆಲಸೆ ಪದಿ ಯೆಂದು ಅಕ್ಕುಂ,
ಮತ್ತೆ ಒದವಿ
ಮೂಱು, ನಾಲ್ಕು ಇರೆ
ಸುತ್ತೇಂ ಸ್ವರಂ ಇರೆ
ನಕಾರವಿಧಿ ಮುಂದೆಲ್ಲಂ

ಪತ್ತು ಪೂರ್ವ ಪದವಾಗಿದ್ದು ಉತ್ತರದಲ್ಲಿ ಒಂದು, ಎರಡು, ಇರಲು ‘ಪನ್’ ಆದೇಶವಾಗುತ್ತದೆ. ಉತ್ತರದಲ್ಲಿ ಮೂಱು, ನಾಲ್ಕು ಇರಲು ಪತ್ತು ‘ಪದಿ’ ಎಂದೂ ಸ್ವರಾದಿಯಾದ ಪದಗಳು ಪರವಾಗಿರಲು ಪತ್ತಕ್ಕೆ ಪದಿಯೊಂದಿಗೆ ‘ನ’ ಕಾರ ಆದೇಶವಾಗುತ್ತದೆ.

‘ಪನ್’ ಎಂಬುದಕ್ಕೆ :
ಪತ್ತು > ಪನ್ + ಎರಡು = ಪನ್ನೆರಡು
ಸಾರಲ್‌ಸಲ್ಲದು ಪನ್ನೆರೞ್ಬರಿಸಮಂ
ನಾಡಂ ತಡಂಗಿರ್ಪುದು
ಪತ್ತು > ಪನ್ + ಒಂದು = ಪನ್ನೊಂದು

‘ಪದಿ’ ಎಂಬುದಕ್ಕೆ :
ಪತ್ತು > ಪದಿ + ಮೂಱು = ಪದಿಮೂಱು
ಪತ್ತು > ಪದಿ + ನಾಲ್ಕು = ಪದಿನಾಲ್ಕು
…ಬಾಯಂ
ತೆಱಿದೊಡೆ ಪದಿನಾಲ್ಕು ಲೋಕ
ಮಿರ್ದುವು ಬಸಿಱೊಳ್

ನ ಕಾರಾಗಮಕ್ಕೆ :
ಪತ್ತು > ಪದಿ + (ನ) ಐದು = ಪದಿನೈದು
ಪತ್ತು > ಪದಿ + (ನ)ಆಱು = ಪದಿನಾಱು

೨೦೪
ಅತಿಶಯತರ ಅರ್ಥ
ವೀಪ್ಸಾ ಅನ್ವಿತ ನಾಂತ
ಅವ್ಯಯ ಪದಕ್ಕಂ,
ಅನುಕೃತಿ ಪದಕ್ಕಂ
ಅಂತ್ಯ ಲೋಪಂ,
ಇತರ ಅಗತಂ ಅತ್ವಂ
ನಡುವಿನಂತೆ ಕಡೆಗಂ ಟತ್ವಂ

ಅತಿಶಯಾರ್ಥದ ವೀಪ್ಸೆಯಿಂದ ಕೂಡಿದ ‘ನ’ ಕಾರಾಂತ ಅವ್ಯಯ ಹಾಗೂ ಅನುಕರಣ ಪದಗಳು ಸೇರಿ ಸಮಾಸ ವಾಗುವಾಗ ಪೂರ್ವ ಪದಗಳ ಅಂತ್ಯಾಕ್ಷರಕ್ಕೆ (ನ ಕಾರಕ್ಕೆ) ಲೋಪ ಉಂಟಾಗುತ್ತದೆ. ಉಳಿದ ಕಡೆಗಳಲ್ಲಿ ‘ಅ’ ಕಾರಾಗಮವಾಗುತ್ತದೆ. (ಆಗ) ನಡು ಶಬ್ದದಲ್ಲಾಗುವಂತೆ ‘ಕಡೆ’ ಶಬ್ಧದಲ್ಲಿಯೂ ‘ಡ’ ಕಾರಕ್ಕೆ ‘ಟ’ ಕಾರವಾಗುತ್ತದೆ.

ಅವ್ಯಯ ಪದಾಂತ್ಯ ಲೋಪಕ್ಕೆ :
ಸಪ್ಪನೆ + ಸಪ್ಪನೆ = ಸಪ್ಪಸಪ್ಪನೆ
ಸಪ್ಪ ಸಪ್ಪನೆ ರಸಂ….
ಕಮ್ಮನೆ + ಕಮ್ಮನೆ = ಕಮ್ಮಕಮ್ಮನೆ

ಅನುಕರಣ ಪದಾಂತ್ಯ ಲೋಪಕ್ಕೆ :
ಚಳನೆ + ಚಳನೆ = ಚಳಚಳನೆ
….ಚ
ಳಚಳನೆ ಮಿಂಚಿತ್ತು ಸಿಡಿಲ ಕೈದೀವಿಗೆವೊಲ್
ಪೞನೆ + ಪೞನೆ = ಪೞಪೞನೆ

ಅತ್ವಯುಕ್ತ ಟ ಕಾರಕ್ಕೆ :
ನಡು + ನಡು = ನಟ್ಟನಡು
ಕಡೆ + ಕಡೆ = ಕಟ್ಟಕಡೆ
ಕಟ್ಟಕಡೆ ಪೆರ್ವಟೆ ಕರಂ ಗೆಂಟು

೨೦೫
ತುದಿ ಮೊದಲ್ ಎಂಬ
ಕಾರಕ್ಕೆ
ಉದಯಿಸುಗುಂ
ದ್ವಿತ್ವ ವೃತ್ತಿಯಿಂದೆ ಕಾರಂ;
ಮೊದಲ್ ಎಂಬ ಕಾರಕ್ಕೆ
ಅಪ್ಪುವುದು ಅದರ್ಶನವಿಧಿ
ವಿಶೇಷಮಂ, ನುಡಿ ವೆಡೆಯೊಳ್

ವಿಶೇಷವನ್ನು ಹೇಳುವಲ್ಲಿ ‘ತುದಿ’ ‘ಮೊದಲ್’ ಗಳ ‘ದ’ ಕಾರಕ್ಕೆ ದ್ವಿತ್ವ ರೂಪದ ‘ತ’ ಕಾರ ಹುಟ್ಟುತ್ತದೆ. ಮೊದಲ್ ಎಂಬುದರ ‘ಲ’ ಕಾರಕ್ಕೆ ಲೋಪ ಉಂಟಾಗುತ್ತದೆ.

ತುದಿ + ತುದಿ = ತುತ್ತತುದಿ
ಮೊದಲ್ + ಮೊದಲ್ = ಮೊತ್ತಮೊದಲ್

೨೦೬
ದೂರ, ಅಭೀಕ್ಷಣಂ,
ವೀಪ್ಸೆ, ಉದಾರ, ಅನುಕೃತಿ
ಕ್ರಿಯಾಸಮಭಿಹಾರ, ಸಮೀಪ
ಉರುತರ ಚಾಪಲಾದಿಗಂ
ಸಾರಂ ಬುಧರಿಂ
ಪದಕ್ಕೆ ಯುಗ ಉಚ್ಚರಣಂ

ದೂರ, ಅಭೀಕ್ಷಣ, ವೀಪ್ಸೆ, ಅನುಕೃತಿ, ಕ್ರಿಯಾಸಮಭಿಹಾರ, ಸಮೀಪ, ಚಪಲತೆ ಮೊದಲಾದವುಗಳಲ್ಲಿ ವಿದ್ವಾಂಸರ ಮತದಂತೆ ಪದವೊಂದನ್ನು ಎರಡು ವೇಳೆ ಉಚ್ಚರಿಸುವುದು (ದ್ವಿರುಕ್ತಿ) ಲೇಸು.

ದೂರಕ್ಕೆ :
ತೋರ್ಪುದು ತೋರ್ಪುದು
ಆ ತೋರ್ಪುದು ತೋರ್ಪುದೆ ಬಾನೊಳ್ ಧ್ವಜಪಟಂ

ಅಭೀ ಕ್ಷಣಕ್ಕೆ :
ಓದಿ ಓದಿ
ಗಿಳಿಯೊಡನೋದಿ ಯೋದಿ ನುಡಿಗಲ್ತು…..

ವೀಪ್ಸೆಗೆ :
ಊರೂರೊಳ್
ಊರೂರೊಳ್ ಕೇರಿ ಕೇರಿಯೊಳ್, ಮನೆ ಮನೆಯೊಳ್

ಅನುಕೃತಿಗೆ :
ಭೋ ರ್ಭೋರೆನೆ
… ಭೋ ರ್ಭೋ
ರೆನೆ ಪಾಯ್ವುದು ಹಿಮನಗಕ್ಕೆ ಗಂಗಸ್ರೋತಂ

ಕ್ರಿಯಾ ಸಮಭಿಹಾರಕ್ಕೆ :
ಇದಿರ್ಚಿದಿರ್ಚು
ಇದಿರ್ಚಿದಿರ್ಚೆನೆ ಜಟಾಯು ರಾವಣನೆಂಗುಂ

ಸಮೀಪ :
ಇದೆ ಇದೆ
ಇದೆ ಇದೆ ಸಾರ್ಕೆ ಸಾರ್ಕೆ ಸಾರ್ಕೆ
ಗಣಕಾವಳಿ ಪೇೞ್ದ ಮಹೂರ್ತಂ

ಚಪಲತೆಗೆ :
ಒಪ್ಪಿಸೊಪ್ಪಿಸು, ಅಣ್ಮಣ್ಮು

೨೦೭
ಕವಿಮಾರ್ಗಗತ
ಸಮಾಸಂ ಅವಂ
ಎನ್ನ ಅಱಿವನಿತಂ ಎಯ್ದೆ
ಪೇೞ್ದಿಂ, ಲೋಕ ವ್ಯವಹಾರದಿಂದೆ
ಇನ್ನುೞಿದುವಂ
ಅಱಿವುದು
ಶಬ್ದಪಾರಮಾರ್ಗಂ ಅಶಕ್ಯಂ

ಕವಿಮಾರ್ಗದಲ್ಲಿ ಪ್ರಯೋಗವಾದ ಸಮಾಸಗಳನ್ನು ನನಗೆ ತಿಳಿದಷ್ಟು ಹೇಳಿದ್ದೇನೆ. ಮಿಕ್ಕವುಗಳನ್ನು ಲೋಕ ವ್ಯವಹಾರದಿಂದ ತಿಳಿದುಕೊಳ್ಳಬೇಕು. ಎಲ್ಲ ಶಬ್ದಗಳ ರಚನೆಯನ್ನು ತಿಳಿಯುವುದು ಯಾರಿಂದಲೂ ಸಾಧ್ಯವಿಲ್ಲ.

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿ ದರ್ಪಣದ ನಾಲ್ಕನೆಯ ಪ್ರಕರಣವಾದಸಮಾಸ ಪ್ರಕರಣಮುಗಿಯಿತು.