೨೦೮
ಪರಿನಿರ್ಮಿಪ ಮಾಱಾಡುವ,
ದೊರೆವಡೆದ ನಿಯೋಗದ
ಅನೃತದ ಅಱಿತದ,
ಋಣದ, ಆಚರಣದ ,
ಶಿಲ್ಪದ ಮೂಲದ ನರನಂ
ಪೇೞ್ವಲ್ಲಿ ಮಾೞ್ಕಿ
ಇಗ ಪ್ರತ್ಯಯಮಂ

ಮಾಡುವ, ಮಾಱುವ, ನಿಯೋಗ (ಏನಾದರೊಂದು ಕೆಲಸದಲ್ಲಿ ನಿಯಮಿಸಲ್ಪಟ್ಟವನು), ಅನೃತ, ಅಱಿತ (ತಿಳಿದ), ಋಣದ, ಶಿಲ್ಪದ ‑ ಈ ಮುಂತಾದ ಕಾರ್ಯಗಳಲ್ಲಿ ನಿರತರಾಗಿರುವ ವ್ಯಕ್ತಿಗಳನ್ನು ಗುರುತಿಸುವಲ್ಲಿ ಸಂಬಂಧಿಸಿದ ನಾಮರೂಪದ ಮೇಲೆ ‘ಇಗ’ ಪ್ರತ್ಯಯ ಸೇರುತ್ತದೆ.

ಮಾಡುವವನಿಗೆ :
ಕಬ್ಬ + ಇಗ = ಕಬ್ಬಿಗ
…ಕಬ್ಬಿಗಗಳ್ಳರೆಂದು ಕೂ
ಸಾಡಿಸಬಾರದಕ್ಕರದ ರಾಜ್ಯದೊಳೀ ಕವಿಚಕ್ರವರ್ತಿಯಾ ||
ಸರವಂದ + ಇಗ = ಸರವಂದಿಗ

ಮಾಱುವವನಿನೆ :
ಗಂದ + ಇಗ = ಗಂದಿಗ
ಗಂದಿಗನೇರಣಿಗಂ ಸರ….
ವಂದಿಗನಾಪಟ್ಟಸಾಲಿಗಂ….
ತಂಬುಲ + ಇಗ = ತಂಬುಲಿಗ

ನಿಯೋಗದವನಿಗೆ :
ಚಾಮರ + ಇಗ = ಚಾಮರಿಗ
ಹಡಪ + ಇಗ = ಹಡಪಿಗ
ಕರಹಟ್ಟು + ಇಗ = ಕರಹಟ್ಟಿಗ

ಅನೃತದವನಿಗೆ :
ಪುಸಿ + ಇಗ = ಪುಸಿಗ
ಮಾಳ + ಇಗ = ಮಾಳಿಗ

ಅಱತದವನಿಗೆ :
ಪೊಲಂಬು + ಇಗ = ಪೊಲಂಬಿಗ
ಕೃತಿಮಾರ್ಗದೊಳ್ ಪೊಲಂಬಿಗನೀತಂ
ಲೆಕ್ಕ + ಇಗ = ಲೆಕ್ಕಿಗ

ಋಣದವನಿಗೆ :
ಸಾಲ + ಇಗ = ಸಾಲಿಗ
ಹಂಗು + ಇಗ = ಹಂಗಿಗ

ಆಚರಣದವನಿಗೆ :
ದೇಗುಲ + ಇಗ = ದೇಗುಲಿಗ
ಅಕ್ಕರ + ಇಗ = ಅಕ್ಕರಿಗ

ಶಿಲ್ಪದವನಿಗೆ :
ಚಿಪ್ಪು + ಇಗ = ಚಿಪ್ಪಿಗ

ಮೂಲದವನಿಗೆ :
ಮೂಲ + ಇಗ = ಮೂಲಿಗ

೨೦೯
ನಡೆಯಿಸುವಂ ಈತಂ
ಇದಂ ಎಂಬೆಡೆಯೊಳ್;
ವಳ, ವಳ್ಳಂ ಅಕ್ಕುಂ;
ಆಯ್ತುಮುಂ ಅಕ್ಕುಂ
ವಡಿಗ, ಪ್ರತ್ಯಯಂ ಅಕ್ಕುಂ
ಬಿಡದಿ ಇಕ್ಕುವಂ
ಈತಂ ಇದಂ ಎನಿಪ್ಪ
ಒಂದೆಡೆಯೊಳ್

ಇವನು ಈ ಕೆಲಸವನ್ನು ಮಾಡುತ್ತಾನೆಂದು (ನಡೆಸುತ್ತಾನೆಂದು) ಹೇಳುವಲ್ಲಿ (ನಿಯೋಗದ ಸಂದರ್ಭದಲ್ಲಿ) ‘ವಳ’, ‘ವಳ್ಳ’ ‘ಆಯ್ತು’ ಪ್ರತ್ಯಯಗಳು ಹತ್ತುತ್ತವೆ. ಈತನು ಇದನ್ನು ಬಿಡದೆ ಮಾಡುತ್ತಾನೆ (ಕೊಡುತ್ತಾನೆ) ಎಂಬರ್ಥದಲ್ಲಿ ‘ವಡಿಗ’ ಪ್ರತ್ಯಯ ಸೇರುತ್ತದೆ.

ವಳಕ್ಕೆ :
ಅಡು + ವಳ = ಅಡುವಳ

ವಳ್ಳಕ್ಕೆ :
ಮಡಿ + ವಳ್ಳ = ಮಡಿವಳ್ಳ
ಮಡಿವಳ್ಳನಡಪ ವಳ್ಳಂ
ಪಡೆವಳ್ಳಂ ಸೆಜ್ಜೆವಳನಜ್ಜಂ ಬೆಜ್ಜಂ
ಅಡುವಳ ನೆಂದಿಂತಿವರಂ
ಕಡಂಗಿ ಬಿಡೆ ಜಡಿಯದಿರ್ಕೆ ನಯವೆಱ ವರಸಂ

ಆಯ್ತಕ್ಕೆ :
ಝಳಂಬ + ಆಯ್ತ = ಝಳಂಬಾಯ್ತ
ಆಯ್ತಬ್ಧಿಯೆ ಘೂರ್ಣಿಸುವಂ
ತಾಯ್ತರಮನೆಯೊಳಗೆ ಪುಗುವ ಪೊಱಮಡುವ ಝಳಂ
ಬಾಯ್ತರ ಸೂೞಾಯ್ತರ ಕ
ಲ್ಲಾಯ್ತರ ಡಂಗಾಯ್ತರಚ್ಚುಳಾಯ್ತರ
ರಭಸಂ
ಸೂೞ್ + ಆಯ್ತ = ಸೂೞುಯ್ತ

ವಡಿಗಕ್ಕೆ :
ಪುಲ್ಲ + ವಡಿಗಂ = ಪುಲ್ಲವಡಿಗಂ
ಕುಂಚ + ವಡಿಗಂ = ಕುಂಚವಡಿಗಂ

೨೧೦
ಇವಱೊಳ್ ವ್ಯವಹರಿಪಂ,
ಮಾಡುವಂ ಇವಂ ಎಂಬಲ್ಲಿ,
ಕಾಱ, ಗಾಱಂ ಗಳ್
ಸಂಭವಿಕುಂ,
ಗಾಱ ಆದಿಗೆ ಲೋಪಂ,
ಆದಿಯೊಳ್ ಕಮ್ಮ, ಕುಂಬ, ಯುಗಂ
ಒದವಲೊಡಂ

ಇದರಲ್ಲಿ ಇವನು ವ್ಯವಹರಿಸುವನು ಎಂಬಲ್ಲಿ ‘ಕಾಱ’ ಪ್ರತ್ಯಯ ಉಂಟಾಗುತ್ತದೆ. ಇವನು ಈ ಕೆಲಸಗಳನ್ನು ಮಾಡುವವನು ಎಂಬಲ್ಲಿ ‘ಗಾಱ’ ಪ್ರತ್ಯಯ ಉಂಟಾಗುತ್ತದೆ. ಕಮ್ಮ, ಕುಂಬ ಶಬ್ದಗಳು ಪೂರ್ವ ಪದಗಳಾಗಿದ್ದರೆ ಉತ್ತರ ಪದದಲ್ಲಿ ‘ಗಾಱ’ ಪ್ರತ್ಯಯವಿದ್ದರೆ (ಗಾಱದ) ಆದಿಗೆ (‘ಗ’ ಕಾರಕ್ಕೆ) ಲೋಪ ವುಂಟಾಗುತ್ತದೆ.

ಕಾಱಕ್ಕೆ :
ನಗೆವಡಿ + ಕಾಱಂ = ನಗೆವಡಿಕಾಱಂ
ನಗೆವಡಿಕಾಱಂನೀಱಂ
ಪಗೆಕಾಱಂ ಪಾಟಕಾಱನ್ನೊಳ್ನುಡಿಕಾಱಂ….
ಬೇಹು + ಕಾಱಂ = ಬೇಹುಕಾಱಂ

ಗಾಱಕ್ಕೆ :
ಮಾಲೆ + ಗಾಱಂ = ಮಾಲೆಗಾಱಂ
ಅಣಿಯರಮೆಸೊದೆಪ್ಪಿರ್ಪುವು
ಮಣಿಗಾಱರ ಕಂಚುಗಾಱರೊಱಗಾಱರತಿಂ….
ಕಂಚು + ಗಾಱಂ = ಕಂಚುಗಾಱಂ
ಬಳೆ + ಗಾಱಂ = ಬಳೆಗಾಱಂ

ಗ ಕಾರಕ್ಕೆ ಲೋಪ :
ಕಮ್ಮ+ ಗಾಱಂ = ಕಮ್ಮಱಂ
ಕುಂಬ + ಗಾಱಂ = ಕುಂಬಱಂ

೨೧೧
ಪರದೊಳ್ ಗಾಱ ಪ್ರತ್ಯಯಂ,
ಇರೆ ಸಲ್ಗುಂ ಬಿಂದು
ಮೇಣ್ ಕಾರಂ
ಉದಂತಕ್ಕೆ, ಒರೆವರ್,
ಇಚ, ಪ್ರತ್ಯಯಮಂ
ಪಿರಿದುಂ ತದ್ಭವನೊಳ್
ಉಪಧೆಗೆ ಅಕ್ಕುಂ ಹ್ರಸ್ವಂ

ಉತ್ತರ ಪದದಲ್ಲಿ ‘ಗಾಱ’ ಪ್ರತ್ಯಯವಿದ್ದರೆ ಪೂರ್ವ ಪದದ ‘ಉ’ ಕಾರಾಂತದ ಮುಂದೆ ಬಿಂದು ಬರುತ್ತದೆ. ಕೆಲವೆಡೆ ಪೂರ್ವ ಪದದ ಕೊನೆಯ ‘ಉ’ ಕಾರಕ್ಕೆ ‘ಅ’ ಕಾರ ಆದೇಶವಾಗುತ್ತದೆ. ‘ಅದರಲ್ಲಿ ಹುಟ್ಟಿದವನು’ ಎಂಬಲ್ಲಿ ‘ಇಚ’ ಪ್ರತ್ಯಯ ಸೇರುತ್ತದೆ. ಕೆಲವೆಡೆ ‘ಇಚ’ ಪ್ರತ್ಯಯ ಪರವಾದಾಗ ಪೂರ್ವ ಪದದ ಉಪಧೆಗೆ ಹ್ರಸ್ವ ಉಂಟಾಗುತ್ತದೆ.

ಬಿಂದುವಿಗೆ :
ಓದು + ಗಾಱ = ಓದುಂಗಾಱ
ಪಾಡು + ಗಾಱ = ಪಾಡುಂಗಾಱ

ಅ ಕಾರಾಂತಕ್ಕೆ :
ಕಂಚು > ಕಂಚ + ಗಾಱ = ಕಂಚಗಾಱ

ಇಚ ಪ್ರತ್ಯಯಕ್ಕೆ :
ಪೊೞಲ್ + ಇಚಂ = ಪೊೞಲಿಚಂ
ಅಲರ್ + ಇಚಂ = ಅಲರಿಚಂ

ಉಪಧೆಯ ಹ್ರಸ್ವಕ್ಕೆ :
ಕಾಲೂರ್ > ಕಾಲುರ್ + ಇಚ್ = ಕಾಲುರಿಚ

೨೧೨
ಘನಮಾಗಿ ವರ್ತಿಸುವಂ
ಈತಂ, ಇವಱಿಳ್ ಎಂಬಲ್ಲಿ
ಕುಟಿಗ, ಪ್ರತ್ಯಯಮಂ,
ಉಂಟೆನಿಸುಗುಂ
ಉಳಿಗ, ಪ್ರತ್ಯಯಂ
ಅನುಕೂಲ ಬಾೞ್ವಂ
ಇದಱಿಳ್ ಇವಂ ಎಂಬೆಡೆಯೊಳ್

ಇವನು ಇದರೊಳಗೆ ಹೆಚ್ಚಾಗಿ (ವಿಶೇಷವಾಗಿ) ವರ್ತಿಸುವನೆಂಬಲ್ಲಿ ‘ಕುಟಿಗ’, ‘ಗ’ ಪ್ರತ್ಯಯಗಳು ಉಂಟಾಗುತ್ತವೆ. ಇವನು ಇದರೊಳಗೆ ಜೀವಿಸುತ್ತಾನೆಂಬಲ್ಲಿ ‘ಉಳಿಗ’ ಪ್ರತ್ಯಯ ಸೇರುತ್ತದೆ.

ಕುಟಿಗ ಪ್ರತ್ಯಯಕ್ಕೆ :
ಕಲ್ + ಕುಟಿಗ = ಕಲ್ಕುಟಿಗ
ಮರ + ಕುಟಿಗ = ಮರಕುಟಿಗ

ಗ ಪ್ರತ್ಯಯಕ್ಕೆ :
ಬೀದಿ + ಗ = ಬೀದಿಗ
ಮಾತು + ಗ = ಮಾತುಗ

ಉಳಿಗ ಪ್ರತ್ಯಯಕ್ಕೆ :
ಮಣ್ + ಉಳಿಗ = ಮಣ್ಣುಗಳಿಗ

೨೧೩
ಒದವುವುದು ಗುಳಿ ಪ್ರತ್ಯಯಂ,
ಅದು ಪೂರ್ವದ ಬಿಂದು ವೆರಸು
ಶೀಲ ಗ್ರಹಣಾರ್ಥದೊಳ್
ಎತ್ತಂಉಣಿ, ಪ್ರತ್ಯಯಂ,
ಒದವುಗುಂ
ಅನ್ವಿತದಿಂ ಉಣ್ಬಂ
ಇದಂ ಎಂಬೆಡೆಯೊಳ್

ಶೀಲ ಗ್ರಹಣಾರ್ಥದಲ್ಲಿ ಆದಿ ಬಿಂದು ಸಮೇತವಾಗಿ ‘ಗುಳಿ’ ಪ್ರತ್ಯಯ ಉಂಟಾಗುತ್ತದೆ. ಈ ವಸ್ತುವನ್ನು (ಪದಾರ್ಥವನ್ನು) ಇವನು ಉಣ್ಣುವನು ಎಂದು ಹೇಳುವಲ್ಲಿ ‘ಉಣಿ’ ಪ್ರತ್ಯಯ ಬರುತ್ತದೆ.

ಗುಳಿ ಪ್ರತ್ಯಯಕ್ಕೆ :
ಆಡು + ಗುಳಿ = ಆಡುಗುಳಿ
ಲಂಚ + ಗುಳಿ = ಲಂಚಗುಳಿ

ಉಣಿ ಪ್ರತ್ಯಯಕ್ಕೆ :
ಅಮರ್ದು + ಉಣಿ = ಅಮರ್ದುಣಿ
ತುಡು + ಉಣಿ = ತುಡುಗುಣಿ

೨೧೪
ಉಕ, ಕುಳಿ, ಆಳಿ, ಪ್ರತ್ಯಯಂ
ಇಕಮುಂ
ಶೀಲಾದಿ ವಿಶ್ರುತ ಅರ್ಥದೊಳ್ ಅಕ್ಕುಂ
ಪ್ರಕಟಿಕುಂ ಅಡಿಗಂ ಎಂದುಂ
ಸುಕವಿಗಳಿಂ
ತದ ಅನುಕೂಲ ವರ್ತನವಿಧಿಯೊಳ್

ಶೀಲ ಮೊದಲಾದ ಸ್ವಭಾವಗಳನ್ನು ಗುರುತಿಸುವಲ್ಲಿ ‘ಉಕ’, ‘ಕುಳಿ’, ‘ಆಳಿ’, ‘ಇಕ’ ಪ್ರತ್ಯಯಗಳು ಸೇರುತ್ತವೆ. ಆ ಶೀಲ ಮೊದಲಾದ ಪ್ರಸಿದ್ದಾರ್ಥದೊಳಗೆ ಅನುಕೂಲ ವರ್ತನದಲ್ಲಿ ‘ಅಡಿಗ’ ಪ್ರತ್ಯಯ ಸೇರುತ್ತದೆ

ಪ್ರಯೋಗ :
‘ಉಕ’ ಪ್ರತ್ಯಯಕ್ಕೆ :
ಅಂಟು + ಉಕ = ಅಂಟುಕ
ತಟ್ಟು + ಉಕ = ತಟ್ಟುಕ

‘ಕುಳಿ’ ಪ್ರತ್ಯಯಕ್ಕೆ :
ಓಡು + ಕುಳಿ = ಓಡುಕುಳಿ
ಮಾಱು + ಕುಳಿ = ಮಾಱುಕುಳಿ

‘ಆಳಿ’ ಪ್ರತ್ಯಯಕ್ಕೆ :
ಓದು + ಆಳಿ = ಓದಾಳಿ
ಮಾಱುಳಿಯುಮೋದಾಳಿಯು
ಮೇಱುಳಿಯುಮಪ್ಪನಾಗಿ ಪಡಪಾಳಿಯೆಕೇಳ್….
ಜೂದು + ಆಳಿ = ಜೂದಾಳಿ
ಮಾತು + ಆಳಿ = ಮಾತಾಳಿ

‘ಇಕ’ ಪ್ರತ್ಯಯಕ್ಕೆ :
ಹುಸಿ + ಇಕ = ಹುಸಿಕ
ರಸಿ + ಇಕ = ರಸಿಕ

‘ಅಡಿಗ’ ಪ್ರತ್ಯಯಕ್ಕೆ :
ಪಾವು + ಅಡಿಗ = ಹಾವಡಿಗ
ಪೂ + ಅಡಿಗ = ಪೂವಡಿಗ

೨೧೫
ವ್ಯವಹರಣ, ತದ್ ಆಚರಣ,
ಪ್ರವಣನೊಳ್ ಅಕ್ಕುಂ
ಸಮಂತು ಉಗ, ಪ್ರತ್ಯಯಂ
ಒದವುದು ಅಟಿಗ, ಪ್ರತ್ಯಯಂ
ಆಡುವ ದೀವಿಗೆ ವಿಡಿವ
ಹರದು ಗೆಯ್ವ ಅನಿಬರೊಳಂ

ಇವನು ಇದರಲ್ಲಿ ವ್ಯವಹರಿಸುವನು, ಇದನ್ನು ಆಚರಿಸುವವನು ಎಂದು ಹೇಳುವಲ್ಲಿ ‘ಉಗ’ ಪ್ರತ್ಯಯ ಬರುತ್ತದೆ. ಗಳೆ ಹಿಡಿದು ಆಡುವವನಲ್ಲಿ, ದೀವಿಗೆ ಹಿಡಿಯುವವನಲ್ಲಿ, ವ್ಯವಹಾರ ಮಾಡುವವನಲ್ಲಿ ‘ಅಟಿಗ’ ಪ್ರತ್ಯಯ ಸೇರುತ್ತದೆ.

ಪ್ರಯೋಗ :
ಉಗ ಪ್ರತ್ಯಕ್ಕೆ :
ನಾರು + ಉಗ = ನಾರುಗ
ಊರು + ಉಗ = ಊರೂಗ

ಅಟಿಗ ಪ್ರತ್ಯಯಕ್ಕೆ :
ಕೋಲ್ + ಅಟಿಗ = ಕೊಲ್ಲಟಿಗ
ದೀವ + ಅಟಿಗ = ದೀವಟಿಗ

೨೧೬
ಏನಾನು, ಒಂದು ಭಾವಮಂ,
ಆನಲ್ ಸಲ್ವವನೊಳ್
ಅಱಿಗೆ ಪ್ರತ್ಯಯಮಂ,
ಪೀನಂ ತದ್ವರ್ತನ ಗತ
ಮಾನವನೊಳ್ ತಿಳಿಗೆ
ಮತ್ತೆ ಇಲ, ಪ್ರತ್ಯಯಮಂ

ಯಾವುದಾದರೊಂದು ಭಾವವನ್ನು ಹೊಂದಿರುವವನು ಎಂಬರ್ಥದಲ್ಲಿ ‘ಕ’ ಪ್ರತ್ಯಯವೂ ಅದರಲ್ಲಿ ಈತನು ವರ್ತಿಸುವವನು ಎಂಬಲ್ಲಿ ‘ಇಲ’ ಪ್ರತ್ಯಯವೂ ಬರುತ್ತದೆ.

ಕ ಪ್ರತ್ಯಯಕ್ಕೆ :
ಬಡ + ಕ = ಬಡಕ
ನಿಡು + ಕ = ನಿಡುಕ

ಇಲ ಪ್ರತ್ಯಯಕ್ಕೆ :
ಪಡೆ + ಇಲ = ಪಡೆಯಿಲ
ಗಾ + ಇಲ = ಗಾವಿಲ

೨೧೭
ಇದಱೊಳ್ ಇದುಂ
ಉಂಟು ಎಂಬರ್ಥದೊಳ್
ಉದಯಿಪುದು
ಉಳ್ಳ, ಒಡೆಯ ವಂತ ಶಬ್ಧಂ;
ಕೈಕೊಳ್ಪುದು
ವಣಿಗ, ಪ್ರತ್ಯಯಮಂ
ಉಣ್ಬುದು ಜೀವಿತಮಾಗಿ ಬಱಿದೆ
ತಿನುತಿರ್ಪವನೊಳ್

ಇಲ್ಲಿ ಈ ವಸ್ತು ಉಂಟು ಎಂಬರ್ಥದಲ್ಲಿ ‘ಉಳ್ಳ’, ‘ಒಡೆಯ’, ‘ವಂತ’ ಪ್ರತ್ಯಯಗಳು ಬರುತ್ತವೆ. ತಿನ್ನುವುದನ್ನೇ ಪ್ರಧಾನವಾಗಿ ಉಳ್ಳವನು ಎಂಬರ್ಥದಲ್ಲಿ ‘ವಣಿಗ’ ಪ್ರತ್ಯಯವು ಬರುತ್ತದೆ

ಉಳ್ಳ ಪ್ರತ್ಯಯಕ್ಕೆ :
ಧನಂ + ಉಳ್ಳಂ = ಧನಮುಳ್ಳಂ
ಧಾನ್ಯಂ + ಉಳ್ಳಂ = ಧಾನ್ಯಮುಳ್ಳಂ
ಗುಣಂ + ಉಳ್ಳಂ = ಗುಣಮುಳ್ಳಂ
ತೇಜ + ಉಳ್ಳಂ = ತೇಜಮುಳ್ಳಂ

ಒಡೆಯ ಪ್ರತ್ಯಯಕ್ಕೆ :
ಜಣ್ + ಒಡೆಯ = ಜಣೊಡೆಯ
ಚಾಗ + ಒಡೆಯ = ಚಾಗದೊಡೆಯ

ವಂತ ಪ್ರತ್ಯಯಕ್ಕೆ :
ಸಿರಿ + ವಂತ = ಸಿರಿವಂತ
ಜಯ + ವಂತ = ಜಯವಂತ
ಪುಣ್ಯ + ವಂತ = ಪುಣ್ಯವಂತ

ವಣಿಗ ಪ್ರತ್ಯಯಕ್ಕೆ :
ಕೂೞ್ + ವಣಿಗ = ಕೂೞ್ವಣಿಗ
ಲಂಚ + ವಣಿಗ = ಲಂಚವಣಿಗ
ಸಾಲ + ವಣಿಗ = ಸಾಲವಣಿಗ

೨೧೮
ಅನೆಯ ಪ್ರತ್ಯಯಂ,
ಅನಿತು, ಇನಿತು, ಎನಿತು,
ಎಂಬ ಲಸತ್
ಪ್ರಮಾಣ ಪೂರಣದೊಳ್;
ನೆಟ್ಟನೆ ಸಂಖ್ಯಾ ಪೂರಣದೊಳ್
ಜನಿಯಿಪುದು ಮೆ, ಎಂಬುದು
ಅಕ್ಕುಂ ಎಣಿಸುವ ಸೂಳ್

ಅನಿತು, ಇನಿತು, ಎನಿತು, ಎಂಬ ಪ್ರಮಾಣ ವಾಚಕ ಮತ್ತು ಸಂಖ್ಯಾವಾಚಕಗಳಲ್ಲಿ ‘ಅನೆಯ’ ಎಂಬ ಪ್ರತ್ಯಯ ಬರುತ್ತದೆ. ಎಣಿಸುವ ಕ್ರಮದಲ್ಲಿ ‘ಮೆ’ ಎಂಬ ಪ್ರತ್ಯಯ ಬರುತ್ತದೆ

ಅನೆಯ ಪ್ರತ್ಯಯಕ್ಕೆ
(ಪ್ರಮಾಣವಾಚಿಗಳಲ್ಲಿ) :
ಅನಿತನೆಯ, ಇನಿತನೆಯ, ಎನಿತನೆಯ

(ಸಂಖ್ಯಾವಾಚಿಗಳಲ್ಲಿ) :
ಒಂದನೆಯ, ಎರಡನೆಯ, ಮೂಱನೆಯ

ಮೆ ಪ್ರತ್ಯಯಕ್ಕೆ :
ಒರ್ಮೆ, ಇರ್ಮೆ, ಮೂರ್ಮೆ