೨೧೯
ಕಾಂತಾ ವಿಷಯದೊಳ್
ಆದಂ ಅದಂತಕ್ಕೆ ಇತಿಯುಂ
ತದ್ ಆದಿ ಲೋಪಮುಂ;
ಅಕ್ಕುಂ ಭ್ರಾಂತೇಂ,
ಅಳಂತಮು ನೆಗೞ್ಗುಂ
ತೊಱದು ಅದರ್ಕೆ () ಅದಂತದಲ್ಲಿ
ವಿಕಲ್ಪಂ

ಅ ಕಾರಾಂತ ಪುಲ್ಲಿಂಗ ಪದಗಳ ಮುಂದೆ ‘ಇತಿ’ಪ್ರತ್ಯಯ ಸೇರಿದಾಗ ಅವು ಸ್ತ್ರೀಲಿಂಗಗಳಾಗುತ್ತವೆ. ಕೆಲವೆಡೆ ‘ಇತಿ’ ಪ್ರತ್ಯಯದ ಆದಿಯ ‘ಇ’ ಕಾರಕ್ಕೆ ಲೋಪ ಉಂಟಾಗುತ್ತದೆ. ‘ಅ’ ಕಾರಾಂತವಾದ ಪುಲ್ಲಿಂಗ ಶಬ್ದಗಳಿಗೆ ಸ್ತ್ರೀಲಿಂಗದಲ್ಲಿ ವಿಕಲ್ಪವಿಲ್ಲದೆ ‘ಅಳ್’ ಪ್ರತ್ಯಯ ಬರುತ್ತದೆ. ಇವುಗಳಲ್ಲದೆ ‘ಎ’ ಮೊದಲಾದ ಪ್ರತ್ಯಯಗಳೂ ಬರುತ್ತವೆ.

‘ಇತಿ’ ಪ್ರತ್ಯಯಕ್ಕೆ :
ಚಾಮರಿಗ + ಇತಿ = ಚಾಮರಿಗಿತಿ
ಮದ್ದಳಿಗ + ಇತಿ = ಮದ್ದಳಿಗಿತಿ
ಕನ್ನಡಿಗ + ಇತಿ = ಕನ್ನಡಿಗಿತಿ
ಒಕ್ಕಲಿಗ + ಇತಿ = ಒಕ್ಕಲಿಗಿತಿ

‘ಇ’ ಕಾರ ಲೋಪಕ್ಕೆ :
ಮಾಲೆಗಾಱ + ಇತಿ > ತಿ = ಮಾಲೆಗಾರ್ತಿ
ಮಣಿಗಾಱ + ಇತಿ > ತಿ = ಮಣಿಗಾರ್ತಿ
ಕಂಚುಗಾಱ + ಇತಿ > ತಿ = ಕಂಚಗಾರ್ತಿ

ಅಳಂತಕ್ಕೆ :
ಅವ + ಅಳ್ = ಅವಳ್
ಇನಿಯ (>ಇನಿದು) + ಅಳ್ = ಇನಿಯಳ್

ಕೆಲವೆಡೆ ಅ ದಂತಕ್ಕೆ ಎತ್ವಂ :
ಚದುರ > ಚದುರೆ
ಜೋಡ > ಜೋಡೆ

೨೨೦
ಚರಮ ಸ್ವರಕ್ಕೆ ಚರಮ ಅಕ್ಕರಕ್ಕೆ
ಅಕ್ಕುಂ ಲೋಪಂ,
ಅಗ್ರದೊಳ್ ತದ್ದಿತಂ
ಒಂದಿರೆ ತನ್ನೊಳ್
ಸಮಾಸಾಂತರದ ಆಖ್ಯಾತಕದ
ಲಕ್ಷಣಂ ವ್ಯವಹರಿಕುಂ

ಉತ್ತರ ಪದದಲ್ಲಿ ತದ್ದಿತ ಪ್ರತ್ಯಯವಿದ್ದರೆ ಪೂರ್ವ ಪದದ ಅಂತ್ಯ ಸ್ವರಕ್ಕೆ ಲೋಪ ಬರುತ್ತದೆ. ಕೆಲವೆಡೆ ಅಂತ್ಯಾಕ್ಷರ ಲೋಪವಾಗುತ್ತದೆ. ಸಮಾಸ ಮತ್ತು ಆಖ್ಯಾತದಲ್ಲಿ ಬರುವ ಕ್ರಿಯೆಗಳು ತದ್ದಿತದಲ್ಲಿಯೂ ಬರುತ್ತವೆ.

ಅಂತ್ಯ ಸ್ವರಲೋಪಕ್ಕೆ :
ತೆಲುಂಗ + ಇತಿ = ತೆಲುಂಗಿತಿ

ಕಮ್ಮಱ + ಇತಿ =
ಕಮ್ಮಱತಿ

ಅಂತ್ಯಾಕ್ಷರ ಲೋಪಕ್ಕೆ :
ಏಱು + ತ = ಏತ

ಸಮಾಸ ಲಕ್ಷಣಕ್ಕೆ :
ಮಾಲೆಗಾಱ + ಇತಿ > ತಿ = ಮಾಲೆಗಾರ್ತಿ
ಬಳೆಗಾಱ + ಇತಿ > ತಿ = ಬಳೆಗಾರ್ತಿ

ಆಖ್ಯಾತಕ್ಕೆ :
ಆಡು + ಅ = ಆಟ
ನೋಡು + ಅ = ನೋಟ

೨೨೧
ಇತ್ವದೊಳ್, ಉತ್ವದೊಳ್,
ಹ್ರಸ್ವ ಎತ್ವದೊಳ್,
ಒಂದಿದ ಕಾರಂ ಅಕ್ಕುಂ,
ಭಾವಕ್ಕೆ ಅತ್ವಂ ಪಿರಿದುಂ
ಪೆಱಗುಂ ಉಂಟು
ಅತ್ವಂ ಹ್ರಸ್ವ ಎತ್ವ ಅತ್ವ,
ಅದು ಕೆಲವೆಡೆಯೊಳ್

ಭಾವ ಪ್ರಕಟನೆಯಲ್ಲಿ ‘ಇ’ ಕಾರ, ‘ಉ’ ಕಾರ ಮತ್ತು ‘ಎ’ ಕಾರ ದಿಂದ ಕೂಡಿದ ವತ್ವ ಸೇರಿಕೊಳ್ಳುತ್ತದೆ. ಆಗ ಪೂರ್ವ ಪದಾಂತ್ಯದಲ್ಲಿ ‘ಅ’ ಕಾರ ಉಂಟಾಗುತ್ತದೆ. ಕೆಲವೆಡೆ ‘ಅ’ ಕಾರ, ‘ಎ’ ಕಾರಯುಕ್ತ ‘ತ’ ಕಾರ ಬರುತ್ತದೆ

ವ ಕಾರಕ್ಕೆ :
ಅಳೆ > ಅಳ + ವಿ = ಅಳವಿ
ತೆರೆ + ತೆರ > ವು = ತೆರವು

ತ ಕಾರಕ್ಕೆ :
ಅಱಿ + ತ = ಅಱಿತ

ತೆ ಕಾರಕ್ಕೆ :
ನೆಗೞ್ + ತೆ = ನೆಗೞ್ತಿ

೨೨೨
ಪ್ರಕಟಂ ಚೇತನ ಭಾವದೊಳ್,
ಇಕೆ, ತನಂ, ಉಮೆ, ಅಕ್ಕುಂ
ಉೞಿದ ಭಾವದೊಳ್
ಅಮೆಯುಂ;
ಗೆ, ಕೆ, ಮೆ, ಉತ್ವ,
ಇತ್ವದ ಪಕಾರಂ
ಮತ್ತೆ ಕಾರಂ ಸಮನಿಸುಗುಂ

ಚೇತನ ಭಾವದಲ್ಲಿ ಇಕೆ, ತನ, ಉಮೆ ಪ್ರತ್ಯಯಗಳು ಪ್ರಸಿದ್ಧವಾಗಿವೆ. ಮಿಕ್ಕ ಭಾವಗಳಲ್ಲಿ ಅಮೆ, ಗೆ, ಕೆ, ಮೆ, ಪು, ಪಿ ಮತ್ತು ಉ ಪ್ರತ್ಯಯಗಳು ಬರುತ್ತವೆ.

ಇಕೆಗೆ :
ಉನ್ನತ + ಇಕೆ = ಉನ್ನತಿಕೆ
ಉದ್ಭವ + ಇಕೆ = ಉದ್ಭತಿಕೆ

ತನಕ್ಕೆ :
ಕಲಿ + ತನ = ಕಲಿತನ
ಚದುರ + ತನ = ಚದುರತನ
ಮರುಳ + ತನ = ಮರುಳತನ

ಉಮೆಗೆ :
ತಕ್ಕು + ಉಮೆ = ತಕ್ಕುಮೆ

ಅಮೆಗೆ :
ತೀರ್ + ಮೆ = ತೀರಮೆ
ಅೞ್ಕ + ಮೆ = ಅೞ್ಕಮೆ

ಗೆ ಕಾರಕ್ಕೆ :
ಉಡು + ಗೆ = ಉಡುಗೆ
ಪಸು + ಗೆ = ಪಸುಗೆ
ಪತ್ತು + ಗೆ = ಪತ್ತುಗೆ

ಕೆ ಕಾರಕ್ಕೆ :
ಕಾಣ್ + ಕೆ = ಕಾಣ್ಕೆ
ಮಡು + ಕೆ = ಮಡಿಕೆ
ತೆರಳ್ + ಕೆ = ತೆರಳ್ಕೆ

ಮೆ ಕಾರಕ್ಕೆ :
ಒಲ್ + ಮೆ = ಒಲ್ಮೆ
ಬಲ್ + ಮೆ = ಬಲ್ಮೆ
ಜಾಣ್ + ಮೆ = ಜಾಣ್ಮೆ

ಪು ಕಾರಕ್ಕೆ :
ತಣ್ + ಪು = ತಣ್ಪು
ಪಡೆ + ಪು = ಪಡೆಪು
ಕಡು + ಪು = ಕಡುಪು

ಪಿ ಕಾರಕ್ಕೆ :
ಕಲ್ + ಪಿ = ಕಲ್ಪಿ

ಉ ಕಾರಕ್ಕೆ :
ಕಿವುಡ + ಉ = ಕಿವುಡು
ಕೆಂಚ + ಉ = ಕೆಂಚು
ಉಗ್ಗ್ + ಉ = ಉಗ್ಗು

೨೨೩
ಪಿರಿದು, ಎಂಬ ರೇಫಕ್ಕೆ
ಆಚರಿಪರ್ ಭಾವಾರ್ಥಂ
ಅಪ್ಪುದು ಒಂದು ಪುಕಾರಂ
ಪರಮಾಗೆ ಬಿಂದುವಂ;
ವಾಕ್ಷರಿಣತರಿಂ
ಸಿದ್ಧಂ ಆಯ್ತು,
ಪೆಂಪ ಎಂಬ ಪದಂ

‘ಪಿರಿದು’ ಎಂಬ ಪದ ಪೂರ್ವಪದ ವಾಗಿದ್ದು ಅದರ ಮುಂದೆ ಭಾವಾರ್ಥದ ತದ್ದಿತ ಪ್ರತ್ಯಯ ‘ಪು’ ಪರವಾಗಲು ‘ಪಿರಿದು’ ಎಂಬುದರ ರೇಫೆಗೆ ಬಿಂದು ಬಂದು ಆದಿಯ ‘ಇ’ ಕಾರಕ್ಕೆ ‘ಎ’ ಕಾರ ಉಂಟಾಗುತ್ತದೆ. ಹೀಗೆ ಪಂಡಿತರು ‘ಪೆಂಪು’ ಎಂಬ ಪದವನ್ನು ರೂಪಿಸಿಕೊಳ್ಳುತ್ತಾರೆ.

ಪಿರಿದು > ಪೆರ್ > ಪೆಂ + ಪು = ಪೆಂಪು
ಭಾವದೊಳ್ ಕ ಪ್ರತ್ಯಯ ಉಂಟು : ಉಡುಗು + ಕಂ = ಉಡುಕಂ, ನಡುಕಂ

೨೨೪
ಮೊದಲ ಇತ್ವಕ್ಕೆ ಏತ್ವಮಂ,
ಉತ್ವದೊಳ್ ಓತ್ವಮುಂ
ಎಸೆವ ದೀರ್ಘ ಮುಂ,
ಚರಮಕ್ಕೆ
ಅತ್ವದ ವಿಧಿಯುಂ
ಧಾತುವಿಗೆ ಭಾವದೊಳ್ ಅಕ್ಕುಂ,
ಧಾತುವಿಗೆ ನಿಜದೆ ಭಾವಂ ಅಕ್ಕುಂ

ಧಾತುಗಳನ್ನು ಭಾವನಾಮಗಳನ್ನಾಗಿ ಮಾಡುವಲ್ಲಿ ಧಾತುಗಳ ಆದಿಯ ‘ಇ’ ಕಾರಕ್ಕೆ ‘ಏ’ ಕಾರವೂ ಕೆಲ ಧಾತುಗಳ ಆದಿಯಲ್ಲಿ ‘ಉ’ ಕಾರಕ್ಕೆ ‘ಓ’ ಕಾರವೂ ಉಂಟಾಗುತ್ತದೆ. ಕೆಲವು ಧಾತುಗಳು ದೀರ್ಘೀಕರಣ ಹೊಂದಿ ಭಾವನಾಮಗಳಾದರೆ ಕೆಲವು ಸಹಜ ಧಾತುಗಳೂ ಭಾವನಾಮಗಳಾಗುತ್ತವೆ.

ಏತ್ವಕ್ಕೆ :
ಕಿಡು > ಕೇಡು, ಇಸು > ಏಸು

ಓತ್ವಕ್ಕೆ :
ಕುಡು > ಕೋಡು, ತುಡು > ತೋಡು

ದೀರ್ಘಕ್ಕೆ :
ಇಡು > ಈಡು, ಬಿಡು > ಬೀಡು, ಸುಡು > ಸೂಡು

ಅತ್ವಕ್ಕೆ :
ಆಡು + ಅ = ಆಟ, ಪಾಡು + ಅ = ಪಾಟ
ನೋಡು + ಅ = ನೋಟ, ತೀಡು + ಅ = ತೀಟ

ಸಹಜ ಧಾತುವಿಗೆ :
ನಡೆ, ತಡೆ, ಪೆರ್ಟು, ಉರ್ಕು, ದಾಂಟು

೨೨೫
ಮೋಲ್ ಎಂಬ,
ಅಂತೆ ಎಂಬ,
ಎರಡುಂ ಪೋಲಿಸುವಡೆಗೆ
ಆದುವು ಅಂತೆ ವೋಲ್ ಎನಲ್,
ಅಕ್ಕುಂ ವೋಲೊಳ್ ಹ್ರಸ್ವಮುಂ
ಅಕ್ಕುಂ, ಮೇಲ್ ಅತ್ವ ಉಂಟು
ಬಿಂದು ವತ್ವಂ, ಬತ್ವಂ ಉಂಟು

ಹೋಲಿಕೆ ಕೊಡುವಲ್ಲಿ ‘ವೋಲ್’, ‘ಅಂತೆ’ ಎಂಬ ಪ್ರತ್ಯಯಗಳು ಪ್ರತ್ಯೇಕವಾಗಿ, ಕೆಲವು ಸಲ ‘ಅಂತೆವೋಲ’ ಎಂದು ಎರಡೂ ಸೇರಿ ಬಳಕೆಯಾಗುತ್ತವೆ. ‘ವೋಲ್’ ಎಂಬುದು ಹ್ರಸ್ವವಾಗಿ ‘ವೊಲ್’ ಎಂದೂ ಪ್ರಯೋಗವಾಗುತ್ತದೆ. ‘ಅ’ ಕಾರಾಂತ ಪದಗಳ ಮುಂದೆ ‘ವೋಲ್’ ಪ್ರತ್ಯಯ ಬಂದಾಗ ಮಧ್ಯದಲ್ಲಿ ಬಿಂದು ಬಂದು ‘ವ’ ಕಾರಕ್ಕೆ ‘ಬ’ ಕಾರಾದೇಶವಾಗುತ್ತದೆ.

ವೋಲ್‌ಗೆ :
ಜಲನಿಧಿಯ + ವೋಲ್ = ಜಲನಿಧಿವೋಲ್
ಜಲನಿಧಿವೋಲ್, ಗಂಭೀರಂ
ಬಲವೈರಿಯ ವೋಲ್ ಸಮಗ್ರ ವಿಭವಸನಾಥಂ ||

ಅಂತೆಗೆ :
ಗಿರಿಯ + ಅಂತೆ = ಗಿರಿಯಂತೆ
ಗಿರಿಯಂತೆ ಬಿಣ್ಪದಂಸುರ
ಕರಿಯಂತೆ ಬಲಾಢ್ಯನಬ್ದಿಯಂತೆ ಗಂಭೀರಂ ||

ಅಂತೆ ವೋಲ್‌ಗೆ :
ರವಿಸುತನ + ಅಂತೆವೋಲ್ = ರವಿಸುತನಂತೆವೋಲ್
ರವಿಸುತನಂತೆ ವೋಲ ಧಿಕದಾನಿ ಪರಾಕ್ರಮಿ
ಸಿಂಗದಂತೆ ವೋಲ್

ವೊಲ್‌ಗೆ :
ಕಡಲ + ವೊಲ್ = ಕಡಲವೊಲ್
ಆ ಮುನೀಶ್ವರಂ ಶಾಂತರಸದ ಕಡಲ ವೊಲಿರ್ದಂ

ಬಿಂದು ವೆರಸು ಬಕಾರಕ್ಕೆ :
ಇಂದ್ರ + ವೋಲ್ = ಇಂದ್ರ + ೦ + ಬೋಲ್ =     ಇಂದ್ರಂಬೋಲ್
ಇಂದ್ರಬೋಲ್ ವಿಭವಯುತಂ |
ಚಂದ್ರಂಬೋಲ್ ಕಾಂತಿವಂತನಾದಿತ್ಯಂಬೋಲ್
ಸಾಂದ್ರ ಪರಿಪೂರ್ಣ ತೇಜನು |
ಪೇಂದ್ರಂಬೋಲ್ ನೀತಿ ನಿಪುಣನಾನರನಾಥಂ

೨೨೬
ಒದವಿರ್ಕುಂ
ಸಂಸ್ಕೃತವೆನ್ನದೆ, ಕನ್ನಡವೆನ್ನದೆ
ಆಯಿಲ, ಪ್ರತ್ಯಯಮಂ
ಅದು ತಾಂ ಇವು
ಮೊದಲಾಗಿಱವುದು
ಅನ್ವಿತರ್ ಮಿಕ್ಕ
ತದ್ದಿತ ಪ್ರತ್ಯಯಮಂ

‘ಆಯಿಲ’ ಪ್ರತ್ಯಯವು ಸಂಸ್ಕೃತ ಮತ್ತು ಕನ್ನಡ ಪದಗಳು ಎಂಬ ಭೇದವಿಲ್ಲದೆ ಸೇರಿಕೊಳ್ಳುತ್ತದೆ. ಮಿಕ್ಕ ತದ್ದಿತ ಪ್ರತ್ಯಯಗಳನ್ನು ವಿದ್ವಾಸರು ತಿಳಿದುಕೊಳ್ಳಬೇಕು.

ಸಂಸ್ಕೃತಕ್ಕೆ :
ಗಾಢ + ಆಯಿಲ = ಗಾಢಾಯಿಲ
ರೇಖೆ + ಆಯಿಲ = ರೇಖಾಯಿಲ

ಕನ್ನಡಕ್ಕೆ :
ಓಜ + ಆಯಿಲ = ಓಜಯಿಲ
ಅಡ್ಡ + ಅಯಿಲ = ಅಡ್ಡಾಯಿಲ

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿದರ್ಪಣದ ಐದನೆಯ ಪ್ರಕರಣವಾದತದ್ದಿತ ಪ್ರಕರಣಮುಗಿಯಿತು.