೨೫೭
ಇನೆಗಂ, ಉದುಂ, ಅನ್ನಂ,
ಅನ್ನೆಗಂ, ಇನಂ, ಅಲೊಡಂ,
ಸೊನ್ನೆವೆರಸು ಸತ್ಯರ್ಥದ
ಕಾರ ನಿಜಸ್ಥಾನದೊಳ್,
ಅಪ್ಪುವು  ಅನುಕೂಲಂ ಮತ್ತೆಂ
ಕಾರದ
ಆದಿಯೊಳ್ ಅಲೊಡಂ

ಸಂಸ್ಕೃತದಲ್ಲಿ ಬಳಕೆಯಲ್ಲಿರುವ ಸತಿಸಪ್ತಮಿ ಪ್ರಯೋಗವನ್ನು ಕನ್ನಡದಲ್ಲಿ ಪ್ರಸ್ತಾಪಿಸಿದ ಕೇಶಿರಾಜನು ‘ಸಮುಚಿತಮಾಗಿ ಬರ್ಪಸತಿಸಪ್ತಮಿ’ ಎಂದು ಹೆಸರಿಸಿ ಕನ್ನಡದ ವೈಲಕ್ಷಣ್ಯಗಳಲ್ಲಿ ಒಂದಾಗಿ ಭಾವಿಸಿದ್ದಾನೆ. ಸಂಸ್ಕೃತದ ‘ಸತ್’ (ಇರುವುದು) ಶಬ್ದವು ಕೃದಂತ ವಿಶೇಷಣವಾಗಿ ಸಪ್ತಮಿ ವಿಭಕ್ತಿಯ ರೂಪವನ್ನು ಪಡೆದಾಗ ‘ಸತಿ’ ಎಂದಾಗುತ್ತದೆ. ‘ಸತಿ’ ಎಂದರೆ ಇರುವಲ್ಲಿ ಎಂದರ್ಥ. ಈ ಅರ್ಥದಲ್ಲಿ ಪ್ರಯೋಗವಾಗುವ ಕೃದಂತ ವಿಶೇಷಣ ರೂಪಕ್ಕೆ ‘ಸತಿಸಪ್ತಮಿ’ ಎಂದು ಕರೆಯುತ್ತಾರೆ.

ಸತಿ ಸಪ್ತಮಿಯ ಪ್ರತ್ಯಯ ‘ಎ’ ಕಾರಕ್ಕೆ ಆದೇಶವಾಗಿ ‘ಇತಿಗಂ’, ‘ಉದುಂ’, ‘ಅನ್ನಂ’, ಅನ್ನೆಗಂ’, ‘ಇವಂ’, ‘ಅಲೋಡಂ’ ಎಂಬ ಪ್ರತ್ಯಯಗಳು ಬರುತ್ತವೆ. ಇವು ಬಿಂದುವಿನಿಂದೊಡಗೂಡಿರುತ್ತವೆ. ಸಹಜ ಪ್ರತ್ಯಯ ‘ಎ’ ಕಾರದ ಆದಿಯಲ್ಲಿ ಕೆಲವು ಸಲ ಅಲೊಡಂ (ಅಲೋಡನೆ) ಬಳಸಲ್ಪಡುತ್ತದೆ.

ಸತಿಸಪ್ತಮಿಯ ಎ ಕಾರಕ್ಕೆ :
ಅದಿರ್ + ಎ = ಅದಿರೆ
ನೆಲನದಿರೆ ನೋಟಕರ್ ಕ
ಣ್ಗಲಸೆ ಮನಂ ಕೊರಗೆ…

ಇನೆಗಂ ಎಂಬುದಕ್ಕೆ :
(ನುರ್ಗಾಗು>) ನುರ್ಗಪ್ಪ + ಇತಿಗಂ = ನುರ್ಗಪ್ಪಿನೆಗಂ
ಕಾಮ ಕರಂ ಕರಮಡಂಗಿ ನುರ್ಗಪ್ಪಿನೆಗಂ
ಕಾಮದನಡಂಗೆ ವೊಯ್ದಂ

ಉದು ಎಂಬುದಕ್ಕೆ :
ಎನ್ + ವ + ಉದುಂ = ಎಂಬುದುಂ
ಬರವೇೞಿಂಬುದು ಮಂಜನಾಚಲದ ವೊಲ್
ಕಣ್ಗೊಪ್ಪಿ ಬರ್ಪಂಬು ಜೋದರನಂ…

ಅನ್ನಂ ಎಂಬುದಕ್ಕೆ :
ನೆಗೆ + ವ + ಅನ್ನಂ = ನೆಗೆವನ್ನಂ
ಉದ್ದದೆ ನೆಗೆವೆನ್ನಂ ಪೊಯ್ಯಲೆಂದವ್ವಳಿಪುದು…

ಅನ್ನೆಗಂ ಎಂಬುದಕ್ಕೆ :
ಬರ್ + ವ + ಅನ್ನೆಗಂ = ಬರ್ಪನ್ನೆಗಂ
ಓಲೆಯೊಡನೆ ಮುತ್ತುಂಗಾಲೊಳ್ ನರೆ
ಬರ್ಪನ್ನೆಗಮಿರು

ಇನಂ ಎಂಬುದಕ್ಕೆ :
ಪುಗು + ವ + ಇನಂ = ಪುಗುವಿನಂ
…ಗಂಗೆಯ
ಮಡುಗಳ ನಡಹಡಿಸಿ ಪುಗುವಿನಂ ಭಯವಶದಿಂ

ಅಲೊಡಂ ಎಂಬುದಕ್ಕೆ :
ನುಡಿ + ಅಲೊಡಂ = ನುಡಿಯಲೊಡಂ
ಕುರುಕುಲಾಧಿಪಂ ನುಡಿಯಲೊಡಂ

ಎ ಕಾರದ ಹಿಂದಿನ
ಅಲೊಡಂ ಎಂಬುದಕ್ಕೆ :
ಅಲೊಡಂ + ಎ = ಅಲೊಡನೆ
ಬರಲೊಡನೆ ಕೊಟ್ಟಂ

೨೫೮
ನೆಗೞ್ಗುಂ ಸಂಪ್ರತಿಗಂ
ಭಾವಿಗಂ ಅನ್ನೆಗಂ, ಅನ್ನಂ,
ಇನೆಗಂ, ಇನಂ, ಎಂಬಿವು
ಸೂರಿಗಳಿಂದೆ
ಉದುಮಲೊಡಂಗಳ್
ನೆಗೞ್ಗುಂ ಭೂತಾರ್ಥದಲ್ಲಿ
ಸತಿಸಪ್ತಮಿಯೊಳ್

ಸತಿಸಪ್ತಮಿಯಲ್ಲಿ ವರ್ತಮಾನ ಮತ್ತು ಭವಿಷ್ಯತ್ಕಾಲಗಳೆರಡರಲ್ಲಿಯೂ ಅನ್ನೆಗಂ, ಅನ್ನಂ, ಇನೆಗಂ, ಇನಂ ಎಂಬಿವು ಸಮನಾಗಿ ಪ್ರಯೋಗವಾಗುತ್ತವೆ. ಉದುಂ, ಅಲೊಡಂ ಎಂಬಿವುಗಳು ಭೂತಕಾಲದಲ್ಲಿ ಪ್ರಯೋಗವಾಗುತ್ತವೆ.

ವರ್ತಮಾನ ಕಾಲಕ್ಕೆ :
ನೆನೆವನ್ನೆಗಂ ಬಂದಂ ಕೊಲ್ವನ್ನ ಮಿಕ್ಕಿಕೊಂದಂ
ಬಿನ್ನಯಿಸುವಿನೆಗ ಮೆಡಗೊಂಡಂ ಇದಿರ್ವಪ್ಪಿನ ಮಪ್ಪಿಕೊಂಡಂ

ಭವಿಷ್ಯತ್ಕಾಲಕ್ಕೆ :
ಈವನ್ನೆಗಮಿರ್ದಂ, ಬರಂಬಡೆವನ್ನಮಾರಾಧಿಸಿದಂ
ಅವಧಿ ಬರ್ಪಿನೆಗಂ ಸೈರಿಸಿದಂ, ಬೆಳಗಪ್ಪಿನಂ ಕೇಳಿಸಿದಂ

ಭೂತಕಾಲಕ್ಕೆ :
ಓಲಗಂ ಪರೆವುದು ಮಾಳೋಚನೆಗೆ ಪೊಕ್ಕಂ
ಪಾವಸೆ ಕಿಡಲೊಡಂ ನೀರ್ ತಿಳಿದುದು

೨೫೯
ಅನ್ನೆಗಂ, ಇನ್ನೆಗಂ,
ಎನ್ನೆಗಂ, ಕಡೆಗೆ ಉಂಟು
ಲೋಪಂ ಇದಿರೊಳ್
ಸೀಮ ಉತ್ಪನ್ನಂ ವರಂ ವರೆಗಂ
ಇರೆ ಕೆನ್ನಂ ಪೆಱವರ್ಕೆ
ಲೋಪ ವಿಧಿ ಮುಟ್ಟೆಎನೆಯುಂ

ವರಂ, ವರೆಗಂ ಎಂಬ ಸೀಮೆ (ಎಲ್ಲೆ)ಯನ್ನು ಹೇಳುವ ಶಬ್ಧಗಳು ಪರವಾದಾಗ ಅನ್ನೆಗಂ, ಇನ್ನೆಗಂ, ಎನ್ನೆಗಂ ಎಂಬಿವುಗಳ ಗ ಕಾರಕ್ಕೆ ಲೋಪ ಬರುತ್ತದೆ. ವರಂ, ವರೆಗಂ ಎಂಬಿವು ಬೇರೆ ಶಬ್ದಗಳಿಗೆ (ಅನ್ನೆಗಂ, ಇನ್ನೆಗಂ, ಎನ್ನೆಗಂ ಎಂಬಿವುಗಳನ್ನುಳಿದು) ಪರವಾಗಿದ್ದರೂ ‘ಮುಟ್ಟೆ’ ಎಂಬುದು ಎಲ್ಲೆಯನ್ನು ಹೇಳುವ ಶಬ್ದವಾಗಿದೆ.

ಗ ಕಾರ ಲೋಪಕ್ಕೆ :
ಎನ್ನೆಗಂ + ವರಂ > ಎನ್ನೆ + ವರಂ = ಎನ್ನೆವರಂ
ಎನ್ನೆವರಂ ಸಿರಿತಮಗುಂ | ಟನ್ನೆವರಂ ಸೇವ್ಯರಲ್ತೆ
ಖಳರುಂ | ಇನ್ನೆವರಂ ಗುಱಿಯಾದುದಿಲ್ಲ
ಕಾಮಕರ ಮುಕ್ತ ಬಾಣ ಹತಿಗೆ…

ಮುಟ್ಟೆ ಎಂಬುದಕ್ಕೆ :
ದೆಸೆಮುಟ್ಟೆ, ವಾರ್ಧಿಮುಟ್ಟೆ
…ಆನಱಿಯೆನಾತಂ ಮುಟ್ಟೆ ಸಂಗ್ರಾಮಮಂ

೨೬೦
ವಿದಿತ ಉಭಯಕರ್ತೃಕಂ,
ಎನಿಸಿದ ಸತಿಸಪ್ತಮಿಗೆ
ಎಕಾರಂ ಅಪ್ಪುದು,
ಅದರ್ಕೆ ಅಂಜದೆ
ಕೆಲರ್ ಅಲ್ ಪೇೞ್ವರ್,
ಚದುರರ್ ಅದಂ ಮೆಚ್ಚರ್
ಅಲೊಡಂ, ಎಂದೊಡೆ ಶುದ್ಧಂ

ಎರಡು ಕರ್ತೃಗಳನ್ನುಳ್ಳ ಸತಿಸಪ್ತಮಿಯಲ್ಲಿ ‘ಎ’ ಪ್ರತ್ಯಯ ಸೇರುತ್ತದೆ. ಕೆಲವರು ಇಂತಹ ‘ಎ’ಕಾರಕ್ಕೆ ಬದಲಾಗಿ ‘ಅಲ್’ ಪ್ರತ್ಯಯ ಬಳಸುತ್ತಾರೆ. ವಿದ್ವಾಂಸರು ಅದನ್ನು ಮೆಚ್ಚುವುದಿಲ್ಲ. ಆದರೆ ‘ಎ’ ಪ್ರತ್ಯಯಕ್ಕೆ ಪ್ರತಿಯಾಗಿ ‘ಅಲೊಡಂ’ ಬಳಸಿದರೆ ಆ ಪ್ರಯೋಗ ಶುದ್ದವೆನಿಸುವುದು

ಎರಡು ಕರ್ತೃಗಳನ್ನುಳ್ಳ ಸತಿಸಪ್ತಮಿಗೆ ‑  ಗಾಯಕಂ ಪಾಡೆ ದೇವಂ ಮೆಚ್ಚಿದಂ

ಅಲ್ಗೆ :
……ಪಾದಪದ್ಮಂ
ಗಳ ನಂದೊತ್ತುತ್ತಿರಲ್ ಶೂದ್ರಕ ನೃಪತಿ
ಸುಖಾಸೀನನಾಗಿರ್ದನಾಗಳ್

ಅಲೊಡಂ ಎಂಬುದಕ್ಕೆ :
ವಸಂತಂ ಬರಲೊಡಂ ಕೋಗಿಲೆಯುಲಿಗಂ

೨೬೧
ಪಿರಿದುಂ ಪಕ್ಷಾಂತರಮಂ
ನಿರವಿಪೆ ಕಾರಂ ನಿಜಂತಂ,
ಆದ ಒಡೆ ಶಬ್ದಂ ಪರಿಕಿಸೆ
ಧಾತು ಅಂತ್ಯದೊಳ್,
ಆವರಿಸಿರ್ಕುಂ, ಲಿಂಗ ವಚನ
ಪುರುಷ ಆಯತ್ತಂ

ಪಕ್ಷಾಂತರವನ್ನು ಹೇಳುವ ‘ಎ’ ಕಾರವನ್ನು ಕಡೆಯಲ್ಲಿ ‘ಉಳ್ಳ’, ‘ಒಡೆ’ ಎಂಬ ಶಬ್ಧವು ಲಿಂಗತ್ರಯ, ವಚನತ್ರಯ ಮತ್ತು ಪುರುಷತ್ರಯಗಳಲ್ಲಿ ಧಾತುವಿನ ಕಡೆಯಲ್ಲಿ ಬರುತ್ತದೆ.

ಸ್ತ್ರೀಲಿಂಗಕ್ಕೆ : ನೋೞೊಡವಳ್, ಕಿರಿಯಳ್

ಪುಲ್ಲಿಂಗಕ್ಕೆ : ಸತ್ಯಮಂ ನುಡಿವೊಡವಂ ನುಡಿಗುಂ

ನಪುಂಸಕಕ್ಕೆ : ತೀಡುವೊಡಲ್ಲಿ ಕಮ್ಮೆಲರ್ ತೀಡುಗುಂ

ಏಕವಚನಕ್ಕೆ : ಕಾದುವೊಡೊರ್ವನೆ ಬಲ್ಲಿದಂ

ದ್ವಿವಚನಕ್ಕೆ : ಪೋರಿಸುವೊಡಿರ್ವರುಂ ತಕ್ಕರ್

ಬಹುವಚನಕ್ಕೆ : ನುಡಿವೊಡೆಲ್ಲರುಂ ಮಾತಱಿಯರ್

ಪುರುಷತ್ರಯಕ್ಕೆ : ಪೊರ್ದುವೊಡವನೊಳ್ಳಿದಂ, ತಿರ್ದುವೊಡವರೊಳ್ಳಿದರ್
ಬೇೞ್ಪೊಡೆ ನೀನೊಳ್ಳಿದಯ್, ಈ ವೊಡೆ ನೀವೊಳ್ಳಿದಿರ್
ಭಾವಿಪೊಡಾನೊಳ್ಳದೆಂ, ಸೇವಿಪೊಡಾಮೊಳ್ಳಿದೆವು.

೨೬೨
ಧಾತುಗಳ್ ಅವು
ನಾನಾರ್ಥೋಪೇತಂಗಳ್,
ಲಕ್ಷ್ಯಂಸಿದ್ದಿವಿಡಿದುವಂ
ಅಱಿದು ಅನ್ವಿತರೆ
ಕ್ರಿಯೆ ಅನುಕೂಲಂ,
ಮಾತೇಂ ಪೂರಿಸುಗೆ
ಮತ್ತಂ ಉೞಿದುವಂ
ಇದಱೊಳಂ

ಧಾತುಗಳು ಹಲವು ಅರ್ಥಗಳನ್ನೊಳಗೊಂಡವು. ಉದಾಹರಣೆಗಳಲ್ಲಿ ಮಾನ್ಯವಾದುವು ಗಳನ್ನು ತಿಳಿದು, ಮಿಕ್ಕವುಗಳನ್ನು ಕ್ರಿಯಾನುಕೂಲತೆಯಿಂದ ಈ ಅಖ್ಯಾತ ಪ್ರಕರಣದಲ್ಲಿ ವಿದ್ವಾಂಸರು ಸಮಾವೇಶಗೊಳಿಸಲಿ.

೨೬೩
ಕ್ರಿಯೆಯ ಪದಂ, ತಾಂ ಕರ್ತೃ
ಪ್ರಯುಕ್ತಂ ಆಗಿ
ಎಲ್ಲಿ ಏನ್ ಎಂಬ ಇಚ್ಚೆಯಂ,
ಆಶ್ರಯಿಪುದು
ಸಕರ್ಮಕಂ ಅಲ್ ಪಯುಕ್ತ
ಪಡುಧಾತು,
ಸರ್ವಧಾತುಗೆ ಅಕ್ಕುಂ

 

ಕ್ರಿಯಾಪದವು ಕರ್ತೃಪದದೊಡನೆ ನಿಂತು, ‘ಏನದು’ ಎಂಬ ಅಪೇಕ್ಷೆಯನ್ನು ಆಶ್ರಯಿಸುವುದು. ಸಕರ್ಮಕ (ಪ್ರಯೋಗ) (ಅಲ್ಲಿ) ಸಕಲ ಧಾತುಗಳಿಗೆ ‘ಅಲ್’ ಎಂಬುದರೊಡನೆ ಕೂಡಿದ ‘ಪಡು’ಧಾತು ಹತ್ತುತ್ತದೆ.

ಮಾಡಲ್ಪಟ್ಟುದು ಘಟ್ಟಂ ಕುಂಬಱನಿಂ
ನೋಡಲ್ಪಟ್ಟನರಸನಂಗನೆಯಿಂ
ಬಯಸಲ್ಪಟ್ಟಳ್ ತರುಣಿ ರಮಣನಿಂ

ಕವಿತಾಪ್ರೌಢಿಯೊಳ್ ಅಬ್ಜ ಸಂಭವನೆ
ಕರ್ತಾರಂ, ಕ್ರಿಯಾಕೌಶಲಂ
ಸ್ತವನೀಯಂ ತದ್ ಅಧೀನವಾದ
ಅಖಿಲ ಶಾಸ್ತ್ರ ಸಮಾನ್ವಯಮಂ ಕೂಡೆ
ಬಲ್ಲವರ್ ಇಲ್ಲೆನ್ನದಿರ್ ಒರ್ವನಿಂದ
ಅಭಿವನಬ್ರಹ್ಮಂ ಗಡೆಂಬಂತೆ
ತೋಱುವನ್ ಆತ್ಮೀಯ ವಚೋವಿಚಿತ್ರ
ತರವಿದ್ಯಾವೇಶವಂ ಕೇಶವಂ

ಕವಿತ್ವದ ಬಲ್ಮೆಯಲ್ಲಿ ಬ್ರಹ್ಮನೆ ಕರ್ತೃ, ಕ್ರಿಯಾಕುಶಲ, ಸ್ತುತಿಯೋಗ್ಯ. ಅವನ ಅಧೀನವಾಗಿರುವ ಸಮಸ್ತಶಾಸ್ತ್ರ ಸಂಪ್ರದಾಯವನ್ನು (ಬೇರಾರೂ) ಚೆನ್ನಾಗಿ ಬಲ್ಲವರಿಲ್ಲ ಎನ್ನದಿರು. ಇಂದು ಕವಿ ಕೇಶವನು “ಅಭಿನವಬ್ರಹ್ಮ” ಎಂಬಂತೆ ಆತ್ಮೀಯ ವಚೋವಿಚಿತ್ರತರ ವಿದ್ಯಾವೇಶವನ್ನು ಪ್ರಕಟಿಸುತ್ತಾನೆ.

ಇದು ಶಬ್ದ ಪಂಡಿತ, ಕರ್ಣಾಟಕ ಲಕ್ಷಣ ಶಿಕ್ಷಾಚಾರ್ಯನಾದ ಸುಕವಿ ಕೇಶಿರಾಜನಿಂದ ವಿರಚಿತವಾದ ಶಬ್ದಮಣಿದರ್ಪಣದ ಆರನೆಯ ಪ್ರಕರಣವಾದಆಖ್ಯಾತ ಪ್ರಕರಣಮುಗಿಯಿತು.